ಸುಬ್ಬಮ್ಮ ಕಾನೂರಿಗೆ ಬಂದ ಹೊಸದರಲ್ಲಿ. ಒಂದು ದಿನ ಕಿರುಜಗಲಿಯಲ್ಲಿ ಒಬ್ಬ ಹೆಂಗಸು ಚಂದ್ರಯ್ಯಗೌಡರ ತಲೆ ಬಾಚುತ್ತಿದ್ದುದನ್ನು ಕಂಡಳು. ಉಡುಗೆಯಿಂದಲೂ ಮುಖಲಕ್ಷಣದಿಂದಲೂ ಆ ಹೆಂಗಸು ದಕ್ಷಿಣ ಕನ್ನಡ ಜಿಲ್ಲೆಯವಳೆಂದು ಆಕೆಗೆ ಗೊತ್ತಾಯಿತು. ಅವಳು ತುರುಬು ಹಾಕಿಕೊಂಡು ಹೂ ಮುಡಿದಿದ್ದಳು. ಕಿವಿಯಲ್ಲಿ ಬೆಂಡೋಲೆ. ಮೂಗಿನಲ್ಲಿ ಮೂಗುತಿ ಕೈಯಲ್ಲಿ ಹೊಬಳೆ ಎಲ್ಲಾ ಇದ್ದವು. ತನ್ನ ಗಂಡನು ಪರಕೀಯಳೊಬ್ಬಳಿಂದ ತಲೆ ಬಾಚಿಸಿಕೊಳ್ಳುತ್ತಿದ್ದರು ಮಡ್ಡ ಪ್ರಕೃತಿಯ ಅವಳಲ್ಲಿ ಮೊತ್ತಮೊದಲು ಮಾತ್ಸರ್ಯ ಜನಿಸಲಿಲ್ಲ. ಅದಕ್ಕೆ ಬದಲಾಗಿ ಕುತೂಹಲವುಂಟಾಯಿತು.

ಕೆಲದಿನಗಳಲ್ಲಿ ಗಂಗೆ ಪರಿಚಿತೆಯಾದಳು. ಸುಬ್ಬಮ್ಮನಿಗೆ ಗಂಗೆ ತಾನು ಕಂಡ ಇತರ ಸ್ತ್ರೀಯರಿಗಿಂತಲೂ ಸ್ವಲ್ಪ ಭಿನ್ನವಾಗಿ ತೋರಿದಳು. ಅದಕ್ಕೆ ಕಾರಣವೇನೆಂಬುದು ಆಕೆಗೆ ಹೊಳೆಯಲಿಲ್ಲ. ಗಂಗೆ ಗಂಡಸರೊಡನೆ ಸ್ತ್ರೀಸಹಜವಾದ ಭೀರುತ್ವ ಲಜ್ಜೆಗಳನ್ನುಳಿದು ಹೆಚ್ಚು ಸ್ವಾತಂತ್ರ‍್ಯದಿಂದ ವರ್ತಿಸುವಳು. ಮಾತು ಕತೆಯಲ್ಲಿಯೂ ಆಚಾರ ವೈಯಾರದಿಂದಲೂ ನಡೆಯುವಳು. ಗಂಡಸರು ಕೂಡ ಅವಳೊಡನೆ ಇತರ ಹೆಂಗಸರೊಡನೆ ನಡೆದಂತೆ ನಡೆದುಕೊಳ್ಳದೆ ಹೆಚ್ಚು ಸಲಿಗೆಯಿಂದಲೂ ನಾಣಿಲ್ಲದೆಯೂ ವ್ಯವಹರಿಸುವರು. ಇದನ್ನೆಲ್ಲ ನೋಡಿ ಸುಬ್ಬಮ್ಮನಿಗೆ ಗಂಗೆಯ ಪರವಾಗಿ ಪ್ರಶಂಸೆಯುಂಟಾಗಿ ಅವಳೊಡನೆ ಇತರ ಯಾರಿಗೂ ಹೇಳದ ಸುಖದುಃಖಗಳನ್ನು ಹೇಳುವಳು. ಕಷ್ಟ ಸಂಕಟಗಳಲ್ಲಿ ಬುದ್ದಿವಾದ ಕೇಳುವಳು.

ಗಂಗೆಯ ಮನಸ್ಸು ಮಾತ್ರ ಬೇರೆಯಾಗಿತ್ತು. ಸುಬ್ಬಮ್ಮನ ದೆಸೆಯಿಂದ ಅವಳಿಗೆ ಚಂದ್ರಯ್ಯಗೌಡರ ಪ್ರಣಯವು ಬರಬರುತ್ತ ಇಳಿಮುಖಳವಾಗಿ ಕಡೆಗೆ ತಪ್ಪತೊಡಗಿತ್ತು. ಆದಕಾರಣ ಸುಬ್ಬಮ್ಮನೊಡನೆ ಮೇಲೆಮೇಲೆ ಸಲಿಗೆ ಸ್ನೇಹಗಳಿಂದ ನಡೆಯುತ್ತಿದ್ದರೂ ಒಳಗೊಳಗೆ ಅವಳೆದೆ ಕುದಿಯತೊಡಗಿತ್ತು. ಅದೂ ಅಲ್ಲದೆ ಸುಬ್ಬಮ್ಮ ಎಷ್ಟೇ ಅಸಂಸ್ಕೃತೆಯಾಗಿದ್ದರೂ ಆಕೆಯಲ್ಲಿದ್ದ ಗ್ರಾಮ್ಯಸಹಜವಾದ ಮುಗ್ಧತೆ ಪರಿಶುದ್ಧತೆಗಳನ್ನು ನೋಡಿ ಕರುಬಿದಳು. ಕೆಟ್ಟವರಿಗೆ ನೆಟ್ಟಗಿರುವವರನ್ನು ತಮ್ಮಂತೆ ಮಾಡಿಕೊಳ್ಳುವ ಚಪಲತೆಯಾಗುತ್ತದೆ. ಸುಬ್ಬಮ್ಮ ಆ ವಿಚಾರದಲ್ಲಿ ಎಷ್ಟು ಮೂರ್ಖಳಾಗಿದ್ದಳೆಂದರೆ ಗಂಗೆಯ ದುಷ್ಟಸೂಚನೆಗಳನ್ನು ತಿಳಿದುಕೊಳ್ಳಲು ಕೂಡ ಸಮರ್ಥಳಾಗಿರಲಿಲ್ಲ. ಅಂತೂ ಗಂಗೆ ತನಗೆ ಪುರಸತ್ತು ದೊರೆತಾಗಲೆಲಗಲ ಮನೆಗೆ ಬಂದು ಸುಬ್ಬಮ್ಮನೊಡನೆ ಮಾತಾಡುವಳು, ಸುಬ್ಬಮ್ಮನೂ ಆಗಾಗ ಗಂಗೆಯ ಬಿಡಾರಕ್ಕೆ ಹೋಗಿ ಅವಳಿತ್ತ ತಾಂಬೂಲ ಹಾಕಿಕೊಳ್ಳುವಳು. ಕಳ್ಳು ಕುಡಿಯುವಳು. ಹೀಗೆ ಅಸಂಸ್ಕೃತಿಯು ಕುಸಂಸ್ಕೃತಿಯ ಬಲೆಗೆ ಮೆಲ್ಲಮೆಲ್ಲನೆ ತನಗರಿಯದಂತೆಯೇ ಬೀಳುತ್ತಿತ್ತು.

ನಾಗಮ್ಮನವರು ಕೆಲವು ಸಾರಿ ಎಚ್ಚರಿಕೆ ಹೇಳಿದರೂ ಸುಬ್ಬಮ್ಮ ಹೊಟ್ಟೆಕಿಚ್ಚಿಗೇ ಹೇಳುತ್ತಾರೆಂದು ಊಹಿಸಿ, ಅದನ್ನು ಲಕ್ಷಕ್ಕೆ ತರಲಿಲ್ಲ. ಅದೂ ಅಲ್ಲದೆ ಗಂಗೆ ರುಚಿಯಾಗಿ ಮಾತಾಡುತ್ತಿದ್ದುದರಿಂದಲೂ ರುಚಿಯಾದ ಮಧ್ಯವನ್ನು ನೀಡುತ್ತಿದ್ದುದರಿಂದಲೂ ಆ ಪ್ರಲೋಭನದಿಂದಲೂ ಸುಬ್ಬಮ್ಮ ತಪ್ಪಿಸಿಕೊಳ್ಳಲಾಗಲಿಲ್ಲ. ಗಂಗೆಯ ಬಿಡಾರಕ್ಕೆ ಹೋಗಿ ಮಾತುಕತೆಯಾಡಿ ಬೇಜಾರು ಪರಿಹರಿಸಿಕೊಂಡು ಬರುವುದರಲ್ಲಿ ಆಕೆಯ ಗ್ರಾಮ್ಯಬುದ್ದಿಗೆ ಯಾವ ದೋಷವೂ ತೋರಲಿಲ್ಲ. ಚಂದ್ರಯ್ಯಗೌಡರಿಗೆ ಈ ವಿಷಯ ಗೊತ್ತಾದರೂ ಗಂಗೆ ದಾಕ್ಷಿಣ್ಯಕ್ಕಾಗಿ ಸುಮ್ಮನಿದ್ದರು. ಆದರೂ ಅವರ ಹೃದಯಾಂತರಾಳದಲ್ಲಿ ಕಳವಳವಿಲ್ಲದಿರಲಿಲ್ಲ.

