ಮನೆ. ಹಿಸ್ಸೆಯಾದ ತರುವಾಯ ಇತರರಂತೆ ನಿಂಗನೂ ತಾನು ಕಾಡಿನಲ್ಲಿ ಹೂಳಿ ಬೈತಿಟ್ಟ ವಸ್ತುಗಳನ್ನು ಮರಳಿ ಮನೆಗೆ ಸಾಗಿಸತೊಡಗಿದನು. ಒಂದೆರೆಡೆಡೆಗಳಲ್ಲಿ ಪದಾರ್ಥಗಳೆಲ್ಲ ಅವನು ಇಟ್ಟಿದ್ದಂತೆಯೆ ಇದ್ದುವು. ಲೋಹದ ಪದಾರ್ಥಗಳಿಗೆ ತುಕ್ಕುಹಿಡಿದುದನ್ನಾಗಲಿ ಮರದ ವಸ್ತುಗಳಿಗೆ ಒರಲೆಹಿಡಿದುದನ್ನಾಗಲಿ ಅವನೇನು ಹೆಚ್ಚು ಮನಸ್ಸಿಗೆ ತಂದುಕೊಳ್ಳಲಿಲ್ಲ. ಅಲ್ಲದೆ ಮುಂಗಾರು ಮಳೆ ಆಗಲೇ ಹಿಡಿದುಬಿಟ್ಟಿದ್ದರಿಂದ ಬೆತ್ತದ ಸಣ್ಣ ಪಿಟಾರಿಯಲ್ಲಿದ್ದ ಅವನ ತೀರಿಹೋದ ಹೆಂಡತಿಯ ಬೆಲೆಯುಳ್ಳ ಒಂದು ಸೀರೆ ತೊಪ್ಪನೆ ತೊಯ್ದು ಮುಗ್ಗಲುಮುದ್ದೆಯಾದುದನ್ನು ಕೂಡ ತಾಳ್ಮೆಯಿಂದ ಸಹಿಸಿಕೊಂಡನು. ಆದ್ರೆ ಗಂಗಹುಡುಗನ ಸಹಾಯದಿಂದ ಕಳ್ಳಂಗಡಿಯವನು ಬರಿದುಮಾಡಿದ್ದ ಕುಳಿಯ ಬಳಿಗೆ ಬಂದೊಡನೆಯೆ ಅವನಿಗೆ ಎದೆ ಹಾರಿತು. ಆಕಾಶವೆ ತಲೆಯಮೇಲೆ ಜರಿದು ಬಿದ್ದಹಾಗಾಯಿತು. ಅಯ್ಯೋ ಎಂದು ಹಣೆ ಹಣೆ ಬಡಿದುಕೊಂಡು ಶಾಪಹಾಕತೊಡಗಿದನು. ದುಃಖ ಕೋಪ ನಿರಾಶೆಗಳಿಂದ ಹಲ್ಲು ಹಲ್ಲು ಕಡಿಯುತ್ತ ‘ಅಯ್ಯೋ ಯಾವ ಮುಂಡೇಮಕ್ಳೋ ನನ್ನ …. ತಿಂದೋರು ? ನಿಮ್ಮ ಗುಡಿ ಹಾಳಾಗ ! ನಿಮ್ಮ ಹೆಂಡಿರು ಮುಂಡೇರಾಗಿ ಹೋಗ !…. ನಿಮ್ಮ ಬಾಯಿಗೆ ಮಣ್ಣಾಗ ! ನಿಮ್ಮಗುದ್ದಿಗೆ ತುಂಬಿಹೋಗ !’ ಎಂದು ಕಾಡೆಲ್ಲ ಮೊಲಗುವಂತೆ ಒರಲುತ್ತಾ ಬೈಯುತ್ತಾ ಮನೆಗೆ ಬರುತ್ತಿದ್ದನು. ಅವನ ರೋದನವನ್ನೂ ಕೂಗಾಟವನ್ನೂ ಆಲಿಸಿ ತೋಟದಲ್ಲಿ ಗಡಿಬೇಲಿ ಕಟ್ಟುತ್ತಿದ್ದ ಸೇರೆಗಾರರೂ ಅವರ ಕಡೆಯ ಗಟ್ಟದಾಳುಗಳೂ ಏನೋ ಪ್ರಮಾದವಾಯಿತೆಂದು ಮಾಡುತ್ತಿದ್ದ ಕೆಲಸಗಳನ್ನು ಅಲ್ಲಲ್ಲಿಯೆ ಬಿಟ್ಟು ಓಡಿಬಂದರು. ಹಾವು ಕಚ್ಚಿತೋ ? ಮರದ ಮೇಲಿಂದ ಬಿದ್ದನೋ ? ದೆವ್ವಗಿವ್ವ ಹೊಡೆಯಿತೋ ? ಮರದ ಕೊಂಬೆಗಿಂಬೆ ಎಲ್ಲಿಯಾದರೂ ಮೈಮೇಲೆ ಬಿದ್ದತೋ ! ಅಥವಾ ಯಾರಾದರೂ ಖೂನಿಗೀನಿ ಮಾಡುತ್ತಿದ್ದಾರೋ ? ಹೀಗೆ ಒಬ್ಬೊಬ್ಬರು ಒಂದೊಂದನ್ನು ಆಶಂಕಿಸುತ್ತಾ ಓಡಿಬರುತ್ತಿರುವುದನ್ನು ಕಂಡ ನಿಂಗ ಮತ್ತಷ್ಟು ಹೆಚ್ಚಾಗಿ ತಲೆ ತಲೆ ಬಡಿದುಕೊಂಡು ರೋದಿಸುತ್ತಾ ಶಪಿಸತೊಡಗಿದನು.

ನಿಜವಾದ ವಿಷಯ ಏನೆಂಬುದನ್ನು ತಿಳಿದುಕೊಳ್ಳಲು ಬಂದವರಿಗೆ ಅರ್ಧ ಗಂಟೆ ಹಿಡಿಯಿತು. ನಿಂಗ ಒಂದು ಮಾತಾಡಿದರೆ ಹತ್ತು ಬೈಗುಳವಾಡುತ್ತಿದನು.

“ವಿಚಾರಿಸುವ ; ಒರಲುವುದು ಯಾಕೆ ?”

“ಗೌಡ್ರಿಗೆ ಹೇಳಿನಿ ; ಕಾಂಬ ; ಕಳ್ಳ ಎಲ್ಲಿಗೆ ಹೋಪ ?”

