ಮುತ್ತಳ್ಳಿ ಶ್ಯಾಮಯ್ಯಗೌಡರು ಸ್ನಾನ ಮುಗಿಸಿ ಬಚ್ಚಲು ಮನೆಯಿಂದ ಜಗಲಿಗೆ ಬಂದು, ಗೋಡೆಯ ಮೇಲಿದ್ದ ದೊಡ್ಡ ಗಡಿಯಾರದ ಕಡೆಗೆ ನೋಡಿದರು. ಗಂಟೆ ಹತ್ತೂವರೆಯಾಗಿ ಹತ್ತು ನಿಮಿಷವಾಗಿತ್ತು. ನಾಗಂದಿಗೆಯಿಂದ ನಾಮದ ಪೆಟ್ಟಿಗೆಯನ್ನು ತೆಗೆದು ಮುಂದಿಟ್ಟುಕೊಂಡು, ಒಂದು ಅಗಲವಾದ ತೆಳ್ಳನೆಯ ಮಣೆಯ ಮೇಲೆ ಪದ್ಮಾಸನ ಹಾಕಿ ಕೂತರು. ಅವರ ಎದುರಿಗೆ ನೇರವಾಗಿ ಅಂಗಳದಲ್ಲಿ ತುಲಸಿಯ  ಪೀಠವು ಕೆಂಪು ಬಿಳಿ ನಾಮಗಳಿಂದಲೂ ವಿವಿಧ ವರ್ಣದ ಪುಷ್ಪಗಳಿಂದಲೂ ಅಲಂಕೃತವಾಗಿತ್ತು. ಆ ಕಲೆಯಲ್ಲಿ ತಮ್ಮ ಮಗಳು ಸೀತೆಯ ಕುಶಲತೆಯನ್ನು ಕಂಡು, ಗೌಡರ ಹೃದಯದಲ್ಲಿ ದೇವರ ಭಕ್ತಿಯೊಂದಿಗೆ, ಅದಕ್ಕಿಂತಲೂ ಹೆಚ್ಚಾಗಿ ಮಗಳ ಮೇಲಣ ವಾತ್ಸಲ್ಯವೂ ಸೇರಿ ನಲಿದಾಡಿತು.

ಗೌಡರ ದೇಹಕ್ಕೆ ಬೊಜ್ಜು ಬಂದಿದ್ದರೂ ಹೊಟ್ಟೆ ಡೊಳ್ಳಾಗಿದ್ದರೂ ನೋಡುವುದಕ್ಕೆ ಲಕ್ಷಣವಾಗಿಯೆ ಇದ್ದು, ಯೌವನ ಕಾಲದಲ್ಲಿ ಸ್ಫುರದ್ರೂಪಿಯಾಗಿದ್ದರೆಂಬುದನ್ನು ಸ್ಪಷ್ಟಗೊಳಿಸುತ್ತಿತ್ತು. ಭಕ್ತಿ, ಈಶ್ವರಾರಾಧನೆ ಮೊದಲಾದ ಧಾರ್ಮಿಕ ಭಾವಸಾಧನೆಗಳಿಂದಲೇ ಮಾತ್ರ ಸಾಧ್ಯವಾಗಬಹುದಾದ ಒಂದು ಓಜಸ್ಸು ಅವರ ವ್ಯಕ್ತಿತ್ವದಲ್ಲಿ ಕಾಣಿಸುತ್ತಿತ್ತು. ಸೊಂಟಕ್ಕೆ ಮೊಳಕಾಲು ಮುಚ್ಚುವ ಹಾಗೆ ಒಂದು ಪಾಣಿ ಪಂಚೆಯನ್ನು ಮಾತ್ರ ಉಟ್ಟದ್ದ ಅವರ ನಗ್ನ ವಿಗ್ರಹವು ಗಂಭೀರ ಪ್ರಕೃತಿಯವರಲ್ಲಿ ಗೌರವವನ್ನೂ, ಲಘು ಪ್ರಕೃತಿಯವರಲ್ಲಿ ವಿನೋದವನ್ನೂ ಉದ್ರೇಕಿಸುತ್ತಿತ್ತು. ಹೊಟ್ಟೆ ಎದೆ ಭುಜ ಹಣೆಗಳ ಮೇಲೆ ನಾಮಗಳನ್ನು ಹಾಕಿ ಹಾಕಿ, ಬೆಳಕುಕಾಣದ ಚರ್ಮಭಾಗಗಳು ಬೆಳ್ಳಗಾಗಿ ಸ್ವಾಭಾವಿಕವಾದ ನಾಮಗಳೋ ಎಂಬಂತಿದ್ದುವು. ಹೊಟ್ಟೆ ಹಣೆಗಳಲ್ಲಿ ಚರ್ಮವು ಮಡಿಕೆ ಮಡಿಕೆಯಾಗಿ ಅವರ ವಯಸ್ಸಿಗೂ, ಅವರು ಪಡುತ್ತಿದ್ದ ಸುಖಜೀವನಕ್ಕೂ ಸಾಕ್ಷಿಯಾಗಿತ್ತು. ಅಂತೂ ಒಟ್ಟಿನಲ್ಲಿ ಅವರೆಲ್ಲಿಯಾದರೂ ಬ್ರಾಹ್ಮಣರಾಗಿದ್ದರೆ ” ಗೊಡ್ಡು ವೈದಿಕ” ರೆಂಬ ಹೆಸರಿಗೆ ಪಾತ್ರರಾಗುತ್ತಿದ್ದರೆಂದು ಹೇಳಬಹುದಾಗಿತ್ತು.

ಗೌಡರು ಬೆತ್ತ ಹೆಣೆದು ಮಾಡಿದ್ದ ನಾಮದ ಪೆಟ್ಟಿಗೆಯ ಮುಚ್ಚಳವನ್ನು ತೆರೆದರು. ನಾಮದ ಪೆಟ್ಟಿಗೆಯೂ ತುಲಸಿಯ ಪೀಠದಂತೆಯೇ ಅವರಿಗೆ ಪವಿತ್ರ ವಸ್ತುವಾಗಿತ್ತು. ಅದು ಬಹಳ ಪುರಾತನವಾದುದೆಂದು ಅದರ ಬಣ್ಣ ಹೇಳುತ್ತಿತ್ತು. ನವೀನ ವಿಚಾರವಾದಿಗಳು ಆ ಪೆಟ್ಟಿಗೆಯಲ್ಲಿ ಇಣಿಕಿ ನೋಡಿದ್ದರೆ ಮೃದುಹಾಸ್ಯಹಸಿತರಾಗಿ ತಿರಸ್ಕಾರದಿಂದ ಅದನ್ನು ” ಮತಭ್ರಾಂತಿಯ ಮದ್ದಿನ ಮನೆ!” ಎಂದು ಕರೆಯುತ್ತಿದ್ದರು. ಪ್ರಾಚೀನ ಸಂಪ್ರದಾಯ ಪ್ರೇಮಿಗಳು ನೋಡಿದ್ದರೆ ಭಕ್ತಿಪೂರ್ವಕ ಬುದ್ದಿಯಿಂದ ಅದನ್ನು ” ಶಾಂತಿಯ ಎಲೆವನೆ!” ಎಂದು ಕರೆಯುತ್ತಿದ್ದರು, ಆದರೆ ನಾಮದ ಪೆಟ್ಟಿಗೆ ಮಾತ್ರ ಮೌನಿಯಾಗಿರುತ್ತಿತ್ತು.