ಸುಬ್ಬಮ್ಮ ಅನೇಕ ಸಾರಿ ಗಂಗೆಯ ಊರು ಮನೆ ನೆಂಟರಿಷ್ಟರುಗಳನ್ನು ಕುರಿತು ಪ್ರಶ್ನೆಮಾಡಿದ್ದಳು. ಆದರೆ ಮದುವೆ ವಿಚಾರ ಬಂದಾಗಲೆಲ್ಲ ಗುಟ್ಟನ್ನು ಮರೆಮಾಡಿ ತನ್ನ ಗಂಡನು ಊರಿನಲ್ಲಿದ್ದಾರೆ ಎಂದು ಹೇಳುತ್ತಿದ್ದಳು. ಸುಬ್ಬಮ್ಮನ ಸ್ಥೂಲಮತಿಗೆ ಸೂಕ್ಷ್ಮ ಪ್ರಶ್ನೆಗಳನ್ನು ಕೇಳಿ ಗುಟ್ಟನ್ನು ಬಯಲಿಗೆಳೆಯುವ ಶಕ್ತಿಯೂ ಇರಲಿಲ್ಲ.

ಆ ದಿನ ಚಂದ್ರಯ್ಯಗೌಡರು ನಾಗಮ್ಮ ಪುಟ್ಟಮ್ಮ ಎಲ್ಲರೂ ಮುತಳ್ಳಿಗೆ ಹೋಗಿದ್ದುದರಿಂಲೂ ಪುಟ್ಟಣ್ಣ ಮೊದಲಾದವರು ನಾಟಾ ಸಾಗಿಸಲು ಮನೆಗೆಲಸದವರಲ್ಲದೆ ಕಾನೂರಿನಲ್ಲಿ ಯಾರೂ ಇರಲಿಲ್ಲ. ವಿರಾಮವಾಗಿದ್ದ ಗಂಗೆ ಮಧ್ಯಹ್ನ ಬಂದಳು. ಸುಬ್ಬಮ್ಮಗೆ ಪರಮಾನಂದವಾಯಿತು. ತಾನು ಕದ್ದು ತಯಾರುಮಾಡಿದ್ದ ಹೆಂಡವನ್ನೂ ಸ್ವಾರಲು ಮೀನನ್ನು ಕೊಟ್ಟು ಗಂಗೆಗೆ ಅತಿಥಿ ಸತ್ಕಾರ ಮಾಡಿದಳು.ಇಬ್ಬರೂ ಹಿತ್ತಲುಕಡೆಯ ಬಾಗಿಲಲ್ಲಿ ಚಕ್ಕಂದದಿಂದ ಮಾತಾಡುತ್ತ, ಎಲೆಯಡಕೆಯ ಬುಟ್ಟಿಯನ್ನು ನಡುವೆ ಇಟ್ಟುಕೊಂಡು ತಾಂಬೂಲವನ್ನು ಸವಿಯುತ್ತ ಕುಳಿತರು.

ಮಾಡಿನ ನೆಳಲು ಪೂರ್ವದ ಕಡೆಗೆ ಓರೆಯಾಗಿ ಅಂಗಳದಲ್ಲಿ ಬಿದ್ದಿತ್ತು. ಅಂಗಳದ ಒಂದು ಮೂಲೆಯಲ್ಲಿ ಬಿಸಿಲು ಬಿದ್ದೆಡೆ. ಗೆರಸಿಯಲ್ಲಿ ಮಜ್ಜಿಗೆ ಮೆಣಸಿನಕಾಯಿ ಹರಡಿತ್ತು. ಮುಖ ಬಾಯಿ ತೊಳೆದೂ ತೊಳೆದು ನೀರು ದಪ್ಪಗಟ್ಟಿ ಕಪ್ಪುಕೆಸರಾಗಿದ್ದ ಮತ್ತೊಂದು ಮೂಲೆಯಲ್ಲಿ ಹೇಂಟೆಯೊಂದು ತನ್ನ ಹತ್ತಿಪ್ಪತ್ತು ಹೂಮರಿಗಳೊಡನೆ ಕೆದರಿ ಕೆದರಿ ಹುಳುಹುಪ್ಪಟೆಗಳನ್ನು ಹುಡುಕುತ್ತಿತ್ತು. ಮುಗ್ದ ಕೋಮಲ ಶುಭ್ರ ಸಜೀವ ಕುಟ್ಮಲಗಳಂತೆ ಆಗತಾನೆ ಹುಟ್ಟಿ ಬಂದಿದ್ದ ನುಣ್ಣನೆ ತಿಪ್ಪುಳದಿಂದ ಸುಮನೋಹರವಾಗಿದ್ದ ಆ ಹೂಮರಿಗಳು ಚೀ ಪೀ ಚೀ ಪೀ ದನಿಗೈಯುತ್ತ ತಾಯಿಯ ಸುತ್ತಲೂ ಏನೋ ಮಹಾಕಾರ್ಯದಲ್ಲಿ ತೊಡಗಿರುವಂತೆ ತಿರುಗುತ್ತಿದ್ದುವು. ನಸುಕೆಂಬಣ್ಣದ ಮೂವತ್ತು ನಾಲ್ವತ್ತು ಮರಿಕಾಗಳು ಕಗ್ಗೆಸರಿನಲ್ಲಿ ಅದ್ದಿಯದ್ದಿ ಅಸಹ್ಯವಾಗಿದ್ದುವು.

ಸುಬ್ಬಮ್ಮ ಗಂಗೆಯರು ಅನೇಕ ವಿಚಾರಗಳನ್ನು ಕುರಿತು ಮತಾನಾಡಿದರು. ಗಂಗೆ ಹಿಂದಿನ ದಿನ ನಡೆದ ಕಥೆಯ ಪೂರ್ವೋತ್ತರಗಳನ್ನು ಕೇಳಿ ತಿಳಿದಳು. ಚಂದ್ರಯ್ಯಗೌಡರು ನಾಗಮ್ಮ ಮೊದಲಾದವರು ಮುತ್ತಳ್ಳಿಗೆ ಹೋದುದಕ್ಕೆ ಕಾರಣ ಗೊತ್ತಿದ್ದರೂ ಮತ್ತೆ ಮತ್ತೆ ಕೇಳಿ ಸುಬ್ಬಮ್ಮನ ಮನಸ್ಸನ್ನು ಕೆರಳಿಸಿದಳು.

“ಎಷ್ಟಾದರೂ ಮೂರನೆ ಹೆಂಡ್ತಿ! ಅದಕ್ಕೇ ಸಿಕ್ಕಾಪಟ್ಟೆ ಹೊಡೀತಾರೆ.”

“ಅವರ ಕೈ ಕುಸಿದುಬೀಳಾಕೆ. ಎಲ್ಲ ಆ ನಾಗಿ ಇದ್ದಾಳಲ್ಲಾ. ಆ ಹಾಳುಮುಂಡೆ, ಅವಳ ದೆಸೆಯಿಂದ ” ಎಂದು ನಾಗಮ್ಮನವರನ್ನು ಬೈದಳು.

“ನಿಮ್ಮ ಗಂಡಗೆ ಹೇಳಿ. ಅವರನ್ನು ಬೇರೆ ಹಾಕಿ ಅಂತಾ.”

“ಹೇಳ್ದೇ… ಅವಳಿದ್ರೆ ನಾನು ಈ ಮನೇಲೆ ಇರಾದಿಲ್ಲ ಅಂತಾ.”

“ಏನು ಹೇಳಿದರು ಅದಕ್ಕೆ?”

“ಹೂವಯ್ಯ ರಜಾಕ್ಕೆ ಬರ್ಲಿ ನೋಡಾನ ಅಂತ ಹೇಳ್ತಿದಾರೆ.”

“ಹೂವೇಗೌಡ್ರು ಬಹಳ ಒಳ್ಳೇರು ಕಣ್ರೋ…. ನೀವು ಅವರನ್ನು ನೋಡಲಿಲ್ಲ ಅಂತ ಕಾಣ್ತದೆ?”

“ನೋಡಿದ್ದೆ….ನನ್ನ. ಮೊದಲು ಕೇಳ್ದಾಗ ಅವರಿಗೇ ಕೇಳಿದ್ದು ಅಂತ ಮಾಡಿದ್ದೆ….”

“ಅಯ್ಯೋ! ಆ ಪುಣ್ಯ ನಿಮಗೆಲ್ಲಿ ಬಂತು?” ಗಂಗೆ ವ್ಯಂಗ್ಯವಾಗಿ ಸುಬ್ಬಮ್ಮನ ಕಡೆ ನೋಡಿದಳು. ಆದರೆ ಸುಬ್ಬಮ್ಮ ಇಂಗಿತವನ್ನು ತೃಣಮಾತ್ರವಾದರೂ ಗ್ರಹಿಸಲಾರದೆ, ಅಂಗಳದಲ್ಲಿದ್ದ ಹೂಮರಿಗಳ ಕಡೆ ನೋಡುತ್ತಿದ್ದಳು. ಗಂಗೆ ಅದುವರೆಗೆ ಹೇಳದೆ ಗುಟ್ಟಾಗಿಟ್ಟಿದ್ದ ತನ್ನ ಜೀವನಕಥೆಯಿಂದ ಸುಬ್ಬಮ್ಮನ ಮಡ್ಡತನವನ್ನು ಭೇದಿಸಬೇಕೆಂದು ಹವಣಿಸಿದಳು.

“ಅವರನ್ನೇ ಮದುವೆಯಾಗ್ತೀನಿ ಅಂತಾ ಮಾಡಿದ್ರೇನು ನೀವು?” ಆ ಪ್ರಶ್ನೆ ಕುಹಕಗರ್ಭಿತವಾಗಿತ್ತು.

