“ಲಕ್ಷ್ಮೀ!”

“ಆಂ !”ಎಂದು ರಾಗವಾಗಿ ಪ್ರತ್ಯುತ್ತರ ಬಂತು.

“ಇಲ್ಲಿ ಬಾರೇ”

“ಯಾಕೇ?” ರಾಗ ಇನ್ನೂ ನೀಳವಾಗಿತ್ತು.

“ಇಲ್ಲಿ ಬಾ ಅಂತೀನೀ.”

“ಯಾಕವ್ವಾ?” ರಾಗ ಆಲಾಪನೆಯವರೆಗೂ ಏರಿತ್ತು.

“ನೀ ಬರ್ತಿಯೋ ? ನಾನೇ ಬರಲ್ಲೋ?”

ತಲೆ ಬಾಚಲೆಂದು ಕಿರಿಯ ಮಗಳನ್ನು ಕರೆದು, ಗೌರಮ್ಮನವರು ಪಕ್ಕದಲ್ಲಿ ರೋಗಶಯ್ಯೆಯ ಮೇಲೆ ಕೃಶಳಾಗಿ ಮಲಗಿದ್ದ ತಮ್ಮ ದೊಡ್ಡ ಮಗಳು ಸೀತೆಯ ಕಡೆಗೆ ಕರುಣಾಕರವಾಗಿ ನೋಡಿದರು.

ಸೀತೆ ಕುತ್ತಿಗೆಯವರೆಗೂ ನೀಲಿಬಣ್ಣದ ಶಾಲೊಂದನ್ನು ಹೊದೆದುಕೊಂಡು ಮಲಗಿದ್ದಳು. ಬಿಳುಪೇರಿದ್ದ ಅವಳ ಮುಖದಲ್ಲಿ ಕಣ್ಣುಗಳು, ಪಂಜರದಲ್ಲಿ ಹೊಸದಾಗಿ ಸೆರೆಯಾದ ಹಾಡುಹಕ್ಕಿಗಳಂತೆ, ಅತ್ತ ಇತ್ತ ತೊಳಲುತ್ತ ವ್ಯಸನಪೂರ್ಣವಾಗಿದ್ದುವು. ಕೆಳವು ದಿನಗಳಿಂದಲೂ ಬಾಚದೆ ಇದ್ದ ತಲೆಯಲ್ಲಿ ಕೂದಲು ಕೆದರಿಕೊಂಡಿತ್ತು. ಹಾಸಗೆಯ ಸುತ್ತಲೂ ಜ್ವರದ ವಾಸನೆಯ ಮಂಡಲವೊಂದು ಹಸರಿಸಿತ್ತು. ಪಕ್ಕದಲ್ಲಿ ಔಷಧಿಯ ಸೀಸೆಗಳೂ ನಿಂಬೆಯ ಹಣ್ಣಿನ ಹೋಳುಗಳು ಇದ್ದುವು. ಆ ಹೋಳುಗಳ ಮೇಲೆ ಸಣ್ಣ ಗುಂಗುರುಗಳು ಹಾರಾಡುತ್ತಿದ್ದುವು. ಆಕೆ ಉಸಿರಾಡಿದಂತೆಲ್ಲ ಶಾಳು ಮೇಲಕ್ಕೂ ಕೆಳಕ್ಕೂ ಸ್ವಲ್ಪ ಮಾತ್ರ ಚಲಿಸುತ್ತಿತ್ತು. ಗೌರಮ್ಮನವರಿಗೆ ಮಗಳು ಉಸಿರಾಡುವ ಸದ್ದು ಕೇಳಿಸಿದಂತೆಲ್ಲ ನಿಡುಸುಯ್ಯುವಂತಾಗುತ್ತಿತ್ತು.

ಸೀತೆಯ ದೃಷ್ಷಿ ಬಹುದೂರಗಾಮಿಯಾಗಿ ಇದ್ದುದರಿಂದ ಕೊಠಡಿಯ ಒಂದು ಮೂಲೆಯಲ್ಲಿ ಬಿದಿರುಗಳುಗಳಿಗೆ ತೂಗುಹಾಕಿದ್ದ ಬಣ್ಣದ ಸೌತೆಕಾಯಿಗಳಾಗಲಿ, ತನ್ನ ಹಾಸಗೆಯ ಮೇಲುಗಡೆಯ ಬಟ್ಟೆಯ್ಲಲಿ ಸುತ್ತಿ ನೇತುಹಾಕಿದ್ದ ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರು ಮಂತ್ರಿಸಿ ಕೊಟ್ಟಿದ್ದ ತೆಂಗಿನಕಾಯಿಯಾಗಲಿ ಆಕೆಗೆ ಕಣ್ಣಿಗೆ ಬೀಳುತ್ತಿರಲಿಲ್ಲ.

