ಮುತ್ತಳ್ಳಿ ತೀರ್ಥಹಳ್ಳಿಗೆ ಸುಮಾರು ಮೂರು ಮೂರುವರೆ ಮೈಲಿಯ ದೂರದಲ್ಲಿ ಕೊಪ್ಪಕ್ಕೆ ಹೋಗುವ ಸರಕಾರಿ ರಸ್ತೆಯ ಬಲಭಾಗದಲ್ಲಿತ್ತು. ಅಲ್ಲಿಯ ಸಾಹುಕಾರರೂ ಪಟೇಲರೂ ಆದ ಶ್ಯಾಮಯ್ಯಗೌಡರ ಹೆಂಚಿನ ಮನೆ ಮರಗಳ ಮರೆಯಲ್ಲಿದ್ದರೂ ರಸ್ತೆಗೆ ಸ್ವಲ್ಪಮಟ್ಟಿಗೆ ಕಾಣುವಂತಿತ್ತು. ರಸ್ತೆಯಿಂದ ಅವರ ಮನೆಗೆ ಸುಮಾರು ಎರಡು ಮೂರು ಫರ್ಲಾಂಗುಗಳಷ್ಟು ಗಾಡಿಹಾದಿಯಿತ್ತು. ಅಲ್ಲಿಗೆಲ್ಲಿ ಅವರದೊಂದೆ ದೊಡ್ಡ ಮನೆ. ಉಳಿದುವು ಅವರ ಒಕ್ಕಲುಗಳ ಹುಲ್ಲು ಮನೆಗಳು ಮತ್ತು ಅವರ ಕೂಲಿಯಾಳುಗಳ ಹುಲ್ಲುಗುಡಿಸಲುಗಳು.

ಶ್ಯಾಮಯ್ಯಗೌಡರ ಮಗ ಚಿನ್ನಯ್ಯನು ತರುಣನು. ಅವನು ತೀರ್ಥಹಳ್ಳಿಯಲ್ಲಿ ಕೆಲವು ಕಾಲ ಓದಿ ಬಿಟ್ಟಿದ್ದನು. ಅವನಿಗೆ ಬೇಟೆ ಎಂದರೆ ಬಹಳ ಪ್ರೀತಿ. ಹೊಟ್ಟೆಗೆ ಅನ್ನವಿಲ್ಲದಿದ್ದರೂ ಲಕ್ಷಿಸದೆ ಕೋವಿ ಹಿಡಿದು ಕಾಡಿನಲ್ಲಿ ತಿರುಗುವುದೆಂದರೆ ಅವನಿಗೆ ಪರಮಾಹ್ಲಾದ. ಅವನು ಒಳ್ಳೆಯ ಈಡುಗಾರನೂ ಹೌದು. ಅವನಿಟ್ಟ ಗುರಿ ತಪ್ಪದು ಎಂದು ಹಳ್ಳಿಯವರಿಗೆಲ್ಲ ತಿಳಿದುಹೋಗಿತ್ತು. ಅವನದು ಒಳ್ಳೆಯ ಸಂತೋಷದ ಪ್ರಕೃತಿ; ಬಹಳ ಸರಳ ಸ್ವಭಾವದವನು. ಹೂವಯ್ಯ ರಾಮಯ್ಯರಲ್ಲಿ ಅವನಿಗೆ ಬಹಳ ಸ್ನೇಹ. ಬಾಂಧವ್ಯದ ಜೊತೆಗೆ ಸ್ನೇಹವೂ ಬೆರೆತರೆ ಕೇಳಬೇಕೆ?

ಪ್ರಾತಃಕಾಲ ತೋಟದ ಕಡೆಗೆ ಹೋಗಿದ್ದ ಚಿನ್ನಯ್ಯನು ಸರಕಾರಿ ರಸ್ತೆಯ ಮಾರ್ಗವಾಗಿ ತಮ್ಮ ಮನೆಗೆ ಹೋಗುತ್ತಿದ್ದನು. ಅವನು ಪ್ರತಿದಿನವೂ ಪ್ರಾತಃಕಾಲ ಹಾಗೆ ತಿರುಗಾಡುವುದು ವಾಡಿಕೆಯಾಗಿತ್ತು. ಒಳ್ಳೆಯ ಗಾಳಿಯನ್ನು ಸೇವಿಸಬೇಕೆಂದಲ್ಲ ಅವನು ಹಾಗೆ ಸಂಚಾರ ಹೋಗುತ್ತಿದ್ದುದು; ತಂದೆಗೆ ತಿಳಿಯದಂತೆ ಸಿಗರೇಟು ಸೇದಲೋಸುಗ! ತೀರ್ಥಹಳ್ಳಿಯ ಶಾಲೆಯಲ್ಲಿ ಅವನು ಕಲಿತ ವಿದ್ಯೆಗಳಲ್ಲಿ ಅದೊಂದು ಶಾಶ್ವತವಾಗಿ ಅವನನ್ನು ಕೈಬಿಡದಿತ್ತು.

ಚಿನ್ನಯ್ಯನು ರಸ್ತೆಯಲ್ಲಿ ವಿರಾಮವಾಗಿ ಸಿಗರೇಟು ಸೇದುತ್ತ ಬರುತ್ತಿದ್ದನು. ನಾಲ್ಕೈದು ನಾಯಿಗಳು ಅವನ ಸುತ್ತಮುತ್ತಲೂ ಪರಿವಾರ ಕಟ್ಟಿಕೊಂಡು ಬರುತ್ತಿದ್ದುವು. ಇದ್ದಕ್ಕಿದ್ದಹಾಗೆ ಗಾಡಿ ಎತ್ತಿನ ಗಂಟೆಯ ಸದ್ದು ಕೇಳಿಸಿತು. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ಗಾಡಿ ಇರಬಹುದೆಂದು ಚಿನ್ನಯ್ಯ ಹಿಂತಿರುಗಿ ನೋಡಿದನು. ಯಾವ ಗಾಡಿಯೂ ಕಾಣಿಸಲಿಲ್ಲ. ಪುನಃ ತಿರುಗಿ ಎದುರಿಗೆ ನೋಡಲು ಹಾದಿಯ ತಿರುಗಣೆಯಲ್ಲಿ ಕಮಾನುಗಾಡಿಯೊಂದು ತನ್ನ ಕಡೆಗೆ ಬರುತ್ತಿದ್ದುದು ಗೋಚರಿಸಿತು. ಕಾನೂರು ಚಂದ್ರಯ್ಯಗೌಡರ ಗಾಡಿ ಎಂಬುದು ಅವನಿಗೆ ಒಡನೆಯ ಗೊತ್ತಾಗಿ ಅರ್ಧ ಪೂರೈಸಿದ್ದ ಸಿಗರೇಟನ್ನು ಹಾದಿಯ ಪಕ್ಕದ ಒಂದು ಪೊದರಿಗೆ ಬಿಸಾಡಿದನು. ಅವನು ಹಾಗೆ ಮಾಡಿದುದರಲ್ಲಿ ಏನೋ ಒಂದು ವಿಧವಾದ ಚೋರಭಾವವಿತ್ತು. ಸಿಗರೇಟನ್ನು ಪೊದೆಗೆ ಎಸೆಯಲು ಎರಡು ಮೂರು ನಾಯಿಗಳು ಅಲ್ಲಿಗೆ ಓಡಿಹೋಗಿ ಹೊಗೆಯಾಡುತ್ತಿದ್ದ ಅದನ್ನು ಮೂಸಿ ನೋಡಿದುವು. ಚಿನ್ನಯ್ಯನು ಗದರಿಸಿ ಕರೆಯಲು ಹಿಂದಕ್ಕೆ ಬಂದುವು.

ಗಾಡಿ ಅವನ ಪಕ್ಕದಲ್ಲಿ ನಿಂತಿತು. ಒಳಗಿನಿಂದ “ನಮಸ್ಕಾರ” ಎಂದು ಧ್ವನಿಯಾಯಿತು.

“ಯಾರದು? ಪುಟ್ಟಣ್ಣನೇನೋ?” ಎಂದನು ಚಿನ್ನಯ್ಯ. ನಿಂಗ ಬಹಳ ಭಯಭಕ್ತಿಯಿಂದ “ಹೌದು, ಅಯ್ಯ” ಎಂದನು.

ಪುಟ್ಟಣ್ಣನು ಗಾಡಿಯ ಮುಂಭಾಗದಲ್ಲಿ ಹೊರಗೆ ಇಣಿಕಿ ಮುಖ ಹಾಕಿದನು.

“ದೂರ?” ಎಂದು ಕೇಳಿದನು ಚಿನ್ನಯ್ಯ.

“ಇಲ್ಲ ತೀರ್ಥಹಳ್ಳಿಯವರೆಗೆ.”

“ಯಾಕೆ?- ಓಹೋ ಹೂವಯ್ಯ ರಾಮಯ್ಯ ಬರ್ತಾರೇನು?”

“ಹೌದು, ಕಾಗದ ಬಂದಿದೆ. ಅದಕ್ಕೇ ಗಾಡಿ ಕಳಿಸಿದ್ದಾರೆ.”

