ಭೂಮಿ ಹುಣ್ಣಿಮೆಯ ಹಬ್ಬ ಕಳೆಯಿತು. ದೀಪಾವಳಿಯೂ ಪೂರೈಸಿತು. ಅಡಕೆಯ ಕೊಯಿಲೂ ಪ್ರಾರಂಭವಾಗಿ ಸ್ವಲ್ಪ ದೂರ ಸಾಗಿತ್ತು.

ದೀಪಾವಳಿ ಹಬ್ಬದಲ್ಲಿ ಎಂದಿನಂತೆ ದೊಡ್ಡಬೇಟೆ ಸಾಹಸಪೂರ್ಣವಾಗಿ ಸಾಗಿತು. ಮೂರು ಹಂದಿಗಳೂ ಒಂದು ಮಿಗವೂ ಒಂದೆರಡು ಬರ್ಕಗಳೂ ಒಂದು ಕಣೆಹಂದಿಯೂ ಲಭಿಸಿ, ಎಲ್ಲರಿಗೂ ಹರಿಹಬ್ಬವಾಯಿತು.

ಅದರಲ್ಲಿ ಹೇಳಬೇಕಾದ ವಿಷಯವೆಂದರೆ ಹೂವಯ್ಯ ಮಿಗ ಹೊಡೆದದ್ದು. ಹಿಂದೆ ಪ್ರಾಣಿಹಿಂಸೆ ಮಾಡುವುದಿಲ್ಲ ಎಂದು ಮಾಡಿಕೊಂಡಿದ್ದ ಪೂಣ್ಕೆ ಅಂದು ಸಾಥ್ಕವಾಗಲಿಲ್ಲ. ಅವನೇನೋ ಸಾಧುಪ್ರಾಣಿಯೂ ಅತಿಭೀರುವೂ ಆದ ಮಿಗವನ್ನು ಹೊಡೆಯುವುದಿಲ್ಲ ; ಹಂದಿ, ಹುಲಿ, ಚಿರತೆ ಇಂತಹ ಕ್ರೂರಪ್ರಾಣಿಗಳು ತನ್ನ ಬಿಲ್ಲಿಗೆ ಬಂದರೆ ಮಾತ್ರ ಹೊಡೆಯುತ್ತೇನೆ ಎಂದು ಬಂದೂಕು ಹಿಡಿದು ಬಿಲ್ಲಿಗೆ ನಿಂತಿದ್ದನು. ಆದರೆ ನಾಯಿಗಳ ಕೂಗೂ ಸೋವುವವರ ಕಾಕೂ ಇತರರ ವಿವಿಧ ಬಂದೂಕುಗಳ ಠೋಳ್, ಠಪ್, ಢಂ, ಢಾಂ, ಎಂಬ ಉತ್ತೇಜಕವಾದ  ಸದ್ದೂ, ಕೇಳಿಬಂದು ಬೇಟೆ ಹುರುಪಾಗಲು, ಹೂವಯ್ಯ ತನ್ನನ್ನು ತಾನೆ ಮರೆತು, ಹಾರಿ ಹಾರಿ ಬೆದರಿ ಮಿಂಚಿ ಬರುತ್ತಿದ್ದ ಮಿಗಕ್ಕೆ ಗುಂಡು ಹೊಡೆದು ಕೆಡಹಿದನು. ಆಗ ಅವನಿಗೆ ಆಲೋಚನೆ ಮಾಡುವನಿತು ತಾಳ್ಮೆಯಾಗಲಿ ಪುರಸತ್ತಾಗಲಿ ಇರಲಿಲ್ಲ.

ಅಷ್ಟೆ ಅಲ್ಲದೆ, ಆ ಮಿಗ ರಾಮಯ್ಯನ ಬಿಲ್ಲಿನ ಮಾರ್ಗವಾಗಿ ಹೂವಯ್ಯನ ಬಿಲ್ಲಿಗೆ ಬಂದಿತ್ತು. ಹೂವಯ್ಯನಿಗಿಂತ ಮೊದಲೇ ರಾಮಯ್ಯ ಒಂದು ಈಡು ಹೊಡೆದಿದ್ದನು. ಮಿಗವೇನೋ ನೆಲಕ್ಕುರಳಿ ಬಿದ್ದದ್ದು ಹೂವಯ್ಯನ ಈಡಿನಿಂದಲೇ ಆದರೆ ರಾಮಯ್ಯನ ಈಡಿನ ಒಂದೆರಡು ಕಡಕು (ದೊಡ್ಡ ಚರೆ) ಅದರ ಹಿಂಭಾಗಕ್ಕೆ ಮೊದಲೇ ತಗುಲಿತ್ತು. ನೆತ್ತರೂ ಅಲ್ಲಲ್ಲಿ ಸೋರಿತ್ತು. ಆದ್ದರಿಂದ ಹೂವಯ್ಯನದು ಮರುಗುಂಡಾಗಿತ್ತೇ ಹೊರತು ಮೊದಲ್ಗುಂಡಾಗಿರಲಿಲ್ಲ. ಆದರೆ ಹೂವಯ್ಯ ತನ್ನ ಈಡಿನಿಂದಲೆ ಅದು ಬಿದ್ದುದೆಂದು ವಾದಿಸಿದನು. ಆ ವಿಚಾರವಾಗಿ ವಿನೋದದಿಂದ ಪ್ರಾರಂಭವಾಗಿದ್ದ ಭಿನ್ನಾಭಿಪ್ರಾಯದ ಮಾತುಕತೆ ಆಮೇಲೆ ಸ್ವಲ್ಪ ಬಿಸಿಬಿಸಿಯಾಗಿ ಖಾರ ಖಾರವಾಯಿತು. ಹೂವಯ್ಯನೂ ರಾಮಯ್ಯನೂ ಒಂದು ವಾರದವರೆಗೆ ಪರಸ್ಪರ ಮಾತುಕತೆಯಾಡುವುದನ್ನೂ ಬಿಟ್ಟುಬಿಟ್ಟಿದ್ದರು. ತರುವಾಯವೂ ಮಾತಿನಲ್ಲಿ ಮೊದಲಿನ ಸಲಿಗೆ ಮೈದೋರಲಿಲ್ಲ.

ಹೂವಯ್ಯ ರಾಮಯ್ಯರು ಪ್ರತ್ಯಕ್ಷವಾಗಿ ಜಗಳವಾಡಿದ್ದುದು ಅದೇ ಮೊದಲನೆಯ ಸಲವಾಗಿದ್ದರೂ ಆ ಘಟನೆಯಲ್ಲಿ ಗುಪ್ತವಾಗಿ ಅವರಿಬ್ಬರ ಅಂತರಾಳದಲ್ಲಿ ಕೆಲಕಾಲದಿಂದಲೂ ಜರುಗುತ್ತಿದ್ದ ಹೃದಯಮಂಥನದ ಛಾಯೆಯಿತ್ತು. ಬಹುಶಃ ಸೀತೆ ಅದಕ್ಕೆ ಕಾರಣಳಾಗಿರಬಹುದೇನು ?

