ಕಾನೂರು ಮತ್ತು ಮುತ್ತಳ್ಳಿಯ ಗಾಡಿಗಳೆರಡು ಧರ್ಮಸ್ಥಳಕ್ಕೆ ಯಾತ್ರೆ ಹೋಗಿ ಎರಡು ವಾರ ಕಳೆದಿತ್ತು. ಎರಡು ಮೂರು ಹದ ಮಳೆ ಬಿದ್ದು ಹವಾ ತಂಪಾಗಿತ್ತು. ತೊರೆಗಳಲ್ಲಿ ನಿಂತ ನೀರು ಹರಿಯತೊಡಗಿತ್ತು. ನೆಲದ ಮೇಲೆ ಗರುಕೆಹುಲ್ಲು ಚಿಗುರುತ್ತಿತ್ತು. ಅನೇಕರು ಅಗೆ ಹಾಕುವ ಗದ್ದೆಗಳನ್ನು ಉತ್ತು, ಹುಡಿಬೀಜ ಬಿತ್ತಿ, ಬೇಲಿಗಳನ್ನೂ ಕಟ್ಟಿದ್ದರು. ಕಾನೂರು ಸೇರೆಗಾರ ರಂಗಪ್ಪಸೆಟ್ಟರೂ – ಯಾತ್ರೆ ಹೊರಡುವಾಗ ಚಂದ್ರಯ್ಯಗೌಡರು ಮಾಡಿದ್ದ ಅಪ್ಪಣೆಯಂತೆ ಗದ್ದೆ ತೋಟಗಳ ಕಾಮಗಾರಿಯನ್ನೆಲ್ಲ ಅಚ್ಚುಕಟ್ಟಾಗಿ ಮೆಹನತ್ತಿನಿಂದ ಮಾಡಿಸಿದ್ದರು. ಚಂದ್ರಯ್ಯಗೌಡರು, ರಾಮಯ್ಯ, ಕಡೆಗೆ ವಾಸುವೂ ಕೂಡ, ಮನೆಯಲ್ಲಿ ಇಲ್ಲದಿದ್ದುದರಿಂದ ಸೇರೆಗಾರರ ಮನಸ್ಸಿನಲ್ಲಿ ತಾವೇ ಕಾನೂರಿನ ಯಜಮಾನರೆಂಬ ಹೆಚ್ಚುಗಾರಿಕೆ ಮೂಡಿ, ಕೆಲಸಗಳನ್ನೆಲ್ಲ ಸಾಂಗವಾಗಿ ಬಹಳ ಮುತುವರ್ಜಿಯಿಂದ ನೆರವೇರಿಸುತ್ತಿದ್ದರು.

ಅಂದ ಮಾತ್ರಕ್ಕೆ, ಅವರು ಮಜಾ ಮಾಡುವುದನ್ನು ಬಿಟ್ಟಿದ್ದರೆಂದು ಭಾವಿಸಬಾರದು. ಗೌಡರು ಯಾತ್ರೆ ಹೊರಟಂದಿನಿಂದ ಗಂಗೆಯೂ ಸೇರೆಗಾರರೂ ಸೇರಿ ಕಾನೂರು ಮನೆಯನ್ನು ಇಂದ್ರಿಯ ಸುಖಗಳಿಗಾಗಿ ನಂದನವನವನ್ನಾಗಿ ಮಾಡಿಬಿಟ್ಟಿದ್ದರು ! ಪ್ರತಿದಿನವೂ ಔತಣ ತಪ್ಪುತ್ತಿರಲಿಲ್ಲ. ದಿನಕ್ಕೊಂದು ಕೋಳಿ ಖರ್ಚಾಗುತ್ತಿತ್ತು. ಕನ್ನಡ ಜಿಲ್ಲೆಯವರ ರೂಢಿಯಂತೆ ಒಂದು ಕೋಳಿಪಲ್ಯಕ್ಕೆ ಐದಾರು, ಕೆಲವು ಸಾರಿ ಇನ್ನೂ ಹೆಚ್ಚು ತೆಂಗಿನಕಾಯಿಗಳನ್ನು ಹಾಕುತ್ತಿದ್ದರು. ಈ ಔತಣಗಳಿಗೆ ಹಳೆಪೈಕದ ತಿಮ್ಮ ಮತ್ತು ಸೇರೆಗಾರರ ಆಳುಗಳಲ್ಲಿ ಮುಖ್ಯರಾದವರೂ ಸೇರುತ್ತಿದ್ದರು. ತಿಮ್ಮ ಕೈಯಲ್ಲಾದಷ್ಟು ಕಳ್ಳನ್ನು ತಂದೊದಗಿಸುತ್ತಿದ್ದನು. ಸಾಲದಿದ್ದುದಕ್ಕೆ ಬೇರೆ ಕಳ್ಳಂಗಡಿಯಿಂದ ಕಳ್ಳುಸರಬರಾಜು ಸರಬರಾಯಿಯಾಗುತ್ತಿದ್ದುವು. ಸೇರೆಗಾರರ ಬತ್ತವನ್ನೂ ಅಡಕೆಯನ್ನೂ ಮಾಪಿಳ್ಳೆಯ ಕಳ್ಳವ್ಯಾಪಾರಗಾರರಿಗೆ ಮಾರಿ ಭೋಗಗಳಿಗೆ ಹಣ ಒದಗಿಸಿಕೊಂಡುದಲ್ಲದೆ, ಧನ ಸಂಗ್ರಹವನ್ನೂ ಕೂಡ ಮಾಡಿಬಿಟ್ಟರು. ಅನೇಕ ರಾತ್ರಿ ಕಾನೂರು ಮನೆಯಲ್ಲಿ ತಿಂದು ಕುಡಿದು ನೆತ್ತಿಗೇರಿದ ಆ ಜನರು ತಾಳ ಮದ್ದಳೆ ಬಡಿಯುವುದು, ಪ್ರಸಂಗ ಹೇಳುವುದು, ಭಾಗವತರಾಟ ಕುಣಿಯುವುದು, ಇಸ್ಪೀಟು ಆಡುವುದು – ಇತ್ಯಾದಿ ಪ್ರಮೋದಗಳಲ್ಲಿ ತತ್ಪರವಾಗಿ ದಾಂಧಲೆ ನಡೆಸುತ್ತಿದ್ದರು.

ಈ ಸಂಗತಿಗಳನ್ನೆಲ್ಲ ಸೋಮನಿಂದ ತಿಳಿದುಕೊಂಡ ಹೂವಯ್ಯ ಮುತ್ತಳ್ಳಿಗೆ ಹೇಳಿ ಕಳುಹಿಸಿದನು. ಚಿನ್ನಯ್ಯ (ಚಿನ್ನಯ್ಯ ಪುಟ್ಟಮ್ಮರು ಯಾತ್ರೆಗೆ ಹೋಗಿರಲಿಲ್ಲ.) ಮಾವನ ಮನೆಗೆ ಬಂದು ಸೇರೆಗಾರರನ್ನು ವಿಚಾರಿಸಲು, ಅವರು ಅದನ್ನೆಲ್ಲ ಸಂಪೂರ್ಣವಾಗಿ ಅಲ್ಲಗಳೆದು ಸುಳ್ಳಾಡಿದರು. ಆದರೆ ಆ ಸಾಯಂಕಾಲ ಚಿನ್ನಯ್ಯ ಮನೆಗೆ ಹೋಗುತ್ತೇನೆಂದು ಹುಸಿ ಹೇಳಿ, ಕೆಳಕಾನೂರಿಗೆ ಹೋಗಿ ಉಳಿದುಕೊಂಡು, ರಾತ್ರಿಯಾದಮೇಲೆ ಹೂವಯ್ಯ, ಪುಟ್ಟಣ್ಣ, ಸೋಮ ಇವರೊಡಗೂಡಿ ಕಾನೂರಿಗೆ ಬಂದು ನೋಡಿದಾಗ ದೃಶ್ಯ ಬೀಭತ್ಸಕರವಾಗಿತ್ತು. ಗಂಡಸರ ಮಾತಂತಿರಲಿ, ಗಂಗೆಯೂ ಕೂಡ ನೋಡಬಾರದ ಸ್ಥಿತಿಯಲ್ಲಿದ್ದಳು. ಒಬ್ಬರಿಗಾದರೂ ತಲೆ ನೆಟ್ಟಗಿರಲಿಲ್ಲ. ಕೆಲವರಿಗಂತೂ ಬಂದವರ ಗುರುತೇ ಸಿಕ್ಕಲಿಲ್ಲ. ಒಬ್ಬಿಬ್ಬರು ಅವರಿಗೇನಾಯಿತೊ ಏನೊ, ಚಿನ್ನಯ್ಯ ಹೂವಯ್ಯರನ್ನು ನೋಡಿ ಕಿಲಕಿಲನೆ ನಗತೊಡಗಿದರು. ಒಬ್ಬ ತೂರಾಡುತ್ತ ಬಂದು ಹೂವಯ್ಯನನ್ನು ಅಪ್ಪಿಕೊಳ್ಳಲು ಪ್ರಯತ್ನಿಸುತ್ತಿರಲು, ಸೋಮ ದಬ್ಬಿದುದರಿಂದ ಕೆಳಗುರುಳಿಬಿದ್ದು, ವಿಕಾರವಾಗಿ ಕೂಗಿಕೊಂಡನು. ಸೇರೆಗಾರರಂತೂ ಅರ್ಧ ನಗ್ನಾವಸ್ಥೆಯಲ್ಲಿ ಚಿನ್ನಯ್ಯನನ್ನಾಗಲಿ ಯಾರನ್ನಾಗಲಿ ಲಕ್ಷಿಸದೆ, ಕಣ್ಣು ಕೆಂಪಗೆ ಮಾಡಿಕೊಂಡು, ಮೈಮೇಲೆ ಬೀಳುವಷ್ಟರಮಟ್ಟಿಗಿದ್ದರು. ಹೂವಯ್ಯ ಕೆರಳಿದ ಚಿನ್ನಯ್ಯನನ್ನು ಸಮಾಧಾನ ಪಡಿಸಿ ಹಿಂದಕ್ಕೆ ಕರೆದೊಯ್ದನು. ಮರುದಿನ ಬೆಳಗ್ಗೆ ಪುನಃ ಬಂದಾಗ ಸೇರೆಗಾರರು ಚಿನ್ನಯ್ಯನ ಕಾಲು ಮುಟ್ಟಿ ಮುಟ್ಟಿ ಕ್ಷಮಾಪಣೆ ಕೇಳಿಕೊಂಡಮೇಲೆ, ಚಿನ್ನಯ್ಯ ಹಾಗೆಲ್ಲ ಮಾಡಬಾರದೆಂದು ಎಚ್ಚರಿಕೆ ಹೇಳಿ ಮುತ್ತಳ್ಳಿಗೆ ಹೊರಟುಹೋದನು.

