ಹಿಂದಿನ ದಿನ ಕಾರ್ಯಾರ್ಥವಾಗಿ ತೀರ್ಥಹಳ್ಳಿಗೆ ಬಂದಿದ್ದ ಸೀತೆ ಮನೆ ಸಿಂಗಪ್ಪಗೌಡರು ಮರುದಿನ ತಮ್ಮ ಮನೆಗೆ ಹೋಗಲೆಂದು ಕಲ್ಲುಸಾರವನ್ನು ದಾಟುತ್ತಿದ್ದಾಗ ಟ್ರಂಕು ಹೊತ್ತುಕೊಂಡು ಹೋಗುತ್ತಿದ್ದ ನಿಂಗ ಪುಟ್ಟಣ್ಣರನ್ನು ಸಂಧಿಸಿದರು. ವಿಚಾರಸಲಾಗಿ ಕಾನೂರು ಚಂದ್ರಯ್ಯಗೌಡರ ಮಗ ರಾಮಯ್ಯನೂ ಅವರಣ್ಣನ ಮಗ ಹೂವಯ್ಯನೂ ಮೈಸೂರಿನಿಂದ ಬೇಸಗೆ ರಜಾಕ್ಕೆ ಬಂದಿದ್ದಾರೆಂದೂ, ಅವರನ್ನು ಮನೆಗೆ ಕರೆದೊಯ್ಯಲು ಗಾಡಿ ಕಳುಹಿಸಿದ್ದಾರೆಂದೂ ಗೊತ್ತಾಯಿತು. ಸಿಂಗಪ್ಪಗೌಡರಿಗೂ ಚಂದ್ರಯ್ಯಗೌಡರಿಗೂ ಕೆಲವು ತಿಂಗಳ ಹಿಂದೆ ಒಬ್ಬ ಕೂಲಿಯಾಳಿನ ಸಲುವಾಗಿ ಸ್ವಲ್ಪ ಮನಸ್ತಾಪವಾಗಿದ್ದುದರಿಂದ ಸೀತೆಮನೆಗೂ ಕಾನೂರಿಗೂ ಇದ್ದ ನಂಟರ ಬಳಕೆ ತಪ್ಪಿಹೋಗಿತ್ತು. ಹೂವಯ್ಯನ ತಾಯಿ ತಮ್ಮ ಹೆಂಡತಿಯ ಅಕ್ಕನಾದುದರಿಂದ ಅವನ ಯೋಗಕ್ಷೇಮವನ್ನೇನೂ ವಿಚಾರಿಸಿದರು. ಅವನನ್ನು ನೋಡಲು ಅವರ ಮನಸ್ಸು ತವಕಪಟ್ಟರೂ ಅದನ್ನು ಬಿಗಿಹಿಡಿದು. ಹೊಳೆಯಿಂದ ನೇರವಾಗಿ ಕುರುವಳ್ಳಿಯ ರಸ್ತೆಗೆ ಸೇರುವ ಕಾಲು ಹಾದಿಯಲ್ಲಿ ಮುಂದೆಹೋದರು. ಸೀತೆಮನೆಗೆ ಹೋಗಲು ಕಾನೂರಿನ ಬಳಿಯಲ್ಲಿಯೆ ಹಾದುಹೋಗಬೇಕಾಗಿತ್ತು. ಆದ್ದರಿಂದ ಗಾಡಿಯ ಮೇಲೆ ಬನ್ನಿ ಎಂದು ಪುಟ್ಟಣ್ಣ ಕರೆದಿದ್ದರೂ ಯಾರೋ ಅವರು ಆತನಿಗೆ ಕುಂಟು ಕಾರಣ ಹೇಳಿ ಮುಂದೆ ಸಾಗಿದ್ದರು. ಅವರೊಡನೆ ಮಾತಾಡುತ್ತಿದ್ದದರಿಂದಲೆ ಪುಟ್ಟಣ್ಣ ಗಾಡಿಯ ಬಳಿಗೆ ಬರಲು ಹೊತ್ತಾದುದು. ಹೂವಯ್ಯ ರಾಮಯ್ಯರು ಸಿಂಗಪ್ಪ ಗೌಡರನ್ನು ಕಲ್ಲುಸಾರ ದಾಟಿ ಬರುವಾಗ ದೂರದಿಂದಲೆ ಕಂಡಿದ್ದರೂ ಯಾರೋ ಏನೋ ಎಂದು ಸುಮ್ಮನಾಗಿದ್ದರು. ಸಿಂಗಪ್ಪಗೌಡರು ಎಂದು ಗೊತ್ತಾಗಿದ್ದರೆ ಬಹುಶಃ ಇಬ್ಬರೂ ಅವರಿಗೆ ಸ್ವಾಗತಬಯಸಿ ಗಾಡಿಯಲ್ಲಿ ಕೂತುಕೊಳ್ಳುವಂತೆ ಮಾಡುತ್ತಿದ್ದರು. ಏಕೆಂದರೆ, ಮೈಸೂರಿನಲ್ಲಿದ್ದ ಅವರಿಗೆ ಚಂದ್ರಯ್ಯಗೌಡರಿಗೂ ಸಿಂಗಪ್ಪಗೌಡರಿಗೂ ಹೊಸದಾಗಿ ಬಂದೊದಗಿದ್ದ ವೈಮನಸ್ಸಿನ ವಿಚಾರ ತಿಳಿದಿರಲಿಲ್ಲ. ಅದರಲ್ಲಿಯೂ ಸಿಂಗಪ್ಪಗೌಡರು ಭಾರತ ರಾಮಾಯಣ ಮೊದಲಾದುವುಗಳನ್ನು ಓದುತ್ತಿದ್ದುದರಿಂದಲೂ. ಬಹಳ ಸರಸ ಪ್ರಕೃತಿಯವರಾಗಿದ್ದುದರಿಂದಲೂ, ಬಾಲ್ಯದಿಂದಲೂ ರಾಮಯ್ಯ ಹೂವಯ್ಯರಿಗೆ ಅವರನ್ನು ಕಂಡರೆ ಅಕ್ಕರೆ. ಆದ್ದರಿಂದಲೆ ಹಿರಿಯರಾಗಿದ್ದರೂ ಅವರನ್ನು ಏಕವಚನದಲ್ಲಿ ಮಾತಾಡಿಸುತ್ತಿದ್ದರು.

