ಹೂವಯ್ಯನಿಂದ ಸಿಂಗಪ್ಪಗೌಡರು ಹೇಳಿದ್ದ ಕಥೆಯನ್ನೆಲ್ಲ ಕೇಳಿ ತಿಳಿದು ನಾಗಮ್ಮನವರು ಆಶಾಭಂಗದಿಂದುಟಾದ ದುಃಖದಿಂದ ಸಿಟ್ಟುಗೊಂಡರು. ಪ್ರತೀಕಾರ ಸಾಮರ್ಥ್ಯವಿಲ್ಲದ ಆ ಕ್ರೋಧ ತಿರಸ್ಕಾರದ ವೇಷವನ್ನು ತಾಳಿತು.

“ಹೋಗಲಿ ಬಿಡು. ಅವರ ಹೆಣ್ಣು ನಮಗ್ಯಾಕೆ ? ಅವರೇ ಉಬ್ಬೆಗೆ ಹಾಕಿ ಹಣ್ಣು ಮಾಡಿಕೊಳ್ಳಲಿ !….. ನಿನಗೇನು ಹೆಣ್ಣಿಗೆ ಬರಗಾಲವಲ್ಲ ! ಹುಞ ಅಂದರೆ ಕಾಲಿಗೆ ಬಿದ್ದು ಹೆಣ್ಣು ಕೊಡೋರು ಹಮಾ ಜನ ಇದ್ದಾರೆ…. ನನ್ನ ಹತ್ತಿರ ಆಗಲೆ ಆ ಪರ್ಸ್ತಾಪನೂ ಎತ್ತಿದ್ದಾರೆ…. ಆ ಅತ್ತಿಗದ್ದೆ ಹಿರಿಯಣ್ಣ ಗೌಡರ ಮಗಳು ರಂಗಮ್ಮ ಇದ್ದಾಳಲ್ಲಾ ಏನಾಗಿದ್ದಾಳೆ ? ಸ್ವಲ್ಪ ಬಾಯಿ ಉಗ್ಗಾದರೆ ಏನಂತೆ ? ದುಂಡುಮುಖ, ಬಿಳಿ ಮೈ, ಕಣ್ಣು ಮೂಗು ಬಾಯಿ ಕಿವಿ ಎಲ್ಲಾ ನೆಟ್ಟಗಿಲ್ಲೇನು ?…. ಮತ್ತೆ ಆ ನುಗ್ಗಿಮನೆ ತಮ್ಮಣ್ಣಗೌಡರ ಮಗಳು ದಾನಮ್ಮ ಇದ್ದಾಳಲ್ಲಾ, ಏನಾಗಿದ್ದಾಳೆ ?…. ಸ್ವಲ್ಪ ಕಪ್ಪಿರಬೈದು. ಇದ್ರೇನಂತೆ ? ಗಟ್ಟಿಮುಟ್ಟಾಗಿ ಕೆಲಸ ಮಾಡ್ತಾಳೆ….. ಅಥವಾ ಆ ಸಂಪಗೆಹಳ್ಳಿ ಪುಟ್ಟಯ್ಯಗೌಡರ ಮಗಳು ದುಗ್ಗಮ್ಮ, ಅವಳೇನಾಗಿದ್ದಾಳೆ ?….. ಏನೋ ಕಣ್ಣು ಸ್ವಲ್ಪ ವಾರೆ ಅಂತಾರೆ ! ಆದ್ರೇನಂತೆ ! ಕಿವಿ ಸ್ವಲ್ಪ ಮಂದವಂತೆ. ಹಾಂಗೆ ನೋಡಿದರೆ ಸೀತೆ ಕಿವೀನೂ ಮಂದವೇ !….. ಸ್ವಲ್ಪ ಹಲ್ಲು ಉಬ್ಬು ಅವಳಿಗೆ. ಆದರೂ ಅಂದ ಏನೂ ಕೆಟ್ಟಿಲ್ಲ….. ಅಯ್ಯೋ ಬಿಡೋ ! ಇವರು ಹೆಣ್ಣು ಕೊಡ್ತಾರೆ ಅಂತಾ ನಾನೇನು ಗಂಡು ಹೆರಲಿಲ್ಲ ! ಇವರ ಹೆಣ್ಣಿನ ಬಣ್ಣ ಚಿನ್ನ ಅಂತಾ ತಿಳುಕೊಂಡಿದ್ದಾರೇನೊ ! ಅದರ ಅಜ್ಜನಂತಾ ಬಣ್ಣದ ಹೆಣ್ಣುಗಳು ಎಷ್ಟೋ ಬಿದ್ದವೆ !…..”

