ಹೂವಯ್ಯ ಗಾಡಿಯಿಂದಿಳಿದು ಸೀತೆಮನೆಗೆ ಹೊರಟಮೇಲೆ ಮುತ್ತಳ್ಳಿ ಶ್ಯಾಮಯ್ಯಗೌಡರು ಗಾಡಿಯೊಳಗಿದ್ದ ದಿಂಬುಮೆತ್ತೆಯ ಮೇಲೆ ಒರಗಿಕೊಂಡು ಆಲೋಚನೆಗೊಳಗಾದರು. ಅವರಿಗೆ ಸೀತೆಯ ದೆಸೆಯಿಂದ ಉಭಯ ಸಂಕಟದಲ್ಲಿ ಸಿಕ್ಕಿಬಿದ್ದ ಹಾಗಾಗಿತ್ತು. ಒಂದು ಕಡೆ ಚಂದ್ರಯ್ಯಗೌಡರ ಅಧಿಕಾರವಾಣಿ ; ಮತ್ತೊಂದು ಕಡೆ ನಾಗಮ್ಮನವರ ಪಾರ್ಥನಾವಣಿ ; ಮಧ್ಯೆ ಸಿಂಗಪ್ಪಗೌಡರ ಸಂದಾನವಾಣಿ. ಚಂದ್ರಯ್ಯಗೌಡರಿಗೆ ಅವರು ಹಿಂದೆ ಒಂದು ರೀತಿಯಾಗಿ ಮಾತುಕೊಡದಿದ್ದರೆ ಮಗಳನ್ನು ಹೂವಯ್ಯನಿಗೇ ಕೊಡುತ್ತಿದ್ದರೆನ್ನುವುದರಲ್ಲಿ ಸಂದೇಹವಿರಲಿಲ್ಲ. ಆದರೆ ಚಂದ್ರಯ್ಯಗೌಡರ ಕ್ರೂರ ಸ್ವಭಾವವನ್ನು ತಿಳಿದವರಾದ್ದರಿಂದ, ಅವರು ತಮಗೆ ಸಾಲಗಾರರಾಗಿದ್ದರೂ, ತಮಗಿಂತ ಕಡಿಮೆ ಶ್ರೀಮಂತರಾಗಿದ್ದರೂ ಶ್ಯಾಮಯ್ಯಗೌಡರಿಗೆ ಅವರಲ್ಲಿ ಹೆದರಿಕೆಯಿತ್ತು. ಆದ್ದರಿಂದಲೆ ತಮ್ಮ ಹೆಂಡತಿ ಗೌರಮ್ಮನವರ, ಮಗ ಚಿನ್ನಯ್ಯನ ಮತ್ತು ಮದುಮಗಳಾಗುವ ಮಗಳು ಸೀತೆಯ ಮೂವರ ಮನಸ್ಸೂ, ತಮ್ಮ ನಿಜವಾದ ಅಂತಃಕರಣವೂ ಹೂವಯ್ಯನ ಪಕ್ಷವಾಗಿದ್ದರೂ ಚಂದ್ರಯ್ಯಗೌಡರ ಮಗನಿಗೆ ಮಗಳನ್ನು ಮದುವೆ ಮಾಡಿಕೊಡಲು ಒಪ್ಪಿದ್ದರು. ಜೊತೆಗೆ ಜೋಯಿಸರಾದ ವೆಂಕಪ್ಪನಯ್ಯನವರು ಬೇರೆ ದೇವರು, ಧರ್ಮ, ಶಾಸ್ತ್ರ, ನಿಮಿತ್ತ, ಗ್ರಹಾಚಾರ ಇವುಗಳ ಹೆಸರಿನಲ್ಲಿ ಚಂದ್ರಯ್ಯಗೌಡರ ಇಚ್ಛೆಯನ್ನೇ ಪೋಷಿಸಿ ಹೂವಯ್ಯನಿಗೆ ವಿರೋಧವಾಗಿ ವರ್ತಿಸಿದ್ದರು.

ಕಾನೂರಿನ ಹೊರ ಅಂಗಳದಲ್ಲಿ ಗಾಡಿ ನಿಲ್ಲುವಷ್ಟರಲ್ಲಿ ಶ್ಯಾಮಯ್ಯಗೌಡರು ‘ಯಾರಾದರೇನಂತೆ ? ಹೆಣ್ಣಿಗೊಂದು ಗಂಡಾದರೆ ಸೈ. ರಾಮಯ್ಯನೇನು ಕಡಮೆ ಹೂವಯ್ಯನಿಗೆ ? ಆಸ್ತಿ, ಮನೆ, ವಿದ್ಯೆ, ರೂಪು ಎಲ್ಲಾ ಇದೆ. ಹೂವಯ್ಯನ ಹಾಗೆ ಅವನಿಗೆ ಮನೆ ಜಮೀನುಗಳ ಮೇಲೆ ತಾತ್ಸಾರ ಬುದ್ದಿಯೂ ಇಲ್ಲ. ಹೂವಯ್ಯನ ಹಾಗೆ ಮೂರ್ಚೆರೋಗವೂ ಇಲ್ಲ. ಅದೂ ಅಲ್ಲದೆ ಹೂವಯ್ಯನಿಗಿಂತಲೂ ದೊಡ್ಡ ಮನೆ ದೊಡ್ಡ ಆಸ್ತಿ ಎಲ್ಲಾ ಇದೆ. ಬಾವನಿಗೂ ಸಿಟ್ಟುಬರದಂತೆ ಕೆಲಸ ಸಾಗುತ್ತದೆ. ಹೆಣ್ಣು ಕೊಟ್ಟು ಹೆಣ್ಣು ತಂದಂತೆಯೂ ಆಗುತ್ತದೆ !’ ಎಂಬ ನಿರ್ಧಾರಕ್ಕೆ ಬಂದು, ತಮ್ಮ ಹೃದಯ ಮನಸ್ಸುಗಳನ್ನು ಸಮಾಧಾನಪಡಿಸಿಕೊಂಡಿದ್ದರು. ಆದರೆ ಒಂದು ಮುಖ್ಯವಾದ ಕಾರಣ ಅವರ ಆಲೋಚನೆಗೆ ಬರದಿದ್ದರೂ ಅಂತಃಕರಣದಲ್ಲಿ ಇತ್ತು : ಚಂದ್ರಯ್ಯಗೌಡರಿಂದ ಶ್ಯಾಮಯ್ಯಗೌಡರಿಗೆ ಸಾವಿರಾರು ರೂಪಾಯಿಗಳ ಸಾಲ ಬರಬೇಕಾಗಿತ್ತು. ಶ್ಯಾಮಯ್ಯಗೌಡರು ಸುಖಜೀವಿ, ಸದ್ವ್ಯಕ್ತಿ : ದೇವರಲ್ಲಿ ಭಕ್ತಿಯಿತ್ತು : ಕೋರ್ಟುಮನೆ ಹತ್ತುವುದು. ಅಲೆಯುವುದು, ದಣಿಯುವುದು ಇದೆಲ್ಲಾ ಅವರಿಗೆ ಸರಿಬೀಳುತ್ತಿರಲಿಲ್ಲ. ಆದ್ದರಿಂದ ಹೇಗಾದರೂ ಚಂದ್ರಯ್ಯಗೌಡರಿಗೆ ಹಿತವಾಗಿದ್ದುಕೊಂಡೇ ತಮ್ಮ ಸಾಲವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕೆಂದು ಅವರ ಬಯಕೆಯಾಗಿತ್ತು. ಚಂದ್ರಯ್ಯಗೌಡರಿಗೆ ಮನಸ್ತಾಪ ಬರುವ ಯಾವ ಕಾರ್ಯವನ್ನೂ ಕೈಕೊಳ್ಳಲು ಅವರು ಹೆದರಿ ಹಿಂಜರಿಯುತ್ತಿದ್ದರು. ‘ಕೊಟ್ಟವನು ಕೋಡಿಂಗ ; ತೆಗೆದುಕೊಂಡವನು ವೀರಭದ್ರ’ ಎಂಬ ಗಾದೆಯಂತೆ ಕೋಡಿಂಗನು ಗಾಡಿಯಿಂದಿಳಿದು ಕಾನೂರಿನ ಕತ್ತಲೆಕೋಣೆಯಲ್ಲಿ ಅಸ್ವಸ್ಥನಾಗಿ ಮಲಗಿದ್ದ ವೀರಭದ್ರನ ಬಳಿಗೆ ಹೋದನು ! ಜನಗಳಿದ್ದರೂ ಮನೆ ಬೆಕೋ ಎನ್ನುವಂತಿತ್ತು.

