ಭೂಮಿ ಹುಣ್ಣಿಮೆಯ ಹಬ್ಬ ದೀಪಾವಳಿ ಹಬ್ಬಕ್ಕೆ ಹದಿನೈದು ದಿನಗಳ ಹಿಂದೆ ಬರುತ್ತದೆ. ಕೊಬ್ಬಿ ಬೆಳೆದು ನಿಂತ ಹಸುರಾದ ಬತ್ತದ ಗದ್ದೆಗಳಲ್ಲಿ ಆಗತಾನೆ ಹೊಡೆ ಹೊರಡಲು ಮೊದಲಾಗುತ್ತದೆ. ಕೆಲವು ಮುಂಬೆಳಸಿನ ಗದ್ದೆಗಳಲ್ಲಿ ಹಾಲ್ದೆನೆಗಳೂ ಮೂಡಿರುತ್ತವೆ. ಸೂರ್ಯನನ್ನೇ ಕಾಣಗೊಡಿಸದೆ ಆಕಾಶವನ್ನೆಲ್ಲ ಮುಚ್ಚಿಕೊಂಡು ಹಗಲಿರುಳೂ ಹಿಡಿದು ಮಳೆ ಸುರಿಸುವ ಕರಿ ಮುಗಿಲು ಬಿಳಿಮುಗಿಲಾಗದು ತೊಡಗುತ್ತದೆ. ಒಮ್ಮೊಮ್ಮೆ ವಿರಳವಾಗಿ ತುಂತುರು ಮಳೆ ಹೊಯ್ದರೂ ಬೆಚ್ಚನೆ ಬಿಸಿಲು ಅಡಿಗಡಿಗೆ ಇಣಿಕಿಣಿಕಿ ಹಸುರು ಗದ್ದೆಗಳ ಮೇಲೆ ಹೊಂಬಣ್ಣದ ನಗೆ ಬೀರುತ್ತದೆ. ಮಳೆಗಾಲದ ಜಡಿಮಳೆಯೂ ಇರದೆ, ಬೇಸಗೆಯ ಉರಿಬಿಸಲೂ ಇರದೆ, ಚಳಿಗಾಲದ ಕೊರೆಚಳಿಯೂ ಇರದೆ ಹವಾ ಸುಖವಾಗಿರುತ್ತದೆ. ಒಂದೊಂದು ದಿನ ಸ್ವಲ್ಪವೂ ಮಳೆಯಿಲ್ಲದೆ ಮೋಡವಿಲ್ಲದೆ ತೊಳೆದಿಟ್ಟ ನೀಲಿ ಗಾಜಿನಂತೆ ಹಬ್ಬಿರುವ ನೀಲಾಕಾಶದಲ್ಲಿ ಸೂರ್ಯನೂ ಪ್ರಫುಲ್ಲ ತೇಜಸ್ವಿಯಾಗಿರುವುದೂ ಉಂಟು. ಅಂತಹ ದಿನಗಳೆಂದರೆ ವನ್ಯಜಂತುಗಳಿಗೆ ಖುಷಿ ! ಬೇಟೆಗಾರರಿಗೂ ಖುಷಿ !

ಭೂಮಿ ಹುಣ್ಣಿಮೆಯ ಹಬ್ಬದಲ್ಲಿ ವಿಶೇಷವೆಂದರೆ,, ಕಳಮಶ್ರೀಯ ಪೂಜೆ. ಹಬ್ಬದ ಹಿಂದಿನ ದಿನವೇ ಕಾಡುಗಳಿಗೆ ಹೋಗಿ ಅರವತ್ತು ಬಗೆಯ ಸೊಪ್ಪುಗಳನ್ನೂ. ನೂಲೆ ಗೆಣಸುಗಳನ್ನೂ ತರುತ್ತಾರೆ. ಸೊಪ್ಪುಗಳನ್ನೆಲ್ಲ ಸೇರಿಸಿ ಮಾಡಿದ ಪಲ್ಯಕ್ಕೆ ‘ಬೆರಕೆಸೊಪ್ಪಿನ ಪಲ್ಯ’ ಎಂದು ಹೆಸರು. ಅರ್ಧ ಅಡಿಯಷ್ಟು ದಪ್ಪವಾಗಿ ನಾಲ್ಕೈದು ಅಡಿಗಳವರೆಗೂ ಉದ್ದವಾಗಿರುತ್ತದೆ, ಮುಳ್ಳು ಮುಳ್ಳು ನೂಲೆಬಳ್ಳಿಯ ಬುಡದ ಗೆಣಸು. ಅದನ್ನು ಬೇಯಿಸಿ ಸಿಪ್ಪೆ ಸುಲಿದರೆ ಬೆಣ್ಣೆಯಿದ್ದಂತೆ ಬೆಳ್ಳಗೆ ನುಣ್ಣಗೆ ಮೃದುವಾಗಿರುತ್ತದೆ. ಹಾಗೆಯೇ ಅಣಂಬಲಿ, ಕೆಸುವಿನ ಕೊಟ್ಟೆಹಿಟ್ಟು, ಕೊಚ್ಚಿಲಿ ಮೀನಿನ ಪಲ್ಯ ಇತ್ಯಾದಿಯಾಗಿ ಅನೇಕ ಭಕ್ಷ್ಯಭೋಜ್ಯಗಳನ್ನೂ ಮಾಡುತ್ತಾರೆ. ಜೊತೆಗೆ ಹಬ್ಬದ ಹಿಂದಿನ ದಿನ ಎಂದಿನಂತೆ ‘ದೊಡ್ಡಬೇಟೆ’ ಸೇರಿದಾಗ ‘ಷಿಕಾರಿಯಾಗಿದ್ದರೆ’ ‘ಅದರ ಪಕಾರ’ವೂ ಇರುತ್ತದೆ.

ಆದರೆ ಕಳಮಶ್ರೀಗೆ ಜೈನ ಮೇಲೋಗರಗಳನ್ನೇ ನಿವೇದಿಸುತ್ತಾರೆ. ಹಬ್ಬದ ದಿನ ಉಷಃಕಾಲಕ್ಕೆ ಮೊದಲೇ ಗದ್ದೆಗಳಿಗೆ ಹೊಗಿ ಬತ್ತದ ಪೈರನ್ನು ಹೂವು, ಹಣ್ಣು, ಕರ್ಪೂರ, ಗಂಧ, ಜಾಗಟೆ, ಆರತಿಗಳಿಂದ ವಿಧಿವತ್ತಾಗಿ ಅರ್ಚಿಸುತ್ತಾರೆ. ಕಳಮಶ್ರೀಯ ಆರಾಧನೆಯ ಜೊತೆಗೆ ಕಲೋಪಾಸನೆಯೂ ಆಗುತ್ತದೆ. ಜಡಜಗತ್ತೂ ಸಸ್ಯಾದಿಗಳೂ ತತ್ತ್ವತಃ ಆದುದರಿಂದ ವಂದನೀಯ ಎಂಬುದು ಆ ಪೂಜೆಯ ಅವ್ಯಕ್ತಬೋಧೆ.

ನೂಲೆಗೆಣಸು ಬೆರಕೆಸೊಪ್ಪುಗಳನ್ನು ತಂದಹಾಗೂ ಆಯಿತು, ಬೇಟೆಯಾಡಿದ ಹಾಗೂ ಆಯಿತು ಎಂದುಕೊಂಡು ಹಬ್ಬದ ಹಿಂದಿನ ದಿನ ಹೂವಯ್ಯ, ರಾಮಯ್ಯ, ವಾಸು, ಪುಟ್ಟಣ್ಣ, ಬೇಲರಬೈರ, ಸಿದ್ದ – ಇವರೆಲ್ಲ ಒಟ್ಟುಗೂಡಿ ಕಾಡಿಗೆ ಹೊರಟರು. ಸತ್ಯ ಹೇಳುವುದಾದರೆ ಎಲ್ಲ ಒಟ್ಟುಗೂಡಿ ಹೊರಡಲಿಲ್ಲ ; ಹೊರಟಮೇಲೆ ಕಾನುಬೈಲಿನಲ್ಲಿ ಎಲ್ಲರೂ ಒಟ್ಟಾದರು. ರಾಮಯ್ಯ, ವಾಸು, ಬೇಲರ ಸಿದ್ದ ಇವರು ಚಂದ್ರಯ್ಯಗೌಡರ ಅಪ್ಪಣೆ ಪಡೆದು ನಾಯಿ, ಕೋವಿ, ಹಾರೆ, ಸಮೆಗೋಲು, ಬೆಂಕಿಪೊಟ್ಟಣ ಮೊದಲಾದ ಸಲಕರಣೆಗಳನ್ನೆಲ್ಲ ತೆಗೆದುಕೊಂಡು ನಡೆದು ಕಾನುಬೈಲಿನಲ್ಲಿ ಸಕಲ ಸಲಕರಣೆಗಳನ್ನೊಳಗೊಂಡು ಕಾಯುತ್ತಿದ್ದ ಹೂವಯ್ಯನ ದಳವನ್ನು ಕೂಡಿಕೊಂಡು ಮುಂಬರಿದರು. ಹಾಗೆ ಮಾಡುವುದಕ್ಕೆ ಚಂದ್ರಯ್ಯಗೌಡರ ಭೀತಿಯೇ ಕಾರಣವಾಗಿತ್ತು.

ಆ ದಿನ, ಅವರ ಪುಣ್ಯವಶದಿಂದ, ಬೆಚ್ಚನೆಯ ಬಿಸಿಲು ಹಚ್ಚನೆಯ ಹಸುರಿನ ಮೇಲೆ ರಮಣೀಯವಾಗಿತ್ತು. ದೂರದೂರವಾಗಿದ್ದ ತುಂಡುಮೋಡಗಳನ್ನುಬಿಟ್ಟರೆ ಆಕಾಶ ಸ್ವಚ್ಛವಾಗಿತ್ತು. ಹವಾ ಪ್ರಕಾಶಮಾನವಾಗಿ ಸುಖಶೀತೋಷ್ಣವಾಗಿತ್ತು. ಪಕ್ಷಿಗಳು ಕೂಜನೋತ್ಸವದಲ್ಲಿ ತತ್ಪರವಾಗಿದ್ದುವು.

ಹೂವಯ್ಯನಾದಿಯಾಗಿ ಬೈರ ಸಿದ್ದರಿಗೂ ಕೂಡ ಗಿರಿವನಗಳ ರಮಣೀಯತೆಯಲ್ಲಿ ಜೀವನವು ಗರಿಯಂತೆ ಹಗುರವಾಗಿ ಹಕ್ಕಿಯಂತೆ ಹಾರಾಡತೊಡಗಿತು. ಸಂಸಾರದ ನೂರಾರು ಕೋಟಲೆಗಳ ಕಣಿವೆಗಳ ನಿಮ್ನತೆಯಿಂದ ಸ್ವಚ್ಛತರವೂ ಸ್ವಾತಂತ್ಯ್ರ ಪೂರ್ಣವೂ ಆಗಿರುವ ಗಿರಿವನಗಳ ಔನ್ನತ್ಯಕ್ಕೇರಿದರೆ ಯಾವ ಜೀವಿಯ ಆತ್ಮತಾನೇ ಗಗನಸ್ಪರ್ಶಿಯಾಗುವುದಿಲ್ಲ ? ಹೂವಯ್ಯ ತಿಳಿದು ಆನಂದಪಡುತ್ತಿದ್ದನು ; ಸಿದ್ದ ತಿಳಿಯದೆ ಆನಂದಪಡುತ್ತಿದ್ದನು.

