ಮರುದಿನ ಬೆಳಿಗ್ಗೆ ಚಂದ್ರಯ್ಯಗೌಡರು ಇತರೊಡನೆ ಜಾನುವಾರುಗಳನ್ನು ಹಿಸ್ಸೆಮಾಡಲು ಕೊಟ್ಟಿಗೆಯಿದ್ದ ಜಾಗಕ್ಕೆ ಹೋಗಿದ್ದರು. ಜಗಲಿಯ ಮೇಲೆ ನೆಲ್ಲುಹಳ್ಳಿ ಪೆದ್ದೇಗೌಡರು ಬಲವಾಗಿ ಜಾಡಿ ಹೊದೆದುಕೊಂಡು ಮಲಗಿದ್ದರು. ಅವರ ಹಾಸಗೆಯ ಪಕ್ಕದಲ್ಲಿ ಒಂದು ವಾಂತಿ ಬಟ್ಟಲು, ಒಂದು ತೆಂಗಿನೆಣ್ಣೆ ಕುಡಿಕೆ, ಒಂದು ಹಿತ್ತಾಳೆಯ ಪೀಕದಾನಿ, ಎದ್ದು ನಡೆಯಬೇಕಾದಾಗ ಊರುವುದಕ್ಕಾಗಿ ಇದ್ದ ಒಂದು ಬಲಿಗೆಯ ದೊಣ್ಣೆ – ಇವುಗಳೆಲ್ಲ ಇದ್ದುವು. ಅವರನ್ನು ನೋಡಿಕೊಳ್ಳುವುದಕ್ಕಾಗಿ ವಾಸುವನ್ನು ಬಿಟ್ಟಿದ್ದರೂ ಅವನು ಮಾತ್ರ ಅಲ್ಲಿ ಕಾಣುತ್ತಿರಲಿಲ್ಲ. ಅವನಿಗೆ ಆ ನೀರಸವ್ಯಕ್ತಿಯ ಪಕ್ಕದಲ್ಲಿ ಕುಳಿತು ಕಾಯುವುದು ಬಹಳ ಬೇಸರವಾಗಿ ಕಂಡುಬಂದುದರಿಂದ ಆಗಾಗ್ಗೆ ಅತ್ತಯಿತ್ತ ಸಂಚಾರಹೋಗಿ ಬರುತ್ತಿದ್ದನು. ಸುಬ್ಬಯ್ಯ ಇಂದೆರಡು ಸಾರಿ ಬಂದು ತಂದೆಯನ್ನು ಮಾತಾಡಿಸಿಕೊಂಡು ಹೋದಳು. ಆದರೆ ಆ ದಿನ ಅನೇಕರಿಗೆ ಅಡುಗೆ ಮಾಡಬೇಕಾಗಿದ್ದುದರಿಂದ ಆಕೆಗೆ ಬಳಿ ಇದ್ದು ಶುಶ್ರೂಷೆ ಮಾಡಲು ಪುರಸತ್ತಿರಲಿಲ್ಲ.

ಪೆದ್ದೇಗೌಡರಿಗೆ ಹಿಂದಿನ ರಾತ್ರಿ ಕುಡಿದಿದ್ದ ಕಳ್ಳು ಬ್ರಾಂದಿಗಳ ಅಮಲು ಬಹಳಮಟ್ಟಿಗೆ ಇಳಿದುಹೋಗಿದ್ದರೂ ಎಡವಿಬಿದ್ದುದರಿಂದ ಉಂಟಾಗಿದ್ದ ಗಾಯದ ಮತ್ತು ಶರೀರದ ನೋವು ಕಡಿಮೆಯಾಗಿರಲಿಲ್ಲ. ಮೈನೋವಿನಿಂದ ಜ್ವರವೂ ಬಂದಿತ್ತು. ದುರ್ವಾಸನೆಯ ವಾಂತಿ ವಾಕರಿಕೆಗಳಂತೂ ಆಗಾಗ್ಗೆ ತಲೆಹಾಕುತ್ತಿದ್ದುವು. ಎಷ್ಟು ಪ್ರಯತ್ನಪಟ್ಟರೂ ವಾಸುವಿಗೆ ಅದನ್ನು ಸಹಿಸಲಾಗಲಿಲ್ಲ. ಮಾವನ (ತನ್ನ ತಂದೆ ‘ಮಾವ’ ಎಂದು ಕರೆಯುತ್ತಿದ್ದುದರಿಂದ ತಾನೂ ಹಾಗೆಯೆ ಕರೆಯುತ್ತಿದ್ದನು.) ವಿಚಾರದಲ್ಲಿ ಅಸಹ್ಯ ಹುಟ್ಟಿ, ಪೀಡೆ ತೊಲಗಿದರೆ ಸಾಕು ಎಂದು ಯೋಚಿಸುತ್ತಿದ್ದನು. ಹೊರಗಡೆ ಆ ರಮಣೀಯ ಪ್ರಾತಃಕಾಲದಲ್ಲಿ ಸಂಭ್ರಮದ ಘಟನೆಗಳು ನಡೆಯುತ್ತಿದ್ದಾಗ ತಾನು ಮಾತ್ರ ಈ ‘ದರಿದ್ರ ಮನುಷ್ಯ’ನ ಪಕ್ಕದಲ್ಲಿ ವಾಂತಿಯ ವಾಸನೆಯನ್ನು ಸೇವಿಸುತ್ತ ಕುಳ್ಳಿರ ಬೇಕಾಯಿತಲ್ಲಾ ಎಂದು ಕುದಿದು ಉಪ್ಪರಿಗೆ ಏರಿದನು.