“ನಾನು ಗಾಡಿಯಲ್ಲಿ ಮಾವ ಇದ್ದಾರೆ ಅಂತ ಮಾಡಿದ್ದೆ” ಎಂದು ಚಿನ್ನಯ್ಯನು ಹೇಳುತ್ತಿದ್ದ ಹಾಗೆಯೆ ಡೈಮಂಡು ರೂಬಿಯನ್ನು ಕಚ್ಚಿ ಮುರಿದು ಗಲಾಟೆ ಎಬ್ಬಿಸಿತು. ಓಡಿಹೋಗಿ ಡೈಮಂಡಿಗೆ ಒಂದು ಪೆಟ್ಟು ಕೊಟ್ಟು ಓಡಿಸಿ ಬಂದು” ಹಾಗಾದರೆ ಮಧ್ಯಾಹ್ನದ ಊಟಕ್ಕೆ ನಮ್ಮಲ್ಲಿಗೆ ಬಂದುಬಿಡಲಿ” ಎಂದನು.

“ಗೌಡರು ಸೀದಾ ಮನೆಗೇ ಬಂದುಬಿಡಿ ಅಂತಾ ಹೇಳಿದಾರೆ.”

“ಹೂವಯ್ಯನಿಗೆ ಹೇಳು, ನಾನು ಹೇಳ್ದೆ ಅಂತ. ಇವತ್ತೊಂದು ದಿನ ಮನೆಗೆ ಹೋಗದಿದ್ದರೆ ಗಂಟು ಮುಳುಗಿ ಹೋಗುವುದಿಲ್ಲ.”

ಪುಟ್ಟಣ್ಣ ಹಲ್ಲುಬಿಟ್ಟು ನಗುತ್ತ “ಅದಕ್ಕಲ್ಲ! ಗೌಡರು ಸಿಟ್ಟು ಮಾಡ್ತಾರೋ ಏನೋ? ಎಂದು ನಾನು ಹಾಂಗೆ ಹೇಳಿದ್ದು. ನೀವು ಮತ್ತೇನೂ ತಿಳುಕೊಳ್ಳಬಾರದು” ಎಂದನು.

“ನಾನು ಹೇಳ್ದೆ ಅಂತ ಹೇಳು ಹೂವಯ್ಯನಿಗೆ. ನೀವು ಇಲ್ಲಿಗೆ ಬರಬೇಕಾದರೇನೆ ಹನ್ನೆರಡು ಗಂಟೆ ಹೊಡೆದಿರುತ್ತದೆ. ಊಟ ಮಾಡಿಕೊಂಡು ಹೊತ್ತು ಇಳಿದ ಮೇಲೆ ಹೋದರಾಯಿತು.

“ಆಗಲಿ ಹೇಳ್ತೀನಿ.”

ಚಿನ್ನಯ್ಯನು ಮಾತಾಡುತ್ತ ಲಚ್ಚನ ತೊಡೆಯಮೇಲಿದ್ದ ಒಂದು ಸಣ್ಣ ಗಾಯವನ್ನೇ ನೋಡುತ್ತಿದ್ದವನು ಪುಟ್ಟಣ್ಣನೊಡನೆ ಮಾತು ನಿಂತೊಡನೆ “ಇದೇನೋ ನಿಂಗಾ, ಎತ್ತಿನ ತೊಡೆಯಮೇಲೆ ಗಾಯ?” ಎಂದನು.

ನಿಂಗನು “ಯಾವುದೋ ಎತ್ತು ಇಡಿದಿದ್ದು. ಏನು ಮಾಡೋದು? ಈ ಲಚ್ಚೆತ್ತು ಎಲ್ಲ ಎತ್ತಿನ ಕೈಲೂ ಕೋಡಾಟಕ್ಕೆ ಹೋಗ್ತದೆ…” ಎಂದು ಕಥೆಯನ್ನು ಮುಂದುವರಿಸುವುದರಲ್ಲಿದ್ದನು. ಚಿನ್ನಯ್ಯನು “ಹಾಗಾದರೆ ಹೊರಡಿ-ಪುಟ್ಟಣ್ಣಾ, ಅವರಿಬ್ಬರಿಗೂ ಹೇಳು ನಾನು ಕಾಯುತ್ತಿರ್ತೇನೆ ಅಂತಾ” ಎಂದನು.

ಪುಟ್ಟಣ್ಣನು “ಆಗಲಿ, ನಮಸ್ಕಾರ” ಎಂದನು. ಗಂಟೆಯ ನಾದದೊಡನೆ ಗಾಡಿ ಹೊರಟಿತು.

ಗಾಡಿ ಕಣ್ಮರೆಯಾದ ಮೇಲೆ ಚಿನ್ನಯ್ಯನು ಪೊದೆಯ ಬಳಿಗೆ ಹೋಗಿ ಹುಡುಕಿದನು. ಅವನು ಪೊದೆಗೆ ಕೈಯಿಟ್ಟ ಕೂಡಲೆ ಹೆಣ್ಣೋತಿಯೊಂದು ಚಿಮ್ಮಿ ನೆಗೆದು ಓಡಿತು. ನಾಯಿಗಳು ಅದನ್ನು ಬೆನ್ನಟ್ಟಿದುವು. ಆದರೆ ಅದು ಸಿಕ್ಕದೆ ಮತ್ತೊಂದು ಪೊದೆಯಲ್ಲಿ ಅವಿತುಕೊಂಡು ಪ್ರಾಣರಕ್ಷಣೆಮಾಡಿ ಕೊಂಡಿತು. ಸಿಗರೇಟು, ಇನ್ನೂ ಹೊಗೆಯಾಡುತ್ತಲೆ ಇತ್ತು. ಅದನ್ನು ಬಾಯಿಗಿಟ್ಟು ಸೇದಿದ ಕೂಡಲೆ ಸಜೀವವಾಯಿತು. ಚಿನ್ನಯ್ಯನು ತನ್ನ ತಾನೇ ನಗದಿರಲಿಲ್ಲ.

ಮನೆಯ ಕಡೆಗೆ ಹೋಗುತ್ತಿದ್ದಾಗ ಅವನ ಮನಸ್ಸಿನಲ್ಲಿ ಏನೋ ಒಂದು ಹೊಸ ಯೋಚನೆ ಮೂಡಿ, ಅದನ್ನು ಸವಿದು ಸಂತೋಷಪಟ್ಟನು. ಹೂವಯ್ಯ ರಾಮಯ್ಯರನ್ನು ಆ ರಾತ್ರಿ ಮನೆಯಲ್ಲಿಯೇ ಉಳಿಸಿಕೊಳ್ಳಬೇಕೆಂದು ನಿರ್ಧರಿಸಿ, ರಾತ್ರಿಯ ಔತಣಕ್ಕಾಗಿ ಮೀನಿನ ಷಿಕಾರಿ ಮಾಡಬೇಕೆಂದು ಯೋಚಿಸಿ, ನಂಜನ ಹುಲ್ಲುಮನೆಯ ಬಳಿ ಹೋಗಿ ಅವನನ್ನು ಕೂಗಿದನು. ಕಂಬಳು ಹೊದೆದುಕೊಂಡ ಕರಿಯ ವ್ಯಕ್ತಿಯೊಂದು ಗುಡಿಸಿಲಿನ ಕಗ್ಗವಿಯಿಂದ ಈಚೆಗೆ ಬಂದಿತು.

ಚಿನ್ನಯ್ಯನು “ಬೈಲುಕೆರೆಗೆ ಮೀನು ಹೊಡೆಯೋಕೆ ಹೋಗಬೇಕು. ಎಂಟುವರೆ ಗಂಟೆ ಹೊತ್ತಿಗೆ ಮನೆಗೆ ಬಾ” ಎಂದನು.

ನಂಜನು ಕಂಬಳಿಯ ಒಳಗೆ ತೊಡೆಯನ್ನು ಬರಬರನೆ ಕೆರೆದುಕೊಳ್ಳುತ್ತ ದೀರ್ಘವಾಗಿ” ಅದರಾಗೆಲ್ಲಿ ಮೀನು ಅವೆ? ಸಿಕ್ಕಿದೋರೆಲ್ಲ ಹೊಡೆದು ತೆಗೆದುಬಿಟ್ಟಿದ್ದಾರೆ. ತೂಬಿನ ಕೆರೆಗಾದರೂ ಹೋಗಬೈದಿತ್ತು” ಎಂದನು.

“ಬೇಡ. ಬೈಲುಕೆರೆಗೇ ಹೋಗೋಣ. ರಸ್ತೆ ಪಕ್ಕದಲ್ಲಿದೆ. ಸುಲಭವಾಗಿ ಹೋಗಿ ಬರಬಹುದು. ಅದೂ ಅಲ್ಲದೆ ಕಾನೂರಿನ ಗಾಡಿ ತೀರ್ಥಹಳ್ಳಿಗೆ ಹೋಗಿದೆ. ಹನ್ನೆರಡು ಗಂಟೆ ಹೊತ್ತಿಗೆ ಹಿಂದಕ್ಕೆ ಬರಬಹುದು. ಬರುವಾಗ ಅದರ ಮೇಲೇ ಹತ್ತಿಕೊಂಡು ಬಂದರಾಯಿತು. ಮತ್ಯಾರು ಆ ತೂಬಿನ ಕೆರೆಗೆ ಸಾಯ್ತಾರೆ ಅಷ್ಟು ದೂರ ಆ ಬಿಸಿಲಿನಲ್ಲಿ?”

ನಂಜನು ಸಮ್ಮತಿಸಿದನು. ಚಿನ್ನಯ್ಯನು ಮನೆಯ ಕಡೆಗೆ ತಿರುಗಿ, ಸ್ನೇಹಿತರನ್ನು ಸಂಧಿಸುವ ಸಂತೋಷವನ್ನು ಮನಸ್ಸಿನಲ್ಲಿಯೆ ಸವಿಯುತ್ತ ಹೋದನು.

