ಮುತ್ತಳ್ಳಿಯಿಂದ ಹೊರಟ ಹೂವಯ್ಯ ಸೀತೆಮನೆಗೆ ಹೋಗಿ ಮಧ್ಯಾಹ್ನದ ಊಟ ತೀರಿಸಿಕೊಂಡು, ಸಿಂಗಪ್ಪಗೌಡರಿಗೆ ತಾನು ಅಲ್ಲಿ ಕಂಡ ಕಥೆಯನ್ನೆಲ್ಲ ಹೇಳಿ, ಅವರ ಒಕ್ಕಲೊಬ್ಬನ ವಿಚಾರದಲ್ಲಿ ಒಂದು ‘ಪಂಚಾಯಿತಿ’ಯನ್ನು ಕೂಡ ಮಾಡಿ, ಕೆಳಕಾನೂರಿಗೆ ಬರುವಷ್ಟರಲ್ಲಿ ಆ ದಿನ ಸಾಯಂಕಾಲವಾಗಿತ್ತು. ಸಿಂಗಪ್ಪಗೌಡರು ಒಕ್ಕಲೊಬ್ಬನಿಂದ ತಮಗೆ ಬರಬೇಕಾಗಿದ್ದ ಸಾಲಕ್ಕಾಗಿ ಅವನ ಮನೆ ಜಪ್ತಿಮಾಡಿಸಲು ಹವಣಿಸುತ್ತಿದ್ದರು. ಆ ಒಕ್ಕಲು ಸಿಂಗಪ್ಪಗೌಡರ ಹತ್ತಿರ ಸಾಗುವುದು ಹೂವಯ್ಯಗೌಡರ ಮಾತೊಂದೇ ಎಂದು ತಿಳಿದು, ಅವನಲ್ಲಿಗೆ ಕೆಲದಿನಗಳ ಹಿಂದೆ ಬಂದು ಅಹವಾಲು ಹೇಳಿಕೊಂಡಿದ್ದನು. ಅದಕ್ಕಾಗಿಯೆ ಹೂವಯ್ಯ ಸೀತೆಮನೆಗೆ ಹೋಗಿ ‘ಪಂಚಾಯಿತಿ’ ಮಾಡಿ. ಸಿಂಗಪ್ಪಗೌಡರಿಗೆ ಸಮಾಧಾನವನ್ನೂ, ಒಕ್ಕಲಿಗೆ ಬುದ್ಧಿಬಾದವನ್ನೂ ಹೇಳಿ, ಬಡವನಿಗೆ ಸಹಾಯ ಮಾಡಿದ್ದನು. ಆ ಸತ್ಕಾರ್ಯದ ನೆನಪು ಅವನ ಮನಸ್ಸಿಗೆ ಏನೋ ಒಂದು ಧರ್ಮಾನಂದವನ್ನು ತಂದುಕೊಡುತ್ತಿದ್ದಿತು.

ಹೂವಯ್ಯ ತನ್ನ ಕೊಟಡಿಯಲ್ಲಿ ಅಂಗಿ ಬಿಚ್ಚಿಟ್ಟು, ಪದ್ಧತಿಯಂತೆ ಕನ್ನಡಿಯ ಮುಂದೆ ನಿಂತು ಕ್ರಾಪು ಬಾಚಿಕೊಂಡು, ನಡುಮನೆಗೆ ಬಂದು ಮೇಜಿನ ಬಳಿಯಿದ್ದ ಕುರ್ಚಿಯನ್ನು ಸ್ವಲ್ಪ ದೂರ ಎಳೆದುಕೊಂಡು ಕೂತನು. ಸುತ್ತಲೂ ಗೋಡೆಯ ಮೇಲಿದ್ದ ಮಹಾಪುರುಷರ ಪಟಗಳನ್ನೂ ಬೀರುವಿನಲ್ಲಿಯೂ ಮೇಜಿನ ಮೇಲೆಯೂ ಇದ್ದ ಗ್ರಂಥಸಮುದಾಯವನ್ನೂ ಕಂಡೊಡನೆ ಅವನ ಹೃದಯದಲ್ಲಿ ಶಾಂತಿ ಸಂಚಾರವಾಗಿ, ಮುಖದ ಮೇಲೆ ಮುಗುಳ್ನಗೆಯ ತೆರೆಯೊಂದು ಸುಳಿದಡಗಿತು. ಕಾಫಿ ತಂದುಕೊಟ್ಟು ಬಳಿ ನಿಂತು ಮಾತಾಡುತ್ತಿದ್ದ ತಾಯಿ ನಾಗಮ್ಮನವರು ಅವನಿಗೆ ಎಂದಿಗಿಂತಲೂ ಹೆಚ್ಚು ಪೂಜ್ಯವಾಗಿ ಪ್ರಿಯವಾಗಿ ತೋರಿದರು. ಆ ತಾಯಿಯ ಸಾನಿಧ್ಯದಲ್ಲಿ ಜೀವನ ದಿವ್ಯವಾಗಿ ಹಗುರವಾಗಿ ಸಾಗುವುದರಲ್ಲಿ ಸಂದೇಹವಿಲ್ಲವೆಂದು ಅವನ ಮನಸ್ಸು ನೆಮ್ಮದಿಯಾಯಿತು.

