ಮರುದಿನ ಬೆಳಿಗ್ಗೆ ಹೂವಯ್ಯ ಕಾನೂರಿನ ಉಪ್ಪರಿಗೆಯ್ಲಲಿ ಎಚ್ಚತ್ತು ಕಣ್ಣು ತೆರೆದಾಗ ಸೂರ್ಯನಾಗಲೆ ಕಾಡುಬೆಟ್ಟಗಳ ನೆತ್ತಿಯಲ್ಲಿ ಮೂಡಿಬಿಟ್ಟಿದ್ದನು. ಹಿಂದಿನ ದಿನದ ಸಾಯಂಕಾಲದ ಬಿರುಮಳೆಯಿಂದ ಶುಭ್ರವಾಗಿದ್ದ ವಾಯುಮಂಡಲದಲ್ಲಿ ಬನಗಳ ಹಸುರೂ ಬಿಸಿಲಿನ ಹೊನ್ನೂ ಬಾನಿನ ನೀಲಿಯೂ ಮಿಲನವಾಗಿ ಚೇತೋಹರವಾಗಿತ್ತು.

ಏಳುವುದು ಎಷ್ಟು ತಡವಾಯಿತು? ಎಂದು ಮನದಲ್ಲಿಯೆ ಹೇಳಿಕೊಂಡು ಪಕ್ಕದಲ್ಲಿ ನೋಡಿದರೆ, ರಾಮಯ್ಯನಿನ್ನೂ ಮುಸುಗು ಹಾಕಿಕೊಂಡು ಮಲಗಿದ ನಿದ್ರಿಸುತ್ತಿದ್ದಾನೆ!

ಹೂವಯ್ಯನಿಗೆ ಹಿಂದಿನ ದಿನದ ಭಯಂಕರ ಘಟನೆಗಳ ನೆನಪಾಯಿತು. ಕೃಷ್ಣಪ್ಪನ ಮರಣ, ಅವನ ತಂದೆ ತಾಯಿಗಳ ರೋದನ, ಜಾಕಿಯ ಗೋಳು, ಶ್ಮಶಾನದಲ್ಲಿ ಶವದಹನ! ಆ ಹುಲಿ! ಅದನ್ನೆಲ್ಲ ನೆನೆದು ಹೂವಯ್ಯ ಸ್ವಲ್ಪ ಕಂಪಿಸಿದನು.

ರಾಮಯ್ಯನನ್ನು ಎಬ್ಬಿಸಿಲಿಲ್ಲ. ಸ್ನಾನಮಾಡಿ, ಕಾಫಿ ತಿಂಡಿ ತೆಗೆದುಕೊಂಡು ಕಾನುಬೈಲಿನ ಕಡೆಗೆ ತಿರುಗಾಡಲು ಹೊರಟು ಏರಿದನು. ಅಡುಗೆ ಮನೆಯಲ್ಲಿ ಸುಬ್ಬಮ್ಮನೂ ಪುಟ್ಟಮ್ಮನೂ ತನ್ನ ತಾಯಿಯೂ ಕೃಷ್ಣಪ್ಪನ ದುರ್ಮರಣದ ವಿಚಾರವಾಗಿ ಕೇಳಿದ ಪ್ರಶ್ನೆಗಳಿಗೆ ಒಂದೆರಡು ಮಾತುಗಳಲ್ಲಿ ಉತ್ತರ ಹೇಳಿ ಪೂರೈಸಿದ್ದನು. ಆದರೆ ಮನಸ್ಸಿನಲ್ಲಿ ಮಾತ್ರ ಅ ಭಯಂಕರ ದುರ್ಘಟನೆ, ಬಿಸಿಲೇರಿದ ಹಾಗೆಲ್ಲ ಹೆಚ್ಚು ಹೆಚ್ಚು ಪ್ರದೇಶವನ್ನು ಆಕ್ರಮಿಸುತ್ತಿದ್ದ ಕಣಿವೆಯ ಮಂಜು ಮುಗಿಲಿನಂತೆ, ವಿಸ್ತಾರವಾಗುತಿತ್ತು. ಸುಂದರ ಪ್ರಾತಃಕಾಲವಾಗಲಿ ಸುಮಧುರ ಪಕ್ಷಿಗಾಯನವಾಗಲಿ ಸುಖಶೀತಲ ಮಂದಮಾರುತವಾಗಿಲಿ ಸುಖೋಷ್ಣವಾದ ಬಾಲಾತಪವಾಗಲಿ ಹುಲ್ಲಿನಲ್ಲಿಯೂ ಗಿಡಗಳಲ್ಲಿಯೂ ಹಸುರು ಚಾಮರಗಳಂತಿದ್ದ ಬಿದಿರು ಮೆಳೆಗಳಲ್ಲಿಯೂ ಮಿರುಗುತ್ತಿದ್ದ ಲಕ್ಷೋಪಲಕ್ಷ ಹಿಮಮಣಿಗಳಾಗಲಿ ಅವನ ಮನಸ್ಸುನ್ನು ಹೆಚ್ಚಾಗಿ ಆಕರ್ಷಿಸಲು ಸಮರ್ಥವಾಗಲಿಲ್ಲ.

ಒಂದೆರಡು ಸಾರಿ ಮನಸ್ಸನ್ನು ಸ್ವಲ್ಪ ಪ್ರಯತ್ನದಿಂದ ಪ್ರಕೃತಿ ಸೌಂದರ್ಯದ ಕಡೆಗೆ ತಿರುಗಿಸಿದನು. ಆದರೆ ವ್ಯಾಘ್ರನಖಾಘಾತದಿಂದ ಜಜ್ಜರಿತವಾಗಿದ್ದ ಕೃಷ್ಣಪ್ಪನ ಕಳೇಬರ ಮರಳಿ ಮರಳಿ ಮನಸ್ಸಿನ ಮುಂದೆ ಬರುತ್ತಿತ್ತು. ಕೃಷ್ಣಪ್ಪ ತನಗಿಂತಲೂ ಚಿಕ್ಕವನು; ತನ್ನೊಡನೆ ಆಡಿದವನು; ಓದಿದವನು. ಎಲ್ಲ ಮೊನ್ನೆ ಮೊನ್ನೆ ನಡೆದಂತಿದೆ. ಮದುವೆಯೂ ನಿಶ್ಚಯವಾಗಿತ್ತು! ಹಠಾತ್ತಾಗಿ ಏನಾಗಿ ಹೋಯಿತು?

