ತರುಣಿಯನ್ನು ಮದುವೆಯಾದ ವಯಸ್ಕರಾದ ಚಂದ್ರಯ್ಯಗೌಡರು ಬಹಳಕಾಲ ಅಸ್ಖಲಿತ ಸುಖವನ್ನು ಅನುಭವಿಸಲಾಗಲಿಲ್ಲ. ಸಣ್ಣ ಹೆಣ್ಣನ್ನು ಮದುವೆಯಾಗುವ ಮುದುಕನ ಮನಸ್ಸು ಬಹುಬೇಗನೆ ಅತ್ಯಲ್ಪ ಕಾರಣಗಳಿಂದ ಸಂಶಯಗ್ರಸ್ತವಾಗುತ್ತದೆ. ಸಂಶಯ ಒಮ್ಮೆ ಮುದಿ ಮಿದುಳನ್ನು ಪ್ರವೇಶಿಸಿತೆಂದರೆ ಒಣಗಿದ ಮರದ ಬುಡಕ್ಕೆ ಗೆದ್ದಲು ಹಿಡಿದಂತಾಗುತ್ತದೆ. ಏನು ಕಂಡರೂ ಏನು ಕೇಳಿದರೂ ಎಲ್ಲವೂ ಸಂಶಯಭೂತವನ್ನು ಮತ್ತೂ ಹಿರಿದಾಗಿ ಮಾಡುವ ಸಾಕ್ಷಿಗಳಾಗಿ ಪರಿಣಮಿಸುತ್ತವೆ. ಮೊದಲು ಸಾಧಾರಣ ಸರಳ ಮುಗ್ಧವಾಗಿ ತೋರುತ್ತಿದ್ದ ವಿಷಯಗಳು ತರುವಾಯ ಪಿತೂರಿಯ ಪಿಶಾಚಿಗಳಾಗಿ ತೋರುತ್ತವೆ. ಸಂಶಯದಿಂದ ಮಾತ್ಸರ್ಯ ದ್ವೇಷ ಕ್ರೋಧಗಳು ಹೊಮ್ಮಿ ಹೃದಯ ಹಿಂಸಾಭಿಮುಖವಾಗುತ್ತದೆ. ಕಾನೂನಿನ ಪ್ರಕಾರವೂ ಸಮಾಜದ ಆಚಾರದ ಪ್ರಕಾರವೂ ಸಣ್ಣ ಹೆಣ್ಣನ್ನು ಮದುವೆಯಾಗುವ ಮುದುಕ ಅಪರಾಧಿಯೂ ಅಲ್ಲ, ಪಾಪಿಯೂ ಅಲ್ಲ. ಆದರೂ ಪ್ರಕೃತಿಯ ತೀರ್ಪು ಬೇರೆಯಾಗಿರುತ್ತದೆ. ಮುದುಕನ ಮನಸ್ಸಿನಲ್ಲಿಯೇ ಅದು ವ್ಯಕ್ತವಾಗುತ್ತದೆ. ತಾನು ದುಡ್ಡು ಖರ್ಚು ಮಾಡಿ ಬಹುಜನ ಬಂಧುಗಳ ಸಮ್ಮುಖದಲ್ಲಿ ಶಾಸ್ತ್ರರೀತಿಯಾಗಿ ದೇವ ದೇವತೆಗಳ ಸಾಕ್ಷಿಯಲ್ಲಿ ಕೈಹಿಡಿದ ಬಾಲವಧುವನ್ನು ತನ್ನ ಕಾಮಲಾಲಸೆ ಪ್ರೇರಿಸಿದಂತೆ ಉಪಭೋಗಿಸಬಹುದಾದರೂ ಉಪಯೋಗಿಸುವನಾದರೂ, ಅಂತರಂಗದಲ್ಲಿ ತಾನು ಅಪರಾಧಿ ಎಂದು ತಿಳಿಯುತ್ತಾನೆ. ಅದಕ್ಕೆ ತಕ್ಕ ಶಿಕ್ಷೆಯೂ ಅಂತರಂಗದಲ್ಲಿಯೆ ಪ್ರಾರಂಭವಾಗುತ್ತದೆ. ಎಳೆಯದೆಂದಿಗೂ ಹಳೆಯದನ್ನು ಒಲಿಯಲಾರದು. ಬಾಲ್ಯ ವೃದ್ಧಾಪ್ಯಗಳಿಗೆ ಗೌರವ ಸಂಬಂಧವಿರಬಲ್ಲುದೆ ಹೊರತು ಪ್ರೇಮಸಂಬಂಧವಿರಲಾರದು.

