ಚಿಕ್ಕಮ್ಮ ಹೆಚ್ಚಿಗೆ ಉಪ್ಪಿಟ್ಟು ಕೊಡದಿದ್ದ ಸಿಟ್ಟಿನಲ್ಲಿ ಅಡುಗೆಮನೆಯಿಂದ ಹೊರನುಗ್ಗಿದ ವಾಸು ಜಗಲಿಗೆ ಬಂದನು. ಬಾಗಿಲು ತೆರೆದ ಬೀರುವಿನ ಪಕ್ಕದಲ್ಲಿ ಕೆದರಿ ಬಿದ್ದಿದ್ದ ಲೆಕ್ಕಪತ್ರದ ಪುಸ್ತಕಗಳ ಮಧ್ಯೆ ಅವನ ತಂದೆ ಕೆಲವು ಜನಗಳೊಡನೆ ಮಾತನಾಡುತ್ತ ಕುಳಿತಿದ್ದರು. ವಾಸುವಿಗೆ ಅವರು ಯಾರು ಯಾರು ಎಂದು ನೋಡಲು ಪುರಸತ್ತಿರಲಿಲ್ಲ. ತಂದೆಯ ಗಮನವು ತನ್ನ ಮೇಲೆ ಬೀಳದಂತೆ ಸದ್ದುಗೈಯದೆ ಹೋಗಿ, ಮುಂಡಿಗೆಯೆ ಅಗ್ರಭಾಗಕ್ಕೆ ಮೊಳೆ ಹೊಡೆದು ಜೋಡಿಸಿದ್ದ ಮುಖ ಕಟ್ಟಿದ ದೊಡ್ಡಿನ ಕಾಡುಕೋಣಗಳಿಗೆ ” ದೊಡ್ಡು” ಎಂದು ಹೆಸರು-ಕೋಡಿಗೆ ಕೈಹಾಕಿದನು. ಕೈಗೆ ಬಂದ ತನ್ನ ಅಂಗಿಯನ್ನು ತೆಗೆದುಕೊಂಡು ಕಿರುಜಗಲಿಯ ಒಂದು ಮೂಲೆಗೆ ನಡೆದು. ಮುದ್ದೆಯಾಗಿ ಬಿದ್ದಿದ್ದ ಒಂದು ಕಂಬಳಿಯ ಬಳಿ ನಿಂತು “ಪುಟ್ಟಾ! ಪುಟ್ಟಾ! ಏ ಪುಟ್ಟಾ!” ಎಂದು ಕರೆದನು. ಗಾಡಿಯಾಳು ನಿಂಗನು ಮಗ ಪುಟ್ಟನು ಕಂಬಳಿಯೊಳಗಿನಿಂದಲೆ “ಆಞ” ಎಂದನು.

“ನಿನ್ನೆ ಹೇಳಿದ್ದ ಕೆಲ್ಸಕ್ಕೆ ಬರ್ತೀಯೇನೋ?”

“ನಿನ್ನೆ ಮುಳ್ಳು ಚುಚ್ಚಿದ್ದು ಬಾಳ ನೋವಾಗದೆ. ನಾ ಬರಾದಿಲ್ಲ. ನೀವೇ ಹೋಗಿ.”

“ಕಲ್ಲಿನ ಚೀಲ ಎಲ್ಲಿದೆಯೋ?”

ಪುಟ್ಟನು ತಲೆಗೆದರಿ, ಜೊಲ್ಲು ಸುರಿದು, ಕಣ್ಣಿನಲ್ಲಿ ಹಿಕ್ಕುಕಟ್ಟಿ ವಿಕಾರವಾಗಿದ್ದ ತನ್ನ ಮುಖವನ್ನು ಕಂಬಳಿಯಿಂದ ಹೊರಗೆ ಹಾಕಿ ವಾಸುವನ್ನು ನೋಡಿ” ಆ ಹೆಬ್ಬಾಗಲ ಸಂದೀಲಿ ಹಾರೆ ಪಿಕಾಸಿ ಎಲ್ಲಾ ಇಡ್ತಾರಲ್ಲಾ….”

“ಹ್ಞೂ”

ಬಳಿಯಲ್ಲಿ ಡೂಲಿ ಬಾಲ ಅಲ್ಲಾಡಿಸುತ್ತ ನಿಂತಿತ್ತು. ಅದು ಮರಿಹಾಕಿದ್ದರಿಂದ ವಾಸು ಅದಕ್ಕೆ ತಿಂಡಿಕೊಟ್ಟು ಸಲಿಗೆಯಾಗಿತ್ತು.

“ಅಲ್ಲೊಂದು ಕೆಮ್ಮಣ್ಣು ಬುಟ್ಟಿ ಇಟ್ಟಾರಲ್ಲ…”

” ಹ್ಞೂ” ವಾಸುವಿಗಾಗಲೆ ಬೇಸರವಾಗತೊಡಗಿತ್ತು.

“ಅದ್ರ ಹತ್ರ ಒಂದು ಕೂಣಿ ಅದೆ…”

“ಹ್ಞೂನೋ….” ವಾಸುವಿನ ಧ್ವನಿ ಕುಪಿತವಾಯಿತು.

“ದೊಡ್ಡ ಕೂಣಿ ಅಲ್ಲ, ಸಣ್ಣದು….”

“ಹೇಳೋ ಅಂದ್ರೆ….”

“ಬೈರ ಮಾಡಿದ್ದಲ್ಲ, ಸಿದ್ದ ಮಾಡಿದ್ದು….”

ವಾಸು ಮುಖ ಕೆರಳಿಸಿಕೊಂಡು ಅಲ್ಲಿಂದ ದಡಕ್ಕನೆ ಹೊರಟು ಹೋಗಿ ಹೆಬ್ಬಾಗಿಲ ಸಂದಿಯಲ್ಲಿ ಅರಸಿದನು. ಹಾರೆ, ಪಿಕಾಸಿ, ಗುದ್ದಲಿ, ಕೂಣಿ! ಸಣ್ಣ ಕೂಣಿಗೆ ಕೈಹಾಕಲು ಮೀನು ಚೂರುಗಳನ್ನು ತಿನ್ನುತ್ತಿದ್ದ ಇಲಿಯೊಂದು ಕೈಮೇಲೆಯೆ ಹತ್ತಿ ನೆಗೆದು ಪಕ್ಕದಲ್ಲಿದ್ದ ಡೊಗರಿನೊಳಗೆ ನುಗ್ಗಿತು. ವಾಸು ಸರಕ್ಕನೆ ಎದ್ದು ನಿಂತು ನಿಟ್ಟುಸಿರೆಳೆದನು. ಪುಟ್ಟನ ಮೇಲೆ ಸುಮ್ಮಸುಮ್ಮನೆ ರೇಗಿದನು; ಮತ್ತೆ ಪುಟ್ಟ ಮಲಗಿದ್ದಲ್ಲಿಗೆ ಹೋದನು. ಅವನು ಮೊದಲಿನಂತೆಯೆ ಕಂಬಳಿ ಮುದ್ದೆಯಾಗಿ ಬಿದ್ದಿದ್ದನು.