ಅಲ್ಲಿದ್ದ ದೊಡ್ಡ ಕನ್ನಡಿಯ ಪಕ್ಕದಲ್ಲಿ ಹೋಗುತ್ತಿದ್ದಾಗ ಹಠಾತ್ತಾಗಿ ತನ್ನ ಪ್ರತಿಬಿಂಬವನ್ನು ಕಂಡು ನಿಂತುಬಿಟ್ಟನು. ನೋಡುತ್ತ ನೋಡುತ್ತ ಬಾಲಕನ ಕಣ್ಣು ಮಂಜುಮಂಜಾಯಿತು. ಹೃದಯ ಯಾತನೆಯಿಂದ ತುಂಬಿಹೋಯಿತು. ತನ್ನ ಪ್ರತಿಬಿಂಬ ತನಗೇ ಅಪರಿಚಿತವಾಗುವಷ್ಟು ವಿಕಾರವಾಗಿ ತೋರಿತು : ಅಯ್ಯೋ, ಆ ಹಾಳು ‘ಚೌರದವನು’ ಬರದೆ ಹೋಗಿದ್ದರೆ ! ಕ್ರಾಪು ಇದ್ದಾಗ ಎಷ್ಟು ಲಕ್ಷಣವಾಗಿತ್ತು ! ಈಗ ? ರೆಕ್ಕೆ ಪುಕ್ಕಗಳನ್ನು ತಿಪ್ಪುಳಿಸಿಬಿಟ್ಟ ನವಿಲಂತಾಗಿದೆ ತನ್ನ ರೂಪ ! ಕನ್ನಡಿಯ ಕಡೆಗೆ ನೋಡಲಾರದೆ ಮುಖ ತಿರುಗಿಸಿಕೊಂಡುಹೋಗಿ ಒಂದು ಮೂಲೆಯಲ್ಲಿ ಕುಳಿತು ನೀರವವಾಗಿ ಬಿಕ್ಕಿಬಿಕ್ಕಿ ಅಳತೊಡಗಿದನು. ಯಾರಾದರೂ ಅಡಗಿ ನಿಂತು ನೋಡಿದ್ದರೆ ಹೃದಯವಿದ್ರಾವಕವಾಗಿತ್ತು ಆ ದೃಶ್ಯ. ಆದರೆ ಮನುಷ್ಯರಾರೂ ಅದನ್ನು ನೋಡಲಿಲ್ಲ. ಅವರೆಲ್ಲ ಜಾನುವಾರು ಹಿಸ್ಸೆ ಮಾಡುವ ಮತ್ತು ಇತರ ಉಪಯುಕ್ತವಾದ ಕಾರ್ಯಗಳಲ್ಲಿ ತೊಡಗಿದ್ದರು.

“ವಾಸಯ್ಯಾ ! ವಾಸಯ್ಯಾ !” ಎಂದು ನಿಂಗನ ಮಗ ಪುಟ್ಟ ಕೂಗಿ ಕರೆಯತೊಡಗಿದನು.

ಎರಡು ಮೂರು ಸಾರಿ ಕರೆಯುವವರೆಗೂ ವಾಸು ಮಾತಾಡಲಿಲ್ಲ. ಆಮೇಲೆ ಕಣ್ಣೀರನ್ನು ಬೇಗಬೇಗನೆ ಒರೆಸಿಕೊಂಡು, ಸಿಂಬಳ ಸುರಿದುಹಾಕಿ, ಮೂಗನ್ನು ಅಂಗಿಯ ತೋಳಿನಿಂದ ಉಜ್ಜಿ ಚೊಕ್ಕಟ ಮಾಡಿಕೊಂಡು, ಸಿಟ್ಟಿನಿಂದ “ಏನಾಗಿದೆಯೊ ನಿಂಗೆ ? ನಿನ್ನ ಗಂಟಲು ಕಟ್ಟಿಹೋಗಾಕೆ ಅದ್ಯಾಕೆ ಹಂಗೆ ಕೂಗ್ತೀಯೊ ?” ಎಂದು ಗಟ್ಟಿಯಾಗಿ ಕೂಗುತ್ತಾ ಏಣಿ ಮೆಟ್ಟಲುಗಳನ್ನು ದಡದಡನೆ ಇಳಿದನು.

