‘ದೆಯ್ಯದ ಹರಕೆ’ಯಾದ ಮರುದಿನ ಕಾನೂರು ಚಂದ್ರಯ್ಯಗೌಡರು ಓಬಯ್ಯನನ್ನು ವಿಚಾರಣೆ ಮಾಡಿದ್ದರು. ಅವನು ಎಲ್ಲರೊಡನೆಯೂ ಹೇಳುತ್ತಿದ್ದ (ಭೂತರಾಯ ಪ್ರತ್ಯಕ್ಷವಾಗಿ ತನಗೆ ನೋಟು ಕೊಟ್ಟಿದ್ದ) ಕಥೆಯನ್ನೇ ಮತ್ತೂ ವಿವರವಾಗಿ ಹೇಳಿಬಿಟ್ಟನು. ದೆವ್ವ ಭೂತಾದಿಗಳಲ್ಲಿ ಅಪಾರ ಶ್ರದ್ಧೆಯನ್ನಿಟ್ಟಿದ್ದ ಗೌಡರಿಂದಲೂ ಕೂಡ ಅದನ್ನು ನಂಬಲಾಗಲಿಲ್ಲ. ಎಷ್ಟು ಪರಿಯಿಂದ ಕೇಳಿದರೂ ಓಬಯ್ಯ ನಿಜಸ್ಥಿತಿಯನ್ನು ಹೊರಗೆಡಹಲಿಲ್ಲ. ಗೌಡರಿಗೆ ನಿಜಸ್ಥಿತಿ ಅತ್ಯಂತ ಅವಶ್ಯವಾಗಿತ್ತು; ಏಕೆಂದರೆ ಅವರು ಊಹಿಸಿದ್ದಂತೆ ನಾಗಮ್ಮನವರು ಅಪರಾಧಿಗಳಾಗಿದ್ದರು. ಓಬಯ್ಯನಿಂದ ನಾಗಮ್ಮನವರು ನೋಟು ಕೊಟ್ಟರು ಎಂದು ತಿಳಿದುಬಂದರೆ ಆದಷ್ಟು ಜಾಗ್ರತೆಯಾಗಿ ಹಿಸ್ಸೆ (ಪಾಲು) ಮಾಡಿ, ತಾಯಿಮಕ್ಕಳನ್ನು ಬೇರೆ ಹಾಕಬಹುದೆಂದು ಅವರ ಬಯಕೆಯಾಗಿತ್ತು. ಆದ್ದರಿಂದ ನಿಜಸ್ಥಿತಿಯನ್ನು ಹೊರಡಿಸಲೇಬೇಕೆಂದು ಮನಸ್ಸು ಮಾಡಿದರು.

“ಸತ್ಯ ಹೇಳ್ತಿಯೋ ಇಲ್ಲವೋ?” ಎಂದರು ಗೌಡರು.

“ನಾನಿಷ್ಟೊತ್ತಂಕ ಹೇಳಿದ್ದು ಮತ್ತೇನು?”

“ಅದೆಲ್ಲಾ ಇರಲಿ. ನಿನ್ನ ಠಕ್ಕು ನನ್ನ ಹತ್ರ ನಡೆಯೋದಿಲ್ಲಾ.”

“ಠಕ್ಕು ಮಾಡಾಕೆ ನಾನೇನು ಕದ್ದೀನಾ?”

“ಇದ್ದದ್ದು ಇದ್ದಹಾಗೆ ಹೇಳಿಬಿಡಿನಿ, ಓಬೇಗೌಡ್ರೆ; ಅದರಲ್ಲಿ ಮೋಸವೇತಕ್ಕೆ? ಹೌದಾ?” ಎಂದರು ಸೇರೆಗಾರರು.

“ಏನ್ಮಾತಿದು, ಸೇರೆಗಾರ್ರೇ? ದೇವ್ರಾಣೆಗೂ ನಾ ಹೇಳೋದು ಸುಳ್ಳಾಗಿದ್ರೆ ನನ್ನ ಕುತ್ತಿಗೆ ಚೆಂಡು ನಿಂತಲ್ಲೇ ಕೆಳಗೆ ಬೀಳ್ಬೇಕು?” ಎಂದು ಓಬಯ್ಯ ಅಂಗಳದ ನಡುವೆಯಿದ್ದ ತುಲಸಿಯ ಪೀಠಕ್ಕೆ ನಮಸ್ಕಾರ ಮಾಡಿದನು.

“ಹಾಗಾದರೆ, ನೀನು ಒಳ್ಳೇ ಮಾತಿಗೆ ಹೇಳೂದಿಲ್ಲಾ?” ಎಂದು ಗೌಡರು ರುದ್ರವಾಗಿ ಕೇಳಿದರು.

ಓಬಯ್ಯ “ಒಳ್ಳೆ ಮಾತೀಗೆ ಹೇಳೂ’ದೂ ಅಷ್ಟೇ! ಕೆಟ್ಟ ಮಾತೀಗೆ ಹೇಳೂ’ದೂ ಅಷ್ಟೇ! ‘ಇಲ್ದಿದ್ದನ್ನು ಹೇಳೂ’ದು ಹ್ಯಾಂಗೆ?” ಎಂದನು ರಾಗವಾಗಿ. ‘ಹೇಳೂದಿಲ್ಲಾ?’ ಎಂಬ ಗೌಡರ ಮಾತನ್ನು ಸ್ವಲ್ಪಮಟ್ಟಿಗೆ ಅಣಕಿಸುವಂತೆ ಅನುಕರಿಸಿದ್ದನು.

ಕುಪಿತರಾದ ಗೌಡರು ಬೆತ್ತವೊಂದನ್ನು ತುಡುಕಿ ಓಬಯ್ಯನ ಬಳಿಗೆ ಕರಾಳವಾಗಿ ನಡೆದರು. ಅವನು ಕಗ್ಗಲ್ಲಿನಂತೆ ನಿಂತಲ್ಲಿಂದ ಕದಲದೆ ನೆಲವನ್ನು ನೋಡುತ್ತಿದ್ದನು.

“ನಿಜಾ ಹೇಳ್ತಿಯೋ ಇಲ್ಲೋ?” ಎಂದು ಗೌಡರು ಆರ್ಭಟಿಸಲು ಸುತ್ತಲಿದ್ದವರೆಲ್ಲ ಭಯಗ್ರಸ್ಥರಾಗಿ ನೀರವವಾಗಿ ನಿಂತು ಮಿಳ್ಮಿಳನೆ ನೋಡತೊಡಗಿದರು. ಓಬಯ್ಯ ತಲೆ ಮೇಲೆತ್ತಲಿಲ್ಲ.

