ಗದ್ದೆಯ ಕೊಯ್ಲಿನ ಕಾಲದ ಬಾನು ತಿಳಿದಿದತ್ತು; ನೀಲಿ ಬೆಳೆದಿತ್ತು. ಅಲ್ಲಲ್ಲಿ,  ಹೊಂದೆನೆಯ ಹಳದಿಯಹ ಪೈರನ್ನು ಕತ್ತರಿಸಿದ್ದುದರಿಂದ, ತಲೆಯ ಮೇಲೆ ಕ್ಷೌರದ ಪಟ್ಟೆ ಎಳೆದಿದ್ದಂತೆ ಬೋಳಾಗಿ ಕಾಣಿಸುತ್ತಿದ್ದರೂ, ಸುತ್ತಲೂ ವಿಸ್ತಾರವಾಗಿ ಅನಂತವಾಗಿ ಬೆಳೆದಿದ್ದ ಅರಣ್ಯಗಳಿಂದಲೂ ಕಣಿವೆಯ ಹುಲ್ಲುಗಾವಲುಗಳಿಂದಲೂ ನೆಲವೆಲ್ಲ ಹಸುರಾಗಿತ್ತು. ಇನ್ನೂ ನಡುಹಗಲಾಗಿರದಿದ್ದರೂ ಬಿಸಿಲು ಪ್ರಖರವಾಗಿಯೆ ಇತ್ತು. ಗದ್ದೆಯ ಕೋಗಿನಿಂದ ಮನೆಯ ಕಡೆಗೆ ಮರಗಳ ನಡುನಡುವೆ ತೂರಿಹೋಗುವ ಕಾಲ್ದಾರಿಯಲ್ಲಿ ತುಂಬು ಯೌವನದ ಗ್ರಾಮ್ಯ ತರುಣಿಯೊಬ್ಬಳು ನೆಲ್ಲುಹುಲ್ಲಿನ ಒಂದು ದೊಡ್ಡ ಹೊರೆಯನ್ನು ಹೊತ್ತು ಸ್ವಲ್ಪ ನಿಧಾನವಾಗಿಯೆ ಎಂಬಂತೆ ಸಾಗುತ್ತಿದ್ದಳು. ಆಕೆ ಮೆಲ್ಲಗೆ ಹೋಗುತ್ತಿದ್ದುದು ಹೊರೆಯ ಭಾರದಿಂದಾಗಿರಲಿಲ್ಲ; ಆಯಾಸದಿಂದಾಗಿರಲಿಲ್ಲ; ಚಿಂತೆಯಿಂದಾಗಿತ್ತು.

ಹೊತ್ತ ಹುಲ್ಲಿನ ಹೊರೆಯ ದೆಸೆಯಿಂದ ಕರಿಯ ಸೀರೆಯ ತುಂಡಿನಿಂದ ಬಿಗಿದು ತಳಾಲೆ (ಹೆಂಗಸರು ಕೆಲಸ ಮಾಡುವಾಗ ಹಾಕಿಕೊಳ್ಳುವ ಹಾಳೆಯ ತಲೆಯುಡೆ; ಒಂದು ತೆರನಾದ ಶಿರತ್ರ) ಹಾಕಿಕೊಂಡಿದ್ದ ಆಕೆಯ ಮಂಡೆಯಾಗಲಿ ಮುಖವಾಗಲಿ ಹೊರಗೆ ಕಾಣುತ್ತಿರಲಿಲ್ಲ. ಆಕೆಗೂ ಕಾಣಿಸುತ್ತಿದ್ದುದು ತನ್ನ ಮುಂದಿರುತ್ತಿದ್ದ ಒಂದೆರಡು ಮಾರು ದೂರದ ದಾರಿ ಮಾತ್ರ. ಹುಲ್ಲಿನ ಹೊರೆ ನಾಲ್ಕು ಕಡೆ ಬಾಗಿ ಮುಚ್ಚಿಕೊಂಡಿತ್ತು. ಹೆಜ್ಜೆಯಿಟ್ಟಂತೆಲ್ಲ ಅದರ ತೆನೆಯು ತುದಿಗಳು ಕುಣಿದಾಡಿ ಸದ್ದುಗೈಯುತ್ತಿದ್ದುವು.

ಕಂಠದ ಕೆಳಗೆ ಕಾಣಿಸುತ್ತಿದ್ದ ಆಕೆಯ ಆಕೃತಿ ತುಂಬಾ ವಾಗ್ಮಿಯಾಗಿತ್ತು. ಆಕೆಯ ಮೈಕಟ್ಟು ಸುಪುಷ್ಟವಾಗಿ ರಸ ತುಂಬಿ ತುಳುಕಲಿರುವ ಹಣ್ಣಿನ ನೆನಪು ತರುವಂತಿತ್ತು. ಹಾಕಿಕೊಂಡಿದ್ದ ಮಾಸಲುರವಕೆ ತೋಳುಗಳನ್ನು ಬಿಗಿದು ಕಚ್ಚಿ ಹಿಡಿದುಕೊಂಡಂತಿತ್ತು. ಮತ್ತೂ, ಬಿರಿಯುವಂತೆ ಉಬ್ಬಿದ ಎದೆಗಳನ್ನು ಇನ್ನೇನು ಸೋತುಬಿಡುತ್ತೇನೆ, ಹರಿದುಹೋಗುತ್ತೇನೆ ಎಂಬಂತೆ ತಬ್ಬಿ ಹಿಡಿದಿತ್ತು. ಎದೆಯ ಮಧ್ಯೆ ಕರಮಣಿ ತಾಳಿಯೊಂದು ನೇತಾಡುತ್ತಿತ್ತು. ಆಕೆಯುಟ್ಟುಕೊಂಡಿದ್ದ ಮಲೆನಾಡಿನುಡುಗೆಯ ಸೀರೆಯನ್ನು ನಸುಮೇಲೆಳೆದು ಸೊಂಟಕ್ಕೆ ಸಿಕ್ಕಿಸಿ ಬಿಗಿದಿದ್ದುದರಿಂದ, ನೆಲದಿಂದ ಮೇಲೆ ಸುಮಾರು ಒಂದು ಅಡಿಯವರೆಗೂ ಮಾಂಸಖಂಡಗಳಿಂದ ಸುತ್ತುವರಿದಿದ್ದ ಬಲವಾದ ಎಲುಬಿನ ಕಾಲುಗಳು ದಿಟ್ಟವಾಗಿ ಕಾಣುತ್ತಿದ್ದುವು. ನೆತ್ತಿಯಮೇಲಿದ್ದ ಹುಲ್ಲುಹೊರೆಯನ್ನು ತಬ್ಬಿಬಿಗಿದು ಹಿಡಿದುಕೊಂಡಿದ್ದ ಎರಡು ಕೈಗಳಲ್ಲಿಯೂ ಕಡಗಗಳು ಬಳೆಗಳೂ ಸದ್ದು ಮಾಡಲಾರದೆ ಬಾಯಿಮುಚ್ಚಿ ಹಿಡಿದುಕೊಂಡಂತಿದ್ದುವು. ರವಕೆಯಾಚೆಗೆ ಬರಿದಾಗಿದ್ದ ತೋಳುಗಳಲ್ಲಿ ಹಚ್ಚೆ ಕುಚ್ಚಿಸಿಕೊಂಡಿದ್ದ ಕರಿನೀಲ ಚಿತ್ರಗಳೂ ಚೆನ್ನಾಗಿ ಕಾಣುತ್ತಿದ್ದುವು.

