ವಾಸು ಬೆಳಗ್ಗೆ ಅಡುಗೆ ಮನೆಯಿಂದ ಜಗಲಿಗೆ ನುಗ್ಗಿ ಬಂದವನು ಸ್ವಲ್ಪ ಸಾವಧಾನವಾಗಿ ನೋಡಿದ್ದರೆ, ತನ್ನ ತಂದೆಯೊಡೆನೆ ಮಾತಾಡುತ್ತಿದ್ದರು ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರು, ಕೆಳಕಾನೂರು ಅಣ್ಣಯ್ಯಗೌಡರು, ಹಳೆಪೈಕದ ತಿಮ್ಮ ಎಂಬುದು ಗೊತ್ತಾಗುತ್ತಿತ್ತು. ಅವರವರು ಅವರವರ ಮಾನಕ್ಕೆ ತಗುವ ಸ್ಥಾನಗಳಲ್ಲಿ ಕುಳಿತಿದ್ದರು. ಪ್ರತಿಯೊಬ್ಬರ ವೇಷವೂ ಅವರವರ ಸಂಸ್ಕೃತಿ ಸಂಪತ್ತುಗಳಿಗೆ ಸಾಕ್ಷಿಯಾಗಿತ್ತು.

ತೆಳ್ಳಗೆ ಉದ್ದವಾಗಿದ್ದು, ಎಡಗಣ್ಣು ಹೂಕೂತು ಕುರುಡಾಗಿದ್ದ ವೆಂಕಪ್ಪಯ್ಯನವರು ಗೋಡೆಯ ಪಕ್ಕದಲ್ಲಿಟ್ಟಿದ್ದ ಅಗಲವಾದ ಒಂದು ಮಣೆಯ ಮೇಲೆ ಪದ್ಮಾಸನ ಹಾಕಿ ಕುಳಿತಿದ್ದರು. ಏಕೆಂದರೆ, ಶೂದ್ರರ ಮನೆಯ ಜಮಖಾನ ಮೊದಲಾದ ವಸ್ತ್ರಾದಿಗಳನ್ನು ಮುಟ್ಟುವುದು ಸಂಪ್ರದಾಯ ಬ್ರಾಹ್ಮಣರಾಗಿದ್ದ ಅವರ ಮಡಿಗೆ ಮೈಲಿಗೆ ಎಂದು ಅವರ ಮತವಾಗಿತ್ತು. ಅವರು ಅಂಗಿ ಮೊದಲಾದ ನವೀನ ವಸನಗಳನ್ನು ತೊಟ್ಟಿರಲಿಲ್ಲ. ಆರ್ಷೇಯವಾಗಿ ಬಂದಿದ್ದ ಮೈ ಚರ್ಮವೇ ಅವರಿಗೆ ವಸನವಾಗಿತ್ತು. ಆದರೆ ಗೌರವಾರ್ಥವಾಗಿ ಒಂದು ಬಿಳಿಯ ಬಟ್ಟೆಯನ್ನು ಹೊದೆದಿದ್ದರು; ಮೊಳಕಾಲಿನವರೆಗೆ ಕಚ್ಚಿಹಾಕಿದ್ದರು. ಅವರ ಉಡುಗೆಯೆಲ್ಲವೂ ಶುಭ್ರವಲ್ಲದಿದ್ದರೂ ಧೌತವಾಗಿತ್ತು. ಸ್ವಲ್ಪ ಚೆನ್ನಾಗಿ ನೋಡಿದ್ದರೆ ಸೊಂಟದಲ್ಲಿ ನಶ್ಯದ ಡಬ್ಬಿಯನ್ನು ಸಿಕ್ಕಿಸಿದ್ದಾರೆ ಎಂಬುದೂ ಗೊತ್ತಾಗುತ್ತಿತ್ತು. ಅವರ ಉದ್ಯೋಗಗಳಲ್ಲಿ ಮುಖ್ಯವಾದುದೆಂದರೆ ದೇವರ ಪೂಜೆ, ನಿಮಿತ್ತ ನೋಡುವುದು, ಭವಿಷ್ಯತ್ತು ಹೇಳುವುದು, ಜಾತಕ ಬರೆಯುವುದು ಮತ್ತು ನೋಡುವುದು, ಲಗ್ನಕ್ಕೆ ಮೂಹೂರ್ತ ಇಟ್ಟುಕೊಡುವುದು, ಶೂದ್ರರ ಭೂತಾದಿಗಳಿಗೆ ರಕ್ತದ ಬಲಿಕೊಡುವ ಮೊದಲು ಹಣ್ಣು ಕಾಯಿ ಮಾಡುವುದು, ಮಂತ್ರದಿಂದ ದೆವ್ವಗಳನ್ನು ಬಿಡಿಸುವುದು ಮತ್ತು ಹಿಡಿಸುವುದು. ಇತ್ಯಾದಿ. ಆದಕಾರಣ ಹಳ್ಳಿಯವರಿಗೆಲ್ಲ ಅವರನ್ನು ಕಂಡರೆ ಭಯ, ಭಕ್ತಿ.

ಜಗಲಿಯ ತೆಣೆಯಲ್ಲಿ ಹಾಸಿದ್ದ ಮಲಿನವಾದ ಜಮಖಾನದ ಮೇಲೆ ಚಂದ್ರಯ್ಯಗೌಡರಿಗೆ ಅಭಿಮುಖವಾಗಿ ಕುಳಿತಿದ್ದ ವ್ಯಕ್ತಿ ಕೆಳಕಾನೂರು ಅಣ್ಣಯ್ಯಗೌಡರು. ಅವರು ತಮ್ಮ ವಯಸ್ಸಿಗಿಂತಲೂ ಹೆಚ್ಚಾಗಿ ಮುದುಕರಾಗಿದ್ದರು. ಒಂದು ಅಂಗಿ ಹಾಕಿ. ಮೊಳಕಾಲಿನವರೆಗೆ ಅಡ್ಡಪಂಚೆ ಸುತ್ತಿದ್ದರು. ಬಟ್ಟೆಯೊಗೆಯದೆ ಎಷ್ಟು ವರ್ಷಗಳಾಗಿದ್ದವೋ ಏನೋ! ಅಂಗಿಗೆ ಮೇಲಿನ ಗುಂಡಿಗಳಿರಲಿಲ್ಲ; ಇದ್ದ ಕೆಳಗಣವುಗಳನ್ನೂ ಹಾಕಿರಲಿಲ್ಲ. ಷರ್ಟು ಅವರ ಭಾಗಕ್ಕೆ ಮೊಲದ ಕೊಂಬಾಗಿತ್ತು. ಆದ್ದರಿಂದ ಬಿಳಿಯ ಕೂದಲು ತುಂಬಿದ್ದ ಅವರ ಎದೆಯೂ ಸುಕ್ಕುಸುಕ್ಕಾಗಿದ್ದ ಹೊಟ್ಟೆಯೂ ಕನಿಕರ ಹುಟ್ಟಿಸುವಂತೆ ಕಾಣಿಸುತ್ತಿದ್ದುವು. ಒಂದೆರಡು ದಿನಗಳ ಹಿಂದೆ ಕ್ಷೌರ ಮಾಡಿಸಿಕೊಂಡಿದ್ದ ಅವರ ಮುಖದ ಮೇಲೆ ಮುದಿತನದ ತೆರೆಗಳು ಒಂದರ ಮೇಲೊಂದಾಗಿ, ಒಂದರ ಹಿಂದೊಂದಾಗಿ ಅಪ್ಪಳಿಸಿದ್ದವು. ಹಲ್ಲಿಲ್ಲದ ಬೋಡುಬಾಯಿಯ ದೆಸೆಯಿಂದ ಕೆನ್ನೆಗಳು ಕಣಿವೆಯಾಗಿದ್ದವು, ಅರವತ್ತು ಎಪ್ಪತ್ತು ಬೇಸಗೆಗಳ ಬಿಸಿಲಿನಲ್ಲಿ ಸುಟ್ಟು ಸುಟ್ಟು ಕಪ್ಪಾಗಿದ್ದ ಅವರ ಮುಖಚರ್ಮದ ಹಿಂದೆ ಗಲ್ಲ ಕೆನ್ನೆ ಮತ್ತು ತಲೆಯ ಎಲುಬುಗಳೂ ನರಗಳೂ ಚಾಚಿಕೊಂಡಿದ್ದವು. ನುಣ್ಣಗೆ ಬೋಡಾಗಿದ್ದು, ಮಧ್ಯೆ ಬಿಳಿಯ ಕೂದಲು ವಿರಳವಾಗಿ ಬೆಳೆದಿದ್ದ ತಲೆಗೆ ಒಂದು ಕೆಂಪು ವಸ್ತ್ರ ಸುತ್ತಿದ್ದರು. ಅವರು ಮಾತಾಡಿದರೆ ಹಸುಳೆಯ ತೊದಲೂ ಧ್ವನಿಯಲ್ಲಿ ಇ ಕಾರ ಪ್ರಾಧಾನ್ಯವೂ ಕಂಡುಬರುತ್ತಿತ್ತು.