ಶುನಕ ಪರಿವಾರವೂ ಆತನನ್ನು ಹಿಂಬಾಲಿಸಿತ್ತು.

ಹುಲ್ಲುಗುಡಿಸಿಲಿನ ಕಿರುಬಾಗಿಲಿನಲ್ಲಿ. ಒಳಗರ್ಧ ಹೊರಗರ್ಧ ದೇಹ ಮಾಡಿಕೊಂಡು ಹೊಸ್ತಿಲ ಮೇಲೆ ಒಂದು ಕಾಲಿಟ್ಟು. ಬಾಗಿಲ ಎರಡು ನಿಲುವುಗಳನ್ನು ಎರಡು ಕೈಯಿಂದಲೂ ಹಿಡಿದು ಬಿಲ್ಲಿನಂತೆ ಬಾಗಿ ನಿಂತಿದ್ದ ನಂಜನು ಹಾಕಿಕೊಂಡಿದ್ದ ತಾಂಬೂಲದ ಕೆಂಪು ಉಗುಳನ್ನು ಬಾಗಿಲಿನ ಒಂದು ಹೊರಭಾಗದ ಪಕ್ಕಕ್ಕೆ ಬಾಣದಂತೆ ಪಿಚಕ್ಕನೆ ಉಗುಳಿ, ಗಂಟಲು ಸರಿಮಾಡಿಕೊಳ್ಳಲೆಂಬಂತೆ ಕೆಮ್ಮುತ್ತ, ಆಮೆಯ ತಲೆ ಅದರ ದೇಹದಲ್ಲಿ ಹುದುಗುವಂತೆ ಗುಡಿಸಿಲೊಳಗೆ ಹೋದನು. ಹುಲ್ಲು, ತರಗು, ಕಬ್ಬಿನ ಸಿಪ್ಪೆ, ಮಡಕೆ ಚೂರು, ಕಂಬಳಿ ಚಿಂದಿ ಮೊದಲಾದ ಪದಾರ್ಥ ಮತ್ತು ಪದಾರ್ಥಶೇಷಗಳು ಅಸ್ತವ್ಯಸ್ತವಾಗಿ ಕಿಕ್ಕಿರಿದು ಹರಡಿದ್ದ ಆ ಗುಡಿಸಿಲಿನ ಅಂಗಳದಲ್ಲಿ,  ಅಥವಾ ಅಂಗಳ ಎಂಬ ಹೆಸರಿನ ಸ್ಥಾನದಲ್ಲಿ, ನಂಜನ ಎಂಜಲಿಗೂ ಸ್ಥಳ ಸಿಕ್ಕಿ ಒಂದಷ್ಟು ಜಾಗ ಕೆಂಪಾಯಿತು. ಉಗುಳು ಬಿದ್ದ ಜಾಗದಿಂದ ಕೆಂಪು ನೊಣಗಳು ಗೊಂಯ್ಯೆಂದು ಹಾರಿ ಮತ್ತೆ ಕೂತುವು.

ನಂಜನು ಜಾತಿಯಲಲ್ಲಿ ಕುಂಬಾರ. ಆದರೆ ಅವನಿಗೆ ತನ್ನ ಜಾತಿಯ ಕಸುಬು ಒಂದು ವಿನಾ ಉಳಿದೆಲ್ಲ ಕಸುಬುಗಳೂ ತಕ್ಕಮಟ್ಟಿಗೆ ಬರುತ್ತಿದ್ದುವು. ಅವನು ಶಾಮಯ್ಯಗೌಡರ ಒಕ್ಕಲಾಗಿ ಅವರ ಗದ್ದೆ ಮಾಡಿ ಕೊಂಡಿದ್ದರೂ ಅವನ ಆಸಕ್ತಿಯೆಲ್ಲ ಬೇರೆಯ ಕಡೆಗಿತ್ತು. ಒಳ್ಳೆಯ ಈಡುಗಾರನಾಗಿದ್ದರೂ ಅನೇಕ ದೊಡ್ಡ ಬೇಟೆಗಳಲ್ಲಿ ಸಾಹಸಕಾರ್ಯಗಳನ್ನು ಸಾಧಿಸಿದ್ದರೂ ಆ ವಿಚಾರವಾಗಿ ಜನರು ಅವನನ್ನು ಹೊಗಳುತ್ತಿದ್ದರೂ ಅವನಿಗೆ ಅದರ ಲಕ್ಷ್ಯ ಇರಲಿಲ್ಲ. ಅವನು ಬೇಟೆಯಾಡುತ್ತಿದ್ದುದು ಮಾಂಸಕ್ಕಾಗಿ. ಅದನ್ನು ಹೊಗಳದೆ ತನ್ನ ಗುರಿ, ಸಾಮಥ್ಯ, ಧೈರ್ಯ ಇವುಗಳನ್ನು ಹೆಂಡ, ಕಳ್ಳು, ಅದಕ್ಕಾಗಿ ಅವನು ರಾತ್ರಿ ಹಗಲೆನ್ನದೆ ಮಳೆ ಬಿಸಿಲೆನ್ನದೆ ದೂರ ಸಮೀಪ ಎನ್ನದೆ ಮನೆ ಮನೆಗೂ ಅಲೆಯುತ್ತಿದ್ದನು. ಎಷ್ಟೋ ಸಾರಿ ರಾತ್ರಿಯೆಲ್ಲಾ ಹಾದಿಯಬಳಿ ಕುಡಿದು ಬಿದ್ದಿದ್ದು ಬೆಳಗ್ಗೆ ಮನೆಗೆ ಬಂದಿದ್ದನು. ಒಂದು ಸಾರಿ ಮಳೆಗಾಲದ ಸಂಜೆಯಲ್ಲಿ ಅವನು ಒಂದು ಹಳ್ಳಿಗೆ ಹೋಗಿ ಚೆನ್ನಾಗಿ ಅಕ್ಕಿಬೋಜ ಕುಡಿದು, ಮತ್ತೇರಿ, ಕೆಸರುಗದ್ದೆಯ ಅಂಚಿನಲ್ಲಿ ತೂರಾಡುತ್ತ ಬರುತ್ತಿದ್ದನು. ಹೆಗಲ ಮೇಲೆ ಯಜಮಾನರು ಅವನಿಗಾಗಿ ಇಟ್ಟುಕೊಳ್ಳಲಿ ಕೊಟ್ಟಿದ್ದ ಒಂದು ಕೇಪಿನ ಬಂದೂಕೂ ಇತ್ತು. ಬಹುಶಃ ನಂಜನ ಮನೋರಾಜ್ಯದಲ್ಲಿ ಅವನೇ ಚಕ್ರೇಶ್ವರನಾಗಿದ್ದಂತೆ ತೋರುತ್ತಿದ್ದಿತೋ ಏನೋ? ಇದ್ದಕ್ಕಿದ್ದಂತೆ ಅವನ ಕಣ್ಣಿಗೆ ವಿಕಾರಾಕೃತಿಯುಳ್ಳ ಭಯಂಕರ ಶತ್ರುವೊಬ್ಬನು ಗೋಚರವಾದನು. ನಂಜನು ತೂರಾಡುತ್ತ ತೊದಲುತ್ತ” ಆ‌‌ಞ! ನ-ನ್ನ ಮುಂ-ದೇ-ನೇ ನಿ-ನ್ನಾ-ಟ” ಎಂದು ಬಂದೂಕನ್ನು ಕೈಲಿ ತೆಗೆದುಕೊಂಡು, ನೆಲದ ಕಡೆಗೆ ಚಾಚಿ ಗದ್ದೆಯಂಚಿನ ಕೆಳಭಾಗಕ್ಕೆ ಗುರಿಯಿಟ್ಟನು.ಡೊಗರಿನಿಂದ ಆಹಾರಾನ್ವೇಷಣೆಗಾಗಿ ಆಗತಾನೆ ಹೊರಗೆ ಬಂದಿದ್ದ ಕಾರೇಡಿಯೊಂದು ತನ್ನ ಬಳಿಗೆ ಕರಿಯಕೋಲು ಬರುತ್ತಿದ್ದುದನ್ನು ಕಂಡು ಬೆದೆರಿ,ಕೊಂಬುಗಳನ್ನು ಮೇಲಕ್ಕೆ ನಿಮಿರಿಸಿಕೊಂಡು ಡೊಗರಿನ ಕಡೆಗೆ ಓಡತೊಡಗಿತು. ನಂಜನ ಕಣ್ಣಿಗೆ ಶತ್ರುವು ವಿಕಟಾಕಾರವಾದ ತನ್ನ ತೋಳುಗಳನ್ನು ಮೇಲೆತ್ತಿ ಉರವಣಿಸಿ ಬರುತ್ತಿದ್ದಂತೆ ತೋರಿ” ಆಞ! ಮತ್ತೆ! ನಾ-ನ್ಯಾ-ರು! ಗೊತ್ತೇ! ಎಂದವನು ಗುಂಡು ಹಾರಿಸಿಯೆಬಿಟ್ಟು ಗುಂಡು ನಳ್ಳಿಗೆ ಸವರಿಕೊಂಡು ಹೋಗಿ ಗದ್ದೆಯ ನೆಲವನ್ನು ಪ್ರವೇಶಿಸಿ ಕೆಸರನ್ನು ಮುದ್ದೆ ಮುದ್ದೆಯಾಗಿ ಮೇಲಕ್ಕೆ ಹಾರಿಸಿತು. ನಳ್ಳಿ ನುಚ್ಚು ನೂರಾಯಿತು! ನಂಜನು ಕುಡಿದ ಮತ್ತಿನಲ್ಲಿ ಮೊದಲೇ ತೂರಾಡುತ್ತಿದ್ದವನು ಕೋವಿಯನ್ನು ಬಲವಾಗಿ ಎದೆಗೊತ್ತಿ ಹಿಡಿದಿರಲಿಲ್ಲವಾಗಿ,ಅದು ಈಡು ಹಾರಿಸಿದೊಡನೆ ಹಿಂದಕ್ಕೆ ಒದ್ದುದರಿಂದ  ದುಢುಮ್ಮನೆ ಗದ್ದೆಗೆ ಬಿದ್ದನು. ಬತ್ತದ ಸಸಿಗಳೆಲ್ಲ ಬಾಗಿ ಮುರಿದು. ಅವನ ಮೈ ಮುಖ ಎಲ್ಲವೂ ಕೆಸರಾಯಿತು. ದೂರದಲ್ಲಿ ಗದ್ದೆಯ ಕೆಲಸದಲ್ಲಿದ್ದ ಕೆಲವರು ಓಡಿಬಂದು ನೋಡಲು ಸಾಹಸದ ಆದ್ಯಂತವೆಲ್ಲ ಗೊತ್ತಾಗಿ ಚೆನ್ನಾಗಿ ನಕ್ಕುಬಿಟ್ಟರು. ಕೈಯಲ್ಲಿ ಹಿಡಿಯಬಹುದಾಗಿದ್ದ ಬಡಪ್ರಾಣಿಯಾದ ಏಡಿಗೆ ಗುಂಡು ಹೊಡೆದು ಸಂಹರಿಸಿದ ಕಥೆ ಊರೆಲ್ಲ ಹಬ್ಬಿ ನಂಜನು ನಗೆಗೀಡಾದನು. ಗೌಡರು ಮಾತ್ರ ಕೋವಿಗೆ ಬಾಗುಬಂದಿತೆಂದು ಅವನನ್ನು ಚೆನ್ನಾಗಿ ಅಂದರು.