“ಹೌದು…. ಆದ್ರೆ ಅವರು ಮದುವೇನೇ ಆಗೋದಿಲ್ಲ ಅಂತಾ ಹೇಳ್ತಿದ್ರಂತೆ…”

“ಗಂಡಸ್ರೇಲ್ಲಾ ಹಂಗೇನೆ …ಮೊದಲಿ…. ಆಮೇಲೆ……” ಗಂಗೆ ಏನನ್ನೋ ಅಶ್ಲೀಲವಾಗಿ ಪಿಸುಮಾತಿನಲ್ಲಿ ಹೇಳಿದಳು. ಸುಬ್ಬಮ್ಮ ನಾಚಿಕೊಂಡು ನಕ್ಕಳು. ಗಂಗೆಯೂ ನಕ್ಕಳು.

“ಈ ಗಂಡಸರನ್ನ ನಾ ಚೆನ್ನಾಗಿ ಬಲ್ಲೆ…. ನಾನೂ ನಿಮ್ಮ ಹಾಗೆ ಒಬ್ಬರನ್ನ ನಚ್ಚಿ ಮತ್ತೊಬ್ಬರ ಕೈ ಸೇರ್ದೆ…”

“ಹಾಂಗಂದ್ರೆ?”

ಸುಬ್ಬಮ್ಮ ಪ್ರಶ್ನೆಮಾಡಲು ಗಂಗೆ ಖಿನ್ನವದನೆಯಾಗಿ ದುಃಖ ಧ್ವನಿಯಿಂದ “ಅಯ್ಯೋ ನನ್ನ ಕತೆ ಕೇಳದರೆ ನೀವೇನಂತೀರೋ…” ಎಂದು ನಿಡುಸುಯ್ದಳು. ಸುಬ್ಬಮ್ಮ ಏನೂ ಮಾತಾಡಲಿಲ್ಲ. ಗಂಗೆ ತನ್ನ ಕಥೆಯನ್ನು ಸ್ವಾರಸ್ಯವಾಗಿ ಹೇಳಿದಳು. ನಡುನಡುವೆ ಕಂಬನಿಗೆರೆದಳು. ಸುಬ್ಬಮ್ಮನಂತೂ  ಆ ಸಾಹಸಗಿತ್ತಿಯ ಜೀವನ ಚರಿತ್ರೆಯನ್ನು ತುಟಿದೆರೆದು ಮತಾಡದೆ ಅಲುಗಾಡದೆ ಆಲಿಸಿದಳು.

ಗಂಗೆ ತಂದೆತಾಯಿಗಳು ಬಡವರು. ಅವರಿವರ ಕೂಲಿ ಕೆಲಸ ಮಾಡಿ ಗುಡಿಸಲಿನಲ್ಲಿ ಗಂಜಿಯುಂಡು ಬಾಳುತ್ತಿದ್ದರು. ಗಂಗೆ ಹುಡುಗಿಯಾಗಿದ್ದಾಗ ತಮ್ಮೂರಿನಲ್ಲಿ ತಮ್ಮಂತೆಯೆ ಬಡವನಾಗಿದ್ದ ಕೃಷ್ಣಯ್ಯಶೆಟ್ಟಿ ಎಂಬ ಯುವಕನೊಡನೆ ಕೆಳೆತನ ಬೆಳೆಸಿದಳು. ಕೆಳೆತನವು ಕ್ರಮೇಣ ಅನುರಾಗವಾಗಿ, ಕಡೆಗೆ ಪ್ರಣಯವಾಯಿತು. ಕೃಷ್ಣಯ್ಯಸೆಟ್ಟಿಯೂ ಗಂಗೆಯೂ ಕೆಲಸ ಕಾರ್ಯಗಳೆಲ್ಲ ಒಟ್ಟಾಗಿ ನಲಿಯತೊಡಗಿದರು. ಮುಂದೆ ಅವರಿಬ್ಬರೂ ತಮ್ಮ ಜೀವನ ಸೂತ್ರಗಳನ್ನು ಹೊಸೆದು ಒಟ್ಟಿಗೆ ಸಂಸಾರ ನಡೆಸಬೇಕೆಂದೂ ಮಾತಾಡಿ ಕೊಂಡರು, ಅದೇ ಊರಿನಲ್ಲಿ ತಿಮ್ಮಯ್ಯಸೆಟ್ಟರೆಂಬ ಸಾಹುಕಾರರಿದ್ದರು. ತಿಮ್ಮಯ್ಯಸೆಟ್ಟರಿಗೆ ನಾಲ್ಕೈದು ಮದುವೆಗಳಾಗಿದ್ದರೂ, ವಯಸ್ಸು ಅರುವತ್ತಕ್ಕೆ ಮೀರಿದ್ದರೂ ಮತ್ತೊಂದು ಮದುವೆಯಾಗಬೇಕೆಂಬ ಚಪಲ ಹುಟ್ಟಿ ಗಂಗೆಯ ತಂದೆತಾಯಿಗಳನ್ನು ಹೆಣ್ಣು ಕೊಡುವಂತೆ ಕೇಳಿದರು. ಅವರು ಬಡವರಾಗಿದ್ದುದರಿಂದಲೂ, ಧನಿಕರ ಬಾಂಧವ್ಯದಿಂದ ತಮ್ಮ ದಾರಿದ್ರ‍್ಯ ಪರಿಹಾರವಾಗುತ್ತದೆ ಎಂಬ ಆಕಾಂಕ್ಷೆಯಿಂದಲೂ, ದೊಡ್ಡ ಮನುಷ್ಯನು ಹೆಣ್ಣು ಕೇಳಿದರೆ ಕೊಡುವುದಿಲ್ಲ ಎನ್ನುವುದು ಹೇಗೆ ಎಂಬ ದಾಕ್ಷಿಣ್ಯದಿಂದಲೂ ಒಪ್ಪಿದರು. ಪ್ರಣಯಿಗಳಿಗೆ ಈ ಸುದ್ದಿ ತಿಳಿದ ಕೂಡಲೆ ಆ ಊರಿನಿಂದ ಜೊತೆಗೂಡಿ ಓಡಿಹೋಗಬೇಕೆಂದು ನಿರ್ಧರಿಸಿದರು. ಆದರೆ ಆ ಪ್ರಯತ್ನ ಸಾಗಲಿಲ್ಲ. ಗಂಗೆ ತನ್ನ ಇಷ್ಟಕ್ಕೆ ವಿರೋಧವಾಗಿ ಮುದುಕರಾದ  ತಿಮ್ಮಯ್ಯಸೆಟ್ಟರ ಪತ್ನಿಯಾಗ ಬೇಕಾಯಿತು. ಆದರೂ ಆಕೆಯ ಪ್ರೇಮವೆಲ್ಲ ಕೃಷ್ಣಯ್ಯಸೆಟ್ಟಯ ಮೇಲಿತ್ತು. ಕೃಷ್ಣಯ್ಯಸೆಟ್ಟಿಯೂ ಸಮಯ ದೊರೆತಾಗಲೆಲ್ಲ ತಿಮ್ಮಯ್ಯಸೆಟ್ಟರ ಮನೆಗೆ ಬಂದು ಗಂಗೆಯನ್ನು ಮಾತಾಡಿಸಿಕೊಂಡು ಹೋಗುತ್ತಿದ್ದನು. ತಿಮ್ಮಯ್ಯ ಸೆಟ್ಟಿರಗೆ ಅದು ಸರಿಬೀಳದೆ ತನ್ನ ಮನೆಗೆ ಬರಕೂಡದೆಂದು ಕೃಷ್ಣಯ್ಯಸೆಟ್ಟರಿಗೆ ಆಜ್ಞೆ ಮಾಡಿದರು. ಆಮೇಲೆ ಅವನು ಕದ್ದು ಬರತೊಡಗಿದನು. ತಿಮ್ಮಯ್ಯಸೆಟ್ಟರಿಗೆ ಅದೂ ಗೊತ್ತಾಗಿ ಅವನನ್ನು ಗುಂಡಿನಿಂದ ಹೊಡೆಯುತ್ತೇನೆಂದು ಹೆರಿಸಿದರು. ಒಂದು ದಿನ ರಾತ್ರಿ ಎಂಟು ಗಂಟೆಗೆ ತಿಮ್ಮಯ್ಯಸೆಟ್ಟರು ಬೇರೆಯೂರಿಗೆ ಹೋಗಿದ್ದಾರೆಂದು ತಿಳಿದು ಕೃಷ್ಣಯ್ಯಸೆಟ್ಟಿ ಗಂಗೆಯ ಬಳಿಗೆ ಬಂದನು. ಆದರೆ ತಿಮ್ಮಯ್ಯಸೆಟ್ಟರು ನಿಜಿವಾಗಿಯೂ ಹೊರಗೆ ಹೋಗಿರಲಿಲ್ಲ. ಬೇಕೆಂದೇ ಆ ಸುದ್ದಿಯನ್ನು ಹುಟ್ಟಿಸಿ ಮನೆಯಲ್ಲಿ ಅಡಗಿ ಹೊಂಚುಹಾಕುತ್ತಿದ್ದರು. ಕೃಷ್ಣಯ್ಯಸೆಟ್ಟಿಯೂ ಗಂಗೆಯೂ ಒಂದು ಕೋಣೆಯಲ್ಲಿದ್ದಾಗ ಬಾರುಮಾಡಿದ ಬಂದೂಕನ್ನು ಕೈಲಿ ಹಿಡಿದುಕೊಂಡು ಬಂದು ಬಾಗಿಲ ತಟ್ಟಿದರು. ಗಂಗೆ ಬಾಗಿಲುತಟ್ಟಿದವರು ತನ್ನ ಗಂಡನೆಂದರಿಯದೆ, ಪ್ರಿಯನನ್ನು ಬಾಗಿಲು ಸಂದಿಯಲ್ಲಿ ಅಡಗಿಸಿಟ್ಟು, ಬಾಗಿಲು ತೆರೆದಳು. ಮಾತ್ಸರ್ಯದಿಂದ ಕೋಪೋದ್ದೀಪಿತನಾದ ವೃದ್ಧ ಪತಿಯ ಪ್ರಲಯಮೂರ್ತಿ ಎದುರಿಗೆ ನಿಂತಿತ್ತು.

