ಬೆಳಗ್ಗೆ ಮುಂಚೆ ಬೈರ ತಂದುಕೊಟ್ಟ ಹೂವಯ್ಯನ ಕಾಗದವನ್ನು ಓದಿದೊಡನೆ, ಚಿನ್ನಯ್ಯನಿಗೆ ಅಳಲೂ ಮುನಿಸೂ ಒಂದರಮೇಲೊಂದು ಉಕ್ಕಿಬಂದುವು. ಸೀತೆಯಿಂದ ನಡೆದುದೆನ್ನೆಲ್ಲ ತಿಳಿದು ಹೂವಯ್ಯ, ತನ್ನೆದೆಯ ಬಣ್ಣವನ್ನೂ ಒಂದಿನಿತು ಸೇರಿಸಿ, ಕಥೆಯನ್ನು ವಿವರವಾಗಿ ಬರೆದಿದ್ದನು. ಓದುತ್ತ ಓದುತ್ತ, ತಂಗಿಯ ಗೋಳಿನ ಗರಗಸದಮೇಲೆ ಅಣ್ಣನ ಎದೆ ಎಳೆದಂತಾಯಿತು. ಮನೆಯವರೆಲ್ಲರೀಗೂ ತಿಳಿಸಿದನು. ಇಡೀ ಮುತ್ತಳ್ಳಿಗೇ ಸುದ್ದಿಯ ಸಿಡಿಲು ಬಡಿದಂತಾಯಿತು.

ಗಾಡಿ ಕಟ್ಟಿಸಿಕೊಂಡು ಶ್ಯಾಮಯ್ಯಗೌಡರೂ ಗೌರಮ್ಮನವರೂ ಚಿನ್ನಯ್ಯನೂ ಕೆಳಕಾನೂರಿಗೆ ಏದುತ್ತಾ ಬಂದರು.

ಸೀತೆಗೆ ಹಿಂದಿನ ದಿನ ಒದಗಿದ ಘಟನೆಗಳ ಪರಿಣಾಮವಾಗಿ ನೂರು ಮೂರು ನೂರುಲಾಲ್ಕು ಡಿಗ್ರಿಗಳಷ್ಟು ಜ್ವರವೇರಿತ್ತು. ಜ್ವರದಿಂದಲೂ ದಣಿವಿನಿಂದಲೂ ಹೆಚ್ಚು ಮಾತನಾಡಲೂ ಆಗುತ್ತಿರಲಿಲ್ಲ. ಹೂವಯ್ಯ ಪಕ್ಕದಲ್ಲಿ ಕುಳಿತು ವೈದ್ಯ ಶುಶ್ರೂಷೆ ಮಾಡುತ್ತಿದ್ದನು. ತಂದೆ ತಾಯಿ ಅಣ್ಣಂದಿರು ಬಂದಾಗ ಅವಳು ಧಾರಾಕಾರವಾಗಿ ಕಣ್ಣೀರು ಸುರಿಸಿದಳೇ ಹೊರತು ಯಾವ ಮಾತನ್ನೂ ಆಡಲಿಲ್ಲ. ಆ ಮೌನದಲ್ಲಿ ಬೇಕಾದಷ್ಟು ವಾಗ್ಮಿತೆಯಿತ್ತು; ಭತ್ಸನೆಯಿತ್ತು.

ಸ್ವಲ್ಪ ಹೊತ್ತಿನಮೇಲೆ ಓಬಯ್ಯ ಬಂದು “ಸೀತಮ್ಮ ಮನೆಯಲ್ಲಿ ಇಲ್ಲ. ನಿನ್ನೆ ರಾತ್ರಿ ಮಲಗಿಕೊಂಡವರು ಬೆಳಗ್ಗೆ ನೋಡಿದರೆ ಮಾಯವಾಗಿಬಿಟ್ಟಾರೆ. ಭೂತರಾಯನ ಚೇಷ್ಟೆಯೋ ಏನೋ ಗೊತ್ತಿಲ್ಲ! ಬೆಳಿಗ್ಗೆ ಎಲ್ಲೆಲ್ಲಿ ಹುಡುಕಿದರೂ ಸಿಕ್ಕಲಿಲ್ಲ ಇಲ್ಲಿಗೇನಾದರೂ ಬಂದಾರೇನು ಕೇಳಿಕೊಂಡು ಬಾ ಎಂದು ಗೌಡರು ಹೇಳಿಕಳ್ಸಿದರು” ಎಂದು ಕಲ್ಲು ಕಣ್ಣೀರು ಕರೆಯುವಂತೆ ಅತ್ತನು. ತಾನು ಹಿಂದಿದ್ದ ಮನೆಯನ್ನು ನೋಡಿದೊಡನೆ ಅವನ ಮನಸ್ಸಿನಲ್ಲಿ ದುಃಖೋದ್ರೇಕವಾದ ಸ್ಮತಿ ಮೂಡಿದ್ದಿತು.

