ಚಂದ್ರಯ್ಯಗೌಡರ ದಹನ ಸಂಸ್ಕಾರಕ್ಕೆ ನಂಟರಿಷ್ಟರೆಲ್ಲರೂ ಕಿಕ್ಕಿರಿದು ಬಂದಿದ್ದರು. ಮುತ್ತಳ್ಳಿಯವರೂ ಸೀತೆಮನೆಯವರೂ ಕೆಳಕಾನೂರಿನವರೂ ನೆಲ್ಲುಹಳ್ಳಿಯವರೂ ಹಿಂದಿನ ತೊಂಡು ತೊಳಸುಗಳನ್ನೆಲ್ಲ ಮರೆತು ನೆರೆದಿದ್ದರು. ಸಿಂಗಪ್ಪಗೌಡರೂ ಕೂಡ ಬಂದಿದ್ದರು. ಆದರೆ ಹೂವಯ್ಯ ಬಂದಿರಲಿಲ್ಲ. ತನಗೆ ಪ್ರತಿನಿಧಿಗಳಾಗಿ ಸೋಮ ಮತ್ತು ಪುಟ್ಟಣ್ಣರನ್ನು ಕಳುಹಿಸಿದ್ದನು. ಮುತ್ತಳ್ಳಿಯಿಂದ ಪುಟ್ಟಮ್ಮ, ಚಿನ್ನಯ್ಯ, ಶ್ಯಾಮಯ್ಯಗೌಡರು ಇವರೆಲ್ಲರೂ ಬಂದಿದ್ದರೂ ಸೊಸೆಯಾಗಿದ್ದ ಸೀತೆ ಬಂದಿರಲಿಲ್ಲ.

ಸಂಸ್ಕಾರಗಳಿಲ್ಲವೂ ಮುಗಿದಮೇಲೆ ಸುಬ್ಬಮ್ಮ ತಿಂಗಳುಗಟ್ಟಲೆ ತಮ್ಮ ಕತ್ತಲೆಯ ಕೋಣೆಯಲ್ಲಿ ಕೂತು ಅತ್ತು ಅತ್ತು ದುಃಖಿಸತೊಡಗಿದಳು. ಅವರೂ ಇವರೂ ನಂಟರೂ ಇಷ್ಟರೂ ಮನೆಗೆ ಬಂದುಬಂದವರೆಲ್ಲರೂ ಬಂದು ’ಮಾತಾಡಿಸಿ’ ಹೋಗುತ್ತಿದ್ದರು. ನಾನಾ ವಿಧವಾಗಿ ಚಿತ್ರವಿಚಿತ್ರವಾಗಿ ಸಮಾಧಾನ ಹೇಳುತ್ತಿದ್ದರು; ಸಹಾನುಭೂತಿ ತೋರಿಸುತ್ತಿದ್ದರು. ಆಕೆ ತಂದೆ ತಾಯಿಗಳು ತವರುಮನೆಗೆ ಕರೆದರೂ ಅಲ್ಲಿಗೆ ಹೋಗಲೊಪ್ಪಲಿಲ್ಲ. ನೆಲ್ಲುಹಳ್ಳಿಗೆ ಪುನಃ ಕಾಲಿಡಿವುದಿಲ್ಲವೆಂದು ಆಕೆ ಅಲ್ಲಿಂದ ಹೊರಟಾಗಲೆ ಮನಸ್ಸುಮಾಡಿದ್ದಳು.

ಸುಬ್ಬಮ್ಮ ಮೊದಮೊದಲು ಪತಿಯ ನಿಧನಕ್ಕಾಗಿ ದುಃಖಿಸಿದರೂ ಕಡೆಕಡೆಗೆ ತನಗೊದಗಿದ ವೈಧವ್ಯದ ದುಃಸ್ಥಿತಿಗಾಗಿಯೆ, ತನಗೆ ಮುಂದೇನು ಗತಿ ಎಂದು ಆತ್ಮಕನಿಕರದಿಂದ ಕಣ್ಣೀರಿನಲ್ಲಿ ಮೀಯುತ್ತಿದ್ದಳು. ದಿನವೂ ಸಾಯುವವರಿಗೆ ಅಳುವರಾರು ಎಂಬ ಗಾದೆಯಂತೆ ದಿನವೂ ಅಳುವವರಿಗೆ ಸಮಾಧಾನ ಹೇಳುವವರಾರು? ಬಂದು ಬಂದು ಸಮಾಧಾನ ಹೇಳುತ್ತಿದ್ದ ಬಂಧುಗಳಿಗೆ ಬೇಜಾರಾಯಿತು. ಅಲ್ಲದೆ ಸತ್ತವರಿಗೆ ಅಳುತ್ತಾ ಕುಳಿತರೆ ಬದುಕಿರುವವರಿಗೆ ದುಡಿಯುವವರಾರು? ಅವರವರಿಗೆ ಅವರವರ ಕೆಲಸ ಕಾರ್ಯಗಳಿರುತ್ತವೆಯಷ್ಟೆ? ನಂಟರಿಷ್ಟರಿಗೆ ಬೇಜಾರಾದ ಕೆಲದಿನಗಳಲ್ಲಿಯೆ ಸುಬ್ಬಮ್ಮನಿಗೂ ಬೇಜಾರಾಗುತ್ತಾ ಬಂದಿತು. ದುಃಖವೂ ಕೂಡ ಅತಿಪರಿಚಯದಿಂದ ಮಂದನೀರಸವಾಗುತ್ತದೆಂದು ತೋರುತ್ತದೆ!