“ಹ್ಯಾ! ಹ್ಯಾ! ಹ್ಯಾ!” ಎಂದು ಕೂಗುತ್ತ ಸುಬ್ಬಮ್ಮ ಎದ್ದು ಅಂಗಳದ ಕಡೆಗೆ ನುಗ್ಗಿದಳು.

ಇವರು ಮಾತಾಡುತ್ತ ಕುಳಿತಿದ್ದಾಗ ಗರುಡನೊಂಡು ಮೇಲೆ ಆಕಾಶದಲ್ಲಿ ಹಾರಾಡಿ ಅಂಗಳದ ಕೆಸರಿನಲ್ಲಿ ಹೇಂಟೆಯೊಡನೆ ಮೇಯುತ್ತಿದ್ದ ಹೂಮರಿಗಳಿಗಾಗಿ ಹೊಂಚು ಹಾಕುತ್ತಿತ್ತು. ರುಚಿರುಚಿಯಾದ ಕ್ರಿಮಿಭೋಜನದಲ್ಲಿ ಆಸಕ್ತವಾಗಿದ್ದ ಕುಕ್ಕುಟ ಎರಗಿತು. ಮರಿಗಳು  ಚ್ಞೀಯೋ ಪ್ಞೀಯೋ ಎಂದು ಆರ್ತನಾದ ಮಾಡುತ್ತ ಚೆಲ್ಲಾಪಿಲ್ಲಿಯಾದುವು. ಕೆಲವು ಕಲ್ಲುಕಟ್ಟಣೆಯ ಬಿರುಕುಗಳಲ್ಲಿ ಹುದುಗಿದುವು. ಮತ್ತೆ ಕೆಲವು ಗಾಬರಿಯಿಂದ ಕಂಗೆಟ್ಟು ಅತ್ತಿತ್ತ ತಮ್ಮ ಪುಟ್ಟ ಕಾಲು ಮತ್ತು ರೆಕ್ಕೆಗಳ ಶಕ್ತಿಯನ್ನೆಲ್ಲ ವೆಚ್ಚಮಾಡಿ ಧಾವಿಸತೊಡಗಿದುವು. ಹೇಂಟೆ ಗರುಡನು ಹತ್ತಿರ ಬರಲು ಎಚ್ಚೆತ್ತು ಅದನ್ನು ಅಟ್ಟಿಸಿಕೊಂಡು ಹೋಯಿತು. ಆದರೂ ಗರುಡನು ಒಂದು ಮರಿಗೆ ಎರಗಿತು. ಆಯಸ್ಸು ಗಟ್ಟಿಯಾಗಿದ್ದುದರಿಂದಲೋ. ಹೇಂಟೆಯ ಸಾಹಸದಿಂದಲೋ ಗರುಡನ ಗುರಿ ತಪ್ಪಿದುದರಿಂದಲೊ, ಅಥವಾ ಅದರ ಸ್ವಂತ ಚಟುವಟಿಕೆಯಿಂದಲೋ ಆ ಮರಿ ತಪ್ಪಿಸಿಕೊಂಡಿತು. ಗರುಡನು ಮತ್ತೊಂದು ಸಾರಿ ಮೇಲಕ್ಕೆ ಚಿಮ್ಮಿ ತೇಲಿ. ಹೇಂಟೆ ಒದೆಯುತ್ತಿದ್ದರೂ ಸುಬ್ಬಮ್ಮ” ಹ್ಯಾ! ಹ್ಯಾ! ಹ್ಯಾ! ” ಎಂದು ಕೂಗಿ ಬರುತ್ತಿದ್ದರೂ ಲೆಕ್ಕಿಸದೆ, ಇನ್ನೊಂದು ಮರಿಗೆ ಎರಗಿ ಮೇಲೆ ಹಾರಿತು. ಅದರ ಉಗ್ರನಖಪಂಜರದಲ್ಲಿ ಸೆರೆ ಸಿಕ್ಕಿದ್ದ ಕೋಳಿಮರಿಯ  ಶಿಶುಪ್ರಲಾಪ ಬರಬರುತ್ತ ಗಗನದಲ್ಲಿ ಕಿವಿಮರೆಯಾಯಿತು. ಕುಂಕುಮಾಂಕಿತ ಶರೀರಯೂ ಧವಳಾಂಕಿತ ವಕ್ಷನೂ ಆಗಿದ್ದ ಆ ಕೃಷ್ಣವಾಹನನು ಸ್ವರ್ಗದ ಅಸೀಮತೆಯಿಂದ ಮಿಂಚಿ ಬಂದು ಕಾನೂರಿನ ಹಿತ್ತಲುಕಡೆಯ ಅಂಗಳದೆಡೆ ಕೆಸರಿನಲ್ಲಿ ವಿಹರಿಸುತ್ತಿದ್ದ ಕೋಳಿಯ ಹೂಮರಿಯನ್ನು ಅದರ ಪೂರ್ವಜನ್ಮದ ಸುಕೃತಫಲದಿಂದಲೋ ಎಂಬಂತೆ ವೈಕುಂಠಕ್ಕೆ ಎತ್ತಿಕೊಂಡು ಹೋಗುತ್ತಿರುವುದನ್ನು ಗಂಗೆ ಸುಬ್ಬಮ್ಮರಿಬ್ಬರೂ ನಿಸ್ಸಹಾಯರಾಗಿ ಕಣ್ಣಾರೆ ನೋಡುತ್ತ ನಿಂತರು. ಹಿಂದೆ ಅನೇಕಸಾರಿ ಗರುಡನಿಗೆ ಕೈಮುಗಿದಿದ್ದ ಸುಬ್ಬಮ್ಮ ಹೂಮರಿಯ ಕರುಣಾಕರವಾದ ಆರ್ತಧ್ವನಿಯನ್ನು ಕೇಳಿ. ಕೋಪ ಕನಿಕರ ಹೊಟ್ಟೆಯುರಿಗಳಿಂದ ” ನಿನ್ನ ಕುಲ  ನಾಶನಾಗ!” ಎಂದು ವಿಷ್ಣುವಾಹನನನ್ನು ಶಪಿಸಿದಳು. ಆಮೇಲೆ ಹೇಂಟೆಯ ಕಡೆಗೆ ತಿರುಗಿ” ಈ ಹಡಬೇ ಹಾದರಗಿತ್ತಿ ಮರಿ ಕಟ್ಟಿಕೊಂಡು ಬಂದು ಬಯಲಿನಲ್ಲೇ ಸಾಯ್ತದೇ!” ಎಂದು ಭರ್ತ್ಸನೆ ಮಾಡಿದಳು. ಅಡಗಿದ್ದ ಮರಿಗಳೆಲ್ಲ ಹೊರಗೆ ಬಂದುವು. ಹೇಂಟೆ ಮತ್ತೆ ಮೊದಲಿನಂತೆ ಅವುಗಳೊಡನೆ ಕೆಸರು ಕೆದರಲು ಪ್ರಾರಂಭಿಸಿತು.

ತನ್ನ ಸಂಸಾರಕ್ಕಾದ ನಷ್ಟವಾಗಲಿ, ತಾನು ಅನೇಕ ದಿವಸಗಳಿಂದ ಮೊಟ್ಟೆಗಳ ಮೇಲೆ ಬೇಸರವಿಲ್ಲದೆ ಕಾವು ಕೂತು ಹೊರಡಿಸಿದ ತನ್ನ ಮುದ್ದು ಹೂಮರಿಯೊಂದಕ್ಕೆ ಒದಗಿದ ಅಕಾಲ ಮೃತ್ಯುವಾಗಲಿ, ಗರುಡನು ಆ ಮರಿಯನ್ನು ಕೊಕ್ಕಿನಿಂದ ಕಿತ್ತು ಕಿತ್ತು. ತಿನ್ನುವಾಗ ಅದಕ್ಕಾಗುವ ನೋವಿನ ಕಲ್ಪನೆಯಾಗಲಿ ಕುಕ್ಕುಟ ಮಾತೆಯ ಮನಸ್ಸನ್ನು ವಿಕ್ಷುಬ್ದ ಮಾಡಿದಂತೆ ತೋರಲಿಲ್ಲ. ಕೆಸರನ್ನು ಕೆದರಿ ಕೆದರಿ ಉಳಿದ ಮರಿಗಳ ಲಾಲನೆ ಪಾಲನೆಗಳಲ್ಲಿ ತನ್ಮಯವಾಗಿತ್ತು.

ಸುಬ್ಬಮ್ಮ ಗಂಗೆಯರಿಬ್ಬರೂ ಹಾಕಿಕೊಂಡಿದ್ದ ತಾಂಬೂಲರಸವನ್ನು ಅಂಗಳವು ಕೆಂಪಾಗುವಂತೆ ಉಗುಳಿ, ಹಿಂದಕ್ಕೆ ಬಂದು ಕುಳಿತು. ತುಂಡುಗಡಿದಿದ್ದ ಕಥೆಯನ್ನು ಮತ್ತೆ ಪ್ರಾರಂಭಿಸಿದರು.