ನಾಗಮ್ಮನವರು ಹೂವಯ್ಯ ಆಲಿಸುತ್ತಿದ್ದಾನೆಯೊ ಇಲ್ಲವೊ ಎಂಬುದನ್ನೂ ಗಮನಿಸದೆ ತಮ್ಮ ಮನೋಭಾವಗಳನ್ನು ತಮಗೆ ತಾವೆ ಗಟ್ಟಿಯಾಗಿ ಹೇಳಿಕೊಳ್ಳುತ್ತಿದ್ದಾರೆ ಎಂಬಂತೆ ಮಾತಾಡಿದರು. ಹೂವಯ್ಯನ ಮನಸ್ಸಿನಲ್ಲಿ ನೋವು ತುಂಬಿರದಿದ್ದರೆ ತಾಯಿಯ ಸ್ವಗತಭಾಷಣ ಮೃದುಹಾಸ್ಯಪೂರ್ಣವಾಗಿ ತೋರುತ್ತಿತ್ತು. ಆದರೆ ಆಗ ಆತನಿಗೆ ಆ ಒಂದೊಂದು ಮಾತೂ ಶೂಲಪ್ರಾಯವಾಗಿ ಖೇದವನ್ನುಂಟುಮಾಡುತ್ತಿತ್ತು. ನಾಗಮ್ಮನವರಿಗೆ ಬೇಕಾಗಿದ್ದುದು ತಮ್ಮ ಮಗನಿಗೆ  ‘ಒಂದು ಹೆಣ್ಣು.’ ಆ ಹೆಣ್ಣಿಲ್ಲದಿದ್ದರೆ ಈ ಹೆಣ್ಣು ! ಈ ಹೆಣ್ಣು ಸಿಕ್ಕದಿದ್ದರೆ ಊ ಹೆಣ್ಣು ! ಊ ಹೆಣ್ಣು ತಪ್ಪಿದರೆ ಓ ಹೆಣ್ಣು ! ಅಂತೂ ಅವರಿಗೆ ಬೇಕಾದುದು ಒಂದು ಹೆಣ್ಣು ಮಾತ್ರ ! ಆದರೆ ಹೂವಯ್ಯನಿಗೆ ಬೇಕಾದ್ದುದು ಹೆಣ್ಣು ಮಾತ್ರವಲ್ಲ : ಪ್ರೇಮದ ಹೆಣ್ಣು ! ಅವನಿಗೆ ಆ ಪ್ರೇಮದ ಹೆಣ್ಣು ಸೀತೆಯೊಬ್ಬಳಾಗಿದ್ದಳೇ ವಿನಾ – ಅತ್ತಿಗದ್ದೆ ಹಿರಿಯಣ್ಣಗೌಡರ ಮಗಳು ರಂಗಮ್ಮನಾಗಲಿ. ನುಗ್ಗಿಮನೆ ತಮ್ಮಣ್ಣಗೌಡರ ಮಗಳು ದಾನಮ್ಮನಾಗಲಿ. ಸಂಪಿಗೆಹಳ್ಳಿ ಪುಟ್ಟಯ್ಯಗೌಡರ ಮಗಳು ದುಗ್ಗಮ್ಮನಾಗಲಿ – ಬೇರೆ ಯಾರೂ ಆ ಸ್ಥಾನದಲ್ಲಿ ನಿಲ್ಲುವಂತಿರಲಿಲ್ಲ.

ಆ ತಾಯಿಯ ಮನಸ್ಸು ಬೇರೆಯ ಕಡೆಗೆ ತಿರುಗಿಸುವ ಸಲುವಾಗಿಯೂ ಯಾತನೆಯ ಭಾವದಿಂದ ಬಿಡುಗಡೆ ಹೊಂದಲೋಸುಗವೂ ಹೂವಯ್ಯ “ಅವ್ವಾ ಪುಟ್ಟಣ್ಣ ಎಲ್ಲಿ ? ಇನ್ನೂ ಬಂದೇ ಇಲ್ಲೇನು ?” ಎಂದು ಕೇಳಿದನು.

