ಎರಡು ತಿಂಗಳಾದಮೇಲೆ ಒಂದಿರುಳು ಪುಟ್ಟಣ್ಣನೂ ಸೋಮನೂ ನಾಯಿ ಕರೆದುಕೊಂಡು, ಕೋವಿ ತೆಗೆದುಕೊಂಡು, ರಾತ್ರಿ ಷಿಕಾರಿಗೆ ಹೋಗಿದ್ದರು. ಕಾನೂರಿನಿಂದ ಓಬಯ್ಯನೂ ಪುಟ್ಟನೂ ತಮ್ಮ ನಾಯಿಗಳೊಡನೆ ಬಂದು ಅವರನ್ನು ಗುಟ್ಟಾಗಿ ಸೇರಿದ್ದರು ಬೇಟೆಯೋನೂ ಆಗಲಿಲ್ಲ. ತಿರುಗಿ ತಿರುಗಿ ದಣಿದು, ಸುಮಾರು ರಾತ್ರಿ ಒಂದು ಗಂಟೆಯ ಹೊತ್ತಿಗೆ ತಿಂಗಳು ಮುಳುಗುತ್ತಿರಲು, ಬೇಟೆಗಾರರು ಅವರವರ ಮನೆಗಳ ಕಡೆಗೆ ತಿರುಗಿದರು.

ಓಬಯ್ಯನೂ ಪುಟ್ಟನೂ ಮನೆಯ ಹತ್ತಿರ ಬಂದಿದ್ದರು. ಪುಟ್ಟ ಇದ್ದಕ್ಕಿದ ಹಾಗೆ ಸ್ವಲ್ಪ ಹೆದರಿಕೆಯ ಪಿಸುಮಾತಿನಲ್ಲಿ “ಓಬೇ ಗೌಡ್ರೆ! ಓಬೇ ಗೌಡ್ರೆ! ಅಲ್ಲಿ ಯಾರೋ ಹೋದಹಾಂಗಾಯ್ತು!”ಎಂದು ನಿಂತು ಕೈ ತೋರಿಸಿದನು.

ಓಬಯ್ಯನೂ ನಿಂತು ನೋಡಿದನು. ಯಾರೂ ಕಾಣಿಸಲಿಲ್ಲ. ಮುಳುಗುತ್ತಿದ್ದ ತಿಂಗಳ ಬೆಳಕಿನಲ್ಲಿ ಮರಗಿಡಗಳೂ ನೆರಳುಗಳೂ ಮಾಯೆ ಮಾಯೆಯಾಗಿ ನಿಂತಿದ್ದುವು. ನಾಯಿಗಳೂ ದಣಿದು ಅತ್ತಯಿತ್ತ ಹೋಗದೆ, ದಾರಿಯಲ್ಲಿಯೆ ಬರುತ್ತಿದ್ದುವು. ಮನುಷ್ಯರು ನಿಂತು ನೋಡಲು ಅವುಗಳೂ ಚುರುಕಾಗಿ ಕಿವಿ ನಿಮಿರಿ ನಿಂತು ನೋಡತೊಡಗಿದುವು.

“ಯಾರೂ ಇಲ್ಲ ಕಣೋ. ತಿಂಗಳಬೆಳಕಿನಲ್ಲಿ ಮರದ ನೆರಳು ಒಂದೊಂದು ಸಾರಿ ಹಾಂಗೆ ಕಾಣ್ತದೆ” ಎಂದು ಓಬಯ್ಯ ಮುಂದುವರಿದವನು.

ಪುಟ್ಟ ಮಾತ್ರ ಅತ್ತಕಡೆಯೇ ನೋಡುತ್ತಾ ಹಿಂಬಾಲಿಸುತ್ತಿದ್ದನು. ಅವನ ಕಣ್ಣಿಗೆ, ಮತ್ತೆ ಯಾರೊ ಹಲಸಿನಮರವೊಂದರ ಬುಡದಲ್ಲಿ ನಿಂತಿದ್ದಂತೆ ಭಾಸವಾಗಿ “ಓಬೇಗೌಡ್ರೆ, ಅದು ಯಾರೋ ನಿಂತಹಾಗೆ ಕಾಣ್ತದೆ ನೋಡಿ; ಓ ಅಲ್ಲಿ “ಎಂದು ಕೈ ತೋರಿಸಿದನು.

ಅವನು ಕೈ ತೋರಿಸಿದ ಕಡೆ ನಾಯಿಗಳು ಅವುಗಳು ಸ್ವಭಾವಕ್ಕೆ ತಕ್ಕ ಹಾಗೆ ನುಗ್ಗಿ ಓಡಿದವು. ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಯಾರನ್ನೊ ಕಂಡಂತೆ ಬಗುಳಿದುವು.

ಅಲ್ಲದೆ ಆ ನಾಯಿಗಳ ಕೂಗಾಟವನ್ನು ಮೀರಿ ಯಾರೊ “ಹಚಾ! ಹಚಾ! ಕಣ್ಣು ಹೊಟ್ಟಿ ಹೋಗಿತ್ತಲ್ದಾ ಇವಕ್ಕೆ!” ಎಂಬುದೂ ಕೇಳಿಸಿತು.

“ಯಾರದು?”ಎಂದು ಕೂಗಿ ಕೇಳಿದನು ಓಬಯ್ಯ.