ಸಿಂಗಪ್ಪಗೌಡರು ಕೊಪ್ಪಕ್ಕೆ ಹೋಗುವ ರಸ್ತೆಯಲ್ಲಿ ಎರಡು ಫರ್ಲಾಂಗು ನಡೆದಿದ್ದರು. ಬಿಸಿಲ ಬೇಗೆಗೆ ಅವರು ಸೂಡಿದ್ದ ಕೊಡೆಯೂ ಕಾದು ಅವರಿಗೆ ಬಹಳ  ಆಯಾಸವಾಯಿತು. ಬೆಳಗ್ಗೆ ಹೋಟಲಿನಲ್ಲಿ ತಿಂದಿದ್ದ ತಿಂಡಿಯೆಲ್ಲ ಕರಗಿಹೋಗಿ ಹಸಿವೂ ಹೆಚ್ಚಾಯಿತು. ರಸ್ತೆಯ ನುಣ್ಣನೆ ಕೆಂಧೂಳಂತೂ ಸುಡುವಂತೆ ಕಾದು ಅವರ ಮುಂಗಾಲಿನವರೆಗೂ ಹಾರುತ್ತಿತ್ತು. ಅದಕ್ಕಾಗಿ ಅವರು ಉಟ್ಟಿದ್ದ ಕಚ್ಚೆ ಪಂಚೆಯನ್ನು ಮೊಳಕಾಲಿನ ಮೇಲಕ್ಕೆ ಎತ್ತಿ ಕಟ್ಟಿದ್ದರು. ಕೂದಲು ತುಂಬಿದ್ದ ಎದೆ ಕಾಣುವವರೆಗೂ ಕೋಟು ಷರ್ಟುಗಳ ಗುಂಡಿಗಳನ್ನು ಬಿಚ್ಚಿ ತೆರೆದಿದ್ದರು. ಒಂದು ಸಾರಿ ಪುಟ್ಟಣ್ಣ ಕರೆದಾಗ ಹೋಗಿದ್ದರೆ ಗಾಡಿಯಲ್ಲಿ ಯೆ ಕೂತುಕೊಂಡು ಹೋಗಬಹುದಾಗಿತ್ತು ಎಂದು ಎಣಿಸಿದರು. ಒಡನೆಯೆ ಅದನ್ನು ನಾಚಿಕೆಗೇಡೆಂದು ಮನಸ್ಸಿನಿಂದ ಅಟ್ಟಿಬಿಟ್ಟರು. ಅಷ್ಟರಲ್ಲಿ ಹಿಂದೆ ದೂರದಲ್ಲಿ ಗಾಡಿಯ ಮತ್ತು ಎತ್ತಿನ ಗಂಟೆಗಳ ಸದ್ದು ಕೇಳಿಸಿತು. ಹಿಂದಿರುಗಿ ನೋಡಿ. ಕಾನೂರಿನ ಗಾಡಿಯೆಂದರಿತು ಗಾಡಿಯಲ್ಲಿರುವವರಿಗೆ ತಮ್ಮ ಆಯಾಸ ಪ್ರದರ್ಶನ ಮಾಡುವುದು ಗೌರವಕ್ಕೆ ಕಡಿಮೆ ಎಂದು ಭಾವಿಸಿ. ಬೇಗಬೇಗನೆ ನಡೆಯ ತೊಡಗಿದರು.

ಗಾಡಿಯಲ್ಲಿ ಮುಂದೆ ಕುಳಿತಿದ್ದ ರಾಮಯ್ಯನು ಸಿಂಗಪ್ಪಗೌಡರನ್ನು ನೋಡಿದನು. ಪುಟ್ಟಣ್ಣನೊಡನೆ ಬೇಟೆಯ ವಿಚಾರವಾಗಿಯೂ ಮನೆಯ ನಾಯಿಗಳ ವಿಚಾರವಾಗಿಯೂ ಕುತುಹಲ ಉತ್ಸಾಹಗಳಿಂದ ಮಾತಾಡುತ್ತಿದ್ದ ಹೂವಯ್ಯನು ಅವರನ್ನು ಕಾಣಲಿಲ್ಲ.

“ಅದು ಯಾರೋ, ಅಲ್ಲಿ ಹೋಗುವವರು? ನಡಿಗೆ ನೋಡಿದರೆ ಸಿಂಗಪ್ಪ ಕಕ್ಕಯ್ಯನಂತೆ ಕಾಣುತ್ತದೆ” ಎಂದನು ರಾಮಯ್ಯ.

ಹೂವಯ್ಯನು ತಟಕ್ಕನೆ ನಿಮಿರಿ, ತಿರುಗಿ ನೋಡಿ ಸಂತೋಷದಿಂದ ” ಮತ್ತೆ ಯಾರು? ಅವನೇ ಇರಬೇಕು!” ಎಂದನು.