“ಬರಾಕೇನು ? ಆಗಲೇ ಬಂದಾನೆ ! ಹೊಂಗ್ತಾ ಹೊಡರ್ತಾ ಹಾದಿ ಮೋಜಿನಿ ಮಾಡ್ತಾ ಬಂದ ! ಬಹಳ ದಿವಸ ಆಗಿತ್ತು ಕುಡೀದೆ…. ಸಿಕ್ಕಿತು ಅಂತಾ ಚೆನ್ನಾಗಿ ಕುಡಿದಾ ಅಂತಾ ಕಾಣ್ತದೆ ! ಅಲ್ಲೆಲ್ಲೋ ಆ ಮೂಲೇಲಿ ಕಂಬಳಿ ಸುತ್ತಿಕೊಂಡು ಬಿದ್ದಿದ್ದನಪ್ಪಾ…..”

“ನನ್ನ ಹತ್ತಿರ ಆಣೆ ಹಾಕಿಕೊಂಡಿದ್ದಾ ಕುಡಿಯೋದಿಲ್ಲಾ ಎಂದು ?…..”

“ದೇವರಾಣೆ ಹಾಕಿ ಮಾನಪತ್ರಕ್ಕೆ ರುಜು ಹಾಕಿದ್ದೋರೆಲ್ಲಾ ದೊಡ್ಡ ಮನುಷ್ಯರೇ ಕುಡೀತಾರಂತೆ ! ಅವನೇನು ಮಾಡ್ತಾನೆ ಪಾಪ ! ಸಿಕ್ಕಿತು ! ಕುಡಿದಾ ! ಮತ್ತೆ ಸಿಕ್ಕೋತನಕ ಕುಡಿಯೋದಿಲ್ಲಾ !…..”

ಹೂವಯ್ಯನಿಗೆ ದುಃಖವಾಯಿತು. ಪುಟ್ಟಣ್ಣ ಮೇಲೆ ಕೋಪಕ್ಕೆ ಬದಲಾಗಿ ಕನಿಕರ ಹುಟ್ಟಿತು. ಮನುಷ್ಯನ ಸಂಯಮ ಎಷ್ಟು ದುರ್ಬಲವಾದುದು ಎಂದು ! ಸನ್ನಿವೇಶದಿಂದ ದುರಾತ್ವನು ಮಹಾತ್ಮನಾಗಬಹುದು. ಮಹಾತ್ಮನು ದುರಾತ್ಮನಾಗಬಹುದು. ದುರ್ವ್ಯಸನಗಳಿಂದ ಉದ್ದಾರವಾಗಲು ಪುಟ್ಟಣ್ಣನೇನೂ ಹೃತ್ಪೂರ್ವಕವಾಗಿ ಪ್ರಯತ್ನಿಸುತ್ತಿದ್ದನು. ಆದರೆ ಹೂವಯ್ಯನ ಸಾಮಿಪ್ಯ ತಪ್ಪಿ ಸನ್ನಿವೇಶ ಪ್ರಲೋಭನದ ಜಾಲವನ್ನು ತಂದೊಡ್ಡುವುದೇ ತಡ ಬಿದ್ದುಬಿಡುತ್ತಿದ್ದನು ! ಆ ದಿನವೂ ಬೆಳಿಗ್ಗೆ ಸುಬ್ಬಮ್ಮನನ್ನು ಕರೆದುಕೊಂಡು ನೆಲ್ಲುಹಳ್ಳಿಗೆ ಹೋಗಿದ್ದವನು ಬೈಗುಹೊತ್ತಿಗೆ ಸರಿಯಾಗಿ ಚೆನ್ನಾಗಿ ಕುಡಿದು ಹಣ್ಣುಹಣ್ಣಾಗಿ ತತ್ತರಿಸುತ್ತಾ ಬಂದು ಜಗಲಿಯ ಒಂದು ಮೂಲೆಯಲ್ಲಿ ಉರುಳಿದ್ದನು.

ಹೂವಯ್ಯ ಕೈಯಲ್ಲಿ ದೀಪವೊಂದನ್ನು ಹಿಡಿದುಕೊಂಡು ಕತ್ತಲೆಯಲ್ಲಿ ಹುಡುಕುತ್ತಾ ಹೋಗಿ, ಕಸದ ಮೂಲೆಯಲ್ಲಿ ಕಂಬಳಿ ಸುತ್ತಿಕೊಂಡು ಅಸ್ತವ್ಯಸ್ತವಾಗಿ ಒರಗಿದ್ದ ಪುಟ್ಟಣ್ಣನನ್ನು ಕಂಡು, ಬಳಿ ನಿಂತು ಸುಯ್ದು ನೋಡತೊಡಗಿದನು.