“ನಾನಲ್ದಾ?”ಎಂದು ಉತ್ತರವೂ ಬಂದಿತು. ಉತ್ತರದೊಡನೆ ಕೋವಿಯನ್ನು ಹೆಗಲಮೇಲೆ ಹಾಕಿಕೊಂಡು ಬರುತ್ತಿದ್ದ ಮನುಷ್ಯಾಕಾರವೂ ಮರದ ನೆರಳಿನಲ್ಲಿ ತಮ್ಮ ಕಡೆಗೇ ಚಲಿಸುತ್ತಿದ್ದುದು ಕಾಣಿಸಿತು. ನಾಯಿಗಳ ಕೂಗುವುದನ್ನು ನಿಲ್ಲಿಸಿ ಬಾಲವನ್ನಲ್ಲಾಡಿಸುತ್ತಾ ಆ ವ್ಯಕ್ತಿಯ ಸುತ್ತ  ಬರುತ್ತಿದ್ದವು.

“ಯಾರು? ಸೇರೆಗಾರ್ರೇನು?”ಎಂದನು ಓಬಯ್ಯ.

“ಹೌದು ಮಾರಾಯಾ, ಈ ಕುನ್ನಿಗಳೆಲ್ಲ ಸೇರಿ ತೆಗೆದಿದ್ದುವಲ್ದಾ ನನ್ನ!”ಎಂದು ಸೇರೆಗಾರರು ಟೊಳ್ಳಾಗಿ ನಗುತ್ತಾ ಸಮೀಪಿಸಿದರು.

“ಇತ್ತ ಎಲ್ಲಿಗೆ ಹೋಗಿದ್ರಿ?”

“ಇಲ್ಲೇ ಕೋವಿ ತಗೊಂಡು ಮೊಲದ ಮರಸಿಗೆ ಹೋಗಿದ್ದೆ….ನೀವೆತ್ತ ಹೋಗಿದ್ದಿರಿ?”

“ಗದ್ದೆ ಕಡೆ ಹೋಗಿದ್ವು. ಏನೂ ಕಾಣಲಿಲ್ಲ.”

“ಒಂದು ಎಲೆಚೂರು ಇದ್ರೆ ಕೊಡ್ತಿಯೇನು, ಮಾರಾಯ್ಯಾ. ಮೊಲದ ಮನೆ ಹಾಳಾಗಿಹೋಯ್ತು! ಕಣ್ಣು ಕುಗುರಿ ಕುಗುರಿ ಸಾಕಾಯ್ತು”

ಸೇರೆಗಾರರು ಓಬಯ್ಯನಿಂದ ಎಲೆಯಡಕೆ ಹೊಗೆಸೊಪ್ಪು ತೆಗೆದುಕೊಂಡು ವೀಳ್ಯೆ ಹಾಕಿಕೊಳ್ಳುತ್ತಾ ತಮ್ಮ(ಮತ್ತು ಗಂಗೆಯ) ಬಿಡಾರದ ಕಡೆಗೆ ಹೋದರು. ಹುಡುಗನಾದ ಪುಟ್ಟನಿಗೆ ಸೇರೆಗಾರರ ಮಾತಿನಲ್ಲಿ ಸ್ವಲ್ಪವೂ ಸಂಶಯ ತೋರಲಿಲ್ಲಿ. ಆದರೆ ಓಬಯ್ಯನಿಗೆ ಆನುಮಾನವಾಗಿ, ಅದನ್ನೆ ಆಲೋಚಿಸುತ್ತಾ ಹೋಗಿ ಮಲಗಿಕೊಂಡನು.

ಇತ್ತೀಚೆಗೆ ಸೇರೆಗಾರರಿಗೂ ಸುಬ್ಬಮ್ಮನಿಗೂ ಬೆಳೆಯುತ್ತಿದ ಸಂಬಧವನ್ನು ನೋಡಿ ಓಬಯ್ಯನಿಗೆ ಸ್ವಲ್ಪ ಅನುಮಾನಕ್ಕಾಸ್ಪದವಾಗಿತ್ತು. ಆದರೆ ಕಂಡರೂ ಕಾಣದವನಂತೆ ಸುಮ್ಮನಿರುತ್ತಿದ್ದನು. ದೊಡ್ದವರ ಕೆಸರಿಗೆ ಕಾಲಿಟ್ಟಿರೆ ಕಡಿಜಲು ಕೊಟ್ಟೆಗೆ ಕೈಹಾಕಿದಂತಾಗುತ್ತದೆಂದು, ಯಾರೊಡನೆಯೂ ಆ ವಿಚಾರವನ್ನೆತ್ತದೆ, ಕಲ್ಲಿನಂತೆ ಸುಮ್ಮನಿದ್ದನು.

ಅವನು ಕಣ್ಣು ಬಿಟ್ಟುಕೊಂಡೇ ಆಲೋಚಿಸುತ್ತಾ ಮಲಗಿರಲು ಉಪ್ಪರಿಗೆಯ ಮೇಲೆ ಮಲಗಿದ್ದ ರಾಮಯ್ಯ ಅತ್ಯಂತ ಭೀತವಾಣಿಯಿಂದ “ಅಯ್ಯೋ! ಓಬಯ್ಯ! ಓಬಯ್ಯ! ಓಡಿಬಾರೋ! ಸತ್ತೆನಲ್ಲೋ!” ಎಂದು ಕೂಗಿ ಕೊಂಡದ್ದು ಆ ರಾತ್ರಿಯ ನಿರ್ಜನತೆ ನೀರವತೆಗಳಲ್ಲಿ, ರಕ್ತನಾಳಗಳಲ್ಲಿ ಚಳಿ ಹರಿಯುವಂತೆ ಕೇಳಿಸಿತು.