ದೀರ್ಘವಾಗಿ ಆಲೋಚನೆ ಮಾಡುತ್ತ ಮಾಡುತ್ತ ತರುಣಿಯ ಚಲನೆ ಅತಿ ಮಂದವಾಗುತ್ತ ಬಂದಿತು. ಆಕೆ ತಾನಿದ್ದ ಸನ್ನಿವೇಶವನ್ನೆ ಮರೆತು ಬೇರೊಂದು ಜಗತ್ತಿನ ನಿವಾಸಿಯಾಗಿದ್ದಳು.

ಹಿಂದಿನಿಂದ “ಓಹೋ ಏನಿದು, ಸುಬ್ಬಕ್ಕ? ಕುಗುರ್ತಾ ಹೋಗ್ತಿದ್ದೀಯಾ! ಬಿರುಬಿರನೆ ಹೋಗಬಾರದೆ? ಗಂಡಸರು ಹೇಳಾಕೂ ನೀವು ಮಾಡಾಕೂ ಸರಿಯಾಗ್ತದೆ” ಎಂಬ ಗಟ್ಟಿ ಮಾತುಗಳನ್ನು ಕೇಳಿ ಅತ್ತಿಗೆಯ ದನಿಯನ್ನು ಗುರುತಿಸಿಯೂ ತರುಣಿ ಮಾತಾಡದೆ, ಹಿಂತಿರುಗಿ ನೋಡದೆ, ಕನಸಿನಿಂದ ತಟಕ್ಕನೆ ಎಚ್ಚತ್ತವಳಂತಾಗಿ ಬೇಗಬೇಗನೆ ಕಾಲುಹಾಕತೊಡಗಿದಳು. ಹಿಂದಿನಿಂದ ಹುಲ್ಲುಹೊರೆಯನ್ನು ಹೊತ್ತು ಬರುತ್ತಿದ್ದವಳೂ ಬೇಗ ಬೇಗನೆ ಬಳಿಸಾರಿದಳು. ಅವಳು ನೆಲ್ಲುಹಳ್ಳಿಯ ನೆರೆಮನೆ ಹೊರಮನೆ ವಿಚಾರಗಳನ್ನೆತ್ತಿ ಮಾತಾಡತೊಡಗಿದಳು. ಆದರೆ ತರುಣಿ ಪಡಿನುಡಿಯದೆ ಸರಸರನೆ ಮುಂಬರಿದಳು. ಬತ್ತದ ತೆನೆಯ ಭಾರದ ನೆಲ್ಲುಹುಲ್ಲಿನ ಹೊರೆಗಳೆರಡೂ ಹೆಜ್ಜೆಹೆಜ್ಜೆಗೂ ತೆನೆಯುಜ್ಜಿ, ಒಣ ಹುಲ್ಲುಜ್ಜಿ, ಗಾಳಿಗೆ ಸುಯ್ ಸುಯ್ ಸದ್ದುಮಾಡುತ್ತಿದ್ದುದವು.

ಆ ದಿನ ನೆಲ್ಲುಹಳ್ಳಿಯ ಪೆದ್ದೇಗೌಡರ ಮನೆಯಲ್ಲಿ ಕಂಬಳವಾಗಿತ್ತು. ವಾಡಿಕೆಯಂತೆ ನೆರೆಹೊರೆಯ ಮನೆಯವರೂ ಅವರ ಮನೆಗೆ ಪಡಿಗೆಲಸ ಮಾಡಿಕೊಡಲು ಬಂದೆದ್ದರು. ಎಲ್ಲರೂ ಸೇರಿ, ಮೂವತ್ತು ಜನರಮೇಲೆ ಪೈರು ಕುಯಿದು ಗದ್ದೆಯಿಂದ ಮನೆಯಬಳಿಯ ಕಣಕ್ಕೆ ಸಾಗಿಸುತ್ತಿದ್ದರು. ಗಂಡನ ಕ್ರೌರ್ಯಕ್ಕಂಜಿ ತವರು ಸೇರಿದ್ದ ಸುಬ್ಬಮ್ಮನೂ ಎಲ್ಲರಂತೆಯೆ ಗದ್ದೆಯಿಂದ ಹುಲ್ಲುಹೊರೆ ಹೊತ್ತುತಂದು ಕಣದಲ್ಲಿ ಬಣಬೆ ಹಾಕುತ್ತಿದ್ದವರಿಗೆ ಅವುಗಳನ್ನು ಕೊಡುವ ಕೆಲಸದಲ್ಲಿ ಬೆಳಗಿನಿಂದಲೂ ತೊಡಗಿದ್ದಳು.