“ಹೇಳಿನಿ, ಓಬೇಗೌಡ್ರೇ, ಹೇಳಿನಿ” ಎಂದು ಸೇರೆಗಾರರು ಉಪದೇಶ ಮಾಡಿದರು.

ಓಬಯ್ಯನ ಒರಟು ಮೌನದಿಂದ ಮತ್ತೂ ಕೋಪವೇರಿದ ಗೌಡರು ಹಿಂದುಮುಂದು ನೋಡದೆ ಕೈಲಿದ್ದ ಬೆತ್ತದಿಂದ ಬಡಲ್ ಬಡಲ್ ಬಡಲ್ಲನೆ ಹೊಡೆಯತೊಡಗಿದರು. ಓಬಯ್ಯ ನಾಲ್ಕೈದು ಪೆಟ್ಟು ಬೀಳುವವರೆಗೂ ಕಲ್ಲು ನಿಂತಂತೆ ನಿಂತಿದ್ದವನು ಇದ್ದಕ್ಕಿದ್ದ ಹಾಗೆ ‘ಅಯ್ಯೋ’ ಎಂದು ಎದೆಯಿರಿಯುವಂತೆ ಕೂಗಿಕೊಂಡು, ಗೌಡರ ಕೈಲಿದ್ದ ಬೆತ್ತವನ್ನು ಭದ್ರಮುಷ್ಟಿಯಿಂದ ತುಡುಕಿ ಹಿಡಿದನು. ಗೌಡರು ಎಷ್ಟು ಜಗ್ಗಿಸಿ ಎಳೆದರೂ ಬೆತ್ತವನ್ನು ಕಸಿದುಕೊಳ್ಳಲಾರದೆ ಕ್ರೋಧದಿಂದಲೂ ಆಯಾಸದಿಂದಲೂ ಏದತೊಡಗಿದರು.

ಪುಟ್ಟಣ್ಣನೂ ಸೇರೆಗಾರರೂ ಮುಂದೆ ನುಗ್ಗಿ ಓಬಯ್ಯನ ಕೈಲಿದ್ದ ಬೆತ್ತವನ್ನು ಬಿಡಿಸಿದರು. ಗೌಡರು ಮತ್ತೆ ಹೊಡೆಯತೊಡಗಿದರು. ಓಬಯ್ಯ ಹಲ್ಲುಮಟ್ಟೆ ಕಚ್ಚಿಕೊಂಡು ಸುಮ್ಮನೆ ಮುಗ ಬಿಗಿದು ನಿಂತನು. ಬೇರೆ ಯಾರೂ ಇಲ್ಲದಿದ್ದರೆ ಅವನು ಸ್ಥಾನಮಾನಗಳನ್ನು ಲೆಕ್ಕಿಸದೆ, ಗೌಡರಿಗೆ ಪ್ರತಿಹಿಂಸೆ ಮಾಡಲು ಹಿಂಜರಿಯುತ್ತಿರಲ್ಲವೋ ಏನೋ? ಆದರೆ ಗೌಡರೆ ಅನೇಕ ಸೇವಕರ ಸಹಾಯವಿದ್ದಾಗ ಯಾವ ಸಾಹಸಕ್ಕೂ ಕೈಯಿಡಲು ಅಂಜಿ, ಪೆಟ್ಟುಗಳನ್ನು ಸಹಿಸಲಾರದೆ ನಡೆದುದನ್ನೆಲ್ಲ ಹೊರಗೊದರಿಬಿಟ್ಟನು.

“ಅಯ್ಯೋ ಸತ್ತೇ! ಹೊಡೀಬ್ಯಾಡೀ! ಹೇಳ್ತೀನಿ!”

“ಹೇಳು ಮತ್ತೆ!” ಎಂದ್ರ್ ಗೌಡರು ಕೈ ತಡೆದು ನಿಂತರು.

“ಅಮ್ಮ ಕೊಟ್ಟರು! ನಾ ಕದೀಲಿಲ್ಲ?”

“ಯಾವಮ್ಮನೋ?”

“ಸುಬ್ಬಮ್ಮ!”

“ಆಞ! ಯಾರಂದೆ?” ನಾಗಮ್ಮನಿರಬೇಕೆಂದು ಹಿಗ್ಗಿ ಪ್ರಶ್ನೆ ಮಾಡಿದ್ದ ಗೌಡರು ಅಪ್ರತಿಭರಾಗಿದ್ದರು.

“ಸುಬ್ಬಮ್ಮ!”

ಹೆಂಡತಿಯ ಮೇಲೆ ಕೋಪವೂ ಛಲವೂ ಕಾರ್ಮುಗಿಲು ಕವಿದಂತೆ ಕವಿದವು. ಅದುವರೆಗೆ ಹೆಂಡತಿಯ ಪರವಾಗಿ ಮಬ್ಬುಮಬ್ಬಾಗಿದ್ದ ಸಂಶಯಗಳೆಲ್ಲವೂ ಈಗ ಸ್ಪಷ್ಟವೂ ಸ್ವತಃಸಿದ್ಧವೂ ಆಗಿತೋರಿದವು. ಸುಳ್ಳು ಹೇಳಿ ತನ್ನನ್ನು ವಂಚಿಸಲು ಬಯಸಿದವಳು ಇನ್ನೇನನ್ನು ತಾನೆ ಮಾಡಲಾರಳು? ಮತ್ತು ಮಾಡಿಲ್ಲ?

ಗೌಡರ ಜುಟ್ಟು ಬಿಚ್ಚಿ ಕೂದಲು ಕೆದರಿಕೊಂಡಿತ್ತು. ಹೊದ್ದುಕೊಂಡಿದ್ದ ಶಾಲು  ಓರೆಯಾಗಿ ಜೋಲಾಡುತ್ತಿತ್ತು. ಕಣ್ಣುಗಳು ಕೆಂಪೇರಿದ್ದುವು. ಮೂಗಿನ ಸೊಳ್ಳೆ ಹಿಗ್ಗಿ ಹಿಗ್ಗಿ ಬೀಳುತ್ತಿತ್ತು. ಹುಬ್ಬು ಗಂಟುಹಾಕಿ ಸುಕ್ಕಾಗಿದ್ದ ಹಣೆಯ ಮೇಲೆ ಬೆವರಿನ ಹನಿಗಳು ಹೊಮ್ಮಿದ್ದುವು. ಹೂತ್ತ ಬೆತ್ತದೊಡನೆ ನೆಟ್ಟನೆ ಅಡುಗೆ ಮನೆಗೆ ನುಗ್ಗಿದರು.