“ಅವರೇ ಹೌದು. ನಮ್ಮ ಜೋತೇಲಿ ಹೊಳೆ ದಾಟಿದರು. ಗಾಡಿ ಇದೆ ಬನ್ನಿ ಅಂದರೆ ಬರಲಿಲ್ಲ” ಎಂದ ಪುಟ್ಟಣ್ಣನು ಅವರು ಬರಲಿದಿದ್ದುದಕ್ಕೆ ಕಾರಣವನ್ನು ಹೇಳಲು ತೊಡಗುತ್ತಿದ್ದನು. ಅಷ್ಟರಲ್ಲಿ ರಾಮಯ್ಯನು ಕೈಚಪ್ಪಾಳೆ ಹೊಡೆದು” ಓ ಸಿಂಗಪ್ಪ  ಕಕ್ಕಯ್ಯಾ, ನಿಲ್ಲೋ ನಿಲ್ಲೋ” ಎಂದು ಗಟ್ಟಿಯಾಗಿ ಕೂಗಿದನು. ಕೂಗು ಕೇಳಿಸಿದರೂ ಸಿಂಗಪ್ಪಗೌಡರು ನಿಲ್ಲದೆ ಹತ್ತು ಹೆಜ್ಜೆ ಮುಂದೆ ಸರಿದರು. ಒಡನೆಯೇ ಹೂವಯ್ಯನ ರಾಮಯ್ಯ ಇಬ್ಬರೂ ಕೂಗಿ ಕರೆಯತೊಡಗಿದರು. ಸಿಂಗಪ್ಪಗೌಡರು ತನಗೂ ಚಂದ್ರಯ್ಯಗೌಡರಿಗೂ ಮನಸ್ತಾಪವಾದರೆ ಹುಡುಗರು ನನಗೇನು ಮಾಡಿದ್ದಾರೆ ಎಂದು ಉದಾರಾಲೋಚನೆ ಮಾಡಿ ನಿಂತರು. ಆ ಔದಾರ್ಯಕ್ಕೆ ಸೂರ್ಯದೇವನೂ ಬಹುಮಟ್ಟಿಗೆ ಕಾರಣನಾಗಿದ್ದಿರಬಹುದು.

ವೇಗವಾಗಿ ದೌಡಾಯಿಸುತ್ತಿದ್ದ ಗಾಡಿ ಅವರ ಬಳಿಬಂದು ನಿಂತಿತು. ಎಂಟು ಖುರಗಳಿಂದಲೂ ಎರಡು ಚಕ್ರಗಳಿಂದಲೂ ಕೆದರಿ ಮೇಲೆದ್ದ ಕೆಮ್ಮಣ್ಣು ಧೂಳಿ ಮೂಗಿಲು ಮುಗಿಲಾಗಿ ಗಾಡಿಯ ಒಳಗೂ ಹೊರಗೂ ತುಂಬಿಹೋಯಿತು. ನಿಂಗನು ಓಡುತ್ತದ್ದ ಎತ್ತಗಳ ಮೂಗುದಾರದ ನೇಣನ್ನು ಬಲವಾಗಿ ಜಗ್ಗಿ ಎಳೆದು ನಿಲ್ಲಿಸಿದ್ದರಿಂದ ಅವುಬಿಸ್ಸೆಂದು ಏದುತ್ತ ನಿಂತುವು. ಮೂಗಿನಲ್ಲಿ ಬಲವಾಗಿ ಉಸಿರಾಡುತ್ತಿದ್ದುದರಿಂದ ಅಳ್ಳೆಗಳು ಹಿಂದಕ್ಕೂ ಮುಂದಕ್ಕೂ ತಿದಿಯೊತ್ತಿದಂತೆ ಆಡುತ್ತಿದ್ದವು. ಎತ್ತಿನ ಗಂಟೆಯ ಸದ್ದು ನಿಲ್ಲಲು ಅರುಗಾಗಿದ್ದ ಸಿಂಗಪ್ಪಗೌಡರು ಗಾಡಿಯ ಮುಂದೆ ಬಂದರು. ಅವರ ಕೊಡೆಯನ್ನೂ ಉಡುಪನ್ನೂ ನೋಡಿ ಎತ್ತುಗಳು ಬೆಚ್ಚಿದುದರಿಮದ ಪುನಃ ಗಾಡಿಯ ಹಿಂದುಗಡೆ ಹೋದರು.

“ಏನು ಮಾರಾಯ, ಎಷ್ಟು ಕರೆದರೂ ಕೇಳಿಸುವುದಿಲ್ಲವೇ? ಈ ಬಿಸಿಲಿನಲ್ಲೇನು ರಣಪಿಶಾಚಿ ಹೋದಹಾಗೆ ಒಬ್ಬನೆ ಹೋಗುತ್ತಿದ್ದೀಯ!”

“ಯಾರು? ಹೂವಯ್ಯನೇ! ನಮಸ್ಕಾರ!” ಎಂದರು ಸಿಂಗಪ್ಪಗೌಡರು. ಅವರ ಒರಚುಗಣ್ಣು ಹೂವಯ್ಯನನ್ನು ನೋಡುತ್ತಿದ್ದರೂ ರಾಮಯ್ಯನನ್ನು ನೋಡುತ್ತಿದ್ದ ಹಾಗಿತ್ತು.

“ನಮಸ್ಕಾರ ಆಮೇಲೆ! ಮೊದಲು ಗಾಡಿ ಹತ್ತು!” ಎಂದನು ರಾಮಯ್ಯ, ಸಿಂಗಪ್ಪಗೌಡರು ತನ್ನ ಕಡೆ ನೋಡುತ್ತಿದ್ದಾರೆಂದು ಭಾವಿಸಿ.

“ನೀವೇ ಗಾಡಿ ತುಂಬಾ ಇದ್ದೀರಿ. ಪರ್ವಾಇಲ್ಲ. ನಾನು ನಡಕೊಂಡೇ ಬರ್ತಿನೀ” ಎಂದರು ನಗುನಗುತ್ತ ಸಿಂಗಪ್ಪಗೌಡರು.

ರಾಮಯ್ಯನು “ನಿನಗೇನು ಹುಚ್ಚೋ?ಮೊದಲು ಗಾಡಿ ಹತ್ತು, ಹೊತ್ತಾಯ್ತು. ಹೊಟ್ಟೆಗೆ ಬೆಂಕಿ ಬೇರೆ ಬಿದ್ದಿದೆ!” ಎಂದನು.