ಅಡಕೆಯ ಕೊಯಿಲು ಪ್ರಾರಂಭವಾಗಿ ಸ್ವಲ್ಪದೂರ ಮುಂದುವರಿದಿತ್ತು. ಕಾನೂರು ಮನೆಯಲ್ಲಿ ಬೆಳಿಗ್ಗೆಯಿಂದ ಸಾಯಂಕಾಲದವರೆಗೆ ಕೊನೆ ತೆಗೆಯುವುದು, ಕುತ್ತರೆ ಹಾಕುವುದು, ಮೆಟ್ಟುಗತ್ತಿಯಿಂದ ಅಡಕೆ ಸುಲಿಯುವುದು, ಚೂಗರು ಹಾಕಿ ಬೇಯಿಸುವುದು,  ಚಪ್ಪರದಮೇಲೆ ವಾಟೆಯ ತಟ್ಟಿಗಳಲ್ಲಿ ಹರಡಿ ಬಿಸಿಲಿನಲ್ಲಿ ಆರಿಸುವುದು ಈ ಕಾರ್ಯಗಳೆಲ್ಲವೂ ಭರದಿಂದ ಸಾಗಿದ್ದುವು.

ರಾತ್ರಿ ಎಂಟು ಗಂಟೆಯ ಹೊತ್ತು ಜಗಲಿಯಲ್ಲಿ, ಕಿರುಜಗಲಿಯಲ್ಲಿ, ಚೌಕಿಯಲ್ಲಿ ಎಲ್ಲೆಲ್ಲಿಯೂ ಎಲ್ಲ ಕಡೆಗಳಿಂದಲೂ ಮೆಟ್ಟುಗತ್ತಿಗಳಲ್ಲಿ ಅನೇಕರು ಅಡಕೆ ಸುಲಿಯುವ ಸದ್ದು ಮನೋಹರವೂ ಲಯಬದ್ದವೂ ಆದ ನಾದಪರಂಪರೆಯಾಗಿ ಕೇಳಿಬರುತ್ತಿತ್ತು. ಆ ದಿನ ಹೆಚ್ಚಾಗಿ ಕೊನೆ ತೆಗೆದಿದ್ದುದರಿಂದ ಅವುಗಳನ್ನೆಲ್ಲ ಮರುದಿನದ ಒಳಗಾಗಿ ಸುಲಿದು ಪೂರೈಸಬೇಕೆಂದು ಗೌಡರು ಕಟ್ಟಪ್ಪಣೆ ಮಾಡಿದ್ದರು. ಆದ್ದರಿಂದಲೆ ಬೇಲರೂ ಹಳೆಪೈಕದವರೂ ಕನ್ನಡ ಜಿಲ್ಲೆಯ ಆಳುಗಳೂ ಮನೆಯ ಆಳುಗಳೂ ಎಲ್ಲರೂ ಸೇರಿ ಬೇಗಬೇಗನೆ ರಾತ್ರಿಯ ಊಟವನ್ನು ಪೂರೈಸಿಕೊಂಡು ಬಂದು ಅಡಕೆಯ ಸುಲಿತಕ್ಕೆ ಕೈಹಚ್ಚಿ ಭರದಿಂದ ಸಾಗಿದ್ದರು.

ಚೌಕಿಯ ಮೂಲೆಯಲ್ಲಿ ದೊಡ್ಡದಾದ ಅಡಕೆಯೊಲೆಯ ಮೇಲೆ ಕರಿ ಹಿಡಿದು ಚೊಗರುಬಿದ್ದು ಚಿತ್ರವಿಚಿತ್ರವಾದ ತಾಮ್ರದ ದೊಡ್ಡ ಹಂಡೆಯಲ್ಲಿ ಅಡಕೆ ತಕಪಕನೆ ಕುದಿಯುತ್ತಿತ್ತು. ಇನ್ನೊಂದು ಕಡೆ ಆ ರಾತ್ರಿ ಬೇಯಿಸಿದ ಅಡಕೆಯನ್ನು ಒಣಗಿಸಲು ‘ಹೊಗೆದಟ್ಟಿ’ಯೂ ಸಿದ್ದವಾಗಿದ್ದಿತು. ಅಡಕೆಯೊಲೆಯಲ್ಲಿ ಬೆಂಕಿ ಭೀಮಾಕಾರವಾಗಿ ಉರಿಯುತ್ತಿತ್ತು. ಅದಕ್ಕೆ ತುಸು ದೂರದಲ್ಲಿ ನಿಂಗನು ನಿಂತು ಪರಪರನೆ ತೊಡೆ ಕೆರೆದು ಚಳಿ ಕಾಯಿಸುತ್ತಲೂ ಆಗಾಗ್ಗೆ ಬೇಯುತ್ತಿದ್ದ ಅಡಕೆಯನ್ನು ದೊಡ್ಡ ದಬ್ಬೆಸಟ್ಟುಗದಿಂದ ತಿರುವುತ್ತಲೂ ಇದ್ದನು. ಬೆಂಕಿಗೆ ಸ್ವಲ್ಪ ದೂರವಾಗಿ, ಆದರೂ ಅದರ ಉಷ್ಣದವಲಯದಲ್ಲಿ, ನಾಯಿಗಳು ನಿರ್ಲಕ್ಷ್ಯವಾಗಿ ಪವಡಿಸಿದ್ದುವು !

ಅಲ್ಲಲ್ಲಿ ಅಡಕೆ ಸುಲಿಯುವವರ ಸೌಕರ್ಯಕ್ಕಾಗಿ ಕೆಂಜೊಡರಿನ ಹೊಗೆಕಾರುವ ಚಿಮಿಣಿ (ಸೀಮೆಯೆಣ್ಣೆ ಬುಡ್ಡಿ) ಗಳು ಉರಿಯುತ್ತಿದ್ದವು. ಆ ಗ್ರಾಮ್ಯ ದೀಪಗಳ ಕುಡಿಗಳು ಕುಣಿದಂತೆ ಅಡಕೆ ಸುಲಿಯುತ್ತಿದ್ದವರ ಛಾಯೆಗಳೂ ಚಿತ್ರ ವಿಚಿತ್ರವಾಗಿ ರೂಪವಿರೂಪಗಳಾಗಿ ಗೋಡೆಗಳ ಮೇಲೆ ಶಕುನಪೂರ್ಣವಾಗಿ ಗುಹ್ಯಭೀಷಣವಾಗಿ ಪ್ರೇತನಾಟ್ಯದ ಪ್ರತಿಬಿಂಬಗಳಂತೆ ತೋರುತ್ತಿದ್ದುವು.