ಇದ್ದಕ್ಕಿದ್ದ ಹಾಗೆ ಹೂವಯ್ಯನ ಹೃದಯದಲ್ಲಿ ಏನೋ ಒಂದು ಪರಿವರ್ತನೆಯಾದ ಹಾಗಾಯಿತು. ಮದುವೆ ನಿಶ್ಚಯವಾಗಿತ್ತು; ಈಗ ಕೃಷ್ಣಪ್ಪ ಸತ್ತುಹೋಗಿದ್ದಾನೆ! ಮುಂದೆ ಸೀತೆ?

ಹೂವಯ್ಯ ಒಂದು ದೊಡ್ಡ ಆಲದ ಮರದ ಬೇರಿನ ಮೇಲೆ ಕುಳಿತುಕೊಂಡನು. ಮುಂದೆ ಏನನ್ನೂ ಆಲೋಚನೆ ಮಾಡಲಾರದೆ ಮರವನ್ನೇ ನೋಡತೋಡಗಿದನು.

ಅದೊಂದು ಭೀಮಾಕಾರದ ಮರವಾಗಿತ್ತು. ನಾಲ್ದೆಸೆಗಳಿಗೂ ಸ್ವಚ್ಛಂದವಾಗಿ ಹರಡಿಕೊಂಡು ತನ್ನದೇ ಒಂದು ಸಂಸಾರ ಹೂಡಿತ್ತು. ಅದರ ಸಣ್ಣ ಸಣ್ಣ ಬಿಳಲುಗಳು ತಪಸ್ಸಿಗೆ ಕುಳಿತ ಮಹರ್ಷಿಯ ಗಡ್ಡವನ್ನೂ, ದಿಕ್ಕು ದಿಕ್ಕಿಗೆ ಧೀರವಾಗಿ ಕೈಚಾಚಿದ್ದ ಹೆಗ್ಗೊಂಬೆಗಳ ಗರಡಿಸಾದನೆ ಮಾಡಿದವನ ಅಂಗ ವಿನ್ಯಾಸವನ್ನೂ, ಭೂಮಿಗಿಳಿದು ಬೆಳೆದುನಿಂತ ಹೆಬ್ಬಿಳಲುಗಳು ದೊಡ್ಡ ದೇವಾಲಯದ ಕಂಭಗಳ ಸಾಲ್ಗಳನ್ನೂ ನೆನಪಿಗೆ ತರುತ್ತಿದ್ದವು. ದಟ್ಟವಾಗಿ ಬೆಳೆದಿದ್ದ ದಪ್ಪವಾದ ಎಲೆಗಳು ಕೊಡೆ ಹಿಡಿದಂತಿದ್ದರೂ ಅಲ್ಲಲ್ಲಿ ಬಿಸಿಲು ತೂರಿಬಂದು ಹಸುರು ನೆಲದಮೇಲೆ ಕೋಲುಕೊಲಾಗಿ ಬೀಳುತ್ತಿತ್ತು. ಎಳ ಬಿಸಿಲು ಬಿದ್ದ ಎಲೆಗಳಿಂದ ಹಸುರಿನ ಚಿಲುಮೆ ನಳನಳಿಸಿ ಚಿಮ್ಮುತ್ತಿತ್ತು. ಅಲ್ಲಲ್ಲಿ ದೊಡ್ಡ ಹಲಸಿನಕಾಯಿಯಷ್ಟು ಗಾತ್ರವಾಗಿ ಮರದೆಲೆಗಳನ್ನು ಜೋಡಿಸಿ ಬೆಸೆದು ಮಾಡಿದ್ದ ಚಗಳಿ ಇರುವೆಯ ಗೂಡುಗಳ ಕೊಟ್ಟೆ ಕೊಟ್ಟೆಯಾಗಿ ಕಾಣುತ್ತಿದ್ದುವು. ನಸುಗೆಂಪು ಬಣ್ಣದ ದೊಡ್ಡದೊಡ್ಡ ಚಗಳಿ ಇರುವೆಗಳು ಎಲೆಗಳ ಮೇಲೆಯೂ ಕೊಂಬೆಗಳ ಮೇಲೆಯೂ ಹರಿದಾಡುತ್ತಿದ್ದುವು. ಹಲಕೆಲವು ಹಕ್ಕಿಗಳೂ ಕೊಂಬೆಗಳಿಲ್ಲಿ  ಹಾಡಿ ಹಾರಾಡುತ್ತಿದ್ದುವು. ಗಾಳಿ ಬೀಸಿದಂತೆಲ್ಲ ಮರದ ಹನಿಗಳು ಬಿದ್ದು ಪಟ್ಪಟನೆ ಸದ್ದು ಮಾಡುತ್ತಿದ್ದುವು. ಆ ಮರದಲ್ಲಿ ಪುರಾತನ ನೂತನಗಳೆರಡೂ ಸಂಗಮಿಸಿ ಮುದುಕನ ಗಾಂಭೀರ್ಯದೊಡ್ಡನೆ ಹುಡುಗಳ ಹರುಷ ಸೇರಿಕೊಂಡಂತಿತ್ತು ಹೂವಯ್ಯನ ಮನಸ್ಸಿಗೆ ಆ ವೃಕ್ಷದಲ್ಲಿ ಏನೋ ಒಂದು ವ್ಯಕ್ತಿತ್ವವಿರುವಂತೆ ಭಾಸವಾಯಿತು. ಅದಕ್ಕೇ ಎಂದು ತೋರುತ್ತದೆ ಹಳ್ಳಿಯವರು ಆ ಮರದಲ್ಲಿ ಅತಿಮಾನುಷ ವ್ಯಕ್ತಿಗಳಿವೆಯೆಂದು ಹೇಳುತ್ತಿದ್ದುದು.

