ಸುಬ್ಬಮ್ಮ ಪುಟ್ಟಣ್ಣನ ಮೈಗಾವಲಿನಲ್ಲಿ  ನೆಲ್ಲುಹಳ್ಳಿಯ ಕಡೆಗೆ  ನಡೆದು ಕಣ್ಮರೆಯಾದ ಮೇಲೆ ಹೂವಯ್ಯ ಮನೆಯ ಹೊರ ಅಂಗಳದಲ್ಲಿ ನಿಂತು ಆಲೋಚನಾಮಗ್ನನಾದನು.

ಅನತಿದೂರದಲ್ಲಿದ್ದ ಹಸುರಾದ ಬೆಟ್ಟದ ಸಾಲಿಮೇಲೆ ಸೂರ್ಯನು ಮೂಡಿದನು. ಮರ ಮರಗಳಲ್ಲಿ ಪೊದೆಗಳಲ್ಲಿ ಹಕ್ಕಿ ಹಾಡಿದುವು. ಮೃದುಗಾಳಿ, ಬೆಳೆದು ನಿಂತಿದ್ದ ಗದ್ದೆಯ ಕವಿಯಮೇಲೆ, ಸುಯ್ಯೆಂದು ಬೀಸಿ, ಗದ್ದೆಯ ಕೋಗು ತೆರೆತೆರೆಯಾಗುವಂತೆ ಮಾಡುತ್ತಿತ್ತು. ಆ ದೃಶ್ಯದ ಮಧ್ಯೆ, ಗದ್ದೆಯ ನಡುವೆ ಹಾದುಬರುತ್ತಿದ್ದ ಕಾಲುದಾರಿಯಲ್ಲಿ, ಅಡಕೆ ಸುಲಿಯಲೆಂದು ಗೊತ್ತುಮಾಡಿದ್ದ ಕೂಲಿಯಾಳುಗಳು ಹೆಂಗಸರೂ, ಗಂಡಸರೂ – ಬುಡುಬುಡುಕೆಯಂತೆ ತುಮುಲವಾಗಿ ಹರಟೆ ಹೊಡೆಯುತ್ತ ಬಂದರು.

ಹೂವಯ್ಯ ನೋಡುತ್ತಿದ್ದರೂ ಕೇಳುತ್ತಿದ್ದರೂ ಗಮನಿಸಿರಲಿಲ್ಲ. ಅವುಗಳೆಲ್ಲ ಅವನ ಪ್ರಜ್ಞಾವಲಯದ ಅಂಚಿನಲ್ಲಿ ಮಾಸಲು ಮಾಸಲಾಗಿದ್ದುವು. ಅವನ ಧ್ಯಾನ ಅಷ್ಟು ಅಗಾಧವಾಗಿದ್ದಿತೇನು ?

ಇದ್ದಕ್ಕಿದ್ದ ಹಾಗೆ ಹಿಂದಿನಿಂದ ಯಾರೋ ನೂಕಿದಂತಾಗಿ ಬೆಚ್ಚಿಬಿದ್ದ  ಹೂವಯ್ಯ ತಿರುಗಿ ನೋಡಿ, “ಬಲೀಂದ್ರ !” ಎಂದು ಗದರಿ, ನಗುವ ಸಿಟ್ಟಿನಿಂದ ಅದರ ಗಿಡ್ಡಗೋಡುಗಳನ್ನು ಹಿಡಿದು ಜಗ್ಗಿಸುತ್ತಾ ” ನಿನಗೇನು ತಿಂದ ಸೊಕ್ಕೆನು ? ಹೀಗೆ ಸೊಕ್ಕಿದರೆ ಮತ್ತೆ ಬಲಿಯಾಗ್ತೀಯ ಭೂತಕ್ಕೆ !” ಎಂದು ಗದರಿಸಿದನು.

ಆದರೆ ಆ ಸುಪುಷ್ಟವಾಗಿದ್ದ ಮಹಾಕಾಯದ ಕರಿಯ ಹೋತವು ಸ್ವಾಮಿಭಕ್ತಿಯನ್ನು ಪ್ರದರ್ಶಿಸುವ ಸಲುವಾಗಿಯೊ, ತನ್ನ ಪ್ರಾಣವನ್ನುಳುಹಿದ ಕೃತಜ್ಞತೆಗಾಗಿಯೊ, ಯೌವನಾಧಿಕ್ಯದ ಆನಂದ ಪ್ರದರ್ಶನಾರ್ಥವಾಗಿಯೊ ಅಥವಾ ಸಾಧುಪ್ರಾಣಿಗೆ ಸಹಜವಾದ ಪ್ರೀತಿಗಾಗಿಯೊ ತನ್ನ ಮೈಯನ್ನು ಹೂವಯ್ಯನ ಮೈಗೆ ಉಜ್ಜುತ್ತ, ಕತ್ತೆತ್ತಿ, ಎರಡಂಗುಲದ ಗಡ್ಡದಿಂದಲೂ, ಜೋಲಾಡುತ್ತಿದ್ದ ಕುತ್ತಿಗೆಯ ಮೊಲೆಗಳಿಂದಲೂ, ಎವೆಯಿಕ್ಕದೆ ಯಜಮಾನನ ಮುಖವನ್ನು ನೋಡುತ್ತಿದ್ದ ಜೀವಪೂರ್ಣವಾದ ಕಣ್ಣುಗಳಿಂದಲೂ ಮಾನವ ಸಮಾನವಾಗಿ ಆಚರಿಸಿತೊಡಗಿತು. ಹೂವಯ್ಯ ಬಾಗಿ, ಅದರ ಕುತ್ತಿಗೆಯನ್ನು ಕಂಕುಳಲ್ಲಿ ಅವುಚಿಕೊಂಡು, ಅದರೊಡನೆ ವಿನೋದಕ್ಕಾಗಿ ಮಾತಾಡುತ್ತಿದ್ದನು. ಹೋತದ ಮೈಯ ಸಿನುಗುವಾಸನೆ ಮೂಗಿನೊಳಗೆ ನುಗ್ಗುತ್ತಿತ್ತು.