ಆದರೆ ಸೇರೆಗಾರರು ತಮ್ಮ ಆಮೋದ ಪ್ರಮೋದಗಳನ್ನು ನಿಲ್ಲಿಸಿರಲಿಲ್ಲ. ಅವರಿಗೇನೊ ಅದನ್ನು ಸ್ವಲ್ಪಮಟ್ಟಿಗಾದರೂ ಕಡಿಮೆ ಮಾಡ ಬೇಕೆಂದು ಮನಸ್ಸಿದ್ದರೂ ಗಂಗೆ ಅದಕ್ಕೆ ಆಸ್ಪದ ಕೊಡಲಿಲ್ಲ. ಪತಿತಮಾತ್ರಳಾಗಿದ್ದ ಅವಳು ಇತ್ತೀಚೆಗೆ ಹೃದಯದಲ್ಲಿ ವಿಷಯಾಗ್ನಿ ಕುಂಡವನ್ನಿಟ್ಟುಕೊಂಡು ಕಾಮ ರಾಕ್ಷಸಿಯಾಗಿ ಬಿಟ್ಟಿದ್ದಳು….

ಗೌಡರು ಯಾತ್ರೆ ಹೊರಟುಹೋಗಿ ಎರಡು ವಾರ ಕಳೆದಮೇಲೆ ಒಂದು ಶನಿವಾರ ಸಾಯಂಕಾಲವಾಗುತ್ತಿತ್ತು. ಕಳ್ಳಂಗಡಿ ಸಮೀಪದಲ್ಲಿ ಕಾಡಿನ ನಡುವೆ ಇದ್ದ ಒಂದು ಕಿರುಬಯಲು ಹೊಸಮಳೆಯಲ್ಲಿ ಮಿಂದು ಹಸುರುನಗೆ ಬೀರುತ್ತಿತ್ತು, ಇನ್ನೂ ನಾಲ್ಕು ಗಂಟೆಯಾಗಿರದಿದ್ದರೂ ಕಾಡಿನ ನೆಳಲು ಬಯಲನ್ನೆಲ್ಲ ಆವರಿಸಿತ್ತು. ಮರಗಳ ಸಂದಿಯಲ್ಲಿ ಕೋಲುಕೋಲಾಗಿ ಇಣುಕುತ್ತಿದ್ದ ಬಿಸಿಲು ಬಯಲಿನ ಹೊಸ ಹಸುರನ್ನು ಮನೋಹರವಾಗಿ ಮಾಡಿತ್ತು, ಒಂದೆರಡು ಪಿಕಳಾರ ಪಕ್ಷಿಗಳ ಧ್ವನಿ ಹೊರತೂ ಎಲ್ಲ ನೀರವವಾಗಿತ್ತು.

ಆ ಬಯಲಿನ ಹೆಸರು ‘ಕೋಳಿ ಅಂಕದ ಪಟ್ಟೆ’. ಆ ಹೆಸರು ಮೊದಲು ಅನ್ವರ್ಥವಾಗಿ ಹುಟ್ಟಿ, ಕಡೆಗೆ ಅಂಕಿತವಾಗಿಬಿಟ್ಟಿತ್ತು. ಬಹುಕಾಲದಿಂದಲೂ ಆ ಬಯಲು ಕೋಳಿಗಳ ಕಾಳಗಕ್ಕೂ ರಂಗವಾಗಿತ್ತು. ದೊಡ್ಡ ನಗರಗಳಲ್ಲಿ ರಾಜರುಗಳೂ ಶ್ರೀಮಂತರೂ ಸೇರಿ ‘ಕುದುರೆ ಜೂಜು’ ನಡೆಸುವಂತೆ ಗಟ್ಟದಮೇಲಕ್ಕೆ ಕೆಲಸದಾಳುಗಳನ್ನು ಕರೆತರುವ ಸೇರೆಗಾರರು ‘ಕೋಳಿ ಅಂಕ’ಗಳನ್ನು ಹೂಡುವುದು ವಾಡಿಕೆಯಾಗಿತ್ತು. ಆ ಬಯಲು ಕಳ್ಳಂಗಡಿಗೆ ಸಮೀಪವಾಗಿದ್ದುದರಿಂದಲೂ, ಕಾಡಿನ ನಡುವೆ ಗೋಪ್ಯವಾಗಿದ್ದುದರಿಂದಲೂ, ಜೂಜು ಜುಗಾರಿಯಾಡುವಾಗ ಎಲ್ಲಿಯಾದೂ ಒಂದುವೇಳೆ ಕರಿಯ ಪೇಟದವರು (ಪೋಲೀಸಿನವರು) ಬಂದರೂ ಅರಣ್ಯದಲ್ಲಿ ಅವರ ಕಣ್ಣಿಗೆ ಮಣ್ಣೆರಚಿ ತಪ್ಪಿಸಿಕೊಳ್ಳಲು ಬೇಕಾದಷ್ಟು ಅನುಕೂಲಗಳಿದ್ದುದರಿಂದಲೂ, ಅದು ‘ಕೋಳಿ ಅಂಕದ ಪಟ್ಟೆ’ಯಾಗಲು ಅತ್ಯಂತಾರ್ಹವಾಗಿತ್ತು.

ನಾಲ್ಕು ಗಂಟೆಯ ಹೊತ್ತಿಗೆ ಜನರು ಒಬ್ಬೊಬ್ಬರಾಗಿ ಇಬ್ಬಿಬ್ಬರಾಗಿ ಗೊಣಗೊಣನೆ ಮಾತಾಡಿಕೊಳ್ಳುತ್ತಾ ‘ಕೋಳಿ ಅಂಕದ ಪಟ್ಟೆ’ಯಲ್ಲಿ ನೆರೆಯಲಾರಂಭಿಸಿದರು. ಕಳ್ಳಂಗಡಿಯವನು ಒಂದು ಮರದಡಿಯಲ್ಲಿ ಎತ್ತರವಾಗಿದ್ದ ಇಬ್ಬದಮೇಲೆ, ಎಂದಿನಂತೆ ತನ್ನ ಅಂಗಡಿಯನ್ನು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿಯೆ ಬಿಚ್ಚಿಬಿಟ್ಟನು : ಬಗನಿಯ ಕಳ್ಳು, ಸಾರಾಯಿ, ಅಕ್ಕಿಭೋಜ, ಹುರಿಗಡಲೆ, ಪುರಿ, ಓಲೆಬೆಲ್ಲ, ಹೊಗೆಸೊಪ್ಪು, ವೀಳೆಯದೆಲೆ, ಬೀಡಿ, ಬೆಂಕಿಪೆಟ್ಟಿಗೆ, ಬಾಳೆಯಹಣ್ಣು, ಬೇಯಿಸಿದ ಕೋಳಿಮೊಟ್ಟೆ, ಸ್ವಾರ್ಲುಮೀನು, ಚಾಕಣ, ಇಸ್ಪೀಟು ಪ್ಯಾಕುಗಳು – ಇತ್ಯಾದಿಯಾಗಿ ಅಂಕಕ್ಕೆ ಬರುವ ಆಟಗಾರರಿಗೂ ನೋಟಗಾರರರಿಗೂ ಬೇಕಾಗುವ ಸಕಲ ಸಾಮಗ್ರಿಗಳನ್ನೂ ಅಣಿಮಾಡಿಕೊಂಡು, ಯಾರು ಬಂದರೆ ಅವರೊಡನೆ ಹಸನ್ಮುಖಿಯಾಗಿ ಮಾತಾಡಿ ಮೋಹಿಸುತ್ತ, ಅವರ, ಅವರ ನಂಟರಿಷ್ಟರ, ಅವರ ತೋಟ ಗದ್ದೆಗಳ, ಅವರ ನಾಯಿ ಕೋಳಿಗಳ ಯೋಗಕ್ಷೇಮಗಳನ್ನೆಲ್ಲ ವಿಚಾರಿಸುತ್ತ, ಬಲೆ ಬೀಸಿಕೊಂಡು ಕಾಯುವ ಬೆಸ್ತನಂತೆ ಕುಳಿತನು.