ಓಬಯ್ಯ ಗಾಬರಿಯಿಂದ ಎದ್ದು ಏಣಿ ಮೆಟ್ಟಲುಗಳನ್ನು ಏರಿ, ಉಪ್ಪರಿಗೆಗೆ ಓಡಿದನು. ಅಲ್ಲಿ ಯಾರೊ ಕಾಣಿಸಲಿಲ್ಲಿ. ‘ರಾಮೇಗೌಡ್ರೇ! ರಾಮೇಗೌಡ್ರೇ!’ ಎಂದು ಕರೆದನು. ಉತ್ತರ ಬರಲಿಲ್ಲಿ. ಓಬಯ್ಯನಿಗೆ ಬಹಳ ಹೆದರಿಕೆಯಾಯಿತು. ಹಾಗೆಯೆ ಕೆಳಗಿಳಿದು ಬಂದು ಲಾಟೀನು ಹೊತ್ತಿಸಿ ಕೊಂಡು ಮತ್ತೆ ಉಪ್ಪರಿಗೆಗೆ ಹೋದನು.

ರಾಮಯ್ಯ ಒಂದು ಮೂಲೆಯಲ್ಲಿ ತನ್ನ ಹಾಸಗೆಯಮೇಲೆ ರಗ್ಗು ಹೊದೆದು ಮಲಗಿದ್ದನು. ಲಾಟೀನಿನ ಬೆಳಕಿನಲ್ಲಿ ಅವನು ಕಣ್ಣು ಬಿಟ್ಟು ಕೊಂಡಿರುವುದೇನೋ ಕಾಣಿಸಿತು. ಆದರೆ ಓಬಯ್ಯ ’ಯಾಕೆ ಕೂಗಿದ್ದು?’ ಎಂದಾಗ ಅವನು ಮಾತನಾಡಲು ಪ್ರಯತ್ನಿಸಿದರೂ ಆಗಲಿಲ್ಲಿ. ಮೈಯೆಲ್ಲಾ ಗಡ ಗಡ ಗಡನೆ ನಡುಗುತ್ತಿತ್ತು. ಮುಖದಲ್ಲಿ ಬೆವರಿಳಿಯುತ್ತಿತ್ತು. ಕಣ್ಣೀರು ಸುರಿಯುತ್ತಿತ್ತು.

ರಾಮಯ್ಯ ಮಾತನಾಡುವ ಸ್ಧಿತಿಗೆ ಬರುವುದಕ್ಕೆ ಅರ್ಧ ಗಂಟೆಯಾಯಿತು. ತಾನು ನಿದ್ರಿಸುತ್ತಿದ್ದಾಗ ಯಾರೊ ತನ್ನನ್ನು ಹೆಸರು ಹಿಡಿದು ಕೂಗಿದಂತಾಯಿತೆಂದೂ, ಕಣ್ಣು ತೆರೆದಾಗ ಆಕೃತಿಯೊಂದು ಮುಂಡಿಗೆಯ ಪಕ್ಕದಲ್ಲಿ ನಿಂತಿತ್ತೆಂದೂ, ’ಯಾರದು’ ಎಂದು ಕೇಳಿದಾಗ, ಅದು ಮಾತಾಡದೆ ತನ್ನ ಕಡೆಗೆ ಮುಂಬರಿಯತೊಡಗಿತೆಂದೂ, ನೋಡಿದಾಗ ತನ್ನ ತಂದೆಯಂತೆ ತೋರಿತೆಂದೂ, ಇನ್ನೂ ಹತ್ತಿರ ಬಂದಾಗ ಅತ್ಯಂತ ವಿಕಾರವಾಗಿ, ತಲೆ ಕೆದರಿಕೊಂಡು ಹಲ್ಲು ಚಿಲಿದುಕೊಂಡಿದ್ದ ಸ್ತ್ರೀಯಾಕೃತಿಯಂತೆ ತೋರಿತೆಂದೂ, ನೋಡುತ್ತಿದ್ದ ಹಾಗೆ ರೋಷದಿಂದ  ನಕ್ಷತ್ರಗಳಂತೆ ಉರಿಯುತ್ತಿದ್ದ ಕಣ್ಣುಗಳನ್ನು ಕೆರಳಿಸಿ, ಹಲ್ಲು ಕಡಿಯುತ್ತಾ ತನ್ನ ಮೈಮೇಲೆ ಬೀಳುವಂತೆ ತೋರಿತೆಂದೂ, ಆಗ ಕೂಗಿಕೊಂಡೆ ಪ್ರಜ್ಞೆ ತಪ್ಪಿದೆನೆಂದೂ ಭಯಂಕರವಾಗಿ ಕಥೆ ಹೇಳಿದನು. ಅವನು ಭೀತಿ ಓಬಯ್ಯನಿಗೂ ತಟ್ಟದಿರಲಿಲ್ಲಿ.

ಅಂತೂ ಬೆಳಗಾಗುವವರೆಗೆ ಓಬಯ್ಯ ರಾಮಯ್ಯನ ಪಕ್ಕದಲ್ಲಿಯ ದೀಪ ಹೊತ್ತಿಸಿಕೊಂಡೆ ಕೂತಿರಬೇಕಾಯಿತು. ಅವರಿಬ್ಬರಲ್ಲಿ ಯಾರೂ ಕಣ್ಣು ಹಚ್ಚಲಿಲ್ಲಿ.

