ಮರುದಿನ ಬೆಳಿಗ್ಗೆ ಮುಂಜಾನೆ ಚಂದ್ರಯ್ಯಗೌಡರು ಮುತ್ತಳ್ಳಿಗೆ ಕಾಲು ನಡಿಗೆಯಲ್ಲಿಯೆ ಹೊರಟರು. ಅವರ ಮನಸ್ಸು ವಿಕ್ಷುಬ್ದವಾಗಿತ್ತು. ಹಿಂದಿನ ರಾತ್ರಿ ಪುಟ್ಟಣ್ಣನು ನಡೆದ ಸಂಗತಿಯನ್ನೆಲ್ಲ ಹೇಳಲು. ಅವರು ನಿಂಗನನ್ನು ಹೊಡೆಯುವುದಕ್ಕಿಂತಲೂ ಹೆಚ್ಚಾಗಿ ಬೈದಿದ್ದರು. ಅಲ್ಲದೆ ನಾಗಮ್ಮನವರ ಶೋಕಪ್ರೇರಿತವಾದ ನಿಂದೆಯನ್ನು ಕೇಳಿ ಅವರ ಮನಸ್ಸು ಮುರಿದುಹೋಗಿತ್ತು. ದೇವರ ಕಲ್ಲಿಗೆ ತಲೆಚಚ್ಚಿಕೊಂಡು, ನಾಗಮ್ಮನವರ ಹಣೆಯಿಂದ ನೆತ್ತರು. ಸೋರಿ, ಎಚ್ಚರ ತಪ್ಪಿ, ಮನೆಯವರಿಗೆಲ್ಲ ಗಾಬರಿಯಾಗಿತ್ತು. ತಾವು ಮನೆಯ ಯಜಮಾನರಾಗಿದ್ದುದರಿಂದಲೂ ನಾಗಮ್ಮನವರ  ಮನಸ್ತೃಪ್ತಿಯ ಸಲುವಾಗಿಯೂ ನೊಂದವನನ್ನು ವಿಚಾರಿಸಬೇಕೆಂಬ ಧರ್ಮಬುದ್ದಿಯಿಂದಲೂ ಚಂದ್ರಯ್ಯಗೌಡರು ಹೂವಯ್ಯನನ್ನು ನೋಡಲೆಂದು ಅಷ್ಟು ಮುಂಜಾನೆ ಮುತ್ತಳ್ಳಿಗೆ ಕಾಲುನಡಿಗೆಯಲ್ಲಿಯೆ ಹೊರಟಿದ್ದರು. ಏಕೆಂದರೆ ಗಾಡಿದಾರಿ ಹೆಚ್ಚು ಸುತ್ತಾಗಿತ್ತು. ತಮ್ಮ ಮಗನನ್ನೂ ನೋಡುವ ಕುತೂಹಲ ಅವರಲ್ಲಿ ಇಲ್ಲದಿರಲಿಲ್ಲ. ಒಂದು ಬಗೆಯಾದ ಅಳುಕೂ ಇತ್ತು. ಏಕೆಂದರೆ ಹೂವಯ್ಯ ರಾಮಯ್ಯರಿಗೆ ತಿಳಿಯದಂತೆ ತಾವು ಕುಸಂಸ್ಕೃತ ಕನ್ನೆಯನ್ನು ಮದುವೆಯಾಗಿದ್ದುದು ಅವರ ಅಂತಃಕರಣದಲ್ಲಿ ಇತ್ತೀಚೆಗೆ ಒಂದು ಅಪರಾಧದಂತೆ ಭಾಸವಾಗತೊಡಗಿತ್ತು. ಹುಡುಗರಿಗೆ ತಾವು ಮದುವೆಯಾಗಿದ್ದ ವಿಷಯ ಈಗಾಗಲೆ ತಿಳಿದುಬಿಟ್ಟಿದ್ದರೆ! ತನ್ನೊಡನೆ ಹೇಗೆ ವರ್ತಿಸುತ್ತಾರೊ ಎಂದು ಮನಸ್ಸು ಕಳವಳಗೊಂಡಿತ್ತು. ಇದೆಲ್ಲದರ ಜೊತೆಗೆ ಆ ದಿನವೇ ಸೀತೆಮನೆ ಸಿಂಗಪ್ಪಗೌಡರು ಕಡಿಸಿದ್ದ ಕಳ್ಳನಾಟಾಗಳನ್ನು ತಮ್ಮ ಮನೆಗೆ ಗುಟ್ಟಾಗಿ ಸಾಗಿಸುವ ಸಾಹಸವೂ ನಡೆಯಬೇಕಾಗಿತ್ತು. ಅದಕ್ಕಾಗಿ ಗೌಡರು ತಾವು ಮನೆಯಲ್ಲಿಯೆ ಇದ್ದುಕೊಂಡು, ಏನಾದರೂ ಅನಾಹುತ ಅಚಾತುರ್ಯ ನಡೆಯದಂತೆ ನೋಡಿಕೊಳ್ಳೇಕೆಂದು ಹಿಂದಿನ ದಿನ ನಿರ್ಧರಿಸಿದ್ದರು. ಆದರೆ ವಿಧಿ ಅವರನ್ನು ಮುತ್ತಳ್ಳಿಗೆ ಕಳುಹಿಸಲು ಒಳಸಂಚು ಹೂಡಿತ್ತು. ಆದ್ದರಿಂದ ಅವರು ಸೇರೆಗಾರರನ್ನೂ ಪುಟ್ಟಣ್ಣನನ್ನೂ ಕರೆದು. ಹೇಳಬೇಕಾದುದನ್ನೆಲ್ಲ ಹೇಳಿ. ಮನೆಯ ಹೆಬ್ಬಾಗಿಲನ್ನು ದಾಟಿದ್ದರು.

ಅಷ್ಟರಲ್ಲಿ ವಾಸು ಓಡಿಬಂದು “ದೊಡ್ಡಮ್ಮ ಮುತ್ತಳ್ಳಿಗೆ ಹೋಗಬೇಕಂತೆ, ಹೂವಣ್ಣಯ್ಯನ್ನ ನೋಡೋಕೆ” ಎಂದು ತಿಳಿಸಿದನು.

ಗೌಡರು ಮುನಿದುಕೊಂಡು “ಯಾಕಂತೆ? ಬೇಡ. ನಾನು ಹೋಗಿ ನೋಡಿಕೊಂಡು ಬರ್ತೇನೆ!” ಎಂದು ಗದರಿಸಿ ಮುಂದುವರಿದರು.