ಅರ್ಧ ಗಂಟೆಯೊಳಗಾಗಿ ಅರಣ್ಯ ಮಧ್ಯೆ ಮೌನವಾಗಿದ್ದ ಬಯಲು ಮನುಷ್ಯವಾಣಿಗಳಿಂದ ಸಶಬ್ದವಾಯಿತು. ತಲೆಗೆ ಹಾಳೆಟೋಪಿ ಹಾಕಿಕೊಂಡು ಶೈಶವದಲ್ಲಿ ಆರಿಸಿದ ಕೊಂಬುಗಳಿಂದ ಸುಟ್ಟಿದ್ದು ಈಗ ವಿಸ್ತಾರವಾಗಿದ್ದ ಕಲೆಗಳುಳ್ಳ ಹೊಟ್ಟೆಯನ್ನು ಬಿಟ್ಟುಕೊಂಡು, ಎದುರಿಗೆ ತ್ರಿಕೋಣಾಕಾರವಾಗಿ ಕಾಣುವಂತೆ ಸೊಂಟದ ಪಂಚೆ ಸುತ್ತಿಕೊಂಡು, ಕಾಲು ಗಳಿಗೆ ಬೆಳ್ಳಿಯ ಸರಿಗೆಯನ್ನೂ ಕಂಬಳಿಯ ಕರೆಯನ್ನೂ ‘ಮುಷ್ಟ’ ಮಾಡಿ ಕಟ್ಟಿಕೊಂಡು ಮುತ್ತಳ್ಳಿ ಸೇರೆಗಾರರ ಕಡೆಯ ‘ಬಗಲಿ’ಯು, ಕೋಳಿಯಂಕದಲ್ಲಿ ತನ್ನ ಪ್ರಾಧಾನ್ಯವನ್ನು ತಾನೆ ಚೆನ್ನಾಗಿ ಅರಿತವನ ಠೀವಿಯಿಂದ, ಇಬ್ಬರು ಮೂವರೊಡನೆ ಅವರ ಕೈಲಿ ಅಂಕದ ಕೋಳಿಹುಂಜಗಳನ್ನು ಹೊರಿಸಿಕೊಂಡು, ಗಟ್ಟಿಯಾಗಿ ಮಾತಾಡುತ್ತ ಬಂದನು. ಅವನ ಮೊಳಕಾಲಿನ ರೋಮಮಯವಾದ ಮಾಂಸಖಂಡಗಳಲ್ಲಿ ಒಂದು ಕುಂಟನ ಹುಣ್ಣು ಇದ್ದು, ಅದಕ್ಕೆ ಇದ್ದಲನ್ನು ತೇದು ತಯಾರುಮಾಡಿದ ಕರಿಯ ಮದ್ದು ಬಳಿದಿತ್ತು. ಬಂದವನೆ ಅಂಕಕ್ಕಾಗಿ ನೆರೆದಿದ್ದ ಕೋಳಿಯ ಹುಂಜಗಳನ್ನು, ಅವುಗಳ ಕಾಲಿಗೆ ಹಗ್ಗಹಾಕಿ ಕಟ್ಟಿದ್ದ ಪೊದೆಗಳೆಡೆಗೆ ಹೋಗಿ, ಒಂದೊಂದರ ಬಳಿಯೂ ನಿಂತು ನಿಂತು ಪರೀಕ್ಷಿಸಿದನು. ಆ ‘ಬಗಲಿ’ ಅಂಕಕ್ಕೆ ಬಂದ ಕೋಳಿಗಳಿಗೆ ಜೊತೆ ಹಾಕುವುದರಲ್ಲಿ ಶಿಫಾರಸು ಸಂಪಾದಿಸಿದನು. ಆದ್ದರಿಂದ ಪ್ರತಿಯೊಂದು ಅಂಕದಲ್ಲಿಯೂ ‘ಜೊತೆಹಾಕು’ವುದರಲ್ಲಿ ಅವನ ಅಭಿಪ್ರಾಯಕ್ಕೇ ಬಹಳ ಗೌರವವಿರುತ್ತಿತ್ತು. ಆದ್ದರಿಂದಲೆ ಅಂಕಕ್ಕೆ ಕೋಳಿಗಳನ್ನು ತಂದಿದ್ದವರೆಲ್ಲರೂ, ಅವರಲ್ಲಿ ಕೆಲವರು ‘ಬಗಲಿ’ಗಿಂತಲೂ ವೇಷಭೂಷಣದಲ್ಲಿ ಎಷ್ಟೋ ಮಿಗಿಲಾಗಿದ್ದರೂ, ‘ಬಗಲಿ’ಯ ಹಿಂದೆ, ಆತನನ್ನು ‘ಸೀಸೀ’ ಮಾಡಲೆಂದೊ ಏನೊ, ಪರಿವಾರ ಕಟ್ಟಿಕೊಂಡು ತಿರುಗತೊಡಗಿದ್ದರು. ಹಂದಿಗಳ ಮುಂದೆ ಮುತ್ತು ಚೆಲ್ಲುವವನ ಧೋರಣೆಯಿಂದ ಆ ‘ಬಗಲಿ’ ತನ್ನ ಅಮೂಲ್ಯವಾದ ಅಭಿಪ್ರಾಯಗಳನ್ನು ಎರಚುತ್ತ, ಹಿಂದೆ ಅನೇಕ ಅಂಕಗಳಲ್ಲಿ ಗೆದ್ದು ಹೆಸರುವಾಸಿಯಾಗಿ “ಅಭಿಮನ್ಯು” “ಕರ್ಣ” “ಅರ್ಜುನ” ಮೊದಲಾದ ಪೌರಾಣಿಕ ಬಿರುದಾವಳಿಗಳನ್ನೂ ಪಡೆದು, ನೋಡುವುದಕ್ಕೆ ಲಕ್ಷಣವಾಗಿಯೂ ಧೀರವಾಗಿಯೂ ಇದ್ದು, ತಮ್ಮನ್ನು ಸಂದರ್ಶಿಸುವುದಕ್ಕೆ ಬಂದ ನರಾಕೃತಿಗಳನ್ನು ಅದೇನೊ ಒಂದು ಅಹಂಭಾವದಿಂದ ನೋಡುತ್ತಿದ್ದ ಕೋಳಿಹುಂಜಗಳನ್ನು ಮೈನೀವಿ ಶ್ಲಾಘಿಸಿ ಹುರಿದುಂಬಿಸುತ್ತ, ಮುಂದೆ ಮುಂದೆ ಸರಿದನು.

ಇನ್ನೊಂದು ಅರ್ಧ ಗಂಟೆಯೊಳಗಾಗಿ ನೂರೈವತ್ತು ಇನ್ನೂರು ಜನಗಳ ಮೇಲೆ ನೆರೆಯಿತು. ಅಂಕದ ಕೋಳಿಗಳು ಇಪ್ಪತ್ತು ಮೂವತ್ತು ಜೊತೆಗಳಷ್ಟು ಬಂದಿದ್ದುವು. ಉಳಿದ ಜನಗಳಲ್ಲಿ ಅರೆಪಾಲು ಜುಗಾರಿಯಾಗಿ ಎಂದರೆ ಇಸ್ಪಿಟೀನ ಜೂಜಾಟಕ್ಕಾಗಿಯೇ ಬಂದಿದ್ದರು. ಅನೇಕರು ಅಂಕಕ್ಕಾಗಿ ತಾವೇ ಕೋಳಿಗಳನ್ನು ತರದಿದ್ದರೂ ಅಂಕಕ್ಕೆ ನಿಂತ ಹುಂಜಗಳ ಪಕ್ಷ ಪ್ರತಿಪಕ್ಷಗಳನ್ನು ವಹಿಸಿ. ಕುದುರೆಯ ಜೂಜಿನಲ್ಲಿ —— ನೋಡಿದರು. ‘ಆ ಕುದುರೆ ಗೆಲ್ಲುತ್ತದೆ’ ‘ವೆಈ ಕುದುರೆ ಗೆಲ್ಲುತ್ತದೆ’ ಎಂದು ತಮ್ಮ ತಮ್ಮಲ್ಲಿಯೆ ಜೂಜು ಕಟ್ಟುವಂತೆ, ‘ಮೇಲುಜೂಜು’ ಕಟ್ಟಲು ಬಂದಿದ್ದರು.

