ಚಿನ್ನಯ್ಯ ಸೀತೆ ಪುಟ್ಟಮ್ಮರೊಡನೆ ರಾಮಯ್ಯ ತಮ್ಮ ಮನೆಗೆ ಬಂದೊಡನೆ ಚಂದ್ರಯ್ಯಗೌಡರು ‘ವಾಸು ಎಲ್ಲಿ ?’ ಎಂದು ಕೇಳಿದರು. ಅವನು ಒಂದೆರಡು ದಿನ ಅಲ್ಲಿಯೇ ಇರುತ್ತಾನಂತೆ ಎಂದು ರಾಮಯ್ಯ ಹೇಳಲು ಗೌಡರ ಮುಖ ಕ್ಷಣಾರ್ಧ ಮಾತ್ರ ಕ್ರೋಧದಿಂದ ವಿಕಾರವಾಗಿ ಉತ್ತರಕ್ಷಣದಲ್ಲಿಯೆ ಮನೆಗೆ ಬಂದ ನಂಟರೊಡನೆ ಶಾಂತವಾಗಿ ಮಾತಾಡತೊಡಗಿದರು. ತಂದೆ ಅಷ್ಟರಮಟ್ಟಿಗೆ ಪ್ರಶಾಂತರಾದುದನ್ನು ಕಂಡು ರಾಮಯ್ಯನಿಗೆ ಆಶ್ಚರ್ಯವಾಯಿತು.

ಎರಡು ದಿನಗಳ ಮೇಲೆ ರಾಮಯ್ಯನಿಗೆ ತಂದೆಯ ಪ್ರಶಾಂತತೆ ಉನ್ಮಾದಕ್ಕೆ ಹತ್ತಿರವಾದ ಪ್ರಚ್ಛನ್ನ ಕ್ರೋಧವೆಂಬುದು  ಸ್ಪಷ್ಟವಾಗತೊಡಗಿತು. ಚಿನ್ನಯ್ಯ ಸೀತೆಯರನ್ನು ಮನೆಯಿಂದ ಸ್ವಲ್ಪದೂರ ಹೋಗಿ ಕಳುಹಿಸಿ ಬರುತ್ತಿದ್ದಾಗ, ತೆಂಗಿನಮರದ ಮೇಲೆ ಕಾಗೆಯೊಂದು ಕುಳಿತು ವಿಷಣ್ಣವಾಗಿ ಕಾ ಕಾ ಕಾ ಎಂದು ಕಾಗರೆಯುತ್ತಿತ್ತು. ಅದನ್ನು ನೋಡಿ ಗೌಡರಿಗೆ ಸಿಟ್ಟಾಯಿತು. “ಹಾಳು ಕಾಗೆ ಏನು ಅಪಶಕುನ ಕೂಗ್ತದೆ ! ಏ ನಿಂಗಾ ಆ ಕೋವಿ ತಗೊಂಡು ಬಾ ಇಲ್ಲಿ” ಎಂದರು.

ನಿಂಗ ಒಳಗೆ ಹೋಗಿ ಬಂದೂಕನ್ನೂ ತೋಟಾಗಳನ್ನೂ ತಂದುಕೊಟ್ಟನು. ಈಡು ಹಾರಿದ ಕೂಡಲೆ ಕಾಗೆ ಮರದ ನೆತ್ತಿಯಿಂದ ಉರುಳಿಬಿದ್ದಿತು. ನಾಯಿಗಳೆಲ್ಲ ಅದರ ಬಳಿಗೆ ಓಡಿ ನುಗ್ಗಿದುವು. ಡೂಲಿ ಕಾಗೆಯನ್ನು ಬಾಯಲ್ಲಿ ಕಚ್ಚಿ ಎತ್ತಿಕೊಂಡು ಬಂದು ಗೌಡರ ಹತ್ತಿರ ಹಾಕಿತು. ನಾಯಿಗಳೆಂದರೆ ಹಚೀ ಹಚೀ ಎನ್ನುತ್ತಿದ್ದ ಗೌಡರು ಡೊಲಿಯನ್ನು ಬಹಳವಾಗಿ ಪ್ರಶಂಶಿಸಿ, ಮುದ್ದಿಸಿ, ಶಹಬಾಸ್‌ಗಿರಿ ಕೊಟ್ಟರು. ಮನಃಶಾಸ್ತ್ರಜ್ಞರಾರಾದರೂ ನೋಡಿದ್ದರೆ ಗೌಡರಿಗೆ ತಮ್ಮ ಕಿರಿಮಗನ ಮೇಲಿದ್ದ ಕ್ರೋಧದ ರೂಪಾಂತರವನ್ನು ಅದರಲ್ಲಿ ಕಾಣುತ್ತಿದ್ದರೆಂದು ತೋರುತ್ತದೆ.

