ಮುತ್ತಳ್ಳಿಯಲ್ಲಿ ನೋವಿನ, ಸಾವಿನ, ಗೋಳಾಟದ ಮತ್ತು ಅನ್ಯಾಯ ಅಧರ್ಮಗಳ ಆ ದಾರುಣರಾತ್ರಿ ಬೆಳಗಾದ ಮಾರನೆಯ ದಿನದ ಸನ್ನವೇಶ ಭಯ ವಿಹ್ವಲವಾಗಿ ಶೋಕಪೂರ್ಣವಾಗಿತ್ತು. ಜನರು ಬಹಳ ಶ್ರಮದಿಂದ ಮನೆ ಸುಟ್ಟುಹೋಗದಂತೆ ನೋಡಿಕೊಂಡಿದ್ದರೂ ಕಣದಲ್ಲಿದ್ದ ಬಣಬೆಗಳೂ ಗಾಡಿಕೊಟ್ಟಿಗೆ ಸೌದೆಕೊಟ್ಟಿಗೆಗಳೂ ಉರಿಕರಿಯಾಗಿದ್ದ ದೃಶ್ಯ ಬಹುಜನರು ಮಡಿದುಬಿದ್ದ ಯುದ್ಧರಂಗದಂತೆ ಹತಾಶವಾಗಿತ್ತು. ಮದ್ದು ಸಿಡಿದು ಚರ್ಮ ಸುಟ್ಟು ಸುಲಿದು ಹೋಗಿ ಸತ್ತುಬಿದ್ದಿದ್ದ ಇಬ್ಬರು ಶ್ಯಾಮಯ್ಯಗೌಡರ ಜೀತದಾಳುಗಳ ಶವಗಳಂತೂ, ಕಾಗೆಹಿಂಡಿಗೆ ಕಲ್ಲೆಸೆದಂತೆ, ಮದುವೆಗೆ ನೆರೆದಿದ್ದ ಜನರನ್ನು ಚದರಿಸಿ ಓಡಿಸಿಬಿಟ್ಟುವು. ಮಾಜರು ಮಾಡಲು ಪೋಲೀಸಿನವರು ಬರುತ್ತರೆಂಬ ಸುದ್ದಿ ಕಾಗೆ ಹಿಂಡಿಗೆಸೆದ ಆ ಕಲ್ಲಾಗಿತ್ತು. ಸಾಕ್ಷಿಗಾಗಿಯೂ ಧೈರ್ಯಕ್ಕಾಗಿಯೂ ದೊಡ್ಡ ದೊಡ್ಡ ಮುಂಡಾಸದ ಗೌಡರನ್ನು ಉಳಿಸಿಕೊಳ್ಳುವುದೂ ಕೂಡ ಚಂದ್ರಯ್ಯಗೌಡರಿಗೆ ಪ್ರಯಾಸವಾಯಿತು. ಮೈಸುಟ್ಟು ಗಾಯದ ನೋವಿಗಿಂತಲೂ ಹೆಚ್ಚಾಗಿ, ಪೋಲೀಸಿನವರ ಆಗಮನದಿಂದಾಗುವ ಕಷ್ಟ ಸಂಕಟ ಹಿಂಸೆಗಳನ್ನು ನೆನೆದು ಹೆದರಿ, ಅಳುತ್ತಿದ್ದ ಶ್ಯಾಮಯ್ಯಗೌಡರಿಗೆ ಸಿಂಗಪ್ಪಗೌಡರು “ನಾವೆಲ್ಲಾ ಇದ್ದೇವೆ, ಹೆದರಬೇಡಿ” ಎಂದು ಎಷ್ಟು ಧೈರ್ಯ ಹೇಳಿದರೂ ಸಾಕಾಗಲಿಲ್ಲ. ಅಂತಹ ಘಟನೆಗಳೆಂದರೆ ಚಂದ್ರಯ್ಯಗೌಡರ ಸಾಹಸದ ನಾಲಗೆ ಉಪ್ಪಿನಕಾಯಿ ನೆಕ್ಕಿದಂತೆ ರುಚಿಗೊಂಡು ನೀರಾಡಿ ಲೊಚಗುಟ್ಟುತ್ತಿತ್ತು. ಅವರು ತಮ್ಮ ಹೆಮ್ಮಿಸೆಗಳನ್ನು ಆಗಾಗ ತಿಕ್ಕುತ್ತಾ “ಬಿಡಿ, ಬಾವಾ, ನೀವ್ಯಾಕೆ ಹೆದರ್ತೀರಿ ? ಯಾರೇನು ಖೂನಿ ಮಾಡಿದ್ದಲ್ಲ. ಖೂನಿ ಮಾಡಿದ್ದನ್ನೇ ನಿಬಾಯಿಸಿಕೊಳ್ಳಬಹುದಂತೆ ? ಈ ಚಿಲ್ಲರೆ ಕೇಸಿಗೆಲ್ಲ ಯಾರು ಹೆದರ್ತಾರೆ ?” (ಹುಲ್ಲುಬಣಬೆ, ಸೌದೆಕೊಟ್ಟಿಗೆ, ಗಾಡಿಕೊಟ್ಟಿಗೆಗಳು ಸುಟ್ಟುಹೋಗಿ, ಇಬ್ಬರು ಸತ್ತು, ಮತ್ತೊಬ್ಬರಿಗೆ – ಅವರು ಮನೆಯ ಯಜಮಾನರು, ಸಾಯುವಷ್ಟು ಮೈಸುಟ್ಟುಹೋಗಿದ್ದುದು ಚಂದ್ರಯ್ಯಗೌಡರಿಗೆ ಚಿಲ್ಲರೆ ಕೇಸು.) ಎಂದು ನಶ್ಯ ಹಾಕಿಕೊಂಡು “ಈ ಇನಿಸ್ಪೆಕ್ಟರು, ಈ ಪೋಲೀಸು ಇವರೇನು ನಾ ಕಾಣದವರೇ ? ಬ್ಯಾಳೆಕಾಳೆಲ್ಲ ನಂಗೊತ್ತಿದೆ. ಕೈ ಬಿಸಿಯಾಗಿ, ಮನಸ್ಸು ಖುಷಿಯಾದ್ರೆ ಸೈ !” ಎಂದು ತಮ್ಮ ತಮ್ಮ ಮನೆಗಳಿಗೆ ಪರಾರಿಯಾಗಲು ಇಷ್ಟವಿದ್ದರೂ ದಾಕ್ಷಿಣ್ಯಕ್ಕೊಳಗಾಗಿ ಉಳಿದುಕೊಂಡಿದ್ದ ಗೌಡರುಗಳನ್ನೆಲ್ಲ ನೋಡಿ, ತಮ್ಮ ಪ್ರತಾಪದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿದ್ದಕ್ಕಾಗಿ ಹಿಗ್ಗುತ್ತಿದ್ದರು.