ಅಷ್ಟೊಂದು ಜನರು ನೆರೆದಿದ್ದರೂ, ಹೊತ್ತು ಐದು ಗಂಟೆಯ ಮೇಲೆ ಆಗಿದ್ದರೂ, ಇನ್ನೂ ‘ಕೋಳಿಯಂಕ’ ಪ್ರಾರಂಭವಾಗಿರಲಿಲ್ಲ. ಎಲ್ಲರೂ ಯಾರನ್ನೊ ನಿರೀಕ್ಷಿಸುತ್ತ ಹಾದಿ ನೋಡುತ್ತಿದ್ದರು. ಮುತ್ತಳ್ಳಿಯ ಸೇರೆಗಾರರೂ ಸೀತೆಮನೆಯ ಸೇರೆಗಾರರು ಬಂದಿದ್ದರೂ. ಕಾನೂರಿನ ಸೇರೆಗಾರ ರಂಗಪ್ಪ ಸೆಟ್ಟರು ಬರದೆ ಅಂಕ ಪ್ರಾರಂಭವಾಗುವಂತಿರಲಿಲ್ಲ. ಏಕೆಂದರೆ ಅವರಿಗೆ ಆಳುಗಳ ಸೇರೆಗಾರಿಕೆ ಮಾತ್ರವಲ್ಲದೆ ಸೇರೆಗಾರರ ಸೇರೆಗಾರಿಕೆಯೂ ದೊರೆಕೊಂಡಿತ್ತು.

ಮುತ್ತಳ್ಳಿಯ ‘ಬಗಲಿ’ ತನ್ನ ಸೇರೆಗಾರರೊಡನೆ ’ಹೌದಾ, ಕಾಂಬುದೇನು ? ಕೇಂಬುದೇನು ? ಸೇರೆಗಾರೆ ! ಅಂಕಕ್ಕೆ ಕೈಹಾಕುವಾ !” ಎಂದನು.

ಆದರೆ ಮುತ್ತಳ್ಳಿಯ ಸೇರೆಗಾರರಿಗೆ ಕಾನೂರು ಸೇರೆಗಾರರನ್ನು ಬಿಟ್ಟು ಅಂಕವನ್ನು ನಡೆಸುವ ಎದೆಯಿರಲಿಲ್ಲ.

ಕಳ್ಳಂಗಡಿಯವನಿಗಂತೂ ವ್ಯಾಪಾರ ಸನ್ನಿಪಾತಜ್ವರದಂತೆ ಢರತೊಡಗಿತ್ತು.

ಬಯಲಿನ ತುಂಬ ಜನಗಳೂ, ಅವರ ಧ್ವನಿಯೂ, ಅವರ ವಾಸನೆಯೂ ತುಂಬಿತ್ತು. ಎಲೆಯಡಕೆಯ ವಾಸನೆ, ಬೀಡಿಯ ಹೊಗೆ ಮತ್ತು ಅದರ ವಾಸನೆ, ಸುಟ್ಟ ಒಣಮೀನ ವಾಸನೆ, ಕಳ್ಳು ಮೊದಲಾದವುಗಳ ವಾಸನೆ ! ಹುಂಜಗಳ ಕೂಗು, ರೆಕ್ಕೆಗಳ ಬಡಿದಾಟ ! ಕೆಟ್ಟ ಮಾತಿನ ಬೈದಾಟ !

“ಹೋ ಬಂದರು ! ಬಂದರು !”

“ಏನು ಮಹಾರಾಜರು ಬಂದ್ಹಾಂಗೆ ಬರ್ತಿದ್ದಾರೆ !”

“ಮತ್ತಿನ್ನೇನು ? ಚಂದ್ರೇಗೌಡ್ರ ಪಟ್ಟಾನೆ ಸಿಕ್ಕಿಬಿಟ್ಟದೆ !”

“ಹಣೇಲಿ ಬರ್ದಿದ್ದು !”

ಇತ್ಯಾದಿ ವ್ಯಾಖ್ಯಾನಗಳೊಡನೆ ನೆರೆದಿದ್ದವರ ದೃಷ್ಟಿಗಳೆಲ್ಲ ಏಕಮುಖವಾಗುತ್ತಿರಲು, ಕಾನೂರು ಸೇರೆಗಾರರ ರಂಗಪ್ಪ ಸೆಟ್ಟರು, ತಡಮಾಡಿ ಬಂದುದಕ್ಕೆ ಕ್ಷಮಾಪಣೆ ಕೇಳಿಕೊಳ್ಳುವ ಬದಲಾಗಿಯೋ ಎಂಬಂತೆ, ಸ್ವಲ್ಪ ಅವಸರ ಅವಸರವಾಗಿಯೆ ನಡೆದುಬಂದರು.

ಆದರೆ ಅವರ ಮುಖದಲ್ಲಿ ಅವಸರದ ಭಾವವಿರಲಿಲ್ಲ. ಅದಕ್ಕೆ ಬದಲಾಗಿ ತೃಪ್ತಿ, ಹೆಮ್ಮೆ, ಅಟ್ಟಹಾಸ, ತಾವು ಮುಖ್ಯವ್ಯಕ್ತಿ ಎಂಬೊಂದು ಅಭಿಮಾನ, ತಮ್ಮ ಆಗಮನಕ್ಕಾಗಿ ಅಷ್ಟೊಂದು ಜನರು ಅಷ್ಟುಹೊತ್ತು ಕಾದಿದ್ದಾರಲ್ಲ, ಪರ್ವಾ ಇಲ್ಲ, ಎಂಬೊಂದು ದಂಭ – ಇವುಗಳೆಲ್ಲ ನಗುತ್ತಿದ್ದ ಅವರ ಹಲ್ಲುಬ್ಬು ಮುಖದಲ್ಲಿ ಚಿತ್ರಿತವಾಗಿದ್ದುವು. ಅವರು ತಲೆಗೆ ಸುತ್ತಿಕೊಂಡಿದ್ದ ಕೆಂಪು ವಸ್ತ್ರ, ಅವರ ಕಿವಿಗಳಲ್ಲಿ ಹೊಳೆಯುತ್ತಿದ್ದ ದೊಡ್ಡ ಹರಳೊಂಟಿಗಳು, ಮುಡಿದಿದ್ದ ಹೂವು, ಆಗಾಗ ನೀವುತ್ತಿದ್ದರೂ ಅತಿ ಸಾಧಾರಣವಾಗಿದ್ದ ಮೀಸೆಗಳು, ಕ್ಷೌರ ಮಾಡಿಸಿದ್ದ ಕುಳಿಗೆನ್ನೆ, ಮತ್ತು ದೃಢತೆಯನ್ನಾಗಲಿ ಕ್ರಿಯಾಶಕ್ತಿಯನ್ನಾಗಲಿ ಸೂಚಿಸಿದ ಮೋಸದ ಗಲ್ಲ, ಹಾಕಿಕೊಂಡಿದ್ದ ಕರಿಯ ಕೋಟು, ಮೊಳಕಾಲಿನಿಂದ ಸ್ವಲ್ಪ ಕೆಳಗೆ ಇಳಿದಿದ್ದ ಕಚ್ಚೆ, ಒಂದು ಕಾಲಿನಲ್ಲಿದ್ದ ಬೆಳ್ಳಿಯ ಸರಿಗೆ, ಗಿರಕು ಬರಕು ಸದ್ದು ಮಾಡುತ್ತ ತಮ್ಮ ಇರುವಿಕೆಯನ್ನು ಕೂಗಿ ಹೇಳುವಂತಿದ್ದ ತಳುಕಿನ ಮೆಟ್ಟುಗಳು, ಕೈಯಲ್ಲಿ ಹಿಡಿದಿದ್ದ ಬೆಳ್ಳಿಕಟ್ಟಿನ ಬೆತ್ತ – ಈ ಒಂದೊಂದೂ ನಾಗರಿಕತೆಯನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದ ಅನಾಗರಿಕ ಅಸಂಸ್ಕೃತನನ್ನು ಚೆನ್ನಾಗಿ ಪ್ರದರ್ಶಿಸುತ್ತಿದ್ದರೂ, ಅಲ್ಲಿ ನೆರೆದಿದ್ದವರಿಗೆ ಸೇರೆಗಾರರು ಆದರ್ಶಮೂರ್ತಿಯಾಗಿ ರಾರಾಜಿಸಿದರು.

