ಮರುದಿನ ಬೇಲರ ಬೈರ ಕೆಲಸಕ್ಕೆ ಹೋಗದೆ ಕೂತನು. ಕೂರುವುದೆಂದರೆ ರಜಾ ತೆಗೆದುಕೊಳ್ಳುವುದು ಎಂದರ್ಥ. ಬಿಡಾರದಲ್ಲಿಯೇ ಇದ್ದರೆ ಗೌಡರು ಎಲ್ಲಿಯಾದರೂ ಬಂದು ಬಲವಂತದಿಂದ ಕೆಲಸಕ್ಕೆ ಹೊರಡಿಸಿಯಾರೆಂಬ ಭೀತಿಯಿಂದ ಸೂರ್ಯನು ಮಲೆಬನಗಳ ನೆತ್ತಿಯ ಮೇಲೆ ಕಾಣಿಸಿಕೊಂಡು ಮರಗಿಡಗಳಿಗೂ ಮನೆ ಬಿಡಾರಗಳಿಗೂ ನೀಳವಾದ ನೆಳಲನ್ನಿತ್ತು ಹಕ್ಕಿಗಳೆದೆಯ ತುಪ್ಪುಳನ್ನು ಬೆಚ್ಚಗೆ ಮಾಡುತ್ತಿರಲು, ಅವನು ತನ್ನ ಮಗ ಗಂಗನನ್ನೂ ಜೊತೆಗೆ ಕರೆದುಕೊಂಡು  ಕಂಬಳಿ, ಕತ್ತಿ, ಹಾಳೆಕೊಟ್ಟೆ, ಹಾಳೆ ಮುಂತಾದ, “ಹೊಂಡ ತೊಣಕಿ” ಮೀನು ಹಿಡಿಯಲು ಉಪಯೋಗವಾಗುವ ಸಲಕರಣೆಗಳನ್ನು ತೆಗೆದುಕೊಂಡು, ತನ್ನ ಹೆಂಡತಿ ಸೇಸಿಗೆ ಮೀನು ಮೇಲೋಗರಕ್ಕೆ ಕಾರ ಕಡೆದಿಡುವಂತೆ ಹೇಳಿ ಗದ್ದೆಯ ಕೋಗಿನಾಚೆಯಿದ್ದ ಹಳ್ಳದ ಕಡೆಗೆ ಎಲೆಯಡಕೆ ಅಗಿಯುತ್ತಾ ಹೊರಟನು.

ಗದ್ದೆಯಂಚುಗಳ ಮೇಲೆ ಕಾಲುಹಾದಿಯಲ್ಲಿ ಹೋಗುತ್ತಿದ್ದಾಗ ಎದುರಿಗೆ ಕಾಕಿಯ ಬಣ್ಣದ ಕೋಟನ್ನೂ ಇಜಾರವನ್ನೂ ಹಾಕಿ ತಲೆಗೆ ಕೆಂಪು ಬಟ್ಟೆಯನ್ನು ಸುತ್ತಿದ್ದ ವ್ಯಕ್ತಿಯೊಂದು ತನ್ನ ಕಡೆಗೇ ಬರುತ್ತಿದ್ದುದು ಬೈರನಿಗೆ ಕಾಣೆಸಿತು. ಕಾಕಿಯ ಬಟ್ಟೆಯನ್ನು ಕಂಡೊಡನೆ ಬೆಚ್ಚಿ ದಿಗಿಲುಬಿದ್ದು, ಬೈರ ಪಕ್ಕದಲ್ಲಿದ್ದ ನೆಕ್ಕಿಯ ಮಟ್ಟುಗಳಲ್ಲಿ ಮರೆಯಾಗಲೆಳಸಿದನು. ಅಷ್ಟರಲ್ಲಿ ಎದುರಿಗೆ ಬರುತ್ತಿದ್ದ ವ್ಯಕ್ತಿ “ಏ! ಏಯ್! ಇಲ್ಲಿ ಬಾರೊ” ಎಂದು ಕೂಗಿತು. ಬೈರನಿಗೆ ಕಾಲುಬಾರದೆ ಹೋಗಿ ನಿಂತನು. ಗಂಗ ಅಪ್ಪನ ಮರೆಯಲ್ಲಿ ಹುದುಗಿದನು.

ಆ ಹಳ್ಳಿಗಳಲ್ಲಿ ಅಂದು  ಸರಕಾರದ ಅಧಿಕಾರಿಗಳ ದರ್ಶನ ಬಹಳ ಅಪೂರ್ವವಾಗಿತ್ತು. ಬೀಟು ತಿರುಗುವ ಪೋಲೀಸಿನವರು ವಾರಕ್ಕೋ ಪಕ್ಷಕ್ಕೋ ತಿಂಗಳಿಗೋ ಒಂದು ಸಾರಿ ಹಾಗೆಬಂದು ಹೀಗೆ ಸುಳಿದು, ಸಮಯಸಿಕ್ಕಿದರೆ ಬಡಪಾಯಿಗಳನ್ನು ಬೆದರಿಸಿ ಏನನ್ನಾದರೂ ಕಿತ್ತುಕೊಂಡು ಹೋಗುತ್ತಿದ್ದರು. ಅವರನ್ನು ಕಂಡರೆ ಲೈಸನ್ಸಿಲ್ಲದ ಬಂದೂಕುಗಳ ಮಾಲೀಕರಿಗಂತೂ ಕಣ್ಣುಬೇನೆ. ಸಾಧಾರಣವಾಗಿ ಪೋಲೀಸಿನವರು ಮೈಗೆ ಕಾಕಿಯ ಬಣ್ಣದ ಬಟ್ಟೆಗಳನ್ನೂ ತಲೆಗೆ ಕರಿಯ ಪೇಟವನ್ನೂ ಧರಿಸುತ್ತಾರೆ. ಆದ್ದರಿಂದ ಹಳ್ಳಿಗರಿಗೆ ಕಾಕಿಬಟ್ಟೆ ಕರೀಪೇಟಗಳೆಂದರೆ ಏನೋ ಬಂತಪ್ಪಾ ಎಂದು ಹೆದರಿಕೆ. ಆದ್ದರಿಂದಲೇ ಬೈರ ನೆಕ್ಕಿಯ ಮಟ್ಟಿನಲ್ಲಿ ಮರೆಯಾಗಲು ಪ್ರಯತ್ನಿಸಿದ್ದು.