ತೀರ್ಥಹಳ್ಳಿಯಿಂದ ಡಾಕ್ಟರೂ ಪೋಲೀಸಿನವರೂ ಬಂದರು. ಕಾಕಿ ಬಟ್ಟೆ, ಚರ್ಮದ ಬೆಲ್ಟು, ತಳಿಸುವ ಗುಂಡಿಗಳು, ಆ ನಂಬರು ಬಿಲ್ಲೆಯ ಪೋಲೀಸು ರುಮಾಲು, ಪಶುಖುರಗಳನ್ನು ಜ್ಞಾಪಕಕ್ಕೆ ತರುವಂತೆ ಸದ್ದು ಮಾಡುವ ಬೂಟ್ಸು, ಬೆಲ್ಟಿಗೆ ಸಿಕ್ಕಿಸಿಕೊಂಡಿರುವ ದೊಣ್ಣೆ – ಇವುಗಳಿಂದಲೂ ಮತ್ತು ಅವರವರ ಅನಾಗರಿಕ ಕ್ರೂರಮುಖ ಭಾವಗಳಿಂದಲೂ ಹಳ್ಳಿಗರಿಗೆ ಭೀಷಣವಾಗಿ ತೋರುತ್ತಿದ್ದ ಪೋಲೀಸಿನವರ ನಡುವೆ ಆ ಸೌಮ್ಯವೇಷದ ಡಾಕ್ಟರು, ಅಷ್ಟೇನೂ ಮನಮೋಹಿಸುವ ವ್ಯಕ್ತಿಯಲ್ಲದಿದ್ದರೂ, ರಾಕ್ಷಸರ ಮಧ್ಯೆ ದೇವತೆಯಂತೆಯೂ ಅಥವಾ – ಜೈಮಿನಿಭಾರತದ ಪರಿಚಯವಿದ್ದ ಸಿಂಗಪ್ಪಗೌಡರಿಗೆ ‘ಕಾಕಸಂಘಾತದೊಳಗಿರ್ದ ಕೋಗಿಲೆ’ಯಂತೆಯೂ ಕಂಡುಬಂದರು.

ಹೆಣಗಳಿಗೂ ಕೂಡ ಬೇಜಾರಾಗುವಷ್ಟರ ಮಟ್ಟಿಗೆ ದೀರ್ಘವಾಗಿತ್ತು ಆ ಮಾಜರು ! ವಿಚಾರಣೆಗೆ ಒಳಪಟ್ಟವರಲ್ಲಿ ಕೆಲವರಿಗಂತೂ ತಾವು ಹೆಣಗಳಾಗಿದ್ದರೇ ಲೇಸಾಗಿತ್ತು ಎಂದು ಕರುಬುವಷ್ಟರಮಟ್ಟಿಗಾಯಿತು. ಅಂತೂ ಸ್ವಲ್ಪ ಹೆಚ್ಚು ಕಡಿಮೆ ಪೋಲೀಸಿನವರಂತೆಯೆ ಅಂತಃಕರಣವಿದ್ದುದರಿಂದ ಚಂದ್ರಯ್ಯಗೌಡರು ಇನಿಸ್ಪೆಕ್ಟರ ಅಂತರಂಗವನ್ನು ಚೆನ್ನಾಗಿ ತಿಳಿದು, ಅಂತರಂಗವಾಗಿ ಅವರನ್ನು ಸಂತೃಪ್ತಿಗೊಳಿಸಿ ‘ಕೇಸು ಮೈಮೇಲೆ ಬರದಂತೆ ನಿಬಾಯಿಸಿದರು.’

ಆ ದಿನ ಮುತ್ತಳ್ಳಿಯಲ್ಲಿ ಪೋಲೀಸಿನವರು ‘ಬಕ್ರೀದ್’ ಮಾಡಿಬಿಟ್ಟರು ! ಅವರು ಕೇಳಿದಷ್ಟು ಕೋಳಿಗಳು ; ಅದರಲ್ಲಿಯೂ ಮೊಟ್ಟೆಯಿಡುವ ಹೇಂಟೆಗಳಂತೆ ! ಗೋಧಿ, ತುಪ್ಪ, ಹಾಲು, ಸಕ್ಕರೆ – ಇತ್ಯಾದಿ ಅಡುಗೆಯ ‘ಸಾಹಿತ್ಯ’ ಕಾಮಧೇನು ಕಲ್ಪವೃಕ್ಷಗಳೂ ನಾಚುವಂತೆ ಸರಬರಾಯಿ ಆಯಿತು. ಸತ್ತವರು ಶ್ಯಾಮಯ್ಯಗೌಡರ ಸ್ವಂತ ಜೀತದಾಳುಗಳಾಗಿದ್ದುದರಿಂದಲೂ, ಶ್ಯಾಮಯ್ಯಗೌಡರು ನಾಲ್ಕು ಜನಕ್ಕೆ ಜೀತ, ದಾಳುಗಳಾಗಿದ್ದುದರಿಂದಲೂ ಶ್ಯಾಮಯ್ಯಗೌಡರು ನಾಲ್ಕು ಜನಕ್ಕೆ ಬೇಕಾಗಿದ್ದವರಾಗಿದ್ದುದರಿಂದಲೂ, ಕೋಟಲೆ ಮಾಡುವ ತಂಟೆಯ ಆಸಾಮಿಗಳನ್ನೂ ಮಾಜರೀಗೆ ಉಪಾಯವಾಗಿ ಸೇರಿಸಿಬಿಟ್ಟಿದ್ದುದರಿಂದಲೂ ಯಾರೂ ತಳ್ಳಿ ಅರ್ಜಿ ಗಿಳ್ಳಿ ಅರ್ಜಿಗಳನ್ನು ಹಾಕಿ ಕೆಸರೆಬ್ಬಿಸುವ ಉದ್ಯಮಕ್ಕೆ ಹೋಗಲಿಲ್ಲ.