ಕಡೆಕಡೆಗೆ ಸುಬ್ಬಮ್ಮನನ್ನು ಸಮಾಧಾನ ಮಾಡುವುದಕ್ಕೆ ಯಾರೂ ಹೋಗದಿದ್ದುದನ್ನು ಕಂಡು ಸೇರೆಗಾರರು ಒಂದು ಸಾರಿ ಆಕೆಯಿದ್ದ ಕೋಣೆಗೆ ಹೋಗಿ ದೂರದಲ್ಲಿ, ಚಾಪೆಯ ಮೇಲೆ ಗೋಡೆಗೊರಗಿಕೊಂಡು ಕೂತರು ಅಳುವನ್ನು ನಿಲ್ಲಿಸಿದ್ದ ಸುಬ್ಬಮ್ಮ ಅವರನ್ನು ಕಂಡಕೂಡಲೆ ಮತ್ತೆ ಅಳತೊಡಗಿದಳು. ಬಹಳ ಕಾಲದ ಅಭ್ಯಾಸದಿಂದ ಆಕೆಗೆ ಬೇಕೆಂದಾಗ ಅಳುಬರುತ್ತಿತ್ತು.

ಸೇರೆಗಾರರು ಅತ್ಯಂತ ಸಕರುಣವಾಣಿಯಿಂದ, ಹೃತ್ಪೂರ್ವಕವಾಗಿ, ತಾವು ದಶಾವತಾರದ ಆಟಗಳಲ್ಲಿ ಕೇಳಿ ತಿಳಿದಿದ್ದ ನೀತಿಧರ್ಮತತ್ವಗಳೆನ್ನೆಲ್ಲ ಅಡಕಮಾಡಿ, ಉಪದೇಶ ಮಾಡತೊಡಗಿದರು.

“ಸುಮ್ಮನೆ ಅತ್ತರೆ ಏನು ಪ್ರಯೋಜನ, ಅಮ್ಮಾ? ಭಗವಂತ ಕೊಟ್ಟಿದ್ದು ಭಗವಂತ ತೆಗೆದುಕೊಂಡು ಹೋಗ್ತಾನೆ, ನಾವ್ಯಾರು ಕೇಳೋಕೆ? ಎಲ್ಲ ಅವನ ಲೀಲೆ, ಅವನು ಕೊಟ್ಟದ್ದನ್ನು ನಾವು ಅನುಭವಿಸಬೇಕು….ಸಾವು ಯಾರಿಗೂ ತಪ್ಪಿದ್ದಲ್ಲ. ಅವರು ಮೊನ್ನೆ ಹೋದರೆ, ಇನ್ನೊಬ್ಬರು ನಾಳೆ ಹೋಗ್ತಾರೆ. ಏನೋ ಅವರ ಕಾಲ ಅವರು ಪೂರೈಸಿಕೊಂಡು ಪುಣ್ಯಕಟ್ಟಿಕೊಂಡು ಹೋದರು. ಇನ್ನು ಅತ್ತರೆ ಹಿಂದಕ್ಕೆ ಬರ‍್ತಾರೇ? ದೇವರಮೇಲೆ ಭಾರಹಾಕಿ, ನಮ್ಮ ಮುಂದಿನ ಜೀವನ ಸುಖವಾಗಿ ಮಾಡಿಕೊಂಡರಾಯ್ತು! ಯಜಮಾನರ ಕೈಹಿಡಿದ ನೀವೇ ಹೇಂಗಾದರೂ ಇನ್ನು ಮೇಲೆ ಮನೆ ಆಡಳಿತ ನೋಡಿಕೊಳ್ಳಬೇಕಾಗುತ್ತದೆ, ರಾಮಯ್ಯಗೌಡರಿಗೆ ಚಿಂತೆ ಹಿಡಿದು, ಅವರಿಗೆ ಮನೆಮೇಲೆ ಮನಸ್ಸೇ ಇಲ್ಲ. ತೀರಿಹೋದವರ ಕೀರ್ತಿ ಉಳಿಸಬೇಕಾದರೆ, ನೀವೇ ಸೈ ಇನ್ನು ಮೇಲೆ ನೀವೇ ಕಾನೂರಿಗೆ ಹೆಗ್ಗಡಿತಮ್ಮ. ನೀವೇ ಹೀಂಗೆ ದುಃಖಾ ಮಾಡ್ತಾ ಕೋಣೆ ಸೇರಿಬಿಟ್ಟರೆ, ಮನೆಗತಿ ಏನಾಗಬೇಕಮ್ಮ? ಏನೋ ಸವತಿ ಮಗನಾದರೂ ನಿಮ್ಮ ಮಗನ ಹಾಗೆ ವಾಸು ಇದ್ದಾನೆ. ನೀವು ಮನಸ್ಸು ಮಾಡಿದರೆ ಈ ಮನೆ ಮುಳುಗಿ ಹೋಗದ ಹಾಗೆ ಉಳಿಸಬಹುದು. ನಾನೇನೋ ನಿಮ್ಮ ಮನೆ ಉಪ್ಪು ಅನ್ನ ತಿಂದದ್ದಕ್ಕೆ ಋಣ ತೀರಿಸಲೇಬೇಕೆಂದು ಮನಸ್ಸು ಮಾಡಿದ್ದೇನೆ…”