ರಾಮಯ್ಯ ಮೈಸ್ವಸ್ಥವಿಲ್ಲದೆ ಉಪ್ಪರಿಗೆಯ ಮೇಲೆ ಮಲಗಿದ್ದನು. ಅನುಭವ ಸಾಲದ ಹುಡುಗಿ ಪುಟ್ಟಮ್ಮ ಗಾಡಿ ಹೊಡೆಯುವ ನಿಂಗನ ಸಹಾಯದಿಂದ ಅಡುಗೆಯ ಕೆಲಸದಲ್ಲಿ ತೊಡಗಿದ್ದಳು.

ಶ್ಯಾಮಯ್ಯಗೌಡರು ಸುಬ್ಬಮ್ಮನ ವಿಚಾರವಾಗಿ ಚಂದ್ರಯ್ಯಗೌಡರಿಗೆ ಬುದ್ಧಿಹೇಳಬೇಕೆಂದಷ್ಟೇ ಕಾನೂರಿಗೆ ಬಂದಿದ್ದುದು ! ಆದರೆ ಚಂದ್ರಯ್ಯಗೌಡರ ಮುಂದೆ ಆ ವಿಚಾರವಾಗಿ ತುಟಿಪಿಟಕ್ಕೆನ್ನಲು ಧೈರ್ಯವಾಗಲಿಲ್ಲ. ಬೇರೆ ವಿಷಯಗಳನ್ನು ಕುರಿತು ಹೊರೆ ಹೊರೆ ಮಾತಾಡಿದರು. ಹಳೆಪೈಕದ ತಿಮ್ಮ ತಂದುಕೊಟ್ಟ ನೊರೆ ನೊರೆ ಕಳ್ಳನ್ನು ಬಾವ ನಂಟರಿಬ್ಬರೂ ಚೆನ್ನಾಗಿ ಸೇವಿಸಿದರು.

ಪರಿಣಾಮವಾಗಿಯೋ ಎಂಬಂತೆ ಚಂದ್ರಯ್ಯಗೌಡರಿಗೆ ಮೈಮೇಲೆ ಬಂದಿತು. ಅಬ್ಬರಿಸಿ ಕೂಗಿದರು. ಭಯಂಕರವಾಗಿ ಬೆದರಿಸಿದರು. ವರ್ತಮಾನವನ್ನು ಕೇಳಿ‘ಗೌಡರ ಮೇಲೆ ಭೂತ ಬಂದಿದೆಯಂತೆ’ ಎಂದು ಆಳುಕಾಳುಗಳೆಲ್ಲ ನೆರೆದರು. ಚಂದ್ರಯ್ಯಗೌಡರ ರೀತಿ ಹೇಗಿತ್ತೆಂದರೆ ಅಂಥವುಗಳಲ್ಲಿ ನಂಬಿಕೆಯಿರದಿದ್ದ ರಾಮಯ್ಯನಿಗೂ ಸ್ವಲ್ಪ ನಂಬುಗೆ ಹುಟ್ಟುವಂತಾಯಿತು. ಹೂವಯ್ಯನಿಂದ ದೂರವಾಗಿದ್ದ ರಾಮಯ್ಯನ ಮಾನಸಿಕ ಸ್ಥಿತಿಯೂ, ಆಯಸ್ಕಾಂತ ಶಿಲೆಯಿಂದ ಬಹುಕಾಲ ದೂರವಾಗುವ ಕಬ್ಬಿಣದ ಸೂಜಿಗಲ್ಲಿನಂತೆ, ತನ್ನ ಶಕ್ತಿಯನ್ನು ಕಳೆದುಕೊಳ್ಳತೊಡಗಿತ್ತು.

ಶ್ಯಾಮಯ್ಯಗೌಡರು ಕೈಮುಗಿದುಕೊಂಡು ಮೈಮೇಲೆ ಬಂದಿದ್ದ ಚಂದ್ರಯ್ಯಗೌಡರ ಎದುರು ನಿಂತು ದೇವರನ್ನು ಸಂಭೋದಿಸುವಂತೆ “ನೀನ್ಯಾರು ? ಯಾತಕ್ಕೆ ಬಂದಿದ್ದೀಯ ? ದಯಮಾಡಿ ಹೇಳಿದರೆ ಏನು ಬೇಕೋ ಮಾಡ್ತೇವೆ” ಎಂದರು.

ಸೇರೆಗಾರ ರಂಗಪ್ಪಸೆಟ್ಟರೂ ಕೈಮುಗಿದುಕೊಂಡು ಉತ್ತರವನ್ನು ಕಾತರತೆಯಿಂದ ನಿರೀಕ್ಷಿಸುತ್ತಿದ್ದರು. ಗಂಗೆ, ಸೋಮ, ಹಳೇಪೈಕದ ತಿಮ್ಮ, ಬೇಲರ ಸಿದ್ದ, ನಿಂಗ, ಪುಟ್ಟಮ್ಮ, ವಾಸು, ನಿಂಗನ ಮಗ ಪುಟ್ಟ ಸರ್ವರೂ ಭಯಕ್ರಾಂತರಾಗಿ ಕೆಲರು ಪ್ರತ್ಯಕ್ಷವಾಗಿ ಕೆಲರು ಪರೋಕ್ಷವಾಗಿ ನಡುಗುತ್ತಿದ್ದರು.

ಚಂದ್ರಯ್ಯಗೌಡರು ಅಥವಾ ಅವರ ಮೈಮೇಲೆ ಬಂದಿದ್ದ ಭೂತ ಹೇಳಿತು. ಆ ಭೂತದ ಇಚ್ಚೆ ಚಂದ್ರಯ್ಯಗೌಡರ ಇಚ್ಚೆಗೆ ಒಂದಿನಿತೂ ವಿರೋಧವಾಗಿರಲಿಲ್ಲ. ಮನಃಶಾಸ್ತ್ರಜ್ಞರಾಗಿದ್ದರೆ ಚಂದ್ರಯ್ಯಗೌಡರ ಇಚ್ಚೆಯೇ ಭೂತದ ವೇಷವನ್ನು ಹಾಕಿಕೊಂಡಿದೆ ಎಂದು ನಿರ್ಣಯಿಸುತ್ತಿದ್ದರು.

ಚಂದ್ರಯ್ಯಗೌಡರ ಬಾಯಲ್ಲಿ ಬಂದ ಮಾತುಗಳಲ್ಲಿ ಬೇಕಾದಷ್ಟು ವ್ಯಂಗ್ಯ, ಅಸ್ಪಷ್ಟತೆ, ಸೂಚನೆ, ವಕ್ರೋಕ್ತಿ ಎಲ್ಲಾ ಇದ್ದುವು. ಅಲ್ಲಿ ನೆರೆದಿದ್ದವರಲ್ಲಿ ಪ್ರತಿಯೊಬ್ಬರಿಗೂ ಅದು ಅರ್ಥವಾಯಿತು. ಆದರೆ ಒಬ್ಬರ ಅರ್ಥ ಮತ್ತೊಬ್ಬರದಾಗಿರಲಿಲ್ಲ. ಅವರವರಿಗೆ ಬೇಕಾದಂತೆ ಅರ್ಥಮಾಡಿದರು.

“ನಿನ್ನ ಮಗಳನ್ನು ರಾಮಯ್ಯನಿಗೆ ಕೊಡಲಾಗದೆಂದು ಹಲವರು ಪಿತೂರಿ ನಡೆಸುತ್ತಿದ್ದಾರೆ. ಆ ಪಿತೂರಿಗೆ ನೀನು ಒಳಗಾದರೆ ಕೇಡಾಗುತ್ತದೆ. ಮನೆಯವರನ್ನೆಲ್ಲ ಮುರಿದುಹಾಕುತ್ತೇನೆ, ಮಗಳನ್ನು ಕಾನೂರಿಗೆ ಕೊಡು. ನಾನು ಒಳ್ಳೆಯದು ಮಾಡುತ್ತೇನೆ” ಎಂಬುದೆ ಆ ಮಾತುಗಳ ಭಾವವೆಂದು ಶ್ಯಾಮಯ್ಯಗೌಡರು ನಿರ್ಧರಿಸಿ “ಆಗಲಿ ನೀನು ಹೇಳಿದ ಹಾಗೇ ಮಾಡುತ್ತೇನೆ !” ಎಂದು ಮಾತುಕೊಟ್ಟು ನಮಸ್ಕಾರ ಮಾಡಿದರು.