ನೆಲ್ಲುಹಳ್ಳಿ ಕಾನೂರಿನಂತೆ ಒಂದೇ ಒಂದು ದೊಡ್ಡ ಹೆಂಚಿನ ಮನೆಯ ಹಳ್ಳಿಯಾಗಿರಲಿಲ್ಲ. ಸ್ವಲ್ಪ ದೂರ ದೂರವಾಗಿದ್ದರೂ ನಾಲ್ಕಾರು ಬಡ ಹುಲ್ಲು ಮನೆಗಳಿರುವ ಹಳ್ಳಿಯಾಗಿತ್ತು. ಆದ್ದರಿಂದ ಅಲ್ಲಿ ತಮ್ಮ ಮನೆಯವರಲ್ಲದವರ ವಿಚಾರವಾಗಿಯೂ ನಿಂದೆ ಕುತ್ಸಿತಗಳನ್ನೆಸಗಲು ಹೆಚ್ಚು ಅವಕಾಶವಿರುತ್ತಿತ್ತು; ಹಾಗೆಯೆ ಸ್ನೇಹಕ್ಕೂ ಅವಕಾಶವಿರುತ್ತಿತ್ತು.

ಬಣಬೆಯ ಮೇಲೆ ನಿಂತು ಕುತ್ತುರೆ ಹಾಕುತ್ತಿದ್ದ ದೂರದ ನೆರೆಯ ಯುವಕನೊಬ್ವ ಹೊರೆ ಹೊತ್ತು ಬರುತ್ತಿದ್ದ ಸುಬ್ಬಮ್ಮನನ್ನು ದೂರದಿಂದಲೆ ಗುರುತಿಸಿ ಗಟ್ಟಿಯಾಗಿ, “ಓಹೋ ಹೋ ನೋಡ್ರಪ್ಪಾ, ನಮ್ಮ ಕಾನೂರು ಹೆಗ್ಗಡಿತಮ್ಮನೋರು ಹೊರಲಾರದೆ ಹೊತ್ತುಕೊಂಡು ಬತ್ತಾರೆ! ಏನಿದು ಹೆಗ್ಗಡಿತಮ್ಮೋರೇ? ಗಂಟೆಗೊಂದು ಹುಲ್ಲುಹೊರೆ ತತ್ತೀರಿ! ದೊಡ್ಡೋರ ಕೈಹಿಡಿದ ಕೂಡ್ಲೆ ಬಡೋರಿಗೆ ಬೊಜ್ಜು ಬಂದುಬಿಡ್ತದೆ! ಆಮೇಲೆ ಒಂದು ಹೆಜ್ಜೆ ಹೋಗ್ಬೇಕಾದ್ರೆ ದಂಡಿಗೇನೆ ಬರಬೇಕು” ಎಂದು ಮೊದಲಾಗಿ ಲೇವಡಿ ಮಾಡಿದನು.

ತನ್ನ ಒಂದೊಂದು ಮಾತಿನೀಟಿಯ ತಿವಿತಕ್ಕೂ ಸುಬ್ಬಮ್ಮನ ಹೃದಯ ಜಜ್ಜರಿತವಾಗಿ ನೆತ್ತರು ಬಸಿಯುತ್ತದೆ ಎಂಬುದು ಅವನ ಒರಟು ಬುದ್ಧಿಗೆ ಹೇಗೆ ತಿಳಿಯಬೇಕು? ಅದರಲ್ಲಿಯೂ ಸಾಹುಕಾರರಾದ ಕಾನೂರು ಚಂದ್ರಯ್ಯಗೌಡರು ಕೇಳುವುದಕ್ಕೆ ಮೊದಲು ಸುಬ್ಬಮ್ಮನನ್ನು ತನಗೇ ಮದುವೆಮಾಡಿಕೊಡುತ್ತಾರೆಂದು ಗಾಳಿವದಂತಿ ಬೇರೆ ಇದ್ದಿತಂತೆ ಆ ಗ್ರಾಮ್ಯ ಯುವಕನಿಗೆ! ಅದು ಬೇರೆ ಅವನ ಸರಸದ ಮಂಗನಿಗೆ ಏಣಿ ಹಾಕಿಕೊಟ್ಟಂತಿತ್ತು.

ಸುಬ್ಬಮ್ಮ ಹುಲ್ಲು ಹೊರೆಯನ್ನು ಹೊತ್ತುತಂದು, ನಿಮಿಷ ನಿಮಿಷಕ್ಕೂ ಬೆಳೆಯುತ್ತಿದ್ದ ಬಣಬೆಗೆ ಚಾಚಿದ್ದ ಬಿದಿರೇಣಿಯನ್ನು ಮೆಲ್ಲನೆ ಏರಿ, ಹೊರೆಯನ್ನು ಕುತ್ತುರೆ ಹಾಕುತ್ತಿದ್ದವರ ಬಳಿ ಹೊತ್ತುಹಾಕಿ, ಮುಖದಮೇಲೆ ಇಳಿಯುತ್ತಿದ್ದ ಬೆವರನ್ನು ಒರೆಸಿಕೊಳ್ಳುತ್ತಾ ಮರಳಿ ಏಣಿಯನ್ನಿಳಿಯುತ್ತಿದ್ದಳು. ಎರಡು ಮೆಟ್ಟಿಲಿಳಿಯುವುದರೊಳಗಾಗಿ ನಡುಹರೆಯದವನೊಬ್ಬ ಹುಲ್ಲುಹೊರೆ ಹೊತ್ತು ತಂದು ಏಣಿಯನ್ನೇರತೊಡಗಿದ್ದನು. ಕುತ್ತುರೆ ಹಾಕುತ್ತಿದ್ದವರೂ ಕೆಳಗಿದ್ದವರೂ ಹೆಂಗಸರೂ ಗಂಡಸರೂ ಎಲ್ಲರೂ ಸೇರಿ ಸುಬ್ಬಮ್ಮನದೇ ಉದ್ಧಟತನವೆಂದು ನಿರ್ಧರಿಸಿ, ಮೇಲೇರುತ್ತಿದ್ದವರಿಗೆ ಜಾಗ ಬಿಟ್ಟುಕೊಡುವಂತೆ ಗದರಿಸಿ ಕೂಗಿಕೊಂಡರು.