ಅಣ್ಣಯ್ಯಗೌಡರು ಕಾನೂರಿಗೆ ಹೆಚ್ಚುಕಡಿಮೆ ಒಂದು ಮೈಲಿ ದೂರವಿದ್ದ ಕೆಳಕಾನೂರಿನಲ್ಲಿ ಚಂದ್ರಯ್ಯಗೌಡರ ಗದ್ದೆ ತೋಟಗಳನ್ನು ಗಡಿ ಗುತ್ತಿಗೆಗೆ ಮಾಡಿಕೊಂಡು ಒಕ್ಕಲಾಗಿದ್ದರು. ಅವರಿಗೆ ಚಂದ್ರಯ್ಯಗೌಡರ ತಂದೆ ತಾತ ಎಲ್ಲರೂ ಪರಿಚಿತರಾಗಿದ್ದರು. ಒಕ್ಕಲುತನದಲ್ಲಿ ಮೊದಲು ನೆಮ್ಮದಿಯಾಗಿದ್ದವರು ಹೆಣ್ಣುಗಳಿಗಾಗಿ ತೆರವನ್ನು ತೆತ್ತೂ ತೆತ್ತೂ ಈಚೆಗೆ ಬಹಳ ದರಿದ್ರಾವಸ್ಥೆಗೆ ಇಳಿದಿದ್ದರು. ಅವರ ಗ್ರಹಚಾರಕ್ಕೆ ತಕ್ಕಂತೆ ಮೂವರು ಹೆಂಡಿರೂ ಸತ್ತು ನಾಲ್ಕನೇ ಹೆಂಡತಿಯೂ ರೋಗದಿಂದ ನರಳುತ್ತಿದ್ದಳು. ಅವರ ದ್ವಿತೀಯ ಪತ್ನಿಯಲ್ಲಿ ಹುಟ್ಟಿದ್ದ ಓಬಯ್ಯನೆಂಬ ಮಗನಿಗೆ ಇಪ್ಪತ್ತೈದು ವರ್ಷವಾಗಿತ್ತು. ತೃತೀಯ ಪತ್ನಿಗೆ ಏಳೆಂಟು ವರುಷದ ಹುಡುಗಿಯೊಬ್ಬಳಿದ್ದಳು.

ಓಬಯ್ಯನಿಗೆ ವಯಸ್ಸು ಇಪ್ಪತ್ತೈದಾಗಿದ್ದರೂ ಇನ್ನೂ ವಿವಾಹವಾಗಿರಲಿಲ್ಲ.  ಆದಕಾರಣವಾಗಿ ತಂದೆ ಮಕ್ಕಳಿಗೆ ಇತರ ವ್ಯಾಜಾಂತರಗಳಿಂದ ಮನಸ್ತಾಪವುಂಟಾಗಿ ಓಬಯ್ಯನು ತಾನು ಬೇರೆ ಸಂಸಾರ ಹೂಡುತ್ತೇನೆಂದು ಹೆದರಿಸುತ್ತಿದ್ದನು. ವಿಹಾರವಾಗದಿದ್ದುದಕ್ಕೆ ಕಾರಣ, ತೆರ ಕೊಡಲು ಹಣವಿರಲಿಲ್ಲ. ಚಂದ್ರಯ್ಯಗೌಡರಲ್ಲಿ ಆಗಲೇ ಸಾವಿರ ರೂಪಾಯಿ ಸಾಲವಿದ್ದುದರಿಂದ ಅವರು ಇನ್ನು ಮುಂದೆ ಒಂದು ಕಾಸನ್ನೂ ಕೊಡುವುದಿಲ್ಲವೆಂದು ಹಟ ಹೂಡಿದ್ದರು. ಅದಕ್ಕಾಗಿಯೇ ಅಣ್ಣಯ್ಯಗೌಡರು ಆ ದಿನ ಬೆಳಗ್ಗೆ ಕಾನೂರಿಗೆ ಬಂದಿದ್ದರು. ಆ ಮುದುಕನಿಗೆ ಜೀವನವೆಲ್ಲ ನರಕಯಾತನೆಯಂತೆ ಇದ್ದಿತು ಎಂಬುದನ್ನು ಆತನನ್ನು ಕಂಡೊಡನೆ ಹೇಳಬಹುದಾಗಿತ್ತು.

