“ಇಸ್ಸಿ! ಇದರ ಹೊಟ್ಟೆ ಹಾಳಾಗಲೋ!”

ಎಂದು ತಾನು ಎತ್ತಿ ಉರುಳಿಸಿದ್ದ ಕಲ್ಲೊಂದನ್ನು ಶಪಿಸುತ್ತಾ ನೆಟ್ಟಗೆ ನಿಂತು, ಮುಖಕ್ಕೂ ಕಣ್ಣಿಗೂ ಹಾರಿದ್ದ ಕೆಸರನ್ನು ಉಜ್ಜಿ ಒರಸಿಕೊಂಡ ಬೈರ ಮತ್ತೆ ಬಾಗಿ, ಕಲ್ಲೆತ್ತಿದ್ದ ಸ್ಥಳದಲ್ಲಿ ತುಂಬಿಕೊಂಡಿದ್ದ ಬಗ್ಗಡವಾದ ನೀರಿನೊಳಗೆ ಕೈಯಾಡಿಸುತ್ತಾ, ಕಲ್ಲುಸಂದಿಗಳಲ್ಲಿ ಏಡಿಗಳನ್ನು ಹುಡುಕತೊಡಗಿದನು.ಅವನಿಗೆ ತುಸು ದೂರದಲ್ಲಿ ಸಿದ್ದನೂ ಅದೇ ಕೆಲಸದಲ್ಲಿ ತೊಡಗಿ, ಸರಲಿನಲ್ಲಿ ಕಲ್ಲುಗಳನ್ನು ಬಡಗುಡಿಸುತ್ತಿದ್ದನು.

ಬೆಟ್ಟಬೇಸೆಗೆಯಾಗಿತ್ತು. ತೊಳಕಬೇಕಾದ ಹೊಂಡಗಳನ್ನೆಲ್ಲ ತೊಳಕಿ ಮುಗಿಸಿ, ಒಂದು ಸಣ್ಣ ಚಟ್ಟಂಗಿಯನ್ನೂ ಕೂಡ ಬಿಡದೆ ಪೂರೈಸಿಬಿಟ್ಟಿದ್ದರಿಂದ ಬೈರನೂ ಸಿದ್ದನೂ ಇಬ್ಬರೂ ಸೇರಿ, ಆ ದಿನ ಹಗಲಿನಲ್ಲಿ ಮಲೆಯ ಸರಲುಗಳಲ್ಲಿ ಕಲ್ಲು ಮಗುಚಿ ಏಡಿ ಹಿಡಿಯಲು ಹೊರಟು ಬಹುದೂರ ಏರಿ ಸಾಗಿಸಿದ್ದರು. ಅಭ್ಯಾಸದಿಂದ ಅವರ ಕೈಕಾಲುಗಳು ಯಾಂತ್ರಿಕವಾಗಿ ಕೆಲಸಮಾಡುತ್ತಿದ್ದುವು. ಸದ್ದಿಲ್ಲದಿದ್ದ ಆ ಕಾಡಿನಲ್ಲಿ ಅವರು ಎತ್ತಿ ಎತ್ತಿ ಮಗುಚುತ್ತಿದ್ದ ಕಲ್ಲುಗಳ ಸದ್ದಿನೊಡನೆ ಅವರ ಹರಟೆಯೂ ಬಿಡುವಿಲ್ಲದೆ ಸರ್ವತೋಮುಖವಾಗಿ ಸಾಗಿತ್ತು.

ಅವರ ಹರಟೆ ಅತ್ತಯಿತ್ತ ಅಲೆದು ಕಡೆಗೆ ಕಾನೂರು ಕೆಳಕಾನೂರು ಮುತ್ತಳ್ಳಿಗಳ ವಿಚಾರದಲ್ಲಿ ಸಿಕ್ಕಿಕೊಂಡಿತ್ತು. ಚಂದ್ರಯ್ಯಗೌಡರ ಜೀತದಾಳಾಗಿದ್ದ ಸಿದ್ದ ತನ್ನ ಒಡೆಯರ ವಿಚಾರವಾಗಿಯೂ ಪಕ್ಷವಾಗಿಯೂ, ಹೂವಯ್ಯನ ಆಳಾಗಿದ್ದ ಬೈರ ತನ್ನ ಒಡೆಯರನ್ನು ಕುರಿತೂ ಪ್ರಸ್ತಾಪಿಸುತ್ತಿದ್ದರು. ಭಿನ್ನಾಭಿಪ್ರಾಯಗಳು ಬಂದಾಗ ಅವನ್ನು ವಾದಿಸಿ ಇತ್ಯರ್ಥಮಾಡುವ ಗೋಜಿಗೆ ಹೋಗದೆ, ಕೆಮ್ಮಿಯೋ ಎಲೆಯಡಿಕೆ ಹಾಕಿಕೊಂಡೋ ಅಥವಾ ಹಿಡಿಯುತ್ತಿದ್ದ ಏಡಿಗಳ ವಿಚಾರವಾಗಿ ಮಾತಾಡಿಯೋ ಕೊನೆಗಾಣಿಸಿಬಿಟ್ಟು ಮುಂದುವರಿಯುತ್ತಿದ್ದರು.

