ರಾತ್ರಿ ಸುಮಾರು ನಾಲ್ಕೂವರೆ ಗಂಟೆಯಲ್ಲಿ ಬೇಲರ ಸಿದ್ದನೊಡನೆ ಕೆಳಕಾನೂರಿಗೆ ಬಂದ ಪುಟ್ಟ ಹೂವಯ್ಯನ ಕೊಟಡಿಯ ಕಿಟಕಿಯಲ್ಲಿ ’ಅಯ್ಯಾ, ಅಯ್ಯಾ, ಅಯ್ಯಾ’ ಎಂದು ಒಂದೇ ಉಸಿರಿನಲ್ಲಿ ಕೂಗಿ ಕರೆದನು. ಹೂವಯ್ಯ ಗಾಬರಿಯಿಂದೆದ್ದು ಹೊರಗೆ ಬಂದು ಕೇಳಲು ಏದುತ್ತ, ತೊದಲುತ್ತ, ಭಯದಿಂದ ಕಂಪಿಸುತ್ತ, ಅಳುತ್ತ “ನೀವು ಕೂಡ್ಲೆ ಬರಬೇಕಂತೆ” ಎಂದನು.

“ಯಾರು ಹೇಳಿದರೋ?”

“ಓಬೇಗೌಡ್ರು”

“ಯಾಕೆ?”

ಪುಟ್ಟ ಪ್ರತ್ಯುತ್ತರಕ್ಕೆ ಬದಲಾಗಿ, ಬಿಕ್ಕಿ ಬಿಕ್ಕಿ ಅಳುತ್ತಾ “ದಮ್ಮಯ್ಯ, ಬನ್ನಿ! ಅಷ್ಟು ಉಪಕಾರ ಮಾಡಿ!” ಎಂದನು.

“ಏನೋ ಅದು ಸಿದ್ದಾ?” ಎಂದು ಕೇಳಿದನು ಹೂವಯ್ಯ.

ಲಾಟೀನು ಹಿಡಿದು, ಚಳಿಗೆ ಕಂಬಳಿ ಹೊದೆದು ನಿಂತಿದ್ದ ಸಿದ್ದ “ಏನ್ರೋ ಅಯ್ಯಾ? ನಂಗೊತ್ತಿಲ್ಲ. ನಾ ಮನ್ಗಿದ್ದೆ. ಬಂದು ಕರೆದ್ರು, ’ಕೆಳಕಾನೂರಿಗೆ ಬಾ’ ಅಂದ್ರು ಬಂದೆ” ಎಂದನು.

ಹೂವಯ್ಯ ಏನೋ ಪ್ರಮಾದ ನಡೆದಿರಬೇಕೆಂದು ಊಹಿಸಿ, ಪುಟ್ಟಣ್ಣನನ್ನೂ ಸೇರೆಗಾರ ಸೋಮಯ್ಯಸೆಟ್ಟರನ್ನೂ ಕೂಡಿಕೊಂಡು ನೆಟ್ಟಗೆ ಕಾನೂರಿಗೆ ನಡೆದನು.

ಕಂಡೊಡನೆಯೆ ಹೂವಯ್ಯನೊಬ್ಬನನ್ನೆ ಎಕ್ಕಟಿ ಕರೆದು ಓಬಯ್ಯ ನಡೆದುದೆಲ್ಲವನ್ನೂ ಸಂಕ್ಷೇಪವಾಗಿ ಹೇಳಿದನು. ಕೋಣೆಗೆ ಹೋಗಿ ನೋಡೆದಾಗ ಸುಬ್ಬಮ್ಮನ ಶವಮಾತ್ರ ನೀರವಾಗಿ ಬಿದ್ದಿತ್ತು. ಮನೆತನದ ಹೆಸರು ಕೆಡಸಬಾರದೆಂದು ಓಬಯ್ಯ ಕೂಸಿನ ಕಳೇಬರವನ್ನೂ ಬಲಾತ್ಕಾರದ ಪ್ರಸವದ ಉಳಿದ ಚಿಹ್ನೆಗಳನ್ನೂ ಇಲ್ಲದಂತೆ ಮಾಡಿಬಿಟ್ಟಿದ್ದನು.

