ಮುತ್ತಳ್ಳಿಯಲ್ಲಿ ಮದುವೆಯ ಮತ್ತು ಬೆಂಕಿಯ ಅಪಾಯಗಳು ನಡೆದ ರಾತ್ರಿ ಕೆಳಕಾನೂರಿನಲ್ಲಿ ಹೂವಯ್ಯನ ಮನಸ್ಸು ಕುದಿಯುತ್ತಿದ್ದಿತು. ಶಾಂತಿಯನ್ನು ತಂದುಕೊಳ್ಳಲು ಮಾಡಿದ ಪ್ರಯತ್ನಗಳೊಂದೂ ಸಾಗಲಿಲ್ಲ. ಆ ರಾತ್ರಿ ಸೀತೆಯ ವಿವಾಹ ಆಕೆಯ ಜೀವನ ಪ್ರಲಯ – ಮುತ್ತಳ್ಳಿಯಲ್ಲಿ ಜರುಗುತ್ತಿದೆ ಎಂಬ ಆಲೋಚನೆ ಅವನನ್ನು ಸಂಪೂರ್ಣ ಅಸ್ಥಿರವಾಗಿ ಮಾಡಿಬಿಟ್ಟಿದ್ದಿತು. ನಿದ್ದೆ ಮಾಡಲು ಯತ್ನಿಸಿದನು. ಅದೂ ಆಗಲಿಲ್ಲ ; ಹಾಸಗೆಯಲ್ಲಿ ಹೊರಳಿ ಹೊರಳಿ ಬೇಸತ್ತನು. ಹಠಾತ್ತಾಗಿ ಆ ರಾತ್ರಿಯೇ ಮುತ್ತಳ್ಳಿಗೆ ಹೋಗಬೇಕೆಂದು ಪ್ರೇರಣೆಯಾಯಿತು, ಏಕೆ ? ಏನು ಮಾಡುವುದಕ್ಕೆ ? ಹೋಗಿ, ಹೇಗೆ, ಯಾರಿಗೆ ಮುಖ ತೋರಿಸುವುದು ? ನಾಚಿಕೆಗೇಡಲ್ಲವೆ ? ಅದೆಲ್ಲವೂ ಹೌದು ! ಆದರೂ ಹೋಗಲೇಬೇಂದು ಮನಸ್ಸಾಯಿತು.

ಹೂವಯ್ಯ ಹೊರಡುತ್ತೇನೆ ಎಂದು ಮನಸ್ಸು ಮಾಡುತ್ತಿದ್ದಾಗಲೆ ಗಾಢನಿದ್ರೆ ತನ್ನನ್ನಾಕ್ರಮಿಸುವಂತೆ ತೋರಿ, ಅವನಿಗೆ ಆಶ್ಚರ್ಯವಾಯಿತು. ಯಾವುದೋ ಶಕ್ತಿ ನಿದ್ರೆಯ ನೆಪದಿಂದ ತನ್ನನ್ನು ಬಲಾತ್ಕಾರದಿಂದ ತಡೆಯುತ್ತಿದ್ದಂತೆ ಭಾಸವಾಯಿತು. ಏನನ್ನು ಮಾಡಲೂ ಕೈಲಾಗದವನಾಗಿ ಹಾಸಗೆಯ ಮೇಲೆ ಮಲಗಿ ನಿದ್ದೆ ಮಾಡಿದನು.

ಇದ್ದಕಿದ್ದ ಹಾಗೆ ಎಲ್ಲಿಯೂ ಬೊಬ್ಬೆ ಕೇಳಿಸಿದಂತಾಗಿ ಹೂವಯ್ಯ ಬೆಚ್ಚಿಬಿದ್ದದ್ದು ಹಾಸಗೆಯ ಮೇಲೆ ಕುಳಿತನು. ನಿದ್ರಾವಸ್ಥೆ ತೊಲಗಿ ಚೆನ್ನಾಗಿ ಎಚ್ಚರವಾಗಿತ್ತು. ಅವನ ದೃಷ್ಟಿಗೆ ಕತ್ತಲೆಯಲ್ಲಿ ಧಗಧಗಿಸಿ ಉರಿಯುತ್ತಿದ್ದ ಹುಲ್ಲು ಬಣಬೆಗಳ ದೃಶ್ಯವೂ ಅದರ ಸುತ್ತಲೂ ತುಮುಲವಾಗಿ ನೆರೆದು ಬೊಬ್ಬೆಯಿಡುತ್ತಿದ್ದ ಮಾನವ ಸಮೂಹವೂ ಗೋಚರಿಸಿತು. ಕಂಡೊಡನೆ ಹೂವಯ್ಯ “ಮುತ್ತಳ್ಳಿ !” ಎಂದು ತನ್ನ ವಿಸ್ಮಯವನ್ನು ತನಗೇ ಕೂಗಿಕೊಂಡನು. ದೃಶ್ಯದಲ್ಲಿ ಪ್ರತಿಯೊಂದೂ ಪ್ರಸ್ಫುಟವಾಗಿತ್ತು ; ಯಾವುದೂ ಅಸ್ಪಷ್ಟವಾಗಿರಲಿಲ್ಲ. ನಿಶ್ಚಯವಾಗಿಯೂ ಅದು ಕನಸಾಗಿರಲಿಲ್ಲ ! ಒಂದೆರಡು ನಿಮಿಷಗಳ ಮಟ್ಟಿಗೆ, ಕೆಳಕಾನೂರಿನಿಂದ ಮುತ್ತಳ್ಳಿಗೆ, ಕಾಲದೇಶಗಳನ್ನು ಕೊರೆದುಮಾಡಿವ  ಒಂದು ಮಾಯಾ ಸುರಂಗಮಾರ್ಗದ ಗವಾಕ್ಷ ನೇರ್ಪಟ್ಟ ಹಾಗಿದ್ದಿತು,

