ಕಾನುಬೈಲಿನ ಎತ್ತರದ ಮೇಲೆ ಪಡುವಣ ಮಲೆಗಳ ನೆತ್ತಿಯಲ್ಲಿ ಕೆಂಪಗೆ ಮುಳುಗುತ್ತಿದ್ದ ಸಂಧ್ಯಾಸೂರ್ಯನ ಕುಂಕುಮಕಾಂತಿ ಮನಮೋಹಕವಾಗಿ ಓಕುಳಿಯೆರಚುತ್ತಿತ್ತು. ಬೆಟ್ಟಗಳ ನೆರಳು ಕಣಿವೆಗಳನ್ನೆಲ್ಲ ಆವರಿಸಿತ್ತು. ಓಬಯ್ಯ ಹಳೆಪೈಕದ ತಿಮ್ಮನಿತ್ತ ಕಳ್ಳುಕುಡಿದು, ಕಾನೂರು ಮನೆಯ ಕಡೆಗೆ ಇಳಿಯುವುದರಲ್ಲಿದ್ದನು. ತಿಮ್ಮ ಉಳಿದಿದ್ದ ಕಳ್ಳನ್ನು ಸೇರೆಗಾರರಿಗೆಂದು ಹೊತ್ತುಕೊಂಡು ಬೇಗಬೇಗನೆ ಹೋಗಿದ್ದನು. ’ಈಗೀಗ ಸೇರೆಗಾರರು ಮೊದಲಿಗಿಂತ ಎರಡರಷ್ಟು ಕುಡೀತಾರೆ ಕಣ್ರೋ?’ ಎಂದು ಅವನು ಮುಗುಳುನಗೆ ನಗುತ್ತಾ ತನ್ನ ಕಡೆ ನೋಡಿದ್ದನ್ನೇ ಕುರಿತು ಆಲೋಚಿಸುತ್ತಾ ಮೆಲ್ಲನೆ ನಡೆಯುತ್ತಿರಲು, ಯಾರೋ ಮಾತಾಡುತ್ತಾ ಕಾಡಿನ ಕಡೆಯಿಂದ ಬರುತ್ತಿರುವುದು ಗೊತ್ತಾಗಿ, ಓಬಯ್ಯ ನಿಂತು ಅತ್ತಕಡೆ ನೋಡಲಾರಂಭಿಸಿದನು.

ನೋಡುತ್ತಿದ್ದಂತೆ ಇಬ್ಬರು ವ್ಯಕ್ತಿಗಳೂ ಅವರ‍ಸುತ್ತಮುತ್ತ ನಾಯಿಗಳೂ ಹೊದೆಗಳ ನಡುವೆ ಕಾಣಿಸಿಕೊಂಡರು. ಅವರು ಬೇಟೆಯ ವಿಚಾರವಾಗಿ ಮಾತಾಡುತ್ತಾ ಬರುತ್ತಿದ್ದುದನ್ನು ಆಲಿಸಿದ ಓಬಯ್ಯನಿಗೆ ಪುಟ್ಟಣ್ಣನ ಧ್ವನಿಯ ಪರಿಚಯವಾಗಿ “ಏನು ಪುಟ್ಟಣ್ಣಾ, ಷಿಕಾರಿ ಆಯ್ತೇನು?” ಎಂದು ಗಮನ ಸೆಳೆಯುವಂತೆ ಕೂಗಿದನು.

ಹೆಗಲಮೇಲೆ ಕೋವಿ ಹೊತ್ತಿದ್ದ ಪುಟ್ಟಣ್ಣನೂ, ಬೆನ್ನಿನ ಮೇಲೆ ಕಂಬಳಿಯಲ್ಲಿ ಯಾವುದೋ ಭಾರವಾದ ವಸ್ತುವನ್ನು ಹೊತ್ತಿದ್ದರಿಂದ ಸ್ವಲ್ಪ ಬಾಗಿ ನಡೆಯುತ್ತಿದ್ದ ಸೋಮನೂ ಬಳಿ ಸಾರಿದರು. ಬೊಗಳುತ್ತಾ ಹತ್ತಿರ ಬಂದ ನಾಯಿಗಳು ಓಬಯ್ಯನನ್ನು ಗುರುತಿಸಿ, ಮೂಸಿ, ಬಾಲವಲ್ಲಾಡಿಸಿದುವು.

“ಏನು? ಷೀಕಾರಿ ಆಯ್ತೇನು?” ಎಂದು ಓಬಯ್ಯ ಮತ್ತೆ ಕೇಳಿದನು.

ಹಿಂದುಗಡೆಯಿಂದ ಸೋಮ “ಆಯಿತು ಎಂದರೆ ಆಯಿತು. ಇಲ್ಲ ಎಂದರೆ ಇಲ್ಲ” ಎಂದು, ಕಷ್ಟಪಟ್ಟು ಪುಟ್ಟಣ್ಣನಿಗಿಂತಲೂ ಮೊದಲೇ ಮಾತಾಡಿದನು. ಅವನ ಮಾತಿನಲ್ಲಿ ಅವನು ಹೊತ್ತಿದ್ದ ಭಾರದ ಮಹಿಮೆ ಗೊತ್ತಾಗುತ್ತಿತ್ತು.

“ಅದು ಎಂಥದು, ಮಾರಾಯ, ನೀನು ಹೊತ್ತಿದ್ದು? ಅಷ್ಟೊಂದು ಉಸಿರು ಕಟ್ಟಿ ಮಾತಾಡುತ್ತಿದ್ದೀಯಲ್ಲಾ?” ಎಂದನು ಓಬಯ್ಯ.

“ಎಂಥದು ಇಲ್ಲೋ, ನಾಯಿ ಹಿಡಿದಿದ್ದು ಒಂದು ಬರ್ಕನ ಮರಿ” ಎಂದನು ಪುಟ್ಟಣ್ಣ.

“ಮರಿಯ ಸೈ! ಹೊರಲಾರದೆ ಹೊತ್ತುಕೊಂಡು ಬರ‍್ತಾನೆ ಸೋಮ!” ಎಂದನು ಓಬಯ್ಯ.