ಜಗಲಿಯ ಒಂದೆಡೆಯಲ್ಲಿ ಸೇರೆಗಾರ ರಂಗಪ್ಪಸೆಟ್ಟರು. ಗಂಗೆ, ಸೋಮ ಇವರಿಗೆ ತುಸು ದೂರದಲ್ಲಿ ಹಳೆಪೈಕದ ತಿಮ್ಮ – ಇಷ್ಟು ಜನರು ತಮ್ಮದೇ ಒಂದು ಗುಂಪು ಮಾಡಿಕೊಂಡು ಸರಸಸಲ್ಲಾಪಗಳಲ್ಲಿಯೂ ಕಾಡುಹರಟೆಗಳಲ್ಲಿಯೂ  ತೊಡಗಿ, ಮಧ್ಯೆ ಮಧ್ಯೆ ನೆರೆದವರ ಶಬ್ದ ಸಮೂಹವನ್ನೆಲ್ಲ ಮೀರುವಂತೆ ಗಹಗಹಿಸಿ ನಗುತ್ತಾ ಮೆಟ್ಟುಗತ್ತಿಗಳ  ಮೇಲೆ ಭದ್ರವಾಗಿ ಕುಳಿತು ಅಡಕೆ ಸುಲಿಯುತ್ತಿದ್ದರು. ಮನಸ್ಸೆಲ್ಲ ಮಾತಿನಲ್ಲಿದ್ದರೂ ಕೈಗಳು ಅಭ್ಯಾಸಬಲದಿಂದ ತಮ್ಮ ಕೆಲಸದಲ್ಲಿ ಚಾಚೂ ತಪ್ಪಿಹೋಗದೆ ಕೆಲಸ ಮಾಡುತ್ತಿದ್ದುವು. ಹಳೆಪೈಕದ ತಿಮ್ಮನ ಕೃಪೆಯಿಂದ ಅವರೆಲ್ಲರಿಗೂ ಸ್ವಲ್ಪಸ್ವಲ್ಪ ಅಮಲೇರಿತ್ತು ಎಂಬುದನ್ನೂ ನಾವು ಮರೆಯಬಾರದಲ್ಲವೆ ?

ಇದ್ದಕ್ಕಿದ್ದ ಹಾಗೆ ಎಲ್ಲರೂ ಅಡಕೆ ಸುಲಿಯುವುದನ್ನು ನಿಲ್ಲಿಸಿ, ಹುಬ್ಬು ನಿಮಿರಿಸಿ, ಕಣ್ಣಗಲಿಸಿ, ತುಟಿ ತೆರೆದು ಆಲಿಸಿದರು. ಒಳಗಡೆಯಿಂದ ಚಂದ್ರಯ್ಯಗೌಡರ ಕ್ರೋಧಧ್ವನಿಯೂ ನಡುನಡುವೆ ಸುಬ್ಬಮ್ಮನ ಪ್ರತಿಭಟನೆಯ ಧ್ವನಿಯೂ ಕೇಳಿಬಂದುವು.

“ಹಾಞ ! ಕಾಣಿ, ಮತ್ತೆ ! ಆರಂಭವಾಯಿತು ! ಆ  ಹೆಗ್ಗಡಿತಮ್ಮನವರ ಕಡೆಯಿಂದ ಸುಖಾ ಇಲ್ಲ !” ಎಂದಳು ಗಂಗೆ, ಸೇರೆಗಾರರ ಕಡೆ ನೋಡಿ.

“ಹೆಗ್ಗಡಿತಮ್ಮನವರ ಮೇಲೆ ಯಾಕೆ ತಪ್ಪು ? ಗೌಡರ ತಲೆ ಕೆಟ್ಟತ್ತಲ್ದಾ !” ಎಂದು ಹೇಳುತ್ತಾ ಸೇರೆಗಾರರ ಮೆಟ್ಟುಗತ್ತಿಯಿಂದ ಮೇಲೆದ್ದರು.

ಇತ್ತೀಚೆಗೆ ಸುಬ್ಬಮ್ಮನ ಮೇಲೆ ಗೌಡರ ವರ್ತನೆ ಹುಚ್ಚುಹುಚ್ಚಾಗಿ ಬರಬರುತ್ತಾ ಕ್ರೂರವಾಗುತ್ತಿತ್ತು. ದೇಹದೌರ್ಬಲ್ಯದೊಡನೆ ಅವರಲ್ಲಿ ಸಂಶಯ ಪ್ರಕೃತಿಯೂ ವರ್ಧಿಸಿತ್ತು. ಸುಬ್ಬಮ್ಮ ತಮ್ಮನ್ನು ಒಲಿಯುವುದಂತಿರಲಿ, ತಮ್ಮನ್ನು ಕಂಡರೆ ಆಕೆಗೆ ಆಗುವುದಿಲ್ಲ ಎಂಬ ಭಾವವೂ ಬೆಳೆಯಿತು. ಜೊತೆಗೆ ಆಕೆ ಪತಿವ್ರತೆಯಾಗಿಲ್ಲ ಎಂಬ ಗೂಢಭಾವದ ಕೀಟವೂ ಅವರ ಎದೆ ಮಿದುಳುಗಳಲ್ಲಿ ಗೂಡುಕಟ್ಟಿತ್ತು. ಸ್ವಲ್ಪ ಕಾರಣಗಳಿಗೂ, ಕೆಲವು ಸಾರಿ ಕಾರಣಗಳನ್ನು ಕಲ್ಪಿಸಿಕೊಂಡೂ ಆಕೆಯನ್ನು ಹೊಡೆಯುತ್ತದ್ದರು ; ಬಯ್ಯುತ್ತಿದ್ದರು.

