ದೀರ್ಘಕಾಲ ನಿರೀಕ್ಷಿಸಿಕೊಂಡಿದ್ದ ಚೈತ್ರಮಾಸ ಬಂದಿತು. ಮುತ್ತಳ್ಳಿ ಮತ್ತು ಕಾನೂರುಗಳ ವಿವಾಹದ ಶುಭದಿನಗಳೂ ಬಳಿ ಸಾರಿದುವು. ಚಿನ್ನಯ್ಯನ ಮದುವೆ ರಾಮಯ್ಯನ ಮದುವೆಗೆ ಎರಡು ದಿನಗಳು ಮೊದಲು ನಡೆಯುವಂತೆ ಏರ್ಪಾಡಾಗಿತ್ತು.

ಗಂಡಿನ ದಿಬ್ಬಣ ಮುತ್ತಳ್ಳಿಯಿಂದ ಹೊರಟು ಕಾನೂರಿಗೆ ಬರುವ ದಿನ ಹಗಲು ಸುಮಾರು ನಾಲ್ಕು ಹೊತ್ತಿನಲ್ಲಿ ಕೆಳಕಾನೂರಿಗೆ ಸಮೀಪವಾಗಿ ಕಾನೂರಿಗೆ ಹಾದು ಹೋಗುತ್ತಿದ್ದ ಗಾಡಿರಸ್ತೆಯಲ್ಲಿ, ದಟ್ಟವಾಗಿ ಎತ್ತರವಾಗಿ ಇಕ್ಕೆಲಗಳಲ್ಲಿಯೂ ಬೆಳೆದುನಿಂತಿದ್ದ ಹೊಂಗೆಯಮರಗಳ ಹಸುರಿನ ರಾಶಿಯಿಂದ ಧುಮುಕಿ ಪ್ರವಹಿಸುತ್ತಿದ್ದ ಕರಿಯ ತಣ್ಣೆಳಲಿನಲ್ಲಿ ಮಾವಿನ ಎಲೆ, ಹಲಸಿನ ಎಲೆ, ಬಾಳೆಯ ಮರಗಳಿಂದ ಅಲಂಕೃತವಾಗಿದ್ದ ಸಣ್ಣ ಚಪ್ಪರವೊಂದು ನಿರ್ಮಿತವಾಗಿತ್ತು. ನೆಲದ ಮೇಲೆ ಕೆಲವು ವಾಟೆಯ ತಟ್ಟಿಗಳನ್ನೂ ಗೀಕಿನ ಚಾಪೆಗಳನ್ನೂ ಹಾಸಿದ್ದರು. ದೊಡ್ಡ ಹಂಡೆಯೊಂದರಲ್ಲಿ ನಿಂಬೆಯ ಹಣ್ಣಿನ ಪಾನಕವನ್ನು ಮಾಡಿಟ್ಟುಕೊಂಡು ಸೋಮನೂ ಪುಟ್ಟಣ್ಣನೂಬಮಾತಾಡುತ್ತಾ ನಿಂತಿದ್ದರು. ಇಬ್ಬರೂ ತಮ್ಮಲ್ಲಿದ್ದ ಸರ್ವಶ್ರೇಷ್ಠವಾದ ಉಡುಗೆ ತೊಡುಗೆಗಳನ್ನು ತಮ್ಮತಮ್ಮ ಕಲಾಭಿರುಚಿ ಪರಮಾವಧಿ ಮುಟ್ಟುವಂತೆ ಧರಿಸಿದ್ದರು.

ಅವರಿಗೆ ತುಸು ದೂರದಲ್ಲಿ ನಾಗಮ್ಮನವರೊಡನೆ ಮಾತಾಡುತ್ತ ಹೂವಯ್ಯ ತನ್ನ ಸರಳ ಸಾಧಾರಣ ಪೋಷಾಕಿನಲ್ಲಿ ಕುಳಿತಿದ್ದನು. ನಾಗಮ್ಮನವರು ಮಲೆನಾಡಿನ ಪದ್ಧತಿಯಂತೆ ಹೊಸದಾದ ವಲ್ಲಿಯೊಂದನ್ನು ಕಟ್ಟಿಕೊಂಡಿದ್ದರು. ಅದು ಹೊರತೂ ಅವರಲ್ಲಿ ಬೇರೆ ಯಾವುದೂ ವಿಶೇಷತೆಯಿರಲಿಲ್ಲ. ಅವರ ಬಳಿ ಮದುವಣಿಗನಿಗೆ ಪದ್ಧತಿಯಂತೆಯೂ ಪ್ರೀತಿಪೂರ್ವಕವಾಗಿಯೂ ವಿನಿಯೋಗಿಸಲಿದ್ದ ಹಾಲು ತುಪ್ಪದ ಬಟ್ಟಲು ತಳತಳ ಹೊಳೆಯುತ್ತಿತ್ತು. ಅದರಲ್ಲಿದ್ದ ಹೂವು, ಹಣ್ಣು, ಹಾಲು, ತುಪ್ಪ, ಇವುಗಳ ಪರಿಮಳಕ್ಕೆ ನಾಲ್ಕಾರು ಜೇನುಹುಳುಗಳು ಎರಗಲೆಂದು ಹಾರಾಡತೊಡಗಿದ್ದುವು. ಸುತ್ತ ಮುತ್ತಲೂ ದಟ್ಟಯಿಸಿದ್ದ ಹೊಂಗೆ, ಹಲಸು, ಬಸಿರಿ, ಆಲ, ಅರಳಿ ಮೊದಲಾದ ಮರಗಳಲ್ಲಿಯೂ ಕೇದಗೆಯ ಓಲೆಯೋಲೆ ಗರಿಗರಿಯಾಗಿದ್ದ ಮೆಳೆಗಳಲ್ಲಿಯೂ ಹಕ್ಕಿಗಳು ತುಮುಲಗಾನ ಮಾಡುತ್ತಿದ್ದುವು.

ಎರಡು ಮುರು ಫರ್ಲಾಂಗುಗಳ ಆಚೆಯಿದ್ದ ತಮ್ಮ ಮನೆಯಲ್ಲಿ ನಾಯಿಗಳು ಬೊಗಳುತ್ತಿದ್ದುದನ್ನು ಆಲಿಸಿ ಹೂವಯ್ಯ “ಏ ಸೋಮ, ಎಲ್ಲಾ ನಾಯೀನೂ ಕಟ್ಟೀಯೇನೊ ?” ಎಂದು ಕೇಳಿದನು.