ಕೆಳಗೆ ದೂರದಲ್ಲಿ ಕಿರುಜಗಲಿಯ ಕೆಸರುಹಲಗೆಯ ಮೇಲೆ, ತನ್ನ ಕಂಬಳಿ ಹಾಕಿಕೊಂಡು ಅದರ ಮೇಲೆ ಕೂತಿದ್ದ ಮೂರನೆಯವನು ಹಳೆಪೈಕದ ತಿಮ್ಮ. ಅವನೂ ಚಂದ್ರಯ್ಯಗೌಡರ ಒಕ್ಕಲು. ಆದರೆ ಕುಲಕಸಬು ಬಗನಿಕಟ್ಟಿ ಕಳ್ಳು ಇಳಿಸುವುದು. ಕಳ್ಳಿನ ಮಹಿಮೆಯಿಂದಲೆ ಚಂದ್ರಯ್ಯಗೌಡರಿಗೆ  ಅಚ್ಚುಮೆಚ್ಚಾಗಿದ್ದನು. ಅವನ ಜೀವನವು ಸರಾಗವಾಗಿತ್ತೆಂಬುದು ಅವನ ಮೈಕಟ್ಟಿನಿಂದ ಸ್ಪಷ್ಟವಾಗುತ್ತಿತ್ತು. ಹತ್ತಾರು ತೇಪೆ ಹಾಕಿದ್ದ ಹರಕು ಅಂಗಿಯೊಂದನ್ನು ತೊಟ್ಟು ಕಸೆ ಕಟ್ಟಿದ್ದನು. ಹರಿದು ಕಿಟಕಿಯಾಗಿದ್ದ ಅವನ ಅಂಗಿಯ ಬಲತೋಳಿನಲ್ಲಿ ಕರಿಯ ಹಗ್ಗದಿಂದ ಸುತ್ತಿದ್ದ ಒಂದು ತಾಯಿತಿ ಕಾಣುತ್ತಿತ್ತು. ಕೆದರಿಕೊಂಡಿದ್ದ ಅವನ ಮುಡಿಯಲ್ಲಿ ಒಂದು ಹೊಸ ಮಲ್ಲಿಗೆ ಹೂವಿನ ಗೊಂಡೆಯಿತ್ತು! ಅವನು ಸುತ್ತಿಕೊಂಡಿದ್ದ ಕೊಳೆ ಪಂಚೆ ಎಷ್ಟು ಮೋಟಾಗಿತ್ತೆಂದರೆ ಕೌಪೀನ ಪ್ರಂಪಚವು ಗೊತ್ತಾಗುತ್ತಿತ್ತು. ಹಿಂದೆ ಒಂದು ಸಾರಿ ಬಗನಿಯ ಮರದಿಮದ ಕೆಳಗೆ ಬಿದ್ದು ಅವನ ಮೇಲುತುಟಿ ಹರಿದುಹೋಗಿದ್ದುದು ಅಲ್ಲಿದ್ದ ಕಲೆಯಿಂದ ಗೊತ್ತಾಗುತ್ತಿತ್ತು. ಅಡಕೆ ಚಪ್ಪರದ  ಕಂಡಿಗಳಲ್ಲಿ ತೂರಿಬರುತ್ತಿದ್ದ ಬಿಸಿಲು ಕೋಲುಗಳು ಅವನ ಮೈಮೇಲೂ ಸುತ್ತಲೂ ಬಲೆ ಬಲೆಯಾಗಿ ಬಿದ್ದಿದ್ದುವು. ” ಕೊತ್ವಾಲ” ನು ಕಾಲಬುಡದಲ್ಲಿ ಮಲಗಿ, ಅವನು ತನ್ನ ನೀವಿ ದಂತೆಲ್ಲ ಒಂದು ಅಂಗುಲ ಉದ್ದದ ತನ್ನ ಬಾಲದಿಂದ ಹರ್ಷಪ್ರದರ್ಶನ ಮಾಡುತ್ತಿತ್ತು.

ಚಂದ್ರಯ್ಯಗೌಡರು ತಮ್ಮ ಬೀರುವಿನ ಪಕ್ಕದಲ್ಲಿ ಲೆಕ್ಕಪತ್ರಗಳ ನಡುವೆ ಮಂಡಿಸಿ ಎಲ್ಲರೊಡನೆಯೂ ಸಂಭಾಷಣೆ ನಡೆಸುತ್ತಿದ್ದರು. ಎಲ್ಲರೂ ಗಟ್ಟಿಯಾಗಿ ಮಾತಾಡುತ್ತಿದ್ದರು. ಅದಕ್ಕೆ ಕಾರಣ ಸಾಹುಕಾರರ ಎರಡು ಕಿವಿಗಳಲ್ಲಿಯೂ ಕಾಣುತ್ತಿದ್ದ ಹತ್ತಿಯ ಮುದ್ದೆಗಳು! ಅವರ ಕಿವಿಗಳೆರಡೂ ಸೋರಿ ಸೋರಿ ಮಂದವಾಗಿದ್ದುವು. ಆದ್ದರಿಂದ ಸದಾ ಮದ್ದಿನೆಣ್ಣೆ ಹಾಕಿ, ಹತ್ತಿ ಇಡುತ್ತಿದ್ದುದು ಅವರ ದೈನಂದಿನ ಕಾರ್ಯಕ್ರಮವಾಗಿ ಹೋಗಿತ್ತು.

ತಲೆಬಾಗಿ ಲೆಕ್ಕದ ಪುಸ್ತಕದ ಕಡೆಗೇ ನೋಡುತ್ತಿದ್ದ ಚಂದ್ರಯ್ಯಗೌಡರು ತಲೆಯೆತ್ತಿ ಅಣ್ಣಯ್ಯಗೌಡರನ್ನು ಕುರಿತು ತಾವು ಹಿಂದೆಯೇ ಹೇಳಿದ್ದುದನ್ನು ಮತ್ತೆ ಸಮರ್ಥಿಸುವ ಧ್ವನಿಯಿಂದ” ಇಲ್ಲಿ ನೋಡು, ಬಡ್ಡಿ ಕೂಡಿ ಸಾವಿರದ ಇನ್ನೂರು ಮುಕ್ಕಾಲು ಮೂರು ವೀಸ ಬೇಳೆ ಆರು ಪೈ ಆಗ್ತದೆ ಬಾಕಿ” ಎಂದು ಪುಸ್ತಕವನ್ನು ಅವಲೋಕನಕ್ಕಾಗಿ ಸ್ವಲ್ಪ ಮುಂದೆ ಚಾಚಿದರು.

ಅಣ್ಣಯ್ಯಗೌಡರು ಲೆಕ್ಕವನ್ನು ಅವಲೋಕಿಸಲು ಸ್ವಲ್ಪವೂ ಕುತೂಹಲ ತೋರದೆ, ತಾಂಬೂಲ ತುಂಬಿದ್ದ ಬಾಯನ್ನು ಎತ್ತಿ ” ಹೌದು, ಣಾಣೇಣು ಅಳ್ಳ ಅಂಟೀಣೆ?” ಎಂದರು.

ಸಾಹುಕಾರರು ಪುಸ್ತಕವನ್ನು ಇನ್ನೂ ಸ್ವಲ್ಪ ಮುಂದಕ್ಕೆ ಸರಿಸಿ” ನೋಡು, ನೀನೇ ನೋಡು!”ಎಂದರು.

ಅಣ್ಣಯ್ಯಗೌಡರಿಗೆ ಓದುಬರಹ ಲೇಶಮಾತ್ರವೂ ಬರುತ್ತಿರಲಿಲ್ಲ. ಆದರೂ ಅರ್ಥವಿಲ್ಲದೆ ಅನೇಕ ಇತರ ಕರ್ಮಕ್ರಿಯೆಗಳನ್ನು ಮಾಡುವಂತೆ, ಮುಂದೆ ಬಾಗಿ ಪುಸ್ತಕವನ್ನು ನೋಡಿ. ಮೊದಲು ಹೇಳಿದುದನ್ನೇ ಮತ್ತೆ ಉಚ್ಚರಿಸಿದರು.

“ನನ್ನಿಂದ ಇನ್ನೊಂದು ಕಾಸೂ ಕೊಡೋಕೆ ಆಗೋದಿಲ್ಲ. ಕೊಟ್ಟ ಬಾಕೀನೇ ತೀರಿಸಿದರೆ ಸಾಕಾಗಿದೆ” ಎಂದರು. ಸಾಹುಕಾರರು.

“ಏಣು ಮಾಡೋಡು ಹೇಳಿ. ಅವಣಿಗೊಂಡು ಲಗ್ಣ ಮಾಡ್ಬೇಕೋ ಬೇಡೋ….ಣಿಮ್ಮ ಸಾಳ ಣಾಣೇಣೂ ಣುಂಗಾದಿಳ್ಳ…. ಣಾಣೊಂಡು ಯಾಳೇ ಸಟ್ರೂ ಅವಣಿಡ್ಡಾಣಲ್ಲ ಟೀರ್ಸೋಕೆ…” ಎಂದು ಅಣ್ಣಯ್ಯಗೌಡರು ಎದ್ದು ಹೋಗಿ ಅಂಗಳದ ಒಂದು ಮೂಲೆಯಲ್ಲಿ ಬತ್ತದ ಹೊಟ್ಟು ತುಂಬಿಟ್ಟಿದ್ದ ಒಂದು ಡಬ್ಬಕ್ಕೆ ಬಾಯಿತುಂಬಿದ್ದ ತಾಂಬೂಲವನ್ನು ಉಗುಳಿ ಹಿಂದಕ್ಕೆ ಬಂದು ಕೂತರು.

