ಔದಾರ್ಯದ ಉದ್ದೇಶ ಸಾರ್ಥಕವಾಗದೆ ನಿರಾಶೆಯಿಂದ ಹಿಂತಿರುಗಿದ್ದರೂ ಹೂವಯ್ಯನ ಹೃದಯ ಮಾನಸಸರೋವರದಿಂದ ಹೊಸದಾಗಿ ಹೊರಹೊಮ್ಮಿದ್ದ ಆನಂದಗಂಗೆಯ ಅಪ್ರತಿಹತಪ್ರವಾಹ ನಿಲ್ಲಲೂ ಇಲ್ಲ;  ಕಡಮೆಯಾಗಲೂ ಇಲ್ಲ. ಹಿಂದೆ ಕ್ಷಣಿಕವಾಗಿ ಬಂದು ಬಂದು ಹೋಗುತ್ತಿದ್ದ ದಿವ್ಯಾನುಭವ ಈಗ ನಿರಂತರ ಶಾಶ್ವತವಾಗಿದ್ದಂತೆ ತೋರಿತು. ಕಾಮಳ್ಳಿಯ ಇಂಪಾದ ಹಾಡು ಎದುರಿಗಿದ್ದ ಮರದ ನೆತ್ತಯಿಂದ ಬರುತ್ತಿರಲಿಲ್ಲ; ಅನಂತತೆಯ ಬಸಿರಿನಿಂದ ಅರ್ಥಪೂರ್ಣವಾಗಿ ಬರುತ್ತಿತ್ತು. ಅಲ್ಲಲ್ಲಿ ಶೋಭಿಸುತ್ತಿದ್ದ ಕಾಡುಹೂವುಗಳು ಬರಿಯ ಹೂವುಗಳಾಗಿರಲಿಲ್ಲ; ಆತ್ಮದ ಮನೋಹರ ಭಾವ ಸಂದೇಶವನ್ನು ಹೊತ್ತುತಂದ ದೇವದೂತರುಗಳಾಗಿದ್ದುವು. ಜಗತ್ತಿನ ಜಡತೆಯೂ ಸ್ಥೂಲತೆಯೂ ವಾಸ್ತವತೆಯೂ ಕನಸಿನಂತೆ ಮಿಥ್ಯವಾಗಿ ತೋರಿದುವು; ಇಂದ್ರಿಯಗಳಿಗೆ ಗೋಚರವಾಗುವುದಕ್ಕಾಗಿ ವೇಷಹಾಕಿಕೊಂಡ ರಸಸಮುದ್ರದ ತರಂಗಗಳಾಗಿ ಕಂಡುವು. ಹೂವಯ್ಯನ ದೇಹವೂ ಆ ಆತ್ಮದ ಒಂದು ಭಾವಮಾತ್ರವಾಗಿರುವಂತೆ ಭಾಸವಾಗಿ, ನಡೆಯುತ್ತಿದ್ದರೂ ತೇಲುತ್ತಿದ್ದಂತೆ ಅನುಭವವಾಯಿತು. ಅವನಿಗೆ ತನ್ನ ಅನುಭವ ಮಹಾದ್ಭುತವಾಗಿ ತೋರಿತು.

“ಇಷ್ಟು ಸ್ವಲ್ಪ ತ್ಯಾಗದಿಂದ ಇಂತಹ ಮಹಾಭೋಗ ಲಭಿಸುತ್ತದೆಯೆ? ಏಕಾಗಬಾರದು? ಐಶ್ವರ್ಯ ತುಂಬಿರುವ ದೊಡ್ಡ ಪೆಟ್ಟಿಗೆಯ ಬೀಗದ ಕೈ ಆ ಪೆಟ್ಟಿಗೆಯಷ್ಟು ದೊಡ್ಡದಾಗಿರಬೇಕೆ?” ಎಂದುಕೊಂಡನು.