ಸಿದ್ದನು, ರಾಮಯ್ಯನಿಗೂ ಚಂದ್ರಯ್ಯಗೌಡರಿಗೂ ಜಗಳವಾಗಿದ್ದುದು, ಸೇರೆಗಾರರ ಒಳಸಂಚು, ಗಂಗೆಯ ಕಿಲಾಡಿತನ, ಸುಬ್ಬಮ್ಮನನ್ನು ಕಾನೂರಿಗೆ ಕರೆಯಿಸಿದುದು. ಚಂದ್ರಯ್ಯಗೌಡರು ಹಾಸಗೆ ಹಿಡಿದು ದಿನ ದಿನಕ್ಕೂ “ಕಾಡು ಹತ್ತಿರ ಊರು ದೂರವಾಗುತ್ತಿರುವುದು” ಮೊದಲಾದುದನ್ನೆಲ್ಲ ಉಪ್ಪುಕಾರ ಹಚ್ಚಿ ಹೇಳಿ “ನಂಗೆಬ್ಯಾರೆ ಅರ್ತಾಗದಿಲ್ಲಪ್ಪಾ ಈ ದೊಡ್ಡೋರ ಮನೆ ಗಿಜರು!” ಎಂದನು.

“ಅಲ್ಲಾ! ನಿಮ್ಮ ರಾಮೇಗೌಡ್ರೀಗೆ ಮತ್ತೊಂದು ಮದ್ವೇ ಮಾಡ್ತಾರಂತೆ ಹೌದೇನೋ? ಹಾಂಗಾಂತ ಊರೆಲ್ಲ ಸುದ್ದಿಯಪ್ಪಾ!” ಎಂದು ಬೈರ ತಾನು ಹಿಡಿದಿದ್ದ ಏಡಿಯೊಂದರ ಕಾಲುಗಳನ್ನು, ಅದರ ಕಡೆ ಒಂದಿನಿತೂ ಲಕ್ಷ್ಯಕೊಡದೆ, ಒಂದೊಂದನ್ನಾಗಿ ಕಡ್ಡಿ ಮುರಿಯುವಂತೆ ಮುರಿದು ಮುರಿದು ಬಿಸಾಡತೊಡಗಿದನು. ಕಾಯಿಪಲ್ಯಗಳನ್ನು ಕತ್ತರಿಸುವವರಾದರೂ ಕೂಡ ಅಷ್ಟೊಂದು ನಿರ್ದಾಕ್ಷಿಣ್ಯವಾಗಿರುವುದಿಲ್ಲವೆಂದು ತೋರತ್ತದೆ.