ಪುಟ್ಟಣ್ಣನ ತಲೆ ಕೆದರಿ ವಿಕಾರವಾಗಿತ್ತು. ಎಣ್ಣೆಗಪ್ಪಿನ ಮೊರಡಾದ ಅವನ ಮುಖದಲ್ಲಿ ಬಳಲಿಕೆಯ ಚಿಹ್ನೆ ಎದ್ದು ಮೂಡಿತ್ತು. ಸುರಿದ ಬೆವರಿನ ವಾಸನೆಯೊಂದಿಗೆ ಅವನ ಸುಯ್ಲಿನ ಹೆಂಡದ ನಾತವೂ ಸೇರಿ ಸುತ್ತಲೂ ಅಸಹನೀಯವಾಗಿ ಹಬ್ಬಿತ್ತು. ಕಟಬಾಯಿಯಿಂದ ನೊರೆಗೂಡಿದ ಜೊಲ್ಲು ಅಸಹ್ಯವಾಗಿ ಸುರಿದಿತ್ತು. ಮೂಗಿನಿಂದ ಇಳಿದುಬಂದಿದ್ದ ಸಿಂಬಳ ಅವನ ಒರಟಾದ ಕರಿಯ ಮೀಸೆಯ ಕೂದಲುಗಳಲ್ಲಿ ಬೆಳ್ಳಗೆ ಸಿಕ್ಕಿಕೊಂಡಿತ್ತು. ದೀಪದ ಕೆಂಬೆಳಕಿನಲ್ಲಿ ದಿಂಡುರುಳಿದಂತಿದ್ದ ಪುಟ್ಟಣ್ಣನ ದೇಹದ ನೆರಳು ಅಲುಗಾಡುತ್ತಿದ್ದುದು ದೀಪವನ್ನು ಹಿಡಿದುಕೊಂಡು ನಿಂತಿದ್ದ ಹೂವಯ್ಯನ ‘ಅಸ್ಥಿರತೆ’ಯನ್ನು ಮಾತ್ರ ತೋರಿಸುತ್ತಿತ್ತು.

ಮೃದು ಧ್ವನಿಯಿಂದ ಕರುಣಾಪೂರ್ಣವಾಗಿ “ಪುಟ್ಟಣ್ಣ ! ಪುಟ್ಟಣ್ಣ ! ಎಂದು ಕರೆದನು.

ಪುಟ್ಟಣ್ಣ ಅಲುಗಾಡಲಿಲ್ಲ. ಹೆಣದಂತೆ ಬಿದ್ದಿದ್ದನು. ಅವನು ಉಸಿರಾಡುತ್ತಿದ್ದ ಸದ್ದು ಕೇಳಿಸದಿದ್ದಿದ್ದರೆ ಹೆಣವೆಂದೇ ಹೇಳಬೇಕಾಗುತ್ತಿತ್ತು.

ಹೂವಯ್ಯ ಬಾಗಿ ಮೈಮುಟ್ಟಿ ಅಲ್ಲಾಡಿಸಿ “ಪುಟ್ಟಣ್ಣಾ ! ಪುಟ್ಟಣ್ಣಾ !” ಎಂದನು.

ಪುಟ್ಟಣ್ಣ ಕಣ್ದೆರೆದು ದೀಪದ ಬೆಳಕನ್ನು ದುರುದುರನೆ ನೋಡಿ ಮತ್ತೆ ಕಣ್ಮುಚ್ಚಿಕೊಂಡನು. ಕಣ್ಣು ಕೆಂಪಾಗಿದ್ದುವು.

ಹೂವಯ್ಯ ಮತ್ತೆ ಮೈ ಮುಟ್ಟಿ ಕರೆದಾಗ ಪುಟ್ಟಣ್ಣ ಕಣ್ಮರೆಯದೆ ತೊದಲು ತೊದಲಾಗಿ “ನೋಡೂ …. ನನ್ನ…. ತಂಟೇ…. ಬರಬೇಡಾ…. ತೂ !” ಎಂದು ಉಗುಳಿಬಿಟ್ಟನು.