ಏಣಿಯ ಬುಡದಲ್ಲಿ ನಿಂತು ಉಪ್ಪರಿಗೆಯ ಕಡೆಗೆ ನೋಡುತ್ತಿದ್ದ ಪುಟ್ಟ ವಾಸಯ್ಯನ ರಭಸಕ್ಕೆ ಸ್ವಲ್ಪ ಹಿಂಜರಿದು ನಿಂತು “ನಾಯಿಮರಿ ಹೋದ್ಹಾಂಗೆ ಅಂತಾ ಕಾಣ್ತದೆ ? ಕಣ್ಣಿಗೆ ಮೆಣ್ಸಿನಕಾಳು ಅರ್ದು ಹಾಕ್ದೆ …. ಕೂಗ್ತದೇ ! ಕೇಳಾಂಗಿಲ್ಲ !” ಎಂದನು.

ವಾಸುವಿಗೆ ತನ್ನ ದುಃಖವೆಲ್ಲ ಮರೆತುಹೋಗಿ ಒಡನೆಯೆ ನಾಯಿಮರಿಯ ಯೋಗಕ್ಷೇಮ ಚಿಂತೆ ಅವನ ಆತ್ಮವೆಲ್ಲ ಆಕ್ರಮಿಸಿ, ಗಾಬರಿಯಿಂದಲೂ ಸಿಟ್ಟಿನಿಂದಲೂ ” ಅಯ್ಯೋ ನಿನ್ನ ಮನೆ ಹಾಳಾಗ ! ಮೆಣಸಿನಕಾಯಿ ಯಾಕೆ ಹಾಕಿದೆಯೋ ಕಣ್ಣಿಗೆ ?” ಎಂದನು.

“ಮೆಣಸಿನಕಾಯಲ್ಲ, ಕಾಳು !”

“ನಿನ್ನ ಅಜ್ಜಿ ತಲೆ ! ಯಾರು ಹೇಳಿದ್ರು ನಿಂಗೆ ?”

“ಗಂಗಹುಡುಗ ಹೇಳ್ದ. ಮೆಣಸಿನಕಾಳು ತೇದು ಹಚ್ಚಿದ್ರೆ ಗಾಯ ಗುಣಾಗ್ತದೆ ಅಂತಾ !”

“ಅವ ಸತ್ತ !” ಎಂದು ವಾಸು ಜಗಲಿಯ ಮೇಲೆ ಹಾದು ಹಿತ್ತಿಲು ಕಡೆಗೆ ಓಡಿದನು. ಪುಟ್ಟನೂ ಅವನ ಹಿಂದೆಯೆ ನುಗ್ಗಿದನು.

ಕೆಲವು ದಿನಗಳ ಹಿಂದೆ ಕೋಳಿ ಕುಕ್ಕಿದ್ದ ಕಣ್ಣಿನ ನಾಯಿಮರಿ, ಸಾಯುವುದಕ್ಕಾಗಿ ಬಿದ್ದುಕೊಂಡು, ಕಣ್ಣಿನ ಗಾಯಕ್ಕೆ ಹಾಕಿದ್ದ ಮೆಣಸಿನಕಾಳಿನ ಲೇಪನದ ಉರಿಯನ್ನು ಸಹಿಸಲಾರದೆ, ‘ಕುಯ್ಯ್ಞೋ’ ಎಂದು ಅರಚಿಕೊಳ್ಳುತ್ತಿತ್ತು. ತೂತಾದ ಕಣ್ಣಿನಿಂದ ಕೀವೂ ಸ್ರವಿಸುತ್ತಿತ್ತು. ಮರಿ ಬಡಕಲಾಗಿ ಎಲುಬು ಚರ್ಮವಾಗಿತ್ತು.

ವಾಸು ದೊಡ್ಡಮ್ಮನಿಂದ ಸ್ವಲ್ಪ ಹಾಲು ಈಸಿಕೊಂಡು ಬಂದು ಅದರ ಬಾಯಿಗೆ ಹೂಯ್ಯಲು ಪ್ರಯತ್ನಿಸಿದನು. ಆದರೆ ಹಾಲೆಲ್ಲ ಕಟಬಾಯಿಯಲ್ಲಿ ಸುರಿದು ಹೋಯಿತು. ಹಾಗೆ ಸುರಿದುಹೋಗಬಾರದೆಂದು ಅದರ ಮೂತಿಯನ್ನು ಎತ್ತಿಹಿಡಿದನು. ಮರಿ ಅವನ ಕೈಮೇಲೆಯೆ ಪ್ರಾಣಬಿಟ್ಟಿತು !