ಅದರ ಕತ್ತಲುಗವಿಯಲ್ಲಿ ಅನೇಕ ವಸ್ತುಗಳು ಬಹಳ ಕಾಲದಿಂದಲೂ ತಪಸ್ಸು ಮಾಡುತ್ತಿದ್ದುವು; ಕೆಂಪು ನಾಮದ ಕರಡಿಗೆ; ಬಿಳಿ ನಾಮದ ಉಂಡೆಗಳು; ತುಳಸೀಮಣಿಗಳ ಮಾಲೆ; ಒಣಗಿದ ತುಲಸಿಯ ಎಲೆಗಳು; ಎರಡು ಅಂಗುಲ ಚದರವುಳ್ಳ ಒಡಕಲು ಕನ್ನಡಿ; ಕೆಂಪು ಮತ್ತು ಬಿಳಿಯ ನಾಮದ ಕಡ್ಡಿಗಳು; ವಿಭೂತಿಯ ಹುಡಿ; ನಾಲ್ಕೈದು ಜರಠವಾದ ಮೂರುಕಾಸು , ಆರುಕಾಸುಗಳು; ಒಂದು ಬೆಳ್ಳಿಯ ಸಣ್ಣ ತ್ರಿಶೂಲ; ಇತ್ಯಾದಿ. ಪೆಟ್ಟಿಗೆಯ ಸಂದುಗಳಲ್ಲಿ ಆಸ್ತಿಕರ ಸಮಾಜದಲ್ಲಿ ನಾಸ್ತಿಕರೂ ತಮ್ಮ ಅಭಿಪ್ರಾಯಗಳನ್ನು ಗೋಪ್ಯವಾಗಿಟ್ಟುಕೊಂಡು ಜೀವನಯಾಪನೆ ಮಾಡುವಂತೆ, ಕೆಲವು ಸಣ್ಣ ತಣಸಿನ ಹುಳುಗಳೂ ಗೌಡರ ಕಣ್ಣಿಗೆ ಬೀಳದಂತೆ ವಾಸಮಾಡಿಕೊಂಡಿದ್ದುವು.

ಗೌಡರು ಸಾವಧಾನದಿಂದಲೂ ಭಕ್ತಿಯಿಂದಲೂ ತೃಪ್ತಿಯಿಂದಲೂ ತಮ್ಮ ವಿಶಾಲ ಶರೀರಪ್ರಾಂತದ ನಿರ್ದಿಷ್ಟ ಸ್ಥಾನಗಳಲ್ಲಿ ಕೆಂಪು ಬಿಳಿಯ ನಾಮದ ಪತಾಕೆಗಳನ್ನು ಸಂಸ್ಥಾಪಿಸಿ, ಬಾಯಲ್ಲಿ ದೇವರ ನಾಮಗಳನ್ನು ಉಚ್ಚರಿಸುತ್ತ ಮೇಲೆದ್ದು, ಪಕ್ಕದಲ್ಲಿದ್ದ ಬೆಳ್ಳಿಯ ತಂಬಿಗೆಯನ್ನು ತೆಗೆದುಕೊಂಡು ತುಲಸೀ ಪೀಠದ ಬಳಿಗೆ ಹೋದರು. ಅಡಕೆ ಚಪ್ಪರದ ಕಂಡಿಗಳಿಂದ ತೂರಿಬರುತ್ತಿದ್ದ ಬಿಸಿಲುಕೋಲುಗಳಿಂದ ಅಂಗಣದ ತುಂಬ ಪಟ್ಟೆಪಟ್ಟೆಯಾಗಿ ಗುಂಡುಗುಂಡಾಗಿ ಚಿತ್ರವಿಚಿತ್ರವಾಗಿ ಬೆಳಕು ನೆಳಲುಗಳ ರಂಗೋಲಿ ಹಾಕಿದಂತೆ ಮನೋಹರವಾಗಿತ್ತು. ಗೌಡರ ಮಹಾಕಾಯದ ಮೇಲೆಯೂ ಆ ರಂಗೋಲಿ ಬಿದ್ದು, ಬಿಳಿ ಕೆಂಪು ನಾಮಗಳೊಡನೆ ಪಂದ್ಯ ಹೂಡಿತ್ತು. ಬಣ್ಣದ ಚಿಟ್ಟೆಯೊಂದು ಅಂಗಳದಲ್ಲಿ ಹಾರಾಡುತ್ತ ದೃಶ್ಯಕ್ಕೆ ಮತ್ತಿನಿತು ರಮಣೀಯತೆಯನ್ನು ದಯಪಾಲಿಸುತ್ತಿತ್ತು. ನಾಯಿಗಳು ದೂರದ ಮೂಲೆಗಳನ್ನು ಹಿಡಿದು ಮಲಗಿದ್ದವು. ಗೌಡರ ದೇವಾರಾಧನೆಯೆಂದರೆ ಆ ದುಷ್ಟ ದಾನವರಿಗೆ ಅಷ್ಟೊಂದು ಭೀತಿ!

ಗೌಡರು ಪೀಠದ ಮೇಲೆ ಹರಿವಾಣದಲ್ಲಿದ್ದ ಹೂವುಗಳನ್ನು ದೇವರಿಗೆ ಮತ್ತಷ್ಟು ಮುಡಿಸುತ್ತ” ಸೀತಾ” ಎಂದು ಕರೆದರು. ಹಾಗೆ ಕರೆಯುವುದು ಅವರಿಗೆ ಪದ್ದತಿಯಾಗಿತ್ತು.