ಹೂವಯ್ಯ ತಟಕ್ಕನೆ ಹಿಂದಕ್ಕೆ ಹಾರಿ ನಿಂತು ಮುಖವನ್ನೊರೆಸಿಕೊಂಡನು. ಮತ್ತೆ ಮುಂದುವರಿದು ಪ್ರಯತ್ನಿಸಲಿಲ್ಲ. ಬಚ್ಚಲು ಮನೆಯಲ್ಲಿ ಮುಖ ತೊಳೆದುಕೊಂಡು ಬಂದು ತನ್ನ ಕೊಠಡಿಗೆ ಹೋಗಿ ಕುರ್ಚಿಯ ಮೇಲೆ ಕುಳಿತುಕೊಂಡನು.

ಪ್ರಪಂಚವೆಲ್ಲವೂ ಒಂದು ಕಡೆಗೂ ತಾನೊಬ್ಬನೇ ಒಂದು ಕಡೆಗೂ ಹೋಗುತ್ತಿರುವಂತೆ ಭಾಸವಾಯಿತು. ತಾನೇ ಪ್ರಪಂಚದ ಕಡೆಗೆ ತಿರುಗಬೇಕೊ ಅಥವಾ ಪ್ರಪಂಚವನ್ನೇ ತನ್ನ ಕಡೆಗೆ ತಿರುಗಿಸಿಕೊಳ್ಳಬೇಕೊ ಒಂದು ಬಗೆಹರಿಯಲಿಲ್ಲ. ಆದರೂ ಮೊದಲನೆಯದು ಸುಲಭವೂ ಸರಾಗವೂ ಆಗಿ ತೋರಿತು. ಬಹುಮಂದಿ ನಡೆದ ಹಾದಿಯಲ್ಲಿ ನಡೆದರೆ ಕಾಲಿಗೆ ಮುಳ್ಳು ಚುಚ್ಚುವುದಿಲ್ಲವಷ್ಟೆ ?

ಸದಾ ತನ್ನ ಸಮೀಪದಲ್ಲಿಯೆ ಇದ್ದುಕೊಂಡು, ತನ್ನ ಮಾತುಕತೆ ಆಚಾರ ವ್ಯವಹಾರಗಳನ್ನು ಕೇಳಿ ನೋಡುತ್ತಿದ್ದು, ತನ್ನಿಂದೆಷ್ಟೋಸಾರಿ ಹಿತವಾದಗಳನ್ನೂ ಕೂಡ ಕೇಳಿ, ತನ್ನ ಜೀವನವನ್ನು ತಿದ್ದುಕೊಳ್ಳುತ್ತೇನೆಂದು ಮನಃಪೂರ್ವಕವಾಗಿ ಪ್ರತಿಜ್ಞೆಮಾಡಿದ್ದ ಪುಟ್ಟಣ್ಣನೇ ಸಲಸಲವೂ ಮುಗ್ಗುರಿಸಿ ಬಿದ್ದು ದುಃಸ್ಥಿತಿಗೀಡಾದ ಮೇಲೆ, ತನ್ನಿಂದ ದೂರವಿರುವ, ವಿರೋಧಿಗಳಾಗಿರುವ, ಉದ್ದಾರಾಕಾಂಕ್ಷೆಯಿಲ್ಲದ ಇತರರನ್ನು ತಿದ್ದುವುದಾದರೂ ಹೇಗೆ ? ಎಂಬ ಹತಾಶ ಭಾವವೂ ಹೂವಯ್ಯನಲ್ಲಿ ಮೂಡಿ ಖಿನ್ನನಾದನು.