ಹೂವಯ್ಯ ಆ ದಿನವೆಲ್ಲ ಆ ಆನಂದದ ಸ್ಥಿತಿಯಲ್ಲಿದ್ದನು. ಅವನನ್ನು ಸಮೀಪಿಸಿದವರ ಮೇಲೆಲ್ಲ ಆ ಅನುಭವದ ಛಾಯೆ ಬೀಳದಿದರುತ್ತಿರಲಿಲ್ಲ. ಪುಟ್ಟಣ್ಣ ಬಂದೂಕಿಗೆ ತೋಟಾಗಳನ್ನು ಕೇಳಿದಾಗ ಹಿಂದೆ ಕೊಡುತ್ತಿದ್ದಂತೆ ಮೂರು ನಾಲ್ಕುನ್ನು ಮಾತ್ರ ಕೊಡದೆ, ಹದಿನೈದಿಪ್ಪತ್ತನ್ನು ಕೊಟ್ಟನು. ಸೋಮ ಮುಂದಿನ ವರ್ಷ ಕನ್ನಡ ಜಿಲ್ಲೆಯಿಂದ ಆಳುಗಳನ್ನು ತಂದು ಸೇರೆಗಾರಿಕೆ ಮಾಡುವುದಕ್ಕಾಗಿ ಮುಂಗಡ ಕೇಳಿದಾಗ ದಿನವೂ ಹೇಳುತ್ತಿದ್ದಂತೆ “ನೋಡೋಣ’ ಎನ್ನುವುದಕ್ಕೆ ಬದಲಾಗಿ, ಸೋಮ ನಿರೀಕ್ಷಸಿದ್ದಕ್ಕಿಂತಲೂ ಹೆಚ್ಚು ಹಣವನ್ನು ಮುಂಗಡವಾಗಿ ಕೊಡಲೊಪ್ಪಿದುದಲ್ಲದೆ, ಆಳುಗಳನ್ನು ಆರಿಸುವಾಗ ಎಂಥವರನ್ನು ಆರಿಸಬೇಕೆಂಬ ವಿಚಾರವಾಗಿ ದೀರ್ಘವಾಗಿ ಮಾತಾಡಿ ಸಲಹೆ ಕೊಟ್ಟು, ಹುರಿದುಂಬಿಸಿ “ಆಗಲಿ, ಸೋಮ; ಮುಂದಿನ ವರ್ಷ ನಿನಗೆ ’ಸೇರೆಗಾರ ಸೋಮಯ್ಯ ಸೆಟ್ಟರು’ ಎಂದು ಪಟ್ಟಕಟ್ಟುತ್ತೇವೆ” ಎಂದು ವಿನೋದವಾಡಿದನು.

ಸಂಜೆಯ ಹೊತ್ತಿಗೆ ನಂಜ ಚಿನ್ನಯ್ಯನಿಂದ ಕಾಗದ ತಂದುಕೊಟ್ಟು “ಖಂಡಿತ ಈಗ್ಲೆ ಬರಬೇಕಂತೆ” ಎಂದನು.

“ನಾಳೆ ಅಲ್ಲವೇನೋ ಬಾಲೆ ತೊಟ್ಟಲಿಗೆ ಹಾಕುವ ಮನೆ?” ಎಂದು ಹೇಳುತ್ತಾ ಹೂವಯ್ಯ ಕಾಗದವನ್ನು ಬಿಚ್ಚಿ ಓದತೊಡಗಿದನು.

“ಬಾಲೆ ತೊಟ್ಟಲಿಗೆ ಹಾಕುವ ಮನೆ ನಾಳೆ ಆದ್ರೆ, ನೀವು ಇವತ್ತು ಬರಬಾರದೇನು?” ಎಂದು ನಂಜ ತನ್ನ ಒಡೆಯರ ಪರವಾಗಿ ತಾನೆ ವಾದಿಸತೊಡಗಿದನು.

ಚಿನ್ನಯ್ಯ ಆಗ್ರಹಪೂರ್ವಕವಾಗಿ ಆಹ್ವಾನಿಸಿ ಬರೆದಿದ್ದುದರಿಂದ ಹೂವಯ್ಯ ಉತ್ತರೀಯವೊಂದನ್ನು ಹೆಗಲಮೇಲೆ ಹಾಕಿಕೊಂಡು ಉಟ್ಟಬಟ್ಟೆಯಲ್ಲಿಯೆ ಮುತ್ತಳ್ಳಿಗೆ ಹೊರಟನು.