ಹೊರಗೆ ಅಂಗಳದಲ್ಲಿ ಆಗುತ್ತಿದ್ದ ಪ್ರಸಂಗಗಳನ್ನೆಲ್ಲ ಬಾಗಿಲು ಸಂದಿಯಲ್ಲಿ  ಮರೆಯಾಗಿ ನಿಂತುನೋಡಿ ಆಲಿಸುತ್ತಿದ್ದ ನಾಗಮ್ಮ ಪುಟ್ಟಮ್ಮ ಸುಬ್ಬಮ್ಮ ಮತ್ತು ಒಂದಿಬ್ಬರು ಹೆಂಡತಿಯರು, ಓಬಯ್ಯ ಸತ್ಯವನ್ನು ಹೇಳಿದೊಡನೆಯೆ ಮುಂದೇನಾಗುವುದೋ ಎಂದು ಬೆದರಿ, ಅಡುಗೆಮನೆಗೆ ಹೋಗಿದ್ದರು. ನಾಗಮ್ಮ ಪುಟ್ಟಮ್ಮ ಇಬ್ಬರೂ ಕಲಸದಲ್ಲಿ ತೊಡಗಿದ್ದವರಂತೆ ನಟಿಸುತ್ತಿದ್ದರು
ನಾಗಮ್ಮನವರು ಕನಿಕರದಿಂದ “ಸುಬ್ಬೂ, ನಿನ್ನ ಹೊಡೆದು ಕೊಂದು ಹಾಕ್ತಾರೆ ಕಣೇ! ಬೇಗ ಹೋಗಿ ಅಡಗಿಕೊಳ್ಳೇ” ಎಂದು ಸೂಚಿಸಿದೊಡನೆಯೆ ಸುಬ್ಬಮ್ಮ ಬೇಗಬೇಗನೆ ಓಡಿಹೋಗಿ, ಕತ್ತಲೆಯ ಮೂಲೆಯಲ್ಲಿದ್ದ ಒಂದು ದೊಡ್ಡ ಕಾಡಾಯಿ ಹಿಂದೆ ಅವಿತುಕೊಂಡಳು.

ಚಂದ್ರಯ್ಯಗೌಡರು ಅಡುಗೆಮನೆಗೆ ಬಂದು ಸುತ್ತಲೂ ನೋಡಿ ಸುಬ್ಬಮ್ಮನನ್ನು ಕಾಣದೆ ಮಗಳನ್ನು ನಿರ್ದೇಶಿಸಿ “ಎಲ್ಲಿ ಹೋದಳೆ ಅವಳು?” ಎಂದು ಕೂಗಿದರು.

ಪುಟ್ಟಮ್ಮ ಮಾತಾಡಲಾರದೆ ನಾಗಮ್ಮನವರ ಕಡೆ ನೋಡಿದಳು. ಅವರು “ಹಟ್ಟೀಗೆ ಹೋಗಿರ್ಬೇಕು” ಎಂದರು.

ಗೌಡರು ಹಸುಗಳ ಕೊಟ್ಟಿಗೆಗೆ ಹೋಗಿ ನೋಡಿ ಹಿಂತಿರುಗಿ ಬಂದರು. ಎರಡು  ಮೂರು ಕೋಣೆಗಳಲ್ಲಿ ಅರಸಿದರು. ಸುಬ್ಬಮ್ಮನನ್ನು ಎಲ್ಲಿಯೂ ಕಾಣದೆ ಮತ್ತೆ  ಅಡುಗೆಮನೆಗೆ ಬಂದು “ಅವಳೆಲ್ಲಿದ್ದಾಳೆ? ಹೇಳ್ತೀಯೋ ಇಲ್ಲೋ?” ಎಂದು ಬೆತ್ತದಿಂದ ಪುಟ್ಟಮ್ಮನ ಬೆನ್ನಿಗೆ ಒಂದು ಬಿಗಿತ ಬಿಗಿದರು. ಅವಳು ತಟ್ಟನೆ ಕಿರಿಚಿಕೊಂಡು  “ದಮ್ಮಯ್ಯಾ, ದಮ್ಮಯ್ಯಾ ಹೇಳ್ತೀನಿ! ಅಲ್ಲಿ! ಅಲ್ಲಿ!” ಎಂದು ಕೈ ತೋರಿಸಿದಳು.