ಸಾಲದಿದ್ದುದಕ್ಕೆ ಆ ದಿನವೇ ಕನ್ನಡ ಜಿಲ್ಲೆಯಿಂದ ಆಳುಗಳೊಡನೆ ಹಿಂತಿರುಗಿ ಬಂದಿದ್ದ ಸೇರೆಗಾರರನ್ನು ಕರೆದು “ಈ ತೆಂಗಿನಮರ ನಾಳೆ ಕಡಿಸಿಹಾಕಿ ಬಿಡಿ” ಎಂದು ಅಪ್ಪಣೆ ಮಾಡಿದರು.

ಅನೇಕ ತಲೆಮಾರುಗಳಿಂದ ಬೆಳೆದುಕೊಂಡುಬಂದು ಬೇಕಾದಷ್ಟು ಫಲವನ್ನೂ ಕೊಟ್ಟಿದ್ದ ಆ ವೃದ್ಧವೃಕ್ಷವನ್ನು ನೋಡಿ ಕನಿಕರದಿಂದ ಸೇರೆಗಾರರು “ಹೌದಾ, ಸ್ವಾಮಿ, ಅದು ಇದ್ದರೆ ನಿಮಗೇನು ಮಾಡುತ್ತದೆ. ಅಲ್ಲದೆ ಅದನ್ನು ಕಲ್ಪವೃಕ್ಷ ಅಂಬರು. ಅದೇ ಬಿದ್ದು ಹ್ವೋದ್ರೆ ಹ್ವೋಗ್ಲಿ. ನಾವು ಕಡಿದು ಪಾಪ ಕಟ್ಟಿಕೊಳ್ಳುವುದು ಬೇಡ” ಎಂದರು.

ಗೌಡರು ಇದ್ದಕ್ಕಿದ್ದ ಹಾಗೆ ಉರಿದೆದ್ದು “ನಿಮಗ್ಯಾಕ್ರೀ ಆ ಪುರಾಣ ? ಹೇಳಿದಷ್ಟು ಕೆಲ್ಸಾಮಾಡಿ. ಕಲ್ಪವೃಕ್ಷವಂತೆ ! ಕಾಮಧೇನುವಂತೆ ! ಕೆಲಸಕ್ಕೆ ಬಾರದ ಬಂಜೆಮರ ಇದ್ದರೇನು ? ಹೋದ್ರೇನು ?” ಎಂದರು.

ಮರುದಿನ ಗೌಡರು ತಾವೇ ಖುದ್ದು ನಿಂತು ತೆಂಗಿನಮರವನ್ನು ಕಡಿಸಿದರು.