ದಾರಿಯಲ್ಲಿ ನಂಜ ಕಳ್ಳಂಗಡಿ ಹತ್ತಿರವಾಗಲು”ಅಯ್ಯಾ, ಬಹಳ ಆಕರ ಆಗ್ತದೆ. ಒಂದೀಟು ನೀರು ಕುಡಕೊಡು ಬತ್ತೀನಿ” ಎಂದನು

ಹೂವಯ್ಯನಿಗೆ ಬಾಯಾರಿಕೆಯ ಒಳಗುಟ್ಟು ಗೊತ್ತಾಗಿ , ಸಮ್ಮತಿಸಿ, ’ಹೊತ್ತು ಮಾಡಬೇಡ, ಬೇಗ ಬಾ’ ಎಂದು ಮೆಲ್ಲಗೆ ಹೆಜ್ಜೆ ಹಾಕಿದನು. ಸ್ವಲ್ಪ ಹೊತ್ತಿನಲ್ಲಿಯೆ ನಂಜನೂ ನೀರಡಿಕೆಗೆ ಮದ್ದು ಹೊಯ್ದುಕೊಂಡು ತೃಪ್ತನಾಗಿ ಹಿಂದುಗಡೆಯಿಂದ ಬಂದು ಸೇರಿದನು.

ಹೂವಯ್ಯ ಹೆಂಡದ ವಾಸನೆಯ ದೆಸೆಯಿಂದ ಆದಷ್ಟು ಮಟ್ಟಿಗೆ ನಂಜನಿಂದ ದೂರವಾಗಿಯೆ ಅವನನ್ನು ಮಾತಾಡಿಸದೆ ನಡೆಯತೊಡಗಿದನು. ನಸುಗತ್ತಲೆ ಕವಿಯತೊಡಗಿತ್ತು. ಆದರೆ ಹಾದಿ ಚೆನ್ನಾಗಿಯೆ ಕಾಣಿಸುತ್ತಿತ್ತು.

ಸ್ವಲ್ಪದೂರ ಹೋಗುವುದರಲ್ಲಿಯೆ ಹಿಂದುಗಡೆ ದೊಪ್ಪನೆ ಸದ್ದಾಗಿ ಹೂವಯ್ಯ ತಿರುಗಿ ನೋಡಿದಾಗ, ನಂಜ ನೆಲದಿಂದ ಮೇಲೇಳುತ್ತಾ ಬೀದಿಯ ದೂಳನ್ನು ಕೊಡವಿಕೊಳ್ಳುತ್ತಿದ್ದನು. ಅವನ ನಿಲುವೂ ಅಸ್ಥಿರವಾಗಿತ್ತು.

ಹೂವಯ್ಯ ಸ್ವಲ್ಪ ಹಾಸ್ಯವಾಗಿ “ಏನೋ?” ಎಂದನು.

“ಥೂಯ್ ಇದರ ಹೊಟ್ಟೆ ಹಾಳಾಗಿಹೋಯಿತಲ್ರೋ! ಅಲ್ಲಾ… ದಾರಿ ಸುಮ್ಮಸುಮ್ಮನೆ ನನ್ನ ಕಾಲು ಹಿಡಿದು ಎತ್ತಿಬಿಡೋದೆ!” ಎನ್ನುತ್ತಾ ತೂರಾಡುತ್ತಾ ನಂಜ ಮುಂದುವರಿದನು.

ಕುಡಿದಿದ್ದ ಕಳ್ಳು ನಂಜನ ತಲೆಗೇರುತ್ತಿರುವುದನ್ನು ಅರಿತು, ಹೂವಯ್ಯ ತನ್ನಷ್ಟಕ್ಕೆ ತಾನೆ ನಗುತ್ತಾ ಹಿಂತಿರುಗಿ ನೋಡದೆ ನಡೆಯತೊಡಗಿದನು. ಆದರೆ ಸ್ವಲ್ಪ ದೂರ ಹೋಗುವುದರಲ್ಲಿ ನಂಜ ಮತ್ತೆ ಬಿದ್ದನು. ಬಿದ್ದವನು ಎದ್ದು ನಿಲ್ಲುವುದಕ್ಕೆ ಬದಲಾಗಿ ಹಾಗೆಯೆ ಬಿದ್ದುಕೊಂಡು “ಥೂಯ್! ಇದರ ಹೊಟ್ಟೆ ಹಾಳಾಗಿ ಹೋಯಿತಲ್ರೋ! ಅದು ಯಾಕ್ರೋ ಹಿಂಗೆ ಮಾಡ್ತದೆ ಈ ರಸ್ತೆ? ಹೆಜ್ಜೆ ಹಾಕೋಕೇ ಬಿಡೋದಿಲ್ಲ! ಥೂಯ್” ಎಂದು ಉಗುಳಿದನು.

