ಇನ್ನೂ ನಡುಹಗಲಾಗದಿದ್ದರೂ ಬೇಸಗೆಯ ಬಿಸಿಲು ಸುಡುತ್ತಿದ್ದುದರಿಂದ ತೀರ್ಥಹಳ್ಳಿಯ ಕಲ್ಲುಸಾರದ ಮಾರ್ಗವಾಗಿ ತುಂಗಾ ನದಿಯನ್ನು ದಾಟುತ್ತಿದ್ದ ಇಬ್ಬರು ತರುಣರು ಬಿಸಿಲ ಬೇಗೆಗೆ ಬಳಲಿ, ಬೆವರಿ,ವಾಹಿನಿಯ ದಕ್ಷಿಣ ತಟದಲ್ಲಿ ಕೊಬ್ಬಿ ಬೆಳೆದಿದ್ದ ಮರಗಳ ಹಸುರು ನೆಳಲನ್ನು ಆಶ್ರಯಿಸಲೆಂಬಂತೆ ಬೇಗಬೇಗನೆ ನಡೆಯುತ್ತಿದ್ದರು. ಅವರನ್ನು ನೋಡಿದ ಕೂಡಲೆ ಶ್ರೀಮಂತರ ಮನೆಯವರೆಂದು ಗೊತ್ತಾಗುತ್ತಿತ್ತು. ಬಹುದೂರದಿಂದ ಬಂದ ಆಯಾಸದಿಂದಲೂ ಸಕಾಲಕ್ಕೆ ನಿದ್ರಾಹಾರಗಳು ದೊರೆಯದಿದ್ದರಿಂದಲೂ ಕಾಂತಿಯುಕ್ತವಾಗಿರುತ್ತಿದ್ದ ಅವರ ಮುಖಗಳು ನಸುಬಾಡಿದ್ದುವು.