ಅಲ್ಲಿಗೆ ಬಂದು ನೋಡುತ್ತಿದ್ದ ಪುಟ್ಟಮ್ಮ “ವಾಸೂ, ನಾಯಿಮರಿ ಸತ್ತು ಹೋಗಿದೆಯೊ !” ಎಂದಳು.

ವಾಸುಗೆ ರೇಗಿ “ನಿನ್ನ ಬಾಯಿಗೆ …. ಹಾಕ ! ಹಾಳು ಬಾಯಿ ನುಡೀಬ್ಯಾಡ !” ಎನ್ನುತ್ತಾ ನಾಯಿಮರಿಯನ್ನು ನಿಲ್ಲಿಸಲು ಪ್ರಯತ್ನ ಮಾಡಿದನು, ಆದರೆ ಶವ ದೊಪ್ಪನೆ ಉರುಳಿತು !

ತಾನಿದ್ದಂತೆಯೆ ನಾಯಿಮರಿಯ ಪ್ರಾಣ ಹೇಗೆ ಹೋಯಿತು ಎಂಬುದು ವಾಸುವಿಗೆ ಅರ್ಥವಾಗಲಿಲ್ಲ.

ಅಂತೂ ಕಣ್ಣೀರು ಕರೆಯುತ್ತಾ ಪುಟ್ಟನನ್ನು “ನೀನೇ ಕೊಂದುಹಾಕಿದ್ದು !” ಎಂದು ಚೆನ್ನಾಗಿ ಬೈದನು.

ಹುಡುಗರಿಬ್ಬರೂ ಸೇರಿ ಒಂದು ಪೊದೆಯ ಬುಡದಲ್ಲಿ ಅವರ ಮುದ್ದಿನ ಮರಿಯ ಹೆಣವನ್ನು ಜೋಪಾನವಾಗಿ ಹೂಳಿ, ನರಿಗಿರಿ ಕಿತ್ತು ತಿನ್ನದಂತೆ ಚೆನ್ನಾಗಿ ಮಣ್ಣು ಮುಚ್ಚಿ, ಮುಳ್ಳುಹಾಕಿ, ಕಲ್ಲಿನ ಭಾರ ಹೇರಿ ಬಂದರು.

ಮಧ್ಯಾಹ್ನ ವಾಸದ ಮನೆಯನ್ನೂ ಪಾತ್ರೆ ಪದಾರ್ಥಗಳನ್ನೂ ಪಾಲು ಮಾಡಿದರು. ಆ ಕಾರ್ಯದ ಪ್ರತಿಯೊಂದು ಭಾಗವೂ ಹೂವಯ್ಯನಿಗೆ ‘ಇಸ್ವಿ’ ಎನ್ನಿಸುವಂತಿತ್ತು.

ಹಳೆ ಪೊರಕೆಗಳು, ಕರಿ ಮಡಕೆಗಳು, ಮೊರಗಳು, ಸಾರಣೆಗಳು, ಸಿಕ್ಕಗಳು, ಸೌಟುಗಳು, ಒನಕೆಗಳು, ಹಾರೆ ಸವೆಗೋಲುಗಳು, ಹೆಡಗೆಗಳು, ಬುಟ್ಟಿಗಳು, ತಾಮ್ರ ಹಿತ್ತಾಳೆಯ ಪಾತ್ರೆಗಳು, ಜೋಮಾಲೆ ಹಾಕಿದ್ದ ಇರಿಕೆಗಳು, ಹಪ್ಪಳ ಸಂಡಿಗೆ ಉಪ್ಪಿನಕಾಯಿಗಳು, ಚಾಪೆ ಮೊದಲಾದ ಹಾಸುವ ವಸ್ತುಗಳು, ಡಬ್ಬಗಳು ಇತ್ಯಾದಿಗಳನ್ನೆಲ್ಲಾ ತಂದು ಅಂಗಳದಲ್ಲಿ ದೇವರ ಕಲ್ಲಿನ ಸುತ್ತಲೂ ರಾಶಿಹಾಕಿದುದನ್ನು ಕಂಡು, ಹೂವಯ್ಯನಿಗೆ ತಮ್ಮ ಮನೆಯ ಅಂತರಂಗದ ಮರ್ಮಸ್ಥಾನಗಳನ್ನೆಲ್ಲಾ ಪರಕೀಯರ ಮುಂದೆ ಬಯಲಿಗೆಳೆದಂತಾಗಿ ‘ಅಯ್ಯೋ’ ಎನ್ನಿಸಿತು. ತಗ್ಗಿಸಿದ ತಲೆಯನ್ನು ಮೇಲೆತ್ತುವುದಕ್ಕೂ ಕಷ್ಟವಾಯಿತು. ರಾಮಯ್ಯನಂತೂ ಅಲ್ಲಿಗೆ ತಲೆಹಾಕಲಿಲ್ಲ.