“ಇದೇನೊಡಯಾ, ಇಲ್ಲಿ ಕೂತೀರಿ?”

ಹೂವಯ್ಯ ತಿರುಗಿ ನೋಡಿದನು. ಡೊಳ್ಳಹೊಟ್ಟೆಯ ಸೋಮ ಕಂಬಳಿ ಹೊದೆದುಕೊಂಡು, ಕೈಯಲ್ಲೊಂದು ಮೊರವನು ಹಿಡಿದು ಹಲ್ಲುಬಿಡುತ್ತ ನಿಂತಿದ್ದಾನೆ!

“ಅದೇನೋ ನಿನ್ನ ಕೈಲಿ? ಎಂದನು ಹೂವಯ್ಯ.

“ಏನೂ ಇಲ್ಲಯ್ಯಾ…. ಬಾಯಿಗೆ ಅನ್ನ ಸೇರುವುದಿಲ್ಲಾ….. ಅದಕ್ಕೆ ಚಗಳಿಗೆ ಬಂದೆ.”

ಹೂವಯ್ಯನಿಗೆ ಆಗ ಅರ್ಥವಾಯಿತು. ಸೋಮನ ಕೈಯಲ್ಲಿದ್ದ ಮೊರದ ಮತ್ತು ಅದರಲ್ಲಿದ್ದ ಉಪ್ಪಿನ ಉದ್ದೇಶ. ಸೋಮನು ಗೂಡನ್ನು ಸೂರೆಮಾಡಿ ಚಗಳಿಯಿರುವೆಗಳನ್ನೂ ಅವುಗಳ ಮೊಟ್ಟೆಮರಿಗಳನ್ನೂ ಚಟ್ನಿಗೋಸ್ಕರ ಕೊಂಡೊಯ್ಯಲು ಬಂದಿದ್ದನು.

“ಏನು? ಜ್ವರ ಬಂದಿತ್ತೇನೋ?”

“ಜ್ವರಾ ಅಲ್ಲಾ, ಒಡಿಯಾ. ಆ ಬೋಸುಡಿಮಗ  ಜಾಕಿ ದೊಣ್ಣೇಲಿ ಹೊಡೆದ ಮೇಲೆ ಹಿಂಗಾಗದೆ ಕಾಣಿ” ಎಂದು ಹೊದೆದಿದ್ದ ಕಂಬಳಿಯನ್ನು ಸ್ವಲ್ಪ ಓರೆ ಮ ಆಡಿ ಡೊಳ್ಳೇರಿದ ಹೊಟ್ಟೆಯನ್ನೂ ಚರ್ಮದಮೇಲೆ ಪಾತಿಪಾತಿಯಾಗಿ ಕಾಣುತ್ತಿದ್ದ ಪಕ್ಕೆಲುಬುಗಳನ್ನೂ ಸೊಂಟದಿಂದ ಪಾದದವರೆಗೂ ಒಂದೇ ಸಮನಾಗಿ ಗಳುವಿನಂತಿದ್ದ ಕಾಲುಗಳನ್ನೂ ಪ್ರದರ್ಶಿಸಿದನು.

“ಪಾಪ! ಅವನೂ ತೀರ್ಥಹಳ್ಳಿ ಆಸ್ಪತ್ರೇಲಿ ಸಾಯೋಕಾಗಿ ಬಿದ್ದಿದ್ದಾನೊ.”

“ಅವನಿಗೆ ಹಾಗಾಗಬೇಕು, ನನ್ನೊಡೆಯಾ. ಏನು ಪುಂಡು! ಏನು ಪುಂಡು! ನಿಮ್ಮ ಟೈಗರು ನಾಯಿಯನ್ನು ಕೊಂದುಹಾಕಿದ್ದು ಅವನೇ ಅಲ್ದಾ? ಭೂತಕ್ಕೆ ಹೇಳ್ಕೋಡಿದ್ದೆ ನಾನು; ಅದೇ ಹುಲಿಯಾಗಿ ಬಡಿಯಿ ತಲ್ದಾ!….. ಅಂತೂ ಹೋದ, ಹಾಲುಮುಂಡೆಯ ಮಗ ….. ಲೌಡಿಮಗ ಏನು ಉರಿಯುತ್ತಿದ್ದ!