ಸೀತೆ ತಳತಳನೆ ಹೊಳೆಯುತ್ತಿದ್ದ ಬೆಳ್ಳಿಯ ಪಂಚಪಾತ್ರೆಯಲ್ಲಿ ಅದಕ್ಕಿಂತಲೂ ಬೆಳ್ಳಗಿದ್ದ ಹಾಲನ್ನು ತುಂಬಿಕೊಂಡು, ಅವುಗಳೆರಡನ್ನೂ ಮೀರಿದ ಮುಖ ಪ್ರಸನ್ನತೆಯಿಂದ, ಸೀರೆಯ ನಿರಿ ಮರ್ಮರಗೈಯುತ್ತಿರಲು ಬಳ್ಳಿಯಂತೆ ಬಳುಕಿ ನಡೆದು ತಂದೆಯ ಬಳಿಗೆ ಬಂದಳು. ಹಾಗೆ ಬರುವುದೂ  ಆಕೆಗೆ ಪದ್ದತಿಯಾಗಿತ್ತು. ಆಕೆಯನ್ನು ನೋಡಿ ಗೌಡರಿಗೆ ಮುಖಸ್ತುತಿಯೂ ಆತ್ಮಶ್ಲಾಘನೆಯೂ ಎರಡೂ ಒಟ್ಟಿಗೆ ಬಂದಂತಾಯಿತು. ಆಗತಾನೆ ಸ್ನಾನಮಾಡಿ ಧೌತಾಂಬರವನ್ನುಟ್ಟಿದ್ದ  ಆಕೆ ಹೊಸ ಮಳೆಯಲ್ಲಿ ಮಿಂದ ತಾವರೆಯ ಹೊಸ ಮೊಗ್ಗೆಯಂತೆ ಮುದ್ದಾಗಿಯೂ ಮನೋಹರವಾಗಿಯೂ ಇದ್ದಳು. ಆಕೆ ಇನ್ನೂ ಯಾವ ಒಡವೆಗಳನ್ನೂ ಧರಿಸಿರಲಿಲ್ಲ. ತಲೆಯನ್ನೂ ಬಾಚಿಕೊಂಡಿರಲಿಲ್ಲ. ಕತ್ತಲ್ಗೂದಲು ಗೊಂಚಲು ಗೊಂಚಲಾಗಿಯೂ ತೆರೆತೆರೆಯಾಗಿಯೂ ನಿತಂಬದಾಚೆಯವರೆಗೂ ಸ್ವಚ್ಛಂದವಾಗಿ ಪ್ರವಹಿಸಿದ್ದುದು ಆಕೆ ತಂದೆಗೆ ಪೂಜೆಯಲ್ಲಿ ಸಹಾಯವಾಗಿ ಅತ್ತ ಇತ್ತ ತಿರುಗುತ್ತಿದ್ದಾಗ ಕಾಣುತ್ತಿತ್ತು. ತರುಣಿಯ ಬಿಂಬದಲ್ಲಿಯೂತೇಜಸ್ವಿಗಳಾಗಿ ಕಣ್ಣುಗಳಲ್ಲಿಯೂ ಆ ದಿನ ಏನೋ ಒಂದು ವಿಧವಾದ ತೃಪ್ತಿ ಸಂತೋಷಗಳ ಹೊಸ ಕಳೆ ಮೊಳೆದೋರಿತ್ತು.

“ಚಿನ್ನಯ್ಯ ಎಲ್ಲಿ ಹೋದನೇ? ಇವತ್ತು ಬೆಳಗಿನಿಂದ ನೋಡಲಿಲ್ಲ” ಎಂದು ಮೊದಲಾಗಿ ಗೌಡರು ಪೂಜೆಯ ಮಧ್ಯೆ ಮಧ್ಯೆ ಮಾತಾಡತೊಡಗಿದರು. ಮನಸ್ಸು ಕೈಕಾಲುಬಾಯಿಗಳಿಗೆ ಪೂಜಾವಿಧಾನವನ್ನು ಎಷ್ಟೋ ವರ್ಷಗಳ ಹಿಂದೆಯೇ ಚೆನ್ನಾಗಿ ಕಲಿಸಿಬಿಟ್ಟಿದ್ದರಿಂದ, ಈಗ ಅದು ಪೂಜೆಗೆ ಭಂಗತಾರದೆ ಬೇರೆಯೆಡೆ ಸಂಚರಿಸಬಹುದಾಗಿತ್ತು.

“ಬೆಳಿಗ್ಗೆ ಕೋವಿ ತಗೊಂಡು ಮೀನು ಹೊಡೆಯೋಕೆ ಹೋದ. ಇವತ್ತು ಕಾನೂರು ರಾಮಯ್ಯ ಬಾವೋರು ಬರ್ತಾರಂತೆ” ಎಂದಳು ಸೀತೆ, ಸೀತೆಗೆ ತಂದೆಯಲ್ಲಿ ಹೆಚ್ಚು ಸಲಿಗೆ.

“ಯಾವಾಗ ಬರ್ತಾರಂತೆ?”

“ಇಷ್ಟು ಹೊತ್ತಿಗೇ ಬರಬೇಕಾಗಿತ್ತಪ್ಪಾ!”

ಗಡಿಯಾರದಲ್ಲಿ ಗಂಟೆ ಹೊಡೆಯಿತು. ಗೌಡರು ಹನ್ನೊಂದು ಇರಬಹುದೆಂದು ಯೋಚಿಸಿ ನೋಡುತ್ತಾರೆ, ಹನ್ನೆರಡು! ಹನ್ನೊಂದು ಹೊಡೆದಿದ್ದು ಅವರ ಗಮನಕ್ಕೆ ಬಂದಿರಲಿಲ್ಲ. ಅಡುಗೆ ಮನೆಯಿಂದ ರುಚಿರುಚಿಯಾದ, ಭಕ್ಷ್ಯಭೋಜ್ಯಗಳ ಕಂಪನ್ನು ಹೊತ್ತುಕೊಂಡು ಬಂದ ಗಾಳಿ ದೇವರ ಪೂಜೆ ಮಾಡುತ್ತಿದ್ದವರ ಮೂಗನ್ನೂ ಪ್ರವೇಶಿಸಿತು.

ದೇವರ ಪೂಜೆ ಶೀಘ್ರದಲ್ಲಿಯೆ ಮುಕ್ತಾಯವಾಯಿತು. ಮಗಳು ತಂದೆ ಕೊಟ್ಟ ಪ್ರಸಾದವನ್ನೂ ತೀರ್ಥವನ್ನೂ ಸ್ವೀಕರಿಸಿ, ತಂದೆಯಂತೆಯೆ ಪ್ರದಕ್ಷಿಣೆ ನಮಸ್ಕಾರಗಳನ್ನೂ ಕೊಟಡಿಗೆ ಹೋದಳು. ಗೌಡರು ಸ್ವಲ್ಪ ಹೊತ್ತು ಕಾದು, ಚಿನ್ನಯ್ಯನಾಗಲಿ ಕಾನೂರು ಗಾಡಿಯಾಗಲಿ ಬಾರದಿದ್ದುದನ್ನು ಕಂಡು, ಅಡುಗೆ ಮನೆಗೆ ಹೋಗಿ ಭೋಜನವನ್ನು ಪೂರೈಸಿ ಬಂದರು. ಕಾಳನು ಅವರಿಗಾಗಿ ಜಗಲಿಯ ಮೇಲೆ ಜಮಖಾನ ದಿಂಬುಗಳನ್ನು ಹಾಸಿ, ಹರಿವಾಣದಲ್ಲಿ ಎಲೆಯಡಕೆ ಇಟ್ಟಿದ್ದನು.