ಮರುದಿನ ಅಗ್ರಹಾರದ ವೆಂಕಪ್ಪಯ್ಯ ಜೋಯಿಸರನ್ನು ಕರೆಸಿ ನಿಮಿತ್ತ ನೋಡಿಸಿದರು. ಅವರು ಮನೆಯಲ್ಲಿ ಏನೋ ಅನಾಚಾರ ನೆಡೆದುಮುಟ್ಟಿಚಿಟ್ಟು (ಮೈಲಿಗೆ ) ಆಗಿಬಿಟ್ಟಿದೆ. ಮನೆಯನ್ನೆಲ್ಲಾ ಶೌಚಹಾಕಿಸಿ ಭೂತಾದಿಗಳಿಗೆ ಹಣ್ಣುಕಾಯಿ ಹಾಕಿಸಿ, ಚಂದ್ರಮೌಳೇಶ್ವರ ದೇವಸ್ಧಾನದಲ್ಲಿ ವ್ರತ ಮಾಡಿಸಿ….’ ಎಂದು ಮೊದಲಾಗಿ ವಿಧಿಸಿದರು. ಬಹಳ ಮುತುವರ್ಜಿ ವಹಿಸಿ ಆ ಕೆಲಸಗಳನ್ನೆಲ್ಲ ಮಾಡುಲು ತಾವೇ ಒಪ್ಪಿಕೊಂಡುರು. ಅದರಂತೆ ಎಲ್ಲ ಕಾರ್ಯಗಳೂ ನಡೆದು, ಮನೆಯ ಬಾಗಿಲುಗಳಲ್ಲಿ ಪ್ರತಿಯೊಂದಕ್ಕೂ ಒಂದೊಂದು ಮಂತ್ರಿಸಿದ ತೆಂಗಿನಕಾಯನ್ನು ವಿಭೂತಿ ಪ್ರಸಾದಗಳೊಡನೆ ಕಟ್ಟಿ ನೇತುಹಾಕಿದರು.

ಆದರೆ ಜೋಯಿಸರು ಕನಸಿನಲ್ಲಿಯೂ ಊಹಿಸದಿದ್ದ ನಿಜವಾದ ’ಮುಟ್ಟುಚಿಟ್ಟು’ ಮಾತ್ರ ನಿರಾತಂಕವಾಗಿ ನಡೆಯುತ್ತಿತ್ತು.

ತೋಟದಾಚೆ ಸಾರ ದಾಟುವಾಗ, ಸೇರೆಗಾರರು ಸುಬ್ಬಮ್ಮನ ಕೈ ಹಿಡಿದು ಮೈಯಪ್ಪಿದ ದಿನದಿಂದ ಅವರಿಬ್ಬರ ಮನಸ್ಸಿನಲ್ಲಿ ಹೊಸ ಹೊಸ ಭಾವಗಳೂ ರಾಗಗಳೂ ಹಾರೈಕೆಗಳೂ ಮೂಡತೊಡಗಿದ್ದುವು! ತಾವು ಕೈ ಹಿಡಿದು ಅಪ್ಪಿದಾಗಲೂ, ಸಾರವನ್ನು ದಾಟಿದಮೇಲೆಯೂ, ತುಸು ಹೊತ್ತು ಹಾಗೆಯೇ ಹಿಡಿದಿದ್ದಾಗಲೂ, ಸುಬ್ಬಮ್ಮ ಗಟ್ಟಿಯಾಗಿ ಕೂಗಿಕೊಂಡು ಗಲಾಟೆಯೆಬ್ಬಿಸದೆ ಸಾಧಾರಣವಾಗಿ ಮಾತ್ರ ಮುನಿದು ಬೈದು. ತರುವಾಯವಾದರೂ ಆ ವಿಚಾರವನ್ನು ಯಾರೊಡೆನೆಯೂ ಹೇಳದೆ ಸುಮ್ಮನಿದ್ದುನ್ನು ನೋಡಿ ಅಭಿಸಾರ ಕಲೆಯಲ್ಲಿ ನಿಷ್ಣಾತರಾಗಿದ್ದ ಸೇರೆಗಾರರಿಗೆ ಹೊಸ ಹುರುಪೂ ಹೊಸ ಹಾರೈಕೆಯೂ ಮೂಡಿದಂತಾಗಿ. ತಮ್ಮ ಸಾಹಸ ಪ್ರಯತ್ನವನ್ನು ಮುಂದು ವರಿಸತೊಡಗಿದರು.

ಸುಬ್ಬಮ್ಮನ ಮನಃಸ್ಥಿತಿಯ ಮಾವಿನಕಾಯಿಯೂ ಸೇರೆಗಾರರ ಒಲುಮೆ ಗಿಳಿಯ ಕೊಕ್ಕಿನ ಕುಟುಕಿಗೆ ಯೋಗ್ಯವಾಗುವಂತೆ ಹಣ್ಣಾಗುತ್ತಿತ್ತು: ಮೃದುವಾಗುತ್ತಿತ್ತು; ಒಗರನ್ನೂ ಹುಳಿಯನ್ನೂ ಗಟ್ಟಿಯನ್ನೂ ಮೆಲ್ಲ ಮೆಲ್ಲನ ಬಿಡುತ್ತಾ ಸಿಹಿಯಾಗುತ್ತಿತ್ತು. ಕಾಯಾಗಿದ್ದಾಗ ಮರವನ್ನಾಗಲಿ ಕೊಂಬೆಯನ್ನಾಗಲಿ ಅಲುಗಾಡಿಸಿದರೆ ಕೆಳಗೆ ಬೀಳದಿದ್ದುದು, ಚೆನ್ನಾಗಿ ಹಣ್ಣಾದ ಮೇಲೆ ಬೀಳದಿರುತ್ತದೆಯೆ? ಕೈವಶವಾಗದಿರುತ್ತದೆಯೆ?