ಹೂವಯ್ಯ ಹಾಸಗೆಯ ಮೇಲೆ ಎದ್ದುವಷ್ಟರೊಳಗಾಗಿ ಆ ದೃಶ್ಯ ಸಂಪೂರ್ಣವಾಗಿ ಮರೆಯಾಗಿ ಕೋಣೆ ಮಾತ್ರ ಕತ್ತಲೆಗವಿಯಾಗಿತ್ತು. ಅವನು ಅದ್ಭುತದಿಂದ ಸ್ತಂಭಿತನಾಗಿ ಮತ್ತೆ ಹಾಸಗೆಯಮೇಲೆ ಕುಳಿತು, ತಾನು ಕಂಡದ್ದನ್ನು ಕುರಿತು ವಿಚಾರಮಾಡತೊಡಗಿದನು. ಅದು ವಾಸ್ತವವಾಗಿ ತೋರಲಿಲ್ಲ ; ಕನಸಂತೂ ಖಂಡಿತವಾಗಿಯೂ ಆಗಿರಲಿಲ್ಲ ! ಬೇರೆ ಯಾವ ಹೆಸರನ್ನು ಕೊಡಲೂ ಅವನಿಗೆ ತೋಚಲಿಲ್ಲ. ಹಿಂದೆ ಅವನಿಗೆ ಆ ತರಹದ ಅನುಭವ ಎಂದೂ ಆಗಿರಲಿಲ್ಲ, ಕಳೆದ ವರ್ಷ ಮೈಸೂರಿನಿಂದ ಊರಿಗೆ ಬರುತ್ತಿದ್ದಾಗ ದಾರಿಯಲ್ಲಿ ಗಾಡಿ ಕೆರೆಗುರುಳಿಬಿದ್ದು ತನಗೆ ಅಪಾಯವಾಗಿ ಮುತ್ತಳ್ಳಿಯಲ್ಲಿ ಮಲಗಿದ್ದಾಗ, ರಾತ್ರಿ  ಕನಸಿನಲ್ಲಿ ತಾನು ಕುಕ್ಕನಹಳ್ಳಿ ಕೆರೆಯ ಮೇಲೆ ನಡೆಯುತ್ತಿದ್ದಾಗ ತನ್ನ ತಾಯಿಯನ್ನು ಸಂಧಿಸಿದಂತೆಯೂ ಆಕೆಯ ಹಣೆಗೆ ಗಾಯವಾಗಿ ಬಟ್ಟೆ ಕಟ್ಟಿದಂತೆಯೂ ತೋರಿ, ಮರುದಿನ ನಾಗಮ್ಮನವರು ಮುತ್ತಳ್ಳಿಗೆ ಬಂದಾಗ ಅವರ ಹಣೆ ವಾಸ್ತವವಾಗಿಯೂ ಗಾಯವಾಗಿದ್ದುದನ್ನೂ ಕಂಡು ಆಶ್ವರ್ಯಪಟ್ಟಿದ್ದನು. ಅಂತಹ ಕನಸುಗಳೂ, ತರುವಾಯ ಅವುಗಳ ವಾಸ್ತವವಾದ ಅನುಭವಗಳೂ, ಅವನ ಜೀವನದಲ್ಲಿ ಹಲಕೆಲವು ನಡೆದಿದ್ದುವು. ಆದರೆ ಅವುಗಳನ್ನು ಆಕಸ್ಮಿಕ ಅತ್ಯಂತ ವಿಸ್ಮಯಕಾರಿಯಾಗಿತ್ತು.

ಹೂವಯ್ಯನಾತ್ಮದ ಮಹಾಮಂದಿರ ಮೆಲ್ಲ ಮೆಲ್ಲನೆ ಹೊಸ ಹೊಸ ಕಿಟಕಿಗಳನ್ನೂ ಬಾಗಿಲುಗಳನ್ನೂ ತೆರೆಯಲಾರಂಭಿಸಿತ್ತು. ಅದು ಅವನ ಎಚ್ಚತ್ತಚಿತ್ತಕ್ಕೆ ಇನ್ನೂ ಚೆನ್ನಾಗಿ  ವೇದ್ಯವಾಗಿರಲಿಲ್ಲ.. ಮುಂದೆ ಗೊತ್ತಾಗುತ್ತದೆ ! ಒಂದೊಂದು ಹೊಸ ಕಿಟಕಿಯೂ ಹೊಸ ಬಾಗಿಲೂ ತೆರೆದಂತೆಲ್ಲಾ ಸಲಸಲವೂ ವಿಸ್ಮಯಪಡಬೇಕಾಗುತ್ತದೆ.

ಹೂವಯ್ಯ ಬೆಳಗಿನ ಜಾವದವರೆಗೂ ಹಾಸಗೆಯಮೇಲೆ ಬಿದ್ದು ಕೊಂಡಿದ್ದನು. ಮಧ್ಯೆ ಮಧ್ಯೆ ನಿದ್ದೆ ಬಂದು ಬಂದು ಹೋಗುತ್ತಿತ್ತು. ಎಷ್ಟು ಹೊತ್ತಿಗೆ ಬೆಳಕಾದೀತು ಎಂದು ಕಾತರದಿಂದ ಇದಿರುನೋಡುತ್ತಿದ್ದ ಅವನು ಅಲಾರಂ ಗಡಿಯಾರದಲ್ಲಿ ಇನ್ನೂ ಐದು ಗಂಟೆ ಹೊಡೆಯುವ ಮೊದಲೆ ಎದ್ದು, ಹೊತ್ತಾರೆ ಆಳುಗಳು ಬಂದೊಡನೆ ಮಾಡಿಸಬೇಕಾಗಿದ್ದ ಕೆಲಸಗಳನ್ನೆಲ್ಲ ಪುಟ್ಟಣ್ಣನಿಗೆ ಪಟ್ಟಿ ಹೇಳಿ, ಬೇಟೆಗಾಗಿ ಅಲ್ಲದಿದ್ದರೂ ಅರಣ್ಯ ಪರ್ವತಗಳಲ್ಲಿ ಸಂಚರಿಸುವಾಗ ಕೈಯಲ್ಲಿದ್ದರೆ ಲೇಸು ಎಂದು ತೋಟಾ ಬಂದೂಕನ್ನು ಹೆಗಲಮೇಲೆ ಹಾಕಿಕೊಂಡು ಪ್ರಾತಃಕಾಲದ ಗಿರಿವನಯಾತ್ರೆಗೆ ಹೊರಟನು. ನಾಯಿಗಳೂ ಅವನ ಹಿಂದೆ ಹೊರಟುವು. ತಂಪುಗಾಳಿ ಬೀಸುತ್ತಿತ್ತು. ಹತ್ತಿರದ ಪೊದೆಯೊಂದರಲ್ಲಿ ಹಂಡ ಹಕ್ಕಿಯೊಂದು ಸಿಳ್ಳುಹಾಕಲು ತೊಡಗಿದ್ದಿತು. ಪೂರ್ವದಿಕ್ಕಿನ ಬೆಟ್ಟಗಾಡುಗಳ ನೆತ್ತಿಯಲ್ಲಿ ದಿಗಂತರೇಖೆ ಇನ್ನೂ ಆಕಾಶಪಟದಲ್ಲಿ ಸ್ಪಷ್ಟವಾಗಿ ಖಚಿತವಾಗಿರಲಿಲ್ಲ. ಉಷಃಕಾಲದ ಶೀತಲ ವಾಯುಮಂಡಲದಲ್ಲಿ ರುಚಿಯಿಂದ ಉಸಿರೆಳೆದು ಬಿಡುತ್ತ ಹೂವಯ್ಯನೂ ನಾಯಿಗಳೂ ಅರಣ್ಯಗಳನ್ನೇರಿದರು.