“ಯಾಕೆ ನಿಂತುಕೊಂಡೀಯ ? ಕೂತುಕೊ, ಅವ್ವಾ, ಕುರ್ಚಿಯ ಮೇಲೆ !”

ಮಗನ ಮಾತಿಗೆ ತಾಯಿ ನಕ್ಕು “ಸೈ, ಬಿಡು ! ನಾನು ಕುರ್ಚಿಮೇಲೆ ಕೂತುಕೊಂಡು ದೌಲತ್ತು ಮಾಡೋದು ಅತ್ತ ಮಕಾ ಹೋದ ಮೇಲೇ ! ನೀ ಕುಡಿ ; ಆರಿಹೋಗ್ತದೆ !” ಎಂದು ಲೋಟಕ್ಕೆ ಹಾಕಿದ್ದ ಕಾಫಿಯಲ್ಲಿ ತೇಲುತ್ತಿದ್ದ ಒಂದು ಸಣ್ಣ ಕಸವನ್ನು ತರ್ಜನಿಯಿಂದ ತೆಗೆದು, ನೋಡಿ, ಬಿಸಾಡಿದರು

ಬೈರ ಹೊರ ಅಂಗಳದಿಂದ ‘ಅಯ್ಯಾ, ಅಯ್ಯಾ !’ ಎಂದು ಎರಡು ಮೂರು ಸೊಲ್ಲು ಕರೆದನು.

ನಾಗಮ್ಮನವರು ಕಾಫಿ ಕುಡಿಯುತ್ತಿದ್ದ ಮಗನನ್ನು ಕೂಗಿ ಕೂಗಿ ಏಕೆ ತೊಂದರೆ ಪಡಿಸುತ್ತಾನೆ ಎಂದುಕೊಂಡು ತಾವೇ ಹೊರಗೆ ಹೋಗಿ ಕೇಳಿದರು. ಬೈರ ಒಂದೇ ಉಸಿರಿನಲ್ಲಿ ಮಾತಾಡಿದನು. ನಾಗಮ್ಮನವರಿಗೆ ಒಂದೂ ಭಾವವಾಗದೆ “ತಡಿಯಪ್ಪಾ ; ಅವನೇ ಬರ್ತಾನೆ” ಎಂದು ಹೇಳಿ ಒಳಗೆ ಹೋದರು.

ಕಾಫಿ ಕುಡಿದಾದ ಮೇಲೆ ಹೂವಯ್ಯ ಹೊರಗೆ ಬಂದನು. ಬೈರ “ನನ್ನಿಂದಾಗಾದಿಲ್ಲಯ್ಯಾ ಆ ತ್ವಾಟದ ಬೇಲಿ ನೋಡಿಕೊಳ್ಳಾಕೆ ! ಏಟಂತ ನೋಡಿಕೊಳ್ಳಾದು ? ಬೇಲಿ ಕಿತ್ತು ದನ ನುಗ್ಗಿಸ್ತಾರೆ !” ಎಂದನು.

“ಹೋಗೋ ಹೋಗೋ ! ಬೇಲಿ ಕಿತ್ತು ದನ ನುಗ್ಗಿಸ್ತಾರಂತೆ ! ನಿನಗೆ ಬೇಲಿ ಸರಿಯಾಗಿ ಹಾಕೋಕೆ ಬರೋದಿಲ್ಲ ಅಂತಾ ಹೇಳು !…..”

“ಹ್ಯಾಂಗಾರೆ ನಾ….ನಾ….ನಾನೇನು ಹೇಳ್ಳಿ ! ನೀವೆ ಬಂದು ನೋಡಿ….. ಮನ್ನೆ ದೊಡ್ಡ ಗೌಡ್ರೇ (ಚಂದ್ರಯ್ಯಗೌಡರು) ಖುದ್ದು ನಿಂತು ಬೇಲಿ ಕೀಳಿಸಿ, ದನ ನುಗ್ಗಿಸಿದ್ರಂತೆ !…..”

“ನಿನಗೆ ಬುದ್ಧಿಗಿದ್ಧಿ ನೆಟ್ಟಗಿದೆಯೋ ಇಲ್ಲೋ ? ಹೇಳಿದೋರು ಕೇಳಿದೋರ ಮಾತು ಕಟ್ಟಿಕೊಂಡು ಒಬ್ಬರ ಮೇಲೆ ಸುಳ್ಳು ಚಾಡಿ ಹೇಳಬಾರದು…. ನೀ ನೋಡ್ದೇನು ಹೇಳು ?…..”