ಸೋಮನಿಂದ ಎಲ್ಲವನ್ನೂ ತಿಳಿದುಕೊಂಡ ಓಬಯ್ಯ ಕಾನೂರಿಗೆ ಹಿಂತಿರುಗಿ ಬಂದು, ಕಣ್ಣೀರು ಕರೆಯುತ್ತಿದ್ದ ರಾಮಯ್ಯನಿಗೂ ಖಿನ್ನರಾಗಿದ್ದ ಚಂದ್ರಯ್ಯಗೌಡರಿಗೂ ನಡಿದುದನ್ನೆಲ್ಲ ವಿಶದವಾಗಿ ತಿಳಿಸಿ, ಮುತ್ತಳ್ಳಿಯಿಂದ ಶ್ಯಾಮಯ್ಯಗೌಡರೆ ಮೊದಲಾದವರು ಬಂದಿದರುವುದನ್ನು ಹೇಳಿದನು. ಸೀತೆ ಬದುಕಿದ್ದಾಳೆ ಎಂಬುದನ್ನು ಕೇಳಿ ತಂದೆ ಮಕ್ಕಳಿಬ್ಬರಿಗೂ ಒಂದು ಎದೆ ಭಾರ ತೊಲಗಿದಂತಾಯಿತು.

ಜೊತೆಗೆ, ಚಂದ್ರಯ್ಯಗೌಡರಲ್ಲಿ ತನ್ನ ಸೊಸೆ ಅನ್ಯರ, ಅದರಲ್ಲಿಯೂ ತನಗಾಗದವರ, ಮನೆಗೆ ರಾತ್ರಿ ಓಡಿಹೋಗಿ ಅಲ್ಲಿರುವುದೆಂದರೇನು? ಎಂಥ ನಾಚಿಕೆಗೇಡು? ಅವಳನ್ನು ಕೂಡಲೇ ಹಿಂದಕ್ಕೆ ಕರೆತರಬೇಕು. ಇಲ್ಲದಿದ್ದರೆ ತವರು ಮನೆಗೆ ಕಳಿಸಬೇಕು-ಎಂಬಾಲೋಚನೆಯ ಕರುಬೂ ತಲೆಯೆತ್ತಿತು.

ಮತ್ತೆ ಓಬಯ್ಯನೊಡನೆ ತಮ್ಮ ಇಷ್ಟವನ್ನು ಅಪ್ಪಣೆಯ ರೀತಿಯಿಂದ ಹೇಳಿ ಕಳಿಸಿದರು. ಅವನು ಹೋಗಿ ಹಿಂತಿರುಗಿ ಬಂದು, “ನಮ್ಮ ಹುಡುಗಿಯನ್ನು ನಾವು ಏನಾದರೂ ಮಾಡುತ್ತೇವೆ; ಎಲ್ಲಿಯಾದರೂ ಇಡುತ್ತೇವೆ. ಬಾಯಿಮುಚ್ಚಿಕೊಂಡು ತೆಪ್ಪಗೆ ಕೂತುಕೊಳ್ಳಬೇಕಂತೆ ಅಂತಾ ಹೇಳು ನಿಮ್ಮ ಗೌಡರಿಗೆ” ಎಂದು ಹೇಳಿದರೆಂದೂ, ನಿಮ್ಮ ಮೇಲೆ ಕ್ರಮಿನಲ್ ಕೇಸು ಮಾಡುತ್ತಾರಂತೆ ಎಂದೂ, ನೀವು ಅವರಿಗೆ ಕೊಡಬೇಕಾದ ಸಾಲಕ್ಕೆ ದಾವಾ ಹಾಕುತ್ತಾರಂತೆ ಎಂದೂ ವರದಿ ಹೇಳಿದನು.