ಸೇರೆಗಾರರು ಗಟ್ಟದಮೇಲಿನವರು ಮಾತಾಡುವಂತೆ ಮಾತಾಡಿ, ಸಹಾನುಭೂತಿ ತೋರಿಸಿ, ಮುಂದಿನ ಬಾಳಿನ ಹೊಲಬನ್ನು ಸೂಚಿಸಲು, ಸುಬ್ಬಮ್ಮಗೆ ಹೊಸ ಸಾಹಸದ ಹುರುಪುಂಟಾಯಿತು. ತಾನು ಕಾನೂರು ಮನೆಗೆ ಸರ್ವಾಧಿಕಾರಿಣಿಯಾದ ಹೆಗ್ಗಡಿತಿ ಎಂಬುದನ್ನು ಕೇಳೆ, ಹೊಸಪಟ್ಟ ಸಿಕ್ಕಿದಂತೆ ಉತ್ಸಾಹಗೊಂಡಳು. ಸೇರೆಗಾರರ ಸಹಾಯದಿಂದ ಕಾನೂರು ಹೆಗ್ಗಡಿತಿಯಾಗಿ, ಎಲ್ಲರ ಗೌರವ ಪ್ರಶಂಸೆಗಳಿಗೆ ಪಾತ್ರಳಾಗುತ್ತೇನೆಂದು ನಿರ್ಧರಿಸಿದಳು.

ಕೆಲದಿನಗಳಲ್ಲಿಯೆ ಸುಬ್ಬಮ್ಮ ಅಳುವುದನ್ನು ನಿಲ್ಲಿಸಿ, ಕೋಣೆಯಿಂದ ಹೊರಗೆ ಬಂದು, ಮನೆವಾಳ್ತೆಯಲ್ಲಿ ಹೊಸ ಉತ್ಸಾಹದಿಂದಲೂ ದಕ್ಷತೆಯಿಂದಲೂ ಪಾಲುಗೊಂಡಳು. ಆಶ್ಚರ್ಯವೇನೆಂದದರೆ, ಸೇರೆಗಾರರು ಹೇಳಿದಂತೆಲ್ಲದೆ ರಾಮಯ್ಯನೂ ಹೊಸ ಉತ್ಸಾಹದಿಂದಲೂ ದಕ್ಷತೆಯಿಂದಲೂ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾ, ಕೆಲಸಕಾರ್ಯಗಳಲ್ಲಿ ಆಸಕ್ತನಾದನು.