“ನಾ….ನೋ….ಡ….ಲಿಲ್ಲ !”

“ಹಾಗಾದರೆ ಸುಮ್ಮನಿರು !”

ಇದ್ದಕಿದ್ದಂತೆ ಬೈರ ಮತ್ತೊಂದು ಮಾತು ಎತ್ತಿದನು. ಅವನು ಬಂದದ್ದೂ ಅದಕ್ಕಾಗಿಯೆ ಎಂದು ತೋರುತ್ತದೆ.

“ಅಯ್ಯಾ, ನಾನು ಬಿಡಾರಾನ ಇಲ್ಲಿಗೇ ತಂದುಬಿಡ್ತೀನಿ.”

“ಬೇಡ ಅಂತಾ ನಾ ಹೇಳಲಿಲ್ಲೇನು ನಿನಗೆ ? ನೀನಿಲ್ಲಿಗೆ ಬಂದ್ರೆ ತೋಟ ನೋಡಿಕೊಳ್ಳೋರು ಯಾರು ? ನಿನ್ನಜ್ಜ ?”

ಇಬ್ಬರೂ ಮಾತಾಡುತ್ತ ನಿಂತಿದ್ದಂತೆ ಪುಟ್ಟಣ್ಣನೂ ನಾಯಿಗಳೂ ಬಂದುವು. ಅವನ ಎಡದ ಹೆಗಲಮೇಲಿದ್ದ ಕಂಬಳಿಯ ಜೋಳಿಗೆಯಲ್ಲಿ ಏನೋ ಇದ್ದುದನ್ನು ಕಂಡು ಹೂವಯ್ಯ “ಎಲ್ಲಿಗೆ ಹೋಗಿದ್ದೆಯೋ ?” ಎಂದನು.

“ಕೋವಿ ತಗೊಂಡು ಹೋಗಿದ್ದೆ.”

“ಅದು ಕಂಡಹಾಗೇ ಇದೆಯಲ್ಲಾ ! ಎತ್ತ ಹೋಗಿದ್ದೆ ಎಂದು ಕೇಳಿದೆ.”

“ಕತ್ತಲೆ ಸರುವಿನ ಕಡೆ.”

“ಏನಾದರೂ ಕಂಡಿತೋ ?”

“ಕಾಣುವುದಕ್ಕೇನೊ ಕಂಡುವು.”

“ಹೊಡೆಯೋಕೆ ಸಿಕ್ಕಲಿಲ್ಲೇನು ?”

“ಉ ಹ್ಞು….”

“ಮತ್ತೆ ನಿನ್ನ ಕಂಬಳೀಲಿ ಇರೋದೇನೊ ?”

“ಕಂಬಳಿಲ್ಲಿ ಎಂಥದೆ ?”

“ಇಲ್ಲಿ ಬಾ, ನೋಡ್ತೀನಿ.”

ಪುಟ್ಟಣ್ಣ ಸ್ವಲ್ಪ ನಗುತ್ತ ಬೇಗ ಬೇಗನೆ ಮನೆಯೊಳಗೆ ಹೋಗಿ ಬಿಟ್ಟನು.

ಬೈರ ಪಿಚ್ಚನೆ ಹಲ್ಲುಬಿಟ್ಟು ನಗುಮುಖವಾಗಿ “ಹೆಗ್ಗಡಿತಮ್ಮೋರಿಗೇನೊ ತಂದಾರೆ ಅಂತಾ ಕಾಣ್ತದೆ !” ಎಂದನು.

ಹೂವಯ್ಯನಿಗೆ ಆ ಮಾತಿನ ಅರ್ಥವಾದ ಕೂಡಲೆ ಮುಖದ ಮೇಲೆ ಕರಿನೆರಳಾಡಿದಂತಾಗಿ ತನ್ನ ಕೊಠಡಿಗೆ ಹೊರಟು ಹೋದನು.

ಕತ್ತಲಾದ ಮೇಲೆ ಪುಟ್ಟಣ್ಣ ಲ್ಯಾಂಪು ಹೊತ್ತಿಸಲು ಅಲ್ಲಿಗೆ ಬಂದನು.

ಹೂವಯ್ಯ “ಪುಟ್ಟಣ್ಣಾ, ನಾ ನಿನಗೆ ಎಷ್ಟು ಸಾರಿ ಹೇಳಬೇಕು ?” ಎಂದು ಪ್ರಾರಂಭಿಸಿದನು.

“ನಾನೇನು ಮಾಡಿದ್ದು ?…..”

“ನಿನಗೆ ನಾಚಿಕೆಯಾಗೊದಿಲ್ಲೇನು ? ಸೋಮನಂಥಾ ಬಾಡುಗಳ್ಳ ಕುಡುಕನೇ ಕುಡಿಯೋದನ್ನ ಬಿಟ್ಟಿದ್ದಾನೆ ನಿನಗೆ…..”

