“ಅಕ್ಕಯ್ಯಾ, ರಂಗಿ ಸತ್ತುಹೋತಂತೇ ಕಣೇ” ಎಂದು ಲಕ್ಷ್ಮಿ ತನ್ನಿಂದ ಸಾಧ್ಯವಾದಷ್ಟು ಗಾಂಭೀರ್ಯ ಶೋಕಗಳನ್ನು ಪ್ರದರ್ಶಿಸುತ್ತ ಹೇಳಿದಳು.

ತನಗೆ ಅ ಸುದ್ದಿ ಮೊದಲೇ ತಿಳಿದಿದ್ದುದರಿಂದಲೂ ಮನಸ್ಸು ಬೇರೆಯ ಚಿಂತೆಗಳಲ್ಲಿ ತೊಡಗಿದ್ದುದರಿಂದಲೂ ಸೀತೆ ಮಾತಾಡಲಿಲ್ಲ. ಕಿಟಕಿಯ ಸರಳುಗಳಿಂದ ವಿಭಾಗಿಸಲ್ಪಟ್ಟಿದ್ದಂತೆ ತೋರುತ್ತಿದ್ದ ಆಕಾಶದ ಕಡೆಗೆ ನೋಡುತ್ತ ರೋಗಶಯ್ಯೆಯ ಮೇಲೆ ಮಲಗಿದ್ದಳು.

ಹಿಂದಿನ ದಿನ ಕೃಷ್ಣಪ್ಪನ ಮರಣವಾರ್ತೆ ಬಂದ ಹೊಸತರಲ್ಲಿ ಆಕೆಯ ಮನಃಸ್ಥಿತಿ ಗಾಬರಿಹುಟ್ಟಿಸುವಂತಾಗಿತ್ತು. ಆದರೆ ಕ್ರಮೇಣ ಹಗುರವಾಯಿತು. ಅದಕ್ಕಿಂತಲೂ ಆಶ್ಚರ್ಯಕರವಾಗಿ ಶರೀರಸ್ಥಿತಿ ಉತ್ತಮಗೊಳ್ಳತೊಡಗಿತು. ಸಾಯಂಕಾಲವಾಗುವುದರೊಳಗೆ, ಅನೇಕ ದಿನಗಳಿಂದ ಏನೇನು ಮಾಡಿದರೂ ಬಿಡದಿದ್ದ ಜ್ವರ ಸಂಪೂರ್ಣವಾಗಿ ಬಿಟ್ಟುಹೋಯಿತು! ಗೌರಮ್ಮನವರಂತೂ ತಾವು ತಿರುಪತಿ ತಿಮ್ಮಪ್ಪನಿಗೆ ಹರಸಿಕೊಂಡದ್ದು ಸಾರ್ಥಕವಾಯಿತೆಂದು ತಮ್ಮ ಭಕ್ತಿಯ ಒಲುಮೆಗೆ ತಾವೇ ಹಿಗ್ಗಿ ಕಣ್ಣೀರು ಕರೆದರು. ಸೀತೆಯೂ ತಾಯಿಯ ಅಭಿಪ್ರಾಯವನ್ನೇ ಸಮರ್ಥಿಸಿ, ಅದನ್ನೇ ಸಂಪೂರ್ಣವಾಗಿ ನಂಬಿದಳು.

ತಾನು ತಿಳಿಸಿದ ಅಷ್ಟೊಂದು ಮುಖ್ಯವಾದ ಸುದ್ದಿಯನ್ನು ಕೇಳಿಯೂ ಸುಮ್ಮನಿದ್ದ ಅಕ್ಕನ ತಾಟಸ್ಥವನ್ನು ಸಹಿಸಲಾರದೆ ಲಕ್ಷ್ಮಿ ಮತ್ತೆ “ಅಕ್ಕಯ್ಯ, ರಂಗಿ ಸತ್ಹೋತಂತಲ್ಲಾ ಎಲ್ಲಿಗೆ ಹೋತು?” ಎಂದಳು. ಅವಳ ಕೈ ಬೆರಳೊಂದು ಹರಿದು ತೂತಾಗಿದ್ದ ಜೇಬಿನ ತಳಭಾಗದಲ್ಲಿ ಹೊರಗಿಣಿಕಿ, ತುಂಡಾದ ಹಲ್ಲಿನ ಬಾಲದಂತೆ ನಾಟ್ಯವಾಡುತ್ತ, ತನ್ನ ಒಡತಿಯ ಪ್ರಶ್ನೆಯಲ್ಲಿ ಗಭೀರತೆಯಿದ್ದರೂ ಆಕೆಯ ಮನಸ್ಸಿನಲ್ಲಿ ಅದಿಲ್ಲ ಎನ್ನುವುದನ್ನು ಸಾರಿ ಹೇಲುವಂತಿತ್ತು.

“ಎಲ್ಲಿಗೆ ಹೋ’ತು ಅಂದ್ರೆ? ಸತ್ತು ಹೋ’ತು!” ಎಂದಳು ಸೀತೆ.

“ಸತ್ತು ಹೋ’ತೇನೂ?” ಎಂದು ಏನೋ ಮಹ ವಿಷಯವೆಲ್ಲ ಗೋತ್ತಾದವಳಂತೆ ನಟಿಸಲೆಳಸಿದ ಲಕ್ಷ್ಮಿ  ಮತ್ತೆ ಸಂದೇಹಗ್ರಸ್ತಳಾದವಳಂತೆ “ಸತ್ತು ಎಲ್ಲೀಗೆ ಹೋ’ತು?” ಎಂದು ಕೇಳಿದನು.

“ಸ್ವರ್ಗಕ್ಕೆ.”

ಅಕ್ಕನ ಮನಸ್ಸಿಗೆ ಆ ವಿಷಯಪ್ರಸ್ತಾಪದಿಂದ ನೋವಾಗುತ್ತದೆಂದು ಲಕ್ಷ್ಮಿ ಗೆ ಗೊತ್ತಾಗುವುದಾದರೂ ಹೇಗೆ?

“ಸೊರ್ಗ ಇರಾದೆಲ್ಲಿ?”

“ಮೋಡ ಆಕಾಶ ನಕ್ಷತ್ರ ಎಲ್ಲ ದಾಟಿಹೋದರೆ ಸಿಕ್ಕದೆ.”

ಅಂಬೆಗಾಲಿಕ್ಕುವುದಕ್ಕೆ ಸರಿಯಾಗಿ ಬಾರದೆ ಇದ್ದ ರಂಗಿ ಅಷ್ಟು ದೂರ ಹೇಗೆ ಪ್ರಯಾಣಮಾಡಿದಳು ಎಂಬುದು ಲಕ್ಷ್ಮಿಗೆ ವಿಶದವಾಗಲಿಲ್ಲ.

“ರಂಗಿ ಹ್ಯಾಂಗೆ ಹೋ”ತೇ ಓಷ್ಟು ದೂರ?”