ರಂಗಪ್ಪ ಸೆಟ್ಟರ ಹಿಂದೆಯೂ ಅಕ್ಕಪಕ್ಕಗಳಲ್ಲಿಯೂ ಅವರ ‘ಬಗಲಿ’ ಮತ್ತು ಆಳುಗಳು, ಹಳೆಪೈಕದ ತಿಮ್ಮನೇ ಮೊದಲಾದ ಕಾನೂರಿನ ಸ್ವತಂತ್ರಿಗಳೂ ಬರುತ್ತಿದ್ದರು. ತಿಮ್ಮ ಕಂಕುಲದಲ್ಲಿ ಒಂದು ಸಣ್ಣ ಜಾತಿ ಅಂಕದ ಹುಂಜವನ್ನು ಅವುಚಿಕೊಂಡಿದ್ದನು. ಆಳುಗಳೂ ಇನ್ನೆರಡು ದೊಡ್ಡ ದೊಡ್ಡ ಹುಂಜಗಳನ್ನು ಹಿಡಿದುಕೊಂಡಿದ್ದರು. ಮರಗಳ ನಡುವೆ ಗುಂಪು ನಡೆದು  ಬರುತ್ತಿದ್ದಾಗ ಒಂದೆರಡು ಎಡೆಗಳಲ್ಲಿ ತೂರಿಬರುತ್ತಿದ್ದ ಸಂಜೆಯ ಬಿಸಿಲಿನಲ್ಲಿ, ಹುಂಜಗಳ ರಕ್ತಗರ್ಭಿತವಾದ ಕೆಂಗೆಂಪು ಚೊಟ್ಟಿಗಳು ಸೇರೆಗಾರರ ತಲೆ ವಸ್ತ್ರಕ್ಕಿಂತಲೂ ಕೆಂಪಾಗಿ ರಂಜಿಸಿದುವು

ಅಂಕದ ಸಮಯಗಳಲ್ಲಿ ಸಾಮಾನ್ಯವಾಗಿ ರಂಗಪ್ಪ ಸೆಟ್ಟರು ಸ್ವಲ್ಪ ಹೆಚ್ಚಾಗಿಯೇ ಹರ್ಷದಿಂದಿರುತ್ತಿದ್ದರೂ ಆ ದಿನ ಅವರು ಎಂದಿಗಿಂತಲೂ ಅತಿಶಯವಾಗಿ ಸಂತೋಷವಾಗಿದ್ದಂತೆ ಕಾಣುತ್ತಿತ್ತು. ಹೆಂಗಸರ ಹಾಗೆ ತಲೆಯ ತುಂಬಾ ಕೂದಲಿದ್ದು, ಹೊಸದಾಗಿ ಕ್ಷೌರಮಾಡಿಸಿದ್ದ ಅವರ ಚಪ್ಪಟೆ ಮುಖದಮೇಲೆ, ತನ್ನ ಸಲುವಾಗಿ ಪಾತ್ರೆಯಲ್ಲಿ ಪಲಾವು ತೆಗೆದುಕೊಂಡು ಬರುವ ಯಜಮಾನನನ್ನು ಕಂಡು ಬಾಲವಲ್ಲಾಡಿಸುತ್ತ ಮುಖವನ್ನೇ ಅಭೀಷ್ಟಕವಾಗಿ ವೀಕ್ಷಿಸುವ ನಾಯಿಯ ಮೋರೆಯ ಮೇಲೆ ಕಣ್ಣುಗಳಲ್ಲಿ ತೋರುವ, ವಿಷಯಲಾಲಸೆಯ ಕಳೆಯೊಂದು ಮಿರುಗುತ್ತಿತ್ತು. ಆ ಮಿರುಗು ಅವರ ತಲೆಯೊಳಗೆ ಮಿದುಳಿನಲ್ಲಿ ಸಂಚರಿಸುತ್ತಿದ್ದ ವ್ಯಭಿಚಾರೀ ಭಾವದ ಪ್ರತಿಬಿಂಬವಾಗಿತ್ತು.

ಕೋಳಿಯಂಕವೆಂದರೆ ರಂಗಪ್ಪ ಸೆಟ್ಟರಿಗೆ ಪ್ರಾಣ. ಆದರೂ ಆ ದಿನ ಅವರು ಮನಸ್ಸಿಲ್ಲದ ಮನಸ್ಸಿನಿಂದ ಅಂಕಕ್ಕೆ ಬಂದಿದ್ದರು ! ಕಾರಣವೇನೆಂದರೆ, ಅವರು ಹಾಕಿದ್ದ ಗಾಳಕ್ಕೆ ಅವರಿಗೆ ಬೇಕಾಗಿದ್ದ ಪ್ರೀತಿಯ ಮೀನು ಮುಲುಮುಲುಮುಲು ಕಚ್ಚಲಾರಂಭಿಸಿತ್ತು. ಗಾಳದ ನೇಣಿಗೆ ಕಟ್ಟಿದ್ದ ಬೆಂಡು ನೀರಿನಮೇಲೆ ಕುಣಿಯತೊಡಗಿತ್ತು ! ಇನ್ನೇನು ಗಾಳದ ಚಳೆಯನ್ನು ಎಳೆದರೆ ಸೈ ಮೀನು ದಡಕ್ಕೆ ಬಿದ್ದು ಕೈಸೇರುತ್ತದೆ ! ಅದನ್ನು ಹಾಗೆಯೆ ನಿಲ್ಲಿಸಿಬಿಟ್ಟು ಕೋಳಿ ಅಂಕಕ್ಕೆ ಬಂದಿದ್ದ ಸೇರೆಗಾರರಿಗೆ ಮನಸ್ಸು ಹಿಂದು ಹಿಂದಕ್ಕೆ ನೀಕ್ಕುಳಿಗಿಳ್ಳುತ್ತಿತ್ತು. ಅಷ್ಟಾದರೂ ‘ಕೋಳಿಯಂಕದ ಪಟ್ಟೆ’ಗೆ ಪ್ರವೇಶಿಸಿದ ತರುವಾಯ ಆ ನೆರೆದ ಜನರ ಉತ್ಸಾಹ ಉದ್ರೇಕ ಪ್ರಶಂಸೆ ಖಂಡನೆ ಮಾತು ನಗೆಗಳನ್ನೂ, ಅಂಕದ ಹುಮಜಗಳ ಸಮೂಹವನ್ನೂ, ಮುತ್ತಳ್ಳಿ ಸೇರೆಗಾರರು ಸೀತೆಮನೆ ಸೇರೆಗಾರರು ಮೊದಲಾದವರು ತಮಗೆ ತೋರುತ್ತಿದ್ದ ಭಯ ಭಕ್ತಿ ಗೌರವಗಳನ್ನೂ, ಮುಂದೆ ತಮಗೊದಗಲಿರುವ ಜಯ ಮತ್ತು ಲಾಭಗಳನ್ನೂ, ಕಲ್ಲು ಸಾರಾಯಿಗಳ ಕಂಪನ್ನೂ ಕಂಡ ಸೆರೆಗಾರರ ಮನಸ್ಸು ಆ ದಿನ ಮಧ್ಯಾಹ್ನ ತನ್ನ ತಾಯಿಯ ಜೊತೆ ಕಾನೂರಿಗೆ ಬಂದಿದ್ದ ನೆಲ್ಲುಹಳ್ಳಿಯ ಸುಬ್ಬಮ್ಮನನ್ನು ಸದ್ಯಕ್ಕೆ ಮರೆತುಬಿಟ್ಟಿತು.

“ಹೌದಾ, ಸೇರಿಗಾರೆ, ತಡಮಾಡೂದ್ಯಾಕೆ ?” ಎಂದು ಕೇಳಿದ ಮುತ್ತಳ್ಳಿಯ ‘ಬಗಲಿ’ಗೆ ರಂಗಪ್ಪಸೆಟ್ಟರು “ಹೌದು, ಮಗಾ, ಕೈಹಚ್ಚಿನಿ ! ತಡಮಾಡೂದ್ಯಾಕೆ ?” ಎಂದು ಅಂಕ ಪ್ರಾರಂಭವಾಗುವಂತೆ ಮೀಸೆಯಮೇಲೆ ಕೈಯಾಡಿಸುತ್ತ ಬೆಸನಿತ್ತರು.