“ನಾನು ಕುಡಿದಿದ್ದರೆ…. ಕುಡಿದ್ಹಾಂಗೆ ! ಆಣೆಹಾಕಿ ಬೇಕಾದರೂ ಹೇಳ್ತೀನಿ….”

“ನೀನು ಕಂಬಳಿಯಲ್ಲಿ ತಂದೆಯಲ್ಲಾ ಅದೇನು ?….”

“ನನಗಲ್ಲ ! ನಾಗಮ್ಮೋರು ಹೇಳಿದ್ದರು ಅಂತಾ ಒಂದು ಶೀಸೆ….”

“ಕಳ್ಳೋ ? ಹೆಂಡವೋ ? ಸಾರಾಯಿಯೋ ?”

“ಕಳ್ಳು !”

“ನಿನಗೆ ಕೆಟ್ಟದ್ದಾದರೆ ಅವ್ವಗೆ ಹೇಗೆ ಒಳ್ಳೆಯಗಾಗ್ತದೆ ಹೇಳು ?”

“ಅವರು ಸುಮಾರು ಸಾರಿ ಹೇಳಿದ್ದರು….”

ಹೂವಯ್ಯ ಮುಂದೆ ಮಾತಾಡಲಿಲ್ಲ. ಪುಟ್ಟಣ್ಣ ದೀಪ ಹೊತ್ತಿಸಿ ಹೋದ ಮೇಲೆ, ಅವನು ತನ್ನ ತಾಯಿಯ ದೌರ್ಬಲ್ಯವನ್ನು ಕುರಿತು ಯೋಚಿಸತೊಡಗಿದನು. ನಾಗಮ್ಮನವರು ಎಲ್ಲ ವಿಷಯಗಳಲ್ಲಿಯೂ ಆದರ್ಶ ಮಾತೆಯಾಗಿ ತೋರಿದರು. ಆದರೆ ಎರಡು ವಿಚಾರಗಳಲ್ಲಿ ಮಾತ್ರ ಅವರನ್ನು ತಿದ್ದುವುದು ಅಸಾಧ್ಯವಾಗಿತ್ತು. ಒಂದನೆಯದಾಗಿ ದೆವ್ವ ಮುಂತಾದ ಮೌಢ್ಯಗಳ ವಿಷಯದಲ್ಲಿ ; ಎರಡನೆಯದಾಗಿ ಕಳ್ಳು ಕುಡಿಯುವುದರಲ್ಲಿ !  ಅವರು ಪದೇ ಪದೇ ದಿನವೂ ಕುಡಿಯುತ್ತಿರಲಿಲ್ಲ. ಆದಷ್ಟು ಪ್ರಯತ್ನದಿಂದ ಮಗನ ಮನಸ್ಸಿಗೆ ಮೆಚ್ಚುಗೆಯಾಗುವಂತೆ ನಡೆದುಕೊಳ್ಳಲು ಪ್ರಯತ್ನಿಸಿ, ಹದಿನೈದು ದಿನಗಳಿಗೊಮ್ಮೆ ತಿಂಗಳಿಗೊಮ್ಮೆ ಕುಡಿಯುವಷ್ಟು ಸಂಯಮವನ್ನೂ ಸಂಪಾದಿಸಿದ್ದರು. ಆದರೆ ಬಾಲ್ಯದಿಂದಲೂ ರಕ್ತಗತವಾಗಿ ಬಂದಿದ್ದ ಆ ಚಾಳಿ ಸಂಪೂರ್ಣವಾಗಿ ಹೋಗಬೇಕಾದರೆ ‘ಅತ್ತಕಡೆ ಹೋದ ಮೇಲೆಯೇ’ ಎಂದು ಅವರೇ ಹೇಳುತ್ತಿದ್ದರು. ಹೂವಯ್ಯ ಆಲೋಚಿಸುತ್ತಾ, ತಾನು ನಶ್ಯ ಹಾಕುವುದನ್ನು ಬಿಡಲು ಪ್ರಯತ್ನಿಸಿದ್ದಾಗ ತನಗಾಗಿದ್ದ ಸೋಲುಗಳನ್ನೂ ಸಂಕಟಗಳನ್ನೂ ನೆನೆದು, ತನ್ನ ತಾಯಿಯ ಅಷ್ಟರಮಟ್ಟಿಗೆ ಸೋಲೂ ಮಹಾ ಜಯವೆಂದೇ ಭಾವಿಸಿ, ಸಹಾನುಭೂತಿಯಿಂದ ಹಿಗ್ಗಿದನು. ಆ ದಿನ ಸೀತೆಯನ್ನು ನೋಡಿ ಬಂದಮೇಲೆ ಅವನಿಗೆ ಎಲ್ಲ ವಿಷಯಗಳಲ್ಲಿಯೂ ಹಿಗ್ಗು ತಲೆದೋರಿತ್ತು. ಮತ್ತೆ ಸೀತೆಯ ನೆನಪು ಬಂದಾಗಲೂ ಹಾಗೆಯೆ ಆಯಿತು. ಸೀತೆಯ ಶೋಚನೀಯ ಸ್ಥಿತಿಗಾಗಿ ವ್ಯಸನಪಡುವುದನ್ನು ಬಿಟ್ಟು ಸಂತುಷ್ಟನಾಗಿರುವುದನ್ನು ಕಂಡು ಹೂವಯ್ಯ ತನ್ನೊಳಗೆ ತಾನೆ ವಿಸ್ಮಿತನಾದನು. ಸೀತೆಯ ಅಂತರ್ಮನಸ್ಸಿನ ವ್ಯೂಹ ಹೂವಯ್ಯನ ಅಂತರ್ಮನಸ್ಸಿಗಲ್ಲದೆ ಬಹಿರ್ಮನಸ್ಸಿಗೆ ಹೇಗೆ ಗೊತ್ತಾಗುತ್ತದೆ ? ಆದ್ದರಿಂದಲೆ ಆತನ ಆಂತರ್ಮನಸ್ಸಿನ ಸಂತೋಷ ಬಹಿರ್ಮನಸ್ಸಿಗೆ ಆಶ್ಚರ್ಯಕರವಾಗಿಯೂ ಅಕಾರಣವಾಗಿಯೂ ಕಂಡುಬಂದಿತು.