ಸುಬ್ಬಮ್ಮ ಎಷ್ಟೇ ಒರಟು ಹುಡುಗಿಯಾಗಿದ್ದರೂ ಎಷ್ಟೇ ಅನಾಗರಿಕಳಾಗಿದ್ದರೂ ಅವಳು ಎಳೆಯ ಹೆಣ್ಣು ಎಂಬುದನ್ನು ಮರೆಯಬಾರದು. ಬಡತನದಲ್ಲಿಯೆ ಬೆಳೆದಿದ್ದ ಆಕೆಗೆ ಶ್ರೀಮಂತರಾದ ಚಂದ್ರಯ್ಯಗೋಡರನ್ನು ಮದುವೆಯಾದಂದು ಅತ್ಯಂತ ಹೆಮ್ಮೆಯಾಗಿತ್ತು. ಎಂದೂ ಕಾಣದ ವಸನ ಭೂಷಣಗಳನ್ನು ಕಂಡು ಕಣ್ಣು ಕೋರೈಸಿ ಹೋಗಿತ್ತು. ಚಂದ್ರಯ್ಯಗೌಡರೂ ಪ್ರಯತ್ನಪೂರ್ವಕವಾಗಿ ತಾವು ತರುಣರಾಗಿದ್ದಾಗ ಪ್ರಥಮ ವಿವಾಹದಲ್ಲಿ ಅನುಭವಿಸಿದ್ದ ಯೌವನದ ಕಾಲವನ್ನು ಮತ್ತೆ ಅನುಕರಿಸಿ, ಭಯಂಕರ ಧರ್ಮಾಧಿಕಾರಿಯಾಗಿರುವ ಕಾಲದೇವನನ್ನು ವಂಚಿಸಿದೆನೆಂದು ಊಹಿಸಿದ್ದರು. ಆದರೆ ಅದು ವಸ್ತುತಃ ಬಿಸಲ್ಗುದರೆಯ ಸವಾರಿಯಾಗಿತ್ತು. ಏನೂ ಅರಿಯದ ಮಡ್ಡ ಹುಡುಗಿ ಸೇರೆಗಾರ ರಂಗಪ್ಪಸೆಟ್ಟರೆ ಮೊದಲಾದವರೊಡನೆ ಸರಳರೀತಿಯಿಂದ ಮಾತಾಡಿ ವರ್ತಿಸುತ್ತಿದ್ದುದು ಗೌಡರ ಕಣ್ಣಿಗೆ ಬಿದ್ದೊಡನೆ ಅವರ ಸಿಂಗಾರದ ಹೊಂಗನಸು ಬಿರುಕುಬಿಡತೊಡಗಿತು. ಅವರ ಪ್ರೇಮ ತಾನು ಹಾಕಿಕೊಂಡಿದ್ದ ಮುಸುಗನ್ನು ತೆರೆಯಿತು. ಗೌಡರು ನೊಡುತ್ತಾರೆ: ಕಾಮವು ನಾಚಿಕೆಗೇಡಿಯಗಿ ನಿಂತಿದೆ! ಅದರ ಕೈಯಲ್ಲಿ ಲೋಭದ ಬಲೆ! ಗೌಡರ ಮಾತ್ಸರ್ಯಕ್ಕೆ ಒಂದು ಅವಲಂಬನ ಬೇಕಾಯಿತು. ಸೇರೆಗಾರ ರಂಗಪ್ಪಸೆಟ್ಟರು ಸಿಕ್ಕಿದರು!

ಕಳ್ಳನ ಗುಟ್ಟು ಕಳ್ಳನಿಗೇ ಗೊತ್ತು ಸೇರೆಗಾರರು ಮತ್ತೊಬ್ಬನ ಪತ್ನಿಯಾಗಿದ್ದ ಗಂಗೆಯನ್ನು ಹೇಗೆ ಕನ್ನಡ ಜಿಲ್ಲೆಯಿಂದ ಹಾರಿಸಿಕೊಂಡು ಬಂದು ಉಪಯೋಗಿಸುತ್ತಿದ್ದರೆಂಬುದು ಗೌಡರಿಗೆ ಅನುಭವವೇದ್ಯವಾಗಿತ್ತು. ಅಲ್ಲದೆ ಸೆಟ್ಟರಿಗೆ ಮಡಿ, ಮೈಲಿಗೆ, ತನ್ನದು ಪರರದು, ಶುಚಿ, ಎಂಜಲು ಎಂಬ ಯಾವ ಭೇದವೂ ಇಲ್ಲವೆಂಬುದೂ ಗೌಡರಿಗೆ ಗೊತ್ತಾಗಿತ್ತು. ಏಕೆಂದರೆ; ತಮಗೆ ಅವಶ್ಯಬಿದ್ದಾಗ ಗಂಗೆಯ ಸ್ನೇಹಮಾಡಲು ಸೆಟ್ಟರು ನಿಷೇಧಿಸುವುದಕ್ಕೆ ಬದಲಾಗಿ ಉತ್ತೇಜನವಿತ್ತು ಹೆಮ್ಮೆಪಟ್ಟಿದ್ದರು. ಅಂತಹ ವ್ಯಕ್ತಿ ಏನನ್ನು ಮಾಡಲು ತಾನೆ ಹೇಸುವನು? ಎಷ್ಟು ದೂರ ಹೋಗಲು ತಾನೆ ಹಿಂಜರಿಯುವನು? ಆತನಿಗೆ ಗಂಗೆಯಾದರೇನು? ಸುಬ್ಬಮ್ಮನಾದರೇನು? ಅಂತೂ ಸೇರೆಗಾರರು ಗೌಡರ ಸಂಶಯಕ್ಕೆ ಪಾತ್ರರಾಗಿದ್ದರು. ಆದರೆ ಅದನ್ನು ಹೊರಗೆ ಸೂಚಿಸಲು ಕೂಡ ಅವರಿಗೆ ಎದೆಯಾಗಿರಲಿಲ್ಲ. ಹಾಗೆ ಮಾಡುವುದು ತಮ್ಮ ಗೌರವಕ್ಕೆ ಕಡಮೆ ಎಂದು ಅವರ ಭಾವನೆಯಾಗಿತ್ತು. ಮನಸ್ಸು ಮಾಡಿದ್ದರೆ ಅವರ ಸೇರೆಗಾರರನ್ನು ಅವರ ಆಳುಗಳೆಲ್ಲರೊಡನೆ ಕಾನೂರಿನಿಂದಲೆ ಹೊರಡಿಸಬಹುದಾಗಿತ್ತು. ಹಾಗೆ ಮಾಡುವುದರಿಂದ ತಮ್ಮನ್ನು ತಾವೆ ಕೀಳುಗೈದಂತಾಗುತ್ತದೆ ಎಂದು ಸುಮ್ಮನಿದ್ದರು. ಅವಶ್ಯವಿದ್ದಾಗ ಓಡಿಸಿದರಾಯಿತು! ಅಲ್ಲದೆ, ಸೇರೆಗಾರರೊಡನೆ ಗಂಗೆಯೂ ಹೋಗಿಬಿಡುತ್ತಾಳಲ್ಲವೆ?