ಸೋಮ ಜಾಕಿಯಮೇಲೆ ತನಗಿದ್ದ ರೋಷವನ್ನೆಲ್ಲ ಬೈದು ಪೂರೈಸುತ್ತ, ಮೊರದೊಡನೆ ಆಲದಮರವನ್ನೇರಿ ಚಗಳಿಯ ಗೂಡಿದ್ದ ಕೊಂಬೆಗೆ ಹೋಗಿ, ಮೊರವನ್ನು ಗೂಡಿನ ಕೆಳಗಡೆಗೆ ಹಿಡಿದು, ಗೂಡುಕಟ್ಟಿದ್ದ ಸಣ್ಣ ಕೊಂಬೆಯನ್ನು ಕಡಿಯತೊಡಗಿದನು. ಚಗಳಿಯಿರುವೆಗಳ ಬಳಗಳನೆ ಮೊರಕ್ಕೆ ಉದುರಿದುವು. ಅವುಗಳೊಡನೆ ಹರಿದ ಗೂಡಿನಿಂದ ಗೋಧಿಯ ಗಾತ್ರದ ಬಿಳಿಯ ಮೊಟ್ಟೆಗಳು ಬಿದ್ದುವು. ಇರುವೆಗಳು ಮೊರದಿಂದ ಹರಿದೋಡದಂತೆ ಸೋಮ ಮೊರವನ್ನು ಹಿಂದಕ್ಕೂ ಮುಂದಕ್ಕೂ ಎಡಕ್ಕೂ ಬಲಕ್ಕೂ ಸರಸರನೆ ಅಲುಗಾಡಿಸುತ್ತಿದ್ದನು. ಮೊರದಲ್ಲಿದ್ದ ಉಪ್ಪು ಬರಬರನೆ ಸದ್ದಾಗುತ್ತಿದ್ದಿತು. ಚಗಳಿಯಿರುವೆಗಳು ಉಪ್ಪಿನ ದೆಸೆಯಿಂದ ಹುಳಿಯನ್ನು ಕಾರಿಕೊಂಡು ನಿಶ್ಚಲವಾಗತೊಡಗಿದ್ದವು. ಆದರೂ ಹಲಕೆಲವು ಇರುವೆಗಳು ಸೋಮನನ್ನು ಕಡಿಯತೊಡಗಿದುವು. ಸೋಮಯ ‘ಅಯ್’ ‘ಅಯ್ಯ್ ಯ್’ ‘ಅಯ್ಯಯ್ಯಯ್ಯೋ’ ಎನ್ನುತ್ತಾ ಮೈಯಲ್ಲಿ ಅಲ್ಲಿ ಇಲ್ಲಿ ಉಜ್ಜಿಕೊಂಡು, ಕಡೆಗೆ ಹೊದೆದಿದ್ದ ಕಂಬಳಿಯನ್ನೂ ಕೆಳಗೆ ಹಾಕಿದನು.

“ಕೆಳಗೆ ಬಿದ್ದೀಯಾ, ಜೋಕೆ!” ಎಂದ ಹೂವಯ್ಯ ನಗು ತಡೆಯಲಾರದೆ ಹೋದನು. ಸೋಮನ ಅಭಿನಯ ಅಷ್ಟೊಂದು ಹಾಸ್ಯಪರಿಪೂರ್ಣವಾಗಿತ್ತು.

“ಇ…ಲ್ಲಾ…. ಆಯ್! ಅಯ್ಯ್ ! ಅಯ್ಯ್ ಯ್ಯ್!…. ಅಯ್ಯಯ್ಯಯ್ಯೊ….” ಎಂದು ಕೂಗಿಕೊಳ್ಳುತ್ತಾ ಸೋಮನು ತನ್ನ ಬೇಟೆಯೊಡನೆ ಬಿರಬಿರನೆ ಕೆಳಗಿಳಿದನು.

ಮೊರದಲ್ಲಿ ಲಕ್ಷಾಂತರ ಕೆಂಬಣ್ಣದ ಚಗಳಿಯಿರುವೆಗಳು ಅದಕ್ಕಿಂತಲೂ ಹೆಚ್ಚಾಗಿ ಬಿಳಿಯ ಕಿರುಮೊಟ್ಟೆಗಳು ತುಂಬಿದ್ದುವು. ಇರುವೆಗಳಲ್ಲಿ ಬಹುಭಾಗಕ್ಕೆ ಇನ್ನೂ ಪ್ರಾಣ ಹೋಗಿರಲಿಲ್ಲ: ಒದ್ದಾಡಿಕೊಳ್ಳುತ್ತಿದ್ದುವು.

ಸೋಮ ಕಂಬಳಿಯನ್ನು ಹೆಗಲಮೇಲೆ ಹಾಕಿಕೊಂಡು ಹೂವಯ್ಯನ ಕಡೆಗೆ ತಿರುಗಿ “ಆ ಜಾಕಿ ಹೋಗಿದ್ದೇನೋ ಲೋಕಕ್ಕೆ ಒಳ್ಳೆಯದಾಯ್ತು! ಆದರೆ ಪಾಪ! ಕೃಷ್ಣಪ್ಪಗೌಡ್ರು!

ಏನು ಗ್ರಾಚಾರ! ಮದುವೆ ಗೊತ್ತಾಗಿತ್ತಂತೆ ! ಹುಣ್ಣಿಮೆ ಕಳೆದಮೇಲೆ ಲಗ್ನ ಆಗುತ್ತಿತ್ತಂತೆ!…” ಎಂದು ಹೇಳುತ್ತಿದ್ದನು.

ಹೂವಯ್ಯ “ಹ್ಞೂ ಬಿಡು. ಅದನ್ನೆಲ್ಲ ಕಟ್ಟಿಕೊಂಡು ನೀನೇನು ಮಾಡ್ತೀಯ? ಹೋಗು!” ಎಂದನು.

ಸೋಮ ’ಗಳು’ ಕಾಲುಗಳನ್ನು ಬೀಸಿಹಾಕುತ್ತ ಗಿಡಮರಗಳ ನಡುವೆ ಕಣ್ಮರೆಯದನು. ಹೂವಯ್ಯನ ಮನದಲ್ಲಿ ಮತ್ತೆ ಸೀತೆಯ ಆಲೋಚನೆ ಮೂಡಿತ್ತು. ಕಾಯಿಲೆಯಾಗಿದ್ದ ಆಕೆಯನ್ನು ಹೋಗಿ ನೋಡಿಕೊಂಡು ಬರಬೇಕೆಂಬ ಮನಸ್ಸೂ ಒಯ್ಯೊಯ್ಯನೆ ವೃದ್ಧಿ ಯಾಯಿತು.