“ನೀ ಲಗ್ನ ಮಾಡೋದು ಬ್ಯಾಡ ಅಂತ ಹೇಳಿದೆನೇ ನಾನು? ನನ್ನಿಂದ ಒಂದು ಕಾಸೂ ಕೇಳಬೇಡ. ಈ ವರ್ಷದ ಗುತ್ತಿಗೇನೂ ಪೂರಾ ಕೊಟ್ಟಿಲ್ಲ ನೀನು” ಎಂದು ಕಠಿನವಾಗಿ ನುಡಿದ ಸಾಹುಕಾರರು ವೆಂಕಪ್ಪಯ್ಯನವರ ಕಡೆಗೆ ತಿರುಗಿ” ನೀವೆ ಹೇಳಿ ಜೋಯಿಸರ, ಯಾರ್ಮನೆ ಹಾಳಾಗ್ಬೇಕು. ಹೀಂಗೆ ಸಾಲ ಕೊಡ್ತಾ ಹೋದರೆ?” ಎಂದರು.

ಜೋಯಿಸರು ಅಣ್ಣಯ್ಯಗೌಡರನ್ನು ಕುರಿತು “ಹೌದು ಕಣೋ, ಅಣ್ಣಯ್ಯ, ನಿನಗಿಷ್ಟು ವಯಸ್ಸಾಗಿದೆ. ಇನ್ನೂ ಗೊತ್ತಾಗುವುದಿಲ್ಲವೇನೋ? ಸಾಲ ಮಾಡುತ್ತಲೇ ಇದ್ದುಬಿಟ್ಟರೆ ಬೆಳೆಯುತ್ತಲೇ ಹೋಗುತ್ತದೆ. ಅದನ್ನು ಯಾವಾಗ ತೀರಿಸುವುದು? ಋಣ ಎಂಬುದು ಕುತ್ತಿಗೆಗೆ ಕಲ್ಲುಗುಂಡು ಕಟ್ಟಿಕೊಂಡ ಹಾಗೆ. ” ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ” ಎಂದು ಮೊದಲಾಗಿ ಸಣ್ಣ ಉಪನ್ಯಾಸ ಮಾಡಿದರು. ಜೋಯಿಸರಿಗೂ ಸಾಹುಕಾರರಲ್ಲಿ ಐನೂರರ ಮೇಲೆಯೇ ಸಾಲವಾಗಿತ್ತು.

“ಹೌದು ಸ್ವಾಮಿ, ನೀವೇನೋ ಹೇಳ್ತೀರಿ. ಈಗ ಕಲ್ಲುಗುಂಡು ಕಟ್ಟಿಕೊಂಡಾಗಿದೆಯಲ್ಲ. ಏನು ಮಾಡೋದು? ಹುಡುಗನಿಗೂ ನನಗೂ ದಿನಾನು ಜಟಾಪಟಿ. ವಯಸ್ಸು ಇಪ್ಪತ್ತೈದಾಗಿ ಹೊಯ್ತು. ಮದುವೆ ಮಾಡದಿದ್ರೆ ಮನೆ ಬಿಟ್ಟು ಹೋಗ್ತೀನಿ ಅಂತಾನೆ. ಮನ್ನೆ ಸೀತೆಮನೆ ಸಿಂಗಪ್ಪಗೌಡ್ರ ಹತ್ರ ಹೋಗಿ, ನಂಗೊತ್ತೇ ಇಲ್ಲ. ಸಾಲ ಕೇಳಿದನಂತೆ. ಅವರು ನಿಮ್ಮ ಗೌಡರಿಗೂ ನನಗೂ ಮೊದಲೇ ಸರಿಯಿಲ್ಲ. ನನ್ನ ಹತ್ರಕ್ಕೆ ಬರ‍್ಬೇಡ ಅಂದ್ರಂತೆ….” ಎಂದು ಅಣ್ಣಯ್ಯ ಗೌಡರು ಜೋಯಿಸರಿಗೆ ಹೇಳಿ ಮುಗಿಸುವಷ್ಟರಲ್ಲಿಯೇ ಚಂದ್ರಯ್ಯಗೌಡರು ರೇಗಿ;

“ಹೋಗೂ, ಅವನಿಗೆ ಹೇಳು, ಸಿಂಗಪ್ಪಗೌಡ್ರ ಹತ್ರಾನೆ ಸಾಲ ಕೇಳೂ ಅಂತ. ನನ್ನಿಂದ ಒಂದು ಕಾಸೂ ಹುಟ್ಟೋದಿಲ್ಲ.” ಎಂದು ಜೋಯಿಸರ ಕಡೆ ತಿರುಗಿ, ಸಂಮಾಧಾನ ಧ್ವನಿಯಿಂದ ” ನೀವೇನು ಬಂದಿದ್ದು, ಜೋಯಿಸರೆ?” ಎಂದರು.

“ಚಂದ್ರಮೌಳೇಶ್ವರನ ಪ್ರಸಾದ ಕೊಟ್ಟು ಹೋಗೋಣ ಎಂದು ಬಂದೆ”ಎಂದು ಹೇಳುತ್ತ ಜೋಯಿಸರು ಪಕ್ಕದಲ್ಲಿಟ್ಟುಕೊಂಡಿದ್ದ ಒಂದು ಗಂಟಿನಿಂದ ಹೂವು ಕುಂಕುಮ ತುಂಬಿದ್ದ ತೆಂಗಿನಕಾಯಿಯ ಹೋಳನ್ನು ತೆಗೆದು ಸಾಹುಕಾರರ ಮುಂದಿಟ್ಟರು. ಚಂದ್ರಯ್ಯಗೌಡರು ಅದನ್ನು ಭಕ್ತಿಯಿಂದ ಸ್ವೀಕರಿಸಿ ಕುಂಕುಮವನ್ನು ಹಣೆಗಿ‌ಟ್ಟು.ಹೂವನ್ನು ಹಣೆಗೆ ಮುಟ್ಟಿಸಿಕೊಂಡು ಕಿವಿಯ ಮೇಲೆ ಸಂದಿಯಲ್ಲಿ ಸಿಕ್ಕಿಸಿದರು.

ಅಣ್ಣಯ್ಯಗೌಡರು ಚಿಂತಾಕ್ರಾಂತರಾಗಿ ಅಂಗಳದ ಮಧ್ಯೆಯಿದ್ದ ತುಳಸಿಯ ಕಲ್ಲನ್ನೇ ನೋಡುತ್ತಿದ್ದರು. ಮನೆಯಲ್ಲಿ ರೋಗಗ್ರಸ್ತಳಾಗಿ ಬಿದ್ದುಕೊಂಡಿದ್ದ ಹೆಂಡತಿಯ ಚಕ್ರವೂ ಮನೆಬಿಟ್ಟು ಹೋಗುತ್ತೇನೆಂದು ಕ್ರೂರನಾಗಿದ್ದ ಮಗನ ಚಿತ್ರವೂ ಏನೂ ಅರಿಯದ ಮಗಳ ಚಿತ್ರವೂ ಮನಸ್ಸಿಗೆ ಬಂದು, ಮುದುಕನಿಗೆ ತನ್ನ ಮೇಲೆ ತನಗೇ ಕನಿಕರ ಹುಟ್ಟಿ, ಕಣ್ಣುಗಳಿಂದ ನೀರು ಹರಿದು ಸುಕ್ಕುಗೆನ್ನೆಗಳ ಮೇಲೆ ಉರುಳಿದುವು. ಆದರೆ ಅಂಗಳದಲ್ಲಿದ್ದ ಕಲ್ಲುದೇವರು ಮಾತ್ರ ಚಂದ್ರಯ್ಯಗೌಡರಿಗಿಂತಲೂ ಕಲ್ಲಾಗಿ ಕುಳಿತಿತ್ತು!