ನಿಜವಾಗಿಯೂ ಸುಬ್ಬಮ್ಮನ ಮನಸ್ಸು ಗೌಡರು ಊಹಿಸಿದಷ್ಟು ಕೆಟ್ಟಿರಲಿಲ್ಲ. ಸೇರೆಗಾರರೂ ಗೌಡರೂ ಊಹಿಸದಷ್ಟು ಮುಂದುವರಿದಿರಲಿಲ್ಲ. ಗಂಗೆ ತನ್ನ ಪೂರ್ವ ಕಥೆಯನ್ನು ಹೇಳಿ ಉಪದೇಶಮಾಡಿದಂದು ಸುಬ್ಬಮ್ಮನ ಸುಪ್ತಚಿತ್ತದಲ್ಲಿ ಒಂದೆರಡು ಅಸ್ಫುಟ ಪಿಶಾಚಿಗಳು ಸುಳಿದುಹೋಗಿದ್ದುವೆಂಬುದೇನೋ ನಿಜ. ಆದರೆ ಗೌಡರು ಊಹಿಸಿದ್ದ ಸಾಹಸಕ್ಕೆ ಅವಳೆಂದಿಗೂ ಮನಸ್ಸು ಮಾಡಿರಲಿಲ್ಲ; ಧೈರ್ಯವೂ ಇರಲಿಲ್ಲ.

ಅಂತೂ ಮನದಲ್ಲಿ ಸಂಶಯ ಕಾಲಿಟ್ಟ ಮೇಲೆ ಗೌಡರು ತಮ್ಮ ತರುಣ ಪತ್ನಿಯ ಪರವಾಗಿ ಅದನ್ನೂ ಇದನ್ನೂ ನೆವಮಾಡಿಕೊಂಡು ಆಗಾಗ ಸ್ವಲ್ಪ ಕ್ರೂರವಾಗಿ ವರ್ತಿಸತೊಡಗಿದರು. ಹೊಡೆಯುವುದೂ ಬೈಯುವುದೂ ಹೆಚ್ಚಾಯಿತು. ತಮ್ಮ ಸಂಶಯವನ್ನು ಹೆಂಡತಿಗೆ ಹೇಳಿ ಆಕೆಯನ್ನು ಎಚ್ಚರಿಸಲೂ ಇಲ್ಲ. ಒಂದೆರಡು ಸಾರಿ ಅವರು ಹೆಂಡತಿಯನ್ನು ಹೊಡೆಯುತ್ತಿದ್ದಾಗ ಸೇರೆಗಾರರೇ ಅಡ್ಡಬಂದು ದಮ್ಮಯ್ಯಗುಡ್ಡೆಹಾಕಿ ಬಿಡಿಸಿದ್ದುದಂತೂ ಸಂಶಯಾಗ್ನಿಗೆ ಘೃತವೆರಚಿದಂತಾಗಿತ್ತು. ಮೊದಮೊದಲು ಗೌಡರ ಈ ಬುದ್ಧಿ ಸೆಟ್ಟರಿಗೆ ತಿಳಿಯದಿದ್ದರೂ ಕೆಲದಿನಗಳಲ್ಲಿಯೆ ಅನುಭವಶಾಲಿಯ ಮನಸ್ಸಿಗೆ ಗುಟ್ಟು ಮಿಂಚಿತು. ಆಮೇಲೆ ಒಂದಿನಿತು ಜಾಗರೂಕರಾಗಿಯೆ ನಡೆದುಕೊಳ್ಳತೊಡಗಿದರು. ಸೇರೆಗಾರರ ವರ್ತನೆಯಲ್ಲಿ ಬದಲಾವಣೆ ಕಂಡ ಯಜಮಾನರಿಗೆ ಮತ್ತೂ ದಿಗಿಲಾಯಿತು!

ಪರಿಸ್ಥಿತಿ ಹೀಗಿತ್ತು ಹೊವಯ್ಯ ರಾಮಯ್ಯರು ಬೇಸಗೆಯ ರಜಾಕ್ಕೆ ಮನೆಗೆ ಬಂದಾಗ. ತರುವಾಯ ಸಮಸ್ಯೆ ಮೆಲ್ಲಮೆಲ್ಲನೆ ಮತ್ತೂ ಜಟಿಲವಾಗತೊಡಗಿತು ― ಕಲ್ಪನೆಯೂ ಹೆದರುವಷ್ಟು!

ಚಂದ್ರಯ್ಯಗೌಡರ ಹೃದಯದಲ್ಲಿ ಕಳವಳ ಕದನಗಳು ಹೆಚ್ಚುತ್ತಿದ್ದಾಗಲೆ ಮನೆಯಲ್ಲಿ ಶಾಂತಿ ಮೈತ್ರಿಗಳು ನೆಲಸುತ್ತಿದ್ದಂತೆ ತೊರಿತು. ನಾಗಮ್ಮ ಸುಬ್ಬಮ್ಮರ ಕಚ್ಚಾಟಗಳು ನಿಂತುವು. ಪುಟ್ಟಮ್ಮ, ವಾಸು ಇಬ್ಬರೂ ಸುಬ್ಬಮ್ಮ ತಮ್ಮ ಪರವಾಗಿ ತೊರಿಸತೊಡಗಿದ ಆದರವನ್ನು ಕಂಡು ಸ್ವಲ್ಪ ಆಶ್ಚರ್ಯ ಗೊಂಡರೂ ಹರ್ಷಚಿತ್ತರಾದರು. ವಾಸುವಂತೂ ತುಪ್ಪ ಬೆಣ್ಣೆ ಕಾಫಿ ತಿಂಡಿಗಳನ್ನು ಖೂನಿಮಾಡಿದವರ ಕೈಯಿಂದ ಅಧಿಕಾರಿಗಳು ಲಂಚ ಕೀಳುವಂತೆ ಕಿತ್ತು ತಿನ್ನತೊಡಗಿದನು. ಸುಬ್ಬಮ್ಮ ಬರಬರುತ್ತ ವಿಧೇಯಳೂ ನಯಶೀಲಳೂ ಪ್ರಿಯವಚನಳೂ ಆಗುತ್ತಿದ್ದುದನ್ನೂ ಕಂಡು ಆಕೆಯ ಪತಿಯೊಬ್ಬನಿಗಲ್ಲದೆ ಉಳಿದವರಿಗೆಲ್ಲ ಮುದವಾಯಿತು.