“ಏನು ದೌಲತ್ತು ಅವಳಿಗೆ ಹಾಂಗಾದರೆ? ಒಬ್ಬ ಹೊರೆ ಹೊತ್ತುಕೊಂಡು ಹತ್ತುತ್ತಿರುವಾಗಲೆ ಬೇಕೆಂತ ಇಳೀತಿದ್ದಾಳಲ್ಲಾ!”

“ದೊಡ್ಡವರ ಕೈಹಿಡಿದ ಪಿತ್ತ ಇನ್ನೂ ಇಳೀಲಿಲ್ಲ ಅಂತ ಕಾಣ್ತದೆ.”

“ಬರ‍್ತಾ ಬರ್‌ತಾ ಗಂಡುಬೀರಿ ಆಗ್ತಿದ್ದಾಳೆ?”

“ಯಾವನಾದರೂ ಒಬ್ಬ ಕೈಕೊಟ್ರೆ, ಸೊಕ್ಕೆಲ್ಲ ಇಳಿದು ಹೋಗ್ತದೆ.”

ಮಾತುಗಳಲ್ಲಿ ಒಂದೊಂದೂ ಸುಬ್ಬಮ್ಮನ ಕಿವಿಗೆ ಬೀಳದಿರಲಿಲ್ಲ. ಮಾತಾಡುತ್ತಿದ್ದವರ ಇಷ್ಟವೂ ಅವಳ ಕಿವಿಗೆ ಬೀಳಬೇಕೆಂಬುದೇ ಆಗಿತ್ತು.

ಸುಬ್ಬಮ್ಮ ಮತ್ತೆ ಏಣಿಯನ್ನೇರಿ ಹುಲ್ಲು ಬಣಬೆಯಮೇಲೆ ಅರುಗಾಗಿ ನಿಂತಳು. ಹೊರೆ ತಂದಿದ್ದವನು ಮೇಲೇರಿದ ತರುವಾಯ ಮತ್ತೆ ಕೆಳಗಿಳಿದು, ಸೀರೆಯಮೇಲೆಯೂ ಮೈಮೇಲೆಯೂ ಹಿಡಿದಿದ್ದ ಹುಲ್ಲಿನ ದೂಳನ್ನೂ ಚೂರುಗಳನ್ನೂ ಕೊಡಹಿಕೊಳ್ಳುತ್ತಾ, ಅಲ್ಲಿ ಸ್ವಲ್ಪವೂ ನಿಲ್ಲದೆ, ಬಂದ ಹಾದಿಯಲ್ಲಿಯೆ ಗದ್ದೆಯಕಡೆಗೆ ಹಿಂತಿರುಗಿದಳು. ಇತರರಂತೆ ಬಸಿರಿಮರದ ನೆರಳಿನಲ್ಲಿ ಕುಳಿತು ಸ್ವಲ್ಪ ದಣಿವಾರಿಸಿಕೊಳ್ಳಲೂ  ಆಕೆಗೆ ಮನಸ್ಸಾಗಲಿಲ್ಲ. ಏಕೆಂದರೆ, ಅಲ್ಲಿದ್ದವರೆಲ್ಲರೂ ತನ್ನ ವಿಷಯವಾಗಿಯೇ ನಿಷ್ಠುರವಾಡಿಕೊಳ್ಳುತ್ತಿದ್ದಾರೆಂಬುದು ಆಕೆಗೆ ಚೆನ್ನಾಗಿ ಗೊತ್ತಾಗಿತ್ತು.

ಸ್ವಲ್ಪ ದೂರ ಸಾಗುವುದರೊಳಗಾಗಿ ಅದುವರೆಗೆ ಕಟ್ಟೆಹಾಕಿ ತಡೆದಿದ್ದ ನೋವು ಎದೆಯನ್ನು ಬಿರಿದಂತಾಗಿ ದುಃಖ ಉಕ್ಕಿಬಂದು, ಬಿಕ್ಕಿ ಬಿಕ್ಕಿ ಅಳುತ್ತಾ, ಸುತ್ತಲೂ ನೋಡಿ, ಯಾರೂ ಕಾಣಿಸದಿದ್ದುದನ್ನು ಕಂಡು, ದಾರಿಯಿಂದ ಅಡ್ಡವಾಗಿ ಹೋಗಿ, ಒಂದು ದೊಡ್ಡ ಹಲಸಿನಮರದಡಿ ಅದರ ಹೆಬ್ಬೇರಿನ ಮೇಲೆ ಹೊದೆಗಳ ಮರೆಯಲ್ಲಿ ಕುಳಿತು, ಯಾತನೆಯ ಮೊಳಿಯ ಹಾಸಗೆಯಲ್ಲಿ ಬಿದ್ದು ಬಿದ್ದು ಹೊರಳಾಡಿ ಕಣ್ಣು ಕೀಸುವವರೆಗೂ ಮುಖವನ್ನು ತೀಡಿಬಿಟ್ಟಳು.