ಇಷ್ಟರಲ್ಲಿ ಅಡುಗೆ ಮನೆಯೊಳಗೆ ಆಗುತ್ತಿದ್ದ ವಾಗ್ಯುದ್ಧದ ಸದ್ದು ಜಗಲಿಗೆ ಕೇಳಿಸಿತು. ಮನಸ್ಸಿನಲ್ಲಿ ರೇಗಿದರೂ ಗೌಡರು ಜೋಯಿಸರ ಮುಂದೆಯೂ ಇತರರ ಎದುರೂ ತಮ್ಮ ಗೃಹಕೃತ್ಯದ ಕೋಟಲೆಗಳನ್ನು ಪ್ರದರ್ಶಿಸಲು ಇಷ್ಟಪಡದೆ ಸುಮ್ಮನೆ ಕುಳಿತರು.

“ಚಂದ್ರಯ್ಯ,ಆ ಸತ್ಯನಾರಾಯಣ ವ್ರತಕ್ಕೆ ಇಪ್ಪತ್ತು. ರೂಪಾಯಿ ಖರ್ಚಾಗಿದೆ. ಅದನ್ನು ಕೊಟ್ಟಿದ್ದರೆ ಆಗುತ್ತಿತ್ತು.” ಜೋಯಿಸರ ವಾಣಿ ಯಾವುದೋ ಒಂದು ಮಹಾಬುದ್ದಿವಾದವನ್ನು ಬೋಧಿಸುವಂತಿತ್ತು. ರೂಪಾಯಿ ಕೊಡುವುದರಿಂದ ಸಾಹುಕಾರರಿಗೆ ಅಪಾರ ಶ್ರೇಯಸ್ಸು ಲಭಿಸುತ್ತದೆ ಎನ್ನುವಂತಿತ್ತು.

ಗೌಡರು ಒಂದು ಸಾರಿ ಕೆಮ್ಮಿ, ಗಂಟಲು ಸರಿಮಾಡಿಕೊಂಡು” ಅವತ್ತು ಮೂವತ್ತು ಕೊಟ್ಟಿದ್ದೆನಲ್ಲಾ. ಅದರಲ್ಲೇ ಮುರುಕೊಂಡುಬಿಡಿ. ನಿಮ್ಮ ಲೆಖ್ಖಕ್ಕೆ ಹತ್ತು ರೂಪಾಯಿ ಮಾತ್ರ ಖರ್ಚು ಬರೆದುಕೊಳ್ತೀನಿ” ಎಂದು ಜೋಯಿಸರ ಕಡೆ ಪ್ರಶ್ನಪೂರ್ವಕವಾಗಿ ನೋಡಿದರು.

ಜೋಯಿಸರು ಬಹಳ ಗಾಂಭೀರ್ಯದಿಂದಲೂ ಧಾರ್ಮಿಕತೆಯಿಂದಲೂ” ದೇವರ ಲೆಖ್ಖವನ್ನು ನನ್ನ ಲೆಖ್ಖಕ್ಕೆ ಯಾಕೆ ಸೇರಿಸುವುದು? ಹಾಗೆ ಮಾಡುವುದರಲ್ಲಿ ನಿನಗೂ ಅನಿಷ್ಟವಿದೆ. ಖಾತೆ ಬೇರೆ ಬೇರೆಯಾಗಿದ್ದರೆ ವಾಸಿ….” ಎಂದು ಕಣ್ಣು ಮುಚ್ಚಿತೆರೆದರು.

ಗೌಡರು ಜೋಯಿಸರಿಗಿಂತಲೂ ಹದಿನೈದು ಇಪ್ಪತ್ತು ವರ್ಷಗಳು ಹೆಚ್ಚು ವಯಸ್ಸಿನವರಾಗಿದ್ದರೂ, ಬ್ರಾಹ್ಮಣನು ಶೂದ್ರನನ್ನು ಬಹುವಚನದಲ್ಲಿ ಮಾತಾಡಿಸುವುದು ಶಾಪಕ್ಕೆ ಸಮಾನವೆಂದೂ, ಏಕವಚನದಲ್ಲಿ ಮಾತಾಡಿಸುವುದು ಅನುಗ್ರಹಕ್ಕೆ ಸಮಾನವೆಂದೂ ಭಾವಿಸಿ ವೇದಮೂರ್ತಿಗಳೆಲ್ಲ ಮ ರಾ ಶ್ರೀಗಳನ್ನು ” ಅವನು” “ನೀನು” ಎಂದೇ ಸಂಬೋಧಿಸುತ್ತಿದ್ದುದು ಆ ನಾಡಿನ ವಾಡಿಕೆಯಾಗಿತ್ತು.

ಅಷ್ಟರಲ್ಲಿ, ತಿಮ್ಮನ ಕಾಲಬಳಿ ಮೂಲಗಿಸುತ್ತಿದ್ದ ಕೊತ್ವಾಲನು ಹಿತ್ತಲು ಕಡೆಯ ಬಾಗಿಲಲ್ಲಾದ ಸ್ವಜಾತಿ ಸ್ವರವನ್ನು ಆಲಿಸಿ ಅಲ್ಲಿಗೆ ನುಗ್ಗಿತು. ಗೌಡರು ಸ್ವಲ್ಪ ಆಲೋಚಿಸಿ, ಬೀರುವಿನಿಂದ ಇಪ್ಪತ್ತು ರೂಪಾಯಿಗಳನ್ನು ಎಣಿಸಿ ತೆಗೆದು, ಜೋಯಿಸರ ಮುಂದಿಟ್ಟರು. ಜೋಯಿಸರು ಅದನ್ನು ಎತ್ತಿ ಸೆರಗಿನ ತುದಿಯಲ್ಲಿ ಕಟ್ಟುತ್ತಿದ್ದಾಗ ಹಿತ್ತಲುಕಡೆ ಶುನಕಸಮರದ ಕೋಲಾಹಲವು ಭಯಂಕರವಾಗಿ ಕೇಳಿಸಿತು.

ಗೌಡರು ತಿಮ್ಮನ ಕಡೆಗೆ ತಿರುಗಿ “ತಿಮ್ಮ, ತಿಮ್ಮ! ಅಲ್ಲೋಡೋ” ಎಂದರು. ತಿಮ್ಮನು ಮನೆಯ ಹೊರಗಡೆಯಿಂದ ಹಿತ್ತಲು ಕಡೆಗೆ, ಒಡ್ಯಾಣದಲ್ಲಿದ್ದ ಬಗನಿ ಕತ್ತಿ ಗಣಿ ಗಣಿ ಸದ್ದು ಮಾಡುವಂತೆ ಓಡಿದನು.

ಜೋಯಿಸರು ಹೋಗಲೋಸುಗ ಮೇಲೆದ್ದರು. ಗೌಡರೂ ಅವರನ್ನು ಬೀಳ್ಕೊಳ್ಳಲು ಎದ್ದು ನಿಂತು ಕಿರುಜಗಲಿಗೆ ಇಳಿದರು. ಎದ್ದು ನಿಂತೊಡನೆಯೆ ಅವರು ಹೊದ್ದುಕೊಂಡಿದ್ದ ಕೆಂಪು ಬಣ್ಣದ ಶಾಲು ಕಳಚಿ ಕೆಳಗೆ ಬಿದ್ದು, ದೃಢಕಾಯವಾಗಿ ಕೂದಲು ತುಂಬಿದ್ದ ಅವರ ಎದೆ ಗೋಚರಿಸಿತು. ಒಡನೆಯೆ ಮತ್ತೆ ಶಾಲನ್ನೆತ್ತಿ ಹೊದ್ದುಕೊಂಡರು.