ಕಾರಣವೇನೆಂದರೆ, ಸುಬ್ಬಮ್ಮ ಹೂವಯ್ಯ ರಾಮಯ್ಯರನ್ನು ನೋಡಿದಾರಭ್ಯ ತನ್ನ ಒರಟುತನಕ್ಕೆ ತಾನೆ ಅಸಹ್ಯಪಟ್ಟುಕೊಂಡು ತಿದ್ದಿಕೊಳ್ಳತೊಡಗಿದಳು. ಹೂವಯ್ಯನ ಭದ್ರಕಾರವೂ ಗಂಭೀರವರ್ತನೆಯೂ ಆತನಲ್ಲಿದ್ದ ಒಂದು ವಿಧವಾದ ಗುರುಭಾವವೂ ಸುಬ್ಬಮ್ಮ್ಮನ ಆರಾಧನೆಗೆ ಗುರಿಯಾದುವು. ಆ ಆರಾಧನೆಯಲ್ಲಿ ಬೇಟದ ಭಾವ ಲವಲೇಶವೂ ಇರಲಿಲ್ಲ. ಗಂಗೆ ಪ್ರಚೋದಿಸಬೇಕೆಂದಿದ್ದ ಪ್ರಣಯಭಾವವು ಸರ್ವಶೂನ್ಯವಾಗಿ ಹೋಯಿತು. ದೊಡ್ಡದನ್ನು ಕಂಡಾಗ ಅದನ್ನು ಪೂಜಿಸಬೇಕು, ಅದರಂತಾಗಬೇಕು, ಅದರ ಕಣ್ಣಿಗೆ ಬೀಳಬೇಕು, ಅದರ ಪ್ರಶಂಸೆಗೆ ಪಾತ್ರವಾಗಬೇಕು ಎಂಬುದು ಮನುಷ್ಯಕುಲದ ಸಾಮಾನ್ಯೇಚ್ಛೆ. ಸುಬ್ಬಮ್ಮನಲ್ಲಿ ಮೂಡಿದರೂ ಅಂತಹ ಇಚ್ಛೆ. ನಾಗಮ್ಮನವರು ಹೂವಯ್ಯನ ತಾಯಿಯಾದುದರಿಂದ ಅವರನ್ನೂ ಹಿಂದಿನ ನಿಂದೆಗಳನ್ನೆಲ್ಲ ಮರೆಯಿಸುವಂತೆ ಗೌರವಿಸತೊಡಗಿದಳು. ಸುಬ್ಬಮ್ಮನ ಹೃದಯಪರಿರ್ವತನೆ ಹೂವಯ್ಯನ ವ್ಯಕ್ತಿತ್ವ ರಚಿಸಿದ ಒಂದು ಪವಾಡವೆಂದೇ ಹೇಳಬಹುದಾದರೂ ಆಕೆಯ ಎಳೆತನ, ಸರಳತೆ, ಮುಗ್ಧತೆ, ಕೆಟ್ಟದ್ದಾಗಲಿ ಒಳ್ಳೆಯದಾಗಲಿ ಸನ್ನಿವೇಶದ ಪ್ರಭಾವದಿಂದ ಬಹುಬೇಗನೆ ಮುದಿತವಾಗುವ ಒಂದು ವಿಧವಾದ ಹಳ್ಳಿಯ ಹಸಿತನ, ತಾರುಣ್ಯ ಸಹಜವಾದ ನಿರಂತರ ಉದ್ಧಾರಾಕಾಂಕ್ಷೆ, ಪತಿಯ ಇತ್ತೀಚಿನ ಅನಾದರಣೆಯಿಂದ ನೊಂದದೆ, ಇವುಗಳನ್ನು ಗಮನಿಸಿದರೆ ಅದು ಅಘಟನ ಘಟನೆಯಾಗಿ ತೋರುವುದಿಲ್ಲ.

ಸುಬ್ಬಮ್ಮ ಹೆಚ್ಚು ಹೆಚ್ಚು ನಯಶೀಲೆಯಾದಂತೆಲ್ಲ ಯಜಮಾನರ ಕೌರ್ಯವೂ ಅನಾದರಣೆಯೂ ಹಿಂಸೆಯೂ ಹೆಚ್ಚಾಗುತ್ತಾ ಹೋದವು. ಹೆಂಡತಿಯ ದೃದಯದ ಹಠತ್ತಾದ ಪರಿರ್ವತನೆ ಮೊದಲೇ ಸಂಶಯಗ್ರಸ್ತರಾಗಿದ್ದ ಚಂದ್ರಯ್ಯಗೌಡರಿಗೆ ಅನ್ಯಥಾ ತೋರಿತು. ಆಕೆ ತನ್ನ ಮನಸ್ಸಿನ ಪಾಪವನ್ನು ಮುಚ್ಚಲೆಂದು ಹಾಕಿಕೊಂಡಿರುವ ಸೋಗು ಎಂದು ಭಾವಿಸಿದರು. ಅಲ್ಲದೆ ಮತ್ತೊಂದು ಭಯಾನಕವಾದ ಭೂತ ಅವರ ಮನಸ್ಸಿನಲಿ ವಿಕಟಕಾರವಾಗಿ ಮೂಡಿತು. ಹೂವಯ್ಯ ಮನೆಗೆ ಬಂದೊಡನೆ ಸುಬ್ಬಮ್ಮ ಬದಲಾವಣೆಯಾದುದರಿಂದಲೂ, ಅವನು ವಯಸ್ಸಿನಲಿ, ಬುದ್ಧಿಯಲ್ಲಿ, ಸೌಂದರ್ಯದಲ್ಲಿ, ಶೀಲದಲ್ಲಿ ಎಲ್ಲದರಲ್ಲಿಯೂ ತಮಗೆ ಮೇಲುಗೈಯಾದುದರಿಂದಲೂ, ಹೆಂಡತಿಯ ಮನಸ್ಸು ಅತ್ತ ಕಡೆಗೆ ತಿರುಗಿರಬೇಕೆಂದು ನಿರ್ಣಯಿಸಿದರು. ಅದುವರೆಗೆ ಸೇರೆಗಾರೆ ರಂಗಪ್ಪಸೆಟ್ಟ್ರನ್ನು ಆವಲಂಬಿಸಿದ್ದ ಅವರ ಸಂಶಯ ಈಗ ಹೂವಯ್ಯನನ್ನು ಆವರಿಸತೊಡಗಿತು! ನಾಗಮ್ಮನವರ ಮೇಲೆ ಅವರಿಗಿದ್ದ ವೈರವೂ, ಇದು ಯಾವುದನ್ನೂ ಅರಿಯದಿದ್ದ ಹೂವಯ್ಯ ಆಗಾಗ ಗೌಡರನ್ನು ಸರಳ ರೀತಿಯಿಂದ ವಿಮರ್ಶಿಸಿದುದೂ, ಅವರ ಸಂಶಯಪಿಶಾಚಕ್ಕೆ ಆಹಾರವಾಗತೊಡಗಿದುವು. ಮನೆಯಲ್ಲಿ ಮೊದಲು ಇಲಿ ಬೆಕ್ಕುಗಳಂತಿದ್ದವರೆಲ್ಲ ಈಗ ಮೈತ್ರಿಯಿಂದ ಇರುವುದನ್ನು ಕಂಡ ಯಜಮಾನರು ತಮಗರಿಯದಂತೆ ಒಳಗೊಳಗೆ ಏನೋ ಪಿತೂರಿಯಾಗುತ್ತಿರಬೇಕೆಂದು ಭ್ರಮಿಸಿ ಎಲ್ಲರೊಡನೆಯೂ ಹುಚ್ಚು ಹುಚ್ಚಾಗಿ ವರ್ತಿಸತೊಡಗಿದರು.