“ನನಗೆ ಮೀಸಲಾಗಿದ್ದ ‘ಆಯಾರ’ವನ್ನು ಅಪಹರಿಸಿದ್ದೀರಿ. ಅದನ್ನು ಹಿಂದಕ್ಕೆ ಬಲಿಕೊಟ್ಟ ಹೊರತೂ ನಾನು ನಿಮಗೆ ಸುಖಾ ಕೊಡುವುದಿಲ್ಲ. ಅದನ್ನು ಶೀಘ್ರದಲ್ಲಿಯೆ ಬಲಿಕೊಡದಿದ್ದರೆ ನಿಮ್ಮನ್ನು ಗಟ್ಟದ ಕೆಳಗೆ ಇಳಿಯದಂತೆ ಮಾಡಿಬಿಡುತ್ತೇನೆ” ಎಂದು ಅರ್ಥಮಾಡಿಕೊಂಡು ಸೇರೆಗಾರರು ಗಂಗೆ ಮೊದಲಾದವರು ಹೇಗಾದರೂ ಮಾಡಿ ಕೆಳಕಾನೂರಿನಲ್ಲಿದ್ದ ಹೂವಯ್ಯನ ‘ಬಲೀಂದ್ರ’ನನ್ನು ಭೂತಕ್ಕೆ ಬಲಿಕೊಡದಿದ್ದರೆ ನಾವೆಲ್ಲ ಸಾಯಬೇಕಾಗುತ್ತದೆ ಎಂದು ನಿರ್ಣಯಿಸಿದರು.

ಪುಟ್ಟಮ್ಮ “ಅಪ್ಪಯ್ಯ ಚಿಕ್ಕಮ್ಮನನ್ನು ಮನೆಗೆ ಕರೆಯಿಸಬಾರದೆಂದು ಹೇಳುತ್ತಿದ್ದಾರೆ” ಎಂದು ವ್ಯಾಖ್ಯಾನ ಮಾಡಿಕೊಂಡಳು.

ನಿಂಗನು ಮಗ ಪುಟ್ಟನು ‘ತೋಟದಲ್ಲಿ ಕದ್ದಿಟ್ಟಿರುವ ಬಾಳೆಹಣ್ಣುಗಳನ್ನು ನನಗೆ ಕೊಡು’ ಎಂದು ಭೂತರಾಯ ಹೇಳುತ್ತಿದೆ ಎಂದು ಊಹಿಸಿ, ಹಾಗೆಯೆ ಮಾಡುವುದಾಗಿ ಮನಸ್ಸಿನಲ್ಲಿ ಪ್ರಾರ್ಥಿಸಿ, ವಾಸುವಿನ ಕಡೆಗೆ ನೋಡಿ, ಗುಟ್ಟಾಗಿ ಕೈಮುಗಿದನು!

ಸುಖ ದುಃಖ ಹೇಳುವುದೆಲ್ಲ ಮುಗಿದ ಮೇಲೆ ಚಂದ್ರಯ್ಯಗೌಡರಲ್ಲಿದ್ದ ಭೂತರಾಯ “ಬಾಯಾರಿಕೆ” ಎಂದಿತು. ನಿಂಗ ಓಡಿಹೋಗಿ ಸೆಗಣಿಯಿಂದ ಪರಿಶುದ್ಧವಾಗಿ ಮಾಡಿದ ನೀರನ್ನು ಒಂದು ಚೊಂಬಿನಲ್ಲಿ ತಂದಿಟ್ಟನು. ಭೂತ ರೇಗಿ ಅದನ್ನು ಚೆಲ್ಲಿ ಬಿಸಾಡಿ ಹಳೆಪೈಕದ ತಿಮ್ಮನ ಕಡೆಗೆ ಅರ್ಥಗರ್ಭಿತವಾಗಿ ನೋಡಿತು.

ಭೂತ ಕಳ್ಳು ಕೇಳುತ್ತಿದೆ ಎಂಬುದು ತಿಮ್ಮನಿಗೆ ಅರ್ಥವಾಗಿ ಒಂದು ಮೊಗೆಯಲ್ಲಿ ಕಳ್ಳನ್ನು ತಂದೊಟ್ಟನು. ಚಂದ್ರಯ್ಯಗೌಡರ ಮುಖಾಂತರ ಭೂತ ಕಳ್ಳನ್ನು ಚೆನ್ನಾಗಿ ಹೀರಿ ಹಾಸಗೆಯ ಮೇಲೆ ಕಾಲುಚಾಚಿ ಮಲಗಿ ಮೌನವಾಯಿತು. ನೆರೆದಿದ್ದವರೆಲ್ಲರೂ ಮಹಾಘಟನೆ ಮುಗಿಯಿತೆಂದು ಚೆದರಿದರು.

ಸೇರೆಗಾರರು, ಗಂಗೆ, ತಿಮ್ಮ, ನಿಂಗ ನಾಲ್ವರೂ ಮನೆಯ ಕಿರುಜಗಲಿಯ ಮೂಲೆಯಲ್ಲಿ ಸೇರಿ, ಹೂವಯ್ಯನ ‘ಬಲೀಂದ್ರ’ ಹೋತವನ್ನು ಹೇಗೆ ಕದ್ದು ತಂದು ಭೂತಕ್ಕೆ ಬಲಿಕೊಡಬೇಕೆಂದು ವಿಚಾರವಾಗಿ ಸಂಚು ನಡೆಸಿದರು.

“ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾಧ್ಯವೂ ಅಲ್ಲ ; ಹೂವಯ್ಯಗೌಡರು ಒಪ್ಪುವುದೂ ಸುಳ್ಳು. ಬೇರೆ ಏನಾದರೂ ಇದ್ದರೆ ಹೇಳಿನಿ ” ಎಂದರು ಸೇರೆಗಾರರು.

“ಆ ಪುಂಡ ಪುಟ್ಟೇಗೌಡ್ರು ಇಲ್ದಿದ್ರೆ ನಾನು ಹ್ಯಾಂಗಾದರೂ ಮಾಡಿ ರಾತ್ರಾರಾತ್ರೆ ಸಾಗಿಸಿಬಿಡ್ತಿದ್ದೆ ಹೋಂತನ್ನ ! ಅವರಿಗೆ ಎಲ್ಲಾದ್ರೂ ಸೂಕ್ಷ್ಮ ಒಂದುಚೂರು ಗೊತ್ತಾದ್ರೆ ಗುಂಡಿನಲ್ಲೇ ಹೊಡೆಯಾಕೂ ಹೇಸುವುದಿಲ್ಲ ಆ ಮಾರಾಯ !” ಎಂದನು ಹಳೆಪೈಕದ ತಿಮ್ಮ.

ಗಂಗೆ “ನಮ್ಮ ಸೋಮಯ್ಯ ಸೆಟ್ಟರು ಒಪ್ಪಿಕೊಂಡರೆ ಒಂದು ಕೈ ಕಂಡು ಬಿಡಲಕ್ಕು !” ಎಂದಳು.

ಸೋಮನ ಹೆಸರನ್ನು ಕೇಳಿ ಎಲ್ಲರೂ ನಕ್ಕರು. ಆದರೂ ನಿಂಗ ಬಿಡಾರಕ್ಕೆ ಹೋಗಿ ಬಾಡುಗಳ್ಳ ಡೊಳ್ಳು ಹೊಟ್ಟೆಯ ಸೋಮನನ್ನು ಕರೆತಂದನು.

ಸೋಮ ಕಥೆಯನ್ನೆಲ್ಲವನ್ನೂ ಕೇಳಿ ‘ನನ್ನಿಂದಾಗದ ಕೆಲಸ ಅಲ್ವಾ !” ಎಂದು ತುಟಿಗಳನ್ನು ಚಾಚುತ್ತ, ತಲೆಯಲ್ಲಾಡಿಸಿದನು.

“ನಿಮಗೆಷ್ಟು ಬೇಕೋ ಅಷ್ಟು ಮಾಂವ್ಸ ಕೊಡ್ತೀವಿ. ಅರ್ಧ ಹೋಂತ ಆದ್ರೆ ಅರ್ಧ ಹೋಂತ ! ಒಂದು ಮನಸ್ಸುಮಾಡಿ ನೋಡಿ ! ಏನೋ ನಾಲ್ಕು ಜನಕ್ಕೆ ಉಪಕಾರ ಆಗ್ತದೆ !” ಎಂದು ತಿಮ್ಮ ತಿಂಡಿ ಹಾಕಿ ಗಾಣ ಬೀಸಿದನು.

ಮಾಂಸ ಎಷ್ಟು ಬೇಕೋ ಅಷ್ಟು ! ಸೋಮನ ಮನಸ್ಸು ತಡೆಯಲಾರದೆ ಹೋಯಿತು ! ಸಾಧ್ಯ ಅಸಾಧ್ಯ ಎಂಬುದಾವುದೂ ಅವನ ಮನಸ್ಸಿಗೆ ಬರಲಿಲ್ಲ.