ಮಗಳ ಶೋಚನೀಯ ಸ್ಥಿತಿಯನ್ನು ಕಂಡ ತಾಯಿಯ ಮನದಲ್ಲಿ ಮರುಕವೂ ಭಯವೂ ಮೂಡಿದ್ದುವು. ಇನ್ನೇನು ಕೆಲದಿನಗಳಲ್ಲಿಯೆ ಮದುವೆಯಾಗಿ ಸಂಸಾರದ ಸುಖಸಂತೋಷಗಳನ್ನು ಅನುಭವಿಸುತ್ತಾಳೆ ಎಂದು ಹಾರೈಸಿದ್ದ ತಮ್ಮ ನಚ್ಚಿನ ಕುವರಿಗೆ ಏನು ಅಮಂಗಳವೊದಗುವುದೋ ಎಂದು ಗೌರಮ್ಮನವರಿಗೆ ಆಶಂಕೆ ತಾಯಿತಂದೆಗಳಿಬ್ಬರೂ ತಮ್ಮ ಕೈಲಾದಮಟ್ಟಿಗೆ ಮಗಳ ರೋಗ ನಿವಾರಣೆಗಾಗಿ ಮಾಡುವ ಕಾರ್ಯಗಳನ್ನೆಲ್ಲ ಮಾಡಿದ್ದರು. ವೈದ್ದರಿಂದ ಔಷಧಿ ಕೊಡಿಸಿದ್ದರು; ಜೋಯಿಸರಿಂದ ಮಂತ್ರ ಹಾಕಿಸಿದ್ದರು; ಗಣಮಗನನ್ನು ಕೇಳಿ ಭೂತಕ್ಕೆ ರಕ್ತಬಲಿ ಹಾಕಿಸಿದ್ದರು; ಧರ್ಮಸ್ಥಳ, ತಿರುಪತಿ, ಸಿಬ್ಬಲುಗುಡ್ಡೆ ಮೊದಲಾದ ಪವಿತ್ರ ಸ್ಥಾನಗಳ ದೇವರುಗಳಿಗೆ ಮುಡಿಪು ಕಟ್ಟಿದ್ದರು. ಏನು ಮಾಡಿದರೂ ಮಗಳ ರೋಗ ಕಡಮೇಯಾದಂತೆ ತೋರಲಿಲ್ಲ.

ಗೌರಮ್ಮನವರು ಪ್ರತಿದಿನವೂ ಅನೇಕಸಾರಿ ಕೇಳುತ್ತಿದ್ದಂತೆ ಇಂದೂ ಮಗಳನ್ನು ಕುರಿತು ದುಃಖ ದಮನಮಾಡಿಕೊಳ್ಳುವ ಧ್ವನಿಯಿಂದ, ಅವಳ ಹಣೆ ಕೆನ್ನೆಗಳ ಮೇಲೆ ಕೈಸವರುತ್ತ, ಕೆದರಿದ್ದ ಕೂದಲನ್ನು ನೀವಿ ಸರಿಮಾಡುತ್ತ “ಈಗ ಹ್ಯಾಂಗದೆ?” ಎಂದು ಮೃದುವಾಗಿ ಪ್ರಶ್ನಿಸಿದರು.

ಸೀತೆಯೂ ಪ್ರತಿಸಾರಿ ಹೇಳುತ್ತಿದ್ದಂತೆ “ಈಗ ಸ್ವಲ್ಪ ಗುಣ ಅಂತಾ ಕಾಣ್ತದೆ” ಎಂದು ಜನನಿಯ ಹನಿಯಾಡುತ್ತಿದ್ದ ಕಣ್ಣುಗಳನ್ನು ನೋಡಿದಳು.

ಆದರೆ ತಾಯಿಗಾಗಲಿ ಮಗಳಿಗಾಗಲಿ ಆ ಉತ್ತರದಲ್ಲಿ ನಿಜವಾಗಿಯೂ ನಂಜುಗೆಯಿರಲಿಲ್ಲ. ಒಬ್ಬರ ಸಮಾಧಾನಕ್ಕಾಗಿ ಇನ್ನೊಬ್ಬರು ನಂಬುಗೆಯನ್ನು ನಟಿಸುತ್ತಿದ್ದರು.