ವಾಸ್ತವವಾಗಿಯೂ ಸುಬ್ಬಮ್ಮನಿಗೆ ಗಂಡನ ವಿಚಾರವಾಗಿ ಜುಗುಪ್ಸೆ ಹುಟ್ಟಿದ್ದು ನಿಶ್ಚಯ. ಆದರೆ ಆ ಜುಗುಪ್ಸೆ ಪರರ ಪ್ರೀತಿಯಿಂದ ಪ್ರೇರಿತವಾಗಿರಲಿಲ್ಲ. ಸೇರೆಗಾರರೇನೊ ಆಕೆಯ ವಿಚಾರದಲ್ಲಿ ಹೆಚ್ಚಾದ ಸಹಾನುಭೂತಿ ತೋರಿಸುತ್ತಿದ್ದರು. ಆವರು ಯಾವ ಅಭಿಸಂಧಿಯಿಂದ ಹಾಗೆ ವರ್ತಿಸುತ್ತಿದ್ದರೋ ಏನೊ ? ಅದು ಸುಬ್ಬಮ್ಮನ ಸ್ಥೂಲಬುದ್ಧಿಗೆ ಹೊಳೆಯಲಿಲ್ಲ. ಆಕೆಯೇನೊ ಅವರನ್ನು ಕಷ್ಟದಲ್ಲಿ ನೆರವಾಗುವವರನ್ನು ಯಾವ ಕೃತಜ್ಞತೆಯಿಂದ ಕಾಣಬೇಕೋ ಅಂಥಾ ದೃಷ್ಟಿಯಿಂದ ಮಾತ್ರ ಕಾಣುತ್ತಿದ್ದಳು. ಗಂಡನಿಂದ ಬೈಸಿಕೊಂಡು, ಪೆಟ್ಟುತಿಂದು, ಸದಾ ಕರಕರೆಯ ಬಾಳನ್ನು ಬಾಳುತ್ತಿದ್ದು. ಆಕೆ ಬರಬರುತ್ತಾ ಕೃಶಳಾದಳು. ಅದನ್ನು ಕಂಡು ಗೌಡರಿಗೆ ಇನ್ನೂ ರೇಗಿತು. ರೋಗಗ್ರಸ್ತವಾದ ಅವರ ಮೆದುಳಿನಲ್ಲಿ ಕರಾಳ ಕಲ್ಪನೆ ಪಿಶಾಚಿಯಾಗಿ ಕುಣಿಯತೊಡಗಿತು.

ಒಂದು ಸಾರಿ ಊಟಮಾಡುತ್ತಿದ್ದಾಗ ಗೌಡರ ತಲೆಯಲ್ಲಿ ಹೆಂಡತಿ ತನ್ನನ್ನು ಕೊಲ್ಲಲೆಂದು ಪಲ್ಯಕ್ಕೆ ವಿಷ ಹಾಕಿದ್ದಾಳೆ ಎಂಬ ಭಾವ ಸ್ಫುರಿಸಿ “ಪಲ್ಯಕ್ಕೆ ಏನು ಹಾಕಿದ್ದೀಯಾ ? ಒಳ್ಳೆ ಮಾತಿನಲ್ಲಿ ಹೇಳ್ತೀಯೋ ಇಲ್ಲವೋ ?” ಎಂದು ಜಡೆಹಿಡಿದು ಅಲುಗಿಸಿದರು.

“ಉಪ್ಪು ಕಾರ ಹುಳಿ ಹಾಕಿದ್ದೀನಿ ! ಮತ್ತೇನು ಹಾಕ್ತೀನಿ ?” ಎಂದು ಸುಬ್ಬಮ್ಮ ಮುನಿದು ಹೇಳಿದಳು.

ಗೌಡರು “ಸುಳ್ಳು ಹೇಳ್ತೀಯಾ ಹಡಬೇ ರಂಡೇ ! ಮಿಂಡಗಾರರ ಮಾತು ಕಟ್ಟಿಕೊಂಡು ಪಲ್ಯಕ್ಕೆ ವಿಷಾ ಹಾಕಿಲ್ವಾ ? ಹೇಳು !” ಎಂದು ಗುದ್ದಿದರು.

ಸುಬ್ಬಮ್ಮ ರೋದಿಸುತ್ತಾ ತಾನು ಮಾಡಿಲ್ಲ ಎಂದು ದಮ್ಮಯ್ಯಗುಡ್ಡೆ ಹಾಕಿದಳು. ರಾಮಯ್ಯ, ಸೇರೆಗಾರರ ಎಲ್ಲರೂ ಸುಬ್ಬಮ್ಮನ ಪರವಾಗಿ ವಾದಿಸಿರು. ಆದರೂ ಗೌಡರು ಪಲ್ಯವನ್ನೆಲ್ಲ ಸುಬ್ಬಮ್ಮನ ಕೈಯಿಂದ ಅಲ್ಲಿಯೇ ತಮ್ಮೆದುರು ತಿನ್ನುವಂತೆ ಮಾಡಿ, ಅವಳು ಸಾಯುವುದನ್ನೇ ಎದುರುನೋಡಿ, ಹತಾಶರಾಗಿದ್ದರು.

ಮತ್ತೊಂದು ಸಾರಿ ಸುಬ್ಬಮ್ಮನ ತಲೆಯ ಹಿಂಭಾಗದಲ್ಲಿಯೂ ಬೆನ್ನಿನ ಮೇಲೆಯೂ ಒಣಗಿದ್ದ ಹುಲ್ಲೆಸಳುಗಳಿದ್ದುದನ್ನು ಕಂಡು ಗೌಡರು “ಎಲ್ಲಿಂದ ಬಂತು ಈ ಹುಲ್ಲು ನಿನ್ನ ಬೆನ್ನಮೇಲೆ ? ಎಲ್ಲಿ ಯಾರ ಜೊತೆ ಹುಲ್ಲುಗೊಣಬೇಲಿ ಮಲಗಿದ್ದೆ ಹೇಳು ?” ಎಂದು ಹಲ್ಲು ಕಚ್ಚಿಕೊಂಡು ಕಣ್ಣು ಕೆಂಪಗೆ ಮಾಡಿಕೊಂಡು ಕೇಳಿದರು. ಸುಬ್ಬಮ್ಮ ತಾನು ಕರೆಯುವ ದನಗಳಿಗೆ ಹುಲ್ಲು ಹಾಕುತ್ತಿದ್ದಾಗ ಅದನ್ನು ಬೆನ್ನಮೇಲೆ ಹೊತ್ತುಕೊಂಡು ಹೋಗಿದ್ದೆ ಎಂದು ಹೇಳಿದರೂ ಗೌಡರು ಸಮಾಧಾನರಾಗದೆ ಆಕೆಯನ್ನು ಚೆನ್ನಾಗಿ ಗುದ್ದಿ ಗುದ್ದಿ ಒದ್ದು ಒದ್ದು ಹಾಕಿದ್ದರು.

ಅಲ್ಲದೆ, ಅನೇಕ ರಾತ್ರಿ, ಗೌಡರು ಮಲಗುತ್ತಿದ್ದ ಕೋಣೆಯಿಂದ ರಭಸದ ಮಾತುಗಳೂ ಗುದ್ದಿನ ಸದ್ದುಗಳೂ ರೋದನ ಧ್ವನಿಗಳೂ ಕೇಳಿಬರುತ್ತಿದ್ದುದನ್ನು ಉಪ್ಪರಿಗೆಯ ಮೇಲೆ ಮಲಗುತ್ತಿದ್ದ ರಾಮಯ್ಯನಾದಿಯಾಗಿ ಎಲ್ಲರೂ ಆಲಿಸುತ್ತಿದ್ದರು.