“ಅದೇ ಈಗೊಂದು ದೊಡ್ಡ ಕಿಸಾಕೊಳ್ಳಿ ಆಗ್‌ಕೊಂಡು ಕೂತದಂತೆ. ಮುತ್ತಳ್ಳಿ ಗೌಡ್ರು ಸೀತಮ್ಮನ ಕಳಿಸಾದಿಲ್ಲ ಅಂತಾರಂತೆ. ಅದಕ್ಕಿವರು ಹಾಂಗಾದ್ರೆ ಮತ್ತೊಬ್ಬ ಸೊಸೆ ತಂದೇಬಿಡ್ತೀನೆ ಅಂತಾರಂತೆ. ರಾಮಯ್ಯೋರೆ ಒಪ್ಪೋದಿಲ್ಲಂತೆ, ಅವರೊಪ್ಪಿದ್ರೆ ಈ ಹೊತ್ತಿಗಾಗ್ಲೆ ಮದೇಮನೆ ತುಂಡು ಕಡ್ಬೂ ಹೊಡೀಬೈದಿತ್ತಲ್ಲಾ!…. ಈ ದೊಡ್ಡೋರ ಮಕ್ಕಳೀಗೆ ಏನಾಗ್ತದೋ ಏನಪ್ಪಾ ಮದೇ ಮಾಡಿಕೊಂಡ್ರೆ? ನಾನಾಗಿದ್ರಾ? ಒಂದಲ್ಲ ಎಳ್ಡಲ್ಲ, ಹತ್ತು ಮದೇ ಬೇಕಾದ್ರೂ “ಹೂಂ ಸೈ” ಅಂತಿದ್ದೆ ಮೀಸೆ ಮ್ಯಾಲೆ ಕೈಹಾಕಿ! ಈಗ ನೋಡು ಬೈರಣ್ಣಾ, ನಾ ಮದೆ ಆಗ್ಬೇಕು ಅಂತಾ ಏಟು ದಿನದಿಂದ ಹುನಾರು ಮಾಡ್ತಿದ್ದೀನಿ. ಗೌಡರು “ನಿಂಗೀಗಾಗ್ಲೆ ಮೂರುಮದುವೆಗೆ ಸಾಲ…ಕೊಟ್ಟಾಗದೆ. ಇನ್ನು ಕೊಡೋದಿಲ್ಲ ಅಂತಾರೆ. ನಾ ಏನು ಮಾಡ್ಲಿ ನೀನೆ ಹೇಳಣ್ಣಾ. ಆ ರೆಂಡೇರು ಒಬ್ಬೊಬ್ಬರಾಗಿ ಸತ್ತುಹೋದ್ರಲ್ಲಾ, ಅದಕ್ಕೆ ನಾನೇನು ಮಾಡ್ಲಿ? ಅವರು ಸರಿಯಾಗಿ ಭೂತದ ಹರಕೆ ಮಾಡದೆ ಇದ್ರೆ ನನ್ದೇನ್ ತಪ್ಪು…?” ಎಂದು ಮೊದಲಾಗಿ ತನ್ನ ಕಷ್ಟಸಂಕಟಗಳನ್ನೇ ಬಹಳ ಹೊತ್ತು ಹೇಳಿಕೊಂಡನು.

“ನೀ ಹೇಳಿದ್ದೂ ಹೌದೇ! ನೋಡು, ನಮ್ಮ ಹೂವೇಗೌಡ್ರು ಇದ್ದಾರಲ್ಲಾ ಅವರಿಗೆ ದೇವರಂತಾ ಬುದ್ಧಿ. ಆದ್ರೂ ಮದೇ ಮಾಡಿಕೊಳ್ಳದೇ ಅವರವ್ವನ್ನೇ ಕೊಂದುಬಿಟ್ರು ಪಾಪ! ಅವರದ್ದೆಲ್ಲಾ ಸರಿ; ಆದರೆ ಮದೇ ಮಾಡಿಕೊಂಡು ಬಿಟ್ಟಿದ್ರೆ!.. ನೋಡು, ಮನ್ನೆ ಅದು (ಎಂದರೆ, ಅವನ ಹೆಂಡತಿ) ಹಡೆದಾಗ ಹೂವಯ್ಯಗೌಡರು ಎಷ್ಟು ಉಪಚಾರ (ಉಪಕಾರ ಎನ್ನುವುದಕ್ಕೆ ಬದಲಾಗಿ) ಮಾಡಿದ್ರೂ ಅಂದ್ರೆ! ಅಕ್ಕಿ, ಬೆಲ್ಲ, ತುಪ್ಪ, ಕಾಫಿ, ಹಾಲು, ಔಸ್ತಿ, ಏನು ನಮ್ಮ ಬಿಡಾರ ಮನೆಯಾಗಿ ಹೋಗಿತ್ತು. ನಂಗಂತು ನನ್ಹೆಡ್ತಿ ದಿನಾ ಹಡೀತಾನೆ ಇದ್ದಿದ್ರೆ ಅನ್ನಿಸಿಬಿಡ್ತು… ನಗಬೇಡ ಅಂತೀನಿ.. ನಿಂಗೊತ್ತಿಲ್ಲ ಅವರ ಮೈಮೆ!”