ಚಂದ್ರಯ್ಯಗೌಡರ ಮೂರನೆಯ ಹೆಂಡತಿಯಾಗಿದ್ದ ಸುಬ್ಬಮ್ಮ ಅವರನ್ನು, ಇನಿಯಳು ಇನಿಯನನ್ನು ಒಲಿಯುವಂತೆ ರಾಗಭಾವ ಪೂರ್ವಕವಾದ ಕಾಮಪುರ್ಣತೆಯಿಂದ ಎಂದಿಗೂ ಒಲಿದಿರಲಿಲ್ಲ. ಗೌಡರ ಎರಡನೆಯ ಹೆಂಡತಿ (ಪುಟ್ಟಮ್ಮ-ವಾಸುವಿನ ತಾಯಿ) ತೀರಿಹೋಗಿ ಸುಬ್ಬಮ್ಮ ಘಟನಾಕ್ರಮದಂತೆ ಅವರನ್ನು ಹಠಾತ್ತಾಗಿ ಮದುವೆಯಾಗುವ ಮೊದಲು, ಆಕೆಯ ಮನಸ್ಸು ಬೇರೆಯ ಕಡೆಗಳಲ್ಲಿ ಸುಳಿದಾಡುತ್ತಿತ್ತು. ಕಾನೂರಿಗೆ ತನ್ನನ್ನು ಕೊಡುತ್ತಾರೆಂದು ತಿಳಿದಾಗಲೂ ಕೂಡ ವಯಸ್ಕರಾಗಿದ್ದ ಮೂರು ಮಕ್ಕಳ ತಂದೆಯಾಗಿದ್ದ ಚಂದ್ರಯ್ಯಗೌಡರಿಗೆಂದು ಆಕೆ ಭಾವಿಸಲಿಲ್ಲ. ಹೂವಯ್ಯನಿಗಿರಬಹುದೆಂದು ಮನದಲ್ಲಿ ಮಂಡಿಗೆ ತಿಂದಿದ್ದಳು. ತನ್ನನ್ನು ಕೊಡುವುದು ಚಂದ್ರಯ್ಯಗೌಡರಿಗೆಂದು ಚೆನ್ನಾಗಿ ಗೊತ್ತಾದಾಗ ಸ್ವಲ್ಪ ಆಶಾಭಂಗವನ್ನು ಅನುಭವಿಸಿದರೂ, ದೊಡ್ಡ ಮನೆಯ ಯಜಮಾನರೂ ನಾಡಿನ ಶ್ರೀಮಂತ ಸುಪ್ರಸಿದ್ಧರೂ ಆದವರ ಕೈಹಿಡಿದು ಎಲ್ಲರ ಗೌರವ ಭಯಗಳಿಗೂ ಪಾತ್ರಳಾಗಿ, ಕಾನೂರು ಮನೆಯ ಹೆಗ್ಗಡಿತಿಯಾಗಿ ಮೆರೆಯುತ್ತೇನೆ ಎಂಬ ಬಣ್ಣದ  ಕನಸನ್ನು ಕಟ್ಟಿಕೊಂಡು ಸುಬ್ಬಮ್ಮ ಹಿಗ್ಗಿದಳು. ಆದರೆ ಆ ಕನಸು ನನಸಾಗುವಂತೆ ಅವಳ ಹಣೆಯಲ್ಲಿ ಬರೆದಿರಲಿಲ್ಲ. ಆಕೆ ಕಾನೂರಿಗೆ ಕಾಲಿಡುವ ಮೊದಲೆ ಗಂಗೆಯ ಮೋಹಕೀಟ ಗೌಡರ ಹೃದಯ ಕುಸುಮವನ್ನು ಆಕ್ರಮಿಸಿ, ಕೊರೆಯಲು ತೊಡಗಿದ್ದಿತು. ಮೊದಮೊದಲು ಗೌಡರು ರಸ ತುಂಬಿದ ಹೊಸ ಹಣ್ಣನ್ನು ಮುದ್ದಿಸಿದರೂ, ಕೆಲಕಾಲದಲ್ಲಿಯೆ ಸುಬ್ಬಮ್ಮಗೆ ನರಕಯಾತನೆ ಪ್ರಾರಂಭವಾಯಿತು. ಅದಕ್ಕೆ ಅವಳೂ ತುಸುಮಟ್ಟಿಗೆ ಕಾರಣವಾಗಿದ್ದಳು. ತಾನು ಮನೆಯ  ಯಜಮಾನರನ್ನು ಮದುವೆಯಾದ ಮಾತ್ರದಿಂದ  ಮನೆಗೆ ಹೆಗ್ಗಡಿತಿಯಾದೆನೆಂಬ ಅಹಂಕಾರದಿಂದ , ತನಗಿಂತಲೂ ಎಷ್ಟೋ ಹಿರಿಯರಾದ ಹೂವಯ್ಯನ ತಾಯಿ ನಾಗಮ್ಮನವರ ಮೇಲೆಯೂ ಸವಾರಿ ಮಾಡತೊಡಗಿದಳು. ಆಳುಕಾಳುಗಳೊಡನೆಯೂ ಅದೇ ರೀತಿಯಾಗಿ ಚೇಳಿಗೆ ಪಾರುಪತ್ಯ ಕೊಟ್ಟಂತೆ ವರ್ತಿಸುತ್ತಿದ್ದಳು. ಆದರೆ ಆ ಆಟೋಪವೆಲ್ಲ ಮುಗಿದು ಸ್ವಲ್ಪ ಕಾಲದಲ್ಲಿ ಇರುಳಿನಲ್ಲಿಯೆ ಕಾನೂರನ್ನು ಬಿಟ್ಟು , ತನ್ನನ್ನು ಕತ್ತರಿಸಿಹಾಕುವುದರಲ್ಲಿದ್ದ ಗೌಡರ ಕತ್ತಿಯಿಂದ ಪಾರಾಗಿ, ತವರೂರಿಗೆ ಓಡಿ ಹೋಗಬೇಕಾಯಿತು. ಚಂದ್ರಯ್ಯಗೌಡರೊಡನೆ ಪ್ರೇಮ ಸಂಬಂಧವಿಲ್ಲದೆ ವಿವಾಹ ಬಂಧನ ಮಾತ್ರವಿದ್ದ ಆಕೆಗೆ ಅವರು ಕಠೋರವಾದ ಪಿಶಾಚದಂತೆ ತೋರಿದರು. ಅವರನ್ನು ಶಪಿಸಿದಳು. ಚಂದ್ರಯ್ಯಗೌಡರು ಹಾಸಗೆ ಹಿಡಿದ ತರುವಾಯ ಮತ್ತೆ ಕಾನೂರಿಗೆ ಬಂದಾಗಲು ಸುಬ್ಬಮ್ಮಗೆ ಗೌಡರ ಮೇಲಿದ್ದುದು ಒಂದು ಹರಹದ ಕನಿಕರವಾಗಿದ್ದಿತೆ ಹೊರತು ಪ್ರಣಯಭಾವವಾಗಿರಲಿಲ್ಲ! ಅಲ್ಲದೆ ತವರು ಮನೆಯ ಪೀಡನೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಹಾಯಮಾಡಿದ್ದ ಆ ಘಟನೆಯಲ್ಲಿ ಆಕೆಗೆ ಕೃತಜ್ಞತೆಯಿತ್ತು. ಹೆಂಡತಿಯಾದವಳು ಗಂಡನನ್ನು ಶುಶ್ರೂಷೆ ಮಾಡಬೇಕೆಂಬ ವಾಡಿಕೆಗನುಸಾರವಾಗಿ ಸುಬ್ಬಮ್ಮನೂ ಇತರರಂತೆ ವರ್ತಿಸಿದ್ದಳು. ಗೌಡರು ತೀರಿಹೋದಮೇಲೆ, ಸುಬ್ಬಮ್ಮ ನಿಜವಾಗಿಯೂ ಎದೆಹಿಂಡಿ ದುಃಖಪಟ್ಟಿದ್ದಳು. ತವರುಮನೆಯವರು ಕರೆದರೂ ಅಲ್ಲಿಗೆ ಕಾಲಿಡದೆ ಕಾನೂರಿನ ಹೆಗ್ಗಡಿತಿತನವನ್ನು ಮತ್ತೊಮ್ಮೆ ಇಮ್ಮಡಿ ಉತ್ಸಾಹದಿಂದ ಕೈಕೊಂಡಿದ್ದಳು.