ಸೋಮ”ಹೌದು ಕಾಣಿ, ಸಿಕ್ಕಿದಾಗ ಮರಿಯಾಗಿತ್ತು;  ಈಗ ಕರಿಯಾಗಿತ್ತಲ್ವಾ!” ಎಂದು ತನ್ನ ಹಾಸ್ಯಕ್ಕೆ ತಾನೆ ನಗತುತ್ತಾ, ಹೊತ್ತ ಹೊರೆಯನ್ನು ದೊಪ್ಪನೆ ಕೆಳಗೆ ಹಾಕಿದನು. ಭಾಗವತರಾಟದಲ್ಲಿ ಕೇಳಿ ತಾನು ಕಲಿತಿದ್ದ ಕರಿ ಎಂಬ ಪದವನ್ನು ಮರಿಗೆ ಪ್ರಾಸವಾಗಿ ಉಪಯೋಗಿಸಿದ್ದರಿಂದ ಹಾಸ್ಯದ ಜೊತೆಗೆ ವಿದ್ವತ್ತಿನ ಹೆಮ್ಮೆಯೂ ಅದರಲ್ಲಿತ್ತು. ಪುಟ್ಟಣ್ಣಗಾಗಲಿ ಓಬಯ್ಯಗಾಗಲಿ ತನ್ನ ಮಾತಿನ ಹಾಸ್ಯವಾಗಲಿ ವಿದ್ವತ್ತಾಗಲಿ ವೇದ್ಯವಾಗಲಿಲ್ಲ ಎಂಬುದನ್ನು ಅವರು ನಗದಿದ್ದುದರಿಂದ ಅರಿತು ಸೋಮ “ಕರೆ ಅಂದರೆ ಏನು ಗೋತ್ತೇನು, ಓಬೇಗೌಡ್ರೇ?” ಎಂದು ಕೇಳಿದನು.

“ಕರಿ ಅಂದರೆ ಮಸೀ ಕರಿ; ಸುಟ್ಟ ಕರಿ.”

“ಆ ಅರ್ಥದಲ್ಲಿ ನಾ…”

ಸೋಮ ಓಬಯ್ಯನನ್ನು ತಿದಿ ವ್ಯಾಖ್ಯಾನ ಮಾಡುವುದಕ್ಕೆ ಅವಕಾಶ ಸಿಕ್ಕಲಿಲ್ಲ. ಬರ್ಕ ನೆಲದಮೇಲೆ ಕಂಬಳಿಯ ಸಹಿತವಾಗಿ ಬಿದ್ದುದನ್ನು ಕಂಡು ನಾಯಿಗಳು ಮುತ್ತಿದುವು. ಪುಟ್ಟಣ್ಣ ಅವುಗಳನ್ನು ಓಡಿಸಲು ಪ್ರಯತ್ನಸುತ್ತಿದ್ದನು. ಆದರೆ ನಾಯಿಗಳಲ್ಲಿ ಒಂದು ಕಂಬಳಿಯನ್ನೇ ಕಚ್ಚಿ ಎಳೆಯುತ್ತಿದ್ದುದನ್ನು ನೋಡಿ, ಸೋಮ ವ್ಯಾಖ್ಯಾನವನ್ನು ಅರ್ಧಕ್ಕೇ ಮುಕ್ತಾಯಮಾಡಿ “ಅಯ್ಯೊ ಅಯ್ಯೊ,ಅಯ್ಯೊ ಅಯ್ಯೊ, ಹೋಯ್ತಲ್ದಾ ನನ್ನ ಕಂಬಳಿ! ಈ ಹಾಳು ಕುನ್ನಿಗಳಿಗೆ! ಬಾಡು ಅದರೆ ಬೇಗುತ್ತವೆ! ಹಛಾ! ಹಛಾ! ಹಛಾ!” ಎಂದು ಕೂಗುತ್ತಾ ಕಂಬಳಿಯನ್ನೂ ಬರ್ಕವನ್ನೂ ಬೇಗಬೇಗನೆ ಎತ್ತಿಕೊಂಡನು. ಎತ್ತಿ ಕೊಂಡವನು ಅಲ್ಲಿ ನಿಲ್ಲದೆ, ಕೆಳಕಾನೂರಿನ ಕಡೆಗೆ ನೆಟ್ಟಗೆ ನಡೆದನು. ನಾಯಿಗಳೂ ಅವನನ್ನೆ ಹಿಂಬಾಲಿಸಿದುವು.

ಓಬಯ್ಯ “ಏನು ಮಾರಾಯ, ನಾನು ಪಾಲು ಕೇಳ್ತೀನಿ ಅಂತಾ ತಗೊಂಡು ಓಡ್ತಿದ್ದೀಯೇನು?” ಎಂದು ಹಿಂದಿನಿಂದ ಕೂಗಿದನು.

ಸೋಮ ಹಿಂತಿರುಗದೆ ಯಕ್ಷಗಾನದ ಹಾಡುಗಳನ್ನು ಗಟ್ಟಿಯಾಗಿ ಹಾಡುತ್ತಾ ನಡೆದನು.

“ಸೋಮ ಏನು ಬದಲಾಯಿಸಿಬಿಟ್ಟಿದ್ದಾನೆ!” ಎಂದನು ಓಬಯ್ಯ.

ಪುಟ್ಟಣ್ಣ ಉಸ್ಸೆಂದು ಕೋವಿಯನ್ನು ಕೆಳಗಿಟ್ಟು, ನಿಂತಿದ್ದ ಬಂಡೆಗಲ್ಲಿನ ಮೇಲೆ ಕಂಬಳಿ ಹಾಕಿಕೊಂಡು ಅದರ ಮೇಲೆ ಕುಳಿತುಕೊಳ್ಳುತ್ತಾ “ಮುಂದಿನ ವರ್ಷ ಆಳು ಕರಕೊಂಡು ಬರ‍್ತಾನಂತೆ. ಸೇರೆಗಾರಿಕೆ ಮಾಡತಾನಂತೆ. ಈ ಆಜುಬಾಜಿನ ಕೆಲಸಾನೆಲ್ಲ ತಾನೆ ಹಿಡಿದು, ಕಾನೂರು ಸೇರೆಗಾರರಿಗೆ ಮಣ್ಣು ಮುಕ್ಕಿಸಬೇಕು ಅಂತಾ ಅವನ ಮನಸ್ಸು…. ಹೂವಯ್ಯಗೌಡರ ಹತ್ತಿರ ಮುಂಗಡ ಕೇಳ್ತಿದ್ದಾನೆ. ಅವರೂ ನೋಡಾನ ನೋಡಾನ ಅಂತಿದ್ದಾರೆ.” ಎಂದು ಕೆಮ್ಮಿ, ಕ್ಯಾಕರಿಸಿ, ದೂರಕ್ಕೆ ತುಪ್ಪಿದನು. ಕುರುಡುಗಪ್ಪಟೆ ಹಕ್ಕಿಯೊಂದು ಕೂಗುತ್ತಾ ಹಾರಿಹೋಯಿತು. ನೇಸರು ಮುಳುಗಿದಮೇಲೆ ಬೈಗುಗಪ್ಪಿನ ಪ್ರಥಮಛಾಯೆ ಕವಿಯುತ್ತಿತ್ತು. ಸಂಜೆಯ ಬಾನಿನಲ್ಲಿ ಬಣ್ಣದ ಮೆರವಣಿಗೆ ಹೊರಟಿತ್ತು. ಒಂದೆರಡು ಉಜ್ವಲ ನಕ್ಷತ್ರಗಳೂ ಹೊಳೆಯತೊಡಗಿದ್ದುವು.