ಸೀತೆ ತನಗೆ ತಿಳಿದ ರೀತಿಯಲ್ಲಿ ಸ್ವರ್ಗದ ಸುಖಸೌಂದರ್ಯಗಳನ್ನೂ ಸತ್ತವರನ್ನು ದೇವತೆಗಳು ಎತ್ತಿಕೊಂಡು ಹೋಗುವ ವಿಚಾರವನ್ನೂ ತಂಗಿಗೆ ಹೇಳಿದಳು.

ಲಕ್ಷ್ಮಿಗೆ ಅದನ್ನೆಲ್ಲ ಕೇಳಿ ಬಹಳ ಸಂತೋಷವಾಯಿತು. ರಂಗಿ ಅಷ್ಟು ಸುಖದ ಸ್ಥಳಕ್ಕೆ ಹೋಗಿದ್ದರೆ ಅವಳ ತಂದೆತಾಯಿಗಳು ಎದೆಯೆದೆ ಬಡಿದುಕೊಂಡು ಏಕೆ ಅತ್ತರೆಂಬುದು ಆಕೆಯ ಭಾವವಾಗಲಿಲ್ಲ. ಮತ್ತೆ ಕೇಳಿದಳು:

“ನಾವೂ ಹೋಗಾನೇನೆ ಅಲ್ಲಿಗೆ?”

“ಥೂ! ಹಾಳುಬಾಯಿ ನುಡೀಬೇಡ” ಎಂದಳು ಸೀತೆ.

ಲಕ್ಷ್ಮಿಗೆ ಬಹಳ ಆಶ್ಚರ್ಯವಾಯಿತು. ಅಷ್ಟು ಒಳ್ಳೆಯ ಜಾಗಕ್ಕೆ ಹೋಗೋಣ ಎಂದರೆ ಅಕ್ಕ ’ಹಾಳು ಬಾಯಿ ನುಡೀಬೇಡ’ ಎನ್ನುತ್ತಾಳಲ್ಲಾ ಎಂದು.

ಆದರೂ ಶ್ರುತಿಗೆ ಮತಿ ಶರಣಾಗಿ, ವೇದಕ್ಕೆ ವಿಚಾರ ಶರಣಾಗಿ ಬಾಯಿಮುಚ್ಚಿ ಕೊಳ್ಳುವಂತೆ, ಸ್ವಲ್ಪಹೊತ್ತು ಸುಮ್ಮನಿದ್ದು “ರಂಗಿ ಹಿಂದಕ್ಕೆಂದು ಬತ್ತದೆ?” ಎಂದು ಬೇರೆ ವಿಷಯ ತೆಗೆದಳು.

ಸೀತೆ ನಸು ಕಿನಿಸಿಕೊಂಡು “ಹಿಂದಕ್ಕೆ ಬರೋದು ಇಲ್ಲ, ಏನೂ ಇಲ್ಲ” ಎಂದಳು.

ಲಕ್ಷ್ಮಿಯ ಮುಗ್ಧತೆ ಅಕ್ಕ ಕೊಟ್ಟ ಉತ್ತರದ ಆಘಾತದಿಂದ ತತ್ತರಿಸಿತು. ಹಿಂದಕ್ಕೆ ಬರಗೊಡಿಸದ ಆ ಸ್ವರ್ಗ ಹುಲಿಯ ಬಾಯಿಗಿಂತಲೂ ಭಯಾನಕವಾಗಿ ತೋರಿತು. ಜೇಬಿನ ತೂತಿನಲ್ಲಿ ಆಡುತ್ತಿದ್ದ ಕೈಬೆರಳು ಸ್ತಬ್ಧವಾಯಿತು. ಯಾವುದೋ ಒಂದು ಮಹ ಸಂಶಯ ದೃಷ್ಟಿಯಿಂದ ಸೀತೆಯ ಮುಖವನ್ನೇ ದುರುದುರನೆ ನೋಡತೊಡಗಿದಳು. ಸಂಶಯ ದೃಷ್ಟಿಯಿಂದ ಸೀತೆಯ ಮುಖವನ್ನೇ ದುರುದುರನೆ ನೋಡತೊಡಗಿದಳು. ಕೆಲವು ನಿಮಿಷಗಳು ಹಾಗೆಯೇ ಕೂತಿದ್ದು ಮೆಲ್ಲನೆ ಎದ್ದು ಕೋಣೆಯಿಂದ ಜರುಗಿದಳು.

ಸೀತೆ ಕೃಷ್ಣಪ್ಪನನ್ನು ಮದುವೆಯಾಗುವ ಅನಿಷ್ಟ ತಪ್ಪಿತೆಂದು ಒಳಗೊಳಗೇ ಸುಳಿಯುತ್ತಿದ್ದ ಸುಖದಿಂದಲೂ, ಹೂವಯ್ಯಬಾವ ಕಾಯಿಲೆಯಾಗಿದ್ದ ತನ್ನನ್ನು ನೋಡುವುದಕ್ಕೆ ಬರದೇಹೊಗಿಬಿಟ್ಟರಲ್ಲಾ ಎಂಬ ದುಃಖದಿಂದಲೂ ಚಿಂತಾಕ್ರಾಂತಳಾಗಿ, ಹೆಚ್ಚು ಹೊತ್ತು ಒಬ್ಬಳೇ ಮಲಗಿರಲಿಲ್ಲ; ಚಿನ್ನಯ್ಯ ಹೂವಯ್ಯನೊಡಗೂಡಿ ಕೊಠಡಿಯನ್ನು ಪ್ರವೇಶಿಸಿದನು.

ಎದೆಯವರೆಗೂ ಶಾಲು ಹೊದೆದುಕೊಂಡು ಕಿಟಕಿಯಾಚೆಯ ಆಕಾಶದ ಕಡೆಗೆ ನೋಡುತ್ತಿದ್ದ ಸೀತೆ ಫಕ್ಕನೆ ತಿರುಗಿ ಅಣ್ಣನೊಡನೆ ತನ್ನೆಡೆಗೆ ಬರುತ್ತಿದ್ದ ಹೂವಯ್ಯನನ್ನು ಕಂಡಳು ಒಡನೆಯ ಶಾಲನ್ನು ಕುತ್ತಿಗೆಯ ವರೆಗೂ ಎಳೆದುಕೊಂಡು ರೆಪ್ಪೆಮುಚ್ಚಿಕೊಂಡಳು. ಮುಖದಲ್ಲಿ ಮುನಿಸು ದುಃಖಗಳು ತೋರದೆ ಇದ್ದಿದ್ದರೆ ಆಕೆ ನಿದ್ರೆ ಮಾಡುತ್ತಿದ್ದಳು ಎನ್ನಬಹುದಾಗಿತ್ತು.