“ಹೋಗೋ ! ಹೋಗೋ ! ನಿನ್ನ ಮಾಂವ್ಸ ಯಾರಿಗೆ ಬೇಕು ? ತಗೊಂಡು ಹೋಗಿ ನಾಯಿಗೆ ಹಾಕು ! ನಾನೇನು ಮಾಂವ್ಸಕ್ಕೆ ಸಾಯ್ತೀನಿ ಅಂತಾ ಮಾಡೀಯೇನು ?…. ಅದು ಹಾಂಗಿರಲಿ ! ಭೂತಕ್ಕೆ ಬಲಿ ಕೊಡದಿದ್ದರೆ ನಮಗೆ ಊರು ಕಾಂಬುದಿಲ್ಲ ! ನಾಲ್ಕು ಜನಕ್ಕೆ ಉಪಕಾರ ! ಒಂದು ಕೈಕಾಂಬುದಪ್ಪಾ ! ನೋಡ್ತೀನಿ !…. ಆದರೆ ನೀವೂ ಸಹಾಯ ಮಾಡಬೇಕು” ಎಂದು ಮಾಂಸಲೋಭಿ ಸೋಮ ಒಪ್ಪಿಕೊಳ್ಳಲು ಉಳಿದವರಿಗೆ ದಿಗ್ವಿಜಯ ಮಾಡಿದಂತೆ ಆನಂದವಾಯಿತು.

ಮರುದಿನ ರಾತ್ರಿ ಕೆಳಕಾನೂರಿಗೆ ಹೋಗಿ ಹೋತವನ್ನು ಕದ್ದು ತರುವುದೆಂದು ಗೊತ್ತಾಯಿತು : ಸೋಮನು ಹೋತವನ್ನು ಕೊಟ್ಟಿಗೆಯಿಂದ ಬಿಚ್ಚಿ ಬಳಿಯ ಕಾಡಿಗೆ ತರುವುದು ; ಮುಂದಿನ ಕಾರ್ಯಗಳನ್ನೆಲ್ಲ ಸೇರೆಗಾರರೂ ಇತರರೂ ನೋಡಿಕೊಳ್ಳುವುದು ; ಸೋಮನಿಗೆ ಸಾಕಾಗುವಷ್ಟು ಮಾಂಸವನ್ನು ಪ್ರತಿಫಲವಾಗಿ ಸಲ್ಲಿಸುವುದು.

ರಾತ್ರಿ ಕಳೆಯಿತು. ಬೆಳಿಗ್ಗೆ ಕಳೆಯಿತು. ಹಗಲೂ ಕಳೆಯಿತು. ಮತ್ತೆ ರಾತ್ರಿ ಬಂದಿತು. ಸಾಹಸಕ್ಕೆ ಸಕಲ ಸನ್ನಾಹಗಳೂ ಸಿದ್ದಾದುವು. ಸುಮಾರು ಹತ್ತು ಗಂಟೆಯ ಹೊತ್ತಿಗೆ ಸೇರೆಗಾರರು, ನಿಂಗ, ತಿಮ್ಮ, ಸಿದ್ದ, ಸೋಮ ಇಷ್ಟು ಜನರೂ ಕೆಳಕಾನೂರಿಗೆ ಗುಸು ಗುಸು ಮಾತಾಡುತ್ತಾ ಹೊರಟರು. ಕೆಲವರ ಕೈಯಲ್ಲಿ ಕತ್ತಿ. ಕೆಲವರ ಕೈಯಲ್ಲಿ ದೊಣ್ಣೆ, ಸೋಮನ ಕೈಯಲ್ಲಿ ಹತ್ತಾರು ಮಾರು ಉದ್ದವಾಗಿದ್ದ ಕತ್ತದ ನೇಣಿನ ಸುರುಳಿ.

ಸ್ವಲ್ಪ ದೂರ ಹೋಗುವುದರಲ್ಲಿ ಹಿಂದಿನಿಂದ ಗಂಗೆ ಓಡಿಬಂದು ಪಿಸುಮಾತಿನಲ್ಲಿ “ರೊಟ್ಟಿ !” ಎಂದು ಸೋಮನ ಕೈಯಲ್ಲಿ ಗಮಗಮನ ಸುವಾಸನೆ ಬರುತ್ತಿದ್ದ ಆ ಪದಾರ್ಥವನ್ನು ಕೊಟ್ಟು ಹೋದಳು.

ಇತರರು ಕೆಳಕಾನೂರು ಮನೆಗೆ ಸ್ವಲ್ಪ ದೂರದಲ್ಲಿ ಕಾಡು, ಪೊದೆ, ಮುಂಡುಗದ ಹಿಂಡಿಲುಗಳಲ್ಲಿ ಅಡಗಿ ನಿಂತಮೇಲೆ ಸೋಮನೊಬ್ಬನೆ ಕೈಯಲ್ಲಿ ನೇಣು ರೊಟ್ಟಿಗಳನ್ನು ಹಿಡಿದುಕೊಂಡು ಹುಷಾರಾಗಿ ಮುಂದುವರಿದನು.

ನಕ್ಷತ್ರ ಕಾಂತಿ ಸ್ವಲ್ಪವಿದ್ದರೂ ಕತ್ತಲೆ ಕಳ್ಳನ ಮನಸ್ಸಿನಂತಿತ್ತು. ಸೋಮ ಕಂಬಳಿಯನ್ನು ಬಲವಾಗಿ ಸುತ್ತಿ ಹೊದೆದುಕೊಂಡು ಕಾರ್ಯಕ್ರಮವನ್ನು ವ್ಯೂಹಿಸುತ್ತಾ ಬೆಳೆದು ನಿಂತಿದ್ದ ಗದ್ದೆಯಂಚುಗಳ ಮೇಲೆ ಹಾದು ಮನೆಯ ಸಮೀಪಕ್ಕೆ ಬಂದನು. ನಾಯಿಯೊಂದು ಬೊಗುಳಿತು. ಇದ್ದಕಿದ್ದಂತೆ ಸೋಮನ ಸ್ವಸ್ವರೂಪವಾದ ಹೇಡಿತನ ತಲೆಹಾಕಿತು. ಇತರರ ಮುಂದೆ ಇದ್ದಾಗ ತಾನು ಮಾಡಬೇಕಾಗಿದ್ದ ಕಾರ್ಯದ ಕಷ್ಟವನ್ನು ಅವನು ಸ್ಪಷ್ಟವಾಗಿ ಚಿತ್ರಿಸಿಕೊಂಡಿರಲಿಲ್ಲ. ನಾಯಿ ಬಗುಳಿದೊಡನೆಯೆ ತಾನು ಕೈಕೊಂಡಿದ್ದ ವಿಪರೀತ ಸಾಹಸದ ಅವಿವೇಕ ಅಪಾಯಗಳೆಲ್ಲವೂ ಕಣ್ಣಿನೆದುರು ಕರಾಳಮೂರ್ತಿಗಳಾಗಿ ಹಲ್ಲುಕಿರಿಯತೊಡಗಿದುವು.

‘ನನಗೆ ಯಾಕೆ ಬೇಕಿತ್ತು ಈ ಕೆಲಸ ?’ ಎಂದುಕೊಂಡು ಹಿಂತಿರುಗಿ ನೋಡಿದನು. ಜೊತೆಗಾರರೆಲ್ಲ ದೂರದಲ್ಲಿ ಸುರಕ್ಷಿತವಾಗಿ ಕತ್ತಲೆಯಲ್ಲಿ ಅಡಗಿದ್ದರು. ಸೋಮ ಮುಂಬರಿಯದೆ ನಿಂತು ಆಲೋಚಿಸತೊಡಗಿದರು.