ಹೂವಯ್ಯ ಭೂತಕ್ಕೆ ಬಲಿಯಾಗಿದ್ದ ಆ ಹೋತವನ್ನು ಸಂರಕ್ಷಿಸಿದಂದಿನಿಂದ ಅದು ಅವನ ಅವನದಾಗಿಹೋಗಿತ್ತು. ಮತ್ತಾರಿಗೂ ಆ ಪ್ರಾಣಿಯ ಸ್ವಾಮ್ಯವನ್ನು ವಹಿಸಿಕೊಳ್ಳುವಷ್ಟು ಧೈರ್ಯವಿರಲಿಲ್ಲ. ಭೂತಕ್ಕೆ ಬಲಿಯಾಗಲಿದ್ದ ಪ್ರಾಣಿಯನ್ನು ತಪ್ಪಿಸದ ಜವಾಬ್ದಾರಿ ತಮ್ಮದಾಗಿ, ಭೂತದ ಕ್ರೋಧಕ್ಕೆಲ್ಲ ತಾವೇ ಬಲಿಯಾಗಬೇಕಾಗುತ್ತದೆಯೋ ಎಂದು ಯಾರೂ ಅದರ ಗೋಜಿಗೆ ಹೋಗಲಿಲ್ಲ. ಅಷ್ಟೇ ಅಲ್ಲ. ಕೂಲಿಯಾಳುಗಳೆಲ್ಲರೂ ಆ ಹೋತಕ್ಕಾಗಿ ಎಳ್ಳನಿತು ಕೆಲಸ ಮಾಡಲೂ ಕೂಡ ಹಿಂಜರಿದರು. ಕುರಿ ಕಾಯುವವನು ಅದನ್ನು ಇತರ ಕುರಿಗಳ ಜೊತೆ ಸೇರಿಸಲು ಒಪ್ಪಲಿಲ್ಲ. ಸೊಪ್ಪು ಹಾಕುವವನು ಸೊಪ್ಪು ಹಾಕಲು ಸಮ್ಮತಿಸಲಿಲ್ಲ. ಹೋತ ಸ್ವಾಭಾವಿಕವಾಗಿ ಬಲಶಾಲಿಯಾಗಿದ್ದುದರಿಂದಲೂ ಅನೇಕ ಸಾರಿ ಹೂವಯ್ಯನೊಡನೆ ನಾಯಿಗಳ ಸಮೂಹದಲ್ಲಿ ನಿರ್ಲಕ್ಷ್ಯವಾಗಿರುತ್ತಿದ್ದುದರಿಂದಲೂ ಅದು ನಾಯಿಗಳಿಗೂ ಹೆದರುತ್ತಿರಲಿಲ್ಲ. ಅದಕ್ಕೆ ಬದಲಾಗಿ ನಾಯಿಗಳೇ ಅದಕ್ಕೆ ಭಯಪಡತೊಡಗಿದ್ದುವು. ಅದನ್ನು ನೋಡಿ ಕೆಲವು ಮೂಢರು ಭೂತರಾಯನೇ ಬಂದು ಅದರೊಳಗೆ ವಾಸಮಾಡುತ್ತಿರುವುದರಿಂದ ನಾಯಿಗಳೂ ಅದಕ್ಕೆ ಹೆದರುತ್ತವೆ ಎಂದು ಸುದ್ದಿ ಹುಟ್ಟಿಸಿದರು. ಹೋತದ ಮೇಲಿದ್ದ ಭೂತ ಮನುಷ್ಯರ ಕಣ್ಣಿಗೆ ಕಾಣಿಸದಿದ್ದರೂ ನಾಯಿಗಳಿಗೆ ಕಾಣಿಸುತ್ತದೆ ಎಂಬುದು ಅವರ ನಂಬುಗೆಯಾಗಿತ್ತು. ಹೀಗೆ ಆ ಹೋತ ದೇವರಿಗೆ ಬಿಟ್ಟ ಬಸವನಂತೆ ಸ್ವೇಚ್ಚಾಚಾರಿಯೂ ಬಲಿಷ್ಟವೂ ಸ್ವಲ್ಪಮಟ್ಟಿಗೆ ಧೂರ್ತವೂ ಪುಕ್ಕಲೆದೆಯವರಿಗೆ ಭೀಕರವೂ ಆಗಿ ಸಂಪೂರ್ಣ ಸ್ವರಾಜ್ಯವನ್ನು ಅನುಭವಿಸುತ್ತಿತ್ತು.

ಕಾನೂರಿನಲ್ಲಿ ನಡೆಯುತ್ತಿದ್ದ ಕಷ್ಟಸಂಕಟಗಳಿಗೂ ಅನಾಹುತಗಳಿಗೂ ಜಗಳಗಳಿಗೂ ರೋಗರುಜೆಗಳಿಗೂ ಎಲ್ಲಕ್ಕೂ ಆ ಹೋತವೇ ಮುಖ್ಯಕಾರಣವೆಂಬ ಭಾವವೂ ಸಾಮಾನ್ಯವಾಯಿತು. ಮನೆ ಪಾಲಾದುದು, ವಾಸು ಮೂರ್ಛೆಹೋದುದು, ಚಂದ್ರಯ್ಯಗೌಡರಿಗೆ ಧಾತು ಹಾರಿದುದು, ಅವರು ಸುಬ್ಬಮ್ಮಗೆ ಹೊಡೆಯುತ್ತಿದ್ದುದು, ಬಯ್ಯುತ್ತಿದ್ದುದು-ಎಲ್ಲಕ್ಕೂ, ‘ಅನಿಷ್ಟಕ್ಕೆ ಶನಿ ಗುರಿ’ ಎಂಬಂತೆ, ಹೋತವೆ ಗುರಿಯಾಯಿತು.

ಅನೇಕ ಸಾರಿ ಚಂದ್ರಯ್ಯಗೌಡರು, ಸೇರೆಗಾರರು, ಗಂಗೆ, ಹಳೇಪೈಕದ ತಿಮ್ಮ, ನಿಂಗ – ಇವರು ” ಆ ಹೋತವನ್ನು ಭೂತಕ್ಕೆ ಮತ್ತೆ ಬಲಿಕೊಟ್ಟು ಹೊರತೂ ಊರಿಗೆ ಸುಖವಿಲ್ಲ” ಎಂದು ಸರಭಸವಾಗಿ ವಾದಿಸಿದ್ದರು. ನಾಗಮ್ಮನವರೂ ಕೂಡ ತಮ್ಮ ಮಗನೊಡನೆ ಹಾಗೆಯೇ ವಾದಿಸಿದ್ದರು. ಆದರೆ ಹೂವಯ್ಯ ಯಾವುದನ್ನೂ ಲಕ್ಷಿಸದೆ ಹೋತದೊಡನೆ ಸರಸ ಸಂಗಾತಿಯಾಗಿರುತ್ತಿದ್ದನು. ಮನೆ ಪಾಲಾಗಿ ಹೋತ ಹೂವಯ್ಯರಿಬ್ಬರೂ ಕೆಳಕಾನೂರಿಗೆ ಹೋದಮೇಲೆಯೂ ಕೂಡ ಹೋತದ ವಿಚಾರವಾಗಿದ್ದ ಮೊದಲಿನ ಭಾವನೆಗಳು ಬಾಡುವ ಬದಲಾಗಿ ಇನ್ನೂ ಚೆನ್ನಾಗಿ ಅರಳಿದುವು.

ಗಟ್ಟದಾಳುಗಳಲ್ಲಿಯೂ ಬೇಲರದಲ್ಲಿಯೂ ” ಭೂತ ಹೂವಯ್ಯಗೌಡರ ಕೈವಶವಾಗಿ ಹೋತದಲ್ಲಿ ವಾಸಿಸುತ್ತಿದೆ. ಅವರು ಹೇಳಿದ ಹಾಗೆ ಭೂತ ಕೇಳುತ್ತದೆ ” ಎಂಬ ಅಭಿಪ್ರಾಯ ಪ್ರಬಲವಾಯಿತು. ಆದ್ದರಿಂದ ಹೂವಯ್ಯನಿಗೆ. ಅವನಿಗೆ ಗೊತ್ತಿಲ್ಲದಿದ್ದರೂ, ಒಂದು ಉಪಕಾರವಾಯಿತು.

ಚಂದ್ರಯ್ಯಗೌಡರು ಬೈರ ಸೇಸಿ ಇವರನ್ನುಳಿದು ಇತರ ಆಳುಗಳಿಗೆಲ್ಲ ಸೇರೆಗಾರರ ಮುಖಾಂತರವೂ ನಿಂಗನ ಮುಖಾಂತರವೂ ಗುಟ್ಟಾಗಿ ಹೂವಯ್ಯನಿಗೆ ಕೆಲಸಕಾರ್ಯಗಳಲ್ಲಿ ಯಾವ ರೀತಿಯಿಂದಲೂ ಸಹಾಯವಾಗಬಾರದೆಂದು ಹೇಳಿಸಿದ್ದರು. ಮೊದಮೊದಲು ಅವರೆಲ್ಲರೂ ಆ ಪಿತೂರಿಗೆ ಒಳಗಾಗಿ ಹೇಳಿದ ಹಾಗೆ ಮಾಡಿದುದರಿಂದ ಹೂವಯ್ಯನಿಗೆ ಕಾಮಗಾರಿ ಮಾಡಿಸುವುದೇ ಕಷ್ಟವಾಯಿತು. ಆದರೆ ಯಾವಾಗ ಹೂವಯ್ಯನ ‘ಅತಿಮಾನುಷತೆ’ ಮಂದಿಯಲ್ಲಿ ಹಬ್ಬಿತೋ ಆಗ ಪ್ರಾಣಭಯದಿಂದ ಪ್ರೇರಿತರಾಗಿ ಅವರೆಲ್ಲರೂ ಅವನು ಕೆಲಸಕ್ಕೆ ಕರೆದಾಗ ಗುಟ್ಟಾಗಿ ಹೋಗುತ್ತಿದ್ದರು.