ರಾಮಯ್ಯನ ನೂತನಾಸಕ್ತಿಗೆ ಪ್ರತ್ಯಾಶೆಯೇ ಮುಖ್ಯ ಕಾರಣವಾಗಿತ್ತು. ತಂದೆ ತೀರಿಕೊಂಡಮೇಲೆ ಮನೆಗೆ ತಾನೇ ಸಂಪೂರ್ಣವಾಗಿ ಯಜಮಾನನೆಂಬ ಹೆಮ್ಮೆ ಅವನ ಬೆನ್ನುಮೂಳೆಯನ್ನು ಸ್ವಲ್ಪ ನೆಟ್ಟಗೆ ಮಾಡಿತ್ತು. ಅಲ್ಲದೆ ಚಂದ್ರಯ್ಯಗೌಡರ ದೆಸೆಯಿಂದ ಮನೆಗೆ ವೈರಿಗಳಾಗಿದ್ದವರೆಲ್ಲರೂ ಈಗ ಮಿತ್ರರಾಗಿ ಹತ್ತಿರ ಹತ್ತಿರ ಬರತೊಡಗಿದರು. ಮುತ್ತಳ್ಳಿಯವರಿರಲಿ, ಸೀತಮ್ಮನೂ ಸಿಂಗಪ್ಪಗೌಡರೂ ಕೂಡ ರಾಮಯ್ಯನಿಗೆ ಕೇವಲ ಆಪ್ತರಾಗಿ ಬುದ್ಧಿ ಹೇಳತೊಡಗಿದರು. ಎಲ್ಲರೂ ಅವನಿಗೆ ಕಷ್ಟ ಸಮಯದಲ್ಲಿ  ನೆರವಾಗಲು ಸಂತೋಷಿಸುತ್ತಿದ್ದರು. ಹೀಗೆ ಸನ್ನಿವೇಶದ ಬದಲಾವಣೆಗೆ ತಕ್ಕಂತೆ ರಾಮಯ್ಯನ ಆವೇಶವೂ ಬದಲಾವಣೆ ಹೊಂದಿತ್ತು. ಎಲ್ಲಕ್ಕಿಂತಲೂ ಅತಿ ರಹಸ್ಯವಾಗಿ, ಅತಿ ಮುಖ್ಯವಾಗಿ, ಸೀತೆಯ ಪ್ರತ್ಯಾಗಮನದ ಆಶೆ ಅವನಿಗೆ ಇಮ್ಮಡಿ ಉತ್ಸಾಹಕರವಾಗಿತ್ತು.

ಅವನ ಆಶೆಗೆ ಆಧಾರವಿರದಿರಲಿಲ್ಲ. ಶ್ಯಾಮಯ್ಯಗೌಡರು ತಮ್ಮ ಮಗಳಿಗೆ “ನಿನ್ನ ಮಾವ ತೀರಿಹೋಗಿದ್ದಾರೆ, ಇನ್ನೇನು ನಿನಗೆ ಹೆದರಿಕೆ ಬೇಡ. ಗಂಡನ ಮನೆಗೆ ಹೋಗಿ, ಮುತ್ತೈದೆಯಾಗಿ ಬಾಳು. ಮದುವೆಯಾದ ಗಂಡನ್ನ ಬಿಟ್ಟು ಹೀಂಗಿರೋದು ಚೆನ್ನಾಗಿಲ್ಲ. ಜನರ ಬಾಯಿಗೆ ಬರಬೇಕಾಗುತ್ತದೆ” ಎಂದು ಮೊದಲಾಗಿ ಸೀತೆಯನ್ನು ಒತ್ತಾಯಪಡಿಸತೊಡಗಿದ್ದರು. ಗೌರಮ್ಮನವರೂ ಅದೇ ಅರ್ಥ ಬರುವಂತೆ ಮಗಳಿಗೆ ಸಮಯ ಸಿಕ್ಕಾಗಿಲ್ಲ ಹೇಳತೊಡಗಿದ್ದರು. ಚಿನ್ನಯ್ಯನೂ ಸೀತೆಯ ಮುಂದೆ ರಾಮಯ್ಯನಲ್ಲಿ ಅವರ ತಂದೆ ತೀರಿಕೊಂಡಮೇಲೆ ಆಗಿರುವ ವ್ಯತ್ಯಾಸವನ್ನು ಕುರಿತು ಶ್ಲಾಘಿಸುತ್ತ, ಆಕೆಯ ಮನಸ್ಸನ್ನು ತಿರುಗಿಸಲೆಳಸಿದನು. ಅಲ್ಲದೆ ಚಂದ್ರಯ್ಯಗೌಡರು ತೀರಿಕೊಂಡ ಎರಡು ತಿಂಗಳೊಳಗಾಗೆ ರಾಮಯ್ಯನನ್ನು ಮುತ್ತಳ್ಳಿಗೆ ಕರೆಸಿಕೊಂಡು ಬೀಗರುಪಚಾರ ಮಾಡಿದರು. ಇದೆಲ್ಲದರ ಜೊತೆಗೆ ಶ್ಯಾಮಯ್ಯಗೌಡರು ಸಿಂಗಪ್ಪಗೌಡರೊಡನೆ “ಹೂವಯ್ಯ ಇಲ್ಲಿಗೆ ಬರುತ್ತಾ ಇದ್ದರೆ ಸರಿಹೋಗುವುದಿಲ್ಲ. ಸೀತೆ ಗಂಡನ ಮನೆಗೆ ಹೋಗುವವರೆಗೆ ಇಲ್ಲಿಗೆ ಬರುವುದು ಬೇಡ ಅಂತಾ ಅವನಿಗೆ ಹೇಳಿ” ಎಂದು ಹೇಳಿಕಳುಹಿಸಿದ್ದರು.