ಹಾಗೆಯೇ ಮತ್ತೊಂದಾಲೋಚನೆಯೂ ಮನಸ್ಸಿನಲ್ಲಿ ಇಣುಕಿತು ; ತಾನು ಕಲ್ಪಿಸಿರುವ ಕಿನ್ನರ ಪ್ರಪಂಚಕ್ಕೂ ಈ ವಾಸ್ತವ ನರ ಪ್ರಪಂಚಕ್ಕೂ ಹೊಂದಿಕೆ ಇರುವಂತೆಯಾಗಲಿ ಬರುವಂತೆಯಾಗಲಿ ತೋರುವುದಿಲ್ಲ. ತನ್ನ ವಾಸಗೃಹವನ್ನು ತನ್ನ ಮೈಮೇಲೆಯೆ ಇಟ್ಟುಕೊಂಡಿರುವ ಹುಳುವಿನಂತೆ ಈ ಕಿನ್ನರ ಪ್ರಪಂಚವನ್ನು ಮೈಗೆ ಸುತ್ತಿಸಿ ಹೊತ್ತುಕೊಂಡು ನರ ಪ್ರಪಂಚದಲ್ಲಿ ಬಾಳುವುದೆಂದರೆ, ಹೊರಲಾರದ ಭಾರವನ್ನು ಹೊತ್ತು ಈಜಲು ಪ್ರಯತ್ನಿಸುವಂತೆ, ವ್ಯಥಾ ಶ್ರಮವಿಲ್ಲದೆ ಶ್ರೇಯಸ್ಸಿಲ್ಲ. ಇತ್ಯಾದಿ ಆಲೋಚನೆಗಳ ಪರಿಣಾಮವಾಗಿ ಸೀತೆಯನ್ನು ತಾನು ಮದುವೆಯಾಗಬೇಕಾದರೆ ದಾಕ್ಷಿಣ್ಯ ಲಜ್ಜೆಗಳನ್ನು ಒತ್ತಟ್ಟಿಗಿಟ್ಟು ಕೆಲಸಮಾಡಬೇಕೆಂದು ನಿರ್ಣಯಿಸಿದನು. ವಾದವೇನೊ ಅಷ್ಟೇನೂ ತರ್ಕಬದ್ದವಾಗಿರಲಿಲ್ಲ : ಆದರೆ ಇಚ್ಚಾಬದ್ದವಾಗಿತ್ತು.

ಮನೆಯ ಹೊರಗಡೆ ಬೆಳೆದ ಗದ್ದೆಯಲ್ಲಿ ನಾಯಿಗಳು ಗಟ್ಟಿಯಾಗಿ  ಬಗುಳಿದುವು. ರಾತ್ರಿಯ ನೀರವತೆಯಲ್ಲಿ ಸುತ್ತಣ ಗಿರಿಕಾನನಗಳು ದನಿಯನ್ನು ಕನ್ನಡಿಸಿ ಬೊಗುಳಿದುವು. ಹೂವಯ್ಯ ಕಾಡು ಹಂದಿಗಳೇನಾದರೂ ಬಂದಿರಬಹುದೆಂದು ಬಂದೂಕು ತೆಗೆದುಕೊಂಡು ಹೊರಗೆ ಬಂದನು. ಕತ್ತಲೆಯಲ್ಲಿ ಗುಡ್ಡ ಬೆಟ್ಟ ಕಾಡುಗಳು ಆಕೃತಿ ಮಾತ್ರವಾಗಿದ್ದುವು. ಹೂವಯ್ಯ ಮುಂಬರಿವುದರಿಂದ ನಿಷ್ಪ್ರಯೋಜನವಲ್ಲದೆ ಅಪಾಯವೂ ಉಂಟಾಗಬಹುದೆಂದು ವಿವೇಕಪೂರ್ಣವಾದ  ಆಶಂಕೆಯಿಂದ ಹಿಂತಿರುಗಿದನು.

ಕುರ್ಚಿಯ ಮೇಲೆ ಕುಳಿತುಕೊಂಡು ಮತ್ತೆ ಆಲೋಚಿಸತೊಡಗಿದನು :

ಸೀತೆಯನ್ನು ನಾನೀಗ ಕೈಬಿಟ್ಟರೆ ಆಕೆಗೆ ಮಹಾ ದ್ರೋಹಮಾಡಿದಂತಾಗುತ್ತದೆ. ಆಕೆಯ ತಂದೆತಾಯಿಗಳು ಏನೇ ಹೇಳಲಿ; ಜಾತಕ ಬರಲಿ, ಬಿಡಲಿ ; ಆ ಧನಪಿಶಾಚಿ ವೆಂಕಪ್ಪಯ್ಯ ಜೋಯಿಸನೂ ಅವನ ದೇವರೂ ಏನುಬೇಕಾದರೂ ಮಾಡಿಕೊಳ್ಳಲಿ ; ಚಂದ್ರಯ್ಯಗೌಡರೂ ರಾಮಯ್ಯನೂ ತಲೆಕೆಳಗಾಗಿ ನಡೆಯಲಿ ; ನನ್ನ ಮತ್ತು ನನ್ನ ಸೀತೆಯ ಅಭೀಷ್ಟಸಾಧನೆಯಾಗಲೇ ಬೇಕು ! ಅದಕ್ಕಾಗಿ ಏನನ್ನು ಬೇಕಾದರೂ ಮಾಡಲು ಸಿದ್ಧನಾಗುತ್ತೇನೆ.