ಗೌರಮ್ಮನವರು ಊಟಮಾಡು ಎಂದು ಹೇಳಿದರೂ  ಕೇಳದೆ, ತಾಯಿಯೊಡನೆಯೇ ಉಣ್ಣುತ್ತೇನೆಂದು ಸೀತೆ ಹಟಮಾಡಿ, ತನ್ನ ಕೊಟಡಿಗೆ ಹೋಗಿ ಬಾಗಿಲು ಹಾಕಿಕೊಂಡು ಚಾಪೆಯ ಮೇಲೆ ಕುಳಿತು ಅಲಂಕಾರದಲ್ಲಿ ಉದ್ಯುಕ್ತೆಯಾದಳು. ಎಣ್ಣೆ, ಕನ್ನಡಿ, ಬಾಚಣಿಗೆ, ಹೂಮಾಲೆ ಮೊದಲಾದ ಸಲಕರಣೆಗಳು ಸುತ್ತಲೂ ಬಿದ್ದಿದ್ದುವು. ಸೀತೆ ಕನ್ನಡಿಯಲ್ಲಿ ಆಗಾಗ ಮುಖ ನೋಡಿಕೊಂಡು ತನ್ನನ್ನು ತಾನೆ ಮೋಹಿಸುತ್ತಿದ್ದಂತೆ ತೋರಿದಳು. ಒಂದೆರಡು ಸಾರಿ ಬೆಚ್ಚಿ ಬಾಗಿಲ ಕಡೆ ನೋಡಿದಳು. ಬಾಗಿಲಿಗೆ ತಾಳ ಹಾಕಿದ್ದೇನೆಂದು ಧೈರ್ಯಗೊಂಡು ಮತ್ತೆ ನಿರ್ಲಕ್ಷವಾಗಿ ತನ್ನ ಕಾರ್ಯದಲ್ಲಿ ತೊಡಗಿದಳು. ಕೂದಲು ಮುಟ್ಟಿ ನೋಡಿಕೊಂಡಳು. ಇನ್ನೂ ತೇವವಾಗಿಯೆ ಇತ್ತು. ಬೇರೆಯ ದಿನಗಳಲ್ಲಾಗಿದ್ದರೆ” ಅವ್ವ ಬಯ್ತದೆ” ಎಂದು ಅವಳು ಎಂದಿಗೂ ಹಸಿ ಕೂದಲಿಗೆ ಎಣ್ಣೆ ಸವರುವ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಆದರೆ ಇಂದು ಸೀತೆಗೆ ಸಾಹಸ ಬಂದಿತ್ತು. ಹುಲುಸಾಗಿ ಬೆಳೆದಿದ್ದ ಲಾವಣ್ಯಸ್ನಿಗ್ದವಾದ ಆ ಕೇಶರಾಶಿಯನ್ನು  ಪಾಶಪಾಶಗಳನ್ನಾಗಿ ತುಡುಕಿ, ಮುಂಗಡೆಗೆ ಸೆಳೆದುಕೊಂಡು, ತೈಲಲೇಪನ ಮಾಡಿದಳು. ನಡುನಡುವೆ  ದರ್ಪಣ ದರ್ಶನಮಾಡುತ್ತ, ಕಣ್ಣು ಮೂಗು ತುಟಿ ಕೆನ್ನೆ ಗಲ್ಲಗಳನ್ನೂ ಪ್ರಶಂಸನೀಯ ದೃಷ್ಟಿಯಿಂದ ನೋಡಿಕೊಳ್ಳುತ್ತಿದ್ದಳು. ಒಂದು ಸಾರಿ ಕನ್ನಡಿಯನ್ನು ನೋಡಿಕೊಳ್ಳುತ್ತಿದ್ದಾಗ ಯಾರೂ ಬಾಗಿಲು ತಟ್ಟಿದಂತಾಗಿ ಆಲಿಸಿದಳು.

“ಅಕ್ಕಯ್ಯಾ! ಅಕ್ಕಯ್ಯಾ!” ಎಂದು ಲಕ್ಷ್ಮಿ ಕೀಚುದನಿಯಿಂದ ಬಾಗಿಲನ್ನು ಗುದ್ದುತ್ತಲೂ ಬೆಕ್ಕು ಪರಚಿದಂತೆ ಉಗುರುಗಳಿಂದ ಪರಚುತ್ತಲೂ ಇದ್ದುದು ಸೀತೆಗೆ ಗೊತ್ತಾಯಿತು.

ಸೀತೆ ಸಿಟ್ಟಿನಿಂದಲೂ ತಿರಸ್ಕಾರದಿಂದಲೂ ಹಲ್ಲು ಕಚ್ಚಿದವಳು, ಬಾಗಿಲು ತೆರೆಯಬಾರದೆಂದು ದೃಢನಿಶ್ಚಯ ಮಾಡಿಕೊಂಡು, ಮತ್ತೆ ಕೂದಲಿಗೆ ಎಣ್ಣೆ ಹಚ್ಚುವ ಕೆಲಸಕ್ಕೆ ತೊಡಗಿದಳು. ಆದರೆ ಲಕ್ಷ್ಮಿಯ ಕರೆಯೂ ತಾಡನವೂ ಪರಚುವಿಕೆಯೂ ಬರಬರುತ್ತ ಪ್ರಬಲವಾದುವು. ಒಂದು ಸಾರಿ ಕೋಪದಿಂದ ” ಅಲ್ಲಿರೇ ಬರ್ತೀನಿ!” ಎಂದು ಗದರಿಸಿದಳು. ಆದರೆ ಲಕ್ಷ್ಮಿ ಮೊದಲಿಗಿಂತಲೂ ಹೆಚ್ಚಾಗಿ ” ಸತ್ಯಾಗ್ರಹ” ಮಾಡತೊಡಗಿದಳು. ಸೀತೆ ರೇಗಿ, ಬೈದು, ಬಾಗಿಲು ತೆರೆಯುವುದೇ ಇಲ್ಲವೆಂದು ಕಠಿನವಾಗಿ ಹೇಳಿದಳು. ಲಕ್ಷ್ಮಿ ಒಳಗೆ ಬಂದರೆ ಅಲಂಕಾರಕ್ಕೂ ಅದಕ್ಕೆ ಬೇಕಾಗುವ ಏಕಾಗ್ರತೆಗೂ ಭಂಗಬರುತ್ತದೆ ಎಂದು ಸೀತೆಯ ಮನಸ್ಸು. ಜೊತೆಗೆ ಲಕ್ಷ್ಮಿ ಏನೂ ಅರಿಯದ ಹುಡುಗಿಯಾಗಿದ್ದರೂ ಅವಳೆದುರು ಪದೇಪದೇ ಕನ್ನಡಿ ನೋಡಿಕೊಳ್ಳುವುದೆಂದರೆ ಸೀತೆಗೆ ಸಂಕೋಚ.