“ಎಲ್ಲಾ ಕಟ್ಟಿದ್ದೇನೆ. ಆ ಮೋಟುಬಾಲದ ಹೊಸ ಮರಿ ಮಾತ್ರ ಕೈಗೇ ಸಿಕ್ಕಲಿಲ್ಲ. ಬೆರಸಿ ಬೆರಸಿ ಸಾಕಾಗಿ ಹೋಯ್ತಲ್ಲಾ ನನಗೆ.”

ಹೂವಯ್ಯ ಸೋಮನ ಪ್ರತ್ಯುತ್ತರಕ್ಕೆ ಒಂದಿನಿತೂ ಗಮನ ಕೊಡದೆ ತಾಯಿಯೊಡನೆ ಮಾತಾಡತೊಡಗಿದನು. ಅವನು ಕೇಳಿದ್ದ ಪ್ರಶ್ನೆ ಕೂಡ ಜಾಗ್ರಚ್ಚಿತ್ತದ್ದಾಗಿತ್ತೊ ಇಲ್ಲವೊ ಹೇಳಲು ಸಾಧ್ಯವಿಲ್ಲ. ತಾಯಿಯೂ ಮಗನೂ ಗಾಢವಾದ ಮಾತುಕತೆಗಳಲ್ಲಿ ತೊಡಗಿದ್ದರು. ಅವರ ಸಂಭಾಷಣೆಯ ವಿಷಯ ಕಾನೂರು  ಮುತ್ತಳ್ಳಿಗಳನ್ನು ಕುರಿತದ್ದಾಗಿತ್ತು.

ಮದುವೆಗೆ ‘ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ’ಗಳನ್ನು ಕಳುಹಿಸುವುದರ ಜೊತೆಗೆ ಸಮೀಪದ ಬಂಧುಗಳನ್ನು ಮನೆಯವರೇ ಸ್ವತಃ ಹೋಗಿ ಕೈ ಜೋಡಿಸಿ ನಿಂತು ಕರೆದು ಬರುವುದು ಪದ್ಧತಿ. ಮುತ್ತಳ್ಳಿಯಿಂದಲೇನೊ ಆ ಕರೆ ಬಂದಿತ್ತು. ಆದರೆ ಕಾನೂರಿನಿಂದ ಲಗ್ನಪತ್ರಿಕೆಯೊಂದಲ್ಲದೆ ‘ಕರೆ’ ಬಂದಿರಲಿಲ್ಲ. ಆದ್ದರಿಂದ ನಾಗಮ್ಮನವರಿಗೆ ಬಹಳ ಅಸಮಾಧಾನವೂ ದುಃಖವೂ ಆಗಿತ್ತು. ತಮ್ಮ ಸ್ವಂತ ಮಗಳಂತಿದ್ದ ಪುಟ್ಟಮ್ಮನ ಮದುವೆಗೆ ‘ಕರೆ’ ಬರಲಿಲ್ಲವಲ್ಲಾ ಎಂದು ಕಣ್ಣೀರು ಹಾಕಿದರು.

ಹೂವಯ್ಯ ತಾಯಿಯನ್ನು ಸಮಾಧಾನಪಡಿಸಲೆಂದು “ನಿಮಗೆಲ್ಲ ಈ ಹಳೇಕಂದಾಚಾರ ಎಂದರೆ ಪ್ರಾಣ ! ಲಗ್ನಪತ್ರಿಕೆ ಕಳುಹಿಸಿದಮೇಲೆ ‘ಕರೆ’ ಏಕೆ ?” ಎಂದನು.

“ಬಿಳೀ ಕಾಗದದಮೇಲೆ ಕರೀ ಗೀಟು ಗೀಚಿ ಕೊಟ್ಟು ಬಿಟ್ಟರೆ ‘ಕರೆ’ ಬಂದ ಹಾಂಗಾಯ್ತೇನು ? ನಿನ್ನಂಥಾ ಬರಾವು ಬಂದವರಿಗೆ ಅದೇ ಸಾಕಾಗಬೈದು. ನನ್ನಂಥಾ ಬರಾವು ಸರಾವು ಇಲ್ದವಳಿಗೆ ?”

“ಕರೆ’ ಬಂದಿದ್ದರೂ ನೀನೇನು ಹೋಗುವ ಹಾಗಿತ್ತೇನು ?”

“ಹೋಗ್ತಿರಲ್ಲಿಲ್ಲ ! ಆದ್ರೂ…..”

“ಹೋ ! ದಿಬ್ಬಣ ಬಂತು ಅಂತಾ ಕಾಣ್ತಾದೆ” ಎಂದು ಹೇಳಿದ ಸೋಮ ತನ್ನ ಉದ್ದವನ್ನೆಲ್ಲ ನಿಮಿರಿನಿಂತು ಕಿವಿಗೊಟ್ಟು ಆಲಿಸತೊಡಗಿದನು.

ಪುಟ್ಟಣ್ಣ ದೊಡ್ಡ ಬುಟ್ಟಿಯಲ್ಲಿದ್ದ ಲೋಟಗಳನ್ನು ಅನುಗೊಳಿಸಲಾರಂಭಿಸಿದನು.

ದೂರದ ಅರಣ್ಯಗಳ ಮಧ್ಯೆ ವಾಲಗ, ಕೊಂಬು, ತಂಬಟೆ ಮೊದಲಾದ ವಾದ್ಯಗಳ ಸದ್ದೂ ಗರ್ನಾಲು, ಕದಿನಿ ಮೊದಲಾದ ‘ಮದ್ದು ಗುಂಡು’ಗಳ ಸದ್ದೂ ಕೇಳಿಬಂದಿತು. ನಾಗಮ್ಮ ಹೂವಯ್ಯರೂ ಎದ್ದುನಿಂತು ದಿಬ್ಬಣದ ಸದ್ದು ಕೇಳಿಬರುತ್ತಿದ್ದ ದಿಕ್ಕಿಗೆ ತಿರುಗಿ ನಿಂತು ನೋಡತೊಡಗಿದರು. ಮಲೆನಾಡಿನ ಹಸುರು ಮಲೆಗಳು ಬಿಸಿಲಿನಲ್ಲಿ ಮೆರೆಯುತ್ತಿದ್ದುವು.