ತಾಯಿ ಮತ್ತೆ ಮಗಳ ಹಣೆಯನ್ನು ಮುಟ್ಟಿದಳು. ಬಿಸಿಯಿಂದ ಜ್ವರದ ತಾಪ ಬಲವಾಗಿದ್ದಂತೆ ತೋತಿತು.

ತಾಯಿ ತನ್ನ ಮಲಗುವ ಕೋಣೆಗೆ ಹೋಗಿ, ಸಂದುಕದಿಂದ ಬೆಳ್ಳಿಯ ಎರಡಾಣೆಯೊಂದನ್ನು ತಂದು, ತೊಳೆದು, ಸೀತೆಗೆ “ಸುತ್ತುಬರಿಸಿ” (ಪ್ರದಕ್ಷಿಣೆ ಬರಿಸಿ) ಮಗಳಿಗೆ ಬೇಗ ಗುಣವಾದರೆ ಒಂದು ಬೆಳ್ಳಿಯ ತ್ರಿಶೂಲವನ್ನು ಮಾಡಿಸಿ ಹಾಕುವೆ (ನಿವೇದಿಸುವೆ) ನೆಂದು ತಿರುಪತಿ ತಿಮ್ಮಪ್ಪನಿಗೆ ಕೈಮುಗಿದು ಹೇಳಿಕೊಂಡು, ಆ ಎರಡಾಣೆಯನ್ನು ಒಂದು ಬಟ್ಟೆಯಲ್ಲಿ ಸುತ್ತಿ ಮೇಲಿದ್ದ ಗಳುವಿಗೆ ಬಿಗಿದಳು. ಆ ಗಳುವಿನಲ್ಲಿ ಆಗಲೇ ಅಂತಹ ಮುಡಿಪುಗಳು ಅನೇಕವಾಗಿದ್ದುದನ್ನು ಕಂಡು, ತಾಯಿಯ ಮನಸ್ಸಿಗೆ ಸ್ವಲ್ಪ ನೆಮ್ಮದಿಯಾಯಿತು. ತಾಯಿ ಮಾಡುತ್ತಿದ್ದುದನ್ನೆಲ್ಲ ಮಗಳು ಸಾಕ್ಷಿಯೋಪಾದಿಯಲ್ಲಿ ಮಿಳ್ಮಿಳನೆ ನೋಡುತ್ತಿದ್ದಳು.

ಮುಡಿಪುಕಟ್ಟಿ ಮುಗಿಯಲು ಗೌರಮ್ಮನವರು ಮತ್ತೆ. “ಈಗ ಹ್ಯಾಂಗದೆ?” ಎಂದರು.

ಸೀತೆ ನಿಡುಸುಯ್ಯುತ್ತ “ಈಗ ಸ್ವಲ್ಪ ಜ್ವರ ಬಿಟ್ಟಹಾಂಗೆ ಕಾಣ್ತದೆ” ಎಂದಳು.

ತಾಯಿ ಮರಳಿ ಮಗಳ ಹಣೆಯನ್ನು ಮುಟ್ಟಿನೋಡಿ “ಹೌದು ಕಣೇ ಈಗ ಎಷ್ಟೋ ತಣ್ಣಗಾಗಿದೆ!” ಎಂದಳು. ಮಗಳಿಗೂ ಹಾಗೆಯೇ ತೋರಿತು.

ತರುವಾಯ ಗೌರಮ್ಮನವರು ಹಿಂದೆ ಒಂದು ಸಾರಿ ತಮ್ಮ ಯಜಮಾನರಿಗೆ ಜೋರು ಕಾಯಿಲೆಯಾಗಿದ್ದಾಗ ಯಾವ ಔಷಧಿಯಿಂದಲೂ ಗುಣವಾಗದೆ ಇದ್ದುದನ್ನು ನೋಡಿ ತಿರುಪತಿ ತಿಮ್ಮಪ್ಪನಿಗೆ ಹೇಳಿಕೊಂಡ ಕೂಡಲೆ ಜ್ವರ ಬಿಟ್ಟು ಕಾಯಿಲೆ ಗುಣವಾದ ಸಂಗತಿಯನ್ನು ಎದೆತುಂಬಿ ಮಗಳಿಗೆ ವರ್ಣಿಸಿದರು.

ಇಷ್ಟಾದರೂ ಲಕ್ಷ್ಮಿ ಮಾತ್ರ ಬರಲಿಲ್ಲ. ಗೌರಮ್ಮನವರು ತೆಂಗಿನೆಣ್ಣೆಯ ಕುಡಿಕೆ, ಮರದ ಬಾಚಣೆಗೆಗಳ್ನನು ತಂದು ಮುಂದಿಟ್ಟುಕೊಂಡು ಒಂದಿನಿತು ರಭಸದಿಂದ “ಲಕ್ಷ್ಮೀ!” ಎಂದು ಕರೆದರು.