ಗೌಡರು ಕಡಾಯಿಯ ಹಿಂದುಗಡೆ ಕತ್ತಲೆಯಲ್ಲಿ ಸುಬ್ಬಮ್ಮನ ಆಕೃತಿಯನ್ನು ಕಂಡೊಡನೆ, ಬಾಯಿಗೆ ಬಂದಹಾಗೆ ಅಶ್ಲೀಲವಾಗಿ ಬೈಯುತ್ತ, ರಪ್ಪರಪ್ಪನೆ ಹೊಡೆಯತೊಡಗಿದರು. ಸುಬ್ಬಮ್ಮನ ಮೂಗುತಿ ಕಳಚಿಬಿದ್ದಿತು. ಕಿವಿಗೆ ಪೆಟ್ಟುಬಿದ್ದು  ಬುಗುಡಿಯೆಲ್ಲ ರಕ್ತಾವಾಯಿತು. “ದಮ್ಮಯ್ಯಾ ತಪ್ಪಾಯ್ತು! ಕಾಲಿಗೆ ಬೀಳ್ತೀನಿ” ಎಂದು  ರೋದಿಸುತ್ತ ಎದ್ದು ನಿಂತಳು. ಗೌಡರು ಆಕೆಯ ಜುಟ್ಟು ಹಿಡಿದು ಬಯಲಿಗೆ  ಎಳೆದುಕೊಂಡು ದನವನ್ನು ಹೊಡೆಯುವಂತೆ ಬಡಿದರು. ಅವರನ್ನು ತಡೆಯಲು ಮತ್ತೆ  ಯಾರಿಗೂ ಧೈರ್ಯ ಬರಲಿಲ್ಲ. ಹೂವಯ್ಯನೊಬ್ಬನೆ ಮುಂದುವರಿದು “ಚಿಕ್ಕಯ್ಯ. ಸಾಕು! ಬಿಡಿ! ಬಿಡಿ!” ಎಂದು ಕೈಚಾಚಿದನು. ಅವನ ಕೈಗೂ ಪೆಟ್ಟುಬಿದ್ದಿತು. ಆದರೆ ಅದಕ್ಕಿಂತೂ ಕಠಿನವಾಗಿ ಗೌಡರ ಬಾಯಿಂದ ಕಠೋರವಾಕ್ಯಗಳ ಪ್ರಹಾರವಾಯಿತು. ಸುಬ್ಬಮ್ಮನನ್ನು ಹೊಡೆಯುವುದನ್ನು ನಿಲ್ಲಿಸಿ ಹೂವಯ್ಯನನ್ನು ನಿಂದಿಸತೊಡಗಿದರು. ಆ ವ್ಯಂಗ್ಯ ನಿಂದೆಯ ಒಂದೊಂದು ಮಾತೂ ಒಂದೊಂದು ಬಾಣದಂತೆ ಎದೆ ಹೊಕ್ಕು ಹೂವಯ್ಯನನ್ನು ಹಿಂಡಿಬಿಟ್ಟಿತು. ಕೆಲವು ಪದಪ್ರಯೋಗಗಳಂತೂ ಹೂವಯ್ಯನು ಸುಬ್ಬಮ್ಮನ ಪ್ರಣಯಿ ಎಂಬರ್ಥವನ್ನು ಸ್ಪಷ್ಟವಾಗಿ ಸೂಚಿಸುವಂತಿದ್ದುವು. ಸೀತೆಯ ವಿವಾಹ ನಿಶ್ಚಯದ ಸಮಾಚಾರವನ್ನು ಕೇಳಿ ಮೊದಲೇ ದಃಖಿತನಾಗಿದ್ದ  ಅವನು ಜಜ್ಜರಿತನಾಗಿ, ಕುಪಿತ ವಾಣಿಯಿಂದ “ಏನಿದು? ನೀವು ಹೇಳುವ ಮಾತು? ನಿಮಗೇನು ಹುಚ್ಚುಗಿಚ್ಚು ಹಿಡಿದಿದೆಯೇನು?” ಎಂದನು.

“ನನ್ನ ಹೆಂಡತಿಗೆ ನಾ ಹೊಡೆದರೆ ನೀನು ಯಾರೋ ಕೇಳೋಕೆ?”

“ಮನುಷ್ಯರಿಗೆ ಮನುಷ್ಯರು ಸಹಾಯವಾಗದೆ ಇನ್ನಾರಾಗ್ತಾರೆ? ನಿಮ್ಮ ಹೆಡತಿ  ಅಂತಾ ಹೇಳಿ ನೀವು ಕೂನಿ ಮಾಡ್ತೀರೇನು? ಅದನ್ನು ನಾವು ನೋಡುತ್ತಾ  ನಿಂತಿರಬೇಕೇನು? ಹೊಡೆಯುವುದೆಂದರೆ ಅದಕ್ಕೂ ಮೇರೆ ಇಲ್ಲವೇನು? ಬುದ್ಧಿಯಿದ್ದವರು ದನಗಳಿಗೂ ಕೂಡ ಹೀಗೆ ಹೊಡೆಯುವುದಿಲ್ಲ. ಸ್ವಲ್ಪ ಶಾಂತರಾಗಿ ಆಲೋಚನೆ ಮಾಡಿ, ಆಗ ಗೊತ್ತಾಗುತ್ತದೆ.”

“ಸಾಕೋ ನಿನ್ನುಪದೇಶ! ನನಗೆಲ್ಲಾ ಗೊತ್ತು. ನೀವೆಲ್ಲ ಸೇರಿ ಒಳಗೊಳಗೆ ಸಂಚುಮಾಡ್ತಿದ್ದೀರಿ. ಇನ್ನು ಈ ಮನೇಲಿ ನಾನೂ ನೀನೂ ಒಟ್ಟಿಗಿರಬಾರದು ನಿನ್ನ ಹಿಸ್ಸೆ ನೀ ತಗೊಂಡು ಹೋಗು. ನಿನ್ನ ಜೊತೆ ಇದ್ದರೆ ನನ್ನ ಮಾನಕ್ಕೂ ಸಂಚಕಾರ ಆಗ್ತದೆ” ಎಂದು ಚೀರಿದರು.

“ನನ್ನಿಂದ ನಿಮ್ಮ ಮಾನ ಹೋಗ್ತದೆ ಅಂತಾ ಕಂಡರೆ ಹಿಸ್ಸೆ ಮಾಡಿಕೊಡಿ, ನಾನು ಬೇರೆ ಹೋಗ್ತೀನಿ. ಅಂತೂ ನೀವು ಮಾಡೋದನ್ನೆಲ್ಲಾ ನಾ ನೋಡ್ತಾ  ಸುಮ್ಮನಿರಲಾರೆ” ಎಂದ ಹೂವಯ್ಯ ಅಲ್ಲಿ ನಿಲ್ಲಲಿಲ್ಲ.

ಇತ್ತ ಪೆಟ್ಟು ತಿಂದ ಓಬಯ್ಯ ಕಾನೂರಿನಲ್ಲಿ ಕ್ಷಣಮಾತ್ರವೂ ನಿಲ್ಲದೆ, ಚಂದ್ರಯ್ಯಗೌಡರ ಕ್ರೋಧದಿಂದ ಅಡುಗೆಮನೆಗೆ ನುಗ್ಗಿದ ಕೂಡಲೆ ಹೆಬ್ಬಾಗಿಲಿನಿಂದ ಹೊರ ಹೊರಟನು. ಕಳ್ಳಂಗಡಿಯವನೂ ಬಿರುಬಿರನೆ ಅವನ ಹಿಂಗಡೆ ಹೋಗಿ” ನನ್ನದುಡ್ಡಿಗೆ ಏನ್ಮಾಡ್ತೀರಿ?” ಎಂದನು.

“ದುಡ್ಡು! ನಿಮ್ಮಪ್ಪನ್ಮನೆ ಗಂಟು! ನೇಣ್ಹಾಕ್ಯ ಹೋಗಿ!” ಎನ್ನುತ್ತ ಓಬಯ್ಯ ಮುಖ ತಿರುಗಿಸದೆ ಕೆಳಕಾನೂರಿಗೆ ನಡೆದನು.
ಓಬಯ್ಯ ತನಗೊದಗಿದ ಶಿಕ್ಷೆಯೇ ತನ್ನ ಸಾಲದ ಹೊರೆಯನ್ನೆಲ್ಲ ತೀರಿಸಿಬೀಟ್ಟಿತೆಂದೂ, ಇನ್ನು ಮೇಲೆ ಸಾಲದ ಹಣವನ್ನು ಕೇಳಲು ಹಕ್ಕಿಲ್ಲವೆಂದೂ ನಿರ್ಧರಿಸಿಬಿಟ್ಟಿದ್ದರಂತೆ ತೋರುತ್ತಿತ್ತು.