ಒಬ್ಬನು ಎತ್ತರವಾಗಿ ತೆಳ್ಳಗಿದ್ದನು. ಆದರೂ ಬಲಿಷ್ಠನೂ ಅರೋಗ ದೃಢಕಾಯನೂ ಎಂಬುದು ಆತನ ಚಲನೆಯ ವೈಖರಿಯಿಂದ ತಿಳಿದುಬರುತ್ತಿತ್ತು.ಬಿಸಿಲಿನ ಡಾವರ ಅತಿಯಾಗಿದ್ದರೂ ಆತನು ತಲೆಗೆ ಟೋಪಿಯನ್ನು ಹಾಕಿರಲಿಲ್ಲ; ಕೊಡೆಯನ್ನೂ ಸೂಡಿರಲಿಲ್ಲ; ಕ್ರಾಪು ಪೊದೆ ಪೊದೆಯಾಗಿ ತಲೆಯನ್ನೆಲ್ಲ ಒಂದು ತೆರನಾದ ಧೀರ ಸ್ವಚ್ಛಂದತೆಯಿಂದ ಆವರಿಸಿತ್ತು. ಸ್ವಲ್ಪ ಉದ್ದವೆಂದು ಹೇಳಬಹುದಾಗಿದ್ದ ಆತನ ತೆಲೆಗೂದಲು ಕಾಡಿಗೆಯಂತೆ ಕಪ್ಪಾಗಿ ಸ್ನಿಗ್ಧ ಕೋಮಲವಾಗಿ ಗುಂಗುರು ಗುಂಗುರಾಗಿತ್ತು. ಒಂದೆರಡು ಮುಂಗುರುಳು ಬೆವರಿನಿಂದ ತೊಯ್ದು ಹಣೆಯ ಮೇಲೆ ಮೆತ್ತಿದಂತೆ ವಕ್ರವಿನ್ಯಾಸದಿಂದ ಶೋಭಿಸುತ್ತಿದ್ದವು. ಆ ನಸುಗೆಂಪುಬಣ್ಣದ ಹಣೆಯ ಮೇಲೆ ಕಡುಗಪ್ಪು  ಬಣ್ಣದ ಬಳ್ಳಗುರುಳು ರಮಣಿಯರ ಸೌಂದರ್ಯವನ್ನು ಮನಸ್ಸಿಗೆ ತರುವಂತಿತ್ತು. ಆದರೆ ಆ ಮುಖಭಂಗಿಯಲ್ಲಿ ಅಬಲತಾಭಾವ ಲೇಶವಾದರೂ ಇರಲಿಲ್ಲ. ಅದಕ್ಕೆ ಬದಲಾಗಿ ರಸಿಕತೆ ಮನಸ್ಸಿಗೆ ಬರುವಂತಿತ್ತು. ಹಣೆಗೆ ನೇರವಾಗಿ ತೆಗೆದಿದ್ದ ಬೈತಲೆ ಬಾಚದೆ ಇದ್ದುದರಿಂದ ಅಸ್ತವ್ಯಸ್ತವಾಗಿತ್ತು. ಕರಿಯ ಕೂದಲಿಗೆ ಎರಚಿದ” ಮಂಗಳೂರು ಪುಡಿ” ಯಂತೆ ಸಣ್ಣನೆ ನುಣ್ಣನೆ ಕೆಂಪಯಧೂಳಿ ಹತ್ತ, ಆತನು ಮಾಡಿದ್ದ ಪ್ರಯಾಣದ ಧೀರ್ಘತೆಯನ್ನೂ ಆ ಪ್ರಯಾಣದ ರಸ್ತೆಯ ಸ್ಥಿತಿಯನ್ನೂ ಸೂಚಿಸುತ್ತಿದ್ದವು. ಆತನ ಕಣ್ಣುಗಳು ಅಷ್ಟೇನೂ ಅತಿಶಯ ವಿಸ್ತಾರವಾಗಿರದಿದ್ದರೂ ಉಜ್ವಲವಾಗಿ, ಮರ್ಮಭೇದಿದೃಷ್ಟಿಯುತವಾಗಿ, ಯೋಗಿಯ ನಯನಗಳಂತೆ ಅಂತರ್ಮುಖವಾಗಿ, ತಿಳಿದವರಲ್ಲಿ ಗೌರವಭಾವವನ್ನೂ ತಿಳಿಯದವರಲ್ಲಿ ಮೋಹವನ್ನೂ ಉದ್ರೇಕಿಸುವಂತಿದ್ದುವು. ಮೂಗು ಉದ್ದವಾಗಿ ತುದಿಯಲ್ಲಿ ಶುಕಚಂಚುವಿನಂತೆ ಬಾಗಿತ್ತು; ಸೃಷ್ಟಿಯ ರಹಸ್ಯಗಳನ್ನು ಕುಟುಕಿ ಒಳಹೊಕ್ಕು ನೋಡುತ್ತೇನೆ ಎನ್ನುವಂತಿತ್ತು. ಅದರ ಮೇಲಿದ್ದ ಒಂದು ನಸುಹಸುರಾದ ನರವು ಸೌಂದರ್ಯಕ್ಕೆ ಸಬಲತೆ ಗಾಂಭೀರ್ಯಗಳನ್ನು ಕೊಡುತ್ತಿತ್ತು. ಓಷ್ಠವು ಬಾಗಿದ ಧುನುಸ್ಸಿನಂತೆಯೂ ಅಧರವು ಬಿಲ್ಲಿನ ಸಹಾಯದಿಂದಲೇ ಮಾತ್ರ ತನ್ನ ಶಿಥಿಲತೆಯನ್ನು ಪರಿಹರಿಸಿಕೊಂಡು ಪೌರುಷಯುಕ್ತವಾಗಿರುವ ಕೆಂಬಣ್ಣದ ಹೆದೆಯಂತೆಯೂ ಒಂದನ್ನೊಂದು ಆಶ್ರಯಿಸಿ, ಒಂದನ್ನೊಂದು ಆಲಿಂಗಿಸಿ, ಒಂಕ್ಕೊಂದು ಅವಲಂಬಿನವಾಗಿ ಅಪ್ರತಿಹತವಾಗಿದ್ದವು. ಎಂದರೆ, ಆ ಧನುಸ್ಸು ಸುರಚಾಪಕ್ಕಿಂತಲೂ ಹೆಚ್ಚಾಗಿ ಹರಚಾಪವನ್ನೇ ಹೋಲುವಂತಿತ್ತು. ಕೆನ್ನೆಗಳೂ ತುಟಿಗಳಂತೆಯೆ ಮನೋಹರವಾಗಿದ್ದರೂ ಕೋಮಲವಾಗಿರಲಿಲ್ಲ. ಪತಂಗಗಳನ್ನು ಆಕರ್ಷಿಸುವ ದೀಪದ್ಯುತಿಯಂತಿದ್ದುವು. ಗಲ್ಲವು ಸಣ್ಣಗೆ ದುಂಡಗೆ ಮೊನಚಾಗಿದ್ದು ಕಠೋರ ಸಾಧನೆಯನ್ನೂ ಒಂದು ವಿಧವಾದ ಹಠವನ್ನೂ ಮನಸ್ಸಿಗೆ ತರುತ್ತಿದ್ದವು. ತಾರುಣ್ಯ ಯೌವನಗಳ ಮಧ್ಯೆ ನಿಂತು, ಆ ಎರಡು ಅವಸ್ಥೆಗಳ ಶ್ರೇಷ್ಠಾಂಶಗಳನ್ನು ಒಳಗೊಂಡಿದ್ದ ಆತನ ದೇಹವು ಒಂದು ಉದ್ದವಾದ ಷರ್ಟಿನಿಂದ ಆವೃತವಾಗಿ, ವಿಶಾಲವಾಗಿ ಉಬ್ಬಿದ ಉರಪ್ರದೇಶವನ್ನು ಪ್ರದರ್ಶಿಸುತ್ತಿತ್ತು. ಆತನು ಹಾಕಿಕೊಂಡಿದ್ದ ಖಾದಿಬಟ್ಟೆಯ ಷರ್ಟೂ ಅಡ್ಡಲಾಗಿ ಉಟ್ಟಿದ್ದ ಪಂಚೆಯೂ ಪ್ರಯಾಣಧೂಳಿನಿಂದ ಮಲಿನವಾಗಿದ್ದವು. ಒಟ್ಟಿನಲ್ಲಿ ಪೌರುಷ, ಆಧ್ಯಾತ್ಮಿಕ, ಅಂತರ್ಮುಖತೆ, ರಸಿಕತೆ, ಮೇಧಾಶಕ್ತಿ, ಇತರರಿಗೆ ಕಷ್ಟವಲ್ಲದಿದ್ದರೂ ತನಗೇ ಕಷ್ಟಕರವಾಗಬಹುದಾದ ಹಠಭಾವ, ಇವುಗಳಿಂದ ಮೆರೆಯುತ್ತಿದ್ದ ಆತನು ಭವ್ಯ ವ್ಯಕ್ತಿಯಾಗಿದ್ದನು. ಜೊತೆಯಲ್ಲಿದ್ದ ಕಿರಿಯವನಲ್ಲಿ ಇದ್ದಂತೆ ಆತನಲ್ಲಿ ಯಾವ ವಿಧವಾದ ಭೋಗ ಸಾಮಗ್ರಿಯೂ ಕಂಡುಬರುತ್ತಿರಲಿಲ್ಲ. ಆತನ ಸರಳ ಸೌಂದರ್ಯವೇ ಒಂದು ಗಂಭೀರ ಭೋಗವಾಗಿತ್ತು.