“ರಾಮಯ್ಯ ಎಲ್ಲಿ?” ಎಂದನು ಹೂವಯ್ಯ.

“ಉಪ್ಪರಿಗೆಮೇಲೆ ಕೋಣೆ ಬಾಗಿಲು ಬಲವಾಗಿ ಹಾಕಿಕೊಂಡು ಮಲಗಿಬಿಟ್ಟಿದ್ದಾರೆ. ಎಷ್ಟು ಕರೆದರೂ ಮಾತೇ ಇಲ್ಲ.”

ಓಬಯ್ಯನ ಮಾತುಕೇಳಿ, ನಿಟ್ಟುಸಿರೆಳೆದು, ಕಣ್ಣರಳಿಸಿ, ಹೂವಯ್ಯ ಉಪ್ಪರಿಗೆಗೆ ಓಡಿದನು. ಇತರರು ಹಿಂಬಾಲಿಸಿದರು. ಆತನಿಗೆ ಇರುಳು ಕನಸಿನಲ್ಲಿ ಕಂಡದ್ದು ನಿಜವಾಗುವಂತೆ ಭಾಸವಾಗಿತ್ತು.

ಕೂಗಿದರೂ ಕರೆದರೂ ದಬ್ಬಿದರೂ ಬಾಗಿಲು ತೆರೆಯಲಿಲ್ಲ. ಕಿಟಕಿಯಲ್ಲಿ ದೀಪವನ್ನು ಹಿಡಿದು ನೋಡಲು ರಾಮಯ್ಯ ಕಂಬಳಿ ಹೊದೆದು ಮಲಗಿದ್ದುದು ಕಾಣಬರುತ್ತಿತ್ತು…. ನೆಲ್ಲುಹಳ್ಳಿ, ಮುತ್ತಳ್ಳಿ, ಸೀತೆಮನೆ, ತೀರ್ಥಹಳ್ಳಿಗಳಿಗೆ ಆಳುಗಳನ್ನಟ್ಟಿದರು.

ನಕ್ಷತ್ರಗಳು ಬಾಡಿ, ತಂಗಾಳಿ ಬೀಸಿ, ಕಾಜಾಣದ ಇನಿಗಾನದೊಂದಿಗೆ ಬೆಳಕು ಹರಿಯಿತು. ಸ್ವಲ್ಪಸ್ವಲ್ಪವಾಗಿ ವಸ್ತುಗಳ ರೂಪ ಸ್ಪಷ್ಟವಾಗತೊಡಗಿ, ಲಾಟೀನಿನ ಬೆಳಕು ಸಪ್ಪೆಯಾಯಿತು. ಚೆನ್ನಾಗಿ ಬೆಳಕು ಬಿಟ್ಟಮೇಲೆ ಕಿಟಕಿಯಿಂದ ಉದ್ದವಾದ ಗಳುವನ್ನು ಹಾಕಿ ಸಾಹಸದಿಂದ ಅಗಣಿಯನ್ನು ತೆಗೆದು ನೋಡಲಾಗಿ ರಾಮಯ್ಯ ಕಂಬಳಿ ಸುತ್ತಿದ್ದ ಹೆಣವಾಗಿದ್ದನು.