ಗಂಗೆ ಬಾಗಿಲು ತೆರೆದ ಕೂಡಲೆ ತಿಮ್ಮಯ್ಯಸೆಟ್ಟರು ಒಳನುಗ್ಗಿ ಬಾಗಿಲು ಹಾಕಿದರು. ಬಾಗಿಲು ತೆರೆದಾಗ ಮಾತ್ರ ಮರೆಯಾಗಿದ್ದ ಜಾಗ ಬಯಲಾಗಿ, ಅವಿತುಕೊಂಡಿದ್ದ ಕೃಷ್ಣಯ್ಯಸೆಟ್ಟಿ ಪ್ರದರ್ಶಿತ ವಿಗ್ರಹದಂತೆ ಕಾಣಿಸಿಕೊಂಡನು. ತಿಮ್ಮಯ್ಯಸೆಟ್ಟರ ರೋಷ ಮಾತಿನ ಮೇರೆಯನ್ನು ಮೀರಿತ್ತು. ಕೈಯಲ್ಲಿದ್ದ ಕೋವಿಯನ್ನು ನೆಗಹಿ, ಬಾಯೊಣಗಿ ನಡುಗುತ್ತ ನಿಂತಿದ್ದ ಕೃಷ್ಣಯ್ಯಸೆಟ್ಟಿಯ ಎದೆಗೆ ಚಾಚಿದರು. ಗಂಗೆ ” ದಮ್ಮಯ್ಯಾ ಬಿಡಿ” ಎಂದು ಕೈಹಿಡಿದು ಕೂಗಿ ಕೊಂಡಳು. ಕೃಷ್ಣಯ್ಯಸೆಟ್ಟಿಯೂ ಕೈಮುಗಿದುಕೊಂಡು ಪ್ರಾಣಭಿಕ್ಷೆ ಬೇಡಿದನು. ಆದರೂ ಗುಂಡು ಹಾರಿತು.

ಕೃಷ್ಣಯ್ಯಸೆಟ್ಟಿಯನ್ನು ಖೂನಿ ಮಾಡಿದುದಕ್ಕಾಗಿ ತಿಮ್ಮಯ್ಯಸೆಟ್ಟರಿಗೆ ಆಮರಣಾಂತ ಶಿಕ್ಷೆಯಾಯಿತು. ಗಂಗೆಯನ್ನು ವ್ಯಭಿಚಾರಿಣಿಯೆಂದು ಮನೆಯಿಂದ ಹೊರಗೆ ತಳ್ಳಿದರು. ಅವಳು ಒಂದೆರಡು ವರ್ಷಗಳವರೆಗೆ ದುಃಖದಿಂದಿದ್ದು ಕಡೆಗೆ ಸೇರೆಗಾರ ರಂಗಪ್ಪನಪಡನೆ ಗಟ್ಟದ ಮೇಲಕ್ಕೆ ಬಂದಳು.

ಗಂಗೆ ತನ್ನ ವೈಧವ್ಯದ ಕಷ್ಟಗಳನ್ನೂ ಆಮೇಲೆ ತನಗಾದ ಸುಖವನ್ನೂ ತನ್ನ ನಡತೆಯ ಸಮರ್ಥನೆಯನ್ನೂ ವಿವರವಾಗಿ, ಸುಬ್ಬಮ್ಮನ ಸಹಾನುಭೂತಿಯನ್ನೂ ಸೂರೆಗೊಳ್ಳುವಂತೆ ಮಾಡಿದಳು. ಸುಬ್ಬಮ್ಮನೂ ಅವಳು ಹೇಳಿದುದನ್ನೆಲ್ಲ ಚಾಚು ತಪ್ಪದೆ ಒಪ್ಪಿದಳು. ಅವಳಲ್ಲಿದ್ದ ಗ್ರಾಮ್ಯ ಮುಗ್ದತೆಗೆ ಗಂಗೆ ತನ್ನ ವಿದಗ್ಧರೆಯ ವಿಷದ ಹನಿಯನ್ನು ಮೆಲ್ಲನೆ ಹೆಪ್ಪು ಹಾಕುತ್ತಿದ್ದಳು.

ಗಂಗೆಯ ಕಥೆಯನ್ನು ಕೇಳಿದ ಸುಬ್ಬಮ್ಮನ ಚಿತ್ತದಲ್ಲಿ ಅದುವರೆಗೂ ಸುಪ್ತವಾಗಿದ್ದ ಕೆಲವು ವಿಷಯಗಳು ಎಚ್ಚತ್ತುವು. ತಾನೂ ಕೂಡ ಹೂವಯ್ಯಗೌಡರನ್ನು ಪ್ರೀತಿಸುತ್ತಿದ್ದೆ ಆದರೆ ಚಂದ್ರಯ್ಯಗೌಡರು ಮದುವೆಯಾದರು. ಚಂದ್ರಯ್ಯಗೌಡರಿಗೆ ಇಬ್ಬರು ಹೆಂಡಿರು ಆಗಿ ಹೋಗಿದ್ದಾರೆ. ತಾನು ಮೂರನೆಯ ಹೆಂಡತಿ. ಮದುವೆಯಾಗುವಾಗ ತನ್ನ ಇಚ್ಛೆಯನ್ನು ಯಾರೂ ವಿಚಾರಿಸಲಿಲ್ಲ. ಚಂದ್ರಯ್ಯಗೌಡರೂ ಕೂಡ ತನ್ನನ್ನು ಹೊಸದರಲ್ಲಿ ಮೊದಮೊದಲು ಅಕ್ಕರೆಯಿಂದ ಕಾಣುತ್ತಿದ್ದಂತೆ ಈಚೀಚೆಗೆ ಕಾಣುತ್ತಿಲ್ಲ. ಅದಕ್ಕೆ ಬದಲಾಗಿ ಹೊಡೆಯಲೂ ತೊಡಗಿದ್ದರೆ. ತಾವಿಬ್ಬರೆ ಇರುವಾಗ ಇರುಳಿನಲ್ಲಿ ಮುತ್ತಿಟ್ಟು ಆಲಿಂಗಿಸಿದರೂ ಅದು ಅವರ ಸುಖದ ಸ್ವಾರ್ಥತೆಗಾಗಿಯೇ ಹೊರತು ತನ್ನ ಮೇಲಣ ಪ್ರೀತಿಯಿಂದಲ್ಲ. ಆಲೋಚನೆಗಳು ಮೇಲೆ ಹೇಳಿರುವಂತೆ ಸ್ಪಷ್ಟರೀತಿಯಲ್ಲಲ್ಲ ಅವಳ ಮನಸ್ಸಿಗೆ ಬಂದುದು. ಅಷ್ಟು ಸ್ಪಷ್ಟವಾಗಿ ಆಲೋಚನೆ ಮಾಡಲು ಆಕೆಗೆ ಧೈರ್ಯವೂ ಇರಲಿಲ್ಲ. ಚಾತುರ್ಯವೂ ಇರಲಿಲ್ಲ. ಯಾರಾದರೂ” ನೀನು ಹೀಗೆ ಆಲೋಚಸುತ್ತಿದ್ದೀಯಾ” ಎಂದು ಹೇಳಿದ್ದರೆ ಅವರನ್ನು ಸುಳ್ಳುಗಾರರೆಂದು ಬೈದುಬಿಡುತ್ತಿದ್ದಳು. ಹಾವು ಹೊಸದಾಗಿ ಹಾಕಿದ ಮೊಟ್ಟೆಗಳನ್ನು ಒಡೆದರೆ ಅದರಲ್ಲಿ ಮರಿ ಇರುತ್ತದೆಯೇ? ಕೆಂಪು ಬಿಳುಪಿನ ಲೋಳಿ ಇರುತ್ತದೆ. ಆ ಮೊಟ್ಟೆಗಳೂ ಎಷ್ಟು ಮುಗ್ಧ ಮನೋಹರವಾಗಿ ಕಾಣುತ್ತವೆ! ಮುಂದೆ ಅವುಗಳಿಂದಲೆ ಘೋರ ವಿಷಸರ್ಪಗಳು ಹುಟ್ಟುತ್ತವೆ ಎಂದು ಹೇಳಿದರೆ ತಿಳಿಯದವರು ಖಂಡಿತವಾಗಿ ನಂಬಲಾರರು. ಆದರೂ ಕಾಲಾನಂತರದಲ್ಲಿ. ಸರಿಯಾದ ಸನ್ನಿವೇಶ ಒದಗಿ ಬಂದಾಗ, ಆ ಮೊಟ್ಟೆಗಳಿಂದಲೆ ಹಾವು ಹೊರಡುತ್ತವೆ. ಹಾಗೆಯೆ ಸುಬ್ಬಮ್ಮನ ಆಲೋಚನೆಗಳೂ ಅಂಡಾವಸ್ಥೆಯಲ್ಲಿದ್ದುವು.

ಮನಸ್ಸು ಇಂತಿದ್ದರೂ ಬಾಯಿ ಬೇರೆ ಮಾತಾಡುತ್ತಿತ್ತು. ನಾಟಾ ತರಲು ಹೋದವರು ಏಕೆ ಇನ್ನೂ ಊಟಕ್ಕೆ ಬರಲಿಲ್ಲ? ಇಷ್ಟು ಹೊತ್ತಾದರೂ ಒಂದು ಸಾರಿಯಾದರೂ ನಾಟಾ ತರಲಿಲ್ಲವೇಕೆ? ಮಜ್ಜಿಗೆ ಮೆಣಸಿನಕಾಯಿಗೆ ಹುಳಿಮಜ್ಜಿಗೆ ಸಾಲಲಿಲ್ಲ. ಇತ್ಯಾದಿಯಾಗಿ.