ವಿಶೇಷ ಕಾರಣಗಳೊದಗಿದ್ದರಿಂದ ಮರುದಿಬ್ಬಣವೆ – ಮದುಮಕ್ಕಳು ಹಿಂದೆ ಮುಂದೆ ಬಂದು ಬಂದುಹೋಗುವುದು – ಮೊದಲಾದ ಪದ್ಧತಿಗಳೊಂದೂ ನಡೆಯಲಿಲ್ಲ. ಮದುಮಗನಾಗಿದ್ದ ರಾಮಯ್ಯನಿಗೆ ವಿವಾಹೋತ್ಸವದಲ್ಲಿ ನಡೆದ ಅನಾಹುತಗಳಿಗೂ ಅವಮಾನ ಕಷ್ಟ ಸಂಕಟಗಳಿಗೂ ತಾನೇ ಕೇಂದ್ರವೂ ಮುಖ್ಯ ಕಾರಣವೂ ಆಗಿದ್ದಂತೆ ತೋರಿ ಮಹಾ ಖಿನ್ನನಾದನು. ಇಬ್ಬರು ಜೀತದಾಳುಗಳ ಕೊಲೆಗೆ ಮಾತ್ರವಲ್ಲದೆ, ಪೋಲೀಸು ಗೀಲೀಸಿನವರಿಗೆ ಅವೇದ್ಯವಾದ ರೀತಿಯಲ್ಲಿ ಮತ್ತೊಂದು ಬಾಳ್ಗೊಲೆಗೂ ತಾನು ಕಾರಣವಾಗುತ್ತಿದ್ದಂತೆ ಅನುಭವವಾಯಿತು. ಮರುದಿನವೇ ಕಾನೂರಿಗೆ ಹಿಂತಿರುಗಿದವನು ಮುಂದೇನು ಮಾಡಬೇಕೆಂದು ಆಲೋಚಿಸಿತೊಡಗಿದನು.