ಬಾಗಿಲು ದಾಟುವುದರೊಳಗೆ ಜೋಯಿಸರು” ನಿಮ್ಮ ಹುಡುಗನಿಗೆ ಒಂದು ತಾಯಿತಿ ಬೇಕೆಂದು ಹೇಳಿದ್ದಿರಿ” ಎಂದರು.

“ಹೌದು ಬೇಕಿತ್ತು” ಎಂದು ಗೌಡರು ಜೋಯಿಸರೊಡನೆ ಹೆಬ್ಬಾಗಿಲ ಕಡೆಗೆ ಹೊರಟರು.

“ಹೋದ ವರ್ಷ ಒಂದು ಕಟ್ಟಿದ್ದೆ…..”

“ಏನು ಮಾಡೋದು ಹೇಳಿ. ನಮ್ಮ ಹೂವಯ್ಯ ಹೋದ ರಜಾದಲ್ಲಿ ಬಂದವನು ಏನೇನೋ ಬೋಧಿಸಿ ಹೋಗಿದ್ದ. ಅವನ ಮಾತು ಕೇಳಿ ತಾಯಿತಿ ಕಿತ್ತು ಬಿಸಾಡಿ ಬಿಟ್ಟಿದ್ದಾನೆ”.

“ನಾನು ಹೇಳಿದ್ದೆ ನನಗೆ ಮೊದಲೇ, ಈಗಿನ ವಿದ್ಯಾಭ್ಯಾಸ ಹುಡುಗರನ್ನು ಹಾಳುಮಾಡಿಬಿಡುತ್ತದೆ ಎಂದು! ದೇವರು ದಿಂಡರು ಭಕ್ತಿ ಗಿಕ್ತಿ ಎಲ್ಲ ನಿರ್ನಾಮ! ಜೊತೆಗೆ ನೂರಾರು ಹವ್ಯಾಸಗಳನ್ನು ಬೇರೆ ಕಲಿತುಬಿಡುತ್ತಾರೆ. ನಿನ್ನ ಮನೆ ಜಮೀನು ಉಳಿಯಬೇಕಾದರೆ ಅವರ ಓದು ನಿಲ್ಲಿಸಿ, ಮದುವೆ ಗಿದುವೆಮಾಡಿ ಕೆಲಸಕ್ಕೆ ಹೆಚ್ಚು. ಸಂಸಾರ ತಲೆಗೆ ತಾಗಿದರೆ ಆಗ ಬುದ್ದಿ ಬರುತ್ತದೆ.”

“ಹಾಂಗೆ ಮಾಡೋದೆ ಸೈ ಅಂತ ಕಾಣ್ತದೆ- ಈಗ ನೋಡಿ; ಆ ಹೂವಯ್ಯ, ಅವನ ದೆಸೆಯಿಂದ ರಾಮಯ್ಯ, ಇಬ್ಬರೂ ಸೇರಿ ದೆಯ್ಯ ದ್ಯಾವರು ಭೂತ ಗೀತ ಜಕಣಿ ಗಿಕಣಿ ಒಂದೂ ಬ್ಯಾದ ಅಂತ ಬೋದ್ಸೋಕೆ ಸುರು ಮಾಡಿದ್ದಾರೆ. ಆ ಹೂವಯ್ಯನಂತೂ ಅದೆಂತಂತದೊ- ಬಗವದ್ಗೀತೆಯಂತೆ ಉಪ್ನಿಷತ್ತಂತೆ- ಓದಿ ತಲೆ ಕೆಡಿಸಿಕೊಳ್ಳುತ್ತಿದ್ದಾನೆ…. ಮನೆಗೆ ಬಂದವನು ಒಂದು ಆಳು ಕಾಳಿನ ಕೆಲಸ ಕೂಡ ನೋಡೋದಿಲ್ಲ. ಉಪ್ಪರಿಗೆ ಮೇಲೆ ಓದುತ್ತ ಕುಳಿತುಬಿಡ್ತಾನೆ.”

“ಹೌದೂ, ದುಡಿದು ಹಾಕುವವರು ಒಬ್ಬರಿದ್ದರೆ ಮತ್ತೇನು ಮಾಡುತ್ತಾನೆ? ಅವನ ಪಾಲು ಅವನಿಗೆ ಕೊಟ್ಟು ಬೇರೆ ಹಾಕು! ಆಗೆಲ್ಲ ಸರಿಹೋಗುತ್ತದೆ. ಈ ಶೂದ್ರ ಮಕ್ಕಳಿಗೆಲ್ಲ ಉಪನಿಷತ್ತು ಭಗವದ್ಗೀತೆ ಗಂಧವಾದರೂ ಗೊತ್ತಾಗುತ್ತದೆಯೆ? ನಮಗೇ ಗೊತ್ತಾಗುವುದಿಲ್ಲ….”

ಗೌಡರು ನಗುತ್ತ “ನಿಮಗೆ ಗೊತ್ತಾಗದೆ ಏನು?” ಎಂದರು.

“ಹಾಗಲ್ಲ, ಚಂದ್ರಯ್ಯ, ನಿನಗೆ ಗೊತ್ತಿಲ್ಲ. ಎಂತೆಂಥ ಆಚಾರ್ಯರೇ ಅವುಗಳಿಗೆ ವ್ಯಾಖ್ಯಾನ ಬರೆಯಲು ತಿಣಿಕಿಬಿಟ್ಟಿದ್ದಾರೆ. ಅವರಲ್ಲಿಯೇ ಏಕಮತವಿಲ್ಲ…..ಈ ಶೂದ್ರಮಕ್ಕಳಿಗೆಲ್ಲ ಗೊತ್ತಾಗುತ್ತದೆಯೇ…. ಅದನ್ನೆಲ್ಲ ಓದಿ ಮನೆ ಹಾಳುಮಾಡಿ ಕೊಳ್ಳುತ್ತಾರೆ; ಅಷ್ಟೆ!…..”

“ನಾನೂ ಅವರನ್ನು ಈ ಸಾರಿ ಓದು ಬಿಡಿಸಿ ಮನೆ ಕೆಲಸಕ್ಕೆ ಹಾಕಬೇಕಂತ ಮಾಡಿದ್ದೇನೆ” ಎಂದು ಗೌಡರು ನಿಶ್ಚಿತವಾಣಿಯಿಂದ ಸ್ವಲ್ಪ ರಾಗವಾಗಿ ಹೇಳಿದರು.

“ಹಾಗೆ ಮಾಡಿದರೆ ನಿನ್ನ ಮನೆ ಉಳಿಯುತ್ತದೆ ನೋಡು. ದೇವರ ಕೋಪಕ್ಕಾದರು ಪಾತ್ರರಾಗಬಹುದು ಏಕೆಂದರೆ, ಅವನು ದಯಾಸಾಗರ, “೦.೦” ಕರುಣಾಶಾಲಿ. ಆದರೆ ಈ ಭೂತ ದೆವ್ವಗಳ ಸಿಟ್ಟಿಗೆ ಬಿದ್ದರೆ ಉಳಿಗತಿಯಿಲ್ಲ….ತಿಳಿದವನಿಗೆ ನಿನಗೆ ನಾನೇನು ಹೇಳುವುದು?”