‘ಕರೆ’ ಬಂದಿದ್ದರೂ ನೀನೇನು ಹೋಗುವ ಹಾಗಿತ್ತೇನು ” ಎಂದು ಹೂವಯ್ಯ ನಾಗಮ್ಮನವರಿಗೆ ಕೇಳಿದ ಪ್ರಶ್ನೆಯಲ್ಲಿ ಅನೇಕ ಪ್ರಸಂಗಗಳು ಅಡಗಿದ್ದುವು. ಹೂವಯ್ಯ ಕಾನೂರು ಮನೆಯನ್ನು ಬಿಟ್ಟು ಬಂದಿದ್ದರೂ ಅವನ ಪಾಲಿಗೆ ಬಂದಿದ್ದ ಗೃಹಭಾಗ ಅವನ ವಶದಲ್ಲಿಯೇ ಇದ್ದಿತಷ್ಟೆ ! ಆ ಗೃಹಭಾಗವನ್ನು ಮದುವೆಯ ಕಾಲದಲ್ಲಿ ಉಪಯೋಗಿಸಿಕೊಳ್ಳಬಹುದೆಂದೂ, ಬೇಕಾದರೆ ಬೀಗದಲ್ಲಿದ್ದ ಕೊಟಡಿಗಳನ್ನು ಬಿಟ್ಟುಕೊಡುತ್ತೇನೆಂದೂ ಹೂವಯ್ಯ ಹೇಳಿಕಳುಹಿಸಿದ್ದನು.

ಚಂದ್ರಯ್ಯಗೌಡರು, ಯಾವ ತರ್ಕದ ಸಹಾಯದಿಂದಲೊ, ಹೂವಯ್ಯ ತನಗೆ ಅವಮಾನ ಮಾಡುವುದಕ್ಕಾಗಿಯೆ ಹಾಗೆ ಹೇಳಿಕಳುಹಿಸಿದ್ದಾನೆ ಎಂದು ವಾದಿಸಿ, “ಅವನಿಗೆ ಹೇಳು : ಅವನ ನೆಲದಲ್ಲಿ ಒಂದಂಗುಲಾನೂ ನಮಗೆ ಬ್ಯಾಡ. ನಾನು ಚಪ್ಪರ ಹಾಕಿಸ್ತೀನಿ ! ಏನೋ ದೇವರು ಕೊಟ್ಟಿದ್ದು ನಾಲ್ಕು ಆಳು ಕಾಳು ಇನ್ನೂ ಇದೆ ! ಎಲ್ಲಾ ಹೋಗಿ ಗರೀಬರಾದಮೇಲೆ ಬೇಕಾದಾಗ ಕೇಳ್ತೀನಿ. ಆವಾಗ ಕೊಡಲಿ !” ಎಂದು ಪ್ರತಿ ಹೇಳಿಕಳುಹಿಸಿದ್ದರು.

ಅದುವರೆಗೆ ನಾಗಮ್ಮನವರು ಪುಟ್ಟಮ್ಮನ ಮನಸ್‌ಪ್ತಿಗಾಗಿಯಾದರೂ ಅವಳ ಮದುವೆಗೆ ಹೋಗಬೇಕಾಗುತ್ತದೆ ಎಂದು ಮಗನೊಡನೆ ಹೇಳುತ್ತಿದ್ದರು. ನಿಜವಾಗಿಯೂ ಅವರಿಗೂ ಪುಟ್ಟಮ್ಮನ ಮೇಲೆ ವಾಸುವಿನ ಮೇಲೆ ಇದ್ದಷ್ಟೇ ಮಮತೆಯಿತ್ತು. ಆ ಮಮತೆ ಅವರನ್ನು ಮದುವೆಗೆ ಎಳೆಯುತ್ತಿತ್ತು. ಆದರೆ ಚಂದ್ರಯ್ಯಗೌಡರ ಕಟುವಾದ ಪ್ರತ್ಯುತ್ತರ ಬಂದಮೇಲೆ, ನಾಗಮ್ಮನವರ ಮನಸ್ಸು ಬದಲಾಯಿಸಿ ಮದುವೆಗೆ ಹೋಗಬಾರದೆಂದೇ ನಿರ್ಣಯಿಸಿದರು. ಆದರೆ ಒಂದು ವಾರದ ಹಿಂದೆ ಚಂದ್ರಯ್ಯಗೌಡರೂ ರಾಮಯ್ಯನೂ ಆಳುಗಳಿಗೂ ಮನೆಯವರಿಗೂ ಮದುವೆಗೆ ಬೇಕಾಗಿದ್ದ ಬಟ್ಟೆಬರೆ ಸಾಮಾನು ಸರಕುಗಳನ್ನು ತರಲೆಂದು ಹೊಸ ಗಾಡಿ ಎತ್ತುಗಳನ್ನು ಸಿಂಗರಿಸಿ ಕಟ್ಟಿಕೊಂಡು ತೀರ್ಥಹಳ್ಳಿಯ ಪೇಟೆಗೆ ಹೋಗಿದ್ದಾಗ, ಆ ದಿನ ಸಾಯಂಕಾಲ ಪುಟ್ಟಮ್ಮ, ವಾಸೂವನ್ನು ಜೊತೆಗೆ ಕರೆದುಕೊಂಡು, ಸೇರೆಗಾರರು ಮೊದಲಾದ ಯಾರಿಗೂ ತಿಳಿಯದಂತೆ, ಗುಟ್ಟಾಗಿ ಕೆಳಕಾನೂರಿಗೆ ಬಂದಳು. ಹೂವಯ್ಯ, ಪುಟ್ಟಣ್ಣ, ಸೋಮ ಮೂವರೂ ಜೇನು ಹುಡುಕಲು ಕಾನಿಗೆ ಹೋಗಿದುದರಿಂದ, ಮನೆಯಲ್ಲಿ ನಾಗಮ್ಮನವರೊಡನೆ ಇದ್ದರು. ಬೈರನ ಹೆಂಡತಿ ಸೇಸಿ ಹೊರಗಡೆ ಹಟ್ಟಿ ಬಾಚುವ ಕೆಲಸದಲ್ಲಿದ್ದಳು ಪುಟ್ಟಮ್ಮ ವಾಸು ಇಬ್ಬರೇ ಬರುತ್ತಿದ್ದುದನ್ನು ಕಂಡು ಮಹದಾಶ್ವರ್ಯದಿಂದ “ಏನ್ರಮ್ಮಾ, ಏನ್ರಯ್ಯಾ, ಅಪ್ರೂಪ ಬಂದುಬಿಟ್ರಿ ?” ಎಂದು ಕರಿಯ ಮುಖದಲ್ಲಿ ಬಿಳಿಯ ಹಲ್ಲಿನ ಸಾಲುಗಳನ್ನು ಪ್ರದರ್ಶಿಸಿದಳು.