ಚಂದ್ರಯ್ಯಗೌಡರ ಕ್ರೌರ್ಯದ ಕತ್ತಿಯಿಂದ ತಪ್ಪಿಸಿಕೊಂಡು, ಇರುಳಿನಲ್ಲಿ ಸುಬ್ಬಮ್ಮ ಕೆಳಕಾನೂರಿಗೆ ಬಂದು, ಅಲ್ಲಿಂದ ನೆಲ್ಲಹಳ್ಳಿಗೆ ಬಂದಂದು ನೆರೆಹೊರೆಯವರೆಲ್ಲರೂ ಮನೆಯವರಿಗಿಂತಲೂ ವಿಶೇಷವಾಗಿ ಆಕೆಯ ಮೇಲೆ ಕನಿಕರ ತೋರಿದ್ದರು. ಆದರೆ ದುರದೃಷ್ಟ: ಪರಿಚಯದಿಂದ ಭಾವಗಳು ಬಹಳ ಉಪಯೋಗಿಸಿವ ಹಾರೆಯಂತೆ ಮೊನೆ ಮಾಸಿಹೋಗುತ್ತವೆ. ಅಷ್ಟೆ ಅಲ್ಲ; ಹಾರೆಯ ಮೊನೆಗೆ ಜಡೆಮಡಿಯುಂತೆ, ಎದುರು ಭಾವಗಳೂ ಮೂಡುತ್ತವೆ. ನೆಲ್ಲುಹಳ್ಳಿಯವರು ಮೊದಮೊದಲು ತೋರಿದ್ದ ಸಹಾನುಭೂತಿ ಬರುಬರುತ್ತಾ, ಶ್ರೀಮಂತರಾದ ಚಂದ್ರಯ್ಯಗೌಡರು ಆಕೆಯನ್ನು ಸಂಪೂರ್ಣವಾಗಿ ತ್ಯಜಿಸಿದದರೆಂದು ತಿಳಿದಮೇಲೆ, ಉದಾಸೀನವಾಗಿಯೂ ತಿರಸ್ಕಾರವಾಗಿಯೂ, ದ್ವೇಷವಾಗಿಯೂ ಪರಿಣಮಿಸಿಬಿಟ್ಟತು. ನೆಲ್ಲುಹಳ್ಳಿಯ ಸುಬ್ಬಿ ಇದ್ದಕ್ಕಿದ್ದ ಹಾಗೆ ಕಾನೂರು ಹೆಗ್ಗಡಿತಿಯಾಗಿ, ತರುವಾಯ ಅದಕ್ಕಿಂತಲೂ ಹಠಾತ್ತಾಗಿ ಮನೆಯಿಲ್ಲದ ಸುಬ್ಬಕ್ಕನಾಗಿಬಿಟ್ಟಳು.

ಗಂಡನನ್ನು ಬಿಟ್ಟುಬರುವ ತರುಣಿ ಬಹುಬೇಗ ನಿಂದೆಗೀಡಾಗುತ್ತಾಳೆ. ಸುಬ್ಬಮ್ಮನ ವಿಚಾರವಾಗಿ ಅಲ್ಲಿ ಇಲ್ಲಿ, ಅವರು ಇವರು, ಗುಸು ಗುಸು ಕೆಟ್ಟ ಮಾತಾಡಿಕೊಳ್ಳತೊಡಗಿದರು. ಕೆಲವರಂತೂ ಸುಬ್ಬಮ್ಮ ಕಾನೂರಿನಲ್ಲಿ ಕೆಟ್ಟ ಕೆಲಸ ಮಾಡಿದುದರಿಂದಲೇ ಗೌಡರು ಅವಳನ್ನು ಓಡಿಸಿಬಿಟ್ಟರೆಂದೂ, ಇಲ್ಲದಿದ್ದರೆ ಅಂತಹ ದೊಡ್ಡಮನುಷ್ಯರು ಕೈಹಿಡಿದ ಹೆಂಡತಿಯನ್ನು ಕೈಬಿಟ್ಟು, ಅವಮಾನಕ್ಕೆ ಗುರಿಯಾಗುತ್ತಿದ್ದರೇ ಎಂದೂ, ಇಲ್ಲದ ಸಲ್ಲದ ದುರೂಹೆಗಳನ್ನು ಸಿಕ್ಕಿದ ಕಡೆ ಬಿತ್ತಿಬಿಟ್ಟರು. ಸಾಲದಿದ್ದುದಕ್ಕೆ ಬೇರೆ ಕಟ್ಟನಾಲಗೆಗಳ ಜೊತೆಗೆ ಕೆಲವರ ಕೆಟ್ಟ ಕಣ್ಣೂ ಸುಬ್ಬಮ್ಮನಮೇಲೆ ಬೀಳತೊಡತಗಿತ್ತು. ಆಕೆಯ ಮನಸ್ಸೂ ಒಂದೆರಡು ಸಾರಿ ಅತ್ತಯಿತ್ತ ಅಲೆದಾಡಿ, ಅಳುಕಿ ಬಳುಕಿ, ಸೋಲಿನಂಚಿನವರೆಗೂ ಜಾರಿ ಬಹು ಕಷ್ಟದಿಂದ ಕೆಳಗೆ ಬೀಳದೆ ಆತುಕೊಂಡಿತ್ತು.