ಸಿಂಗಪ್ಪಗೌಡರು ಆ ವಿಷಯನ್ನು ಹೂವಯ್ಯನಿಗೆ ತಿಳಿಸಿ “ಹೌದಪ್ಪ, ನೀನ್ಯಾಕೆ ಅವರಿಷ್ಟಕ್ಕೆ  ಅಡ್ಡಹೋಗ್ತಿಯಾ? ಅವರ ಮಗಳನ್ನು ಅವರು ಏನಾದ್ರೂ ಮಾಡಿಕೊಳ್ಳಲಿ. ಆಮೇಲೆ ಸುಮ್ಮನೆ ನಿನ್ನ ಮೇಲೆ ದೂರು ಯಾಕೆ?” ಎಂದು ರಾಮಯ್ಯನ ಪರವಾಗಿ ಮಾತಾಡಿದರು.

ಗಡ್ಡಮೀಸೆಗಳ ಸಂದಿಯಲ್ಲಿ ಹೂವಯ್ಯನ ಮುಖ ಕೆಂಪೇರಿದುದನ್ನು ಕಂಡು ಸಿಂಗಪ್ಪಗೌಡರು ಚಕಿತರಾದರು. ಒಡನೆಯೆ ಅವನ ಕಠಿಣವಾಣಿ ಹೊರಹೊರಟಿತು. ಕಲ್ಲಿನಂತೆ ನಿಶ್ಚಲನಾಗಿ ಮಾತಾಡಿದನು:

“ಏನೆಂದೆ? ’ಅವರ‍ಮಗಳನ್ನು ಅವರು ಏನಾದರು ಮಾಡಿಕೊಳ್ಳಲಿ! ನಿನಗೇಕೆ ದೂರ?’ ಎಂದೆಯಲ್ಲವೆ? ಬಹಳ ಚೆನ್ನಾಗಿದೆ. ಈ ಬುದ್ಧಿ ನಿನಗೆ ಮೊದಲೆಲ್ಲಿ ಹೋಗಿತ್ತು! ಚಿಕ್ಕಯ್ಯ ಸತ್ತಕೂಡಲೆ ನೀವೆಲ್ಲರೂ ಬಣ್ಣ ಬದಲಾಯಿಸಿದ ಹಾಗೆ ಕಾಣ್ತದೆ. ನೀನೇ ಹೇಳುತ್ತಿದ್ದೆ; ಸೀತೆಯ ಇಷ್ಟಕ್ಕೆ ವಿರುದ್ಧವಾಗಿ ಮದುವೆ ಮಾಡಿದ್ದಾರೆ ಎಂದು. ಜೋಯಿಸರು ಕೈ ಬೆಚ್ಚಗೆ ಮಾಡಿಕೊಂಡು ಜಾತಕ ಹೇಳಿದ್ದಾರೆ ಎಂದು! ನೀನೇ ಹೇಳಿದ್ದೆ ನಿಜವಾಗಿಯೂ ಗಂಡು ಹೆಣ್ಣಿಗೆ ತಾಳಿ ಕಟ್ಟಲಿಲ್ಲಾ ಎಂದು ನೀನೇ ಹೇಳಿದ್ದೆ; ಸೀತೆಯನ್ನು ಖಂಡಿತ ಕಾನೂರಿಗೆ ಕಳಿಸಬೇಡ ಎಂದು! ಈಗ ಇದ್ದಕ್ಕಿದ್ದ ಹಾಗೆ ಗೋಸುಂಬೆಯ ಹಾಗೆ ಬಣ್ಣ ಬದಲಾಯಿಸಿ ಅವಿವೇಕ ಆಡ್ತಿದ್ದೀಯಲ್ಲ? ಹೂವಿನ ಮೇಲೆ ಕೂತುಕೊಳ್ಳುವ ಚಿಟ್ಟೆಯನ್ನು ಹಿಡುಕೊಂಡುಹೋಗಿ ಬೆಂಕಿಗೆ ಹಾಕಲು ಹುನಾರು ಮಾಡ್ತಿದ್ದೀರಲ್ಲವೆ ನೀವೆಲ್ಲ ಸೇರಿ!…. ಸೀತೆಗೆ ಒಪ್ಪಿಗೆ ಇದೆಯೇನು ಕಾನೂರಿಗೆ ಹೋಗೋಕೆ?”