ಕೆಳಕಾನೂರಿನ ಹುಲ್ಲುಮನೆಯನ್ನು ಪ್ರವೇಶಿಸಿದ ಓಬಯ್ಯ ತನ್ನ ತಂದೆಯನ್ನು ಹುಡುಕಿದನು. ಮನೆ ಬಿಟ್ಟ ಮನೆಯಂತೆ ಘಾಳ್ ಎನ್ನುತ್ತಿತ್ತು. ಅನೇಕ ದಿನಗಳಿಂದ ಕಸವನ್ನೆ ಗುಡಿಸಿದ್ದಂತೆ ತೋರುತ್ತಿರಲಿಲ್ಲ. ಪದಾರ್ಥಗಳೂ ಅಸ್ತವ್ಯಸ್ತವಾಗಿ ಹರಡಿಬಿದ್ದಿದ್ದುವು. ಜಗಲಿಯ ಮೇಲೆ ಅಲ್ಲಲ್ಲಿ ಕೋಳಿಯ ಪಿಚಿಗೆಯೂ ಪುಕ್ಕ ತಿಪ್ಪುಳಗಳೂ ಬಿದ್ದಿದ್ದುವು. ಯಾರನ್ನೂ ಕಾಣದೆ ಓಬಯ್ಯ ಅಡುಗೆಮನೆಗೆ ಹೋದನು….. ಅಲ್ಲಿ ಅವನ ಮಲತಂಗಿ ಕತ್ತಲೆಯಲ್ಲಿ ಕತ್ತಲೆಯಾಗಿ ದರಿದ್ರಪಾಕಕಾರ್ಯದಲ್ಲಿ ತೊಡಗಿದ್ದಳು.

“ಅಪ್ಪಯ್ಯ ಎಲ್ಲೇ?” ಎಂದನು ಓಬಯ್ಯ.

ಹುಡುಗಿ ಬೆಚ್ಚಿಬಿದ್ದು ಹಿಂತಿರುಗಿ ಕಳೆಗೆಟ್ಟ ಕಣ್ಣುಗಳಿಂದ ಅಣ್ಣನನ್ನು ನೋಡಿ ಗಾಬರಿಗೊಂಡು, ಎಡಗೈಯಿಂದ ಮಸಿಹಿಡಿದಿದ್ದ ಮೂಗಿನ ಸಿಂಬಳವನ್ನು ತೆಗೆದು ಒಲೆಯ ತೋಳಿಗೂ ಚಿಂದಿ ಸೀರೆಯ ಸೆರಗಿಗೂ ಉಜ್ಜುತ್ತ, ಪಾತಾಳ ಸ್ವರದಿಂದ “ಹೊರಗಿದ್ನಪ್ಪಾ!” ಎಂದಳು.

“ಜಗ್ಲೀಲಿಲ್ಲ. ಮತ್ತೆಲ್ಲಿಗೆ ಹೋಗ್ಯಾನೇ?”

“ಹಟ್ಟೀಗೆ ಹೋದ್ನೋ ಏನೋ?”

ಓಬಯ್ಯ ನೆಟ್ಟಗೆ ಕೊಟ್ಟಿಗೆಗೆ ಹೋದನು. ಅಣ್ಣಯ್ಯಗೌಡರ ವೃದ್ಧ ಶರೀರವು ಕೊಟ್ಟಿಗೆಯ ಒಂದು ಮೂಲೆಯಲ್ಲಿ ಬಾಗಿ, ಕೈಯಿಂದ ಸೆಗಣಿಯನ್ನು ಬಾಚಿ ಬಾಚಿ ಒಂದು ಹೆಡಗೆಗೆ ತುಂಬುತ್ತಿತ್ತು. ಮಗನನ್ನು ಕಂಡ ಕೂಡಲೆ ಪ್ರಶ್ನೆದೃಷ್ಟಿಯನ್ನು ಬೀರಿ, ಉಸ್ಸೆಂದು ನೆಟ್ಟಗೆ ನಿಂತರು. ಸೆಗಣಿಯ ಸಿನುಗು ವಾಸನೆ ತುಂಬಿತ್ತು.

“ಇಲ್ಲೇನ್ಮಾಡ್ತೀಯಾ?” ಎಂದನು ಓಬಯ್ಯ.

“ಕಣ್ ಕಾಣಾದಿಲ್ಲೇನು?” ಎಂದರು ಅಣ್ಣಯ್ಯಗೌಡರು,

“ನೀನೀ ಹಾಳೂರಾಗೇ ಇರ್ತಿಯೋ? ನನ್ಜೋತೆ ಬರ್ತ್ತಿಯೋ?”

“ಎಂಥದೋ?” ಎಂದರು ದೀರ್ಘಸ್ವರದಿಂದ.

“ಎಂಥದೂ ಇಲ್ಲ! ನಾನಿನ್ನು ಈ ಸುಡುಗಾಡೂರಿಗೆ ಕಾಲು ಹಾಕೋದಿಲ್ಲ. ನೀನಿಲ್ಲೇ ಇದ್ಕೊಂಡು ಸಾಯ್ತೀಯೋ? ನನ್ಜೊತೆ ಬಂದು ಬಾಳ್ತೀಯೇ?”

“ಎಲ್ಲಿಗೆ ಹೋಗ್ತೀಯೋ?”

“ಎಲ್ಲಿಗಾದ್ರೂ ಆಗ್ಲಿ! ನೀ ಬರ್ತಿಯೇನು ಹೇಳು!”

“ಇವರ ರುಣ ತೀರಿಸದೆ ಹೋಗಾದ್ಹೇಂಗಾಪ್ಪಾ? ಹೋಗಾಕಾದ್ರೂ ಬಿಡ್ತಾರೇನು?”

“ಹಾಂಗ್ರಾದ್ರೆ ನೀನು ರುಣತೀರಸ್ತಾ ಕೂತ್ಗಾ ಇಲ್ಲಿ ! ನಾನು ಹೋಗಿ ಬ್ಯಾರೆಕಡೆ  ಜಮೀನು ಮಾಡ್ತೀನಿ!”

“ಯಾರು ಕೊಡ್ರಾರೋ ಜಮೀನ್ನಾ?”