ನಾಯಿಗಳೆರಡು ಬಗುಳುತ್ತಿದ್ದುವು. ಧ್ವನಿಭೇದದಿಂದ ಒಂದು ರೋಜಿ ಮತ್ತೊಂದು ಕೊತ್ವಾಲ ಎಂಬುದು ಕೂಡ ಸೋಮನಿಗೆ ಗೊತ್ತಾಯಿತು. ಮಾಂಸ ! ಅರ್ಧ ಹೋತದ ಮಾಂಸ ! ತನಗೊಬ್ಬನಿಗೇ ! ಉಪ್ಪುತುಂಡು ! ಹುರಿತುಂಡು ! ಕಡೆಯಪಕ್ಷ ಎರಡು ಮೂರು ದಿನಗಳಾದರೂ ಕೂತುಕೊಂಡು ತಿನ್ನಬಹುದು ! ಮಾಂಸದ ಸ್ವರ್ಗವನ್ನು ನೆನೆದೊಡನೆ ಸೋಮನಿಗೆ ಹೃಚ್ಛಕ್ತಿ ಬಂದಂತಾಗಿ ತುಟಿ ಕಚ್ಚಿಕೊಂಡು ಮುಂದುವರಿದನು. ನಾಯಿಗಳು ಗಟ್ಟಿಯಾಗಿ ಬಗಳುತ್ತಾ ಓಡಿಬಂದುವು. ಸೋಮ ಅವುಗಳ ಹೆಸರನ್ನು ಹಿಡಿದು ಮೆಲ್ಲಗೆ ಕೂಗಿ ಕರೆದನು. ಆ ನಾಯಿಗಳಿಗೆ ಸೋಮನ ಪರಿಚಯ ಚೆನ್ನಾಗಿತ್ತು. ಮಾಂಸಲೋಭದ ಸ್ವಭಾವಸಾದೃಶ್ಯದಿಂದಲೋ ಏನೋ ಅವಿಗಳೆಲ್ಲವೂ ಅವನಲ್ಲಿ ಸಲಿಗೆಯಿಂದಿದ್ದುವು. ಅವನ ಕೈಯಲ್ಲಿದ್ದ ಉಪ್ಪುಮೀನಿನ ರೊಟ್ಟಿಯ ವಾಸನೆಯೂ, ಅಧಿಕಾರಿಯ ಕೈಗೆ ಲಂಚಬೀಲುವಂತೆ, ನಾಯಿಗಳ ಮೂಗಿಗೆ ಬಿದ್ದಿತು. ಬಾಲವಲ್ಲಾಡಿಸುತ್ತ ಹತ್ತಿರ ಬಂದುವು. ಸೋಮ ರೊಟ್ಟಿಯನ್ನು ಚೂರುಚೂರಾಗಿ ಮುರಿದು ಹಾಕಿದನು. ತಾನೂ ನಾಲ್ಕಾರು ಚೂರುಗಳನ್ನು ತಿನ್ನದೆ ಇರಲಾಗಲಿಲ್ಲ !

ನಾಯಿಗಳನ್ನು ವಶಪಡಿಸಿಕೊಂಡ ಸೋಮ ಹೋತವನ್ನು ಕಟ್ಟುತ್ತಿದ್ದ ಜಾಗಕ್ಕೆ ಜಾಗರೂಕನಾಗಿ ಸಾಗಿದನು. ನಿರೀಕ್ಷಿಸಿದ ಜಾಗದಲ್ಲಿಯೆ ಹೋತವಿತ್ತು. ನಾಯಿಗಳನ್ನೂ ಮನುಷ್ಯನನ್ನು ಕಂಡು ಅದು ದಿಗಿಲು ಬಿದ್ದು ಕುಣಿದಾಡಿತು. ಸೋಮ ತಾನು ವ್ಯೂಹಿಸಿದಂತೆ ಕೆಲಸ ನಡೆಸಲು ಕೈ ಚುರುಕುಮಾಡಿದನು.

ಅದರ ಕೊರಳ ಕಣ್ಣಿಯನ್ನು ಬಿಚ್ಚುವ ಮೊದಲು ತಾನು ತಂದಿದ್ದ ನೇಣಿನ ತುದಿಯನ್ನು ಉರುಳುಮಾಡಿ ಕುತ್ತಿಗೆಗೆ ಬಿಗಿದನು. ಬಿಚ್ಚಿದ ಮೇಲೆ ತನ್ನ ಕೈ ನೇಣನ್ನೂ ಎಳೆದು ನುಣಿಚಿಕೊಂಡು ಹೋದೀತೆಂಬ ಭಯದಿಂದ ನೇಣಿನ ಮತ್ತೊಂದು ತುದಿಯನ್ನು ತನ್ನ ಸೊಂಟಕ್ಕೆ ಎಂದು ಡೊಳ್ಳು ಹೊಟ್ಟೆಗೆ ಬಲವಾಗಿ ಕಟ್ಟಿಕೊಂಡನು. ಆಮೇಲೆ ಹೋತದ ಕೊರಳು ಕಣ್ಣಿಯ ಕುಣಿಕೆಯನ್ನು ಬಿಚ್ಚಿ ಜಗ್ಗುತ್ತಿದ್ದ ಹೋತವನ್ನು ಹೊರಗೆ ಎಳೆತಂದನು.

ಹೋತಕ್ಕೂ ಸೋಮನಿಗೂ ಎಳೆದಾಟ ಹತ್ತಿತು. ಹೋತ ಮನೆಯ ಕಡೆಗೆ ಎಳೆಯಿತು. ಸೋಮ ಕಾಡಿನ ಕಡೆಗೆ ಎಳೆದನು. ಹೊತದ ಕಾಲಿನ ಕೊಳಗುಗಳ ಸದ್ದೂ ಡೊಳ್ಳು ಸೋಮನ ಉಸಿರಾಡುವ ಸದ್ದೂ ಹೆಚ್ಚಾಗಲು ಸುತ್ತಲಿದ್ದ ನಾಯಿಗಳು ಸ್ವಾಭಾವಿಕವಾಗಿ ಮನುಷ್ಯನ ಪಕ್ಷವನ್ನೇ ವಹಿಸಿ ಹೋತವನ್ನು ಕುರಿತು ಬಗುಳುತ್ತಾ ಮೇಲ್ವಾಯ್ದುವು. ಬಲಿಷ್ಠವಾದ ಕರಿಯ ಹೋತ ಮತ್ತೂ ಉದ್ರೇಕಗೊಂಡು ಮನೆಯ ಕಡೆಗೆ ಜಗ್ಗಿ ಎಲೆಯಿತು. ಸೋಮ ಎಳೆದೂ ಎಳೆದೂ ಸೋತು ಕಾಲು ಜಾರಿ, ಹಿಡಿದಿದ್ದ ಹಗ್ಗವನ್ನು ಕೈಬಿಟ್ಟನು. ಆದರೆ, ಗ್ರಹಚಾರ ! ಹಗ್ಗ ಅವನನ್ನು ಕೈಬಿಡಲಿಲ್ಲ. ಸೋಮ ಅದರ ಒಂದು ತುದಿಯನ್ನು ಹೋತವೆಲ್ಲಿಯಾದರೂ ತಪ್ಪಿಸಿಕೊಂಡು ಹೋದೀತೆಂಬ ಶಂಕೆಯಿಂದ ತನ್ನ ಸೊಂಟಕ್ಕೆ ಗಂಟುಹಾಕಿ ಬಿಗಿದುಕೊಂಡಿದ್ದನು ! ಬಿಗಿದುಕೊಳ್ಳುವಾಗ ಹೋತ ತಪ್ಪಿಸಿಕೊಳ್ಳಬಾರದೆಂಬ ಭಾವವೊಂದು ಮಾತ್ರ ಅವನಲ್ಲಿದ್ದಿತೆ ಹೊರತು, ಹೋತ ಎಲ್ಲಿಯಾದರೂ ತನ್ನನ್ನೇ ಎಳೆದರೇನು ಗತಿ ಎಂಬ ಆಲೋಚನೆ ತಲೆಗೆ ಬಂದಿರಲಿಲ್ಲ. ಅಷ್ಟು ನಿರ್ಧಾರವಿತ್ತು ಅವನಿಗೆ ತನ್ನ ಶಕ್ತಿಯಲ್ಲಿ ! ತನ್ನ ದೃಷ್ಟಿಯಿಂದ ಸ್ವಪಕ್ಷಪಾತವಾಗಿ ವ್ಯೂಹರಚನೆ ಮಾಡಿಕೊಂಡಿದ್ದನೇ ಹೊರತು, ಹೋತದ ದೃಷ್ಟಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದನು.