ಗೌಡರು ಅದನ್ನು ಮುದ್ದಿಸಲಾರಂಭಿಸಿದ ಮೇಲೆ ಡೂಲಿ ಮೂರುಹೊತ್ತೂ ಅವರ ಬಳಿಯೇ ಇರುತ್ತಿತ್ತು. ಅದಕ್ಕೆ ಊಟ ಉಪಚಾರಗಳೂ ಸಮೃದ್ಧಿಯಾಗಿ ನಡೆಯತೊಡಗಿದವು. ಗೌಡರು ತಮ್ಮ ಎಲೆಯಿಂದಲೇ ಹಾಲು ಮೊಸರನ್ನಗಳನ್ನೂ ಮಾಂಸ ಮತ್ತು ಎಲುಬಿನ ತುಂಡುಗಳನ್ನೂ ಅದಕ್ಕೆ ನೀಡುತ್ತಿದ್ದರು.

ಮೂರು ನಾಲ್ಕು ದಿನಗಳಾದಮೇಲೆ ಗೌಡರು ತಾವು ಸ್ನಾನ ಮಾಡುತ್ತಿದ್ದಾಗ ಡೂಲಿಗೂ ಸ್ನಾನಮಾಡಿಸಬೇಕೆಂದು ಪ್ರಯತ್ನಿಸಿದರು. ಆದರೆ ಅದು ಅಷ್ಟರಮಟ್ಟಿಗೆ ನಾಗರಿಕವಾಗಿರಲಿಲ್ಲ. ಒಂದು ಚೊಂಬು ನೀರು ಮೈಮೇಲೆ ಬಿದ್ದೊಡನೆ ಅವರ ಕೈಯಿಂದ ನುಣುಚಿಕೊಂಡು ಓಡಿಹೋಯಿತು. ಕೌಪೀನಧಾರಿಯಾಗಿ ಸ್ನಾನಕ್ಕೆ ಸಿದ್ಧರಾಗಿದ್ದ ಗೌಡರು ಡೂಲಿಯನ್ನು ಕರೆಯುತ್ತ ಹಿಂಬಾಲಿಸಿದರು. ಡೂಲಿ ನಿಂತು ನಿಂತು, ಹಿಂತಿರುಗಿ ನೋಡುತ್ತ ನೋಡುತ್ತ, ಗೌಡರು ಹತ್ತಿರ ಬರಲು ಕೈಗೆ ಸಿಕ್ಕದೆ ಓಡತೊಡಗಿತು. ಗೌಡರು ಒಂದೆರಡು ಸಾರಿ ನಿಂತು ನಿಂತು ಕ್ರೋಧವಾಣಿಯಿಂದ ನಾಯನ್ನು ಬಳಿಗೆ ಕರೆದರು. ಅದು ಬರಲಿಲ್ಲ. ರೇಗಿ, ಅಟ್ಟಿ ಹಿಡಿಯಲು ಪ್ರಯತ್ನಿಸಿದರು. ಮನೆ, ಕೊಟ್ಟಿಗೆ, ಕಣ ಎಲ್ಲೆಲ್ಲಿಲಿಯೂ ಅಟ್ಟಿದರು. ಕೌಪೀನ ವಿನಾ ನಗ್ನರಾಗಿದ್ದ ಗೌಡರು ಅಟ್ಟುತ್ತಿದ್ದುದನ್ನು ಕಂಡು ಪುಟ್ಟ ನಿಂಗ ಇವರೂ ನೆರವಾದರು. ನಾಯಿಗೆ ಗಾಬರಿ ಹೆಚ್ಚಿ ಸಿಕ್ಕಾಬಟ್ಟೆ ಓಡತೊಡಗಿತು.