“ಇದೇ ಏನೋ, ನೀನು ಆಕರ ಆಗ್ತದೆ, ನೀರು ಕುಡುಕೊಂಡು ಬರ್ತೀನಿ ಅಂತಾ ಹೇಳಿದ್ದು? ಏಳು ಏಳು!” ಎಂದನು ಹೂವಯ್ಯ.
“ಎಂಥಾ ಏಳೋದ್ರಪ್ಪಾ! ಥೂಯ್! ಇದರ ಮನೆ ಹಾಯ್ತಲ್ರೋ! ಮೇಲೆ ಏಳೋಕೆ ಬಿಡೋದಿಲ್ಲ…. ಹಾಕಿ ಅಮುಕ್ತದೆ” ಎಂದು ಎದ್ದು ನಡೆಯುವುದಕ್ಕೆ ಬದಲಾಗಿ ಮಕ್ಕಳಂತೆ ಕೈಯೂರಿಕೊಂಡು ಅಂಬೆಗಾಲಿಡುತ್ತಾ ಮುಂದುವರಿಯತೊಡಗಿದನು. ಹೂವಯ್ಯನಿಗೆ ನಗು ತಡೆಯಲಾಗಲಿಲ್ಲ.

ನಂಜನೂ ಯದ್ವಾ ತದ್ವಾ ನಗುತ್ತಾ ಅಂಬೆಗಾಲಿಟ್ಟು ಮುಂದೆ ಮುಂದೆ ಸಾಗುತ್ತಾ ತೊದಲು ತೊದಲಾಗಿ “ಅಯ್ಯಾ, ಸ್ವಲ್ಪ ಹಿಡಕೊಳ್ತೀರಾ ನನ್ನ ಕೈನಾ? ಈ ರಸ್ತೆ ದೆಸೆಯಿಂದ ಆಗೋದಿಲ್ಲ! ಬಹಳ ತಂಟೆ ಮಾಡ್ತದೆ!” ಎಂದನು.

ಅಂತೂ ಹೂವಯ್ಯ ಹಿಡಿದುಕೊಂಡಲ್ಲದೆ ನಂಜನಿಂದ ನಡೆಯಲಾಗಲಿಲ್ಲ. ಅವನನ್ನು ಕಷ್ಟದಿಂದ ನಡೆಯಿಸಿಕೊಂಡು ಹೋಗಿ, ಅವನ ಬಿಡಾರದ ಬಾಗಿಲಲ್ಲಿ ಬಿಟ್ಟು, ಮುತ್ತಳ್ಳಿಯ ಮನೆಗೆ ಚೆನ್ನಾಗಿ ಕತ್ತಲಾದಮೇಲೆಯೆ ಹೋದನು. ಹೂವಯ್ಯನಿಗಾಗಿ ಎದುರುನೋಡುತ್ತಿದ್ದ ಚಿನ್ನಯ್ಯ ಅಷ್ಟು ಹೊತ್ತಾದುದೇಕೆಂದು ಪ್ರಶ್ನೀಸಲು, ಹೂವಯ್ಯ ಸೀತೆ ತಂದುಕೊಟ್ಟ ಬಿಸಿನೀರಿನಿಂದ ಕಾಲು ತೊಳೆದುಕೊಳ್ಳುತ್ತಾ ನಡೆದ ಕಥೆಯನ್ನೆಲ್ಲಾ ಹೇಳಿದನು. ಅದನ್ನು ಕೇಳಿ ಎಲ್ಲರೂ ನಕ್ಕು ನಕ್ಕು ಸಾಕಾದರು.

ಶ್ಯಾಮಯ್ಯಗೌಡರು ನಿಧಾನವಾಗಿ ಗಂಭೀರವಾಗಿ “ಆ ಮುಂಡೇ ಗಂಡನಿಂದ ಸುಖಾ ಇಲ್ಲ. ಹೋದಲ್ಲಿ ತನಕ ಕೊಂಬು ಹುಯ್ಲೇ? ಅವನಿಗೆ ಏನುಮಾಡಿದರಾಯ್ತೋ ನನಗೆ ಬೇರೆ ಗೊತ್ತಾಗಾದಿಲ್ಲ!” ಎಂದರು.