ಯಾವಾಗ ಸೋಮ ಹಗ್ಗವನ್ನು ಕೈಬಿಟ್ಟನೊ ಇಲ್ಲವೊ ಸುತ್ತಲೂ ಮುತ್ತಿ ಬಗುಳಿ ತನ್ನನ್ನು ಪೀಡಿಸುತ್ತಿದ್ದ ನಾಯಿಗಳಿಂದ ಪಾರಾಗಿ ಓಡಿ ಹೋಗುವ ಉದ್ದೇಶದಿಂದಲೂ ಉದ್ವೇಗದಿಂದಲೂ ‘ಬಲೀಂದ್ರ’ ತನ್ನ ಸಾಮರ್ಥ್ಯವನ್ನೆಲ್ಲ ವೆಚ್ಚಮಾಡಿ ನೆಗೆದು ಹಾರಿ ಇಳಿಜಾರಿನ ಕಡೆ ಜಗ್ಗಿ ಎಳೆಯಿತು. ಡೊಳ್ಳುಹೊಟ್ಟೆಯ ಬಡಕಲು ಸೋಮ ಘುಕ್ಕೆಂದು ಮುಂದಕ್ಕೆ ಮುಗ್ಗುರಿಸಿದಂತಾಗಿ ಉರುಳಿದನು. ಹೊದೆದಿದ್ದ ಕಂಬಳಿ ಬಿದ್ದು ಹೋಗಿ, ಬತ್ತಲೆ ಮೈ ನೆಲಕ್ಕುರುಳಿ, ಕಲ್ಲಿನ ಮೇಲೆ ಕೀಸಿತು. ಮೊಣಕಾಲಿನವರೆಗೆ ಸುತ್ತಿದ್ದ ಸೊಂಟ್ ಪಂಚೆಯೂ ಹರಿಯಿತು. ಭೂಸ್ಪರ್ಶಮಾಡಿದ್ದ ದೇಹಭಾಗಕ್ಕೆ ತುರಿಮಣೆಯಲ್ಲಿ  ತೆಂಗಿನಕಾಯಿ ತುರಿದಂತಾಯಿತು. ಹೋತ ಎಳೆಯುತ್ತಿದ್ದ ನೇಣಿನುರುಳು ಡೊಳ್ಳಿನ ಸುತ್ತ ಬಿಗಿದು ಉಸಿರು ಉಬ್ಬಸವಾಯಿತು ! ಇಳಿಜಾರಿನ ಕಲ್ಲುಕಲ್ಲು ನೆಲದಲ್ಲಿ ಹೋತ ಸೋಮನನ್ನು ತನ್ನ ಕೊರಳಿಗೆ ಉದ್ದವಾದ ಹಗ್ಗದಿಂದ ಕಟ್ಟಿದ್ದ ಕುಂಟೆಯೋಪಾದಿಯಲ್ಲಿ ದರದರನೆ ಎಳೆಯಿತು. ಸೋಮ ಎದ್ದು ನಿಲ್ಲಬೇಕೆಂದು ಮಾಡಿದ ಪ್ರಯತ್ನಕ್ಕೆ ಅವಕಾಶವಾಗಲಿ ಅನುಕೂಲವಾಗಲಿ ಒಂದಿನಿತೂ ದೊರೆಯಲಿಲ್ಲ. ಕೈಗೆ ಸಿಕ್ಕ ಒಂದು ಸಣ್ಣ ಗಿಡವನ್ನು ತಬ್ಬಿ ಹಿಡಿದರೆ ಅದೂ ಕಿತ್ತುಹೋಯಿತು. ಮತ್ತೊಂದು ಗಿಡವನ್ನು ಹಿಡಿದನು. ಅದು ಮುಳ್ಳಿನ ಗಿಡವಾಗಿತ್ತು ! ಫಕ್ಕನೆ ಕೈಬಿಟ್ಟನು. ಅಷ್ಟರಲ್ಲಿ ಗೊಬ್ಬರದ ಗುಂಡಿಯ ಮೇಲ್ಭಾಗದಲ್ಲಿದ್ದ ತೊಂಡೆಯ ಚಪ್ಪರಕ್ಕೆ ಹಾಕಿದ್ದ ಬಿದಿರು ಕಂಬವೊಂದು ಕೈಗೆ ಸಿಕ್ಕಿತು. ಅದನ್ನು ಬಲವಾಗಿ ಭದ್ರಮುಷ್ಟಿಯಿಂದ ಹಿಡಿದು ಎದ್ದು ನಿಲ್ಲಲು ಪ್ರಯತ್ನಿಸಿದನು. ಹೋತ ಎಳೆಯುತ್ತಲೇ ಇತ್ತು. ಕತ್ತದ ಕಣ್ಣಿ ಡೊಳ್ಳು ಹೊಟ್ಟೆಯನ್ನು ಕೀಸಿ ಕೀಸಿ ಕೊಯ್ಯುತ್ತಿತ್ತು. ಯಮಯಾತನೆಯನ್ನು ಹಲ್ಲುಕಚ್ಚಿ ಸಹಿಸಿಕೊಂಡು ಮೇಲೆದ್ದು ಕಾಲ ಮೇಲೆ ನಿಲ್ಲಲು ಮಹಾ ಸಾಹಸ ಮಾಡಿದನು. ಇದ್ದಕಿದ್ದ ಹಾಗೆ ಒರಲೆ ಹಿಡಿದು ಬುಡ ಶಿಥಿಲವಾಗಿದ್ದ ಆ ಬಿದಿರು ಕಂಬವೊ ಲಟಲಟನೆ ಮುರಿಯಿತು. ಚಪ್ಪರದ ಮೇಲಿದ್ದ ಒಂದು ಸತುವಿನ ತಗಡು ಢಣ್ ಢಣ್ ಢಣಾರನೆ ಇಡೀ ಚಪ್ಪರದೊಡನೆ ಉರುಳಿತು. ನಾಯಿಗಳೂ ಕೂಗಿದುವು. ಹೋತವೂ ಅರಚತೊಡಗಿತು. ಕಳ್ಳತನ ದರೋಡೆಗಿಂತಲೂ ಶಬ್ದಮಯವಾಯಿತು !

ಹೋತ ಮತ್ತೊಂದು ಸಾರಿ ಝಗ್ಗಿಸಿ ಎಳೆದ ಹೊಡೆತಕ್ಕೆ ಸೋಮ ಗೊಬ್ಬರದ ಗುಂಡಿಗೆ ಧುಸುಕ್ಕನೆ ಉರುಳಿದನು. ‘ಬಲೀಂದ್ರ’ ದಡದಮೇಲೆ ಮುಂಬರಿಯಲಾರದೆ ಮುಂಬರಿಯಲು ಪ್ರಯತ್ನಿಸುತ್ತಾ ಅರಚುತ್ತಾ ನಿಂತಿತು. ಅಷ್ಟರಲ್ಲಿ ಮನೆಯ ಜನರ ಗಲಭೇ ಕೇಳಿಸಿ, ದೀಪದ ಬೆಳಕೂ ತೋರಿತು.

“ಹಿಡೀ ! ಛೂ ! ಬೀಡಬೇಡ !” ಎಂದು ತುಮುಲವಾಗಿ ಕೂಗುತ್ತಾ ಬಂದೂಕವನ್ನು ಕೈಯಲ್ಲಿ ಹಿಡಿದು ಪುಟ್ಟಣ್ಣನೂ, ಅವನ ಹಿಂದೆ ಹೂವಯ್ಯ, ಸೀತೆಮನೆ ಸಿಂಗಪ್ಪಗೌಡರೂ ನುಗ್ಗಿಬಂದರು.

ಅ ದಿನ ಮಧ್ಯಾಹ್ನ ಕಳಕಾನೂರಿಗೆ ಬಂದಿದ್ದ ಸಿಂಗಪ್ಪಗೌಡರು ಅಲ್ಲಯೆ ಉಳಿದುಕೊಂಡಿದ್ದರು. ಹೂವಯ್ಯನೂ ಅವರೂ ಆ ರಾತ್ರಿ ಹತ್ತು ಗಂಟೆಯ ತನಕ ಮಾತಾಡುತ್ತಿದ್ದು ಮಲಗಿದ್ದರು. ದೀಪ ಆರಿಸಿ ಮಲಗಿದ ಮೇಲೆಯೂ ಮಾತಾಡುತ್ತಲೇ ಇದ್ದರು. ಹೂವಯ್ಯನಿಗೆ ಇನ್ನೂ ಸರಿಯಾಗಿ ನಿದ್ದೆ ಹತ್ತಿರಲಿಲ್ಲ. ಅಷ್ಟರಲ್ಲಿ ನಾಯಿ ಮೊದಲನೆಯ ಸಾರಿ ಬಗುಳಿದುವು. ನಿತ್ಯವೂ ಹಾಗಾಗುತ್ತಿದ್ದುದರಿಂದ ಅದರಲ್ಲಿ ವಿಶೇಷತೆಯೇನೂ ತೋರಲಿಲ್ಲ. ಯಾವುದೊ ಎತ್ತೊ ದನವೊ ಗದ್ದೆಗೆ ನುಗ್ಗಿರಬಹುದು ; ಅಥವಾ ಹಂದಿ ಗಿಂದಿ ಬಂದಿರಬಹುದು ; ಅಥವಾ ಕುರ್ಕದ (ನಾಯಿ ಚಿರತೆ) ವಾಸನೆ ಬಿದ್ದಿರಬಹುದು ಎಂದುಕೊಂಡು ಮಗ್ಗುಲಿಗೆ ತಿರುಗಿ ಮಲಗಿದನು. ನಾಯಿಗಳ ಸದ್ದು ಸಂಪೂರ್ಣವಾಗಿ ಆಲಿಸಿದನು. ಕೊಳಗಿನ ಸದ್ದು ! ಹೋರಾಟದ ಸದ್ದು ! ಹುಲಿಗಿಲಿ ಬಂದು ದನವನ್ನು ಹಿಡಿಯಿತೆ ? ಅಥವಾ ಪೋಲಿ ಗೂಳಿಗಳು ಕೋಡಾಟ ಆಡುತ್ತಿವೆಯೆ ? ಯೋಚಿಸುತ್ತಿದ್ದ ಹಾಗೆಲ್ಲ ನಾಯಿಗಳೆಲ್ಲ ಅಬ್ಬರಿಸಿ ಹಂದಿಯನ್ನು ತಡೆದಂತೆ ಕೂಗಿದುವು. ಹೋತವೂ ಒಂದು ಸಾರಿ ಗಟ್ಟಿಯಾಗಿ ಅರಚಿದಂತಾಯಿತು.