ಗೌಡರು ಕ್ರೋಧದಿಂದಲೂ ಆಯಾಸದಿಂದಲೂ ದೀರ್ಘಶ್ವಾಸೋಚ್ಛ್ವಾಸಗಳನ್ನು ಬಿಡುತ್ತ ನಿಂತು, ನಿಂಗನಿಗೆ ಬಂದೂಕು ತರಲು ಹೇಳಿದರು. ನಿಂಗ ಪ್ರತಿ ಮಾತಾಡಲು ಹೆದರಿ ಬಂದೂಕು ತಂದುಕೊಟ್ಟನು. ಅಷ್ಟರಲ್ಲಿ ಅಲ್ಲಿಗೆ ಓಡಿಬಂದಿದ್ದ ರಾಮಯ್ಯ ನಾಯಿಯನ್ನು ಹೊಡೆಯುವುದು ಬೇಡ ಎಂದು ಆಗ್ರಹಮಾಡಿದನು. ಗೌಡರು ಮಗನನ್ನು ಕೆಳಕ್ಕೆ ತಳ್ಳಿ “ಹೇಳಿದ ಮಾತು ಕೇಳದಿದ್ದ ಪ್ರಾಣಿ ಬದುಕಿರಬಾರದು” ಎಂದು ಹೇಳುತ್ತ ದೂರದಲ್ಲಿ ನಿಂತು ಅವರನ್ನೇ ನೋಡುತ್ತಿದ್ದ ಡೂಲಿಗೆ ಗುರಿಯಿಟ್ಟರು. ಆ ಮೂಗುಪ್ರಾಣಿಗೆ ಗೌಡರ ಪ್ರಲಯಬುದ್ಧಿ ಅರ್ಥವಾಗಲಿಲ್ಲ. ಒಂದು ಸಾರಿ ಗಟ್ಟಿಯಾಗಿ ಕೂಗಿ ನಾಯಿಯನ್ನು ಹತ್ತಿರಕ್ಕೆ ಕರೆದರು. ಅದು ನಿಂತಲ್ಲಿಂದ ಅಲುಗಾಡಲಿಲ್ಲ. ಎರಡನೆಯ ಸಾರಿ ಕೂಗಿದರು. ಅದು ಸ್ವಲ್ಪ ಹೆದರಿ ಒಂದೆರಡು ಹೆಜ್ಜೆ ದೂರ ಸರಿಯಿತು. ಇತರರು ಹೇಗಾದರೂ ಅದರ ಜೀವ ಉಳಿದರೆ ಸಾಕೆಂದು ‘ಬಾ, ಡೂಲಿ ! ಬಾ, ಡೂಲಿ !’ ಎಂದು ಕೂಗಿ ಕರೆಯುತ್ತಿದ್ದರು. ಗೌಡರು ಮೂರನೆಯ ಸಾರಿ ಕೂಗಿದರು. ನಾಯಿ ಹಿಂತಿರುಗುವುದರಲ್ಲಿತ್ತು. ಆದರೆ ಈಡೂ ಹಾರಿತ್ತು ! ರಕ್ತದ ಕೆಸರಿನಲ್ಲಿ ಬಿದ್ದು ಕೂಗುತ್ತ ಹೊರಳಾಡಿ ಡೂಲಿ ಪ್ರಾಣ ಬಿಟ್ಟಿತು.

ಗೌಡರು ಸರಕ್ಕನೆ ಹಿಂತಿರುಗಿ ಹೋಗಿ ಸ್ನಾನಮಾಡಿದರು.

ಮಧ್ಯಾಹ್ನ ಊಟಮಾಡಿ ಮಲಗಿದವರಿಗೆ ಹಾಸಿಗೆಯಿಂದ ಏಳಲಾಗಲಿಲ್ಲ. ರಾಮಯ್ಯ ಹೋಗಿ ವಿಚಾರಿಸಿದನು. ಜ್ವರ ಬಂದಿದೆ ಎಂದರು.