ಹೂವಯ್ಯನಿಗೆ ಮುತ್ತಳ್ಳಿಯ ಸಂತೋಷದ ವಾತಾವರಣವನ್ನು ನೋಡಿ ಆಶ್ವರ್ಯವಾಯಿತು, ಅವನ ಗಡ್ಡ ಮೀಸೆಗಳೆಲ್ಲ ಕಟಾವಾದ ಬೋಳುಮಂಡೆಯನ್ನು ನೋಡಿ ಉಳಿದವರಿಗೆ ಆಶ್ವರ್ಯವಾದುದಕ್ಕಿಂತಲೂ ಹೆಚ್ಚಾಗಿ! ಕಾನೂರಿನ ವಿಷಣ್ಣ ಪರಿಸ್ಥಿತಿಗೆ ಸಂಪೂರ್ಣ ವ್ಯತ್ಯಾಸವಾಗಿತ್ತು ಮುತ್ತಳ್ಳಿಯ ಪ್ರಸನ್ನಪರಿಸ್ಥಿತಿ!

ಮನೆಯಲ್ಲಿ ಎಲ್ಲರೂ ಹರ್ಷಚಿತ್ತರಾಗಿದ್ದರು. ಶ್ಯಾಮಯ್ಯಗೌಡರಿಗೂ ಗೌರಮ್ಮನವರಿಗೂ ತಮ್ಮ ಮಗಳು ಸೀತೆಯ ವಿಚಾರವಾಗಿ ನೆನಪು ಬಂದಾಗ ಒಂದಿನಿತು ನೋವಿನ ಮೋಡ ಮುಖದಮೇಲೆ ಕವಿಯುತ್ತಿದ್ದಿರಬಹುದು. ಆದರೆ ಆ ಮೋಡದ ಛಾಯೆಯನ್ನು ಸಂಪೂರ್ಣವಾಗಿ ಇಲ್ಲಗೈಯುವ ಸೂರ್ಯನ ತೇಜಸ್ಸೂ ಇರುತ್ತಿತ್ತು. ಹೆಚ್ಚಾಗಿಯೇ ಇರುತ್ತಿತ್ತು;. ಇತರ ಯಾವ ವಿಷಯಗಳಲ್ಲಿಯೂ ಅವರಿಗೆ ಕೊರತೆಯಿರಲಿಲ್ಲ. ಮಗನ ಮತ್ತು ಸೊಸೆಯ ವಿಷಯದಲ್ಲಂತೂ ಅವರಿಗೆ ಸಂಪೂರ್ಣ ತೃಪ್ತಿಯಿತ್ತು. ಈಗ ಮೊಮ್ಮಗನೂ ಬಂದುದರಿಂದ ಆ ತೃಪ್ತಿಗೆ ಸಂಭ್ರಮವೂ ಸೇರಿತ್ತು.

ಸೀತೆ ಎಂದಿಗಿಂತಲೂ ಹೆಚ್ಚು ಆರೋಗ್ಯವಾಗಿ ಸಂತೋಷಚಿತ್ತಳಾಗಿ ಲವಲವಿಕೆಯಿಂದಿದ್ದಳು. ಅವಳಿಗೆ ಬಿದ್ದ ಬಾವಿಯಿಂದ ಮೇಲೆದ್ದು ಬಂದಹಾಗಿತ್ತು. ಹಿಂದಿನಂತೆ ಮೈಮೇಲೆ ಬರುವುದು ಮೊದಲಾದ ಯಾವ ದೆವ್ವ ಗಿವ್ವದ ಕೋಟಲೆಯೂ ಅವಲಿಗಿರಲಿಲ್ಲ. ಮುಂದೆ ತನ್ನ ಗತಿಯೇನು ಎಂದು ಯೋಚಿಸುವ ಗೋಜಿಗೂ ಆಕೆ ಹೆಚ್ಚು ಹೋಗಿರಲಿಲ್ಲವೆಂದು ತೋರುತ್ತದೆ. ಕಾನೂರಿಗೆ ಹೆಗ್ಗಡಿತಿಯಾಗಿ ಹೋಗುವ ವಿಚಾರವನ್ನು ಯಾರಾದರೂ ಎತ್ತಿದರೆಂದರೆ ಮಾತ್ರ ಆಕೆ ಹುಚ್ಚಿಯಂತೆ ವಿಚಿತ್ರ ರೀತಿಯಿಂದ ವರ್ತಿಸುತ್ತಿದ್ದಳಂತೆ. ಆದಕಾರಣ ಯಾರೂ ಈಗೀಗ ಆ ಪ್ರಸ್ತಾಪವನ್ನು ಎತ್ತುವ ತಂಟೆಗೆ ಹೋಗುತ್ತಿರಲಿಲ್ಲ. ಪುಟ್ಟಮ್ಮ, ಲಕ್ಷ್ಮಿ, ಕೆಲವು ಸಾರಿ ಗೌರಮ್ಮ ಇವರುಗಳಿಗೆ ಕಥೆಗಳನ್ನು ಓದುವುದು, ಹೇಳಿಸಿಕೊಳ್ಳುವಷ್ಟರಮಟ್ಟಿಗೆ ಮೂರು ಹೊತ್ತೂ ಲಕ್ಷ್ಮಿಯನ್ನು ಮುದ್ದಿಸಿ ಶುಶ್ರೂಷೆ ಮಾಡುವುದು – ಇದು ಆಕೆಯ ದಿನಚರಿಯಾಗಿತ್ತು. ತನ್ನ ಕೊಟಡಿಯಲ್ಲಿ  ದೇವರ ಪಟಗಳನ್ನೂ ಹೂವಯ್ಯನಿತ್ತ ಕೆಲವು ಮಹಾಪುರುಷರ ಪಟಗಳನ್ನೂ ಇಟ್ಟು, ನಿತ್ಯವೂ ಪೂಜಿಸಿ ಪ್ರಾರ್ಥಿಸುತ್ತಿದ್ದಳಂತೆ. ಕೆಲವು ಸಾರಿ ಗಂಟೆ ಗಂಟೆಗಳ ಕಾಲ ಬಾಗಿಲು ತಾಳ ಹಾಕಿಕೊಂಡು ತಾನೊಬ್ಬಳೆ ಕೊಟಡಿಯಲ್ಲಿರುತ್ತಿದ್ದಳಂತೆ. ಅಂತೂ, ಆ ದಿನ ಹೂವಯ್ಯನೊಡನೆ ನಿಸ್ಸಂಕೋಚವಾಗಿ ಸಹೋದರಿಯಂತೆ ವರ್ತಿಸುತ್ತಾ ಸರಳವಾಗಿ ಮಾತುಕಥೆಯಾಡಿದಳು