“ಕಾನೂರು ಸೇರೆಗಾರನ್ನ ಊರು ಬಿಟ್ಟು ಓಡಿಸೋದೆ ಒಳ್ಳೇದೆಂದು ಕಾಣ್ತದೆ” ಎಂದು ಓಬಗಯ್ಯ ತಾನು ಕೈಯಲ್ಲಿ ಉರುಳಿಸಿ ಆಟವಾಡುತ್ತಿದ್ದ ಸಣ್ಣ ಕಲ್ಲೊಂದನ್ನು ಎತ್ತಿ ಒಂದೆರಡು ಮಾರು ದೂರದಲ್ಲಿದ್ದ ಬಂಡೆಗೆ ಹೊಡೆದನು.

“ಯಾಕೋ? ನಿಮ್ಮ ಹೆಗ್ಗಡಿತಮ್ಮನ ಕಾರುಬಾರಿಗೆ ಅವರು ಮಂತ್ರಿ ಆಗಿದ್ದಾರಂತೆ!”

ಓಬಯ್ಯ ನಿಟ್ಟುಸಿರುಬಿಟ್ಟು ಸುಮ್ಮನಿದ್ದನು.

ಪುಟ್ಟಣ್ಣ ಓಬಯ್ಯನ ಮೌನದ ಅರ್ಥವನ್ನು ಅರಿತವನಂತೆ ಆ ವಿಚಾರವನ್ನು ಮುಂಬರೆಸದೆ “ನಿಮ್ಮ ಗೌಡ್ರು ಹ್ಯಾಂಗಿದ್ದಾರೆ ಈಗ?” ಎಂದು ಕೇಳಿದನು.

ಓಬಯ್ಯನ ಬಾಯಿಂದ ಕಳ್ಳಿನ ಕಂಪು ಹರಡುತ್ತಿತ್ತು.

“ಹ್ಯಾಂಗಿದ್ದಾರೆ? ಇದ್ದಾರೆ! ಊಟ ಮಾಡ್ತಾರೆ, ತಿಂಡಿ ತಿನ್ತಾರೆ. ಈಚೀಚೆಗೆ ಸರಿಯಾಗಿ ನಿದ್ದೆ ಬರೋದಿಲ್ಲ ಅಂತಾ, ಅದೆಂತದೋ ಅಫೀಮು ಹಾಕಿದ್ದಂತಪ್ಪಾ, ಅದನ್ನೂ ತಿನ್ನೋಕೆ ಸುರುಮಾಡಿದ್ದಾರೆ. ನಾನೂ ಉಪ್ಪರಿಗೆಯಲ್ಲಿ ಅವರ ಹತ್ರಾನೇ ಮಲಗ್ತೀನಿ. ಅವರಿಗೆ ಒಬ್ಬರೀಗೆ ಮಲಗಾಕೆ ಹೆದರಿಕೆ  ಆಗ್ತದಂತೆ… ಒಂದೊಂದು ಸಾರಿ ಅಫೀಮಿನ ಚಟ ಅಂತಾ…. ಕಾಣ್ತದೆ… ರಾತ್ರಿ ಏನೇನೋ ಬಾಯಿಗೆ ಬಂದಹಾಗೆ ಮಾತಾಡ್ತಾರೆ. ಮೊನ್ನೆ ರಾತ್ರಿ ಅಮಲಿನಲ್ಲಿ ಇದ್ದಾಗಲೇ ಗೊಳೋ ಅಂತಾ ಅಳುತ್ತಾ ’ಅಯ್ಯೊ ಓಬಯ್ಯ, ನನ್ನನ್ನು ಎಲ್ರೂ ಕೈಬಿಟ್ಟರಲ್ಲೋ! ನಾನು ಯಾತಕ್ಕೆ ಬದುಕಬೇಕೋ? ಹೊಳೆ ಹಾರಿ ಪ್ರಾಣ ಬಿಡ್ತೀನೋ!’ ಅಂತಾ ಏನೇನೋ ಹೇಳಿಬಿಟ್ಟರು! ಆವತ್ತೊಂದು ದಿವಸ ನಡೂರಾತ್ರೀಲಿ ’ಓಬಯ್ಯ, ಕೋವಿ ತಗೊಂಡು ಬಾ’ ಅಂದರು. ’ಯಾಕೆ?’ ಅಂದೆ ’ಅವನ್ನ ಗುಂಡಿನಲ್ಲಿ ಹೊಡೆದು, ನಾನೂ ಹೊಡಕೊಂಡು ಸಾಯ್ತೇನೆ’ ಅಂದರು. ಯಾರನ್ನ ಅಂತಾ ಕೇಳಿದ್ರೆ ಹೇಳಲಿಲ್ಲ. ಏನೇನೋ ಸಮಾಧಾನ ಹೇಳಿ ಮಲಗಿಸಿದೆ. ನನಗಂತೂ ಸರಿಯಾಗಿ ನಿದ್ರೆಯಿಲ್ಲ…. ಎಂಟು ದಿನದ ಹಿಂದೆ ವಾಸು ನೋಡಿಕೊಂಡು ಬರ‍್ತೀನಿ ಅಂತಾ ತೀರ್ಥಹಳ್ಳಿಗೆ ಗಾಡಿ ಕಟ್ಟಿಸಿಕೊಂಡು ಹೋದೋರು ಏನೇನೋ ಬಾಟ್ಲಿ, ಸುಮಾರು ಇಪ್ಪತ್ತು ಮೂವತ್ತು ತಂದಿಟ್ಟುಕೊಂಡಿದ್ದಾರೆ…. ಎಂಥದದು? ಹಾಂಗೆ ನೋಡ್ತೀಯಲ್ಲಾ!’ ಎಂದು ತನ್ನ ಕಥೆಯನ್ನು ನಿಲ್ಲಸಿ, ಓಬಯ್ಯನೂ ಪುಟ್ಟಣ್ಣ ನೋಡುತ್ತಿದ್ದ ಪಶ್ಚಿಮ ದಿಕ್ಕಿನ ಕಡೆಗೆ ನೋಡಿದನು.