“ಊರಿನವರೆ ಯಾರೋ ತೆಗೆದಿಟ್ಟಿರಬಹುದು. ಕೊಡ್ತಾರೆ.”

ಹೀಗೆ ಒಬ್ಬೊಬ್ಬರು ಒಂದು ಮಾತು ಹೇಳಿ ನಿಂಗನನ್ನು ಸುಮ್ಮನಿರಿಸಲು ಪ್ರಯತ್ನಿಸಿದನು. ಆದರೂ ನಿಂಗ ಶಾಪಹಾಕುವುದನ್ನೂ ಬಾಯಿಬಡುಕೊಳ್ಳುವುದನ್ನೂ ನಿಲ್ಲಿಸಲಿಲ್ಲ. ಹಾಗೆ ಮಾಡುವುದರಿಂದಲೆ ಕಳೆದುಹೋದ ಪದಾರ್ಥಗಳೆಲ್ಲ ಮರಳಿ ತನ್ನ ಕಾಲಿನ ಬುಡಕ್ಕೆ ಬಂದುಬೀಳುತ್ತವೆ ಎಂದು ಅವನು ಭಾವಿಸಿದಂತಿತ್ತು.

ತೆಂಗಿನೆಣ್ಣೆಯ ಪಸೆಯಿಂದ ನುಣ್ಣನೆ ಮಿರುಗುವಂತಿದ್ದ ಡೊಳ್ಳು ಹೊಟ್ಟೆಬಿಟ್ಟುಕೊಂಡು, ತ್ರಿಕೋನಾಕಾರವಾಗಿ ಮೊಳಕಾಲಿನವರೆಗೂ ನೇತಾಡುತ್ತಾ ಕೊಳೆಯಿಂದ ಮಷೀಮಯವಾಗಿದ್ದ ಲಂಗೋಟಿಯೊಂದನ್ನು ಮಾತ್ರ ಕಟ್ಟಿ ಕೊಂಡು, ತಲೆಗೆ ಹಾಳೆಟೋಪಿ ಹಾಕಿಕೊಂಡು, ಕೈಯಲ್ಲಿ ಕೆಲಸದ ಕತ್ತಿಯನ್ನು ಹಿಡಿದುಕೊಂಡು ನಡೆಯುತ್ತಿರುವುದನ್ನೆಲ್ಲ ನೋಡುತ್ತ ಅದುವರೆಗೂ ದೂರವಾಗಿ ನಿಂತಿದ್ದ ಬಾಡುಗಳ್ಳ ಸೋಮ ಮುಂದೆ ಬಂದು “ಹೌದಾ, ನಿಂಗಯ್ಯ ; ನಾ ಹೇಳ್ತೆ ; ಕೇಳಿನಿ. ನೀವು ಹೀಂಗೆ ಅರಚುವುದು ಯಾಕೆ ? ಹಾಂಗಾದ್ರೇನು ಸತ್ಯ ಕೆಟ್ಟುಹೋಯಿತಾ ? ನಮ್ಮ ಭೂತರಾಯನಿಗೆ ಒಂದು ತೆಂಗಿನಕಾಯಿ ಹರಸಿ, ಎಲ್ಲರ ಕೈಲೂ ಮುಟ್ಟಿಸಿ. ಆಮೇಲೆ ನೋಡಿ ; ನಿಮ್ಮ ಸಾಮಾನು ಎಲ್ಲಿದ್ದರೂ ಹೊರಗೆ ಬಂದುಬೀಳ್ತವೆ !” ಎಂದು ಮಂತ್ರಾಲೋಚನೆ ಹೇಳಿದನು.

ಸರ್ವರಿಗೂ ಸೋಮನ ಹರುವು ಒಪ್ಪಿಗೆಯಾಯಿತು. ಸೇರೆಗಾರರೂ ಆಳುಗಳೂ ಗಡಿಬೇಲಿ ಬಿಗಿಯುವುದಕ್ಕೆ ಹೋದರು. ನಿಂಗ ಸೋಮ ಹೇಳಿದಂತೆ ಮುಂದಿನ ಕಾರ್ಯ ಜರುಗಿಸಲು ಮನೆಗೆ ಬಂದನು.

ಕಂಡಕಂಡವರಿಗೆಲ್ಲ ಹೃದಯವಿದ್ರಾವಕವಾಗುವ ರೀತಿಯಲ್ಲಿ ತನಗೊದಗಿದ ಮಹಾನಷ್ಟದ ಕಥೆಯನ್ನು ವಿಸ್ತರಿಸಿ ; ಮಾತುಮಾತಿಗೂ ಕಳ್ಳರಮೇಲೆ ಬೈಗುಳದ ಬಿರುಮಳೆಯನ್ನು ಕರೆದು ; ‘ಕಾಯಿಸಿಮುಟ್ಟಿಸಿ’ ಕದ್ದಿದ್ದನ್ನೆಲ್ಲ ಕಕ್ಕಿಸುತ್ತೇನೆ ; ಹಾಂಗಾದರೇನು ನಮ್ಮ ಭೂತರಾಯನ ‘ಸಕ್ತಿ’ ಹೋಯಿತೋ ಇದೆಯೋ ನೋಡಿಯೇ ಬಿಡುತ್ತೇನೆ’ ಎಂದು ಮೊದಲಾಗಿ ಒದರುತ್ತಾ, ಯೋಗ್ಯ ಪ್ರಕೃತಿಯ ಮತ್ತು ಯೋಗ್ಯಾಕೃತಿಯ ತೆಂಗಿನಕಾಯಿಯನ್ನು ಹುಡುಕಿ ಸಂಪಾದಿಸಿದನು. ಆ ತೆಂಗಿನಕಾಯಿಗೆ ಜುಟ್ಟು, ಕಣ್ಣು, ನೀರು ಮೂರೂ ಇರಬೇಕು. ನೀರು ಒಣಗಿಹೋಗಿ ಗಿಟುಕವಾಗಿದ್ದರೆ ಅಥವಾ ಅದರ ಮುಕ್ಕಣ್ಣಗಳಲ್ಲಿ ಯಾವುದೊಂದಾದರೂ ಕೆಟ್ಟುಹೋಗಿದ್ದರೆ ಅಥವಾ ಜುಟ್ಟಿಲ್ಲದಿದ್ದರೆ ಅಂಥಾದ್ದು ಮಂತ್ರಕ್ಕೆ ಅರ್ಹವಾಗಿರುವುದಿಲ್ಲ !