ಎಲ್ಲಕ್ಕಿಂತಲೂ ಹೆಚ್ಚಾಗಿ, ಸುಬ್ಬಮ್ಮನನ್ನು ಪ್ರತಿಭಟನೆಗೆ ರೇಗಿಸಿದ್ದೆಂದರೆ ಗೌಡರು ಗಂಗೆಗೆ ಸುಬ್ಬಮ್ಮನ ಸೀರೆಗಳನ್ನೂ ಒಡವೆಗಳನ್ನೂ ಕೊಡತೊಡಗಿದ್ದು. ಕಷ್ಟದಾರಿದ್ಯ್ರಗಳಲ್ಲಿ ಹುಟ್ಟಿ ಬೆಳೆದಿದ್ದ ಆ ಒರಟು ಪೆಟ್ಟುಗಳನ್ನೂ ಬೈಗುಳಗಳನ್ನೂ ನಿಂದೆಯನ್ನೂ ಕಷ್ಟಪಟ್ಟುಕೊಂಡು ಸಹಿಸಿದ್ದರೂ ತನಗೆ ಸೇರಿದ್ದ ಉಡುಗೆತೊಡುಗೆಗಳು ಹೆರರ ಪಾಲಾಗುತ್ತಿದ್ದುದನ್ನು ಕಂಡು ಸಹಿಸಲಾರದೆ ಹೋದಳು. ಗಂಡನಿಗೆ ಪ್ರತಿಯಾಗಿ ಮಾತಾಡಲೂ ಪ್ರಾರಂಭಿಸಿದ್ದಳು.

ಆ ದಿನ ರಾತ್ರಿಯೂ ಹೊರಗೆ ಎಲ್ಲರೂ ಅಡಕೆ ಸುಲಿಯುತ್ತಿದ್ದಾಗ ಒಳಗೆ ಒಂದು ರಣರಂಪವಾಗುತ್ತಿತ್ತು. ಗೌಡರು ಸುಬ್ಬಮ್ಮನ ಪಿಟಾರಿಯ ಬೀಗದ ಕೈಯನ್ನು ಕೇಳಿದರು. ಆಕೆ ಕೊಡಲಿಲ್ಲ. ಗೌಡರು ಬದ್ಧಭ್ರುಕುಟಿಯಾಗಿ ಹೆಂಡತಿಯ ಮೈಮೇಲೆ ಬಿದ್ದು ಬೀಗದಕೈಯನ್ನು ಕಸಿದುಕೊಳ್ಳಲು ಪ್ರಯತ್ನಿಸಿ ಸೋತರು.

ಒಡನೆಯೆ ಸುಬ್ಬಮ್ಮನನ್ನು ಬಿಟ್ಟು “ನಿನ್ನ ಇವತ್ತು ಕತ್ತರಿಸಿ ಹಾಕ್ದೇ ಇದ್ರೆ ನನ್ನ ಅಪ್ಪನಿಗೆ ಹುಟ್ಟಿದ ಮಗನಲ್ಲ ನಾನು” ಎನ್ನುತ್ತಾ ನಾಗಂದಿಗೆಯ ಮೇಲೆ ಕೈಯಾಡಿಸಿ ಕತ್ತಿಯನ್ನು ಹುಡುಕಿದರು. ಸುಬ್ಬಮ್ಮನಿಗೆ ತನ್ನ ಜೀವನದ ಕೊನೆಯೇ ಕಂಡಹಾಗಾಯಿತು. ಗಟ್ಟಿಯಾಗಿ ಕಿರಿಚಿಕೊಳ್ಳುತ್ತಾ ಅಲ್ಲಿಂದೆದ್ದು ಜಗಲಿಗೆ ನುಗ್ಗಿದಳು.

ಒಳಗೆ ನಡೆಯುತ್ತಿದ್ದ ಜಗಳವನ್ನಾಲಿಸಿ ಮೆಟ್ಟುಗತ್ತಿಯನ್ನು ಬಿಟ್ಟು ಎದ್ದಿದ್ದ ಸೇರೆಗಾರರು ಇದೇನೆಂದು ನೋಡುವ ಮೊದಲೇ ಸುಬ್ಬಮ್ಮನನ್ನು ಹಿಂಬಾಲಿಸಿ ಕೈಯಲ್ಲಿ ಕತ್ತಿ ಹಿಡಿದಿದ್ದ ಗೌಡರು ರೋಷಭೀಷಣರಾಗಿ ನುಗ್ಗಿದರು.

“ಅಯ್ಯೋ ಸತ್ತೇ ! ಸತ್ತೇ ! ಸೇರೆಗಾರರೇ” ಎಂದು ಅಬ್ಬರಿಸಿ ಕೂಗುತ್ತಾ ಸುಬ್ಬಮ್ಮ ತೆರೆದಿದ್ದ ಹೆಬ್ಬಾಗಿಲನ್ನು ಮಿಂಚಿನಂತೆ ದಾಟಿ ಮನೆಯ ಹೊರಗೆ ಧಾವಿಸಿದಳು. ಗೌಡರೂ ಹಿಂದೆಯೇ ನುಗ್ಗಿದರು. ಅಡಕೆ ಸುಲಿಯುತ್ತಿದ್ದವರೆಲ್ಲರೂ ಹಾಗೆ ಹಾಗೆಯೇ ದಡಬಡನೆ ಮೇಲೆದ್ದು ಹಿಂದೋಡಿದರು. ಚಳಿಜ್ವರ ಬಂದು ಉಪ್ಪರಿಗೆಯ ಮೇಲೆ ಮಲಗಿದ್ದ ರಾಮಯ್ಯನೂ ಗಾಬರಿಗೊಂಡು ದಡಬಡನೆ ಏಣಿ ಮೆಟ್ಟಿಲುಗಳನ್ನು ಹಾರಿ ಇಳಿದನು.

ಮಲೆನಾಡಿನ ನೀರವ ರಾತ್ರಿ ನಿಶ್ಚಲವಾಗಿತ್ತು. ಮುಗಿಲ ಮಧ್ಯೆ ಇದ್ದ ಅಪೂರ್ಣಚಂದ್ರನ ಮಂದಕಾಂತಿ ಮಾಯೆಯ ಮುಸುಗಿನಂತೆ ಗಿರಿವನಗಳ ಸ್ತಬ್ಧನಿದ್ರೆಯ ಮೇಲೆ ಕಾವು ಕೂತಿತ್ತು. ಆದರೆ ಕ್ಷಣಮಾತ್ರದಲ್ಲಿ ನಾಯಿ ಮತ್ತು ಮನುಷ್ಯರ ಕೂಗುವ ದನಿ ನಿಃಶಬ್ದತೆಯನ್ನು ಕಲಕಿಬಿಟ್ಟಿತು.