ಹತ್ತು ಹೆಜ್ಜೆ ಹೋದವರು ಮತ್ತೆ ನಿಂತರು. ಮೊದಲೇ ತನ್ನ ಮೇಲೆ ಹಬ್ಬುತ್ತಿದ್ದ ನಾಗಮ್ಮನವರ ದೂರಗೆ  ಮತ್ತಷ್ಟ ಮೊನೆಯಾಗುವುದೆಂದು ಭಾವಿಸಿ ವಾಸುವನ್ನು ಕರೆದು” ಹೋಗಲು ಅಂತಾ ಹೇಳೋ. ನಿಂಗನಿಗೆ ಹೇಳೊ ಕಡೆಗೆ  ಗಾಡಿ ಕಟ್ಟುಕೊಂಡು ಬರಲಿ ಅಂತ” ಎಂದರು.

ವಾಸು “ನಾನೂ ಬರ್ತೇನೆ, ಅಪ್ಪಯ್ಯಾ! ಹೂವಣ್ಣಯ್ಯ ನೋಡ್ಬೇಕು” ಎಂದನು.

ಗೌಡರು ಅರ್ಧ ಜುಗುಪ್ಸೆಯಿಂದಲೂ ಅರ್ಧ ಕ್ರೋಧದಿಂದಲೂ “ಏನಾದರೈ ಸಾಯಿ!” ಎಂದು ಮುಂದೆ ನಡೆದರು.

ವಾಸು ಹಿಂದಿನಿಂದ “ಪುಟ್ಟಕ್ಕಯ್ಯನೂ ಬರ್ತದಂತೇ” ಎಂದು ಕೂಗಿದನು. ಗೌಡರು ಮಾತಾಡದೆ ಹಿಂತಿರುಗಿ ನೋಡದೆ ಹೊರಟು ಹೋದರು.

ಓಬಯ್ಯನು ಗೌಡರು ಹೋಗುವುದನ್ನೇ ಕಾಯುತ್ತ ಚೌಕಿಯ ಮೂಲೆಯಲ್ಲಿ ಕಂಬಳಿಯನ್ನು ಸುತ್ತಿ ಹೊದೆದುಕೊಂಡು ಅಲುಗಾಡದೆ ಮಲಗಿದ್ದನು. ಹಿಂದಿನ ರಾತ್ರಿ ಪ್ರಜ್ಞೆ ಮರಳಿದಾಗ, ಅವನಿಗೆ ತಾನು ಎಲ್ಲಿದ್ದೇನೆ ಎಂಬುದೇ ತಿಳಿಯಲಿಲ್ಲ.ಅಮಾವಾಸ್ಯೆಯ ಕಗ್ಗತ್ತಲೆಯಲ್ಲಿ ಮನೆಯನ್ನು ಗುರುತಿಸಲೂ ಸಾಧ್ಯವಾಗಲಿಲ್ಲ. ಅಂತೂ ತಾನೆಲ್ಲಿಯೋ ಸುರಕ್ಷಿತವಾಗಿದ್ದೇನೆ ಎಂದು ಅವನಿಗೆ ಗೊತ್ತಾಯಿತು. ತನ್ನನ್ನು ಯಾರು ತಂದರು. ಹೇಗೆ ತಂದರು. ಯಾವುದೂ ಬಗೆಹರಿಯಲಿಲ್ಲ. ಆ ವಿಚಾರದಲ್ಲಿ ಅವನ ಮನಸ್ಸು ಹೊರಗಿದ್ದ ಕಗ್ಗತ್ತಲೆಯನ್ನೇ ಹೋಲಿತ್ತು. ಆದರೆ ಬೆಳಕು ಹರಿದ ಮೇಲೆ ತಾನು ಕಾನೂರಿನಲ್ಲಿ ಇದ್ದೇನೆಂದು ಗೊತ್ತಾಗಿ ಭೀತಿಗೊಂಡನು. ಏಕೆಂದರೆ, ಚಂದ್ರಯ್ಯಗೌಡರು ತನ್ನನ್ನು ಶಿಕ್ಷಿಸದೆ ಸುಮ್ಮನೆ ಬಿಡುವವರಲ್ಲ ಎಂದು. ಆದ್ದರಿಂದ ಅವನು ಸ್ಪರ್ಶಮಾತ್ರದಿಂದಲೇ ಅಪಾಯವನ್ನು ಬಗೆದು ಮೈ ಮುದುಗಿಸಿ ನಿರ್ಜೀವವಾದಂತೆ ಉಂಡೆಯಾಗಿ ಬಿದ್ದುಕೊಳ್ಳುವ ಬಸವನ ಹುಳುವಿನಂತೆ ಚೌಕಿಯ ಮೂಲೆಯಲ್ಲಿ ಅಚಲನಾಗಿದ್ದನು. ಗಟ್ಟಿಯಾಗಿ ನಡೆಯುತ್ತಿದ್ದ ಮಾತುಕತೆಗಳಿಂದ ಗೌಡರು  ಮುತ್ತಳ್ಳಿಗೆ ಹೋಗುತ್ತಾರೆಂದು ತಿಳಿದಮೇಲೆ ಅವನಿಗೆ ಜೀವ ಬಂದಂತಾಯಿತು. ಗೌಡರು ಮನೆಯ ಹೆಬ್ಬಾಗಿಲು ದಾಟಿಹೋದುದೇ ತಡ, ರಾತ್ರಿ ಊಟವಿಲ್ಲದೆ ಬಹಳ ಹಸಿದಿದ್ದ ಅವನು ಬಾವಿಗೆ ಹೋಗಿ ಹಲ್ಲುಜ್ಜಿ ಮುಖ ತೊಳೆಯುವ ಶಾಸ್ತ್ರವನ್ನು ತ್ವರೆಯಿಂದ ಪೂರೈಸಿ, ಅಡುಗೆ ಮನೆಗೆ ಹೋದನು, ಅಲ್ಲಿ ಸುಬ್ಬಮ್ಮ ಪಾಕಕಾರ್ಯದಲ್ಲಿ ತೊಡಗಿದ್ದಳು.