“ಅಯ್ಯೋ, ಉಂಟೆ ಸ್ವಾಮಿ? ನೀವಲ್ಲದೆ ಮತ್ಯಾರು ಹೇಳೋರು ನಮಗೆ.” ಜೋಯಿಸರು ಹಿಡಿದು. ಮೆಟ್ಟಿನ ಸದ್ದು ಮಾಡುತ್ತ,ಕೊಡೆ ಸೂಡಿ ಕೊಂಡು ಹೊರಟುಹೋದರು. ಗೌಡರು ಹಿಂತಿರುಗಿ ಜಗಲಿಗೆ ಬಂದರು. ತಿಮ್ಮನು ಕೊಚ್ಚೆ ಹಿಡಿದು ಅಸಹ್ಯವಾಗಿದ್ದ ನಾಯಿಮರಿಯೊಂದನ್ನು ಅದರ ಕುತ್ತಿಗೆಯ ಚರ್ಮವನ್ನು ಬೆರಳು ತುದಿಯಿಂದೊತ್ತಿ ಎತ್ತಿ, ಹಿಡಿದು ನಿಂತಿದ್ದನು. ಆ ಮರಿಯ ತಾಯಿ ರೂಬಿ ಅವನ ಬಳಿ ನಿಂತು ತನ್ನ ಕಂದನನ್ನೇ ಎವೆಯಿಕ್ಕದೆ ನೋಡುತ್ತಿತ್ತು.

ಗೌಡರು “ಥೂ, ಅದನ್ನೇಕೆ ಇಲ್ಲಿಗೆ ತಂದ್ಯೋ… ಅತ್ತಲಾಗಿ ತಗೊಂಡು ಹೋಗಿ ಬಿಸಾಡು” ಎಂದರು.

“ಹಾಳು ಕೋಳಿ, ಕಣ್ಣು ಕುಕ್ಕಿ ತೆಗೆದೇಬಿಟ್ಟದೆ” ಎಂದು ತಿಮ್ಮನು ನೆತ್ತರು ಸೋರುತ್ತಿದ್ದ ಮರಿಯ ಕಣ್ಣನ್ನು ಪರೀಕ್ಷಿಸಿದನು. ಗೌಡರು ಮತ್ತೆ” ಹಾಳಾಗಿ ಹೋಗಲಿ.ಅತ್ತಲಾಗಿ ಬಿಸಾಡೋ ಅಂದರೆ!” ಎಂದು ಗದರಿಸಿದರು.

“ನಾನಾರೂ ತಗೊಂಡ್ಹೋಗಿ ಸಾಕ್ಕೋಳ್ತೀನ್ರಯ್ಯಾ.”

“ಏನಾದ್ರೂ ಸಾಯು!”

ತಿಮ್ಮನು ನಾಯಿಮರಿಯೊಡನೆ ಹೆಬ್ಬಾಗಿಲು ದಾಟಿ ಹೋದನು. ರೂಬಿಯೂ ಅವನ ಹಿಂದೆಯೆ ಹೋಯಿತು.

ಕಾಲುನೋವಿನಿಂದ ಏಳಲಾರದೆ ಕಂಬಳಿ ಸುತ್ತಿಕೊಂಡು ಮಲಗಿದ್ದ ಪುಟ್ಟನು ಎಲ್ಲವನ್ನೂ ಆಲಿಸುತ್ತಿದ್ದನು. ನಾಯಿಮರಿಗಾಗಿದ್ದ ದುಃಸ್ಥಿತಿಯನ್ನೂ ಅದನ್ನು ತಿಮ್ಮನು ಕೊಂಡೊಯ್ಯುತ್ತಿದ್ದುದನ್ನೂ ಅವನು ಸಹಿಸಲಾರದೆ ಮೆಲ್ಲನೆ ಎದ್ದು ಕುಂಟುತ್ತ ಹೆಬ್ಬಾಗಿಲನ್ನು ದಾಟಿ ತಿಮ್ಮನನ್ನು ಕೂಗಿದನು;

“ವಾಸಯ್ಯ ಬಯ್ತಾರೋ! ಅವರದ್ದು ಆ ಮರಿ.”

“ಗೌಡ್ರು ಹೇಳಿದ್ರು, ಅದಕ್ಕೇ ತೊಗೊಂಡ್ಹೋಗ್ತಿದ್ದೀನಿ” ಎಂದು ಹೇಳಿದ ತಿಮ್ಮನು ಮರಿಯನ್ನು ಕೆಳಕ್ಕೆ ಬಿಟ್ಟನು. ಏಕೆಂದರೆ ವಾಸು ಸುಮ್ಮನೆ ಬಿಡುವವನಲ್ಲವೆಂದು ಅವನಿಗೆ ಗೊತ್ತಿತ್ತು. ರೂಬಿ ಮರಿಯನ್ನು ನಕ್ಕತೊಡಗಿತು.

ಪುಟ್ಟ ಕುಂಟುತ್ತಿದ್ದುದನ್ನು ಕಂಡು ತಿಮ್ಮ “ಅದ್ರೇನ್ರೋ ನಿಮ್ಮ ಕಾಲು?”ಎಂದನು.

“ಮುಳ್ಳು ಚುಚ್ತು” ಎಂದು ಪುಟ್ಟನು ಅಂಗಾಲು ತೋರಿಸಿದನು. ಕಾಲಕೀತುಕೊಂಡು ನಡುವೆ ಮುಳ್ಳಿ ಕರ್ರಗೆ ಕಾಣುತ್ತಿತ್ತು. ತಿಮ್ಮನು ಒಂದು ದೊಡಲಿಗಿಡದ ಮುಳ್ಳು ತಂದು, ಕಾಲಿನಲ್ಲಿದ್ದು ಮಳ್ಳನ್ನು ಬಿಡಿಸಿ ತೆಗೆದನು. ಮುಳ್ಳಿನೊಡನೆ ಸ್ವಲ್ಪ ಕೀವು ಬಂದು ಪುಟ್ಟನಿಗೆ ಆಹ್ಲಾದವಾಯಿತು. ತಿಮ್ಮ ಹೊರಟುಹೋದ ಮೇಲೆ ಪುಟ್ಟ ನಾಯಿಮರಿಯನ್ನು ತೊಳೆದು ಮದ್ದು ಮಾಡಲು ಬಾವಿಯಕಟ್ಟೆಗೆ ಎತ್ತಿಕೊಂಡು ಹೋದನು.

ಗೌಡರು ಜೋಯಿಸರನ್ನು ಬೀಳುಕೊಟ್ಟು ಬಂದಾಗ ಅಣ್ಣಯ್ಯ ಗೌಡರು ತಲೆಮೇಲೆ ಕೈ ಹೊತ್ತುಕೊಂಡು ಚಿಂತಿಸುತ್ತ ಕುಳಿತಿದ್ದರು. ಅವರ ಎದೆಯಲ್ಲಿ ದುಃಖ ಕಡಲಾಡುತ್ತಿತ್ತು. ಬಾಳಿನ ಬೆಂಕಿಯಲ್ಲಿ ಬೆಂದು ಬೆಂದು ಅವರ ಜೀವ ಕಂದಿಹೋಗಿತ್ತು. ಅವರಿಗೆ ಮುಂದೇನು ಮಾಡಬೇಕೆಂಬುದೇ ಹೊಳೆಯಲಿಲ್ಲ. ಸಮಸ್ಯೆ ಅತಿ ಜಟಿಲವಾಗಿ ಕಂಡುಬಂದಾಗ” ದೇವರೇ, ನಾಟಕ ಪೂರೈಸಲಿ; ಜೀವನದ ಮೇಲೆ ಮರಣದ ಕೊನಡ ಪರದೆ ಬೀಳಿಲಿ” ಎಂದು ಪ್ರಾರ್ಥಿಸುವುದು ಸ್ವಾಭಾವಿಕ. ಆ ಮುದುಕನ ಸ್ಥಿತಿಯೂ ಹಾಗಿತ್ತು.