ಊಟದ ಸಮಯದಲ್ಲಿ ಹೂವಯ್ಯ ಪುಟ್ಟಣ್ಣರಿಗೆ ಸ್ವಲ್ಪ ದೂರವಾಗಿ ಕುಳಿತಿದ್ದ ಸೋಮ ತನ್ನ ಆ ದಿನದ ಕೆಲಸಕಾರ್ಯಗಳನ್ನೂ ಸಾಹಸಗಳನ್ನೂ ಕುರಿತು ಗಟ್ಟಿಯಾಗಿ ಗಳಪುತ್ತಿದ್ದನು. ನಡುನಡುವೆ ಎಲ್ಲರೂ ನಕ್ಕುನಕ್ಕು ಬೀಳುತ್ತಿದರು. ಸೋಮನ ಮಾತಿನ ವಿಷಯಕ್ಕಿಂತಲೂ ಅದರ ವಿಧಾನವೇ ಹೆಚ್ಚು ಹಾಸ್ಯಕರವಾಗಿತ್ತು. ಅವನ ಸಾಹಸಗಳಲ್ಲಿ ಮುಖ್ಯವಾದದ್ದು ಕೌಲಿ ಎಂಬ ದನ ಗುಟ್ಟದಲ್ಲಿ ಕರು ಹಾಕಿರಲು ಆ ತಾಯಿಮಕ್ಕಳನ್ನು ಕೊಟ್ಟಿಗೆಗೆ ಕರೆತಂದದ್ದು !