ಪುಟ್ಟಮ್ಮ ವಾಸು ಇವರನ್ನು ಕಂಡೊಡನೆ ನಾಗಮ್ಮನವರಿಗೆ ಮಾತು ತೊದಲುವಷ್ಟು ಆನಂದವಾಯಿತು. ನಾಗಮ್ಮನವರು ಬೇಗಬೇಗನೆ ರೊಟ್ಟಿ, ಮೊಟ್ಟೆ ಪಲ್ಯಗಳನ್ನು ಮಾಡತೊಡಗಿದರರು. ಪುಟ್ಟಮ್ಮ “ಬ್ಯಾಡ, ದೊಡ್ಡಮ್ಮ, ಹೊತ್ತಾಗ್ತದೆ ! ಅಪ್ಪಯ್ಯಗೆ ಗೊತ್ತಾದ್ರೆ ನನ್ನ ಚಟಾ ತಗ್ದುಬಿಡ್ತಾರೆ !” ಎಂದು ಅಂಗಲಾಚಿಕೊಂಡರೂ ಬಿಡಲಿಲ್ಲ. ಕಡೆಗೆ, ದೊಡ್ಡಮ್ಮ ಬೇಡವೆಂದರೂ ಕೇಳದೆ, ಪುಟ್ಟಮ್ಮನೂ ಅವರಿಗೆ ನೆರವಾಗಿ ರೊಟ್ಟಿ ಸುಡುವ ಕಾರ್ಯದಲ್ಲಿ ಭಾಗವಹಿಸಿದಳು. ವಾಸುವೂ ಇದ್ದಕಿದ್ದಹಾಗೆ ಬಲ್ಲವನಂತೆ ಗಂಭೀರವಾಗಿ ಅವರಿಬ್ಬರಿಗೂ ಸಹಾಯವಾದನು.

ಪುಟ್ಟಮ್ಮ ದೊಡ್ಡಮ್ಮನನ್ನು ತನ್ನ ಮದುವೆಗೆ ಬರುವಂತೆ ಕರೆದಳು. ನಾಗಮ್ಮನವರು ಸ್ತ್ರೀಸಹಜವಾದ ಹರಟೆಯೊಲ್ಮೆಯಿಂದ ತಮಗೂ ಚಂದ್ರಯ್ಯಗೌಡರಿಗೂ ನಡೆದಿದ್ದ ವ್ಯವಹಾರಗಳನ್ನೆಲ್ಲ ಹೇಳಿ “ನಾನು ಮನೆಗೆ ಬರಾದಿಲ್ಲವ್ವಾ ! ನಿನ್ನ ದಿಬ್ಬಣ ಗಂಡನ ಮನೆಗೆ ಹೋಗುವಾಗ ದಾರೀಲೇ ನೋಡಿ ಸಂತೋಸ ಪಡ್ತೀನಿ ! ದಿಬ್ಬಣ ಹೋಗಾದು ಬರಾದು ನಮ್ಮ ಗದ್ದೆಮೂಲೆ ಗಾಡಿ ರಸ್ತೇಲಸ್ಟೆ ?” ಎಂದು ಹೇಳುತ್ತ ಕಣ್ಣುಜ್ಜಿಕೊಂಡರು.

ಇನ್ನೂ ಚೆನ್ನಾಗಿ ಕಪ್ಪಾಗಿರಲಿಲ್ಲ. ನಾಗಮ್ಮನವರು ವಾಸುವಿನ ಜೇಬಿಗೆ ತಿಂಡಿಗಳನ್ನು ತುರುಕಿ ತುರುಕಿ, ಅವನನ್ನೂ ಪುಟ್ಟಮ್ಮನನ್ನೂ ಕಳುಹಿಸಲೆಂದು ಹೊರ ಅಂಗಳಕ್ಕೆ ಬಂದು ನಿಂತಿದ್ದರು, ಪುಟ್ಟಮ್ಮ ಇದ್ದಕಿದ್ದ ಹಾಗೆ ದೊಡ್ಡಮ್ಮನ ಸೆರಗು ಜಗ್ಗಿಸಿ ಎಳೆದು “ದೊಡ್ಡಮ್ಮಾ, ನೋಡಲ್ಲಿ ಸೇರೆಗಾರರು ಬರ್ತಿದಾರೆ !…. ಏ ವಾಸೂ, ಒಳಗೆ ಬಾರೊ !” ಎಂದು ಅವನನ್ನೂ ಎಳೆದುಕೊಂಡು ಒಳನುಗ್ಗಿದಳು.

ಸೇರೆಗಾರರ ರಂಗಪ್ಪಸೆಟ್ಟರು ರಾಮಯ್ಯನ ಆಜ್ಞೆಯಂತೆ ಅವನು ಹಿಂದೆ ಹೂವಯ್ಯನ ಹತ್ತಿರ ಬಿಟ್ಟಿದ್ದ ಪಟಗಳನ್ನೂ ಪುಸ್ತಕಗಳನ್ನೂ ಹೋರಿಸಿ ಕೊಂಡು ಹೋಗಲು ಆಳುಗಳೊಡನೆ ಬಂದಿದರು. ಆದರೆ ನಾಗಮ್ಮನವರು ಹೂವಯ್ಯ ಮನೆಯಲ್ಲಿಲ್ಲವೆಂದು ಮರುದಿನ ಬರುವಂತೆ ಹೇಳಿ ಕಳುಹಿಸಿದರು.

ಸೇರೆಗಾರರು ಆಳುಗಳೊಡನೆ ಹೋದ ತರುವಾಯ. ಪುಟ್ಟಮ್ಮ ವಾಸು ಇಬ್ಬರೂ ಸೇಸಿಯೊಡನೆ ಕತ್ತಲೆಯಲ್ಲಿ ನಿಃಶಬ್ದವಾಗಿ ಕಾನೂರಿಗೆ ಕದ್ದು ನಡೆದರು.