ನೆಲ್ಲುಹಳ್ಳಿಯ “ಸುಬ್ಬಿ” ಕಾನೂರು ಚಂದ್ರಯ್ಯಗೌಡರನ್ನು ಮದುವೆಯಾಗಿ “ಸುಬ್ಬಮ್ಮ”ನಾದ ಮೇಲೆ, ಓಬಯ್ಯ ಯಾವುದೋ ಭೂಗತವಾಗಿದ್ದ ದೂರದ ಸಂಬಂದವೊಂದನ್ನು ಸಂಶೋಧನೆಯಿಂದ ಕಂಡುಹಿಡಿದು ಅವಳನ್ನು ” ತಂಗಿ” ಎಂದು ಕರೆಯತೊಡಗಿದ್ದನು. ಸುಬ್ಬಮ್ಮನೂ ಅವನನ್ನು ” ಓಬಣ್ಣಯ್ಯ” ಎಂದು ಕರೆಯುತ್ತ ಅವನು ಬಂದಾಗಲೆಲ್ಲ ಕಾಫಿಯನ್ನೋ ತಿಂಡಿಯನ್ನೋ ಅಥವಾ ತಾನು ಗುಟ್ಟಾಗಿ ತರಿಸಿ ಇಟ್ಟಕೊಂಡಿದ್ದ ಹೆಂಡವನ್ನೋ ಕೊಟ್ಟು ನಂಟರುಪಚಾರ ಮಾಡುತ್ತಿದ್ದಳು. ಕಾರಣವೇನೆಂದರೆ,ಸುಬ್ಬಮ್ಮ ಕಾನೂರಿನಲ್ಲಿ ಏಕಾಕಿಯಂತಿದ್ದಳು. ನಾಗಮ್ಮ, ಪುಟ್ಟಮ್ಮ, ವಾಸು ಮತ್ತು ಅಲ್ಲಿಗೆ ಬರುತ್ತಿದ್ದ ಇತರ ಬಂಧುಗಳು, ಎಲ್ಲರೂ ಸಂಸ್ಕೃತಿಯ ದೃಷ್ಟಿಯಿಂದ ಅವಳಿಗೆ ಬಹುದೂರವಾಗಿದ್ದರು; ಪರಕೀಯರಾಗಿದ್ದರು. ಆದ್ದರಿಂದ ಅವರ ಮಟ್ಟಕ್ಕೇರಿ ಮಾತುಕತೆಯಾಡಲು ಅವಳಿಂದ ಆಗುತ್ತಿರಲಿಲ್ಲ. ಬೈಗುಳದಲ್ಲಿ ಮಾತ್ರವೇ ಅವಳು ಎಲ್ಲರಿಗಿಂತಲೂ ಹೆಚ್ಚು ಜಯಶಾಲಿಯಾಗುತ್ತಿದ್ದಳು. ಸಂಸ್ಕೃತಿಯಲ್ಲಿಯೂ ಬಡತನದಲ್ಲಿಯೂ ತನಗೆ ಸರಿಸಮಾನನಾಗಿದ್ದ ಓಬಯ್ಯನನ್ನು ಅಣ್ಣ ಎಂದು ಕರೆಯುವುದು ಅವಳಿಗೆ ಪ್ರಯೋಜನಕಾರಿಯಾಗಿತ್ತು. ಅವನೊಡನೆ ತನ್ನ ಸುಖದುಃಖಗಳನ್ನು ಹೇಳಿಕೊಳ್ಳುವಳು. ಓಬಯ್ಯನೂ ಇತರರು ತಾಳ್ಮೆಯಿಂದ ಆಲಿಸಲೊಲ್ಲದ ಅವಳ ಮಾತುಗಳನ್ನು ಎಷ್ಟು ಹೊತ್ತು ಬೇಕಾದರೂ ಆಲಿಸುತ್ತಿದ್ದನು. ಕಾರಣ ಅವಳಲ್ಲಿದ್ದ ಬಂಧುಪ್ರೇಮವಾಗಿರಲಿಲ್ಲ; ಅವಳಿಂದ ತನಗಾಗುತ್ತಿದ್ದ ಊಟೋಪಚಾರ ಮತ್ತು ಅವಳಿಂದ ತಾನು ಬಯಸುತ್ತಿದ್ದ ಉಪಕಾರ.

ಓಬಯ್ಯ ಅಡುಗೆಮನೆಗೆ ಬರಲು ಸುಬ್ಬಮ್ಮ ಆದರದಿಂದ ಅವನಿಗೆ ಮಣೆಹಾಕಿ. ಕಾಫಿ ತಿಂಡಿ ಕೊಟ್ಟಳು. ಪುಟ್ಟಮ್ಮ ವಾಸು ಇಬ್ಬರೂ ನಾಗಮ್ಮನವರ ಕೋಣೆಯಲ್ಲಿ ಮುತ್ತಳ್ಳಿಗೆ ಹೋಗಲು ಸನ್ನಾಹ ಮಾಡುವುದರಲ್ಲಿ ಮಗ್ನರಾಗಿದ್ದರು. ಆದ್ದರಿಂದ ಸುಬ್ಬಮ್ಮನಿಗೆ ದೀರ್ಘಕಾಲ ಮಾತಾಡಲು ಅವಕಾಶ ಸಿಕ್ಕಿತು. ಸುಬ್ಬಮ್ಮ ತನಗೆ ಆ ಮನೆಯಲ್ಲಿ ಒದಗುತ್ತಿದ್ದ ಕಷ್ಟಗಳನ್ನೆಲ್ಲ ಹೇಳಿಕೊಂಡಳು. ಹಿಂದಿನ ದಿನ ನಡೆದುದನ್ನೆಲ್ಲ ಸಾಂಗವಾಗಿ ಹೇಳಿ ಕಂಬನಿಗರೆದಳು. ಓಬಯ್ಯನೂ ತನ್ನ ತಂದೆಯಿಂದ ತನಗೊದಗಿದ್ದ ಕಷ್ಟ ಸಂಕಟಗಳನ್ನೆಲ್ಲ ಹೇಳಿದನು. ಹಿಂದಿನ ದಿನ ಅವನ ಚಿಕ್ಕತಾಯಿ ಸತ್ತುದನ್ನು ಸುಬ್ಬಮ್ಮ ನೆನಪುಮಾಡಿಕೊಟ್ಟರೂ ಅವನು ಅದರ ವಿಚಾರವಾಗಿ ಒಂದು ಮಾತನ್‌ಊ ಆಡಲಿಲ್ಲ ಶೋಕಪ್ರದರ್ಶನವನ್ನಂತೂ ಒಂದಿನಿತೂ ಮಾಡಲಿಲ್ಲ. ಅದಕ್ಕೆ ಬದಲಾಗಿ ತನ್ನ ಸಂಕಟಗಳನ್ನೆ ಸರಸವಾಗಿ ಸವಿಸ್ತಾರವಾಗಿ ಹೇಳಿದನು. ಸುಬ್ಬಮ್ಮ ಅದನ್ನೆಲ್ಲ ಕೇಳಿ ಸಹಾನುಭೂತಿಯಿಂದ ಮತ್ತಷ್ಟು ಅತ್ತುಬಿಟ್ಟಳು, ಅವಳೆದೆ ತನಗಾಗಿ ಮರುಗಿದೆ ಎಂದು ತಿಳಿದ ಕೂಡಲೆ ಓಬಯ್ಯನು ದೀನವಾಣಿಯಿಂದ ” ನಿನ್ನಿಂದ ಒಂದು ಉಪಕಾರ ಆಗಬೇಕು” ಎಂದನು. ಎಲ್ಲರಿಂದಲೂ ಕಡೆಗಣಿಸಲ್ಪಟ್ಟಿದ್ದರಿಂದ ಸುಬ್ಬಮ್ಮ ಓಬಯ್ಯನು ತನ್ನಿಂದ ಉಪಕಾರ ಬಯಸುವುದು ತನಗೊಂದು ಹೆಮ್ಮೆಯೆಂದು ತಿಳಿದಳು.