ಸೀತೆ ಹೆದರಿಸಿದ ಕೂಡಲೆ ಬಾಗಿಲಾಚೆ ಕ್ರಾಂತಿಗಾರಂಭವಾಯಿತು. ಲಕ್ಷ್ಮಿ ಗಟ್ಟಿಯಾಗಿ ಅಳುತ್ತ ಬಿದ್ದು ಹೊರಳುತ್ತ ಅವ್ವನನ್ನು ಕೂಗತೊಡಗಿದಳು. ಸೀತೆ ಸಿಟ್ಟಿನಿಂದ ನುಗ್ಗಿ ಬಂದು ಬಾಗಿಲು ತೆರೆದಾಗ ಲಕ್ಷ್ಮಿ ಪಕ್ಕದಲ್ಲಿ ಗೌರಮ್ಮನೂ ನಿಂತಿದ್ದರು. ” ಯಾಕೆ? ಬಾಗಿಲು ಹಾಕ್ಕೊಂಡಿದ್ದೀಯಾ?” ಎಂದು ಗದರಿಸುತ್ತ ಲಕ್ಷ್ಮಿಯನ್ನು  ಎತ್ತಿಕೊಂಡು ಕೋಣೆಯೊಳಗೆ ಬಂದರು. ಚಾಪೆಯ ವಾತಾವರಣವನ್ನು ಕಂಡು” ಅಯ್ಯೋ ನಿನ್ನ! ಕೂದಲು ಆರಬೇಕಾದರೆ ಸುರುಮಾಡಿಬಿಟ್ಟಿಯೇನೇ?” ಎಂದರು.

“ಕೂದಲು ಆರಿತ್ತು!” ಎಂದು ಸೀತೆ ಹುಬ್ಬುಗಂಟಾದಳು.

“ಏನಾದರೂ ಮಾಡು! ನೀನೇನು ಹೇಳಿದೋರು ಮಾತು ಕೇಳೋದಿಲ್ಲ!” ಎಂದು ಗೌರಮ್ಮನವರು ಲಕ್ಷ್ಮಿಯನ್ನು ಚಾಪೆಯ ಮೇಲೆ ಕೂರಿಸಿ, ಸೀತೆಗೆ” ಇಲ್ಲಿ ಬಾ, ತಲೆ ಬಾಚ್ತೀನಿ” ಎಂದರು.

ಸೀತೆ “ಬೇಡ, ನಾನೇ ಬಾಚಿಕೊಳ್ತೀನಿ” ಎಂದಳು. ಅವಳಿಗೆ ತಾಯಿಯ ಸಹಾಯವೂ ಒಂದು ಅಡಚಣೆಯಾಗಿತ್ತು. ಗೌರಮ್ಮನವರಿಗೂ ಮಗಳ ಮನಸ್ಸು ಗೊತ್ತಾಗಿ ” ಏನಾದರೂ ಮಾಡು” ಎಂದು ಹೇಳುತ್ತ ಒಳಗೊಳಗೆ ಮುಗುಳು ನಗುತ್ತ, ಮತ್ತೆ ಅಡುಗೆಮನೆಗೆ ಹೋದರು. ಬಹುಶಃ ಅವರಿಗೆ ತಮ್ಮ ತಾರುಣ್ಯದ ನೆನಪಾಗಿರಬಹುದು.

ತಾಯಿ ಕಣ್ಮರೆಯಾದ ಕೂಡಲೆ ಸೀತೆ, ಚಾಪೆಯ ಮೇಲೆ ಮುಗ್ಧವಾಗಿ ಗೊಂಬೆಯಂತೆ ಕೂತಿದ್ದ ಲಕ್ಷ್ಮಿಯ ಕಡೆ ಕಣ್ಣು ಕೆರಳಿಸಿ ನೋಡಿ” ಏನಾಗಿತ್ತೇ ನಿನಗೆ? ಜೀವಹೋಗ್ತಿತ್ತೇನೆ?” ಎಂದು ಹಲ್ಲು ಮಟ್ಟೆ ಕಚ್ಚಿದಳು. ಲಕ್ಷ್ಮಿ ಮತ್ತೆ ಬಾಯನ್ನು ಹಿಂಜಸಿ ಅಳಲು ಪ್ರಾರಂಭಮಾಡುತ್ತಿದ್ದಳು. ಸೀತೆ ಮತ್ತೆ ಗೌರಮ್ಮವನರಲ್ಲಿ ಬಂದುಬಿಡುತ್ತಾರೆಯೊ ಎಂಬ ಭೀತಿಯಿಂದ, ಪಕ್ಕನೆ ಚಾಪೆಯ ಮೇಲೆ ಕುಳಿತು ತಂಗಿಯನ್ನು ಎದೆಗವುಚಿಕೊಂಡು, ಅತ್ಯಂತ ಮಧುರವಾಣಿಯಿಂದ ” ಅಳಬೇಡೇ! ನನ್ನ ಚಿನ್ನಾ! ನಿನಗೂ ಹೂ ಮುಡಿಸ್ತೀನಿ! ಹೂವಯ್ಯ ಬಾವ ಬರ್ತಾರೆ ಕಣೇ!” ಎಂದು ಲಲ್ಲೆಗೈದು ಮುದ್ದಾಡಿ ಮುತ್ತಿಟ್ಟಳು. ಲಕ್ಷ್ಮಿ ಸುಮ್ಮನಾದಳು. ಅವಳಿಗೆ “ಹೂವಯ್ಯ ಬಾವ ಬರುತ್ತಾರೆ” ಎಂದು ಅಕ್ಕ ಹೇಳಿದುದು, ತಾನು ಅಳಬಾರದುದಕ್ಕೆ ಮಹಾಪ್ರಬಲವಾದ ಕಾರಣವಾಗಿ ತೋರಿತೋ ಏನೋ! ಅಣ್ಣಂದಿರೊಡನೆ ಹೂವಯ್ಯನ ಹೆಸರನ್ನು ಹೇಳಲು ನಾಚುತ್ತಿದ್ದ ಸೀತೆಗೆ ಲಕ್ಷ್ಮಿಯೊಡನೆ ಹೇಳಲು ಸಂಕೋಚವಾಗಲಿಲ್ಲ. ಅಷ್ಟೇ ಅಲ್ಲ. ಹೆಸರನ್ನು ಉಚ್ಚರಿಸಿ ಸವಿಯುತ್ತಿದ್ದಳು.