ಮುತ್ತಳ್ಳಿಯ ‘ಬಗಲಿ’ಯೇ ಮೊದಲಾದ ಪ್ರವೀಣರು ಅಂಕದ ಹುಂಜಗಳಿಗೆ ಜೊತೆಹಾಕಲು ತೊಡಗಿದರು. ತುಳುಮಾತುಗಳ ಸುರಿಮಳೆ ಸರಿಯಲಾರಂಭಿಸಿತು. ‘ಆ ಕೆಂಪು ಹುಂಜಕ್ಕೆ ಈ ಬಿಳಿಯ ಹುಂಜ ಸಮಗೈಯಲ್ಲ ; ಏಕೆಂದರೆ ಅದರ ಕಾಲು ಉದ್ದ.’ ‘ಆ ಬಣ್ಣದ ಹುಂಜಕ್ಕೂ ಈ ಬಣ್ಣದ ಹುಂಜಕ್ಕೂ ಇವತ್ತು ಪಂಚಾಂಗ ಬರುವುದಿಲ್ಲ.’ (ಕೋಳಿಗಳನ್ನು ಕಾಳಗಕ್ಕೆ ಬಿಡುವಾಗ ಪಂಚಾಂಗ ನೋಡಿ ಘಳಿಗೆ, ತಿಥಿ, ರಾಹುಕಾಲ, ಗುಳಿಕಕಾಲ ಇತ್ಯಾದಿಗಳನ್ನೂ, ಯಾವ ಬಣ್ಣದ ಕೋಳಿ ಯಾವ ಬಣ್ಣದ ಕೋಳಿಯನ್ನು ಯಾವಾಗ ಸೋಲಿಸುತ್ತದೆ ಮೊದಲಾದ ವಿಚಾರಗಳನ್ನೂ ನಿರ್ಣಯಿಸಿಕೊಡುವ ಶೂದ್ರ ಜೋಯಿಸರುಗಳೂ ಅಂಕಕ್ಕೆ ಬರುತ್ತಾರೆ.) ‘ಇದು ನಾಲ್ಕು ಅಂಕಗಳನ್ನು ಗೆದ್ದ ಕೋಳಿ, ಅದು ಇವತ್ತು ತಾನೇ ಒಡ್ಡಿಯಿಂದ ಹಿಡಿದು ಕೊಂಡುಬಂದಿದ್ದು’. ಹೀಗೆ ತರತರವಾಗಿ ವಾದವಿವಾದಗಳಿಗೂ ಭಿನ್ನಾಭಿಪ್ರಾಯಗಳಿಗೂ ಮೊದಲಾಯಿತು. ಪ್ರತಿಯೊಬ್ಬನೂ ತನ್ನ ಹುಂಜ ಸೋಲದ ರೀತಿಯಲ್ಲಿಯೆ ಜೊತೆ ಹಾಕಿಸಿಕೊಳ್ಳಬೇಕೆಂದು ಪ್ರಯತ್ನಿಸುತ್ತಿದ್ದನು. ಏಕೆಂದರೆ, ಯಾರ ಹುಂಜ ಅಂಕದಲ್ಲಿ ಸೋಲುವುದೊ, ಓಡುವುದೊ ಅಥವಾ ಸಾಯುವುದೊ ಅದು ಗೆದ್ದ ಹುಂಜದವನಿಗೆ ಸೇರಬೇಕೆಂದು ಅಂಕದ ಕಾನೂನು. ಆದ್ದರಿಂದಲೆ ಒಬ್ಬೊಬ್ಬ ಜೂಜುಗಾರನೂ ತನ್ನ ಕೋಳಿಯ ಸೋಲಿನಿಂದುಂಟಾಗುವ ನಷ್ಟದಿಂದಲೂ ಅವಮಾನದಿಂದಲೂ ಪಾರಾಗಿ, ಅದರ ಗೆಲುವಿನಿಂದುಂಟಾಗುವ ಲಾಭವನ್ನೂ ಕೀತೀಯನ್ನೂ ಸಂಪಾದಿಸಲು ಕಾತರನಾಗಿದ್ದನು. ಅಲ್ಲದೆ ಎರಡು ಮೂರು ಅಂಕಗಳಲ್ಲಿ ಗೆದ್ದ ಕೋಳಿಗಳಿಗೆ ಬಹಳ ಬೆಲೆ ಬರುತ್ತದೆ. ಅದಕ್ಕಾಗಿ ಕಸಬುದಾರರು ಹುಂಜಗಳನ್ನು ಕಟ್ಟಿ, ಸಾಕಿ, ತರಬಿಯತ್ತು ಮಾಡುತ್ತಾರೆ. ಅಂತಹ ಒಂದೊಮದು ವೀರ ಹುಂಜಗಳಿಂದ ಒಬ್ಬೊಬ್ಬನಿಗೆ ಮೂವತ್ತು ನಾಲ್ವತ್ತು ಐವತ್ತು ಹುಂಜಗಳೂ ದಕ್ಕುವುದುಂಟು ! ಆಮೇಲೆ ಅವುಗಳಿಗೆ ‘ಅರ್ಜುನ’ ‘ಕರ್ಣ’ ‘ಅಭಿಮನ್ಯು’ ಮೊದಲಾದ ಬಿರುದುಗಳೂ ಬರುತ್ತವೆ ! ಅಂತಹ ಬಿರುದುಗಳನ್ನು ಪಡೆದ ಹುಂಜಗಳ ಒಡೆಯರಿಗೆ ಎಷ್ಟು ಗೌರವ ! ಅಂತಹ ಹುಂಜಗಳ ಕಾಳೆಗದಲ್ಲಿ ಪ್ರೇಕ್ಷಕರು ನೂರಾರು ರೂಪಾಯಿಗಳ ‘ಮೇಲು ಜೂಜು’ ಕಟ್ಟುತ್ತಾರೆ ಅಂದರೆ !

ಅಂತೂ ಆದಷ್ಟು ಜಾಗ್ರತೆಯಾಗಿ ಅಂಕದ ಹುಂಜಗಳಿಗೆ ಜೊತೆ ಹಾಕಿದರು. ಜೂಜುಗಾರರು ತಮ್ಮ ತಮ್ಮ ಹುಂಜಗಳ ಕಾಲಿಗೆ ವಾಡಿಕೆಯಂತೆ ಎರಡಂಗುಲದಷ್ಟು ಉದ್ದವಾಗಿ, ಕಾಲಂಗುಲದಷ್ಟು ಅಗಲವಾಗಿ, ಕ್ಷೌರದ ಕತ್ತಿಗಿಂತಲೂ ನಿಶಿತವಾಗಿ, ಬೆಳ್ಳಗೆ ತಳತಳಿಸುವ ಕತ್ತಿಗಳನ್ನು ಕಟ್ಟಲು ಪ್ರಾರಂಭಿಸಿದರು.

ಬಯಲಿನ ಏಳೆಂಟೆಡೆಗಳಲ್ಲಿ ಅಂಕ ಪ್ರಾರಂಭವಾಯಿತು. ಒಂದೊಂದು ಜೊತೆಯ ಸುತ್ತಲೂ ಆಟಗಾರರೂ ನೋಟಗಾರರೂ ಚಕ್ರಾಕಾರವಾಗಿ ಕಿಕ್ಕಿರಿದರು. ಪ್ರೇಕ್ಷಕರಲ್ಲಿ ಸ್ವಾಭಾವಿಕವಾಗಿ ಪಕ್ಷಪ್ರತಿಪಕ್ಷಗಳಾಗಿ ‘ಮೇಲು ಜೂಜು’ ಕಟ್ಟತೊಡಗಿದರು.

ಕಾನುರು ಸೇರೆಗಾರರ ಸ್ವತಃ ಅಧ್ಯಕ್ಷರಾಗಿದ್ದ ಅಂಕಸ್ಥಾನದಲ್ಲಿ ಹೆಚ್ಚು ಜನ ನೋಟಕರು ಸೇರಿದರು. ಏಕೆಂದರೆ, ಅವರು ಯಾವಾಗಲೂ ರೂಪಾಯಿಗಟ್ಟಲೆ ಮೇಲುಜೂಜು ಕಟ್ಟಿ. ಸಹಜವಾಗಿಯೆ ಕುತೂಹಲ ಪೂರ್ಣವಾಗಿರುತ್ತಿದ್ದ ಅಂಕಕ್ಕೆ ಮತ್ತೂ ಒಂದು ಹೊಸ ಹುರುಪು ಕೊಡುತ್ತಿದ್ದರು. ಅಲ್ಲದೆ ಅವರ ಅಧ್ಯಕ್ಷತೆಯಲ್ಲಿ ಅತ್ಯುತ್ತಮವಾದ ಅಂಕದ ಕೋಳಿಗಳನ್ನೇ ಚುನಾಯಿಸಿ ಕಾಳೆಗಕ್ಕೆ ಬಿಡುತ್ತಿದ್ದರು.