ಹೂವಯ್ಯನ ಆತ್ಮದಲ್ಲಿ ಆಗುತ್ತಿದ್ದ ಬದಲಾವಣೆ ಏನು ? ಆ ಬದಲಾವಣೆಗೆ ಕಾರಣಗಳೇನು ? ಆ ಬದಲಾವಣೆಗಳು ಹಠಾತ್ತಾಗಿ ಸಂಭವಿಸುತ್ತಿದ್ದುವೊ ? ಕ್ರಮವಾಗಿ ವಿಕಾಸಹೊಂದಿ ಹೊರಹೊಮ್ಮುತ್ತಿದ್ದುವೊ ?

ಮನುಷ್ಯನ ಅಂತಶ್ಚಿತ್ತ ಸಮುದ್ರದಂತೆ ಗಂಭೀರವಾಗಿದೆ. ಅಪಾರವಾಗಿದೆ. ಅಲ್ಲಿ ನಡೆಯುವ ವ್ಯಾಪಾರಗಳು ನಮಗೆ ಅಗೋಚರವೆಂದು ಹೇಳಬಹುದು. ಸಮುದ್ರದ ಒಳಗೆ ಜರುಗುವ ಘಟನೆಗಳ ಪರಿಣಾಮವಾಗಿ ಇದ್ದಕಿದ್ದಂತೆ ದ್ವೀಪಗಳೇಳುತ್ತವೆ, ದ್ವೀಪಗಳು ಮುಳುಗುತ್ತವೆ ; ನೀರು ಭೂಮಿಯನ್ನಾಕ್ರಮಿಸುತ್ತದೆ ಅಥವಾ ಭೂಮಿಯೆ ಕಡಲನ್ನು ತಳ್ಳಿದಂತಾಗಿ ನೀರು ಹಿಂಜರಿಯುತ್ತದೆ ; ತೀರವು ಕುಸಿದುಬಿದ್ದು, ನೆಲವು ಕೊಚ್ಚಿಹೋಗುತ್ತದೆ ; ಅಥವಾ ಸಮುದ್ರತಲದ ಅನರ್ಘ್ಯರತ್ನಗಳೊಡನೆ ಅಲ್ಲಿ ವಾಸಿಸುವ ವಿಚಿತ್ರವೂ ವಿಕಾರವೂ ಭಯಂಕರವೂ ಆದ ಪ್ರಾಣಿಗಳೂ ದಡಕ್ಕೆ ಚಿಮ್ಮಿ ಬೀಳುತ್ತವೆ. ಮೇಲೆ ನಿಂತು ನೋಡುವವರಿಗೆ ಈ ವ್ಯಾಪಾರಗಳು ಆಕಸ್ಮಿಕಗಳಂತೆ, ವಿಪ್ಲವಗಳಂತೆ, ಅದ್ಭೂತಗಳಂತೆ ತೋರುತ್ತದೆ. ಆದರೆ ಭೂಗರ್ಭ ಸಮುದ್ರಗರ್ಭಗಳ ವಿಚಾರವಾದ ವಿಜ್ಞಾನವನ್ನು ತಿಳಿದ ಶಾಸ್ತ್ರಜ್ಞರಿಗೆ ಆ ವ್ಯಾಪಾರಗಳು ಅದ್ಭೂತಗಳೂ ಅಲ್ಲ, ಆಕಸ್ಮಿಕಗಳು ಅಲ್ಲ, ವಿಷ್ಣವಗಳೂ ಅಲ್ಲ ; ಅಕಾರಣವಾಗಿ ಕಾಲ ದೇಶಗಳಲ್ಲಿ ವಿಕಾಸಹೊಂದಿದ ಪ್ರಕೃತಿ ಘಟನೆಯ ಶಿಖರಗಳಾಗುತ್ತವೆ ! ಹಾಗೆಯೆ ಹೂವಯ್ಯನ ಅಂತರಾತ್ಮದ ನಿಗೂಢ ಗಹ್ವರದಲ್ಲಿ ಬಾಹ್ಯದೃಷ್ಟಿಗೆ ತಿಳಿಯದಂತೆ ಅನೇಕ ವ್ಯಾಪಾರಗಳು ಜರುಗುತ್ತಿದ್ದುವು. ಅವುಗಳು ಹೊರಗೆ ಪ್ರಕಾಶಿತವಾದಾಗ ಅವನಿಗೇ ವಿಸ್ಮಯವಾಗುತ್ತಿತ್ತು.