“ಏ ಪುಟ್ಟಾ!”

ಪುಟ್ಟ ಮತ್ತೆ ತಲೆಯನ್ನು ಹೊರಗೆ ಹಾಕಿದನು.

“ಎಲ್ಲಿಟ್ಟೆಯೋ, ಸಿಕ್ಕಲ್ಲಲ್ಲೊ!” ಎಂದು ಸಿಡುಕಿದನು ವಾಸು.

“ನಾನು ಹೇಳಬೇಕಾದ್ರೆ ಹೋಗಿಬಿಟ್ರಿ…. ಆ ಹುಣ್ಸೇಮರ್ದ ಬೇರಿನ ಸಂದೀಲಿಟ್ಟೀನಿ!”

ವಾಸು ಹೋಗಿ ಹುಡುಕಲು ಸಣ್ಣ ಕಲ್ಲುಹರಳುಗಳನ್ನು ತುಂಬಿದ್ದ ಚೀಲ ಸಿಕ್ಕಿತು. ಸ್ಲೇಟು ಪುಸ್ತಕಗಳನ್ನು ಹಾಕಿಕೊಂಡು ಸ್ಕೂಲಿಗೆ ಹೋಗಲೋಸ್ಕರ ಹೊಲಿಸಿಕೊ       ಟ್ಟಿದ್ದ ಚೀಲಕ್ಕೆ ರಬ್ಬರ್ ಬಿಲ್ಲಿಗಾಗಿ ಕಲ್ಲು ಹೊರುವ ಚಾಕರಿ ಸಿಕ್ಕಿತ್ತು. ರಜಾ ಕಾಲದಲ್ಲಿ ಅದಕ್ಯೇಕೆ ನಿರುದ್ಯೋಗವಾಗಬೇಕು?

ವಾಸು ಅದುವರೆಗೂ ಕೈಯಲ್ಲಿಯೆ ಹಿಡಿದುಕೊಂಡಿದ್ದ ಅಂಗಿಯನ್ನು ತೊಟ್ಟುಕೊಳ್ಳಲು ತೊಡಗಿದನು. ಹಿಂದಿನ ದಿನ ಅದನ್ನು ಮೈಯಿಂದ ಸುಲಿದಿಡುವ ಗಡಿಬಿಡಿಯಲ್ಲಿ ತೋಳುಗಳಲ್ಲಿ ಒಂದು ಅಡಿಮೇಲಾಗಿದ್ದರಿಂದ ಸ್ವಲ್ಪ ತೊಂದರೆಕೊಟ್ಟಿತು. ಅಂತೂ ಯುಕ್ತಿಗಿಂತಲೂ ಹೆಚ್ಚಾಗಿ ಬಲಪ್ರದರ್ಶನದಿಂದ ಅಂಗಿ ತೊಟ್ಟನು. ಜೇಬಿಗೆ ಕೈಹಾಕಿ ನೋಡುತ್ತಾನೆ; ರಬ್ಬರ್ ಬಿಲ್ಲು ಮಾಯವಾಗಿದೆ! ಉಪನ್ಯಾಸ ಮಾಡಲು ವೇದಿಕೆಯ ಮೇಲೆ ನಿಂತ ವಾಗ್ಮಿಗೆ ತನ್ನ ಮಸ್ತಕವೇ ಗೈರುಹಾಜರೆಂದು ತಿಳಿದು ಬಂದರೆ ಹೇಗಾಗಬಹುದೊ ಹಾಗಾಯಿತು. ವಾಸುಗೆ! ಗಾಬರಿಯಾಗಿ ಜೇಬುಗಳನ್ನೆಲ್ಲ ಜಡ್ತಿ ಮಾಡಿದನು. ಸರ್ವವಸ್ತು ಸಂಗ್ರಹಶಾಲೆಗಳಂತಿದ್ದ ಆ ಜಿಗಟಾದ ಜೇಬುಗಳಿಂದ ಹೊರಬಿದ್ದು ಒಂದೊಂದೆ ಪದಾರ್ಥಗಳು ಬೆಳಕು ಕಂಡುವು; ಮುರಿದು ಮುರಿದು ಹೋಗಿದ್ದ ಒಂದು ಸಣ್ಣ ಸರಸ್ವತಿಯ ಬಣ್ಣದ ಚಿತ್ರ; ಜಜ್ಜಿ ಹೋಗಿದ್ದ ಒಂದು ತವರದ ಪೀಪಿ; ಯಾವ ಕಾಲದ್ದೋ ಏನೋ ಒಂದು ರೊಟ್ಟಿಯ ಚೂರು ಎರಡು ಮೂರು ಬಳಪದ ಚೂರು; ಸಿಂಡು ಮುಸುಡಿಯ ಒಂದು ಸೀಸದ ಕಡ್ಡಿಯ ವಾಮನಾವತಾರ; ಏಳೆಂಟು ಕೋವಿಯ ಚರೆ; ಒಂದು ಬಣ್ಣದ ಬಿಂಗ ಅರ್ಧ ತಿಂದಿದ್ದ ಒಂದು ಉತ್ತುತ್ತೆಯ ಹಣ್ಣು ; ಒಂದೆರಡು ದುಂಡನೆಯ ಕಲ್ಲು ಹರಳುಗಳು; ಅಜಿಬಿಜಿಯಾಗಿದ್ದ ಬೆಮ್ಮಾರಲ ಹಣ್ಣುಗಳು; ಒಂದು ಧೂಪದ ಕಾಯಿ; ರಬ್ಬರ್ ಚೂರುಗಳು; ಹಗ್ಗ; ಅಷ್ಟಾವಕ್ರವಾಗಿದ್ದ ಒಂದು ಹಿಡಿಹೋದ  ಸಣ್ಣ ಚೂರಿ; ಒಂದು ಬಣ್ಣಬಣ್ಣವಾಗಿದ್ದ ಹಕ್ಕಿಯ ಪುಕ್ಕ; ಒಂದು ಸೇಫ್ಟಿಪಿನ್; ಒಂದು ಮಧ್ಯೆ ತೂತಾಗಿದ್ದ ಮೂರು ಕಾಸು….. ಹಾಳು ಸಾಮಾನುಗಳು! ತೆಗೆದಷ್ಟೂ ಇವೆ! ಅಕ್ಷಯ ಪಾತ್ರೆಯೋ ದ್ರೌಪದಿಯ ಸೀರೆಯೋ ಆ ಜೇಬು! ರಬ್ಬರ್ ಬಿಲ್ಲು ಮಾತ್ರ ಗೋಚರವಾಗಲಿಲ್ಲ. ಮೊದಲು ಯಾರೋ ಕದ್ದಿರಬೇಕೆಂದು ಶಂಕೆ ಪಟ್ಟನು; ಆಮೇಲೆ ಪುಟ್ಟನೇ ಕದ್ದಿರಬೇಕೆಂದು ಸಿದ್ಧಾಂತ ಮಾಡಿ ನೆಲದ ಮೇಲೆ ಹರಡಿದ್ದ ಸಾಮಾನುಗಳಲ್ಲಿ ಒಂದನ್ನೂ ಬಿಡದೆ ಜೇಬುಗಳಿಗೆ ತುಂಬಿದನು. ತುಂಬುವ ಗಲಿಬಿಲಿಯಲ್ಲಿ ಸ್ವಲ್ಪ ಮಣ್ಣೂ ಪ್ರವೇಶಮಾಡಿತು.