“ಸಿಂಗಪ್ಪಗೌಡ್ರು ಕೊಡ್ತೀನಿ ಅಂದಾರೆ. ನೀ ಬರೋದಾದ್ರೆ ಬಾ !”

“ನಮ್ಮ ಸಾಲಾನೂ ಕೊಡ್ತಾರಂತೇನು?”

“ಸಾಲಾ, ಸಾಲಾ, ಸಾಲಾ! ಮತ್ತೆ ಸಾಲದ ಮಾತು ಎತ್ತೀಯಲ್ಲಾ! ಸಾಲಪೂರ ತೀರಿಸಿಬಿಟ್ಟೆ!”

ಅಣ್ಯಯ್ಯಗೌಡರಿಗೆ ಅದನ್ನು ಕೇಳಿ ಅದ್ಭುತ ಆನಂದವಾಗಿ ಮಾತಾಡಲೂ ಕೂಡ ಬಾಯಿ ಬರದೆ ನಿಂತರು.

ಓಬಯ್ಯ “ಸಾಲ ಪೂರ ತೀರಿಸಿಬಿಟ್ಟೆ! ಇಲ್ಲಿ ನೋಡು!” ಎಂದು ಮೈ ತೋರಿಸಿದನು. ಅವನ ಕಣ್ಣಿನಲ್ಲಿ ನೀರು ಸುರಿಯುತ್ತಿತ್ತು. ಕಂಠ ಗದ್ಗದವಾಗಿತ್ತು.

ಅಣ್ಣಯ್ಯಗೌಡರು ಮುಂದುವರಿದು, ಮಗನ ಬಳಿಗೆ ಬಂದು ಬಾಗಿ, ದೇಹದ ನಾನಾ ಭಾಗಗಳಲ್ಲಿ ಕೆಂಪಗೆ ಎದ್ದಿದ್ದ ಬೆತ್ತದೇಟಿನ ಬಾಸುಂದೆಗಳನ್ನು ನೋಡಿ ಮರುಕದಿಂದ “ಯಾರು ಹೊಡೆದ್ರೋ ನಿಂಗೆ?” ಎಂದರು. ಆ ಸಮಯದಲ್ಲಿ ಅಣ್ಣಯ್ಯಗೌಡರ ಮನದಿಂದ ಮಗನ ಅವಿಧೇಯತೆ ಅನ್ಯಾಯ ಧೂರ್ತತನಗಳೆಲ್ಲ ಅಳಿಸಿಹೋಗಿ, ಪಿತೃಸಹಜವಾದ ವಾತ್ಸಲ್ಯಭಾವವೊಂದೇ ಪರಿಶುದ್ಧವಾಗಿ  ಹೊರಹೊಮ್ಮಿತ್ತು. ಓಬಯ್ಯ ನಡೆದುದನ್ನೆಲ್ಲ ಹೇಳಿದನು. ಮೊದಲು ಚಂದ್ರಯ್ಯಗೌಡರ ಋಣತೀರಿಸದೆ ಮೋಸಮಾಡಿ ಹೋಗುವುದು ಹೇಗೆ ಎಂದಿದ್ದ ಅಣ್ಣಯ್ಯಗೌಡರು ಮಗನಿಗೊದಗಿದ ದುಃಖದ ಕಥೆಯನ್ನು  ಕೇಳಿದಮೇಲೆ ಅವನ ಆಸೆಯಂತೆ ಆಚರಿಸಲು ಒಪ್ಪಿಗೆಕೊಟ್ಟರು. ಬಹುಶಃ ಅವರ ಸತ್ಯವ್ರತಕ್ಕೆ ಅದರಿಂದ ತಪ್ಪಿಸಿಕೊಳ್ಳುವ ಅವಕಾಶದ ಅಭಾವವೇ ಪ್ರಬಲಕಾರಣವಾಗಿದ್ದಿತೆಂದು ತೋರುತ್ತದೆ. ಸೀತೆಮನೆ ಸಿಂಗಪ್ಪ ಗೌಡರು ಜಮೀನು ಕೊಡುತ್ತಾರೆ ಎಂದು ಕೇಳಿದೊಡನೆ ಅರ್ದ ಮನಸ್ಸು ಆ ಕಡೆಗೆಳೆದಿತ್ತು.

ತಂದೆಮಕ್ಕಳಿಬ್ಬರೂ ಸೇರಿ ಮರುದಿನ ರಾತ್ರಿ ಗುಟ್ಟಾಗಿ ದನ ಕರು ಪಾತ್ರೆ  ಸಾಮಾನು ಸರಕುಗಳನ್ನೆಲ್ಲ ಸೀತೆಮನೆಗೆ ಸಾಗಿಸೊಬಿಡುವುದೆಂದು ಗೊತ್ತುಮಾಡಿಕೊಂಡರು. ಓಬಯ್ಯ ಈ ವಿಚಾರವನ್ನು ಸಿಂಗಪ್ಪಗೌಡರಿಗೆ ತಿಳಿಸಿ, ಅವರಿಂದ ಗಾಡಿ ಮತ್ತು ಜನಗಳ ಸಹಾಯವನ್ನು ಪಡೆಯಲೋಸುಗ ಹೊರಟುಹೋದನು.