ಆದರೆ ಚಿನ್ನಯ್ಯ ಮತ್ತು ಪುಟ್ಟಮ್ಮ ಇವರಿಗಿಂತಲೂ ಹೆಚ್ಚು ಸಂತುಷ್ಟರೂ ಹರ್ಷಿತರೂ ಸುಖಿಗಳೂ ಮುತ್ತಳ್ಳಿಯಲ್ಲಾಗಲಿ ಸುತ್ತಣ ಹಳ್ಳಿಗಳಲ್ಲಿಯಾಗಲಿ ಬೇರೆ ಯಾರೂ ಇರಲಿಲ್ಲ. ಮುದುವೆಯಾದಂದಿನಿಂದಲೂ ಮುತ್ತಳ್ಳಿ ಮತ್ತು ಕಾನೂರುಗಳ ಕ್ಷುಬ್ಧಜೀವನಸಮುದ್ರದಲ್ಲಿ ಅವರ ಬದುಕು ಬೃಂದಾವನ ಸದೃಶವಾದ ದ್ವೀಪವಾಗಿಯೇ ನಡೆದುಕೊಂಡು ಬಂದಿತ್ತು. ಇತರರಿಗೆ ಬಂದೊದಗಿದ ಕಷ್ಟಗಳೂ ಯಾತನೆಗಳೂ ಉದ್ವೇಗಗಳೂ ಅವರ ಬಾಳಿನ ಸರೋವರವನ್ಹು ಬಗ್ಗಡಗೊಳಿಸಿರಲಿಲ್ಲ. ಅಷ್ಟು ಸುಖಿಗಳಾಗಿದ್ದರು ಅವರಿಬ್ಬರು. ಎಂದರೆ ಅವರಿಬ್ಬರಿಗೂ ಹೃದಯವಿರಲಿಲ್ಲ ಎಂದಾಗಲಿ, ಅವರು ಕಣ್ಣೀರು ಸುರಿಸಲಿಲ್ಲ ಎಂದಾಗಲಿ ಅರ್ಥವಲ್ಲ. ಅವರಿಬ್ಬರೂ ಪರಸ್ಪರ ಸಹಾಯದಿಂದ ದುಃಖ ಸಮುದ್ರದಲ್ಲಿ ನಿರಾತಂಕವಾಗಿ ತೇಲುವ ಸುಖದ ನಾವೆಯನ್ನು ನಿರ್ವಿಸಿಕೊಂಡಿದ್ದರೆಂದರ್ಥ. ಈಗಲಂತೂ ಪುತ್ರರತ್ನದ ಜನನದಿಂದ ಅವರಿಬ್ಬರೂ ಆನಂದಾತಿಶಯದಿಂದ ಪರವಶವಾದಂತಿದ್ದರು. ಆದ್ದರಿಂದಲೆ ಕೂಸನ್ನು ತೊಟ್ಟಿಲಿಗೆ ಹಾಕುವ ದಿನ, ಆಹ್ವಾನಿಸಿದ್ದರೂ ಕೂಡ, ಕಾನೂರಿನಿಂದ ಯಾರೊಬ್ಬರೂ ಬರದಿದ್ದರೂ, ಪುಟ್ಟಮ್ಮ ನಿಜವಾಗಿ ವ್ಯಸನಪಡಲಿಲ್ಲ . ತಾನು ಮಲತಾಯಿಯ ಮಗಳಾದುದರಿಂದ ತನ್ನ ಮೇಲೆ ರಾಮಣ್ಣಯ್ಯನಿಗೆ ಅಕ್ಕರೆಯಿಲ್ಲ ಎಂದು ಮರುಗಲು ಪ್ರಯತ್ನಿಸಿದಳು. ಆದರೆ ಆ ಪ್ರಯತ್ನ ಕೂಡ ಕರ್ತವ್ಯ ಮಾತ್ರದಂತಿತ್ತು!