ಕಾನೂರು ಮನೆಗೆಲ್ಲ ಸುಬ್ಬಮ್ಮ ಒಬ್ಬಳೇ ಹೆಂಗಸಾಗಿದ್ದಳು. ಆನೇಕಸಾರಿ ಬೇಸರದಿಂದ ಅವಳ ಮನಸ್ಸು ಸುಯ್ದು ಸುಯ್ದು ಯಾವುದನ್ನೋ ಹಾರೈಸಿ, ಕಣ್ಣೀರು ಕರೆಯುತ್ತಿತ್ತು. ಮನೆಗೆಲಸಗಳನ್ನು ನೋಡಿಕೊಳ್ಳುವುದಕ್ಕಾಗಿ ಮನಸ್ಸನ್ನು ಎಷ್ಟು ಉಪಯೋಗಿಸಿದರೂ ಮಧ್ಯೆ ಮಧ್ಯೆ ಬೇಸರವೂ ರೇಜಿಗೆಯೂ ಶೂನ್ಯತೆಯೂ ಆಕೆಯನ್ನು ಆಕ್ರಮಿಸುತ್ತಿದ್ದುವು. ರಾಮಯ್ಯ ಮತ್ತೊಂದು ಮದುವೆ ಮಾಡಿಕೊಂಡರೆ ಸೊಸೆ ಮನೆಗೆ ಬರುತ್ತಾಳೆ ಎಂದಿದ್ದ ಹಾರೈಕೆಯೂ ಬರಿದಾಯ್ತು. ಇವೆಲ್ಲದರ ಜೊತೆಗೆ, ಆಕೆಗೆ ಯೌವನವೂ ಕುದಿದುಕ್ಕತೊಡಗಿತ್ತು. ಬಡತನದಲ್ಲಿ ಹುಟ್ಟಿ ದುಡಿದಿದ್ದ ಆಕೆಗೆ ಈಗ ವಿರಾಮದಲ್ಲಿ ಮೈಕೊಬ್ಬಿತ್ತು. ಸಂಸ್ಕೃತಿಯಿಲ್ಲದ ಮತ್ತು ಸಂಸ್ಕೃತಿಗಾಗಿಯಲ್ಲದ ವಿರಾಮ ನರಕಕ್ಕೆ ದಾರಿ. ಹೆಗ್ಗಡಿತಿಯೆಂಬ ಅಹಂಕಾರವೂ ನೆತ್ತಿಗೇರಿತ್ತು. ಗ್ರಹಚಾರಕ್ಕೆ ತಕ್ಕಹಾಗೆ ಸೇರೆಗಾರರೂ ಹೊಂಚುತ್ತಿದ್ದರು.