ಅಷ್ಟರಲ್ಲಿ ಅಡುಗೆ ಮನೆಯಲ್ಲಿ ದಡದಡದಢಾರ್ ಎಂದು ಸದ್ದಾಗಿ ಯಾರೋ ಧೋಪನೆ ಬಿದ್ದಂತಾಯಿತು. ಸುಬ್ಬಮ್ಮ ಗಂಗೆ ಇಬ್ಬರೂ ಒಳಗೆ ಓಡಿದರು. ಉರುಳಿಬಿದ್ದ ಮಣೆಗಳ ರಾಶಿಯ ಪಕ್ಕದಲ್ಲಿ ಮೆಲ್ಲಗೆ ಏಳುತ್ತಿದ್ದವನು ಅವರನ್ನು ಕಂಡೊಡನೆಯೆ ಅಳತೊಡಗಿದನು.

ಆ ದಿನ ಬೆಳಗ್ಗೆ ವಾಸು ಮುತ್ತಳ್ಳಿಗೆ ಹೋಗುವಾಗ ಹಿಂದಿನದಿನ ಕೋಳಿ ಕಣ್ಣು ಕುಕ್ಕಿದ್ದ ನಾಯಿಮರಿಯನ್ನು ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಪುಟ್ಟನಿಗೆ ಅಪ್ಪಣೆ ಮಾಡಿದ್ದನು. ಅದರ ಆರೈಕೆಗಾಗಿ ಸುಬ್ಬಮ್ಮನನ್ನು ಹಾಲು ಕೇಳಿದರೆ ಕೊಡುವುದಿಲ್ಲ ಎಂದಿದ್ದಳು. ಪುಟ್ಟನು ಸಮಯವನ್ನೇ ಹೊಂಚುಹಾಕಿ ಕಾದು ಅಡುಗೆಮನೆಯಲ್ಲಿ ಯಾರೂ  ಇಲ್ಲದಿರುವಾಗ ಅಲ್ಲಿಗೆ ಹೋಗಿ, ಒಲೆಯ ಪಕ್ಕದಲ್ಲಿದ್ದ ಹಾಲಿನ ಗಡಿಗೆಯಿಂದ ಹಾಲು ಕಳಲು ಪ್ರಯತ್ನಿಸಿದನು. ಲೋಟಗಳನ್ನೆಲ್ಲ ನಾಗಂದಿಗೆಯ ಮೇಲೆ ಅವನಿಗೆ ನಿಲುಕದಂತೆ ಇಟ್ಟಿದ್ದರಿಂದ, ಊಟಕ್ಕೆ ಕೂರುವ ಮಣೆಯನ್ನು ಒಂದರಮೇಲೊಂದು ಹೇರಿ, ಆ ರಾಶಿಯ ಮೇಲೆ ಹತ್ತಿದನು. ಗಾಬರಿಯಲ್ಲಿ ಕೆಲವು ಸಣ್ಣ ಮಣೆಗಳನ್ನು ತಳಕ್ಕೆ ಹಾಕಿ ಮೇಲೆ ದೊಡ್ಡ ಮಣೆಗಳನ್ನು ಹೇರಿದ್ದರಿಂದ ಪುಟ್ಟನು ಹತ್ತಿದೊಡನೆ ಮಣೆಯ ರಾಶಿ ಜರಿದುದರಿಂದ ಅವನಿಗೂ ನೋವಾಯಿತು. ಹೆಚ್ಚಾಗಿ ಭಯದಿಂದಲೂ ಕರುಣೆ ಸಹಾನುಭೂತಿಗಳನ್ನು ಸಂಪಾದಿಸುವ ಸಲುವಾಗಿಯೂ ಅಳತೊಡಗಿದನು.

ಅಷ್ಟು ಹೊತ್ತಿಗೆ ಪುಟ್ಟಣ್ಣನೂ ಬೈರನ ಕೈಲಿ ಟೈಗರನ್ನು ಹೊರಿಸಿ ಕೊಂಡು ಬಂದದ್ದರಿಂದ ಪುಟ್ಟನು ಗುದ್ದು ತಿನ್ನದೆ ಬಚಾಯಿಸಿಕೊಂಡನು.

ಪುಟ್ಟಣ್ಣನು ಬೈರನಿಗೆ ಊಟಮಾಡಿಕೊಂಡು ಬರುವಂತೆ ಹೇಳಿ ಕಳುಹಿಸಿ, ತಾನು ಊಟಮಾಡಲೊಪ್ಪದೆ, ಒಂದು ಜಾಯಿಕಾಯಿ ಪೆಟ್ಟಿಗೆಯಿಂದ ಬಟ್ಟೆಗಳನ್ನು ತೆಗೆದು ತೆಗೆದು ತೊಡಗಿದನು. ಆ ಪೆಟ್ಟಿಗೆ ಅವನ ಸರ್ವಸ್ವವಾಗಿತ್ತು. ಅದರಲ್ಲಿ ಕೋವಿಯ ಸಾಮಾನಿನಿಂದ ಹಿಡಿದು ಉಡುಗೆ ತೊಡುಗೆಗಳವರೆಗೂ ದಾಸ್ತಾನಾಗಿತ್ತು. ಅವನ ಬಳಿ ಉತ್ತಮ ವಸನಗಳೇನೂ ಇರಲಿಲ್ಲ. ಮದುವೆಮನೆಗಳಿಗೂ ಕೊಪ್ಪತೀರ್ಥಹಳ್ಳಿಗಳಿಗೂ ಹೋಗುವಾಗ ಉಡುತ್ತಿದ್ದ  ಒಂದು ಸಾಧಾರಣವಾದ ಪಂಚೆಯೇ ಆ ಪೆಟ್ಟಿಗೆಯಲ್ಲಿ ಅವನ ವಶದಲ್ಲಿದ್ದ ” ಚೂಡಾಮಣಿ!” ಆ ವಸ್ತ್ರಚೂಡಾಮಣಿಯನ್ನು ಹೊರಗಿಟ್ಟು ಉಳಿದ ಸಾಮಾನುಗಳನ್ನೆಲ್ಲ ಮತ್ತೆ ಪೆಟ್ಟಿಗೆಗೆ ತುರುಕಿ, ಬೀಗ ಹಾಕಿದನು. ಮತ್ತೆ ಪಂಚೆಯನ್ನು ಕೈಲಿ ತೆಗೆದುಕೊಂಡು ಬಿಚ್ಚಿ ನೋಡಿದನು. ಟೈಗರಿನ ಯೋಗ್ಯತೆಗೆ ಅದು ಅಲ್ಪವಾದುದೆಂದು ಅವನ ಮನಸ್ಸಿಗೆ ನೋವಾಯಿತು. ಆದರೆ ಅದಕ್ಕಿಂತಲೂ ಉತ್ತಮವಾದುದು ಅವನಲ್ಲಿರಲಿಲ್ಲ.

ಬೈರನು ಉಂಡುಕೊಂಡು ಬಂದಮೇಲೆ ಟೈಗರಿನ ಶವದೊಡನೆ ಹಾರೆ, ಗುದ್ದಲಿ, ಪಂಚೆಗಳನ್ನು ತೆಗೆದುಕೊಮಡು ಇಬ್ಬರೂ ಗುಡ್ಡವೇರಿ ಕಾನುಬೈಲಿನ ಕಡೆಗೆ ಹೋರಟರು. ಹತ್ತುಮಾರು ಹೋದಮೇಲೆ ಪುಟ್ಟಣ್ಣ ಹಿಂಬಾಲಿಸುತ್ತಿದ್ದ ನಾಯಿಗಳನ್ನು ಗದರಿಸಿ ಅಟ್ಟಿ, ಒಡೆಯನ ಇಂಗಿತವನ್ನು ತಿಳಿದು ಖಿನ್ನತೆಯಿಂದ ಹಿಂತಿರುಗಿ ಮನೆಗೆ ಹೋದುವು. ಮರದ ನೆಳಲು ಪೂರ್ವದಿಕ್ಕಿನ ಕಡೆಗೆ ನೀಳವಾಗಿ ಬೇಗಬೇಗನೆ ಹರಿಯುತ್ತಿತ್ತು. ಹೊತ್ತು ಅಪರಾಹ್ಣದಿಂದ ಸಂಧ್ಯೆಗಿಳಿಯುತ್ತಿತ್ತು.

“ಕಾನುಬೈಲಿ”ನಲ್ಲಿ ಒಂದು ಉನ್ನತ ಪ್ರಶಸ್ತವಾದ ಸ್ಥಳದಲ್ಲಿ ಕುಣಿ ತೋಡಿ, ತಾನು ತಂದಿದ್ದ ಪಂಚೆಯಿಂದ ಟೈಗರಿನ ಹೆಣವನ್ನು ಪ್ರೀತಿಪೂರ್ವಕೌವಾಗಿ ಕಂಬನಿಗರೆಯುತ್ತ ಸುತ್ತಿ, ಕುಣಿಯೊಳಗೆ ಮೃದುವಾಗಿ ಮಲಗಿಸಿ, ಪುಟ್ಟಣ್ಣನೇ  ಮಣ್ಣು ಮುಚ್ಚಿದನು, ಆಮೇಲೆ ಬೈರ ಕೆಲವು ಮುಳ್ಳುಗಿಡಗಳನ್ನು ಕಡಿದು ತಂದು ಆ ಸ್ಥಳದ ಮೇಲೆ ಹಾಕಿ, ಕಾಡುಪ್ರಾಣಿಗಳು ಅದನ್ನು ಕೀಳದಂತೆ ಕಲ್ಲು ಹೇರಿದನು.