ಅಗ್ರಹಾರದ ವೆಂಪ್ಪಯ್ಯಜೋಯಿಸರು ಕೂಸಿಗೆ “ಕರಿಯಣ್ಣ’ ಎಂದು ಹುಟ್ಟು ಹೆಸರು ಇಟ್ಟುಕೊಟ್ಟಿದ್ದರಂತೆ.

ಚಿನ್ನಯ್ಯ “ಈ ಹಾರುವರ ದೆಸೆಯಿಂದ ನಮಗೆ ಉಳಿಗಾಲವಿಲ್ಲ! ನಮಗೆ ವಿದ್ಯೆ ಬುದ್ಧಿ ಚೆನ್ನಾಗಿ ಕೊಡಲಿಲ್ಲವಲ್ಲಾ, ಹೋಗಲಿ! ಒಳ್ಳೊಳ್ಳೆ ಹೆಸರುಗಳನ್ನಾರರೂ ಇಟ್ಟುಕೊಡಬಾರದೆ! ಅದಕ್ಕೂ ಹೊಟ್ಟಕಿಚ್ಚು ಅಂತಾ ಕಾಣ್ತದೆ. ಕರಿಯ, ಸಿಂಡ, ತಿಮ್ಮ, ಕಾಳ, ಬೋಳ ಇವೆ ತಮ್ಮ ಪಾಲಿಗೆ!” ಎಂದು ಹೂವಯ್ಯನಿಗೆ ಒಂದು ಒಳ್ಳೆಯ ಕರೆಯುವ ಹೆಸರು ಇಡುವಂತೆ ಹೇಳಿದನು.

ಸೀತೆ, ಸಿಂಗಪ್ಪಗೌಡರು, ಹೂವಯ್ಯ, ಚಿನ್ನಯ್ಯ, ಲಕ್ಷ್ಮಿ, ಕಾಳ, ನಂಜ, ಇನ್ನಿತರ ನಾಲ್ಕು ಐದು ನಂಟರು ಎಲ್ಲರೂ ಸೇರಿ ನಾಮಕರಣಕ್ಕಾಗಿ ಬಹಳ ಕಾಲ ಚರ್ಚೆ ಮಾಡಿದರು. ಆ ಕೂಗಾಟ, ಆ ಗಲಾಟೆ, ಆ ನಗು ಇವನ್ನೆಲ್ಲಾ ಕೇಳಿ ಶ್ಯಾಮಯ್ಯಗೌಡರೂ ಅಲ್ಲಿಗೆ ಬಂದು ಸೇರಿದರು. ಸ್ವಲ್ಪ ಹೊತ್ತಿನಲ್ಲಿಯೆ ಅವರೂ ಹುಡುಗರಂತೆ ಚರ್ಚೆಯಲ್ಲಿ ರಭಸದಿಂದ ಭಾಗಿಗಳಾಗಿದ್ದುದನ್ನು ಕಂಡು ಹೂವಯ್ಯನಿಗೆ ಆಶ್ಚರ್ಯವಾಯಿತು.