ಆತನ ಜೊತೆಯಲ್ಲಿದ್ದ ಕಿರಿಯ ತರುಣನಲ್ಲಿ ಅಷ್ಟೇನೂ ವಿಶೇಷ ವ್ಯಕ್ತಿತ್ವವಿರಲಿಲ್ಲ; ಆತನು ಸ್ವಲ್ಪ ಕುಳ್ಳಾಗಿ ದಪ್ಪವಾಗಿ ಸುಖಾಪೇಕ್ಷೆ ಹೆಚ್ಚಾಗಿರುವವನಂತೆ ಕಂಡುಬರುತ್ತಿದ್ದನು. ಆತನೂ ಖಾದಿ ಬಟ್ಟೆಯನ್ನೆ ಹಾಕಿಕೊಂಡಿದ್ದನು; ತಲೆಗೊಂದು ಬಿಳಿಯ ಖಾದಿ ಟೋಪಿ, ಮೈಗೆ ನೀಲಿಬಣ್ಣದ ಕೋಟು, ಕೋಟಿನ ಕಿರುಕಿಸೆಯಲ್ಲಿ ಒಂದು ಫೌಂಟನ್ ಪೆನ್, ಕೈಯಲ್ಲೊಂದು ಕೈಗಡಿಯಾರ, ಹೆಚ್ಚು ಎನ್ನಬಹುದಾದ ಅಂಚಿನ ಖಾದಿ ಪಂಚೆ. ವದನವು ಸರಳತೆ ಸೌಶೀಲ್ಯಗಳಿಂದ ಕೂಡಿ ಮುಗ್ಧವಾಗಿತ್ತು. ದೃಢ ಮನಸ್ಸಾಗಲಿ ದಕ್ಷತೆಯಾಗಲಿ ಮೂರ್ತಿಯಲ್ಲಿ ತೋರಿಬರುತ್ತಿರಲಿಲ್ಲ.