ರಾಮಯ್ಯನ ಕಳ್ಳಮನಸ್ಸು ಮಾಡುತ್ತಿದ್ದ ಪ್ರಯತ್ನ ತಪ್ಪಿಸಿಕೊಳ್ಳುವುದಕ್ಕಾಗಿದ್ದಿತೇ ಹೊರತು ತಿದ್ದಿಕೊಳ್ಳುವುದಕ್ಕಾಗಿರಲಿಲ್ಲ. ಧಾರೆಯ ಮಂಟಪದಲ್ಲಿ ಉದ್ವೇಗವಾದ ಜ್ವಾಲೆಗೆ ಸಿಕ್ಕಿದ್ದಾಗ, ಆಲೋಚನೆಗೆ ಸ್ವಲ್ಪವೂ ಅವಕಾಶವಿಲ್ಲದಿದ್ದಾಗ, ಅವನ ಹೃದಯ ಸ್ವಾಭಾವಿಕವಾಗಿಯೆ ಬಹುಕಾಲದಿಂದಲೂ ಬೆಸೆದಿದ್ದ ನಿಗೂಢ ಬಾಂಧವ್ಯದ ಮಹಿಮೆಯಿಂದ ಹೂವಯ್ಯನನ್ನು ನೆನೆದಿದ್ದಿತು ; ಹೂವಯ್ಯನೊಡನೆ ತನ್ನ ಅಪರಾಧ ಮತ್ತು ದುರಾಲೋಚನೆಗಳನ್ನೆಲ್ಲ ಹೇಳಿ ತಪ್ಪನೊಪ್ಪಿಕೊಂಡು, ಸೀತೆಯ ಕಾಗದವನ್ನೂ ಹೂವಯ್ಯನಿಗೆ ಕೊಟ್ಟು, ತಾನು ಆಕೆಗೆ ಮಾಂಗಲ್ಯಸೂತ್ರವನ್ನು ಕಟ್ಟದಿದ್ದ ವಿಷಯವನ್ನೂ ನಿರ್ವಂಚನೆಯಿಂದ ಧೈರ್ಯವಾಗಿ ಸಾರಿಹೇಳಿ, ತಂದೆಯ ಇಚ್ಛೆಗೆ ವಿರುದ್ದವಾದರೂ ಚಿಂತೆಯಿಲ್ಲ, ಸೀತೆಯನ್ನು ಅಂಧಕಾರದಿಂದ ಪಾರುಗಾಣಿಸಿ, ತನ್ನ ಆತ್ಮವನ್ನು ರಕ್ಷಿಸಿಕೊಳ್ಳಬೇಕೆಂದು ಸನ್ಮನಸ್ಸು ಮಾಡಿದ್ದನು. ಆದರೆ ಮದುವೆ ಮುಗಿದು ಮನೆಗೆ ಬಂದು ಆಲೋಚನೆಗೆ ಪ್ರಾರಂಭ ಮಾಡಿದ ಮೇಲೆ ರಾಮಯ್ಯನ ಬುದ್ದಿ ಅಡ್ಡದಾರಿ ಹಿಡಿಯಿತು. ಬೆಂಕಿಯ ಹೊಳೆಯನ್ನು ದಾಟಿನಿಂದ ಅವನ ಮನಸ್ಸು ಇನಿತು ನೆಮ್ಮದಿಯಾಗಿ “ಕಪ್ಪೆಯನ್ನೂ ಹೇಗೋ ನುಂಗಿಬಿಟ್ಟದ್ದಂತೂ ಆಯಿತು. ನುಂಗುತ್ತಿದ್ದಾಗ ಕಪ್ಪೆ ಗಂಟಲಲ್ಲಿ ಸಿಕ್ಕಿ ‘ಅಹಿಂಸೆಯೇ ಪರಮಧರ್ಮ’ ಎಂದು ಅನ್ನಿಸಿತು. ಇನ್ನು ಕಕ್ಕುವುದೂ ಕಷ್ಟದ ವಿಷಯವೆ ಆದ್ದರಿಂದ ಅರಗಿಸಿಕೊಳ್ಳಲು ಪ್ರಯತ್ನಿಸುವುದೇ ಲೇಸು ” ಎಂದು ಹೇಳಿಕೊಳ್ಳುವ ಹಾವಿನಂತಾಯಿತು. ಸೀತೆಯ ಪ್ರೇಮಕ್ಕಿಂತಲೂ ಹೆಚ್ಚಾಗಿ ಸೀತೆಯೆಬೇಕಾಗಿದ್ದ ಅವನು ಪ್ರಾಣ ಸಹಿತವಲ್ಲದಿದ್ದರೆ ಪ್ರಾಣರಹಿತವಾಗಿಯಾದರೂ ನವಿಲು ಸಿಕ್ಕಲಿ ಎನ್ನುವ ಬೇಡನಂತಾದನು. ಮೊದಲನೆಯದರಿಂದ ಲಾಭವಾದರೂ ಎರಡನೆಯದರಿಂದ ನಷ್ಟವಿಲ್ಲವಷ್ಟೆ ? ಸೌಂದರ್ಯದ ವಸ್ತುವಾಗಿದ್ದರೆ ಆಹಾರಕ್ಕಾದರೂ ಒದಗುತ್ತದೆಯಲ್ಲವೆ ? ಸೀತೆಯ ಪರವಾಗಿ ರಾಮಯ್ಯನಲ್ಲಿದ್ದ ಭಾವಕ್ಕೆ ‘ಎದೆಯ ಒಲುಮೆ’ ಎನ್ನುವುದಕ್ಕಿಂತಲೂ ‘ಮೆಯ್ಯ ಹಸಿವೆ’ ಎಂದು ಹೆಸರಿಡಬಹುದಾಗಿತ್ತು. ಸೀತೆ ಮನದನ್ನಳಾಗಿರದಿದ್ದರೂ ಚಿಂತೆಯಿಲ್ಲ. ಇಂದ್ರಿಯ ಕ್ಷುಧೆಗೆ ಮೃಷ್ಟಾನ್ನವಾಗುತ್ತಾಳಷ್ಟೆ ? ಹೊಳೆಯಲ್ಲಿ ಕೊಚ್ಚಿಕೊಂಡುಹೋಗುವವನು ತನ್ನ ಜೀವಸಂರಕ್ಷಣೆಗಾಗಿ, ಬದುಕಿಸುವ ಬೆಂಡುಮರವೆಂದು ಭಾವಿಸಿ, ತನ್ನನ್ನು ತಿನ್ನಲು ನುಗ್ಗಿಬರುವ ಮೊಸಳೆಯನ್ನೂ ಬಲವಾಗಿ ಅಪ್ಪಿಕೊಳ್ಳುವಂತೆ ರಾಮಯ್ಯ ತನ್ನ ಆಲೋಚನೆಗಳನ್ನು ಬಿಗಿಯಾಗಿ ತಬ್ಬಿಕೊಂಡನು. ತನ್ನ ಅಂತಸ್ಸಾಕ್ಷಿ ಎಲ್ಲಿಯಾದರೂ ಹೆಡೆಯೆತ್ತಿ ಎದೆಯಲ್ಲಿ ವಿಷವನ್ನು ಕಾರಿಬಿಟ್ಟೀತು ಎಂದುಕೊಂಡು ಅದನ್ನೂ ಮರ್ದಿಸಿ ಮಲಗಿಸಲು, ಆತ್ಮವಂಚನೆಯ ಉಪಾಯಗಳನ್ನೂ ಕೈಗೊಂಡನು. ಹಿಂದೆ ತಾನು ಸ್ವಲ್ಪವೂ ನಂಬದಿದ್ದ ವ್ರತ, ಪೂಜೆ, ಬಲಿ, ಹರಕೆ, ದೇವರು ಕೇಳಿಸುವುದು, ಹಣ್ಣುಕಾಯಿ ಹಾಕಿಸುವುದು. ಮಂತ್ರ ರಕ್ಷೆ ಕಟ್ಟಿಕೊಳ್ಳುವುದು, ದಾನ ಮಾಡುವುದು, ದಕ್ಷಿಣೆ ಕೊಡುವುದು ಮೊದಲಾದವುಗಳ ಮಹಾ ಘಂಟಾನಾದದಿಂದ ಆತ್ಮದ ಅಂತರ್ವಾಣಿಯಿಂದ ಕಿರುದನಿಯನ್ನು  ಮುಚ್ಚಿ ಮುಳುಗಿಸಿ ಇಲ್ಲಗೈಯಲು ಹವಣಿಕೆ ಹೂಡಿದನು. ಮೊತ್ತಮೊದಲು, ಪೀಠಿಕೆಯ ರೂಪವಾಗಿ, ಆ ದಿನವೇ, ವೆಂಕಪ್ಪಯ್ಯನವರು ಮಂತ್ರಿಸಿ ಕೊಟ್ಟ ತಾಮ್ರದ ತಾಯಿತಿಯೊಂದನ್ನು ತೋಳಿಗೆ ಕಟ್ಟಿಕೊಂಡನು. ಮತಾಂತರ ಹೊಂದಿದವರ ಮತಭ್ರಾಂತಿ ಅತ್ಯುಗ್ರವಾಗುತ್ತದೆಯಲ್ಲವೆ ? ಸ್ವಪ್ರಯೋಜನವೂ ಅದಕ್ಕೆ ನೆರವಾದರೆ ಮಿತಿಯೇ ಇರುವುದಿಲ್ಲ !