ಕಟ್ಟಕಡೆಗೆ ಸೀತೆ ತನ್ನ ಕೊಟಡಿಗೆ ಹೋಗಿ ವೆಂಕಟಾಚಾರ್ಯರ ಕಾದಂಬರಿಯಲ್ಲಿ ಹುಡುಕಿ ನೋಡಿಕೊಂಡು ಬಂದು “ರಮೇಶ’ ಎಂಬ ಹೆಸರು ಬಹಳ ಚೆನ್ನಾಗಿದೆ ಎಂದು ಹೇಳಿದಳು.

ಲಕ್ಷ್ಮಿ ಏತಕ್ಕೊ ಏನೊ ಸುಮ್ಮನೆ ಹಿಂದುಮುಂದು ನೋಡದೆ ಅಕ್ಕಯ್ಯನ ಮಾತನ್ನು ಸಮರ್ಥಿಸಿದಳು. ಆ ಹೆಸರು ಅಷ್ಟು ಚೆನ್ನಾಗಿಲ್ಲ ಎಂದು ಭಿನ್ನಾಭಿಪ್ರಾಯ ಬರಲು ಅಳತೊಡಗಿದಳು. ಅವಳ ಸತ್ಯಾಗ್ರಹಕ್ಕೆ ಬೆದರಿ ಒಡನೆಯೆ ಎಲ್ಲರೂ ಒಪ್ಪಿಗೆಯಿತ್ತರು. ಜಯಶೀಲಳಾದ ಲಕ್ಷ್ಮಿ ಕೂಸಿನ ಹತ್ತಿರ ಹೋಗಿ ’ರಮೇಶಾ! ರಮೇಶಾ!’ ಎಂದು ಕರೆಯುತ್ತಾ ಅದರ ಎರಡು ತುಂಬು ಕೆನ್ನೆಗಳನ್ನೂ ತನ್ನೆರಡು ಮುದ್ದು ಕೈಗಳಿಂದ ಮುಟ್ಟಿ ಒತ್ತಿದಳು. ಜೊಲ್ಲು ಸುರಿಸುತ್ತಾ ತನ್ನ ಹೆಬ್ಬೆರಳನ್ನು ಚೀಪುತ್ತಿದ್ದ ಶಿಶು,ಆ ಕಾರ್ಯವನ್ನು ತತ್ಕಾಲಕ್ಕೆ ನಿಲ್ಲಿಸಿ, ತಿಳಿನೋಟದಿಂದ ನೋಡುತ್ತಾ ನಗೆಬೀರಿತು.

ಮರುದಿನ ಹೂವಯ್ಯ ಕೆಳಕಾನೂರಿಗೆ ಹಿಂತಿರುಗುವಾಗ ಕೆಲವು ದಿನಗಳ ಮೇಲೆ ಬಾಲೆ ಬಾಣಂತಿಯರನ್ನೂ ಲಕ್ಷ್ಮಿಯನ್ನೂ ಕರೆದುಕೊಂಡು ಕೆಳಕಾನುರಿಗೆ ಬರಬೇಕೆಂದು ಸೀತೆಗೆ ಆಹ್ವಾನವಿತ್ತನು. ಸೀತೆ ಚಿನ್ನಯ್ಯನಕಡೆ ನೋಡಿದಳು. ಅವನು ಸುಖರಸದಿಂದ ತುಂಬಿ ತುಳುಕುತ್ತಾ “ಓಹೊ, ಅದಕ್ಕೇನಂತೆ!” ಎಂದು ಸಮ್ಮತಿಯಿತ್ತನು.

ಹೂವಯ್ಯ ಕಾನೂರಿಗೆ ಹೋಗುವ ಪ್ರಸ್ತಾಪವನ್ನೆ ಸೀತೆಯೊಡನೆ ಎತ್ತಲಿಲ್ಲ. ರಾಮಯ್ಯ ತನ್ನನ್ನು ನೋಡದೆ ತಿರಸ್ಕರಿಸಿದಮೇಲೆ ಆತನ ಸ್ಥಿತಿಗತಿಯನ್ನು ಅರಿಯದೆ, ಸೀತೆಯನ್ನು ಅಲ್ಲಿಗೆ ಹಿಂತಿರುಗುವಂತೆ ಕೇಳಿಕೊಳ್ಳುವುದು ಅಪಾಯವೆಂದು ಭಾವಿಸಿ ಸುಮ್ಮನಾದನು. ಆಳ ನೋಡದೆ ಬಾವಿಗೆ ತಳ್ಳಿದಂತಾದರೆ!