ಆ ದಿನ ಸಾಯಂಕಾಲದಲ್ಲಿ ಗೌಡರ ಜ್ವರ ವಿಷಮಸ್ಥಿತಿಗೇರಿತು. ಬುದ್ಧಿವಿಕಾರದಿಂದ ಏನೇನೋ ಹಲವರಿಯತೊಡಗಿದರು. ತೆಂಗಿನಮರ ಕಡಿಸುವುದು, ಬಂಜೆಯಿಂದ ಪ್ರಯೋಜನವೇನು ಎಂದು ಗೊಣಗುವುದು, ಹೇಳಿದ  ಮಾತು ಕೇಳದವರನ್ನು ಗುಂಡಿನಿಂದ ಹೊಡೆಯಬೇಕು ಎಂದು ಕೂಗುವುದು, ಅಯ್ಯೋ ವಾಸೂ ನನ್ನ ಬಿಟ್ಟು ಹೋದೆಯೇನೋ ಎಂದು ಮರುಗುವುದು – ಇತ್ಯಾದಿಯಾಗಿ ಅಸಂಬದ್ಧ ಪ್ರಲಾಪ ಮಾಡತೊಡಗಿದರು.ಅವರ ಹೆಂಡತಿ ಸುಬ್ಬಮ್ಮನನ್ನಂತೂ ಹತ್ತಿರಕ್ಕೆ ಬರಗೊಡಿಸದೆ ‘ಥೂ, ಹಾದರಗಿತ್ತಿ, ನಡಿ !’ ಎಂದು ಉಗುಳುತ್ತಿದ್ದರು. ರಾಮಯ್ಯನನ್ನು ಕಂಡರು ಪರಕೀಯನಂತೆ ಕಾಣಹತ್ತಿದರು. ಸೇರೆಗಾರ ರಂಗಪ್ಪಸೆಟ್ಟರು, ಅವರಿಗಿಂತಲೂ ವಿಶೇಷವಾಗಿ ಗಂಗೆ ಇವರಿಬ್ಬರು ಮಾತ್ರ ಅವರನ್ನು ಉಪಚರಿಸಿ ಹತೋಟಿಯಲ್ಲಿಡಲು ಸಮರ್ಥರಾಗುತ್ತಿದ್ದರು. ಗೌಡರಿಗೆ ಸ್ವಕೀಯರೇ ಪರಕೀಯರಂತೆಯೂ ಪರಕೀಯರೇ ಸ್ವಕೀಯರಂತೆಯೂ ಕಾಣತೊಡಗಿದ್ದಂತೆ ತೋರಿತು. ಗಂಗೆಯಲ್ಲಿ ಅವರಿಗಿದ್ದ ನಂಬುಗೆ ವಿಶ್ವಾಸಗಳು ಸುಬ್ಬಮ್ಮನಲ್ಲಿರಲಿಲ್ಲ.

ಮರುದಿನ ಅವರಿಗೆ ಜ್ವರ ಸ್ವಲ್ಪ ಇಳಿದಿದ್ದರೂ ಮನೋವಿಕಾರವೇನೂ ಇಳಿದಂತೆ ತೋರುತ್ತಿರಲಿಲ್ಲ. ರಾಮಯ್ಯ ತೀರ್ಥಹಳ್ಳಿಯಿಂದ ಡಾಕ್ಟರನ್ನು ಕರೆಸುತ್ತೇನೆ ಎಂದು ಹೇಳಿದಾಗ ಅವನ ಮೇಲೆ ರೇಗಿ ಬಯ್ದು “ಡಾಕ್ಟರಿಂದ ಏನಾಗ್ತದೋ? ಭೂತರಾಯನ ಚೇಷ್ಟೆ ! ಎಲ್ಲ ಆ ಹೂವಯ್ಯನ  ಮಾಟ ! ಕೆಳಕಾನೂರು ಅಣ್ಣಯ್ಯಗೌಡನ ಕರೆಸೋ ! ನೀವೆಲ್ಲ ಸೇರಿಕೊಂಡು ನನ್ನ ತಗೀಬೇಕು ಅಂತಾ ಮಾಡೀರಿ !” ಎಂದು ಕಣ್ಣೀರು ಕರೆಯತೊಡಗಿದರು.