ಬೇಟೆಗಾರರ ಗುಂಪು ಕೆಲವುಸಾರಿ ವಿನೋದದ ಮಾತನ್ನಾಡುತ್ತ, ಕೆಲವು ಸಾರಿ ಮಾತಿಲ್ಲದೆ ಆಲಿಸಿ ನೋಡುತ್ತ, ಒಮ್ಮೆ ಪಿಸುಮಾತಿನಲ್ಲಿ ಮಂತ್ರಾಲೋಚನೆ ಮಾಡುತ್ತ, ಒಮ್ಮೆ ಸುತ್ತಲೂ ನೆಲವನ್ನು ಮೂಸುತ್ತ ತೊಳತೊಳಲಿ ಬರುತ್ತಿದ್ದ ನಾಯಿಗಳಿಗೆ ಪಿಸುದನಿಯಲ್ಲಿ ಛೂ ಛೂ ಎನ್ನುತ್ತ, ಕೈಚಿಟಿಕೆ ಹೊಡೆದು ಸನ್ನೆ ಮಾಡುತ್ತ, ಒಂದೊಂದು ಸಲ ಅಲ್ಲಲ್ಲಿ ನೂಲೆಬಳ್ಳಿಗಳನ್ನು ಹುಡುಕುತ್ತ, ಬೆರಕೆ ಸೊಪ್ಪನ್ನು ಕೊಯ್ಯುತ್ತ, ಸರುವಿಗಿಳಿದು, ಅಬ್ಬರಿಯೇರಿ ಸರಸ ಸಾಹಸದಿಂದ ಮುಂದುವರಿದರು.

ಕಾಡುಗಳಲ್ಲಿ ತಿರುಗಿ ಅನುಭವ ಸಾಲದ ವಾಸುವಿನ ಕಾಲುಗಳಂತೂ ಮುಳ್ಳು ಬಳ್ಳಿಗಳಿಂದ ಪರಚಿ ಪರಚಿಹೋದುವು. ಅವನು ಮಾತ್ರ ಗಾಯಗೊಂಡಷ್ಟೂ ಕೆರಳಿ ಯುದ್ಧಮಾಡುವ ರಣವೀರನಂತೆ ದೊಡ್ಡವರಿಗೆ ಸರಿಸಾಟಿಯಾಗಿ ಸಾಗಿದನು. ಆ ಅರಣ್ಯ ಪರ್ವತಗಳ ಸಂಗ ಸಹವಾಸಗಳೆಂದರೆ ಅವನಿಗೆ ಹಿಡಿಸಲಾರದಷ್ಟು ಸಂತೋಷ ; ಅದರಲ್ಲಿಯೂ ಹೂವಣ್ಣಯ್ಯನ ಜೊತೆ ! ಮತ್ತು ಸ್ವಾತಂತ್ಯ್ರ !

ಒಂದೆಡೆ ಸಮೀಪ ಸಮೀಪವಾಗಿ ನೂಲೆಬಳ್ಳಿಗಳು ಬೆಳೆದಿದ್ದುದನ್ನು ಕಂಡುಹಿಡಿದು ಗೆಣಸು ಅಗೆಯಲು ತೊಡಗಿದರು.

ಬೈರನೊಂದು ಕಡೆ ಸಿದ್ದನಿನ್ನೊಂದು ಕಡೆ ಸಮೆಗೋಲು (ಹಾರೆ)ಗಳಿಂದ ಅಗೆಯುತ್ತಿದ್ದರು. ಇತರರು ಕಂಬಳಿಗಳನ್ನು ಪಕ್ಕಪಕ್ಕದಲ್ಲಿ ಹಾಸಿಕೊಂಡು ಕುಳಿತು ಮಾತಾಡುತ್ತಿದ್ದರು. ನಾಯಿಗಳು ಒಂದಾದಮೇಲೊಂದು ಅಲ್ಲಿಗೆ ಬಂದು ಕೆನ್ನಾಲಿಗೆಗಳನ್ನು ಜೋಲುಹಾಕಿಕೊಂಡು ಏದುತ್ತ ಸುತ್ತಲೂ ವಿಶ್ರಮಿಸಿಕೊಳ್ಳತೊಡಗಿದುವು. ಪುಟ್ಟಣ್ಣ ಜೇಬಿನಿಂದ ಎಲೆಯಡಕೆಯನ್ನು ತೆಗೆದು ಹಾಕಿಕೊಳ್ಳುತ್ತಿದ್ದನು.

ಹೂವಯ್ಯ ವಿನೋದಕ್ಕೆ “ಇವತ್ತು ವಾಸು ಬಂದಿದ್ದಕ್ಕೆ ಅಂತಾ ಕಾಣ್ತದೆ ಏನೂ ಷಿಕಾರಿಯಾಗಲಿಲ್ಲ” ಎಂದನು.

ಪುಟ್ಟಣ್ಣ ಬಾಯಿತುಂಬ ತಾಂಬೂಲ ತುಂಬಿಕೊಂಡು, ಮೂಗನ್ನರಳಿಸುತ್ತಾ, ಕೆಳತುಟಿಯನ್ನು ನೀರಾನೆಯಂತೆ ಮೇಲ್ಮೊಗವಾಗಿ ಚಾಚಿಕೊಂಡು “ಹೌಡೆ ಹೌಡು ! ಣೀವು ಅವಣ್ಣ ಕರಕೊಂಡೇ ಬರಬಾರ್ಡಿಟ್ಟು !” ಎನ್ನುತ್ತಿದ್ದಂತೆಯೆ ರಕ್ತದಂತೆ ಕೆಂಪಾಗಿದ್ದ ಉಗುಳು ಚಿಮ್ಮಿ ಕಂಬಳಿಯ ಮೇಲೆಯೂ ಅವನ ಮೈ ಮೇಲೆಯೂ ಬಿದ್ದಿತು.

ವಾಸೂ “ಥೂ ನಿನ್ನ !” ಎಂದು ದೂರ ಸರಿದನು.

ಪುಟ್ಟಣ್ಣ ಕೈಯಿಂದಲೆ ಕಂಬಳಿಯನ್ನೂ ಮೈಯನ್ನೂ ಒರಸಿ ಮಡಿ ಮಾಡಿಕೊಂಡನು.

“ನಾ ಬಂದರೆ ಷಿಕಾರಿ ಆಗೋದಿಲ್ಲಂತೆ ? ಹೋದೊರ್ಷ ಭೂಮಿ ಹುಣ್ಣಿಮೆ ಹಬ್ಬದಾಗೆ ಪುಟ್ಟಣ್ಣನ ಜೋತೇಲೀ ಬಿಲ್ಲಿಗೆ ಕೂತಿದ್ದೆನಲ್ಲಾ ! ಆವಾಗ ಅವನೇ ಒಂದು ಹಂದಿ ಹೊಡ್ಡನಲ್ಲಾ !”

“ಹೌದು, ಮಾರಾಯರಾ, ಇವನ್ನ ಕೂರಿಸಿಕೊಂಡು ಬಿಲ್ಲಿಗೆ ಕೂತು ನಂಗೆ ಸಾಕೋ ಸಾಕು ಅನ್ನಿಸಿಬಿಡ್ತು ! ಮಾತಾಡಬೇಡ, ಸುಮ್ಮನಿರು, ಅಂತ ಹೇಳಿದರೆ ‘ಸುಮ್ಮನೆ ತಿನ್ನು ಅಂದ್ರೆ, ಹಾರಮನೆ ಓಣಿ ಬಕ್ಕೆಯಾ ?’ ಅಂದ ಹಾಗೆ, ಮಾತೂ ಮಾತೂ ಮಾತೂ. ಆ ಹಂದಿಗೆ ಗಿರಾಚಾರ ಕಾಡಿ ನನ್ನ ಹತ್ರ ಬಂದಿತ್ತು !”

ಇತರರಿಗೂ ಬೇಸರ ಹುಟ್ಟಿಸುವಂತಹುದಾದರೂ ಅವರವರಿಗೆ ರಸಪೂರ್ಣವಾಗಿದ್ದ ಸಂಭಾಷಣೆ ಅನಂತವಾಗಿ ಸಾಗಿತ್ತು. ಈ ಮಧ್ಯೆ ಪುಟ್ಟಣ್ಣನೂ ಎದ್ದು ಅಗೆಯುತ್ತಿದ್ದ ಬೈರ ಸಿದ್ದರ ಸಹಾಯಕ್ಕೆ ಹೋದನು. ರಾಮಯ್ಯ ಕಂಬಳಿಯ ಮೇಲೆ ಅಂಗಾತನೆ ಮಲಗಿದ್ದವನು ಹಾಗೆಯೆ ಕಣ್ಣು ಮುಚ್ಚಿದನು.

ಹೂವಯ್ಯ “ಪುಟ್ಟಣ್ಣಾ, ನಾನು ಹೀಂಗೆ ಹೋಗಿ ಬರ್ತೀನಿ” ಎಂದು ಕೋವಿ ತೆಗೆದುಕೊಂಡು ಎದ್ದನು.

ವಾಸು “ನಾನೂ ಬರ್ತೀನಿ” ಎಂದನು.

“ಬೇಡ. ಇಲ್ಲೇ ಇರು !”

ಅವನನ್ನೂ ಅಲ್ಲಿಯೆ ಇರುವಂತೆ ಹೇಳಿ ನಾಯಿಗಳೊಡನೆ ಹೂವಯ್ಯನೊಬ್ಬನೆ ಹಳುವಿನಲ್ಲಿ ಮರೆಯಾದನು.

ವಾಸುವೂ ಪುಟ್ಟಣ್ಣ ಬೈರ ಸಿದ್ದರು ಗೆಣಸು ಅಗೆಯುತ್ತಿದ್ದಲ್ಲಿಗೆ ಹೋಗಿ “ಓಹೋಹೋ ನನ್ನಷ್ಟೆತ್ರ ಇದೆಯಲ್ಲೋ ಗೆಣಸೂ !” ಎಂದನು.