ಹೂವಯ್ಯನ್ನನು ಕಂಡೊಡನೆ ಸೀತೆಯ ಹೃದಯದಲ್ಲಿ ಅನೇಕ ಭಾವಗಳು ಉದ್ರಿಕ್ತವಾದುವು: ಅವುಗಳಲ್ಲಿ ಮೊದಲನೆಯದೂ ಮುಖ್ಯವಾದುದೂ ಎಂದರೆ ಹರ್ಷ. ಆತನಿಗಾಗಿ ಬಹಳ ದಿನಗಳಿಂದಲೂ ಹಾತೊರೆಯುತ್ತಿದ್ದ ಆಕೆ ತನ್ನ ಇಷ್ಟಮೂರ್ತಿಯನ್ನು ಕಂಡು ಆನಂದಪಡದೆ ಮತ್ತೇನುಮಾಡಿಯಾಳು? ಆದರೆ ಮನುಷ್ಯನಲ್ಲಿ ಅಭಿಮಾನ ಎಂಬುದೊಂದಿದೆಯಲ್ಲವೆ? ತನ್ನ ಮನದನ್ನನನ್ನು ಕಂಡು ಆಹ್ಲಾದವಾದರೂ ಸೀತೆ ಸ್ವಾಭಿಮಾನದಿಂದಲೂ ಬಿಗುಮಾನದಿಂದಲೂ ಅದನ್ನು ಮಪ್ರದರ್ಶಿಸಬಾರದೆಂದು ನಿಶ್ಚಯಿಸಿದಳು. ತರುವಾಯ ಇನಿಯನು ಇಷ್ಟು ದಿನವೂ ಬಾರದಿದ್ದುದಕ್ಕಾಗಿ ಮುನಿಸೂ ದುಃಖವೂ ಒಂದನ್ನೊಂದು ಹಿಂಬಾಲಿಸಿ ಬಂದುವು. ಆಮೇಲೆ ” ಅಯ್ಯೋ, ನಾನು ಜ್ವರದಿಂದ ನರಳಿದುದನ್ನು ಇವರು ನೋಡಿ ನೋಯುವ ಅದೃಷ್ಟ ತಪ್ಪಿಹೋಯಿತಲ್ಲಾ!” ಎಂಬ ಸೂಕ್ಷ್ಮ ಪ್ರತಿಹಿಂಸೆಯ ಭಾವವೂ ಉತ್ಪನ್ನವಾಯಿತು. ಈ ಎಲ್ಲ ಭಾವಗಳ ಪರಸ್ಪರ ಕ್ರಿಯೆಗಳ ಪರಿಣಾಮವಾಗಿ ಎವೆಮುಚ್ಚಿಕೊಂಡಿದ್ದ ಆಕೆಯ ಕಣ್ಣುಗಳಲ್ಲಿ ನೀರು ನೀರವವಾಗಿ ಬಳಬಳನೆ ಸುರಿಯತೊಡಗಿತ್ತು.

ಹಾಸಗೆಯ ಪಕ್ಕದಲ್ಲಿ ಬಂದು ಕುಳಿತ ಹೂವಯ್ಯ ಚಿನ್ನಯ್ಯರು ಒಂದೆರಡು ನಿಮಿಷಗಳ ತನಕ ಮಾತಾಡಲಿಲ್ಲ. ಕೋಣೆಯ ನಿಃಶಬ್ದ ಶಕುನಪೂರ್ಣವಾಗಿ ಭಾರವಾದಂತಿತ್ತು. ಹೂವಯ್ಯನ ಹೃದಯವೂ ಸೀತೆಯ ಪರವಾದ ಪ್ರೀತಿ ಕನಿಕರಗಳಿಂದಲೂ ತನ್ನ ಪರವಾದ ಕೋಪ ಭರ್ತ್ಸನೆಗಳಿಂದಲೂ ಭಾವಭರಿತವಾಗಿ, ಅವನಿಗೂ ಮೊದಲು ಮಾತಾಡಲು ಸಾಧ್ಯವಾಗಲಿಲ್ಲ. ಒಂದೆರಡು ಸಾರಿ ಉಗುಳುನುಂಗಿ, ಗಂಟಲಲಲ್ಲಿಯೆ ಕೆಮ್ಮಿ, ಸ್ಥಿರಚಿತ್ತನಾಗಲು ಪ್ರಯತ್ನಿಸಿದನು.ಆದರೂ ಕಣ್ಣು ಹನಿತುಂಬಿ, ದೃಷ್ಟಿ ಮಂಜಾಗತೊಡಗಿತ್ತು.

“ಈಗ ಹ್ಯಾಗಿದೆ, ಸೀತೆ?” ಎಂದು ಚಿನ್ನಯ್ಯನೆ ಮಾತು ಪ್ರಾರಂಭಿಸಿ, ತಂಗಿಯ ಹಣೆಯ ಮೇಲೆ ಕೈಯಿಟ್ಟನು. ಸೀತೆ ಕಣ್ದೆರೆಯಲಿಲ್ಲ. ಆದರೆ ಕಣ್ಣೀರು ಮೊದಲಿಗಿಂತಲೂ ಹೆಚ್ಚು ಧಾರಾಕಾರವಾಗಿ ಹರಿಯತೊಡಗಿತು. ಹೂವಯ್ಯ ಚಿನ್ನಯ್ಯರಿಬ್ಬರೂ ಅದಕ್ಕೆ ತಪ್ಪು ವಾಖ್ಯಾನಮಾಡಿದರು. ಕೃಷ್ಣಪ್ಪ ನಿಗೊದಗಿದ ದುರಂತ ಘಟನೆಗಾಗಿ ಆಳುತ್ತಿದ್ದಾಳೆ ಎಂದು ಬಗೆದರು.

ಚಿನ್ನಯ್ಯ ತಂಗಿಯನ್ನು ಸಂತವಿಸಲೆಂದು ಮತ್ತೆ ” ಆಳೋದ್ಯಾಕವ್ವಾ? ಆಗೋದು ಆಗಿಹೋಯ್ತು! ಯಾರೇನು ಮಾಡೋಕೆ ಆಗ್ತದೆ? ಆವರವರ ಹಣೇಲಿ ಬರೆದಷ್ಟು ಅವರವರಿಗೆ ಲಭಿಸ್ತದೆ…” ಎಂದು ಮರುಕ ತೊರುವ ಧ್ವನಿಯಲ್ಲಿ ಹೇಳುತ್ತಿರಲು, ಸೀತೆ ತಡೆಯಲಾರದೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಆ ಶೋಕದಲ್ಲಿ ಕೃಷ್ಣಪ್ಪನ ಅಕಾಲ ಘೋರ ಮರಣಕ್ಕಾಗಿ ಅನುತಾಪವಿರಲಿಲ್ಲ, ತನ್ನ ದುಃಖಕ್ಕೆ ತನಗಿಷ್ಟವಿಲ್ಲದ, ತನಗನಿಷ್ಟವಾದ, ವ್ಯಾಖ್ಯಾನವನ್ನು ಮಾಡುತ್ತಿದ್ದಾರಲ್ಲಾ ಎಂಬ ಸಂತಾಪಮಾತ್ರವಿತ್ತು.

ಹೂವಯ್ಯ ಮಾತಾಡದೆ ಅಲುಗಾಡದೆ ನಸು ತಲೆಬಾಗಿ ಕುಳಿತಿದ್ದನು. ಅವನ ಕಣ್ಣಗಳಿಂದ ನೀರು ಸುರಿಯತೊಡಗಿತ್ತು.