ಒಂದೆರಡು ವರ್ಷಗಳ ಹಿಂದೆ ಆಗಿದ್ದರೆ ಚಂದ್ರಯ್ಯಗೌಡರು ಎಷ್ಟು ಪ್ರತಾಪ ತೋರಿಸುತ್ತಿದ್ದರೋ, ಮೀಸೆ ತಿರುವುತ್ತಿದ್ದರೋ, ದೊಂಬೆ ನಡೆಸುತ್ತಿದ್ದರೋ? ಆದರೆ ಈಗ ಹಾಗೇನೂ ಮಾಡಲಿಲ್ಲ. “ಹೆಣ್ಣುಗಳಿಗೇನಂತೆ ಬರಗಾಲ? ಅವರ ಹುಡುಗೀನ ಅವರು ಉಪ್ಪಿನಕಾಯಿ ಹಾಕಿ ಇಟ್ಟುಕೊಳ್ಳಲಿ. ನನ್ನ ಮಗನಿಗೆ ಬೇರೆಕಡೆ ಹೆಣ್ಣು ಸಿಕ್ಕೊದಿಲ್ಲೇನು ನೋಡುತ್ತೇನೆ!” ಎಂದು ಸೇರೆಗಾರರ ಕಡೆ ತಿರುಗಿ, “ಇವತ್ತು ಆ ಹಳ್ಳ ಸರಿಮಾಡಬೇಕಿತ್ತು. ಆಳುಗಳು ಬಂದ್ರೇನ್ರೀ?” ಎಂದರು.

“ಹೌದಲ್ವಾ, ಆಗ್ಲೆ ಕೆಲಸಕ್ಕೆ ಹೋಗಿದ್ದಾರಂಬ್ರು” ಎಂದು ಸೇರೆಗಾರರು ಅಂಗಳಕ್ಕೆ ಪಿಚಕ್ಕನೆ ಎಲೆಯಡಿಕೆ ಉಗುಳಿ ಹೊರಗೆ ಹೋದರು.

ಅಲ್ಲಿಯೆ ಕೆಸರುಹಲಗೆಯಮೇಲೆ ತಲೆಬಾಗಿ ಕುಳಿತದ್ದ ರಾಮಯ್ಯ ಎಲ್ಲವನ್ನೂ ಆಲಿಸಿದ್ದನು. ಆದರೆ ಒಂದು ಮಾತನ್ನೂ ಆಡಿರಲಿಲ್ಲ. ತಂದೆಯ ಮೇಲೆ ಜುಗುಪ್ಸೆ, ಕೋಪ,ತಿರಸ್ಕಾರ ಎಲ್ಲವೂ ಒಟ್ಟಿಗೆ ಉಕ್ಕುತ್ತಿದ್ದುವು ಅವನ ಹೃದಯದಲ್ಲಿ.

ಸೇರೆಗಾರರು ಕಣ್ಮರೆಯಾದೊಡನೆ ತಂದೆಯ ಕಡೆ ತಿರುಗಿ, “ಅಂತೂ ನಿಮ್ಮಿಂದ ಮನೆಹಾಳಾಯ್ತು!”ಎಂದನು.

“ನಿನ್ನಜ್ಜನ ಮನೆ ಗಂಟಲ್ಲೋ; ನಾ ಮಾಡಿದ್ದು ನಾ ಹಾಳುಮಾಡ್ದೆ. ನೀನ್ಯಾರೋ ಕೇಳೋಕೆ?” ಎಂದರು ಗೌಡರು.

“ನೀವೋಬ್ಬರೇ ಹಾಳಾಗಿಹೋಗಿದ್ರೆ ನನ್ನ….. ಹೋಯ್ತು ಅಂತಿದ್ದೆ. ನನ್ನನ್ನೂ ಹಾಳುಮಾಡಿದಿರಿ. ಕೈಹಿಡಿದವರನ್ನೂ ಹಾಳುಮಾಡಿದಿರಿ. ಮನೆಯನ್ನೆಲ್ಲ ಒಡೆದು ಪಾಲುಮಾಡಿದಿರಿ. ನಿಮ್ಮ ದೆಸೆಯಿಂದ ಎಷ್ಟು ಜನ ಹಾಳಾಗಿ ಹೋದರು? ಇನ್ನೆಷ್ಟು ಹಾಳಾಗಿಹೋಗ್ಬೇಕೋ ಆ ದೇವರಿಗೇ ಗೊತ್ತು? ನೀವು ನರಳೀ ನರಳೀ ಕೊಳತೇ ಸಾಯ್ತೀರಿ ಅಂತ ಕಾಣ್ತದೆ!” ಎಂದು ರಾಮಯ್ಯ ಮುಖಕ್ಕೆ ಕಲ್ಲೆಸೆಯುವಂತೆ ಕ್ರೂರವಾಗಿ ಮಾತುಗಳನ್ನೆಸೆದನು.

ಆ ಒಂದೊಂದು ಮಾತೂ ಸತ್ಯವಾಗಿ ತೋರಿದ್ದರಿಂದಲೆ ಚಂದ್ರಯ್ಯಗೌಡರಿಗೆ ಸಿಟ್ಟು ಮತ್ತೂ ಉಕ್ಕಿತು. ಬಾಯಿಗೆ ಬಂದಹಾಗೆ ಬಯ್ಯತೊಡಗಿದರು; ಶಾಪ ಹಾಕಿದರು. ದೇಹ ತುಂಬಾ ನಿರ್ಬಲವಾಗಿದ್ದುದರಿಂದ ಇನ್ನೇನನ್ನು ಮಾಡಲೂ ಅವರಿಂದ ಸಾಧ್ಯವಾಗುವಂತಿರಲಿಲ್ಲ.