ಹೂವಯ್ಯನ ‘ಅತಿಮಾನುಷತೆ’ಯ ವಾರ್ತೆ ಜನಜನಿತವಾಗಿ ಹಬ್ಬಲು ಅನೇಕ ಕಾರಣಗಳಿದ್ದುವು. ಆಗಾಗ ಅವನಿಗಾಗುತ್ತಿದ್ದ ಭಾವಸಮಾಧಿ ; ಅವನು ಇತರರಂತಲ್ಲದೆ ಏಕಾಂತದಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದುದು ; ಅರಣ್ಯಗಳಲ್ಲಿ ಕುಳಿತು ಧ್ಯಾನಿಸುತ್ತಿದ್ದುದು ; ಇತರರಿಗೆ ತಿಳಿಯದ ಭಾಷೆಗಳಲ್ಲಿ ದೊಡ್ಡ ದೊಡ್ಡ ಗ್ರಂಥಗಳನ್ನು ಓದುತ್ತಿದ್ದುದು ; ಸಾಮಾನ್ಯರ ಮೌಢ್ಯಗಳನ್ನೆಲ್ಲ ಖಂಡಿಸಿ, ಸಂಪ್ರದಾಯದಿಂದ ಬಂದ ‘ದೆಯ್ಯ ದ್ಯಾವರು’ಗಳ ಆರಾಧನೆಯನ್ನು ಮಾಡದೆಯೂ ಆರೋಗ್ಯಕ್ಕಾಗಿ ಇರುತ್ತಿದ್ದುದು ; ಹೋತದ ವೃತ್ತಾಂತ ಇವೆಲ್ಲವೂ ಸೇರಿ ಅವನ ಸುತ್ತಲೂ ಒಂದು ಅತಿಮಾನುಷತಾ ಪರಿವೇಷವನ್ನು ಕಲ್ಪಿಸಿದ್ದುವು. ಹೂವಯ್ಯನ ಕಿವಿಗೂ ಆ ಸಂಗತಿ ಬಿದ್ದಿತ್ತು. ಅದನ್ನು ಪರಿಹರಿಸಿ ತಿದ್ದಲೆಂದು. ಅವನು ಮಾಡಿದ ಕೆಲವು ಪ್ರಯತ್ನಗಳು ಆ ಪ್ರತೀತಿಯನ್ನು ಮತ್ತಷ್ಟು ಪ್ರಜ್ವಲಿಸಲು ತೊಡಗಿದುದರಿಂದ ಸುಮ್ಮನಾಗಬೇಕಾಯಿತು.

ಈ ಎಲ್ಲ ವಿನೋದದ ವಿಚಾರಗಳನ್ನು ಕುರಿತು ಅವನು ಹೋತದೊಡನೆ ಮಾತಾಡುತ್ತಿದ್ದನು : ‘ನಿನ್ನಲ್ಲಿ ಭೂತ ಇದೆಯೇನು?’  ‘ಎಲ್ಲಿದೆ ?’  ‘ಕಣ್ಣಿನಲ್ಲಿ ಇದೆಯೋ ಗಡ್ಡದಲ್ಲಿದೆಯೋ ಹೇಳು !’

ಇತ್ಯಾದಿಯಾಗಿ ಅವನೇನೋ ಕುಚೇಷ್ಟೆಗಾಗಿ ಹೋತದೊಡನೆ ಮಾತಾಡುತ್ತಿದ್ದರೂ ಅಡಕೆ ಸುಲಿಯಲೆಂದು ಬಂದಿದ್ದ ಆಳುಗಳು ದೂರದಲ್ಲಿ ಬೆರಗಾಗಿ ನಿಂತು ಹೂವಯ್ಯಗೌಡರು ಭೂತದೊಡನೆ ಸಂಭಾಷಿಸುತ್ತಿರುವುದನ್ನು ಭೀತಿ ಭಕ್ತಿಯಿಂದ ದೃಷ್ಟಿಸುತ್ತಾ ಒಬ್ಬರಕಡೆಗೊಬ್ಬನು ನೋಡಿ ಸನ್ನೆಯಿಂದಲೆ ಮಾತಾಡಿಕೊಳ್ಳುತ್ತಿದ್ದರು.

ಅಡುಗೆ ಮನೆಯ ಕಿಟಕಿಯಿಂದ ಅದೆಲ್ಲವನ್ನೂ ನೋಡಿದ ನಾಗಮ್ಮನವರು ಎದೆನೊಂದುಕೊಂಡು ಹೊರಗೆ ಬಂದು ಆಳುಗಳಿಗೆ “ಅಲ್ಲೇನು ನೋಡ್ತೀರೋ ನಿಮ್ಮ ಕೆಲಸ ಬಿಟ್ಟು ? ನಡೀರಿ, ನಡೀರಿ ! ಅಡಕೆ ಸುಲೀರಿ” ಎಂದು ಗದರಿಸಿ, ಮಗನನ್ನು ಕುರಿತು “ಜನಗಳಾಡೋದಕ್ಕೂ ನೀ ಮಾಡೋದಕ್ಕೂ ಸರಿಯಾಗ್ತದೆ ! ಅದೆಲ್ಲೊ ಒಂದು ‘ಅನಿಷ್ಟ’ ಸಿಕ್ಕಿಬಿಟ್ಟಿದೆ ನಿನಗೆ !….. ಥೂ, ಬಿಟ್ಟು ಬರ್ತೀಯೋ ಇಲ್ಲೋ ಇತ್ತಲಾಗಿ !” ಎಂದು ಒಂದು ಸೌದೆ ಕೋಲನ್ನು ನೆಲದಿಂದ ಎತ್ತಿಕೊಂಡು ಹೋಗಿ ಹೋತನನ್ನು ಓಡಿಸಿದರು.

ಹೂವಯ್ಯ ತಾಯಿಯನ್ನು ನೋಡಿ ನಸುನಗುತ್ತ “ನಿಮಗೆಲ್ಲ ಈ ಭೂತದ ಭ್ರಾಂತಿ ತೊಲಗುತ್ತದೊಯೋ ಆ ದೇವರೇ ಬಲ್ಲ!” ಎಂದನು.

ಬಲೀಂದ್ರ (ಹೋತಕ್ಕೆ ಹೂವಯ್ಯನಿಟ್ಟಿದ್ದ ಹೆಸರು) ಹಿಂತಿರುಗಿ ನೋಡುತ್ತಾ ಮೋಟು ಬಾಲವನ್ನು ಕುಣಿಸಿ, ನೆಗೆದು ಚಿಮ್ಮುತ್ತಾ, ಹರ್ಷಕ್ಕೆ ಅರಚುತ್ತಾ, ಮೇಯಲು ಕಾಡಿನ ಕಡೆಗೆ ನಡೆಯಿತು.