ಲಕ್ಷ್ಮಿ  ಹೊರಗಿನಿಂದ ಮೊದಲಿನಂತೆಯೆ ನಿರುದ್ವಿಗ್ನ ಧ್ವನಿಯಲ್ಲಿ ಸ್ವಲ್ಪ ರಾಗವಾಗಿ “ಆಂ!!” ಎಂದು ಕೂಗಿದಳು.

ಗೌರಮ್ಮನವರು ರೇಗಿ “ಬರತಿಯೇ ಇಲ್ಲೇ? ಬಜಾರಿ!” ಎಂದು ಕಿಟಕಿಯ ಬಳಿಗೆ ಹೋಗಿ, ಹೊರಗೆ ನೋಡಿದರು.

ಲಕ್ಷ್ಮಿ ಉರಿಬಿಸಿಲಿನಲ್ಲಿ ಮಣ್ಣಿನ ರೊಟ್ಟಿಗಳನ್ನು ಮಾಡಿ ಒಣಗಲು ಹರಡುತ್ತಿದ್ದಳು. ಅವಳ ಬಳಿ, ಮಾಡಿದ ನೆಳಲು ಕರ್ರ‍ಗೆ ಬಿದ್ದಿದ್ದ ತಾಣದಲ್ಲಿ ಅವಳೇ ರಚಿಸಿದ್ದ ಮಣ್ಣಿನ ಸಣ್ಣ ಒಲೆಯೂ ಆ ಒಲೆಯಮೇಲೆ ಅಂತಹ ಕುಶಲ ಕಲೆಯ ಜಾತಿಗೇ ಸೇರಿದ್ದ ಒಂದು ಸೊಟ್ಟ ಮೂತಿಯ ಆಟದ ಮಡಕೆಯೂ, ಬಹಿರಂಗಕ್ಕೆ ಬಂದ ಸ್ವಯಂಕೃತಾಪರಾಧಗಳಂತೆ, ನಾಚಿ ಮುದುಗಿದ್ದುವು. ಬಾಲೆಯ ಮುಖವೆಲ್ಲ ಬೆವರಿ ಕೆಂಪಾಗಿತ್ತು. ಕೈಯೆಲ್ಲ ಕೆಮ್ಮಣ್ಣು ಕೆಸರಾಗಿದ್ದು, ಉಟ್ಟಿದ್ದ ಪರಿಕಾರದ ಮೇಲೆ ಕಲಸಿದ ಮಣ್ಣಿನ ಮುದ್ರಾಪ್ರಭಾವ ಚೆನ್ನಾಗಿ ತೋರುತ್ತಿತ್ತು. ಲಕ್ಷ್ಮಿಯ ನೆರಳು ಅವಳ ಕಾಲಡಿಯಲ್ಲಿ ಕರ್ರ‍ಗೆ ಮಸಿ ಚೆಲ್ಲಿದಂತೆ ಮುದ್ದೆಯಾಗಿತ್ತು.

“ಅಯ್ಯೋ, ಇವಳಿಗೇನು ಮಡಬೇಕಾಯ್ತು? ಮುಣ್ಣಾಡ್ತಿಯೇನೇ ಬಿಸಿಲಿನಲ್ಲಿ!! ಆಗೇಹೋಯ್ತು ಪರಿಕಾರದ ಗತಿ! ಇವತ್ತು ಒಗೆದ್ಹಾಕ್ಕಿದ್ದಲ್ಲೇ!! ಅಯ್ಯೋ ನಿನ್ನ ಸೊಡ್ಡ್ಹೊತ್ತಿಹೋಗಾ!ಇಲ್ಲಿ ಬಾರೆ ಇಲ್ಲಿ!”

ತಾಯಿಯ ಕೂಗಾಟವನ್ನು ಕೇಳಿ ಬಾಲೆ ಬೆವರಿದ್ದ ಕೆಂಪು ಮುಖನ್ನು ಮೇಲೆತ್ತಿ ನೋಡಿ ನಗುತ್ತ ನೀಳವಾದ ರಾಗಧ್ವನಿಯಲ್ಲಿ “ರೊಟ್ಟೀ ಮಾಡ್ತೀನ್ಕಣೇ!” ಎಂದಳು.