ಬೆಳಿಗ್ಗೆ ಜಾನುವಾರುಗಳನ್ನು ಹಿಸ್ಸೆ ಮಾಡುತ್ತಿದ್ದಾಗ ಹೂವಯ್ಯ ನಡುನಡುವೆ ಪ್ರತಿಭಟಿಸಿದ್ದನು. ವಾಸದ ಮನೆಯನ್ನು ಪಾಲುಮಾಡುವಾಗಲೂ ಒಂದೆರಡೂ ಸಾರಿ ಜೋರಾಗಿ ಮಾತಾಡಿದ್ದನು. ಆದರೆ ಕ್ಷುದ್ರವಾದರೂ ಮನೆಯ ಅಂತರಂಗಕ್ಕೆ ಸೇರಿ ಪವಿತ್ರವಾಗಿದ್ದ ಪದಾರ್ಥಗಳನ್ನು ಹಂಚುವಾಗ ಮಾತ್ರ ಯಾವ ಮಾತನ್ನೂ ‘ಇಸ್ಸಿ ! ಇಸ್ಸಿ ! ಇಸ್ಸಿ !’ ಎನ್ನುತ್ತಿದ್ದಂತೆ ಅವನಿಗೆ ಭಾಸವಾಗುತ್ತಿತ್ತು.

ಶ್ಯಾಮಯ್ಯಗೌಡರೂ ಸಿಂಗಪ್ಪಗೌಡರೂ ನಡುನಡುವೆ ಇತರರ ಸಲಹೆಗಳನ್ನು ತೆಗೆದುಕೊಳ್ಳುತ್ತಾ ಆ ಪದಾರ್ಥಗಳ ಹಂಚಿಕೆಗೆ ತೊಡಗಿದರು. ಪುಟ್ಟಣ್ಣ, ಸೇರೆಗಾರರು, ನಿಂಗ ಮೊದಲಾದ ಮುಟ್ಟಾಳುಗಳು (ಮುಟ್ಟಬಹುದಾದ ಜಾತಿಯವರು ಎಂದರ್ಥ. ಏಕೆಂದರೆ ತಿಮ್ಮನಂತಹ ಹಳೆಪೈಕದವರಾಗಲಿ ಬೈರನಂತಹ ಬೇಲರಾಗಲಿ ಕೀಳಜಾತಿಯವರಾದುದರಿಂದ ಒಳಗಿನ ಪದಾರ್ಥಗಳನ್ನು ಮುಟ್ಟುತ್ತಿರಲಿಲ್ಲ.) ಆ ಪದಾರ್ಥಗಳನ್ನೆಲ್ಲ ಹೇಳಿದಂತೆ ಎರಡು ಭಾಗವಾಗಿ ಬೇರೆ ಬೇರೆ ಮಾಡತೊಡಗಿದರು. ಸುಮಾರು ಒಂದು ಒಂದೂವರೆ ಗಂಟೆಯ ತರುವಾಯ ಅಂಗಳದಲ್ಲಿ ಮೊದಲು ಒಟ್ಟಾಗಿದ್ದ ರಾಶಿ ಈಗ ಭಾಗವಾಗಿ ನಿಂತಿತು.

ಯಾರಿಗೆ ಯಾವ ಭಾಗ ಹೋಗಬೇಕು ಎನ್ನುವುದರಲ್ಲಿ ಸ್ವಲ್ಪ ಚರ್ಚೆ ನಡೆಯಿತು. ಅದಕ್ಕೆ ಕಾರಣ ಹೂವಯ್ಯನಾಗಿರಲಿಲ್ಲ ; ಅವನ ಪಕ್ಷವನ್ನು ವಹಿಸಿದ್ದ ಸೀತೆಮನೆ ಸಿಂಗಪ್ಪಗೌಡರಾಗಿದ್ದರು.

ಕಡೆಗೆ ಮುತ್ತಳ್ಳಿ ಶ್ಯಾಮಯ್ಯಗೌಡರು ಒಂದು ಉಪಾಯವನ್ನು ಸೂಚಿಸಿದರು : “ಒಬ್ಬ ಚಿಕ್ಕ ಹುಡುಗನನ್ನು ಕರೆದು ಯಾವುದಾದರೊಂದು ಭಾಗವನ್ನು ಮುಟ್ಟು ಎಂದು ಹೇಳೋಣ. ಅವನು ಮುಟ್ಟಿದ ಭಾಗ ಚಂದ್ರಯ್ಯಗೌಡರಿಗಾಗಲಿ ಉಳಿದಿದ್ದು ಹೂವಯ್ಯಗಾಗಲಿ.”