“ಅಲ್ಲೋ! ನಮ್ಮ ಸುಬ್ಬಮ್ಮ ಹೆಗ್ಗಡಿತಮ್ಮೋರು ಯಾಕೋ ದಿನಾ ಕೆಳಕಾನೂರಿಗೆ ಹೋಗ್ತಾರಂತಲ್ಲಾ!” ಎಂದು ಸಿದ್ದ ವ್ಯಂಗ್ಯಪೂರ್ಣ ದೃಷ್ಟಿಯಿಂದ ಬೈರನ ಕಡೆಗೆ ನೋಡಿದನು.

“ಹೂವಯ್ಯಗೌಡರ ಕೈಲಿ ನಗಾ ಇಡಾಕೆ ಕೊಟ್ಟಾರಂತೆ ಕಣೋ! ಅದನ್ನು ಈಸಿಕೊಂಡು ಬರಾಕಂತಾ ಕಾಣ್ತದೆ ಜನಗೋಳಿಗೇನು ಆಡಿಕೊಳ್ಳಾಕೆ!”

“ಹಾಂಗಾರೆ, ಮುತ್ತಳ್ಳಿಗೌಡ್ರು ಸೀತಮ್ಮೋರನ್ನ ಗಂಡನ ಮನೆಗೆ ಕಳಿಸೋದೆ ಇಲ್ಲಂತೇನು?”

“ಸೀತಮ್ಮೋರ ಗಂಡನ ಮನೇಗೆ ಹೋಗಾಕ ಒಲ್ಲೆ ಅಂತಾರಂತೆ.”

“ಮತ್ತೇನ್ಮಾಡ್ತಾರಂತೆ?” ಸಿದ್ದ ಬೆರಗಾಗಿ ಕೇಳಿದನು.

“ತವರುಮನೇಲಿ ಇರ್ತಾರೆ!”

“ಇರ್ತಾರೆ? ನಂಗೆ ಬೇರೆ ಅರ್ತಾಗಾದಿಲ್ಲಪ್ಪಾ ಈ ದೊಡ್ಡೋರ ಮರ್ಜಿ”

“ನಿಂಗೆ ಅರ್ತ ಆಗೋದಾಗಿದ್ರೆ ಬೇಲರ ಕೇರೀಲಿ ನಮ್ಮ ಜೊತೆ ಯಾಕಿರ್ತಿದ್ದೆ?” ಎಂದು ಬೈರ ನಕ್ಕನು.

“ಕೆಳಕಾನೂರಿನಾಗೆ ಒಂದು ತಿಂಗಳು ಇದ್ರಲ್ಲಾ ಸೀತಮ್ಮ ಕಾಯಿಲೆಯಾಗಿ….”

“ಅದೇ ನಿಮ್ಮ ಗೌಡ್ರು ಬರೇ ಹಾಕ್ದಾಗ!”

“ಆವಾಗಲೆ ಹೂವಯ್ಯಗೌಡರು ಸೀತಮ್ಮಗೆ ಏನೇನೊ ಹೇಳಿಕೊಟ್ಟುಬಿಟ್ಟಾರಂತೆ. ಮಾಯಾಮಂತ್ರಾನೂ ಹಾಕ್ಯಾರೆ ಅಂತಾನೂ ಹೇಳ್ತಾರೆ! ಇಲ್ದಿದ್ರೆ ಸೀತಮ್ಮಗೆ ಹ್ಯಾಂಗೆ ತಿಳೀಬೇಕೋ ರಾಮಯ್ಯಗೌಡ್ರೂ ತಾಳೀ ಕಟ್ಟಿಲ್ಲಾ, ಅಗ್ರಹಾರದ ದೋಯಿಸರೇ ಕಟ್ಟಿದ್ರೂ ಅಂತಾ? ಧಾರೆ ಮಂಟಪದಾಗೆ ಅವರಿಗೆ ಮೈಮೇಲೆ ಬಂದಿತ್ತಂತೆ, ಪರ್ಜ್ಞೆ ಇರಲಿಲ್ಲಂತೆ!”