ಬೈರ ಚಲಿಸದೆ ನಿಂತಿರಲು, ಆ ವ್ಯಕ್ತಿ ಹತ್ತಾರುಮಾರು ದೂರಕ್ಕೆ ಬಳಿಸಾರಿ “ಗೌಡರು ಇದ್ದಾರೇನೋ ಮನೆಯಲ್ಲಿ?” ಎಂದು ಪ್ರಶ್ನೆ ಮಾಡಿತು.

“ಹೌದು, ಸ್ವಾಮಿ, ಇದ್ದಾರೆ” ಎಂದು ಬೈರ ಅದಷ್ಟುಮಟ್ಟಿಗೆ ಶುದ್ಧವಾಗಿ ಮಾತಾಡಲು ಪ್ರಯತ್ನಿಸಿದನು.

“ತಿಮ್ಮ ಇದ್ದಾನೇನೊ?”

“ಯಾವ ತಿಮ್ಮ, ಸ್ವಾಮಿ?”

“ಬಗನೀ ಕಟ್ಟೋ ಹಳೇಪೈಕದ ತಿಮ್ಮನೋ?”

ಬಗನಿಯ ಹೆಸರು ಕೇಳಿದ ಕೂಡಲೆ ಬೈರನ ನಾಡಿಗಳಲ್ಲಿ ನೆತ್ತರು ಫಕ್ಕನೆ ತಣ್ಣಗಾಗಿ ಮತ್ತೆ ಬಿಸಿಯಾಯಿತು.

ಗಾಬರಿಯಿಂದ “ನಂಗೊತ್ತಿಲ್ಲ, ಸ್ವಾಮಿ!” ಎಂದನು.

ತಿಮ್ಮನ ಮೇಲೆ ಏನೋ ಕಳ್ಳಿನ ಕೇಸಾಗಿರಬೇಕು; ಆದ್ದರಿಂದ ತನಗೇನೂ ತಿಳಿಯದು ಎಂದು ಹೇಳುವುದೇ ಲೇಸು ಎಂದು ಭಾವಿಸಿ, ತಿಮ್ಮ ಬಿಡಾರದಲ್ಲಿ ಇದ್ದದ್ದು ಗೊತ್ತಿದ್ದರೂ “ಗೊತ್ತಿಲ್ಲ” ಎಂದೇ ಹೇಳಿಬಿಟ್ಟನು.

“ಸುಳ್ಳು ಹೇಳ್ತೀಯಾ?” ಎಂದು ಹಾಕಿ ಕೋಟಿನ ವ್ಯಕ್ತಿ ಕೈಯಲ್ಲಿ ಮಡಿಸಿ ಹಿಡಿದಿದ್ದ ಕೊಡೆಯನ್ನು ಆಡಿಸುತ್ತ ಎರಡು ಹೆಜ್ಜೆ ಮುಂದೆ ಬರಲು ಬೈರ “ಆಞ್!…. ಏನು ಕೇಳಿದಿರಿ?” ಎಂದನು.

“ತಿಮ್ಮ ಇದ್ದಾನೇನೋ ಮನೇಲಿ?”

“ಅ…. ದೇ…. ನು? ನಾನು ಏನೋ ಅಂತ ಮಾಡಿದ್ದೆ.” ಎಂದು ಬೈರ ಹಲ್ಲುಬಿಡುತ್ತಾ “ಹೌದು ಮನೇಲಿದ್ರಪ್ಪಾ. ಈಗೆಲ್ಲಾರೂ ಹೋಗ್ಯಾರೋ ಏನೋ” ಎಂದನು.

“ನೀನೆಲ್ಲಿಗೆ ಹೊರಟೆ?”

“ಹೊಂಡಾ ತೊಣಕಕ್ಕೆ” ಎಂದು ಬೈರ ರಾಗವಾಗಿ ಹೇಳಿ, ತನ್ನ ಕೈಲಿದ್ದ ಹಾಳೆಕೊಟ್ಟೆಯ ಕಡೆಗೆ ನೋಡಿದನು.

“ಮೀನು ಬಹಳ ಇವೆಯೇನೋ?”