ಅವರ ಸೂಚನೆಗೆ ಸಮ್ಮತಿ ದೊರಕಿತು. ಚಂದ್ರಯ್ಯಗೌಡರು ನಿಂಗನ ಮಗ ಪುಟ್ಟನನ್ನು ಕರೆದರು. ಅವನು ನಾಯಿಮರಿ ಕೊಂದುಹಾಕಿದ್ದಕ್ಕೆ ತನಗೇನು ಗ್ರಹಚಾರ ಬಂದಿತೋ ಎಂದು ಹೆದರಿ ತಲೆ ತಪ್ಪಿಸಿಕೊಂಡು ಬಿಟ್ಟನು. ಎಷ್ಟು ಕರೆದರೂ ಬರಲಿಲ್ಲ. ಹುಡುಕಿದರೂ ಸಿಕ್ಕಲಿಲ್ಲ, ಕಡೆಗೆ ಹೂವಯ್ಯನ ಸಲಹೆಯಂತೆ ವಾಸುವನ್ನೇ ಕರೆದರು. ಮೊದಲು ಮೊದಲು ಅವನೂ ಬರಲೊಪ್ಪಲಿಲ್ಲ. ಚಂದ್ರಯ್ಯಗೌಡರು ಕಣ್ಣು ಕೆರಳಿಸಿ ಗದರಿಸಿದರು. ಅಳತೊಡಗಿದರು. ಅಂತೂ ಹೂವಯ್ಯನೇ ಹೋಗಿ ಅವನಿಗೆ ಸಮಾಧಾನ ಹೇಳಿ ಒಪ್ಪಿಸಿ ಕರೆತರಬೇಕಾಯಿತು.

ಆ ದಿನ ಪಾತಃಕಾಲದಿಂದಲೂ ವಾಸುವಿನ ಮನಸ್ಸು ಏನೋ ಒಂದು ರೀತಿಯಾಗಿತ್ತು. ಹೃದಯದಲ್ಲಿ ಕಳವಳ ನೆಲೆಸಿತ್ತು. ಎರಡು ದಿನಗಳ ಹಿಂದೆ ಚಂದ್ರಯ್ಯಗೌಡರು ಬಲಾತ್ಕಾರದಿಂದ ಅವನ ಕ್ರಾಪನ್ನು ಕತ್ತರಿಸಿ, ಲಾಳದಾಕಾರದ ಕ್ಷೌರ ಮಾಡಿಸಿದಾಗಿನಿಂದಲೂ ಅವನ ಚಿತ್ತ ಅಸ್ವಸ್ಥವಾಗಿತ್ತು. ಅದರ ಜೊತೆಗೆ ಹಿಂದಿನ ದಿನ ಸಂಜೆಯಲ್ಲಿ ತಂದೆಯ ಆಜ್ಞೆಯ ಪ್ರಕಾರ ತಾನುಬೈಲಿಗೆ ಹೋಗಿ, ಅಲ್ಲಿ ನಂಟರು ಕಳ್ಳು ಬ್ರಾಂದಿ ಕುಡಿಯುತ್ತಿದ್ದಾಗ ತಾನೂ ಅವರ ಪ್ರಲೋಭನಕ್ಕೊಳಗಾಗಿ, ಹೂವಣ್ಣಯ್ಯನ ಸದ್ಭೋಧೆಗೆ ವ್ಯತಿರಿಕ್ತವಾಗಿ, ಮದ್ಯಪಾನಮಾಡಿಬಿಟ್ಟಿದ್ದನು. ಅವನೇನೋ ತಾನು ಕುಡಿಯುವುದಿಲ್ಲ ಎಂದು ಎರಡು ಮೂರು ಸಾರಿ ಒಲ್ಲೆನೆಂದರೂ ಪೆದ್ದೇಗೌಡರೇ ಮೊದಲಾದವರು ಬಹಳ ಉಪಚಾರಮಾಡಿ ಅನುರೋಧಿಸಿದ್ದರಿಂದ ಕುಡಿಯಲೇಬೇಕಾಯಿತು. ಆ ಸುದ್ದಿ ಹೂವಣ್ಣಯ್ಯಗಾಗಲಿ ಅಣ್ಣಯ್ಯಗಾಗಲಿ ಮುಟ್ಟಿದರೆ ತನ್ನನ್ನು ಏನೆಂದುಕೊಳ್ಳುವರೋ ಎಂಬ ಉದ್ವೇಗವೂ ಅವನನ್ನು ಪೀಡಿಸುತ್ತಿತ್ತು. ಅಲ್ಲದೆ ಆ ದಿನ ಬೆಳಿಗ್ಗೆ ಅವನನ್ನು ಪೆದ್ದೇಗೌಡರ ಶುಶ್ರೂಷೆಗೆ ಸೆರೆಹಾಕಿದ್ದರಿಂದಲೂ ದುರದೃಷ್ಟಕ್ಕೆ ಸರಿಯಾಗಿ ನಾಯಿಮರಿ ತೀರಿಹೋಗಿದ್ದರಿಂದಲೂ ಅವನ ಮನಸ್ಸು ಮತ್ತಷ್ಟು ಕ್ಷುಬ್ಧವಾಗಿತ್ತು. ಮತ್ತೊಂದು ಮಹತ್ತಾದ ವಿಷಯವೇನೆಂದರೆ, ಆ ಬಾಲಕನ ಸರಳ ಬುದ್ಧಿಗೆ ಮನೆಯಲ್ಲಿ ಅಂದು ನಡೆಯುತ್ತಿದ್ದ ಹಿಸ್ಸೆ ಏನೋ ಒಂದು ಅಮಂಗಲದಂತೆ, ಅಶುಭದಂತೆ, ಅನಿಷ್ಟದಂತೆ, ಅಪಶಕುನದ ಸೂಚನೆಯಂತೆ ತೋರತೊಡಗಿತ್ತು. ಅದರ ಪರಿಣಾಮವಾಗಿ ಅವನ ಹೃದಯದಲ್ಲಿ ನಿರಾಕಾರವಾದ ಅಸ್ಪುಟವಾದ ಭೀತಿ ತಲೆದೋರಿತ್ತು.