ನಿಂಗ ಆ ತೆಂಗಿನಕಾಯಿಯನ್ನು ಸ್ವಚ್ಛ ತೀರ್ಥದಿಂದ ತೊಳೆದು ‘ಈಬುತ್ತಿ’ (ವಿಭೂತಿ), ಕುಂಕುಮ, ಎಣ್ಣೆ, ದಾಸವಾಳದ ಹೂವು, ಕೋಳಿ ಚೊಟ್ಟಿಯ ರಕ್ತ ಮೊದಲಾದುವುಗಳಿಂದ ಅರ್ಚಿಸಿ, ಅದನ್ನು ಕೈಯಲ್ಲಿ ಹಿಡಿದುಕೊಂಡು ನಾಲ್ಕು ದಿಕ್ಕುಗಳಿಗೂ ತಿರುಗಿ ತಿರುಗಿ ನಮಸ್ಕರಿಸುತ್ತಾ ಮಹಾ ಭಯಭಕ್ತಿಯಿಂದ ಒಂದಿನಿತು ರಾಗವಾಗಿ “ಸ್ವಾಮೀ ಭೂತರಾಯ, ಪಾಪ ಪುಣ್ಯ ಎಲ್ಲಾ ನಿನಗೆ ಗೊತ್ತು. ಈ ಬಡವನ ಮೇಲೆ ಕನಿಕರ ಇಟ್ಟು ನಿನ್ನ ಸಕ್ತಿ ತೋರಿಸಬೇಕು. ಯಾರೇ ಕದ್ದಿರಲಿ ನನ್ನ ಸಾಮಾನು ಬಯಲಿಗೆ ಬರುವಹಾಗೆ ಅವರ ಬಾಯಲ್ಲಿ ರಕ್ತ ಕಾರಿಸಬೇಕು. ಮುಂದಿನ ಹರಕೆಗೆ ನಾನು ಬಡವ : ಹೆಚ್ಚು ಕೊಡೋಕೆ ನನ್ನಿಂದ ಆಗೋದಿಲ್ಲ. ನನ್ನ ಭಕ್ತಿ ನೋಡಿ ನಿನ್ನ ಸಕ್ತಿ ತೊರಿಸಬೇಕು. ಮುಂದಿನ ಹರಕೆಗೆ ಒಂದು ಕೋಳಿ ಹೆಚ್ಚಾಗಿ ಕೊಡ್ತೀನಿ ನಿನಗೆ…. ಛೂ ! ಮಾಂಕಾಳಿ, ಮಾರಿ, ದುರ್ಗಿ, ಅವರ ಕಣ್ಣು ಹೊಟ್ಟೆ ಹೋಗಲಿ ! ಅವರ ಬಾಯಿಗೆ ಮಣ್ಣಾಗಲಿ ! ಅವರು ರಕ್ತ ಕಾರಿ ಹಾಳಾಗಿ ಹೋಗಲಿ !” ಎಂದು ಸರಳ ವಾಕ್ಯಗಳನ್ನೂ ಕರಾಳಾಕಾಂಕ್ಷೆಗಳನ್ನೂ ಒಂದೇ ಉಸಿರಿನಲ್ಲಿ ಉಚ್ಚರಿಸಿ ಭೂತರಾಯನಿಗೆ ಮುಡಿಪು ಕಟ್ಟಿದನು.

ತರುವಾಯ ಯಾರ ಯಾರ ಕೈಯಲ್ಲಿ ಕಾಯಿ ಮುಟ್ಟಿಸಬೇಕು ಎಂದು ಆಲೋಚಿಸಿ, ಮನೆಯವರು ಯಾರೂ ತನ್ನ ಸಾಮಾನುಗಳನ್ನೂ ಕದ್ದಿರಲಾರರೆಂದು ಯಾವುದೋ ಒಂದು ತರ್ಕದಿಂದ ನಿರ್ಧರಿಸಿ, ಸೇರೆಗಾರರಾದಿಯಾಗಿ ಅವರ ಗಟ್ಟದಾಳುಗಳು, ಬೇಲರು, ಹಳೆಪೈಕದ ತಿಮ್ಮ ಮೊದಲಾದ ಒಕ್ಕಲುಗಳು ಇವರ ಕೈಯಲ್ಲೆಲ್ಲ ಕಾಯಿ ,ಉಟ್ಟಿಸಬೇಕೆಂದು ನಿಶ್ಚಯಮಾಡಿದನು. ದೂರದಲ್ಲಿದ್ದ ಕಳ್ಳಂಗಡಿಯವನ ಮೇಲೆ ಅವನ ಗುಮಾನಿ ಹೋಗಲೇ ಇಲ್ಲ.

ಹೀಗೆ ಖಾಲಿ ತೋಟಾವನ್ನು ಮದ್ಧುಗುಂಡುಗಳಿಂದ ಬಾರುಮಾಡಿಕೊಂಡು ಷಿಕಾರಿಗೆ ಹೊರಡುವವನಂತೆ ತೈಲಲಿಪ್ತ, ವಿಭೂತಿಭೂಷಿತ, ಕುಂಕುಮಾಂಕಿತ, ಜಪಾಸುಶೋಭಿತ ರುದ್ರವೇಷದ ನಾರಿಕೇಳವನಾಂತು ಕೈಯಲಿ ನಿಂಗ ಹೊರ ಹೊಂಟ !