ಅಲ್ಲಿಂದ ವೇಗವಾಗಿ ಮನೆಗೆ ನಡೆದುಬಂದು ಉಡುಪು ಬದಲಾಯಿಸಿದನು. ಕನ್ನಡಿಯ ಮುಂದೆ ನಿಂತು ಕ್ರಾಪು ಬಾಚಿಕೊಂಡನು. ಅಡುಗೆ ಮನೆಗೆ ಹೋಗಿ, ತಾಯಿಯೊಡನೆ ಮುತ್ತಳ್ಳಿಗೆ ಹೋಗಿಬರುತ್ತೇನೆಂದು ತಿಳಿಸಿ, ಹೊರಟನು.

ತನ್ನನ್ನು ಹಿಂಬಾಲಿಸುತ್ತಿದ್ದ ನಾಯಿಗಳನ್ನು ಹಿಂದಕ್ಕಟ್ಟಿ, ತೋಟದ ಮೇಲೆ ಹಾದುಹೋಗುತ್ತಿದ್ದ ಕಾಲುದಾರಿಯಲ್ಲಿ ನಡೆದನು. ಅವನ ಹೃದಯದಲ್ಲಿ ಏನೋ ಒಂದು ಮಹಾಪರಿವರ್ತನೆಯಗುತ್ತಿತ್ತು. ಉಲ್ಲಾಸದ ಬುಗ್ಗೆ ಮತ್ತೊಮ್ಮೆ ಕಣ್ಣು ಬಿಡುತ್ತಿತ್ತು. ಹಿಂದೆ ಕೃಷ್ಣಪ್ಪ ಸೀತೆಯರ ವಿವಾಹ ನಿಶ್ಚಯದಿಂದ ಭಗ್ನವಾಗಿದ್ದ ಆಸೆ ಮರಳಿ ಮೊಳೆಯುತ್ತಿತ್ತು. ಪೂರ್ವಾಹ್ಣದ ಸೌಂದರ್ಯ-ಹಸರು, ಬಿಸಿಲು,  ಹಕ್ಕಿಗಳ ಹಾಡು, ತಂಗಾಳಿ-ಅವನ ಪ್ರಾಣಕ್ಕೆ ಮತ್ತು ಏರುವಂತೆ ಮಾಡುತ್ತಿದ್ದಿತು. ನಡುನಡುವೆ ತನ್ನ ಕ್ರಾಪನ್ನು ಮುಟ್ಟಿನೋಡಿಕೊಳ್ಳುತ್ತಿದ್ದನು. ಕೆನ್ನೆಯಮೇಲೆ ಕೈಯಾಡಿಸಿಕೊಳ್ಳುತ್ತಿದ್ದನು. ತನ್ನ ಮುಖದಲ್ಲಿ ಏನೋ ಒಂದು ಹೊಸ ಹೊಳಪು ಬಂದಿದೆ ಎಂದು ಅವನಿಗೆ ತಿಳಿದಂತಾಗಿ, ಹಿಂದಿನ ದಿನದ ಮಳೆಯ ನೀರು ಸ್ವಲ್ಪ ಹೆಚ್ಚಾಗಿ ನಿಂತಿದ್ದ ಜಲದರ್ಪಣಮೊಂದರಲ್ಲಿ ಬಾಗಿನೋಡಿದನು. ನೋಡಿ ತನ್ನ ಊಹೆ ಸರಿಯಾದುದೆಂಬ ಸಮಾಧಾನದಿಂದ ಹಿಗ್ಗಿ ಮತ್ತೆ ಜೋರಾಗಿ ನಡೆದನು.

ಕಾಲು ಹಾದಿಯಿಂದ ಸರಕಾರಿ ರಸ್ತೆಗೆ ಸೇರಿ ಸ್ವಲ್ಪ ದೂರ ಹೋಗಿದ್ದನು. ಹಿಂದೆ ಕೊಪ್ಪದ ಕಡೆಯಿಂದ ಬರುತ್ತಿದ್ದ ಬೈಸಿಕಲ್ಲೊಂದರ ಗಂಟೆಯ ಗಲಾಟೆ ಹುಚ್ಚುಹುಚ್ಚಾಗಿ, ಪ್ರಾಣಬಿಡುತ್ತಿದೆಯೊ ಎನ್ನುವಂತೆ, ಕಿರಿಚಿಕೊಂಡು ಕೇಳಿಸಿತು. ಹೂವಯ್ಯ “ಇಲ್ಲಿಗೆಲ್ಲಿಂದ ಬಂತಪ್ಪಾ ಬೈಸ್ಕಲ್ಲು?” ಎಂದುಕೊಂಡು ತಿರುಗಿನೋಡಿ ಅರುಗಾಗುವಷ್ಟರಲ್ಲಿ, ಬಹಳ ಕಡಿದಾಗಿ, ಕೊರಕಲಾಗಿ, ಕೆಟ್ಟು, ಇಳಿಜಾರಾಗಿದ್ದ ರಸ್ತೆಯಲ್ಲಿ ಉನ್ಮತ್ತವೇಗದಿಂದ ಧಾವಿಸುತ್ತಿದ್ದ ಬೈಸಿಕಲ್ಲು, ಅವನನ್ನು ಕೀಸಿಕೊಂಡು ಹೋಯಿತೋ ಎನ್ನುವಷ್ಟರ ಮಟ್ಟಿಗೆ ಸಮೀಪದಲ್ಲಿ ಸುಸ್ಸೆಂದು ನುಗ್ಗಿಹೋಯಿತು.