ಗೌಡರ ಮನಸ್ಸನ್ನೂ ಹೊಕ್ಕು ನೋಡಿದ್ದರೆ ಅವರ ನಡತೆಯೂ ಅಷ್ಟೇನು ಕ್ರೂರವಾಗಿ ಕಾಣುತ್ತಿರಲಿಲ್ಲ. ಅವರು ಸ್ವಲ್ಪ ಇಕ್ಕಟ್ಟಿನಲ್ಲಿ ಸಿಕ್ಕಿಕೊಂಡಿದ್ದರು. ತಮ್ಮ ತಂದೆ ತಾತಂದಿರ ಕಾಲದಿಂದಲೂ ನಂಬಿಕೆಯಾಗಿ ಒಕ್ಕಲುತನ ಮಾಡಿಕೊಂಡು ಬಂದಿದ್ದವನಿಗೆ, ಚಿಕ್ಕಂದಿನಿಂದಲೂ ತಮಗೆ ಚಿರಪರಿಚಿತನಾಗಿದ್ದವನಿಗೆ, ಕಷ್ಟದಲ್ಲಿ ಬಿದ್ದಿದ್ದ ಮುದುಕನಿಗೆ ದುಡ್ಡಿದ್ದವರು ದುಡ್ಡು ಕೊಡಲಾಗುವುದಿಲ್ಲ. ಎಂದು ಹೇಳಿದುದು ಕ್ರೂರವಾಗಿಯೆ ಕಾಣುತ್ತದೆ. ಆದರೆ ಗೌಡರು ಹೀಗೆ ಸಾಲ ಕೊಟ್ಟು ಅನೇಕ ಸಾವಿರ ರೂಪಾಯಿಗಳನ್ನು  ಕಳೆದುಕೊಂಡಿದ್ದರು. ಅಣ್ಣಯ್ಯಗೌಡರಿಂದ ಬಡ್ಡಿಯ ಹಣ ಬರುವ ಮಾರ್ಗವೂ ಅವರಿಗೆ ತೋರದಿದ್ದುದರಿಂದ ಇನ್ನೂ ಹೆಚ್ಚು ಸಾಲ ಕೊಡಲು ಹಿಂಜರಿದರು. ಗೌಡರು ಮನಸ್ಸಿನಲ್ಲಿ ಅಣ್ಣಯ್ಯಗೌಡರ ದುಃಸ್ಥಿತಿಗೆ ಅವರೇ ಕಾರಣರಲ್ಲದೆ ತಾವು ಕಾರಣರಲ್ಲವೆಂದು ಸ್ಪಷ್ಟವಾಗಿತ್ತು. ಅಣ್ಣಯ್ಯಗೌಡರು ನಾಲ್ಕು ಮದುವೆಗಳನ್ನೇಕೆ ಮಾಡಿಕೊಳ್ಳಬೇಕಾಗಿತ್ತು? ಒಂದೊಂದು ಹೆಣ್ಣಿಗೂ ಅಷ್ಟೊಂದು ಹಣವನ್ನೇಕೆ ತೆರ ಕೊಡಬೇಕಾಗಿತ್ತು.? ಯೌವನದಲ್ಲಿ ಪಟ್ಟ ಅತಿ ಸುಖಕ್ಕೆ ವೃದ್ಧಾಪ್ಯದಲ್ಲಿ ಪ್ರಾಯಶ್ಚಿತ್ತವಾಗಿ ಕಷ್ಟಪಡಬೇಕಾದುದು ಅವರ ಕರ್ಮ! ಜೊತೆಗೆ ಸೀತೆಮನೆ ಸಿಂಗಪ್ಪಗೌಡರಲ್ಲಿಗೆ ಓಬಯ್ಯನು ಹೋಗಿದ್ದನೆಂಬುದನ್ನು ಅಣ್ಣಯ್ಯಗೌಡರ ಬಾಯಿಂದ ಕೇಳಿದ ಮೇಲಂತೂ ಅವರಿಗೆ ಮನಸ್ಸು ಮುರಿದು ಹೋಗಿತ್ತು.

“ಹಾಂಗಾದ್ರೆ ನಾನೇನು ಮಾಡ್ಲಿ? ಕುತ್ತಿಗೆಗೆ ನೇಣು ಹಾಕಿಕೊಳ್ಲೇ?” ಎಂದರು ಅಣ್ಣಯ್ಯಗೌಡರು.

“ಏನಾದರೂ ಮಾಡು! ಸಾಲ ಕೊಡೋಕೆ ನನ್ನಿಂದ ಸಾಧ್ಯವಿಲ್ಲ.”

“ಹಾಂಗಾದ್ರೆ ಬರ್ತೀನಿ” ಎಂದು ಮುದುಕನು ಕೈಮುಗಿದು, ಮೇಲೆದ್ದು. ಗೋಡೆಗೆ ಒರಗಿಸಿಟ್ಟಿದ್ದ ಬೆತ್ತದ ದೊಣ್ಣೆಯನ್ನು ಊರಿಕೊಂಡು, ನಸುಬಾಗಿ ನಡೆಯುತ್ತ ಹೆಬ್ಬಾಗಿಲು ದಾಟಿದನು. ಗೌಡರು ಚೆನ್ನಾಗಿ ಒಂದು ಸಾರಿ ನಶ್ಯ ಹಾಕಿಕೊಂಡು ತಮ್ಮ ಲೆಕ್ಕಪತ್ರಗಳಲ್ಲಿ ಮಗ್ನರಾದರು.

ಬಿಸಿಲು ತುಸುಮಟ್ಟಿಗೆ ಬಿರುಸಾಗಿಯೆ ಇತ್ತು. ದೊಣ್ಣೆಯೂರಿ ಹೋಗುತ್ತಿದ್ದ ಮುದುಕನ ಮೇಲೆ ನಿಷ್ಕರುಣೆಯಿಂದ ವರ್ತಿಸುವಂತಿತ್ತು. ಸುಮಾರು ಐದೂವರೆ ಐದೂಮುಕ್ಕಾಲು ಅಡಿ ಎತ್ತರವಾಗಿದ್ದ ಮುದುಕನ ನೆರಳು ಒಂದು ಒಂದೂಕಾಲು ಅಡಿಯಾಗಿ, ಅದು ಅವನಾತ್ಮದ ಶೋಚನೀಯಾವಸ್ಥೆಯ ಪ್ರತಿಬಿಂಬವೆಂಬಂತೆ, ಪದತಲದಲ್ಲಿ ನೆಲದ ಮೇಲೆ ಹೊರಳಿ ಹುಡಿಯಲ್ಲಿ ಮೆಲ್ಲಗೆ ಮುಂಬರಿಯುತ್ತಿತ್ತು.

ಮುದುಕನು ಒಂದು ಸಾರಿ ತಲೆಯೆತ್ತಿ ನೋಡಿದನು. ಮರದ ಮೇಲೆ ಕಾಗೆಯೊಂದು ಕಾ! ಕಾ! ಎಂದು ಕರೆಯುತ್ತಿತ್ತು. ಮುದುಕನು ನಿಡುಸುಯ್ದು ಮತ್ತೆ ತಲೆಬಾಗಿ ಮುಂದೆ ಸಾಗಿದನು. ಒಂದು ಓತಿಕ್ಯಾತ ಬೇಲಿಯ ಮೇಲೆ ಕುಳಿತು ” ಹಾಗಾಗಬೇಕು! ಹಾಗಾಗಬೇಕು!” ಎಂದು ತಲೆಯಲ್ಲಾಡಿಸಿ ಹಂಗಿಸುವಂತಿತ್ತು.