ಅವರು ಕೂತಿದ್ದ ಸ್ಥಳಕ್ಕೆ ಸುಮಾರು ಅರ್ಧ ಫರ್ಲಾಂಗು ದೂರದಲ್ಲಿ ದೊಡ್ಡ ಬಂಡೆಯೊಂದು ಕರ್ರಗೆ, ಎತ್ತರವಾಗಿ, ಕೆಂಬಣ್ಣದ ಬೈಗಿನ ಬಾನಿನ ಪಟಕ್ಕೆ ಎದುರಾಗಿ, ದುಂಡಾದ ಗೋಪುರದಂತೆ ಮೇಲೆದ್ದಿತ್ತು. ಕವಿಯುತ್ತಿದ್ದ ಮುಂಗತ್ತಲೆಯಲ್ಲಿ ಅದರ ಆಕೃತಿ ಏನೋ ಒಂದು ಅರ್ಥದಿಂದ, ಯಾವುದೋ ಒಂದು ರಹಸ್ಯದಿಂದ ತುಂಬಿದ್ದಂತೆ ತೋರುತ್ತಿತ್ತು. ಹಗಲು ಬೆಳಕಿನಲ್ಲಿ ಆ ಬಂಡೆ ಅಷ್ಟೇನೂ ಪ್ರಮೂಖವಾಗಿ ಕಾಣುವಂತಿರಲಿಲ್ಲ. ಆದರೆ ಅವರು ಕುಳಿತಿದ್ದ ಜಾಗಕ್ಕೆ ಅದು ಮುಚ್ಚಂಜೆಯ ಆಕಾಶಭಿತ್ತಿಗೆ ಕೆತ್ತಿ ಮೆತ್ತಿದ್ದಂತೆ ಎದ್ದು ಕಾಣುತ್ತಿದ್ದುದರಿಂದ, ಕತ್ತಲೆಯ ಮಬ್ಬುಮುಸುಗಿನಲ್ಲಿ ಅಜ್ಞಾತವಾಗಿ ಅಲಕ್ಷಿತವಾಗುತ್ತಿದ್ದ ಇತರ ಎಲ್ಲ ವಸ್ತುಗಳಿಗಿಂತಲೂ ಅದು ಅತ್ಯಂತ ಪ್ರಧಾನವಾಗಿತ್ತು. ಪುಟ್ಟಣ್ಣ ಓಬಯ್ಯನ ಮಾತು ಕೇಳುತ್ತ, ಆ ಬಂಡೆಯ ಕಡೆಗೆ ನೋಡುತ್ತಿದ್ದ ಹಾಗೆಯೆ ಮನುಷ್ಯಾಕೃತಿಯೊಂದು ಸಂಧ್ಯಾಕಾಶಕ್ಕೆದುರಾಗಿ, ಆ ಬಂಡೆಯಂತೆಯೆ ಕರ್ರಗೆ ಅದರ ಮೇಲೇರಿತು. ಮಷೀಪೂರ್ಣವಾದ ರೇಖಾಚಿತ್ರದಂತೆ ಕಾಣಿಸುತ್ತಿದ್ದ ಆ ನರಾಕೃತಿ, ರೂಪದ ವಿವರಗಳಿಲ್ಲದ ಆಕಾರ ಮಾತ್ರವಾಗಿತ್ತು. ಆ ಮಷೀ ಚಿತ್ರದ ವ್ಯಕ್ತಿ ಬಂಡೆಯ ನೆತ್ತಿಯಲ್ಲಿ ಧೀರವಾಗಿ ನೇರವಾಗಿ ನಿಂತು ಸಂಧ್ಯಾಕಾಶವನ್ನು ನೋಡತೊಡಗಿತು. ತಲೆಯುಡೆಯಿಲ್ಲದೆ ಕೂದಲಿಲ್ಲದ ಶಿರಸ್ಸಿನ ಹೊರಗೆರೆಯ, ಎರಡು ಕಿವಿಗಳ ರೇಖಾಕೃತಿಯ, ಹಾಕಿಕೊಂಡಿದ್ದ ಷರ್ಟು ಮತ್ತು ಉಟ್ಟುಕೊಂಡಿದ್ದ ಅಡ್ಡಪಂಚೆಯ ಆ ವ್ಯಕ್ತಿ ಬಂಡೆಯ ಮೇಲೆ ನೆಟ್ಟ ಶಿಲಾಮೂರ್ತಿಯಂತೆ ತುಸುಹೊತ್ತು ನಿಂತಿದ್ದು, ಮತ್ತೆ ಉತ್ತರಕ್ಕೆ ತಿರುಗಿ ನಿಂತಾಗ, ನೀಳವಾದ ಮೂಗೂ ತುಟಿ ಬಾಯಿಗಲ್ಲಗಳ ಗೆರೆಯೂ ಕಡೆದಿಟ್ಟಂತೆ ಗೋಚರಿಸಿ ಪುಟ್ಟಣ್ಣಗೆ ಪರಿಚಯವಾಯಿತು.

“ಯಾರೋ ಅದು?” ಎಂದು ಕೇಳಿದ ಓಬಯ್ಯನ ಪ್ರಶ್ನೆಗೆ ಪುಟ್ಟಣ್ಣ ಗೌರವಸೂಚಕವಾದ ಪಿಸುದನಿಯಲ್ಲಿ “ಹೂವಯ್ಯಗೌಡರು!” ಎಂದು ದೇವಾಲಯದ ಗರ್ಭಗುಡಿಯಲ್ಲಿ ದೇವರ ವಿಗ್ರಹದ ಮುಂದೆ ಭಯ ಭಕ್ತಿಯಿಂದ ಮಾತಾಡುವಂತೆ ಹೇಳಿದನು.

“ಗಡ್ಡಾ ಕೂದಲೂ ಒಂದೂ ಇಲ್ಲ! ಸನ್ನೇಸಿ ಬೋಳುತಲೆ ಇದ್ಹಾಂಗಿದೆ!” ಎಂದು ಓಬಯ್ಯ ಪಿಸುಮಾತಿಗೆ ಪ್ರಾರಂಭಿಸಿದನು.

“ಮೊನ್ನೆ ಮೊನ್ನೆ ಗಡ್ಡ ಕೂದಲು ಮೀಸೆ ಎಲ್ಲಾ ನುಣ್ಣಗೆ ತೆಗೆಸಿಬಿಟ್ಟಿದ್ದಾರೆ!”

“ಅದೇನು?”

ಇವರಿಬ್ಬರೂ ಮಾತಾಡುತ್ತಿದ್ದಹಾಗೆಯೆ, ಹೂವಯ್ಯನ ಆಕೃತಿ ಬಂಡೆಯ ಮೇಲೆ ಪದ್ಮಾಸನ ಹಾಕಿ ಕೂತುಕೊಂಡಿತು.