ಅದೇ ದಿನ ಸಾಯಂಕಾಲ ಕಾನುಬೈಲಿನಲ್ಲಿ ಹೂವಯ್ಯನೊಬ್ಬನೆ ಒಂದು ಎತ್ತರವಾದ ಅರೆಯಮೇಲೆ ಕುಳಿತಿದ್ದನು. ಅವನ ಕಣ್ಣು ಹನಿತುಂಬಿತ್ತು. ಮುಖದಲ್ಲಿ ಖಿನ್ನತೆಯಿತ್ತು. ಹೃದಯ ಅಧೀರವಾಗಿತ್ತು. ಆ ದಿನ ಪೂರ್ವಾಹ್ನದಲ್ಲಿ ನಡೆದ ಘಟನೆ  ಅವನ ಜೀವನವನ್ನು ಕಲಕಿಬಿಟ್ಟಿತ್ತು, ಚಂದ್ರಯ್ಯಗೌಡರು ಅದುವರೆಗೆ ತೋರಿಸುತ್ತಿದ್ದ  ಯಾವ ಕ್ರೌರ್ಯವಾಗಲಿ ನಿಷ್ಕರುಣೆಯಾಗಲಿ ಆ ದಿನ ಅವರಾಡಿದ ಕಠಿನವಾಕ್ಕುಗಳಷ್ಟು  ಹೀನವಾಗಿರಲಿಲ್ಲ. ತನಗೆ ಮಾತೃಸದೃಶಳಾಗಿದ್ದ ಸುಬ್ಬಮ್ಮನಿಗೂ ತನಗೂ ಗುಟ್ಟಾಗಿ ಪ್ರಣಯ ಸಂಬಂಧವಿದೆ ಎಂಬರ್ಥವನ್ನು ವ್ಯಂಗ್ಯವಾಗಿ ಸೂಚಿಸಿದ ಚಿಕ್ಕಯ್ಯನ ಬಿರುನುಡಿ ಅವನ ಎದೆಯನ್ನು ಒದ್ದೆಯರುವೆ ಹಿಂಡುವಂತೆ ಹಿಂಡುತ್ತಿತ್ತು. ಹಿಂದೆ ಮನೆ  ಪಾಲಾಗುದರಲ್ಲಿ ಅವನಿಗೆ ಎಷ್ಟು ಜುಗುಪ್ಸೆಯಿದ್ದಿತೋ ಈಗ ಅದರಲ್ಲಿ ಅಷ್ಟು ಆಸಕ್ತಿಯುಂಟಾಗಿತ್ತು. ಚಂದ್ರಯ್ಯಗೌಡರ ಸಂಶಯವೆಂಬ ಭಯಂಕರ ಭೂತದಿಂದ ಎಷ್ಟು ಬೇಗ ಪಾರಾದರೆ ಅಷ್ಟೂ ಒಳ್ಳೆಯದು ಎಂದು ತೋರಿತ್ತು ಆತನಿಗೆ. ಜೋತೆಗೆ ಹತಾಶವಾದ ಪ್ರೇಮದ ಬೆಂಕಿಯೂ ಕೂಡಿ, ಅವನ ಜೀವನವನ್ನು ದಹಿಸುತ್ತಿತ್ತು. ಸೀತೆಯನ್ನು ನೆನೆದು ಕಣ್ಣೀರು ಕರೆದನು. ನಿಜವಾಗಿಯೂ ಸೀತೆ ಕೃಷ್ಣಪ್ಪನನ್ನು ಪ್ರೀತಿಸಿ ತನ್ನನ್ನು ವಂಚಿಸಿಬಿಟ್ಟಳೇ? ಅವಳು ಗೋಡೆಯ ಮೇಲೆ ಬರೆದಿದ್ದ ಮಾತುಗಳು ನೆನಪಿಗೆ ಬಂದು ಹೂವಯ್ಯ ವಿಕಟವಾಗಿ ನಕ್ಕನು. ಚಿಂತಿಸುತ್ತಿದ್ದ ಹಾಗೆಯೆ ಪ್ರಪಂಚದಲ್ಲಿ ಎಲ್ಲವೂ ನಶ್ವರ, ಎಲ್ಲವೂ ದುಃಖಮಯ ಎಂಬ ಭಾವ ಮನಸ್ಸಿನಲಿ ಮೋಳೆತು ಬೆಳೆಯತೊಡಗಿತು. ಇನ್ನು ಸೀತೆಯ ಆಲೋಚನೆಯನ್ನು ಬಿಡುತೇನೆ; ಅವಳು ತನ್ನನ್ನು ವಂಚಿಸಿದ್ದಾಳೆ; ಎಷ್ಟಾದರೂ ಅವಳು  ಇನ್ನುಮೇಲೆ ವಿವಾಹಿತಳಾದ ಪರಸ್ತ್ರೀ; ಅವಳು ಅಸ್ವಸ್ಥಳಾಗಿದ್ದಾಳಂತೆ; ಆದರೂ ನಾನೇಕೆ  ಈಗ ಹೋಗಿ ನೋಡುವುದು; ನಾನು ಬರಿಯ ಪ್ರೇಮಭಿಕ್ಷುಕನಲ್ಲ ಎಂಬುದು ಆಕೆಗೆ ತಿಳಿಯಲಿ; ಆಕೆಯ ಭಾಗಕ್ಕೆ ನಾನೊಬ್ಬ ಯಃಕಶ್ಚಿತನಾದರೆ ನನಗೂ ಆಕೆ ಯಃಕಶ್ಚಿತಳಲ್ಲದೆ ಮತ್ತೇನು!

ದೃಷ್ಟಿಸೀಮಾಪರ್ಯಂತ ತರಂಗತರಂಗವಾಗಿ ಹಬ್ಬಿದ್ದ ಕಾಡು ತುಂಬಿದ ಪರ್ವತಶ್ರೇಣಿಗಳ ದಿಗಂತದಲಿ ಮುಳುಗುತ್ತಿದ್ದ ಸೂರ್ಯನ ಕೆಂಪು ಬಿಂಬ ರಮಣೀಯವಾಗಿದ್ದರೂ ಹೂವಯ್ಯನಿಗೆ ಸೀತೆಯ ಪ್ರೇಮದಂತೆ ಚಂಚಲವೂ ನಶ್ವರವೂ ಕ್ಷಣಿಕವೂ ಆಗಿ ತೋರಿತು. ಹಿಂದೆ ಅಂತಹ ದೃಶ್ಯವನ್ನು ಕಂಡಾಗ ಯಾವ ಆನಂದಾವೇಶಗಳು ಹೃದಯದಲ್ಲಿ ತಾಂಡವವಾಡುತ್ತಿದ್ದವೊ ಅವುಗಳಿಂದು ಸತ್ತ ಬೆಂಕಿಯಂತೆ ಬೂದಿಯಾಗಿದ್ದವು.