ರಾಮಯ್ಯ ಪರಸ್ಪರ ವಿರುದ್ಧವಾದ ಭಾವಾವೇಗಗಳಿಂದ ಹರಿದ ಹೃದಯನಾಗಿ ಉರಿಯುತ್ತಾ ಅಳುತ್ತಾ ದಡೆದಡನೆ ಏಣಿಮೆಟ್ಟಲು ಏರಿ, ಉಪ್ಪರಿಗೆಗೆ ಹೋದನು. ಅವನಿಗೆ ಯಾರಾದರೊಬ್ಬರನ್ನು ಗುಂಡಿನಿಂದ ಹೊಡೆಯಬೇಕೆನ್ನಿಸಿತ್ತು. ತನ್ನನ್ನೋ? ತಂದೆಯನ್ನೋ? ಹೂವಯ್ಯನನ್ನೋ? ಸೀತೆಯನ್ನೋ? ಯಾರನ್ನೋ?

ಹಿಂದಿನ ರಾತ್ರಿಯ ತನ್ನ ಆಲೋಚನೆಗಳು ಮತ್ತೆ ಮನಸ್ಸಿಗೆ ಬಂದುವು. ಮೊಳೆಗೆ ತಗುಲಿಹಾಕಿದ್ದ ತನ್ನ ಅಂಗಿಯ ಜೇಬಿಗೆ ಕೈಹಾಕಿ ಒಂದು ಕಾಗದವನ್ನು ಹೊರಗೆ ತೆಗೆದನು. ಓದಿದನು. ಆ ಕಾಗದ ಸೀತೆ ತನ್ನ ಮದುವೆಗೆ ಮೊದಲು, ಅದರಿಂದ ತನ್ನನ್ನು ಪಾರುಮಾಡಬೇಕೆಂದು ಬೇಡಿ, ಹೂವಯ್ಯನಿಗೆ ಬರೆದಿದ್ದು, ಬಿದಿಯ ಮೋಸದಿಂದ ತನ್ನ ಕೈಗೆ ಬಿದ್ದುದಾಗಿತ್ತು.

“ಇದನ್ನು ಹೂವಯ್ಯನಿಗೆ ಕೊಡುತ್ತೇನೆ. ಸೀತೆ ತನ್ನನ್ನು ಎಂದೂ ಒಲಿದುದಿಲ್ಲವೆಂದು ಹೇಳುತ್ತೇನೆ. ತಾನು ಅವಳನ್ನು ನಿಜವಾಗಿಯೂ ಮದುವೆಯಾಗಿಲ್ಲವೆಂದೂ, ತಾನು ತಾಳಿ ಕಟ್ಟಲಿಲ್ಲವೆಂದೂ, ಎಲ್ಲವೂ ವೆಂಕಪ್ಪಯ್ಯ ಜೋಯಿಸರ ಮತ್ತು ತನ್ನ ತಂದೆಯ ಒಳಸಂಚಿನ ಪ್ರಸಾದವೆಂದೂ ತಿಳಿಸುತ್ತೇನೆ. ಮದುವೆಯ ಧಾರಾಮಂಟಪದಲ್ಲಿ ತನಗಾದ ಅನುಭವವನ್ನೂ ಹೇಳಿ ತಪ್ಪನ್ನೊಪ್ಪಿಕೊಂಡು, ಅಣ್ಣಯ್ಯನ ಕ್ಷಮೆಬೇಡಿ, ಈ ದುಃಸ್ವಪ್ನದಿಂದ ಪಾರಾಗುತ್ತೇನೆ” ಎಂದು ಮೊದಲಾದ ಚಿಂತನೆಗಳನ್ನು ಹೊತ್ತುಕೊಂಡೇ ಉಪ್ಪರಿಗೆಯಿಂದ ದಡೆಬಡನೆ ಕೆಳಗಿಳಿದನು.

ಚಂದ್ರಯ್ಯಗೌಡರು ಮೊದಲಿದ್ದಲ್ಲಿಯೇ ಬೈಯುತ್ತಾ ಕೂತಿದ್ದುದನ್ನು ಕಂಡು, ಹಟಕ್ಕಾಗಿಯೆ ಅವರ ಮುಂದೆ ಹೋಗಿ ನಿಂತು, ತಾನು ಕೆಳಕಾನೂರಿಗೆ ಹೊರಟಿದ್ದ ಉದ್ದೇಶವನ್ನೆಲ್ಲಾ ಒದರಿಬಿಟ್ಟು, ಅಲ್ಲಿಂದ ತಟಕ್ಕನೆ ಹೆಬ್ಬಾಗಿಲಿನ ಕಡೆಗೆ ತಿರುಗಿ ನಡೆದನು.