ಲಕ್ಷ್ಮಿ ಸುಮ್ಮನಾದ ಮೇಲೆಯೂ “ಹೂವಯ್ಯಬಾವ ಬರ್ತಾರೆ ಕಣೇ! ಹೂವಯ್ಯ ಬಾವ!” ಎಂದು ಮತ್ತೆಮತ್ತೆ ಒತ್ತಿ ಹೇಳಿದಳು. ಲಕ್ಷ್ಮಿಗೆ ಹೂವಯ್ಯನ ನೆನಪು ಇರಲೂ ಇಲ್ಲ; ಬರಲೂ ಇಲ್ಲ. ಆದರೂ ಅಕ್ಕನ ಪ್ರೀತಿ ಗೌರವಗಳಿಗೆ ಪಾತ್ರನಾದವನು ತನಗೂ ಮಾನ್ಯನೆಂದು ಭಾವಿಸುವಂತೆ ಬೆಪ್ಪಾಗಿ ನೋಡಿದಳು

ಸೀತೆ ತಲೆಬಾಚಿ, ಬೈತಲೆ ತೆಗೆದು, ಜಡೆ ಹಾಕಿಕೊಂಡಳು. ಆಮೇಲೆ ಮುದ್ದಾದ ಹಣೆಯ  ಮೇಲೆ ಕೈಬೆರಳಿನಿಂದ ಕುಂಕುಮವನ್ನು ದುಂಡಾಗಿಡುತ್ತಿದ್ದಾಗ ಲಕ್ಷ್ಮಿಯ ಚೇಷ್ಟೇಯಿಂದ ಕೈ ಅಲ್ಲಾಡಿ, ಪ್ರಾಚೀನಿತಂಬಿನಿಯ ಲಲಾಟದಲ್ಲಿ ಪೂರ್ಣಿಮಾ ಚಂದ್ರಬಿಂಬದಂತೆ ವರ್ತುಲವಾಗಿರಬೇಕಾಗಿದ್ದ ಕುಂಕುಮದಬೊಟ್ಟು ಬಾಲಚುಕ್ಕಿಯಂತೆ ದೀರ್ಘವಕ್ರವಾಯಿತು. ತಂಗಿಯನ್ನು ಗದರಿಸಿ, ಕನ್ನಡಿ ನೋಡಿಕೊಳ್ಳುವುದಕ್ಕೆ ಹೆಚ್ಚು ಅವಕಾಶವೂ ಪ್ರಬಲಕಾರಣವೂ ದೊರಕಿದುದಕ್ಕಾಗಿ ಹರ್ಷಪಡುತ್ತ, ಬೊಟ್ಟನ್ನು ಸರಿಮಾಡಿಕೊಳ್ಳುವ ನೆವದಲ್ಲಿ ಬಹಳ ಕಾಲ ಪ್ರತಿಬಿಂಬವನ್ನು ಪ್ರಶಂಸೆಮಾಡಿದಳು. ತರುವಾಯ ಕಿವಿ, ಮೂಗು, ಕೈಕಾಲು, ನೆತ್ತಿಗಳಿಗೆ ಎಚ್ಚರಿಕೆಯಿಂದಲೂ ಕುಶಲತೆಯಿಂದಲೂ ಒಡವೆಗಳನ್ನಿಟ್ಟುಕೊಂಡಳು. ಕೈಗೆ ಹೊಂಬಳೆಯಿಟ್ಟು, ಅದನ್ನೂ ಕನ್ನಡಿಯಲ್ಲಿಯೇ ನೋಡಿದಳು!

ಈ ಮಧ್ಯೆ ಲಕ್ಷ್ಮಿತನ್ನಯವಾಗಿದ್ದಳು. ಬಾಚಣಿಗೆ, ಹೂವು, ಆಭರಣಗಳನ್ನೆಲ್ಲ ಒಂದೊಂದನ್ನಾಗಿ ಪರೀಕ್ಷೆ ಮಾಡುತ್ತಿದ್ದಳು ಎಣ್ಣೆಯ ಕುಡಿಕೆಗೂ ಕೈ ಹಾಕಿದಳು. ಅದು ಅವಳ ಲಂಗದ ಒಂದು ಭಾಗವೂ ತೊಯ್ದು ಹೋಯಿತು. ಇನ್ನೇನು ಪ್ರವಾಹವು ಹೂಮಾಲೆಯಿದ್ದಲ್ಲಿಗೆ ನುಗ್ಗಬೇಕು, ಅಷ್ಟರಲ್ಲಿ ಸೀತೆ ಕಂಡು ಚೀರಿದಳು. ಬೇಗಬೇಗನೆ ಹೂಮಾಲೆಯನ್ನು ತೆಗೆದು ಬೇರೆ ಕಡೆ ಇಟ್ಟು, ಎಣ್ಣೆಯ ಪಾರುಪತ್ಯಕ್ಕೆ ಬದಲಾಗಿ ತಂಗಿಯ ಪಾರುಪತ್ಯ ಮಾಡಿದಳು. ಅವಳ ಕೆನ್ನೆಯನ್ನು ಹಿಡಿದು ಚಿವುಟಿ ಮಿಲಿದಳು. ಈ ಸಾರಿ ಲಕ್ಷ್ಮಿ ತನ್ನದೇ ಅಪರಾಧವಾಗಿದ್ದರಿಂದ ಗಟ್ಟಿಯಾಗಿ ಅಳಲಿಲ್ಲ; ಕೆನ್ನೆ ತುಟಿಗಳನ್ನು ಹಿಂಜಿಸಿಕೊಂಡು ನೀರವವಾಗಿ ರೋದಿಸತೊಡಗಿದಳು. ಗಟ್ಟಿಯಾಗಿ ಅತ್ತರೆ ಗೌರಮ್ಮನವರೂ ಬಂದು ಗುದ್ದುತ್ತಾರೆಂದು ಆಕೆಗೆ ಭೀತಿ. ಅಷ್ಟರಲ್ಲಿ ಯಾವುದೋ ಗಾಡಿ ಬಂದ ಸದ್ದಾಗಿ ಸೀತೆ ” ಹೂವಯ್ಯಬಾವ ಕಣೇ!” ಎನ್ನುತ್ತ ಕಿಟಕಿಯ ಬಳಿಗೆ ಓಡಿಹೋಗಿ ನೋಡಿದಳು. ಬಿಸಿಲು ಬಿದ್ದಿದ್ದ ಕೆಂಪು ರಸ್ತೆ ನಿರ್ಜನವಾಗಿತ್ತು. ಯಾವ ಗಾಡಿಯ ಚಿಹ್ನೆಯೂ ಇರಲಿಲ್ಲ. ರಸ್ತೆಯ ಚರಂಡಿಯಲ್ಲಿ ಕೆಲವು ಕೋಳಿಗಳು ಮಾತ್ರ ಕೆದರುತ್ತಿದ್ದುದು ಅವಳ ಕಣ್ಣಿಗೆ ಬಿತ್ತು. ಲಕ್ಷ್ಮಿಯೂ ಅಳುವುದನ್ನು ಸದ್ಯಕ್ಕೆ ನಿಲ್ಲಿಸಿ, ಕಿಟಕಿಯ ಬಳಿಗೆ ಬಂದು ನಿಂತು ನಿಕ್ಕುಳಿಸಿ ನೋಡುತ್ತಿದ್ದಳು. ಅವಳ ಕಣ್ಣಿಗೆ ಕೋಳಿಗಳೂ ಕೂಡ ಕಾಣಿಸಲಿಲ್ಲಿ. ಆಕಾಶ, ಮೋಡಗಳು, ಮರಗಳ ಹಸುರು ನೆತ್ತಿ, ಅವುಗಳನ್ನು ವಿಭಾಗಿಸುವಂತಿದ್ದ ಕಿಟಕಿಯ ಸರಳುಗಳು, ಇಷ್ಟೆ ಅವಳ ಕಣ್ಣಿಗೆ ಕಂಡದ್ದು!