ಪುಟ್ಟನಿಂದ ರಬ್ಬರ್ ಬಿಲ್ಲನ್ನು ಕಕ್ಕಿಸಿಬಿಡಲು ಹಿಂದಕ್ಕೆ ಹೊರಟನು, ಅದಕ್ಕಾಗಿಯಡ ಆ ಕಳ್ಳನು ಕಾಲುನೋವಿನ ನೆವದಿಂದ ತನ್ನ ಜೊತೆಗೆ ಬರಲಿಲ್ಲ ಎಂಬುದೂ ವಾಸುವಿಗೆ ನಿರ್ವಿವಾದವಾಯಿತು.!

ಆದರೆ ದಾರಿಯಲ್ಲಿಯೆ ರಬ್ಬರ್ ಬಿಲ್ಲು ಬಿದ್ದಿತ್ತು!

ಅವಸರದಲ್ಲಿ ಅದು ಜೇಬಿನಿಂದ ಬಿದ್ದುದೆ ಅವನಿಗೆ ಗೊತ್ತಾಗಿರಲಿಲ್ಲ. ತಪ್ಪಿಸಿಕೊಂಡು ಹೋಗಿ ನಿದ್ದೆ ಮಾಡುತ್ತಿರುವ ಕಳ್ಳನನ್ನು ಪೋಲೀಸಿನವನು ಹಿಡಿಯುವಂತೆ ವಾಸು ಬಿಲ್ಲನ್ನು ತುಡಿಕಿ ಹಿಡಿದು, ಮತ್ತೆ ಹುಣಸೆಯ ಮರದ ಬುಡಕ್ಕೆ ಹೋಗಿ ಕಲ್ಲಿನ ಚೀಲದ ದಾರವನ್ನು ಬಗಲಿಗೆ ಜನಿವಾರದ ರೀತಿಯಲ್ಲಿ ತಗುಲಿ ಹಾಕಿಕೊಂಡು ಹೊರಟನು.

ಗಟ್ಟಿದಾಳುಗಳು ಕಟ್ಟಣೆಯ ಕಲ್ಲುಗಳ ಮೇಲೆ ಕತ್ತಿ ಮಸೆಯುತ್ತಿದ್ದರು. ಕೆಲವು ಹೆಣ್ಣಾಳುಗಳು ಬಿಸಿಲು ಕಾಯಿಸುತ್ತ ಕುಳಿತು ಗಳಪುತ್ತಿದ್ದರು. ಅವರ ನಡುವೆ ಗಂಗೆಯೂ ಸಾಲಂಕೃತಳಾಗಿ ಕುಳಿತು ಹರಟುತ್ತಿದ್ದಳು. ಸೇರೆಗಾರರ ಮತ್ತು ಚಂದ್ರಯ್ಯಗೌಡರ ವಿಶ್ವಾಸಕ್ಕೆ ಪಾತ್ರಳಾಗಿದ್ದ ಅವಳು ಉಳಿದವರೆಲ್ಲರಿಗೂ ತನಗಿರುವ ಬಾಧ್ಯತೆಯನ್ನು ಪ್ರದರ್ಶಿಸಲೆಂಬಂತೆ ವಾಸುವನ್ನು ಕರೆದಳು. ಆದರೆ ವಾಸು ಹಿಂತಿರುಗದೆ ನಡೆದನು.

ಹೋಗುವಾಗ ವಾಡಿಕೆಯಂತೆ ಬತ್ತದ ಹೊಟ್ಟು ರಾಶಿರಾಶಿಯಾಗಿ ಬಿದ್ದಿದ್ದ ಉಮ್ಮಿಗುಡ್ಡೆ” ಯ ಕಡೆಗೆ ಇಣಿಕಿ ನೋಡಿದನು. ಔದಾಸೀನ್ಯದ ನೋಟವು ಇದ್ದಕ್ಕಿದ್ದಂತೆ ಕುತೂಹಲ ದೃಷ್ಟಿಯಾಗಿ ನಿಂತನು. ಏಳೆಂಟು ಹೊರಸಲಕ್ಕಿಗಳು ಅಲ್ಲಿ ಮೇಯುತ್ತಿದ್ದುವು. ಕೂಡಲೆ ಚೀಲದಿಂದ ಒಂದು ಕಲ್ಲನ್ನು ತೆಗೆದು. ರಬ್ಬರ್ ಬಿಲ್ಲಿಗೆ ಹೂಡಿ ಹೆದೆಯೇರಿಸಿ ಎಳೆದು, ಗುರಿ ನೋಡುತ್ತಿದ್ದನು. ಅಷ್ಟರಲ್ಲಿ ಅವನು ಗುರಿಯಿಟ್ಟಿದ್ದ ಹಕ್ಕಿ ಕುಪ್ಪಳಿಸಿ ಹಾರಿ ಮತ್ತೊಂದು ಕಡೆ ಕೂತಿತು. ವಾಸು ಹಕ್ಕಿಯನ್ನೇ ನೋಡಿ ಗುರಿಯಿಡುತ್ತ ಸ್ವಲ್ಪ ಮುಂದುವರಿದನು. ಅವನ ಬಲಗಾಲು ಒಂದು ಸೆಗಣಿ ಗುಪ್ಪೆಯನ್ನು ಮೆಟ್ಟಿ ತಣ್ಣಗಾಯಿತು. ಬೆರಳು ಸಂದಿಗಳಲ್ಲಿ ಸೆಗಣಿ ಪಿಚಪಿಚನೆ ಮೇಲೆ ಬಂದಿತು. ವಾಸುವಿಗೆ ಅಸಹ್ಯವಾಗಿ ಕಾಲು ಕೊಡಹಬೇಕೆಂದು ಮನಸ್ಸಾಯಿತು. ಆದರೂ ನಿಶ್ಚಲವಾಗಿ ನಿಂತು ಹಕ್ಕಿಗೆ ಗುರಿಯಿಟ್ಟನು. ಅವನನ್ನೇ ಹಿಂಬಾಲಿಸಿ ಬರುತ್ತಿದ್ದ ಡೂಲಿ ಒಡೆಯನ ಬೇಟೆಗೆ ಸಹಾಯಮಾಡಲೆಂದು ಹಕ್ಕಿಗಳ ಕಡೆ ವೇಗದಿಂದ ನುಗ್ಗಿತು. ಅವುಗಳೆಲ್ಲ ಪಟಪಟನೆ ಹಾರಿ ಮರಗಳಲ್ಲಿ ಮರೆಯಾದುವು. ವಾಸುಗೆ ಸಿಟ್ಟು ಬಂದು ಹಕ್ಕಿಗಿಟ್ಟಿದ್ದ ಗುರಿ ನಾಯಿಗೇ ತಿರುಗಿಸಿಬಿಟ್ಟನು, ಡೂಲಿ ನೋ‌ವುದನಿಗೈಯುತ್ತ ಓಡಿತು. ಕಾಲಿಗೆ ಹಿಡಿದಿದ್ದ ಸೆಗಣಿಯನ್ನು ಹಲಸಿನ ಮರದ ಬೇರಿಗೆ ತಿಕ್ಕಿ ಒರಸಿ ಗಂಗನನ್ನು ಕರೆಯಲೆಂದು ಬೈರನ ಬಿಡಾರಕ್ಕೆ  ಹೋದನು.