ಚಿನ್ನಯ್ಯ ಸೀತೆಯ ಕೈಹಿಡಿದುಕೊಂಡು ” “ಛೆ! ಹಾಗೆ ಅಳಬೇಡ ! ಮತ್ತೆಲ್ಲಾದ್ರೂ ಜ್ವರ ಬಂದಾತು!, ನಿನ್ನ ಹೂವಯ್ಯಬಾವ ಬಂದಾರೆ, ಕಣ್ಣುಬಿಟ್ಟು ನೋಡು” ಎಂದನ್ನು.

ಸೀತೆ ಬಿಕ್ಕಿ ಬಿಕ್ಕಿ ಅಳುತ್ತಲೇ ಒಂದು ಸಾರಿ ಕಣ್ದೆರೆದು ಹೂವಯ್ಯನು ತಲೆಬಾಗಿ ಕಂಬನಿಗರೆಯುತ್ತಿದ್ದುದ್ನ್ನು ನೋಡಿ, ಮತ್ತೆ ಕಣ್ಣು ಮುಚ್ಚಿಕೊಂಡಳು. ಆಕೆಯ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು, ತನ್ನಿನಿಯನೂ ತನಗಾಗಿ ನೋಯುತ್ತಿದ್ದುದನ್ನು ಕಂಡು.

’ಇದೇನು ರಗಳೆಗಿಟ್ಟುಕೊಂಡಿತು’ ಎಂದು ಭಾವಿಸಿ ಚಿನ್ನಯ್ಯನೂ “ಹೂವಯ್ಯ, ಗದ್ದೆಕಡೆ ಹೋಗಿ ಬರೋಣ ಬಾ” ಎಂದು ಮನಸ್ಸಿಲ್ಲದ ಅವನನ್ನೂ ಜೊತೆಗೆ ಕರೆದುಕೊಂಡು “ಈಗ ಮಾತಾಡಿದಷ್ಟೂ ಅವಳು ಅಳ್ತಾಳೆ! ಜ್ವರಗಿರ ಬಂದಾತು!” ಎಂದು ಪಿಸುಮಾತಿನಲ್ಲಿ ಹೇಳುತ್ತಾ ಬಾಗಿಲು ದಾಟಿದನು.

ಅಂತೂ ಊವಯ್ಯನಾಗಲಿ ಸೀತೆಯಾಗಲಿ ಒಂದು ಮಾತನ್ನು ಆಡಲಿಲ್ಲ. ಹೂವಯ್ಯನ ಮನಸ್ಸಿನಲ್ಲಿ ಮಾತ್ರ “ಸೀತೆ ನಿಜವಾಗಿಯೂ ಕೃಷ್ಣಪ್ಪನಿಗಾಗಿ ಅಳುತ್ತಿದ್ದಾಳೆ. ಅವನನ್ನೇ ಮನಃ ಪೂರ್ವಕವಾಗಿ ಪ್ರೀತಿಸಿದ್ದಳು; ಈಗಲೂ ಪ್ರೀತಿಸಿದ್ದಳು; ಈಗಲೂ ಪ್ರೀತಿಸುತ್ತಿದ್ದಾಳೆ” ಎಂಬ ತಪ್ಪು ಭಾವ ಪ್ರಬಲತರವಾಗುತ್ತಿತ್ತು.

ಆ ಆಲೋಚನೆ ಬಲವಾದಂತೆಲ್ಲ ಅವನ ಮನಸ್ಸು ಹತಾಶೆಯಿಂದಲೂ ಉದ್ವೇಗದಿಂದಲೂ ವಿಕ್ಷುಬ್ಧವಾಗುತ್ತಿದ್ದಿತು. ಮುತ್ತಳ್ಳಿಗೆ ಬರುವುದು ಮೊದಲು ಎಷ್ಟು ಪ್ರಿಯಕರವಾಗಿದ್ದಿತೊ ಈಗ ಅಲ್ಲಿಂದ ಹೊರಡುವುದೂ ಅಷ್ಟೇ ಪ್ರಿಯಕರವಾಗಿ ತೋರಿತು. ಗದ್ದೆ ತೋಟಗಳಲ್ಲಿ ಅಡ್ಡಾಡಿಕೊಂಡು ಹಿಂತಿರುಗಲೆಂದು ಹೊರಟ ಇಬ್ಬರೂ ಹೆಬ್ಬಾಗಿಲನ್ನು ದಾಟುತ್ತಿದ್ದಾಗ, ಇದ್ದಕ್ಕಿದ್ದ ಹಾಗೆ ಹೂವಯ್ಯನು “ಚಿನ್ನಯ್ಯ, ನಾನು ಮನೆಗೆ ಹೋಗ್ತೀನಿ” ಎಂದನು.

ಚಿನ್ನಯ್ಯನು ಆ ಹಠಾತ್ತನೆ ನಿರ್ಣಯಕ್ಕೆ ಬೆಚ್ಚಿ ಬೆರಗಾಗಿ “ಯಾಕೆ? ಈಗೆಲ್ಲಿ ಹೋಗೋದು? ಊಟದ ಹೊತ್ತಾಗ್ತಾ ಬಂತು” ಎಂದನು.

“ಪರ್ವಾಯಿಲ್ಲ. ಏನು ಅರ್ಧಗಂಟೆ ಮುಕ್ಕಾಲು ಗಂಟೇಲಿ ಮನೆ ಸೇರತ್ತೀನಿ.”

“ಅಷ್ಟೇನು ಅವಸರ? ಈಗತಾನೆ ಬಂದೀಯಾ! ಅಪ್ಪಯ್ಯನೂ ಇನ್ನೂ ಸೀತೆಮನೆಗೆ ಹೋದವನು ಬಂದಿಲ್ಲ. ಮಧ್ಯಾಹ್ನದ ಮೇಲೆ ಬರ‍್ತಾನಂತಾ ಬರತ್ತಾನಂತಾ ಕಾಣ್ತದೆ. ಅವನ್ನ ಕಂಡು ಮಾತಾಡಿ ಹೋಗಬಹುದಂತೆ.”

ಹೂವಯ್ಯ ಸ್ವಲ್ಪಹೊತ್ತು ಎವೆಯಿಕ್ಕದೆ ನಿಂತು ಆಲೋಚಿಸಿದನು. ಶ್ಯಾಮಯ್ಯಗೌಡರು ಸೀತೆಯ ವಿಚಾರವಾಗಿ ತನ್ನೊಡನೆ ಮಾತಾಡಬಹುದೇ? ಅಲ್ಲದೆ ಸೀತೆಯೊಡನೆ ಏನೊಂದು ಮಾತನ್ನೂ ಆಡದೆ ಹೋಗುವುದೂ ಸರಿಯಲ್ಲ. ಅವಳ ಮನಸ್ಸನ್ನು ಸರಿಯಾಗಿ ತಿಳಿದು ಹೋಗುವುದೇ ಉತ್ತಮ. ಕಡೆಗೆ ಏನಾದರೂ ಆಗಲಿ, ಮೊದಲು ದುಡುಕಬಾರದು, ಎಂದು ನಿರ್ಣಯಿಸಿ ಚಿನ್ನಯ್ಯನ ಎಷ್ಟಕ್ಕೆ ಒಪ್ಪಿ ಅವನೊಡನೆ ಗದ್ದೆಯ ಕಡೆಗೆ ಹೋದನು.