“ಅಯ್ಯೊ ಮಾರಾಯ, ನಾನೇನು ಉಪಕಾರ ಮಾಡೇನು?” ಎಂದಳು.

“ನೀನಿ ಮಾಡಿದರೆ ನಾನು ಬದುಕ್ತೀನಿ. ಇಲ್ದಿದ್ದರೆ ಕುತ್ತಿಗೆಗೆ ನೇಣೆ!” ಎಂದು ಓಬಯ್ಯ ನೇಣಾದಂತೆಯೆ ಅಭಿನಯಿಸಿದನು.

“ಏನಾಗಬೇಕು ಹೇಳಪ್ಪಾ. ನನ್ನಿಂದಾಗಾದಾದ್ರೆ ಮಾಡ್ತೀನಿ.”

“ಏನಿಲ್ಲ, ನನಗೆ ಸ್ವಲ್ಪ ದುಡ್ಡು ಬೇಕಾಗಿದೆ ತುರ್ತಾಗಿ. ಇನ್ನೊಂದು ತಿಂಗಳೊಳಗೆ ಕೊಟ್ಟುಬಿಡ್ತೀನಿ!”

“ಅಯ್ಯೋ ಮಾರಾಯ, ದುಡ್ಡು ನಾನೆಲ್ಲಿಂದ ತರ್ಲಿ? ಅದು ಆಗದ ಹೋಗದ ಮಾತು!”

“ಸುಬ್ಬಕ್ಕಾ, ಸಾಹುಕಾರರ ಕೈ ಹಿಡಿದವಳು ನೀನೇ ಹೀಂಗೆ ಹೇಳಿದರೆ!” ಓಬಯ್ಯನ ವಾಣಿ ಅತಿ ದೀನವಾಗಿತ್ತು.

ಸುಬ್ಬಮ್ಮನಿಗೆ ಮುಖಸ್ತುತಿಯೂ ಅಭಿಮಾನಭಂಗವೂ ಒಟ್ಟಿಗೆ ಆದಂತಾಯಿತು. ತಾನು ಸಾಹುಕಾರರ ಪತ್ನಿಯಾದುದರಿಂದ ಹಣ ಕೊಡಲು ಸಮರ್ಥಳಾಗಿರಬೇಕು ಎಂದು ಭಾವಿಸಿದಳು. ಕೊಡದಿದ್ದರೆ ಯೋಗ್ಯತೆಗೆ ಕುಂದು! ಆದರೆ ತನ್ನಲ್ಲಿ ಒಡವೆ ವಸ್ತುಗಳಿದ್ದುವೆ ಹೊರತು ಹಣವಿಲ್ಲ! ತನಗೆ ಹಣವನ್ನು ಕೊಡುವುದು ಗಂಡನ ಕರ್ತವ್ಯವಾಗಿದ್ದಿರಬೇಕು ಆದರೆ ಕೊಟ್ಟಿಲ್ಲ! ತನಗೆ ಮೋಸಮಾಡಿದ್ದಾ! ತಿಳಿಯದ ತನ್ನನ್ನು  ಹೀಗೆ ಮೋಸಮಾಡುವುದೇ? ನಿನ್ನೆ ತನ್ನನ್ನು ಹೊಡೆದರಲ್ಲವೆ? ಸುಬ್ಬಮ್ಮನಿಗೆ ಗಂಡನ ಮೇಲೆ ಕೋಪವೂ ಬಂದಿತ್ತು.

ಓಬಯ್ಯನಿಗೆ ಹಣವಿಲ್ಲ ಎಂದು ಹೇಳಿಕಳುಹಿಸಬಹುದಾಗಿತ್ತು. ಆದರೆ, ಆ ಮಂಕುಹೆಣ್ಣು ಹಾಗೆ ಹೇಳುವುದು ತನ್ನ ಮಾನಕ್ಕೆ ಕಡಿಮೆ ಎಂದು ಬಗೆದಳು. ತನ್ನಲ್ಲಿ ಹಣವೂ ಇದೆ ಎಂದು ತೋರಿಸಿಕೊಳ್ಳಬೇಕೆಂಬುದು ಅವಳ ಆಸೆಯಾಗಿತ್ತು. ಓಬಯ್ಯನಿಗೆ ಸ್ವಲ್ಪ ಇರುವಂತೆ ಹೇಳಿ, ಮಲಗುವ ಕೋಣೆಗೆ ಹೋದಳು.