ಹೂವಯ್ಯ ಹಳುವಿನಲ್ಲಿ ಮರೆಯಾಗಿಹೋಗಿ ಅರ್ಧಗಂಟೆ ಕಳೆದಿತ್ತು. ಅಗೆಯುತ್ತಿದ್ದರು ಎರಡು ದೊಡ್ಡ ದೊಡ್ಡ ಉದ್ದವಾದ ಗೆಣಸುಗಳನ್ನು ಕಿತ್ತು, ಮತ್ತೆರಡಕ್ಕೆ ಶುರುಮಾಡಿದ್ದರು. ವಾಸು ಪಕ್ಕದಲ್ಲಿದ್ದ ಮರಗಳನ್ನು ಹತ್ತಿ ಹತ್ತಿ ಇಳಿದನು. ಬೈರನ ಕೆಲಸದ ಕತ್ತಿಯನ್ನು ತೆಗೆದುಕೊಂಡು ಚಿಣ್ಣಿದಾಂಡುಗಳನ್ನು ಕತ್ತರಿಸಿದನು. ನೀಳವಾಗಿ ಮರಗಳ ನೆತ್ತಿಗಳಿಂದ ಜೋಲುಬಿದ್ದಿದ್ದ ಮಂಗನ ಬಳ್ಳಿಗಳನ್ನು ಎಳೆದು ಸರಪಣಿಗಳನ್ನು ರಚಿಸಿದನು. ಚಿಗುರೆಲೆಗಳನ್ನು ಕೊಯ್ದು, ಎರಡು ಹೆಬ್ಬೆರಳುಗಳ ಮಧ್ಯೆ ಇಟ್ಟು, ಕಾಡುಕೋಳಿಗಳೂ ಮಂಗಟ್ಟೆ ಹಕ್ಕಿಗಳೂ ಕೂಗುವಂತೆ ಕೂಗಲು ಪ್ರಯತ್ನಿಸಿದನು. ಆದರೆ ಸಾಧ್ಯವಾಗಲಿಲ್ಲ. ಯಾವ ಪ್ರಾಣಿಗಳೂ ಅನ್ವಯಿಸದ ವಿಕಾರಧ್ವನಿಗಳು ಹೊರಟು, ಬೆವರು ಸುರಿಸಿಕೊಂಡು ಅಗೆಯುತ್ತಿದ್ದವರೂ ಕೂಡ ನಕ್ಕು ನಕ್ಕು ಬೀಳುವಂತಾಯಿತು. ತನ್ನಿಂದ ಸಾಧ್ಯವಾಗದಿರಲು ಪುಟ್ಟಣ್ಣನಿಗೆ ಚಿಗುರೆಲೆಗಳನ್ನು ಕೊಟ್ಟು ಕೂಗುವಂತೆ ಹೇಳಿದನು. ಅವನು ಕೂಗಿದನು. ಅದು ಎಷ್ಟರಮಟ್ಟಿಗೆ ಸಹಜವಾಗಿತ್ತೆಂದರೆ ದೂರದಲ್ಲಿದ್ದ ಕಾಡುಕೋಳಿಗಳೂ ಮರಗಳ ಮೇಲಿದ್ದ ಮಂಗಟ್ಟೆ ಹಕ್ಕಿಗಳೂ ಇದ್ದಕಿದ್ದ ಹಾಗೆ ಪ್ರತ್ಯುತ್ತರವಾಗಿ ಕೂಗತೊಡಗಿದುವು. ವಾಸುವಿಗೆ ಅತ್ಯಾನಂದದೊಡನೆ ನಿರಾಶೆಯೂ ಹೊಟ್ಟೆಕಿಚ್ಚೂ ಉಂಟಾದವು. ಅವನಿಗೆ ಪುಟ್ಟಣ್ಣನು ಸರ್ವಾದರ್ಶಗಳ ಪರಮಾವಧಿಯಾಗಿ ಕಂಡುಬಂದನು. ಪುಟ್ಟಣ್ಣನನಿಗೆ ತಂದೆಯಿಲ್ಲ ; ಆದ್ದರಿಂದ ತಂದೆಯ ಭಯವಿಲ್ಲ. ಅವನು ಎಲ್ಲಿಗೆ ಬೇಕಾದರಲ್ಲಿಗೆ ಹೋಗುತ್ತಾನೆ. ಅವನಿಗೆ ರಾತ್ರಿ ಹಗಲು ಎಲ್ಲವೂ ಒಂದೇ. ಕಾಡಿನಲ್ಲಿ ಯಾವಾಗೆಂದರೆ ಆವಾಗ ಅಲೆಯುತ್ತಾನೆ. ಅವನು ಕೋವಿಹಿಡೆದನೆಂದರೆ ಇಟ್ಟ ಗುರಿ ತಪ್ಪುವುದಿಲ್ಲ. ಕಣೆಹಂದಿ (ಮುಳ್ಳುಹಂದಿ), ಹಂದಿ, ಹುಲಿ, ಹಾವು ಮೊದಲಾದ ಕಾಡು ಪ್ರಾಣಿಗಳೆಂದರೆ ಅವನಿಗೆ ಹೆದರಿಕೆಯಿಲ್ಲ. ಅವನಿಗೆ ಬದುಕಿನ ಜವಾಬ್ದಾರಿಯೂ ಇಲ್ಲ ; ಸಾವಿನ ಜವಾಬ್ದಾರಿಯೂ ಇಲ್ಲ. ಹೆಂಡಿರಿಲ್ಲ, ಮಕ್ಕಳಿಲ್ಲ ; ಭೂಮಿಯಿಲ್ಲ, ಕಾಣಿಯಿಲ್ಲ. ಏನೂ ಇಲ್ಲದಿದ್ದರೂ ಎಲ್ಲವನ್ನೂ ಪಡೆದವನಂತೆ ಸ್ವತಂತ್ರ, ಸುಖಿ, ಮಂಗಟ್ಟೆಹಕ್ಕಿ ಕೂಗುವಂತೆ ಕೂಗುತ್ತಾನೆ ; ಕಾಡುಕೋಳಿಗಳನ್ನು ಅವು ಕೂಗುವಂತೆಯೆ ಕೂಗಿ ಕರೆದು ಬಂದೂಕಿನಿಂದ ಹೊಡೆಯುತ್ತಾನೆ ! – ವಾಸು ಆಲೋಚಿಸಿದಂತೆಲ್ಲ ಪುಟ್ಟಣ್ಣನ ಗುಣಗಳು ಗುಣಿತವಾಗುವಂತೆ ತೋರಿತು. ದೊಡ್ಡ ಮರದ ಬುಡದಲ್ಲಿ ಸಣ್ಣ ಗಿಡ ನಿಂತಂತಾದನು ಅವನು. ಪುಟ್ಟಣ್ಣನನ್ನು ಕಂಡು ಅವನಿಗೆ ಹೊಟ್ಟೆಕಿಚ್ಚಾಯಿತು. ಆದರೆ ಅದು ಹಸುಳೆಯ ಹೊಟ್ಟೆಗಿಚ್ಚು. ಅದರಲ್ಲಿ ಬೆಳಗುವ ಗುಣವಿರುತ್ತದೆ ; ಸುಡುವ ಗುಣವಿರುವುದಿಲ್ಲ.

ವಾಸು ಒಂದು ಎಲೆಯನ್ನು ಸುರುಳಿಸುತ್ತಿ ಪೀಪಿಮಾಡಿ ಊದಿದನು. ಅದರ ಕೀಚುದನಿ ಎಷ್ಟು ತೀಕ್ಷ್ಣವಾಗಿತ್ತೆಂದರೆ ಮಲಗಿದ್ದ ರಾಮಯ್ಯನ ಕಿವಿಗೆ ಕಚಗುಳಿಯಿಟ್ಟಂತಾಗಿ ಎಚ್ಚರವಾಯಿತು. ಅವನು ಅನೈಚ್ಛಿಕವಾಗಿಯೆ ಎದ್ದು. ಕೂತುಕೊಂಡು ಕಣ್ಣುಜ್ಜಿಕೊಳ್ಳುತ್ತಿದ್ದನು. ತಂದೆಯ ಕಾಯಿಲೆಯ ದೆಸೆಯಿಂದಲೂ ಮನಸ್ಸಿನ ಕ್ಷೋಭೆಯ ದೆಸೆಯಿಂದಲೂ ಅವನಿಗೆ ಕೆಲದಿನಗಳಿಂದ ಸರಿಯಾದ ನಿದ್ದೆಯಿರಲಿಲ್ಲ.

ವಾಸು ಮತ್ತೆ ಪುಟ್ಟಣ್ಣನ ಹತ್ತಿರಕ್ಕೆ ಬಂದು, ಅಗೆಯುತ್ತಿದ್ದವನನ್ನು ನಿಲ್ಲಿಸಿ “ಎಲೇಲಿ ನೀನು ಪೀಪಿ ಮಾಡಿ ಊದು, ನೋಡೋಣ” ಎಂದನು.

“ಊದದೆ ಏನಂತೆ ? ಮಹಾ !” ಎಂದನು ಪುಟ್ಟಣ್ಣ.

“ಊದು, ನೋಡೋಣ” ಎಂದು ಪುಸಲಾಯಿಸಿದನು ವಾಸು.

ಪುಟ್ಟಣ್ಣನೂ ಒಂದು ಎಲೆಯನ್ನು ಕಿತ್ತುಕೊಂಡು ಸುರುಳಿ ಸುತ್ತಿ ಊದಿದನು. ಪುಸ್‌ಪುಸ್‌ಎಂದು ಊದುಕೊಳವಿಯಲ್ಲಿ ಒಲೆ ಊದಿದಂತಾಯಿತು. ವಾಸುವಿಗೆ ಮುಯ್ಯಿತೀರಿಸಿಕೊಂಡಷ್ಟು ಸಂತೋಷವಾಗಿ “ಹಾಞ ! ಹಾಂಗಾಗ್ಬೇಕು ! ಎಲ್ಲದರಲ್ಲೂ ನೀನೇ ಗಟ್ಟಿಗ ಅನ್ನಿಸಿಕೊಳ್ಳಬೇಕು ಅಂತಾ ಮಾಡಿಯೇನು ?” ಎಂದು ಅಣಕಿಸುವ ಧ್ವನಿಯಿಂದ “ಊದು ನೋಡೋಣ ಈಗ ! ಪೀಪಿ ಊದು ? ಅದೇನು ಹಂದಿ ಹೊಡೆದ್ಹಾಂಗೆ ಅಂತಾ ಮಾಡಿಯೇನು ?” ಎಂದವನೇ ತನ್ನ ಎಲೆಪೀಪಿಯಿಂದ ಗಟ್ಟಿಯಾಗಿ ಒಂದು ಸಿಳ್ಳು ಊದಿ ಹೆಮ್ಮೆಯಿಂದ ಮಲೆತುನಿಂತನು.

ಪುಟ್ಟಣ್ಣ ನಗುತ್ತಾ ನಾಲ್ಕು ಐದು ಎಲೆಗಳಿಂದ ಪೀಪಿ ಮಾಡಿ ಊದಲು ಪ್ರಯತ್ನಿಸಿದನು. ಆದರೆ ಪ್ರತಿಸಲವೂ ವಾಸುವಿಗೆ ಆನಂದ ಉಂಟಾಯಿತೇ ಹೊರತು ಸಿಳ್ಳು ಹೊರಡಲಿಲ್ಲ. ಏಕೆಂದರೆ, ಅವನು ಕೊಯ್ದಿದ್ದ ಎಲೆ, ಅವನ ಕೈ, ಅವನು ಎಲೆಯನ್ನು ಸುರುಳಿ ಮಾಡಿದ ರೀತಿ, ಅವನ ತುಟಿ, ಅವನ ಉಸಿರೂ ಕೂಡ ಎಲ್ಲವೂ ಒರಟಾಗಿದ್ದುದರಿಂದ ಹಸುಳೆಯ ಮೃದುತ್ವಕ್ಕೆ ಸಾಧ್ಯವಾದ ಕಾರ್ಯ ಅವನಿಗೆ ಸಾಧ್ಯವಾಗಲಿಲ್ಲ.

“ಪೀಪಿ ಊದಿದ ಮಾತ್ರಕ್ಕೆ ನೀನು ಗಂಡಸಾಗಲಿಲ್ಲ. ಹೆಣ್ಣು ಹುಡುಗರೂ ಕೂಡ ಊದುತ್ತಾರೆ ! ನಾನು ಅಗೆದ ಹಾಗೆ ಅಗೀ ನೋಡೋಣ !” ಎಂದನು ಪುಟ್ಟಣ್ಣ.

ಪುಟ್ಟಣ್ಣ ವಿನೊದಕ್ಕೆ ಹೇಳಿದನು. ಆದರೆ ವಾಸು ನೆಟ್ಟಗೆ ಹೋಗಿ ಬೈರನಿಂದ ಸಮೆಗೋಲು ತೆಗೆದುಕೊಂಡು ಅಗೆಯಲು ತೊಡಗಿದನು. ಉಳಿದವರು ನಗುವನ್ನು ತಡೆದು ನಿಂತು ನೋಡುತ್ತಿದ್ದರು. ಎರಡು ನಿಮಿಷದೊಳಗಾಗಿ ಬಾಲಕನ ಎಳೆಯ ಮುಖದಲ್ಲಿ ಬೆವರುಹನಿಗಳೂ ಕಣ್ಣುಗಳಿಂದ ಕಂಬನಿಗೂ ಸೂಸತೊಡಗಿದುವು.

ಅಷ್ಟು ಹೊತ್ತಿಗೆ ಸರಿಯಾಗಿ ದೂರದಲ್ಲಿ ಕಾಡಿನ ಮಧ್ಯೆ ನಾಯಿಗಳ ಕೂಗಾಟವೂ ಅದನ್ನು ಹಿಂಬಾಲಿಸಿ ಎರಡು ಈಡುಗಳ ಸದ್ದೂ ಕೇಳಿಸಿದುವು. ಒಡನೆಯೆ ಯಾರೋ ಕೂಗುವಂತೆಯೋ ಕರೆಯುವಂತೆಯೋ ಕೇಳಿಸಿತು.

ಎಲ್ಲರ ಗಮನವೂ ದೂರದಲ್ಲಿ ಜಂತುವನ್ನು ಕಂಡ ಬೇಟೆನಾಯಿಯ ಕಿವಿಗಳಂತೆ ನಿಮಿರಿನಿಂತಿತು.

“ಯಾರೋ ? ಅಣ್ಣಯ್ಯನೇನೋ ?” ಎಂದನು – ಚಟುವಟಿಕೆಯಿಂದ ಎದ್ದು, ಕೋವಿ ಹಿಡಿದುಕೊಂಡು ನಿಂತಿದ್ದ ರಾಮಯ್ಯ.

“ಅಲ್ಲಾ ಅಂತಾ ಕಾಣ್ತದೆ ನೋಡಿ. ಬಹಳ ದೂರದಲ್ಲಿ ಕೇಳಿಸಿದ ಹಾಂಗಾಯ್ತು !” ಎಂದನು ಪುಟ್ಟಣ್ಣ.