ಹೊರಗಿನವರ ಮಾತಿರಲಿ, ತವರುಮನೆಯವರು ಕೂಡ ಆಕೆಯ ವಿಚಾರದಲ್ಲಿ ಮುರಿದ ಮನಸ್ಸಾಗಿದ್ದರು. ಆಕೆಯ ಅತ್ತಿಗೆಯೊಬ್ಬಳಂತೂ ಪಕ್ಕೆಯಲ್ಲಿ ಚುಚ್ಚಿಕೊಂಡ ಬಾಣದಂತೆ ಕೊರೆದು ಕೊರೆದು ಕಿರುಕುಳ ಕೊಡುತ್ತಿದ್ದಳು. ಚಂದ್ರಯ್ಯಗೌಡರು ಯಾತ್ರೆಗೆ ಹೋಗಿದ್ದಾಗ, ಸುಬ್ಬಮ್ಮ ಕಾನೂರಿಗೆ ಹೋಗಿ ತನ್ನ ಒಡವೆಗಳನ್ನು ತಂದು ಹೂವಯ್ಯನ ಕೈಯಲ್ಲಿ ಜೋಪಾನವಾಗಿಡಲು ಕೊಟ್ಟು ಬಂದಂದಿನಿಂದಲಂತೂ ಆಕೆಗೆ ಕಿರುಕುಳ ಅಸಹನೀಯವಾಗಿತ್ತು. ತಾಯಿಯಾದಿಯಾಗಿ ಎಲ್ಲರೂ ಸಿಡುಗುಟ್ಟುತ್ತಿದ್ದರು. ಎಲ್ಲರಿಗೂ ಸುಬ್ಬಮ್ಮ ತನ್ನ ಬೆಳೆಬಾಳುವ ಒಡವೆ ವಸ್ತುಗಳನ್ನು ಮನೆಗೆ ತರಲಿಲ್ಲವಲ್ಲಾ ಎಂದು ಹೊಟ್ಟೆಯುರಿಯತೊಡಗಿತ್ತು. ತವರುಮನೆಗೆ ತೆಗೆದುಕೊಂಡು ಹೋದರೆ ಒಡವೆಗಳೆಲ್ಲ ತನ್ನ ಕೈತಪ್ಪಿ ಹೋಗುತ್ತವೆಂದೇ ಸುಬ್ಬಮ್ಮ ಅವುಗಳನ್ನು ಜಾಣ್ಮೆಯಿಂದ ಹೂವಯ್ಯನ ವಶದಲ್ಲಿಟ್ಟು ಹೋಗಿದ್ದಳು.

ಮನೆಯವರಿಗೆ ಎಂದು ಆಶಾಭಂಗವಾಯಿತೊ ಅಂದಿನಿಂದ ಅವರೂ ಇತರರೊಡನೆ ಸೇರಿ ಸುಬ್ಬಮ್ಮನನ್ನು ಪೀಡಿಸತೊಡಗಿದರು. ಅವಳ ಕೈಲಿ ಕೂಲಿಯಂತೆ ಕೆಲಸ ಮಾಡಿಸತೊಡಗಿದರು. ಸ್ವಲ್ಪ ಅವಕಾಶ ಸಿಕ್ಕಿದರೂ ಸಾಕು “ಅವ್ವಾ, ಇದೇನು ನಿನ್ನ ಗಂಡನ ಮನೆ ಅಲ್ಲಾ! ನಾವು ಬಡೋರು! ಅಚ್ಚುಕಟ್ಟಾಗಿ ಕೂತುಕೊಂಡು ತಿನ್ನಬೇಕಾದರೆ ನಿನ್ನ ಗಂಡನ ಮನೀಗೇ ಹೋಗು! ಇಲ್ಲದಿದ್ದರೆ ಒಡವೆಯೆಲ್ಲಾ ಕೊಟ್ಟುಬಂದೀಯಲ್ಲಾ ಅವರ ಹತ್ತಿರಕ್ಕೆ ಹೋಗು!” ಎಂದು ಮೊದಲಾಗಿ ಮೂದಲಿಸಿ ಮಾತಾಡುತ್ತಿದ್ದರು. ಸುಬ್ಬಮ್ಮನಿಗೂ ಇದನ್ನೆಲ್ಲಾ ಕೇಳಿ ಕೇಳಿ ಮನಸ್ಸು ರೇಗಿ ತವರುಮನೆಯನ್ನು ಬಿಟ್ಟು ಕೆಳಕಾನೂರಿಗೆ ಹೋಗಿ ಹೂವಯ್ಯನ ಆಶ್ರಯದಲ್ಲಿ ನಾಗಮ್ಮನವರೊಡನೆ ಅವರ ಜೀತದಾಳಾಗಿಯಾದರೂ ಇದ್ದುಬಿಡುತ್ತೇನೆಂದು ಯೋಚಿಸಿದ್ದಳು. ಆದರೆ ಅಷ್ಟರಲ್ಲಿಯೆ ನಾಗಮ್ಮನವರೂ ತೀರಿಕೊಂಡ ವಾರ್ತೆ ಬಂದುದರಿಂದ ಮುಂದೇನೂ ತೋಚದೆ ಸುಮ್ಮನಾಗಿದ್ದಳು. ಮದುವೆಯಾಗದಿದ್ದ ಗಂಡಸರ ಮಧ್ಯೆ ಗಂಡನನ್ನು ಬಿಟ್ಟ ಯುವತಿ ತಾನೊಬ್ಬಳೇ ಇದ್ದರೆ, ನಿಂದೆಗೆ ಸವಾರಿಮಾಡಲು ಜೂಜಿನ ಕುದುರೆಯನ್ನೇ ಕೊಂಡುಕೊಟ್ಟಂತಾಗುತ್ತದಲ್ಲವೆ?