ಪಕ್ಕದ ಹಾಸಗೆಯಲ್ಲಿದ್ದ ಸಿಂಗಪ್ಪಗೌಡರನ್ನು “ಕಕ್ಕಯ್ಯ ! ಕಕ್ಕಯ್ಯ !” ಎಂದು ಗಟ್ಟಿಯಾಗಿ ಕರೆಯುತ್ತ ಮೈಮುಟ್ಟಿ ನೂಕಿದನು.

ಅವರಂತೂ ದಿಗಿಲುಬಿದ್ದದ್ದು ಉಸಿರು ಮೇಲೆ ಕೆಳಗಾಗಿ “ಆ ! ಆ ! ಏನು ?  ಏನು ?” ಎಂದರು.

“ಹುಲಿ ಬಿದ್ದಿದೆ ಅಂತ ಕಾಣ್ತದೆ ಕೊಟ್ಟಿಗೆಗೆ !….. ಪುಟ್ಟಣ್ಣಾ ! ಏ ಪುಟ್ಟಣ್ಣಾ ! ಕೋವಿ ತಗೊಳ್ಳೊ ! ಕೋವಿ ತಗೊಳ್ಳೆ !…. ಹುಲಿ ಬಿದ್ದಿದೆ ಕೊಟ್ಟಿಗೆಗೆ !….”

ಪುಟ್ಟಣ್ಣ ಏಳುದವರೊಳಗೆ ಹೂವಯ್ಯ ಲಾಟೀನು ಹೊತ್ತಿಸಿ ಬಾಗಿಲು ತೆರೆದನು. ಅಷ್ಟರಲ್ಲಿಯೆ ಎಚ್ಚತ್ತು ಜಗಲಿಗೆ ನುಗ್ಗಿ ಬಂದಿದ್ದ ನಾಗಮ್ಮನವರು “ತಡಿಯೋ ತಡಿಯೋ ! ನೀ ಮುಂದೆ ಹೋಗಬ್ಯಾಡ ! ಪುಟ್ಟಣ್ಣ ಬರಲಿ ” ಎಂದು ಪುಟ್ಟಣ್ಣನನ್ನು ಕೂಗಿದರು.

ಅಷ್ಟರಲ್ಲಿ ತೊಂಡೆಯ ಚಪ್ಪರ ಮುರಿದು ಬಿದ್ದ ಸದ್ದೂ, ಸತುವಿನ ತಗಡು ಬಿದ್ದ ಸದ್ದೂ, ನಾಯಿಗಳ ಬೊಬ್ಬೆಯೂ, ಹೋತದ ಅರಚುವಿಕೆಯೂ ಕೇಳಿಸಿ, ಹುಲಿಗೂ ಎತ್ತಿಗೂ ಮಾರಾಮಾರಿಯಾಗುತ್ತಿದೆ ಎಂಬುದರಲ್ಲಿ ಯಾರಿಗೂ ಸಂದೇಹವಾಗಲಿಲ್ಲ. ಕಳ್ಳರೆಂಬ ಭಾವನೆ ಮಾತ್ರ ಕನಸಿನಲ್ಲಿಯೂ ಮಿಂಚಲಿಲ್ಲ. ಅಲ್ಲಿಗೆ ಯಾವ ಕಳ್ಳ ಬರಬೇಕು ?

ಎಲ್ಲಿ ಹುಡುಕಿದರೂ ಎತ್ತಾಗಲಿ ಹುಲಿಯಾಗಲಿ ಕಾಣಿಸಲಿಲ್ಲ. ಯಾರಿಗೂ ವಿಚಾರವೇನೆಂದು ಹೊಳೆಯಲಿಲ್ಲ. ಆಶ್ಚರ್ಯವಾಯಿತು. ಕಡೆಗೆ ಪುಟ್ಟಣ್ಣ ಗೊಬ್ಬರದ ಗುಂಡಿಯ ಏರಿಯ ಮೇಲೆ ನಿಂತಿದ್ದ ಹೋತನನ್ನು ಲಾಟೀನಿನ ಮಬ್ಬು ಬೆಳಕಿನಲ್ಲಿ ದೂರದಿಂದಲೆ ನೋಡಿ “ಅಲ್ಲಿ ನೋಡಿ ! ಆ ಹೋಂತ ಬೆದರಿ ಕಣ್ಣಿಕಿತ್ತುಕೊಂಡು ಬಂದು ನಿಂತದೆ !” ಎಂದು ಹೇಳಿ, ಅದನ್ನು ಕೊಟ್ಟಿಗೆಗೆ ಅಟ್ಟಲೆಂದು ಬಳಿಸಾರಿ ‘ಷೂ !’ ಎಂದನು. ಹೋತ ಮುಂಬರಿಯಲು ಪ್ರಯತ್ನಿಸಿತೇ ಹೊರತು ಹೆಜ್ಜೆಯಿಡಲಿಲ್ಲ.

“ಇದಕ್ಕೇನಾಗಿದೆಯೊ ದಾಡಿ ?” ಎಂದು ಮತ್ತೆ “ಷೂ ! ಷೂ !” ಎಂದು ಅಟ್ಟಿದನು. ಆದರೂ ಅದು ಚಲಿಸಲಿಲ್ಲ.

ಹತ್ತಿರಕ್ಕೆ ಬಂದು ಹೋತದ ಕೊರಳಿನಲ್ಲಿದ್ದ ನೇಣಿಗೆ ಕೈಹಾಕಿ, ಅದರ ತುದಿ ಯಾವುದೋ ಗಿಡಕ್ಕೆ ಸಿಕ್ಕಿಸಬೇಕೆಂದು ಊಹಿಸಿ ಎಳೆದನು. ಮಳೆಗಾಲದಲ್ಲಿ ನೀರು ನಿಂತು ಸೆಗಣಿಯೆಲ್ಲ ಕಲಸಿದಂತಾಗಿ ಕೆಸರಿನ ಕೊಳದಂತೆ ದುರ್ವಾಸನೆ ತುಂಬಿದ್ದ ಗೊಬ್ಬರಗುಂಡಿಯಲ್ಲಿ ಏನೋ ಭಾರವಾದ ತೊಲೆಯನ್ನು ಎಳೆದಂತೆ ಪಚಪಚನೆ ಸದ್ದಾಯಿತು. ಅಷ್ಟರಲ್ಲಿ ಸಮೀಪಿಸುತ್ತಿದ್ದ ಹೂವಯ್ಯನ ಕೈಲಿದ್ದ ಲಾಟೀನಿನ ಬೆಳಕಿನಲ್ಲಿ ಗೊಬ್ಬರ ಗುಂಡಿಯಲ್ಲಿ ಮನುಷ್ಯಾಕೃತಿ ಗೋಚರಿಸಿ ಪುಟ್ಟಣ್ಣನ ಎದೆಯಲ್ಲಿ ರಕ್ತ ಹೆಪ್ಪುಗಟ್ಟಿದಂತಾಗಿ ಹೂವಯ್ಯನಿಂದ ಲಾಟೀನು ಇಸುಕೊಂಡು ಕೆಳಗಿಳಿದು ನೋಡುತ್ತಾನೆ : ಸೋಮ ಸೆಗಣಿಗೆಸರಿನಲ್ಲಿ ಅದ್ದಿ ಬಿದ್ದಿದ್ದಾನೆ ! ದೈವವಶದಿಂದ ಏರಿಯ ಗಟ್ಟಿನೆಲಕ್ಕೆ ಢಿಕ್ಕಿ ಹೊಡೆದು ಸಿಕ್ಕಿ ಕೊಂಡಂತಿದೆ ! ಇಲ್ಲದಿದ್ದರೆ ಉಸಿರು ಕಟ್ಟಿ ಸಾಯುತ್ತಿದ್ದನು !