“ಅವರು ನಿತ್ಯ ಇಲ್ಲಿಗೆ ಬಂದು ಧ್ಯಾನಮಾಡ್ತಾರೆ…. ಈಗೀಗ ನನಗೆ ಅವರ ಹತ್ರ ಹೋಗೋಕೆ ಹೆದರಿಕೆಯಾಗ್ತದೆ. ಹೆದರಿಕೆ ಅಂದರೆ, ಹೆದರಿಕೆ ಅಲ್ಲ… ಅವರ ಹತ್ರ ಹೋದರೆ ಏನೋ ಒಂದು ತರಾ ಆಗ್ತದೆ….. ಮೊದಲಿಗೆ ಬೇಟೆ ಅಂದರೆ ಪ್ರಾಣ ಬಿಡ್ತಿದ್ದರಲ್ಲಾ? ಈಗ ಅದರ ತಂಟೆಗೇ ಹೋಗೋದಿಲ್ಲ. ಮಾಂಸ ತಿನ್ನೋದು ಕೂಡ ವಜಾ ಮಾಡಿಬಿಟ್ಟಿದ್ದಾರೆ…. ಹಗಲು ಒಂದೇ ಹೊತ್ತು ಊಟ… ಬೆಂಗಳೂರಿನಿಂದ ಅವರ ಸ್ನೇಹಿತರಿಗೆ ಕಾಗದ ಬರೆದು ಒಂದು (ಕೈಯಿಂದ ಎತ್ತರವನ್ನು ತೋರಿಸುತ್ತಾ) ಇಷ್ಟೆತ್ತರ ಬುದ್ಧ ದೇವರ ಮೂರ್ತಿ ತರಿಸಿದ್ದಾರೆ! ಇಂದಿಗೆ ಸುಮಾರು ಹತ್ತು ಹದಿನೈದು ದಿನ ಆಯ್ತು ಅಂತ ಕಾಣ್ತದೆ… ಪುಟ್ಟಮ್ಮ ಹಡೆಯುವುದಕ್ಕೆ ಹಿಂದಿನ ದಿನ ಅಲ್ಲ, ಅದರ ಹಿಂದಿನ ದಿನ ಅಂತ ಕಾಣ್ತದೆ…. ಆಮೇಲೆ ಅವರು ತಲೆಕೂದಲು ಗಡ್ಡ ಎಲ್ಲ ಬೋಳಿಸಿಬಿಟ್ಟಿದ್ದು…!”

ಪುಟ್ಟಣ್ಣ ತನ್ನ ಇಷ್ಟ‌ವ್ಯಕ್ತಿಯನ್ನು ಕುರಿತು ನಾನಾಪರಿಯಾಗಿ ಪ್ರಶಂಸಿಸಿ ಮಾತಾಡಿದನು. ಸುಮಾರು ಅರ್ಧ ಗಂಟೆಯಾದರೂ, ಕ್ಷಣ ಕ್ಷಣಕ್ಕೂ ಮಸುಳುತ್ತಿದ್ದ ಕಾಂತಿಯ ಬಾನಿಗೆದುರಾಗಿ ಬಂಡೆಯ ಮೇಲೆ ಪದ್ಮಾಸನ ಹಾಕಿ ಕುಳಿತಿದ್ದ ಆ ನಿಶ್ಚಲ ಮಷೀಚಿತ್ರ ಅಲುಗಾಡಲಿಲ್ಲ.

ಓಬಯ್ಯ “ನಾನು ಹೋಗ್ತೀನಪ್ಪಾ. ನಮ್ಮ ಗೌಡ್ರೇನು ಕಪ್ಪಾದ ಕೂಡ್ಲೆ ನನ್ನ ಕೂಗ್ತಾರೆ ಕತ್ತಲಾದ ಮೇಲಂತೂ ಒಂದುಚಣ ಅವರಿಂದ ಒಬ್ಬರೇ ಇರೋದಕ್ಕೆ ಆಗೋದಿಲ್ಲವಂತೆ! ಏನೇನೋ ಕುಡಿದುಬಿಡ್ತಾರೆ… ಸುಮ್ಮನೆ ಮಲಗಿಕೊಂಡರೇನೇ, ಸೈ! ಆದರೆ ಒಂದೊಂದು ಸಾರಿ ಬುದ್ಧಿ ಕೆರಳಿಬಿಟ್ಟರೆ ದೇವರೇ ಗತಿ! ’ಅವರು ಬಂದರು! ಇವರು ಬಂದರು! ಹೋಡೀತಾರೆ! ಕೊಲ್ತಾರೆ!’ ಅಂತಾ ಕೂಗ್ತಾರೆ. ಏನೇನೋ ಗಾಬರಿ ಅವರಿಗೆ!” ಎಂದು ಓಬಯ್ಯ ಎರಡು ಮೂರು ಹೆಜ್ಜೆ ಮುಂದೆ ಹೋದವನು ಹಿಂತಿರುಗಿ ಬಂದು “ನನಗೆ ಒಂದೆರಡು ಈಡಿಗೆ ಮಸಿ ಕೊಡ್ತೀಯೇನೋ? ಕೊಪ್ಪದ ಸಂತೆಗೆ ಹೋದವನು ತಂದು ಕೊಡ್ತೀನಿ” ಎಂದನು.

“ಯಾಕೋ? ನಿಮ್ಮ ಗೌಡರನ್ನು ಕೇಳಿದ್ರೆ ಕೊಡೋದಿಲ್ಲೇನು?”

“ಅಯ್ಯೋ! ನಿನಗೆ ಸರಿಯಾಗಿ ಅರ್ಥವಾಗ್ಲಿಲ್ಲಾ ಅಂತ ಕಾಣ್ತದೆ ನಾ ಹೇಳಿದ್ದು! ಬಂದು ನೋಡು ಒಂದು ದಿವಸ, ಅವರ ಸ್ಥಿತಿ ಗೊತ್ತಾಗ್ತದೆ.”

ಮರುದಿನ ಬೈರನ ಕೈಲಿ ಕೋವಿಮಸಿಯನ್ನು ಕೊಟ್ಟು ಕಳುಹಿಸುವುದಾಗಿ ಪುಟ್ಟಣ್ಣ ಹೇಳಿದಮೇಲೆ ಓಬಯ್ಯ ಬೆಟ್ಟವಿಳಿದು ಕಾನೂರಿನ ಕಡೆಗೆ ಹೋದನು.

ಆಕಾಶ ನಕ್ಷತ್ರಗಳಿಂದ ಕಿಕ್ಕಿರಿದಿತ್ತು. ಬೆಟ್ಟಗಾಡುಗಳು ಬರಿಯ ರೂಪು ರೇಖೆಗಳಾಗುವಷ್ಟರಮಟ್ಟಿಗೆ ಕತ್ತಲು ದಟ್ಟಯಿಸಿತ್ತು. ಮನೆಯ ಕಡೆ ಹೊರಟ ಹೂವಯ್ಯನನ್ನು ಪುಟ್ಟಣ್ಣ ಹಿಂಬಾಲಿಸಿ ಸೇರಿದನು.

ಹೂವಯ್ಯ ಬೇಟೆಯ ವಿಚಾರವಾಗಿ ಒಂದೆರಡು ಪ್ರಶ್ನೆಗಳನ್ನು ಹಾಕಿ, ತರುವಾಯ ಅಷ್ಟು ಹೊತ್ತಾದುದೇಕೆಂದು ಕೇಳಿದನು. ಪುಟ್ಟಣ್ಣ, ದಾರಿಯಲ್ಲಿ ಓಬಯ್ಯ ಸಿಕ್ಕಿ ಮಾತಾಡುತ್ತಾ ನಿಲ್ಲಿಸಿಕೊಂಡುಬಿಟ್ಟನೆಂದು ಪ್ರಾರಂಭಮಾಡಿ, ರಾಮಯ್ಯನ ವಿಷಯವಾಗಿ ತಾನು ಕೇಳಿದುದೆಲ್ಲವನ್ನೂ ಹೇಳುತ್ತಾ ನಡೆದನು. ಹೂವಯ್ಯ ಲಘು ಗುರುಗಳಿಂದ ಮಾತ್ರ ಆಗಾಗ ಉತ್ತರವೀಯುತ್ತಾ ಚಿಂತಾಮಗ್ನನಾಗಿ ಮನೆ ಸೇರಿದನು.