ಬಲೀಂದ್ರ ಕಣ್ಮರೆಯಾದ ಮೇಲೆ ಹೂವಯ್ಯ ತುಂಡುಗಡಿದಿದ್ದ ತನ್ನ ಆಲೋಚನೆಯನ್ನು ಮತ್ತೆ ನೆನಪಿಗೆ ತಂದುಕೊಂಡು, ತಾನು ಮುತ್ತಳ್ಳಿಗೆ ಹೋಗಿ ಆ ದಿನವೇ ಸಾಯಂಕಾಲದ ಒಳಗಾಗಿ ಬರುವುದಾಗಿ ತಾಯಿಗೆ ಹೇಳಿದನು.

ನಾಗಮ್ಮನವರು “ಬರ್ತಾ ಹಾಂಗೇ ಸೀತೆಮನೆಗೂ ಹೋಗಿ ನಿನ್ನ ಸಿಂಗಪ್ಪಕಕ್ಕಯ್ಯನ್ನೂ ಕಂಡು ಬಾ. ನಾನು ಏನೋ ಹೇಳಿದ್ದೆ ಅವರಿಗೆ. ಅದೇನಾಯ್ತು ಅಂತಾ ಕೇಳಿಕೊಂಡು ಬಾ” ಎಂದು ಅರ್ಥಪೂರ್ಣವಾಗಿ ಮಗನ ಕಡೆ ನೋಡಿದರು.

“ಏನು ನನಗೆ ಹೇಳಬಾರದೇನು ?”

“ನಿನಗ್ಯಾಕೆ ಅವೆಲ್ಲಾ ? ನೀ ಸುಮ್ಮನೆ ಕೇಳಿಕೊಂಡು ಬಾ. ಆಮೇಲೆ ಹೇಳ್ತೀನಿ !” ಎಂದು ನಗುನಗುತ್ತಾ ನಾಗಮ್ಮನವರು ಇನ್ನು ಹೆಚ್ಚು ಹೊತ್ತು ನಿಂತರೆ ಪ್ರಶ್ನೆಗಳ ಬಲೆಯಲ್ಲಿ ಸಿಕ್ಕಿಕೊಳ್ಳಬೇಕಾಗುತ್ತದೆ ಎಂದು ಹೆದರಿ ನುಸುಳುವವರಂತೆ ಅಲ್ಲಿಂದ ಹೋದರು.

ಮುತ್ತಳ್ಳಿಗೆ ಹೋದ ಹೂವಯ್ಯ ಶ್ಯಾಮಯ್ಯಗೌಡರಿಗೂ ಚಿನ್ನಯ್ಯನಿಗೂ ಹಿಂದಿನ ದಿನದ ರಾತ್ರಿ ಕಾನೂರಿನಲ್ಲಿ ನಡೆದ ವಿಷಯಗಳನ್ನೆಲ್ಲ ತಾನು ಕೇಳಿ ನೋಡಿದ್ದಂತೆ ವಿವರವಾಗಿ ತಿಳಿಸಿ, ಒಡನೆಯೆ ಕಾನೂರಿಗೆ ಬಂದು ಚಂದ್ರಯ್ಯಗೌಡರಿಗೆ  ಬುದ್ಧಿ ಹೇಳಿ ಎಲ್ಲವನ್ನೂ ಸರಿಪಡಿಸದಿದ್ದರೆ ಮುಂದೆ ಏನಾದರೂ ಅನಾಹುತವಾಗುತ್ತದೆ ಎಂಬುದನ್ನು ಸೂಚಿಸಿದನು.

“ನಾನಾಗಲೇ ಹೇಳಿದ್ದೆ ಅವರಿಗೆ, ನಿಮಗೆ ಈ ವಯಸ್ಸಿನಲ್ಲಿ ಮದುವೆ ಬೇಡ ಎಂದು. ನನ್ನ ಮಾತು ಕೇಳಲಿಲ್ಲ” ಎಂದು ಗೊಣಗುತ್ತ ಶ್ಯಾಮಯ್ಯಗೌಡರು ನಂಜನನ್ನು ಕರೆದು ಮಧ್ಯಾಹ್ನದ ಊಟವಾದೊಡನೆ ಕಾನೂರಿಗೆ ಗಾಡಿ ಕಟ್ಟಬೇಕೆಂದು ಬೆಸಸಿದರು.

ಉಟ ಮುಗಿಸಿ ಕೈತೊಳೆದುಕೊಂಡು ಜಗಲಿಗೆ ಬರುತ್ತಿದ್ದ ಹೂವಯ್ಯನನ್ನು ಕರೆದು ಗೌರಮ್ಮನವರೂ ಆ ಕಥೆಯನ್ನೆಲ್ಲ ಕೇಳಿ ನಿಡುಸುಯ್ದು, ಹತ್ತಿರ ನಿಂತಿದ್ದ ಸೀತೆಯ ಕಡೆಗೆ ಕನಿಕರದಿಂದಲೆಂಬಂತೆ ನೋಡಿದರು.

ಹೂವಯ್ಯನಿಗಾಗಲಿ ಆ ನೋಟದಲ್ಲಿ ಅಡಗಿದ್ದ ರಹಸ್ಯವೂ ಖೇದವೂ ಒಂದು ತೆರನಾದ ಪಶ್ಚಾತ್ತಾಪದ ಭಾವವೂ ಎಳ್ಳನಿತೂ ಹೊಳೆಯಲಿಲ್ಲ. ಚಂದ್ರಯ್ಯಗೌಡರಿಗೂ ಶ್ಯಾಮಯ್ಯಗೌಡರಿಗೂ ಗೌರಮ್ಮನವರಿಗೂ ಪರಸ್ಪರವಾಗಿ ತಮ್ಮ ಮಕ್ಕಳ ಲಗ್ನದ ವಿಚಾರವಾಗಿ ಒಳಗೊಳಗೆ ನಡೆಯುತ್ತಿದ್ದ ಮಾತುಕತೆಗಳೂ ಮನಸ್ತಾಪಗಳೂ ಹೋರಾಟಗಳೂ ಸೀತೆ ಹೂವಯ್ಯರಿಗೆ ಗೊತ್ತಾಗುವುದು ತಾನೇ ಹೇಗೆ ?

ಆದರೆ ಹೂವಯ್ಯನಿಗೆ ಅಂದು ಸಾಯಂಕಾಲದೊಳಗೆ ಗೊತ್ತಾಗುತ್ತದೆ !

ಶ್ಯಾಮಯ್ಯಗೌಡರೂ ಹೂವಯ್ಯನೂ ಗಾಡಿಯಲ್ಲಿ ಕುಳಿತು ಹೊರಟರು. ಗೌಡರು ನಾಗಮ್ಮನವರ ಯೋಗಕ್ಷೇಮ, ಹೂವಯ್ಯನ ಮನೆಗೆಲಸ, ಗದ್ದೆ ತೋಟಗಳ ಪೈರು, ಅಡಕೆ ಕೊಯಿಲು, ಇತ್ಯಾದಿಗಳ ವಿಚಾರವಾಗಿ ಮಾತಾಡಿದರು. ಹೂವಯ್ಯ ಹೌದು ಅಲ್ಲ, ಆಞ, ಊಞ, ಎಂಬ ಸಂಕ್ಷೇಪವಾದ ಉತ್ತರಗಳನ್ನು ಕೊಡುತ್ತಾ ಇನ್ನೇನನ್ನೊ ಆಲೋಚಿಸುತ್ತಿದ್ದನು. ಕೈಮೀರುವುದರೊಳಗೆ ಶ್ಯಾಮಯ್ಯಗೌಡರಿಗೆ ತಿಳಿಸಬೇಕೆಂದು ಅನೇಕ ತಿಂಗಳುಗಳಿಂದಲೂ ಅವನ ಮನಸ್ಸಿನಲ್ಲಿ ಹೊಂಚುಹಾಕುತ್ತಿದ್ದ ಒಂದು ಆಲೋಚನೆ ಇಂದು ಮತ್ತೆ ಕಣ್ಣೆರೆದು ಮೈಮುರಿದು ಎಚ್ಚರವಾಗಿದ್ದಿತು.