ಅಂತಹ ಬಿಸಿಲಿನಲ್ಲಿ ತೀರ್ಥಹಳ್ಳಿಯ ಕಲ್ಲುಸಾರದ ಮೇಲೆ ನಡೆಯುವುದು ಬಹು ಪ್ರಯಾಸ. ಆದರೆ ಆ ಇಬ್ಬರ ಕಾಲುಗಳಲ್ಲಿಯೂ ಮೆಟ್ಟುಗಳಿದ್ದುದರಿಂದ ನೋಯದೆ ನಡೆಯಬಹುದಾಗಿತ್ತು. ಕಿರಿಯವನು ಅತ್ತ ಇತ್ತ ನೋಡದೆ ಹಾದಿ ನಡೆಯುತ್ತಿದ್ದನು. ಹಿರಿಯವನು ಮಾತ್ರ ವೇಗವಾಗಿ ನಡೆಯುತ್ತಲೇ ಕ್ಷಣ ಕ್ಷಣಕ್ಕೂ  ಕತ್ತೆತ್ತಿ ಸುತ್ತಲೂ ಬಯಕೆನೋಟವನ್ನಟ್ಟಿ ಸಂತೋಷಪಡುವಂತೆ ತೋರುತ್ತಿತ್ತು. ಹೊಳೆಯ ನಡುವೆ ಇರುವ ರಾಮತೀರ್ಥ ಸಮೀಪವಾಗಲು ಆತನ ನಡಿಗೆ ನಿಧಾನವಾಗಿ ಕಡೆಗೆ ನಿಶ್ಚಲವಾಯಿತು. ತಾನು ಕೆಲವು ವರ್ಷಗಳ ಹಿಂದೆ ತೀರ್ಥಹಳ್ಳಯಲ್ಲಿ ಓದುತ್ತಿದ್ದಾಗ ಆ ತುಂಗಾ ನದಿಯೂ ಆ ರಾಮತೀರ್ಥವೂ ನಿತ್ಯಯಾತ್ರಾಸ್ಥಾನಗಳಾಗಿದ್ದುದು ಆತನ ನೆನಪಿಗೆ ಬಂದಿತು. ಕೆಲವು ಹುಡುಗರು ಅಲ್ಲಿ ಈಜುತ್ತಿದ್ದುದನ್ನು ನೋಡಿ ತಾನೂ ಹಾಗೆಯೇ ಈಜಾಡಿದ್ದುದನ್ನು ನೆನೆದನು. ಸನ್ನಿವೇಶವೇನೊ ಹಿಂದೆ ಇದ್ದಂತೆಯೇ ಕಂಡಿತು. ಆದರೆ ತಾನು ಮಾತ್ರ ಹಿಂದೆ ಇದ್ದಂತಿರಲಿಲ್ಲ. ಪರ್ವತಗಳ ಸಂದಿಯಲ್ಲಿ ಕಾಣಿಸಿಕೊಂಡು ಹರಿದು ಬಂದ ಹೊಳೆ ಅಂದಿನಂತೆಯೆ ಇಂದೂ ಪರ್ವತಗಳ ಇಡುಕಿನಲ್ಲಿ ಕಣ್ಮರೆಯಾಗುತ್ತಿತ್ತು. ತುಂಗೆಯ ಇಕ್ಕೆಲದ ದಡಗಳಲ್ಲಿ ಅಂದಿನಂತೆಯೆ ಅರಣ್ಯಗಳು ಮಾಲೆ ಮಾಲೆಯಾಗಿನಿಂತಿದ್ದವು. ಆಗಿದ್ದ ಮರಗಳಲ್ಲಿ ಈಗಲೂ ಅನೇಕವಿವೆ! ನದಿಯ ನಡುವೆ ಮಲಗಿದ್ದ ಆ ಹೆಬ್ಬಂಡೆಯ ರಾಶಿಗಳೂ ಈಗಲೂ ಅಂದಿನಂತೆಯೆ ಇವೆ. ಒಂದು ಮಾತ್ರ ಪ್ರವಾಹದಲ್ಲಿ ಉರುಳಿ ಬಿದ್ದಿದೆ. ಬಂಡೆಯಿಮದ ಬಂಡೆಗೆ ಧುಮುಕುತ್ತಿದ್ದ ಜಲರಾಶಿ ಸಂಮಥಿತವಾಗಿ ನೊರೆನೊರೆಯಾಗಿ ತುಂತುರು ತುಂತುರಾಗಿ ಘೂರ್ಣಾಯಮಾನವಾಗಿ, ಕಡೆಗೆ ತೆರೆತೆರೆಯಾಗಿ, ಬಿಸಿಲಿನಲ್ಲಿ ಮಿರುಗಿ ಮಿರುಗಿ ಅಂದಿನಂತೆಯೆ ಇಂದೂ ಲೀಲಾ ಮಗ್ನವಾಗಿರುವಂತೆ ತೋರುತ್ತಿದೆ.