ಮಧ್ಯಾಹ್ನ ಊಟವಾದಮೇಲೆ ಹೂವಯ್ಯನ ಎಡಗೈಯನ್ನು ಹಿಡಿದು ಜಗ್ಗಿಸಿ ಎಳೆಯುತ್ತ, ಬುಡುಬುಡಿಕೆಯಂತೆ ಏನೇನನ್ನೊ ಗಳಹುತ್ತ ಬರುತ್ತಿದ್ದ ಲಕ್ಷ್ಮಿಯೊಡಗೂಡಿ ಸೀತೆಯ್ನನು ಮಾತಾಡಿಸಲು ಹೋದನು.

ಸ್ವಲ್ಪ ಸಮಯದಲ್ಲಿಯೆ ಬಾವ ಅಕ್ಕಯ್ಯರಿಬ್ಬರೂ ಏನೋ ಗಭೀರವಾದ ಮಾತುಕತೆಗಳಲ್ಲಿ ಮಗ್ನರಾಗಿ ತನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿಬಿಟ್ಟಿದ್ದರಿಂದ ಲಕ್ಷ್ಮಿ ಅಭಿಮಾನಭಂಗದಿಂದಲೂ ಅಸಮಾಧಾನದಿಂದಲೂ ಅಲ್ಲಿಂದೆದ್ದು, ತನಗೆ ಹೆಚ್ಚು ಪುರಸ್ಕಾರವೂ ಗೌರವ ಗಮನಗಳು ದೊರಕುವ ಸ್ಥಳಕ್ಕೆ ಎಂದರೆ ಕಾಲನ ಬಳಿಗೆ ಹೋದಳು.

ಮಾತು ಮುಂದುವರಿದ ಹಾಗೆಲ್ಲ ಸೀತೆ ಮನಸ್ಸು ಬಿಚ್ಚಿ ಕಾಯಿಲೆಯ ಕಾಲದಲ್ಲಿ ತಾನು ಕಂಡ ಕನಸುಗಳನ್ನೂ, ಪಟ್ಟ ಯಾತನೆಗಳನ್ನೂ, ತಾನು ’ಹೂವಯ್ಯ ಬಾವ’ನನ್ನು ನಿರೀಕ್ಷಿಸಿ ಹತಾಶಳಾದುದನ್ನೂ ಮುಚ್ಚುಮರೆಯಿಲ್ಲದೆ ಸರಳ ಹೃದಯದಿಂದ ಹೇಳಿದಳು. ಆದರೆ ಹೂವಯ್ಯ ಮಾತ್ರ ತನ್ನಲ್ಲಿ ಸೀತೆಗಿರುವ ಅನುರಾಗದ ಅಗಾಧತೆ ತಿಳಿದುಬಂದರೂ ಕೂಡ ತನ್ನ ಮನಸ್ಸುನ್ನು ಸಂಪೂರ್ಣವಾಗಿ ಬಿಚ್ಚಲು ಸಮರ್ಥನಾಗಲಿಲ್ಲ. ತಾನು ಬರಲಾಗದಿದ್ದುದಕ್ಕೆ ಹಲಕೆಲವು ನೆವಗಳನ್ನು ಹೆಳಿ, ಆನ್ಯವಿಷಯಗಳನ್ನು ಕುರಿತು ಪ್ರಸ್ತಾವಿಸತೊಡಗಿದನು. ಯಾರೊಬ್ಬರೂ ಕೃಷ್ಣಪ್ಪನ ವಿಷಯವಾಗಿ ಮಾತೆತ್ತಲಿಲ್ಲ.

ಹೂವಯ್ಯ ಸೀತೆ ಮಲಗಿದ್ದ ಕೊಟಡಿಯನ್ನು ಬಿಟ್ಟಾಗ ಅವನ ಮನಸ್ಸು ಮತ್ತೊಂದು ಆಲೋಚನೆಯಿಂದ ಬಿಸಿಯಾಗಿದ್ದಿತು: ಹಿಂದೆ ಸೀತೆಮನೆ ಸಿಂಗಪ್ಪ ಗೌಡರು ಸೀತೆಯನ್ನು ತಮ್ಮ ಮಗನಿಗೆ ಕೇಳುವ ಮೊದಲು ತಾನೇ ಸ್ಯಾಮಯ್ಯಗೌಡರನ್ನು ಕೇಲಿಬಿಟ್ಟಿದ್ದರೆ ಅವರು ಒಪ್ಪದೆ ಇರುತ್ತಿರಲಿಲ್ಲ. ಅಲ್ಲದೆ ಈಗ ನಡೆದು ಹೋದ ಸಂದೇಹ ಸಂಕಟಗಳಿಗೂ ಅವಕಾಶವಿರುತ್ತಿರಲಿಲ್ಲ. ಅಂತೂ ಹೇಗೋ ವಿಧಿವಶದಿಂದ ಸೀತೆ ಅನ್ಯರ ಪಾಲಾಗುವ ಪ್ರಸಂಗ ತಪ್ಪಿತು! ಈಗಲಾದರೂ ತಾನು ಎಚ್ಚರಿಕೆಯಿಂದ ಶೀಘ್ರವಾಗಿ ವರ್ತಿಸದಿದ್ದರೆ ಶ್ಯಾಮಯ್ಯಗೌಡರು ತಮ್ಮ ಮಗಳನ್ನು ಇನ್ನಾರಿಗಾದರೂ ಮದುವೆ ಮಾಡಿಕೊಡಲು ಒಪ್ಪಿಬಿಟ್ಟರೆ ಮತ್ತೆ ಅನಾಹುತವಾದೀತು! ಹಾಗೆಲ್ಲಿಯಾದರೂ ಆಗಿಬಿಟ್ಟರೆ ಸೀತೆಯ ಮತ್ತು ತನ್ನ ಜೀವನಗಳೆರಡೂ ನರಕವಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಆ ದಿನವೇ ಶ್ಯಾಮಯ್ಯಗೌಡರು ಸೀತೆಮನೆಯಿಂದ ಹಿಂತಿರುಗಿದೊಡನೆ ತನ್ನ ಇಚ್ಛೆಯನ್ನು ಅವರಿಗೆ ತಿಳಿಸಿ, ಅವರನ್ನೊಪ್ಪಿಸಬೇಕೆಂದು ನಿಶ್ಚಯಿಸಿದನು.