ಸಿಂಗಪ್ಪಗೌಡರು “ಆಗಲಿ ಮಾರಾಯ” ಎಂದು ಕೊಡೆಯನ್ನು ಮಡಿಸಿದರು. ಪುಟ್ಟಣ್ಣ ಅದನ್ನು ಕೈಗೆ ತೆಗೆದುಕೊಳ್ಳಲು ಮೆಟ್ಟುಗಳನ್ನು  ಕಳಚಿ ಗಾಡಿಯ ಹುಲ್ಲಿನಲ್ಲಿ ಹುದುಗಿಸಿಟ್ಟು ಗಾಡಿ ಹತ್ತಿದರು. ಗಾಡಿ ಹೊರಟಿತು.

ಹೂವಯ್ಯನು ಧೂಳೀಮಯವಾಗಿದ್ದ ಸಿಂಗಪ್ಪಗೌಡರ ಕಾಲುಗಳನ್ನು ನೋಡಿ “ಕಕ್ಕಯ್ಯ, ಜಮಖಾನವೆಲ್ಲ ಕೊಳೆಯಾಗುತ್ತದೆ. ಅದನ್ನು ಮಡಿಸಿ ಹುಲ್ಲಿಗೆ ಕಾಲು ತಿಕ್ಕಿದರೆ ವಾಸಿ” ಎಂದನು. ಸಿಂಗಪ್ಪಗೌಡರು ಹಾಗೆಯೆ ಮಾಡಿ ನೆಮ್ಮದಿಯಾಗಿ ಕುಳಿತುಕೊಂಡರು. ರಾಮಯ್ಯನು” ಏನು ಮಾರಾಯ ಎಷ್ಟು ಕೂಗಿದರೂ ಕೇಳಿಸಲೇ ಇಲ್ಲವೇ?” ಎಂದನು.

“ಹೌದು! ನಿಮ್ಮ ಎತ್ತುಗಳಿಗೆ ಇನ್ನೂ ಎರಡು ಗಂಟೆ ಸರ ಹೆಚ್ಚಾಗಿ ಕಟ್ಟಿ, ಆಗ ಚೆನ್ನಾಗಿ ಕೇಳಿಸ್ತದೆ. ಆ ಗಂಟೆ ಗಲಾಟೆಯಲ್ಲಿ ಕದನಿ ಹೊಡೆದರೂ ಸಹ ಕೇಳಿಸುವುದಿಲ್ಲ. ಕೂಗಿದರೆ ಹ್ಯಾಗೆ ಕೇಳಿಸೀತು?” ಎಂದ ಸಿಂಗಪ್ಪಗೌಡರು ತಮಗೂ ಚಂದ್ರಯ್ಯಗೌಡರಿಗೂ ಆದ ವ್ಯವಹಾರ ಹುಡುಗರಿಗೆ ಗೊತ್ತಿಲ್ಲ ಎಂದು ಚೆನ್ನಾಗಿ ಮನಗಂಡರು.

ಹೂವಯ್ಯನು “ಆಗ ಹೊಳೆ ದಾಟುವಾಗ ಪುಟ್ಟಣ್ಣ ಕರೆದರೆ ಬರಲಿಲ್ಲವಂತೆ ನೀನು! ಅದೇಕೆ ಹಾಗೆ ಮಾಡಿದೆ? ನಾವು ಸುಮ್ಮನೆ ಗಾಡಿ ಹೊಡೆದುಕೊಂಡ ಹೋಗಿ, ನಿನ್ನನ್ನು ಬಿಸಿಲಿನಲ್ಲಿ ನಡೆಸಬೇಕಾಗಿತ್ತು” ಎಂದು ನಕ್ಕನು. ವ್ಯವಹಾರದ ವಿಚಾರ ಗೊತ್ತಿದ್ದರೆ ಹೂವಯ್ಯ ಖಂಡಿತವಾಗಿಯೂ ಹಾಗೆ ಮಾತಾಡುತ್ತಿರಲಿಲ್ಲ.

ಅದನ್ನರಿತು ಸಿಂಗಪ್ಪಗೌಡರು “ನೀವು ಬರುವುದು ಹೊತ್ತಾಗುತ್ತದೆ ಎಂದು ನಾನು ಮುಂದೆ ಹೊರಟುಬಿಟ್ಟೆ” ಎಂದು ಪುಟ್ಟಣ್ಣನ ಕಡೆ ನೋಡಿದರು. ಪುಟ್ಟಣ್ಣನು ಮುಗುಳು ನಗುತ್ತಿದ್ದನು.