ಕೆಲವು ವರ್ಷಗಳ ಹಿಂದೆ ಚಂದ್ರಯ್ಯಗೌಡರ ಕೈಗೆ ಒಂದು ನೂರು ರೂಪಾಯಿನ ಎರಡು ಅರ್ಧ ನೋಟುಗಳು ಬಂದಿದ್ದುವು. ಆದರೆ ಅವುಗಳ ನಂಬರು ಬೇರೆ ಬೇರೆಯಾಗಿತ್ತು. ಯಾರು ಕೊಟ್ಟರು? ಎಲ್ಲಿಂದ ಬಂದುವು? ಎಂಬುದೊಂದೂ ಅವರಿಗೆ ಗೊತ್ತಾಗಲಿಲ್ಲ. ತಮ್ಮೊಡನೆ ಲೇವಾದೇವಿ ನಡೆಸಿದ ಯಾರನ್ನು ಕೇಳಿದರೂ ” ತಾವಲ್ಲ” ” ತಾವಲ್ಲ” ಎಂದುಬಿಟ್ಟರು. ಹಳ್ಳಿಗರಾಗಿದ್ದ ಅವರಿಗೆ ಸರಕಾರಕ್ಕೆ ತಿಳಿಸಿ ಹಣ ಪಡೆಯುವಷ್ಟು ಮುಂದಾಳುತನ ಇರಲಿಲ್ಲವೋ? ಅಥವಾ ಆ ತೊಂದರೆ ತೆಗೆದುಕೊಳ್ಳಲು ಅವರು ಇಷ್ಟಪಡಲಿಲ್ಲವೋ? ಅಂತೂ ಆ ಎರಡು ಅರ್ಧ ನೋಟಗಳನ್ನೂ ಒಂದು ಹಳೆಯ ಅಂಗಿಯ ಜೇಬಿಗೆ ಹಾಕಿ ತಮ್ಮ ಕೋಣೆಯಲ್ಲಿಟ್ಟಿದ್ದರು. ಅದನ್ನು ಸುಬ್ಬಮ್ಮ ತಾನು ಕಾನೂರಿಗೆ ಹೊಸ ಹೆಣ್ಣಾಗಿ ಬಂದಾಗ ಗಂಡನ ಅಂಗಿಯನ್ನು ಪರೀಕ್ಷಿಸುವ ಕಾಲದಲ್ಲಿ ನೋಡಿದಳು. ಅವಳಿಗೆ ಓದು ಬರೆಹ ಲವಲೇಶವೂ ಬಾರದಿದ್ದುದರಿಂದ, ಪುಟ್ಟಮ್ಮನಿಂದ ಅದು ನೂರು ರೂಪಾಯಿನ ನೋಟು ಎಂದು ತಿಳಿದುಕೊಂಡಿದ್ದಳು. ಅವಳಿಗಾಗಲಿ ಪುಟ್ಟಮ್ಮಗಾಗಲಿ ನಂಬರು ಬೇರೆ ಬೇರೆಯಾಗಿರುವ ವಿಚಾರ ಗೊತ್ತಿರಲಿಲ್ಲ. ನೋಟಾದರೆ ಸರಿ” ನಡೆಯುತ್ತದೆ! ಎಂದು ಅವರ ಭಾವವಾಗಿತ್ತು. ಆ ನೋಟನ್ನು ಸುಬ್ಬಮ್ಮ ಎಷ್ಟೋ ಸಾರಿ ಅಭೀಷ್ಟಕ ನಯನಗಳಿಂದ ತೆಗೆದೂ ತೆಗೆದೂ ಈಕ್ಷಿಸಿದ್ದಳು. ಗಂಡನಿಗೆ ಅಲ್ಲಿ ನೋಟಿಟ್ಟುದೇ ಮರೆತುಹೋಗಿದೆ ಎಂದೂ ಭಾವಿಸಿದ್ದಳು. ವಿಷಯವನ್ನು ಗಂಡನೊಡನೆ ತಿಳಿಸಿರಲಿಲ್ಲ. ” ಎಂದಾದರೂ ಸಮಯ ಬಿದ್ದಾಗ ಉಪಯೋಗಿಸಿಬಿಟ್ಟರಾಯಿತು”ಎಂಬುದು ಅವಳ ಆಶಯವಾಗಿತ್ತು.

ಸುಬ್ಬಮ್ಮ ಆ ನೂರು ರೂಪಾಯಿ ನೋಟಿನ ಎರಡು ತುಂಡುಳನ್ನೂ ತಂದು, ಒಂದು ತಿಂಗಳೊಳಗಾಗಿ ವಾಪಸು ಕೊಡಬೇಕೆಂದು ಹೇಳಿ, ಓಬಯ್ಯನಿಗೆ ನೀಡಿದಳು. ಅವನಿಗೆ ಅತ್ಯಾನಂದವಾಯಿತು. ಅವನೂ ನಿರಕ್ಷರಕುಕ್ಷಿ! ಅಷ್ಟರಲ್ಲಿ ವಾಸು ಮಾವನ ಮನೆಗೆ ಹೋಗಲು ತಕ್ಕ ವೇಷಭೂಷಣಗಳನ್ನೆಲ್ಲ ಹಾಕಿಕೊಂಡು, ಉಕ್ಕುತ್ತಿದ್ದ ಹರುಷವನ್ನು ಕೇಕೆಹಾಕಿ ಪ್ರದರ್ಶಿಸುತ್ತ, ಮುಗಿಲು ಕವಿದು ಮಬ್ಬಾದ ಮಳೆಗಾಲದಲ್ಲಿ ಬಿಸಿಲು ಇಣಿಕಿ ಬರುವಂತೆ ಇಮ್ಮಡಿ ಕಾಫಿಗೆ, ಎಂದರೆ ಎರಡನೆಯ ಸಾರಿ ಕಾಫಿ ಕುಡಿಯಲೆಂದು ಅಡುಗೆಮನೆಗೆ ಬಂದನು. ಸುಬ್ಬಮ್ಮ ಓಬಯ್ಯ ಇಬ್ಬರೂ ಬೆಚ್ಚಿ ಜಾಗರೂಕರಾದರು. ಓಬಯ್ಯನು ನೋಟಿನ ತುಂಡುಗಳನ್ನು ಬೇಗ ಬೇಗ ಜೇಬಿಗೆ ಸೇರಿಸಿದನು. ಬಾಲಕನು ಅದೊಂದನ್ನೂ ಅವಲೋಕಿಸದೆ” ಚಿಗಮ್ಮಾ, ಕಾಫೀ! ಎಂದು ಕೂಗಿ ಹೇಳುತ್ತ ಒಂದು ಮಣೆಯಮೇಲೆ ಕೂತನು.ಹುಡುಗನ ಹೃದಯದಲ್ಲಿ ಹಿಂದಿನ ದಿನದ ಅನಾದರಣೆಯ ಸ್ಮತಿ ಸಂಪೂರ್ಣವಾಗಿ ವಿಲುಪ್ತವಾದಂತಿತ್ತು. ಸುಬ್ಬಮ್ಮನು ತಾನು ಮಾಡಿರುವ ಕಾರ್ಯವನ್ನು ಮುಚ್ಚಲೆಂಬಂತೆ ನಗುಮೊಗದಿಂದ ಕಾಫಿ ಕೊಡಲು ಹವಣಿಸಿದಳು. ಓಬಯ್ಯನೂ” ಓಹೋ ಏನು ವಾಸೂ, ದುರುಸು ಹಾಕಿದ್ದೀಯಾ?” ಎಂದನು.

ವಾಸು ಓಬಯ್ಯನನ್ನು”ಓಬಣ್ಣಯ್ಯ, ನಿನ್ನೆ ಯಾರೋ ನಿನ್ನ  ಹೊಡೆದು ಹಾಕಿದ್ದರಂತೆ ದಾರೀಲಿ? ನಮ್ಮ ಗಾಡಿ ಬರುವಾಗ ನಿಂಗ ಪುಟ್ಟಣ್ಣ ಎತ್ತಿ ಗಾಡೀಗೆ ಹಾಕ್ಕೊಂಡು ಬಂದ್ರು!”  ಎಂದು ಕೇಳಿದನು. ಕುಡಿದುದು ಹೆಚ್ಚಾಗಿ ಬಿದ್ದಿದ್ದ ನೆಂಬುದು ಅವನಿಗೆ ಗೊತ್ತಾಗಿರಲಿಲ್ಲ.