ಕೈಯಲ್ಲಿ ಕತ್ತಿ ಹಿಡಿದು ಅಟ್ಟುತ್ತಿದ್ದ  ಚಂದ್ರಯ್ಯಗೌಡರಿಗೆ ಸುಬ್ಬಮ್ಮ ಕಾಣಿಸಲಿಲ್ಲ. ಅಲ್ಲಲ್ಲಿ ದಟ್ಟಯಿಸಿದ್ದ ಮರಗಳ ನೆರಳುಗತ್ತಲೆಯಲ್ಲಿ ಆಕೆ ಕಣ್ಮರೆಯಾಗಿಬಿಟ್ಟಳು. ಕ್ರೋಧಾಂಧರಾಗಿದ್ದ ಗೌಡರು, ಗಾಯಗೊಂಡ ಹುಲಿ ಅಟ್ಟಣೆಯಲ್ಲಿ ಅಡಗಿರುವ ಬೇಟೆಗಾರನನ್ನು ಹುಡುಕುವಂತೆ, ದೀರ್ಘಶ್ವಾಸೋಚ್ಛಾಸಗಳನ್ನು ಬಿಡುತ್ತ ಹುಡುಕಾಡಿದರು. ಇದ್ದಕಿದ್ದಹಾಗೆ ನೆರಳಿನಲ್ಲಿ ಮರದ ಬುಡದಲ್ಲಿ ಯಾರೋ ಕೂತಿದ್ದ ಹಾಗೆ ಕಂಡುಬರಲು ಅಲ್ಲಿಗೆ ನುಗ್ಗಿ, ಕೈಲಿದ್ದ ಕತ್ತಿಯಿಂದ ಬಲವಾಗಿ ಒಂದು ಕೊಚ್ಚು ಹಾಕಿದರು. ಯಾರೂ ಕೂಗಲಿಲ್ಲ. ಕತ್ತಿಯೂ ಸಿಕ್ಕಿಕೊಂಡಿತು. ಗೌಡರು ಎಳೆದರೂ ಬರಲಿಲ್ಲ. ಅವರು ಹೊಡೆದದ್ದು ಒಂದು ಮರದ ದಿಂಡಾಗಿತ್ತು ! ಆದರೂ ಗೌಡರ ಭೀತಚಿತ್ತದಲ್ಲಿ ದೆವ್ವ, ಭೂತರಾಯ ಮುಂತಾದವುಗಳ ವಿಚಾರವಾದ ಭಯಭಾವಗಳು ಮೂಡಿ ಕಣ್ಣು ಕೆರಳಿ ಗಟ್ಟಿಯಾಗಿ ವಿಕಟವಾಗಿ ಕೂಗಿಕೊಂಡು ಕೆಳಗೆ ಬಿದ್ದರು.

ಗೌಡರನ್ನು ಮನೆಗೆ ಸಾಗಿಸಿದರು. ಸುಬ್ಬಮ್ಮನನ್ನು ಕರೆದು ಹುಡುಕಿದರು. ಆದರೆ ಪ್ರತ್ಯುತ್ತರವೂ ಬರಲಿಲ್ಲ. ಆಕೆ ಕಾಣಿಸಲೂ ಇಲ್ಲ.

ಬಹಳ ಹೊತ್ತು ಕರೆದು ಹುಡುಕಿದ ಮೇಲೆ ಎಲ್ಲರೂ ಹತಾಶರಾಗಿ ಭಯಾಶಂಕೆಗಳಿಂದ ಹಿಂತಿರುಗಿದರು. ಆದರೆ ಸೇರೆಗಾರರು ಹತಾಶರಾಗಲೂ ಇಲ್ಲ ; ಹಿಂತಿರುಗಲೂ ಇಲ್ಲ. ಆಳುಗಳ ಬಿಡಾರ, ಗಂಗೆಯ ಗುಡಿಸಲು ಈ ಕಡೆಗಳೆಲ್ಲ ಹುಡುಕುತ್ತಾ ಮೆಲ್ಲಗೆ ಹೆಸರು ಹಿಡಿದು ಕೂಗುತ್ತಾ ಹೊರಟರು.

ಹೊದರಿನಲ್ಲಿ ಅಡಗಿ ಕುಳಿತಿದ್ದ ಸುಬ್ಬಮ್ಮ ಬಹಳ ಹೊತ್ತಿನಮೇಲೆ ಚಳಿಯಿಂದ ನಡುಗತೊಗಿದಳು. ಜನರ ಸದ್ದು ಅಡಗಿದ ತರುವಾಯ ಆಕೆಗೆ ಭಯವೂ ಉಂಟಾಯಿತು. ಕ್ರಿಮಿಕೀಟಗಳೋ ಇರುವೆಗಳೋ ಮೈಮೇಲೆ ಗುಳುಗುಳು ಹರಿಯತೊಡಗಿದುವು. ಅಲ್ಲಿಂದ ಮೆಲ್ಲನೆ ಎದ್ದು ಹೊರಗೆ ಬಂದು, ಕ್ಷಣಕಾಲ ಅನಿರ್ದಿಷ್ಟಚಿತ್ತೆಯಾಗಿ ನಿಂತು, ಮುಂದೇನು ಮಾಡುವುದೆಂದು ಆಲೋಚಿಸಿದಳು. ಕಾನೂರಿನಲ್ಲಿ ಎಲ್ಲಿಯೂ ತನಗೆ ಕ್ಷೇಮವಿಲ್ಲ ಎಂದು ಭಾವಿಸಿ ನೆಟ್ಟಗೆ ಕೆಳಕಾನೂರಿಗೆ ಹೊರಟಳು.

ಗದ್ದೆ ಬಯಲಿನಲ್ಲಿ ಹೋಗುತ್ತಿದ್ದಾಗ ಹಿಂದೆ ಯಾರೋ ಬಂದಂತೆ ಸದ್ದಾಗಿ ನೋಡಿದಳು. ಯಾವುದೋ ಒಂದು ವ್ಯಕ್ತಿ ತನ್ನನ್ನು ಹಿಂಬಾಲಿಸುತ್ತಿದ್ದುದು ಗೊತ್ತಾಗಿ ಮತ್ತೆ ಓಡತೊಡಗಿದಳು. ಆ ವ್ಯಕ್ತಿಯೂ ಓಡುತ್ತಾ ಹಿಂಬಾಲಿಸಿತು.