ಪುಟ್ಟಣ್ಣ ಪಕ್ಕದಲ್ಲಿದ್ದ ಒಂದು ಬಂಡೆಯ ಮೇಲೆ ಕುಳಿತು. ತಾನು ಹಿಂದಿನಿಂದ ಬರುತ್ತೇನೆ ಎಂದು ಹೇಳಿ, ಬೈರನನ್ನು ಹಾರೆ ಗುದ್ದಲಿಗಳ ಸಮೇತ ಮನೆಗೆ ಕಳುಹಿಸಿದನು. ಬೈರನಿಗೆ ಪುಟ್ಟಣ್ಣನ ನಡತೆ ವಿಚಿತ್ರವಾಗಿ ತೋರಿತು. ನಾಯಿಯೊಂದು ಸತ್ತುದಕ್ಕೆ ಟೈಗರಿಗೆ ಸತ್ತುದಕ್ಕೆ ಮನುಷ್ಯರು ಅಷ್ಟು ವ್ಯಸನಪಡುತ್ತಾರೆಂದು ಅವನು ಊಹಿಸಿರಲಿ‌ಲ್ಲ. ಪುಟ್ಟಣ್ಣ ಪಂಚೆಯನ್ನು  ಟೈಗರಿಗೆ ಸುತ್ತಿ ಮಣ್ಣು ಮುಚ್ಚುತ್ತಿದ್ದಾಗ ಬೈರ ಮನಸ್ಸಿನಲ್ಲಿಯೆ ” ನನಗಾದ್ರೂ ಕೊಟ್ಟಿದ್ದರೆ ಆ ಪಂಚೆಯನ್ನು! ಸುಮ್ಮನೆ ಮಣ್ಣು ಮಾಡುತ್ತಿದ್ದಾರಲ್ಲಾ” ಎಂದು ಕೊಂಡಿದ್ದನು.

ಟೈಗರು ಹೂವಯ್ಯನು ಬೆಂಗಳೂರಿನಿಂದ ಇಪ್ಪತ್ತೈದು ರೂಪಾಯಿ ಕೊಟ್ಟು ತಂದಿದ್ದ ನಾಯಿ. ಮೊದಮೊದಲು ಅದಕ್ಕೆ ಕಾಡು. ಬೇಟೆ, ಬಂದೂಕಿನ ಸದ್ದು, ಎಂದರೆ ಭಯವಾಗುತ್ತಿತ್ತು. ಎಷ್ಟೋ ಸಾರಿ ಪುಟ್ಟಣ್ಣನೇ ಅದಲ್ಲೆ ಸರಪಣಿ ಹಾಕಿ ಕಾಡಿಗೆ ಬೇಟೆಯಾಡಲು ಎಳೆದೊಯ್ದಿದ್ದನು. ಆದರೂ ಒಂದೆರಡು ಈಡು ಕೇಳಿದ ಕೂಡಲೆ ಹೇಳದೆ ಕೇಳದೆ ಮನೆಯ ಕಡೆಗೆ ಕಾಲಿಗೆ ಬುದ್ದಿ ಹೇಳುತ್ತಿತ್ತು. ಕ್ರಮೇಣ ಟೈಗರು ಸೊಗಸಾದ ಬೇಟೆನಾಯಿಯಾಯಿತು. ಕಡೆಕಡೆಗೆ ಇತರ ನಾಯಿಗಳಿಗೆ ಗುರುವೂ ಮಾರ್ಗದರ್ಶಿಯೂ ಆಯಿತು. ಟೈಗರು ಹಂದಿ ತಡೆಯಿತೆಂದರೆ ಷಿಕಾರಿಯಾಯಿತೆಂದೇ ಗೊತ್ತು. ಇತರ ನಾಯಿಗಳ ಕೂಗಿಗೆ ಲಕ್ಷ ಕೊಡದಿದ್ದವರು ಟೈಗರಿನ ಕೂಗಿಗೆ ಚುರುಕಾಗುತ್ತಿದ್ದರು. ಎಲ್ಲರ ಬಾಯಿಯಲ್ಲಿಯೂ ಟೈಗರಿನ ಕೀರ್ತಿ. ವಾಸುವಿಗಂತೂ ಟೈಗರೆಂದರೆ ಹೆಮ್ಮೆ. ಅದಕ್ಕೆ ಎಲ್ಲಾ ನಾಯಿಗಳಿಗಿಂತಲೂ ಹೆಚ್ಚು ಪಾಲು ಸಿಕ್ಕುತ್ತಿತ್ತು. ಹೂವಯ್ಯ ರಜಾಕ್ಕೆ ಬಂದಾಗ ಟೈಗರು ಯಾವಾಗಲೂ ಅವನ ಪಕ್ಕದಲ್ಲಿಯೇ ಇರುತ್ತಿತ್‌ಉತ. ವಾಸುವಂತೂ ಸಾಬೂನು ಹಚ್ಚಿ ಅದರ ಮೈಯನ್ನು ತೊಳೆದು ತೊಳೆದು ಅದರ ಕೂದಲು ರೇಷ್ಮೆಯಾಗಿತ್ತು. ಅವನು ಅದರ ಮುಂಗಾಲುಗಳನ್ನು ಹಿಡಿದೆತ್ತಿ ತನಗಿಂತಲೂ ಎತ್ತರವಾಗಿದ್ದ ನಾಯಿಯನ್ನು ನೋಡಿ ಆಶ್ಚರ್ಯಪಡುತ್ತಿದ್ದನು. ತನಗೆ ತಂದುಕೊಟ್ಟಿದ್ದ ಒಂದು ಬೆಲ್ಟನ್ನೇ ಕತ್ತರಿಸಿ ಅದರ ಕೊರಳಿಗೆ ಪಟ್ಟಿಹಾಕಿ, ಅಪ್ಪಯ್ಯನಿಂದ ಪೆಟ್ಟುತಿಂದಿದ್ದನು. ಟೈಗರು ಮನೆಗೆ ಬಂದಮೇಲೆ ಪುಟ್ಟಣ್ಣನ ಬೇಟೆ ಇಮ್ಮಡಿಯಾಗಿತ್ತು. ಮನೆಯಲ್ಲಿ ಕಾರ ಕಡೆದಿಡಲು ಹೇಳಿಯೇ ಅದರೊಡನೆ ಕಾಡಿಗೆ ಹೋಗುತ್ತಿದ್ದನು. ಪುಟ್ಟಣ್ಣ ಇಂತಹ ನೂರಾರು ಸಂಗತಿಗಳನ್ನು ನೆನೆದು ಚಿಂತಿಸುತ್ತ ಬಂಡೆಯ ಮೇಲೆ ಕುಳಿತಿದ್ದನು.

ಸೂರ್ಯನು ಒಯ್ಯೋಯ್ಯನೆ ಧೀರತರಂಗಿತ ಪಶ್ಚಿಮಗಿರಿ ಶಿಖರಗಳ ದಿಗಂತ ಸೀಮಾರೇಖೆಗೆ ಸಮೀಪಗತನಾದನು. ಸಂಜೆಯ ಬಾನು ಕಿತ್ತಳೆಹಣ್ಣಿನಂತೆ ಮಾಗತೊಡಗಿತು. ವಿವಿಧಾಕಾರದ ಮುಗಿಲುಗಳಿಗೆ ಬಣ್ಣವೇರಿ ಮನೋಹರವಾಗಿತ್ತು. ಪುಟ್ಟಣ್ಣ ಚಿಂತಾಮಗ್ನನಾಗಿ ಸುಮ್ಮನೆ ಅತ್ತಕಡೆಗೆ ನೋಡುತ್ತಿದ್ದವನು. ಇದ್ದಕ್ಕಿದ್ದ ಹಾಗೆ ಚಕಿತನಾದನು. ಸ್ವಲ್ಪ ಹೊತ್ತಿಗೆ ಮೊದಲು ಅವನ ಭಾಗಕ್ಕೆ ಉದಾಸೀನವಾಗಿದ್ದ ಪಡುವಣ ಬಾನು ಹಠಾತ್ತಾಗಿ ಕೌತೂಹಲಪೂರ್ಣವಾಯಿತು. ಪುಟ್ಟಣ್ಣ ನೋಡಿದನು. ಎವೆಯಿಕ್ಕದೆ ನೋಡಿದನು. ಹರ್ಷಚಿತ್ತನಾಗಿ” ನನ್ನ ಟೈಗರು ಸ್ವರ್ಗಕ್ಕೆ ಹೋಗುತ್ತಿದೆ” ಎಂದು ಕೊಂಡು ಬಂಡೆಯ ಮೇಲೆ ಎದ್ದು ನಿಂತು ನೋಡಿದನು.