ಮೊದಲು ಗಟ್ಟದಾಳುಗಳು ಕೆಲಸ ಮಾಡುತ್ತಿದ್ದಲ್ಲಿಗೆ ಹೋಗಿ ಅವರೆಲ್ಲರಿಂದಲೂ. ಕಾಯಿ ಮುಟ್ಟಿಸಿದನು. ತರುವಾಯ ಗದ್ದೆಗೆ ಹೋಗಿ ಅಲ್ಲಿ ಉಳುತ್ತಿದ್ದ, ಅಂಚು ಕಡಿಯುತ್ತಿದ್ದ, ಬೇಲರಾಳುಗಳ ಕೈಲಿ ಮುಟ್ಟಿಸಿದನು, ಅವರಲ್ಲಿ ಕೆಲವರು ಮೊದಮೊದಲು ಮುಟ್ಟಲು ಹಿಂಜರಿದರೂ, ಕಡೆಗೆ ವಿಷಯವೆಲ್ಲ ಚೆನ್ನಾಗಿ ತಿಳಿದಮೇಲೆ ನಿರಪರಾಧಿಗಳಾಗಿದ್ದ ತಮಗೆ ಹೆದರಿಕೆಯೇಕೆಂದು ಮುಟ್ಟಿದರು. ಆಮೇಲೆ ಹಳೆಪೈಕದವರ ಗುಡಿಸಲುಗಳಿಗೆ ಹೊಗಿ ಕಾಯಿ ಮುಟ್ಟಿಸಿಕೊಂಡು ಬೇಲರ ಕೇರಿಗೆ ಬಂದನು. ನಿಂಗ ಅಲ್ಲಿದ್ದ ಹೆಣ್ಣಾಳುಗಳೆಲ್ಲರಿಗೂ ಮತ್ತೊಮ್ಮೆ ತನ್ನ ಕಥೆಯನ್ನು ವಿಸ್ತಾರವಾಗಿ ಹೇಳಿದನು. ಅವರೆಲ್ಲರೂ ಒಬ್ಬೊಬ್ಬರಾಗಿ ಕಾಯಿ ಮುಟ್ಟಿದರು. ನಿಂಗ ಹುಡುಗರೂ ಮುಟ್ಟಬೇಕು ಎಂದು ಹೇಳಲು ತಾಯಂದಿರು ಹಲವರು ಪ್ರತಿಭಟಿಸಿದರು. ‘ಹುಡುಗನ ಕೈಲಿ ಮುಟ್ಟಿಸುವುದೇತಕ್ಕೆ ? ಅವರೇಕೆ ನಿಮ್ಮ ಸಾಮಾನು ಕದಿಯಾಕೆ ಬರ್ತಾರೆ ?” ಎಂದು. ಆದರೆ ನಿಂಗ ತನ್ನ ಸಂಶಯನಿವಾರಣೆಗಾಗಿ ಹುಡುಗರು ಮುಟ್ಟಲೇಬೇಕೆಂದು ಹಟಹಿಡಿದನು. ಸ್ವಲ್ಪ ಹೊತ್ತು ಮಾತಿನ ಮಸೆದಾಟವಾದಮೇಲೆ ಒಪ್ಪಿಗೆ ಬಂದಿತು. ಎಲ್ಲವನ್ನೂ ಆಲಿಸುತ್ತ ಹುಡುಗರ ಗುಂಪಿನಲ್ಲಿ ನಿಂತಿದ್ದ ಗಂಗಹುಡುಗ ಮಹಾಭಯಗ್ರಸ್ತನಾಗಿ ಮೆಲ್ಲನೆ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದನು. ಆದರೆ ನಿಂಗ ಯಾರನ್ನೂ ಹೋಗಗೊಡಲಿಲ್ಲ. ಹುಡುಗರೂ ಒಬ್ಬೊಬ್ಬರಾಗಿ ಹೆದರಿ ಕಾಯಿ ಮುಟ್ಟತೊಡಗಿದರು. ನಿಂಗ ಗಂಗಹುಡುಗನ ಬಳಿಗೆ ಬರಲು ಅವನು ನಡುಗುತ್ತ ಅಳತೊಡಗಿದನು.

ತನ್ನ ಮಗನ ಗುಟ್ಟನ್ನು ಒಂದಿನಿತೂ ತಿಳಿಯದಿದ್ದ ಸೇಸಿ ತನ್ನ ಕುಟುಂಬದ ಸ್ವಚ್ಛ ಶೀಲತೆಯನ್ನು ಸ್ಥಾಪಿಸುವ ಸಲುವಾಗಿ ಮಗನ ಬಳಿಗೆ ಬಂದು ಬೋಳೈಸುತ್ತಾ “ನಿಂಗೇನಂತೆ ? ಮುಟ್ಟೋ ! ನಾವೆಲ್ಲ ಮುಟ್ಟಲಿಲ್ಲೇನು ! ನೀ ಕದ್ದಿದ್ರೆ ನಿಂಗೆ ಕಷ್ಟ ! ಇಲ್ದಿದ್ರೇನು ? ಹೆದರಬೇಡ ! ಮುಟ್ಟು !’ ಎಂದಳು.

ಹುಡುಗ ತಾಯಿಯ ಮುಖವನ್ನೂ ನೆರೆದವರನ್ನೂ ನೋಡುತ್ತಾ ನೋಡುತ್ತಾ “ನಾ ಒಲ್ಲೆ ! ದಮ್ಮಯ್ಯಾ !” ಎಂದು ಗಟ್ಟಿಯಾಗಿ ರೋದಿಸತೊಡಗಿದನು.

ಅಲ್ಲಿದ್ದವರೆಲ್ಲರೂ ಅವನಿಗೆ ಧೈರ್ಯ ಹೇಳಿ, ಸಮಾಧಾನಮಾಡಿ, ಕಾಯಿಮುಟ್ಟುವಂತೆ ಪ್ರೋತ್ಸಾಹಿಸಿದರು. ಆದರೆ ಗಂಗ ಗಡಗಡನೆ ನಡುಗುತ್ತ ಕುಂಕುಮದಿಂದ ಕೆಂಪಾಗಿ ಕಾಣುತ್ತಿದ್ದ ತೆಂಗಿನಕಾಯಿಯನ್ನು ಎವೆಯಿಕ್ಕದೆ ಭಯದೃಷ್ಟಿಯಿಂದ ನೋಡುತ್ತಾ “ದಮ್ಮಯ್ಯಾ ! ಅವ್ವಾ ! ನಾ ಇಲ್ಲೆ ! ಒಲ್ಲೇ ! ನಿಂಗಯ್ಯ, ಬ್ಯಾಡ ; ನಿಮ್ಮ ಕಾಲಿಗೆ ಬೀಳ್ತೀನಿ !” ಎಂದು ಕೂಗತೊಡಗಿದನು.

ನಿಂಗನಿಗೆ ಕಡೆ ತಿರುಗಿ “ಹೋಗಲಿ ಬಿಡು ! ಪಾಪ ! ಅಂತೂ ನಿಮ್ಮ ಮೇಲೆ ಗುಮಾನಿ ಬಿದ್ದಹಾಂಗಾಗ್ತದೆ !” ಎಂದು ಹೊರಡಲೆಳಸಿದನು.

ಸೇಸಿಗೆ ಮುಖಭಂಗವಾಗಿ ಮಗನ ಮೇಲೆ ಸಿಟ್ಟೇರಿತು, ಅಷ್ಟು ಜನರ ಮುಂದೆ ತಮ್ಮ ಮನೆತನದ ಮೇಲೆ ಮಸಿ ಬಿದ್ದಿತಲ್ಲಾ ಎಂದು.