“ಏನಾದರಾಗಲಿ, ನಾನು ನೋಡಿಕೊಂಡು ಬರ್ತೀನಿ” ಎಂದು ರಾಮಯ್ಯನೂ ತೋಟಾ ಬಂದೂಕನ್ನು ಹೆಗಲಮೇಲೆ ಹೇರಿಕೊಂಡು ಹೂವಯ್ಯ ಹೋದ ದಿಕ್ಕಿನಲ್ಲಿ ಕಾಡಿನ ಮಧ್ಯೆ ಮರೆಯಾದನು.

ಇಷ್ಟರಲ್ಲಿ ವಾಸು ಯಾರಿಗೂ ತಿಳಿಯದಂತೆ, ತನಗೂ ಕೂಡ ತಿಳಿಯಬಾರದು ಎಂಬಂತೆ, ಅಗೆಯುವುದನ್ನು ಬಿಟ್ಟು ದೂರ ಹೋಗಿ ಒಂದು ಪೊದೆಯ ಹಿಂದೆ ಏನೋ ಮಹಾಕಾರ್ಯದಲ್ಲಿ ತೊಡಗಿದ್ದಂತೆ ನಟಿಸುತ್ತಿದ್ದನು !

ಪುಟ್ಟಣ್ಣ ಮೊದಲಾದವರಿಗೆ ಕೇಳಿಸಿದ ಈಡುಗಳ ಸದ್ದು ಕಾನೂರಿಗೂ ಕೆಳಕಾನೂರಿಗೂ ಕೇಳಿಸದಿರಲಿಲ್ಲ. ಅದನ್ನು ಕೇಳಿದವರು ಒಬ್ಬೊಬ್ಬರು ಒಂದೊಂದು ತರನಾಗಿ ಊಹಿಸಿದರು.

ಚಂದ್ರಯ್ಯಗೌಡರು ಸೇರೆಗಾರರೊಡನೆ “ಎಂತದಕ್ರೀ ಎರಡು ಈಡು ಕೂಡೆ  ಕೂಡೆ ಹೊಡೆದರಲ್ಲ ?” ಎಂದು ನಶ್ಯ ಹಾಕಿಕೊಂಡು ಮೂಗನ್ನು ಉಜ್ಜಿಕೊಂಡರು.

“ಮಿಗ ಅಂತಾ ಕಾಣ್ತದೆ, ನೋಡಿ. ಮೊನ್ನೆ ನಮ್ಮ ಹೊಟ್ಟೆಸೋಮ ಒಂದು ಮಿಗದ ಹಿಂಡನ್ನೇ ಕಂಡನಂತೆ, ಕಾಣಿ.”

“ಮಿಗಕ್ಕೆ ಅಲ್ಲಾ ಅಂತ ಕಾಣ್ತದೆ. ಹಂದಿಗೇ ಇರ್ಬೇಕು. ಎರಡು ಈಡು ಕೂಡೆ ಕೂಡೆ ಹೊಡೆದು ಕೂಗಬೇಕಾದರೆ ಹಂದೀನೇ ಇರಬೇಕು.”

“ಹೌದಾ ! ತೋಟಾಕೋವಿ ಈಡು ಅಲ್ದಾ !”

“ಮತ್ತೇನು ? ಕೇಪಿನ ಕೋವೀಲಿ ಎರಡು ಈಡು ಕೂಡೆ ಕೂಡೆ ಹೊಡೆಯೋದು ಹ್ಯಾಂಗೆ ?”

“ಅಲ್ಲಾ ; ನಮ್ಮ ಹಳೇಪೈಕದ ತಿಮ್ಮನ ಸವಾರಿ ಕಾಡುಹತ್ತಿತ್ತೋ ಏನೋ ?”

“ಹೌದು ! ಹೌದು ! ಅವನ್ಹತ್ರ ಇರೋದು ಜೋಡುನಲ್ಲಿ ಕೇಪಿನ ಕೋವಿ. ಅವನೇ ಆಗಿದ್ದರೂ ಆಗಿರಬೈದು” ಎಂದು ಗೌಡರು ತಿಮ್ಮನ ಮೇಲೆ ತಮಗಿರುವ ಪಕ್ಷಪಾತವನ್ನು ವ್ಯಕ್ತಗೊಳಿಸಿ ಮಾತಾಡಿದರು.

ಕೆಳಕಾನೂರಿನ ಹುಲ್ಲಿನ ಮನೆಯಲ್ಲಿ ನಾಗಮ್ಮನವರ ಚಿಂತಾತರಂಗಗಳು ಬೇರೆಯ ತೆರನಾಗಿದ್ದುವು. ಆ ದಿನ ಹೂವಯ್ಯ ಪುಟ್ಟಣ್ಣರು ಮನೆಯಿಂದ ಹೊರಟಾಗಿನಿಂದ ಅವರ ಮಾತೃಹೃದಯ ಯಾವುದೋ ಆಶಂಕೆಯಿಂದ ತುಂಬಿಹೋಗಿತ್ತು. ಏನೋ ಒಂದು ಅಸ್ಪಷ್ಟ ಭೀತಿ ತಾಯಿಯ ಆತ್ಮವನ್ನು ಕಡೆಯ ತೊಡಗಿತ್ತು. ಮನೆಯಲ್ಲಿ ಯಾರೊಬ್ಬರೂ ಇರದಿದ್ದುದರಿಂದ ಉಂಟಾಗಿದ್ದ ಶಕುನಪೂರ್ಣವಾದಂತಿದ್ದ ಮೌನವು ಅವರ ಹೆದರಿಕೆಗೆ ಮತ್ತಷ್ಟು ಭಾರವನ್ನು ಹೇರಿತ್ತು. ಹಾಗೆಯೆ ಏಕಾಂತತೆ ಕಲ್ಪನೆಯನ್ನು ಕೆರಳಿಸಿ ಲೆಕ್ಕವಿಲ್ಲದಷ್ಟು ಭಯದ ಚಿತ್ರಗಳನ್ನು ತಂದು. ಒಳಗಣ್ಣಿನ ಮುಂದೆ ಹಿಡಿದು ತೋರಿ, ಬೆದರಿಸತೋಡಗಿತ್ತು. ಬೈರನ ಹೆಂಡತಿ ಸೇಸಿ ಸೌದೆಕೊಟ್ಟಿಗೆಯಲ್ಲಿ ಅಕ್ಕಿ ಬೀಸುತ್ತಿದ್ದರೂ ನಾಗಮ್ಮನವರು ಅಲ್ಲಿಗೆ ಹೋಗಿ ಅವಳೊಡನೆ ಎರಡು ಮಾತಾಡುವುದರಲ್ಲಿ ಮತ್ತೆ ಏನೇನೋ ಭಯಾನಕವಾದ ಆಲೋಚನೆಗಳು ಮನಸ್ಸಿಗೆ ಬಂದು ಹಿಂತಿರುಗುತ್ತಿದ್ದರು.

ಸ್ಥೂಲ ಪ್ರಕೃತಿಯ ಸೇಸಿಗೂ ಕೂಡ ನಾಗಮ್ಮನವರ ಉದ್ವೇಗ ಗೊತ್ತಾಗಿ “ಏನ್ರಮ್ಮ ಮೈ ಸೊಸ್ತಾಗಿಲ್ಲೇನು ?” ಎಂದು ಕೇಳಿದನು.

ನಾಗಮ್ಮನವರು ಔಪಚಾರಿಕವಾಗಿ, ಯಾಂತ್ರಿಕವಾಗಿ, “ಸ್ವಲ್ಪ ತಲೆ ನೋವು ಕಣೇ !” ಎಂದು ಮನೆಯೊಳಗೆ ಹೋಗಿ ಜಗುಲಿಯಲ್ಲಿ ತಗುಲಿಹಾಕಿದ್ದ ಒಂದೊಂದು ಪಟದ ಮುಂದೆಯೂ ನಿಂತು ಮಗನ ಕ್ಷೇಮಕ್ಕಾಗಿ ಮತ್ತೆ ಮತ್ತೆ ಕೈಮುಗಿದರು. ಪಟಗಳ ಮಾತಿರಲಿ ; ಅವರ ಹೃದಯ ಕಂಡುದಕ್ಕೆಲ್ಲ ಕೈ ಮುಗಿಯುವ ಸ್ಥಿತಿಯಲ್ಲಿತ್ತು.

ಹುಟ್ಟಿದಂದಿನಿಂದಲೂ ಹೂವಯ್ಯನ ಮೇಲೆ ನಾಗಮ್ಮನವರಿಗೆ ಅತಿ ಅಕ್ಕರೆ. ತಾಯಿ ತನ್ನ ಮಗುವನ್ನು ಆದರಿಸುವುದನ್ನೂ ಉಪಚರಿಸುವುದನ್ನೂ ನೋಡಿದವರೆಲ್ಲ ‘ಏನಪ್ಪಾ ಇದು ?’ ಎಂದುಕೊಳ್ಳುತ್ತಿದ್ದರು. ಮಗನು ಬೆಳೆಯುತ್ತ ಬಂದಹಾಗೆಲ್ಲ ಅವನ ಸುಪುಷ್ಟವಾದ ಅಂಗಾಂಗಗಳನ್ನು ಭದ್ರಾಕಾರವನ್ನೂ ನೋಡಿ ನೋಡಿ ಹಿಗ್ಗುತ್ತಿದ್ದರು. ಒಟ್ಟು ಕುಟುಂಬದಲ್ಲಿರುವ ತಾಯಂದಿರು ಮಾಡಬಾರದ ಕೆಲಸಗಳನ್ನೂ ಮಗನ ಮೇಲಣ ಒಲ್ಮೆಗಾಗಿ ಮಾಡುತ್ತಿದ್ದರು. ಮಗನಿಗೆ ಪ್ರತ್ಯೇಕವಾಗಿ ತುಪ್ಪ, ಬೆಣ್ಣೆ, ಮೊಸರು, ಹುರಿದ ಕೋಳಿಮೊಟ್ಟೆ, ಹುರಿ ತುಂಡು ಮೊದಲಾದವುಗಳನ್ನು ಕದ್ದಿಟ್ಟು ಕೊಡುತ್ತಿದ್ದರು. ತಮ್ಮ ಮುದ್ದಿನ ಮಗನು ಬಳಿಯಿರುವಾಗ ಇತರ ಮಕ್ಕಳನ್ನು ಮುದ್ದಾಡುತ್ತಲೂ ಇರಲಿಲ್ಲ ; ಹತ್ತಿರ ಸೇರಿಸುತ್ತಲೂ ಇರಲಿಲ್ಲ. ಕೆಲವು ಕಾಲದ ಮೇಲೆ ಮಗನು ಬುದ್ಧಿಯಲ್ಲಿಯೂ ಮೇಲುಗೈಯಾಗಿರುವನೆಂದು ಗೊತ್ತಾಗಿ, ಅವರ ಎದೆ ಹಿಗ್ಗಿ ಹೆಬ್ಬಾಗಿಲಾಯಿತು. ಚಂದ್ರಯ್ಯಗೌಡರಿಗೂ ತಮ್ಮ ಗಂಡನಿಗೂ ಮನಸ್ತಾಪ ಉಂಟಾಗಿ, ಗಂಡನು ಕಷ್ಟದೆಸೆಯಲ್ಲಿ ತೀರಿಹೋದಮೇಲೆ, ನಾಗಮ್ಮನವರು ತಮ್ಮ ಮುಂದೆ ಉಂಟಾಗಿದ್ದ ಜಗತ್ತಿನ ಶೂನ್ಯತೆಯನ್ನೆಲ್ಲ ತಮ್ಮ ಮಗನೊಬ್ಬನಿಂದಲೇ ಪೂರ್ಣಗೈದರು. ಅವರಿಗೆ ಹೂವಯ್ಯನೇ ಪ್ರಪಂಚ. ಪ್ರಪಂಚವೇ ಹೂವಯ್ಯ ಆಗಿತ್ತು, ಹೂವಯ್ಯ ಓದುವುದಕ್ಕೆಂದು ಬೇರೆಯ ಊರುಗಳಿಗೆ ಹೋದಮೇಲೆ ಅವರ ಪ್ರೀತಿ ಪುಟ್ಟಮ್ಮ ವಾಸು ಇವರ ಕಡೆಯೂ ತಿರುಗಿದ್ದುದೇನೋ ನಿಜ. ವಾಸುವನ್ನಂತೂ ಅತಿಶಯವಾಗಿ ಪ್ರೀತಿಸುತ್ತಿದ್ದರು. ಆದರೆ ಆ ಪ್ರೀತಿ ಹೂವಯ್ಯನ ಪರವಾಗಿದ್ದ ಪ್ರೀತಿಯ ಮುಂದೆ ಅಲ್ಪವಾಗಿತ್ತು.