“ಎಲ್ಲಿವೆ ಹೇಳಿ? ಅದರಾಗೂ ಏನು ಹೊಂಡಾ ತೊಣಕೋರು ಒಬ್ರೇ ಇಬ್ರೇ, ಎಲ್ರಿಗೂ ಅದೇ ಕಸಬಾಗಿ ಹೋಗ್ಯಾದೆ! ಹೋದೋರ್ಸ ಮಸ್ತ್ ಮೀನಿತ್ತು. ಈವೊರ್ಸಾನೂ ಸಾಧಾರಣ ಮಟ್ಟಿಗಿತ್ತು. ಮನ್ನೆ ಮಳೆ ಬಂದು ಎಲ್ಲ ಹೊಳೀಗೆ ಹೋದ್ವೋ ಏನೋ!….”

ಬೈರ ಮೀನಿನ ಇತಿಹಾಸವನ್ನೇ ಪ್ರಾರಂಭಿಸುವಂತೆ ಕಂಡುದರಿಂದ ಎದುರು ನಿಂತಿದ್ದ ವ್ಯಕ್ತಿ “ಹಾಗಾದರೆ ಹೋಗು, ಏನಾದರೂ ಸಾರಿಗೆ ಮಾರ್ಗ ಮಾಡಿಕೊಂಡು ಬಾ” ಎಂದು ಮುಂದುವರಿಯುತ್ತಿತ್ತು.

ಬೈರ ಅಷ್ಟು ಹೊತ್ತು ಮಾತಾಡಿದ ಸಲುಗೆಯಿಂದ ಧೈರ್ಯತಾಳಿ “ನಿಮ್ಮ ಮನೆ ಎಲ್ಲಿ?” ಎಂದವನೆ ತಿದ್ದಿಕೊಂಡು “ನಿಮ್ಮ ಊರು?” ಎಂದನು.

“ತೀರ್ಥಹಳ್ಳಿ!”

ತೀರ್ಥಹಳ್ಳಿಯ ಪೇಟೆಯೇ ಬಹುದೂರದ ಮಹಾನಗರವಾಗಿದ್ದ ಬೈರ ” ಓಹೋಹೋ, ಸುಮಾರು ದೂರದಿಂದ ಬಂದೀರಿ? ಏನು ಕೆಲಸದ ಮೇಲೆ?” ಎಂದನು.

“ಬಗನಿ ಮರಕ್ಕೆ ಮಾರ್ಕ ಹಾಕೋಕೋ!” ಎಂದು ಹೇಳಿದ ವ್ಯಕ್ತಿ ಮುಂದುವರಿಯತೊಡಗಿತು.

ಆ ಸಮಯದಲ್ಲಿ “ಮಾರ್ಕ”ನು ಹಿಂತಿರುಗಿ ನೋಡಿದ್ದರೆ ಬೈರನ ಮುಖ ಭಯಮುದ್ರಿತವಾಗಿದ್ದುದು ಚೆನ್ನಾಗಿ ಗೋಚರವಾಗುತ್ತಿತ್ತು. ಆದರೆ ಅವನು ಹಿಂತಿರುಗಿ ನೋಡದೆ ಸರಸರನೆ ಕಿರಿಕಿರಿದಾಗುತ್ತ ನಡೆದನು. ಬೈರ ದೂರವಾಗುತ್ತಿದ್ದ “ಮಾರ್ಕ”ನ ಹಿಂಭಾಗವನ್ನೇ ನೋಡುತ್ತ, ಬಾಯಿ ಕಣ್ಣುಗಳೆರಡನ್ನೂ ತೆರೆದು ನಿಂತನು. ಆ ವ್ಯಕ್ತಿ “ಮಾರ್ಕ”ನಲ್ಲದೆ ಇನ್ನಾರಾಗಿದ್ದರೂ, ಸಾಕ್ಷಾತ್ “ಪೋಲೀಸ್ ಇನಿಸ್ಪೆಟ್ಟರೇ” ಆಗಿದ್ದರೂ ಬೈರನಿಗೆ ಅಷ್ಟೊಂದು ಭೀತಿ ಸಂಕಟಗಳಾಗುತ್ತಿರಲಿಲ್ಲ. ಕಾಕಿಕೋಟಿನ ವ್ಯಕ್ತಿ ಆಕಾರಮಾತ್ರವಾಗುವಷ್ಟು ದೂರವಾದೊಡನೆಯೆ ಬೈರನು “ಇವನೇ ಮಾರ್ಕನೇ? ಗಿರಾಚಾರ!” ಎಂದು ತನ್ನೊಳಗೆ ತಾನೆ ಹೇಳಿಕೊಂಡು “ಗಂಗಾ” ಎಂದು ಕರೆದನು.

ಹಿಂದುಗಡೆಯಿಂದ “ಆಞ್!” ಎನ್ನುತ್ತಾ ಗಂಗ ಮುಂದೆ ಬಂದು “ಅಪ್ಪಯ್ಯಾ, ಯಾರದು?” ಎಂದು ಕುತೂಹಲಿಯಾದನು.

ಬೈರ “ಮಾರ್ಕನಂತೆ ಕಣೋ, ಮಾರ್ಕ! ಗಿರಾಚಾರ!” ಎಂದು ನಿಡುಸುಯ್ಯುತ್ತ ಮುಂದುವರಿದನು.