ನಂಜನು ಬೇಗ ಬೇಗ ಗಂಜಿಯೂಟ ಮಾಡಿಕೊಂಡು ಗೌಡರ ಮನೆಗೆ ಹೋದನು. ಚಿನ್ನಯ್ಯ ಆಗಲೆ ಹೊರಡಲು ಸಿದ್ದವಾಗಿದ್ದನು. ಒಡೆಯನು ತೋಟಾಕೋವಿಯನ್ನೂ ಆಳು ಕೇಪಿನ ಕೋವಿಯನ್ನೂ ಹೆಗಲಮೇಲಿಟ್ಟುಕೊಂಡು ಬೈಲುಕೆರೆಗೆ ಮೀನು ಹೊಡೆಯಲು ಹೊರಟರು. ಅರ್ಧಗಂಟೆಯಲ್ಲಿ ಕೆರೆಯನ್ನು ಸೇರಿ, ಸರಕಾರಿ ರಸ್ತೆಗೆ ಎದುರು ದಡದಲ್ಲಿದ್ದ ಎರಡು ಮರಗಳ ಮೇಲೆ ಇಬ್ಬರೂ ಹತ್ತಿ ಬಂದೂಕು ಹಿಡಿದು ಕುಳಿತರು.

ಗಂಟೆ ಒಂಬತ್ತಾಗಿದ್ದರೂ ಬೇಸಗೆಯ ಬಿಸಿಲು ಬಿರುಸಾಗಿದ್ದರೂ ಆ ಕಾಡಿನ ಹಸುರಿನಲ್ಲಿ ಎಲ್ಲವೂ ತಂಪಾಗಿತ್ತು. ಮನಗಳಿಂದ ತೂರಿ ಬರುತ್ತಿದ್ದ ಬಿಸಿಲಿನ ಕೋಲುಗಳು ನಿಸ್ತರಂಗವಾಗಿ ಕನ್ನಡಿಯಂತೆ ನೀಲಾಕಾಶವನ್ನೂ ಬೆಳ್ಮುಗಿಲುಗಳನ್ನೂ ಪ್ರತಿಬಿಂಬಿಸುತ್ತಿದ್ದ ಕೆರೆಯ ಸಲಿಲವಕ್ಷದಲ್ಲಿ ನಲಿದಾಡುತ್ತಿದ್ದವು. ಕೆರೆಯ ತುಂಬಾ ಪಾಚಿ ಬೆಳೆದಿತ್ತು. ಆದರೆ ಆಳವಾಗಿದ್ದ ಕೆಲವು ಭಾಗಗಳಲ್ಲಿ ಪಾಚಿ ತಲೆಯೆತ್ತಿ ಕಾಣುತ್ತಿರಲಿಲ್ಲವಾದ್ದರಿಂದ  ನಿರ್ಮಲವಾಗಿದ್ದಂತೆ ತೋರುತ್ತಿತ್ತು. ಮೂಲೆಗಳಲ್ಲಿ ಕೆಸು ಜೊಂಡು ಆವಲ ಮೊದಲಾದ ಜಲಸಸ್ಯಗಳು ಬೆಳೆದು ಅರಣ್ಯವಾಗಿತ್ತು. ಅವುಗಳ ಮಧ್ಯೆ ಹುಂಡು ಕೋಳಿಗಳು ಬೆಚ್ಚಿ ಬೆದರಿ ಚಲಿಸುತ್ತಿದ್ದುವು. ಕೆಲವು ಕಪ್ಪೆಗಳು ಆಗಾಗ ವಟಗುಟ್ಟಿ ಹಾರಾಡುತ್ತಿದ್ದುವು. ಗೊದಮಟ್ಟೆಗಳ ಕರಿ ಹಿಂಡುಗಳೂ ಅಲ್ಲಲ್ಲಿ ಮುಲುಗುಟ್ಟುತ್ತಿದ್ದುವು. ಕೆರೆಯ ಮಧ್ಯೆ ಆಗಾಗ ಮೀನುಗಳು ನೀರು ಕಚ್ಚಿದಾಗ ನಿಶ್ಚಲವಾದ ಜಲವು ಕಂಪಿಸಿ ಅಲೆಯಲೆಯಾಗುತ್ತಿತ್ತು. ಅಂತಹ ಸಮಯಗಳಲ್ಲಿ ಬಿಸಿಲಿ ತಳತಳಿಸಿ ಕುಣಿಯುತ್ತಿತ್ತು. ಒಂದೊಂದು ಸಲ ಮೀನುಗಳು ನೀರಿನ ಮೇಲೆ ತೇಲುತ್ತಿದ್ದ ಯಾವುದಾದರೂ ಆಹಾರಪದಾರ್ಥಗಳಿಗೆ ಎರಗುತ್ತಿದ್ದುದರಿಂದ ” ಟುಕ್ ಟುಮಕ್” ಎಂದು ಸದ್ದಾಗುತ್ತಿತ್ತು. ಪಕ್ಷಿಗಾನದಿಂದ ಮಾತ್ರವೇ ಭಗ್ನವಾಗಿದ್ದ ಕಾಂತಾರಮೌನದಲ್ಲಿ ಆ ಸದ್ದು ಶಾಂತಿಗೆ ಚಕ್ಕುಗಳಗುಳಿ ಇಡುವಂತೆ ಕೇಳಿಸುತ್ತಿತ್ತು.

ಚಿನ್ನಯ್ಯನು ಕೂತಿದ್ದ ಕೊಂಬೆ ಕೆರೆಗೆ ಚೆನ್ನಾಗಿ ಬಾಗಿದ್ದುದರಿಂದ ತಾನು ಕೂತಿದ್ದ ಮರ, ತಾನು, ಬಂದೂಕು. ಆಸನಕ್ಕೆ ಮೆತ್ತೆಗಾಗಿ ಹಾಕಿಕೊಂಡಿದ್ದ ಕರಿಯ ಕಂಬಳಿ ಎಲ್ಲವೂ ಖಚಿತ ಚಿತ್ರದಂತೆ ಸ್ಪಷ್ಟವಾಗಿ ನೀರಿನಲ್ಲಿ ಪ್ರತಿಬಿಂಬಿತವಾಗಿದ್ದುವು. ತಾನು ಕೂತಿದ್ದ ಮರದಲ್ಲಿ ಒಂದು ಕೊಂಬೆಯಿಂದ ಮತ್ತೊಂದು ಕೊಂಬೆಗೆ ಚಕ್ರಾಕಾರವಾಗಿ ಬಲೆಯನ್ನು ಬೀಸಿ ಕಟ್ಟಿ, ಅದರ ಕೇಂದ್ರದಲ್ಲಿ ನಿಶ್ಚಲವಾಗಿ ಮಂಡಿಸಿದ್ದ ಬಣ್ಣಬಣ್ಣದ ದೊಡ್ಡ ಸಾಲಗವೊಂದು, ಪ್ರತಿಬಿಂಬದಲ್ಲಿ ಆಕಾಶದ ನೀಲಕ್ಕೆದುರಾಗಿ ಕಾಣುತ್ತಿತ್ತು. ಚಿನ್ನಯ್ಯನು ಕೋವಿಯನ್ನು ಕೈಯಲ್ಲಿ ಹಿಡಿದು ಕೆರೆಯ ಕಡೆಗೇ ಹುಡುಕುನೋಟದಿಂದ ನೋಡುತ್ತ ಕಾದನು.