“ಹ್ಞುಂ! ನಿನ್ನ ಮಿಂಡ ಬತ್ತಾನೆ ಅಂತಾ ರೊಟ್ಟಿ ಮಾಡ್ತೀಯೇನೇ? ಬತ್ತೀಯೆ ಇಲ್ಲೇ ಒಳಗೇ? ನಿನಗೆ ಮೈ ಮೇಲೆ ಕೈಯಾಡಿಸದೆ ಬಹಳ ದಿನಾಯ್ತು! ಸೊಕ್ಕಿ ಸೊಲಗೆ ನೀರು ಕುಡೀತೀಯಾ!”

ಲಕ್ಷ್ಮಿ ಮನಸ್ಸಿಲ್ಲದ ಮನಸ್ಸಿನಿಂದ ಆಟವನ್ನು ಬಿಟ್ಟು ಒಳಗೆ ಹೋಗಿ ಹಂಡೆಯಲ್ಲಿದ್ದ ಸ್ವಚ್ಛವಾದ ನೀರಿಗೆ ಮಣ್ಣುಮಯವಾಗಿದ್ದ ಎರಡು ಕೈಗಳನ್ನೂ ಅದ್ದಿ ತೊಳೆದುಕೊಂಡು, ಅಕ್ಕ ಮಲಗಿದ್ದ ಕೊಠಡಿಗೆ ಹೋದಳು.

ತಾಯಿ ಎಣ್ಣೆಕುಡಿಕೆ ಬಾಚಣಿಗೆಗಳನ್ನು ಮುಂದಿಟ್ಟುಕೊಂಡು ಕುರಳಿತಿದ್ದುದು ಕಣ್ಣಿಗೆ ಬಿದ್ದೊಡನೆ ಲಕ್ಷ್ಮಿ ಮುಖವನ್ನು ಮುಸುಡನ್ನಾಗಿ ಮಾಡಿ ಕೊಂಡು ದೂರದಲ್ಲಿಯೇ ಗೋಡೆಗೊರಗಿ ನಿಂತುಬಿಟ್ಟಳು.

ತಲೆ ಬಾಚಿಸಿಕೊಳ್ಳುವುದೆಂದರೆ ಅವಳಿಗೊಂದು ಮಹಾಕ್ಲೇಶವಾಗಿತ್ತು. ಅದರಲ್ಲಿಯೂ ಪ್ರಶಸ್ತವಾದ ಮಣ್ಣಾಟವನ್ನು ತ್ಯಜಿಸಿ ತಲೆ ಬಾಚಿಕೊಳ್ಳುವಂತಹ ಕೆಲಸಕ್ಕೆ ಬಾರದ ಕೆಲಸದಲ್ಲಿ ಕಾಲಹರಣ ಮಾಡಬೇಕಲ್ಲಾ ಎಂದು ಎದೆ ಕುದಿಯ ತೊಡಗಿತ್ತು.

“ಇಲ್ಲಿ ಬಾರೆ ಇಲ್ಲಿ.”

ತಾಯಿ ಕರೆದಳು. ಮಗಳು ನಿಂತ ಜಾಗದಿಂದ ಒಂದಿನಿತೂ ಅಲುಗಾಡಲಿಲ್ಲ. ಅವಳ ಕಣ್ಣುಗಳಲ್ಲಿ ಆಗಲೇ ನೀರಾಡತೊಡಗಿತ್ತು.

“ಬಾರೇ, ತಲೆ ಬಾಚ್ತೀನಿ.”

“ಬ್ಯಾಡ; ನಾನೊಲ್ಲೆ” ಎಂದು ಲಕ್ಷ್ಮಿ ಅಳುಮೊಗವಾದಳು.

“ನೆಂಟರು ಬತ್ತಾರೆ ಕಣೇ. ತಲೆ ಚಾಚ್ಕೊಂಡು ಹೂ ಮುಡ್ಕುಂಡು” ಎಂದು ತಾಯಿ ಸುಳ್ಳಿನ ಸಮ್ಮೋಹನವನ್ನು ಬೀಸುತ್ತಿರುವುದನ್ನು ತಿಳಿದ ಮಗಳು “ಬ್ಯಾಡ, ನಾನೊಲ್ಲೆ. ನಂಗೆಲ್ಲ ಗೊತ್ತದೆ, ಬರೀ ಸುಳ್ಳು!” ಎಂದು ಅಳುವಿನ ಮೇಲೆ ನಗುವೇರಿದ ಮೊಗವನ್ನು ಕೊಂಕಿಸಿ ಸೊಟ್ಟಗೆ ಮಾಡಿದಳು.

“ನೀ ಬತ್ತೀಯೋ? ಬೆನ್ನು ಮೇಲೆ ಬೀಳಬೇಕೊ?”