ರಾಮಯ್ಯನ ಮನಸ್ಸು ತನ್ನ ಅಂತಸ್ಸಾಕ್ಷಿಗೆ ಕಳವಳವನ್ನುಂಟುಮಾಡುವ ಜಟಿಲ ಸನ್ನಿವೇಶದಿಂದ ಪಾರಾಗಲು ಹೇಗೆ ಒಂದು, ಹುಸಿಯಾದರೂ ಚಿಂತೆಯಿಲ್ಲ, ಹೊಸ ಹಾದಿಯನ್ನು ಕಂಡುಹಿಡಿದಿತ್ತೊ ಹಾಗೆಯೆ ಸೀತೆಯ ಮನಸ್ಸೂ ತನಗೆ ಅನಿಷ್ಟಕರವಾದ ಮದುವೆಯ ಪ್ರಕರಣದಿಂದ ಪಾರಾಗಲೋಸ್ಕರ ಅದೆ ಮೇಲೆ ವಿಸ್ಮೃತಿಯ ಪರದೆಯನ್ನು ಎಳೆದುಬಿಟ್ಟಿತ್ತು, ಆ ಪರದೆ ಸಮಯ ಸಂದರ್ಭಗಳಿಗನುಸಾರವಾಗಿ ವಿವಿಧ ವೇಷಗಳನ್ನು ಧರಿಸುತ್ತಿತ್ತು. ಒಂದು ಸಾರಿ ಕೃಷ್ಣಪ್ಪನ ದೆಯ್ಯ ಮೈಮೇಲೆ ಬಂದಂತೆ ; ಮತ್ತೊಂದು ಸಾರಿ ಪ್ರಜ್ಞೆ ತಪ್ಪಿದಂತೆ ; ಇನ್ನೊಂದು ಸಾರಿ ಮೂರ್ಚೆರೋಗದಂತೆ ; ಇತ್ಯಾದಿ. ಆದ್ದರಿಂದ ಆಕೆಯ ಜಾಗ್ರಚ್ಚಿತ್ತದಲ್ಲಿ ಮದುವೆಯ ಅರಿವು ಒಂದಿನಿತೂ ಇರಲಿಲ್ಲ. ಆಕೆ ಚೆನ್ನಾಗಿ ಮೈತಿಳಿದ ಸಮಯಗಳಲ್ಲಿ ತನ್ನ ಮೈಮೇಲೆಯೂ ಸುತ್ತಣ ಸನ್ನಿವೇಶಗಳಲ್ಲಿಯೂ ಆದ ಮತ್ತು ಆಗುತ್ತಲಿದ್ದ ಘಟನೆಗಳನ್ನು ತನ್ನ ಜಾಗ್ರಚ್ಛಿತ್ತಕ್ಕೆ ವಿರೋಧವಾಗದ ರೀತಿಯಲ್ಲಿ ವಿವರಿಸುತ್ತಿದ್ದಳು. ಯಾರಾದರೂ ತಿದ್ದಲೆಳಸಿದರೆ ರೇಗುತ್ತಿದ್ದಳು ; ಬಾಯಿಗೆ ಬಂದಂತೆ ಬಯ್ಯುತ್ತಿದ್ದಳು ; ಕೆಲವು ಸಾರಿ ಮೈಮೇಲೆ ಬೀಳಲೂ ಹೋಗುತ್ತಿದ್ದಳು. ಜನರಿಗೆ ಆಗ ಬಯ್ಯುತ್ತಿದ್ದಳು ; ಕೆಲವು ಸಾರಿ ಮೈಮೇಲೆ ಬೀಳಲೂ ಹೋಗುತ್ತಿದ್ದಳು. ಜನರಿಗೆ ಆಗ ಅವಳ ಹುಚ್ಚು ಹೆಚ್ಚಾಗಿ ಕೆರಳಿದಂತೆ ತೋರುತ್ತಿತ್ತು.

ಮದುವೆ ನಡೆದ ಮಾರನೆಯ ದಿನ ಮುತ್ತಳ್ಳಿಯಲ್ಲಿ ಪೋಲಿಸಿನವರೂ ಡಾಕ್ಟರೂ ಬಂದು ಮಾಜರು ಮೊದಲಾದ ಕಾರ್ಯಗಳಲ್ಲಿ ತೊಡಗಿದ್ದಾಗ, ಚಂದ್ರಯ್ಯಗೌಡರು ಸಿಂಗಪ್ಪಗೌಡರಾದಿಯಾಗಿ ರಾಮಯ್ಯ, ಚಿನ್ನಯ್ಯ, ಸೇರೆಗಾರರು, ವಾಸು, ಎಲ್ಲರೂ ಅವರುಗಳ ಸೇವೆ ಶುಶ್ರೂಷೆಗಳಲ್ಲಿ ತೊಡಗಿದ್ದಾಗ, ಗೌರಮ್ಮನವರೂ ಮನೆಯಲ್ಲಿ ಉಳಿದಿದ್ದ ಇತರ ಸ್ತ್ರೀಯರೂ ಕಿಟಕಿಗಳಲ್ಲಿಯೂ ಬಾಗಿಲು ಸಂದಿಗಳಲ್ಲಿಯೂ ಕಿಕ್ಕಿರಿದು ನೆರೆದು ಭಯೋದ್ವಿಗ್ನರಾಗಿ ನೋಡುತ್ತಿದ್ದಾಗ, ಸೀತೆಯೊಬ್ಬಳೇ ಕೊಟಡಿಯಲ್ಲಿ ಕುಳಿತು ಲಕ್ಷ್ಮಿಯೊಡನೆ ಮಾತಾಡುತ್ತಿದ್ದಳು. ಆ ಮಾತಿನ ವಿಷಯವಿದು : ಸೀತೆ ಪ್ರಜ್ಞೆ ತಿಳಿದು ನೋಡುತ್ತಾಳೆ, ತಾನು ಮದುಮಗಳಂತೆ ಅಲಂಕೃತಳಾಗಿದ್ದಾಳೆ ! ಅದನ್ನು ಹೇಗಾದರೂ ವಿವರಿಸಿದ ಹೊರತೂ ಆಕೆಯ ಮನಸ್ಸಿಗೆ ನೆಮ್ಮದಿಯೆಲ್ಲಿ ? ತಾನು ಮೇಳಿಗೆ ತೇರು ನೋಡಲು ಹೋಗಿದ್ದಂತೆಯೂ, ಅದಕ್ಕಾಗಿ ಶೃಂಗಾರ ಮಾಡಿಕೊಂಡಿದ್ದಂತೆಯೂ ತಂಗಿಗೆ ಉಪಪತ್ತಿ ಹೇಳುತ್ತಿದ್ದಳು.

ಅಕ್ಕಯ್ಯನ ಮಾತು ಕೇಳಿ ಲಕ್ಷ್ಮಿಯ ಮನಸ್ಸಿಗೆ ಮೊದಲು ಸ್ವಲ್ಪ ಗಡಿಬಿಡಿಯಾಗಿ “ಹೌದು ಕಣೇ ! ನಿನ್ನೆ ರಾತ್ರಿ ನಿಮಗೆ ಮದುವೆ ಆತು !” ಎಂದು ಒಂದೇ ಉಸಿರಿನಲ್ಲಿ ಅಕ್ಕನ ಮಾತನ್ನೂ ಸಮರ್ಥಿಸಿ, ತನ್ನ ತಿದ್ದುಪಡಿಯನ್ನೂ ಸೂಚಿಸಿದಳು.