ಬೆನ್ನಿಗೊಂದು ಗುದ್ದು ಹೇರಿ ಮಗನನ್ನು ಹಿಡಿದೆಳೆತಂದು “ಎಲ್ಲಿ, ನಿಂಗಯ್ಯಾ, ಕಾಯಿ ತೋರಿಸಿ, ಅವನ ಕೈಲೇ ಮುಟ್ಟಿಸ್ತೀನಿ” ಎಂದಳು ಸೇಸಿ.

ನಿಂಗ ತೆಂಗಿನಕಾಯಿಯನ್ನು ಮುಂದಕ್ಕೆ ಚಾಚಿ ಹಿಡಿದನು. ಸೇಸಿ ಗಂಗನ ಬಲಗೈಯನ್ನು ಬಲಾತ್ಕಾರದಿಂದ ಹಿಡಿದೆಳೆದು, ಅವನು ‘ದಮ್ಮಯ್ಯಾ ಅವ್ವಾ ! ಬ್ಯಾಡ !’ ಎಂದು ಬೊಬ್ಬೆ ಹಾಕಿ ಒದ್ದಾಡುತ್ತಿದ್ದರೂ ಲಕ್ಷ್ಯಕ್ಕೆ ತಾರದೆ, ಕಾಯಿ ಮುಟ್ಟಿಸಿಯೆಬಿಟ್ಟಳು.

ಹುಡುಗ ಕೆಂಪಗೆ ಕಾದ ಕಬ್ಬಿಣದುಂಡೆಯನ್ನು  ಮುಟ್ಟಿದವನಂತೆ ಕಿಟ್ಟನೆ ಕಿರಿಚಿಕೊಂಡು ತಾಯಿಯ ಕೈಮೇಲೆಯೆ ಪ್ರಜ್ಞೆತಪ್ಪಿ ಬಿದ್ದುಬಿಟ್ಟನು. ನಿಂತಿದ್ದವರಿಗೆಲ್ಲ ದಿಗ್‌ಭ್ರಮೆಯಾಯಿತು. ಸ್ವಲ್ಪ ತಣ್ಣೀರು ತಂದು ಹುಡುಗನ ತಲೆಗೆ ಹಾಕಿ, ಗಾಳಿ ಬೀಸಿ, ಮೆಲ್ಲನೆ ಎತ್ತಿಕೊಂಡು ಹೋಗಿ ಬಿಡಾರದಲ್ಲಿ ಕಂಬಳಿಯ ಮೇಲೆ ಮಲಗಿಸಿದರು.

ನಿಂಗ ತನ್ನ ತೆಂಗಿನಕಾಯಿಯ ಮಂತ್ರಶಕ್ತಿಗೆ ತಾನೆ ಭಯಪಟ್ಟುಕೊಂಡು ಭೂತರಾಯನ ಸತ್ಯಕ್ಕೆ ಹೆದರಿಕೊಳ್ಳುತ್ತ ಮನೆಗೆ ಹಿಂತಿರುಗಿದನು.

ಸ್ವಲ್ಪ ಹೊತ್ತಿನಮೇಲೆ ಬೇಲರ ಹೈದನೊಬ್ಬನು ಹೂವಯ್ಯ ಪುಟ್ಟಣ್ಣ ಇವರೊಡನೆ ಗದ್ದೆಯಲ್ಲಿ ಕೆಲಸಮಾಡುತ್ತಿದ್ದ ಬೈರನ ಬಳಿಗೆ ಬಂದು, ಗಂಗನಿಗೆ ಏನೋ ಹೊಡೆದಿದೆಯೆಂದೂ, ಜ್ವರವೇರಿ ಭ್ರಾಂತಿಯಿಂದ ಬಾಯಿಗೆ ಬಂದಂತೆ ಹಲವರಿಯುತ್ತಾದ್ದಾನೆಂದೂ, ಭೈರನು ಬೇಗ ಬರಬೇಕೆಂದು ಸೇಸಿ ಹೇಳಿಕಳುಹಿಸಿದ್ದಾಳೆಂದೂ ಹೇಳಿದನು. ಒಡನೆಯೆ ಬೈರ ತನ್ನ ಕೆಲಸವನ್ನು ಹಾಗೆಯೆ ನಿಲ್ಲಿಸಿ, ಹೂವಯ್ಯನಿಗೆ ಸಮಾಚಾರ ತಿಳಿಸುತ್ತಾ ಕಣ್ಣೀರುಹಾಕಿದನು. ಹೂವಯ್ಯನಿಗೂ ಗಾಬರಿಯಾಯಿತು. ಪುಟ್ಟಣ್ಣನನ್ನೂ ಬೈರನೊಡನೆ ಹೋಗಿ ಅದೇನೆಂದು ನೋಡಿ ವಿಚಾರಿಸಿಕೊಂಡು ಬರುವಂತೆ ಹೇಳಿಕಳುಹಿಸಿ, ತಾನೊಬ್ಬನೆ ಮಳೆಸುರಿದು ನೀರು ನಿಂತು ಕೆಸರಾಗಿದ್ದ ಗದ್ದೆಯಲ್ಲಿ ಕೆಲಸಮಾಡತೊಡಗಿದನು.

ದೂರದ ಗದ್ದೆಗಳಲ್ಲಿ ಚಂದ್ರಯ್ಯಗೌಡರು ತಮ್ಮ ಹೆಚ್ಚು ಸಂಖ್ಯೆಯ ಆಳುಗಳೊಡನೆಯೂ ಎತ್ತುಗಳೊಡನೆಯೂ ಕೆಲಸ ಮಾಡಿಸುತ್ತಿದ್ದರು. ರಾಮಯ್ಯನ ಬಿಳಿಯ ಉಡುಪೂ ಅವರ ನಡುವೆ ಗೋಚರಿಸುತ್ತಿತ್ತು. ಅವನು ಯಾವ ಕೆಲಸದಲ್ಲಿಯೂ ತೊಡಗದಿದ್ದರೂ ತಂದೆಯ ಭಯಕ್ಕಾಗಿ ಹೂವಯ್ಯನೆಡೆಗೆ ಹೋಗಲು ಕಾತರವಾಗಿದ್ದ ಮನಸ್ಸನ್ನು ತಡೆದು ಗದ್ದೆಯಂಚಿನ ಮೇಲೆ ಹಾಕಿದ್ದ ಕಂಬಳಿಯ ಮೇಲೆ ಕುಳಿತಿದ್ದನು.