ಗೌಡರು ಸಿಡಿಲೆರಗಿದವರಂತೆ ಅಪ್ರತಿಭರಾದರು. ಯಾರಾದರೂ ಫಕ್ಕನೆ ಅವರ ಹೃದಯ ಶ್ವಾಸಕೋಶಗಳನ್ನು ಕತ್ತುಹಾಕಿದ್ದರೂ ಅವರಿಗೆ ಹಾಗಾಗುತ್ತಿರಲಿಲ್ಲ. ವಿಕಾರಧ್ವನಿಯಿಂದ “ದಮ್ಮಯ್ಯ, ಮಾರಾಯ, ಅಷ್ಟುಪಕಾರ ಮಾಡೊ! ನಿನ್ನ ಕಾಲಿಗೆ ಬೀಳ್ತೀನಿ! ಖಂಡಿತಾ ಬೇಡ!ಬೇಡಾ!” ಎಂದು ಕೂಗುತ್ತಾ ಓಡಿಹೋಗಿ ರಾಮಯ್ಯನ ಕೈಗಳನ್ನು ಭದ್ರವಾಗಿ ಹಿಡಿದು ಅಳುದನಿಯಿಂದ “ಅಯ್ಯೋ, ಮಗನೆ, ನಿನಗಾಗಿ ಅಲ್ಲೇನೋ ನಾ ಇಷ್ಟೆಲ್ಲ ಮಾಡಿದ್ದು. ನನ್ನ ಕುತ್ತಿಗೆ ಕುಯ್ಯಬೇಡೋ, ಹೆತ್ತ ಹೊಟ್ಟೆಗೆ ಕಿಚ್ಚಿಡ ಬೇಡೋ ನಿನ್ನ ದಮ್ಮಯ್ಯ, ತಣ್ಣಗೆ ಕಣ್ಣು ಮುಚ್ಚಿಕೊಳ್ತೀನಿ! ಆಮೇಲೆ ಏನಾದ್ರೂ ಮಾಡಿಕೊ ನಿನ್ನ ಮನೆ, ನಿನ್ನ ಆಸ್ತಿ ಎಲ್ಲಾ ನಿನ್ದೇ; ನನ್ದೇನಿದೆಯೋ, ಅಯ್ಯೋ” ಎಂದು ಸುಸ್ತಾಗಿ ಕುಳಿತುಬಿಟ್ಟರು.

ರಾಮಯ್ಯ ಹೆಬ್ಬಾಗಿಲು ದಾಟಲಿಲ್ಲ. ಇದ್ದಕಿದ್ದ ಹಾಗೆ ದಿನದಿನವೂ, ಉರಿಯುವ ಮೇಣದ ಬತ್ತಿ ಕರಗುವಂತೆ, ಹೆಚ್ಚು ಕೃಶವಾಗುತ್ತಿದ್ದ ತಂದೆಯ ಮೇಲಣ ಕನಿಕರದಿಂದ ಅಕ್ಕರೆಯುಕ್ಕಿದಂತಾಯಿತು. ಕುಸಿದು ಕುಳಿತಿದ್ದ ಅವರನ್ನು ಕೈಹಿಡಿದು ಜಗುಲಿಗೆ ನಡೆಸಿಕೊಂಡು ಹೋಗಿ ಮಲಗಿಸಿದನು.

* * *

ರಾಮಯ್ಯ ಒಂದುವೇಳೆ ಕೆಳಕಾನೂರಿಗೆ ಹೋಗಿದ್ದರೂ ಅವನು ಹಾರೈಸಿದ್ದಂತೆ ಮಾಡಲಾಗುತ್ತಿರಲಿಲ್ಲ. ಹೂವಯ್ಯನಿಗೆ ಸೀತೆಯ ಕಾಗದವನ್ನು ಕೊಟ್ಟು ಮದುವೆಯ ಮೋಸವನ್ನೆಲ್ಲ ವಿಸ್ತರಿಸಿ ಹೇಳಿ, ತಪ್ಪನ್ನೊಪ್ಪಿಕೊಂಡು, ಅವನ ಕ್ಷಮೆ ಬೇಡುತ್ತೇನೆ ಎಂದು ಮೊದಲಾಗಿ ತಾನು ಕಲ್ಪಿಸಿದ್ದಂತೆ ನಾಟಕೀಯವಾಗಿ ವರ್ತಿಸಲು ತಕ್ಕ ರಂಗವಾಗಲಿ, ಸನ್ನಿವೇಶವಾಗಲಿ ಅಲ್ಲಿರುತ್ತಿರಲಿಲ್ಲ. ಅದಕ್ಕೆ ಬದಲಾಗಿ ನಾಗಮ್ಮನವರ ಮರಣಶಯ್ಯೆಯ ಪಕ್ಕದಲ್ಲಿ ದುಃಖಭಾರದಿಂದ ಕುಸಿದು ಕುಗ್ಗಿ ಕುಳ್ಳಿರುತ್ತಿದ್ದ ಹೂವಯ್ಯನನ್ನು ಕಾಣುತ್ತಿದ್ದನು!