ಎರಡು ಮೂರು ಸಾರಿ ಆ ಮಾತನ್ನು ಎತ್ತಬೇಕೆಂದು ಪ್ರಯತ್ನಸಿದಾಗಲೆಲ್ಲ ಅದು, ಬೆಟ್ಟದಿಂದ ಉರುಳಿ ಬಂದ ಹೊಳೆ ಮರುಭೂಮಿಯಲ್ಲಿ ಬತ್ತುವಂತೆ, ಎದೆಯಿಂದ ಬಂದುದು ಗಂಟಲಿನಲ್ಲಿಯೆ ಲಯಹೊಂದುತ್ತಿತ್ತು. ನಂಜನೊಬ್ಬನಿಲ್ಲದಿದ್ದರೆ ಹೇಳಿಬಿಡುತ್ತಿದ್ದೆ ! ತನಗೆ ಮಗಳನ್ನು ಕೊಡಬೇಕೆಂದು ತಾನೇ ಕೇಳುವುದೇ ಮಹಾಕಷ್ಟದ ಕಾರ್ಯ ! ಅದರಲ್ಲಿಯೂ ಅನ್ಯರಿರುವಾಗ ಅಸಾಧ್ಯ ! ಆದರೂ ಆಗಲಿ ಇನ್ನೊಂದು ಫರ್ಲಾಂಗು ದಾಟಿದ ಮೇಲೆ ಕೇಳುತ್ತೇನೆ, ಎಂದು ಮನಸ್ಸು ಗಟ್ಟಿಮಾಡಿಕೊಂಡನು.

ಅದೇಕೆ ಫರ್ಲಾಂಗು ದಾಟಬೇಕು ? ಎಂದು ಯಾರಾದರೂ ಕೇಳಿದ್ದರೆ ಖಂಡಿತವಾಗಿಯೂ ಸರಿಯಾದ ಕಾರಣ ಸಿಕ್ಕುತ್ತಿರಲಿಲ್ಲ.

ಫರ್ಲಾಂಗೂ ದಾಟಿತು. ಆದರೂ ಹೂವಯ್ಯ ಕೇಳಲಿಲ್ಲ. ಮುಂದಿನ ಮೈಲಿಕಲ್ಲು ಕಣ್ಣಿಗೆ ಕಾಣಿಸಿದ ಕೂಡಲೆ ಸ್ವಲ್ಪವೂ ಆಲೋಚಿಸದೆ ಹಿಂದು ಮುಂದು ನೋಡದೆ ತಡಮಾಡದೆ ಕೇಳಿಬಿಡುತ್ತೇನೆ ಎಂದು ದೃಢವಾಗಿ ನಿರ್ಧರಿಸಿ ಕುಳಿತನು. ಕ್ಷಣಕ್ಷಣಕ್ಕೂ ಗಾಡಿ ಮುಂದುವರಿದಂತೆಲ್ಲ ಅವನ ಎದೆ ದಡದಡನೆ ಹೊಡೆದುಕೊಳ್ಳಲಾರಂಭಿಸಿತು. ಇನ್ನೇನು ಮೈಲಿಕಲ್ಲು ಬಂದುಬಿಡುತ್ತದೆ ! ಬಂದೇ ಬಿಡುತ್ತದೆ !

ಮೊದಲು ಏನೆಂದು ಪ್ರಾರಂಭಿಸಲಿ ?

“ನಾನು ಬಹಳ ದಿನದಿಂದ ನಿಮ್ಮನ್ನೊಂದು ಪ್ರಶ್ನೆ ಕೇಳಬೇಕೆಂದಿದ್ದೇನೆ !…..ಚಿತ್ಚೂ ! ಹಾಗೆ ಪ್ರಾರಂಭಿಸುವುದು ಚೆನ್ನಾಗಿಲ್ಲ.

“ಮಾವ, ಸೀತೆ ಈವಾಗ ಆರೋಗ್ಯವಾಗಿದ್ದಾಳಷ್ಟೆ ?”

ಈಗತಾನೆ ನೋಡಿಕೊಂಡು ಬಂದಿದೇನೆ ! ಹಾಗೆ ಪ್ರಶ್ನೆ ಕೇಳಿದರೆ ‘ನನಗೆ ತಲೆ ನೆಟ್ಟಗಿಲ್ಲ’ ಎಂದು ಜನರು ಹೇಳುತ್ತಿರುವುದನ್ನು ನಾನೇ ಹೇಳಿಕೊಂಡ ಹಾಗಾಗುತ್ತದೆ !

ಈಗ ನಡೆಯುತ್ತಿರುವ ಅನಾಹುತಕ್ಕೆಲ್ಲ ಆ ಹಾಳು ಅಗ್ರಹಾರದಿಂದ ವೆಂಕಪ್ಪಯ್ಯ ಜೋಯಿಸನೇ ಮೂಲಕಾರಣ. ಅವನೇ ಅಲ್ಲವೆ ಜಾತಕ ನೋಡಿ ಚಿಕ್ಕಯ್ಯನಿಗೆ ಮದುವೆ ಮಾಡಿಸಿದ್ದು ?”

ಉಞ ಹುಞ, ಹಾಗೆ ಪ್ರಾರಂಭಿಸಬಾರದು. ವೆಂಕಪ್ಪಯ್ಯನಲ್ಲಿ ಇವರಿಗೆಲ್ಲಾ ಬಹಳ ಗೌರವ, ನಂಬಿಕೆ, ಭಕ್ತಿ !……

ಒಂದು ಸಾರಿ ಗಾಡಿಯ ಚಕ್ರ ಒಂದು ಕಲ್ಲನ್ನು ಹತ್ತಿ ಬಾರಿ ಬಲವಾಗಿ ಕುಕ್ಕಿತು. ಹೂವಯ್ಯ ನಿದ್ರೆಯಿಂದ ಎಚ್ಚತ್ತವನಂತಾಗಿ ಮುಂದೆ ಏನನ್ನೊ ಆಲೋಚಿಸಲು ಸಾಧ್ಯವಿಲ್ಲದುದರಿಂದ ಮೈಲಿಕಲ್ಲು ಬರುವುದನ್ನೇ ನಿರೀಕ್ಷಿಸಿ ನೋಡತೊಡಗಿದನು. ಗಾಡಿ ಎಷ್ಟು ಮುಂದುವರೆದರೂ ಮೈಲಿಕಲ್ಲು ಬರಲಿಲ್ಲ. ಹೂವಯ್ಯನಿಗೆ ಆಶ್ಚರ್ಯವಾಯಿತು. ಇದೇನು ಪವಾಡವೋ ? ಯಾವಾಗಲೂ ಇರುತ್ತಿದ್ದ ಮೈಲಿಕಲ್ಲು ನಂಜ ಮೊದಲಾದ ಮಹನೀಯರು ಕಳ್ಳಂಗಡಿಯಲ್ಲಿ ಚೆನ್ನಾಗಿ ‘ಸದ್ದು’ ನೆತ್ತಿಗೇರಿ ದಾರಿಯಲ್ಲಿ ಹೋಗುವಾಗ ಅವರಿಂದ ಗುದ್ದಿಸಿಕೊಂಡು ಒದೆಯಿಸಿಕೊಂಡು ಸುಣ್ಣದ ಬಣ್ಣ ಮಾಸಿ ಕಾವಿಬಣ್ಣಕ್ಕೆ ತಿರುಗಿದ್ದ ಆ ಮೈಲಿಕಲ್ಲು – ಇವತ್ತೆಲ್ಲಿ ಹೋಯಿತು ? ಕುಡಿದವರು ಯಾರಾದರೂ ಕಿತ್ತುಹಾಕಿದರೇನೊ ? ಹೂವಯ್ಯ ಬೆಚ್ಚಿಬಿದ್ದು ನೋಡುತ್ತಾನೆ ’ ತಾನು ಸೀತೆಮನೆಗೆ ಆಗಲಿ ಹೋಗಬೇಕಾಗಿದ್ದ ಕೂಡುರಸ್ತೆ ಎದುರಿಗಿದೆ ! ಆಗ ಗೊತ್ತಾಯಿತು, ಆಲೋಚಿಸುತ್ತಿದ್ದಾಗ ಮೈಲಿಕಲ್ಲು ಹಾದುಹೋಗಿರಬೇಕು ಎಂದು.