ಕೆಳಕಾನೂರು ಅಣ್ಣಯ್ಯಗೌಡರು ಕೆಲವು ತಿಂಗಳ ಹಿಂದೆ ಊರು ಬಿಟ್ಟು ಹೋದುದನ್ನು ನೆನಪಿಗೆ ತಂದುಕೊಟ್ಟು, ಅವರೆಲ್ಲಿದ್ದಾರೆಯೋ ಅದೂ ಗೊತ್ತಿಲ್ಲ ಎಂದು ಹೇಳಲು, ಗೌಡರು ನರಳಿ ನಿಟ್ಟುಸಿರು ಬಿಟ್ಟು “ಮಾಡೀ ! ಮಾಡೀ ! ಏನೇನು ಮಾಡ್ತೀರೋ ಎಲ್ಲ ಮಾಡಿ !” ಎಂದು ಹೊದೆದಿದ್ದ ಕಂಬಳಿಯಿಂದ ಮುಖ ಮುಚ್ಚಿಕೊಂಡರು.

ರಾಮಯ್ಯ ತಂದೆಯ ನಂಬುಗೆಯ ಸಲುವಾಗಿ ಸೇರೆಗಾರರಿಂದ ಭೂತರಾಯನಿಗೆ ಕಾಣಿಕೆ ಕಟ್ಟಿಸಿ ಹೇಳಿಕೊಂಡನು.

ಮಧ್ಯಾಹ್ನ ವಾಸುವನ್ನು ಕೆಳಕಾನೂರಿನಿಂದ ಕರೆತರಿಸಿದನು. ಗೌಡರು ಅವನನ್ನು ನೋಡಿದ ಕೂಡಲೆ “ಯಾರೋ ಅದು ?” ಎಂದರು.

“ನಾನು, ಅಪ್ಪಯ್ಯಾ” ಎಂದನು ವಾಸು.

“ಯಾರೋ ನೀನು ಸತ್ತುಹೋದ ಅಂತಾ ಹೇಳಿದ್ರಲ್ಲೋ ” ಎಮದು ಗೌಡರು ಹೇಳಲು ಪಕ್ಕದಲ್ಲಿದ್ದ ಗಂಗೆ.

“ಛೆ ! ಎಂತ ಹಾಳು ಬಾಯಿ ನುಡೀತೀರಿ ?” ಎಂದು ಗದರಿಸಿದರು. ಗೌಡರು ಮಾತಾಡಲಿಲ್ಲ.

ಸಾಯಂಕಾಲದ ಹೊತ್ತಿಗೆ ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರೂ ದಯಮಾಡಿಸಿದರು. ಅವರಂತೂ ದೊಡ್ಡ ಪ್ರವಾಹದಲ್ಲಿ ಸೇತುವೆಯೊಂದು ಮುರಿದುಬೀಳುವ ಚಿಹ್ನೆ ತೋರಿದಾಗ ಅದರ ರಕ್ಷಣಾರ್ಥವಾಗಿ ಅಲ್ಲಿಗೆ ಕರೆಯಲ್ಪಡುವ ಎಂಜಿನಿಯರು ಯಾವ ಅಧಿಕಾರದಿಂದ, ದರ್ಪದಿಂದ, ಹೆಮ್ಮೆಯಿಂದ, ಹುಕುಂ ಚಲಾಯಿಸುತ್ತಾನೆಯೋ ಅದಕ್ಕಿಂತಲೂ ಹೆಚ್ಚಾದ ರೀತಿಯಲ್ಲಿ ವರ್ತಿಸುತ್ತಿದ್ದರು.

ಜೋಯಿಸರಿಗೆ ರೋಗವೇನೆಂದು ಗೊತ್ತಾಗದಿದ್ದರೂ ತಮಗೆ ತಿಳಿದಿದ್ದ ಔಷಧಿಗಳನ್ನೆಲ್ಲ ಒಂದಾದಮೇಲೊಂದನ್ನು ಪ್ರಯೋಗಿಸತೊಡಗಿದರು. ಜೊತೆಗೆ ಹಾದಿದಾನ ಬೀದಿದಾನ ಮಂತ್ರ ತಂತ್ರಗಳೇ ಮೊದಲಾದ ದೈವಿಕ ವಿಧಾನಗಳನ್ನೂ ಪ್ರಯೋಗಿಸಿದರು.