“ಹಾಗಂದ್ರೇನೋ ನೀ ಹೇಳೋದು? ಸೀತೆ ಒಪ್ಪಿಗೆಯಂತೆ, ಸೀತೆ ಒಪ್ಪಿಗೆ?” ಸಿಂಗಪ್ಪಗೌಡರೂ ನಸುಕೆರಳಿಯೆ ಮಾತಾಡತೊಡಗಿದ್ದರು. “ಕೈಹಿಡಿದ ಗಂಡನ ಮನೆಗೆ ಹೋಗೋಕೆ ಅವಳ ಒಪ್ಪಿಗೆ ಯಾಕೆ? ನೀನೇನೋ ಹೊಸ ಕಾನೂನು ಹೇಳೋಹಾಗಿದೆ!”

“ಕಾನೂನು ಕಲ್ತೇ ನೀವೆಲ್ಲ ಬೂದಿಹೊಯ್ಕೊಂಡಿದ್ದು! ಕೈಹಿಡಿದ ಗಂಡನಂತೆ? ಯಾರು ಕೈಹಿಡಿದೋರು?”

“ಯಾರು ಕೈಹಿಡಿದೋರು? ರಾಮಯ್ಯ!”

“ಸೀತೆ?”

“ಹೊಳೆನೀರಿಗೆ ದೊಣೆನಾಯ್ಕನ ಅಪ್ಪಣೆ? ನೀನೊಬ್ಬ!”

“ಇಲ್ಲಿ ಕೇಳು, ಸಿಂಗಪ್ಪ ಕಕ್ಕಯ್ಯ! ನಿನಗೆ ಒಂದು ತತ್ವವಿಲ್ಲ; ಒಂದು ಮಾರ್ಗವಿಲ್ಲ. ಗಾಳಿ ಎತ್ತಕಡೆ ಬೀಸಿದರೆ ಅತ್ತೆಕಡೆ ಹೋಗ್ತೀಯ! ನೀನೇನೇ ಹೇಳು; ಸೀತೆ ನನಗೆಲ್ಲ ಹೇಳಿದ್ದಾಳೆ; ಅವಳು ರಾಮಯ್ಯನನ್ನು ಮದುವೆಯಾಗಲೂ ಇಲ್ಲವಂತೆ; ಕೈಹಿಡಿದೂ ಇಲ್ಲವಂತೆ; ಬಲಾತ್ಕಾರ ಮಾಡಿದರೆ ಅನಾಹುತ ಮಾಡಿಕೊಳ್ಳಲೂ ಸಿದ್ಧಳಾಗಿದ್ದಾಳಂತೆ!”

“ಮತ್ತೇನು? ನಿನ್ನ ಕೂಡಿಕೆಯಾಗ್ತಾಳಂತೇನು?” ಎಂದು ಸಿಂಗಪ್ಪಗೌಡರು ಶುದ್ಧ ಅನಾಗರಿಕನಂತೆ ಮಾತಾಡಿಬಿಟ್ಟರು.

ಹೂವಯ್ಯನ ಎದೆಗೆ ಈಟಿ ಇರಿದಂತಾಯಿತು. ಅವನ ಕೋಪ ಹೆಡೆಮುಚ್ಚಿ ದೀನವಾಯಿತು. ಶೋಕಭಾರದಿಂದ ತಲೆಬಾಗಿತು. ಒಂದೆರಡು ನಿಮಿಷಗಳು ಬಳಬಳನೆ ಕಣ್ಣೀರು ಸುರಿಸಿ ಮೌನವಾಗಿದ್ದನು.