ನಿಂಗನು ತನ್ನ ಕರ್ತವ್ಯದಲ್ಲಿ ತೊಡಗಿ ಯಾವ ಮಾತನ್ನೂ ಆಡದೆ ಇದ್ದನು. ಹೂವಯ್ಯ ರಾಮಯ್ಯರು ಸಿಂಗಪ್ಪಗೌಡರು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ಮೈಸೂರು,ಬೆಂಗಳೂರು, ಬೇಸಗೆ ರಜಾ, ಇತ್ಯಾದಿ ನಾನಾ ವಿಚಾರಗಳನ್ನು ಕುರಿತು ಪ್ರಸ್ತಾಪಿಸತೊಡಗಿದರು. ಪುಟ್ಟಣ್ಣನು ಅವರ ಮಾತು ಕತೆಗಳನ್ನು ಆಲಿಸುತ್ತ, ನಡುನಡುವೆ ಏನಾದರೊಂದು ಪ್ರಶ್ನೆ ಕೇಳುತ್ತ ಎಲೆಯಡಕೆ ಹಾಕಲು ಪ್ರಾರಂಭಿಸಿದ್ದನು. ಗಾಡಿಯ ಹಿಂಭಾಗದಲ್ಲಿ ಕುಳಿತಿದ್ದುದರಿಂದ ಹೊಗೆಸೊಪ್ಪು ಹಾಕಿದ ತಾಂಬೂಲವನ್ನು ಪದೇ ಪದೇ ಉಗುಳಲು ಅವನಿಗೆ ಬಹಳ ಅನುಕೂಲವಾಗಿತ್ತು. ಅವನು ಎರಡು ಮೂರು ನಿಮಿಷಗಳಿಗೊಂದಾವರ್ತಿ ಪಿಚಕ್ಕನೆ ಉಗುಳಲು ಆ ರಕ್ತಾರುಣ ಲಾಲಾಜಲಪಿಂಡವು ಹನಿಹನಿಯಾಗದೆ ಧಾರೆಧಾರೆಯಾಗದೆ ಮುದ್ದೆ ಮುದ್ದೆಯಾಗಿ ನೆಗೆದು ರಸ್ತೆಯ ಕೆಂಧೂಳಿಯನ್ನು ತಾಗಿದ ಕೂಡಲೆ ಇಂಗಿಹೋಗಿ ಸಣ್ಣ ಸಣ್ಣ ಕೆಂಪು ಮಣ್ಣಿನ ಉಂಡೆಗಳನ್ನು ರಚಿಸುತ್ತಿತ್ತು. ರಸ್ತೆಯಲ್ಲಿ ಚಕ್ರಗಳ ಸಮದೂರವಾದ ಸ್ಫುಟವಾದ ಅವಿಚ್ಛಿನ್ನ ರೇಖಾಮುದ್ರೆ ಗಾಡಿ ಚಲಿಸಿದಂತೆಲ್ಲ ಅದನ್ನು ಸರ್ಪಗಮನದಿಮದ ಹಿಂಬಾಲಿಸುವಂತಿತ್ತು.

ಬೇಸಗೆಯ ಮಧ್ಯಾಹ್ನದ ಸೂರ್ಯನ ತಪ್ತ ತಾಮ್ರ ಬಿಂಬವು ಕಠೋರ ನಿಷ್ಕಾರುಣ್ಯದಿಂದ ಕರೆಯುತ್ತಿದ್ದ ಪ್ರಖರ ಕಿರಣವರ್ಷದಲ್ಲಿ ದಟ್ಟವಾಗಿ ಕಾಡು ಬೆಳೆದು ತೆರೆತೆರೆಯಾಗಿ ಹಬ್ಬಿದ್ದ ಮಲೆನಾಡಿನ ಬೆಟ್ಟಗುಡ್ಡಗಳು ಆಯಾಸದಿಮದ ಮೂರ್ಛೆಗೊಂಡಂತೆ ಶ್ಯಾಮಲ ನಿದ್ರಾಸಕ್ತವಾಗಿದ್ದುವು. ಧೂಳುಗೆಂಪಿನ ರಸ್ತೆ ಸಹ್ಯಾದ್ರಿಯ ಅರಣ್ಯದೇವಿಯ ಮಹಾಮಸ್ತಕದ ಸುದೀರ್ಘವಾದ ಬೈತಲೆಯ ಸರಳ ವಕ್ರ ವಿಮ್ನೋನ್ನತ ರೇಖಾವಿನ್ಯಾಸದಂತೆ ಮೆರೆದಿತ್ತು. ರಸ್ತೆಯಲ್ಲಿ ಅಲ್ಲಲ್ಲಿ ತಂತಿಕಂಬಗಳಿದ್ದು ಬಾನಿಗೆದುರಾಗಿ ತಂತಿಯ ಕರಿಯ ಗೆರೆ ಕಂಬದಿಂದ ಕಂಬಕ್ಕೆ ಪ್ರವಹಿಸಿ ಓಡುವಂತಿತ್ತು. ಹೆದ್ದಾರಿಯ ಇಕ್ಕೆಲಗಳಲ್ಲಿಯೂ ಪ್ರಾರಂಭವಾಗಿ ಸ್ವಚ್ಛಂದ ಕಾನನಶ್ರೇಣಿ ದೃಷ್ಟಿದೂರದವರೆಗೂ ಪಸರಿಸಿತ್ತು. ಯಾವುದೊಂದು ಪ್ರಾಣಿಯ ಸಂಚಾರವೂ ಇರಲಿಲ್ಲ. ಆಗಾಗ ನೇರಿಲೆಯ ಪೊದರು ಮರಗಳಲ್ಲಿ ಪಿಕಳಾರ ಹಕ್ಕಿಗಳು ಮಾತ್ರ ಚಿಮ್ಮುತ್ತಿದ್ದುದು ಕಾಣಬರುತ್ತಿತ್ತು. ಆ ಮಟ ಮಟ ಮಧ್ಯಾಹ್ನದಲ್ಲಿ ಅವುಗಳ ಆ ಕಾರ್ಯವೂ ಧೂರ್ತತನವಲ್ಲದೆ ಲೀಲೆಯಾಗಿರಲಿಲ್ಲ. ಅವು ಕೂಗುತ್ತಿದ್ದುವೋ ಏನೋ? ಆದರೆ ಕೇಳಿಸುತ್ತಿರಲಿಲ್ಲ. ಎರಡು ಎತ್ತುಗಳ ಕುತ್ತಿಗೆಯಲ್ಲಿದ್ದ ಸುಮಾರು ನಾಲ್ವತ್ತು ಐವತ್ತು ಕಿರುಗಂಟೆಗಳು ಇಂಪಾಗಿ ನಾದಗೈದು ಮಹಾರಣ್ಯಮೌನವನ್ನು ಮಥಿಸುತ್ತಿದ್ದವು. ಆ ಹಗಲು, ಆ ಬಿಸಿಲು. ಆ ಕಾಡಿನ ಹಸುರು ಶಾಂತಿ, ಆ ವಿಜನತೆ, ಆ ಗಾಡಿಯ ಡೋಲಾಯಮಾನತೆ, ಆ ಘಂಟಾನಾದದ ಜೋಗುಳದುಲಿ ಇವುಗಳಲ್ಲಿ ಗಾಡಿಯೊಳಗಿದ್ದ ಹಸಿದು ಆಯಾಸಗೊಂಡಿದ್ದ ಜನಗಳು ಮಾತುಬಿಟ್ಟು ತೂಕಡಿಸಲಾರಂಭಿಸಿದ್ದರು. ನಿಂಗನು ಕೂಡ ಅರೆನಿದ್ದೆಯಲ್ಲಿದ್ದನು. ಅವನ ಕೈಲಿದ್ದ ಬಾರುಕೋಲು ತನ್ನ ಚಟುವಟಿಕೆಯನ್ನುಳಿದು ಬಾಗಿತ್ತು. ಅವನ ತಲೆ ಹೆಗಲಮೇಲೆ ಮಲಗಲೆಳಸುತ್ತಿತ್ತು. ಗಾಡಿ ತೂಗಿದಂತೆಲ್ಲ ತೂಗುತ್ತಿತ್ತು. ಆ ಮಹಾ ನಿಶ್ಚಲ ಜಗತ್ತಿನಲ್ಲಿ ಗಾಡಿಯೊಂದೇ ಚಲಿಸುವ ಕ್ಷುದ್ರವಸ್ತುವಾಗಿತ್ತು.