“ಊಮ್ ಊಮ್ ಊಮ್ ಊಮ್” ಎಂದು ಲಕ್ಷ್ಮಿ ಅತ್ತಳೇ ಹೊರತು ನಿಂತಲ್ಲಿಂದ ಕದಲಲಿಲ್ಲ.

ಗೌರಮ್ಮನವರಿಗೆ ಸಿಟ್ಟುಬಂದು ದಡಕ್ಕನೆ ಎದ್ದು ಹೋಗಿ ಬೆನ್ನಿನ ಮೇಲೆ ದಿಡ್ಡನೆ ಒಂದು ಗುದ್ದು ಗುದ್ದಿ. ದರದರನೆ ಎಳೆದು ತಂದು ಕುಳ್ಳಿರಿಸಿದರು. ಲಕ್ಷ್ಮಿ ಗಟ್ಟಿಯಾಗಿ ರೋದಿಸುತ್ತ, ಕಣ್ಣೀರು ಸುರಿಸುತ್ತ ಶರಣಾಗತಳಾದಳು.

“ಸಲುಗೆ ಕೊಟ್ಟ ನಾಯಿ ಸಟ್ಟುಗ ನೆಕ್ಕಿತಂತೆ! ಒಳ್ಳೇ ಮಾತಿನಾಗೆ ಹೇಳಿದ್ರೆನೀ ಕೇಳ್ತಿಯೇನು?” ಎನ್ನುತ್ತ ತಾಯಿ ಮಗಳ ತಲೆಯನ್ನು ಬಾಚುವ ಕೆಲಸಕ್ಕೆ ಕೈ ಹಾಕಿದರು.

ಹಿಂದಿನ ದಿನ ಹೆಣೆದಿದ್ದ ಜಡೆಯನ್ನು ಬಿಚ್ಚಿ, ಕೂದಲಿಗೆ ಎಣ್ಣೆ ಸವರಿ, ಬಾಚಣಿಗೆಯಿಂದ ಸಿಕ್ಕು ಬಿಡಿಸತೊಡಗಿದರು. ಕೂದಲು ಅಸ್ತವ್ಯಸ್ತವಾಗಿ ಬಹಳ ಸಿಕ್ಕು ಸಿಕ್ಕಾಗಿದ್ದುದರಿಂದ ಒಂದೆರಡು ಸಾರಿ ಲಕ್ಷ್ಮಿಗೆ ಬಹಳ ನೋವಾಗಿ ರೋದನವನ್ನು ಮತ್ತೂ ಹೆಚ್ಚಿಸಿದಳು.

“ಸುಮ್ಮನಿರೀತಿಯೇ ಇಲ್ಲೇ”

“ಊಮ್ ಊಮ್ ಊಮ್ ಊಮ್” ! ಆಂ ಆಂ ಆಂ !” ಎಂದು ಲಕ್ಷ್ಮಿ  ತಾಯಿಯ ಕೈಯಿಂದ ತನ್ನ ಕೇಶಪಾಶಗಳನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿ ಒರಟು ಮಾಡಿದಳು.

ಗೌರಮ್ಮನವರಿಗೆ ಸಿಟ್ಟು ಬಂದು ಮತ್ತೊಂದು ಗುದ್ದು ಬಲವಾಗಿ ಗುದ್ದಿದರು. ಲಕ್ಷ್ಮಿ  ಗೊಳೋ ಎಂದು ಅಳತೊಡಗಿದಳು.