ಹಳ್ಳಕ್ಕೆ ಹೋಗಿ, ಅಲ್ಲಲ್ಲಿ ನೀರು ನಿಂತಿದ್ದ ಹೊಂಡಗಳನ್ನು ಪರೀಕ್ಷಿಸಿದನು. ಕೆಲವು  ಸಣ್ಣಪುಟ್ಟ ಹೊಂಡಗಳು ಎದಡು ದಿನಗಳ ಹಿಂದೆ ಬಂದಿದ್ದ ಮಳೆಯ ನೀರು ಕೊಚ್ಚಿ ತಂದುಹಾಕಿದ್ದ ಮರಳು ಮಣ್ಣು ಕಲ್ಲುಗಳಿಂದ “ತೆಂಗಿ” ಹೋಗಿದ್ದುವು. ಹಳ್ಳದ ನಡುವೆಯೂ ಅಕ್ಕಪಕ್ಕಗಳಲ್ಲಿಯೂ ಅಲ್ಲಲ್ಲಿ ಬಿದಿರು ಕಣೆ, ಅಡಕೆ ಸೋಗೆ, ಸೊಪ್ಪು ಸದೆಗಳು ಹೊನಲಿನ ಹೊಯ್ಲಿಗೆ ತೇಲಿಬಂದು ಸಣ್ಣ ದೊಡ್ಡ ರಾಶಿಗಳಾಗಿ ಮರದ ಬೇರುಗಳಿಗೂ ಬಂಡೆಯ ಸಂದಿಗಳಿಗೂ ಸಿಕ್ಕಿಕೊಂಡಿದ್ದು, ಮಳೆನೀರು ಎಲ್ಲಿಯವರೆಗೆ ಏರಿತ್ತು ಎಂಬುದಕ್ಕೆ ಸಾಕ್ಷಿಗಳಾಗಿದ್ದುವು. ಹೊಂಡ ಹೊಂಡಗಳಲ್ಲಿ ನೀರು ನಿಂತಿದ್ದಿತೆ ಹೊರತು ತೊರೆ ಹರಿಯುತ್ತಿರಲಿಲ್ಲ. ತಂದೆ ಮಕ್ಕಳಿಬ್ಬರೂ ತೊರೆಯ ಪಾತ್ರ ಪಥಕ್ಕೆ ಅಲ್ಲಲ್ಲಿ ಅಡ್ಡವಾಗಿ ಬಿದ್ದಿದ್ದ ಮರಮಳೆಗಳನ್ನು ಹತ್ತಿ ಹಾರಿ, ಕುಸಿದು ನುಸಿದು ಹೊಂಡ ಹೊಂಡಗಳಲ್ಲಿ ಮತ್ಸ್ಯಾನ್ವೇಷಣೆಮಾಡುತ್ತ, ಕಡೆಗೆ ಒಂದು ತಾಣಕ್ಕೆ ಬಂದರು.

ಆ ಹೊಂಡ ಎರಡು ಎರಡೂವರೆ ಮಾರು ಅಗಲವಾಗಿಯೂ ಸೊಂಟದೆತ್ತರ ದಷ್ಟು ಆಳವಾಗಿಯೂ ಇದ್ದು ಕಸಕಡ್ಡಿ ಮರದ ಮುಂಡುಗಳಿಂದ ತುಂಬಿಕೊಂಡಿತ್ತು. ಒಂದೆಡೆ ದಟ್ಟವಾಗಿ ಬೆಳೆದಿದ್ದ ಪೊದೆಯ ಬೇರುಗಳು ನೀರಿನಲ್ಲಿ ಮೀನುಗಳ ವಾಸಕ್ಕೆ ಪೊಟರೆಗಲನ್ನು ರಚಿಸಿದಂತಿದ್ದುವು. ದಡದಲ್ಲಿದ್ದ ದೊಡ್ಡ ಮರಗಳ ನೆರಳು ಹೊಂಡದ ಒಂದು ಭಾಗದ ನೀರನ್ನು ಕಪ್ಪಗೆ ಮಾಡಿತ್ತು. ಎರಡು ದಿನಗಳ ಹಿಂದೆ ತೊರೆಯ ನೀರು ಏರಿ ಬಂದು ಕಲ್ಮಷಗಳನ್ನು ಕೊಚ್ಚಿ ತೊಳೆದಿದ್ದರೂ ಆಮೇಲೆ ಉದುರಿದ್ದ ಒಣಗೆಲೆಗಳು ನೀರಿನಲ್ಲಿಯೂ ಅಂಚಿನ ಕಲ್ಮರಗಳಲ್ಲಿಯೂ ಯಥೇಚ್ಛವಾಗಿ ಬಿದ್ದಿದ್ದುವು. ಬೈರ ಬಳಿಗೆ ಬಂದೊಡನೆ ಕಪ್ಪೆಗಳು ಚೊಳಚೊಳನೆ ಹಾರಿ, ದೂರ ಸರಿದುವು. ಕೆಲವು ಪುಡಿಮೀನುಗಳು ಮಾತ್ರ ಆಡುತ್ತಿದ್ದುವು. ಬೈರ ಕ್ಯಾಕರಿಸಿ ತುಪ್ಪಿದನು. ಶ್ಲೇಷ್ಮ ಸದೃಶವಾದ ಆ ಲೋಳಿಯಾದ ಬಿಳಿಯ ಉಗುಳಿನುಂಡೆ ನೀರಿಗೆ ಬಿದ್ದ ಕೂಡಲೆ ಸೋಸಲು ಮೀನುಗಳು ಚಕ್ರದ ಕೇಂದ್ರಕ್ಕೆ ನೇಮಿಯಿಂದ ಅರಗಳು ಬಂದು ನುಗ್ಗುವಂತೆ ಅಲ್ಲಿಗೆ ನುಗ್ಗಿದುವು. ಅದನ್ನು ಕಂಡು ಅವನಿಗೆ ತೃಪ್ತಿಯಾಯಿತು.