ಕೌಲಿಗೆ ಕೋಡುಗಳಿಲ್ಲದಿದ್ದರೂ ಶೌರ್ಯ ಹೆಚ್ಚು. ಅದು ಚೆನ್ನಾಗಿ ಪುಷ್ಟವಾಗಿ ಬೆಳೆದಿದ್ದು, ನೋಡುವುದಕ್ಕೆ ಲಕ್ಷಣವಾಗಿತ್ತು. ಬಿಳಿ ಮತ್ತು ಕೆಂಜರು ಬಣ್ಣಗಳಿಂದ ಶೋಭಿಸುತ್ತಿದ್ದ ಅದರ ಮೈ ಕಂಡವರ ಕಣ್ಣಿಗೊಂದು ಮುತ್ತುಕೊಡುವಂತಿತ್ತು. ಅದರ ಬಾಲ ಹೂಬಾಲ ; ಎಂದರೆ ಬಾಲದ ತುದಿಯ ಚೌಲಿ ಬೆಳ್ಳಗೆ ಸೀಮೆಯ ಸುಣ್ಣದಿಂದ ಸಮೆದ ಚಾಮರದಂತಿತ್ತು. ಸೌಂದರ್ಯಕ್ಕೆ ತಕ್ಕಂತೆ ಕೆಚ್ಚಲು ಇದುದರಿಂದ ಉಪಯೋಗದ ದೃಷ್ಟಿಯಿಂದಲೂ ಇತರ ಹಸುಗಳಿಗಿಂತಲೂ ಹೆಚ್ಚಾಗಿ ಹಾಲು ಕೊಡುತ್ತಿತ್ತು. ಕಾನೂರಿನಲ್ಲಿದ್ದಾಗಲೂ ಅದು ನಾಗಮ್ಮನವರ ನಚ್ಚಿನ ದನವಾಗಿತ್ತು. ಅದಕ್ಕೆ ಒಂದು ಮುಖ್ಯವಾದ ಮತ್ತೊಂದು ಕಾರಣವೆಂದರೆ, ಅದು ನಾಗಮ್ಮನವರಿಗೆ ಬಳುವಳಿ ಬಂದಿದ್ದ ಗೋವಿನ ಸಂತತಿಗೆ ಸೇರಿತ್ತು. ಆ ಹಸು ಬಹುದಿನಗಳಿಂದ ಗಬ್ಬವಾಗಿದ್ದುದರಿಂದ ಹೂವಯ್ಯನಾದಿಯಾಗಿ ಸರ್ವರೂ ಅದು ಕರುಹಾಕುವುದನ್ನು ಕುತೂಹಲದಿಂದ ಕಾಯುತ್ತಿದರು. ಸೋಮನ ಬಾಯಿಂದ ಆ ವಾರ್ತೆಯನ್ನು ಕೇಳಿ ಅವನಿಗೆ ಆನಂದವಾಯಿತು. ಆದ್ದರಿಂದಲೆ ಸೋಮನನ್ನು ಕೆರಳಿಸಿ ಕೆರಳಿಸಿ ಮಾತಾಡಿಸಿ ನಗಲು ತೊಡಗಿದುದು. ಕೌಲಿ ಕರುವನ್ನು ಎತ್ತಿಕೊಂಡು ಬರಲು ಹೋದಾಗ ಸೋಮನನ್ನು ಅಟ್ಟಿಸಿಕೊಂಡು ಹೋದದ್ದು, ಸೋಮ ಮರಹತ್ತಿದ್ದು, ಆಮೇಲೆ ಕೌಲಿ ಮತ್ತೆ ಕರುವಿದ್ದೆಡೆಗೆ ಹಂಬಾ ಎಂದು ಓಡಿಹೋದಮೇಲೆ ಸೋಮ ಮರದಿಂದ ಇಳಿಯತೊಡಗಿ, ಮತ್ತೆ ಯಾವುದೋ ಒಂದು ಒಣಗಿದ ಹರೆ ಮುರಿದು ಬಿದ್ದ ಸದ್ದಿಗೆ ಕೌಲಿಯೇ ಬಂದಿತೆಂದು ಬೆದರಿ ಬೇಗ ಬೇಗ ಬೇಗನೆ ಮರವೇರಿದ್ದು, ಇದನ್ನೆಲ್ಲಾ ಕೇಳಿ, ಎಲ್ಲರೂ ಅಳ್ಳೆ ಹಿಡಿಯುವಷ್ಟರಮಟ್ಟಿಗೆ ಗೊಳ್ಳೆಂದು ಬಿದ್ದು ಬಿದ್ದು ನಗುತ್ತಿದ್ದರು.

ಉಟ ಪೂರೈಸಿದ ಮೇಲೆ ಹೂವಯ್ಯ ಕೌಲಿಯನ್ನೂ ಅದರ ಕರುವನ್ನೂ ನೋಡಬೇಕೆಂದು ಸೋಮನಿಗೆ ಹೇಳಲು ಅವನು ಅತ್ಯುತ್ಸಾಹದಿಂದ, ಕರು ಹಾಕಿದ್ದವನು ತಾನೆಯೇ ಎನ್ನುವಷ್ಟರ ಮಟ್ಟಿನ ಸಂಭ್ರಮದಿಂದ, ಕೊಟ್ಟಿಗೆಗೆ ಹೋಗಲು ಬೆಳಕು ಬೇಕಾಗಿ, ಲಾಟೀನು ಹೊತ್ತಿಸಿದನು. ಅವನನ್ನು ಹಿಂಬಾಲಿಸಿ ಹೂವಯ್ಯನೂ ಪುಟ್ಟಣ್ಣನೂ ಹೊರಟರು.

ಗೊಬ್ಬರದ ಗುಂಡಿಯ ಏರಿಯ ಮೇಲೆ ಹಾದು ಹೋಗುತ್ತಿದ್ದಾಗ ಹೂವಯ್ಯನಿಗೆ ಕೆಲವು ತಿಂಗಳ ಹಿಂದೆ ಜರುಗಿದ್ದ ಸೋಮನ ಸಾಹಸ ನೆನಪಿಗೆ ಬಂದು ವಿನೋದಕ್ಕಾಗಿ, “ಇಲ್ಲೇ ಅಲ್ಲವೇನೋ ?” ಎಂದನು.

“ಹೌದೊಡೆಯಾ ! ಕಳ್ಳಸೂಳೇಮಕ್ಕಳು ಕೊಂದುಹಾಕಿದ್ದರಲ್ದಾ ನನ್ನ !” ಎನ್ನುತ್ತ ಸೋಮ ಮುಂಬರಿದನು.