ಬಿಡಾರದಲ್ಲಿ ಬೈರನೂ ಇರಲಿಲ್ಲ. ಅವನ  ಹೆಂಡತಿ ಸೇಸಿಯೂ ಇರಲಿಲ್ಲ. ಬೈರನು ದೂರ ಕಾಡಿನಲ್ಲಿದ್ದ ಬಗನಿ ಮರಕ್ಕೆ ಹೋಗಬೇಕಾದ್ದರಿಂದ ದನಗಳನ್ನು ಬೇಗನೆ ಮೇವಿಗೆ ಬಿಡಲು ಹಟ್ಟಿಗೆ ಹೋಗಿದ್ದನು. ಸೇಸಿ ನಾಗಮ್ಮನವರು ಹಿಟ್ಟು ಬೀಸಲು ಹೇಳಿಕಳುಹಿಸಿದ್ದರಿಂದ ” ಮನೆಗೆ” ಹೋಗಿದ್ದಳು. ಬೆಳಗ್ಗೆ ಸಂಚಾರ ಹೋಗಿ ಹಿಂತಿರುಗಿದ್ದ ಗಂಗ ಹುಡುಗನು ಬಿಡಾರದ ಬಾಗಿಲಲ್ಲಿ ಕುಳಿತು ಏನೋ ಮಾಡುತ್ತಿದ್ದನು. ಅವನ ಎದುರು ಒಂದು  ಕರಿಯ ಕಂತ್ರಿ ನಾಯಿ ಅವನ ಕೈಕಡೆ ನೋಡುತ್ತ ಅಮಾವಸ್ಯೆಯಂತೆ ಕರ್ರಗೆ ಕುಳಿತಿತ್ತು. ಅಲ್ಲಿಯ ಪಕ್ಕದಲ್ಲಿ ಮಲ್ಲಿಗೆ ಬಳ್ಳಿ ಹಬ್ಬಿದ್ದ ಒಂದು ಹಾಲಿವಾಣದ ಮರದ ಬುಡದಲ್ಲಿ ಗಲೀಜಿನಲ್ಲಿ ಹೇಂಟೆಯೊಂದು ಮರಿಗಳೊಡನೆ ಕೆದರುವ ಕೆಲಸದಲ್ಲಿತ್ತು.

ನಾಯಿ ಇದ್ದಕ್ಕಿದ್ದ ಹಾಗೆ ದೂರ ನೋಡಿ ಬಗುಳಿತು. ಗಂಗ ತಿರುಗಿ ನೋಡಿದನು. ವಾಸು ಬರುತ್ತಿದ್ದನು. ಗಂಗನು ಗಾಬರಿಯಿಂದ ತನ್ನ ಕೈಲಿದ್ದುದನ್ನೂ ನೆಲದ ಮೇಲೆ ಬಿದ್ದುದನ್ನೂ ಬಿಡಾರದೊಳಗಣ ಕತ್ತಲೆಗೆ ಎಸೆದನು. ಅಷ್ಟರಲ್ಲಿ ವಾಸು” ಓ ಗಂಗಾ” ಎಂದು ಕೂಗಿದನು. ಗಂಗನು”ಓ” ಎನ್ನುತ್ತ ವಾಸುವಿಗೆ ಅಭಿಮುಖನಾಗಿ ಹೋದನು. ವಾಸು ಬಿಡಾರದ ಅಂಗಳಕ್ಕೆ ಬರುತ್ತಿದ್ದುದನ್ನು ಕಂಡು ” ನೀವ್ತಾಕೆ ಬರ್ತೀರಯ್ಯಾ? ನಾನೇ ಬರ್ತೀನಿ, ನಿಲ್ಲಿ”ಎಂದನು. ಅವನ ನಡೆ ನುಡಿಗಳಲ್ಲಿ ಆಶಂಕೆ ಭಯಗಳಿದ್ದುದು ವಾಸುಗೆ ಗೊತ್ತಾಗಲಿಲಗಲ. ಅವನು ನೇರವಾಗಿ ಹೊಲೆಯರ ಅಂಗಳಕ್ಕೇ ಹೋಗಿ ನಿಂತನು.

ಮಲಿನ ಕೌಪೀನ ವಿನಾ ದಿಗಂಬರನಾಗಿ, ಚರ್ಮಕ್ಕೆ ತುಕ್ಕು ಹಿಡಿಯದಂತೆ ಕಾಣಿಸುತ್ತಿದ್ದ ಅವನನ್ನು ನೋಡಿ” ಕೊಳಲು ಆಯ್ತೇನೋ? ಎಂದು ಪ್ರಶ್ನೆ ಮಾಡಿದನು.

“ಇಲ್ರಯ್ಯಾ, ಇನ್ನೂ  ಆಗಿಲ್ಲ” ಎಂದು ಗಂಗನು ನಾಯಿ ಮೂಸಿನೋಡುತ್ತಿದ್ದ ತಿಪ್ಪುಳು ಗರಿಗಳ ಕಡೆ ಕಳ್ಳ ನೋಟ ನೋಡಿದನು.

“ಎಲ್ಲಿ? ಎಷ್ಟಾಗಿದೆ? ನೋಡುಣ, ತಗೊಂದು ಬಾ.”

“ಅಪ್ಪ ಎಲ್ಲೋ ಇಟ್ಟು ಹೋಗ್ಯಾನೆ….” ವಾಸ್ತವಾಂಶವೇನೆಂದರೆ ಅವನು ಕೊಳಲನ್ನು ಮಾಡುವ ತಂಟೆಗೇ ಹೋಗಿರಲಿಲ್ಲ.

“ಹೋಗಲಿ ಬಾ. ನಿನ್ನೆ ಹೊಡೆದ ಹಕ್ಕಿ ಹುಡುಕೋಣ.”

ಗಂಗ ಮತ್ತೆ ಬಾಗಿಲ ಬಳಿ ಇದ್ದ ತಿಪ್ಪುಳದ ಕಡೆ ಕಳ್ಳನೋಟ ನೋಡಿ” ಬಿತ್ತೊ ಬೀಳ್ಲಿಲ್ಲೋ ! ಅದೆಲ್ಲಿ ಸಿಗ್ತದ್ರಾ ಈಗ?” ಎಂದನು.

“ಛೇ, ಸರಿಯಾಗಿ ಕೆಳಗೆ ಬಿದ್ದದೆ. ನಾ ನೋಡೀನಿ.”

“ಬಿದ್ದಿದ್ರೂ ರಾತ್ರಿ ನರೀಗಿರೀ ಕಚ್ಕೊಂಡು ಹೋಗಿರಾಕೆ ಸಾಕು.”