ತಂದೆ ಮಕ್ಕಳಿಬ್ಬರೂ “ಹೊಂಡ ತೊಣಕ”ಲು (ಹೊಂಡದಲ್ಲಿರುವ ನೀರನ್ನು ತುಳುಕಿ, ಬತ್ತಿಸಿ ಮೀನು ಹಿಡಿಯುವುದು ಎಂದರ್ಥ) ಪ್ರಾರಂಭಿಸಿದರು. ಸ್ವಲ್ಪ ಕಾಲದಲ್ಲಿಯೆ ಹೊಂಡದ ನೀರು ಬತ್ತಿದಂತೆಲ್ಲ ಹೆಚ್ಚು ಹೆಚ್ಚು ಬಗ್ಗಡವಾಯಿತು. ಹೊಂಡದಲ್ಲಿ ನೀರು ಕಡಮೆಯಾಗಲು ಹಾಳೆಯಿಂದ ತುಳುಕುತ್ತಿದ್ದ ನೀರಿನಲ್ಲಿಯೇ ಸಣ್ಣ ದೊಡ್ಡ ಸೋಸಲು ಮೀನುಗಳು ಹೋಗುತ್ತಿರಲು; ಕಂಬಳಿಯನ್ನೇ ಬಲೆಯನ್ನಾಗಿ ಮಾಡಿ ಗೋಚಿದರು. ಎತ್ತಿದಂತೆಲ್ಲ ಸಲಸಲಕ್ಕೂ ಕರಿಯ ಕಂಬಳಿಯಲ್ಲಿ  ಗೋರಿಬಂದ ಕೆಸರು ಕಸಕಡ್ಡಿಗಳ ನಡುವೆ ಹೊಳೆಹೊಳೆವ ಬಿಳಿಪೊರೆಯ ಸೋಸಲು ಮೀನು ತಣಕ್ ಪಣಕ್ ಚಿಣುಕ್ ಮಿಣುಕ್ಕನೆ ಹಾರಡುತ್ತಿದ್ದುವು. ಕರಿಯ ಕಣ್ಣಿನ ತಣ್ಣನೆ ನುಣ್ಣನೆ ಸಣ್ಣ ಜೀವಿಗಳನ್ನು ಇಬ್ಬರೂ ಹಿಡಿದು ಹಿಡಿದು ಹಾಳೆಯ ಕೊಟ್ಟೆಗೆ ತುಂಬಿದರು. ಅಲ್ಲಿ ಕೆಲ ನಿಮಿಷಗಳಲ್ಲಿಯೆ ಅವುಗಳ ಹಾರಾಟ ನಿಲ್ಲುತ್ತಿತ್ತು.

ಕೈಲಾದಮಟ್ಟಿಗೆ ಸೋಸಲುಗಳನ್ನೆಲ್ಲ ಹಿಡಿದು ಪೂರೈಸಿದ ಮೇಲೆ ಮತ್ತೆ ಉಳಿದಿದ್ದ ನೀರನ್ನೂ ಹೊರಗೆ ಹಾಕಿದರು. ತುಸು ಹೊತ್ತಿನಲ್ಲಿಯೆ ಹೊಂಡದಲ್ಲಿ ನೀರು ಸಂಪೂರ್ಣವಾಗಿ ಬತ್ತಿಹೋಗಿ, ಕೆಸರು ನೆಲದ ಮೇಲೆ ಚಟ್ಟಂಗಿ ಸೀಗಡಿಗಳು ಒದ್ದಾಡತೊಡಗಿದವು. ಅವುಗಳನ್ನೂ ಆಯ್ದು ಕೊಟ್ಟೆಗೆ ತುಂಬಿದರು. ಕೆಲವು ಕಪ್ಪೆಗಳು ಇದೇ ಸುಸುಮಯವೆಂದು ಒದ್ದಾಡುತ್ತಿದ್ದ ಹುಡಿ ಮೀನುಗಳನ್ನೂ ಚಟ್ಟಂಗಿಗಳನ್ನೂ ಹಿಡಿದು ಹಿಡಿದು ನುಂಗುತ್ತಿರಲು, ಗಂಗ ಸಿಟ್ಟಿನಿಂದ ಅವುಗಳಿಗೆ ಶಿಲಾಪ್ರಹಾರ ಮಾಡಿ, ಅವು ಹೊಟ್ಟೆಮೇಲಾಗಿ ಕೈಕಾಲು ಕೆದರಿ ಬೀಳಲು “ಮೀನು ತಿಂತೀಯ?…. ನಿನ್ನಪ್ಪನ್ಮನೇ ಗಂಟೇನು,…? ಬೇಕೇನು ಚಟ್ಟಂಗಿ?” ಎಂದು ಮೊದಲಾಗಿ ಮೂದಲಿಸುತ್ತಿದ್ದನು.