ಮುಗಿಲೊಂದು ನಾಯಿಯ ಆಕಾರವನ್ನು ತಾಳಿ, ಸಂಜೆಯ ಮಾಯೆಯಲ್ಲಿ ಸಜೀವವಾದಂತಿತ್ತು. ಬೇರೆಯ ದಿನಗಳಲ್ಲಾಗಿದ್ದರೆ.  ಪುಟ್ಟಣ್ಣನಿಗೆ ಅದು ಹಾಗೆ ಕಾಣಿಸುತ್ತಿರಲಿಲ್ಲ. ಇಂದು ಅವನ ಭಾವ ಕಲ್ಪನಾಲೋಚನಾ ಶಕ್ತಿಗಳೆಲ್ಲ ಪ್ರಬುದ್ದವಾಗಿದ್ದುದರಿಂದ ಅಂತಃಕರಣವೇ ಆಕಾರಗಳನ್ನು ಕಲ್ಪಿಸಲು ಸಮರ್ಥವಾಗಿದ್ದ ಆ ಸ್ಥಿತಿಯಲ್ಲಿ ಸಂಧ್ಯಾಮೇಘ ರಚನೆಯು ಕೊಟ್ಟ ಸಾಧಾರಣ ಸೂಚನೆ ಅವನ ಮನಸ್ಸಿಗೆ ಟೈಗರಾಗಿ ಪರಿಣಮಿಸಿತು. ಅವನಿಗೆ ಸ್ವರ್ಗ, ನರಕ, ಜೀವ, ದೇವರು ಮೊದಲಾದುವುಗಳ ವಿಚಾರವಾಗಿ ಯಾವುದೂ ಸ್ವಷ್ಟವಾಗಿ ತಿಳಿದಿರಲಿಲ್ಲ. ಹರಿಕಥೆಗಳಿಂದಲೂ ಭಾಗವತರಾಟಗಳಿಂದಲೂ ಭಾರತ ರಾಮಾಯಣ ಕಥಾಶ್ರವಣದಿಂದಲೂ ಹೂವಯ್ಯನ ಮಾತುಕಥೆಗಳಿಂದಲೂ ಹಲಕೆಲವು ಭಾವಗಳನ್ನು ಶೇಖರಿಸಿದ್ದನು. ಸತ್ತಮೇಲೆ ಆತ್ಮವು ಸ್ವರ್ಗಕ್ಕಾಗಲಿ ನರಕಕ್ಕಾಗಲಿ ಹೋಗುತ್ತದೆ ಎಂದು ಕೇಳಿ ತಿಳಿದಿದ್ದನು. ಟೈಗರು ತನ್ನ ಪ್ರೀತಿಯ ನಾಯಿಯಾದ್ದರಿಂದ ಎಂದಿಗೂ ನರಕಕ್ಕೆ ಹೋಗಲಾರದು. ಅಲ್ಲದೆ ಅದು ಸ್ವಾಮಿ ಭಕ್ತಿಗಾಗಿ ಪ್ರಾಣಕೊಟ್ಟಿದೆ! ಆದ್ದರಿಂದ ಅದರ ಆತ್ಮವು ಮುಗಿಲಿನ ರೂಪದಿಂದ ಸ್ವರ್ಗಕ್ಕೆ ಹೋಗುತ್ತಿದೆ ಎಂದು ಸಂತೋಷಪಟ್ಟನು. ತನಗಿದ್ದ ದುಃಖವೆಲ್ಲ ಹೋಗಿ ಆನಂದವಾಗುತ್ತಿರುವುದನ್ನು ಕಂಡು ಅವನಿಗೆ ಆಶ್ಚರ್ಯವಾಯಿತು. ನೋಡುತ್ತಿದ್ದ ಹಾಗೆಯೆ ರವಿ ಮುಳುಗಿದನು. ಮುಗಿಲಿಗಿದ್ದ ನಾಯಿಯ ಆಕಾರ ಬಣ್ಣಗಳೆಲ್ಲ ಅಳಿಸಿ ಹೋದುವು. ಆದರೆ ಪಶ್ಚಿಮದಿಕ್ಕು ಮಾತ್ರ ಸ್ವರ್ಗೀಯವಾಗಿತ್ತು. ಸ್ವರ್ಗವಾಗಿತ್ತು.

ದೃಶ್ಯದಲ್ಲಿ ತನ್ಮಯನಾಗಿದ್ದ ಪುಟಣ್ಣನಿಗೆ ಬಾಡುಗಳ್ಳ ಡೊಳ್ಳುಹೊಟ್ಟೆಯ ಸೋಮನು ಬಳಿಗೆ ಬಂದುದು ಗೊತ್ತಾಗಿರಲಿಲ್ಲ. “ಪುಟ್ಟೇಗೌಡ್ರೇ” ಎಂದು ಅವನು ಕರೆಯಲು ಬೆಚ್ಚಿಬಿದ್ದು ನೋಡಿದನು. ಜಾಕಿಯ ಪೆಟ್ಟು ಬಿದ್ದಿದ್ದ ಕೈಗೆ ಬಟ್ಟೆ ಸುತ್ತಿಕೊಂಡು, ಬೈಗುಗಪ್ಪಿನಲ್ಲಿ ಆಕಾರ ಮಾತ್ರನಾಗಿ ನಿಂತಿದ್ದನು. ಪುಟ್ಟಣ್ಣ ಸಂಧ್ಯಾಸ್ವರ್ಗದಿಂದ ಸ್ಥೂಲಪೃಥ್ವಿಗೆ ಇಳಿಯಬೇಕಾಯಿತು.

“ಹಂದಿ ಹಸಿಗೆ ಮಾಡಿಯಾಯ್ತು, ಎಷ್ಟುಪಾಲು ಮಾಡಬೇಕು? ಕೇಳ್ತಾರೆ!”

ಸೋಮನಿಗೆ ಪುಟ್ಟಣ್ಣನ ಮನಃಸ್ಥಿತಿಯಾಗಲಿ. ಅವನಿದ್ದ ಭಾವಜಗತ್ತಿನ ಔನ್ನತ್ಯವಾಗಲಿ. ಸಮಯಾಸಮಯಗಳ ವಿವೇಕ ವಿಚಾರವಾಗಲಿ ಯಾವುದೂ ಗೊತ್ತಿರಲೂ ಇಲ್ಲ. ಬೇಕಿರಲೂ ಇಲ್ಲ. ಅವನು ಬಂದದ್ದು ಹಂದಿಯ ಹಸುಗೆಯ ವಿಚಾರವಾಗಿ ಕೆಲವು ಕಟ್ಟುಕಟ್ಟಳೆಗಳನ್ನು ತಿಳಿದುಕೊಳ್ಳುವುದಕ್ಕೆಂದು. ಅದನ್ನು ಅವನಿಗೆ ಸಹಜವಾಗಿದ್ದ ಒರಟುತನದಿಂದಲೆ ಕೇಳಿ ಬಿಟ್ಟನು.

ಪುಟ್ಟಣ್ಣನಿಗೆ ಅತಿ ಜುಗುಪ್ಸೆಯಾಗಿ” ಏನಾದರೂ ಮಾಡಿ, ನನಗೊಂದೂ ಗೊತ್ತಿಲ್ಲ.” ಎಂದನು.

“ಅಲ್ಲಾ ಕಾಣಿ, ನೀವು ಮೊದಲು ಗುಂಡು ಹೊಡೆದವರು. ಕೃಷ್ಣಗೌಡರಿಗೆ ದೊಡ್ಡ ಪಾಲು ಯಾಕೆ ಕೊಡುವುದು?…” ಎಂದು ವಕೀಲಿಮಾಡತೊಡಗಿದನು.

ಪುಟ್ಟಣ್ಣ ರೇಗಿ “ನೀ ಹೋಗ್ತೀಯೋ ಇಲ್ಲೋ ಇಲ್ಲಿಂದ ! ನಾನು ಆಮೇಲೆ….” ಎಂದನು.

“ಕೇಳಿಕೊಂಡು ಬಾ ಅಂತ ಹೇಳಿದ್ರು?…..  ಅದಕ್ಕೆ ಬಂದೆ.”

“ನೀ ಹೋಗ್ತಿಯೋ ಇಲ್ಲೋ! ಬಾಡೂ ಅಂದ್ರೆ ಪ್ರಾಣ ಬಿಡ್ರೀರಿ!” ಎಂದು ಪುಟ್ಟಣ್ಣ ಮತ್ತೂ ರೇಗಿ ಕೂಗಿದನು.

“ಟೈಗರಿಗೂ ಪಾಲು ಬಿಡಬೇಕೋ ಬ್ಯಾಡವೋ? ಕೇಳಿಕೊಂಡು ಬಾ ಅಂದರು!” ಪುಟ್ಟಣ್ಣ ಮಾತಾಡಲಿಲ್ಲ. ಅವನೆದೆ ಚುಚ್ಚುತ್ತಿತ್ತು.

“ಟೈಗರಿನ ಪಾಲು ನಾನು ತೆಗೆದುಕೊಳ್ಳಲೋ?” ಎಂದು ಸೋಮನು ಅಂಗಲಾಚಿದನು.

“ಅಯ್ಯೋ ಮಾರಾಯ, ಏನಾದರೂ ಸಾಯಿ! ನಿನ್ನ ದಮ್ಮಯ್ಯಾ ಅಂತೀನಿ ಹೋಗು!”

ಪುಟ್ಟಣ್ಣ ಒಪ್ಪಿಗೆ ಕೊಟ್ಟನೆಂದು ಅರ್ಥಮಾಡಿಕೊಂಡು ಬಾಡುಗಳ್ಳ ಡೊಳ್ಳುಹೊಟ್ಟೆಯ ಸೋಮನು ಗುಡ್ಡವಿಳಿದು ಹೋದನು. ಸತ್ತ ನಾಯಿಗೆ ಸಲ್ಲಬೇಕಾಗಿದ್ದ ಹಂದಿಯ ಮಾಂಸದ ಪಾಲನ್ನು ತಾನು ತೆಗೆದುಕೊಳ್ಳಲು ಅಪ್ಪಣೆ ಪಡೆಯುವ ಸಲುವಾಗಿಯೆ ಅವನು ಬೈರನಿಂದ ಪುಟ್ಟಣ್ಣನಿರುವ ಸ್ಥಳವನ್ನು ಕೇಳಿ ತಿಳಿದು ಕಾನುಬೈಲಿಗೆ ಬಂದಿದ್ದನು.