ಬಿರಿಮಳೆಯಲ್ಲಿ ಮಿಂದು ನಾಡೆಲ್ಲ ಹಸುರಾಗಿ ಚೊಕ್ಕಟವಾಗಿತ್ತು. ಆಕಾಶದ ತುಂಬ ಮೋಡ ಮುಚ್ಚಿಕೊಂಡು ಸೂರ್ಯರಶ್ಮಿಯ ಸುಳಿವೂ ಅಡಗಿಹೋಗಿತ್ತು. ವಾಯುಮಂಡಲ ನಿರ್ಮಲವಾಗಿತ್ತು. ಬಯಲುಗಳ ಮೇಲೆ ಹಸುರುಗಂಬಳಿ ಹಾಸಿದಂತೆ ಹುಲ್ಲು ಹಬ್ಬಿ ಬೆಳೆದಿತ್ತು. ಸುತ್ತಲೂ ಮಹಾಪರ್ವತದುರ್ಗದ ಗೋಡೆಗಳಂತೆ ಎತ್ತರವಾಗಿ ಎದ್ದುನಿಂತಿದ್ದ ಬೆಟ್ಟಗಳನ್ನು ಬಿಗಿದಪ್ಪಿದ್ದ ಕಾಡುಗಳ ಸಾಲು ಹಚ್ಚನೆ ಹಸುರಾಗಿ ರಮಣೀಯವಾಗಿತ್ತು. ಗದ್ದೆಗಳಲ್ಲಿ ಅಲ್ಲಲ್ಲಿ ಗುಪ್ಪೆಗುಪ್ಪೆಯಾಗಿ ಹಾಕಿದ್ದ ಕರಿಯ ಗೊಬ್ಬರದ ರಾಶಿಗಳಲ್ಲಿ ಉರುಳಿ ಹಕ್ಕಿಗಳು ನಾನಾವಿಧವಾಗಿ ಕೆಲೆಯುತ್ತ ಹುಳುಬೇಟೆಯಲ್ಲಿ ಮಗ್ನವಾಗಿದ್ದುವು. ಅಲ್ಲಲ್ಲಿ ಬಿಳಿಯ ಕುಕ್ಕಗಳೂ ತಮ್ಮ ನೀಳವಾದ ಕೊರಳುಗಳನ್ನೂ ಎತ್ತಿಕೊಂಡು ಧ್ಯಾನ ಮಾಡುವಂತೆ ಕುಳಿತಿದ್ದುವು.. ಹೂವಯ್ಯ ತಾನು ಕೈಕೊಂಡ ಹೊಸ ಕಸಬಿನಲ್ಲಿ ಮಗ್ನನಾಗಿದ್ದರೂ ತಾನು ಕಾಲೇಜಿನಲ್ಲಿ ಉಪನ್ಯಾಸ ಮಂದಿರದ ಗ್ಯಾಲರಿಯಲ್ಲಿ ಕುಳಿತು ಅಧ್ಯಾಪಕರ ಮಾತುಗಳನ್ನು ಕೇಳುತ್ತಿರುವ ದೃಶ್ಯವನ್ನು ಆಗ ತಾನು ಗೆಯ್ಯುತ್ತಿದ್ದ ದೃಶ್ಯದೊಡನೆ ಹೋಲಿಸಿಕೊಂಡು ಮುಗುಳುನಗೆ ನಕ್ಕನು.

ಅರ್ಧ ಗಂಟೆಯೊಳಗಾಗಿ ಪುಟ್ಟಣ್ಣ ಅವಸರ ಅವಸರವಾಗಿ ಬಂದು ಹೂವಯ್ಯನನ್ನು ಬೇಲರ ಕೇರಿಗೆ ಬರುವಂತೆ ಕರೆದನು. ಇಬ್ಬರೂ ಬೈರನ ಬಿಡಾರಕ್ಕೆ ಹೊರಟರು. ದಾರಿಯಲ್ಲಿ ಪುಟ್ಟಣ್ಣ ನಡೆದ ವೃತ್ತಾಂತವನ್ನೆಲ್ಲ ಸಂಕ್ಷೇಪವಾಗಿ ಹೇಳಿದನು.

ಅವರು ಬಿಡಾರದ ಹತ್ತಿರ ಬರುವಷ್ಟರಲ್ಲಿಯೆ ಅವರನ್ನು ದೂರದಿಂದ ಕಂಡ ಬೈರ “ಅಯ್ಯೋ, ಅಯ್ಯಾ, ನನ್ನ ಕಂದನ್ನ ಕೊಂದ್ರೂ ! ಕೊಂದ್ರೂ !” ಎಂದು ಎದೆ ಬಡಿದುಕೊಂಡು ರೋದಿಸತೊಡಗಿದನು.

ಹೂವಯ್ಯ ಅವನನ್ನು ಸುಮ್ಮನಿರುವಂತೆ ಗದರಿಸಿ, ಬಿಡಾರದ ಒಳಗೆ ಹೋದನು. ಅಲ್ಲಿ ಸೇಸಿ, ಹಾಸಿದ್ದ ಕಂಬಳಿಯ ಬಳಿ ಕುಳಿತು “ಅಯ್ಯೋ ಮಗನೇ” ಎಂದು ಅಳುತ್ತ ಹಣೆಯನ್ನು ಎದೆಯನ್ನೂ ಬಡಿದುಕೊಳ್ಳುತ್ತಿದ್ದಳು.

ಕಂಬಳಿಯ ಮೇಲೆ ಮೆಳ್ಳೆಗಣ್ಣಾಗಿ ನಿಶ್ಚೇಷ್ಟಿತನಾಗಿದ್ದಂತೆ ಗಂಗ ಬಿದ್ದಿದ್ದನು. ಉಸಿರಾಡುತ್ತಿತ್ತು. ದೆವ್ವದ ಭಯದಿಂದಲೇ ಹುಡುಗನಿಗೆ ಆ ರೀತಿಯಾಗಿದೆ ಎಂಬುದೇನೋ ಹೂವಯ್ಯನಿಗೆ ನಿರ್ವಿವಾದವಾಗಿ ತಿಳಿದಿತ್ತು.