ಹೊಂಡದಿಂದ ನೀರೆಲ್ಲ ಹೋಗಿ ಕೆಸರು ಮಾತ್ರ ಉಳಿಯಲು, ಬೇರು ಸಂದಿಗಳೂ ಕಲ್ಲು ಪೊಟರೆಗಳೂ ಉಬ್ಬುತಗ್ಗುಗಳೂ ತೋರಿ, ನೀರು ತುಂಬಿದ್ದಾಗ ಸಮತಟ್ಟಾಗಿದ್ದ ಹೊಂಡ ಈಗ ತಳಭಾಗದಲ್ಲಿ ವಿಕಾರವಾಯಿತು. ಆಮೇಲೆ ಕೆಸರನ್ನು ಹಿಸುಕಿಯೂ, ಬೇರಿನ ಸಂದಿಗೊಂದಿಗಳಲ್ಲಿ ಕೈಹಾಕಿಯೂ, ಕಲ್ಲಿನ ಪೊಟರೆಗಳಿಗೆ ಕೋಲುಹಾಕಿಯೂ, ತೊಳ್ಳೆಮೀನು, ಮುರುಗುಂಡು, ಗಿರಲು, ಕೊಚ್ಚಿಲಿ, ಕಾರೇಡಿ ಮೊದಲಾದ ಜಲಜಂತುಗಳನ್ನು ಬೇಟೆಯಾಡಿದರು. ಗಂಗ ಕಪ್ಪೆಯೊಂದನ್ನು ಹೊಡೆದು ಕೊಂದು, ಅದನ್ನು ಕೋಲಿನ ತುದಿಗೆ ಕಟ್ಟಿ “ಕಪ್ಪೆಗೋಲಿ”ನಿಂದ ಅನೇಕ ಏಡಿಗಳನ್ನು ಹಿಡಿದು, ಕೊಂಬು ಕಾಲುಗಳನ್ನು ಮುರಿದು, ಹಾಳೆಕೊಟ್ಟೆಗೆ ತುಂಬಿದರು. ತೂತಿನಲ್ಲಿದ್ದ ಏಡಿ ಕೋಲಿನ ತುದಿಯಲ್ಲಿದ್ದ ಸತ್ತ ಕಪ್ಪೆಯನ್ನು ಕೊಂಬುಗಳಿಂದ ಬಲವಾಗಿ ಕಚ್ಚಿಕೊಂಡು ಅತಿಲೋಭವಶವಾಗಿ ಗಂಗ ಕೋಲನ್ನೆಳೆದುಕೊಂಡರೂ ಕೂಡ, ಹಿಡಿದ ಕಪ್ಪೆಯನ್ನು ಬಿಡುತ್ತಿರಲಿಲ್ಲ. ಕಪ್ಪೆಯೊಡನೆ ಮೇಲೆ ಬಂದ ಏಡಿಯನ್ನು ಗಂಗ ತನಗೆ ಅಪಾಯ ಬರದಂತೆ ಉಪಾಯದಿಂದ ಬೆನ್ನು ಒತ್ತಿ ಹಿಡುದು ಕೊಂಬುಕಾಲುಗಳನ್ನು ಮುರಿದು ಹಾಕುತ್ತಿದ್ದನು. ಎಲ್ಲಿಯಾದರೂ ಒಂದು ವೇಳೆ ಅವನ ಅಜಾಗರೂಕತೆಯಿಂದಲೇ ಏಡಿ ಕೈಬೆರಳು ಕಚ್ಚಿದರೆ ರೇಗಿದ ಗಂಗ ಅದರ ಕಣ್ಣನ್ನು ಚಿವುಟಿಹಾಕಿ ಪ್ರತಿಹಿಂಸಾಛಲವನ್ನು ಪ್ರದರ್ಶಿಸಿ, ಜಯಶೀಲನಾಗಿ ಹಿಗ್ಗುತ್ತಿದ್ದನು.

ಗಂಗ ಒಂದು ಸಾರಿ ಡೊಗರಿಗೆ ಕಪ್ಪೆಗೋಲು ಹಾಕಿ ಎಳೆದಾಗ ಏಡಿ ಬರಲಿಲ್ಲ. ಕಪ್ಪೆಯ ಸ್ವಲ್ಪಭಾಗ ಮಾತ್ರ ಹರಿದುಹೋಗಿತ್ತು. ಮತ್ತೆ ಅದೇ ತೂತಿಗೆ ಕಪ್ಪೆಗೋಲು ಹಾಕಿದನು, ಮತ್ತೆ ಎಳೆದನು. ಎರಡನೆಯ ಸಾರಿಯೂ ಏಡಿ ಬರುವ ಬದಲು ಕಪ್ಪೆಯೇ ಹರಿದುಹೋಗಿತ್ತು. ಯಾವುದೋ ಉಪಾಯಗಾರನಾದ ದೊಡ್ಡ ಮೀನೋ ಏಡಿಯೋ ಒಳಗಿರಬೇಕೆಂದು ಊಹಿಸಿ, ಅದನ್ನು ಆಕ್ರಮಿಸಲೇಬೇಕೆಂಬ ಛಲದಿಂದ ಡೊಗರಿಗೆ ಕೈಹಾಕಿದನು ಒಡನೆಯೆ ನೀರು ಹಾವೊಂದು ಅವನ ಬೆರಳನ್ನು ಕಚ್ಚಿ ಕೈಗೆ ಸುತ್ತಿಕೊಂಡಿತು ಹುಡುಗನು ಭಯಭ್ರಾಂತನಾಗಿ ಕಿಟ್ಟನೆ ಕಿರಿಚಿಕೊಂಡು ಕುಣಿದಾಡುತ್ತಿರಲು, ಬೈರ ಓಡಿ ಬಂದು ಹಾವನ್ನು ಎಳೆದುಹಾಕಿ ಕೊಂದನು. ಗಂಗನಿಗೂ ಕೆಸರು ಕೈಯಿಂದಲೆ ಒಂದು ಗುದ್ದು ಹಾಕಿ, ಕಳುಕು ನೀರನ್ನು ಕುಡಿಸಿ ಮದ್ದು ಮಾಡಿದನು. ಗಂಗ ನಡುಗುತ್ತ ಅಳುತ್ತ ದಡದಮೇಲೆ ಕಳಿತನು.