ಇಂತಹ ಸ್ಥಿತಿಯಲ್ಲಿದ್ದ ವಾಸು ತನ್ನ ಹೂವಣ್ಣಯ್ಯನ ಮಾತಿನ ಮೇರೆಗೆ ಅಂಗಳಕ್ಕಿಳಿದನು. ಅವನ ಅವಸ್ಥೆ ಮೊದಲನೆಯಸಲ ವೇದಿಕೆಯ ಮೇಲೆ ನಿಂತು ಅನೇಕ ಜನರ ಸಮ್ಮುಖದಲ್ಲಿ ಮಾತಾಡುವವನಂತಾಗಿತ್ತು. ಎಲ್ಲರ ದೃಷ್ಟಿಯೂ ತನ್ನ ಮೇಲೆ ಬಿದ್ದಿರುವುದನ್ನೂ ತಾನು ಮಾಡಲಿರುವ ಕಾರ್ಯದಲ್ಲಿ ಮಹತ್ತಿದ್ದಂತೆ ತೋರುತ್ತಿದ್ದುದನ್ನೂ ಅರಿತ ಬಾಲಕನ ಮೈ ಆಗಲೆ ಬಿಸಿಯಾಗತೊಡಗಿತ್ತು. ಉಸಿರು ವೇಗವಾಯಿತು ; ಬೆವರಿತು, ಬಗೆ ಕದಡಿದಂತಾಯಿತು. ಕಣ್ಣು ಕತ್ತಲೆಗಟ್ಟಿಕೊಳ್ಳುತ್ತಾ ಬಂದಿತು. ಕಾಲು ತತ್ತರಿಸತೊಡಗಿತು.

ಸೇರಿದ್ದವರಲ್ಲಿ ಯಾರೊ ಒಬ್ಬರು “ಹೇದರಬೇಡ. ಹೋಗು, ಮುಟ್ಟು !” ಎಂದ ಹಾಗಾಯಿತು.

ವಾಸು ಬಹು ಪ್ರಯಾಸದಿಂದ ಮುಂಬರಿದುಹೋಗಿ ನಡಗುತ್ತಿದ್ದ ಕೈಯಿಂದ ಒಂದು ಪಾಲಿನ ಸಮುದಾಯದಲ್ಲಿದ್ದ ಕಡಾಯಿಯೊಂದರ ಗೊಣಸನ್ನು ಮುಟ್ಟಿ, ಹಿತ್ತಾಳೆಯ ಪಾತ್ರೆಗಳ ಮೇಲೆ ಢಣ ಢಣ ಢಣಾರನೆ ಉರುಳಿದನು.

“ಹುಡುಗ ಬಿದ್ದ ! ಹುಡುಗ ಬಿದ್ದ ! ಅಯ್ಯೋ ಬಿದ್ದ ! ಹಿಡುಕೊಳ್ಳೊ ಪುಟ್ಟಣ್ಣಾ, ಹಿಡುಕೋ !….. ನೀರು ! ನೀರು….. ಆ ಬೀಸಣಿಗೆ ತಗೊಂಡು ಬಾ !” ಇತ್ಯಾದಿ ಕೂಗುಗಳೊಡನೆ ಅಲ್ಲದ್ದವರೆಲ್ಲರೂ ವಾಸುವಿನ ಬಳಿಗೆ ಓಡಿದರು.