ಮೊದಲಿನಿಂದಲೂ ಸೇರೆಗಾರರ ಕಣ್ಣು ತನ್ನ ಮೇಲಿದೆ ಎಂಬುದು ಸುಬ್ಬಮ್ಮಗೆ ಗೊತ್ತಿತ್ತು. ಹಿಂದೆ ಅವರ ಪ್ರಯತ್ನಗಳನ್ನೆಲ್ಲ ತೃಪ್ತಿಕರವಾಗೆ ನಿವಾರಿಸಿದ್ದಳು. ಆದರೆ ಈಗ ಯಾರೂ ತನ್ನನ್ನು ಲೆಕ್ಕಿಸದ ಕಾಲದಲ್ಲಿ ಸೇರೆಗಾರರ ಲಕ್ಷ್ಯ, ಒಂದು ರೀತಿಯಿಂದ, ಇದ್ದರೂ ಇರಲಿ ಎನ್ನಿಸಿತು. ತೋಟದಾಚೆಯ ಸಾರದ ಘಟನೆ ನಡೆದಮೇಲಂತೂ ಸೇರೆಗಾರರು ಅವಕಾಶ ಸಿಕ್ಕಿದಾಗಲೆಲ್ಲ ತಮ್ಮ ವಿಶ್ವಾಸಾನುರಾಗಗಳನ್ನು ಪ್ರದರ್ಶಿಸತೊಡಗಿದ್ದರು; ಎಷ್ಟೋ ಸಾರಿ ಅವಕಾಶ ಕಲ್ಪಿಸಿಕೊಂಡು!….. ’ಥೂ! ನೀವು ಹಾಂಗೆ ಮಾಡಬೇಡಿ!’ ’ನೀವೂ ಹಾಳಾಗಿ ಹೋಗಿ!’ ಎಂದು ಸುಬ್ಬಮ್ಮ ಮುನಿದು ಬೈಯುತ್ತಿದ್ದರೂ, ಕಣ್ಣಗಳಲ್ಲಿ ಅನ್ಯಭಾವವಿರುತ್ತಿದ್ದುದನ್ನು ಕಂಡು, ಸೇರೆಗಾರರು ಆ ಬೈಗುಳಗಳನ್ನೆಲ್ಲ ಚಾತಕಪಕ್ಷಿ ಮೋಡದ ಮಳೆಯನ್ನು ಕುಡಿದು ನಲಿಯುವಂತೆ ನಲಿಯುತ್ತಿದ್ದರು.

ಒಂದು ಸಾರಿ, ಸೇರೆಗಾರರು ಸುಬ್ಬಮ್ಮ ಬೇಡವೆಂದರೂ ಕೇಳದೆ ಆಕೆಯ ಸ್ನಾನಕ್ಕೆ ನೀರು ಹಾಕಿಕೊಟ್ಟರು. ಹಳೆಪೈಕದ ತಿಮ್ಮನಿಂದ ಕಳ್ಳು ತಂದು ದಿನವೂ ನಿವೇದಿಸತೊಡಗಿದರು! ಗಂಗೆಯ ವಶವಾಗಿದ್ದ ಸುಬ್ಬಮ್ಮನ ಒಂದು ಒಳ್ಳೆಯ ಸೀರೆಯನ್ನು ವಾಪಸು ತಂದುಕೊಟ್ಟರು. ಈ ಮೊದಲಾದ ಉಪಕೃತಿಗಳಿಗೆಲ್ಲ ಕೃತಜ್ಞತೆಯನ್ನು ಸೂಚಿಸಿವುದಕ್ಕಾಗಿ ಸುಬ್ಬಮ್ಮ ಸೇರೆಗಾರರಿಗೆ ಸ್ವಲ್ಪ ಹೆಚ್ಚಾಗಿ ಕಾಫಿ ತಿಂಡಿ ಕೊಟ್ಟಳು. ಅವರು ಮಧ್ಯಾಹ್ನ ಕಾನೂರು ಮನೆಯಲ್ಲಿಯೆ ಊಟಮಾಡುತ್ತಿದ್ದರಾದ್ದರಿಂದ ತುಪ್ಪ, ಮೊಸರು, ಮಾಂಸದ ಪಲ್ಯ ಮೊದಲಾದ ವಿಶೇಷಗಳನ್ನು ಹೆಚ್ಚು ಹೆಚ್ಚಾಗಿ ಬಡಿಸತೊಡಗಿದಳು. ರಾತ್ರಿ ಅವರು ಗಂಗೆಯ ಬಿಡಾರದಲ್ಲಿ ಊಟಮಾಡಿ ಅಲ್ಲಿಯೆ ಮಲಗುತ್ತಿದ್ದರಾದ್ದರಿಂದ, ಅವರತ ರಾತ್ರಿಯೂಟಕ್ಕೆ ತಾನು ಮಾಡಿದ್ದ ಭಕ್ಷ್ಯ ಭೋಜ್ಯಗಳನ್ನು, ಮೊದಲು ಒಮ್ಮೊಮ್ಮೆ, ಆಮೇಲೆ ಆಗಾಗ, ಕಳುಹಿಸತೊಡಗಿದಳು. ಹೀಗೆ ಅವರಿಬ್ಬರ ಪರಸ್ಪರ ಉಪಕಾರದ ಕೃತಜ್ಞತೆ ಸ್ನೇಹಕ್ಕೆ ತಿರುಗಿತು. ಎಷ್ಟರ ಮಟ್ಟಿಗಿಂದರೆ; ಒಂದುಸಾರಿ ಸೇರೆಗಾರರು ಅವಕಾಶ ಕಲ್ಪಿಸಿಕೊಂಡು ತಾವೊಬ್ಬರರೇ ಊಟ್ಟಕ್ಕೆ ಕೂತಿದ್ದಾಗ, ಏನೋ ಮಾತು ಮಾತಿಗೆ ಕುಶಾಲಿಗಾಗಿ, ತಮ್ಮ ಪಕ್ಕದಲ್ಲಿದ್ದ ಚೊಂಬಿನಿಂದ ನೀರನ್ನು ಬೊಗಸೆ ತೆಗೆದು ಸುಬ್ಬಮ್ಮನ ಮುಖಕ್ಕೆ ಎರಚಿದರು. ಸುಬ್ಬಮ್ಮ ನಗುತ್ತಾ ಬೈಯುತ್ತಾ ತನ್ನ ಕೈಯಲ್ಲಿದ್ದ ಪಾತ್ರೆಯಿಂದ ಮೊಸರನ್ನು ತೆಗೆದು ಅವರ ಮುಖಕ್ಕೆ ಎರಚಿ, ಅವರ ಕೆನ್ನೆ ಮೀಸೆಗಳ ಮೇಲೆಲ್ಲ ಮೊಸರು ಬಿದ್ದುದನ್ನು ಕಂಡು ನಗತೊಡಗಿದಳು. ಸೇರೆಗಾರರು ಮುಖ ಉಜ್ಜಿಕೊಳ್ಳುತ್ತಾ ನಗತೊಡಗಿದರು. ಅದನ್ನು ಕೇಳಿ ಒಳಗೆ ಬಂದ ಓಬಯ್ಯನಿಗೆ ಇಬ್ಬರೂ ಸೇರಿ ’ಬೆಕ್ಕಿನ ಕಣ್ಣಿಗೆ ಉಪ್ಪಿನಕಾಯಿಯ ರಸವನ್ನು ಸಿಡಿಯಲು ಅದು ಕಣ್ಣುಕಾಣದೆ ಕಡಿಗೋಲು ಕಂಭಕ್ಕೆ ಢಿಕ್ಕಿ ಹೊಡೆದು ಮುಗುಚಿಬಿದ್ದು, ಅವಾಂತರ ಮಾಡಿತು’ ಎಂಬ ಕಥೆ ಹೇಳಿದರು. ಅವನೂ ಅವರ ಕಥೆಯನ್ನು ನಂಬಿದವನಂತೆ ನಟಿಸಿ ಮರಳಿದನು.