ಅಣ್ಣನು ಬಾರದೆ ನಿಂತುದನ್ನು ಕಂಡು ತಮ್ಮನು ಕೂಗಿದನು. ಅಣ್ಣನು ಎಚ್ಚತ್ತವನಂತೆ ಫಕ್ಕನೆ ತಿರುಗಿ ನೋಡಿ ಮುಂದೆ ಸಾಗಿದನು. ಮುಗುಳಾದ ಕಿರುನಗೆಯೊಂದು ಆತನ ತುಟಿಗಳಲ್ಲಿ ಕೊಂಕುತೋರಿ ಮರೆಯಾಯಿತು. ಎಷ್ಟು ಪರವಶವಾಗಿದ್ದ ಎಂದು!

ಹಿರಿಯವನು ಹತ್ತಿರ ಬರಲು ಕಿರಿಯವನು” ಏನು ನೋಡುತ್ತಿದ್ದೆಪ್ಪಾ ಈ ಬಿಸಿನಲ್ಲಿ ?”ಎಂದನು.

“ಹುಡುಗರು ಈಜುತ್ತಿದ್ದರು. ಅದನ್ನು ನೋಡಿ ನಾವು ಈಜುತ್ತಿದ್ದುದನ್ನು ನೆನೆದು ಹಾಗೆಯೆ ನಿಂತುಬಿಟ್ಟೆ. ಅವರು ಈಗಲೂ ನಾವು ಆಡಿದ ಕಲ್ಲಾಟವನ್ನೇ ಆಡುತ್ತಿದ್ದಾರೆ.”

“ಬಾ ಹೋಗೋಣ, ಹೊತ್ತಾಯಿತು. ಸದ್ಯ ಮನೆ ಸೇರಿದರೆ ಸಾಕಾಗಿದೆ…. ಹೋಗೋಣವೇನು?”

ಇಬ್ಬರೂ ತಾವು ನಡೆ‌ದುಬಂದ ಕಲ್ಲುಸಾರದ ದಾರಿಯನ್ನೇ ಹೊಳೆಯ ಆಚೆಯ ದಡದವರೆಗೂ ನೋಡಿದರು. ಅವರು ಸುಮಾರು ಎರಡು ಫರ್ಲಾಂಗು ನಡೆದುಬಂದಿದ್ದರು. ಕಲ್ಲುಸಾರ ಇನ್ನೂ ಒಂದೂವರೆ ಫರ್ಲಾಂಗು ಇತ್ತು.