‘ಬಲೀಂದ್ರ’ ಹೋತ ತನ್ನ ಜಾಬಿನಲ್ಲಿ ಮಲಗಿದ್ದುದು, ದೀಪವನ್ನೂ ಮನುಷ್ಯರನ್ನೂ ಕಂಡು ಎದ್ದುನಿಂತು. ಮೆಲುಕು ಹಾಕುವುದನ್ನು ನಿಲ್ಲಿಸಿ ಎವೆಯಿಕ್ಕದೆ ನೋಡತೊಡಗಿತು. ಆದರೆ ಜನರು ಹತ್ತಿರ ಬರಲು ಗುರುತು ಸಿಕ್ಕಿತೆಂಬುದನ್ನು ಪುನಃ ಮೆಲುಕು ಹಾಕುವುದರಿಂದಲೂ ಸಮಾಧಾನದ ಭಂಗಿಯಿಂದಲೂ ಪ್ರದರ್ಶಿಸಿತು.

ಪುಟ್ಟಣ್ಣ “ಇವೆಲ್ಲಿ ಬಾಲಗಚ್ಚಿ ! ಎಲ್ಲಿ ಹೋದರೂ ಬರ್ತವೆ ! ಹಚಾ ! ಹೋಗ್ತೀಯೊ ಇಲ್ಲೊ ? ನಿನ್ನ….” ಎಂದು ಕಲ್ಲು ತೆಗೆದುಕೊಳ್ಳುವಂತೆ ನೆಲಕ್ಕೆ ಕೈಯಿಟ್ಟು ಬಾಗಲು, ನಾಯಿಗಳು ಬಡರಿ ಬಿದ್ದು ಹಿಂದಕ್ಕೆ ಓಡಿದುವು.

ಮುವರೂ ಕೊಟ್ಟಿಗೆಯನ್ನು ಪ್ರವೇಶಿಸಿದರು. ಒಡನೆಯೆ ಸೆಗಣಿ, ಗೋಮೂತ್ರ, ಹುಲ್ಲು, ದನಗಳ ಮೈವಾಸನೆ, ಅವುಗಳ ಉಸಿರಿನ ವಾಸನೆ – ಇವುಗಳಿಂದ ತುಂಬಿದ ನಸುಬಿಸುಪಾದ ಸಿನುಗುಗಾಳಿ ಮೂಗಿಗೆ ಬಿಸಿತು. ಕಾಲಿಗೂ ಸೆಗಣಿ ಗಂಜಲಗಳ ಅನುಭವವಾಯಿತು. ಮಲಗಿದ್ದ ಕೆಲವು ದನಗಳು ಎದ್ದು ನಿಂತು ದೊಡ್ಡದಾದ ಕಣ್ಣುಬಿಟ್ಟು ನೋಡಿದುವು. ಅವು ಗಾಬರಿಯಿಂದಜೋರಾಗಿ ಎಳೆದುಬಿಡುತ್ತಿದ್ದ ಉಸಿರೂ ಕೇಳಿಸಿತು. ಅವು ಚಲಿಸಿದಾಗ ನೆಲಕ್ಕೆ ಹಾಕಿದ್ದ ಕಲ್ಲುಗಳಿಗೆ ತಗುಲಿ ಆಗುತ್ತಿದ ಗೊರಸಿನ ಸದ್ದೂ, ಕಂಬಗಳಿಗೆ ಕೋಡು ಹೊಡೆದ ಸದ್ದೂ ಕೇಳಿಸಿ ಹೂವಯ್ಯನ ಮನಸ್ಸಿನಲ್ಲಿ ರೈತನ ಜಗತ್ತಿನ ಸುಖದ ಸ್ಮೃತಿ ಮೂಡಿತು. ಆ ದನಗಳ ಕಣ್ಣುಗಳು, ಕಿವಿಗಳು, ಕೋಡುಗಳು, ಗೋಡೆಯ ಮೇಲೆ ಚಲಿಸುತ್ತಿದ್ದ ದೊಡ್ಡ ನೆರಳುಗಳೂ ಹೇಗೆ ಕಾಣುತ್ತಿವೆ ! ಯಾವುದೊ ಒಂದು ದನದ ಕೊರಳಿನಲ್ಲಿ ದೊಂಟೆಯ ಸದ್ದಾಗುತ್ತಿದೆ ! ಮತ್ತೊಂದು ಕರುವಿನ ಕುತ್ತಿಗೆಯಲ್ಲಿ ಕಿರುಗಂಟೆಯ ಸದ್ದಾಗುತ್ತಿದೆ ! ಮತ್ತೊಂದು ಕರುವಿನ ಕುತ್ತಿಗೆಯಲ್ಲಿ ಕಿರುಗಂಟೆಯ ಟಿಂಟಿಣಿಯಾಗುತ್ತಿದೆ !…..

“ಸೋಮ, ಇವತ್ತು ಯಾರು ಸೆಗಣಿ ಬಾಚಿದ್ದು ?”

“ಸೇಸಿ ಅಂತಾ ಕಾಣ್ತದೆ….”

“ಚೆನ್ನಾಗಿ ಸಗಣಿ ಬಾಚ್ತೀರೋ ಇಲ್ಲೊ ?…..”