ಹೂವಯ್ಯ ಮತ್ತೆ ಆಲೋಚಿಸಿದನು. ತಾನು ಅವಿವಾಹಿತನಾಗಿಯೇ ಇದ್ದುಕೊಂಡು ಮಹಾಪುರುಷರ ಜೀವನವನ್ನು ಅನುಸರಿಸಿ ಜನಾಂಗಕ್ಕೆ ಸೇವೆಮಾಡಿ ಕೀರ್ತಿ ಸಂಪಾದಿಸಬೇಕೆಂದಿದ್ದ ಹಿಂದಿನ ಆದರ್ಶ ಮತ್ತೆ ಮನದಲ್ಲಿ ಹೆಡೆಯೆತ್ತಿತ್ತು. ನಾನೆಂತಹ ಅಚಾತುರ್ಯಕ್ಕೆ ಕೈ ಹಾಕಿದ್ದೆ? ಎಂತಹ ಮೋಹಕ್ಕೆ ಸಿಲುಕುವುದರಲಿದ್ದೆ?  ಆ ಪ್ರಲೋಭನ ಜಾಲದಿಂದ ಭಗವಂತನೆ ನನ್ನನ್ನು ಬಲಾತ್ಕಾರವಾಗಿ ಪಾರುಮಾಡಿದ್ದಾನೆ!  ಯಾವಳೊ ಒಬ್ಬ ಹಳ್ಳಿಯ ಹೆಣ್ಣಿನ ಚೆಲುವಿಗೆ ಸೆರೆಯಾಗಿ ಉತ್ತಮ ಆದರ್ಶಸಾಧನೆಗೆ  ತಿಲಾಂಜಲಿ ಕೊಡುವುದರಲ್ಲಿದ್ದೆ. ಇನ್ನು ಮೇಲೆ ಅಂತಹ ಹವ್ಯಾಸಗಳನ್ನೆಲ್ಲ ಎಚ್ಚರಿಕೆಯಿಂದ ದೂರಮಾಡುತ್ತೇನೆ. ದೃಢಚಿತ್ತದಿಂದಲೂ ಏಕಾಗ್ರತೆಯಿಂದಲೂ ಜ್ಞಾನ ಭಕ್ತಿ ವೈರಾಗ್ಯಗಳನ್ನು ಸಂಪಾದಿಸಿ, ಈಶ್ವರಕೃಪೆಯಿಂದ ನಾಡಿನ ಜನರಿಗೆ ಬೆಳಕನ್ನು ನೀಡಿ, ಜೀವನವನ್ನು ಸಾರ್ಥಕಮಾಡಿಕೊಳ್ಳುತ್ತೇನೆ.

ಆಲೋಚಿಸುತ್ತಿದ್ದಂತೆ ರಾತ್ರಿಯಾಯಿತು. ಅರ್ಧ ಚಂದ್ರನ ಬೆಳಕು ಮಾಯಾಮೋಹಕವಾಗಿ ಹಬ್ಬಿತ್ತು. ಆಕಾಶದಲ್ಲಿದ್ದ ಒಂದೆರಡು ನಕ್ಷತ್ರಗಳು ಬರಬರುತ್ತ  ಹತ್ತು, ನೂರು, ಸಾವಿರವಾಗತೊಡಗಿದವು. ಕುರುಡುಗಪ್ಪಟೆ ಹಕ್ಕಿ ಕೂಗಿ ಹಾರಾಡತೊಡಗಿತು. ದೂರದಲ್ಲಿ ತೇನೆಹಕ್ಕಿ ಹಾಡುತ್ತ ಹಾರುತ್ತಿತ್ತು. ಮರಗಿಡ ಕಾಡುಗಳು  ಆಕಾರ ಮಾತ್ರವಾದವು.

ದೂರದಲ್ಲಿ ಕಳ್ಳುಗೊತ್ತಿಗೆ ಹೋಗುತ್ತಿದ್ದ ಚಂದ್ರಯ್ಯಗೌಡರ ಧ್ವನಿ ಕೇಳಿಸಿತು. ಅವರ ಹಿಂದೆ ಸೇರೆಗಾರರಿದ್ದರು.

ಚಂದ್ರಯ್ಯಗೌಡರು “ಏನಾದ್ರಾಗ್ಲಿ, ನಾಳೆ ರಾತ್ರೀನೆ ಪತ್ತೆಮಾಡಿಬಿಡ್ಬೇಕ್ರಿ. ನಮ್ಮ ಬೇಲರನ್ನೆಲ್ಲ ಕರಕೊಂಡುಹೋಗಾನ. ಆ ಉಂಡಾಡಿ ಭಟ್ಟ ಪುಟ್ಟಣ್ಣನ್ನೂ ಬರಾಕ್ಹೇಳ್ತೀನಿ. ರಾಮೂನೂ ಬರ್ತಾನೆ. ಆ ನಾಟಾ ಪತ್ತೆ ಮಾಡ್ದಿದ್ಮೇಲೆ ನಾವು ಅಪ್ಪಗೆ ಹುಟ್ಟಿದ ಮಕ್ಕಳೇನ್ರಿ?” ಎನ್ನುತ್ತಿದ್ದರು.

ಸೇರೆಗಾರರು ಆಡುತ್ತಿದ್ದ ಮಾತು ಸರಿಯಾಗಿ ಕೇಳಿಸುತ್ತಿರಲಿಲ್ಲ.

ಹೂವಯ್ಯ ಮನೆಗೆ ಬಂದಮೇಲೆ ರಾಮಯ್ಯನಿಂದ ಎಲ್ಲವೂ ವಿಶದವಾಗಿ ಗೊತ್ತಾಯಿತು.  ಚಂದ್ರಯ್ಯಗೌಡರು ತೀರ್ಥಹಳ್ಳಿಯ ಫಾರೆಸ್ಟ್ ರೇಂಜಿಗೆ ಸೀತೆಮನೆ  ಸಿಂಗಪ್ಪಗೌಡರು ಕಳ್ಳನಾಟಾ ಕಡಿಸಿದುದನ್ನು ಅರ್ಜಿ ಮೂಲಕ ತಿಳಿಸಿದ್ದರು. ‘ರೇಂಜರು’  ಒಬ್ಬ ‘ಗಾರ್ಡ’ನನ್ನು ಸೀತೆಮನೆಗೆ ಕಳುಹಿಸಿದ್ದರು. ಆದರೆ ಸಿಂಗಪ್ಪಗೌಡರ ಮನೆಯಲ್ಲಿ ಯಾವ ಹೋಸ ನಾಟಾಗಳೂ ದೊರೆಯಲಿಲ್ಲ. ಗಾರ್ಡನು ಕಾನೂರು ಚಂದ್ರಯ್ಯಗೌಡ ರಲ್ಲಿಗೆ ಬಂದು ನಡೆದುದನ್ನು ಹೇಳಿದ್ದನು. ಚಂದ್ರಯ್ಯಗೌಡರು ಸಿಂಗಪ್ಪಗೌಡರು ಅಡಗಿಸಿಟ್ಟ ನಾಟಾಗಳನ್ನು ಮರುದಿನವೆ ಪತ್ತೆಹಚಿಕೊಡುತ್ತೇನೆ ಎಂದು ಗಾರ್ಡನಿಗೆ ಸಮಾಧಾನ ಹೇಳಿದ್ದರು.