ಸೀತೆ ನಕ್ಕು “ಮದುವೆ ಅಲ್ಲ ಕಣೇ, ತೆರಿಗೆ ಹೋಗಿದ್ದೆ ! ಥೂ, ನಿನ್ನ ! ನಾ ಹೇಳಿದ್ದು ನಿಮಗೆ ಗೊತ್ತಾಗುವುದೇ ಇಲ್ಲ !” ಎಂದು ತಂಗಿಯ ಕಡೆಗೆ ಮುದ್ದಾಗಿ ನೋಡಿದಳು.

ಲಕ್ಷ್ಮಿ ಸ್ವಲ್ಪವೂ ಹಿಂದುಮುಂದು ನೋಡದೆ “ಹ್ಞೂ ! ನೀ ಹೇಳಿದ್ದೇ ನಾ ಹೇಳಿದ್ದೂ !” ಎಂದಳು.

ಬುದ್ಧಿವಂತರು ಅರಿಯಲಾರದ ಯಾವುದೋ ತರ್ಕದ ಸಹಾಯದಿಂದ ಆ ವಿಚಾರದಲ್ಲಿ ಇಬ್ಬರೂ ತೃಪ್ತರಾದರು.

ಲಕ್ಷ್ಮಿ ಮತ್ತೆ “ಅಪ್ಪಯ್ಯನ ಮೈಯೆಲ್ಲ ಬೆಂಕಿಬಿದ್ದು ಸುಟ್ಟುಹೋಗ್ಯಾದೆ ” ಎಂದು ಮುಖದಲ್ಲಿ ವ್ಯಸನದ ಡುಬ್ಬವನ್ನೇ ಪ್ರದರ್ಶಿಸಿ ಹೇಳಿದಳು.

ಸೀತೆ “ಹೌದು ! ನಾವೆಲ್ಲ ತೇರಿಗೆ ಹೋಗಿದ್ದಾಗ ಅವರೆಲ್ಲ ಸೇರಿಕೊಂಡು ಚೆನ್ನಾಗಿ ಹೊಡೆದುಬಿಟ್ಟರು. ಅಪ್ಪಯ್ಯ ಸತ್ತುಹೋಗ್ತಿದ್ರು, ಹೂವಯ್ಯಬಾವ ಬಂದು ಬಿಡಿಸದಿದ್ದರೆ !” ಎಂದಳು.

‘ಅವರೆಲ್ಲ ಸೇರಿಕೊಂಡು ಚೆನ್ನಾಗಿ ಹೊಡೆದುಬಿಟ್ಟರು !’ ಎನ್ನುವಾಗ ಸೀತೆಯ ಮನಸ್ಸು ತನಗಾಗದವರನ್ನೆಲ್ಲ ವೈರಿಗಳನ್ನಾಗಿ ಗುಂಪುಕಟ್ಟಿತ್ತು.

ಜಾಗ್ರಚ್ಛಿತ್ತದ ತರ್ಕವೊಂದೇ ತರ್ಕವಲ್ಲವಷ್ಟೆ ? ತರ್ಕವೂ ಬಹುರೂಪಿ, ಅಸಂಖ್ಯ ವೇಷಿ !

ಸೀತೆ ತನಗೆ ಸ್ವಸ್ಥವಿಲ್ಲದಿದ್ದರೂ ತಂದೆಯ ಶುಶ್ರೂಷೆ ಮಾಡಬೇಕೆಂದು ಹಟಹಿಡಿದು, ಅದನ್ನು ಕೈಕೊಂಡೇಬಿಟ್ಟಳು. ರಗಳೇ ಕಡಿಮೆಯಾದರೆ ಸಾಕೆಂದು ಎಲ್ಲರೂ ಸುಮ್ಮನಾದರು. ತನಗಾಗಿದ್ದ ಅಪಾಯದ ಆಗಾಧತೆ ಆಕೆಯಲ್ಲಿ ಸ್ಫುರಿಸಿತ್ತು. ಆದರೆ ಅದರ ಉಪಪತ್ತಿ ಮಾತ್ರ ಆಕೆಯ ಇಚ್ಛೆಗನುಸಾರವಾಗಿ ಬೇರೆಯಾಗಿತ್ತು. ಅಷ್ಟೇ ಅಲ್ಲ ; ಶ್ಯಾಮಯ್ಯಗೌಡರಿದ್ದ ಕೊಠಡಿಯಲ್ಲಿ ಚಂದ್ರಯ್ಯಗೌಡರಾಗಲಿ, ಸೀತೆಗೊಲ್ಲದ ಇತರರು ಯಾರೇ ಆಗಲಿ ಕುಳಿತಿದ್ದರೆ ಅವಳು ಅವರನ್ನು ಸ್ವಲ್ಪವೂ ಗಮನಿಸುವಂತೆ ತೋರುತ್ತಿರಲಿಲ್ಲ. ನವವಧುವಿಗಿರಬೇಕಾಗಿದ್ದ ಲಜ್ಜೆಯ ಸುಳಿವೂ ಇರಲಿಲ್ಲ. ಅದನ್ನೆಲ್ಲ ಕಂಡು ಚಂದ್ರಯ್ಯಗೌಡರಿಗೆ ಸ್ವಲ್ಪ ಹೊಟ್ಟೆಯುರಿಯಾಯಿತು. ಆದರೆ ಸನ್ನಿವೇಶ ಹುಕುಂ ಚಲಾಯಿಸುವುದಕ್ಕೆ ಸರಿಯಾಗಿರಲಿಲ್ಲವಾಗಿ ಸುಮ್ಮನಾದರು.