ರಾಮಯ್ಯನ ಆಧೋಗತಿಯನ್ನೂ ದುಃಸ್ಥಿತಿಯನ್ನೂ ಕೇಳಿದ್ದ ಹೂವಯ್ಯನ ಮನಸ್ಸು ದುಃಖ ಶೋಕ ಕನಿಕರಗಳಿಂದ ಕ್ಷುಬ್ದವಾಗಿತ್ತು. ಅದಕ್ಕೆಲ್ಲ ತಾನೇ ಕಾರಣನಾಗಿದ್ದೇನೆ ಎಂಬ ಸೂಕ್ಷ್ಮಭಾವವೂ ಎದೆ ಚುಚ್ಚಿತ್ತು. ತನ್ನ ಸ್ವಾರ್ಥತೆ, ಅದೃಢತೆ, ಅನಿಶ್ಚಯಬುದ್ಧಿ, ತೂಗುಯ್ಯಲೆಯ ಮನಸ್ಸು- ಇವುಗಳೇ ಕಾರಣವಲ್ಲವೇನು-ಎರಡು ಮೂರು ಮನೆತನಗಳಲ್ಲಿ ನಡೆದಿದ್ದ ಮತ್ತು ನಡೆಯುತ್ತಿರುವ ಅನರ್ಥಗಳಿಗೆ – ಎನ್ನಿಸಿತು. ಹೂವಯ್ಯ ತನ್ನನ್ನು ತಾನೇ ಅನಾವಶ್ಯಕವಲ್ಲದಿದ್ದರೂ ಅತಿ ಎಂದು ಹೇಳಬಹುದಾದ ಕಠಿಣತೆಯಿಂದ ಆತ್ಮ ಪರೀಕ್ಷೆ ಮಾಡಿಕೊಳ್ಳುತ್ತಾ, ತನ್ನೆದುರು ಮೇಜಿನಮೇಲಿದ್ದ ಬುದ್ಧದೇವನ ಧ್ಯಾನಸ್ಥಿಮಿತ ಮೂರ್ತಿಯನ್ನು ಎವೆಯಿಕ್ಕದೆ ನೋಡತೊಡಗಿದನು.

ಆ ಮಹಾಪುರುಷನ ಸ್ವಾರ್ಥತ್ಯಾಗ, ವೈರಾಗ್ಯ, ಔದಾರ್ಯ, ಕನಿಕರ, ಅಹಿಂಸೆ, ತೀಕ್ಷ್ಣಮತಿ, ಪರದುಃಖಕಾತರತೆ- ಇವುಗಳಲ್ಲಿ ಒಂದೊಂದೂ ಅವನ ಜೀವನ ಚರಿತ್ರೆಯ ಘಟನಾಚಿತ್ರಗಳೊಡನೆ ಮೂರ್ತೀಭವಿಸಿ, ಮನೋಭಿತ್ತಿಯಲ್ಲಿ ಚರಿಸಿದುವು. ಆ ಭವ್ಯಭೈರವ ವ್ಯಕ್ತಿತ್ವದ ಮುಂದೆ ತನ್ನ ಅಲ್ಪತೆ ಕನಿಕರಣೀಯವಾಗಿ, ನೀಚವಾಗಿ ತೋರಿ, ಹೂವಯ್ಯನ ಕಣ್ಣುಗಳಿಂದ ಹನಿಗಳು ಒಂದಾದ ಮೇಲೊಂದು ಉದುರಿದುವು. ಹೂವಯ್ಯ ಆ ಮೂರ್ತಿಯ ಪಾದಪದ್ಮಗಳ ಮೇಲೆ ತನ್ನ ಹಣೆಯಿಟ್ಟು “ಗುರುದೇವ, ನನ್ನನ್ನು ಕೈಹಿಡಿದೆತ್ತಿಕೊ. ಉದ್ಧಾರಮಾಡು. ನಿನ್ನ ಮಹಾಗುಣಗಳಲ್ಲಿ ಒಂದಿನಿತನ್ನಾದರೂ ದಯಪಾಲಿಸು. ನನ್ನ ಜೀವನವನ್ನು ಸಾರ್ಥಕಮಾಡು” ಎಂದು ಬೇಡಿದನು.

ಬರಬರುತ್ತ ಹೂವಯ್ಯನ ಮನಸ್ಸು ಬುದ್ಧದೇವನ ಕಡೆಗೆ ಹೆಚ್ಚು ಹೆಚ್ಚಾಗಿ ಒಲಿದಿತ್ತು. ಆತನ ತಪಸ್ಸೂ, ಕಷ್ಟಗಳ ಸಮ್ಮುಖದಲ್ಲಿ ಆತನಿಗಿದ್ದ ವಜ್ರ ಮನಸ್ಸೂ, ಲೋಕಕ್ಕಾಗಿ ತನ್ನನ್ನು ತಾನೇ ಇಲ್ಲಗೈದುಕೊಳ್ಳುವ ಗಗನೋಪಮ ಮಹೌದಾರ್ಯವೂ ಹೂವಯ್ಯನ ಪ್ರಕೃತಸ್ಥಿತಿಗೆ ತಾರಕಮಂತ್ರವಾಗಿದ್ದುವು. ಕೈಲಾದಮಟ್ಟಿಗೆ ಆ ಗುರುವನ್ನು ಆದರ್ಶವಾಗಿಟ್ಟುಕೊಂಡು, ಆತನನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದನು. ಆದರೆ ಎಷ್ಟೋಸಾರಿ ಹಳೆಯ ರಾಗದ್ವೇಷಗಳಿಂದ ಆ ಪ್ರಯತ್ನ ವಿಫಲವಾಗುತ್ತಿತ್ತು. ಆದರೂ ಹೂವಯ್ಯ ಎದೆಗುಂದೆ ಸಾಧನೆಯಲ್ಲಿ ತೊಡಗಿದ್ದನು.