“ಈ ಮುಂಡೇಮಗನಿಂದ ಸುಖವಿಲ್ಲವಪ್ಪಾ !” ಎಂದು ಪುಟ್ಟಣ್ಣ ಸೋಮನ ದೇಹವನ್ನು ಏರಿಯ ಮೇಲಕ್ಕೆ ಎತ್ತಿ ತಂದು ಡೊಳ್ಳಿಗೆ ಬಿಗಿದಿದ್ದ ನೇಣನ್ನು ಬಿಚ್ಚಿದನು ! ಹೋತ ನೇಣಿನೊಡನೆ ಅರಚುತ್ತಾ ಕೊಟ್ಟಿಗೆಗೋಡಿತು.

ಸೋಮನಿಗೆ ಪ್ರಜ್ಞೆಯಿರಲಿಲ್ಲ. ಮುಖ ನೆಲಕ್ಕೆ ಕೀಸಿಕೀಸಿ ರಕ್ತಮಯವಾಗಿತ್ತು. ಮೈಯೆಲ್ಲ ಅಸಹ್ಯವಾಗಿ ಸೆಗಣಿಗೆಸರು ಮೆತ್ತಿಕೊಂಡಿದ್ದರಿಂದ ಗಾಯಗಳಾಗಲಿ ರಕ್ತವಾಗಲಿ ಗೋಚರಿಸಲಿಲ್ಲ.

ಸಿಂಗಪ್ಪಗವಡರು ಲಾಟೀನನ್ನೂ ಬಂದೂಕನ್ನೂ ಹಿಡಿದುಕೊಂಡರು. ಹೂವಯ್ಯ ಪುಟ್ಟಣ್ಣರಿಬ್ಬರೂ ಸೋಮನನ್ನೂ ಸ್ನಾನದ ಮನೆಗೆ ಹೊತ್ತುಕೊಂಡು ಹೋಗಿ, ಗಾಳಿ ಬೀಸಿ, ಶೈತ್ಯೋಪಚಾರ ಮಾಡಿದ ಮೇಲೆ ಕಣ್ಣನ್ನೇನೊ ತೆರೆದನು. ಆದರೆ ದೃಷ್ಟಿ ಶೂನ್ಯವಾಗಿತ್ತು.

ಕೈಲಾದ ಮಟ್ಟಿಗೆ ಅವನ  ಮೈಯನ್ನೆಲ್ಲ ತೊಳೆದು, ಗಾಯಗಳಿಗೆ ತೆಂಗಿನೆಣ್ಣೆ ಬಳಿದು, ಬೇರೆ ಬಟ್ಟೆಗಳನ್ನು ಉಡಿಸಿ, ಒಳಗೆ ತಂದು ಹಾಸಗೆಯಲ್ಲಿ ಬೆಚ್ಚಗೆ ಮಲಗಿಸಿದರು. ಗಟ್ಟಿಯಾಗಿ ಉಸಿರಾಡುತ್ತಿದ್ದವನು ಸ್ವಲ್ಪ ಹೊತ್ತಿನಲ್ಲಿ ಭಯಂಕರವಾಗಿ ನರಳತೊಡಗಿದನು.

ಆ ರಾತ್ರಿ ಕೆಳಕಾನೂರಿನಲ್ಲಿ ಯಾರೂ ನಿದ್ದೆ ಮಾಡಲಾಗಲಿಲ್ಲ. ಸಿಂಗಪ್ಪಗೌಡರ ಸೂಚನೆಯಂತೆ ಪುಟ್ಟಣ್ಣ ಸುಮಾರು ಎರಡು ಮೈಲಿ ದೂರದಲ್ಲಿದ್ದ ಕಳ್ಳಂಗಡಿಗೆ ಇರುಳಿನಲ್ಲಿಯೇ ಹೋಗಿ, ಅಲ್ಲಿದ್ದವರಿಗೆಲ್ಲಾ ಗಾಬರಿಯಾಗುವಂತೆ ಅವರನ್ನೆಚ್ಚರಿಸಿ, ಸ್ವಲ್ಪ ಬ್ರಾಂದಿಯನ್ನು ಕೊಂಡು ಸೋಮನಿಗೆ ಕುಡಿಸಿದನು. ಹೂವಯ್ಯ, ಸಿಂಗಪ್ಪಗೌಡರು, ನಾಗಮ್ಮನವರು ಇವರು ಮೂವರೂ ಕಣ್ಣು ಹಚ್ಚದೆ ಔಷಧೋಪಚಾರಗಳಲ್ಲಿ ನಿರತರಾಗಬೇಕಾಯಿತು.

ದೂರ ಅಡಗಿ ನಿಂತಿದ್ದವರಲ್ಲಿ ಒಬ್ಬರೂ ತಲೆಹಾಕಲಿಲ್ಲ. ಹೇಳದೆ ಕೇಳದೆ ಪರಾರಿಯಾದರು. ಮರುದಿನ ಸಿಟ್ಟುಗೊಂಡ ಸೋಮ ಗುಟ್ಟನ್ನೆಲ್ಲ ರಟ್ಟುಮಾಡಿ, ಹಾಸಗೆಯಲ್ಲಿ ಮಲಗಿಕೊಂಡೇ ಕೈಕೈ ಮುಗಿಯುತ್ತಾ ಕಣ್ಣೀರು ಹಾಕುತ್ತಾ “ಅಯ್ಯಾ, ಅವರ ಮಾತು ಕೇಳಿ ನನ್ನ ಬಾಯಿಗೆ ಮಣ್ಣಾಯಿತು ! ಕಲ್ಲಸೂಲೇ ಮಕ್ಕಳು…. ನನ್ನ ಕಳಿಸಿ ಅಡಗಿ ನಿಂತದ್ದಲ್ದಾ ಹಿಂದೆ ! ಅವರ ತಾಯಿ ರಂಡೆ ಆಪೂಕೆ !” ಎಂದು ಮೊದಲಾಗಿ ಅಂಗಲಾಚಿದನು.

ಸೋಮ ನಡೆದ ಸಂಗತಿಗಳನ್ನು ಹೇಳುವಾಗ ಚಂದ್ರಯ್ಯಗೌಡರನ್ನೂ ರಾಮಯ್ಯನನ್ನೂ ಪಿತೂರಿಗೆ ಸೇರಿಸುವಂತೆ ಛಾಯೆ ಕಾಣಿಸಿ ಮಾತಾಡಿದ್ದನು. ಚಂದ್ರಯ್ಯಗೌಡರ ಮೈಮೇಲೆ ಬಂದಿದ್ದ ಭೂತ ಹೇಳಿತು ಎಂದು ಹೇಳುವುದಕ್ಕೆ ಬದಲಾಗಿ ಚಂದ್ರಯ್ಯಗೌಡರೇ ಹೇಳಿದರು ಎಂದೂ, ರಾಮಯ್ಯನೂ ಅಲ್ಲಿದ್ದನೆಂದೂ ಹೇಳಿದ್ದನು.

ಸಿಂಗಪ್ಪಗೌಡರಿಗೆ ಅಷ್ಟೇ ಬೇಕಾಗಿತ್ತು. ಕಾನೂರು ಚಂದ್ರಯ್ಯಗೌಡರು “ಕುರಿ ಚೋರಿ ” ಮಾಡಿದ ಕಥೆಯನ್ನು ಕಂಡಕಂಡವರಿಗೆಲ್ಲಾ ಹೇಳುತ್ತಾ ಸಾರುತ್ತಾ ಹೊರಟರು. ‘ಮಾಡಿದರು’ ’ಮಾಡಿಸಿದರು’ ಎನ್ನುವುದಕ್ಕೆ ಇರುವ ವ್ಯತ್ಯಾಸವನ್ನೂ ಅವರು ಗಮನಿಸಲಿಲ್ಲ. ಅವರಿಗೆ ಬೇಕಾಗಿದ್ದದ್ದು ಚಂದ್ರಯ್ಯಗೌಡರ ಅಪಕೀರ್ತಿ ; ಸತ್ಯ ಪ್ರಚಾರವಲ್ಲ !

ಭಾರತ ರಾಮಾಯಣಗಳನ್ನು ಓದುತ್ತಿದ್ದ ಅವರು ಆ ಕಥೆಯನ್ನು ಉಪ್ಪು ಹುಳಿ ಕಾರ ಹಾಕಿ ಹೇಳತೊಡಗಿದರೆ ಅದು ಕಾಡುಕಿಚ್ಚಿನಂತೆ ಹಬ್ಬದಿರುತ್ತದೆಯೇ ?