“ನೀ ಬರ್ತೀಯೋ ಇಲ್ಲೋ?…. ಅದೊಂದ್ಕೇ ಅಲ್ಲ… ಸೆಬೆ ಒಡ್ಡಿದ್ದನ್ನೂ ನೋಡ್ಕೊಂಡು ಬರಬೇಕು….. ಆ ಪಿಕಳಾರದ ಮರೀಗೆ ಹಣ್ಣು ಕೊಡ್ಬೇಕು…. ಆಮೇಲೆ ಇವತ್ತು ಮಜ್ಜಾನ ಹೂವಣ್ಣಯ್ಯ ರಾಮಣ್ಣಯ್ಯ ಬರ್ತಾರೆ ಮೈಸೂರಿಂದ…… ಅವರಿಗೆ ಬೆಮ್ಮಾರಲ ಹಣ್ಣೂ ಕಲ್ಸಂಪಗೆ ಹಣ್ಣೂ ತರಬೇಕು…..”

“ಬಿಡಾರದಾಗೆ ಯಾರೂ ಇಲ್ಲಲ್ರೋ! ಏನ್ಮಾಡಾದು? ಅವ್ವ ಮನೀಗೆ ಹೋಗ್ಯಾದೆ.”

ವಾಸು ತಾನೊಬ್ಬನೆ ಹೋಗಲು ಮನಸ್ಸು ಮಾಡಿ ಹಿಂತಿರುಗಿ ಎರಡು ಹೆಜ್ಜೆ ನಡೆದಿದ್ದನು. ಸೇಸಿ ಮನೆಯಲ್ಲಿ ನಡೆದಿದ್ದ ಘಟನೆಯನ್ನೇ ಯೋಚಿಸುತ್ತ ಜೋಲುಮುಖ ಹಾಕಿಕೊಂಡು ಬರುತ್ತಿದ್ದುದು ಕಣ್ಣಿಗೆ ಬಿದ್ದು” ಗಂಗಾ, ಸೇಸಿ ಓ ಅಲ್ಲಿ ಬರ್ತಾ ಇದೆ. ನೀನು ಬಾ” ಎಂದನು.

ಬರ್ತೀನಿ ತಡೀರಿ” ಎಂದು ಗಂಗನು ಬಿಡಾರದ ಒಳಗೆ ಹೋ‌ಗಿ, ಸ್ವಲ್ಪ ಹೊತ್ತು ಮಾಡಿಕೊಂಡು ಕೈಯಲ್ಲೊಂದು ಕತ್ತಿ ಹಿಡಿದು ವಾಸುವಿನ ಬಳಿಗೆ ಬಂದು ಮೆಲ್ಲಗೆ ” ಅವ್ವಗೆ ಹೇಳಿ ನೀವೆ” ಎಂದನು.

ಅಂಗಳಕ್ಕೆ ಬಂದಿದ್ದ ಸೇಸಿಗೆ ವಾಸು” ಸೇಸಿ, ಗಂಗನ್ನ ಕರಕೊಂಡು ಹೋಗ್ತಿನೇ. ಸ್ವಲ್ಪ ಕೆಲ್ಸಾ ಇದೆ. ಎಂದನು. ಸೇಸಿ “ಆಯ್ತಯ್ಯಾ” ಎಂದು ಬಿಡಾರದ ಒಳಗೆ ಹೋದಳು. ಹುಡುಗರಿಬ್ಬರೂ ಹೊರಟರು.

ಕೆಲವು ದಿನಗಳ ಹಿಂದೆ ವಾಸು. ಗಂಗ, ಪುಟ್ಟ ಮೂವರೂ ಸೇರಿ ಹಕ್ಕಿಯ ಗೂಡಾಗಳಿಗಾಗಿ ಪೊದೆಗಳನ್ನು ಅಜಮಾಯಿಸಿ ಮಾಡುತ್ತಿದ್ದಾಗ ಒಂದು ಪಿಕಳಾರ ಹಕ್ಕಿಯ ಗೂಡು ಕಣ್ಣಿಗೆ ಬಿದ್ದಿತ್ತು. ಆ ಗೂಡಿನಲ್ಲಿ ಕೆಂಪುನೀಲಿ ಬಣ್ಣವಾಗಿ ಚುಕ್ಕಿ ಚುಕ್ಕಿಯಾಗಿದ್ದ ಮೂರು ಪುಟ್ಟ  ಮೊಟ್ಟೆಗಳಿದ್ದವು. ಮೊಟ್ಟೆಗಳನ್ನು ಯಾರೂ ತೆಗೆಯಕೂಡದೆಂದೂ ಮರಿಗಳಾದ ಮೇಲೆ ತಾಯಿ ಮತ್ತು ಮರಿಗಳನ್ನು ಒಟ್ಟಿಗೆ ಹಿಡಿದು ಸಾಕಬೇಕೆಂದೂ, ವಾಸು ಕಟ್ಟಪ್ಪಣೆ ಮಾಡಿದ್ದನು. ಅವನು ದಿನಕ್ಕೆ ಕಡೆಯಪಕ್ಷ ಎರಡು ಸಾರಿಯಾದರೂ ಹೋಗಿ ಮೊಟ್ಟೆಗಳನ್ನು ನೋಡಿಕೊಂಡು ಬರುತ್ತಿದ್ದನು. ಹೋದಾಗ ಪ್ರತಿ ಸಲವೂ ಕಾವು ಕೂತಿರುತ್ತಿದ್ದ ಹಕ್ಕಿ ಹಾರಿಹೋಗುತ್ತಿತ್ತು. ಒಂದು ದಿನ ಹೋಗಿ ನೋಡುತ್ತಾನೆ; ಮೊಟ್ಟೆಗಳೊಡೆದು ಮರಿಯಾಗಿದ್ದುವು. ಮರಿಗಳು ನೋಡುವುದಕ್ಕೆ ಹೇಸಿಗೆಯಾಗಿದ್ದವು. ಮೊಟ್ಟೆಗಳೊಡೆದು ಮರಿಯಾಗಿದ್ದುವು. ಮರಿಗಳು ನೋಡುವುದಕ್ಕೆ ಹೇಸಿಗೆಯಾಗಿದ್ದುವು. ತಿಪ್ಪುಳಿಲ್ಲದ ಮೈ, ಬೋಡು ಮಂಡೆ, ದೇಹದ ಗಾತ್ರಕ್ಕೆ ಅತಿ ಎಂದು ಕಾಣುವ ಕೊಕ್ಕು, ಎಲ್ಲವೂ ಜುಗುಪ್ಸೆ ಹುಟ್ಟಿಸುವಂತಿತ್ತು. ವಾಸು ನೋಡಿದಾಗಲೆಲ್ಲ ಅವು ತಮ್ಮ ಕೆಂಪು ಪೊರೆಯ ಬಾಯಿಗಳನ್ನು, ಜಗತ್ತನ್ನೇ ನುಂಗುತ್ತೇವೆಂಬಂತೆ ಅಗಲವಾಗಿ ತೆರೆದು ಗೋಗರೆಯುತ್ತಿದ್ದುದರಿಂದ, ಅವನು ಪಕ್ಕದಲ್ಲಿಯೆ ಯಥೇಚ್ಛವಾಗಿ ಬೆಳೆದಿರುತ್ತಿದ್ದ ಲಾಂಟಾನದ ಹಣ್ಣುಗಳನ್ನು ಕೊಯ್ದು ಬಾಯಿ ಮುಚ್ಚುವತನಕ ಸುರಿಯುತ್ತಿದ್ದನು. ಹೀಗೆ ತಾಯಿ ಕೊಡುತ್ತಿದ್ದ ಬಾಯಿತುತ್ತುಗಳೊಂದಿಗೆ” ಮಲತಾಯಿ” ಯಾದ ವಾಸು ಕೊಡುತ್ತದ್ದ ಕೈ ತುತ್ತುಗಳೂ ಸೇರಿ ಆ ಮರಿಗಳು ಅಜೀರ್ಣದಿಂದ ಹೇಗೆ ಸಾಯಲಿಲ್ಲವೋ ದೇವರೇ.ಬಲ್ಲ !(ಪುಟ್ಟ, ಗಂಗ ಅವರು ಬೇರೆ ಕೊಡುತ್ತಿದ್ದರೋ ಏನೋ?) ಕಡೆ‌ಗೆ ಮರಿಗಳಿಗೆ ಗರಿ ಮೂಡಲಾರಂಭಿಸಿತು. ವಾಸು ಇನ್ನು ಸುಮ್ಮನೆ ಬಿಟ್ಟರೆ ಹಕ್ಕಿಗಳು ಮರಿಗಳನ್ನು ಹಾರಿಸಿಕೊಂಡು ಹೋಗಿಬಿಟ್ಟಾವು ಎಂದು ಅವುಗಳನ್ನು ಹಿಡಿಯಲು ಪುಟ್ಟ ಗಂಗರೊಡನೆ ಮಂತ್ರಾಲೋಚನೆ ಮಾಡಿ, ಗಂಗನ ಯಂತ್ರಜ್ಞತೆಯಿಂದಲೂ ಪುಟ್ಟನ ಶ್ರಮದಿಂದಲೂ ತನ್ನ ನೇತೃತ್ವದಿಂದಲೂ ಆ ಪೊದೆಗೆ ಸಮೀಪದಲ್ಲಿಯೆ ಒಂದು ” ಸೆಬೆ” ಯೊಡ್ಡಿದ್ದನು. ಅದನ್ನೇ ನೋಡಿಕೊಂಡು ಬರಲು ಅವನು ಆ ದಿನ ಪ್ರಾತಃಕಾಲ ಗಂಗದ್ವಿತೀಯನಾಗಿ ಹೊರಟಿದ್ದುದು.