“ಮಾವ, ನಾನು ಬರ್ತೀನಿ. ಸೀತೆಮನೆಗೆ ಹೋಗಬೇಕು !….. ಏ ನಂಜಾ, ಗಾಡಿ ನಿಲ್ಲಿಸೊ !” ಎಂದು ಹೂವಯ್ಯ ಗಾಡಿ ನಿಲ್ಲುವ ಮೊದಲೆ ಹಿಂದುಗಡೆಯಿಂದ ರಸ್ತೆಗೆ ಹಾರಿ ನಿಂತನು.

“ಏನಾದರೂ ಕೆಲಸ ಇದೆಯೇನು ?” ಎಂದು ಗೌಡರು ಒರಗಿದ್ದ ದಿಂಬನ್ನು ಸರಿಯಾಗಿ ಆಪು ಕೊಟ್ಟುಕೊಳ್ಳುತ್ತ.

“ಅವ್ವ ಏನನ್ನೋ ಹೇಳಿತ್ತಂತೆ ಸಿಂಗಪ್ಪ ಕಕ್ಕಯ್ಯನ ಹತ್ತಿರ. ಅದೇನಾಯಿತು ಕೇಳಿಕೊಂಡು ಬಾ ಅಂತ ಹೇಳಿತ್ತು.”

ಶ್ಯಾಮಯ್ಯಗೌಡರು “ಹಾಂಗಾದ್ರೆ ಹೋಗಿ ಬಾ’ ಪಾ” ಎಂದರು. ಗಾಡಿ ಹೊರಟಿತು. ಹೂವಯ್ಯ ಹೊರಟನು.

ಹೂವಯ್ಯ ಸಿಂಗಪ್ಪಗೌಡರಿಂದ ಕೇಳಿ ತಿಳಿಯಬೇಕಾಗಿದ್ದ ಉತ್ತರವನ್ನು ಶ್ಯಾಮಯ್ಯಗೌಡರೇ ಹೇಳಿಬಿಡಬಹುದಾಗಿತ್ತು. ನಾಗಮ್ಮನವರು ಸಿಂಗಪ್ಪಗೌಡರಿಂದ ತಿಳಿಯಬೇಕಾಗಿದ್ದುದು ಏನು ಎಂಬುದು ಶ್ಯಾಮಯ್ಯಗೌಡರಿಗೆ ಚೆನ್ನಾಗಿ ಗೊತ್ತಾಗಿತ್ತು. ಆದರೆ ಅದು ಹೂವಯ್ಯ ಸೀತೆಯರನ್ನು ಕುರಿತದ್ದಾದ್ದರಿಂದ ಅರಿಯದವರಂತೆ ನಟಿಸಿದ್ದರು.

ಹೂವಯ್ಯ ಸೀತೆಮನೆಗೆ ಬರಲು ಸಿಂಗಪ್ಪಗೌಡರು ಅತ್ಯಾನಂದದಿಂದ ಅವನನ್ನು ಎದುರುಗೊಂಡು ‘ಬೇಡ ಬೇಡ’ ಎಂದರೂ ಕೇಳದೆ ಕಾಫಿ ತಿಂಡಿಕೊಟ್ಟು ಉಪಚರಿಸಿದರು. ಸಿಂಗಪ್ಪಗೌಡರದು ಸ್ವಾಭಾವಿಕವಾಗಿ ಹರ್ಷ ಪ್ರಕೃತಿ ; ವಿನೋದಶೀಲ. ಅವರಲ್ಲಿ ವೈರಿಗಳಿಗೆ ಪ್ರತೀಕಾರ ಮಾಡಲು ಎಷ್ಟು ವಕ್ರತೆಯಿದ್ದಿತೋ ತಮಗೆ ಬೇಕಾದವರನ್ನು ಪ್ರೀತಿಸುವ ಸರಳತೆಯೂ ಅಷ್ಟರಮಟ್ಟಿಗೇ ಇದ್ದಿತು. ಅವರನ್ನು ನೋಡಿದವರು ಯಾರಾದರೂ ಕೆಲವು ತಿಂಗಳ ಹಿಂದೆ ಮದುವೆಗೆ ಬಂದಿದ್ದ ಅವರ ಮಗ ಹುಲಿಯ ಕೈಗೆ ಸಿಕ್ಕಿ ದುರ್ಮರಣಪಟ್ಟನೆಂದು ಹೇಳಲಿಕ್ಕೆ ಸಾಧ್ಯವಾಗುತ್ತಿರಲಿಲ್ಲ.

ಸ್ವಲ್ಪ ಮಾತುಕತೆಯಾದಮೇಲೆ ಹೂವಯ್ಯ ತಾಯಿ ಹೇಳಿದುದನ್ನು ತಿಳಿಸಿ, ಉತ್ತರವನ್ನೇ ಹಾರೈಸಿ, ಸಿಂಗಪ್ಪಗೌಡರ ಮುಖದ ಕಡೆ ನೋಡಿದನು. ಅವರ ಮುಖದಲ್ಲಿ ಕ್ರೋಧ. ಖಿನ್ನತೆ, ಹತಾಶೆ – ಇವು ಮೂರೂ ಒಂದಕ್ಕಿಂತ ಒಂದು ನಾನು ಮೇಲು ತಾನು ಮೇಲು ಎಂಬ ಅಹಮಹಮಿಕೆಯಿಂದ ಮೆರೆಯುತ್ತಿದ್ದಂತೆ ತೋರಿ ಹೂವಯ್ಯನಿಗೆ ಬೆಕ್ಕಸವಾಯಿತು.

ಸಿಂಗಪ್ಪಗೌಡರು ಗುಟ್ಟನ್ನೆಲ್ಲ ಬಾಯಿಬಿಟ್ಟು ಹೇಳತೊಡಗಿರು. ಕೆಲವು ದಿನಗಳ ಹಿಂದೆ ನಾಗಮ್ಮನವರು ಸಿಂಗಪ್ಪಗೌಡರೊಡನೆ ಸೀತೆಯನ್ನು ತಮ್ಮ ಮಗನಿಗೆ ತಂದುಕೊಳ್ಳುವ ಪ್ರಸ್ತಾಪವನ್ನೆತ್ತಿ, ಶ್ಯಾಮಯ್ಯಗೌಡರನ್ನು ವಿಚಾರಿಸುವಂತೆ ಕೇಳಿದ್ದರು. ಸಿಂಗಪ್ಪಗೌಡರ ಮನಸ್ಸೂ ಹಾಗೆಯೇ ಇದ್ದುದರಿಂದ ಸಂಬಂಧವನ್ನು ಸಾಂಗಗೊಳಿಸಬೇಕೆಂದು ಉತ್ಸಾಹಿಗಳಾಗಿ ಮುತ್ತಳ್ಳಿಗೆ ಹೋಗಿ ವಿಚಾರಿಸಿದರು.