ಕಿಟಕಿಯ ಹೊರಗಡೆ ದೂರದ ವನಗಿರಿಶಿರಯಲ್ಲಿ ಉಜ್ವಲವಾದೊಂದು ನಕ್ಷತ್ರ ಸ್ವಲ್ಪ ನೀಲವಾದ ಕಾಂತಿಯಿಂದ ಮಿರುಮಿರುಗಿ ಪ್ರಕಾಶಿಸುತ್ತಾ ಆಗತಾನೆ ಮೂಡಿತ್ತು. ಹೂವಯ್ಯ ಆಲೋಚನೆಯನ್ನು ತುಂಡುಗಡಿದು ಅದನ್ನೇ ನೋಡುತ್ತಾ ಕುಳಿತನು.

ನಾಗಮ್ಮನವರು ಊಟಕ್ಕೆ ಕರೆದರು.

“ಪುಟ್ಟಣ್ಣ ಎದ್ದನೋ ? ಹಾಗೇ ಬಿದ್ದಿದ್ದಾನೋ !”

ಮಗನ ಪ್ರಶ್ನೆಗೆ ತಾಯಿ “ಸೈ ಬಿಡು, ನಿನಗೆ ಕಸುಬಿಲ್ಲ ! ಅವನೆಲ್ಲಿ ಏಳ್ತಾನೆ ಇವತ್ತು ? ನಾಳೆ ಬೆಳಿಗ್ಗೆ ಎದ್ದರೆ ಸಾಕು !” ಎಂದು ಹಿಂತಿರುಗಿ ಅಡುಗೆಮನೆಯ ಕಡೆಗೆ ಹೋಗುತ್ತಾ “ನೀ ಬಾ, ಹೊತ್ತಾಯ್ತು” ಎಂದು ಬಾಗಿ ದಾರಿಯಲ್ಲಿ ಕಾಲಿಗೆ ತಗುಲಿದ ಒಂದೆರಡು ಅಡಕೆ ಕಾಯಿಗಳನ್ನು ಎತ್ತಿ ಕೊನೆ ಕುತ್ತುರೆಗೆ ಎಸೆದು ಒಳಗೆ ಹೋದರು.

ಊಟ ಪೂರೈಸಿ ತನ್ನ ಕೊಠಡಿಗೆ ಬಂದ ಹೂವಯ್ಯ ಕೆಳಗಿಳಿಸಿದ್ದ ಲ್ಯಾಂಪಿನ ಬತ್ತಿಯನ್ನು ಮೇಲಕ್ಕೇರಿಸಿದನು. ಇದ್ದಕಿದ್ದ ಹಾಗೆ ಬೆಳಕು ಕೊಠಡಿಯಲ್ಲಿ ಉಕ್ಕಿ ತುಂಬಿದಂತಾಯಿತು. ಊಟಕ್ಕೆ ಕುಳಿತಿದ್ದಾಗ ನಿರ್ಣಯಿಸಿದ್ದಂತೆ ಸೀತೆಗೆ ಕಾಗದ ಬರೆಯಲೆಂದು ಲೇಖಣಿ ತೆಗೆದುಕೊಂಡನು.

ಹೂವಯ್ಯ ಊಟಮಾಡುತ್ತಿದ್ದಾಗ ತನ್ನ ಇಷ್ಟಸಾಧನೆಯಾಗುವ ಅನೇಕ ಮಾರ್ಗಗಳನ್ನು ಕುರಿತು ಆಲೋಚಿಸಿದ್ದನು. ಯಾವ ಹಾದಿಯೂ ಒಪ್ಪಿಗೆಯಾಗದೆ ಕಡೆಗೆ ಸೀತೆಗೆ ಗುಟ್ಟಾಗಿ ಬರೆಯುವ ಹಾದಿಯಿಂದಲೇ ಕಾರ್ಯಕಾರಿಯಾಗಿ ತೋರಿತ್ತು.