ಹೋಗಿ ನೋಡುತ್ತಾರೆ; ” ಸೆಬೆ” ಹಕ್ಕಿ ಸಿಕ್ಕಿಬಿದ್ದಿದೆ. ಹೆದೆಯೇರಿದ ಧನುಸ್ಸಿನಂತೆ ನೆಲದಿಂದ ಮೇಲೆದ್ದು ಬಾಗಿದ್ದ ಸಿಡಿಗೋಲಿನ ತುದಿಯಿಂದ, ನೆಲಕ್ಕೆ ಬಿಮ್ಮನೆ ನೇರವಾಗಿ ಇಳಿದಿದ್ದ ಸೂತ್ರದ ಮಧ್ಯೆ, ಉರುಳುಗಣ್ಣಿನಲ್ಲಿ ಒಂದು ಕಾಲು ಸಿಕ್ಕಿ ತಲೆಕೆಳಗಾಗಿ ನೇತಾಡುತ್ತಿದೆ. ಪಿಕಳಾರ ಹಕ್ಕಿ! ಬಹಳ ಒದ್ದಾಡಿ ಬಳಲಿದ್ದುದರಿಂದ ಅದು ನಿಶ್ಚಲವಾಗಿತ್ತು. ಅದರ ಎದೆಯ ಬಿಳುಪೂ ಅಡ್ಡಿಕೆಯಂತೆ ಕುತ್ತಿಗೆಯನ್ನು ಸುತ್ತಿದ್ದ ಕೆಂಪೂ ಬಿಸಿಲಿನಲ್ಲಿ ರಾರಾಜಿಸುತ್ತಿದ್ದುವು. ಹಕ್ಕಿಯ ಬಳಿಯಲ್ಲಿ ಆಕರ್ಷಣೆಗಾಗಿ ಕೋಲಿಗೆ ಸಿಕ್ಕಿಸಿಟ್ಟಿದ್ದ ತೇನೆಹಣ್ಣು ರಕ್ತವರ್ಣದ ಮುಸುಕಿನ ಜೋಳದಂತೆ ರಂಜಿಸಿತ್ತು.

ಹುಡುಗರಿಬ್ಬರೂ ಕೇಕೆ ಹಾಕುತ್ತ ಅಟ್ಟಹಾಸದಿಂದ ನುಗ್ಗಿದರು. ಬಗಲಿನಲ್ಲಿದ್ದ ಕಲ್ಲುಚೀಲವು ತೂಗಾಡಿ ಪಕ್ಕಕ್ಕೆ ಬಡಿಯುತ್ತಿದ್ದರೂ ವಾಸುಗೆ ಲಕ್ಷ್ಯವಿರಲಿಲ್ಲ. ರಾಕ್ಷಸಗಾತ್ರಗಳೆರಡು ತನ್ನ ಬಳಿಗೆ ರಭಸದಿಂದ ಬಂದುದನ್ನು ಕಂಡು. ಮೊದಲೇ ಬಳಲಿ ತಣ್ಣಗಾಗಿದ್ದ ಆ ಬಡ ಪಕ್ಷಿ ಮತ್ತೆ ರೆಕ್ಕೆಗಳನ್ನು ಪಟಪಟನೆ ಬಡಿದುಕೊಂಡು ಬಂಧವಿಮುಕ್ತವಾಗಲು ಪ್ರಯತ್ನಿಸಿತು. ಆದರೆ ವಾಸುವಿನ ಕೈ ಅದನ್ನು ಹಿಡಿದುಕೊಂಡಿತು. ಭೀತಿಯಿಂದಲೂ ಆಯಾಸದಿಂದಲೂ ದ್ವಿಗುಣಿತವಾಗಿ ಏದುತ್ತಿದ್ದ ಹಕ್ಕಿಯ ಕಾಲನ್ನು ಉರುಳಿನಿಂದ ಬಿಡಿಸಿದರು.

ವಾಸು ಅದರ ನುಣ್ಗರಿಗಳನ್ನು ಸವರಿ ಮುತ್ತುಕೊಡುತ್ತ” ಗಂಗಾ. ತಾಯಿ ಹಕ್ಕಿ ಸಿಕ್ಕಿತು. ಇದರ ಜೊತೆಗೆ ಮರಿಗಳನ್ನೂ ತೆಗೆದುಕೊಂಡು ಹೋಗಿ ಪಂಜರದಾಗೆ ಇಡೋಣ” ಎಂದು ಪರಮಾಹ್ಲಾದಿಮದ ನುಡಿದನು.