ತರುವಾಯ ಹೂವಯ್ಯ ಕೂತಲ್ಲಿ ನಿಂತಲ್ಲಿ ಹೋದಲ್ಲಿ ಬಂದಲ್ಲಿ, ತನ್ನ ನಿರ್ಣಯವನ್ನು ಶ್ಯಾಮಯ್ಯಗೌಡರೊಡನೆ ಹೇಗೆ ಪ್ರಸ್ತಾವಿಸಬೇಕು? ಹೇಗೆ ಪ್ರಾರಂಭಿಸಬೇಕು? ಹೇಗೆ ಕೊನೆಗಾಣಿಸಬೇಕು? ಎಂಬ ಆಲೋಚನಾಪರಂಪರೆಗಳಲ್ಲಿ ತಲ್ಲೀನನಾಗಿ, ಇತರರು ತನ್ನನ್ನು ಮಾತಾಡಿಸಿದರೂ ಪುಸ್ತಕವನ್ನು ಓದುವ ನೆವದಿಂದ ಹೆಚ್ಚು ಮಾತಾಡದೆ, ಹಗಲುಗನಸು ಕಟ್ಟತೊಡಗಿದನು. ಅವನಿಗೆ ಒಂದೊಂದು ಸಾರಿ ಒಂದು ತರಹದ ಮೂರ್ಛೆ ರೋಗ ಬರುತ್ತದೆ ಎಂದು ಗಾಳಿಸುದ್ದಿ ಕೇಳಿದ್ದವರೆಲ್ಲರೂ ಅದು ಸತ್ಯವಾಗಿರಬೇಕೆಂದು ಭಾವಿಸಿ ಸುಮ್ಮನಾದರು. ಚಿನ್ನಯ್ಯನಿಗೂ ಕೂಡ ಶಂಕೆ ಹುಟ್ಟುವಂತಾಯಿತು.

ಮಧ್ಯಾಹ್ನ ನಾಲ್ಕು ಗಂಟೆಯ ಹೊತ್ತಿಗೆ ಹಿಂದಿನ ದಿನ ಜಾಕಿಯನ್ನು ತೀರ್ಥಹಳ್ಳಿಯ ಆಸ್ಪತ್ರೆಗೆ ಸಾಗಿಸಿಕೊಂಡು ಹೋಗಿದ್ದ ಪುಟ್ಟಣ್ಣ ಬಾಡಿದ ಮೋರೆ ಹಾಕಿಕೋಡು ಮುತ್ತಳ್ಳಿಗೆ ಬಂದನು. ಅವನನ್ನು ಕಂಡ ಹೂವಯ್ಯ ಕ್ಷಣಕಾಲ ದಿವಾಸ್ವಪ್ನದಿಂದ ಎಚ್ಚತ್ತವನಂತಾಗಿ “ಜಾಕಿ ಹೇಗಿದ್ದಾನೆ?” ಎಂದು ಕೇಳಿದನು.

ಚಿನ್ನಯ್ಯ, ಗೌರಮ್ಮನವರು, ಲಕ್ಷ್ಮಿ, ಕಾಳ ಮೊದಲಾದವರೆಲ್ಲರೂ ಪುಟ್ಟಣ್ಣನ ಸುತ್ತ ಕಾತರತೆಯಿಂದ ಆಲಿಸತೊಡಗಿದರು.

ಪುಟ್ಟಣ್ಣನೂ ಅರ್ಧಗಂಟೆಯ ಕಾಲ ನಡೆದುದನ್ನೆಲ್ಲ ಸವಿಸ್ತಾರವಾಗಿ, ನಡು ನಡುವೆ ಪ್ರಯತ್ನವನ್ನು ಮಿರಿ ಉಕ್ಕಿಬರುತ್ತಿದ್ದ ಕಂಬನಿಗಳನ್ನು ಒರಸಿಕೊಳ್ಳುತ್ತ ಹೇಳಿದನು:

ದಾರಿಯ ಮೇಲೆ ಮಳೆ ಗಾಳಿ ಪ್ರಾರಭವಾಯಿತಂತೆ. ಮಳೆ ಬಹಳ ಜೋರಾಗಿ ಸುರಿಯಿತಂತೆ. ಆಗಲೇ ಜಾಕಿ ಹುಲಿ, ಕೃಷ್ಣಪ್ಪ, ಬೇಟೆ-ಇವುಗಳನ್ನು ಕುರಿತು ಹುಚ್ಚುಹುಚ್ಚಾಗಿ ಆಡತೊಡಗಿದನು.ಮಧ್ಯೆ ಮಧ್ಯೆ ಕೇಲಿದವರ ಎದೆ ಬೇಯುವಂತೆ ನೋವಿನಿಂದ ಗೋಳಿಡುತ್ತಿದ್ದನು. ಒಂದೊಂದು ಸಾರಿ “ಕೃಷ್ಣಪ್ಪಗೌಡ್ರೇ, ನಿಮ್ಮ ದಮ್ಮಯ್ಯಾ! ಬೇಡ, ಹೋಗಬ್ಯಾಡಿ! ಗಾಯದ ಹುಲಿ!” ಎಂದು ಮೊದಲಾಗಿ ತನ್ನ ಸಾಮರ್ಥ್ಯವನ್ನೆಲ್ಲ ವೆಚ್ಚಮಾಡಿ ಕಾಕು ಹಾಕಿ ಕೂಗಿ ಎದ್ದೋಡಲು ಪ್ರಯತ್ನಿಸುತ್ತಿದ್ದನು. ಏಳದಂತೆ ತಡೆಯುತ್ತಿದ್ದ ಪುಟ್ಟಣ್ಣನನ್ನು ಬಾಯಿಗೆ ಬಂದಂತೆ ಶಪಿಸಿದನು. ಅಂತೂ ಬಹುಕಷ್ಟದಿಂದ ತುಂಗಾನದಿಯ ದೋಣಿಗಂಡಿಯ ಮಳಲುದಿಣ್ಣೆಯಲ್ಲಿ ಗಾಡಿ ಬಿಟ್ಟು, ದೋಣಿಯವರಿಗೆ ದಮ್ಮಯ್ಯಗುಡ್ಡೆ ಹಾಕಿ, ಜಾಕಿಯನ್ನು ದೋಣಿಯಲ್ಲಿ ಮಲಗಿಸಿ ಹೊಳೆಯಾಚೆಗೆ ಸಾಗಿಸಿ, ಜವಳಿ ಅಂಗಡಿ ರಾಮರಾಯರ ಗಾಡಿಯ ಮೇಲೆ ಆಸ್ಪತ್ರೆಗೆ ಕೊಂಡೊಯ್ದರು… ಅಲ್ಲಿಗೆ ಹೋಗಿ ಸ್ವಲ್ಪ ಹೊತ್ತಿನಲ್ಲಿ ಅವನಿಗೆ ಪ್ರಜ್ಞೆ ತಪ್ಪಿತು. ಡಾಕ್ಟರು! ಆಸ್ಪತ್ರೆಯಲ್ಲಿಯೇ ಇಳಿದುಕೊಳ್ಳಲು ಸ್ಥಳ ಕೊಟ್ಟರು. ರಾತ್ರಿಯೆಲ್ಲ ಪುಟ್ಟಣ್ಣನಿಗೆ ನಿದ್ರೆಯಿಲ್ಲ. ಜಾಕಿಗೆ ಪ್ರಜ್ಞೆ ಹೋಗುತ್ತಿತ್ತು, ಬರುತ್ತಿತ್ತು. ಒಂದೊಂದು ಸಾರಿ ಹುಲಿಯ ಬೇಟೆಯ ವಿಚಾರವಾಗಿ ಅಸ್ಪಷ್ಟವಾಗಿ ಏನೇನನ್ನೋ ಕೂಗಿಕೊಂಡು ಕುಮುಟಿ ಬೀಳುತ್ತಿದ್ದನು….. ಎರಡು ಮೂರು ಸಾರಿ, ಹೋದ ಪ್ರಾಣ ಮತ್ತೆ ಬಂತು. “ಅಯ್ಯೋ! ಆ ಗೋಳು, ಆ ರಂಪ, ರಾಮ ರಾಮ! ನಮ್ಮ ವೈರಿಗೂ ಬೇಡ! …. ಬೆಳಗಿನ ಜಾವ ಪ್ರಾಣಹೋಯಿತು!…. ಆ ಮೇಲೆ ಪೋಲಿಸಿನವರು ಬಂದು ಏನೇನೋ ಹೇಳಿಕೆ ತೆಗೆದುಕೊಮಡರು….” ಆಮೇಲೆ ಅವನ ಜಾತಿಯವರು ’ಕಿಲಿಸ್ತರು’ ಎಲ್ಲ ಸೇರಿ ಅವರ ದೇವಸ್ಥಾನಕ್ಕಂತೆ ಹೊತ್ತುಕೊಂಡು ಹೋದರು”…. ನನಗಂತೂ ಅನ್ನ ಇಲ್ಲ ಇಷ್ಟು ಹೊತ್ತಾದರೂ. ಓಟ್ಲಾಗೆ ಕಾಫಿ ತಿಂಡಿ ತಿಂದುಕೊಂಡು ಬಂದೆ….. ಪಾಪ! ಮುಂಡೇಮಗ ದುಡುಕ್ತಿದ್ದ ಅಷ್ಘೆಹೊರತೂ! ಎಂಥ ಒಳ್ಳೆ ಮನುಷ್ಯ! ಅನ್ನಕೊಟ್ಟ ಧಣಿಗಾಗಿ ಪ್ರಾಣ ಬಿಟ್ಟನಲ್ಲಾ….”