“ನೀನು ಸುಮ್ಮಸುಮ್ಮನೆ ಹೂವಯ್ಯಗೌಡರಮೇಲೆ ಇಲ್ದಿದ್ದನ್ನೆಲ್ಲಾ ಹೇಳ್ಬೇಡ! ತಾಯಿ ಸತ್ತ ದುಃಖದಲ್ಲಿದ್ರೂ ಕೂಡ ಹಗಲೂ ರಾತ್ರಿ ಸೀತಮ್ಮೋರ ಪಕ್ಕದಲ್ಲೇ ಕೂತು ಅನುಪಾನಮಾಡಿ ಅವರನ್ನು ಬದುಕಿಸಿದರಲ್ಲ! ಇನ್ಯಾರು ಹಾಂಗೆ ಮಾಡ್ತಿದ್ರು ಹೇಳು? ನ್ಯಾಯವಾಗಿ ಸೀತಮ್ಮೋರನ್ನ ಹೂವಯ್ಯಗೌಡ್ರಿಗೆ ಕೊಡಬೇಕಾಗಿತ್ತಂತೆ. ನಿಮ್ಮ ಗೌಡ್ರು ಪಿತೂರಿ ನಡೆಸಿ ತಮ್ಮ ಮಗಗೆ ತಂದುಕೊಂಡ್ರಂತೆ! ದೋಯಿಸರೂ ಅವರ ಕಡೇನೇ ಸೇರಿಕೊಂಡಿದ್ರಂತೆ! ಗುಟ್ಟೆಲ್ಲ ಈಗೀಗ ರಟ್ಟಾಗದೆ!”

“ನಿನ್ನ ಗೌಡ್ರಿಗೂ ಸೀತಮ್ಮಗೂ ಜಾತಕ ಬರಲಿಲ್ಲಂತೊ!”

“ಜಾತಕ ಬರಾದಂದ್ರೆ ಎಂತದೋ? ದೋಯಿಸರು ಹೇಳಿದ್ರೆ ಆಯ್ತು! ದೋಯಿಸ್ರೂ ನಿಮ್ಮ ಗೌಡರ ಕಡೇಗೇ ಸೇರಿಕೊಂಡಿದ್ರಂತೆ ಅಂತೀನಿ!”

“ಥೂ! ನಂಗೆ ಬೇರೆ ಅರ್ತಾಗದಿಲ್ಲಪ್ಪಾ, ಈ ದೊಡ್ಡೋರು ಪಂಚಾಯ್ತಿ! ನಮ್ಮ ಜಾತೀಲಾದ್ರೆ ಎಲ್ಲ ಸಲೀಸು!” ಎಂದು ಸಿದ್ದ ತನ್ನ ಕೆಲವು ಅನುಭವಗಳನ್ನು ಕುರಿತು ಕಥೆ ಹೇಳತೊಡಗಿದನು

ಏಡಿ ಹಿಡಿಯುತ್ತಾ ಹಿಡಿಯುತ್ತಾ, ಸರಲಿನಲ್ಲಿ ಬಹುದೂರ ಮುಂದುವರಿದು, ಬನಗತ್ತಲೆ ಕವಿದಿದ್ದ ನಡುಮಲೆಯ ದಟ್ಟಗಾಡಿಗೆ ಬಂದಿದ್ದರು. ಹೊರಗಡೆ ಬಿರುಬೇಸಗೆ ಸುಡುತ್ತಿದ್ದರೂ ಅಲ್ಲಿ ಬಿಸಿಲಿನ ಸುಳಿವಿರಲಿಲ್ಲ. ಕರಿನೆಳಲು ತಣ್ಣಗೆ ಹಗಲುನಿದ್ದೆ ಮಾಡುತ್ತಿತ್ತು.

ಸರಲಿನಲ್ಲಿ ಅಲ್ಲೊಂದೆಡೆ ಕಾಡುಹಂದಿದಗಳು ಬಿಸಿಲಿನ ಝಳಕ್ಕೆ ಬಸವಳಿದು ದಿನವೂ ಬಂದು ಬಂದು ಮಗ್ಗುಲಿಕ್ಕಿ ಇಕ್ಕಿ ಕಿರಿದಾದೊಂದು ಕೆಸರಿನ ಕೊಳವಾಗಿ ಬಿಟ್ಟಿತ್ತು. ಆ ಕೆಸರಿನಲ್ಲಿ ಒಂದು ಕಲ್ಲು ಕೆಸರೂಡಿಕೊಂಡು ಬಿದ್ದಿದ್ದುದನ್ನು ಕಂಡು ಸಿದ್ದ ’ಬೈರಣ್ಣಾ ಇಲ್ಲಿ ಬಾ, ಇಲ್ಲೊಂದು ಹೆಗ್ಗಲ್ಲದೆ ಈ ಕೆಸರಿನಾಗೆ,ಏಡಿ ಗೀಡಿ ಇರಬೈದು. ಎತ್ತಿ ನೋಡಾನ’ ಎಂದು ಕರೆದನು.