ಸ್ವಲ್ಪ ದೂರ ಹೋಗುವುದರಲ್ಲಿ ಹಿಂದೆ ಬರುತ್ತಿದ್ದ ವ್ಯಕ್ತಿ ತನ್ನನ್ನು ಶೀಘ್ರದಲ್ಲಿಯೇ ಆಕ್ರಮಿಸುವನೆಂದು ಬಗೆದು, ಅಡ್ಡಹಾದಿ ಹಿಡಿದು ಓಡಿ, ಒಂದು ದೊಡ್ಡ ಮರದ ಬುಡದಲ್ಲಿ ಬೆಳೆದಿದ್ದ ಹಳುವಿನಲ್ಲಿ ಅವಿತುಕೊಂಡಳು. ಆಕೆ ನೋಡುತ್ತಿದ್ದ ಹಾಗೆಯೇ ಸೇರೆಗಾರ ರಂಗಪ್ಪಸೆಟ್ಟರು ಕೆಳಕಾನೂರಿನ ಹಾದಿ ಹಿಡಿದು ಅವಸರ ಅವಸರವಾಗಿ ಮುಂದೆ ಓಡಿದರು.

ಐದು ನಿಮಿಷ ಕಳೆದಿರಲಿಲ್ಲ. ಮೇಲೆ, ಮರದಮೇಲೆ ಯಾರೊ ಮೆಲ್ಲಗೆ ಕೆಮ್ಮಿದಂತಾಯಿತು. ಸುಬ್ಬಮ್ಮನಿಗೆ ದೆವ್ವ ಪಿಶಾಚಿಗಳಲ್ಲಿ ನಂಬುಗೆ ನಟ್ಟು ಹೋಗಿತ್ತು. (‘ದೆಯ್ಯ’ ವಾಸಿಸದ ದೊಡ್ಡ ಮರವಿಲ್ಲ ಎಂಬ ಭಾವ ಹಳ್ಳಿಗಳಲ್ಲಿ ‘ವೈಜ್ಞಾನಿಕ ಸಿದ್ಧಾಂತ’ವಾಗಿರುತ್ತದೆ.) ಮರದ ಕೊಂಬೆಯೊಂದು ಸ್ವಲ್ಪ ಅಲುಗಾಡಿದಂತಾಯಿತು. ಸುಬ್ಬಮ್ಮ ನಿಬ್ಬೆರಗಾಗಿ ಮೇಲೆ ನೋಡುತ್ತಾಳೆ : ಮನುಷ್ಯಾಕೃತಿಯೊಂದು ಕೆಳಗಿಳಿಯುತ್ತಿದೆ ; ಹೆಗಲ ಮೇಲೆ ಕಂಬಳಿಯಿಂದೆ ; ಕೈಯಲ್ಲಿದ್ದ ಕೋವಿಯ ! ನಳಿಗೆ ಆಕಾಶ ಪಟಕ್ಕೆದುರಾಗಲು ಆಗಾಗ ಮಷೀಚಿತ್ರವಾಗಿ ಗೋಚರಿಸುತ್ತದೆ ! ಕೋವಿಯನ್ನು ಕಂಡೊಡನೆ ಸುಬ್ಬಮ್ಮನಿಗೆ ಧೈರ್ಯವಾಯಿತು. ಯಾರೋ “ಮರಸಿ”ಗೆ ಕೂತಿದ್ದಾರೆಂದು. ಕಾಡುಹಂದಿಗಳಿಗಾಗಿ ಕೂತಿದ್ದ ಆ ಬೇಟೆಗಾರ ಮರದ ಬುಡದವರೆಗೂ ನಿಧಾನವಾಗಿ ಇಳಿದು ಬಂದು ನೆಲಕ್ಕೆದೊಪ್ಪನೆ ನೆಗೆದು, ನಿಂತು “ಯಾರದು ?” ಎಂದನು.

ಸುಬ್ಬಮ್ಮನಿಗೆ ಪುಟ್ಟಣ್ಣನ ಧ್ವನಿ ಕೇಳಿಸಿ ಜೀವ ಬಂದಂತಾಗಿ ಆಡಗಿದ್ದ ಸ್ಥಳದಿಂದ ಹೊರಗೆ ಬಂದು ನಡುಕದನಿಯಿಂದ ಶೋಕಪೂರ್ಣವಾಗಿ “ನಾನು ಕಣೋ, ಪುಟ್ಟಣ್ಣಾ ! ನನ್ನ ಗತಿ ಇಲ್ಲಿಗೆ ಬಂತಪ್ಪಾ !” ಎಂದಳು.

ಸಿಡಿಲು ಬಡಿದಿದ್ದರೂ ಪುಟ್ಟಣ್ಣನಿಗೆ ಅಷ್ಟು ಆಶ್ಚರ್ಯವಾಗುತ್ತಿರಲಿಲ್ಲ.

“ಯಾರು ? ಸುಬ್ಬಮ್ಮ ಹೆಗ್ಗಡಿತೇರೇನು ?” ಎಂದನು.

ಸುಬ್ಬಮ್ಮ ಸಂಕ್ಷೇಪವಾಗಿ ನಡೆದುದನ್ನೆಲ್ಲ ಹೇಳಿದಳು. ಪುಟ್ಟಣ್ಣ ಮುಂದೆ ನಡೆದನು. ಹಿಂದೆ ಸುಬ್ಬಮ್ಮ ಕಣ್ಣೊರೆಸಿಕೊಳ್ಳುತ್ತಾ ಬಿಕ್ಕಳಿಸುತ್ತಾ ನಡೆದಳು.

ಕೆಳಕಾನೂರಿನ ಹುಲ್ಲು ಮನೆಯ ಮುಂದುಗಡೆ ಉರಿಯುತ್ತಿದ್ದ ಒಂದು ಲಾಟೀನಿನ ಬಳಿ ಸೇರೆಗಾರರೂ ಹೂವಯ್ಯನೂ ಉದ್ವೇಗದಿಂದ ಮಾತಾಡುತ್ತಿದ್ದರು.

ನಾಯಿಗಳು ಬೇಟೆಗೆ ಹೊರಡುತ್ತಾರೆಯೊ ಏನೊ ಎಂದು ಬಾಲವಲ್ಲಾಡಿಸುತ್ತಿದ್ದುವು, ಸುತ್ತಿ ನಿಂತು.

“ಈ ರಾತ್ರಿ ಎಲ್ಲಿಗೆ ಹೋದರು ?” ಎಂದನು ಹೂವಯ್ಯ.