ಕೆಲ ದಿನಗಳ ಮೇಲೆ ಒಂದು ಸಾರಿ ಸೊಸೆ ತಮ್ಮನ್ನು ಕಡೆಗಣ್ಣಿನಿಂದಲೂ ಲೆಕ್ಕಿಸದೆ ತನ್ನ ತಂದೆಗೆ ಅನ್ನಪಾನಗಳನ್ನು ಕೊಟ್ಟು ದಿಟ್ಟತನದಿಂದ ಹೋಗುತ್ತಿರಲು, ಮುತ್ತಳ್ಳಿ ಬಾವನನ್ನು ಮಾತಾಡಿಸಿಕೊಂಡು ಹೋಗಲು ಬಂದಿದ್ದ ಚಂದ್ರಯ್ಯಗೌಡರು ಬೇಕಾಗಿ, ‘ಸೀತೆ, ನಂಗೊಂದು ಲೋಟಾ ತಣ್ಣೀರು ತಗೊಂಡು ಬಾ, ಕುಡಿಯಕ್ಕೆ !’ ಎಂದರು. ಆ ಧ್ವನಿಯನ್ನು ಕೇಳಿದ ಕೂಡಲೆ, ಬಾಲವನ್ನು ಮೆಟ್ಟಿದ ಸರ್ಪಿಣಿ ಹೆಡೆಯೆತ್ತಿ ತಿರುಗಿ ನಿಲ್ಲುವಂತೆ, ಸೀತೆ ತಲೆಯನ್ನು ಮಾತ್ರ ತಿರುಗಿಸಿ, ದುರುದುರನೆ ನೋಡಿ, ತಿರಸ್ಕಾರಪೂರ್ವಕವಾಗಿ ಅಲ್ಲಿಂದ ಹೊರಟುಹೋದಳು. ನೀರನ್ನೂ ತರಲಿಲ್ಲ. ಚಂದ್ರಯ್ಯಗೌಡರು ನಾಲಗೆ ಕಚ್ಚಿಕೊಂಡು ‘ಮನೆಗೆ ಬಾ ನೀನು. ದೆಯ್ಯ ಬಿಡಿಸ್ತೀನಿ’ ಎಂದು ಮನಸ್ಸಿನಲ್ಲಿಯೆ ಬುಸುಗುಟ್ಟಿದರು.

ಮದುವೆ ಪೂರೈಸಿದ ಒಂದು ವಾರದೊಳಗೆ ಮತ್ತೊಂದು ಗಾಳಿಯ ಸುದ್ದಿಯೂ ಹಬ್ಬತೊಡಗಿತು : ಹುಲ್ಲುಬಣಬೆಗಳಿಗೆ ಬೆಂಕಿ ಬಿದ್ದುದಕ್ಕೆ ಕಾರಣ ಬಿರುಸು ಬಾಣಗಳಲ್ಲ, ಹೂವಯ್ಯ ಮತ್ತು ಅವನ ಪಕ್ಷದವರು ಎಂದು. ಅದಕ್ಕೆ ಮೂಲವೂ ಆಧಾರವೂ ಚಂದ್ರಯ್ಯಗೌಡರಿಗೆ ಮೊದಲು ದೊರಕಿದುದು ಸೇರೆಗಾರರಿಂದ. ಧಾರೆ ಪ್ರಾರಂಭವಾಗುವುದಕ್ಕೆ ಸ್ವಲ್ಪ ಮೊದಲು ಸೋಮನು ಸಿಂಗಪ್ಪಗೌಡರ ಹತ್ತಿರ ಪಿಸುಮಾತಾಡಿಕೊಂಡು ಹೋಗಿದ್ದನ್ನು ಸೇರೆಗಾರರ ರಂಗಪ್ಪಸೆಟ್ಟರು ಅವಲೋಕಿಸಿದ್ದರು. ಆದರೆ ಆಗ ಅವರು ಅದಕ್ಕಷ್ಟು ಪ್ರಾಮುಖ್ಯತೆ ಕೊಟ್ಟಿರಲಿಲ್ಲ. ಹೋತದ ಕಳುವಿನ ಪ್ರಯತ್ನ ನಡೆದಂದಿನಿಂದ ಸೇರೆಗಾರರಿಗೆ ಸೋಮನಲ್ಲಿ ಅನೇಕ ಕಾರಣಗಳಿಂದ ದ್ವೇಷ ಹೆಚ್ಚುತ್ತಿತ್ತು. ಮದುವೆಯ ದಿನವಂತೂ ಸೋಮ ‘ಸೋಮಯ್ಯ’ ಎಂದು ಕರೆಯಿಸಿಕೊಂಡು ರಂಗಪ್ಪಸೆಟ್ಟಿಗೆ ಸರಿಸಮಾನವಾದ ಉಡುಪು ವೈಭವಗಳಿಂದ ಮೆರೆಯುತ್ತಿದ್ದುದು ಅವರ ಹೊಟ್ಟೆಕಿಚ್ಚಿಗೆ ಕಾರಣವಾಗಿತ್ತು. ಒಂದೆರಡು ಸಾರಿ, ಸೋಮನನ್ನು ‘ಸೋಮಯ್ಯ’ ಎಂದು ಕರೆದವರಿಗೆ “ಪೊಳ್ಳುಮುಂಡೇದು ! ಅದನ್ನೇಕೆ ‘ಸೋಮಯ್ಯ’ ಅಂತಾ ಕರೆಯುತ್ತೀರಿ ? ‘ಸೋಮ’ ಅಂತಾ ಕೂಗಿದರೆ ಸಾಕು ! ಈ ಕನ್ನಡಜಿಲ್ಲೆ ಸೆಟ್ಟರು ಮಕ್ಕಳಿಗೆ ಗಟ್ಟದ ಮೇಲೆ ಬಂದ ಕೂಡಲೆ ತಲೆಗೆ ಕೋಡು ಮೂಡುತ್ತದೆ !” ಎಂದು, ತಮಗೂ ಅನ್ವಯಿಸುತ್ತದೆ ಎಂಬುದನ್ನೂ ಮರೆತು, ಬುದ್ದಿವಾದ ಹೇಳಿದ್ದರು. ಆದ್ದರಿಂದಲೇ ಸೋಮ ಎಲ್ಲಿ ಸುಳಿದರೂ ಸೇರೆಗಾರರ ಕಣ್ಣು ಕೆಂಚಾಗಿ ಅವನನ್ನು ನೋಡುತ್ತಿದ್ದುದು. ಹಾಗೆಯೆ ಅವನು ಸಿಂಗಪ್ಪಗೌಡರೊಡನೆ ಗುಟ್ಟು ಮಾತಾಡಿಕೊಂಡು ಹೋದುದನ್ನೂ ನೋಡಿದ್ದರು. ಒಂದೆರಡು ದಿನಗಳ ತರುವಾಯ ಆ ದೃಶ್ಯ ಪ್ರಯೋಜನಕಾರಿಯಾಗಿಯೂ ಅರ್ಥಗರ್ಭಿವಾಗಿಯೂ ತೋರಿ, ರಂಗಪ್ಪಸೆಟ್ಟರು ಚಂದ್ರಯ್ಯಗೌಡರ ಕಿವಿಯಲ್ಲಿ ಅದನ್ನು ಊದಿದರು. ಅವರು ಸಿಂಗಪ್ಪಗೌಡರು ತಮ್ಮ ಮೇಲೆ ‘ಕುರಿಚೋರಿ’ಯ ಆಪಾದನೆಯನ್ನು ಹಬ್ಬಿಸಿದುದಕ್ಕೆ ಇಮ್ಮಡಿಯಾಗಿ ಅವರ ಮೇಲೆ ಬೆಂಕಿ ಹಾಕಿದ ಆಪಾದನೆಯನ್ನು ಹಬ್ಬಿಸಿದರು. ಅನ್ಯಾಯಕ್ಕೆ ಪ್ರತಿಯಾಗಿ ಕಾರ್ಯತಃ ಅನ್ಯಾಯ ಮಾಡುತ್ತೇವೆ ಎಂದೂ ಅವರಿವರ ಹತ್ತಿರ ಮಿಸೆ ತಿರುಗಿಸಿ ಮಾತಾಡತೊಡಗಿದರು.