ಆ ರಾತ್ರಿ ಬುದ್ಧದೇವನ ಕೃಪಾಬಲವನ್ನು ಬೇಡಿ, ಮನಸ್ಸನ್ನು ಗಟ್ಟಿಮಾಡಿಕೊಂಡು, ಮುಂದಿನ ಹಾದಿಯನ್ನು ನಿಶ್ಚಯಿಸಿದನು: ನಾಳೆ ಕಾನೂರಿಗೆ ಹೋಗಿ,ರಾಮಯ್ಯನನ್ನು ಕಂಡು, ತ್ಯಾಗಪೂರ್ಣವಾಗಿ ಅವನ ಉದ್ಧಾರಕ್ಕೂ ಸುಖಕ್ಕೂ ಪ್ರಯತ್ನಿಸುತ್ತೇನೆ; ಮತ್ತು ನಾಡಿದ್ದು ಮುತ್ತಳ್ಳಿಗೆ ಹೋಗುತ್ತೇನೆಷ್ಟೆ? (ತನ್ನ ಗಂಡುಕೂಸನ್ನು ತೊಟ್ಟಿಲಿಗೆ ಹಾಕುವ ಉತ್ಸವದಲ್ಲಿ ಖಂಡಿತ ಬಂದು ಭಾಗಿಯಾಗಬೇಕೆಂದು ಚಿನ್ನಯ್ಯ ಕಾಗದ ಬರೆದಿದ್ದನು) ಅಲ್ಲಿ ಸೀತೆಯನ್ನು ಕಂಡು, ಕಾನೂರಿಗೆ ಹೋಗಿ ರಾಮಯ್ಯನ ಹೆಂಡತಿಯಾಗಿರುವಂತೆ ಆಕೆಯನ್ನು ಒಪ್ಪಿಸಲು ಪ್ರಯತ್ನಿಸುತ್ತೇನೆ!

ಎರಡನೆಯ ಸಂಕಲ್ಪವನ್ನು ಮಾಡುತ್ತಿದ್ದಾಗ ಹೂವಯ್ಯನಿಗೆ ತನ್ನ ಪ್ರಾಣವೇ ಶೂನ್ಯವಾಗುತ್ತಿದ್ದಂತೆ ತೋರಿತು. ಎದೆ ಹಿಂಡಿ ಹೀರಿದಂತಾಯಿತು. ಗರಗಸದಿಂದ ತನ್ನ ಕರುಳನ್ನು ತಾನೆ ಕೊಯ್ದುಕೊಳ್ಳುವಂತಾಯಿತು. ಮೈ ಬೆರಿತು. ಕಣ್ಣೀರು ಸುರಿಯಿತು. ಮನಸ್ಸು ಬಿಕ್ಕಿ ಬಿಕ್ಕಿ ಅಳುವಂತಾಯಿತು. ಆದರೂ ತನ್ನ ಪ್ರಯತ್ನಕ್ಕೆ ಬುದ್ಧದೇವನ ಕೃಪಾಹಸ್ತ ನೆರವಾಗಿದೆಯೆಂಬ ಶ್ರದ್ಧೆಯಿಂದ ಆತನು ಉತ್ತೀರ್ಣನಾದನು.

ಉತ್ತೀರ್ಣನಾಗಿ, ಕೊಟಡಿಯಿಂದ ಹೊರಗೆ ಬಂದು, ಗಗನದ ಕಡೆಗೆ ನೋಡಿದಾಗ, ಅತನ ಮನಸ್ಸು ಶಾಂತಿಸಾಗರವಾಗಿತ್ತು. ಅಸಂಖ್ಯ ನಕ್ಷತ್ರಮಯವಾಗಿದ್ದ ಆ ಮಧ್ಯರಾತ್ರಿ ಗುರುವಿನ ಆಶೀರ್ವಾದದಂತೆ ತೋರಿತು. ಆತನಾತ್ಮದಲ್ಲಿ ಹೊಗೆ ತುಂಬಿದ ಕೊಟಡಿಯಲ್ಲಿ ಉಸಿರುಕಟ್ಟಿ ಕಣ್ಣೀರು ಕಾರಿ ಒದ್ದಾಡುತ್ತಿದ್ದವನು ಹೊರಗೆ ನಿರ್ಮಲವಾದ ಗಾಳಿಗೆ ಬಂದಹಾಗಾಗಿತ್ತು; ನೀರಿನಲ್ಲಿ ಮುಳುಗಿ ಗಾಳಿಗಾಗಿ ಹಾತೊರಿಯುತ್ತಿದ್ದವನನ್ನು ದಡಕ್ಕೆ ಎಳೆದಹಾಗಾಗಿತ್ತು; ವಿಶೃಂಖಲವಾಗಿತ್ತು; ಸ್ವತಂತ್ರವಾಗಿತ್ತು; ಗರಿಯಂತೆ ಹಗುರವಾಗಿತ್ತು; ಶಾಂತವಾಗಿ ಆನಂದಪೂರ್ಣವಾಗಿತ್ತು. ಕಲ್ಲಿನಿಂದ ಹೂವು ಮೂಡುತ್ತದೆಂದು ಅವನು ಭಾವಿಸಿರಲಿಲ್ಲ! ಅಂತಹ ದುಃಖದಿಂದ ಇಂತಹ ಆನಂದ, ಅಂತಹ ಕಠೋರತ್ಯಾಗದಿಂದ ಇಂತಹ ಪರಮ ಶಾಂತಿ ದೊರಕೊಳ್ಳುವುದೆಂದು, ಅನುಭವಿಸುವ ಮೊದಲು ಯಾರಿಗೆ ತಾನೆ ಹೇಗೆ ಗೊತ್ತಾಗಬೇಕು?

ಮರುದಿನ ಪ್ರಾತಃಕಾಲದಲ್ಲಿ ಹೂವಯ್ಯನಿಗೆ ಪುನರ್ಜನ್ಮ ಬಂದಹಾಗಿತ್ತು. ಎದೆಯಲ್ಲಿ ಉಕ್ಕುತ್ತಿದ್ದ ಶಾಂತಿಯಾನಂದಗಳ ಉತ್ಕರ್ಷದಿಂದ ಕೆಳಕಾನೂರಿನ ಮನೆ ತುಂಬಿ ತುಳುಕಾಡುವಂತೆ ತನ್ನಷ್ಟಕ್ಕೆ ತಾನೆ ಹಾಡತೊಡಗಿದ್ದನು. ಅದನ್ನು ಕೇಳಿದ ಸೋಮನೂ ಪುಟ್ಟಣ್ಣನೂ ಅಡಿಗೆಯವನೂ ಸ್ವಲ್ಪ ಕಾಲ ತಮ್ಮ ತಮ್ಮ ಕೆಲಸಗಳನ್ನು ನಿಲ್ಲಿಸಿ, ನಿಷ್ಪಂದರಾಗಿ ಆಲಿಸಿ, ಆನಂದಪಟ್ಟು, ಆಶ್ವರ್ಯಪಟ್ಟರು.

ಅನಂತ ಔದಾರ್ಯದಿಂದಲೂ ಅಪಾರ ತ್ಯಾಗದಿಂದಲೂ ಎದೆ ತುಂಬಿ ತುಳುಕುತ್ತಾ ಹೂವಯ್ಯ ತಾನೊಬ್ಬನೆ ಕಾನೂರಿಗೆ ಹೊರಟನು. ಎತ್ತ ನೋಡಿದರತ್ತ ಸೃಷ್ಟಿ ಸ್ವರ್ಗೀಯವಾಗಿತ್ತು. ಹಸುರು ಹುಲ್ಲಿಗೆ ನೋವಾಗಬಾರದೆಂದು ದಾರಿಯಲ್ಲಿ ಹುಲ್ಲು ಹುಟ್ಟದ ಕಡೆಯೇ ಹೆಜ್ಜೆಯಿಡುತ್ತಾ ನಡೆದಿದ್ದನು!