ತಂದೆತಾಯಿಗಳಿಗೆ ಧೈರ್ಯ ಹೇಳಿ, ಅವರ ಧೈರ್ಯಕ್ಕಾಗಿ ಅವರು ಇಷ್ಟಪಟ್ಟಂತೆ ತನ್ನ ಪರವಾಗಿ ಪುಟ್ಟಣ್ಣನಿಂದ ಭೂತರಾಯನಿಗೆ ‘ತಪ್ಪು’ ಹೇಳಿಸಿದನು. ತನಗೆ ತಿಳಿದಿದ್ದ ಶೈತ್ತೋಪಚಾರಗಳನ್ನೆಲ್ಲ ಮಾಡಿಸಿ, ಹುಡುಗನಿಗೆ ಜ್ವರ ಅತಿಯಾಗಿರುವುದನ್ನು ತಿಳಿದು ಹಣೆಗೆ ಒದ್ದೆಬಟ್ಟೆ ಇಡಿಸಿದನು. ಸ್ವಲ್ಪ ಹೊತ್ತಿನಲ್ಲಿ ಗಂಗನಿಗೆ ಪ್ರಜ್ಞೆ ಬಂದು ಕಣ್ಣು ಹೊರಳಿಸಿ, ಅತ್ತ ಇತ್ತ ನೋಡಿದನು.

ಪುಟ್ಟಣ್ಣ ಮೃದು ಧ್ವನಿಯಿಂದ “ಗಂಗಾ ! ಗಂಗಾ ! ಇವರು ಯಾರೋ ? ಇಲ್ಲಿ ನೋಡು ! ಇಲ್ಲಿ !” ಎಂದು ಹೂವಯ್ಯನನ್ನು ತೋರಿಸಿದನು.

ಗಂಗ ಗಡಗಡನೆ ನಡುಗುತ್ತ ಕಿಟ್ಟನೆ ಕಿರಿಚಿಕೊಂಡು, ಸೇಸಿಯನ್ನು ಬಲವಾಗಿ ಅಪ್ಪಿ ಹಿಡಿದು “ಇಲ್ಲಾ ! ದಮ್ಮಯ್ಯಾ ! ನನ್ನ ತಪ್ಪಾಯ್ತು ! ನಾನಲ್ಲಾ, ಕಳ್ಳಂಗಡಿ ಚಿಕ್ಕಣ್ಣ ! ಅಯ್ಯೋ ಅವ್ವಾ ! ಬಿಡಿಸೇ ! ಸತ್ತೇ !!” ಎಂದು ಮತ್ತೆ ಮೈಮರೆತನು. ಕಟಬಾಯಿಯಿಂದ ರಕ್ತವೂ ಸೋರಿತು !

ಹೂವಯ್ಯ ಪುಟ್ಟಣ್ಣನ ಕಡೆ ತಿರುಗಿ “ಏನಿದು ? ಕಳ್ಳಂಗಡಿ ಚಿಕ್ಕಣ್ಣಾ ಅಂತಾನಲ್ಲಾ” ಎಂದನು.

ಬೈರ ಉತ್ತರವಾಗಿ “ಏನೋ ನೋಡಿ. ನಂಗೊಂದೂ ಗೊತ್ತಾಗಾದಿಲ್ಲ. ಆವಾಗಿನಿಂದ ಅದೇ ಮಾತು ಹೇಳ್ತಾನೆ ! ಅವರನ್ನೇ ಕರೆಸಿ ಇಚಾರಿಸಿದ್ರೆ ಆಗ್ತಿತ್ತು !” ಎಂದು ಅಳಲಾರಂಭಿಸಿದನು.

“ಆಗಲಿ, ಅವನನ್ನೂ ಕರೆಸಿ ಕೇಳೋಣಂತೆ ! – ನೀವೆಲ್ಲ ಸೇರಿ ಇಲ್ಲಿ ಗಲಾಟೆ ಮಾಡಬೇಡಿ. ಅವನನ್ನು ಬೆಚ್ಚಗೆ ಮಲಗಿಸಿ ! ನಾನು ಮನೆಗೆ ಹೋಗಿ ಜ್ವರಕ್ಕಾಗಿ ಔಷಧಿ ಕಳಸ್ತೀನಿ – ಏ ಬೈರಾ, ಅವನಿಗೆ ಸ್ವಲ್ಪ ಧಾತು ಬಂದಮೇಲೆ ‘ದೇವರ ಪ್ರಸಾದ ಕಳಿಸಿಕೊಟ್ಟಿದ್ದಾರೆ. ಏನೂ ಹೆದರೋದು ಬೇಡವಂತೆ’ ಎಂದು ತಿಳಿಯುವಂತೆ ಚೆನ್ನಾಗಿ ಸಮಾಧಾನ ಹೇಳಿ, ನಾನು ಹೂವು ವಿಭೂತಿ ಕಳಿಸಿಕೊಡ್ತೀನಲ್ಲ ಅದನ್ನು ಕೊಡು. ಅವನಿಗೆ ನಂಬಿಕೆ ಹುಟ್ಟೋಹಾಗೆ ಮಾಡ್ಬೇಕು ; ಕೇಳ್ತೇನು ನಾ ಹೇಳಿದ್ದು ?”

“ಆಯ್ತಲ್ಲಾ.”

ಹೂವಯ್ಯ ಮನೆಗೆ ಹೋಗಿ, ತಾನು ಹೇಳಿದಂತೆ ಔಷಧಿಯನ್ನೂ ಪ್ರಸಾದವನ್ನೂ ಕಳುಹಿಸಿಕೊಟ್ಟನು. ಆದರೆ ಅವುಗಳಿಂದ ಯಾವ ಪ್ರಯೋಜನವೂ ಆಗಲಿಲ್ಲ. ನಿಂಗನ ತೆಂಗಿನಕಾಯಿಯಿಂದ ಉಂಟಾಗಿದ್ದ ಭಯಂಕರ ಸೂಚನೆ ದೆವ್ವವೆಂದರೆ ಹೆದರಿ ಸಾಯುತ್ತಿದ್ದ ಹುಡುಗನನ್ನು ಹಿಂಡುತ್ತಿತ್ತು.

ಹೂವಯ್ಯ ನಿಂಗನನ್ನು ಚೆನ್ನಾಗಿ ಗದರಿಸಿದನು. ನಿಂಗ ಕಣ್ಣೀರು ಕರೆಯುತ್ತ “ಹಿಂಗೆ ಆಗ್ತದೆ ಅಂತಾ ನಂಗೆ ಗೊತ್ತಿರಲಿಲ್ಲಯ್ಯಾ” ಎಂದು ಅಂಗಲಾಚಿ ಬೇಡಿಕೊಂಡನು.