ಅತಿಪ್ರೀತಿ ಅತಿಭೀತಿಗೆ ಕಾರಣವಾಗುವುದು ಸ್ವಾಭಾವಿಕ. ಹೂವಯ್ಯ ತಮ್ಮ ಬಳಿ ಇದ್ದಾಗ ಯಾವ ಸ್ವರ್ಗಸುಖವನ್ನು ಅನುಭವಿಸುತ್ತಿದ್ದರೋ ಅಷ್ಟೇ ನರಕಯಾತನೆಯಾಗುತ್ತಿತ್ತು ನಾಗಮ್ಮನವರಿಗೆ, ಹೂವಯ್ಯನು ದೂರ ಹೋದಾಗ.

ಅವನು ಮೈಸೂರಿನಲ್ಲಿ ನೆಮ್ಮದಿಯಾಗಿದ್ದಾಗಲೂ ಕೂಡ ನಾಗಮ್ಮನವರು ಅವನು ರೋಗದಿಂದ ನರಳಿ ತಮ್ಮನ್ನು ಕರೆಯುತ್ತಿರುವಂತೆಯೋ, ಕಳ್ಳಕಾಕರ ಕೈಗೆ ಸಿಕ್ಕಂತೆಯೋ, ಕಂದಾರೆಯವರ ಪಾಲಾದಂತೆಯೋ, ಮೋಟಾರಿಗೆ ಸಿಕ್ಕಿ ಕೈಕಾಲು ಮುರಿದು ಕೊಂಡಂತೆಯೋ ಅಥವಾ ರೈಲಿಗೆ ಸಿಕ್ಕಿ ಪ್ರಾಣಬಿಟ್ಟಂತೆಯೋ ನಾನಾ ರೀತಿಯಾಗಿ ಯೋಚಿಸಿಕೊಂಡು “ಭಗವಂತ, ಭಗವಂತ, ನನ್ನ ಮಗಳನ್ನು ಕಾಪಾಡು ! ನನಗೆ ದಿಕ್ಕಿಲ್ಲ” ಎಂದು ಗುಟ್ಟಾಗಿ ಅಳುತ್ತಿದ್ದರು. ವಾಸುವನ್ನಂತೂ ದಿನಕ್ಕೆ ನಾಲ್ಕು ಸಾರಿ ಕೇಳುತ್ತಿದ್ದರು : “ಹೂವಯ್ಯನಿಂದ ಕಾಗದ ಬಂತೆನೋ ?” ಎಂದು. ಕಾಗದ ಬಂದ ದಿನವೂ ಕೂಡ ಸುಖವಾಗಿರುತ್ತಿರಲಿಲ್ಲ ; ಏಕೆಂದರೆ, ಕಾಗದ ಎರಡು ಮೂರು ದಿನಗಳ ಹಿಂದೆ ಬರೆದುದು ; ಆವಾಗ ಸುಖವಾಗಿದ್ದನು ; ಈಗ ಏನಾಗಿದೆಯೋ – ಎಂದು ! ಅನೇಕ ಸಾರಿ ತಮ್ಮ ಭೀತಿ ಅನಾವಶ್ಯಕವೆಂದು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು. ಆದರೆ ಪ್ರಯತ್ನಿಸಿದಂತೆಲ್ಲ ಭೀತಿ ಇನ್ನೂ ಹೆಚ್ಚಾಗುತ್ತಿತ್ತು.

ಆ ದಿನವೂ ಹೂವಯ್ಯ ಕಾಡಿಗೆ ಹೊರಟಾಗ, ಅವನನ್ನು ಕರೆದು, ಕ್ರಾಪಿನ ಮೇಲೆ ಕೈಯಾಡಿಸುತ್ತಾ, ಅನೇಕ ನೆವಗಳಿಂದ ಅವನ ಮುಖ ಕೆನ್ನೆ ಗಲ್ಲಗಳನ್ನು ತಮ್ಮ ಅಂಗೈಯಿಂದ ಸವರುತ್ತಾ “ಹುಷಾರಾಗಿ ಹೋಗಿ ಬಾರಪ್ಪಾ !” ಎಂದು ಹರಸಿ ಕಳುಹಿಸಿದ್ದರು. ಆಮೇಲೆ ಪುಟ್ಟಣ್ಣನನ್ನೂ ಕೂಗಿ ಬಳಿಗೆ ಕರೆದು “ಹುಷಾರಾಗಿ ನೋಡಿಕೊಳ್ಳಪ್ಪಾ !” ಎಂದು ಬೆಸಸಿದ್ದರು. ಹಾಗೆಯೆ ದೇವತೆಗಳೆಲ್ಲ ಮನಸ್ಸಿನಲ್ಲಿಯೂ ಕಾಯದಲ್ಲಿಯೂ ಕೈಮುಗಿದಿದ್ದರು.

ಆದರೆ ಬೇಟೆಗಾರರ ಗುಂಪು ಕಣ್ಮರೆಯಾದೊಡನೆ ಚಿರಪರಿಚಿತ ಭೀತಿ ಪಿಶಾಚವು ತಾಯಿಯ ಹೃದಯವನ್ನು ಪೀಡಿಸತೊಡಗಿತು. ಅದರ ಯಾತನೆಯನ್ನು ತಾಯ್ತನ ಮಾತ್ರವೇ ತಿಳಿಯಬಲ್ಲುದು.

ಇದ್ದಕಿದ್ದ ಹಾಗೆ ಸಿಂಗಪ್ಪಗೌಡರ ಮಗ ಕೃಷ್ಣಪ್ಪ ಹುಲಿಯ ಪಾಲಾದುದು ನೆನಪಿಗೆ ಬಂದು ನಾಗಮ್ಮನವರು ಆಪಾದಮಸ್ತಕವಾಗಿ ನಡುಗಿದರು. ಮನೆಯ ಹೊರಗೆ ಓಡಿಹೋಗಿ ಮಗನನ್ನು ಬೇಟೆಗೆ ಹೋಗದಂತೆ ಹಿಂದಕ್ಕೆ ಕರೆಯಲೆಂದು ಗರುಡದೃಷ್ಟಿಯನ್ನಟ್ಟಿ ನೋಡಿದರು. ವಿಸ್ತಾರವಾದ ಗದ್ದೆ, ದಟ್ಟವಾದ ಕಾಡು, ಎತ್ತರವಾದ ಬೆಟ್ಟ, ನೀಲಮೌನವಾದ ಆಕಾಶ, ಬೆಳಗುವ ಬಿಸಿಲು, ಕಿವಿಯ ಮೇಲೆ ಸುಯ್ಯನೆ ಬೀಸುವ ಗಾಳಿ – ಇವುಗಳಲ್ಲದೆ ಬೇರೆ ಯಾವುದೂ ಅವರ ಕಣ್ಬೊಲಕ್ಕೆ ಗೋಚರವಾಗಲಿಲ್ಲ.

“ಏ ! ಹೂವಯ್ಯಾ ! ಓ ! ಪುಟ್ಟಣ್ಣಾ !” ಎಂದು ಗಟ್ಟಿಯಾಗಿ ಕರೆದರು.

ಆ ಕೂಗಿಗೆ ಹಸುರುಗದ್ದೆಯಲ್ಲಿ ಕೂತಿದ್ದ ಬಿಳಿಯ ಕೊಕ್ಕರೆ ಕೂಡ ಹಾರಲಿಲ್ಲ. ನಾಗಮ್ಮನವರು ಹಿಂದಕ್ಕೆ ಬಂದು ತಲೆಯಮೇಲೆ ಕೈಹೊತ್ತುಕೊಂಡು ಹಗಲುಗನಸುಗಳನ್ನು ಕಟ್ಟುತ್ತಾ ಕುಳಿತರು. ಅವರು ಕುಳಿತಿದ್ದುದು ಚಾಪೆಯ ಮೇಲಲ್ಲ ; ಮುಳ್ಳಿನ ಮೇಲೆ ಎನ್ನುವ ಹಾಗಿತ್ತು. ಆ ತಾಯಿಯ ಮನಸ್ಸಿನಲ್ಲಿ ಏನೇನು ದುರೂಹೆಗಳು, ಏನೇನು ಭೀತಿಯ ಚಿತ್ರಗಳು, ಏನೇನೂ ಭಯಂಕರ ಕಲ್ಪನೆಗಳು ಸುಳಿದು ಆಕೆಯ ಹೃದಯದಲ್ಲಿ ಎಂತಹ ಪ್ರಲಯಾಗ್ನಿಭಾವಗಳು ತಾಂಡವಗೈಯುತ್ತಿದ್ದುವೆಂಬುದನ್ನು ಬರೆಯಲು ಸಾಧ್ಯವಿಲ್ಲ.

ಇದ್ದಕಿದ್ದ ಹಾಗೆ ದೂರದ ಗಿರಿವನದ ಮಧ್ಯದಿಂದ ಎರಡು ಈಡುಗಳು ಢಂ ಢಂ ಎಂದು ಹಗಲಿನ ಮೌನವನ್ನು ಆಲೋಡಿಸಿದುವು. ತಾಯಿ ಬೆಚ್ಚಿಬಿದ್ದು ಎದ್ದುನಿಂತಳು ! ಇನ್ನೇನು ಕೂಗಿಕೊಳ್ಳಬೇಕು ! ಆದರೆ ಕೂಗಿಕೊಳ್ಳದೆ ದೀರ್ಘವಾಗಿ ಸುಯ್ಯತೊಡಗಿದಳು. ರಾಮ ! ರಾಮ ! ರಾಮ ! ಕಾಪಾಡು ಎಂದು ಕೈಮುಗಿದಳು. ಮಿಂಚಿನ ವೇಗದಿಂದ ಸಾವಿರಾರು ಭಯಂಕರ ಚಿತ್ರಗಳು ಕೆರಳಿದ ಕಲ್ಪನೆಯಲ್ಲಿ ಹಾದುಹೋದುವು ! ಹುಲಿ ಹಾರಿದಂತೆ ! ಹಂದಿ ತಿವಿದಂತೆ ! ತಲೆ ಒಡೆದಂತೆ! ರಕ್ತ ಹರಿದಂತೆ ! ಗುಂಡು ತಗುಲಿದಂತೆ ! ….! ! ನಾಗಮ್ಮನವರು ನಿಂತಲ್ಲಿ ನಿಲ್ಲಲಾರದೆ ಸೌದೆಕೊಟ್ಟಿಗೆಗೆ ಓಡಿದರು.

ಅಲ್ಲಿ ಸೇಸಿ ಹಗಲಿನ ಮೌನಕ್ಕಿಂತಲೂ ಮೌನವಾಗಿ, ಅರಣ್ಯದ ಶಾಂತಿಗಿಂತಲೂ ಶಾಂತವಾಗಿ ಮೆಲ್ಲಗೆ ಬಹುಮೆಲ್ಲಗೆ ಹಾಡು ಹೇಳಿಕೊಳ್ಳುತ್ತಾ ಅಕ್ಕಿ ಬೀಸುತ್ತಿದ್ದಳು. ಅವಳಿಗೆ ಈಡುಗಳ ಸದ್ದು ಕೂಡ ಕೇಳಿಸಿರಲಿಲ್ಲ !