ಮತ್ತೆ ತಲೆಯೆತ್ತಿ ಹೇಳಿದನು: “ಕಕ್ಕಯ್ಯ, ಯಾತಕ್ಕೆ ಹಿಂಗೆಲ್ಲಾ ಮಾತಾಡ್ತೀಯಾ? ಸ್ವಾರ್ಥತೆಯಿಂದಲ್ಲ ನಾನು ಹಾಗೆ ಮಾತಾಡಿದ್ದು. ಅವಳಾತ್ಮ ಬಲಿಯಾಗದಂತೆ ಮಾಡೋಣ ಎಂದು ಹೇಳಿದೆನಷ್ಟೆ!  ನಾನು ಸೀತೆಯನ್ನು ಮದುವೆಯಾಗುವ ಹೊಂಗನಸು ಎಂದೋ ಬಿರಿದುಹೋಯಿತು. ಕಕ್ಕಯ್ಯ! ಹೊಂಗನಸನ್ನು ಕಟ್ಟಲು ನೀನೂ ಬಹಳ ಸಹಾಯಮಾಡಿದ್ದೆ. ಆಗಲೂ ನೀನು ಈಗ ಮಾಡುತ್ತಿರುವಂತೆಯೆ, ಒಂದು ತತ್ವಕ್ಕಾಗಿ ಕಾರ್ಯಸಾಧನೆ ಮಾಡಲಿಲ್ಲ; ಚಿಕ್ಕಯ್ಯನ ಮೇಲಣ ವೈರಕ್ಕಾಗಿ, ಹಠಕ್ಕಾಗಿ ಮಾಡಿದೆಯಷ್ಟೆ! ನಾ ಬಲ್ಲೆ! ಈಗಲೂ ನೀನು ರಾಮಯ್ಯನ ಪರವಾಗಿ ಮಾತಾಡುತ್ತಿರುವುದಕ್ಕೆ ಕಾರಣ ನನಗೆ ಗೊತ್ತಿಲ್ಲ ಎಂದು ತಿಳಿಯಬೇಡ. ಅವನಿಂದ ನೀನೊಂದು ಜಮೀನು ತೆಗೆದುಕೊಳ್ಳಬೇಕು ಎಂದು ಹವಣಿಸುತ್ತಿದ್ದೀಯಂತೆ! ಆ ಆಶಾಪಿಶಾಚದ ತೃಪ್ತಿಗಾಗಿ ಸೀತೆಯನ್ನು ಬಲಿಕೊಡಲು ಪ್ರಯತ್ನ ಮಾಡ್ತಿದ್ದೀಯೆ! ಕಕ್ಕಯ್ಯ, ನನ್ನನ್ನೇನು ಕೈಲಾಗದ ಬೆಪ್ಪು ಎಂದು ತಿಳಿದುಕೊಳ್ಳುವುದು ಬೇಡ, ಇಲ್ಲಿ ಕೇಳು, ನನ್ನ ಮನಸ್ಸನ್ನು ಹೇಳಿ ಬಿಡ್ತೇನೆ ನಿನಗೆ! ತಾಯಿ ಸಾಯುವಾಗ ಆಕೆಗೇನೋ ಮಾತುಕೊಟ್ಟುಬಿಟ್ಟೆ. ನಾನು ಮದುವೆ ಮಾಡಿಕೊಳ್ತೀನಿ ಅಂತಾ ಆದರೂ ನಾನು ಮದುವೆ ಮಾಡಿಕೊಳ್ಳೋದಿಲ್ಲ! ಅಂದರೆ ಸಾಮಾನ್ಯರೀತಿಯಿಂದ ನಾನು ಮದುವೆ ಮಾಡಿಕೊಳ್ಳುವುದಿಲ್ಲ. ನನಗೂ ಸೀತೆಗೂ ಆತ್ಮಪ್ರಪಂಚದಲ್ಲಿ ಹಿಂದೆಯೇ ಮದುವೆಯಾಗಿದೆ! ಆ ಪ್ರೇಮಬಂಧನ ಚಿರವಾದುದು, ಈಗ ಆತ್ಮವಾಗಿರುವ ನನ್ನ ತಾಯಿಗೆ ಆ ಆತ್ಮವಿವಾಹಬಂಧನ ಗೊತ್ತಾಗುತ್ತದೆ; ಆದ್ದರಿಂದ ತಾಯಿಗೆ ನಾನು ಕೊಟ್ಟ ಮಾತೂ ಹುಸಿಯಾಗುವುದಿಲ್ಲ. ಅಲ್ಲದೆ, ಅಂದಿನಿಂದ, ನಿನ್ನಿಂದ ತಿಳಿದಿಕೊಳ್ಳಲು ಸಾಧ್ಯವಲ್ಲದ ಒಂದು ವ್ರತವನ್ನು ಕೈಕೊಂಡು ಈ ಗಡ್ಡ ಬೆಳೆಸಿದ್ದೇನೆ ಗೊತ್ತಾಯ್ತೆ? ಸೀತೆಯನ್ನು ಭಕ್ಷಿಸಲಲ್ಲ, ರಕ್ಷಿಸಲೋಸ್ಕರ, ಪ್ರಾಣವಿರುವವರೆಗೂ ಪ್ರಯತ್ನಿಸುತ್ತೇನೆ. ಆ ವಿಚಾರದಲ್ಲಿ ಮನುಷ್ಯಶಕ್ತಿಗೆ ಮೀರಿದ ಶಕ್ತಿ ನನಗೆ ಸಹಾಯಮಾಡುತ್ತಿದೆ! ಗೊತ್ತಾಯ್ತೆ?”