“ಅಯ್ಯೋ, ತಮ್ಮಾ, ಏನು ಮಾಡಿಬಿಟ್ಟೆ! ಏಕೆ ದುಡುಕಿಬಿಟ್ಟೆ!” ಎಂದು ರೋದಿಸುತ್ತ ಹೂವಯ್ಯ ಶವವನ್ನಪ್ಪಿಕೊಂಡು ಹುಚ್ಚು ಹಿಡಿದವನಂತೆ ವರ್ತಿಸತೊಡಗಿದನು. ಸುಬ್ಬಮ್ಮನ ಹೆಣವನ್ನು ಕಂಡಾಗ ಅವನಿಗೆ ಉಂಟಾದ ಶೋಕ ಸಂಯಮಕ್ಕೆ ಒಳಗಾಗುವಂತಿತ್ತು. ಆದರೆ ಇಲ್ಲಿ ಸಹೋದರನ ಶವವನ್ನು ಕಂಡಾಗ ಅವನೆದೆಯನ್ನು ಗಾಣಕ್ಕೆ ಕೊಟ್ಟಂತಾಗಿತ್ತು.

* * *

ಒಂಬತ್ತು ಗಂಟೆ ಹೊಡೆಯುವಷ್ಟರಲ್ಲಿ ಬಂಧು ಬಾಂಧವರೆಲ್ಲರೂ ನೆರೆದರು. ಪೋಲೀಸು, ಬಹಿರಂಗ ವಿಚಾರಣೆ, ಡಾಕ್ಟರ ಶವಪರೀಕ್ಷೆ ಮುಂತಾದ ಕ್ಲೇಶಾವಮಾನಗಳಿಂದ ಪಾರಾಗಲು ಸಿಂಗಪ್ಪಗೌಡರು, ಪೆದ್ದೇಗೌಡರು ಚಿನ್ನಯ್ಯ, ಆ ಗ್ರಾಮದ ಪಟೇಲರು ಮೊದಲಾದ ಎಲ್ಲರೂ ಸೇರಿ, ಸರಕಾರದ ಕಾನೂನಿನ ಕಣ್ಣಿಗೆ ಒಪ್ಪುವ ಹಾಗೆ ವಿಷಯಗಳನ್ನು ವಿರಚಿಸಿ, ಮುಂದಿನ ಕಾರ್ಯಗಳನ್ನು ಸಾಂಗವಾಗಿ ನೆರವೇರಿಸಿದರು.

ಹೂವಯ್ಯ ಅಂದಿನಿಂದ ಯಾರೊಡನೆಯೂ ಮಾತನಾಡದೆ, ನಿದ್ರಾಹಾರಗಳಿಗೂ ಮನೆಗೆ ಬಾರದೆ, ಬೆಟ್ಟಗುಡ್ಡಗಳಲ್ಲಿ ಮರುಳು ಹಿಡಿವನ ಹಾಗೆ ಅಲೆಯ ತೊಡಗಿದನು. ಯಾರಾದರೂ ಸಮಾಧಾನ ಹೇಳುವುದಕ್ಕೆ ಬಂದರೆ, ಕುಳಿತಲ್ಲಿಂದ ಎದ್ದು ಬೇರೆಯ ಕಡೆಗೆ ಹೋಗುತ್ತಿದ್ದನು. ಓಬಯ್ಯ, ಪುಟ್ಟಣ್ಣ, ಸೇರೆಗಾರ ಸೋಮಯ್ಯಸೆಟ್ಟರು ಇವರು ಮೂವರೂ ಅವನಿಂದ ತುಸು ದೂರದಲ್ಲಿದ್ದುಕೊಂಡು ಕಾಯುತ್ತಾ, ಅಪಾಯ ಬರದಹಾಗೆ ನೋಡಿಕೊಳ್ಳುತ್ತಿದ್ದರು. ಮೂರನೆಯ ದಿನ ಸೇರೆಗಾರ ಸೋಮಯ್ಯಸೆಟ್ಟರು ತಮ್ಮ ಒಡೆಯ ಊಟ ನಿದ್ದೆಗಳಿಲ್ಲದೆ ಬಯಲಿನಲ್ಲಿ ಮಲಗಿ ಎದ್ದು ಕ್ಷಯಿಸುತ್ತಿರುವುದನ್ನು ನೋಡಿ ಸಹಿಸಲಾರದೆ ಅಳುತ್ತ ಹೂವಯ್ಯನ ಕಾಲುಗಳನ್ನು ಭದ್ರವಾಗಿ ಹಿಡಿದುಕೊಂಡು, ಮನೆಗೆ ಬರಬೇಕೆಂದು ಹಟಮಾಡಿದರು. ಹೂವಯ್ಯ ಮಾತಾಡಲಿಲ್ಲ; ಬಾಹ್ಯಪ್ರಜ್ಞೆಯಿದ್ದವನಂತೆ ವರ್ತಿಸಲೂ ಇಲ್ಲ. ಸೇರೆಗಾರರು ಒಡೆಯನ ಮನಸ್ಸನ್ನು ಕರಗಿಸಿ ತಿರುಗಿಸಲೋಸ್ಕರ ತಾವೂ ಅವನ ಪಕ್ಕದಲ್ಲಿರುತ್ತ ಉಪವಾಸಮಾಡಲು ಸಂಕಲ್ಪಿಸಿದರು. ಆದರೆ ಸಿಂಗಪ್ಪಗೌಡರು ಅವರನ್ನು ಗದರಿಸಿ ಹಾಗೆ ಮಾಡಗೊಡಲಿಲ್ಲ.