ಸೀತೆಯ ಪ್ರಸಂಗದಲ್ಲಿ ಅವನಿಗುಂಟಾಗಿದ್ದ ನಿರಾಶೆ ನಿಜವಾಗಿಯೂ ಅತಿದುಃಖ ಕರವಾಗಿತ್ತು. ಜಗತ್ತಿನ ಮಹಾಪುರುಷರ ಆಲೋಚನಾಪ್ರಪಂಚದ ಸಾನ್ನಿಧ್ಯ, ವಿದ್ಯೆಯ ಸಂಸ್ಕೃತಿ, ಮನಸ್ಸಿನ ಸಂಯಮ, ಉದ್ದಾರಕ್ಕೆ ಒಂದು ಎಲ್ಲೆಯನ್ನು ಕಲ್ಪಿಸದೆ ನಿರಂತರವೂ ಮೇಲೇರಿ ಮುಂದುವರಿಯಬೇಕೆಂಬುವ ಉತ್ಕಟಾಕಾಂಕ್ಷೆ, ತೀವ್ರ ವ್ಯಾಕುಲತೆ, ಉದ್ದಾಮ ರಸಕಾವ್ಯಗಳ ಪರಿಚಯ, ಪ್ರಾರ್ಥನೆ, ಧ್ಯಾನ ಇವುಗಳ ಆಧಾರವೂ ಅಮೃತವೂ ಸಹಾಯಕ್ಕೆ ಬಾರದಿದ್ದಿದ್ದರೆ ಹೂವಯ್ಯನ ವ್ಯಕ್ತಿತ್ವ, ಪೆಟ್ಟು ತಗುಲಿದ ವಿಗ್ರಹದಂತೆ ಒಡೆದು ಚೂರುಚೂರಾಗಿ ವಿಕಾರವಾಗಿ, ನಶಿಸುತ್ತಿತ್ತು. ಆತ್ಮ ಹೆಚ್ಚು ಹೆಚ್ಚು ಸಮಂಜಸವಾಗಿ ಒಟ್ಟಾಗಿ, ಸಮನ್ವಿತವಾಗಿ, ಅರ್ಥಪೂರ್ಣವೂ ಆನಂದ ಮಯವೂ ಆಗುವುದಕ್ಕೆ ಬದಲು ಸೀಳು ಸೀಳಾಗಿ ಹೋಗಿ, ವಿರೋಧಾಭಾಸವಾಗಿ, ಅನನ್ವಿತವಾಗಿ, ನಿರರ್ಥಕವೂ ದುಃಖಮಯವೂ ಆಗುತ್ತಿದ್ದುದರಲ್ಲಿ ಸಂದೇಹವಿರಲಿಲ್ಲ. ಹೂವಯ್ಯನಿಗಿದ್ದ ಸಹಾಯ ಸನ್ನಿವೇಶಗಳಿಲ್ಲದೆ, ನಿರಾಶೆಯ ಕೋರೆದಾಡೆಗಳಲ್ಲಿ ಸಿಕ್ಕಿಬಿದ್ದಿರುವ ಸೀತೆಯ ವ್ಯಕ್ತಿತ್ವ ದಿನ ದಿನಕ್ಕೂ ಬಿರುಕುಬಿಟ್ಟು, ಸೀಳಿ ಸೀಳಿ ವಿಕಾರವಾಗುತ್ತಿರುವುದನ್ನೂ ನೋಡಿದರೆ, ಹೂವಯ್ಯನ ವಿಚಾರವಾಗಿ ಹೇಳಿದ ಮಾತುಗಳ ಅರ್ಥಭಾವಗಳು ಚೆನ್ನಾಗಿ ಮಂದಟ್ಟಾಗುತ್ತವೆ. ರಾಮಯ್ಯನ ಆತ್ಮವೂ ವಿಕಾರವಾಗಿ ಅನನ್ವಯವಾಗುತ್ತಿದೆ ; ಆದರೆ ಅದಕ್ಕೆ ಕಾರಣ ನಿರಾಶೆ ಮಾತ್ರವಲ್ಲ, ದುರಾಶೆ ಮತ್ತು ಚಂಚಲತೆ – ಮತ್ತು ಮನೋಮಾಂದ್ಯ.

ಇತ್ತೀಚೆಗೆ ಹೂವಯ್ಯ ಆತ್ಮದ ಸಾಧನೆಯಲ್ಲಿ ಹೆಚ್ಚು ಹೆಚ್ಚು ನಿರತನಾಗಿದ್ದನು. ಸಂಸಾರದ ಕೆಲಸಗಳನ್ನೂ ನಿಷ್ಠೆಯಿಂದ ನೋಡಿಕೊಳ್ಳುವುದರ ಜೊತೆಗೆ ತನ್ನ ವಿದ್ಯಾಸಂಸ್ಕೃತಿಯನ್ನೂ (ಮೊನ್ನೆ ತಾನೆ ಶಿವಮೊಗ್ಗೆಗೆ ಅಡಕೆ ತುಂಬಿಕೊಂಡು ಹೋಗಿದ ಗಾಡಿಯಲ್ಲಿ ಒಂದು ಪೆಟ್ಟಿಗೆಯ ತುಂಬಾ ಹೊಸ ಪುಸ್ತಕಗಳ ಬಾಂಗಿ ಬಂದಿತ್ತು.) ರಸರುಚಿಯನ್ನೂ ಆತ್ಮಸಾಧನೆಯನ್ನೂ ವೀರಶ್ರದ್ಧೆಯಿಂದ ಅಭಿವೃದ್ಧಿಪಡಿಸಿಕೊಳ್ಳುತ್ತಿದ್ದನು. ಒಂದು ತಿಂಗಳಿನಿಂದ ಪ್ರತಿ ರಾತ್ರಿಯೂ ನಾಗಮ್ಮ, ಪುಟ್ಟಣ್ಣ, ಸೋಮ ಇವರಿಗೆ ಭಾರತ ರಾಮಾಯಣ ಮುಂತಾದ ಕಾವ್ಯಗಳನ್ನು ಸುಲಭ ವ್ಯಾಖ್ಯಾನ ಸಹಿತವಾಗಿ ಓದಿಹೇಳತೊಡಗಿದ್ದನು. ಅದನ್ನು ಕೆಳಲು ಕಾನೂರಿನಿಂದಲೂ ಹತ್ತಿರದ ಹಳ್ಳಿಗಳಿಂದಲೂ ಜನರು ಬರತೊಡಗಿದ್ದರು. ಸಿಂಗಪ್ಪಗೌಡರೂ ಅವರ ಮನೆಯವರೂ ಒಂದೆರಡು ಸಾರಿ ಕಥಾಶ್ರವಣಕ್ಕಾಗಿಯೆ ಬಂದಿದ್ದರು. ಇನ್ನೂ ಅನೇಕರಿಗೆ ಬರಬೇಕೆಂದು ಇಷ್ಟವಿದ್ದರೂ ಅಜ್ಞಾನಜನ್ಯವಾಗಿ ಹೂವಯ್ಯನ ಪ್ರತಿಪರವಾಗಿದ್ದ ಏನೊ ಒಂದು ಧರ್ಮಾಶಂಕೆಯಿಂದ ಬರಲಂಜುತ್ತಿದ್ದರು. ಹೂವಯ್ಯನ ಹೊಸ ಉದ್ಯಮವನ್ನು ಕೇಳಿದ ಅಗ್ರಹಾರದ ಜೋಯಿಸರು ವೆಂಕಪ್ಪನವರು “ಗೋಹತ್ಯ ಮಾಡಿದವನು ಪುರಾಣ ಹೇಳಿದರೆ ಕೇಳಿದವರೆಲ್ಲರೂ ನರಕಕ್ಕೆ ಹೋಗಬೇಕಾಗುತ್ತದೆ” ಎಂದು ಬೇರೆ ಹೇಳಿದರಂತೆ ! ಚಂದ್ರಯ್ಯಗೌಡರು ತಮ್ಮವರಿಗೆಲ್ಲ ಕೆಳಕಾನೂರಿಗೆ ಹೋಗಕೂಡದೆಂದು ಸುಗ್ರೀವಾಜ್ಞೆ ಮಾಡಿದ್ದರೂ ಸೇರೆಗಾರರ ಕಡೆಯ ಕನ್ನಡಜಿಲ್ಲೆಯಾಳುಗಳೂ ಬೇಲರಲ್ಲಿ ಕೆಲವರೂ ಆಗಾಗ್ಗೆ ಒಡೆಯರಿಗೆ ತಿಳಿಯದಂತೆ ‘ಕದ್ದು ಬಂದು’ ಹೂವಯ್ಯ ಗೌಡರ ‘ಪರ್ಸಂಗ’ ಕೇಳಿ, ಹಿರಿಹಿರಿ ಹಿಗ್ಗಿ ಹೋಗುತ್ತಿದ್ದರು. ಹೂವಯ್ಯ ಕಥೆ ಹೇಳುವ ಸಮಯದಲ್ಲಿ ಸಮಾಜದ ಏಳಿಗೆಗೆ ಆವಶ್ಯಕವಾದ ವಿಚಾರಗಳೆಲ್ಲವನ್ನೂ ಕುರಿತು ಸ್ವಾರಸ್ಯವಾಗಿ ಅಲ್ಲಲ್ಲಿ ಉಚಿತವಾದ ಹಾಸ್ಯದ ಮಾತುಗಳನ್ನು ಸೇರಿಸಿ, ಎಲ್ಲರಿಗೂ ತಿಳಿಯುವಂತೆ ವಿವರಿಸುತ್ತಿದ್ದನು. ಹೀಗೆ ಪ್ರಣಯದಲ್ಲಿ ನಿರಾಶೆಹೊಂದಿದ್ದ ಹೂವಯ್ಯನ ಆತ್ಮ ವಿವಿಧ ಕಾರ್ಯಮಾರ್ಗಗಳಲ್ಲಿ ಸಾಹಸಪೂರ್ಣವಾಗಿ ಯಾತ್ರೆ ಹೊರಟಿದ್ದಿತು. ಆದರೆ ನಿರಾಶೆ ನಿರಾಶೆಯಾಗಿಯೇ ಇದ್ದುಬಿಡಲಿಲ್ಲ. ಕ್ರಮಕ್ರಮೇಣ ಅದು ಆತನಾತ್ಮದ ಮಹಾ ಮಂಗಳಾರತಿಯ ಪರಿಮಳಿತ ಪಾವನಜ್ಯೋತಿಯನ್ನು ಪೋಷಿಸುವ ಕರ್ಪೂರವಾಗುತ್ತಿತ್ತು.