ಮನೆಯ ಕಡೆಗೆ ಮುಖ ಮಾಡಿದ ಎತ್ತುಗಳಿಗೆ ಹಾದಿಯನ್ನು ಹೇಳಿಕೊಡಬೇಕಾಗಿರಲಿಲ್ಲ. ಸಾರಥಿ ಇಲ್ಲದಿದ್ದರೂ ಸುರಕ್ಷಿತವಾಗಿ ಮನೆ ಸೇರುತ್ತವೆ. ಆದರೆ ಇಂದು ಒಂದು ಅಚಾತುರ್ಯ ನಡೆದಿತ್ತು. ನಿಂಗನು ಹೊರಡುವ ಗಡಿಬಿಡಿಯಲ್ಲಿ ಎತ್ತುಗಳಿಗೆ ನೀರು ಕುಡಿಸುವುದನ್ನು ಮರೆತುಬಿಟ್ಟಿದ್ದನು. ಗಾಡಿ ಹದಿನಾಲ್ಕನೆ ಮೈಲು ಕಲ್ಲನ್ನು ದಾಟಿ ತೀರ್ಥಹಳ್ಳಿಯಿಂದ ಒಂದೂವರೆ ಅಥವಾ ಎರಡು ಮೈಲಿ ಹೋಗಿತ್ತು. ಲಚ್ಚನಿಗೆ ಬಹಳ ಬಾಯಾರಿಕೆಯಾಗಿ ನೀರು ಕಂಡರೆ ಸಾಕು ಎನ್ನುವಷ್ಟಾಗಿತ್ತು. ಅನತಿದೂರದಲ್ಲಿ ಹಾದಿಯ ಪಕ್ಕದಲ್ಲಿ ಒಂದು ಕೆರೆಯಿದ್ದುದು ಅದರ ಕಣ್ಣಿಗೆ ಬಿತ್ತು. ಕೂಡಲೆ ನಡಿಗೆಯನ್ನು ಚುರುಕು ಮಾಡಿತು. ನಂದಿಗೆ ಅಷ್ಟು ಜೋರಾಗಿಯೆ ಕಾಲು ಹಾಕಿತು. ಗಾಡಿಯಲ್ಲಿ ಯಾರಿಗೂ ಬಾಹ್ಯಪ್ರಜ್ಞೆಯಿರಲಿಲ್ಲ. ಏರಿಯೇ ರಸ್ತೆಯಾಗಿದ್ದುದರಿಂದ ಕೆರೆ ಸ್ವಲ್ಪ ಕಡಿದಾಗಿತ್ತು. ಎತ್ತುಗಳು ಒಂದೇ ಸಮನೆ ನೀರಿನ ಕಡೆಗೆ ಭರದಿಂದ ಸಾಗಿದುವು. ಬಲಗಡೆ ಚಕ್ರವು ಸಿಂಗಪ್ಪಗೌಡರು ಅಪಾಯವೇನೆಂಬುದನ್ನು ಸರಿಯಾಗಿ ಅರಿಯದಿದ್ದರೂ “ನಿಂಗಾ! ನಿಂಗಾ! ನಿಂಗಾ೧” ಎಂದು ಕೂಗಿದರು. ಉಳಿದವರೆಲ್ಲ ಎಚ್ಚತ್ತು ” ಹೋ ಹೋ ಹೋ” ಎಂದು ಕೂಗಿಕೊಂಡರು. ನಿಂಗನೂ ಎದ್ದು ಮೂಗುದಾರವನ್ನು ಬಲವಾಗಿ ಜಗ್ಗಿ ಎಳೆದನು. ಆದರೆ ಆಗಲೇ ಕಾಲ ಮಿಂಚಿದ್ದುದರಿಂದ ಗಾಡಿ ಉರುಳಿತು. ಏರಿಯ ಕೆಳಭಾಗದಲ್ಲಿದ್ದ ಒಂದು ಕಾಡು ಮಾವಿನಮರಕ್ಕೆ ಕಮಾನು ಡಿಕ್ಕಿ ಹೊಡೆಯಿತು. ನಂದಿಗೆ ಕುತ್ತಿಗೆನೇಣು ಬಿಗಿಯಾಗಿ ಭೋರ್ಗರೆಯಲಾರಂಬಿಸಿತು. ಗಾಡಿಯಲ್ಲಿ ಒಬ್ಬರ ಮೇಲೊಬ್ಬರು ಉರುಳಿಬಿದ್ದರು. ಗಾಡಿ ಮರಕ್ಕೆ ತಾಗಿ ನಿಂತಕೂಡಲೆ ಪುಟ್ಟಣ್ಣ, ಸಿಂಗಪ್ಪಗೌಡರು, ರಾಮಯ್ಯ, ಹೊರಗೆ ಹಾರಿದರು. ನಿಂಗನು ಗಾಡಿಯ ಕತ್ತಿರಿಯಿಂದ ಕೆಳಕ್ಕೆ ನೆಗೆದು, ನಂದಿಯ ಕೊರಳ ಕಣ್ಣಿಯನ್ನು ಬಿಚ್ಚಿ ಬಿಡಿಸಲೆಳಸಿದನು. ಆದರೆ ಸಾಧ್ಯವಾಗಲಿಲ್ಲ. ನಂದಿ ಮೆಳ್ಳೆಗಣ್ಣು ಮಾಡಿಕೊಂಡು ಬುಸುಗುಟ್ಟುತ್ತಿತ್ತು. ನೇಣು ಅದರ ಕುತ್ತಿಗೆಯನ್ನು ಕ್ಷಣಕ್ಷಣಕ್ಕೂ ಬಿಗಿಯುತ್ತಿತ್ತು. ನೇಣನ್ನು ಕೊಯ್ದುಹಾಕಲು ಗಾಡಿಚೀಲದಲ್ಲಿ ಕತ್ತಿ ಹುಡುಕಿದನು. ದುರದೃಷ್ಟದಿಂದ ಅದೂ ಇರಲಿಲ್ಲ. ಎಲ್ಲರೂ ಗಾಬರಿಯಿಂದ ಏನುಮಾಡಲೂ ಸಾಧ್ಯವಾಗಲಿಲ್ಲ. ಕಡೆಗೆ ಪುಟ್ಟಣ್ಣನು ಒಂದು ದಪ್ಪ ಕಗ್ಗಲ್ಲನ್ನು ತೆಗೆದುಕೊಂಡು ಬಂದು ನೊಗಕ್ಕೆ ಬಿಗಿದಿದ್ದ ನೇಣನ್ನು ಜಜ್ಜಿ ಜಜ್ಜಿ ತುಂಡುಮಾಡಿದನು. ನಂದಿ ಕತ್ತನ್ನು ಇಳಿಸಿತು. ಅಷ್ಟರಲ್ಲಿ ಗಾಡಿಯ ಒಳಗಡೆಯಿಂದ ಹೂವಯ್ಯನು ” ಕಕ್ಕಯ್ಯ ಕಕ್ಕಯ್ಯ,ಅಯ್ಯೋ” ಎಂದು ನರಳುತ್ತಿದ್ದುದು ಕೇಳಿಬಂದು ಸಿಂಗಪ್ಪಗೌಡರು ಅಲ್ಲಿಗೆ ನುಗ್ಗಿದರು. ಅವನ ಬೆನ್ನುಮೂಳೆ ಟ್ರಂಕಿಗೆ ಬಡಿದು ಉಳುಕಿ ಬಹಳ ನೋವಾಗಿತ್ತು. ಅವನಿಗೆ ಏಳಲು ಸಾಧ್ಯವಾಗಲಿಲ್ಲ. ಪುಟ್ಟಣ್ಣ ಸಿಂಗಪ್ಪಗೌಡರು ಸೇರಿ ಅವನನ್ನು ಮೆಲ್ಲಗೆ ಕೆಳಗಿಳಿಸಿದರು. ಆದರೆ ಹೂವಯ್ಯನು ನಿಲ್ಲಲಾರದೆ ರಸ್ತೆಯ ಪಕ್ಕದಲ್ಲಿ ನೆಲದಮೇಲೆಯೆ ಮಲಗಿದನು.