ಇದೆಲ್ಲವನ್ನು ಈಕ್ಷಿಸಿ ಆರಿತ ಸೇರೆಗಾರರು, ಗೌಡರಿಗೆ ತಮ್ಮ ಮೇಲಿದ್ದ ಸಂಶಯವನ್ನು ಪರಿಹರಿಸಿಕೊಳ್ಳಲು ಇದೇ ಸಮಯವೆಂದು ಹವಣಿಸಿ, ಬೈರನಿಗೆ ಕೂಲಿ ಕೊಡದಿದ್ದುದಕ್ಕಾಗಿ ಹೂವಯ್ಯ ತಮಗೆ ಮಾಡಿದಮುಖ ಭಂಗಕ್ಕೆ ಮುಯ್ಯಿತೀರಿಸಿ ಕೊಳ್ಳವಸಲುವಾಗಿ ಯಜಮಾನರ ಕಿವಿಯಲ್ಲಿ ನಾನಾವಿಧವಾಗಿ ಪಿಸುಣಾಡತೊಡಗಿದರು. ‘ಕರಡಿ’ ಎಂದರೆ ಕುರುಡಾಗುವವನಿಗೆ ಕತ್ತಲಲ್ಲಿ ಕಗ್ಗಲ್ಲು ತೋರಿಸಿದಂತಾಯಿತು.

ಸಾಯಂಕಾಲ ಜೊತೆಗೂಡಿ ಕಳ್ಳು ಕುಡಿಯುತ್ತಿದ್ದಾಗ ಸೇರೆಗಾರರು “ಹೌದಾ ಗೌಡರೆ, ನಾನು ಹೊಟ್ಟೆಇಚ್ಚಿಗೆ ಹೇಳುವುದಿಲ್ಲ. ಮೊನ್ನೆ ನಾನು ನಿಮ್ಮ ಮಾತಿನಂತೆ ಆ ಬೈರ ಇದ್ದಾನಲ್ಲ? ಬೇಲರ ಬೈರ! ಅವನಿಗೆ ಬತ್ತ ಕೊಡದಿದ್ದಾಗ ಹೂವಯ್ಯಗೌಡರು ಕಂಡಾಬಟ್ಟೆ ಹೇಳಿಬಿಟ್ಟರಲ್ದಾ! ನನಗಂತೂ ಹೇಳಿದರೆ ದೋಷವಿರುವುದಾ? ಹೌದಾ! ನೀವೆ ಹೇಳಿ! ನಿಮಗೂ ಹೇಳುವದೆ ಕಂಡಾಬಟ್ಟೆ! ನಿಮ್ಮ ಕೂಳು ತಿಂದು ಕಣ್ಣಿಗೆ ಬಂದ ಆ ಪುಟ್ಟಣ್ಣ ಇದ್ದಾನಲ್ಲಾ ಅವನೂ ಹೇಳಿಬಿಡುವುದೇ ನಿಮಗೆ ಕಂಡಾಬಟ್ಟೆ!…. ಹೌದಾ! ಕಾಣಿ! ನನಗೆ ಆ ಪಾಪ ಏಕೆ? ನಾನು ಹೊಟ್ಟೆಕಿಚ್ಚಿಗೆ ಹೇಳುವುದಲ್ಲ. ಎಷ್ಟದರೂ ವಯಸ್ಸಾದ ಮಕ್ಕಳನ್ನು ಮನೆಯಲ್ಲಿ ಮದುವೆ ಮಾಡದೆ ಇಟ್ಟುಕೊಳ್ಳುವುದು ಅಷ್ಟೇನು ಒಳ್ಳೆಯದಲ್ಲ ― ಅಲ್ದಾ! ನಾನು ಸುಳ್ಳು ಹೇಳುತ್ತಿದ್ದರೆ ನನ್ನನಾಲಿಗೆ ಬಿದ್ದುಹೋಗಲಿ ಈವೊತ್ತೆ!….” ಎಂದು ಕನ್ನಡ ಜಿಲ್ಲೆಯ ಸೆಟ್ಟರು ಮಕ್ಕಳ ಬಿಡಿಯಕ್ಕರದ ಠೀವಿಯಲ್ಲಿ ರಾಗವಾಗಿ ಹೇಳಿ ಮುಗಿಸುವಷ್ಟರಲ್ಲಿಯೆ ಕುಡಿಯುತ್ತಿದ್ದ ಗೌಡರು ಆ ಸೂಚನಗಳನ್ನು ಸಾಸಿರ್ಮಡಿಯಾಗಿ ಸ್ವೀಕರಿಸಿ, “ನೀವೇನು ಹೊಸದಾಗಿ ಹೇಳೋದು ಬ್ಯಾಡ್ರೀ; ನನಗೆಲ್ಲ ಗೊತ್ತಾಗಿದೆ. ಅವನ್ನ ಅವನ ತಾಯಿನ, ಮನೆಯಿಂದ ಹೊರಡಿಸಿದ ಹೊರ್ತು ಸುಖವಿಲ್ಲ. ಗದ್ದೆಗೆ ಇಳಿಯೋ ಒಳಗಾಗಿ ಮನೆ ಪಾಲುಮಾಡಿ, ಅವರನ್ನ ಬ್ಯಾರೆ ಹಾಕಿಬಿಡ್ತೀನಿ. ಇಲ್ದಿದ್ರೆ, ಹಿರಿಯಕ್ಕನ ಚಾಳಿ ಮನೆಮಂದಿಗೆಲ್ಲ ಅಂತಾ, ಎಲ್ಲ ಕಟ್ಟುಹೋದ್ರೆ ಮುಂದೇನು ಗತಿ? ― ಅವನಂತೂ ನೆಲಾ ಗುಡಿಸುವಂತೆ ಬಿಳೀ ಪಂಚೆ ಉಟ್ಟುಕೊಂಡು ಉಪ್ಪರಿಗೆ ಮೇಲೆ ಕೂತುಬಿಡ್ತಾನೇ ಹೊರತು ಮನೆ ಕೆಲ್ಸ ಏನು ಎಂತೂ ಅಂತ ಕಣ್ಣು ಹಾಕಿ ನೋಡೋದಿಲ್ಲ. ಅವನ್ದೆಸೆಯಿಂದ ನಮ್ಮ ರಾಮುನೂ ಕೆಟ್ಟುಹೋಗ್ತಾನೆ! ನಮ್ಮ ದೆಯ್ಯ, ನಮ್ಮ ದ್ಯಾವರು ಅಂದ್ರೆ ಅವನಿಗಷ್ಟು ನಿಕೃಷ್ಟ. ಅವನು ಮನೀಗೆ ಬಂದದ್ದೇ ತಡ , ಭೂತರಾಯನಿಗೆ ಸಿಟ್ಟು ಬಂದು ನನಗೆ ಕಾಣಿಸಿ ಕೊಂಡೇಬಿಟ್ಟ! ― ನಾಳೆ ನಾಡ್ದು ಒಂದು ಹರಕೆಮಾಡಿ ಪೂರೈಸಿ, ಅವರ ಪಾಲು ಅವರಿಗೆ ಕೊಟ್ಟು ಕಳಿಸಿಬಿಡ್ತೀನಿ. ಎಲ್ಲಾದ್ರೂ ಸತ್ತುಕೊಳ್ಲಿ ಆಮೇಲೆ…. ಆ ಪುಟ್ಟಣ್ಣನ್ನೂ ಹೊರಡಿಸಿಬಿಡ್ತೀನಿ ಅವನೊಬ್ಬ ಉಂಡಾಡಿ ಬಟ್ಟ! ಕೂಳು ಖರ್ಚಿಗೆ ಸೇರಿಕೊಂಡನೆ. ಮೂರು ಹೊತ್ತು ಕೋವಿ ತಗೊಂಡು ತಿರುಗೋದು! ಚಾಡಿಹೇಳಿಕೋಡೋದು! ಚೆನ್ನಾಗಿ ರಟ್ಟೆ ಮುರಿದುಗೆಯ್ಕೊಂಡು ತಿನ್ನಲಿ! ಆಮೇಲೆ ಗೊತ್ತಾಗುತ್ತದೆ!” ಎಂದುಮೊದಲಾಗಿ ಬಾಯಿಗೆ ಬೀಗವಿಲ್ಲದೆ ನುಡೀದುಬಿಟ್ಟರು.