ಈ ಸಂಗತಿಯನ್ನೆಲ್ಲ ನಾಗಮ್ಮನವರು ಮಗನಿಗೆ ಹೇಳಿ, ಕೆಳಕಾನೂರಿನ ಗದ್ದೆ ಮೂಲೆಯ ಗಾಡಿರಸ್ತೆಯಲ್ಲಿ ದಿಬ್ಬಣದ ಸತ್ಕಾರಕ್ಕೆ ಚಪ್ಪರ ಹಾಕಿಸುವಂತೆ ಮಾಡಿದರು. ಆ ಚಪ್ಪರದ ಮುಖ್ಯವಾದ ಉದ್ದೇಶ, ಹೊರಗಿನವರಿಗೆ ಹಾಗೆ ಕಂಡರೂ, ದಿಬ್ಬಣದ ಸತ್ಕಾರವಾಗಿರಲಿಲ್ಲ ; ಕಾನೂರಿನಿಂದ ಗಂಡನೊಡನೆ ದಂಡಿಗೆ ಏರಿ ಮುತ್ತಳ್ಳಿಗೆ ಹೋಗುವಾಗ ಮದುವಣಗಿತ್ತಿ ಪುಟ್ಟಮ್ಮನನ್ನು ನಾಗಮ್ಮನವರು ಕಂಡು ಹರಸಿ ಸಂತೋಷಪಡಿಸುವ ಸಲುವಾಗಿತ್ತು.

ನೋಡುತ್ತ ನಿಂತಿದ್ದ ಹಾಗೆಯೆ ದಿಬ್ಬಣದ ಸದ್ದು ಹತ್ತಿರ ಹತ್ತಿರವಾಯಿತು. ದಂಡಿಗೆ ಹೊತ್ತು ಬರುತ್ತಿದ್ದ ಬೋಯಿಗಳ ಬಾಯಿಸದ್ದೂ ಕೇಳಿಸಿತು. ಕಡೆಗೆ ದಿಬ್ಬಣದ ಮೆರವಣಿಗೆಯೂ ಗೋಚರಿಸಿತು.

ದಿಬ್ಬಣದ ಚಪ್ಪರವಿದ್ದಲ್ಲಿ ವಿಶ್ರಾಂತಿಗಾಗಿ ನಿಂತಿತು. ವಾದ್ಯದ ಶಬ್ದಗಳೂ ನಿಂತು ಮನುಷ್ಯರ ಮಾತಿನ ಸದ್ದು ತುಮುಲವಾಗಿ ಕೇಳಿಬಂದಿತು. ನಮಸ್ಕಾರಗಳೂ, ‘ಬಂದ್ರೆ’ಗಳೂ, ಯೋಗಕ್ಷೇಮ ವಿಚಾರಗಳೂ ಪರಸ್ಪರವಾಗಿ ಸಾಗಿದುವು. ಲಲನೆಯರ ಒಡವೆಗಳ ಉಲಿಯೂ, ಅದಕ್ಕೆ ಸಮಶ್ರುತಿಯಾಗಿದ್ದ ಅವರ ಕೊರಳದನಿಯೂ, ಅವರು ಉಟ್ಟುಕೊಂಡಿದ್ದ ಜಡ್ಡುಸೀರೆ, ಕಾಗಿನ ಸೀರೆ, ಜರತಾರಿಯ ಸೀರೆ, ತರ ತರದ ವಲ್ಲಿಗಳು, ಕುಪ್ಪಸಗಳು, ರವಕೆಗಳು ಮೊದಲಾದವುಗಳಿಂದ ಉಗುತ್ತಿದ್ದ ಹೊಸ ಬಟ್ಟೆಯ ವಾಸನೆಯೂ, ಅಚ್ಚಕರಿಯ ಬಣ್ಣದಿಂದ ಹಿಡಿದು ನಸುಗೆಂಪು ಬಣ್ಣದವರೆಗೂ ಇದ್ದ ಅವರ ವಿವಿಧಕೃತಿಯ ಮುಖ ಸಮೂಹವೂ ಸೋಮನ ಕಣ್ಣಿಗೆ ನಾಟಕೀಯವಾಗಿ ತೋರಿದುವು. ಅವನು ಯಾರೊಬ್ಬರನ್ನು ನೋಡುತ್ತಿರಲಿಲ್ಲ ; ಒಟ್ಟಿನ ಸಮೂಹವನ್ನೇ ನೋಡುತ್ತಿದ್ದನು. ಆದರೆ ಅವನ ಮನಸ್ಸಿಗೆ ಆ ಗುಂಪಿನಲ್ಲಿದ್ದ ಪ್ರತಿಯೊಬ್ಬರೂ ತನ್ನನ್ನೇ ನೋಡಿ ಮಾತಾಡಿಕೊಳ್ಳುತ್ತಿದ್ದಾರೆಂದು ತೋರುತ್ತಿತ್ತು. ಏಕೆಂದರೆ, ಅವನು ಹಿಂದೆದೂ ಧರಿಸದೆ ಇದ್ದ ವಸನಗಳನ್ನು ಎಂದಿಗಿಂತಲೂ ಹೆಚ್ಚಾದ ನಾಜೋಕಿನಿಂದ ಉಟ್ಟು ಕೊಂಡಿದ್ದನು. ಕೆಲವರು ಅವನನ್ನು ‘ಸೆಟ್ಟರೆ’ ಎಂದು ಬಹುವಚನದಲ್ಲಿ ಮಾತಾಡಿಸಿದಾಗ ಸೋಮ ಜನ್ಮಸಾರ್ಥಕವಾದಂತೆ ಹಿಗ್ಗಿದನು.