“ಏನು ಹುಚ್ಚು ಮನಷ್ಯ! ಈ ಕೊರಕಲು ರಸ್ತೆಯಲ್ಲಿ ಇಷ್ಟು ಜೋರಾಗಿ ಹೋಗುತ್ತಿದ್ದಾನಲ್ಲಾ? ಎಲ್ಲಾದರೂ ಬಿದ್ದು ಹಲ್ಲುಮುರಿದುಕೊಳ್ಳುತ್ತಾನೆ; ಇಲ್ಲದಿದ್ದರೆ ಯಾರಮೇಲಾದರೂ ಬಿಟ್ಟು ಪುಕಾರುಮಾಡುತ್ತಾನೆ.” ಎಂದು ಆಲೋಚಿಸುತ್ತ ಹೂವಯ್ಯ ನೋಡುತ್ತಿದ್ದ ಹಾಗೆಯೆ ರಸ್ತೆಯ ತಿರುಗಣೆಯಲ್ಲಿ ಬೈಸಿಕಲ್ಲು ಒಂದು ಹೊಂಡಕ್ಕೆ ಹಾರಿ, ಚಿಮ್ಮಿ, ಕುದುರೆಯಂತೆ ಎರಡುಮೂರು ನೆಗೆತ ನೆಗೆದು, “ದರೆ”ಗೆ ಢಿಕ್ಕಿ ಹೊಡೆದು, ಕಣಿಕಣಿ ಶಬ್ದದೊಡನೆ ಮಗುಚಿಕೊಂಡಿತು. ಅದರಮೇಲಿದ್ದ ಷೋಕಿ ಸವಾರನೂ ತಿರಿಕಲ್ಲೆಸೆದಂತೆ ಮುಖ ಅಡಿಯಾಗಿ ಹೆದ್ದಾರಿಯ ಕಲ್ಲು ಕಲ್ಲು ನೆಲದಮೇಲೆ ಅಪ್ಪಳಿಸಿ ಬಿದ್ದನು.

ಹೂವಯ್ಯ ಬಿದ್ದವನ ಸಹಾಯಕ್ಕೆಂದು ಓಡಿ ಬಳಿಸೇರುವಷ್ಟರಲ್ಲಿಯೆ ಆ ವ್ಯಕ್ತಿ ತೊಯ್ದ ಮಣ್ಣಿಡಿದಿದ್ದ ಅಂಗಿ ಪಂಚೆಗಳ್ನನು ಒದರಿಕೊಳ್ಳುತ್ತ ನಿಂತಿದ್ದನು. ಹಣೆಯೂ ಮೂಗಿನ ತುದಿಯೂ ತಲ್ಲವೂ ಕರೆದುಹೋಗಿ ಮಣ್ನು ಹಿಡಿದಿದ್ದ ಗಾಯಗಳಿಂದ ರಕ್ತ ಸ್ರವಿಸುತ್ತಿದ್ದಿತು.

ಹೂವಯ್ಯ ಸಕರುಣಧ್ವನಿಯಿಂದ ಸಹಾನುಭೂತಿ ತೋರಿಸುತ್ತ “ಪೆಟ್ಟಾಯಿತೇನ್ರೀ?” ಎಂದು ಕೇಳಿದನು.

ಆ ವ್ಯಕ್ತ ಅಸ್ತವ್ಯಸ್ತವಾಗಿದ್ದ ತನ್ನ ಕ್ರಾಪನ್ನು ಒತ್ತಿ ಸರಿಮಾಡಿಕೊಳ್ಳುತ್ತ “ಇಲ್ರೀ, ಹೆಚ್ಚು ಏಟಾಗಲಿಲ್ಲ. ಏನು ಹಾಳು ರೋಡ್ ರೀ ಇದು? -ಈ ತೀರ್ಥಹಳ್ಳಿ-ಕೊಪ್ಪಾ ರೋಡಿನಷ್ಟುಡರ್ಟಿ ರೋಡ್ ನಾನೆಲ್ಲೂ ಕಾಣಲಿಲ್ಲ”ಎಂದು ಬೈಸಿಕಲ್ಲನ್ನು ಎತ್ತಿ ನಿಲ್ಲಿಸಿ ಅದನ್ನು ಪರೀಕ್ಷಿಸತೊಡಗಿದನು.

“ಮುಖದ ಮೇಲೆ ಗಾಯವಾದ ಹಾಗೆ ಕಾಣ್ತದಲ್ಲ್ರೀ”

“ಏನು ಪರ್ವಾಇಲ್ಲ್ರೀ, ಅಷ್ಟೇನು ಸೀರಿಯಸ್ ಆಗಿಲ್ಲ” ಎನ್ನುತ್ತ ಷೋಕಿ ಸವಾರನು ಟ್ರಿಂ ಟ್ರಿಂ ಎಂದು ಗಂಟೆಮಾಡಿದನು.

“ಬೈಸಿಕಲ್ ಸರಿಯಾಗಿದೆಯೇ?”

“ಸರಿಯಾಗಿಲ್ಲದೇ? ಬಿ.ಎಸ್.ಎ. ಬೈಸಿಕಲ್ಲ್ರೀ ಹಾಗೆಲ್ಲಾ ಡಿರೇಂಜ್ ಆಗೋದಿಲ್ಲ. ಮಡ್ಗಾರ್ಡ್ ಸ್ವಲ್ಪ ಬೆಂಡಾಗಿದೆ ಅಷ್ಟೇ!”

“ಈ ರಸ್ತೆ ಬಹಳ ಕೆಟ್ಟು ಹೋಗಿದೆರೀ. ಅದಲ್ಲದೆ ತಿರುಗಣೆಗಳೂ ಬಹಳ. ಸ್ವಲ್ಪ ಮೆಲ್ಲಗೆ ಎಚ್ಚರಿಕೆಯಿಂದ ಹೋಗಿ.”

“ಇಲ್ಲ್ರೀ ನಾನು ಎಕ್ಸ್ ಪರ್ಟೂ. ಸಾಧಾರಣವಾಗಿ ಯಾವಾಗಲೂ ಇಪ್ಪತ್ತೈದು ಮೂವತ್ತು ಮೈಲಿ ಸ್ಪೀಡ್ನಲ್ಲೇ ಹೋಗೋದು! ಈ ಹಾಳು ರಸ್ತೆ…. ನಾ ಬರ್ತೀನ್ರಿ ಕೆಲ್ಸ ಇದೆ” ಎಂದವನೇ ಅವಸರವಾಗಿ ಬೈಸಿಕಲ್ ಹತ್ತಿಕೊಂಡು ಮೊದಲಿನ ವೇಗದಿಂದಲೇ ಕಣ್ಮರೆಯಾದನು.