ಹೂವಯ್ಯ ಹೋದ ದಿಕ್ಕಿಗೆ ಹೆಗಲ ಮೇಲೆ ಕೋವಿ ಹೇರಿಕೊಂಡು ಹೊರಟ ರಾಮಯ್ಯ ಕಾಡಿನ ಹಳುವಿನಲ್ಲಿ ನುಗ್ಗಿ ನುಸಿದು ನಡೆದು ಸ್ವಲ್ಪ ದೂರ ಹೋಗಿದ್ದನು. ನಡುಹಗಲಿನ ಬಿಸಿಲಿನಲ್ಲಿಯೂ ಕವಿದುಕೊಂಡಿದ್ದ ಆ ಬನಗತ್ತಲೆ, ಗಾಳಿ ಮರಗಳಲ್ಲಿ ಬೀಸುವ ನಾದದಿಂದಲೆ ಪೋಷಿತವಾದಂತಿದ್ದ ಆ ಕಗ್ಗಾಡಿನ ನಿಃಶಬ್ದತೆ, ಮೌನದ ಸರೋವರಕ್ಕೆ ನಿಸ್ವನದ ಕಲ್ಲೆಸೆಯುವಂತೆ ಅತಿವಿರಳವಾಗಿ ಆಗಾಗ ಕೇಳಿಬರುತ್ತಿದ್ದ ವಿವಿಧ ಶಕುನಗಳ ವಿಕಟಧ್ವನಿ – ಇವುಗಳ ಮಾಯಾ ಪ್ರಭಾವದಿಂದ ಅವನು ಸ್ವಪ್ನಸ್ಥನಾದಂತೆಯೂ ಸ್ವಪ್ನಮುದ್ರಿತನಾದಂತೆಯೂ ಮುಂದುವರಿಯುತ್ತಿದ್ದನು ಇದ್ದಕ್ಕಿದ್ದ ಹಾಗೆ ಬೆಚ್ಚಿ, ಕಂಡರಿಸಿದಂತಾಗಿ, ನಟ್ಟದೃಷ್ಟಿಯಾಗಿ ನೋಡತೊಡಗಿದನು.

ತನಗೆ ತುಸು ದೂರದಲ್ಲಿ, ಎತ್ತರವಾದೊಂದು ಸ್ಥಾನದಲ್ಲಿ, ಸುತ್ತಲೂ ಗಿಡಬಳ್ಳಿಗಳು ಕಿಕ್ಕಿರಿದೆಡೆ. ಮರಗಳು ದಟ್ಟವಾದ ಹಸುರುಕೊಡೆಯನ್ನು ಹಿಡಿದಿರಲು, ಆ ಕಾಡುಗತ್ತಲೆಯಲ್ಲಿ, ಆ ಬನದ ಮೌನದಲ್ಲಿ, ಹಾಸುಂಬೆ ಹಬ್ಬಿ ಹಸುರು ಮಕಮಲ್ಲು ಹೊದೊಸಿದಂತಿದ್ದ ಹೆಬ್ಬಂಡೆಯ ನೆತ್ತಿಯಲ್ಲಿ, ಹಾಸಿಕೊಂಡಿದ್ದ ಕರಿಯ ಕಂಬಳಿಯ ಮೇಲೆ ಪದ್ಮಾಸನ ಹಾಕಿಕೊಂಡು ಕುಳಿತಿದೆ ಮನುಷ್ಯಾಕಾರದ ಒಂದು ನಿಶ್ಚಲಮೂರ್ತಿ ! ಇತರರಾರಾದರೂ ಆಗಿದ್ದರೆ ಪೂರ್ವಕಾಲದ ಋಷಿಯೊಬ್ಬನು ಸ್ಥಾವರಶರೀರಿಯಾಗಿ, ಕಲಿಯುಗದ ಕಾಡಿಗೆ ತಪಸ್ಸು ಮಾಡಲು ಬಂದಿರಬಹುದೋ ಏನೋ ಎಂದು ಶಂಕಿಸುತ್ತಿದ್ದರು. ಆದರೆ ರಾಮಯ್ಯ ಮೋಸಹೋಗಲಿಲ್ಲ. ಅಲ್ಲಿ ಧ್ಯಾನಸ್ಥನಾಗಿ ಕುಳಿತಿದ್ದವನು ಹೂವಯ್ಯನೆಂಬುದು ಗೊತ್ತಾಗಿ, ಅವನ ಧ್ಯಾನಕ್ಕೆ ಭಂಗಬಾರದಿರಲಿ ಎಂದು ತಾನೊಂದು ಪೊದೆಯಮರೆಯಲ್ಲಿ ನೀರವವಾಗಿ ಅವಿತುಕೊಂಡನು.

ಹೂವಯ್ಯನ ಬಂದೂಕು ಅವನು ಮಂಡಿಸಿದ್ದ ಬಂಡೆಗೆ ಒರಗಿಸಿತ್ತು.

ಆ ಚಿತ್ರ ಎಷ್ಟು ಭವ್ಯವಾಗಿತ್ತೆಂದರೆ ನೋಡುತ್ತಾ ಅಡಗಿ ಕುಳಿತಿದ್ದ ರಾಮಯ್ಯನ ಮನಸ್ಸೂ ಮೆಲ್ಲಮೆಲ್ಲಗೆ ಗಗನಕ್ಕೇರತೊಡಗಿತು. ಮೈ ಗುಡಿಗಟ್ಟಿ, ಎದೆ ದಿವ್ಯಾವೇಶದ ಮಿಂಚಿನಿಂದ ಜುಮ್ಮೆಂದಿತು. ಕಣ್ಣುಗಳಲ್ಲಿ ಹನಿಯಾಡಿತು. ಹೂವಯ್ಯ ತನ್ನ ಧ್ಯಾನದಿಂದ ಆ ಪ್ರದೇಶವನ್ನೆಲ್ಲ ಧ್ಯಾನಸ್ಥವನ್ನಾಗಿ ಮಾಡುತ್ತಿದ್ದಂತೆ ತೋರಿತು. ಆ ಪ್ರಭಾವದ ಉದಾರ ಕೃಪಾಪೂರ್ಣ ಸುಂದರಾಶ್ರಯದಲ್ಲಿ ರಾಮಯ್ಯ ಮುಳುಗಿ ಕುಳಿತನು.

ಹೂವಯ್ಯ ಕಡೆದಿಟ್ಟ ಕಲ್ಲಿನಂತೆ ಕುಳಿತಿದ್ದನು.ಉಸಿರಾಡುವುದೂ ಊಹಾಮಾತ್ರವಾಗಿ ಪರಿಣಮಿಸಿತ್ತು. ಆತನ ಆತ್ಮ ಭೂರ್ಭುವಸ್ಸುವರ್ಲೋಕಗಳನ್ನು ವ್ಯಾಪಿಸಿ ನುಂಗಿ ಜೀರ್ಣಿಸಿಕೊಂಡು ದಾಟಿ ಅನಿರ್ವಚನೀಯವೂ ಅಪ್ರಮೇಯವೂ ಆದ ಅನಂತದಲ್ಲಿ ವಿಹರಿಸುವಂತಿತ್ತು.

ಆ ಧ್ಯಾನಕ್ಕೆ ಆಳ ಅಗಲಗಳ ಪವಣಿರುವಂತೆ ತೋರುತ್ತಿರಲಿಲ್ಲ. ಅವನು ಅಲ್ಲಿ ಬೀಸುತ್ತಿದ್ದ ಗಾಳಿಯಾಗಿದ್ದನು ; ಅಲ್ಲಿ ಬೆಳೆದಿದ್ದ ಮರಗಿಡಬಳ್ಳಿಗಳಾಗಿದ್ದನು ; ಕಾಡಾಗಿದ್ದನು ; ಮರ್ಮರನಾದವಾಗಿದ್ದನು ; ಅಲ್ಲಿಯ ಮೌನವಾಗಿದ್ದನು ; ದೂರದ ಆಕಾಶವಾಗಿದ್ದನು ; ಹತ್ತಿರದ ಭೂಮಿಯಾಗಿದ್ದನು. ಅಷ್ಟೇ ಅಲ್ಲ : ಹೂವಯ್ಯನಿಗೆ ತನ್ನ ವ್ಯಕ್ತಿತ್ವವೂ ನಿರಾಕಾರವಾಗುತ್ತಿದ್ದಂತೆ ಭಾಸವಾಯಿತು !

ನೋಡುತ್ತಿದ್ದ ಹಾಗೆಯೆ ಹೂವಯ್ಯ (ಎಲ್ಲಿಂದಲೊ ಬಹುದೂರದಿಂದ ಹಿಂದಿರುಗಿ ಇಳಿದುಬಂದವನಂತೆ ನಿಡುಸುಯ್ದು ) ಹಸನ್ಮುಖಿಯಾಗಿ ಸುತ್ತಲೂ ದೃಷ್ಟಿಸಿದನು. ವದನ ತೇಜಸ್ವಿಯಾಗಿತ್ತು ; ಕಣ್ಣುಗಳು ಪ್ರಜ್ವಲಿಸುತ್ತಿದ್ದುವು.

ಇದ್ದಕಿದ್ದ ಹಾಗೆ ಆ ಅರಣ್ಯಶಾಂತಿಮಯ ಮೌನದಲ್ಲಿ ಮಂತ್ರಘೋಷದ ಮಧುರಗಂಭೀರನಾದ ಮೂಡಿ ಮೇಲೆದ್ದು ವನಪ್ರದೇಶವನ್ನೂ ವಾಯುಮಂಡಲವನ್ನೂ ಒಯ್ಯನೊಯ್ಯನೆ ತುಂಬಿ ತುಳುಕಿತು. ರಾಮಯ್ಯ ಊಸಿರಿಕ್ಕದ ಆನಂದದಿಂದ ಹೃಷ್ಟರೋಮನಾಗಿ ಆಲಿಸಿದನು : ವೇದೋಪನಿಷತ್ತುಗಳ ಮಹಾ ಮಂತ್ರಗಳು ಸಹ್ಯಾದ್ರಿಯ ಕಾಂತಾರದಲ್ಲಿ ಧೀರಮಾಧುರ್ಯದಿಂದ ಸ್ಪಂದಿತವಾಗುತ್ತಿದ್ದುವು !

ಸ್ವಲ್ಪ ಹೊತ್ತಿನೊಳಗಾಗಿ ಪುಟ್ಟಣ್ಣ ಕರೆಯುತ್ತಿದ್ದ ಕೂಗು ಕೇಳಿಸಿ, ರಾಮಯ್ಯ ತಾನಿದ್ದ ಸ್ಥಳದಿಂದ ಗುಟ್ಟಾಗಿ ಜುಣುಗಿದನು.

“ಹೂವಯ್ಯ ಸಿಕ್ಕರೇನು ?” ಎಂದು ಪುಟ್ಟಣ್ಣ ಕೇಳಲು, ರಾಮಯ್ಯ “ಇಲ್ಲ” ಎಂದು ಹೇಳಿ, ಅವನನ್ನು ಗಟ್ಟಿಯಾಗಿ ಕರೆಯುವಂತೆ ಹೇಳಿದನು. ಪುಟ್ಟಣ್ಣ ಬೇಟೆಗಾರರ ಧಾಟಿಯಲ್ಲಿ ಹೂವಯ್ಯನನ್ನು ಕೂಗಿ ಕರೆಯಲಾರಂಭಿಸಿದನು.

ಹೂವಯ್ಯ ಪುಟ್ಟಣ್ಣನ ಕಾಕನ್ನಾಲಿಸಿ, ಎದ್ದು ಬಂದು, ಅವನ ಪ್ರಶ್ನೆಗೆ ಉತ್ತರವಾಗಿ ನಾಯಿಗಳೆಲ್ಲವೂ ಈಡಿನ ಸದ್ದು ಕೇಳಿದೊಡನೆಯೆ ನುಗ್ಗಿ ಓಡಿಹೋದುವೆಂದೂ ತಾನೂ ಮಾತ್ರ ಒಂದು ಕಡೆ ಕೂತು ಅವುಗಳಿಗಾಗಿ ಕಾಯುತ್ತಿದ್ದ ಕೂಗು ಕೇಳಿಸಲು ಎದ್ದು ಬಂದೆನೆಂದೂ, ಬಹುಶಃ ಇನ್ನಾರೊ ಷಿಕಾರಿಗೆ ಬಂದಿದ್ದು ಯಾವ ಪ್ರಾಣಿಗೋ ಈಡು ಹೊಡೆದಿರಬೇಕೆಂದೂ, ಈಡು ಕೇಳಿಸಿದ ದಿಕ್ಕು ಈ ಕಡೆಯೆಂದೂ ಉಪನ್ಯಾಸ ಮಾಡಿಬಿಟ್ಟನು. ಗುಟ್ಟನ್ನು ತಿಳಿದಿದ್ದ ರಾಮಯ್ಯ ಒಳಗೊಳಗೆ ನಗುತ್ತಿದ್ದನು.