ಎಲ್ಲರೂ ನರಳಿನಲ್ಲಿ ಕುಳಿತುಕೊಂಡ ಮೇಲೆ ಪಾನಕಾದಿಗಳ ವಿನಿಯೋಗವಾಯಿತು. ಹೂವಯ್ಯ ಚಿನ್ನಯ್ಯನೊಡನೆಯೂ ಶ್ಯಾಮಯ್ಯಗೌಡ ರೊಡನೆಯೂ ಮಾತಾಡಿದನು. ಆದರೆ ಸೀತೆಯನ್ನು ಕುರಿತು ಅವರಾಗಲಿ ಅವನಾಗಲಿ ತುಟಿ ಪಿಟಿಕ್ಕೆನ್ನಲಿಲ್ಲ. ನಾಗಮ್ಮನವರೂ ಗೌರಮ್ಮನವರೊಡನೆ ಗೃಹಕೃತ್ಯದ ವಿಚಾರಗಳನ್ನು ಕುರಿತು ಮಾತಾಡುತ್ತಿದ್ದರು. ಮೊದಲೇ ಮಾತಾಡಿಕೊಂಡಿದ್ದಾರೆಯೋ ಎಂಬಂತೆ ಯಾರೂ ಮದುವೆಯ ವಿಚಾರವಾಗಿ ಪ್ರಸ್ತಾಪಿಸಲಿಲ್ಲ. ಕೆಳಕಾನೂರಿಗೂ ಕಾನೂರಿಗೂ ಇದ್ದ ಸಂಬಂಧವನ್ನು ಸ್ವಲ್ಪ ಹೆಚ್ಚು ಕಡಿಮೆ ಅಲ್ಲಿದ್ದವರೆಲ್ಲರೂ ಅರಿತಿದ್ದುದರಿಂದ, ಯಾರೊಬ್ಬರಾಗಲಿ, ಮರೆತು ಕೂಡ, ಆ ಗಾಯದ ಹುಣ್ಣಿನ ಮೇಲೆ ಕೈಯಿಡಲಿಲ್ಲ. ಚಿನ್ನಯ್ಯನಂತೂ ಹೂವಯ್ಯನೊಡನೆ ಮುಖದ ಕಡೆ ನೋಡಿ ಮಾತಾಡುತ್ತಿದಾಗ, ಅವನ ಹಣೆಯ ಮೇಲಿದ್ದ ನೀಲಿಯ ನರವನ್ನಲ್ಲದೆ ಕಣ್ಣುಗಳನ್ನು ನೋಡುತ್ತಿರಲಿಲ್ಲ. ಹೂವಯ್ಯನೆಲ್ಲಿ ಸೀತೆಯ ಯೋಗಕ್ಷೇಮವನ್ನು ಕೇಳಿಬಿಡುತ್ತಾನೆಯೋ ಎಂಬ ಹೆದರಿಕೆ ಅವನೆದೆಯಲ್ಲಿ ತುಡಿಯುತ್ತಿತ್ತು. ಏಕೆಂದರೆ, ಸೀತೆಯ ಯೋಗಕ್ಷೇಮ ಚಿನ್ನಯ್ಯ ಹೂವಯ್ಯನ ಕಣ್ಣು ನೋಡಿ ಹೇಳುವಷ್ಟು ಉತ್ತಮವಾಗಿರಲಿಲ್ಲ.

ಶ್ಯಾಮಯ್ಯಗೌಡರು, ಆ ಸ್ಥಳವನ್ನು ಬೇಗನೆ ಬಿಟ್ಟರೆ ಸಾಕು ಎನ್ನುವಂತೆ, ದಿಬ್ಬಣದವರಿಗೆ ಪಾನಕಾದಿಗಳನ್ನು ಬೇಗಬೇಗನೆ ಪೂರೈಸುವಂತೆ ‘ತಾಕೀತು’ ಮಾಡುತ್ತಿದ್ದರು.

ಸ್ವಲ್ಪ ಹೊತ್ತಿನೊಳಗಾಗಿ ಮತ್ತೆ ಕದಿನಿ ಹಾರಿದುವು ; ವಾದ್ಯ ರವಗೈದುವು ; ಬೋವಿಗಳು ಮದುಮಗನಿದ್ದ ದಂಡಿಗೆಯನ್ನು ಹೊತ್ತುಕೊಂಡು ಪಲ್ಲವಿಯ ಘೋಷದೊಡನೆ ಮುಂದೆ ಸಾಗಿದರು ; ‘ಗರತಿಗಿರಾಸ್ತ’ರೂ ಎದ್ದು ನಡೆದರು. ದಿಬ್ಬಣ ಕಾನೂರಿಗೆ ಸಂಭ್ರಮದಿಂದ ಸಾಗಿತು. ನಾಗಮ್ಮ, ಪುಟ್ಟಣ್ಣ, ಸೋಮ – ಇವರುಗಳು ನೋಡುತ್ತಿದ್ದಂತೆ ದೃಶ್ಯ ಕಣ್ಮರೆಯಾಗಿ, ಘೋಷ ಮಾತ್ರ ಕೇಳಿಸುತ್ತಿತ್ತು. ಹೂವಯ್ಯ ಅತ್ತಕಡೆ ನೋಡುತ್ತಲೂ ಇರಲಿಲ್ಲ ; ಅವನ ಆ ವಾದ್ಯಘೋಷ ಕೇಳಿಸುತ್ತಲೂ ಇರಲಿಲ್ಲ. ಅವನ ಮನಸ್ಸಿನ ಕಣ್ಣಿನ ಹನಿಯಲ್ಲಿ ಸೀತೆಯ ದುಃಖಪೂರ್ಣವಾದ ಚಿತ್ರವೊಂದೇ ವಿಕಂಪಿಸುತ್ತಿತ್ತು.

“ಅತ್ತಿಗ್ದೆ ಹಿರಿಯಣ್ಣಗೌಡರ ಮಗಳು ರಂಗಮ್ಮನ್ನ ನೋಡೋನೋ ? ಹುಡುಗಿ ವೈನಾಗಿದ್ದಾಳೆ ! ಸ್ವಲ್ಪ ಬಾಯಿ ಉಗ್ಗಂತೆ. ಉಗ್ಗಾದ್ರೇನು ? ದುಂಡು ಮುಖ ; ಬಿಳಿ ಮೈ; ಕಣ್ಣು ಮೂಗು ಬಾಯಿ ಕಿವಿ ಎಲ್ಲಾ ನೆಟ್ಟಗಿಲ್ಲೇನು ?” ಎಂದು ನಾಗಮ್ಮನವರು ಹೂವಯ್ಯನಿಗೆ ಕೇಳಿಸಲಿ ಎಂದೇ ಪುಟ್ಟಣ್ಣನೊಡನೆ ಗಟ್ಟಿಯಾಗಿ ಹೇಳಿದರು.