ಐದನೆಯ ದಿನ ಸೀತೆ, ವಾಸು ಪುಟ್ಟಮ್ಮರೊಡಗೂಡಿ ಹೋಗಿ, ಹೂವಯ್ಯನನ್ನು ಕಾನುಬೈಲಿನ ನೆತ್ತಿಯ ಬಂಡೆಯಮೇಲೆ ಕಂಡಳು. ಸೀತೆ ಅದುವರೆಗೂ ಕಾನೂರಿಗೆ ಬಂದಿರಲಿಲ್ಲ. ಕಾನೂರಿನಲ್ಲಾದ ಮರಣಗಳ ವಿಷಯದಲ್ಲಿ ಆಕೆ ಒಂದು ರೀತಿಯ ಅವಜ್ಞೆಯಿಂದಿದ್ದಳು. ಆದರೆ ಹೂವಯ್ಯಬಾವನ ದುಃಖವನ್ನೂ ಉಪವಾಸವನ್ನೂ ಅಪಾಯಸ್ಥಿತಿಯನ್ನೂ ಕೇಳಿ ಕಾತರಳಾಗಿ ಕಾನೂರಿಗೆ ಓಡಿಬಂದಿದ್ದಳು.

ಅದುವರೆಗೆ ಯಾರೊಡನೆಯೂ ಮಾತಾಡದಿದ್ದ ಹೂವಯ್ಯ “ನಾಳೆ ಬೆಳಿಗ್ಗೆ ಬರುತ್ತೇನೆ” ಎಂದು ಅವರೋಡನೆ ಹೇಳಿಕಳುಹಿಸಿದನಂತೆ!

ಹೂವಯ್ಯ ಮನೆಗೇನೊ ಬಂದನು. ಆದರೆ ಮೊದಲಿನ ಹೂವಯ್ಯನಾಗಿರಲಿಲ್ಲ. ಸುಬ್ಬಮ್ಮನ ಮರಣವೂ, ಬಹುಕಾಲದ ಪ್ರೀತಿಯ ಸಹೋದರನ ಆತ್ಮಹತ್ಯೆಯೂ, ಐದು ದಿನಗಳ ನಿರಂತರ ತಪಸ್ಸೂ, ಗಂಭೀರ ಧ್ಯಾನವೂ ಆತನನ್ನು ಆತ್ಮಸಾಧನೆಯ ಮಾರ್ಗದಲ್ಲಿ ಮತ್ತಷ್ಟು ದೂರ ಕೊಂಡೊಯ್ದಿದ್ದುವು. ಆತನು ನಡೆದರೆ ಪರ್ವತವೆ ಚಲಿಸಿದಂತಾಗುತ್ತಿತ್ತು; ನುಡಿದರೆ ಸಮುದ್ರವೆ ನುಡಿದಂತಾಗುತ್ತಿತ್ತು; ನೋಡಿದರೆ ನೀಲಾಕಶವೆ ನೋಡಿದಂತಾಗುತ್ತಿತ್ತು!