ಹಿಂದಿನ ದಿನ ಹೂವಯ್ಯ ಸೀತೆಮನೆಗೆ ಹೋಗಿದ್ದಾಗ ತಾವು ಮಾಡಿಕೊಂಡಿದ್ದ ಅಪಥ್ಯಗಳ ದೆಸೆಯಿಂದ ನಾಗಮ್ಮನವರಿಗೆ ಕಾಯಿಲೆ ಮರುದಿನ ಜೋರಾಯಿತು. ಅವನು ಸೀತೆಗೆ ಶುಶ್ರೂಷೆ ಮಾಡುತ್ತಿದ್ದಾಗಲೆ ಪುಟ್ಟಣ್ಣ ಬಂದು ಹೂವಯ್ಯನ ಕಿವಿಯಲ್ಲಿ ಪಿಸುಮಾತನಾಡಿದನು. ಸ್ವಲ್ಪ ಹೊತ್ತಿನೊಳಗಾಗಿ ಶ್ಯಾಮಯ್ಯಗೌಡರು, ಗೌರಮ್ಮನವರು, ಚಿನ್ನಯ್ಯ ಇವರನ್ನು ತನ್ನ ಕೊಟಡಿಯಲ್ಲಿ ಸೀತೆಯ ಬಳಿ ಬಿಟ್ಟು, ತಾನು ತಾಯಿಯ ಬಳಿಗೆ ಹೋದನು.

ನಾಗಮ್ಮನವರಿಗೆ ವಾಂತಿ, ಓಕರಿಕೆ, ಕೆಮ್ಮು, ಬದಿಶೂಲೆ ಎಲ್ಲವೂ ಆಗುರ್ವಿಸಿ, ಜ್ವರ ವಿಷಮಾವಸ್ಥೆಗೆ ಏರುತ್ತಿತ್ತು. ಹೂವಯ್ಯ ತನಗೆ ತಿಳಿದಿದ್ದ ಔಷಧಿಗಳಲ್ಲಿ ನಾಗಮ್ಮನವರು ಸಮ್ಮತಿಸಿದವುಗಳನ್ನು ಪ್ರಯೋಗಮಾಡತೊಡಗಿದನು. ಆದರೂ ಸನ್ನಿಯ ಛಾಯೆಗೆ ತಿರುಗಿ, ನಾಗಮ್ಮನವರು ಅಸಂಬದ್ಧವಾಗಿ ಹಲವರಿಯತೊಡಗಿದರು.

“ಎಲ್ಲ ಭೂತರಾಯನ ಚೇಷ್ಟೆ ಕಣೋ! ಅದಕ್ಕೆ ಕೊಡೋ ಆಯಾರಾನ ಕೊಡದೆ ಮೋಸಮಾಡಿ ಇಟ್ಟುಕೊಂಡಿಯಲ್ಲೋ! ಅದಕ್ಕೆ ಬದಲಾಗಿ ನನ್ನ ತಗೊಂಡುಹೋಗ್ದೆ ಇರ‍್ತದೇನೋ? ಸಾಕು ಬಿಡೋ ನಿನ್ನ ಔಸ್ತೀ! ಔಸ್ತಿಯಿಂದ ಏನಾಗ್ತದೊ?… ನಾನು ಹೋದ್ರೂ ಚಿಂತೆಯಿಲ್ಲ ಕಣೋ! ನೀನು, ನಿನ್ನ ಹೋತ, ಸುಖವಾಗಿರ‍್ರೋ” ಎಂದು ಮೊದಲಾಗಿ ದೀರ್ಘವಾಗಿ ನರಳಲಾರಂಭಿಸಿದರು.