ಪಟ್ಟಣ್ಣ ನಾಯಿಗಳನ್ನು ಕೂಗಿ ಕರೆದನು. ಯಾವ ನಾಯಿಯೂ ಬರಲಿಲ್ಲ. ಎಲ್ಲರೂ ಸೇರಿ ಅಗೆದಿದ್ದ ಗೆಣಸುಗಳನ್ನೂ ಆಯುಧಗಳನ್ನೂ ಹೊತ್ತುಕೊಂಡು ಈಡು ಕೇಳಿಸಿದ್ದ ದಿಕ್ಕಿಗೆ ಹೊರಟರು.

“ಕ್ರೂಊ ಡೈಮಂಡ್ ! ಕ್ರೂಊ ಕೊತ್ವಾಲ !”

“ಕ್ರೂಊ ಊ ರೂಬಿ : ಕ್ರೂಊ ಊ ರೋಜಿ !”

ಎಂದು ದೊಡ್ಡವರು ದೊಡ್ಡದಾಗಿ ಆಗಾಗ ಕರೆದರೆ ವಾಸು ಎಳೆಗೊರಳಿನ ಸಣ್ಣದಾದರೂ ಕೀಚಾದ, ತಾರಸ್ವರದಿಂದ ಒಂದೇ ಉಸಿರಿನಲ್ಲಿ ಪದೇಪದೇ “ಕ್ರು ಕ್ರು ಕ್ರು ಕುರು ಕುರು ಕುರೂ ಊ ಊ” ಎಂದು ಕೂಗುತ್ತಿದ್ದನು.

ಅನೇಕ ದೂರ ಹೋದಮೇಲೆ ಕಾಡಿನ ಮಧ್ಯೆ ಅತಿಸಾಂದ್ರವಾದ ಅತಿಶೀತವಾದ ಅತಿನೀರವವಾದ ಕಣಿವೆಯಲ್ಲಿ ಯಾರೋ ಕೂಗಿದ ಹಾಗಾಯಿತು. ಪುಟ್ಟಣ್ಣನೂ ಕೂಗಿದನು. ಯಾರೋ ಓಕೊಂಡು ಕರೆದರು.

“ಹೋ, ನಮ್ಮ ಹಳೆಪೈಕದ ತಿಮ್ಮನ ಕೂಗು ಕೇಳಿಸಿದ ಹಾಂಗಾಗ್ತದೆ. ಕಣೆಹಂದಿ ಗುದ್ದಿಗೆ ಕೂಡಿಕೊಂಡಿದ್ದಾನೆ ಅಂತಾ ಕಾಣ್ತದೆ ! ಹಾಗಾಂದ್ರೆ ಒಂದು ಒಳ್ಳೇ ಪಡಾವಾಯ್ತು !” ಎಂದು ಹೇಳುತ್ತಲೆ ಬೇಗಬೇಗನೆ ಮುಂಬರಿದನು.

ಉಳಿದವರೂ ಕುತೂಹಲ ಉತ್ಸಾಹಗಳಿಂದ ಅವನನ್ನು ಹಿಂಬಾಲಿಸಿದರು.

ಹೋಗಿ ನೋಡುವಲ್ಲಿ ತಿಮ್ಮನ ಎರಡು ಕಂತ್ರಿನಾಯಿಗಳ ಜೊತೆಗೂಡಿ ಡೈಮಂಡು ಕೊತ್ವಾಲ ರೂಬಿ ರೋಜಿ ಮೊದಲಾದ ಚೀನಿ ನಾಯಿಗಳೂ ಸೇರಿಕೊಂಡು ಕಣೆಹಂದಿಯ ಗುದ್ದಿನ ಬಾಯಬಳಿ ಕೆಮ್ಮಣ್ಣನ್ನು ಕರೆಯುತ್ತಿದ್ದುವು. ಪಕ್ಕದಲ್ಲಿ ಕಂಬಳಿಯ ಮೇಲೆ ಜೋಡುನಳಿಗೆಯ ಕೇಪಿನ ಕೋವಿಯನ್ನು ಇಟ್ಟುಕೊಂಡು ಎಲೆಯಡಿಕೆ ಹಾಕಿಕೊಳ್ಳುತ್ತಾ ಹಳೆಪೈಕದ ತಿಮ್ಮ ಕುಳಿತಿದ್ದನು.

ಪುಟ್ಟಣ್ಣ “ಏನೋ ?” ಎಮದನು.

“ನಾಯಿ ಕಣ್ಹಂದಿ ಅಟ್ಟಿಕೊಂಡು ಬಂದ್ವು. ಯಲ್ಡ್ ಈಡು ಹೊಡದೆ ನೋಡಿ. ಒಂದೂ ಬಡೀಲೇ ಇಲ್ಲ. ತಂದು ಈ ಗುದ್ದು ನುಗ್ಗಿಸಿ ಬಿಟ್ಟಾವೆ ! ಅಷ್ಟೊತ್ತಿಗೆ ನಿಮ್ಮ ನಾಯಿನೂ ಬಂದ್ವು. ಹಾಂಗಾರೆ ನೀವೂ ಬರ್ಲಿ ಅಂತಾ ಕೂತೆ ಸುಮ್ಮನೆ !” ಎಂದ ತಿಮ್ಮ ಹೂವಯ್ಯ ರಾಮಯ್ಯರು ಹಿಂದೆ ಬರುತ್ತಿದ್ದುದನ್ನು ನೋಡಿ ಮೇಲೆದ್ದನು.

ಕಣೆಹಂದಿ ಎಂದರೆ ಮುಳ್ಳುಹಂದಿ. ಗುದ್ದು ಎಂದರೆ ಅದು ವಾಸಿಸುವ ಸುರಂಗಮಾರ್ಗದಂತಹ ರಂಧ್ರಗುಹೆ. ಗುದ್ದುಗಳಲ್ಲಿ ಕೆಲವು ಬಹಳ ಉದ್ದವಾಗಿರುತ್ತವೆ. ಅವುಗಳನ್ನು ಸರಹದ್ದು ಎಂದು ಕರೆಯುತ್ತಾರೆ. ಅವುಗಳೇ ಮುಳ್ಳುಹಂದಿಗಳಿಗೆ ನಿಜವಾದ ಹಕ್ಕೆ. ಅಂತಹ ಗುದ್ದುಗಳಿಗೆ ಹಂದಿಗಳು ನುಗ್ಗಿದರೆ ಅವಕ್ಕೆ ಯಾರೂ ಏನೂ ಮಾಡಲುಸಾಧ್ಯವಿಲ್ಲ. ಇನ್ನೊಂದು ತರಹದ ಗುದ್ದುಗಳು ಹತ್ತಾರು ಮಾರು ಉದ್ದವಾಗಿರುತ್ತವೆ. ಅವುಗಳಿಗೆ ನುಗ್ಗಿದರೆ ಕಷ್ಟಪಟ್ಟು ಅಗೆದು ತೆಗೆಯುಬಹುದು. ಅಥವಾ ಹೊಗೆ ಹಾಕಿ ಕೊಲ್ಲಬಹುದು. ಇನ್ನು ಕೆಲವು ಆಡುಗುದ್ದುಗಳಿರುತ್ತವೆ. ಆಡುಗುದ್ದುಗಳೆಂದರೆ ಆಟದ ಗುದ್ದುಗಳು ಎಂದರ್ಥ. ಅವು ಎರಡುಮೂರು ಮಾರು ಉದ್ದವಿದ್ದು, ಎರಡು ಕಡೆಗಳಲ್ಲಿಯೂ ಬಾಯಿ ಇರುತ್ತದೆ. ಜಂತು ಒಂದು ಕಡೆಯಿಂದ ನುಗ್ಗಿ ಮತ್ತೊಂದು ಕಡೆಯಿಂದ ಸರಾಗವಾಗಿ ತಪ್ಪಿಸಿಕೊಂಡು ಹೋಗಬಹುದು.

ಈ ಎಲ್ಲ ಗುದ್ದುಗಳನ್ನೂ ನಿರ್ಮಿಸುವುವು ಮಾತ್ರ ಕಣೆಹಂದಿಗಳಲ್ಲ ; ಚಿಪ್ಪಿನ ಹಂದಿಗಳು ಕೊರೆದು ಮಾಡಿದ ಗುದ್ದುಗಳಲ್ಲಿ ಕಣೆಹಂದಿಗಳು ಚಕ್ರಾಧಿಪತ್ಯ ಸ್ಥಾಪನೆ ಮಾಡುತ್ತವೆ !

ಸಣ್ಣದೇಹದ ನಾಯಿಗಳಲ್ಲಿ ಕೆಲವು ಧೈರ್ಯವಾಗಿ ಗುದ್ದು ನುಗ್ಗಿ ಕಣೆಹಂದಿಗಳೊಡನೆ ಹೋರಾಡುತ್ತವೆ. ಆದರೆ ಅದು ಅಪಾಯಕರವಾದ ಸಾಹಸ. ಎಷ್ಟೋ ಸಾರಿ ಹಾಗೆ ಗುದ್ದು ನುಗ್ಗಿದ ನಾಯಿಗಳು ಹೊರಗೆ ಬರದೇ ಇದ್ದುದೂ ಉಂಟು. ಪುಟ್ಟಣ್ಣ ಒಂದು ಉದ್ದವಾದ ಬಳ್ಳಿಕೋಲನ್ನು ಕಡಿದು. ಒಂದು ಒಂದೂವರೆ ಅಡಿಯಷ್ಟು ಅಗಲವಾಗಿದ್ದ ಗುದ್ದಿನ ಬಾಯಲ್ಲಿ ಕುಳಿತುಕೊಂಡು, ಆ ಕೋಲನ್ನು ಒಳಗೆ ತೂರಿಸಿ ಅಲ್ಲಾಡಿಸಿ, ಕಣೆಹಂದಿ ಹತ್ತಿರದಲ್ಲಿದೆಯೋ ಎಂಬುದನ್ನು ಪತ್ತೆಹಚ್ಚಲು ಪ್ರಾರಂಭಿಸಿದನು. ಸ್ವಲ್ಪ ಸಮಯದಲ್ಲಿಯೆ ಬಳ್ಳಿಕೋಲಿನ ತುದಿ ಹಂದಿಯ ಮೈಯ ಕಣೆಗಳಿಗೆ ತಗುಲಿದ ಅನುಭವವಾಗಲು ಪುಟ್ಟಣ್ಣ ಆ ಶುಭ ಮತ್ತು ಸುಲಭವಾದ ಸಮಾಚಾರಗಳನ್ನು ಇತರರಿಗೆ ತಿಳಿಸಿ, ಗುದ್ದಿನಬಾಯಿಗೆ ಕಸಕಟ್ಟಿಗೆ ಹಾಕಿ, ಬೆಂಕಿಮಾಡಿ, ಹೊಗೆ ಹಾಕಬೇಕೆಂದು ನಿರ್ಧರಿಸಿದನು. ರೂಬಿಯೂ ಕೂಡ ಒಂದೆರಡು ಗುದ್ದು ನುಗ್ಗಿ ಸಾಹಸಮಾಡಿ ಹೊರಗೆ ಬಂದಿತು. ಅದು ಹಿಂದೆ ಮುಳ್ಳುಹಂದಿಗಳ ಮೇಲೆ ಬಿದ್ದುಕಣೆಗಳ ರುಚಿಯನ್ನೂ ಅನುಭವಿಸಿದ್ದುದರಿಂದ ಮೇಲೆ ಬೀಳುವ ಸಾಹಸಕ್ಕೆ ಹೋಗದೆ, ಪ್ರಾಣಿ ಅಲ್ಲಿದೆ ಎಂಬುದನ್ನು ಯಜಮಾನನಿಗೆ ತಿಳಿಸಲು ಎಷ್ಟುಬೇಕೋ ಅಷ್ಟನ್ನು ಮಾತ್ರ ನಿರ್ವಹಿಸುತ್ತಿತ್ತು.