ಬೈರ ದೂರದಿಂದಲೆ ’ತಡೀ, ಬತ್ತೀನೆ ತಡೀ. ಇಲ್ಲೆಲ್ಲೋ ಒಂದೇಡಿ ಇತ್ತಪ್ಪಾ, ಹಿಡದೆ, ಚಕ್ಕಬೆಳ್ಳು ಮುರುಕುಂಡು ಹೋತಪ್ಪ’ ಎನ್ನುತ್ತಾ ಕಲ್ಲು ಸಂದಿಯಲ್ಲಿ ಕೈಹಾಕಿ ತಡವಾಡತೊಡಗಿದ್ದನು.

ಅಷ್ಟರಲ್ಲಿ ಸಿದ್ದ ಕೆಸರಿನ ಮಧ್ಯೆ ಬಿದ್ದಿದ್ದ ಕಲ್ಲುಗಂಡನ್ನು ಎತ್ತಲೆಂದು ಅದರ ಸಮೀಪಕ್ಕೆ ಹೋಗಿ ನಿಂತು, ಅದನ್ನು ಮುಟ್ಟಿದ್ದನೋ ಇಲ್ವೋ, ಆ ಕಲ್ಲು ಇದ್ದಕ್ಕಿದ್ದ ಹಾಗೆ ಕಾಡುಹಂದಿಯಾಗಿ ಹುಹುಕ್ಕೆಂದು ಹೋಂಕರಿಸಿ ಮೈಕೊಡವಿ ಎದ್ದು, ಬೇರೆ ಯಾವ ಕಡೆಯೂ ತಪ್ಪಿಸಿಕೊಂಡು ಹೋಗಲು ಅವಕಾಶವಿಲ್ಲದಂತೆ ದರ ಇದ್ದುದರಿಂದ, ಸಿದ್ದನ ಕಡೆಗೇ ನುಗ್ಗಿ, ಅವನನ್ನು ತುಸು ದೂರ ಹೊತ್ತುಕೊಂಡುಹೋಗಿ, ಕುಸಿದುಹಾಕಿ, ಪರಾರಿಯಾಯಿತು.

ಸಿದ್ದ ’ಅಯ್ಯೋ, ಬೈರಣ್ಣಾ, ಸತ್ತೆನಲ್ಲೋ!’ ಎಂದು ಕೂಗಿಕೊಂಡನು.

ಪುಣ್ಯವಶದಿಂದ ಅವನಿಗೆ ಪ್ರಾಣಾಪಾಯ ಸಂಭವಿಸುವ ಗಾಯವಾಗಲಿ ಪೆಟ್ಟಾಗಲಿ ಆಗಿರಲಿಲ್ಲ. ತೊಡಿ ಮಾತ್ರ ಹಂದಿಯ ಕೋರೆದಾಡೆಗಳಿಂದ ಸುಮಾರು ಅರೆ ಅಡಿಯಷ್ಟು ಮಟ್ಟಿಗೆ ಸಿಗಿದುಹೋಗಿ, ನೆತ್ತರು ಕೋಡಿ ಹರಯುತ್ತಿತ್ತು.

“ಅದೆಲ್ಲಿ ಶನಿಮುಂಡೆಗಂಡಂದು ಬಂದು ಮಲಗಿತ್ತು ಮಾರಾಯ ಅಲ್ಲಿ! ನಿಂಗಷ್ಟೂ ಕಣ್ಣು ಕಾಣದೇಹೋಯ್ತೆ? ಹಾಳ್ ಗಿರಾಚಾರಾನಾ ಬಿಸಾಕ! ಹೋದಲ್ಲಿ ತಂಕಾನೂ ಇದೆ!” ಎಂದು ದೀರ್ಘಸ್ವರದಿಂದ ಶನಿಯನ್ನೂ ಹಂದಿಯನ್ನೂ ದಾರಿಯುದ್ದಕ್ಕೂ ಶಪಿಸುತ್ತಾ ಬೈರ ಸಿದ್ದನನ್ನು, ಅವನ ಗಾಯಕ್ಕೆ ಎಲೆಮದ್ದು ಹಾಕಿ ಕಟ್ಟಿ, ಮೆಲ್ಲಗೆ, ಅಲ್ಲಲ್ಲಿ ಕುಳಿತೂ ಕುಳಿತೂ, ಬಿಡಾರಕ್ಕೆ ಹಿಡಿದು ನಡೆಸಿಕೊಂಡು ಬಂದನು.