ಅದೇ ದಿನ ಸಾಯಂಕಾಲ ಹೂವಯ್ಯ ಉಪ್ಪರಿಗೆಯ ಮೇಲೆ ಕಥೆ ಓದಿ ಹೇಳುತ್ತಾ ಕುಳಿತಿದ್ದಾಗ ಕಳ್ಳು ಕುಡಿದಿದ್ದ ಚಂದ್ರಯ್ಯಗೌಡರು ಅಲ್ಲಿಗೆ ಹೋದರು. ಪುಟ್ಟಮ್ಮ , ವಾಸು, ರಾಮಯ್ಯ, ಪುಟ್ಟಣ್ಣ ಎಲ್ಲರೂ ಆಲಿಸುತ್ತ ಕುಳಿತಿದ್ದರು.

“ಆಯ್ತು ಬಿಡಪ್ಪಾ! ಇದೊಂದು ಇಸ್ಕೂಲೇ ಆಗಿಹೋಯ್ತು!…. ನಿನಗೇನೆ ಕೆಲ್ಸ ಇಲ್ಲಿ? ಓದಿ ಪ್ಯಾಸು ಮಾಡಿ ದೊರಸಾನಿ ಆಗ್ತೀಯೇನೆ?”

ತಂದೆಯ ನಿಷ್ಠುರವಾಕ್ಯಗಳಿಗೆ ಎದ್ದುನಿಂತಿದ್ದ ಪುಟ್ಟಮ್ಮ ತಲೆತಗ್ಗಿಸಿಕೊಂಡೇ ಮೆಟ್ಟಲಿಳಿದು ಕೆಳಗೆ ಹೋದಳು. ಪುಟ್ಟಣ್ಣನೂ ಎದ್ದು ದೂರ ನಿಂತನು. ಅವನನ್ನು ಕುರಿತು ಗೌಡರು “ಇನ್ನೇನು ಬಿಡೋ! ನಿನ್ನ ದೆಸೆ ಕುಲಾಯಿಸ್ತು. ಪೇಟಕಟ್ಟಿಕೊಂಡು ಮೇಷ್ಟರ ಕೆಲಸಕ್ಕೆ ಹೊರಡು!” ಎಂದರು. ರಾಮಯ್ಯ ಹೂವಯ್ಯರೂ ಮುಖ ಮುಖ ನೋಡಿಕೊಂಡರು. ವಾಸು ನಕ್ಕು ಬಿಟ್ಟನು. ಗೌಡರು ಕ್ರುದ್ಧರಾಗಿ “ಯಾಕೋ ನಗ್ತೀಯಾ! ಇಲ್ಲೇನು ಕರಡಿ ಕುಣಿಸ್ತಾರೇನು! ನಿನ್ನ ತೀರ್ಥಹಳ್ಳೀಗೆ ಓದಕ್ಕೆ ದಬ್ತೀನಿ, ತಡೀ!” ಎಂದು ಗದರಿ “ಹೂವಯ್ಯಾ, ರಾಮು ಹೇಳಿದನೇನೋ ನಾನು ಹೇಳಿದ್ದನ್ನ ?” ಎಂದು ಪ್ರಶ್ನೀಸಿದರು.