ಆದರೆ ಕಾನೂರು ಮನೆ ಬೇರೆಯ ತೆರನಾಗಿತ್ತು. ಅಲ್ಲಿದ್ದವರ ಹೃದಯಗಳೂ ಹೂವಯ್ಯನ ಪ್ರಕೃತಸ್ಥಿತಿಗೆ ಬಹು ದೂರವಾಗಿದ್ದುವು. ಅಲ್ಲಿದ್ದ ಸೇರೆಗಾರರು, ಓಬಯ್ಯ, ಆಳುಗಳು-ಇವರಿಗೆಲ್ಲ ಹೂವಯ್ಯನನ್ನು ಕಂಡು ವಿಸ್ಮಯವಾಯಿತು. ಉಪ್ಪರಿಗೆಯಮೇಲೆ, ಹೂವಯ್ಯ ಬರುತ್ತಿದ್ದುದನ್ನು ಕಂಡೋ ಏನೋ, ಬಾಗಿಲುಹಾಕಿಕೊಂಡಿದ್ದ ರಾಮಯ್ಯ ಅವನನ್ನು ನೋಡಲೊಪ್ಪಲಿಲ್ಲ. ಕಠಿಣವಾಕ್ಯಗಳನ್ನಾಡಿ ತಿರಸ್ಕರಿಸಿದನು. ಓಬಯ್ಯನನ್ನು ಸಲಸಲವೂ ಕಳುಹಿಸಲು ರೇಗಿ, ಕೆಟ್ಟ ಮಾತುಗಳಿಂದ ಬಯ್ದುದಲ್ಲದೆ, ಮತ್ತೊಂದುಸಾರೆ ಬಂದು ಕರೆದರೆ “ಚೂರಿ ಹಾಕಿಕೊಳ್ತೇನೆ’ ಎಂದೂ ಗದರಿಸಿಬಿಟ್ಟನು! ಹತಾಶನಾದ ಹೂವಯ್ಯ ಸುಬ್ಬಮ್ಮನನ್ನು ನೋಡಲಿಷ್ಟಪಟ್ಟನು. ಸೇರೆಗಾರರು ’ಅವರೆಲ್ಲೊ ಕೆಲಸದ ಮೇಲೆ ಹೋಗಿದ್ದಾರೆ’ ಎಂದು ಹೇಳಿ ನಿವಾರಿಸಿಬಿಟ್ಟರು.

ಹೂವಯ್ಯ ದೃಷ್ಟಿಪ್ರಸಾರಮಾಡಿ ಮನೆಯನ್ನೆಲ್ಲಾ ಒಂದು ಸಾರಿ ನೋಡಿಕೊಂಡು, ನಿಡುಸುಯ್ಯುತ್ತಾ ಹೆಬ್ಬಾಗಿಲನ್ನು ದಾಟಿದನು. ಆತನ ಪರಿಚಯವಿದ್ದ ಕಾನೂರು ಮನೆಯ ನಾಯಿಗಳು ಬಾಲವಲ್ಲಾಡಿಸುತ್ತ, ಮೈಮೇಲೆ ನೆಗೆಯುತ್ತ ಮೂಲಗಿಸುತ್ತ, ಬಂದಾಗ ಸ್ವಾಗತಿಸಿದ್ದಂತೆಯೇ ಹೋಗುವಾಗಲೂ ಬೀಳ್ಕೊಳ್ಳಲು ತೊಡಗಿದುವು.

ಓಬಯ್ಯ ’ಹಚೀ ಹಚೀ’ ಎಂದು ಅವುಗಳನ್ನು ದೂರಹೋಗುವಂತೆ ಗದರಿಸಿದನು.

ಹೂವಯ್ಯನಿಗೆ ಆ ಮನೆಯ ಮರುಭೂಮಿಯಲ್ಲಿ ನಾಯಿಗಳ ಪ್ರೀತಿಯೊಂದೇ ಮರುವನದಂತೆ ತೋರಿದುದರಿಂದ , ಅವುಗಳ ತಲೆಯಮೇಲೆ ಕೈಸವರಿ ಮುದ್ದುಮಾಡುತ್ತಾ “ಅವನ್ನೇಕೆ ಹೆದರಿಸ್ತೀಯೊ? ಮೂಗು ಪ್ರಾಣಿಗಳಾದರೂ ಮನುಷ್ಯರಿಗಿಂತ ಮೇಲಾಗಿ ನಡೆದುಕೊಳ್ಳುತ್ತಿಲ್ಲವೆ?” ಎಂದು ನಾಯಿಗಳಿಂದ ಓಬಯ್ಯನ ಕಡೆಗೆ ನೋಡಿ ಮುಗುಳುನಕ್ಕನು.

ಓಬಯ್ಯನಿಗೆ ಆ ಮಾತಿನ ಭಾವ ಗೊತ್ತಾಗಲಿಲ್ಲ.

“ಅದಕ್ಕಲ್ಲ, ನೀವು ಉಟ್ಟುಕೊಂಡ ಮಡಿಬಟ್ಟೆ ಹಾಳಾಗತದೆ ಅಂತಾ ಹೆದರಿಸಿದೆ” ಎಂದನು.

“ಪರ್ವ ಇಲ್ಲ!”

ಹೂವಯ್ಯ ಕೆಳಕಾನೂರಿನ ಕಡೆಗೆ ಮುಂದುವರಿಯುತ್ತಾ ಅಡಕೆಯ ತೋಟದ ಕಡೆಗೆ “ಓಹೋ! ಅಲ್ಲಿದ್ದ ಸಂಪಗೆ ಮರ ಏನಾಯ್ತೊ?” ಎಂದು ಕೈನೀಡಿ ನಿರ್ದೇಶಿಸಿದನು.

“ರಾಮಯ್ಯಗೌಡರು ಕಡಿಸಿಹಾಕಿದರು.”

“ಯಾಕೆ? ತುಂಬಾ ಹೂ  ಬಿಡ್ತಿತ್ತಲ್ಲಾ!”

“ಉಪ್ಪರಿಗೆಯೆಲ್ಲಾ ಅದರ ಹೂವಿನ ವಾಸನೆ ತುಂಬಿಕೊಂಡು ಅವರಿಗೆ ತಡಿಯೋಕೆ ಆಗ್ತಿರಲಿಲ್ಲಂತೆ!”

ಹೂವಯ್ಯ ಮೆಲ್ಲಗೆ ಕಿಲಕ್ಕನೆ ನಕ್ಕು “ಓಹೋ ಅದಕ್ಕೋ!” ಎಂದನು.