“ಏನೋ ಗೊತ್ತಿಲ್ಲ ಕಾಣಿ. ಗದ್ದೆ ಬಯಲಿನಲ್ಲಿ ಕಾನಿಸಿಕೊಂಡರು. ಮತ್ತೆ ಕಾಣಿಸಲಿಲ್ಲ. ಅವರ ಮನಸ್ಸು ನೆಲ್ಲುಹಳ್ಳಿಗೆ ಹೋಪುದಂಬುದಾಗಿ ಕಾಣ್ತದೆ.”

“ನೀವೊಬ್ಬರೇ ಹಿಂದೆ ಬಂದಿರೇನು ? ಉಳಿದವರೆಲ್ಲಿ ?”

“ಅವರೆಲ್ಲರೂ ಹುಡುಕಿ ಹುಡುಕಿ ಸಾಕಾಗಿ ಹೋದರು.”

ಹೂವಯ್ಯ ಸೇರೆಗಾರರ ಮುಖವನ್ನು ಸಂಶಯಾತ್ಮಕವಾದ ತೀಕ್ಷ್ಣದೃಷ್ಟಿಯಿಂದ ನೋಡಿದಳು ! ನಾಯಿಗಳು ಬಗುಳಿದುವು. ಪುಟ್ಟಣ್ಣ “ಹಚಾ ! ಇವಕ್ಕೇನು ಕಣ್ಣು ಹೊಟ್ಟಿಹೋಗಿದೆಯೇನು ?” ಎಂದು ಮುಂದೆ ಲಾಟೀನಿನ ಬೆಳಕಿಗೆ ಬಂದನು.

ಹೂವಯ್ಯನ ಅವನಿಗೆ ಸುದ್ದಿಯನ್ನು ಹೇಳಲು ತೊಡಗುವಷ್ಟರಲ್ಲಿ ಸುಬ್ಬಮ್ಮನೂ ಹಿಂದಿನಿಂದ ಕಾಣಿಸಿಕೊಂಡಳು. ಪುಟ್ಟಣ್ಣ ನಡೆದುದನ್ನೆಲ್ಲ ಎರಡು ಮಾತಿನಲ್ಲಿ ಹೇಳಿದಮೇಲೆ ಎಲ್ಲರೂ ಮನೆಯೊಳಗೆ ಹೋದರು.

ಹೂವಯ್ಯ ಗಾಢನಿದ್ರೆಯಲ್ಲಿದ್ದ ತಾಯಿಯನ್ನು ಎಚ್ಚರಿಸಿ, ಸಂಗತಿಯನ್ನು ತಿಳಿಸಿದನು. ಸುಬ್ಬಮ್ಮ ನಾಗಮ್ಮನವರ ಕೊಠಡಿಯಲ್ಲಿ ಮಲಗಿದ ಮೇಲೆ ಹೂವಯ್ಯ ಪುಟ್ಟಣ್ಣ ಮತ್ತು ಸೇರೆಗಾರರು ಬಹಳ ಹೊತ್ತು ಆಕೆಗೊದಗಿದ ದುಃಖಸ್ಥಿತಿಯನ್ನು ಕುರಿತು ಮಾತಾಡುತ್ತಿದ್ದರು.

ಮರುದಿನ ಮುಂಜಾನೆ ಸುಬ್ಬಮ್ಮ ತವರೂರಿಗೆ ಹೋಗುತ್ತೇನೆಂದು ಹಟ ಮಾಡಿದಳು. ಸೇರೆಗಾರರು ತಾನೇ ಆಕೆಯನ್ನು ನೆಲ್ಲುಹಳ್ಳಿಗೆ ಕರೆದೊಯ್ಯುತ್ತೇನೆಂದು ಮುಂದೆ ಬಂದರು. ಹೂವಯ್ಯ ಪುಟ್ಟಣ್ಣನನ್ನು ಗುಟ್ಟಾಗಿ ಕರೆದು, ಅವನ ಕಿವಿಯಲ್ಲಿ ಏನನ್ನೋ ಹೇಳಿದಮೇಲೆ, ಅವನು ಸೇರೆಗಾರರನ್ನು ಕುರಿತು “ಸೇರೆಗಾರರೇ, ನನಗೂ ಕೆಲಸ ಇದೆ ನೆಲ್ಹಳ್ಳೀಲಿ. ನಾನೂ ಬರ್ತೇನೆ ನಿಮ್ಮ ಜೊತೇಲೆ” ಎಂದನು.

ಸೇರೆಗಾರರು ಹತಾಶರಾದಂತಾಗಿ “ಹಾಂಗಾದ್ರೆ ನೀವೇ ಹೋಗಿನಿ ! ಹೋಪವರು ಯಾರೂ ಇಲ್ಲ ಅಂಬುದಾಗಿ ನಾನೇ ಹೋಗುತ್ತೇನೆ ಅಂದೆ ! ಅಷ್ಟೇ ! ಹಾಂಗಾದರೆ ನೀವೆ ಹೋಗಿನಿ. ನಾ ಬತ್ತೆ !” ಎಂದು ಹೇಳಿ ಕಾನೂರಿಗೆ ನಡೆದರು.

ಸೇರೆಗಾರರು ಮನಸ್ಸಿನಲ್ಲಿ ಹೂವಯ್ಯನನ್ನೂ ಪುಟ್ಟಣ್ಣನನ್ನೂ ಕಡಿಯುತ್ತಾ ಹೋದರು. ತರುವಾಯವಾದರೂ ಚಂದ್ರಯ್ಯಗೌಡರ ಕಿವಿಯಲ್ಲಿ ಅವರಿಬ್ಬರ ಮೇಲೆಯೂ ಅಸಹ್ಯವಾದ ನಿಂದೆ ಬರುವಂತಹ ಅಪವಾದವನ್ನು ಉಸಿರದಿರಲಿಲ್ಲ. ಚಂದ್ರಯ್ಯಗೌಡರು ಸುಬ್ಬಮ್ಮನನ್ನು ಎಷ್ಟು ತ್ಯಜಿಸಿದರೆ ಎಷ್ಟು ದ್ವೇಷಿಸಿದರೆ ಅದರಿಂದ ಅಷ್ಟೂ ಪ್ರಯೋಜನ ತಮಗುಂಟೆಂಬುದು ಅವರ ಮನೋಹರಹಸ್ಯವಾಗಿತ್ತು.

ಯಾವ ಹುತ್ತದಲ್ಲಿ ಯಾವಾಗ ಮೊಟ್ಟೆಯೊಡೆದು ಹಾವಿನಮರಿ ಹೆಡೆಯೆತ್ತುತ್ತದೆಯೋ ಹೇಳುವುದು ಕಷ್ಟ !