ಸುಮಾರು ಒಂದು ಗಂಟೆಯ ಹೊತ್ತು ಕಳೆಯಿತು. ಕೆರೆಯ ನೀರಿನ ಮೇಲೆ ಪ್ರಾತಃ ಸೂರ್ಯಾತಪದಲ್ಲಿ ನೀಳವಾಗಿ ಒರಗಿದ್ದ ಮರದ ನೆಳಲೊಂದು ಕ್ರಮೇಣ ಸಂಕುಚಿತವಾಗುತ್ತ ಮರದ ಬುಡದ ಕಡೆಗೆ ಸರಿಯತೊಡಗಿತು. ಕೆರೆಯ ನಡೂಮಧ್ಯೆ ಮೀನುಗಳು ಆಗಾಗ ಕಾಣಿಸುತ್ತಿದ್ದರೂ ಚಿನ್ನಯ್ಯನು ಕುಳಿತಲ್ಲಿ ಅವುಗಳ ಸುಳಿವೂಕೂಡ ಇರಲಿಲ್ಲ. ನೀರು ಆಳವಾಗಿರುವ ಸ್ಥಳದಲ್ಲಿ ಒಂದುವೇಳೆ ಈಡು ಹೊಡೆದರೂ ಮೀನನ್ನು ಹೊರಗೆ  ತೆಗೆಯಲು ಅಸಾಧ್ಯವಾದುದರಿಂದ ಅವನು ಆ ಸಾಹಸಕ್ಕೆ ಕೈಹಾಕಲಿಲ್ಲ. ಒಮ್ಮೆ ಸ್ವಲ್ಪ ದೂರದಲ್ಲಿಯೆ ಮತ್ತೊಂದು ಮರದ ಮೇಲೆ ಕೂತಿದ್ದ ನಂಜನನ್ನು ಕರೆದು “ಏನೋ, ಮೀನು ಕಾಣಿಸುತ್ತವೇನೋ?” ಎಂದು ಕೇಳಿದನು.

“ದೂರದಾಗೇನೋ ಆಡ್ತಾವೆ. ಬೀದಿಗೆ ಮಾತ್ರ ಒಂದೂ ಬರ್ಲಿಲ್ಲ. ಅವರ ಹೊಟ್ಟೆ ಹಾಳಾಗಕೆ! ನಾ ಹೇಳ್ಲಿಲ್ಲೇನು ಆಗಲೇ! ತೂಬಿನ ಕೆರೆಗೆ ಹೋಗಿದ್ರೆ ಇಷ್ಟು ಹೊತ್ತಿಗೆ ಒಂದೆರಡನ್ನಾದ್ರೂ ಬಡಿಚಿಕೊಳ್ಳಬೈದಿತ್ತು.”

ಮತ್ತೆ ಇಬ್ಬರು ಸುಮ್ಮನಾದರು. ಚಿನ್ನಯ್ಯನಿಗೆ ಕೆಳಗೆ ನೋಡಿ ನೋಡಿ ಬೇಜಾರಾಗಿ ಮೇಲೆ ನೋಡತೊಡಗಿದನು. ಬಲೆಯ ಮಧ್ಯೆ ಗಗನಕ್ಕೆದುರಾಗಿ ಕುಳಿತಿದ್ದ ಕಾಡುಜೇಡನು ನಿಶ್ಚಲವಾಗಿದ್ದುದು ಕಣ್ಣಿಗೆ ಬಿತ್ತು. ಪಕ್ಕದಲ್ಲಿದ್ದ ಒಂದು ಸಣ್ಣ ಚಿಗುರೆಲೆಯನ್ನು ಕಿತ್ತು ಮುದ್ದೆ ಮಾಡಿ ಆ ಜೇಡನ ಕೆಡೆಗೆ ಎಸೆದನು. ಗುರಿ ಜೇಡನಿಗೆ ಬೀಳಲಿಲ್ಲ. ಅಂತೂ ಎಲೆಯ ಮುದ್ದೆ ಸಾಲಗನ ಬಲೆಗೆ ತಗುಲಿ ಸಿಕ್ಕಿಕೊಂಡು ಜೋಲಾಡಿತು. ಆ ಹುಲಿಯ ಬಣ್ಣದ ಜೇಡನು ಬಾಣದಂತೆ ಹಾರಿ ಬಂದು ಎಲೆಯ ಮುದ್ದೆಗೆ ಎರಗಿತು. ಮತ್ತೆ ನಿರಾಶೆಯಿಂದ ಹಿಂದಕ್ಕೆ ಓಡಿಹೋಗಿ ಮೊದಲಿನಂತೆಯೆ ಕುಳಿತುಕೊಂಡಿತು. ಆ ಪ್ರಾಣಿಯ ಉದ್ದವಾದ ಕಾಲುಗಳನ್ನೂ ವಿಕಟಾಕೃತಿಯನ್ನೂ ಭೈರವ ವರ್ಣಗಳನ್ನೂ ನೋಡಿ ಚಿನ್ನಯ್ಯನಿಗೆ ಬೀಭತ್ಸದಿಂದ ಮೈನಡುಗಿತು. ತರುವಾಯ ಬಂದೂಕನ್ನು ತೊಡೆಗಳ ಮೇಲೆ ಭದ್ರವಾಗಿ ಮಲಗಿಸಿಟ್ಟುಕೊಂಡು. ಕೋಟಿನ ಒಳಜೇಬಿನಿಂದ ಸಿಗರೇಟು ಪೊಟ್ಟಣವನ್ನು ತೆಗೆದು, ಒಂದು ಸಿಗರೇಟನ್ನು ಬಾಯಲ್ಲಿಟ್ಟನು. ತುಟಿಗಳು ಅದನ್ನು ಬೀಳದಂತೆ ಮೆತ್ತಗೆ ಹಿಡಿದುಕೊಂಡುವು. ಸಿಗರೇಟು ಪೊಟ್ಟಣವನ್ನು ಜೇಬಿಗೆ ಹಾಕಿ, ಬೆಂಕಿಪೊಟ್ಟಣವನ್ನು ತೆಗೆದು, ಒಂದುಕಡ್ಡಿ ಗೀಚಿದನು. ಸುರ‍್ರೆಂಬ ಸದ್ದಿನೊಡನೆ ಅಗ್ನಿದೇವನು ಪ್ರತ್ಯಕ್ಷವಾಗಲು ಕಡ್ಡಿಯನ್ನು ಸಿಗರೇಟಿನ ತುದಿಗೆ ಆನಿಸಿದನು. ತಕ್ಷಣವೆ ತುಟಿಯಸಂದುಗಳಿಂದ ಧೂಮ ಮೇಘಗಳು ಹೊರಡುತ್ತಿರಲು ಸಿಗರೇಟಿನ ತುದಿ ದೇದೀಪ್ಯಮಾನವಾಯಿತು. ಕಡ್ಡಿಯನ್ನು ತೆಗೆದು ಪುನಃ ಜೇಡನ ಬಲೆಗೆ ಎಸೆದನು. ಎಸೆದೊಡನೆಯೆ ಬೆಂಕಿಯಾರಿದ ಆ ಕಡ್ಡಿ ಬಲೆಗೆ ತಾಗಿದರೂ ಸಿಕ್ಕಿಕೊಳ್ಳದೆ ಕೆಳಗೆ ನೀರಿಗೆ ಬಿದ್ದಿತು. ಚಿನ್ನಯ್ಯನ ದೃಷ್ಟಿ ಕಡ್ಡಿಯನ್ನೇ ಅನುಸರಿಸುತ್ತಿತ್ತು. ಕಡ್ಡಿ ನೀರಿಗೆ ಬಿದ್ದಕೂಡಲೆ ಸಣ್ಣ ಪುಟ್ಟ ಹುಡಿಮೀನುಗಳು ಚೊಳಚೊಳನೆ ಸದ್ದು ಮಾಡುತ್ತ ಅದಕ್ಕೆ ಎರಗಿದುವು ಅದು ತಿನ್ನುವ ವಸ್ತುವಲ್ಲವಾದ್ದರಿಂದ ಮತ್ತೆ ಹಿಂತಿರುಗಿ ಹೋಗಿ ಅದರ ಸುತ್ತಲೂ ಆಶ್ಚರ್ಯದಿಂದಲೋ ಎಂಬಂತೆ ಆಡತೊಡಗಿದುವು. ಅರೆಕಪ್ಪು ಅರೆಬೆಳ್ಳಗಿದ್ದ ಆ ಬೆಂಕಿಕಡ್ಡಿ ನೀರಿನಮೇಲೆ ತೇಲುತ್ತಿತ್ತು. ಚಿನ್ನಯ್ಯನು ಪುನಃ ತಲೆಯೆತ್ತಿ ಹಾಯಾಗಿ ಧೂಮಪಾನ ಮಾಡುತ್ತ ಕುಳಿತನು. ಹಳದಿ ಬಣ್ಣದ ಹಕ್ಕಿಯೊಂದು ವೇಗವಾಗಿ ಹಾರಿಬಂದು ಚಿನ್ನಯ್ಯ ಕೂತಿದ್ದ ಮರದ ಮೇಲೆ ಅನತಿದೂರದಲ್ಲಿಯೆ ಕೂತುಕೊಂಡು, ಎರಡು ಮೂರುಸಾರಿ ಸಿಳ್ಳುಹಾಕಿ, ಒಡನೆಯೆ ಚಿನ್ನಯ್ಯನನ್ನು ಕಂಡು ಬೆಚ್ಚಿ ಪಟಪಟ ಎಂದು ರೆಕ್ಕೆಯ ಸದ್ದು ಮಾಡುತ್ತ ಹಾರಿಹೋಯಿತು.