ಇಬ್ಬರು ಜೂಜುಗಾರರು ತಮ್ಮ ತಮ್ಮ ಕೋಳಿಗಳಿಗೆ ಕತ್ತಿ ಕಟ್ಟಿ, ಅವುಗಳನ್ನು ಎರಡು ಕೈಗಳಿಂದಲೂ ಭದ್ರವಾಗಿ ಹಿಡಿದು ಎದೆಗವುಚಿಕೊಂಡು ರಣರಂಗಕ್ಕೆ ಇಳಿದರು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ಸ್ಪರ್ಧೆಯಿಂದ ಮಲೆತು ನೋಡಿದರು. ಒಬ್ಬನದು ಬಡಕಲು ಮುಖ, ಮೆಳ್ಳೆಗಣ್ಣು, ಧೂಳಿ ಹಿಡಿದಂತೆ ನಸುಕೆಂಪಾಗಿ ಗಲ್ಲದವರೆಗೂ ಎಂಬಂತೆ ನೀಳವಾಗಿ ಜೋಲುತ್ತಿದ್ದ ಮೀಸೆ, ಮತ್ತೊಬ್ಬನದು ಮೈಲಿಯೆದ್ದು ಕುಳಿಕುಳಿಯಾಗಿದ್ದ ಕರಿಯ ಮುಖ, ಅತಿ ವಿರಳವಾಗಿ ಕಿರಿಮೀಸೆ, ಸದಾ ಮದ್ಯಪಾನ ಮಾಡಿದುದರಿಂದ ಉಂಟಾದ ಹೊಲಹಿನ ತೇಲುಗಣ್ಣು. ವಿಕಾರದಲ್ಲಿ, ಕೊಳಕಿನಲ್ಲಿ, ರೋಷ ಕೋಪ ಹಟ ಧೂರ್ತತನಗಳಲ್ಲಿಯೂ ಇಬ್ಬರೂ ಸಮಗೈಯಾಗುವ ಸ್ಪರ್ಧಿಗಳಂತೆ ತೋರುತ್ತಿದ್ದರು. ನಗ್ನವಾದ ಇಬ್ಬರ ತೋಳುಗಳಲ್ಲಿಯೂ ಜಯಲಕ್ಷ್ಮಿಯಾಗುವ ಸ್ಪರ್ಧಿಗಳಂತೆ ತೋರುತ್ತಿದ್ದರು. ನಗ್ನವಾದ ಇಬ್ಬರ ತೋಳುಗಳಲ್ಲಿಯೂ ಜಯಲಕ್ಷ್ಮಿವಶೀಕರಣ ಮಂತ್ರದ ತಾಯಿತಿಗಳು ಕೊಳೆ ಹಿಡಿದು ಅಸಹ್ಯವಾಗಿ ಕಾಣುತ್ತಿದ್ದುವು.

ನೋಡುತ್ತ ನೋಡುತ್ತ ಒಬ್ಬರನೊಬ್ಬರು ಮೈ ಮೈ ಮುಟ್ಟುವಂತೆ ಸಮೀಪಿಸಿದರು. ಮೆಳ್ಳೆಗಣ್ಣಿನವನು ಹಿಡಿದಿದ್ದ ಕರಿಗೆರೆಯ ಕೆಂಪುಹುಂಜದ ಮುಖವೂ, ಮೈಲಿಕಜ್ಜಿ ಮುಖದವನು ಹಿಡಿದಿದ್ದ ಅಚ್ಚ ಬಿಳಿಯ ಹುಂಜದ ಮುಖವೂ ಎದುರುಬದುರಾದುವು. ಕೆಂಪುಹುಂಜದ ಚೊಟ್ಟಿಗಿಂತಲೂ ಬಿಳಿಯ ಹುಂಜದ ಚೊಟ್ಟಿ ವರ್ಣತಾರತಮ್ಯದಿಂದ ಬಹಳ ಚೆನ್ನಾಗಿ ರಂಜಿಸುತ್ತಿತ್ತು ಮೆಳ್ಳೆಗಣ್ಣಿನವನ ಕೆಂಪುಹುಂಜ ಮೈಲಿಕಜ್ಜಿಯವನ ಬಿಳಿಯ ಹುಂಜದ ತಲೆಯನ್ನು ಒಂದುಸಾರಿ ಕೊಕ್ಕಿನಿಂದ ಕುಕ್ಕಿತು. ಪ್ರೇಕ್ಷಕರಲ್ಲಿ ಕೆಲವರು ಜಯಘೋಷಮಾಡಿ, ಭವಿಷ್ಯತ್ತು ಹೇಳತೊಡಗಿದರು. ಬಿಳಿಯ ಹುಂಜವೂ ಕುಕ್ಕಲು ಪ್ರಯತ್ನಿಸಿತು. ಆದರೆ ಅಷ್ಟರಲ್ಲಿಯೆ ಜೂಜುಗಾರರು ಹಿಂದೆ ಹಿಂದೆ ಸರಿದು, ಸಮ್ಮುಖವಾಗಿ ನಿಂತರು. ಅಂಕಕ್ಕೆ ಬಿಡುವ ಮೊದಲು, ಅಂಕವಾಡುವ ಹುಂಜಗಳನ್ನು ಹಾಗೆ ಕೆರಳಿಸುವುದು ಒಂದು ರೂಢಿ.

ಜೂಜುಗಾರರು ರಂಗದ ಮಧ್ಯೆ ತುಸು ದೂರ ದೂರವಾಗಿ ನಿಂತು ಹುಂಜಗಳನ್ನು ಹಿಂದಕ್ಕೂ ಮುಂದಕ್ಕೂ ಸರಿಸಿ, ಪುಕ್ಕಗಳನ್ನು ನೀವಿ, ಕೋಳಿಗಳನ್ನುದ್ದೇಶಿಸಿ ಸಮಯೋಚಿತವಾದ ಉತ್ತೇಜನದ ಮಾತುಗಳನ್ನು ಹೇಳುತ್ತ ಅಂಕಕ್ಕೆ ಅನುವಾಗುತ್ತಿರಲು, ಪ್ರೇಕ್ಷಕರಲ್ಲೊಬ್ಬ ಸ್ವಲ್ಪ ಮುಂದೆ ಬಾಗಿ ಎಲ್ಲರೂ ಕಾಣುವಂತೆ ಕೈಯಲ್ಲಿ ಬೆಳ್ಳಿಯ ಎರಡಾಣೆಯೊಂದನ್ನು ಹಿಡಿದು ನೋಡಿ “ಕೆಂಪಿನ ಮೇಲೆ ಎರಡಾಣೆ ಮೇಲು ಜೂಜು ! ಯಾರು ಕಟ್ತೀರಿ ?” ಎಂದು ಕೂಗಿದನು.

ಮತ್ತೊಬ್ಬ “ಬಿಳಿಯದರ ಮೇಲೆ ನಾಲ್ಕಾಣೆ !” ಎಂದು ಬೆಳ್ಳಿಯ ನಾಣ್ಯವನ್ನು ಮೇಲಕ್ಕೆ ಟಣ್ಣನೆ ಹಾರಿಸಿ ಹಿಡಿದನು.

ನಾಲ್ಕೈದು ಜನರು ಮಾತ್ರವೆ ಸ್ಪರ್ಧೆಯಿಂದ ಮೇಲುಜೂಜು ಹೂಡಿದರು. ಉಳಿದವರು ಬಿರುದಿನ ಕೋಳಿಗಳ ಮೇಲೆ ಜೂಜು ಕಟ್ಟಲೆಂದು, ಯಃಕಶ್ಚಿತ್ತಗಳ ಗೋಜಿಗೆ ಹೋಗದೆ, ಸುಮ್ಮನೆ ನೋಡುತ್ತಿದ್ದರು.

ಅಂಕ ಪ್ರಾರಂಭವಾಯಿತು. ಹಿಂದಕ್ಕೂ ಮುಂದಕ್ಕೂ ತೂಗಿ, ಪುಕ್ಕಗಳನ್ನು ನೀವಿ, ನೆಲಕ್ಕೆ ಬಿಟ್ಟೊಡನೆಯೆ ಹುಂಜಗಳೆರಡೂ ಒಂದನ್ನೊಂದು ಮಲೆತು ನೋಡುತ್ತ, ನಟನೆಗಾಗಿ ನೆಲವನ್ನು ಕುಕ್ಕುತ್ತ, ಕುಸ್ತಿಯಾಡುವ ಜಟ್ಟಿಗಳು ಪಟ್ಟು ನೋಡಿ ಒಬ್ಬರನ್ನೊಬ್ಬರು ಸೆಣಸುವಂತೆ ಹೊಂಚಿ ಸೆಣಸುತ್ತ, ಕ್ಷಣಕ್ಷಣಕ್ಕೂ ಹತ್ತಿರಹತ್ತಿರವಾಗಿ, ಕುತ್ತಿಗೆಯ ಕೇಸರಗಳನ್ನು ಕೆದರಿ ನಿಮಿರಿಸಿಕೊಂಡು, ಒಂದರ ಮುಖದ ಬಳಿ ಮತ್ತೊಂದು ಮುಖವಿಟ್ಟು, ಮುಖವೆತ್ತಿ, ದೃಷ್ಟಿಯುದ್ದ ಮಾಡುತ್ತ, ಹಠಾತ್ತಾಗಿ, ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ನೆರೆದಿದ್ದವರೆಲ್ಲರೂ ಬೆಚ್ಚಿ ಬೆರಗಾಗುವಂತೆ. ಒಂದರ ಎದೆಗೆ ಮತ್ತೊಂದು ರಪ್ಪರಪ್ಪನೆ ಒದೆದುಕೊಳ್ಳಲಾರಂಭಿಸಿದುವು. ಮೂರು ಸಾರಿ ಒದೆದುಕೊಂಡು ನಾಲ್ಕನೆಯ ಸಾರಿ ಎರಗುವಷ್ಟರಲ್ಲಿ, ಮೈಲಿಕಜ್ಜಿ ಮುಖದವನು ತನ್ನ ಬಿಳಿಯ ಹುಂಜವನ್ನು ಪುಕ್ಕಹಿಡಿದು ಎಳೆದು ಎತ್ತಿಕೊಂಡನು. ಮೆಳ್ಳೆಗಣ್ಣಿನ ತನ್ನ ಹುಂಜವನ್ನು ಎತ್ತಿಕೊಳ್ಳುವಷ್ಟರಲ್ಲಿ, ಅದು ರೋಷದಿಂದ ಅಟ್ಟಿಬಂದು ಮೈಲಿಕಜ್ಜಿಯವನ ಕೈಲಿದ್ದ ಬಿಳಿಯ ಹುಂಜಕ್ಕೆ ಒದೆಯುತ್ತೇನೆಂದು ಹಾರಿ ಒದೆಯಿತು. ಮೈಲಿಕಜ್ಜಿಯವನು ತನ್ನ ಹುಂಜವನ್ನು ಬೇಗನೆ ಮೇಲಕ್ಕೆತ್ತಿ ಪೆಟ್ಟು ಬೀಳದಂತೆ ತಪ್ಪಿಸಿದನು. ಆದರೆ ಕೆಂಪು ಹುಂಜದ ಕಾಲ್ಗತ್ತಿಯ ಮೊನೆ ಕೋಳಿಗೆ ತಪ್ಪಿದುದು ಅವನ ಕೈಗೇ ಗೀರಿ ನೆತ್ತರು ಸುರಿಯಲಾರಂಭಿಸಿತು. ಅಷ್ಟರಲ್ಲಿ ಮೆಳ್ಳೆಗಣ್ಣಿನವನೂ ತನ್ನ ಹುಂಜವನ್ನು ಹಿಂದಕ್ಕೆ ಸೆಳೆದುಕೊಂಡನು. ಮೈಲಿಕಜ್ಜಿಯವನಿಗೆ ರೇಗಿತು. ಸೇರೆಗಾರ ರಂಗಪ್ಪಸೆಟ್ಟರು ಜಗಳಕ್ಕೆ ಅವಕಾಶಕೊಡದೆ ಮತ್ತೆ ಕೋಳಿಗಳನ್ನು ಅಂಕಕ್ಕೆ ಬಿಡುವಂತೆ ಅಪ್ಪಣೆಮಾಡಿದರು.