ಸೀತೆ ಕ್ಷೀಣಧ್ವನಿಯಿಂದ “ಯಾಕೆ ಹೊಡೀತೀಯವ್ವಾ?” ಎಂದಳು. ತಮ್ಮ ಮುದ್ದಿನ ಪುಟ್ಟಮಗಳು ಅಳುವುದನ್ನು ಆಲಿಸಿ ಗೌರಮ್ಮನವರಿಗೆ ಆಗಲೇ ಮನಸ್ಸು ನೋಯತೊಡಗಿತ್ತು. ಸೀತೆ ಮರುಕದಿಂದ “ಯಾಕೆ ಹೊಡೀತೀಯವ್ವಾ?” ಎಂದ ಕೂಡಲೆ ಅವರ ತಾಯ್ತನದ ಅಕ್ಕರೆ ಮೇರೆದಪ್ಪಿ ಉಕ್ಕಿ ಬಂದು. ಲಕ್ಷ್ಮಿಯನ್ನು ಬಾಚಿ ತಬ್ಬಿಕೊಂಡು ಅವಳ ಕೆನ್ನೆ ತುಟಿಗಳನ್ನು ತಮ್ಮ ಕೆನ್ನೆಗಳಿಗೆ ಒತ್ತಿಕೊಳ್ಳುತ್ತ, ಹಣೆಗೆ ಹಣೆಯನ್ನು ಮೃದುವಾಗಿ ಉಜ್ಜುತ್ತ, ಮಗಳ ಮೂಗು ಬಾಯಿಗಳ ಬಳಿಯಿದ್ದ ತಮ್ಮ ಮೂಗಿನಿಂದ ಅವಳ ಮೈಗಂಪು ಬಾಯ್ಗಂಪುಗಳನ್ನು ಸವಿಯುತ್ತ. “ಅಳಬೇಡ ನನ್ನ ಚಿನ್ನಾ! ನನ್ನ ಕಂದಾ! ನನ್ನ ಕೈ ಬೆಂದೇಹೋಗಲಿ!… ಕರೆದರೆ ಅಪ್ಪು ಕೊಡ್ತೀನಿ ಅಳ್ಪೇಡ! ನನ್ನ ಕೈ ಕುಸಿದು ಬಿದ್ದು ಹೋಗಲಿ!…. ಕರೆದರೆ ಬರಬಾರದೇನು ಹೇಳು! ಸುಮ್ಮನೆ ಹಟಾ ಮಾಡಿ ಪೆಟ್ಟು ತಿಂತೀಯಲ್ಲಾ!… ಇಲ್ಲ, ನನ್ನ ತಪ್ಪಾಯ್ತು! ಅಳಬೇಡಾ, ನನ್ನ ಚಿನ್ನಾ! ನನ್ನ ಕೈಗೆ ಒರಲೆ ಹಿಡಿದೇ ಹೋಗಲಿ!…” ಎಂದು ಮೊದಲಾಗಿ ತಮ್ಮನ್ನು ತಾವೇ ಶಪಿಸಿಕೊಳ್ಳುತ್ತ, ಮಗಳನ್ನು ನಾನಾ ವಿಧವಾಗಿ ಸಂತೈಸಿ ಬಿಗಿದಪ್ಪಕೊಂಡು ಮುಂಡಾಡಿ ಲಲ್ಲೆಗೈದರು.

ಲಕ್ಷ್ಮಿ ಅಳುವುದನ್ನು ನಿಲ್ಲಿಸಿದಮೇಲೆಯೂ ಊಮ್ ಊಮ್ ಊಮ್ ಎಂದು ಸ್ವರವೆತ್ತುವುದನ್ನು ಮಾತ್ರ ಬಿಡಲಿಲ್ಲ. ಅದು ರಸಭಾವಗಳನ್ನು ಕಳೆದುಕೊಂಡು ಹಳಸಿಹೋದ ಅಲಂಕಾರದಂತೆ ಶುಷ್ಕವಾಗಿದ್ದಿತೆ ಹೊರತು ಅದರಲ್ಲಿ ಬನಿ ಇನಿತೂ ಇರಲಿಲ್ಲ. ತಾಯಿ ತಲೆ ಚಾಚುತ್ತಿದ್ದಾಗ ನಡುನಡುವೆ ಮನಸ್ಸಿನಲ್ಲಿ ಬೇರೆಯ ಆಲೊಚನೆಗಳು ಸುಳಿದು ಊ ಊ  ಎನ್ನುವುದನ್ನು ಮರೆಯುತ್ತಿದ್ದರೂ ಫಕ್ಕನೆ ನೆನಪಾದಾಗಲೆಲ್ಲ ಮರಳಿ ಊಮ್ ಊಮ್ ಊಮ್ ಪ್ರಾರಂಭಿಸುತ್ತಿದ್ದಳು.

ಜಡೆ ಹಾಕುವುದು ಕೊನೆಗಾಣುವುದರಲ್ಲಿತ್ತು. ಅಡುಗೆಮನೆಯಲ್ಲಿ ಕಾಳ ಭೀತಿದಾಯಕ ಧ್ವನಿಯೀಂದ “ಅಮ್ಮಾ! ಅಮ್ಮಾ! ಓ ಅಮ್ಮಾ! ಎಂದು ಕೂಗಿದನು.

ಗೌರಮ್ಮನವರು ಓಕೊಳ್ಳುವುದರೊಳಗೆ ಕಾಳ ಅವರಿದ್ದಲ್ಲಿಗೆ ಓಡಿ ಬಂದನು. ಅವನ ಕಣ್ಣು ಮುಖ ಕಂಠ ಒಂದೊಂದರಲ್ಲಿಯೂ ಭೀತಿ ಪ್ರಸ್ಫುಟವಾಗಿತ್ತು.