ಹಲಸಿನ ಮರದಡಿ ಕುಳಿತು ಯೋಚಿಸಿ ಯೋಚಿಸಿ ಅಳುತ್ತಿದ್ದ ಸುಬ್ಬಮ್ಮನಿಗೆ ಏನೆ ಆಗಲಿ ತನ್ನ ಗಂಡನ ಮನೆಯೇ ಸ್ವರ್ಗವೆಂಬುದಾಗಿ ತೋರಿತು. ಈ ನಿಂದೆಯ ಒಳ ಇರಿತದ ಮುಂದೆ ಆ ಗಂಡನ ಹೊರಗುದ್ದು ಮೃದುವಾಗಿ ತೋರಿತು. ಈ ಅವಮಾನದ ಎದುರು ಆ ಕಷ್ಟ ಸಂಕಟಗಳೆಲ್ಲ ಬೇಜಾರು ಪರಿಹಾರವಾಗುವ ಸಾಹಸಗಳಾಗಿ ತೋರಿದುವು. ಗಂಡನ ಗುದ್ದೊಂದನ್ನು ಸಹಿಸಿಕೊಂಡರಾಯಿತು, ತಾನೆ ಕಾನೂರಿನ ಆಡಳಿತಕ್ಕೆಲ್ಲ ಹೆಗ್ಗಡಿತಿಯಾಗಿರಬಹುದಲ್ಲವೆ? ಅದೂ ಅಲ್ಲದೆ, ಈಗ ಚಂದ್ರಯ್ಯಗೌಡರು ಮೊದಲಿದ್ದಂತೆ ಕ್ರೂರವಾಗಿಲ್ಲವಂತೆ; ಧರ್ಮಸ್ಥಳಕ್ಕೆ ಯಾತ್ರೆ ಹೋಗಿ ಬಂದಮೇಲೆ ಅವರ ಬುದ್ಧಿ ಬೇರೆಯಾಗಿದೆಯಂತೆ. ಬಹಳ ಸಾತ್ವಿಕರಾಗಿದ್ದಾರಂತೆ. ಆ ಸುದ್ದಿ ನಿಜವಾಗಿಯೆ ಇರಬೇಕು. ಹಾಗಿಲ್ಲದಿದ್ದರೆ, ಮೊದಲಿನ ಚಂದ್ರಯ್ಯಗೌಡರೇ ಆಗಿದ್ದರೆ, ನಾನು ತಂದಿದ್ದ ಒಡವೆ ವಸ್ತುಗಳನ್ನು ಹಿಂದಕ್ಕೆ ಪಡೆಯುವ ಸಾಹಸ ಮಾಡದೆ  ಇರುತ್ತಿದ್ದರೆ? ಪ್ರತೀಕಾರಮಾಡದೆ ಸುಮ್ಮನಿರುತ್ತಿದ್ದರೆ? ಒಡವೆಗಳಲನ್ನು ಹಿಂದಕ್ಕೆ  ಕೊಡಬೇಕೆಂದು ಹೇಳಿ ಒಬ್ಬ ಆಳನ್ನೂ ಕೂಡ ಕಳುಹಿಸಲಿಲ್ಲ!

ಆಲೋಚಿಸುತ್ತಿದ್ದ ಹಾಗೆ. ಸುಬ್ಬಮ್ಮನ ಕಂಬನಿಯಲ್ಲಿ ಹೊಸದಾಗಿ ಸೌಜನ್ಯಮೂರ್ತಿಯಾಗಿ ಸಾತ್ವಿಕರಾಗಿದ್ದ ಚಂದ್ರಯ್ಯಗೌಡರ ಮಧುರಾಕೃತಿ ಕಂಗೊಳಿಸಿ ಮನಂಗೊಳಿಸಿತು. ಅವರಿಂದ ಹಿಂದೆ ತನಗಾಗಿದ್ದ ಅನ್ಯಾಯಗಳನ್ನೂ ಯಾತನೆಗಳನ್ನೂ ಸಂಪೂರ್ಣವಾಗಿ ಕ್ಷಮಿಸಿಬಿಟ್ಟಳು. ಅವರ ಪರವಾಗಿ ಆಕೆಯ ಹೃದಯದಲ್ಲಿ ಅಲಂಪೊಂದು ಹೂ ಮೂಡುವಂತೆ ಮೂಡಿತು. ಪುನಃ ತಾನು ಕಾನೂರಿನ ಹೆಗ್ಗಡಿತಿಯಾಗಿ ಎಲ್ಲರ ಗೌರವ ಭಯಗಳಿಗೆ ಪಾತ್ರಳಾಗಿರುವಂತೆ ಭಾಸವಾಯಿತು. “ಹಾಗಾದರೆ, ದೇವರ ದಯೆಯಿಂದ ಹಾಗಾದರೆ, ಇವತ್ತು ನನ್ನನ್ನು ಹಾಸ್ಯಮಾಡಿ ನಿಂದಿಸಿದ ಈ ನೆಲ್ಲುಹಳ್ಳಿಯ ಕುರಿಗಳೆಲ್ಲ, ನಾನು ಮಾತಾಡಿಸಿದರೆ ಸಾಕು ತಾವು ಧನ್ಯರಾದೆವೆಂದುಕೊಂಡು ನಾಯಿಮರಿಗಳಂತೆ, ನನ್ನ ಕಾಲಬಳಿ ಮೂಲಗಿಸುವುದನ್ನು ನೋಡುತ್ತೇನೆ!” ಎಂದುಕೊಂಡಳು.

ಸ್ವಲ್ಪ ಹೊತ್ತಿನಿಂದ ನಿದ್ರಿಸುತ್ತಿದ್ದ ಸುಬ್ಬಮ್ಮ ತನ್ನ ಅತ್ತಿಗೆಯ ಕಠಿನವಾದ ಕೂಗಿನಿಂದ ಎಚ್ಚತ್ತಳು. ಅವಳ ಬೈಗುಳಕ್ಕೆ ಒಂದಿನಿತೂ ಕಿವಿಗೊಡದೆ ಹುಲ್ಲುಹೊರೆಯನ್ನು ಹೊತ್ತು ತರಲು ಗದ್ದೆಗೆ ಹೊರಟಳು. ಆಕೆಯ ಮನಸ್ಸಿಗೆ ಒಂದು ಆಶಾಧೈರ್ಯದ ಕವಚ ದೊರೆಕೊಂಡಿತ್ತು.