“ಯಾರೋ ಅದು ಕೂಗಿದವರು?”

ಕೆಸರು ಸೋಸಿ ಮೀನು ಹಿಡಿಯುವುದರಲ್ಲಿಯೆ ಮಗ್ನನಾಗಿದ್ದ ಬೈರ ತಲೆಯೆತ್ತಿ ನೋಡುತ್ತಾನೆ: ಡೊಳ್ಳುಹೊಟ್ಟೆಯ ಬಾಡುಗಳ್ಳ ಸೋಮ ಮೀನಿನ ಕೊಟ್ಟೆಯನ್ನೇ ನೋಡುತ್ತ ನಿಂತಿದ್ದಾನೆ. ಅವನ ನೆರಳು ಉಬ್ಬು ತಗ್ಗು ನೆಲದಲ್ಲಿ ಡೊಂಕಿ ಕೊಂಕಿ ಬಿದ್ದಿದೆ.

“ಇಲ್ಲೇನು ಮಾಡುತ್ತಿಯೊ?” ಎಂದನು ಸೋಮ ಅತ್ಯಂತ ವಿನಯ ಪೂರ್ವಕವಾದ ಕುತೂಹಲದಿಂದ.

“ಕಾಣಾದಿಲ್ಲೇನು!” ಎಂದನು ಬೈರ ಉದಾಸೀನನಾಗಿ, ಒರಟಾಗಿ.

“ಕೂಗಿದವರು ಯರೋ?”

ಬೈರ ಒರಟು ಉದಾಸೀನದಿಂದಲೇ ನಡೆದುದನ್ನು ಹೇಳುತ್ತ ತನ್ನ ಕೆಲಸಕ್ಕೆ ಕೈಹಾಕಿದನು.

ಸೋಮನೂ ಇಳಿದು ಬಂದು ಹಾಳೆಯ ಕೊಟ್ಟೆಯಲ್ಲಿದ್ದ ಮೀನುಗಳನ್ನು ಹಸಿದ ನಾಯಿ ಅನ್ನವನ್ನು ನೋಡುವಂತೆ ನೋಡಿ “ಬೈರಾ, ಅವೊತ್ತು ಆ ಬೋಳೀಮಗ ಹೊಡೆದಿದ್ದು ಇನ್ನು ಹಾಂಗೆ ಇದೆಯಲ್ಲೊ? ಏನು ಮಾಡಬೇಕಾಯ್ತು ಹೇಳು ಅದಕ್ಕೆ? ― ಆ ನೋವಿಗೆ ― ದಿನಾ ಜ್ವರ ಬೇರೆ ಬರ್ತದೆ ― ಗಂಜಿ ಬಾಯಿಗೆ ಹಾಕುವ ಹಾಗಿಲ್ಲ ― ನಾಲಗೆ ಇಸ್ಸಿ” ಎಂದು ಎಂಜಲು ತುಪ್ಪಿ, ರುಚಿ ಕೆಟ್ಟಿರುವುದನ್ನು ಪ್ರಯೋಗತಃ ಪ್ರದರ್ಶಿಸಿದನು.

ಬೈರನಿಗೆ ಸೋಮ ಅಲ್ಲಿಗೆ ಬಂದಾಗಲೇ ಎಲ್ಲಿ ಮೀನು ಕೇಳುತ್ತಾನೆಯೊ ಎಂದು ಭಯವಾಗಿತ್ತು. ಆದ್ದರಿಂದಲೆ ಅವನನ್ನು ನಿವಾರಿಸಲು ಆದಷ್ಟು ಪ್ರಯತ್ನಪಟ್ಟು ಔದಾಸೀನ್ಯದಿಂದ ಒರಟು ಒರಟಾಗಿ ಮಾತಾಡಿದ್ದನು. ಆದರೂ ಸೋಮ ಅದಕ್ಕೆಲ್ಲ ಸೊಪ್ಪುಹಾಕುವವನಾಗಿರಲಿಲ್ಲ. ತನ್ನ ಕೈನೋವಿನ ಮಾತನ್ನೂ ಜ್ವರದಿಂದ ನಾಲಗೆ ರುಚಿಗೆಟ್ಟ ಮಾತನ್ನೂ ತೆಗದನು. ಬೈರನಿಗೆ ಚೆನ್ನಾಗಿ ಅರ್ಥವಾಯಿತು. ಆದರೂ “ಔಸಿದ್ದಿ ತಗೊಳ್‌ಬೈದಿತ್ತಲ್ಲ” ಎಂದನು

“ಅದಾದರೂ ಕೊಡುವರು ಯಾರು?”

“ಕೆಳಕಾನೂರು ಅಣ್ಣೆಗೌಡ್ರ ಹತ್ರ ಹೋಗಿ.”

“ಅವರು ಎಂಥಾ ಔಷಧಿ ಕೊಡುತ್ತಾರೆ? ಅವರಿಗೇ ಯಾರಾದರೂ ಕೊಟ್ಟರೆ ಸಾಕಾಗಿದೆ …. ನಾಲಗೆ ರುಚಿಕೆಟ್ಟ ಮೇಲೆ ಔಷಧಿ ಸೇರುವುದಿಲ್ಲ …. ”

“ದೋಯಸ್ರು ಎಂಕಪ್ಪಯ್ನ್ಯೋರ ಹತ್ರ ಈಬೂತಿ ತನ್ನಿ.”