ಇಂಗಿತವರಿಯುವುದರಲ್ಲಿ ಅಷ್ಟೇನೂ ಚತುರನಲ್ಲದ ಒರಟು ಪುಟ್ಟಣ್ಣ ಒಂದು ಸಾರಿ ನಾಗಮ್ಮನವರ ಕಡೆಗೂ, ಮತ್ತೊಂದು ಸಾರಿ ಸೋಮನ ಕಡೆಗೂ ತಿರುಗಿ ತಿರುಗಿ ಕೆಲಸಮಾಡುತ್ತಲೇ ಮಾತಾಡತೊಡಗಿದನು. “ಯಾರು ? ಮೂಗು ಸಿಂಡಾಗಿದೆಯಲ್ಲಾ ಅವರೇಯೇನು ? – ಏ ಸೋಮ, ಆ ಗಾಜಿನ ಲೋಟ ಇತ್ತ ಕೊಡೊ, ಅಮ್ಮಾ, ನಾಳೆ ಪಾನಕ ಇನ್ನೂ ಜಾಸ್ತಿ ಮಾಡ್ಬೇಕು ! ಇವತ್ತು ಮಾಡಿದ್ದು ಅಲ್ಲಿಂದಲ್ಲಿಗಾಯ್ತು ! ಆ ಚಾಪೆ ಹಾಂಗಿರ್ಲೋ ; ಮೊದಲು ಈ ಜಮಖಾನ ಎತ್ತು. ನೀನೆಲ್ಲಿ ಕನ್ನಡಾ ಜಿಲ್ಲೆ ಮಡ್ಡು ! ನಿನಗೆ ಹಾಳೆ ತೋಪೀನೇ ಸರಿ ! ಹಾಸನ ತೋಪಿಗೀಪಿ ನಿನಗೆ ಯಾಕೋ …..?”

ಮರುದಿನವೂ ಮಧ್ಯಾಹ್ನ ಎರಡು ಗಂಟೆಯಿಂದಲೂ ನಾಗಮ್ಮ ಮೊದಲಾದವರು ಹಿಂದಿನ ಇನಕ್ಕಿಂತಲೂ ಹೆಚ್ಚಾಗಿ ಸರಬರಾಯಿ ಒದಗಿಸಿ ಕೊಂಡು ಕಾನೂರಿನಿಂದ ಮುತ್ತಳ್ಳಿಗೆ ಹಿಂತಿರುಗುವ ಮರುದಿಬ್ಬಣವನ್ನೆ ಹಾರೈಸಿ, ಆ ಚಪ್ಪರದಡಿ ಕಾಯುತ್ತಾ ಎದುರು ನೋಡುತ್ತಿದ್ದರು. ನಾಗಮ್ಮನವರಿಗಂತೂ ಮದುಮಗಳಾಗಿ ಗಂಡನೊಡನೆ ದಂಡಿಗೆಯೇರಿ ಹೋಗುವ ಪುಟ್ಟಮ್ಮನನ್ನು ನೋಡುತ್ತೇನೆಂದು ಆನಂದ, ಉದ್ವೇಗ, ಕಾತರತೆ, ಅವರ ಮಾತುಕತೆಗಳಲ್ಲಿಯೇ ಅಲ್ಲದೆ ಚಲನೆಯಲ್ಲಯೂ ಒಂದು ಲಘುತ್ವ ತೋರುತ್ತಿತ್ತು.

ಸುಮಾರು ಮೂರು ಗಂಟೆಯ ಸಮಯದಲ್ಲಿ ಕದನಿ, ವಾಲಗ, ಕೊಂಬು, ತಂಬಟೆಗಳ ಸದ್ದು ಕೇಳಿಸಲು ಮರುದಿಬ್ಬಣ ಮನೆಯಿಂದ ಹೊರಟಿತೆಂದು ನಾಗಮ್ಮನವರು ಎದ್ದು ನಿಂತುಕೊಂಡು ಅತ್ತಕಡೆಗೇ ನೋಡತೊಡಗಿದರು. ಅವರ ಒಳಗಣ್ಣಿಗೆ ಸರ್ವಾಲಂಕಾರಭೂಷಿತೆಯಾಗಿ ಗಂಡೆನೆದುರು ದಂಡಿಗೆಯಲ್ಲಿ ತಲೆಬಾಗಿ, ಮುಡಿದ ಹೂವಿನ ಬಿಳಿಯ ಗುಚ್ಛವನ್ನು ಪ್ರದರ್ಶಿಸುತ್ತಾ, ನಾಚಿಗೆಯಿಂದ ಕೆಂಪೇರಿ ಕಂಬನಿ ಸೂಸುತ್ತ ಕುಳಿತಿದ್ದ ಪುಟ್ಟಮ್ಮನ ಚಿತ್ರ ರಂಜಿಸುತ್ತಿತ್ತೆಂದು ತೋರುತ್ತದೆ.

ಮೇಲುಗಡೆ ಹೊಂಗೆಯ ಮರದ ತರಗೆಲೆಯೊಂದು, ಮರ್ಮರ ನಾದದಿಂದ ಬೀಸುತ್ತಿದ್ದ ಗಾಳಿಯಲ್ಲಿ, ಕುಣಿಕುಣಿದು ತೇಲಿ ಕೆಳಗಿಳಿದು ಬಂದು ಅವರ ನೆತ್ತಿಯ ನರೆತ ಕೂದಲುಗಳ ಪೊದೆಯಲ್ಲಿ ಸಿಕ್ಕಿಕೊಂಡಿತು.