ಹೂವಯ್ಯ ಅವನನ್ನು ಮೆಲ್ಲಗೆ ಹಿಡಿದೆತ್ತಿ ಜಗಲಿಗೆ ತಂದು ಹಾಸಗೆಯ ಮೇಲೆ ಮಲಗಿಸಿದನು. ಬಾಲಕನಿಗೆ ಪ್ರಜ್ಞೆಯಿರಲಿಲ್ಲ.

ತಲೆಗೆ ತಣ್ಣೀರು ತಟ್ಟಿದರು. ಬೀಸಣಿಗೆಯಿಂದ ಗಾಳಿ ಬೀಸಿದರು. ನಾಗಮ್ಮನವರೂ ಚಂದ್ರಯ್ಯಗೌಡರೂ ಪ್ರತ್ಯೇಕ ಪ್ರತ್ಯೇಕವಾಗಿ ದೆಯ್ಯ ದೇವರುಗಳಿಗೆ ಹೇಳಿಕೊಂಡರು. ಇದ್ದಕಿದ್ದ ಹಾಗೆ ಅಲ್ಲಿ ನೆರೆದಿದ್ದವರೆಲ್ಲರ ಮನಸ್ಸೂ ಮನೆ, ಹಿಸ್ಸೆ, ಪಾಲು, ಪಾತ್ರೆ, ಜಗಳ ಇವುಗಳನ್ನೆಲ್ಲ ಹಿಂದೆ ಬಿಟ್ಟು, ಜೀವ, ಸಾವು, ದೇವರು ಇವುಗಳ ಕಡೆಗೆ ತಿರುಗಿಬಿಟ್ಟಿತು. ಕೆಲವು ದಿನಗಳ ಹಿಂದೆ ತಾನೇ ತಮ್ಮ ಮಗನನ್ನು ಭಯಂಕರ ರೀತಿಯಲ್ಲಿ ಕಳೆದುಕೊಂಡಿದ್ದ ಸಿಂಗಪ್ಪಗೌಡರಂತೂ ಮಾತಾಡಲಾರದೆ ಒಂದು ಕಡೆ ಗೋಡೆಗೊರಗಿಬಿಟ್ಟರು. ಬಹಳ ಹೊತ್ತಾದ ಮೇಲೆ ವಾಸುವಿಗೆ ಪ್ರಜ್ಞೆ ಬಂದಿತು.

“ಹೂವಣ್ಣಯ್ಯಾ, ಕುಡೀಬೇಕು !” ಎಂದನು.

ಪುಟ್ಟಣ್ಣ ಒಳಗೆ ಓಡಿಹೋಗಿ ಪಾನಕ ತಂದುಕೊಟ್ಟಳು.

ಆ ದಿನ ಸಾಯಂಕಾಲವೆ ಪೆದ್ದೇಗೌಡರನ್ನು ಗಾಡಿಯಮೇಲೆ ಹೇರಿ ನೆಲ್ಲು ಹಳ್ಳಿಗೆ ಸಾಗಿಸದರು. ಮುತ್ತಳ್ಳಿ ಶ್ಯಾಮಯ್ಯಗೌಡರು, ಸೀತೆಮನೆ ಸಿಂಗಪ್ಪಗೌಡರು ಇವರಿಬ್ಬರನ್ನುಳಿದು ಮಿಕ್ಕ ನಂಟರೆಲ್ಲ ತಮ್ಮ ತಮ್ಮ ಮನೆಗಳಿಗೆ ಹೊರಟುಹೋದರು.

ಶ್ಯಾಮಯ್ಯಗೌಡರು ಉಳಿದುಕೊಂಡಿದ್ದು ತಮಗೆ ಬರಬೇಕಾಗಿದ್ದ ಸಾಲದ ವಿಚಾರವಾಗಿ ಚಂದ್ರಯ್ಯಗೌಡರೊಡನೆ ಏನಾದರೂ ಒಂದು ನಿರ್ಣಯಕ್ಕೆ ಬರಬೇಕೆಂದು.

ಸಿಂಗಪ್ಪಗೌಡರು ಉಳಿದುಕೊಂಡಿದ್ದು ಹೂವಯ್ಯನೊಡನೆ ಮಾತುಕತೆಯಾಡಿ ಉತ್ತಮ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು. ಅವರೊಡನೆ ಇದ್ದಾಗ ಅವರಿಗೆ ತಮ್ಮ ದುಃಖಗಳೆಲ್ಲ  ಕ್ಷುದ್ರವಾದಂತೆ ತೊರಿ, ಒಂದು ಅಲೌಕಿಕ ಆನಂದವಾಗುತ್ತಿತ್ತು.