ರೋಗ ಪ್ರಬಲತರವಾಯಿತು. ನಾಲ್ಕನೆಯ ದಿನ ರಾಮಯ್ಯ ಹತಾಶನಾಗಿ ಕೆಳಕಾನೂರಿಗೆ ಓಡಿದನು. ಹೂವಯ್ಯ ಪುಟ್ಟಣ್ಣನೊಡಗೂಡಿ ಮನೆಯ ಅಂಗಳದಲ್ಲಿ ಒಂದು ಸಣ್ಣ ಹೂವಿನ ತೋಟದ ರಚನೆಯಲ್ಲಿ ತೊಡಗಿದ್ದವನು ರಾಮಯ್ಯನಿಂದ ಸಂಗತಿ ಎಲ್ಲವನ್ನೂ ಕೇಳಿ, ಕೂಡಲೆ ತೀರ್ಥಹಳ್ಳಿಯಿಂದ ಸರ್ಕಾರಿ ಡಾಕ್ಟರನ್ನು ಕರೆಯಿಸುವಂತೆ ಹೇಳಿದನು.

ರಾಮಯ್ಯ “ಅವರು ಸರ್ಕಾರಿ ಡಾಕ್ಟರೆಂದರೆ ರೇಗುತ್ತಾರೆ ! ಏನು ಮಾಡೋದು ?” ಎಂದನು.

“ರೇಗಿದರೆ ರೇಗಲಿ ! ರೋಗಿಯ ಮಾತು ಕೇಳಬಾರದು ! ಮೊದಲು ಆ ಜೋಯಿಸರಿಗೆ ‘ಔಷಧಿ ಕೊಡುವುದು ಬೇಡ’ ಎಂದು ಹೇಳಿ ನಿಲ್ಲಿಸಿಬಿಡು. ಆ ಅಳಲೇಕಾಯಿ ಪಂಡಿತರಿಂದ ಉಳಿಗತಿಯಿಲ್ಲ.”

“ನೀನೂ ಬಂದಿದ್ದರೆ ಚೆನ್ನಾಗಿತ್ತು….”

“ನಾನೂ ಮಾಟ ಮಾಡಿದ್ದೇನೆ ಎಂದು ಹೇಳಿದರು ಅಂತಾ ಹೇಳ್ತೀಯ. ನನ್ನ ನೋಡಿದರೆ ಅವರ ಬುದ್ಧಿವಿಕಾರ ಇನ್ನೂ ಹೆಚ್ಚಿಬಿಟ್ಟರೆ ?”

ಕಡೆಗೂ ರಾಮಯ್ಯನ ಧೈರ್ಯಕ್ಕೋಸ್ಕರ ಹೂವಯ್ಯನೂ ಕಾನೂರಿಗೆ ಹೋದನು. ಆದರೆ ಚಂದ್ರಯ್ಯಗೌಡರು ಅವನನ್ನು ಕಂಡೊಡನೆ ಕಾಹಿಲೆಯಿಂದ ಆಶಕ್ತರಾಗಿದ್ದರೂ ಆದಷ್ಟು ಗಟ್ಟಿಯಾಗಿ ಬಾಯಿಗೆ ಬಂದಂತೆ ಬಯ್ದು, ತಮ್ಮ ಕಣ್ಣುಮುಂದೆ ನಿಲ್ಲಬಾರದೆಂದು ಕೂಗಿಕೊಂಡರು. ಆಮೇಲೆ ಹೂವಯ್ಯ ಅವರಿಗೆ ಕಾಣಿಸಿಕೊಳ್ಳದಂತೆ ಜಾಗರೂಕನಾದನು.