ಅದುವರೆಗೆ ಗಟ್ಟಿಮನಸ್ಸು ಮಾಡಿಕೊಂಡಿದ್ದ ಹೂವಯ್ಯನ ಎದೆ ಅಂದು ಕರಗಿಹೋಯಿತು. ಅವನಿಗೆ ತನ್ನ ತಾಯಿಯ ಜೀವ ನೂರು ಬಲೀಂದ್ರ ಹೋತಗಳ ಜೀವಕ್ಕಿಂತಲೂ ಹೆಚ್ಚು ಪ್ರಿಯಕರವಾಗಿತ್ತು. ಹಿಂದೆ ತಾಯಿ ಎಷ್ಟು ಹೇಳಿದ್ದರೂ ಅದನ್ನು ಭೂತಕ್ಕೆ ಬಲಿಕೊಡದೆ ಇದ್ದುದು ಒಂದು ತತ್ವಕ್ಕಾಗಿದ್ದಿತೇ ಹೊರತು ಮತ್ತೇನೂ ಅಲ್ಲ. ಮನಃಶಾಸ್ತ್ರದ ಪರಿಚಯವಿದ್ದ ಆತನಿಗೆ ಈಗಲಾದರೂ ಬಲೀಂದ್ರ ಹೋತವನ್ನು ಬಲಿಕೊಟ್ಟರೆ ತಾಯಿಯ ನಂಬುಗೆಯ ಬಲದಿಂದ ರೋಗ ಗುಣವಾದರೂ ಆಗಬಹುದು ಎಂದು ಆಲೋಚಿಸಿ, ಬಲೀಂದ್ರ ಹೋತವನ್ನು ಭೂತಕ್ಕೆ ಒಡನೆಯೆ ಬಲಿಕೊಡುವುದಾಗಿ ತಾಯಿಗೆ ಮಾತು ಕೊಟ್ಟು, ಆ ಕಾರ್ಯಕ್ಕೆ ಸೋಮನನ್ನೂ ಬೈರನನ್ನೂ ನೇಮಿಸಿದನು!

ಅದನ್ನು ಕೇಳಿದೊಡನೆ ನಾಗಮ್ಮನವರಲ್ಲಿ ಬದಲಾವಣೆ ಕಾಣಿಸಿಕೊಂಡಿತು. ಬಹುಕಾಲದಿಂಲೂ ತಮ್ಮಿಂದ ಸಾಧ್ಯವಾಗದಿದ್ದ ಒಂದು ವಿಷಯದಲ್ಲಿ ಕಟ್ಟಕಡೆಗೆ ಜಯಹೊಂದಿದ ಅನುಭವವಾಗಿ, ಅವರಿಗೆ ಹರ್ಷವಾಯಿತು.

ಆದರೆ ಎಲ್ಲೆಲ್ಲಿ ಹುಡುಕಿದರೂ ಎಷ್ಟು ಕರೆದರೂ ಬಲೀಂದ್ರ ಹೋತದ ಸುಳಿವೇ ಸಿಕ್ಕಲಿಲ್ಲ. ಆ ಉದ್ವೇಗದಲ್ಲಿ, ಆ ಗಡಿಬಿಡಿಯಲ್ಲಿ, ಕೆಳಕಾನೂರಗೆ ಅನತಿದೂರದಲ್ಲಿ, ಕಾಡಿನಂಚಿನಲ್ಲಿ ಹೊದರು ಗಿಡಗಳ ಮಧ್ಯೆ ಸೇರೆಗಾರರ ಗುಂಡಿನೇಟಿನಿಂದ ಮಡಿದು ಬಿದ್ದಿದ್ದ ಬಲೀಂದ್ರನನ್ನು ಪತ್ತೆ ಮಾಡುವ ತಾಳ್ಮೆಯಾಗಲಿ, ತೆರಪಾಗಲಿ ಯಾರಗೂ ಇರಲಿಲ್ಲ. ಆ ವಿಚಾರವನ್ನು ತಿಳಿದಿದ್ದ ನಾಯಿಗಳಿಗೆ (ಅವುಗಳಾಗಲೆ ಹೋತದ ಭಾಗವನ್ನು ಪಳಾರಮಾಡಿದ್ದುವು.) ಹೇಳಲು ಬಾಯಿರಲಿಲ್ಲ.

ಸಾಯಂಕಾಲದ ಹೊತ್ತಿಗೆ ಬಲೀಂದ್ರ ಕಣ್ಮರೆಯಾದ ಸಂಗತಿ ನಾಗಮ್ಮನವರಿಗೂ ತಿಳಿಯಿತು. ಈ ಮಧ್ಯೆ ರೋಗದ ತೀವ್ರತೆಯ ಚಿಹ್ನೆ ಯಾವ ವಿಧದಲ್ಲಿಯೂ ಕಡಮೆಯಾಗಿರದಿದ್ದರೂ ಹಲವರಿಯುವುದು ಕಡಮೆಯಾಗಿತ್ತು. ವಿಷಯ ತಿಳಿದಮೇಲೆ ಅದೂ ಹೆಚ್ಚಾಗುತ್ತಾ ಬಂದಿತು.