ಚೈತ್ರಮಾಸದ ವಿಪಿನರಾಜಿ ; ಪರ್ವತಶ್ರೇಣಿ ; ಪ್ರಾತಃಸಮಯ ; ಸುಖ ಶೀತಲ ವಾಯುಮಂಡಲ ; ಇನ್ನೇನು ಗಾನದ ತಾರಾಮಂಡಲದಂತೆ ಬಿರಿದು ಸಾವಿರಾರು ಪಕ್ಷಿಗಳ ತುಮುಲ ಕಲಗಾನವಾಗಿ ಪರಿಣಮಿಸಲಿರುವ ನಾದಗರ್ಭಿತವಾದ ವನ್ಯಮೌನ…… ಇವುಗಳ ಮಧ್ಯೆ ಹೂವಯ್ಯ ಒಮ್ಮೆ ರಾತ್ರಿಯಲ್ಲಿ ತನಗಾದ ಅನುಭವವನ್ನು ಕುರಿತು ಯೋಚಿಸಿ ಅಂತರ್ಮುಖಿಯಾಗುತ್ತ, ಮತ್ತೊಮ್ಮೆ ಅಂತರ್ಮುಖತೆಯಿಂದ ತಟಕ್ಕನೆ ಎಚ್ಚತ್ತು ಹೊರಗಣ ಪ್ರಕೃತಿರಮಣೀಯತೆಯನ್ನು – (ಕಾಡು ಕತ್ತಲೆಯಿಂದ ನಿಧಾನವಾಗಿ ಹೊರಹೊಮ್ಮುತ್ತಿತ್ತು ; ಬಾನು ಮೆಲ್ಲಮೆಲ್ಲನೆ ಬೆಳಗಾಗಿ ಸಾಧಾರಣ ಪ್ರಕಾಶದ ತಾರೆಗಳೆಲ್ಲ ಅಡಗಿ, ಸಪ್ತರ್ಷಿಮಂಡಲದ ನಕ್ಷತ್ರಗಳು, ಚಿತ್ರಾ ಮತ್ತು ಸ್ವಾತಿ ನಕ್ಷತ್ರಗಳೆ ಮೊದಲಾದ ಪ್ರಥಮ ಮತ್ತು ದ್ವಿತೀಯ ವರ್ಗಕ್ಕೆ ಸೇರಿರುವ ಹಲಕೆಲವು ತಾರೆಗಳು ಮಾತ್ರ ರಾರಾಜಿಸುತ್ತಿದ್ದುವು ) – ಆಸ್ವಾದಿಸುತ್ತ, ಶ್ವಾಸಕೋಶಗಳು ತುಂಬಿ ತುಳುಕುವಂತೆ ಉಸಿರೆಳೆದು ಬಿಡುತ್ತ ಬಿರುಬಿರನೆ ಮೇಲೇರಿ ಸಾಗಿದನು.

ವನದೇವಿಯ ಹೃದಯವೀಣೆಯ ತಂತಿಗಳನ್ನು ಮಿಡಿಯುವಂತೆ ಕಾಜಾಣಗಳು ಆಲಾಪನೆ ಮಾಡತೊಗಿದುವು. ಮರಗಳಲ್ಲಿ ಹೂಕುಡಿಯುತ್ತಿದ್ದ ಸಾವಿರಾರು, ಲಕ್ಷಲಕ್ಷ, ಕೋಟಿಕೋಟಿ ಜೇನ್ನೊಣಗಳ  ಝೇಂಕಾರ ಪ್ರಾರಂಭವಾಯಿತು. ಕಣಿವೆಗಳಲ್ಲಿದ್ದ ಊರುಕೋಳಿಗಳ ಸಾಧಾರಣವಾದ ಕೂಗಿನ ಜೊತೆಗೆ ಕಾಡುಕೋಳಿಗಳ ಮಧುರಮನೋಹರವಾದ ಕೇಕೆಗಳೂ ಅಲ್ಲಲ್ಲಿ ಕೇಳಿ ಬಂದುವು. ಹೂವಯ್ಯನ ಹೃದಯ ಆನಂದಸ್ಪಂದಿತವಾಯ್ತು. ಹೊಸ ಚೇತನ ಎದೆಯಲ್ಲಿ ಮಿಂಚಿನಂತೆ ಸಂಚರಿಸಿತು. ಚೈತ್ರಪ್ರಕೃತಿಯ ಹುಚ್ಚಿನ ಕಿಚ್ಚು ಅವನೆದೆಗೆ ತಗುಲಿದಂತಾಯ್ತು. ಉಷಃಕಾಲ, ಅರುಣೋದಯ, ಸೂರ್ಯೋದಯಗಳ ಸಂಪತ್ತನ್ನು ಕಳೆದುಕೊಳ್ಳುವ ದಾರಿದ್ಯ್ರಕ್ಕೆ ಬೆದರಿ, ಬೇಗಬೇಗನೆ ಬೆಟ್ಟದ ಹಾಸುಬಂಡೆಯ ಉತ್ತುಂಗವೇದಿಕೆಗೆ ಏರಿ, ಏದುತ್ತ, ಆನಂದಪರವಶನಾಗಿ ದಿಟ್ಟಿಸುತ್ತ ನಿಂತನು.