“ಯಾವುದನ್ನು?” ಎಂದನು ಹೂವಯ್ಯ.

“ಯಾವುದನ್ನೇನು? ಇನ್ನು ಮೇಲೆ ನೀವು ಓದಕ್ಕೆ ಹೋಗೋದು ಬ್ಯಾಡ. ಸಾಮಾನ್ನೆಲ್ಲ ತರ್ಸಿಬಿಡಿ” ಏಂದರು ಗೌಡರು.

“ಇನ್ನೊಂದು ವರ್ಷ ಓದಿದರೆ ಬಿ. ಎ. ಆಗ್ತದೆ. ಮಧ್ಯೆ ಬಿಟ್ಟು ಬಿಡೋದೇನು?

“ಬಿ.ಎ. ನೂ ಬೇಡ, ಗೀಯೇನೂ ಬೇಡ. ದುಡ್ಡು ಕಳ್ಸಾಕ್ಕೆ ನನ್ನಿಂದ ಬಿಲ್ ಕುಲ್ ಸಾಧ್ಯವಿಲ್ಲ.”

“ಸ್ಕಾಲರ್ ಷಿಪ್ ಬರ್ತದೆ, ಅದರಲ್ಲೇ ಏನಾದ್ರೂ ಮಾಡಿಕೊಳ್ತೀನಿ.”

“ನಂಗದೆಲ್ಲ ಗೊತ್ತಿಲ್ಲ! ನಿನ್ನ ಪಾಲು ಆಸ್ತಿ ನೀ ತಗೊಂಡು ಆಮೇಲೀಲ್ಲಿಗಾದರೂ ಹೋಗು. ನನಗೂ ನಿನ್ನವ್ವನಿಗೂ ಸರಿಬರೋದಿಲ್ಲ.”

ನಾಗಮ್ಮನವರೂ ಮಗನೊಡನೆ ತಾವು ಪಾಲು ತೆಗೆದುಕೊಂಡು ಬೇರೆಯಾಗುವುದು ಲೇಸು ಎಂದು ಹೇಳಿದ್ದರು. ಹೂವಯ್ಯ ತಾನು ಓದಲು ಹೋಗಬೇಕಾದ್ದರಿಂದ ಅದು ಸಾಧ್ಯವೇ ಅಲ್ಲ ಎಂದು ತಾಯಿಗೆ ಚೆನ್ನಾಗಿ ಮನಗಾಣಿಸಿ ಒಪ್ಪಿಸಿದ್ದನು. ತಾಯಿಯೂ ಮಗನ ಶ್ರೇಯಸ್ಸಿಗಾಗಿ ತನಗೆ ಬಂದ ಕಷ್ಟಗಳನ್ನೆಲ್ಲ ಅನುಭವಿಸಲು ಸಿದ್ಧಳಾಗಿದ್ದಳು. ಆದರೆ ಚಂದ್ರಯ್ಯಗೌಡರು ಮನೆಯನ್ನು ಪಾಲುಮಾಡುವ ವಿಚಾರವಾಗಿ ದೃಢಮನಸ್ಸು ಮಾಡಿದಂತೆ ತೋರಿತು. ಅದಕ್ಕೆ ಮುಖ್ಯಕಾರಣ ಮಾತ್ರ ಅವರು ಹೇಳಿದುದಾಗಿರಲಿಲ್ಲ. ಹೂವಯ್ಯ ತಾನೊಬ್ಬನೇ ಅಗಿದ್ದರೆ, ತನ್ನ ಪಾಲಿನ ಆಸ್ತಿಯನ್ನು ಯಾರಿಗಾದರೂ ಗುತ್ತಿಗೆಗೆ ಕೊಟ್ಟು ಓದಲು ಹೋಗಬಹುದಾಗಿತ್ತು. ಆದರೆ ತಾಯಿ? ಅವನ ಮನಸ್ಸಿನಲ್ಲಿ ‘ತಾಯಿ ಇರದಿದ್ದರೆ ಎಷ್ಟು ಸ್ವತಂತ್ರವಾಗಿರುತ್ತಿತ್ತು!’ ಎಂಬ ಆಲೋಚನೆ ಕ್ಷಣಕಾಲ ಮಿಂಚಿತು. ಒಡನೆಯೆ ಅಮಂಗಲಾಲೋಚನೆಗೆ ಬೆದರಿ, ಅದನ್ನು ಮನದಿಂದ ವರಸಿಬಿಟ್ಟನು.

ಹೂವಯ್ಯ ಎಷ್ಟು ವಿಧವಾಗಿ ಸಮಾಧಾನ ಹೇಳಿ ವಾದಿಸಿದರೂ ಯಜಮಾನರು ಕೇಳಲಿಲ್ಲ. ರಾಮಯ್ಯ ತಾನು ಮನೆಯಲ್ಲಿರುವುದಾಗಿಯೂ, ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡುವುದಾಗಿಯೂ, ಹೂವಯ್ಯ ಇನ್ನೊಂದು ವರುಷದ ಮಟ್ಟಿಗೆ ಓದಲು ಹೋಗಲೆಂದೂ, ಅಂಜಿಯಂಜಿ ಹೇಳಿದನು. ಗೌಡರು ಮಗನ ಮೇಲೆ ಕಣ್ನು ಕೆಂಪಗೆ ಮಾಡಿಕೊಂಡು ರೇಗಿ ಅಸಮಂಜಸವಾಗಿ ಕೂಗಾಡಿಬಿಟ್ಟರು. ಹೆಚ್ಚು ಮಾತಾಡಿದರೆ ಅವಿವೇಕವಾಗುವುದೆಂದು ತಿಳಿದು ಹೂವಯ್ಯನೂ  ಸುಮ್ಮನಾದನು.