ತಮ್ಮನು ಮುನಿಸಿನಿಂದ” ಅವರು ಇನ್ನೂ ಏನು ಮಾಡುತ್ತಿದ್ದಾರೆ? ಎರಡು ಟ್ರಂಕು ಹೊತ್ತುಕೊಂಡು ಬರುವುದಕ್ಕೆ ಎಷ್ಟು ಹೊತ್ತು?” ಎಂದನು.

ಅಣ್ಣನು “ಪೇಟೆಯಲ್ಲಿ ಏನಾದರೂ ಕೆಲಸವಿತ್ತೋ ಏನೋ?” ಎಂದನು. ಇಬ್ಬರೂ ಮತ್ತೆ ಬೇಗ ಬೇಗನೆ ನಡೆದರು.

ತಮ್ಮನು “ಕೆಲಸವೇನು? ಹೋಟಲಿಗೆ ಹೋದರೋ ಏನೋ? ಆ ಪುಟ್ಟಣ್ಣ ಹೋದಲ್ಲಿಯೇ ಹೀಗೆ” ಎಂದನು.

ಮತ್ತೆ ಅರ್ಧ ಫರ್ಲಾಂಗು ನಡೆದ ತರುವಾಯ ಹಿರಿಯವನು ಹಿಂತಿರುಗಿ ನೋಡಿ ” ಓ ಅಲ್ಲಿ ಬರುತ್ತಿದ್ದಾರೆ” ಎಂದನು.

ತಮ್ಮನೂ ತಿರುಗಿ ನೋಡಿ “ಅದು ಯಾರದು! ಇನ್ನೊಬ್ಬರು ಇದ್ದಾರಲ್ಲ? ಪೇಟದವರು!” ಎಂದನು.

“ಯಾರೋ ಏನೋ ದೂರಕ್ಕೆ ಗೊತ್ತಾಗುವುದಿಲ್ಲ.”

ಇಬ್ಬರೂ ನದಿಯ ಕಲ್ಲುಸಾರವನ್ನು ದಾಟಿ, ತರುನಿಬಿಡವಾಗಿದ್ದ ದಡವನ್ನು ಸೇರಿ. ಮುಂದೆ ನಡೆದರು. ಮರದ ನೆಳಲು ತಿಳಿಗೊಳದಂತೆ ತಂಪಾಗಿತ್ತು. ಕುರುವಳ್ಳಿಯ ಅರಳಿಕಟ್ಟೆಯ ಬುಡದಲ್ಲಿ ಅವರ ಮನೆಯ ಕಮಾನು ಗಾಡಿ ನಿಂತಿತ್ತು. ನೊಗಕ್ಕೆ ಕಟ್ಟಿದ್ದ ಎತ್ತುಗಳೆರಡೂ ಮಲಗಿ ಅರೆಗಣ್ಣು ಮಾಡಿಕೊಂಡು ಮೆಲುಕು ಹಾಕುತ್ತಿದ್ದವು. ಆಗಾಗ ಹಾರಿಬಂದು ಮೈಮೇಲೆ ಕೂರುತ್ತಿದ್ದ ನೊಣಗಳನ್ನು ಬಾಲದಿಂದ ಅಟ್ಟಿಕೊಳ್ಳುತ್ತಿದ್ದವು. ಕೆಲವು ಸಾರಿ ಕುತ್ತಿಗೆಯ ಬುಡದಲ್ಲಿಯೂ ತಲೆಯಮೇಲೆಯೂ ಕೂರುತ್ತಿದ್ದ ನೊಣಗಳನ್ನು ತಲೆಯಲ್ಲಾಡಿಸಿ ಅಟ್ಟಿಕೊಳ್ಳುವಾಗ ಗಂಟೆಯ ಸರವು ಹತ್ತಾರು ಗಾನದ ಹನಿಗಳನ್ನು ಸೂಸಿ ಮತ್ತೆ ನಿಃಶಬ್ದವಾಗುತ್ತಿತ್ತು. ಅವುಗಳಲ್ಲಿ ಒಂದು ಎತ್ತು ಕಪ್ಪಾಗಿತ್ತು; ಮತ್ತೊಂದು ಬೂದು ಬಣ್ಣದ್ದು. ಇಬ್ಬರೂ ಗಾಡಿಯ ಬುಡಕ್ಕೆ ಹೋದಾಗ ಕಪ್ಪು ಎತ್ತು ಗಂಟೆಯ ಸರವನ್ನು ಗಾನಗೈಯುತ್ತ ಎದ್ದು ನಿಂತಿತು. ಹಿರಿಯವನು ಸ್ವಲ್ಪ ಹಿಂದಕ್ಕೆ ಸರಿದು” ರಾಮೂ, ಮುಂದೆ ಹೋಗಬೇಡ. ಎಲ್ಲಿಯಾದರೂ ಹಾದುಬಿಟ್ಟರೆ ಕಷ್ಟ! ಅವರು ಬಂದಮೇಲೆಯೇ ಗಾಡಿಗೆ ಹತ್ತಿದರಾಯಿತು.” ಎಂದು, ತನ್ನ ಭಯಕ್ಕೆ ತಾನೆ ಮುಗುಳು ನಕ್ಕನು.