“ನಾಲಗೆ ರುಚಿ ಕೆಟ್ಟಮೇಲೆ ಈಬೂತಿಯಾದರೂ ಏನು ಮಾಡ್ತದೆ?”

“ಕೂಳೂರು ದೇವ್ರ ಹತ್ರ ಕೇಳಿಸಿ ಪರ್ಸಾದ ತಗೊಂಡು ಬನ್ನಿ. ನಂಗೊಂದ್ಸಾರಿ ನಿಮ್ಗಾದ್ಹಾಂಗೆ ಆಗಿತ್ತು. ಕೂಳೂರು ದೇವರ ಪರ್ಸಾದ ತಂದೆ, ನೋಡಿ, ಎಲ್ಲ ಗಿರಾಚಾರ ಬಿಟ್ಟುಹೋಯ್ತು.”

“ನೀನು ಹೇಳುವುದೇನೋ ಹೌದೆ! ಆದರೇ…. ನೋಡು…. ಮುಖ್ಯವಾಗಿ….  ನಾಲಗೆ…. ರುಚಿ ಕೆಟ್ಟಮೇಲೆ ಏನು ಮಾಡಿದರೂ…. ಆಗೋ ಗೋ ಗೋ ಗೋ ಅಲ್ಲಿ ಹೋಯ್ತು! ಅಲ್ಹೋಯ್ತು!….  ಇಲ್ಲಿ ಬಂತೋ ಇಲ್ಲಿ! ಇಲ್ಲಿ!….  ದೊಡ್ಡ ಮೀನು ಕಣೋ, ಬಿಡ್ಬಾರ್ದು…. ”

ಬೈರ ಕೆಸರು ಕಸಗಳನ್ನೆಲ್ಲ ಹಿಸುಕಿ ಹಿಸುಕಿ, ಸಂದಿಸಂದಿಗಳಲ್ಲಿ ಕೈಹಾಕಿ ನುಣುಚಿಕೊಳ್ಳುತ್ತಿದ್ದ ಆ ಮುರುಗುಂಡನ್ನು (ಒಂದು ಜಾತಿಯ ಮೀನು) ಹುಡುಕಿದನು. ಸೋಮ ಒಮ್ಮೆ ಪ್ರಶ್ನೆಚಿಹ್ನೆಯಾಗಿ, ಒಮ್ಮೆ ಆಶ್ಚರ್ಯಚಿಹ್ನೆಯಾಗಿ, ಒಮ್ಮೆ ಬಕಗ್ರೀವನಾಗಿ ಒಮ್ಮೆ ಹಯಗ್ರೀವನಾಗಿ ಸಲಹೆಗಳನ್ನು ಕೊಡುತ್ತ ಅಂಚಿನಲ್ಲಿ ನಿಂತನು.

ಎಲ್ಲ ಪೂರೈಸಿದ ಮೇಲೆ ಬೈರ ಗಂಗನನ್ನು ಕರೆದುಕೊಂಡು ಗುಡಿಗೆ ಹೊರಡಲನುವಾದನು. ಸೋಮ “ಬೈರಾ, ಜ್ವರ ಬಂದು ನಾಲಗೆ ಸತ್ತುಹೋಯಿತ್ತು ಕಣೋ. ಚಟ್ನಿಗೆ ಒಂದು ಏಡಿಯಾದರೂ ಕೊಟ್ಟಿದ್ದರೆ! ನಿನ್ನ ಹೆಸರಿನ ಮೇಲೆ ಒಂದು ಚಿಪ್ಪು ಗಂಜಿ ಉಣ್ತಿದ್ದೆ” ಎಂದು ಬಾಯಿಬಿಟ್ಟು ಕೇಳಿಯೇಬಿಟ್ಟನು.

“ಹಾಳಾಗಿ ಹೋಗ್ಲಿ; ಹಿಡೀರಿ” ಎಂದು ಬೈರ ಹಾಳೆಯ ಕೊಟ್ಟೆಗೆ ಕೈಹಾಕಿ ಒಂದು ಸಣ್ಣ ಏಡಿಯನ್ನು ಆರಿಸಿಕೊಟ್ಟು, ನಡುಗುತ್ತಿದ್ದ ಗಂಗನನ್ನು ನೋಡಿ “ಯಾಕೋ ನಡಗ್ತಿಯಾ?” ಎಂದನು.

ಅವನು ಸಣ್ಣ ನಡುಕು ದನಿಯಿಂದ “ಜರ ಬಂದದೆ!” ಎಂದನು.

“ಹುಡುಗ ಹೆದರಿತ್ತು ಅಂಬುದಾಗಿ ಕಾಣುತ್ತದೋ…. ಒಂದು ಕೋಳಿ ಸುಳಿದುಕೊಡು. ಇಲ್ಲಿ ರಣಪಿಶಾಚಿ ತಿರುಗಾಡ್ತದಂತೆ!” ಎಂದು ಸೂಚನೆ ಕೊಡುತ್ತ ಸೋಮ ಮಟಗುಡುತ್ತಿದ್ದ ಏಡಿಯನ್ನು ಮೂಸಿನೋಡಿ ಹಿಗ್ಗಿದನು.