ಬಹಳ ಹೊತ್ತು ಕಾದರು. ಉಕ್ಕಿಬಂದಂತೆ ತೋರಿದ ದಿಬ್ಬಣದ ಸದ್ದು ಮತ್ತೆ ಇಳಿದುಹೋಗಿ ರವರಹಿತವಾಯಿತು. ನಾಗಮ್ಮನವರಿಗೆ ಉದ್ವೇಗ ಹೆಚ್ಚಿತು. ಉಳಿದವರಿಗೂ ನಾಲ್ಕಾರು ಫರ್ಲಾಂಗುಗಳ  ಆಚೆಯಿಂದ ಹೊರಟ ದಿಬ್ಬಣ ಒಂದು ಗಂಟೆ ಕಳೆದರೂ ಬಾರದಿರಲು ಕಾರಣವೇನೆಂದು ಬೆಕ್ಕಸವಾಯಿತು. ಒಬ್ಬೊಬ್ಬರ ಮನದಲ್ಲಿ ಒಂದೊಂದು ತೆರನಾದ ಭೀತಿ ಮುಡಿತು. ಆದರೆ ಯಾರೂ ತಮ್ಮ ಮನದ ಅಮಂಗಲವನ್ನು ಇತರರಿಗೆ ಹೇಳಲಿಲ್ಲ. ನಾಗಮ್ಮನವರು ಪುಟ್ಟಮ್ಮಗೆ ಏನೋ ಜಕ್ಕಿಣಿ ಗಿಕ್ಕಿಣಿ ಮೈಮೇಲೆ ಬಂದು ಕೇಡಾಗಿರಬೇಕೆಂದು ಹೆದರಿದರು. ಹೂವಯ್ಯ ‘ಮದ್ದುಗುಂಡು’ ಸುಡುವಾಗ ಯಾರಿಗಾದರೂ ಏನಾದರೂ ಅನಾಹುತವಾಯಿತೇ ಎಂದು ಶಂಕಿಸಿದನು. ಸೋಮ ಊಟ ತಡವಾಯಿತೋ ಏನೋ ಎಂಬ ಅಪಾಯವನ್ನು ಊಹಿಸಿ ಒಬ್ಬರಿಗೂ ಹೇಳದೆ ಸುಮ್ಮನಾದನು. ಪುಟ್ಟಮ್ಮನೂ ಊಹಿಸಿ ಊಹಿಸಿ, “ನಾ ನೋಡಿಕೊಂಡೇ ಬಂದುಬಿಡ್ತೇನೆ !” ಎಂದು ಕಾನೂರಿನ ಕಡೆಗೆ ವೇಗವಾಗಿ ಸಾಗಿದನು.

ಅರ್ಧಗಂಟೆಯ ಮೇಲೆ ವ್ಯಸನಭಾರದಿಂದ ಕುಗ್ಗಿ ಕುಸಿದು ನಿಧನವಾಗಿ ಹಿಂತಿರುಗಿ ಬಂದ ಪುಟ್ಟಣ್ಣ “ದಿಬ್ಬಣ ಒಳದಾರೀಲಿ ಹೋಯ್ತಂತೆ !” ಎಂದು ತಿಳಿಸಿದನು. ನಾಗಮ್ಮನವರು ಬಸಬಸನೆ ಅಳತೊಡಗಿದರು.

ಚಂದ್ರಯ್ಯಗೌಡರು ದಾರಿಯಲ್ಲಿ ಹೂವಯ್ಯ ಹಾಕಿಸಿದ್ದ ಚಪ್ಪರದ ಮತ್ತು ಮಾಡಿದ್ದ ಇತರ ಸನ್ನಾಹಗಳ ವಿಷಯಗಳನ್ನೆಲ್ಲ ಕೇಳಿ, ಯಾವುದೋ ಒಂದು ಅನಿರ್ವಚನೀಯವಾದ ಈರ್ಷ್ಯೆಯಿಂದ, ಹೂವಯ್ಯ ನಾಗಮ್ಮನವರಿಗೆ ಆಶಾಭಂಗವುಂಟುಮಾಡುವ ಕ್ರೂರಸಂತೋಷಕ್ಕಾಗಿ, ದಿಬ್ಬಣವನ್ನು ಒಳದಾರಿಯಿಂದ ಸಾಗಿಸಿಕೊಂಡು ಮುತ್ತಳ್ಳಿಗೆ ಹೋಗುವಂತೆ ಬೆಸಸಿದ್ದರು. ಅದನ್ನು ತಿಳಿದೊಡನೆಯೆ ತಬ್ಬಲಿ ಪುಟ್ಟಮ್ಮ ಬಿಕ್ಕಿ ಬಿಕ್ಕಿ ಅತ್ತಳು. ಆದರೆ ಮದುಮಗಳು ತಾಯಿಯ ಮನೆಯಿಂದ ಹೊರಡುವಾಗ ಕಣ್ಣೀರು ಹಾಕುವುದು ನಾಡಿನ ಪದ್ಧತಿಯಾಗಿದ್ದರಿಂದ ಯಾರೂ ಅದನ್ನು ಗಮನಿಸಲಿಲ್ಲ.

ನಾಗಮ್ಮನವರು ಅಳುತ್ತಲೇ ತಮ್ಮ ಹುಲ್ಲು ಮನೆಗೆ ಹಿಂತಿರುಗಿದರು. ಹೂವಯ್ಯ ಹಂಡೆಗಳಲ್ಲಿಯೂ ಕೌಳಿಗೆಗಳಲ್ಲಿಯೂ ತುಂಬಿದ್ದ ಪಾನಕವನ್ನೆಲ್ಲಾ ಅಲ್ಲಿಯೇ ಬೀದಿಯ ಮೇಲೆ ಚೆಲ್ಲಿಸಿ, ಸಾಮಾನುಗಳನ್ನೆಲ್ಲ ಮನೆಗೆ ಹೊರಿಸಿಕೊಂಡು ಹೋದನು. ಅನೇಕ ದಿನಗಳವರೆಗೆ ಹಾದಿಯಲ್ಲಿ ಹೋಗುವವರು, ಆ ಚಪ್ಪರದಡಿ ರಾಶಿರಾಶಿಯಾಗಿ, ಹಿಂಡು ಹಿಂಡಾಗಿ ನೆರೆದಿರುತ್ತಿದ್ದ ಗೊದ್ದ, ಕಟ್ಟಿರುವೆ, ಕೆಂಜಿರುವೆ, ಗಾಳಿಯಿರುವೆ, ಚಗಳಿಯಿರುವೆ, ನೊಣ, ಹೊನ್ನೊಣ, ಜೇನ್ನೊಣಗಳನ್ನು ಕಂಡು ಆಶ್ಚರ್ಯದಿಂದ, ಕ್ಷಣಮಾತ್ರವಾದರೂ, ನಿಂತು ನೋಡದೆ ಮುಂದುವರಿಯುತ್ತಿರಲಿಲ್ಲ.