ಮುತ್ತಳ್ಳಿಯವರೊಬ್ಬರೂ – ಶ್ಯಾಮಯ್ಯಗೌಡರಾಗಲಿ ಚಿನ್ನಯ್ಯರಾಗಲಿ ಗೌರಮ್ಮನವರಾಗಲಿ – ಸೇರೆಗಾರರ ಮಾತನ್ನು ಚಾಡಿಯೆಂದು ತಿಳಿದು, ನಂಬಲಿಲ್ಲ. ಆದರೆ ಚಂದ್ರಯ್ಯಗೌಡರು ವಿಷಯವನ್ನು ಅಲ್ಲಿಗೆ ಬಿಡದೆ ಆಪಾದಿತರೆಲ್ಲರೂ ದೇವರೆದುರು ನಿಂತು, ಹೊತ್ತಿಸಿಟ್ಟ ತುಪ್ಪದ ದೀಪಗಳನ್ನು ಆರಿಸಿ, ತಾವು ತಪ್ಪಿತಸ್ಥರಲ್ಲವೆಂದು ಪ್ರಮಾಣಮಾಡಲಿ ಎಂದು ತೋಳು ತಟ್ಟಿ ಮೂದಲಿಸಿದರು.

ಅದಕ್ಕೆ ಪ್ರತಿಯಾಗಿ ಸಿಂಗಪ್ಪಗೌಡರು “ಕಾನೂರು ಗೌಡರು ತಮ್ಮ ಸೊಸೆಗೆ ತಮ್ಮ ಮಗನೇ ತಾಳಿ ಕಟ್ಟಿದ್ದಾನೆಂದು ಪ್ರಮಾಣ ಮಾಡಲಿ !” ಎಂದು ಮೂದಲಿಸಿದರು. ಆ ರಹಸ್ಯ ಕೂಡ ಬಯಲಿಗೆ ಬಿದ್ದಿತು ! ಸೇರೆಗಾರರು ಸೋಮನು ಸಿಂಗಪ್ಪಗೌಡರೊಡನೆ ಪಿಸುಮಾತಾಡಿ ಹೋದುದನ್ನು ಕಂಡಿದ್ದಂತೆ ಜೋಯಿಸರೇ ತಾಳಿ ಕಟ್ಟಿದ್ದುದನ್ನೂ ಕಂಡುಕೊಂಡಿದ್ದರು.

ಅದು ಮೊದಮೊದಲು ಹೆಂಗಸರೊಳಗೇ ಗುಸುಗುಸು ಹಬ್ಬಿತು. ತಮ್ಮ ಪತ್ನಿಯಿಂದ ಆ ವಿಷಯವನ್ನು ತಿಳಿದುಕೊಂಡ ಸಿಂಗಪ್ಪಗೌಡರಿಗೆ ವಜ್ರದ ಕುಲಾವಿಯನ್ನು ಧರಿಸಿದಂತಾಯ್ತು. ಚಂದ್ರಯ್ಯಗೌಡರೊಡನೆ ಹಣಾಹಣಿಗೆ ಸಿದ್ದವಾಗಿ ಗುಟುರು ಹಾಕಿದರು. ಗೂಳಿ ಗುಟುರು ಹಾಕಿದರೆ ಗುಟ್ಟೆಲ್ಲಿ ?

ಚಂದ್ರಯ್ಯಗೌಡರೇನೋ ಪ್ರಮಾಣ ಮಾಡಲು ಸಿದ್ದರಾಗಿ ಸಿಂಗಪ್ಪಗೌಡರನ್ನೂ ಪ್ರಮಾಣಕ್ಕೆ ಕರೆದರು. ಆದರೆ ಒಂದು ಪಕ್ಷದಲ್ಲಿ ರಾಮಯ್ಯನೂ ಮತ್ತೊಂದು ಪಕ್ಷದಲ್ಲಿ ಸೋಮನೂ ಹೆದರಿ ಕಣ್ಣೀರು ಹಾಕತೊಡಗಿದರು.

ವೆಂಕಪ್ಪಯ್ಯ ಜೋಯಿಸರನ್ನು ಕೇಳಿದಾಗ ಅವರು “ಚಂದ್ರಯ್ಯ, ನಾನೆಲ್ಲ ನೋಡಿಕೊಳ್ಳುತ್ತೇನೆ ; ನೀನು ಪ್ರಮಾಣಗಿಮಾಣಕ್ಕೆ ಒಂದಕ್ಕೂ ಹೋಗಬೇಡ” ಎಂದರು.

ಎರಡು ಪಕ್ಷದವರಲ್ಲಿ ಒಬ್ಬೊಬ್ಬರಿಗೂ ತಾವಿರುವುದು ಗಾಜಿನಮನೆಯಲ್ಲಿ ಎಂದು ಗೊತ್ತಾಗಿ ಕಲ್ಲೆಸೆಯುವುದನ್ನು ನಿಲ್ಲಿಸಿದರು. ಆದರೆ ಆಗಲೆ ಎಸೆದಿದ್ದ ಕಲ್ಲುಗಳಿಂದ ಆಗಬೇಕಾಗಿದ್ದ ಅನಾಹುತವೆಲ್ಲ ತುಸುಮಟ್ಟಿಗೆ ಆಗಿಯೆ ಹೋಗಿತ್ತು.