ಸೀತೆ ಹತಾಶಳಾಗಿ ಹಿಂದಕ್ಕೆ ಬಂದು, ಎಣ್ಣೆಯನ್ನೆಲ್ಲ ಆದಷ್ಟು ಮಟ್ಟಿಗೆ ಬಳಿಯ ಕುಡಿಕೆಗೆ ತುಂಬಿದಳು. ಚಾಪೆಯನ್ನೆತ್ತಿ ನೋಡುತ್ತಾಳೆ; ನೆಲ ಎಣ್ಣೆ ಹೀರಿ ಕರ್ರಗಾಗಿತ್ತು. ಅದು ಕಾಣಿಸದಂತೆ ಮತ್ತೆ ಪ್ರಾರಂಭಿಸಿ, ಎಣ್ಣೆಯಿಂದ ಒದ್ದೆಯಾಗಿದ್ದ ತನ್ನ ಲಂಗದ ಭಾಗದ ಕಡೆಗೇ ನಿಸ್ಸಹಾಯಳಾಗಿ ಜುಗುಪ್ಸೆಯಿಂದ ನೋಡುತ್ತಿದ್ದುದು ಅಕ್ಕನ ಕಣ್ಣಿಗೆ ಬಿತ್ತು. ಸೀತೆ ಬಾಯಲ್ಲಿ ಶಾಪಗಳನ್ನು ಗೊಣಗುತ್ತ ಮುದ್ದು ತಂಗಿಯ ಲಂಗಭಾಗವನ್ನು ತನ್ನ ಕೈಗಾಣಕ್ಕೆ ಕೊಟ್ಟು, ಕುಡಿಕೆಗೇ ಎಣ್ಣೆಯನ್ನೆಲ್ಲ ಮತ್ತೆ ಹಿಂಡಿದಳು!

ಸೀತೆಯಿನ್ನೂ ಹೂವು ಮುಡಿದಿರಲಿಲ್ಲ. ಅದಕ್ಕೆ ಮೊದಲು” ಕಡೆಯ ಸಾರಿ” ಕಡೆಯ ನಾಟಕದಂತೆ, ಕನ್ನಡಿ ನೋಡುತ್ತಿದ್ದಳು. ಎತ್ತಿನ ಗಂಟೆ ಸರದ ಸದ್ದೂ ಗಾಡಿ ಚಕ್ರಗಳ ಸದ್ದೂ ಚೆನ್ನಾಗಿ ಕೇಳಿಸಿತು. ” ಹೂವಯ್ಯಬಾವ ಬಂದರು ಕಣೇ!” ಎಂದು ಕಿಟಕಿಗೆ ಓಡಿದಳು. ನೋಡುತ್ತಾಳೆ. ಕಮಾನುಗಾಡಿ, ಕರಿ ಬಿಳಿ ಎತ್ತುಗಳು; ಲಚ್ಚ. ನಂದಿ! ಓಹೊ ನಿಂಗ! ಹಿಂದೆ ಯಾರದು? ಪುಟ್ಟಣ್ಣ, ನಂಜ, ಕೋವಿ ಹೊತ್ತುಕೊಂಡು ಬರುತ್ತಿದ್ದಾರೆ! ಮುಂದುಗಡೆ ಯಾರು ಗಾಡಿಯೊಳಗೆ ಕೂತವರು? ರಾಮಯ್ಯ ಬಾವ! ಹೂವಯ್ಯ ಬಾವ ಎಲ್ಲಿ? ಉನ್ನತ ಗಿರಿಶೃಂಗದಲ್ಲಿ ನಿಂತು. ದೂರದ ದಿಗಂತದಲ್ಲಿ ಚಂದ್ರೋದಯವನ್ನೇ ನಟ್ಟನೋಟದಿಂದ ನಿರೀಕ್ಷಿಸುವ ಕಬ್ಬಿಗನಂತೆ, ಸೀತೆ ಉತ್ಕಂಠಿತೆಯಾದಳು. ಜಡೆ, ಹೂವು, ಒಡವೆ, ಮುಖ, ಕಣ್ಣು , ಚೆಲುವು, ಎಲ್ಲವೂ ಎಲ್ಲಿ? ಸೀತೆ ತನ್ನನ್ನು ತಾನೆ ಮರೆತು ದೃಷ್ಟಿಮಾತ್ರವಾದಳು.

ಹೊರ ಅಂಗಳದಲ್ಲಿ ಗಾಡಿ ನಿಂತಿತು. ಗಾಡಿಯ ಹಿಂದುಗಡೆಯಿಂದ ಚಿನ್ನಯ್ಯ ಸಿಂಗಪ್ಪಗೌಡರು ಕೆಳಗೆ ಹಾರಿದರು. ನಿಂಗನು ಕೆಳಗೆ ಹಾರಿ ಗಾಡಿ ಬಿಟ್ಟ ಮೇಲೆ ಮುಂದುಗಡೆಯಿಂದ ರಾಮಯ್ಯನೂ ಇಳಿದನು.