“ನಾನು ಬಾಚಿದಾಗ ನೆಕ್ಕಿದಂತೆ ಚೆನ್ನಾಗಿ ಬಾಚುತ್ತೇನೆ…..”

“ಪುಟ್ಟಣ್ಣಾ, ನೀ ಸ್ವಲ್ಪ ಕೊಟ್ಟಿಗೆ ಕಡೆ ಸರಿಯಾಗಿ ನೋಡಿಕೊಳ್ಳಬೇಕು” ಎನ್ನುತ್ತಾ ಹೂವಯ್ಯ ಕೌಲಿಯಿದ್ದ ಎಡೆ ನಿಂತು “ಗೋವಿದ್ದರೆ ತಾನೆ ನಾವಿರೋದು !” ಎಂದನು.

ಕೌಲಿ ತನ್ನ ಕರುವನ್ನು ಮೂಸುತ್ತ, ಅದರ ಮೃದು ರೋಮಮಯವಾದ ನವಕೋಮಲ ಚರ್ಮವನ್ನು ನೆಕ್ಕುತ್ತ, ಆಗಂತುಕರ ಕಡೆ ತನ್ನ ಅಗಲವಾದ ಕಣ್ಣುಗಳನ್ನು ತೆರೆದು ನೋಡತೊಡಗಿತು. ಸೋಮ ಅದರ ದೃಷ್ಟಿ ಮಾತ್ರಕ್ಕೆ ಬೆದರಿ ಹಿಂಜರಿದು ನಿಂತು “ಹತ್ತರ ಹೋಪುದು ಬೇಡ, ಅಯ್ಯಾ ” ಎಂದು ಎಚ್ಚರಿಕೆ ಹೇಳಿದನು.

“ಇಷ್ಟು ಹೆದರಿಕೆ ಇರುವ ಮನುಷ್ಯ ನೀನು ಅಂದು ಕದಿಯೋಕೆ ಹೇಗೆ ಧೈರ್ಯ ಮಾಡಿದೆಯೋ ಏನೋ !” ಎನ್ನುತ್ತ ಹೂವಯ್ಯ ಮುಂಬರಿದನು. ಆದರೆ ಕೌಲಿ ಕೋಡಿಲ್ಲದ ತನ್ನ ತಲೆಯನ್ನು ಅಲ್ಲಾಡಿಸತೊಡಗಿತು.

ಅದನ್ನು ಕಂಡು ಹೂವಯ್ಯ “ಪೂರಾ ಹೆದರಿಸಿಬಿಟ್ಟಿದ್ದೀರಿ ಅಂತಾ ಕಾಣುತ್ತೆ ! ನಿಮ್ಮ ದೆಸೆಯಿಂದ ಆಗೋದಿಲ್ಲ !” ಎಂದು ಸೋಮನ ಕಡೆ ತಿರುಗಿ ನೋಡಿದನು.

ಸೋಮ “ನಾವೇನು ಮಾಡಲಕ್ಕು ! ಅದರ ಹಣೇಬರಾ ಹಾಂಗಲ್ದಾ ?” ಎಂದು “ಅಮ್ಮ ಒಬ್ಬರಿಗೆ ಹೊರತೂ ಇನ್ನು…..” ಎನ್ನುವಷ್ಟರಲ್ಲಿ ಕೌಲಿ ಗಟ್ಟಿಯಾಗಿ ಸೀನಿಬಿಡಲು ಬೆಚ್ಚಿಬಿದ್ದು ಹಿಂದಕ್ಕೆ ಹಾರಿ ನಿಂತನು. ಹೂವಯ್ಯ ಪುಟ್ಟಣ್ಣರಿಗೆ ನಗು ತಡೆಯಲಿಕ್ಕಾಗದೆ ಕೌಲಿ ವಿಸ್ಮಯಪಡುವಂತೆ ನಕ್ಕರು.

ಲಾಟೀನಿನ ಬೆಳಕಿನಲ್ಲಿ ಕೌಲಿಯಂತೆಯೆ ಸುಂದರವಾಗಿ ಮುದ್ದಾಗಿದ್ದ ಅದರ ಕರುವನ್ನು ದೂರದಿಂದಲೆ ನೋಡಿಕೊಂಡು ಮೂವರೂ ಹಿಂತಿರುಗಿದರು. ದೀಪ ದೂರದೂರವಾಗಿ ಮರೆಯಾಗುವವರೆಗೂ ಅದನ್ನೇ ನೋಡುತ್ತಿದ್ದ ಕೌಲಿ ಮತ್ತೆ ಕತ್ತಲೆಯಾಗಲು ಸಮಾಧಾನಗೊಂಡು ಅಕ್ಕರೆಯಿಂದ ತನ್ನ ಕರುವನ್ನು ಅಕ್ಕರೆಯಾಗಿ ನೆಕ್ಕತೊಡಗಿತು.