ರಾಮಯ್ಯನು ತನ್ನ ತಲೆಗೆ ತಗುಲಿದ್ದ ಗಾಡಿಯ ಗೂಟದ ಪೆಟ್ಟಿನಿಂದ ನೋಯುತ್ತಿದ್ದರೂ ಹೂವಯ್ಯನ ಸ್ಥಿತಿಯನ್ನು ನೋಡಿ ಗಾಬರಿಯಾಗಿ ಅವನ ಬಳಿಗರ ಬಂದು “ಏನಾಯ್ತು ಅಣ್ಣಯ್ಯ?” ಎಂದನು. ಹೂವಯ್ಯನು ಯಾತನಾ ಸೂಚಕವಾದ ಮುಖಖಿನ್ನತೆಯಿಂದಲೂ ಧ್ವನಿಯಿಂದಲೂ “ಟ್ರಂಕಿನ ಏಣು ಬೆನ್ನು ಮೂಳೆಗೆ ಬಡಿದುಬಿಟ್ಟಿತು.” ಎಂದನು. ರಾಮಯ್ಯನು ಹನಿಗಣ್ಣಾಗಿ ಅಣ್ಣನು ಹಾಕಿಕೊಂಡಿದ್ದ ಷರ್ಟನ್ನು ಎತ್ತಿ ಪೆಟ್ಟಾದ ಸ್ಥಳವನ್ನು ಅವಲೋಕಿಸಿದನು. ಗಾಯವೇನೂ ಆಗಿರಲಿಲ್ಲ. ಒಂದು ಕಡೆ  ಹಸುರುಗಟ್ಟಿ ಸುತ್ತಲೂ ಕೆಂಬಣ್ಣವೇರಿತ್ತು. ಅದನ್ನು ಮೆಲ್ಲಗೆ ನೀವಿದನು. ಹೂವಯ್ಯನು ನೋವನ್ನು ಸಹಿಸಲಾರದೆ “ಅಯ್ಯೋ” ಎಂದು ಕೂಗಿಕೊಂಡನು. ರಾಮಯ್ಯನು ಅಣ್ಣನ ನೋವನ್ನು  ಪರಿಹರಿಸಲು ಏನುಬೇಕಾದರೂ ಮಾಡಲು ಸಿದ್ಧನಾಗಿದ್ದನು. ಆದರೆ ಏನು ಮಾಡಲೂ ತೋಚಲಿಲ್ಲ.