ಸೀತೆ ಹೂವಯ್ಯನನ್ನು ಕಾಣದೆ ಸ್ವಲ್ಪ ಚಕಿತೆಯಾದಳು

ಅಲ್ಲಿದ್ದವರೆಲ್ಲರ ಮುಖದಲ್ಲಿಯೂ ಕಳವಳವಿತ್ತು. ಯಾರೂ  ಗಟ್ಟಿಯಾಗಿ ಮಾತಾಡುತ್ತಿರಲಿಲ್ಲ. ಪುಟ್ಟಣ್ಣನು ತನ್ನ ಕೈಲಿದ್ದ ಕೋವಿಯನ್ನು ನಂಜನ ಕೈಗೆ ಕೊಟ್ಟು ಗಾಡಿಯ ಮುಂದಕ್ಕೆ ಬಂದನು. ಗಾಡಿಯೊಳಗೆ ಯಾರೊಡನೆಯೋ ಮಾತಾಡಿದನು. ಅದೆಲ್ಲವನ್ನೂ ಕಂಡು ಸೀತೆಯ ನೆತ್ತರು ನಾಡಿಗಳಲ್ಲಿ ಬಿಸಿಯಾಗಿ ಹರಿಯತೊಡಗಿತು. ಚಿನ್ನಯ್ಯನು ಗಾಡಿಯೊಳಗೆ ಹೋಗಲು ಅವನನ್ನು ಹಿಡಿದುಕೊಂಡು ಮೆಲ್ಲನೆ ಹೂವಯ್ಯನು ಇಳಿಯತೊಡಗಿದನು. ಸೀತೆ ಗಾಬರಿಯಾದಳು. ಚಿನ್ನಯ್ಯನ ಬಲಗಡೆ ತೋಳು ಹೂವಯ್ಯನ ಬೆನ್ನನ್ನು ಅವಲಂಬನವಾಗಿ ಹಿಡಿದಿತ್ತು.

“ನಡೀತೀಯೋ? ಎತ್ತಿಕೊಂಡು ಹೋಗೋಣೋ?” ಎಂದು ಕೇಳಿದರು ಸಿಂಗಪ್ಪಗೌಡರು.

“ಪರ್ವಾಯಿಲ್ಲ, ನಡೆಯಬಹುದು” ಎಂದನು ಹೂವಯ್ಯ.

ಸೀತೆ ಜಗಲಿಯ ಬಾಗಿಲಿಗೆ ಓಡಿಹೋಗಿ ನಿಂತಳು. ಎಲ್ಲರೂ ಜಗಲಿಗರ ಬರುತ್ತಿದ್ದರು. ಮಲಗಿದ್ದ ಶ್ಯಾಮಯ್ಯಗೌಡರು ಎದ್ದು ಗಾಬರಿಯಾಗಿ ಹೂವಯ್ಯನ ಕಡೆಗೆ ಓಡಿದರು.

“ಏನು? ಏನಾಯ್ತು…?”

“ಏನೂ ಇಲ್ಲ. ನೀವು ಗಾಬರಿಯಾಗಬೇಡಿ. ಬೆನ್ನಿಗೆ ಟ್ರಂಕು ತಗಲಿ ಸ್ವಲ್ಪ ಪೆಟ್ಟಾಗಿದೆ!” ಎಂದು ಹೂವಯ್ಯನು ತನ್ನ ನೋವು ಅಷ್ಟೇನೂ ಉದ್ವೇಗಕ್ಕೆ ಕಾರಣವಾದುದಲ್ಲ. ಎಂಬುದನ್ನು ಗೌಡರಿಗೆ ಸಮರ್ಥಿಸುವಂತೆ ನಗುಮುಖವಾದನು.

ಉಳಿದವರೂ ಹೂವಯ್ಯ ಹೇಳಿದುದನ್ನೇ ಸಮರ್ಥಿಸಿದರು. ಗಾಡಿ ಉರುಳಿ ಬಿದ್ದುದನ್ನು ಯಾರೊಬ್ಬರೂ ಹೇಳಲಿಲ್ಲ. ಗೌಡರು ಬಾಗಿಲಲ್ಲಿ ನಿಂತಿದ್ದ ಸೀತೆಯನ್ನು ನಿರ್ದೇಶಿಸಿ, ಹಾಸಿಗೆ ಹಾಸುವಂತೆ ಹೇಳಿದರು. ಆದರೆ ಅಷ್ಟರಲ್ಲಿಯೆ ಅಲ್ಲಿಗೆ ಬಂದಿದ್ದ ಕಾಳನೇ ಆ ಕೆಲಸ ಮಾಡಿದನು. ಸೀತೆಯೂ ಅವನಿಗೆ ನೆರವಾದಳು.

ಊಟವಾದ ತರುವಾಯ ಸಿಂಗಪ್ಪಗೌಡರು ಶ್ಯಾಮಯ್ಯಗೌಡರಿಗೆ ನಡೆದುದನ್ನೆಲ್ಲ ಹೇಳಿ “ಇಷ್ಟಾದುದೇ ದೇವರ ಕೃಪೆ!” ಎಂದು ಕೊನೆಗಾಣಿಸಿದರು. ಪುಟ್ಟಣ್ಣನೂ ನಡುನಡುವೆ ಬಾಯಿಹಾಕಿ ವಿವರಿಸುತ್ತಿದ್ದನು. ಅವನ ವಿವರಣೆ ನಡೆದ ಕಥೆಗಿಂತಲೂ ಉದ್ದವಾಗಿತ್ತು. ರಾಮಯ್ಯನು ಅಣ್ಣನ ಬಳಿ ಕುಳಿತು ಬೆನ್ನಿಗೆ ಎಣ್ಣೆ ನಿಂಬೆಯ ಹಣ್ಣಿನ ರಸಗಳನ್ನು ತೀಡುತ್ತಿದ್ದನು. ಚಿನ್ನಯ್ಯನೂ ಅವನಿಗೆ ಸಹಾಯ ಮಾಡುತ್ತ ಮಾತುಕಥೆಯಾಡುತ್ತಿದ್ದನು. ಸೀತೆ ಬೇಕಾದ ಸಲಕರಣೆಗಳನ್ನು ಒದಗಿಸುತ್ತ ” ನರ್ಸಮ್ಮ” ನಾಗಿದ್ದಳು.

ಅಂತೂ ಆ ದಿನ ನಿಜವಾಗಿ ” ಹಬ್ಬದೂಟ” ಉಂಡವರು ಶ್ಯಾಮಯ್ಯಗೌಡರು, ಲಕ್ಷ್ಮಿ ಇಬ್ಬರೇ.