ಕರ್ಮಕ್ರಿಯೆಗಳೆಲ್ಲ ಪೂರೈಸಿದ ಒಂದು ತಿಂಗಳಲ್ಲಿ, ಒಡೆದು ಪಾಲಗಿದ್ದ ಕಾನೂರಿನ ಆಸ್ತಿ ಮತ್ತೆ ಒಂದಾಯಿತು. ಹೂವಯ್ಯ ಕೆಳಕಾನೂರಿನಿಂದ ಕಾನೂರಿಗೆ ಮತ್ತೆ ತನ್ನ ನಿವಾಸವನ್ನು ಸಾಗಿಸಬೇಕಾಗಿ ಬಂದಿತು.

ಸೀತೆಯೂ ಅನೇಕರಿಗೆ ಆಶ್ಚರ್ಯವಾಗುವಂತೆ ತನ್ನ ಎರಡನೆ ಜೀವವಾಗಿದ್ದ ಲಕ್ಷ್ಮಿಯೊಡಗೂಡಿ ಕಾನೂರಿನಲ್ಲಿಯೆ ನೆಲಸಿದಳು. ಆಕೆಯ ಮತ್ತು ಹೂವಯ್ಯನ ಬಾಳು, ಒಡಲ ಸೋಂಕಿನ ಗೊಡವೆಯಿಲ್ಲದ ಪರಸ್ಪರ ಪ್ರೇಮದ ಎರಡು ಆತ್ಮಗಳ ಪ್ರೋಜ್ವಲ ಜೀವನವಾಗಿತ್ತು. ಅವರ ಪ್ರೀತಿಗೆ ರೂಢಿಯ ಕಟ್ಟುನಿಟ್ಟಿನ ಶಾಸ್ತ್ರಕ್ರಮದ ಅವಲಂಬನೆ ಅನಾವಶ್ಯಕವಾಗಿತ್ತು; ಅದಕ್ಕೆ ಸಂಪರ್ಕದ ಸುಖಕ್ಕಿಂತಲೂ ಸಾನ್ನಿಧ್ಯದ ಪವಿತ್ರ  ಮಧುರತರವಾದ ಆನಂದವೆ ಹೆಚ್ಚು ಪ್ರಿಯವಾಗಿತ್ತು; ಅದು ಶುದ್ಧವಾಗಿ ಆತ್ಮಕ್ಕೆ ಸಂಬಂಧಪಟ್ಟು ಅತೀಂದ್ರಿಯವಾಗಿತ್ತು. ಆ ಹೊನ್ನಿನ ಗಟ್ಟಿಯಲ್ಲಿ ಎಲ್ಲಿಯಾದರೂ ಒಂದು ವೇಳೆ ಕಾಳಿಕೆಯ ರೇಖೆ ಸುಳಿದುದಾದರೆ, ಒಡನೆಯೆ ಇಬ್ವರೂ ಪ್ರಯತ್ನದಿಂದ ಅದನ್ನು ನಿವಾರಿಸುತ್ತಿದ್ದರು; ಉರಿಯುವ ಬತ್ತಿಯ ತುದಿಯಲ್ಲಿ ಕರಿಕಟ್ಟಿಕೊಂಡರೆ ಅದನ್ನು ತೊಡೆದು ಹಾಕಿ ದೀಪದ ಕುಡಿ ಮತ್ತಷ್ಟು ಉಜ್ವಲವಾಗಿ ತೊಳಗಿ ಬೆಳಗಲೆಸಗುವಂತೆ.