ಮೊದಲಿನಂತೆ ಎರಡನೆಯ ಸಾರಿಯೂ ಹುಂಜಗಳು ಒಂದನ್ನೊಂದು ಸಂಧಿಸಿ ಅಂಕವಾಡಿದುವು. ಒಂದು ನಿಮಿಷದೊಳಗಾಗಿ ಬಿಳಿಯ ಹುಂಜದ ಎದೆಯ ತಿಪ್ಪುಳು ಕೆಂಪಾಯಿತು. “ಹೋ ಹೋ ಹಿಡಿ ಹಿಡಿ” ಎನ್ನುವಷ್ಟರಲ್ಲಿ ಮೈಲಿಕಜ್ಜಿಯವನು ತನ್ನ ಹುಂಜವನ್ನು ಹಿಡಿದೆತ್ತಿಕೊಂಡು ಪರೀಕ್ಷಿಸಿದನು. ಬಹಳ ಕಷ್ಟಪಟ್ಟು ಹುಡುಕಿದ ಮೇಲೆ ಅದರ ಎದೆಗೆ ಕತ್ತಿಯ ಅಲಗು ಒಂದಂಗುಲದಷ್ಟು ಒಳಹೊಕ್ಕಿದ್ದುದು ಗೊತ್ತಾಯಿತು. ಕೋಳಿಯ ಬಾಯಲ್ಲಿ ರಕ್ತ ಬರತೊಡಗಿತ್ತು. ಅದರ ಯಜಮಾನನಿಗೆ ತನ್ನ ಕೋಳಿ ಸಾಯುತ್ತದೆಂದು ಸ್ಪಷ್ಟವಾಗಿ ತಿಳಿದುಹೋಯಿತು. ಏನಾದರಾಗಲಿ ಎಂಬ ಸ್ವಲ್ಪ ನೀರು ಕೂಡಿಸಿ, ಮೈಗೂ ಪುಕ್ಕದ ಗಡ್ಡೆಗು ನೀರು ಚಿಮುಕಿಸಿ ಶಿಶಿರೋಪಾಚಾರಮಾಡಿ, ಕಣ್ಣು ಮುಚ್ಚಿಬಿಡುವುದರೊಳಗೆ ಮತ್ತೆ ಕಾಳಗಕ್ಕೆ ಬಿಟ್ಟನು. ಆ ಹುಂಜವಾದರೊ ಸ್ವಲ್ಪವು ಹಿಂದೆಗೆಯದೆ, ತನಗಾಗಿದ್ದ ಎದೆಗಾಯದ ಅರಿವು ಇಲ್ಲದೆ, ಮತ್ತೆ ಅಂಕವಾಡಿತು. ಒಂದೆರಡು ನಿಮಿಷಗಳಲ್ಲಿ ನೆತ್ತರು ಕಾರಿಕೊಂಡು ಕೆಳಗುರುಳಿತು. ಅದನ್ನೆತ್ತಿಕೊಂಡು  ಪರೀಕ್ಷಿಸಿದರು. ಎದೆಗೆ ಮೂರು ಗಾಯಗಳಾಗಿದ್ದುವು. ಕತ್ತಿಯ ಒಂದೊಂದು ಗಾಯವೂ ಸುಮಾರು ಒಂದಂಗುಲಕ್ಕೆ ಹೆಚ್ಚಾಗಿ ಮೈಯೊಳಗೆ ಚಿಚ್ಚಿತ್ತು. ಆದರೂ ಆ ಹುಂಜ ಸಾಯುವವರೆಗೂ ಹೋರಾಡಿ ಮಡಿಯಿತು. ಓಡಿಹೋಗಲಿಲ್ಲ. ಅದಕ್ಕೇ ‘ಕೋಳಿಯ ಶೌರ್ಯ’ವೆಂದು ಗಾದೆಯಗಿರುವುದಲ್ಲವೆ ?

ಮೆಳ್ಳೆಗಣ್ಣಿನ ತನ್ನ ಹುಂಜ ಗೆದ್ದಿದ್ದ ಬಿಳಿಯ ಹುಂಜದ ಶವವನ್ನು ಎತ್ತಿಕೊಂಡು ಹೋಗಿ ಅದರ ಮುಂದೆ ವಿಜಯೋನ್ಮತ್ತವಾಗಿ ಎಸೆದನು. ಆದರೆ ಕೆಂಪು ಹುಂಜಕ್ಕೂ ಪೆಟ್ಟಾಗಿದ್ದುದರಿಂದ ಅದೂ ಬೀಳುವಂತೆ ತಲೆದೂಗಲಾರಂಭಿಸಿತು. ಬೇಗಬೇಗನೆ ಎತ್ತಿಕೊಂಡು ಪರೀಕ್ಷಿಸುತ್ತಿದ್ದಾಗ ಹಾಗೆ ಕೈಮೇಲೆ ಪ್ರಾಣ ಬಿಟ್ಟಿತು. ಬಿಳಿಯ ಹುಂಜದ ಸಾವಿಗೆ ಹಿಗ್ಗಿದ ಮೆಳ್ಳೆಗಣ್ಣ, ಎತ್ತಿದ ಕೈ ಮೇಲೆಯೆ ಸತ್ತೊರಗಿದ ತನ್ನ ಕೆಂಪು ಹುಂಜವನ್ನು ದುಃಖದೃಷ್ಟಿಯಿಂದ ವೀಕ್ಷಿಸುತ್ತಿರಲು, ಹಿಂದಿನಿಂದ ಯಾರೊ ತುಳುಮಾತಿನಲ್ಲಿ “ಹೌದಾ. ಕುದುಕಾ, ಪೆಟ್ಟಾಗಿತ್ತಾ ?” ಎಂದು ಪ್ರಶ್ನಿಸಿದರು.

ಬಿಲ್ಲವರ ಜಾತಿಗೆ ಸೇರಿದ್ದ ಕುದುಕ ತನ್ನ ಮೆಳ್ಳೆಗಣ್ಣನ್ನು ಮೇಲೆತ್ತಿ ತಿರುಗಿ ನೋಡಿದನು : ಗಟ್ಟಿದಮೇಲಿನವರಂತೆ ಉಡುಪು ಹಾಕಿಕೊಂಡಿದ್ದ ಸೋಮ ಕೈಲಿದ್ದ ಕೆಂಪು ಹುಂಜದ ಯೋಗಕ್ಷೇಮವನ್ನು ವಿಚಾರಿಸುತ್ತಿದ್ದರೂ ಕೆಳಗೆ ನೆಲದ ಮೇಲೆ ಸತ್ತು ಬಿದ್ದಿದ್ದ ಬಿಳಿಯ ಹುಂಜವನ್ನು ಆಶಾದೃಷ್ಟಿಯಿಂದ ನೋಡುತ್ತ ಹತ್ತಿರ ಬಂದು ನಿಂತನು.