ಗೌರಮ್ಮನವರು ಲಕ್ಷ್ಮಿಯ ಜಡೆಯನ್ನು ಹಿಡಿದುಕೊಂಡೇ ಗಾಬರಿಯಿಂದ “ಏನೋ?” ಎಂದರು.

“ಕೃಷ್ಣಪ್ಪಗೌಡ್ರನ್ನ ಹುಲೀ ಹಿಡೀತಂತೆ!”

“ಏನು?” ಎಂದು ಗೌರಮ್ಮನವರ ಮೈಮೇಲೆ ಕುದಿನೀರು ಚೆಲ್ಲಿದಂತಾಯಿತು. ಕೈಯಿಂದ ಜಡೆ ನುಣುಚಿಹೋಯಿತು.

ಕಾಳ ದೀರ್ಘವಾಗಿ ಸುಯ್ಯುತ್ತಾ ಹೇಳಿದನು: “ಸಿಂಗಪ್ಪಗೌಡರು ಜನಾಕಳಿಸ್ಯಾರೆ…. ನಿನ್ನೇ ಕೋವಿ ಕಟ್ಟಿದ್ರಂತೆ! ಇವತ್ತು ಬೆಳಿಗ್ಯೆ ಗಾಯದ ಹುಲೀ ಹುಡುಕಾಕೆಹೋಗಿ… ಹುಲೀ ಹಿಡೀತಂತೆ!…..

ಗೌರಮ್ಮನವರು “ನಾರಾಯಣಾ” ಎಂದು ರೋದಿಸುತ್ತ ಸೀತೆಯ ಕಡೆಗೆ ತಿರುಗಿ ನೋಡಿದರು. ಲಕ್ಷ್ಮಿಯೂ ತಾಯಿ ಅಳುವುದನ್ನು ಕಂಡು ಅಳತೊಡಗಿದಳು.

ಸೀತೆಯ ದೇಹ ಆದ್ಯಂತವಾಗಿ ವಿಕ್ಷುಬ್ಧವಾಗಿತ್ತು. ಹಾಸಗೆಯ ಮೇಲೆ ಎದ್ದು ಕುಳಿತಿದ್ದಳು. ಎದೆ ಹಾರಿ ಹಾರಿ ಬೀಳುತ್ತಿತ್ತು. ಬಿಕ್ಕಿ ಬಿಕ್ಕಿ ಅಳುತ್ತಿದ್ದಳೋ ನಗುತ್ತಿದ್ದಳೋ ಗೊತ್ತಾಗುವಂತಿರಲಿಲ್ಲ. ಕಣ್ಣುಗಳಲ್ಲಿ ನೀರು ಹರಿಯುತ್ತಿದ್ದರೂ ಕಂಠದಲ್ಲಿ ಧ್ವನಿಯಿರಲಿಲ್ಲ.

ಆಕೆಯ ಮನಸ್ಸಿನ ಭವಸಮೂದಾಯಗಳ ಹಾಸುಹೊಕ್ಕಿನ ಜಟಿಲತೆಯನ್ನು ಬಿಡಿಸಿ ರಹಸ್ಯವನ್ನು ಬೇದಿಸಲು ಎಂತಹ ಸಮರ್ಥನಾದ ಮನಃಶಾಸ್ತ್ರಜನ ಪ್ರತಿಭೆಗೂ ದುಃಸ್ಸಾಧ್ಯವಾಗಿದ್ದಿತೆಂದೇ ಹೇಳಬೇಕು.

ವಿದೇಶದಲ್ಲಿ ಕಗ್ಗತ್ತಲೆಯ ಗುಹಾಕಾರಾಗೃಹದಲ್ಲಿ ಬಹು ಕಾಲ ದಿಂದಲೂ ಬಂಧಿತನಾಗಿ ಮೃತಪ್ರಾಯನಾಗಿದ್ದವನನ್ನು ಸೆರೆಯಿಂದ ಬಿಡಿಸಿ ಸ್ವದೇಶದ ನಿರ್ಮಲವಾದ ವಾಯುಮಂಡಲದಲ್ಲಿ ಬಾನು ಬಿಸಿಲು ಕಾಡು ಹೊಳೆ ತೊರೆ ಕೆರೆ ಪೈರುಪಚ್ಚೆಗಳ ಹುಲುಸಾದ ಸನ್ನಿವೇಶದಲ್ಲಿ ಬಿಟ್ಟಂತೆ ಆಗಿದ್ದಳು ಸೀತೆ.