ಚಿನ್ನಯ್ಯನು ಕೆಳಗೆ ನೋಡಿದನು. ತೊಡೆಯ ಮೇಲಿದ್ದ ಬಂದೂಕನ್ನು ಫಕ್ಕನೆ ತೆಗೆದುಕೊಂಡನು. ಸಿಗರೇಟು ಬಾಯಲ್ಲಿ ಹಾಗೆಯೆ ಹೊಗೆಯಾಡುತ್ತಿತ್ತು. ತಾನು ಕೂತಿದ್ದ ಸ್ಥಳಕ್ಕೆ ಸ್ವಲ್ಪ ಸಮೀಪದಲ್ಲಿ ನೀರು ಮುಲುಗಟ್ಟುತ್ತಿದ್ದುದು ಅವನ ಕಣ್ಣಿಗೆ ಬಿತ್ತು. ಅವಲು ಮೀನಿನ ಮರಿಗಳೆಂಬುದೇನೊ ಅವನಿಗೆ ತಕ್ಷಣವೇ ಗೊತ್ತಾಯಿತು. ನೂರಾರು ಬಹು ಸಣ್ಣ ಮರಿಗಳು ಮೇಲಕ್ಕೆ ಬರುತ್ತಲೂ ಕೆಳಕ್ಕೆ ಹೋಗುತ್ತಲೂ ಕೆರೆಯ ನೀರಿಗೆ ರೋಮಾಂಚನವನ್ನುಂಟುಮಾಡುತ್ತಿದ್ದುವು. ಮರಿಯಾಡಿಸುತ್ತಿದ್ದ ದೊಡ್ಡ ಮೀನುಗಳು ಮಾತ್ರ ಕಾಣಿಸುತ್ತಿರಲಿಲ್ಲ. ಮರಿಗಳ ಚಲನೆಯಿಂದ ದೊಡ್ಡ ಮೀನುಗಳು ತನಗೆ ಸಮೀವರ್ತಿಯಾಗುತ್ತಿವೆ ಎಂದು ತಿಳಿದು, ಮುಂದೆ ಏನಾಗುತ್ತದೆಯೋ ಎಂಬ ಅನಿಶ್ಚಯತೆ ಆಶಂಕೆಗಳಿಂದ ಅವನು ಸ್ವಲ್ಪ ಉದ್ವಿಗ್ನನಾಗಿ ನೀರಿನ ಕಡೆಗೆ ಹೆಚ್ಚು ಎಚ್ಚರಿಕೆಯಿಂದಲೂ ತೀಕ್ಷ್ಣತೆಯಿಂದಲೂ ನಿರೀಕ್ಷಿಸತೊಡಗಿದನು. ಮರಿಗಳ ಗುಂಪು ಇನ್ನೂ ಬಳಿ ಸಾರಿತು. ಬೇಟೆಗಾರನು ತನ್ನ ನರ ನಾಡಿಗಳೆಲ್ಲ ಬಿಗಿಯುವಂತೆ ಸಮಸ್ತ ಶಕ್ತಿಯನ್ನೂ ದೃಷ್ಟಿಯೊಂದಕ್ಕೇ ನಿವೇದಿಸಿದನು. ಆಗ ಅವನಿಗೆ ಮೀನುಮರಿಗಳಿದ್ದ ಆ ಕೆರೆಯ ಭಾಗವೇ ಸಮಸ್ತ ಜಗತ್ತೂ ಆಗಿಹೋಗಿತ್ತು. ಏಕಾಗ್ರತೆಯಿಂದ ಸುತ್ತಣ ಪ್ರಪಂಚದ ಪ್ರಜ್ಞೆಯೇ ಅವನಿಗಿರಲಿಲ್ಲ. ಹಾಗೆ ತನ್ಮಯನಾಗಿ ನೋಡುತ್ತಿರೆಯಿರೆ ನೀರಿನಲ್ಲಿ ಒಂದು ಅಡಿ ಕೆಳಗೆ ಏನೋ ಕರ್ರಗೆ ಉದ್ದವಾಗಿ ಕಂಡಂತಾಯಿತು. ಚಿನ್ನಯ್ಯನ ಕೈಗಳು ಕೋವಿಯನ್ನು ದೃಢಮುಷ್ಟಿಯಿಂದ ಹಿಡಿದು ಸನ್ನಾಹಗೊಳಿಸುವಷ್ಟರಲ್ಲಿ ತಾಯಿಮೀನು ಮೇಲಕ್ಕೆ ಬಂದು, ಅಲ್ಲಿ ಬಿದ್ದಿದ್ದ ಬಿಸಿಲಿನಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಆದರೆ ಅದು ಇನ್ನೂ ನೀರಿನಲ್ಲಿ ಅರ್ಧ ಅಡಿಯಷ್ಟು ಕೆಳಗೆ ಇದ್ದುದರಿಂದ ಈಡು ವ್ಯರ್ಥವಾಗುವುದೆಂದು ಅನುಭವದಿಂದ ತಿಳಿದಿದ್ದ ಚಿನ್ನಯ್ಯನು ಮೀನು ನೀರು ಕಚ್ಚುವ ಸಮಯವನ್ನೇ ಕಾದನು. ಕೈ ಮಾತ್ರ ಕೋವಿಯನ್ನಾಗಲೇ ಗುರಿಯಿಟ್ಟುಕೊಂಡು ಸಿದ್ಧವಾಗಿತ್ತು.

ಸೂರ್ಯಾತಪದಿಂದ ಪ್ರಕಾಶಿತವಾಗಿದ್ದ ಆ ವನಪುಷ್ಕರಿಣಿಯ ವಾರಿಯಲ್ಲಿ ಒಂದೂವರೆ ಮೊಳುದುದ್ದದ ಅವಲು ಮೀನು ಆಡುತ್ತಿತ್ತು. ಇದ್ದಲಿನಂತೆ ಕರ್ರಗೆ ಕಾಣೆಸುತ್ತಿದ್ದು ಅದರ ದೇಹದ ಶಿರೋಭಾಗದಲ್ಲಿ ಕಣ್ಣಗಳೆರಡು ಗುಲುಗುಂಜಿಗಳಂತೆ ಕೆಂಪಗೆ ತೋರುತ್ತದ್ದುವು. ಅದರ ಕಿವಿಗಳ ಪಕ್ಕದಲ್ಲಿಯೂ ಬಾಲದಲ್ಲಿಯೂ ಬೆನ್ನಿನ ಮೇಲೆಯೂ ಇದ್ದ ರೆಕ್ಕೆ ಗರಿಗಳು ಅತ್ತ ಇತ್ತ ಆಡುತ್ತ ಕ್ರಿಡೋನ್ಮತ್ತವಾಗಿದ್ದುವು. ಅದರ ಲೀಲೆಯಲ್ಲಿ ಒಂದು ವಿಧವಾದ ಧೀರ ಗಾಂಭೀರ್ಯವೂ ಸಾವಧಾನವೂ ಜಾಗರೂಕತೆಯೂ ಸಂಶಯಾಶಂಕೆಗಳೂ ಮಿಳಿತವಾಗಿದ್ದುವು ಚಿನ್ನಯ್ಯನು ನೋಡುತ್ತದ್ದ ಹಾಗೆಯೆ ಮತ್ತೊಂದು ಮೀನು ಕಾಣಿಸಿಕೊಂಡಿತು. ಅವನ ಮನಸ್ಸಿನಲ್ಲಿ ಉದ್ವೇಗದೊಡನೆ ಅತ್ಯಾಸೆಯೂ ಉತ್ಪನ್ನವಾಗಿ ಎರಡನ್ನೂ ಒಂದೇ ಈಡಿಗೆ ಸುಡುತ್ತೇನೆಂದು ಹಿಗ್ಗಿದನು. ಆಮತ್ಸ್ಯ ದಂಪತಿ ತಮ್ಮ ಶತಸಂತಾನದ ಸಂಸಾರದೊಡನೆ, ಮರದ ಮೇಲೆ ಪ್ರಾಣ ಹರಣಕ್ಕೆಂದು ತವಕಪಡುತ್ತ ದೃಷ್ಟಿಮಾತ್ರನಾಗಿ ಕುಳಿತಿದ್ದ ಚಿನ್ನಯ್ಯ ರುದ್ರ ಸಾಮೀಪ್ಯವನ್ನು ತಿಲಮಾತ್ರವೂ ಅರಿಯದೆ ವಿಹಾರಾಸಕ್ತವಾಗಿದ್ದುವು. ಇದ್ದಕ್ಕಿದ್ದ ಹಾಗೆ ಒಂದು ಮೀನು ನೀರು ಕಚ್ಚಲೆಂದು ಮೇಲೆ ಮೇಕಕ್ಕೇರಿತು. ಚಿನ್ನಯ್ಯನಿಗೆ ಒಂದೊಂದು ಕ್ಷಣವೂ ಒಂದೊಂದು ವರ್ಷದಂತಾಇ ಮತ್ಸ್ಯಗಮನ ಅತ್ಯತಿ ಸಾವಧಾನವಾಗಿ ಕಂಡಿತು. ಅವಲು ಮೀನಿನ ಕಣ್ಣುಗಳನ್ನು ಸುತ್ತಿದ್ದ ಕೆಂಪು ಬಣ್ಣದ ಉಂಗುರಗಳು ಪ್ರಸ್ಫುಟವಾಗಿ ಗೋಚರವಾದುವು. ಪಕ್ಕದ ಮತ್ತು ಪುಕ್ಕದ ರೆಕ್ಕೆಗಳು ಹಿಂದಕ್ಕೂ ಮುಂದಕ್ಕೂ ಒಯ್ಯೊಯ್ಯನೆ ಆಡಿದುವು. ಮೀನಿನ ತಲೆ ಮೇಲಾಗಿ ದೇಹವು  ಇಳಿಯಾಗಿದ್ದುದರಿಂದ ಅದು ಮೊದಲಿದ್ದುದಕ್ಕಿಂತಲೂ ಸ್ವಲ್ಪ ಗಿಡ್ಡವಾಗಿ ತೋರಿತು. ತೆರೆತೆರೆದು ಮುಚ್ಚುವಂತಿದ್ದ ಅದರ ಬಾಯಿಯ ಬಿಳಿಯ ಗೆರೆ ಕಾಣಿಸಿಕೊಂಡಿತು. ಚಿನ್ನಯ್ಯನು ದೇಹದ ನರಗಳನ್ನೆಲ್ಲ ಬಿಗಿದು, ಉಸಿರು ಕಟ್ಟಿ, ರೆಪ್ಪೆ ಹಾಕದೆ, ಕೋವಿಯ ಕುದುರೆಯನ್ನೇರಿಸಿ, ಬಿಲ್ಲಿಗೆ ಕೈಹಾಕಿಕೊಂಡು, ಗುರಿಯಿಟ್ಟು ಅನುವಾದನು. ಮೀನು ನೀರು ಕಚ್ಚಿತು! ಚಿನ್ನಯ್ಯ ಬಿಲ್ಲು ಎಳೆದನು! ನೀರು ಈಡಿನ ಆಘಾತದಿಂದ ನಾಲ್ದೆಸೆಗಳಿಗೂ ಸಿಡಿಯಿತು. ಈಡಿನ ಢಂಕಾರವು ಮೌನವನ್ನು ಮರ್ದಿಸಿ ಗುಡ್ಡ ಬೆಟ್ಟಗಳಿಂದ ಅನುರಣಿತವಾಯಿತು. ಪೆಟ್ಟುಬಿದ್ದ ಮೀನು ನೀರಿನ ಮೇಲೂ ಕೆಳಗೂ ಹಾರಿ ನೆಗೆದು ಸದ್ದುಮಾಡಿ ನೀರು ಸೀರಿತು.