ಈ ಎಲ್ಲದರ ಫಲರೂಪವಾಗಿ ಸೇರೆಗಾರರು ರಾತ್ರಿ ಗಂಗೆಯ ಬಿಡಾರದಲ್ಲಿ ಊಟಮಾಡಿಕೊಂಡು ಅಲ್ಲಿ ಮಲಗದೆ, ದಿನವೂ ಕೋವಿ ತೆಗೆದು ಕೊಂಡು ಮೊಲದ ಮರಸಿಗೆ ಹೋಗತೊಡಗಿದರು. ಗಂಗೆಗೆ ಸಂಶಯವಾಗಿ ಒಂದು ಸಾರಿ ’ತಿಂಗಳುಬೆಳಕಿಲ್ಲ, ಏನಿಲ್ಲ. ಈ ಕತ್ತಲಲ್ಲಿ ನಿಮಗೆ ಮೊಲ ಕಾಣಿಸುವುದಾದರೂ ಹೇಗೆ? ಎಂದು ಕೇಳಿದಳು. ಸೇರೆಗಾರರು ಮೊಲ ಬೆಳ್ಳಗಿರುವುದದರಿಂದ ನಕ್ಷತ್ರದ ಬೆಳಕಿನಲ್ಲಿ ಅದರ ಆಕಾರ ಕಾಣಿಸುತ್ತದೆಂದೂ ಅಭ್ಯಾಸವಿರುವುದರಿಂದ ಅಂದಾಜಿನಮೇಲೆ ಗುರಿಯಿಟ್ಟು ಹೊಡೆಯಬಹುದೆಂದೂ ಹೇಳಿದರು. ಅದಕ್ಕವಳು ಮುಗುಳು ನಗುತ್ತಾ ನಂಗೆಲ್ಲ ಗೊತ್ತದೆ!” ಎಂದು ಅವರ ಮೀಸೆಯನ್ನು ಹಿಡಿದೆಳೆದಳು.

ಸೇರೆಗಾರರು ನೋವಿನಿಂದ “ಅಯ್ಯೋ ಪುಣ್ಯಾತಗಿತ್ತಿ” ಎಂದು ಮೆಲ್ಲನೆ ಕೂಗಿ, ಗಂಗೆಯಿಂದಲೆ ತಲೆಬಾಚಿಸಿ ಹೂ ಮುಡಿದುಕೊಂಡು, ಮೀಸೆಗೆ ಪರಿಮಳ ಹಚ್ಚಿಸಿಕೊಂಡು,ಹೂವಿನ ಕುಚ್ಚೊಂದನ್ನು ಬಕ್ಕಣಕ್ಕೆ ಹಾಕಿಕೊಂಡು, ಕೋವಿ ತೆಗೆದುಕೊಂಡು ’ಮೊಲದ ಮರಸಿ’ಗೆ ನಿತ್ಯವೂ ಹೋಗುವಂತೆ ಹೋದರು.