ರಾತ್ರಿ ಕಾಹಿಲೆಯ ಸ್ಥಿತಿ ಇನ್ನೂ ಜೋರಾಯಿತು. ಸರದಿಯ ಮೇಲೆ ಜನರು ಕಾಯುತ್ತಿದ್ದರು. ಸುಮಾರು ಎರಡು ಗಂಟೆಯ ಹೊತ್ತಿಗೆ ಹೂವಯ್ಯ ಎಚ್ಚತ್ತು, ಕಾವಲು ಕೂತು ಶುಶ್ರೂಷೆ ಮಾಡುತ್ತಿದ್ದಾಗ, ನಾಗಮ್ಮನವರು ಮಗನ ಕೈಹಿಡಿದುಕೊಂಡು ” ಅಪ್ಪಾ ನಾನೇನೊ ಹೋಗ್ತೀನಿ. ನಿನ್ನ ಗತಿ ಏನು?” ಎಂದರು. ಅವರ ಕಣ್ಣಿನಲ್ಲಿ ನೀರು ಸುರಿದಿತ್ತು.

ಹೂವಯ್ಯ ಮಾರ್ನುಡಿಯದೆ ಅಳುತ್ತಿದ್ದನು.

ನಾಗಮ್ಮನವರು ತುಸು ಹೊತ್ತು ಸುಮ್ಮನಿದ್ದು “ನೀನು ಮದುವೆ ಮಾಡಿಕೊಳ್ತೀನಿ ಅಂತಾ ಮಾತುಕೊಟ್ಟಿದ್ರೆ ಯತೆಯಿಲ್ಲದೆ ಸಾಯ್ತಿದ್ದೆ” ಎಂದು ಮಗನನ್ನು ಅನಂತ ಆಕಾಂಕ್ಷೆಯಿಂದ ನಿರಿಕ್ಷಿಸಿ ” ಅವರಿದ್ದಿದ್ರೆ (ಹೂವಯ್ಯನ ತಂದೆ) ನಿನಗೆ ಮದುವೆಯಾಗ್ತಿತ್ತು. ನಾನೂ ಮೊಮ್ಮಕ್ಕಳನ್ನು ನೋಡಿಕೊಂಡೇ ಸಂತೋಷದಿಂದ ಸಾಯ್ತಿದ್ದೆ” ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದರು.

ಆ ಜ್ವರದ ಸ್ಥಿತಿಯಲ್ಲಿ ಅವರಿಗೆ ಅಳುವುದು ತುಂಬಾ ಆಯಾಸಕರವಾಗಿತ್ತು. ಹೂವಯ್ಯನಿಗೆ ಸಹಿಸಲಾಗಲಿಲ್ಲ.

“ಆಗಲವ್ವಾ ನೀ ಹೇಳಿದಹಾಗೇ ಮಾಡ್ತೀನಿ!… ಅಳಬೇಡ…ಕಾಯಿಲಿ ಜೋರಾಗ್ತದೆ” ಎಂದು ಸಾಯುತ್ತಿದ್ದ ತಾಯಿಗೆ ಗಡಿಬಿಡಿಯಲ್ಲಿ ತಾನು ಕೊಡುವ ಮಾತಿನ ವ್ಯಾಪನೆಯನ್ನಾಗಲಿ ಜಟಿಲತೆಯನ್ನಾಗಲಿ ಅರಿಯಲವಕಾಶವಿಲ್ಲದೆ, ಕುದಿಬಗೆಯಲ್ಲಿ ಮಾತುಕೊಟ್ಟುಬಿಟ್ಟನು. ಆದರೆ ಹಾಗೆ ಮಾಡಿದ್ದು ಮಂತ್ರದಂತೆ ಕೆಲಸಮಾಡಿತು. ಇದ್ದಕ್ಕಿದ್ದಂತೆ ಯಾವುದೊ ಒಂದು ಸಂತೃಪ್ತಿಯ ಶಾಂತಿ ಮಾತೆಯ ಮುಖದ ಸುತ್ತಲೂ  ಸುಳಿದಾಡಿತು.

ಮರುದಿನ ಮಧ್ಯಾಹ್ನ ನಾಗಮ್ಮನವರು ತೀರಿಕೊಂಡರು. ಸಾಯುವ ಸಮಯದಲ್ಲಿ ಮಗನನ್ನು ಪ್ರೀತಿಯಿಂದ ನೋಡುತ್ತಾ ಸಂತೋಷವಾಗಿ ಕಣ್ಣು ಮುಚ್ಚಿಕೊಂಡರಂತೆ.