ಶ್ಯಾಮಯ್ಯಗೌಡರು “ಹೌದು, ನಿಮ್ಮ ಇಷ್ಟದಂತೆ ಮಾಡಬಹುದಾಗಿತ್ತು. ಆದರೆ ನಾನು ಮೊದಲೇ ಚಂದ್ರಯ್ಯ ಬಾವಗೆ ಮಾತುಕೊಟ್ಟು ಒಪ್ಪಿಕೊಂಡಾಗಿದೆ. ಅದೂ ಅಲ್ಲದೆ, ಹೆಣ್ಣು ಕೊಟ್ಟು ಹೆಣ್ಣು ತರುವುದರಿಂದ ನಮಗೂ ಕೆಲಸ ಸಲೀಸಾಗಿ ನಡೆದ ಹಾಂಗಾಗ್ತದೆ. ಏನು ಮಾಡಾದು ನೀವೇ ಹೇಳಿ ! ನಮಗೆಲ್ಲಾದರೆ ಏನು ? ಹೆಣ್ಣಿಗೊಂದು ಗಂಡು, ಗಂಡಿಗೊಂದು ಹೆಣ್ಣು ಆದರೆ ಸೈ !” ಎಂದರು.

ಚಂದ್ರಯ್ಯಗೌಡರಿಗೂ ಸಿಂಗಪ್ಪಗೌರಿಗೂ ಮೊದಲೇ ಎಣ್ಣೆ ಸೀಗೆಯಾಗಿದ್ದುದರಿಂದ ಸಿಂಗಪ್ಪಗೌರಿಗೆ ಸೀತೆ ದಕ್ಕದಂತೆ ಮಾಡಿಬಿಡಬೇಕೆಂದು ಗಟ್ಟಿ ಮನಸ್ಸು ಮಾಡಿದರು. ಅದೂ ಅಲ್ಲದೆ, ಹಿಂದೆ ತಮ್ಮ ಕುಮಾರನಿಗೆ ಗೊತ್ತಾಗಿದ್ದ ವಧುವಿನ ಮೇಲೆ ಚಂದ್ರಯ್ಯಗೌಡರ ಹಕ್ಕಿಗಿಂತಲೂ ತಮ್ಮ  ಹಕ್ಕೆ ಹೆಚ್ಚು ಎಂಬುದೂ ಅವರಲ್ಲಿ ಬಲವಾಗಿತ್ತು. ಯಾರ ವಿವಾಹಕ್ಕೆ ಚಂದ್ರಯ್ಯಗೌಡರು ಸೀತೆಯನ್ನು ಕೇಳಿದ್ದರೋ ಆ ರಾಮಯ್ಯನ ಮೇಲೆ ಸಿಂಗಪ್ಪಗೌಡರಿಗೆ ದ್ವೇಷ ಲವಲೇಶವೂ ಇರದಿದ್ದರೂ – (ಅದಕ್ಕೆ ಬದಲಾಗಿ ವಿಶ್ವಾಸವಿತ್ತು ) ರಾಮಯ್ಯನ ತಂದೆಯನ್ನು ವಿರೋಧಿಸುವ ಸಲುವಾಗಿ ನಖವೆತ್ತಿ ನಿಂತರು.

“ಮಾತಾಡಿದ್ದರೇನಾಯಿತು ? ಮಾತು ಕೊಟ್ಟ ಹಾಗಾಯಿತೇನು ? ನೀವೇನು ಕರಾರು ಬರೆದು ಕೊಟ್ಟಿದ್ದೀರೇನು ? ಜಾತಕ ನೋಡಿಸಬೇಕು ; ದೇವರು ಕೇಳಿಸಬೇಕು…. ಅಲ್ಲದೆ ಸುಮ್ಮನೆ ಹೆಣ್ಣಿಗೊಂದು ಗಂಡು ಎಂದು ಹೇಳಿಬಿಟ್ಟರಾಗಿಹೋಯಿತೇನು ? ಸರಿಯಾದ ಗಂಡನ್ನೇ ಹುಡುಕಿ ಹೆಣ್ಣು ಕೊಡಬೇಕಾದುದೂ ತಂದೆತಾಯಿಗಳ ಕರ್ತವ್ಯ…. ರಾಮಯ್ಯನಿಗೂ ಹೂವಯ್ಯನಿಗೂ ಎಲ್ಲಿಯ ಹೋಲಿಕೆ ? ಹೂವಯ್ಯ ಎಷ್ಟಾದರೂ ಹೆಚ್ಚು ವಿದ್ಯಾವಂತ ; ನೋಡುವುದಕ್ಕೂ ಲಕ್ಷಣವಾಗಿದ್ದಾನೆ. ಸೀತೆಗಾಗಿಯೇ ಕಟ್ಟಿಟ್ಟ ಗಂಡು” ಎಂದು ಮೊದಲಾಗಿ ಉಪದೇಶ ಮಾಡಿ, ಚಂದ್ರಯ್ಯಗೌಡರ ಸಂಸಾರದ ಒಡಕು ಬಿರುಕು ಹುಳುಕುಗಳನ್ನೆಲ್ಲ ವರ್ಣಿಸಿದರು.

ಶ್ಯಾಮಯ್ಯಗೌಡರು ಎಲ್ಲವನ್ನೂ ಆಲಿಸಿ “ನೀವೇನೂ ಹೇಳುತ್ತೀರಿ. ಆದರೆ ಹೂವಯ್ಯ ಏನೋ ಒಂದು ತರಹ ಸಂನ್ಯಾಸಿಯಾಗಿಬಿಟ್ಟಿದ್ದಾನೆ ! ಬೈರಾಗಿಗೆ ಮಗಳು ಕೊಟ್ಟಂತಾದ್ರೆ ? ಅಲ್ಲದೆ ಅವನಿಗೆ ಆಗಾಗ ಮೂರ್ಚೇರೋಗ ಬೇರೆ ಬರ್ತದಂತೆ !…. ಇರಲಿ. ಯಾವುದಕ್ಕೂ ವೆಂಕಪ್ಪಯ್ಯ ಜೋಯಿಸರನ್ನು ವಿಚಾರಿಸಿ. ಜಾತಕಗೀತಕ ನೋಡಿಸಿ,

ಸಿಂಗಪ್ಪಗೌಡರು ಸೀತೆಯ ತಾಯಿ ಗೌರಮ್ಮನವರೊಡನೆಯೂ ಮಗಳನ್ನು ಚಂದ್ರಯ್ಯಗೌಡರ ಮಗನಿಗೆ ಕೊಡಲು ಬಿಡಬಾರದೆಂದು ಒಳಸಂಚು ನಡೆಸಿ ಬೋಧಿಸಿದರು. ಗೌರಮ್ಮನವರಿಗೂ ಶ್ಯಾಮಯ್ಯಗೌಡರಿಗೂ ಮಗಳ ಮದುವೆಯ ವಿಚಾರವಾಗಿ ಬಿಸಿಬಿಸಿ ಮಾತು ನಡೆದು ಗಂಡನ ಹಟವೇ ಗೆಲ್ಲುವಂತಾಯಿತು.