ಹೂವಯ್ಯ ಕೆಳಗೆ ಬಿದ್ದಿದ್ದ ಆತನ ಫೌಂಟನ್ ಪೆನ್ನನ್ನು ಕಂಡು ಎತ್ತಿಕೊಂಡು “ಏನ್ರೀ ರೀ!” ಎಂದು ಕೂಗುತ್ತ ಹಿಂದೆ ಓಡಿದುದೂ ವ್ಯರ್ಥವಾಯಿತು.

ಯಂತ್ರನಾಗರಿಕತೆ, ಇಂಗ್ಲೀಷು, ಚಾಂಚಲ್ಯ, ಉದ್ವೇಗ, ವೇಗ!-ತಾನು ಎಂದೊ ಹಿಂದಿಕ್ಕಿ ಬಂದು ಅ ಪ್ರಗತಿಗಾಮಿಯಾದ ಪ್ರಪಂಚ ಮತ್ತೆ ಬಹುದೂರದ ಮಲೆನಾಡಿನ ಕೊಂಪೆಯಲ್ಲಿ ತನಗೆ ಕ್ಷಣದರ್ಶನ ಕೊಟ್ಟಂತಾಯ್ತು. ನಿಲ್ಲದೆ ಮುಂಬರಿಯುತ್ತಿರುವ, ದಿನದಿನವೂ ಬದಲಾಯಿಸುತ್ತಿರುವ ಹೊರಗಣ ವಿಶಾಲ ಜಗತ್ತಿಗೆ ಪ್ರತಿಮೆಗಳಾದರು, ಆ ಬೈಸಿಕಲ್ ಮತ್ತು ಅದರ ಸವಾರ. ಹೂವಯ್ಯನ ಮನಸ್ಸು ಗವಾಕ್ಷದಿಂದೆಂಬಂತೆ ಕಾನೂರು ಮುತ್ತಳ್ಳಿಗಳ ಸಂಕುಚಿತ ಬದುಕಿನಿಂದ ಹೊರಲೋಕದ ಬಿತ್ತರಕ್ಕೆ ಹಾರಿತು. ಪಟ್ಟಣದ ಸಂದಣಿಯಲ್ಲಿ ಗಮನಕ್ಕೂ ಬಾರದ ಬೈಸಿಕಲ್ಲು ಕಾಡುಬೀಡಿನಲ್ಲಿ ವಿಶೇಷಾತಿಥಿಯಾಗಿ ತೋರಿತು. ಎಷ್ಟಾದರೂ ಆಕ್ರಮಣಶೀಲವಾದ ಆ ಚಂಚಲಮಾನ ನಾಗರಿಕ ಲೋಕವು ಮಲೆನಾಡಿಗೆ ದಾಳಿಯಿಡುವ ಮೊದಲು ಮುನ್ನಟ್ಟಿದ ರಣಚಾರನಲ್ಲವೆ ಆ ಬೈಸಿಕಲ್ ಸವಾರ!

ಹೂವಯ್ಯ ಪೆನ್ನನ್ನು ನೋಡುತ್ತ, ಅದರ ಮೇಲೆ ಹಂಸದ ಚಿತ್ರವೆಂದು ಬರೆದಿದ್ದ ಇಂಗ್ಲಿಷ್ ಲಿಪಿಯನ್ನು ಓದುತ್ತ, ಸ್ವಲ್ಪ ದೂರ ಹೋಗುವುದರಲ್ಲಿ ಎದುರಾಗಿ ಬರುತ್ತಿದ್ದ ನಂಜನನ್ನು ಕಂಡು, ಇತರ ವಿಷಯಗಳನ್ನೆಲ್ಲ ಮರೆತು, ಸೀತೆಯನ್ನು ನೆನೆದು, ಕಾತರನಾಗಿ ಮುಂದುವರಿದನು.

ದೂರದಿಂದಲೆ “ಏನೋ ಸಮಾಚಾರ?” ಎಂದು ಕೇಳಿದನು.

ನಂಜನು, ಹೇಳಬಾರದ ಸುದ್ದಿಯನ್ನು ಹೇಳಲು ಬಂದವನಂತೆ, ಮುಖ ಸಪ್ಪೆ ಮಾಡಿಕೊಂಡು ಅಳುಧ್ವನಿಯಿಂದ “ಏನಂತ ಹೇಳಾದು, ನನ್ನೊಡೆಯಾ? ಆಗಬಾರದ್ದು ಆಗಿಹೋಯ್ತು!” ಎಂದು ರೋದಿಸುತ್ತ ಕಣ್ಣೀರು ಸುರಿಸುತ್ತ ” ಹೀಂಗಾಗ್ತದೆ ಅಂತಾ ಯಾರು ತಿಳಿದಿದ್ದರು?” ಎಂದು ಬಿಕ್ಕಿ ಬಿಕ್ಕಿ ಸುಯ್ಯತೊಡಗಿದನು.

ಹೂವಯ್ಯನ ಮೈಮೇಲೆ ಕುದಿನೀರು ಚೆಲ್ಲಿದಂತಾಯ್ತು. ನಾಡಿಗಳಲ್ಲಿ ಒಂದು ಸಾರಿ ಹಿಮದ ಪ್ರವಾಹ ನುಗ್ಗಿದಂತಾಗಿ ಮರಳಿ ಬೆಂಕಿಯ ಹೊನಲು ಹರಿಯ ತೋಡಗಿದಂತಾಗಿ ಮೈ ಬೆವರಿತು. ತುಟಿ ಅದುರಿದುವು. ಕೂಡಲೆ ಮಾತಾಡಿದ್ದರೆ ಕಂಠ ಗದ್ಗದವಾಗಿರುತ್ತಿದ್ದಿತು. ಉಸಿರು ರಭಸದಿಂದಾಡತೊಡಗಿತು. ಮೆದುಳು ಕದಡಿದಂತಾಯಿತು. ಕಾಲುಗಳು ಶರೀರದ ಭಾರವನ್ನು ಹೊರಲಾರದೆ ಕುಸಿದು ಬೀಳುತ್ತಿವೆಯೋ ಎನ್ನುವಂತಾದುವು.