ಮೈಲಿ ಮೈಲಿಗಳಾಚೆ, ವಿಸ್ತಾರವಾಗಿ, ಅನಂತವಾಗಿ, ದೃಶ್ಯತರಂಗ ವಿನ್ಯಾಸದಿಂದ ತುಂಗವಾಗಿ, ಉತ್ತುಂಗವಾಗಿ, ಮಹೋತ್ತುಂಗವಾಗಿ ಹಬ್ಬಿ ಹರಿದಿದ್ದ ಪರ್ವತಾರಣ್ಯಗಳು ಕೊನೆಮುಟ್ಟುವಂತೆ ತೋರುತ್ತಿದ್ದ ಪೂರ್ವದಿಕ್ಕಿನಲ್ಲಿ, ಅರಿಸಿನದ ಧೂಳಿಯನ್ನೆರಚಿದಂತೆ ಹಳದಿಯ ಕಾಂತಿ ನಲಿಯುತ್ತಿದ್ದ ಗಗನ ಪಟಕ್ಕೆದುರಾಗಿ, ದಿಗಂತರೇಖೆ ಕಚ್ಚುಕಚ್ಚಾಗಿ ಗೋಚರಿಸತೊಡಗಿತ್ತು. ಆ ಮೈಮರೆಯಿಸುವ ದೃಶ್ಯದರ್ಶನದ ಅನಂತ ಆಹ್ವಾನವನ್ನು ಕೃತಜ್ಞತೆಯಿಂದ ಸ್ವೀಕರಿಸಿ ಹೂವಯ್ಯನ ಆತ್ಮ ರೆಕ್ಕೆಬಿಚ್ಚಿ ಗರಿಗೆದರಿ ಹಾರಲು ಅನುವಾಯಿತು. ಅವನಿಗೆ ತನ್ನ ಮುಖವೂ ಪೂರ್ವದಿಕ್ಕಾಗುತ್ತಿದ್ದಂತೆ ಬಾಸವಾಯಿತು. ಕೋವಿಯನ್ನು ದೂರವಿಟ್ಟು, ತಣ್ಣಗಿದ್ದ ಹಾಸುಬಂಡೆಯ ಮೇಲೆ ಪದ್ಮಾಸನಹಾಕಿ ಕುಳಿತು ಎವೆಯಿಕ್ಕದಾದನು.

ವರ್ಣನೆಗೆ ಅಸಾಧ್ಯವಾಗಿ ಬಣ್ಣಗಳ ಮೆರವಣಿಗೆ ಪ್ರಾರಂಭವಾಯಿತು. ಹೂವಯ್ಯನ ದೃಷ್ಟಿಗೆ ಭಾವಮಾತ್ರವಾಗಿದ್ದ ಭಗವಂತನ ಸೌಂದರ್ಯ ರೂಪುಗೊಂಡು ತನ್ನೆದುರು ಪ್ರತ್ಯಕ್ಷವಾಗುತ್ತಿದ್ದಂತೆ ಅನುಭವವಾಗಿ ಮೈ ಪುಲಕಿತವಾಗಿ, ಹೃದಯ ರಸಾರ್ದ್ರವಾಗಿ, ಕಣ್ಣುಹನಿ ತುಂಬಿತು. ನೋಡುತ್ತಿದ್ದಂತೆ ಹಳದಿಯ ಬೆಳಕು ಕುಂಕುಮದ ಬಣ್ಣಕ್ಕೆ ತಿರುಗಿ, ಅಲ್ಲಿದ್ದ ಕಿರುಮುಗಿಲುಗಳು ಉರಿಯುವ ಚಿನ್ನದ ಬಣ್ಣವನ್ನು ತಾಳಿ ಉಜ್ವಲವಾದುವು, ಕತ್ತಲೆ ಎತ್ತಲೊ ಅಡಗಿ, ಬೆಳಕು ಬಾನಿನಿಂದ ನೆಲಕ್ಕೆ ತುಳುಕಿ ಹರಿದಂತಾಯಿತು. ದೂರದಲ್ಲಿ ಅದುವರೆಗೆ ಅಜ್ಞಾತವಾಗಿದ್ದ ಒಂದು ಕೆರೆಯ ನೀರು ಕರಗಿದ ಬೆಳ್ಳಿಯಾಗಿ ತಳತಳಿಸಿತು. ಬಹಳ ತೆಳ್ಳಗೆ ಎಲ್ಲೆಲ್ಲಿಯೂ ಹಬ್ಬಿ ಮುಸುಗಿದ್ದ ಹೊಗೆಮಂಜಿನಲ್ಲಿ ಹತ್ತಿರದ ಬೆಟ್ಟಗಾಡುಗಳೂ ಮೃದುವಾಗಿ ಕೋಮಲ ನೀಲವಾಗಿ ಕಾಣಿಸಿದುವು.