ಅಗ್ರಹಾರದ ವೆಂಕಪ್ಪಯ್ಯ ಜೋಯಿಸರ ಬಳಿಗೂ ಹೋಗಿ ಅವರಿಗೆ ಸ್ವಲ್ಪ ದಾನದಕ್ಷಿಣೆಗಳನ್ನು ನಿವೇದಿಸಿ, ಸೀತೆ ಮತ್ತು ರಾಮಯ್ಯರಿಗೆ ‘ಜಾತಕ ಬರುವುದಿಲ್ಲ’ ಎಂದು ಹೇಳಬೇಕೆಂದೂ ಸೂಚಿಸಿದ ಸಿಂಗಪ್ಪಗೌಡರು ಹೂವಯ್ಯನ ಜಾತಕವನ್ನು ಶ್ಯಾಮಯ್ಯಗೌಡರ ಮುಖಾಂತರ ಜೋಯಿಸರ ಬಳಿಗೆ ಕಳುಹಿಸಿದರು. ಜಾತಕದ ನೆಪದಿಂದಲಾದರೂ ತಮ್ಮ ಹಟವನ್ನು ಸಾಧಿಸಿಕೊಳ್ಳುತ್ತೇನೆ ಎಂದು ಅವರು ಆಲೋಚಿಸಿ ನೆಮ್ಮದಿಯಾದರು.

ಆದರೆ ವೆಂಕಪ್ಪಯ್ಯ ಜೋಯಿಸರ ಅಂತರಂಗದಲ್ಲಿ ಹೂವಯ್ಯನ ಮೇಲೆ ಮಹಾರೌರವರೋಷವಾಗಿತ್ತು. ಅವನು ತಮ್ಮ ಪೌರೋಹಿತ್ಯವನ್ನು ನಿಂದಿಸಿ ಜನರಲ್ಲಿ ತಮ್ಮ ಲಾಭಕ್ಕೆ ವಿರೋಧವಾಗಿ ಚಳುವಳಿ ಮಾಡುತ್ತಿದ್ದುದರಿಂದ ಅವನನ್ನು ಕಂಡರೆ ಮುಂಗುಸಿಯನ್ನು ಕಂಡ ಸರ್ಪದಂತೆ ಬುಸುಗುಡುತ್ತಿದ್ದರು. ಆದ್ದರಿಂದ ಅವರು ಸಿಂಗಪ್ಪಗೌಡರ ದಾನದಕ್ಷಿಣೆಗಳನ್ನು ಸಂತೋಷದಿಂದ ಸ್ವೀಕರಿಸಿದರೂ ಅವರ ಇಷ್ಟವನ್ನು ನೆರವೇರಿಸಲು ಮನಸ್ಸು ಮಾಡಲಿಲ್ಲ. ಅದಕ್ಕೆ ಬದಲಾಗಿ ಚಂದ್ರಯ್ಯಗೌಡರ ಬಳಿಗೆ ಗುಟ್ಟಾಗಿ ಹೋಗಿ ನಡೆದ ಸಂಗತಿಯನ್ನೆಲ್ಲ ತಿಳಿಸಿದರು. ಗೌಡರು ಜ್ವಾಲಾಮುಖಿ ಅಗ್ನಿಜಲವನ್ನು ಕಾರುವಂತೆ ಸಿಂಗಪ್ಪಗೌಡರ ಮೇಲೆ ಕ್ರೋಧ ನಿಂದೆಗಳನ್ನು ಕಾರಿ ಜೋಯಿಸರಿಗೆ ಸಿಂಗಪ್ಪಗೌಡರು ಕೊಟ್ಟುದಕ್ಕೆ ಇಮ್ಮಡಿಯಾಗಿ ದಾನದಕ್ಷಿಣೆಗಳನ್ನು ಕೊಟ್ಟು, ಅವರ ಮನಸ್ಸನ್ನು ಸಂಪೂರ್ಣವಾಗಿ ತಮ್ಮ ಕಡೆಗೆ ಒಲಿಸಿಕೊಂಡು ಬೀಳ್ಕೊಟ್ಟರು.

ಸಾಲದುದಕ್ಕೆ ಬೇರೆ ಆ ಒಳಸಂಚಿನ ಸಂಗತಿಯನ್ನು – ನಾಗಮ್ಮನವರು, ಹೂವಯ್ಯ, ಸಿಂಗಪ್ಪಗೌಡರು ಇವರೆಲ್ಲರೂ ಸೇರಿ, ಸೀತೆಯನ್ನು ರಾಮಯ್ಯನಿಗೆ ಮದುವೆ ಮಾಡಿಕೊಡಲು ಶ್ಯಾಮಯ್ಯಗೌಡರು ಒಪ್ಪಿದರೂ ಕೂಡ ಅದನ್ನು ಹೇಗಾದರೂ ತಪ್ಪಿಸಿ ಹೂವಯ್ಯನ ಪರವಾಗಿ ಪಿತೂರಿ ನಡೆಸುತ್ತಿದ್ದಾರೆ ಎಂದು – ತಮ್ಮ ಮಗನಿಗೂ ತಿಳಿಸಿ “ನೀನೆಲ್ಲಿಯೋ ಶುದ್ದ ಮಂಕು ! ಹೂವಯ್ಯ, ಹೂವಯ್ಯ ಎಂದು ಕಟ್ಟಿಕೊಂಡು ಕುಣಿಯುತ್ತೀಯಲ್ಲ ! ಈಗ ನೋಡಿದೆಯೇನು ಅವರೆಲ್ಲ ಸೇರಿ ನಿನಗೆ ಮಾಡುತ್ತಿರುವ ಉಪಕಾರ !” ಎಂದು ಕಿವಿಗೆ ವಿಷಹೊಯ್ದರು. ಅದನ್ನು ಅಮೃತವೆಂದು ಪಾನಮಾಡಿದ ರಾಮಯ್ಯನು ಹೂವಯ್ಯನಲ್ಲಿಗೆ ಹೋಗಿ ಬರುವುದನ್ನು ನಿಲ್ಲಿಸಿದ್ದನು. ಅವನನ್ನು ಕಂಡರೆ ಮೊದಲಿನಂತೆ ಆದರಿಸದೆ ಉದಾಸೀನಭಾವದಿಂದ ಎಷ್ಟೋ ಅಷ್ಟು ಎಂಬಂತೆ ಲೆಕ್ಕಾಚಾರವಾಗಿ ಮಾತಾಡುತ್ತಿದ್ದನು.

ಅಂತೂ ಸಿಂಗಪ್ಪಗೌಡರು ಎಷ್ಟು ಪ್ರಯತ್ನಮಾಡಿದರೂ ಸಫಲವಾಗಲಿಲ್ಲ. ಜೋಯಿಸರು ಹೂವಯ್ಯ ಸೀತೆಯರಿಗೆ ಜಾತಕ ಎಷ್ಟುಮಾತ್ರವೂ ಬರುವುದಿಲ್ಲವೆಂದೂ ಕಂಟಕಗಳಿಂದ ತುಂಬಿದೆಯೆಂದೂ, ರಾಮಯ್ಯ ಸೀತೆಯರಿಗೆ ಉತ್ತಮವಾಗಿ ಜಾತಕ ಬರುತ್ತದೆ ಎಂದೂ ಶ್ಯಾಮಯ್ಯಗೌಡರಿಗೆ  ತಿಳಿಸಿದರು. ಅದನ್ನು ಕೇಳಿ ಮಗಳ ಯೋಗಕ್ಷೇಮವೇ ವಿವಾಹದ ಹೆಗ್ಗುರಿಯೆಂದು ಗೌರಮ್ಮನವರೂ ಗಂಡನ ಮಾತಿಗೆ ಎದುರು ಹೇಳಲಿಲ್ಲ.

ವಿಷಾದ ಪ್ರಕರಣಗಳನ್ನು ಉದ್ವಿಗ್ನನಾಗಿ ಆಲಿಸಿದ ಹೂವಯ್ಯ ನಿರ್ವಿಣ್ಣಭಾವ ಭಾರನಾಗಿ ಕುಗ್ಗಿ, ಕವಿಯುತ್ತಿದ್ದ ಬೈಗುಪ್ಪಿಯಲ್ಲಿ ಕೆಳಕಾನೂರಿಗೆ ನಡೆದನು.