ಓಬಯ್ಯ ಹೇಳಿದನು “ಯಾರೂ ಹೊಡೆದುಹಾಕಲಿಲ್ಲಾ, ಅಗ್ರಾರಕ್ಕೆ ಹೋಗಿದ್ದೆ ಕೆಲಸದಮೇಲೆ. ಬರುವಾಗ ಕಪ್ಪಾಯ್ತ. ಕಳ್ಳಂಗಡಿ ದಾಟಿ ಸ್ವಲ್ಪದೂರ ಬಂದಿದ್ದೆ, ನೋಡು! ಮರಗತ್ತಲೆ! ದಾರಿ ಮೇಲೆ ಏನೋ ಬೆಳ್ಳಗೆ ಕಂಡಿತು. ನೋಡ್ತೀನಿ, ಭೂವಿಗೂ ಆಕಾಸಕ್ಕೂ ಒಂದಾಗಿ ನಿಂತುಬಿಟ್ಟದೆ…..”

“ಎಂತದೋ?” ನಮ್ಮ ಭೂತರಾಯ!”

ವಾಸು ಮತ್ತೂ ಬೆದರುಗಣ್ಣಾಗಿ ನೋಡತೊಡಗಿ “ಆಮೇಲೆ?” ಎಂದನು.

ಆ ನಾಡಿನ ವಾಡಿಕೆಯಂತೆ ಪ್ರತಿಯೊಂದು ಮನೆಯವರೂ ಹತ್ತಾರು ಅಂತರಬೆಂತರ ಭೂತ ಪಿಶಾಚಿಗಳನ್ನು ಪೂಜಿಸುವುದುಂಟು; ಮನೆಯ ಸುತ್ತಣ ಸಮೀಪದ ಕಾಡಿನಲ್ಲಿ ಮರಗಳ ಬುಡದಲ್ಲಿರುವ ಕೆಲವು ಕಲ್ಲುಗಳನ್ನೇ ” ದೆಯ್ಯದ ಬನ” ಎಂದು ಕರೆಯುತ್ತಾರೆ. ಪ್ರತಿ ವರ್ಷವೂ ಆಯಾ ದೆಯ್ಯದ ಯೋಗ್ಯತೆಗೆ ತಕ್ಕಂತೆ ಕೋಳಿ ಕುರಿಗಳನ್ನು ಬಲಿ ಕೊಡುತ್ತಾರೆ. ಜನರಿಗೆ ಕಾಡುಪ್ರಾಣಿಗಳ ಭಯಕ್ಕಿಂತಲೂ ಈ ದೆಯ್ಯಗಳ ಭಯವೇ ನೂರ್ಮಡಿಯಾಗಿರುತ್ತದೆ. ಅವುಗಳ ಅನುಗ್ರಹ ಶಕ್ತಿಗಿಂತಲೂ  ನಿಗ್ರಹ ಶಕ್ತಿಯಲ್ಲಿಯೇ ಎಲ್ಲರಿಗೂ ಹೆಚ್ಚು ನಂಬುಗೆ. ಆದ್ದರಿಂದ ಅವುಗಳಲ್ಲಿ ಭಕ್ತಿಗಿಂತಲೂ ಭಯವೇ ಹೆಚ್ಚು ಭಯವನ್ನೇ ಭಕ್ತಿ ಎಂದೂ ಕರೆದುಬಿಡುತ್ತಾರೆ. ಪ್ರತಿಯೊಂದೂ ಮನೆಯಲ್ಲಿಯೂ ಅದರದರ ದೆವ್ವದ ಕಥೆಗಳು ಬೇಕಾದಷ್ಟಿರುತ್ತವೆ. ಹಿರಿಯವರು. ಕಿರಿಯವರಿಗೆ ಆ ಕಥೆಗಳನ್ನು ಸ್ವಾರಸ್ಯವಾಗಿ ಹೇಳುತ್ತಾರೆ. ಕೇಳಿ ಕೇಳಿ ವಾಸುವಿಗಂತೂ ಭೂತರಾಯ ಎಂದರೆ ಬಹಳ ಭಯವಾಗುತ್ತಿತ್ತು. ಭೂತರಾಯನನ್ನು ಸಾಕ್ಷಾತ್ತಾಗಿ ಸಂದರ್ಶಿಸಿದ್ದ ಓಬಯ್ಯ ಅವನ ಕಣ್ಣಿಗೆ ಮಹಾವೀರನಾಗಿ ತೋರಿದನು. ಬೆದರುಗಣ್ಣಾಗಿ “ಆಮೇಲೆ” ಎಂದನು.

“ಆಮೇಲೆನು?” ಗೊತ್ತೇ ಇದೆ! ಕೈಮುಗಿದುಕೊಂಡು ರಸ್ತೆ ಮೇಲೆ ಉದ್ದುದ್ದ ಅಡ್ಡಬಿದ್ದು “ಭೂತರಾಯ, ನನ್ನ ತಪ್ಪು ಏನಿದ್ರೂ ಮುಂದಿನ ಹರಕೆಗೆ ಒಂದು ಕೋಳಿ ಕೊಡ್ತೀನಿ!” ಅಂತಾ ಹೇಳಿಕೊಂಡೆ ಒಂದು ಸಾರಿ ಅದರ ಕೈಲಿದ್ದ ಕಬ್ಬಿಣದ ದೊಣ್ಣೆ ನೆಲಕ್ಕೆ ಕುಟ್ಟಿತೂ! ರಾಮ ರಾಮ! ಸಿಡಿಲು ಬಡದ್ಹಾಂಗಾಯ್ತು. ಧಾತುತಪ್ಪಿ  ಬಿದ್ದಿದ್ದೆ! ನಿಂಗ ಪುಟ್ಟಣ್ಣ ಗಾಡಿಗೆ ಹಾಕ್ಕೊಂಡು ಬಂದ್ರು.”

ವಾಸುವಂತೂ ಓಬಯ್ಯ ಹೇಳಿದುದನ್ನೆಲ್ಲ ಸಂಪೂರ್ಣವಾಗಿ ನಂಬಿದನು. ಓಬಯ್ಯ ಕೂಡ ಅದರಲ್ಲಿ ಅರ್ಧವನ್ನಾಗಲೆ ನಂಬಿಕೊಂಡುಬಿಟ್ಟಿದ್ದನು. ತಾನು ಹೇಳಿದ್ದು ತನಗೇ ಅಷ್ಟು ಸ್ವಾರಸ್ಯವಾಗಿ ಕಂಡಿತ್ತು. ಸುಬ್ಬಮ್ಮಗಂತೂ ಅದರಲ್ಲಿ ಚಾಚೂ ಸುಳ್ಳಿರಲಿಲ್ಲ!