ನೋಡುತ್ತಿದ್ದ ಹಾಗೆ, ಹೂವಯ್ಯನ ಎದೆಯ ಗೂಡಿನಲ್ಲಿ ಹೃದಯವನ್ನು ಚಿಮ್ಮಿಸುತ್ತ, ಸೂರ್ಯನ ರಕ್ತಬಿಂಬ ದಿಗಂತರೇಖೆಯಮೇಲೆ ಇಣಿಕಿತು. ಇಣಿಕಿ ಮೇಲೆಮೇಲೆ ಮೇಲಕ್ಕೇರಿ, ಸಂಪೂರ್ಣಬಿಂಬ ವಿರಾಜಮಾನವಾಯಿತು. ಹೂವಯ್ಯನ ಹತ್ತಿರದಲ್ಲಿದ್ದ ಮರಗಳಿಗೆ ದೀರ್ಘಛಾಯೆಗಳೂ ಮೂಡಿದುವು. ಆ ಛಾಯೆಗಳು ನೆಲದಮೇಲೆ ಕಾಣಿಸಿದುದಕ್ಕಿಂತಲೂ ಹೊಗೆ ಮಂಜಿನಲ್ಲಿ ಬಿಸಿಲ್ಗೋಲುಗಳನ್ನು ಸೃಜಿಸಿ, ಚೆನ್ನಾಗಿ ಗೋಚರವಾದುವು. ಹಕ್ಕಿಗಳು ಹುಚ್ಚೆದ್ದು ಹಾಡಿದುವು, ಆನಂದಸ್ವರೂಪಿಯಾದ ಭಗವಂತ ಸೌಂದರ್ಯರೂಪಿಯಾಗಿ ಮೈದೋರಿ ಹೂವಯ್ಯನ ಆತ್ಮದಲ್ಲಿ ರಸವಾಗಿ ಪ್ರವಹಿಸಿದನು.

ಹೂವಯ್ಯನ ಕಣ್ಣುಗಳು ಮೆಲ್ಲ ಮೆಲ್ಲಗೆ ತಾವಾಗಿಯೆ ಮುಚ್ಚಿಕೊಂಡು ಅವನು ಧ್ಯಾನಮಗ್ನನಾದನು. ಆ ಧ್ಯಾನದಲ್ಲಿ ಆಲೋಚನೆ ಇರಲಿಲ್ಲ. ಅದು ಅನಿರ್ವಚನೀಯವಾದ ಅಖಂಡ ಭಾವಾನುಭವ ಮಾತ್ರವಾಗಿತ್ತು. ತಾನೆ ಎಲ್ಲವೂ ಆಗುತ್ತಿದ್ದಂತೆ ಮೊದಮೊದಲು ತೋರಿದ್ದರೂ ಕಡೆಕಡೆಗೆ ‘ತಾನು’ ಎಂಬ ಭಾವವೂ ಪ್ರಜ್ಞೆಯಿಂದ ಉರುಳಿ ಮಾಯವಾಯಿತು. ಆನಂದವನ್ನು ಅನುಭವಿಸುತ್ತಿದ್ದನೊ ? ಆನಂದವೆ ಆಗಿದ್ದನೊ ? ಏನೊ ? ಎಂತೊ ? ಯಾರಿಗೆ ಗೊತ್ತು?

ಅಂತೂ ಆ ಭಾವಸಮಾಧಿಯ ರಸಾಗ್ನಿಗಂಗೆಯಲ್ಲಿ ಮುಳುಗಿ ಮಿಂದು ಜ್ವಾಲಾಮಯಾತ್ಮನಾದ ಹೂವಯ್ಯ ಕಣ್ದೆರೆದಾಗ ಹೊತ್ತು ಆಗಲೆ ದಿಗಂತದಿಂದ ಎರಡು ಮೂರಾಳೆತ್ತರದಷ್ಟು ಮೇಲಕ್ಕೇರಿಬಿಟ್ಟಿತ್ತು. ಜಗತ್ತೆಲ್ಲವೂ ಶಾಂತಿ ಸೌಂದರ್ಯ ಆನಂದ ಮೈತ್ರಿ ಪ್ರೇಮಗಳಿಂದ ಪೂರ್ಣವಾಗಿದ್ದಂತೆ ಅನುಭವಿಸುತ್ತಿದ್ದ ಆತನ ಮುಖ ಮಿಂಚಿನ ಮುಗುಳುನಗೆಯಾಯಿತು. ಕಾಲು ಮರಗಟ್ಟಿದ್ದುವು. ಎದ್ದು ನಿಂತು, ಕೈಕಾಲುಗಳನ್ನು ಚೆನ್ನಾಗಿ ನೀಡಿ, ಸರಿಮಾಡಿಕೊಂಡು, ಭವ್ಯ ಸನ್ನಿವೇಶದ ಪ್ರಭಾವದಿಂದಲೊ ಎಂಬಂತೆ ಬಹಳ ಹೊತ್ತಿನಿಂದಲೂ ಸುಮ್ಮನೆ ಕುಳಿತಿದ್ದ ನಾಯಿಗಳನ್ನು ಕಂಡು, ಕೃತಜ್ಞತೆಯಿಂದ ಎಂಬಂತೆ ತಲೆ ತಟ್ಟಿ ಮುದ್ದಿಸಿ, ಕೋವಿಯನ್ನು ಹೆಗಲಮೇಲೆ ಹಾಕಿಕೊಂಡು ಮನೆಯ ಕಡೆಗೆ ಇಳಿಯತೊಡಗಿದನು. ಕಾಜಾಣಗಳ ಹಾಡು ನಿಂತಿತ್ತು. ಕುಟುರ, ಪಿಕಳಾರ, ಉರುಳಿ, ಕಾಮಳ್ಳಿ, ಗಿಣಿ – ಮೊದಲಾದ ಹಕ್ಕಿಗಳು ಕಾಡಿನ ತುಂಬಾ ಹಾಡಿನ ದೊಂಬಿಯೆಬ್ಬಿಸಿದ್ದುವು. ಬನದ ಮಧ್ಯೆ ಎರಡು ಕೋಗಿಲೆಗಳು ಒಂದನ್ನೊಂದು ಕೂಗಿ ಕರೆಯುತ್ತಿದ್ದುವು. ಹೂವಯ್ಯ ಕಾಡುಕಿಚ್ಚು ಬಿದ್ದು, ನೆಲವೆಲ್ಲ ಸುಟ್ಟು ಮಸಿಹೊಯ್ದಂತೆ ಕರವಾಗಿ ಸ್ಥಳವೊಂದನ್ನು ಕಂಡೊಡನೆ ತಾನು ರಾತ್ರಿ ಕನಸಿನಲ್ಲಿ ಅಲ್ಲ, ಕಣಸಿನಲ್ಲಿ, ಕಂಡಿದ್ದ ಬೆಂಕಿಯ ದೃಶ್ಯವನ್ನು ನೆನೆದನು. ಮೈ ಜುಮ್ಮೆಂದಿತು.