ಪುಟ್ಟಣ್ಣ ಹೇಳಿ ಮುಗಿಸಲು ಕುಳಿತಿದ್ದವರೆಲ್ಲರೂ ದೀರ್ಘವಾಗಿ ನಿಟ್ಟುಸಿರು ಬಿಟ್ಟರು. ಗೌರಮ್ಮನವರು ಪುಟ್ಟಣ್ಣನಿಗೆ ಕೈಕಾಲು ತೊಳೆದುಕೊಂಡು ಊಟಕ್ಕೆ ಬರುವಂತೆ ಹೇಳಿ “ಕಾಳ, ನಡಿಯೋ, ಬಳ್ಳೆಹಾಕೋ. ನಾನೀಗ ಬರತ್ತೀನಿ” ಎಂದು ಸೀತೆಯ ಕೋಣೆಗೆ ಹೋದರು.

ಸಾಯಂಕಾಲ ಹೂವಯ್ಯ ನಿರೀಕ್ಷಿಸಿದ್ದಂತೆ ಶ್ಯಾಮಯ್ಯಗೌಡರು ಸೀತೆಮನೆಯಿಂದ ಬಂದರು. ಅವರ ಮನಸ್ಸು ಅಲ್ಲಿ ನಡೆದಿದ್ದ ದುರ್ಘಟನೆ ಶೋಕಗಳಿಂದ ವಿದೀರ್ಣವಾಗಿತ್ತು. ಅವರನ್ನು ನೋಡಿದರೆ ಆಳವಾದ ಹಾಳು ಬಾವಿಯನ್ನು ನೋಡಿದಂತೆ ಭಾಸವಾಗುತ್ತಿತ್ತು. ಮಾವನ ಆ ಸ್ಥಿತಿಯನ್ನು ಕಂಡೊಡನೆ ಹೂವಯ್ಯನಿಗೆ ಸ್ವಲ್ಪ ಅಧೈರ್ಯವಾಯಿತು. ತಾನು ನಿಶ್ಚಯಿಸಿದ್ದನ್ನು ತಿಳಿಸುವುದು ಉಜ್ಜಾಕರವಾಗಿ ತೋರಿತು. ಸಮಯವೂ ಸರಿಯಾಗಿ ತೋರಲಿಲ್ಲ.

ಒಂದು ಸಾರಿ ಮಾತಾಡಲು ಅವಕಾಶ ಕೊರೆತಾಗ ಶ್ಯಾಮಯ್ಯ ಗೌಡರು ಚಂದ್ರಯ್ಯಗೌಡರಿಗೂ ಹೂವಯ್ಯನಿಗೂ ಕಾನೂರು ಮನೆ ಆಸ್ತಿ ಜಮೀನು ಪಾಲಾಗುವ ವಿಚಾರವನ್ನೆತ್ತಿ, ಅದನ್ನು ಹೇಗಾದರೂ ತಪ್ಪಿಸಬೇಕು ಎಂದು ಸೂಚಿಸಿದರು. ಕಾರಣವೇನೆಂದರೆ, ಕಾನೂರು ಮನೆಗತನ ಮುತ್ತಳ್ಳಿ ಮನೆತನದಷ್ಟೇ ಸಂಪದ್ಯುಕ್ತವಾಗಿದ್ದರೂ ಚಂದ್ರಯ್ಯಗೌಡರ ’ಅಂಧಕಾರ ದರ್ಬಾರಿ’ನ ದೆಸೆಯಿಂದ ಅವರಿಗೆ ಶ್ಯಾಮಯ್ಯಗೌಡರಲ್ಲಿ ಸಾಲವಾಗಿತ್ತು. ಆದ್ದರಿಂದ ಶ್ಯಾಮಯ್ಯಗೌಡರು ಬಂಧುಗಳ ಮನೆತನದ ಹಿತದ ದೃಷ್ಟಿಯಿಂದಲೂ ಮತ್ತು ತಮ್ಮ ಸಾಲದ ಕ್ಷೇಮದ ದೃಷ್ಟಿಯಿಂದಲೂ ಮಾತಾಡುತ್ತಿದ್ದರು.

ಹೂವಯ್ಯ ಪಾಲಾಗದಿರುವುದಕ್ಕೆ ಸಾಧ್ಯವಿಲ್ಲವೆಂಬುದನ್ನು ಸಕಾರಣವಾಗಿ ತಿಳಿಸಿ, ತಾನು ಮೈಸೂರಿನಿಂದ ಬಂದ ಮೇಲೆ ಮನೆಯಲ್ಲಿ ನಡೆದ ವಿದ್ಯಮಾನಗಳಲ್ಲಿ ಹೇಳಬಹುದಾದ ಕೆಲವು ಸಂಗತಿಗಳನ್ನು ವಿಸ್ತರಿಸಿದನು.

ಶ್ಯಾಮಯ್ಯಗೌಡರು “ಏನಾದರೂ ಮಾಡಿಕೊಲ್ಳಿ” ಎಂದು ಬೇಸರದ ಧ್ವನಿಯಿಂದ ಹೇಳಿ ಸುಮ್ಮನಾದರು.