ಗಂ‌ಗನು ಹಕ್ಕುಯನ್ನು ಅಭೀಷ್ಟಕ ನಯನಗಳಿಂದ ನೋಡುತ್ತ, ”  ಮತ್ತೆ ಸೆಬೆ” ಒಡ್ಡಾನ. ಗಂಡ್ಹಕ್ಕಿ ಸಿಕ್ಕಿದ್ರೂ ಸಿಕ್ಕಬೈದು” ಎಂದನು.

ವಾಸು ಎಡಗೈಯಲ್ಲಿ ಹಕ್ಕಿ ಹಿಡಿದುಕೊಂಡು, ಬಲಗೈಯಿಂದ ಸಿಡಿಗೋಲನ್ನು ಬಾಗಿಸಿ, ಸೂತ್ರವು ಸಡಿಲವಾಗುವಂತೆ ಮಾಡಿದನು. ಗಂಗ ಸೆಬೆಯೊಡ್ಡತೊಡಗಿದನು. ಸೆಬೆಯೊಡ್ಡಿ ಪೂರೈಸಿತೆಂದು ತಿಳಿದು ವಾಸು ಕೈಬಿಟ್ಟ ಕೂಡಲೆ ಅಕಸ್ಮಾತ್ತಾಗಿ ಕಣೆಯ ಕಡ್ಡಿ ಸಿಡಿಯಿತು. ಸಿಡಿಗೋಲು ರಭಸದಿಂದ ಹಿಂದಕ್ಕೆ ಚಿಮ್ಮಿ ಅವನ ಎಡಗೈಗೆ ಬಲವಾಗಿ ತಗುಲಿತು. ಹಕ್ಕಿ ಕೈತಪ್ಪಿತು! ಹಾರಿಹೋಗಿ ಒಂದು ಪೊದೆಯ ಕಡ್ಡಿಯ ಮೇಲೆ ಕುಳಿತಿತು. ವಾಸು ನಿಷ್ಕಾರಣವಾಗಿ ಗಂಗನನ್ನು ಶಪಿಸುತ್ತ ಹಕ್ಕಿಯನ್ನು ಹಿಡಿದುಕೊಳ್ಳಲು  ಓಡಿದನು. ಅದು ಹಾರಿ ಮತ್ತೊಂದು ಕಡೆ ಕೂತಿತು. ಅದಕ್ಕೆ ದೂರ ಹಾರಿಹೋಗುವ ತ್ರಾಣವಿರಲಿಲ್ಲ. ಕೆಲವು ಕ್ಷಣಗಳ ಹಿಂದೆ ಅದನ್ನು ಮುತ್ತಿಟ್ಟು ಮುದ್ದಿಸಿದ್ದ ವಾಸು ಅದರ ಮೇಲೆ ಸಿಟ್ಟಾಗಿ, ಬಿಲ್ಲಿಗೆ ಕಲ್ಲುಹೂಡಿ ಸೆಳೆದು ಹೊಡೆದನು. ಒಂದು ಕಲ್ಲು ತಪ್ಪಿತು, ಮತ್ತೊಂದು ಸರಿಯಾಗಿ ಹಕ್ಕಿಯ ತಲೆಗೆ ಬಿದ್ದು ಅದನ್ನು ನೆಲಕ್ಕುರುಳಿಸಿತು, ವಾಸು ಓಡಿಹೋಗಿ ಹಿಡಿದುಕೊಂಡನು. ಆದರೆ ಅದಕ್ಕೆ ಜೀವವಿರಲಿಲ್ಲ. ಅವನಿಗೆ ಆಸೆಯಿದ್ದುದು ಜೀವದ ಹಕ್ಕಿಯ ಮೇಲೆ ಹನಿಗಣ್ಣಾಗಿ ಗಂಗನನ್ನು ಬೈಯತ್ತ ಮರಿಗಳಿದ್ದ ಗೂಡಿಗೆ ಹೋಗಿ ನೋಡುತ್ತಾನೆ; ಹೆಣ್ಣು ಹಕ್ಕಿಗಳೆರಡೂ ವ್ಯಸನ ಸೂಚಕವಾಗಿ ಕೂಗುತ್ತ ಸುತ್ತಲೂ ಹಾರಾಡುತ್ತಿವೆ!( ಉರುಳಿಗೆ ಸಿಕ್ಕಿದ್ದು ಯಾವುದೋ ಬೇರೆ ಹಕ್ಕಿ.)

“ಏ ಗಂಗಾ, ಮರಿಗಳಿಲ್ಲಲ್ಲೋ!” ವಾಸುವಿನ ವಾಣಿ ರೋದನವಾಗಿತ್ತು.

ಗಂಗನೂ ಓಡಿಬಂದು ತಾನೂ ಗೂಡನ್ನು ನೋಡಿ ” ಅಯ್ಯಯ್ಯೋ ಏನಾದುವ್ರೋ? ಎಂದನು.

“ಯಾರೋ ಬಡ್ಡೀಮಕ್ಳು ಕದ್ದುಕೊಂಡು ಹೋಗಿದಾರೆ!”

“ಹಾರಿಹೋದ್ವೊ ಏನೋ?”

“ಹಾರಿಹೋಗಿದ್ರೆ ತಾಯಿಹಕ್ಕಿ ಹೀಂಗೆ ಬಡುಕೊಳ್ಳುತ್ತಿದ್ದುವೇನು?” ಎಂದು ವಿಹಂಗ ದಂಪತಿಯ ಕಡೆಗೆ ಮೊಗದೋರಿದನು.

“ಹಾಂಗಾದ್ರೆ ಯಾರ‍್ರೋ ಕಂದ್ಕೊಂಡುಹೋದ್ರು? ಅವರ ಎದೆಗೆ ರಣಹೊಡಿಯ!”

“ನೀ ತೆಗೆದುಕೊಳ್ಳಲಿಲ್ಲವೇನೋ?” ವಾಸು ಕೋಪಾರುಣೀನೇತ್ರನಾಗಿ ನೋಡಿದನು. ಅವನ ಶೋಕಕೋಪಾಗ್ನಿಗಳಿಗೆ ದಹಿಸಲು ಯಾವುದಾದರೂ ಒಂದು ವಸ್ತು ಬೇಕಿತ್ತು. ಸದ್ಯಕ್ಕೆ ಹತ್ತಿರದಲ್ಲಿದ್ದವನು ಗಂಗ!

ಆದರೆ ಗಂಗನು ಅಸ್ಪೃಶ್ಯನಾದ ತನ್ನನ್ನು ವಾಸು ಮುಟ್ಟುವುದಿಲ್ಲವೆಂಬ ಕೆಚ್ಚಿನಿಂದ ಸ್ವಲ್ಪವೂ ಅಪ್ರತಿಭನಾಗದೆ ” ನಾ ಈ ಕಡೆಗೇ ಬರಲಿಲ್ಲ. ದೇವ್ರಾಣೆ! ಪುಟ್ಟಯ್ಯ ಏನಾದ್ರೂ ಬಂದಿದ್ರೋ ಏನೋ…..” ಎಂದು ವಾಸುವಿನ ಕೋಪಾಗ್ನಿಯ ಪ್ರವಾಹವನ್ನು ಬೇರೆಯ ದಿಕ್ಕಿಗೆ ತಿರುಗಿಸಲು ಉಪಾಯ ಹೂಡಿದನು.