ಗೌಡರು ಕೆಳಗಿಳಿದು ಹೋಗುವಾಗ ಕಂಭಕ್ಕೆ ಒರಗಿಕೊಂಡು ನಿಂತಿದ್ದ ಪುಟ್ಟಣ್ಣನನ್ನು ಕರೆದು ಹೇಳಿದರು: “ನಾಳೆ ದೆಯ್ಯದ ಹರಕೆ ಮುಗಿಸಿಕೊಂಡು ನೀನೂ ಬೇರೆ ಮನೆ ಮಾಡಿಕೋ. ಆಮೇಲೆ ನನ್ನ ಮನೇಲಿರೋದು ಬೇಡ.”

ಗೌಡರು ಕೆಳಗಿಳಿದು ಹೋದಮೇಲೆ ಕಂಬನಿಗರೆಯುತ್ತಿದ್ದ ರಾಮಯ್ಯನನ್ನು ನೋಡಿ ಹೂವಯ್ಯ “ನೀನೇಕೆ ಅಳುತ್ತೀಯೋ ಹೆಂಗಸರ ಹಾಗೆ! ಪ್ರಪಂಚ ಇರೋದೆ  ಹೀಗೆ, ಅದು ತಿಳಿಯದಿದ್ದರೆ ನೀನು ಇಷ್ಟೊಂದು ಕಾವ್ಯ ಕಾದಂದುರಿಗಳನ್ನು ಓದಿರೋದೆಲ್ಲ ವ್ಯರ್ಥ!” ಎಂದು ಹೇಳುತ್ತ ಹನಿಗಣ್ಣಾಗಿದ್ದ ವಾಸುವನ್ನು ಪಕ್ಕಕ್ಕೆ ಎಳೆದು ಅಪ್ಪಿಕೊಂಡು “ಕಥೆ ಮುಂದಕ್ಕೋದೋಣೇನು? ” ಎಂದನು.

ವಾಸು ಮಾತಾಡಲಿಲ್ಲ. ಒಂದೆರಡು ಅಶ್ರುಬಿಂದುಗಳು ಅವನ ಕನ್ನೆಗಳ ಮೇಲೆ ಇಳಿದುವು.

“ಅವರು ಈಗೀಗ ಏಕೆ ಹಿಂಗಾಗುತ್ತಿದ್ದಾರೋ ನನಗೆ ಬೇರೆ ಗೊತ್ತಾಗುವುದಿಲ್ಲ” ಎಂದು ರಾಮಯ್ಯ ತಂದೆಯನ್ನು ನಿರ್ದೆಶಿಸಿ ಕಣ್ಣೀರೊರಸಿಕೊಂಡನು.

“ಅದೆಲ್ಲ ಸೇರೆಗಾರರ ಪಿತೂರಿ !” ಎಂದನು ಪುಟ್ಟಣ್ಣ.

“ಆ ಸೂಳೇಮಗನ್ನ ನಾಳೇನೆ ಒದ್ದು ಓಡಿಸಿದರೆ ಏನಾಗ್ತದೆ?” ಎಂದು ವಾಸು  ಹೂವಯ್ಯನ ಕಡೆ ನೋಡಿದನು. ಹೂವಯ್ಯ ಮಾತಾಡಲಿಲ್ಲ. ಮುಗುಳು ನಗೆಯೊಂದು ಮುಖದ ಮೇಲೆ ನಲಿದಾಡುತ್ತಿತ್ತು. ಇರುಳು ಹೂವಯ್ಯನಿಗೆ  ಬಹಳ ಹೊತ್ತು ನಿದ್ದೆ ಬರಲಿಲ್ಲ. ಚಿಕ್ಕಯ್ಯನಾಡಿದ್ದ  ಮಾತುಗಳನ್ನೆ ಕುರಿತು ಯೋಚಿಸತೊಡಗಿದನು. ತನ್ನ ವಿದ್ಯಾರ್ಜನೆ ಕೊನೆಗಾಣುವುದಲ್ಲಾ ಎಂದು ಮನಸ್ಸಿಗೆ ಬಹಳ ನೋವಾಯಿತು. ಮತ್ತೆ ― ಚಿಂತೆಯಿಲ್ಲ, ಈಶ್ವರೇಚ್ಛೆ ಹಾಗೇ ಇದ್ದರೆ ಮನಯಲ್ಲಿಯೇ ಗ್ರಂಥಗಳ ಸಹಾಯದಿಂದ ವಿದ್ಯಾದೇವತೆಯನ್ನು ಆರಾಧಿಸಬಹುದು ಎಂದು ಸಮಾಧಾನ ಮಾಡಿಕೊಂಡನು. ಮನಸ್ಸು ಅಲ್ಲಿ ಇಲ್ಲಿ ಸುಳಿದು  ಸುತ್ತಿ, ಇಷ್ಟಮೂರ್ತಿಯ ದರ್ಶನ ಮಾಡಿತು. ಸೀತೆಯ ಲಾವಣ್ಯವಿಗ್ರಹ ಭುವನಮೋಹಕವಾಗಿ ಕಲ್ಪನೆಯ ಕಣ್ಣಿಗೆ ಕಾಣಿಸಿತು. ದುಃಖಮಯವಾಗಿ ತೋರುತ್ತಿದ್ದ ಭವಸಾಗರದಲ್ಲಿ ಆ ಸೌಂದರ್ಯ ಮೂರ್ತಿಯೊಬ್ಬಳೇ ಮನೋಹರವಾದ ಸುಖ ದ್ವೀಪದಂತೆ ರಾರಾಜಿಸಿದಳು. ಸೀತೆಯ ಸಮೀಪದಲ್ಲಿ ಇರಬಹುದೆಂಬ ಮಾಧುರ್ಯದಿಂದ ವಿದ್ಯಾರ್ಜನೆಗಾಗಿ ಮೈಸೂರಿಗೆ ಹೋಗಲಾರದ ನೋವು ಪ್ರಿಯವಾಗಿ ತೋರಿತು.

ಆದರೆ ವಿಧಿ ಬೇರೊಂದು ವ್ಯೂಹವನ್ನು ರಚಿಸುತ್ತಿತ್ತು.