ಮುತ್ತಳ್ಳಿಯಿಂದ ಮದುವೆಯ ಕದನಿಗಳೇಕೆ ಕೇಳಿಸುತ್ತಿಲ್ಲ ? ಎಂದು ಸೋಜಿಗಪಟ್ಟನು. ಸೀತೆ ರಾಮಯ್ಯನ ಪತ್ನಿಯಾಗಿ ಪರವಧುವಾಗಿದ್ದುದನ್ನು ನೆನೆದಾಗ, ಅವನಿಗೆ ಹಿಂದಿನ ದಿನ ಆಗಿದ್ದಂತೆ ಹೆಚ್ಚೇನೂ ಸಂಕಟವಾಗಲಿಲ್ಲ. ಹಣೆಯ ಬರಹವನ್ನು ಅಳಿಸುವುದು ಯಾರಿಂದ ತಾನೆ ಸಾಧ್ಯ ? ಎಂದುಕೊಳ್ಳುತ್ತಿದ್ದಾಗ, ಗಿಡದಿಂದ ಗಿಡಕ್ಕೆ ಅಡ್ಡವಾಗಿ ಹಬ್ಬಿದ್ದ ಜೇಡರ ಬಲೆಯೊಂದಕ್ಕೆ ಅವನ ಮೋರೆ ನುಗ್ಗಿಬಿಟ್ಟಿತು. ಆ ಬಲೆಯ ಸಣ್ಣ ಸಣ್ಣ ಊರ್ಣ ತಂತುಗಳು ಮುಖಕ್ಕೆ ಮುಟ್ಟಿದ ಜಾಗದಲ್ಲೆಲ್ಲಾ ತಣ್ಣಗಾಗಿ ಹೂವಯ್ಯ ಪದ್ಧತಿಯ ಮೇರೆಗೆ ಬಂದಿದ್ದ ಅಭ್ಯಾಸಬಲದಿಂದ ‘ಒಳ್ತು !’ ಎಂದುಕೊಂಡು ಮುಖವನ್ನು ಒರೆಸಿಕೊಂಡನು. ಮತ್ತೆ ತನ್ನ ‘ಒಳ್ತು !’ವಿಗೆ ತಾನೆ ನಕ್ಕನು.

ಹೂವಯ್ಯ ಮನೆಯ ಅಂಗಳಕ್ಕೆ ಹೋಗಿದ್ದನೊ ಇಲ್ಲವೊ, ಸೋಮ ಒಳಗಿನಿಂದ ಅವಸರವಾಗಿ ಓಡಿಬಂದು ಮುತ್ತಳ್ಳಿಯಲ್ಲಿ ಕಳೆದ ರಾತ್ರಿ ನಡೆದಿದ್ದ ಬೆಂಕಿಯ ಅನಾಹುತವನ್ನೂ, ಶ್ಯಾಮಯ್ಯಗೌಡರಿಗಾದ ಅಪಾಯವನ್ನೂ, ಕದಿನಿ ಮಸಿಯಿದ್ದ ಚೀಲಕ್ಕೆ ಕಿಡಿನಿದ್ದು ಸಿಡಿದು ಇಬ್ಬರು ಮಡಿದುದನ್ನೂ ವರ್ಣಿಸಿ ಹೇಳತೊಡಗಿದನು. ಹೂವಯ್ಯ ವಿಸ್ಮಯಸ್ತಬ್ಧನಾಗಿ ಆಲಿಸಿದನು. ನಾಗಮ್ಮನವರು, ಪುಟ್ಟಣ್ಣ, ಕೆಲಸದ ಆಳುಗಳು ಎಲ್ಲರೂ ಸುತ್ತಲೂ ಗುಂಪುಸೇರಿ ಆ ಕಥೆಯನ್ನು ಎರಡನೆಯ ಸಾರಿಯೂ ಭೀತರಾಗಿ ಕೇಳಿದರು.

ಹೂವಯ್ಯ ಮಾತಾಡದೆ ತನ್ನ ಕೊಟಡಿಗೆ ಹೋಗಿ, ಮುತ್ತಳ್ಳಿಗೆ ಹೊರಡಬೇಕೊ ಬೇಡವೊ ಎಂದು ಯೋಚಿಸತೊಗಿದನು. ಮನಸ್ಸು ಇಬ್ಭಾಗವಾಗಿ ಎರಡು ಪಕ್ಷಗಳೂ ಸಮವಾಗಿದ್ದುವು. ಕಷ್ಟಕಾಲದಲ್ಲಿ ನಂಟರನ್ನು ನೋಡಿ ವಿಚಾರಿಸಿಕೊಳ್ಳಬೇಕಾದುದೇನೊ ಹೌದು, ಆದರೆ……

ಹೂವಯ್ಯ ಹೊರಗೆ ಬಂದು ಸೋಮನನ್ನು ಕುರಿತು “ಹಾಗಾದರೆ ಧಾರೆ ಆಗಲಿಲ್ಲವೇನೊ ?” ಎಂದು ಕೇಳಿದನು.

“ಕೆಲವರು ಆಯ್ತು ಅಂಬ್ರಪ್ಪಾ ! ಆಗಲಿಲ್ಲ ಅಂಬರು ಕೆಲವರು ! ಪರಮಾರ್ಥ” ಸೋಮ ಆಕಾಶದ ಕಡೆಗೆ ನೋಡಿ ಕೈತೋರಿ “ಆ ಸ್ವಾಮಿಗೇ ಗೊತ್ತು !” ಎಂದು ಸಿಂಗಪ್ಪಗೌಡರ ಶಿಕ್ಷಣದ ಪ್ರಭಾವವನ್ನು ಅವರಿಗೆ ಕೀರ್ತಿ ತರುವಂತೆ ಪ್ರದರ್ಶಿಸಿದನು.

ಹೂವಯ್ಯ ಒಳಗೆ ಹೊಗಿ ಒಂದು ಕಾಗದದ ಚೂರನ್ನು ಹರಿದುಕೊಂಡು ಒಂದು ಮಗ್ಗುಲಲ್ಲಿ ‘ಬೇಕು’ ಎಂದೂ ಮತ್ತೊಂದರಲ್ಲಿ ‘ಬೇಡ’ ಎಂದೂ ಬರೆದು ಮೇಲಕ್ಕೆಸೆದು ‘ಚೀಟಿ’ ಹಾಕಿದನು.

ಉದ್ವಿಗ್ನಚಿತ್ತತೆಯಿಂದ, ಕಾಗದದ ಚೂರು ಗಾಳಿಯಲ್ಲಿ ಕುಣಿಕುಣಿದಿಳಿದು ನೆಲ ಮುಟ್ಟುವುದನ್ನೆ ಕಾಯುತ್ತಿರಲು, ಚೀಟಿ “ಬೇಡ !” ಎಂದು ಬಿದ್ದಿತು. ಅವನು ಮುತ್ತಳ್ಳಿಗೆ ಹೊರಡಲಿಲ್ಲ.