ಆದರೂ ಸುಬ್ಬಮ್ಮ ಕಾನೂರಿಗೆ ಹೊರಡಲಿಲ್ಲ. ಹಲಸಿನ ಮರದಡಿ ತಾಲನು ಕಟ್ಟಿದ್ದ ತನ್ನ ಗಂಡನ ಚಿತ್ರದಲ್ಲಿ ತರುವಾಲಯ ಆಕೆಗೆ ಸಂಪೂರ್ಣ ನಂಬುಗೆ ಹುಟ್ಟಲಿಲ್ಲ. ಅಲ್ಲದೆ ಅಲ್ಲಿ ಕಟ್ಟಿದ್ದ ಕಾನೂರಿನ ಚಿತ್ರದಲ್ಲಿ ಹಲ್ಲುಬ್ಬಿನ ಸೇರೆಗಾರರನ್ನು ಹೊರಬಿಟ್ಟಿದ್ದಳು. ಅವರನ್ನು ನೆನೆದೊಡನೆಯೆ ಆದೆಗೆ ಜುಗುಪ್ಸೆಯಾಯಿತು. ಎಲ್ಲಕ್ಕಿಂತಲೂ ಮುಖ್ಯ ಕಾರಣವಾಗಿ ಆಕೆಯಭಿಮಾನವಿತ್ತು. ಗಂಡನ ಮನೆಯಿಂದ ಒಂದು ಗಾಡಿ ಬರುವುದಂತೂ ಇರಲಿ, ಕರೆಯಲು ಜನ ಬರುವುದೂ ಬೇಡ, ಕಡೆಗೆ ಒಂದು ಗಾಳಿಸುದ್ದಿಯಾದರೂ ಬೇಡವೆ ತನ್ನನ್ನು ಅಲ್ಲಿಗೆ ಕೊಂಡೊಯ್ಯುವುದಕ್ಕೆ?

ಅಂತಹ ನಿಮಿತ್ತ ಮಾತ್ರದ ಕರೆಗಾಗಿ ಕಾಯುತ್ತಾ ಅನಂತ ನಿರೀಕ್ಷೆಯಿಂದಿದ್ದಳು ಸುಬ್ಬಮ್ಮ.

ಕೆಲವು ತಿಂಗಳಮೇಲೆ ವೈಶಾಖಮಾಸದಲ್ಲಿ ಒಂದು ಸಂಜೆ ಕಮಾನುಗಾಡಿಯೊಂದು ನೆಲ್ಲುಹಳ್ಳಿಗೆ ಬಂದಿತು. ಅವನ ಒಕ್ಕಣ್ಣಿನ ವಿಕಾರ ಮುಖದದೆಸೆಯಿಂದ ಯಾರಿಗೂ ಮೊದಮೊದಲು ಗುರುತು ಸಿಕ್ಕದಿದ್ದರೂ ಗಾಡಿ ಹೊಡೆಯುತ್ತಿದ್ದವನು ಓಬಯ್ಯನಾಗಿದ್ದನು. ಗಾಡಿ ಪೆದ್ದೇಗೌಡರ ಮನೆಯ ಅಂಗಳದಲ್ಲಿ ನಿಂತಿತು. ಗಾಡಿಯವನು ಎತ್ತುಗಳ ಕೊರಳು ಬಿಚ್ಚಿದನು. ಕಾನೂರು ಸೇರೆಗಾರ ರಂಗಪ್ಪಸೆಟ್ಟರು ಮೆಲ್ಲಗೆ ಹೊರಗೆ ತಲೆಹಾಕಿ, ಎರಡು ಮೆಟ್ಟುಗಳನ್ನೂ ನೆಲಕ್ಕೆ ರಪ್ಪನೆಸೆದು, ಗಾಡಿಯ ಕತ್ತರಿಯ ಮೇಲೆ ನಡೆದು ಬಂದು,  ಮೂಕಿಯ ತುದಿಯಲ್ಲಿ ಕೆಳಗಿಳಿದರು.

ಚಂದ್ರಯ್ಯಗೌಡರು ಬಹುದಿನಗಳಿಂದಲೂ ರೋಗಗ್ರಸ್ತರಾಗಿ ಹಾಸಗೆ ಹಿಡಿದಿದ್ದುದರಿಂದ ಅವರ ಅಪೇಕ್ಷೆಯಂತೆ ಅವರ ಶುಶ್ರೂಷೆಗಾಗಿ ಅವರ ಹೆಂಡತಿಯನ್ನು ಕರೆತರಲು ಅವರ ಮಗ ರಾಮಯ್ಯ ಗಾಡಿ ಕಳುಹಿಸಿದ್ದನು. ಸೇರೆಗಾರರನ್ನು ಕಂಡು ಗಾಬರಿಯಾದರೂ ಓಬಯ್ಯನನ್ನು ಗುರುತಿಸಿದ ಮೇಲೆ ಸುಬ್ಬಮ್ಮನಿಗೆ ಧೈರ್ಯವಾಯಿತು ಮರುದಿನ ಬೆಳಗ್ಗತೆ ಕಮಾನುಗಾಡಿಯಲ್ಲಿ ಕುಳಿತು ಕಾನೂರಿಗೆ ಹೊರಟಳು. ದಾರಿಯಲ್ಲಿ ಓಬಯ್ಯನಿಂದ ಮನೆಯ ವಿಷಯಗಳನ್ನೆಲ್ಲಾ ಅನೇಕವಾಗಿ ಅರಿತುಕೊಂಡಳು. ನಡು ನಡುವೆ, ಗಾಡಿಯ ಹಿಂಭಾಗದಲ್ಲಿ ಕುಳಿತಿದ್ದ ಸೇರೆಗಾರರೂ ಬಾಯಿಹಾಕಿ ಮಾತಾಡುತ್ತಿದ್ದರು. ಆದರೆ ಅವರ ನಡತೆ ದೂರವಾಗಿ ಗಂಭೀರವಾಗಿ ವಿನಯಪೂರ್ವಕವಾಗಿತ್ತು. ಬಹುಶಃ ಸುಬ್ಬಮ್ಮನ ಮುಖದಲ್ಲಿ ನೋವಿನ ತಪಸ್ಸಿನಿಂದ ಬರುವ ಒಂದು ಅಧಿಕಾರದ ಗಾಂಭೀರ್ಯವಿದ್ದಿತೆಂದು ತೋರುತ್ತದೆ. ಅಲ್ಲದೆ ಇತ್ತೀಚೆಗೆ ಚಂದ್ರಯ್ಯಗೌಡರ ದರ್ಪ ಕುಂದಿದ ಹಾಗೆಲ್ಲಾ ಸೇರೆಗಾರರ ಬಲವೂ ಸ್ವಲ್ಪ ಸ್ವಲ್ಪವಾಗಿ ಮುದುರಿಕೊಳ್ಳತೊಡಗಿತ್ತು.