ಆದರೆ ಚಂದ್ರಯ್ಯಗೌಡರು ತಮ್ಮ ಆಳಿನ ಪರವಾಗಿ ಮಾತಾಡುತ್ತೇನೆಂದು ಹೂವಯ್ಯನಿಗೆ ಬಾಯಿಗೆ ಬಂದಂತೆ ಹೇಳಿಬಿಟ್ಟರು.

“ನಮ್ಮ ಮನೆ ಆಳನ್ನು ಕೇಳೋಕೆ ನೀನ್ಯಾರು ? ಅವನ್ನ ಬೈಯ್ಯೋಕೆ ನಿಂಗೇನು ಹಕ್ಕಿದೆ ? ತೆಂಗಿನಕಾಯಿ ಮುಟ್ಟಿಸಿದ ಅಂದ್ರೆ, ಅವನ ವಸ್ತು ಹೋಗಿದ್ದಕ್ಕೆ ಅವನು ಕೆಲಸಮಾಡದೆ ನೀ ಮಾಡಿಕೊಡ್ತೀಯೇನು ? ಅಂಥಾ ಹೆದುರುಪುಕ್ಕ ನಿನ್ನಾಳು ಕಾಯಿ ಮುಟ್ಟಿದ್ದೇಕೆ ?”

ತನ್ನ ಪರವಾಗಿ ಚಂದ್ರಯ್ಯಗೌಡರು ಆಡುತ್ತಿದ್ದ ಮಾತುಗಳನ್ನು ಕೇಳಿ ನಿಂಗನಿಗೂ ಕೂಡ ಇಸ್ಸಿ ಅನ್ನಿಸಿತು.

ಹೂವಯ್ಯನೂ ಕುಪಿತನಾಗಿ ಹಿಂತಿರುಗಿ ನಾಲ್ಕು ಮಾತು ಚೆನ್ನಾಗಿ ಆಡಿಬಿಟ್ಟನು. ತಾನೂ ದೆವ್ವದ ಶಕ್ತಿಯನ್ನು ಚಂದ್ರಯ್ಯಗೌಡರಮೇಲೆ ಪ್ರಯೋಗಿಸುತ್ತೇನೆ ಎಂದೂ ಹೇಳಿಬಿಟ್ಟನು !

ದೆವ್ವವೆಂದರೆ ಭಯಪಡುತ್ತಿದ್ದ ಗೌಡರು ಕೂಗಿ “ನಿನ್ನ ಅಜ್ಜ ಬರಬೇಕು, ನನ್ನೊಂದು ರೋಮ ಹರೀಬೇಕಾದ್ರೆ ! ಭೂತಕ್ಕೆ ಹರಸಿದ್ದ ಹೋತನ್ನ ಹರಕೆಗೆ ಬಿಡದೆ ಇಟ್ಟುಕೊಂಡ ನಿನಗೆ ನೀರು ಕುಡಿಸದೆ ಬಿಟ್ರೆ ಕೇಳು ಆಮೇಲೆ ನಮ್ಮ ಭೂತ್ರಾಯ ! ಆ ಪೆಟ್ಟಲ್ದೆ ಮತ್ತೇನು ಗಂಗಹುಡುಗಗೆ ಈಗ ? ನಿನಗೇ ಬರಬೇಕಾಗಿತ್ತು. ನಿನ್ದೆಸೆಯಿಂದ ಆ ಬಡ ಮುಂಡೇ ಕುರುದೆಗೆ ಪ್ರಾಣಕ್ಕೆ ಬಂತು….. ತಪ್ಪು ತನ್ದೇ ಆಗಿಕೊಂಡು ಈಗ ಯಾರ್ಯಾರ ಮೇಲೆಲ್ಲಾ ರೇಗಿದ್ರೆ ಕೇಳೋರ್ಯಾರು ?” ಎಂದು ಮೊದಲಾಗಿ ವಿಷ ಕಾರಿಬಿಟ್ಟರು.

ಆ ದಿನ ಮಧ್ಯರಾತ್ರಿ ಕಾನೂರು ಮನೆಯಲ್ಲಿ ಎಲ್ಲರೂ ಗಾಢನಿದ್ರೆಯಲ್ಲಿದ್ದಾಗ ಬೈರ ಹೃದಯವೊಡೆಯುವ ರೀತಿಯಲ್ಲಿ ಬಾಯಿ ಬಾಯಿ ಹೊಡೆದುಕೊಳ್ಳುತ್ತ ಎದೆಯೆದೆ ಬಡಿದುಕೊಳ್ಳುತ್ತ ಅಲ್ಲಿಗೆ ಬಂದನು. ಮಲಗಿದ್ದವರೆಲ್ಲರೂ ದಿಗಿಲು ಬಿದ್ದು ಎದ್ದರು.

ಪುಟ್ಟಣ್ಣ ಹೆಬ್ಬಾಗಿಲು ತೆರೆದೊಡನೆಯೆ ಬೈರ ನೆತ್ತರು ಹೆಪ್ಪುಗಡುವಷ್ಟು ಭಯಂಕರವಾಗಿ ರೋದಿಸುತ್ತಾ ಒಳನುಗ್ಗಿ “ಅಯ್ಯೋ ! ನಿಂಗಯ್ಯಾ, ನನ್ನ ಮಗ ನಿಮಗೇನು ಮಾಡಿದ್ದನ್ರೋ ? ಅಯ್ಯೋ ! ನಾ ಕೆಟ್ಟೆ ! ಅಯ್ಯಾ ! ಹೂವಯ್ಯಾ ! ನನ್ನ ಮಗನ ಕಾಪಾಡಿರೋ !” ಎಂದು ಕೂಗತೊಡಗಿದನು.

ಹೂವಯ್ಯ ಅವನನ್ನು ಕೈಹಿಡಿದು ನಡೆಸಿಕೊಂಡು ಬೇಲರ ಕೇರಿಗೆ ನಡೆದನು. ಪುಟ್ಟಣ್ಣ ರಾಮಯ್ಯರೂ ಜೊತೆ ಹೋದರು. ಹೋಗಿ ನೋಡುವಲ್ಲಿ ಗೋಳಿಡುತ್ತಾ ನೆರೆದಿದ್ದ ಕೇರಿಯವರ ಮಧ್ಯೆ, ಹರಳೆಣ್ಣೆ ಹಣತೆಯ ದೀಪದ ಮಬ್ಬು ಕೆಂಬೆಳಕಿನಲ್ಲಿ, ಗಂಗಹುಡುಗನ ಮೃತ ಕಳೇಬರ ಕಂಬಳಿಯಲ್ಲಿ ಮುಚ್ಚಿಬಿದ್ದಿತ್ತು.