“ನಂಜಾ! ನಂಜಾ! ಓಡಿಬಾರೋ, ಓಡಿಬಾರೋ, ಬೇಗ ಬಾರೋ!” ಎಂದು ಚಿನ್ನಯ್ಯ ಒಂದೇ ಉಸಿರಿನಲ್ಲಿ ಕೂಗಿದನು.

ನಂಜನು ಕೋವಿಯನ್ನು ಮರದ ಮೇಲೆಯೆ ಇಟ್ಟು, ಆದಷ್ಟು ವೇಗದಿಂದಲೂ ಎಚ್ಚರಿಕೆಯಿಂದಲೂ ಮರವನ್ನಿಳಿದು ಧುಮುಕಿ ಧಾವಿಸಿದನು. ಓಡುವಾಗ ಕೆನೆಗಟ್ಟಿದ್ದ ಕೆಸರಿನ ಮೇಲೆ ದಟ್ಟವಾಗಿ ಪಸರಿಸಿ ಬಿದ್ದಿದ್ದ ತರಗೆಲೆಗಳ ಮೇಲೆ ರಭಸವಾಗಿ ಕಾಲಿಟ್ಟು ಜಾರಿ ಬಿದ್ದು ಕೈ ಮೈಯೆಲ್ಲಾ ಕೊಚ್ಚಿಯಾಗಿ ಸ್ವಲ್ಪ ಪೆಟ್ಟಾದರೂ ಲೆಕ್ಕಿಸದೆ ಮೀನು ಒದ್ದಾಡುಕೊಂಡಿದ್ದ ಜಾಗಕ್ಕೆ ನುಗ್ಗಿದನು. ಮೀನು ಅಷ್ಟರಲ್ಲಿಯೆ ಮುಳುಗಿ ಕಣ್ಮರೆಯಾಗಿತ್ತು. ನಂಜನು ಮೊಳಕಾಲಿನವರೆಗೂ ನೀರಿನಲ್ಲಿ ಹಾದು ” ಎಲ್ಲಿ ಹೊಡೆದಿದ್ದು?” ಎಂದನು.”

“ಸ್ವಲ್ಪ ಮುಂದೆ” ಎಂದು ಮರದ ಮೇಲಿಂದ ಉತ್ತರ ಬಂದಿತು.

ನಂಜನು ಸೊಂಟದವರೆಗೂ ಹಾದನು.

“ನಿನ್ನ ಬಲಕ್ಕೆ ಹುಡುಕು.”

ನಂಜನು ನೀರಿನಲ್ಲಿ ಬಾಗಿ ನೆಲದವರೆಗೂ ಕೈಹಾಕ ಹಿಂದೆ ಮುಂದೆ ಹುಡುಕಾಡಿದನು. ಕಳಕೆದ್ದು ನೀರೆಲ್ಲ ಬಗ್ಗಡವಾಯಿತು. ನಂಜನ ಸೊಂಟದ ಪಂಚೆಯೆಲ್ಲ ಒದ್ದೆಯಾಯಿರು. ತೋಳು ಭುಜದವರೆಗೂ ಮುಳುಗಿ, ನೀರು ಎದೆಗೆ ಮುಟ್ಟುತ್ತಿತ್ತು. ಅವನು ಹೆಜ್ಜೆಯೆತ್ತಿ ಇಟ್ಟಂತೆಲ್ಲ ಕೆಸರುಗಾಳಿಯ ಗುಳ್ಳೆಗಳು ಮಾಲೆಗಟ್ಟಿಕೊಂಡು ಮೇಲೆ ಬರುತ್ತಿದ್ದವು.

ಸ್ವಲ್ಪ ಹೊತ್ತು ತಡವಿ ತಡವಿ ಹುಡುಕಿ ಉಸ್ಸೆಂದು ಎದ್ದು ನಿಂತು. ” ಹಾಂಗಾದ್ರೆ ಎಲ್ಲಿ ಹೋಯ್ತುಪ್ಪಾ, ಅದರ ಹೊಟ್ಟೆ ಹಾಳಾಗಕೆ?”ಎಂದನು.

“ಛೇ! ಹುಡುಕಿ ನೋಡೋ! ಸರಿಯಾಗಿ ಏಟಯ ಬಿದ್ದಿದೆ. ಅಲ್ಲೇ ಎಲ್ಲೋ ಸತ್ತು ಬಿದ್ದಿರಬೇಕು. ಇನ್ನೊಂದು ಸ್ವಲ್ಪ ಮುಂದೆ ಮುಂದೆ ಹೋಗಿ ಹುಡುಕು.”

“ಎಂಥಾ ಮುಂದ್ಹೋಗೋದಪ್ಪಾ! ಗುಂಡಿನೋ ಏನೋ! ಹಾಳಾದ್ದು! ಅಲ್ಲಾ, ಅದ್ರ ಹೊಟ್ಟೆ ಹಾಳಾಗಕೆ, ಆ ರೀತಿ ಒದ್ಕೊಂಡಿದ್ದು ಯತ್ತ ಮಖ ಹೋಯ್ತಪ್ಪ?”

“ಯತ್ತಮಖಾನೂ ಹೋಗ್ಲಿಲ್ಲ! ಅಲ್ಲೇ ಬಿದ್ದಿರಬೇಕು. ಸರಿಯಾಗಿ ಹುಡುಕಿನೋಡು” ಎಂದು ಚಿನ್ನಯ್ಯನು ರೇಗಿ ಕಟುವಾಗಿ ನುಡಿದನು.

ನಂಜನು ದಡಕ್ಕೆ ಬಂದು ಪಂಚೆಗಿಂಚೆಯನ್ನೆಲ್ಲ ಬಿಚ್ಚಿಟ್ಟು ಕೌಪೀನಧಾರಿಯಾಗಿ ಮತ್ತೆ ಕೆರೆಗಿಳಿದನು. ನೀರು ಸೊಂಟದ ಮೇಲಕ್ಕೆ ಬಂದಿತು.

“ಇನ್ನೊಂದು ಹೆಜ್ಜೆ ಮುಂದೆ” ಎಂದು ಮರದಿಂದ ಅಪ್ಪಣೆಯಾಯಿತು. ನಂಜನು ಮುಂದುವರಿನು. ನೀರು ಎದೆಗೆ ಬಂದಿತು.

“ಹೂಂ, ಸಾಕು. ಈಗ ಹುಡುಕು”.

ನಂಜನು ನಿಂತಹಾಗೆಯೆ ಕಾಲಿನಿಂದಲೆ ತಡವಿ ಹುಡುಕತೊಡಗಿದನು. ನೀರಿನ ಶೈತ್ಯದಿಂದ ಅವನ ಮೈ ರುಮ್ಮೆಂದಿತು. ಐದು ನಿಮಿಷವಾಯಿತು. ಚಿನ್ನಯ್ಯನಿಗೆ ಆಗಲೇ  ಆಶಾಭಂಗವಾಗತೊಡಗಿ” ಏನೋ? ಸಿಕ್ಕಲಿಲ್ಲವೇನೋ?” ಎಂದು ಕೇಳಿದನು.