ತೀರ್ಥಹಳ್ಳಿಯಿಂದ ಡಾಕ್ಟರು ಬಂದು ಸೂಜಿಮದ್ದನ್ನೂ ಔಷಧಿಯನ್ನೂ ಕೊಟ್ಟು, ಪಥ್ಯಗಳನ್ನೆಲ್ಲಾ ಹೇಳಿ, ಶುಶ್ರೂಷೆಯ ವಿಧಾನಗಳನ್ನೂ ತಿಳಿಸಿ, ಪ್ರತಿ ದಿನವೂ ಬಂದು ಔಷಧಿ ತೆಗೆದುಕೊಂಡುಹೋಗುವಂತೆ ಅಪ್ಪಣೆಮಾಡಿ ಫೀಜು ತೆಗೆದುಕೊಂಡು ಮರಳಿದರು.

ಎಂಟು ಹತ್ತು ದಿನಗಳಲ್ಲಿ ಗೌಡರ ದೈಹಿಕ ರೋಗ ಗುಣವಾಯಿತು. ಆದರೆ ಬುದ್ಧಿವಿಕಾರ ಸಂಪೂರ್ಣವಾಗಿ ಹೋಗಲಿಲ್ಲ. ಸುಬ್ಬಮ್ಮನನ್ನು ಬಂಜೆ, ಹಾದರಗಿತ್ತಿ ಎಂದು ಮೊದಲಾಗಿ ಶಪಿಸುತ್ತಿದ್ದರು. ಮನೆಯವರನ್ನೆಲ್ಲ ಜುಗುಪ್ಸೆಯಿಂದ ಕಾಣತೊಡಗಿದರು. ಗಂಗೆಯೊಬ್ಬಳೇ ಅವರಿಗೆ ಅತ್ಯಂತ ಹಿತಕಾರಿಣಿಯಾಗಿದ್ದಳು.

ಮೊದಲಿದ್ದ ಶಕ್ತಿಯಾಗಲಿ ದರ್ಪವಾಗಲಿ ಗಾಂಭೀರ್ಯವಾಗಲಿ ಅವರಿಗೆ ಮರಳಿ ಬರಲಿಲ್ಲ. ಅದಕ್ಕೆ ಬದಲಾಗಿ ಕ್ರೋಧ, ಧೂರ್ತವರ್ತನೆ, ಸಿಡುಕುಬುದ್ಧಿ, ನಡುನಡುವೆ ಉನ್ಮಾದಪ್ರಕೃತಿ ಇವುಗಳು ಹೆಚ್ಚಿದುವು.

ದಿನಗಳು ಸಾಗಿದುವು. ಅಡಕೆಯ ಕೊಯಿಲು ಬಂದಿತು. ರಾಮಯ್ಯನೇ ಮುತುವರ್ಜಿಯಿಂದ ಕೊನೆ ತೆಗೆಯುವವರನ್ನು ಗೊತ್ತುಮಾಡಿ, ಕೊನೆ ತೆಗೆಸಿದನು.

ಅಡಕೆ ಸುಲಿಯುವುದು, ಬೇಯಿಸುವುದು, ಹರಡುವುದು, ಮಧ್ಯೆ ಮಧ್ಯೆ ಕೆಳಕಾನೂರಿಗೆ ಹೋಗಿ ಹೂವಯ್ಯನಿಗೂ ಕೆಲಸದಲ್ಲಿ ಸಹಾಯಮಾಡುವುದು, ಆಗಾ ಕೋವಿ ಹಿಡಿದುಕೊಂಡು ಇಬ್ಬರೂ ಕಾಡಿನಲ್ಲಿ ಬೇಟೆಯಾಡುವುದು – ಹೀಗಿರುತ್ತಿರಲು ಭೂಮಿ ಹುಣ್ಣಿಮೆಯ ಹಬ್ಬ ಬಂದಿತು.