ಹೂವಯ್ಯ ರಸಾವೇಶದಿಂದ ಕಾಗದ ಬರೆಯತೊಡಗಿದನು. ಆಕೆಯಲ್ಲಿ ತನಗಿದ್ದ ಆಗಾಧವಾದ ಪ್ರೇಮವನ್ನೂ ಪ್ರೇಮದ ಪವಿತ್ರತೆ ಶಾಶ್ವತತೆಗಳನ್ನೂ ಸೂಚಿಸಿ, ಆಕೆಗೆ ಗೋಡೆಯ ಮೇಲೆ ‘ಹೂವಯ್ಯ ಬಾವನನ್ನೇ ಮದುವೆಯಾಗುತ್ತೇನೆ’ ಎಂದು ಬರೆದಿದ್ದುದನ್ನೂ ನೆನಪಿಗೆ ತಂದುಕೊಟ್ಟು, ತಾವಿಬ್ಬರೂ ವಿವಾಹದಿಂದ ಏಕಾತ್ಮಕರಾಗಿ ಆನಂದದಿಂದಿರಬಹುದಾದ ಚಿತ್ರವನ್ನೂ ವರ್ಣಿಸಿ, ಆಕೆ ಇನ್ನಾರನ್ನಾದರೂ ಮದುವೆಯಾಗಬೇಕೆಂದು ತಂದೆತಾಯಿಗಳು ಬಲಾತ್ಕರಿಸಿದರೆ ಪ್ರಾಣವನ್ನಾದರೂ ಬಿಡಬೇಕೆಂದೂ, ತಾನೂ ಆಕೆಯನ್ನಲ್ಲದೆ ಇತರರನ್ನು ಕಣ್ಣೆತ್ತಿ ನೋಡುವುದಿಲ್ಲವೆಂದೂ, ಭಯಂಕರವಾದ ಸಲಹೆಗಳನ್ನಿತ್ತು ಪತ್ರವನ್ನು ಪೂರೈಸಿದನು. ಬರೆಯುವ ಜೋರಿನಲ್ಲಿ ಸೀತೆಗೆ ಅರ್ಥವಾಗಬೇಕೆಂಬ ದೃಷ್ಟಿಯೂ ಮರೆತುಹೋಗಿತ್ತು.

ಕಾಗದವೆಲ್ಲಿಯಾದರೂ ಸೀತೆಯ ಕೈಗೆ ಸಿಕ್ಕಿದ್ದರೆ ಅನರ್ಥಕಾರಿಯಾಗದೆ ಇರುತ್ತಿರಲಿಲ್ಲ. ಏಕೆಂದರೆ ಹೂವಯ್ಯನ ಮಾತುಗಳಲ್ಲಿ ಆಕೆಗೆ ಅಷ್ಟೊಂದು ಗಾಢ ವಿಶ್ವಾಸವಿತ್ತು.

ಹೂವಯ್ಯ ತನ್ನ ಪ್ರಣಯ ಪತ್ರವನ್ನು ತಾನೇ ಮೂರು ನಾಲ್ಕು ಸಾರಿ ಓದಿದನು. ಒಂದೊಂದು ಸಾರಿ ಓದಿದಂತೆಲ್ಲ ಅದು ಹೆಚ್ಚು ಅವಿವೇಕವಾಗಿ ತೋರತೊಡಗಿತು. ಕಡೆಯ ಸಾರಿ ಓದಿ ಅದನ್ನು ಲ್ಯಾಂಪಿನ ಜ್ವಾಲೆಗೆ ಹಿಡಿದನು. ಬೆಂಕಿ ಹೊತ್ತಿತ್ತು. ಕಾಗದ ಕರಿಕಲಾಗಿ ಮುರುಟಿಕೊಂಡಿತು.

ಎಲ್ಲರೂ ಮಲಗಿದ್ದ ಮನೆ ನಿಃಶಬ್ದವಾಗಿತ್ತು. ಹೊರಗಡೆಯ ರಾತ್ರಿಯ ಜಗತ್ತೂ ನಿದ್ರಿಸುವಂತಿತ್ತು. ಸೆಕೆಯಾರಿಸಿಕೊಳ್ಳಲೆಂದು ಹೂವಯ್ಯ ಹೊರಗೆ ನಡೆದನು.