“ಅದ್ರ ಹೊಟ್ಟೆ ಹಾಳಾಗಕ್ಕೆ! ಎಲ್ಲಿ ಹೋಯ್ತಪ್ಪಾ” ಎನ್ನುತ್ತ ನಂಜನು ಹೆಜ್ಜೆಯನ್ನೇ ಎತ್ತಿ ಎತ್ತಿ ಇಟ್ಟು ಹುಡುಕಿದನು.

“ನಾನೇ ಬರ್ಲೇನು!”

“ತಡೀರಿ, ಇಲ್ಲೇನೋ ಸಿಕ್ಕದ್ಹಂಗಾಗ್ತದೆ! ….. ಹೋ ಇಲ್ಲಿ ಬಿದ್ದವಳೆ ಲೌಡಿ!”

ಎನ್ನುತ್ತ ನಂಜನು ನೀರಿನಲ್ಲಿ ಮುಳುಗಿ ಕಣ್ಮರೆಯಾದನು. ಚಿನ್ನಯ್ಯನು ಸಂತೋಷದಿಂದ ಕಣ್ಣರಳಿಸಿ, ನಂಜನು ಮೇಲೇಳುವುದನ್ನೇ ನೋಡುತ್ತಿದ್ದನು. ಕೆರೆಯ ನೀರು ಅಲ್ಲೋಲಕಲ್ಲೋಲವಾಗುವಂತೆ ನಂಜನು ತೊಪ್ಪನೆ ತೊಯ್ದು ಎದ್ದು ನಿಂತನು. ಕೈಯಲ್ಲಿ ಮೀನು! ಅದರ ಹೊಟ್ಟೆ ಬೆಳ್ಳಗೆ ಕಾಣಿಸಿತು.” ತಲೆ ಹೊಟ್ಟಿ ಹಾರಿಹೋಗ್ಯದೆ” ಎನ್ನುತ್ತ ಅಲ್ಲಿಂದಲೆ ಅದನ್ನು ದಡಕ್ಕೆ ನಂಜನು ಮೇಲಕ್ಕೆ ಬಂದನು.

“ಇನ್ನೊಂದು ಸ್ವಲ್ಪ ಹೊತ್ತು ನೋಡೋಣೇನೋ? ಇದೊಂದು ಎಲ್ಲಿ ಸಾಕಾಗ್ತದೆ? ಅದೂ ಅಲ್ಲದೆ ಕಾನೂರಿನ ಗಾಡಿ ಇನ್ನೂ ಬರಲಿಲ್ಲ.” ಎಂದನು ಚಿನ್ನಯ್ಯ.

ನಂಜನು ಹುಂಕಾರದಿಂದ ಸಮ್ಮತಿಸಿ, ಮೀನನ್ನು ಒಂದು ಕೈಯಲ್ಲಿಯೂ, ಪಂಚೆಯನ್ನು ಮತ್ತೊಂದು ಕೈಯಲ್ಲಿಯೂ ಹಿಡಿದುಕೊಂಡು, ತನ್ನ ಗೊತ್ತಿಗೆ ಹೋದನು. ಆಗಲೆ ಹೊತ್ತು ನೆತ್ತಿಗೇರಿತು. ಆದರೆ ಆಶೆಗೆ ಮಿತಿಯೆಲ್ಲಿ? ಇಬ್ಬರೂ ಮತ್ತೆ ಕಾಯುತ್ತ ಕುಳಿತರು.

ದೂರದಲ್ಲಿ ಗಂಟೆಯ ಸದ್ದಿನೊಡನೆ ಗಾಡಿಯ ಸದ್ದೂ ಕೇಳಿಸಿತು. ಚಿನ್ನಯ್ಯನು ರಸ್ತೆಯ ಕಡೆಗೆ ನೋಡುತ್ತಿದ್ದನು. ಮುಕ್ಕಾಲು ಪಾಲು ಕಾನೂರಿನ ಗಾಡಿಯೇ ಇರಬೇಕೆಂದು ಊಹಿಸಿದನು. ಅಷ್ಟರಲ್ಲಿ ರಸ್ತೆಯ ತಿರುವಿನಲ್ಲಿ ವೇಗವಾಗಿ ಬರುತ್ತಿದ್ದ ಗಾಡಿ ಕಾಣಿಸಿತು. ಅದು ಕೆರೆಯ ಏರಿಯ ಮಧ್ಯಕ್ಕೆ ಬಂದಾಗ ಕೂಗಿ ನಿಲ್ಲಿಸಬೇಕೆಂದು ಆಲೋಚಿಸಿ ಸುಮ್ಮನೆ ಕುಳಿತನು. ತನ್ನ ಮಿತ್ರರಿಗೆ ತನ್ನಿಂದೊದಗುವ ವಿಸ್ಮಯವನ್ನು ಕಲ್ಪಿಸಿಕೊಂಡು ಹಿಗ್ಗಿದನು. ಅವನು ನೋಡುತ್ತಿದ್ದ ಹಾಗೆಯೇ ಎತ್ತುಗಳು ಚರಂಡಿಯ ಕಡೆಗೆ ಧಾವಿಸಿದುವು. ಕೂಗು ಕೇಳಿಸಿತು.ಗಾಡಿ ಉರುಳಿತು!

ಇಬ್ಬರೂ ಆದಷ್ಟು ಶೀಘ್ರವಾಗಿ ಮರಗಳಿಂದ ಕೆಳಗೆ ಧುಮುಕಿ ಇಡುಕುರುಗಳಲ್ಲಿ ನುಗ್ಗಿ ಐದು ನಿಮಿಷದಲ್ಲಿ ಗಾಡಿ ಬಿದ್ದಲ್ಲಿಗೆ ಓಡಿದರು.

ಆರು ಜನರೂ ಸೇರಿ ಶ್ರಮದಿಂದ ಗಾಡಿಯನ್ನು ರಸ್ತೆಗೆ ಎಳೆದು, ನೆಲದ ಮೇಲೆ ಮಲಗಿದ್ದ ಹೂವಯ್ಯನನ್ನು ಗಾಡಿಯಲ್ಲಿ ಮಲಗಿಸಿದರು. ರಾಮಯ್ಯನು ಕ್ರಾಪು ಬಾಚಲೆಂದು ಟ್ರಂಕಿನಲ್ಲಿ ಇಟ್ಟಿದ್ದ ತೈಲದಿಂದ ಹೂವಯ್ಯನ ಬೆನ್ನನ್ನು ತಿಕ್ಕಿದರು. ಹೂವಯ್ಯನಿಗಾಗಿದ್ದ ಪೆಟ್ಟು ಅವರು ಊಹಿಸಿದುದಕ್ಕಿಂತಲೂ ಬಲವಾದುದಾಗಿತ್ತು. ಅವನು ಯಾತನೆಯಿಂದ ನರಳತೊಡಗಿದ್ದನು.

ನಿಂಗನು ಬಾರುಕೋಲಿನ ದಿಂಡಿನಿಂದ ಎತ್ತುಗಳು ಮೇಲೆ ತನಗಾಗಿದ್ದ ಸಿಟ್ಟನ್ನೆಲ್ಲ ತೀರಿಸಿಕೊಳ್ಳುತ್ತ ಗಾಡಿ ಕಟ್ಟಿದನು. ಚಿನ್ನಯ್ಯನು ತನ್ನ ಬಂದೂಕನ್ನು ಪುಟ್ಟಣ್ಣನ ಕೈಯಲ್ಲಿ ಕೊಟ್ಟು, ಅವನ ಜಾಗಕ್ಕೆ ತಾನೇ ಕೂತನು. ನಂಜ ಪುಟ್ಟಣ್ಣ ಇಬ್ಬರೂ ಗಾಡಿಯ ಹಿಂದೆ ಕಾಲು ನಡಿಗೆಯಲ್ಲಿಯೆ ಹೊರಟರು.

ಗಡಿಬಿಡಿಯಲ್ಲಿ, ಆ ದಿನ ಚಿನ್ನಯ್ಯನು ತನ್ನ ಮಿತ್ರ ಬಂಧುಗಳಿಗಾಗಿ ಹೊಡೆದಿದ್ದ ಮೀನು, ತನ್ನ ಪುತ್ರ ಮಿತ್ರ ಬಂಧುಗಳಿಂದ ಚಿರ ವಿಯೋಗಹೊಂದಿ ಕೆರೆಯಾಚೆಯ ದಡದಲ್ಲಿ ಕ್ರಿಮಿಕೀಟಗಳಿಗೆ ಆಹಾರವಾಗಿ ಉಳಿದು ಹೋಯಿತು. ಸ್ವಲ್ಪ ದೂರ ಹೋದ ಮೇಲೆ ನಂಜನಿಗೆ ಅದರ ನೆನಪಾಯಿತು. ಆದರೆ ಹೂವಯ್ಯನ ನರಳುವಿಕೆಯನ್ನು ಆಲಿಸಿಯೂ ಉಳಿದವರ ದುಃಖಾಕ್ರಾಂತವಾದ ಮೌನವನ್ನು ನೋಡಿಯೂ ಮರಳಿ ಹಿಂದಕ್ಕೆ ಹೋಗಿ ಅದನ್ನು ತರುವುದು ತನಗೆ ಹೀನವೆಂದು ಭಾವಿಸಿ ಸುಮ್ಮನಾದನು.