ಆ ವಾಣಿಯಲ್ಲಿ ಅಷ್ಟೊಂದು ದೃಢತೆಯಿತ್ತು; ಶ್ರದ್ಧೆಯಿತ್ತು, ಶಕ್ತಿಯಿತ್ತು. ಸಿಂಗಪ್ಪಗೌಡರಿಗೆ ಸರ್ವವೂ ಸತ್ಯವಾಗಿ ತೋರಿತು. “ಮಾರಾಯಾ, ನನ್ನಿಂದ ತಪ್ಪಾಯ್ತು. ಇನ್ನು ನಾನೀ ಸುದ್ದಿಗೇ ಬರೋದಿಲ್ಲ” ಎಂದು ತಮ್ಮನ್ನು ತಾವು ಸಮರ್ಥಿಸಿಕೊಳ್ಳುವುದಕ್ಕಾಗಿ ಮತ್ತೆ ಹೇಳಿದರು: “ಅವನ ಜಮೀನನ್ನು ನಾನು ಕೇಳಿದವನೇ ಅಲ್ಲ. ಅವನೇ ಹೇಳ್ದ: ಸಾಲ ತೀರಿಸುವುದಕ್ಕಾಗಿಯೂ ಮನೆ ಖರ್ಚಿಗಾಗಿಯೂ ಹಣ ಬೇಕಿತ್ತಂತೆ. ಅದಕ್ಕೆ ಆ ಜಮೀನು ಕೊಡ್ತೀನಿ ಅಂದ. ನಾನು ’ಆಗ್ಲಪ್ಪಾ, ನೋಡಾನ ಅಂದಿದ್ದೇ.’ ಅಷ್ಟೇ ಹೊರತೂ ಅವನ ಜಮೀನು ನನಗ್ಯಾಕೆ? ಇದ್ದಿದ್ದನ್ನು ನೋಡಿಕೊಂಡ್ರೆ ನಂಗೆ ಸಾಕಾಗಿದೆ….

ಅಂತೂ ಐದಾರು ತಿಂಗಳು ಕಳೆದರೂ ರಾಮಯ್ಯನ ಆಶೆ ಕೈಗೂಡಲೂ ಇಲ್ಲ. ಕೈಗೂಡುವ ಸೂಚನೆಯೂ ತೋರಲಿಲ್ಲ. ಸೀತೆ ಯಾರೊಬ್ಬರ ಮಾತಿಗೂ ಸೊಪ್ಪು ಹಾಕದೆ, ಹೊಳೆಯ ನಡುವಣ ಕಲ್ಲುಬಂಡೆಯಾಗಿ ನಿಂತುಬಿಟ್ಟಳು.

ರಾಮಯ್ಯ ಕ್ರಮಕ್ರಮೇಣ ಪುನಃ ತನ್ನ ಪೂರ್ವದ ಸ್ಥಿತಿಗೇ ಇಳಿಯತೊಡಗಿದನು. ಬರಬರುತ್ತಾ ಮೊದಲಿಗಿಂತಲೂ ಹೆಚ್ಚುಹೆಚ್ಚಾಗಿ ಮೂಲೆ ಹಿಡಿಯತೊಡಗಿದನು. ಎಲ್ಲರ ಮೇಲೆಯೂ ಕೋಪದ್ವೇಷಗಳೇರಿ, ಅವನ ಮನಸ್ಸಿನ ಅಂತರಾಳದಲ್ಲಿ ಕರಾಳವ್ಯೂಹಗಳು ಇಣುಕಲಾರಂಭಿಸಿದ್ದುವು.

ಆದರೆ ಕಾನೂರು ಮನೆಯ ಕೆಲಸಕಾರ್ಯಗಳೆಲ್ಲ ಬಹಳ ವಿಚಕ್ಷಣತೆಯಿಂದ ಸಾಗುತ್ತಿದ್ದುವು. ಸುಬ್ಬಮ್ಮನ ಹೆಗ್ಗಡಿತಿತನದಲ್ಲಿ ಸೇರೆಗಾರರೂ ಗಟ್ಟದಾಳುಗಳೂ ಬೇಲರೂ ತೆರಿಪಿಲ್ಲದೆ ದುಡಿಯಬೇಕಾಗಿತ್ತು. ಆಕೆ ಅಡುಗೆ ಮನೆಯಿಂದ ಹಿಡಿದು ಗದ್ದೆ, ತೋಟ, ಹಿತ್ತಲು, ಕೊಟ್ಟಿಗೆ ಗೊಬ್ಬರಗುಂಡಿ, ತರಗಿನ ಹಾಡ್ಯ, ಕಬ್ಬಿನ ಗದ್ದೆ ಎಲ್ಲೆಡೆಯಲ್ಲಿಯೂ ಇದ್ದು, ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಳು. ಆಕೆಗೆ ಸಾವಿರ ಕಣ್ಣಾಗಿತ್ತು. ಅದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಗುತ್ತಿತ್ತು.