ಆ ಮಾತು ನಡೆದ ಮೇಲೆ ಹೂವಯ್ಯನಿಗೆ ಸೀತೆಯನ್ನು ತನಗೆ ಕೊಡಬೇಕೆಂಬ ವಿಚಾರವನ್ನೆತ್ತಲು ಸಂಕೋಚವಾಯಿತು. ಅಷ್ಟೇ ಅಲ್ಲ; ಅಳಿಯನಾಗುತ್ತಿದ್ದವನು ಭಯಂಕರ ದುರ್ಘಟನೆಯಿಂದ ಮಡಿದ ಮರುದಿನವೇ ಆ ಮಾತನ್ನೆತ್ತುವುದು ಅವಿವೇಕವಾಗಿಯೂ ತೋರಿತು. ಆದರೆ ಸ್ವಲ್ಪ ಹೊತ್ತಿನಲ್ಲಿಯೇ ಹೂವಯ್ಯನು ಮತ್ತೆ ಜ್ವಾಲಾಗ್ರಸ್ತನಾದನು. ತಾನೀಗಲೇ ಒಂದು ಮಾತನ್ನು ಅವರ ಕಿವಿಯಮೇಲೆ ಹಾಕಿರದಿದ್ದರೆ ಶ್ಯಾಮಯ್ಯಗೌಡರು ಇನ್ನಾರಿಗಾದರೂ ಮಾತು ಕೊಟ್ಟರೆ ಎಂತಹ ಭೀಷಣ ಪ್ರಮಾದವಾಗಬಹುದು? ಎಂಬ ಆಲೋಚನೆ ಅವನನ್ನು ಎಂತಹ ಅವಿವೇಕಕ್ಕೂ ಪ್ರೇರಿಸುವಷ್ಟರಮಟ್ಟಿಗೆ ಉರಿಯತೊಡಗಿತು. ಏನಾದರಾಗಲಿ ತನ್ನ ಮನಸ್ಸುನ್ನು ಮಾವನಿಗೆ ಹೇಳಿಯೇ ಬಿಡಬೇಕೆಂದು ದೃಢನಿಶ್ಚಯ ಮಾಡಿದನು. ಯಾವಾಗ ಹೇಳುವುದು? ಆ ಸಾಯಂಕಾಲವೇ? ತಾನು ಮುತ್ತಳ್ಳಿಯಿಂದ ಕಾನೂರಿಗೆ ಹೊರಡುವಾಗ! ಏಕೆಂದರೆ, ಹೇಳಿ ಒಡನೆಯ ಅಲ್ಲಿಂದ ಹೊರಟುಹೋಗಿಬಿಟ್ಟರೆ, ಎದುರಿಗಿದ್ದು ಪಡುವ ಲಜ್ಜೆಯಿಂದ ಸುಲಭವಾಗಿ ಪಾರಾದಂತಾಗುತ್ತದೆ!

ಹೀಗೆ ಆಲೋಚಿಸಿ, ಆಡಬೇಕಾದ ಮಾತುಗಳನ್ನೂ ಅವುಗಳ ಕ್ರಮ ವಿಧಾನಗಳನ್ನೂ ಮನದಲ್ಲಿಯೆ ಸರಿಮಾಡಿಕೊಂಡು ಕತ್ತಲೆಯಾಗುವ ಸಮಯಕ್ಕೆ ಸರಿಯಾಗಿ ಹೂವಯ್ಯ ಶ್ಯಾಮಯ್ಯಗೌಡರು ಬಳಿಗೆ ಸೋದ್ವೇಗದಿಂದ ಹೋದನು/

“ನಾನು ಹೋಗಿಬರ್‌ತ್ತೀನಿ, ಮಾವ.”

“ಕತ್ತಲೆಯಾಯ್ತಲ್ಲೊ!”

“ಪರ್ವಾಯಿಲ್ಲ ತಿಂಗಳಬೆಳಕಿರ್ತದೆ ಪುಟ್ಟಣ್ಣನೂ ಜೊತೇಲಿರತ್ತಾನೆ”

“ನಿಮ್ಮ ಮನೆಗೆ ಹೋಗೊ ಕಾಡುದಾರೀಲಿ ತಿಂಗಳ ಬೆಳಕು ಇದ್ರೇನು, ಇಲ್ದಿದ್ರೇನು? ನಾಳೆ ಬೆಳಿಗ್ಗೆ ಹೋದ್ರೇನಂತೆ?

ಕಾನೂರಿಗೆ ಹೋಗಬೇಕೆಂದಿದ್ದ ಹೂವಯ್ಯ ಹಠಾತ್ತಾಗಿ ”  ಸೀತೆಮನೆಗೆ ಹೋಗಿ, ಇವತ್ತಲ್ಲಿದ್ದು ನಾಳೆ ಬೆಳಿಗ್ಗೆ ಮನೆಗೆ ಹೋಗ್ತೀನಿ. ಬಯಲುದಾರಿ. ಅಷ್ಟೇನು ಕಷ್ಟವಾಗೋದಿಲ್ಲ” ಎಂದನು.

“ನಿಮ್ಮ ಮನೆಗಿಂತ ದೂರ ಆಗ್ತದಲ್ಲೋ?”

“ಒಳದಾರೀಲಿ ಹೋಗ್ತೀನಿ.”

“ಒಳದಾರಿ ಕಾಡಲ್ಲೇನು?”

“ಪರ್ವಾಯಿಲ್ಲ, ಪುಟ್ಟಣ್ಣಿದ್ದಾನೆ. ಅದೂ ಅಲ್ಲದೆ ಸಿಂಗಪ್ಪ ಕಕ್ಕಯ್ಯನ್ನ ಮಾತಾಡಿಸಿಕೊಂಡು ಹೋಗೋಣ ಅಂತಾ.”

ಹೂವಯ್ಯ ತಾನು ಹೇಳಬೇಕೆಂದಿದ್ದು ವಿಷಯದಲ್ಲಿ ಒಂದು ಕಣವನ್ನೂ ಹೊರಗೆಡಹದೆ ಶ್ಯಾಮಯ್ಯಗೌಡರನ್ನು ಬೀಳ್ಕೊಂಡು ಸೀತೆ ಗೌರಮ್ಮ ಚಿನ್ನಯ್ಯ ಎಲ್ಲರಿಗೂ ಹೆಳಿ, ಪುಟ್ಟಣ್ಣನೊಡಗೂಡಿ ಸೀತೆಮನೆಗೆ ಹೊರಟನು.

ಆಗಲೆ ಬೈಗು ಕಪ್ಪಾಗುತ್ತಿತ್ತು. ಶಬ್ದವನ್ನೋಡಿಸಿ ನಿಃಶಬ್ದವು ಜಗತ್ತನ್ನಾಕ್ರಮಿಸುತ್ತಿತ್ತು. ಆಕಾಶದಲ್ಲಿ ರಾರಾಜಿಸುತ್ತಿದ್ದ ಸುಧಾಂಶು ಅಮೃತಕಿರಣಗಳ ವರ್ಷವನ್ನು  ಕರೆಯತೊಡಗಿದ್ದನು.