ಪುಟ್ಟಣ್ಣ, ನಿಂಗ, ಸಿಂಗಪ್ಪಗೌಡರು ಮೂವರೂ ಗಾಡಿಯನ್ನು ಎತ್ತಿ ನಿಲ್ಲಿಸಿ ಅದನ್ನು ರಸ್ತೆಗೆ ತರುವ ಪ್ರಯತ್ನ ಮಾಡುತ್ತಿದ್ದರು. ಎತ್ತುಗಳೆರಡೂ ಕೆರೆಯ ಮೂಲೆಯ ಕೆಸರಿನಲ್ಲಿ ಮೊಳಕಾಲು ಮುಚ್ಚುವವರೆಗೂ ನಿಂತು ಹಾಯಾಗಿ ನೀರನ್ನು ಸೇದಿ ಕುಡಿಯುತ್ತಿದ್ದುವು. ಲಚ್ಚನ ಮೂಗುದಾರದ ನೇಣು ಹಸುರಾದ ಜೊಂಡುಹುಲ್ಲಿನ ಮೇಲೆ ಜೋಲಾಡುತ್ತಿತ್ತು. ಅದರ ನೆರಳು ಬಲಪಕ್ಕದ ಕಡೆಗೆ ಸರಿದು ಅರ್ಧ ನೀರಿನ ಮೇಲೆಯೂ ಅರ್ಧ ಹುಲ್ಲಿನ ಮೇಲೆಯೂ ಮಲಗಿತ್ತು. ಪ್ರತಿಬಿಂಬ ಮಾತ್ರ ನೀರಿನ ಮಾಸುಕನ್ನಡಿಯಲ್ಲಿ ನೇರವಾಗಿತ್ತು. ನಂದಿ ನೀರು ಕುಡಿದು ಹಿಂತಿರುಗಿತು. ಕೆಲವು ಕಪ್ಪೆಗಳು ಚಿಮ್ಮಿ ನೆಗೆದು ದೂರ ಸರಿದುವು.

ಗಾಡಿಯನ್ನೇನೂ ಎತ್ತಿ ನಿಲ್ಲಿಸಿದ್ದರು. ಆದರೆ ಇಳಿಜಾರು ಕಡಿದಾಗಿದ್ದುದರಿಂದ ಆ ಮೂವರ ಬಲವೂ ಅದನ್ನು ರಸ್ತೆಗೆ ನೂಕಲು ಸಾಲದಾಯಿತು. ಬಹಳ ಪ್ರಯತ್ನ ಮಾಡಿ ಬೆವರು ಸುರಿಸಿದರು. ಬಹುಶಃ ಬೇರೆ ಸಮಯದಲ್ಲಾಗಿದ್ದರೆ ಮೂವರ ಶಕ್ತಿಯೇ ಸಾಕಾಗುತ್ತಿತ್ತು. ಆದರೆ ಹಸಿದ ಹೊಟ್ಟೆಯಲ್ಲಿ ಯಾರುತಾನೆ ಏನು ಮಾಡಿಯಾರು? ಅವರ ಪ್ರಯತ್ನ ವಿಫಲವಾಗುತ್ತಿದ್ದುದನ್ನು ಕಂಡು ರಾಮಯ್ಯನೂ ಸಹಾಯಕ್ಕೆ ಹೋದನು. ಆದರೂ ಗಾಡಿ ರಸ್ತೆಗೆ ಏರಿಬರಲಿಲ್ಲ.

ಅಪರಾಹ್ಣದ ಸೂರ್ಯನು ಹೊಳೆಯುತ್ತಲೆ ಇದ್ದನು. ಆಕಾಶದಲ್ಲಿ ಒಂದೆರಡು ತುಂಡು ಮುಗಿಲು ಸೋಮಾರಿಗಳಂತೆ ಸುತ್ತುತ್ತಿದ್ದವು. ಸಮಸ್ತ ಅರಣ್ಯ ಪ್ರಾಂತವೂ ನಿಶ್ಚಲ ನೀರವವಾಗಿತ್ತು. ಗಾಳಿ ಕೂಡ ಬೀಸುತ್ತಿರಲಿಲ್ಲ. ಪಕ್ಕದಲ್ಲಿ ಗದ್ದೆಯ ಕೋಗಿನಲ್ಲಿ ದೊಡ್ಡ ಮಾವಿನ ಮರದಡಿಯಲ್ಲಿ ಕೆಲವು ಕಾಲ್ನಡೆಗಳು ಮೇಯುವಂತೆ ತೋರುತ್ತಿತ್ತು. ಮತ್ತೆ ಕೆಲವು ಮಗ್ಗುಲಾಗಿ ನಿಶ್ಚಿಂತಾಲಸ್ಯದಿಂದ ತೂಕಡಿಸುತ್ತ ಮೆಲುಕು ಹಾಕುತ್ತಿದ್ದುವು.

ಇದ್ದಕ್ಕಿದ್ದಹಾಗೆ ಕೆರೆಯ ಆಚೆದಡದಲ್ಲಿ ದಟ್ಟವಾಗಿದ್ದ ಕಾಡಿನಿಂದ  ಯಾರೋ ಕರೆದ ಸದ್ದಾಗಿ ಎಲ್ಲರೂ ಆ ಕಡೆ ನೋಡಿದರು. ಮರಗಳ ನೆಳಲಿನಲ್ಲಿ ಪೊದೆಗಳ ನಡುವೆ ಯಾರೋ ಇಬ್ಬರು ಬರುತ್ತಿದ್ದುದು ಕಣ್ಣಿಗೆ ಬಿತ್ತು.