ಬೈರ, ಸಿದ್ದ, ಹಳೆಪೈಕದ ತಿಮ್ಮ ಮೂವರೂ ಸುತ್ತಮುತ್ತ ಇದ್ದ ಮರಮಟ್ಟುಗಳಿಂದ ಬೆಂಕಿಹಾಕಲು ಸೌದೆ ಸದೆ ಕಟ್ಟಿ ಸೊಪ್ಪುಗಳನ್ನು ಸರಬರಾಯಿ ಮಾಡತೊಡಗಿದರು. ಹೂವಯ್ಯ, ರಾಮಯ್ಯ, ವಾಸು ಮೂವರೂ ಗುದ್ದಿನ ಬಾಯಬುಡದಲ್ಲಿ ಕುಳಿತಿದ್ದ ಪುಟ್ಟಣ್ಣನ ಸುತ್ತಲೂ ಬಾಗಿನಿಂತು ಮಾತಾಡುತ್ತಿದ್ದರು. ಸುತ್ತಲೂ ತರುಸಾಂದ್ರವಾಗಿದ್ದ ಅರಣ್ಯ ಗಿರಿಶ್ರೇಣಿಗಳು ಅನಂತವಾಗಿ ಪಸರಿಸಿದ್ದುವು. ನಡುಹಗಲಾಗಿದ್ದರೂ ವನದ ಛಾಯೆಯ ಬನಗತ್ತಲು ಕವಿದು ವಾತಾವರಣ ಶೀತಲವಾಗಿತ್ತು.

“ಎಷ್ಟು ದೂರದಲ್ಲಿದೆಯೋ ಕಣ್ಹಂದಿ ?” ಎಂದನು ವಾಸು.

“ಮೂರು ನಾಲ್ಕು ಮಾರಿನ ಒಳಗೆ ಇರಬೇಕು” ಎಂದು ಪುಟ್ಟಣ್ಣ ಬಳ್ಳಿಕೋಲನ್ನು ಮತ್ತೆ ಗುದ್ದಿನೊಳಗೆ ನುಗ್ಗಿಸಿ ಆಡಿಸುತ್ತಾ “ಕೇಳ್ತೇನು ಕಣೆಸದ್ದು !” ಎಂದನು.

ಮೂವರೂ ಗುದ್ದಿನ ಬಾಯಿಗೆ ಕಿವಿಗೊಟ್ಟು ಆಲಿಸಿದರು. ಆ ಅರಣ್ಯನೀರವದಲ್ಲಿ ಹಂದಿಯ ಕಣೆಗಳ ಸದ್ದು ಚೆನ್ನಾಗಿ ಕೇಳಿಸಿದಂತಾಯಿತು.

ಇದ್ದಕ್ಕಿದ್ದ ಹಾಗೆ ಪುಟ್ಟಣ್ಣ ಬೆಚ್ಚಿಬಿದ್ದವನಾಗಿ ಕೈಲಿದ್ದ ಬಳ್ಳಿಕೋಲನ್ನು ಕೆಳಗೆ ಹಾಕಿ, ತನ್ನ ಕಂಬಳಿಯನ್ನು ತುಡುಕಿ, ಗುದ್ದಿನ ಬಾಯಿಗೆ ಆನಿಸಿ ಹಿಡಿದು “ನೋಡಿ, ನೋಡೀ, ಕಣ್ಹಂದಿ ಹೊರಗೆ ಹೊರಡ್ತು ಅಂತಾ ಕಾಣ್ತದೆ ! ಸ್ವಲ್ಪ ದೂರ ಹೋಗಿ” ಎಂದನು.

ಹೂವಯ್ಯ ರಾಮಯ್ಯರಿಬ್ಬರೂ ತಮ್ಮ ತಮ್ಮ ಬಂದೂಕುಗಳನ್ನು ಹಿಡಿದು ಸಿದ್ಧರಾಗಿ ದೂರ ನಿಂತರು. ನಾಯಿಗಳೆಲ್ಲ ಉದ್ವೇಗದಿಂದ ಹಾರಾಡತೊಡಗಿದುವು.

ಇದ್ದಕ್ಕಿದ್ದ ಹಾಗೆ ಮುಳ್ಳುಹಂದಿಯ ತಲೆ ಗುದ್ದಿನ ಬಾಯಲ್ಲಿ ಕಾಣಸಿಕೊಂಡಿತು. ದೈತ್ಯನಾದ ಪುಟ್ಟಣ್ಣ ಕೂತಲ್ಲಿಂದ ಸರಿಯದೆ, ಹೆದರದೆ ಹಿಂದೆಗೆಯದೆ ನಾಲ್ಕಾರು ಮಡಿಕೆ ಮಡಿಸಿದ್ದ ತನ್ನ ಕಂಬಳಿಯನ್ನು ಅದರ ಕುತ್ತಿಗೆಯ ಬಳಿಗೆ ಹಾಕಿ, ಬಲವಾಗಿ ಅದುಮಿ ಹಿಡಿದನು. ಪ್ರಾಣಿಯ ದೇಹವೆಲ್ಲಿಯಾದರೂ ಗುದ್ದಿನ ಹೊರಗಡೆ ಇದ್ದಿದ್ದರೆ ಅವನಿಗೆ ಬಾಣಪ್ರಯೋಗದ ಶಾಸ್ತಿಯಾಗದೆ ಇರುತ್ತಿರಲಿಲ್ಲ. ಆದರೆ ದೇಹ ಗುದ್ದಿನೊಲಗಿದ್ದುದರಿಂದ ಒಂದೊಂದಕ್ಕೆ ಬಡಿಯುತ್ತಿದ್ದ ಕಣೆಗಳ ಸದ್ದು ಮಾತ್ರ ಕೇಳಿಸುತ್ತಿತ್ತು. ಮುಳ್ಳುಹಂದಿಗೆ ತಲೆಯಲ್ಲಿ ಮಾತ್ರ ಕಣೆಗಳಿಲ್ಲ. ಅದಕ್ಕೆ ಅದೊಂದು ಭಾಗವೇ ನಿರಾಯುಧವಾದುದು.

ಮಿಂಚಿನ ವೇಗದಿಂದ ಪುಟ್ಟಣ್ಣ ಎಡಗೈಯಿಂದ ಹಂದಿಯ ತಲೆಯನ್ನು ಬಲವಾಗಿ ಒತ್ತಿ ಹಿಡಿದುಕೊಂಡು, ಬಲಗೈಯಿಂದ ತನ್ನ ಕೋವಿಯ ಚೀಲದಲ್ಲಿದ್ದ ಬಾಕುವನ್ನು ಈಚೆಗೆಳೆದುಕೊಂಡು, ಹಂದಿಯ ತಲೆಯನ್ನು ಕಚಕಚಕಚನೆ ಕೊಚ್ಚತೊಡಗಿದನು.

ಆ ಮಹೂರ್ತ ನೋಡುತ್ತಿದ್ದವರಿಗೆ ಮುಳ್ಳಿನ ಮೇಲೆ ನಿಂತಹಾಗಿತ್ತು. ಯಾರೊಬ್ಬರೂ ಮಾತಾಡಲೂ ಸಮರ್ಥರಾಗಲಿಲ್ಲ. ಹಂದಿ ಎಲ್ಲಿ ಮೈಮೇಲೆ ನುಗ್ಗಿ ಪುಟ್ಟಣ್ಣನ ಗತಿ ಏನಾಗುತ್ತದೆಯೋ ಎಂದು ನಿಂತಿದ್ದವರೆಲ್ಲ ಉಸಿರಿಕ್ಕದಿದ್ದರು. ಆದರೆ ಒಂದೆರಡು ನಿಮಿಷಗಳಲ್ಲಿ ಹಂದಿಯ ಆಟ ತಣ್ಣಗಾಯಿತು. ಒಡೆದು ಚೂರುಚೂರಾದ ಅದರ ತಲೆಯೋಡಿನಿಂದ ಕೋಡಿಹರಿಯುತ್ತಿದ್ದ ರಕ್ತಮಿಶ್ರವಾದ ಬಿಳಿಯ ಮೆದುಳು ಬೀಭತ್ಸವಾಗಿ ತೋರತೊಡಗಿತು. ಆದರೂ ಪುಟ್ಟಣ್ಣನ ದೈತ್ಯಾವೇಶ ಇಳಿಯಲಿಲ್ಲ. ಬಾಕುವಿನಿಂದ ಕಣ್ಣುಬೇಳೆ, ಕಿವಿ, ನೆತ್ತಿ, ಮೂತಿ, ಬಾಯಿ ಇವುಗಳನ್ನು ಹುಲ್ಲು ಕೊಚ್ಚುವಂತೆ ಕೊಚ್ಚುತ್ತಿದ್ದನು. ಅದನ್ನು ನೋಡಿದ ಹೂವಯ್ಯನಿಗೆ ಕಣ್ಣು ಮುಚ್ಚಿಕೊಳ್ಳುವಂತಾಯಿತು. ಅನೇಕ ಕರುಣೆಯ ಕಾರ್ಯಗಳನ್ನು ಮಾಡುತ್ತಿದ್ದ ಪುಟ್ಟಣ್ಣನೇ, ನಾಯಿಯ ಕಾಲಿಗೆ ಮುಳ್ಳು ಚುಚ್ಚಿ ಕೀವಾದರೆ ಅದಕ್ಕೆ ಶಸ್ತ್ರಚಿಕಿತ್ಸೆಮಾಡಿ ಔಷಧಿ ಹಾಕಿ ಶುಶ್ರೂಷೆ ಮಾಡಿ ಸಲಹುತ್ತಿದ್ದ ಕರುಣಾಶಾಲಿ ಪುಟ್ಟಣ್ಣನೇ, ಈ ಭೀಮ ಭಯಾನಕ ಭೀಭತ್ಸವಾದ ರುದ್ರಕಾರ್ಯಗಳಲ್ಲಿ ಉದ್ರಿಕ್ತನಾಗಿರುವುದನ್ನು ಕಂಡು, ಎದೆಯಮೇಲೆ ಗರಗಸ ತೀಡಿದಂತಾಯಿತು ! ‘ಸಾಕಪ್ಪಾ ಈ ಹಾಳು ಷಿಕಾರಿ’. ‘ಇನ್ನು ಮೇಲೆ ಕೋವಿ ಹಿಡಿದು ಕೊಲೆಗೆಲಸಕ್ಕೆ ಕಾಡೇರಬಾರದು’ ಎಂದು ಮನಸ್ಸಿನಲ್ಲಿ, ಹಿಂದೆ ಅನೇಕ ಸಾರಿ ಮಾಡಿದ್ದಂತೆ ಮತ್ತೆ ಪ್ರತಿಜ್ಞೆ ಮಾಡಿದನು !

ಹಂದಿಯ ತಲೆ ನುಚ್ಚುನುಚ್ಚಾಗಿ ಅದರ ಜೀವ ಸಂಪೂರ್ಣವಾಗಿ ಹೋದ ಮೇಲೆಯೇ ಆವೇಶವಿಳಿದು ಪುಟ್ಟಣ್ಣ ನೀಳವಾಗಿ ನಿಡುಸುಯ್ದು, ವಿಜಯೋನ್ಮಾದದ ಒಂದು ಠೀವಿಯಿಂದ ಕಣೆಹಂದಿಯನ್ನು ಗುದ್ದಿನಿಂದ ಎಳೆದು ಬೀಸಿ ಹೊರಗೆ ಬಿಸಾಡಿದನು. ನಾಯಿಗಳೆಲ್ಲ ಮುತ್ತಿ ಅಲುಬತೊಡಗಿದುವು.

ಸಾಯಂಕಾಲ ಹೂವಯ್ಯ ಸುರಕ್ಷಿತವಾಗಿ ಮನೆ ಸೇರಿದಾಗ ಉದ್ವೇಗ ಭಯಾಶಂಕೆಗಳಿಂದ ನೊಂದು ಬೆಂದಿದ್ದ ತಾಯಿ ನಾಗಮ್ಮನವರಿಗೆ ಹೋದಜೀವ ಬಂದಂತಾಯಿತು. ಅದರ ಹೃದಯದಲ್ಲಿ ಮೂಡಿದ ಕೃತಜ್ಞತೆಯ ಭಕ್ತಿಯ ಮಂಗಳಾರುತಿಯ ಮಹಾಜ್ವಾಲೆ ಅಂತರಿಕ್ಷವನ್ನು ದಾಟಿ ಅತೀತಕ್ಕೆ ಅರ್ಪಿತವಾಯಿತು.