ಉದ್ವೇಗದಿಂದಲೂ ಆಶಂಕೆಯಿಂದಲೂ “ಏ…… ಏನೋ…. ಏನೋ…. ಸೀತೆಗೆ ಕಾಯಿಲೆ ಹೇಗಿದೆಯೋ?” ಎಂದು ಕೇಳಿದ ಹೂವಯ್ಯನ ಪ್ರಶ್ನೆಗೆ ನಂಜ ಮಾರುತ್ತರ ಕೊಡದೆ ಗಟ್ಟಿಯಾಗಿ ಆಳತೊಡಗಿ ಕಂಬಳಿಯೊಳಗೆ ತುಸು ಹೊತ್ತು ತಡವಿ ಹುಟುಕಿ, ಒಂದು ಕಾಗದವನ್ನೀಚೆಗೆ ತೆಗೆದು ನೀಡಿದನು.

ನಡುಗುವ ಕೈಯಿಂದ ಹೂವಯ್ಯ ಅದನ್ನು ಕಸಿದುಕೊಂಡು ಬೇಗಬೇಗನೆ ಬಿಚ್ಚಿ ಓದಿದನು. ಆಮೇಲೆ ಸ್ವಲ್ಪ ಶಾಂತವಾಗಿ ತಲೆಯೆತ್ತಿ ನಂಜನ ಕಡೆ ನೋಡಿ “ಏನೋ ಯಾತಕ್ಕೋ ಅಳ್ತೀಯಾ?” ಎಂದು ಸಿಟ್ಟಿನಿಂದ ಕೇಲಿದನು. ಏಕೆಂದರೆ, ಚಿನ್ನಯ್ಯ ತಾನು ಬರೆದಿದ್ದ ಪತ್ರದಲ್ಲಿ ಕೃಷ್ಣಪ್ಪನ ಮರಣದ ವಿಚಾರವಾಗಿ ಸಂತಾಪವನ್ನೂ ಸೀತೆಯ ರೋಗವು ಗುಣಮುಖವಾದುದಕ್ಕಾಗಿ ಸಂತೋಷವನ್ನೂ ಸೂಚಿಸಿ, ಹೂವಯ್ಯನು ಮುತ್ತಳ್ಳಿಗೆ ಅಗತ್ಯವಾಗಿ ಬಂದು ಹೋಗಬೇಕೆಂದು ಒತ್ತಾಯಮಾಡಿ ಬರೆದಿದ್ದನು.

“ಏನು ಹೇಳಾದು, ಒಡೆಯಾ? ಸೀತಮ್ಮನವರ ಮದುವೆ ಹೀಂಗೆ ನಿಂತು ಹೋಗ್ತದೆ ಅಂತಾ ಸಪ್ಪನ್ದಾಗೆ ಕೂಡ ಯಾರಿಗೆ ಗೊತ್ತಿತ್ತು?”… ಎಂದ ನಂಜ ಬಿಕ್ಕಿ ಬಿಕ್ಕಿ ಅಳುತ್ತ “ನಿನ್ನೆ ಸಾಯಂಕಾಲ ನನ್ನ ಮಗಾ ರಂಗೀನೂ ತೀರಿಹೋಯ್ತು, ಒಡೆಯಾ!” ಎಂದು ಎದೆಬಿರಿಯುವಂತೆ ಅಳುತ್ತ ಬೀದಿಯ ಮೇಲೆ ಕೂತುಬಿಟ್ಟನು.

“ಏನಾಗಿತೋ ಅದಕ್ಕೆ?”

ನಂಜ ಅಳುತ್ತಲೆ “ಬಾಲಗ್ರಹ ಚಾಷ್ಟೆ ಅಂದ್ರು…. ಅಯ್ಯೋ ಸ್ವಾಮಿ, ನನಗೇಕೆ ಈ ಕಷ್ಟ ಕೊಟ್ನೋ ದೇವ್ರು? ಅವನ ಗುಡಿ ಜರಿದು ಬಿದ್ದು ಹೋಗ!” ಎಂದು ಶಪಿಸತೊಡಗಿದನು.

ಹೂವಯ್ಯ ನಾನಾರೀತಿಯಿಂದ ಸಮಾಧಾನ ಹೇಳಿ, ಅವನನ್ನು ಕೈಹಿಡಿದೆತ್ತಿ ನಿಲ್ಲಿಸಿದನು.

ಇಬ್ಬರೂ ಮುತ್ತಳ್ಳಿಯ ಬಳಿಗೆ ಬರಲು, ನಂಜು ತನ್ನ ಗುಡಿಸಲನ್ನು ಕಂಡೊಡನೆ ಅಳುತ್ತ ಹುಚ್ಚನಂತೆ ಅದರೊಳಗೆ ನುಗ್ಗಿದನು. ಹೂವಯ್ಯನೊಬ್ಬನೆ ಮುಂಬರಿದು, ಮುಂದೆ ನಡೆಯಲಿದ್ದ ತನ್ನ ಮಗಳ ಮದುವೆಗಾಗಿ ಶ್ಯಾಮಯ್ಯಗೌಡರು ಮಾಡಿಸಿದ್ದ ಕಾಮಗಾರಿಗಳನ್ನು ನೋಡುತ್ತ, ಹೆಬ್ಬಾಗಿಲೊಳಗೆ ದಾಟಿದನು.