ಓಬಯ್ಯ ಸುಬ್ಬಮ್ಮನನ್ನು ಬೀಳ್ಕೋಂಡು ಅಡುಗೆ ಮನೆಯಿಂದ ಹೊರಟವನು ನೇರವಾಗಿ ಹೆಬ್ಬಾಗಿಲು ದಾಟಿದನು. ಜೇಬಿನಲ್ಲಿದ್ದ ನೋಟಿನ ಎರಡು ತುಂಡುಗಳ ಮಹಿಮೆಯಿಂದ ಅವನಿಗೆರಡು ರೆಕ್ಕೆ ಬಂದಂತಾಗಿತ್ತು. ಹೊರ ಅಂಗಳದಲ್ಲಿ ಪುಟ್ಟಣ್ಣ, ಸೇರೆಗಾರರು, ಬೇಲರ ಬೈರ, ಸಿದ್ದ, ಹಳೆಪೈಕದ ತಿಮ್ಮ, ಸೇರೆಗಾರರ ಕಡೆಯ ಗಟ್ಟದಾಳುಗಳು- ಎಲ್ಲರೂ ಸಂಭ್ರಮದಿಂದ ಮಾತಾಡುತ್ತ, ಒಬ್ಬೊಬ್ಬರು ಒಂದೊಂದು ಕಾರ್ಯದಲ್ಲಿ ನಿಯುಕ್ತರಾಗಿದ್ದರು. ನಿಂಗನು ಮುತ್ತಳ್ಳಿಗೆ ಹೊರಡುವುದಕ್ಕಾಗಿ ಗಾಡಿಯ ಎತ್ತುಗಳನ್ನು ಹಿಡಿದುಕೊಂಡು ಗಾಡಿಯ ಬಳಿ ಸಿದ್ದನಾಗಿ ನಿಂತು. ಹಿಂದಿನ ದಿನದ ಸಾಹಸ ಮತ್ತು ಅನಾಹುತಗಳನ್ನು ಕೆಲವು ಆಳುಗಳಿಗೆ ವರ್ಣಿಸುತ್ತಿದ್ದನು. ಎಳಬಿಸಿಲಿನಲ್ಲಿ ಗಾಡಿ, ಎತ್ತು, ಮನುಷ್ಯರ ನೆಳಲುಗಳೆಲ್ಲ ನೀಳವಾಗಿದ್ದುವು. ಪುಟ್ಟಣ್ಣ ಹೆಗಲಮೇಲೆ ಒಂದು ತೋಟಾಕೋವಿ ಹೇರಿಕೊಂಡು, ಯುದ್ಧಕ್ಕೆ ಹೊರಡುವ ಸೈನ್ಯಾಧಿಪತಿಯ ಹೆಮ್ಮೆ ಠೀವಿಗಳಿಂದ ವರ್ತಿಸುತ್ತಿದ್ದನು. ಅವನ ಸುತ್ತುಮುತ್ತಲೂ ನಾಯಿಗಳು ಹರ್ಷಪ್ರದರ್ಶನ ಮಾಡುತ್ತಿದ್ದುವು. ಅವರು ಹೊರಟಿದ್ದುದು ಷಿಕಾರಿಗಲ್ಲ, ನಾಟಾ ಸಾಗಿಸುವುದಕ್ಕೆ ಎಂದು ಆ ಪ್ರಾಣಿಗಳಿಗೇನು ಗೊತ್ತು?

ಸಾಧಾರಣವಾಗಿ ಆಳುಗಳು ಕೆಲಸಕ್ಕೆ ಹೊರಡುವಾಗ ಜೋಲು ಮುಖ ಹಾಕಿಕೊಂಡು ಹೊರಡುತ್ತಿದ್ದುದು ಪದ್ಧತಿಯಾಗಿದ್ದರೂ ಆ ದಿನದ ಕೆಲಸವು ಕಳ್ಳನಾಟಾ ಸಾಗಿಸುವ ಕಳ್ಳ ಸಾಹಸವಾಗಿದ್ದುದರಿಂದ ಎಲ್ಲರಿಗೂ ಹುಮ್ಮಸ್ಸು ಬಂದಿತ್ತು. ಶಾಂತಿಯ ಸಮಯದಲ್ಲಿ ಮೈಮುರಿದು ದುಡಿಯಲಾರದ ಜನಾಂಗಗಳು ಯುದ್ಧಕಾಲದಲ್ಲಿ ರಕ್ತ ಸೋರಿ ಸಾಯುವುದನ್ನೆ ಅನರ್ಘ್ಯವೆಂದು ಉತ್ಸಾಹಪ್ರದರ್ಶನ ಮಾಡುವುದಿಲ್ಲವೆ? ಅಡಕೆಹಾಳೆಯ ಕುಲಾವಿಗಳನ್ನು ಧರಿಸಿ, ಬತ್ತಲೆಯ ಮೈ ಬಿಟ್ಟುಕೊಂಡು, ಭುಜದಮೇಲೆ ಕಂಬಳಿ ಹಾಕಿ ಕೊಂಡು, ಸೊಂಟಕ್ಕೆ ಮೊಳಕಾಲುದ್ದದ ಕೊಳಕು ಚಿಂದಿಗಳನ್ನು ಸುತ್ತಿಕೊಂಡು ಶೀರ್ಣ ದೇಹಿಗಳಾಗಿದ್ದ ಆ ಅಂಜುಬುರುಕರಾದ ಗಟ್ಟದಾಳುಗಳಲ್ಲಿ ಅಂದು ಸಮರೋತ್ಸಾಹ ಮೂಡಿತ್ತು. ಆದ್ದರಿಂದಲೆ ಅವರ ಮಾತು ಕತೆಗಳಲ್ಲಿ ಅಷ್ಟೊಂದು ಸಂಭ್ರಮಮಾಸಕ್ತಿಗಳಿದ್ದದ್ದು.

ಓಬಯ್ಯ ಬಂದ ಕೂಡಲೆ ಎಲ್ಲರ ದೃಷ್ಟಿಯೂ ಅವನ ಮೇಲೆ ಬಿದ್ದಿತು. ಕೆಲವರು ತಮ್ಮ ತಮ್ಮಲ್ಲಿಯೆ ಗುಸುಗುಸು ಮಾತಾಡಿಕೊಂಡಿದ್ದರಿಂದ ತನ್ನ ಸಂಗತಿ ಅವರೆಲ್ಲರಿಗೂ  ತಿಳಿದಿದೆ ಎಂದು ಅವನಿಗೆ ಗೊತ್ತಾಯಿತು. ತಂಗಪ್ಪಸೆಟ್ಟರು ಕೇಳಿದ ಪ್ರಶ್ನೆಗೆ ಅವನು ವಾಸುವಿಗೆ ಹೇಳಿದ ಭೂತರಾಯನ ಕಥೆಯನ್ನೆ ಮತ್ತಿನಿತು ಸವಿಸ್ತಾರವಾಗಿ ಬಣ್ಣಿಸಿದನು.