“ಅವನು ಕಾಲಿಗೆ ಮುಳ್ಳು ಚುಚ್ಚಿಕೊಂಡು ಬಿದ್ದಾನೆ!”

ವಾಸುವಿಗೆ ಯಾವುದೂ ಬಗೆಹರಿಯಲಿಲ್ಲ. ಕಳ್ಳನನ್ನು ಬಾಯಿಗೆ ಬಂದಂತೆ ಶಪಿಸುತ್ತ. ಗಂಗನನ್ನೂ ಕರೆದುಕೊಂಡು ಹಿಂದಿನ ದಿನ ಸಂಜೆಯಲ್ಲಿ ಪೊದೆಗೆ ಬಿದ್ದು ಸಿಕ್ಕದಿದ್ದ ಹಕ್ಕಿಯನ್ನು ಅರಸಲು ಹೋದನು. ಎಷ್ಟು ಹುಡುಕಿದರೂ ಅದೂ ಸಿಕ್ಕಲಿಲ್ಲ.

ಆಮೇಲೆ ಬಾಲಕರಿಬ್ಬರೂ ಹಣ್ಣುಗಳಿಗಾಗಿ ಅಲೆದೂ ಅಲೆದೂ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಬೈರನ ಬಿಡಾರಕ್ಕೆ ಬಂದರು. ಬೈರನು ಬಿಡಾರಕ್ಕೆ ಬಂದಿದ್ದರೆ ಕೊಳಲನ್ನು ನೋಡಬಹುದೆಂದು ಆಸೆಪಟ್ಟು ವಾಸು ನೆಟ್ಟಗೆ ಮನೆಗೆ ಹೋಗದೆ. ಗಂಗನೊಡನೆ ಹೋಗಿದ್ದನು.

ಬಿಡಾರದೊಳಗಣ ಕಗ್ಗವಿಯಲ್ಲಿ ಪಾಕಕಾರ್ಯದಲ್ಲಿ ತೊಡಗಿದ್ದ ಸೇಸಿ ಮಗನು ಬಂದುದನ್ನು ಧ್ವನಿಯಿಂದ ತಿಳಿದು, “ಗಂಗಾ” ಎಂದು ಕೂಗಿದಳು.

ಹೊರಗಡೆ ವಾಸುವಿನೊಡನೆ ಕೊಳಲಿನ ವಿಚಾರವಾಗಿ ಮಾತಾಡುತ್ತಿದ್ದ ಗಂಗ ” ಓ” ಎಂದನು.

ಸೇಸಿ ಒಳಗಿನಿಂದ “ಈ ಹಕ್ಕಿ ತಿಪ್ಪುಳಿಸಿ ಸುಟ್ಟುಕೊಡೋ” ಎಂದಳು. ಅದನ್ನು ಕೇಳಿ ಗಂಗನ ಮೈಗೆ ಕುದಿನೀರು ಹೊಯ್ದಹಾಗಾಯಿತು. ಕಣ್ಣು, ಬೆರಗಾಗಿ ಮುಖ ಬೆಪ್ಪಾಯಿತು.

ವಾಸು ಸಂಶಯದಿಂದ ” ಎಲ್ಲಿತ್ತೊ ಹಕ್ಕು?” ಎಂದನು.

“ನಾ…. ನಾ…. ನು, ….ಬೆ…ಳಿ…ಗ್ಗೆ…” ಎಂದು ಗಂಗ ತೊದಲುತ್ತಿದ್ದಂತೆಯೆ, ಸೇಸಿ ಹೊರಗೆ ಬಂದು, ಒಂದು ಹಕ್ಕಿಯನ್ನು ಎರಡು ಮರಿಗಳನ್ನೂ ಗಂಗನ ಕಾಲುಬುಡಕ್ಕೆ ಎಸೆದು ಒಳಗೆ ಹೋದಳು.

ವಾಸು ನೋಡುತ್ತಾನೆ; ಹಕ್ಕಿ ಗಿಜಗಾರ್ಲು ಹಕ್ಕಿ; ತಾನು ಹಿಂದಿನ ದಿನ ಸಂಜೆಯಲ್ಲಿ ಹೊಡೆದಿದ್ದು! ಮರಿಗಳು ಪಿಕಳಾರದ ಮರಿಗಳು; ಆ ಗೂಡಿನಲ್ಲಿದ್ದವು! ಗಂಗನ ಮೋಸಕ್ಕೆ ಮೂಕಸಾಕ್ಷಿಗಳಾಗಿ ಪಕ್ಷಿಶಿಶುಶವಗಳು ನೆಲದ ಮೇಲೆ ನಿಶ್ಚಲವಾಗಿ ಬಿದ್ದಿವೆ!

ಗಂಗ ನಡುಗುತ್ತ ನಿಂತಿದ್ದನು.  ವಾಸುವಿನ ಮನಸ್ಸಿಗೆ ವಿಷಯವೆಲ್ಲ ವಿಶದವಾಗಿ, ಅವನ ಕೋಪ ಮೇರೆ ಮೀರಿತು. ಬೇಲರವನನ್ನು ಮುಟ್ಟಬಾರದೆಂದು ಗೊತ್ತಿದ್ದರೂ ಒನಕೆಯಿಂದ ಹಿಟ್ಟು ಕುಟ್ಟುವಂತೆ ಗಂಗನ ಮೈಗೆ ಗುದ್ದಿ, ತನ್ನ ಜೇಬಿನಲ್ಲಿದ್ದ ಹಕ್ಕಿಯನ್ನೂ ತೆಗೆದು ಅವನ ಹೊಟ್ಟೆಗೆ ರಪ್ಪೆಂದು ಹೊಡೆದು ಮನೆಯ ಕಡೆಗೆ ಅಳುತ್ತಾ ಹೋದನು.

ದಾರಿಯಲ್ಲಿ ಬೇಲರವನನ್ನು ಮುಟ್ಟಿದ್ದಕ್ಕೆ ಪ್ರಾಯಶ್ಚಿತ್ತರೂಪವಾಗಿ ಹಟ್ಟಿಗೆ ಹೋಗಿ ಸೆಗಣಿಯನ್ನು ಮೆಟ್ಟಿ, ಹಿತ್ತಲುಕಡೆಯ ಬಾಗಿಲಿನಿಂದ ಮನೆಯನ್ನು ಪ್ರವೇಶಿಸಿದನು. ಅಡುಗೆ ಮನೆಯಲ್ಲಿ ತಂದೆಯ ಕ್ರೋಧಧ್ವನಿಯೂ ಗುದ್ದುಗಳ ಸದ್ದೂ ಚಿಕ್ಕಮ್ಮನ ಆರ್ತನಾದವೂ ಕೇಳಿಸಿದುವು.