ಪುಟ್ಟಣ್ಣ ನಕ್ಕು”ಹೌದು, ಕಳ್ಳಂಗಡಿ ಭೂತರಾಯನಿರಬೇಕು” ಎಂದನು. ಕೆಲವರೇನೊ ನಕ್ಕರು. ಆದರೆ ಹಲವರು ಭೂತದ ವಿಚಾರದಲ್ಲಿ ಲಘುವರ್ತನೆ ಕ್ಷೇಮಕರವಲ್ಲ ಎಂದು ನಗಲಿಲ್ಲ. ಓಬಯ್ಯನಿಗೆ ಪುಟ್ಟಣ್ಣನ ವ್ಯಂಗ್ಯ ಅಭಿಪ್ರಾಯವಾದರೂ ಆಗದವಂನಂತೆ ನಟಿಸಿ “ತ್ಯೂ! ನಂಗೊತ್ತಿಲ್ಲವೇನೋ? ಕಳ್ಳಂಗಡಿ ಭೂತವಲ್ಲ. ನಮ್ಮ ಭೂತರಾಯನೇ! ಆಕಾಸಕ್ಕೂ ಭೂವಿಗೂ…..” ಎಂದು ಕಥೆಯನ್ನು ಮತ್ತೆ ಪ್ರಾರಂಭಿಸುವುದರಲ್ಲಿದ್ದನು.

ಪುಟ್ಟಣ್ಣ “ಸಾಕು ಬಿಡೋ; ನಿನಗೆ ಎಲ್ಲಾ ಭೂತಗಳೂ ಪರಿಚಯವೇನೊ! ಎಂದನು.

ಓಬಯ್ಯ ಇನ್ನು ಹೆಚ್ಚು ಮಾತಾಡಿದರೆ ಗುಟ್ಟು ರಟ್ಟಾಗುತ್ತದೆಂದು ಭಾವಿಸಿ, ಬೆದರಿ, ಹಳೆಪೈಕದ ತಿಮ್ಮನ ಹತ್ತಿರ ಎಲೆಯಡಕೆ ಕೇಳುವುದರಿಂದ, ಪುಟ್ಟಣ್ಣ ಹೇಳಿದ್ದು ತನಗೆ ಕೇಳಿಸಲಿಲ್ಲ ಎಂಬಂತೆ ನಟಿಸಿದನು.

ಸ್ವಲ್ಪ ಹೊತ್ತಿನಲ್ಲಿ ಸಾಹಸಿಗಳ ದಂಡು ಹಿಂಡಾಗಿ ಪುಟ್ಟಣ್ಣನ ನಾಯಕತ್ವದಲ್ಲಿಯೂ ಸೇರೆಗಾರರ ಮಾರ್ಗದರ್ಶಿತ್ವದಲ್ಲಿಯೂ ಶುನಕ ಪರಿವಾರ ಸಹಿತವಾಗಿ ಕಲಕಲರವದಿಂದ ಕಾಡಿಗೆ ಧಾಳಿಯಿಟ್ಟಿತು!

ಆ ದಿನದ ಸಾಹಸಕಾರ್ಯದಲ್ಲಿ ಹೆಣ್ಣಾಳುಗಳಿಗೆ ಸ್ಥಾನವಿರಲಿಲ್ಲ. ಆದ್ದರಿಂದ ಅವರಾರೂ ಕೆಲಸಕ್ಕೆ ಹೋಗೆ ” ಕೂತಿದ್ದರು” ಎಂದರೆ ರಜಾ ತೆಗೆದುಕೊಂಡಿದ್ದರು. ಓಬಯ್ಯ ಹೋದಾಗ ಗಂಗೆ ತನ್ನ ಬಿಡಾರದಲ್ಲಿದ್ದಳು. ಅವನು ಅವಳೊಡನೆ ಬಹಳ ಹೊತ್ತು ಸರಸ ಸಲ್ಲಾಪಗಳಲ್ಲಿ ಕಳೆದನು. ಮಾತಿನ ಮಧ್ಯೆ ಸೇರೆಗಾರರು ಸಿಂಗಪ್ಪಗೌಡರು ಕಡಿಸಿರುವ ಕಳ್ಳನಾಟಾ ಸಾಗಿಸಲೆಂದು ಗಂಡಾಳುಗಳೊಡನೆ ಹೋಗಿದ್ದಾರೆ ಎಂಬುದು ಗೊತ್ತಾಯಿತು. ಗುಟ್ಟನ್ನು ಸೇರೆಗಾರರು ತನ್ನಿನಿಯಳಿಗೆ ಹೇಳಿದ್ದರು. ಗಂಗೆ ತನ್ನಿನಿಯರಲ್ಲಿ ಒಬ್ಬನಾಗಿದ್ದ ಓಬಯ್ಯನಿಗೂ ಹೇಳಿದಳು! ಅದನ್ನು ಹೇಳುವಾಗ ಗುಟ್ಟನ್ನು ರಟ್ಟು ಮಾಡುತ್ತೇನೆ ಎಂಬ ಭಾವವೇ ಅವಳಿಗಿರಲಿಲ್ಲ.ಏನೋ ಮಾತಿನ ” ಮಜಾ” ದಲ್ಲಿ ಅದನ್ನು ಹೇಳಿಬಿಟ್ಟಳು.

ಸಿಂಗಪ್ಪಗೌಡರ ಮೆಚ್ಚುಗೆಗೆ ಪಾತ್ರನಾಗಿ, ತಂದೆಯ ಸಾಲದಿಂದಲೂ ಕಾನೂರು ಚಂದ್ರಯ್ಯಗೌಡರ ಪೀಡನೆಯಿಂದಲೂ ಪಾರಾಗಲು ತನಗೊಂದು ಸುಸಮಯ ದೊರಕಿತೆಂದು ಬಗೆದು, ಓಬಯ್ಯ ಗಂಗೆಯ ಬಿಡಾರದಿಂದ ನೇರವಾಗಿ ಸೀತೆಮನೆಗೆ ಹೋದನು.

ಕೆಳಕಾನೂರಿಗೆ ಹೋಗಲಿಲ್ಲ!