ಕಿರಿಯವನು “ಸರಿ, ನಾವೇನು ಹೊಸಬರೇನು ಅದಕ್ಕೆ? ಎತ್ತಾದರೂ ಗುರುತು ಸಿಕ್ಕುವುದಿಲ್ಲವೇನು?” ಎಂದು ಮುಂದೆ ಹೋಗಿ ಮಲಗಿದ್ದ ಎತ್ತಿನ ಬೆನ್ನನ್ನು ಚಪ್ಪರಿಸಿ ತಟ್ಟಿ “ನಂದೀ, ಏಳು” ಎಂದನು.

ಆ ಸಾಧುಪ್ರಾಣಿ ಎದ್ದುನಿಂತು ಆಗಂತುಕನನ್ನು ನೋಡಿತು. ಅದರ ಕಣ್ಣುಗಳಲ್ಲಿ ಯಾವ ಜ್ಞಾನದ ಅಥವಾ ಅಜ್ಞಾನದ ಸುಳಿವೂ ಇರದಿದ್ದರೂ ಕಿರಿಯವನು ತನ್ನ ಗುರುತು ಅದಕ್ಕೆ  ಸಿಕ್ಕಿತೆಂದು ಊಹಿಸಿಕೊಂಡು ಸ್ವಲ್ಪ ಹಿಗ್ಗಿದನು. ಅದರ ಗಂಗೆದೊವಲನ್ನು ನೀವಿ ಉಪಚಾರಮಾಡಿ, ಮತ್ತೊಂದು ಎತ್ತಿನ ಬಳಿಗೆ ಹೋಗುವಷ್ಟರಲ್ಲಿ ಅದು ಉದ್ವೇಗದಿಂದ ಕುಣಿದಾಡಿತು. ತಮ್ಮನು ಹಿಂದಕ್ಕೆ ನೆಗೆದುದನ್ನು ಕಂಡು ಅಣ್ಣನು ಗಹಗಹಿಸಿ ನಕ್ಕು” ನಾನು ಹೇಳಲಿಲ್ಲವೇನು ನಿನಗೆ?” ಎಂದನು

ತಮ್ಮನು ಸ್ವಲ್ಪ ನಾಚಿ. ಕೋಪದಿಮದ ಕರಿಯ ಎತ್ತನ್ನು ನೋಡುತ್ತ” ಆ ಹಾಳು ಲಚ್ಚ, ಅದರ ಸ್ವಭಾವ ಎಲ್ಲಿ ಬಿಟ್ಟೀತು? ಹೊಸದಾಗಿ ತಂದಾಗ ಗಾಡಿಯವನನ್ನೇ ತಿವಿಯಲಿಲ್ಲವೇನು?” ಎನ್ನುತ್ತ ಅಣ್ಣನ ಬಳಿಗೆ ಬಂದನು.

ಅಂತೂ ಅವರಿಬ್ಬರಿಗೂ ಆ ಗಾಡಿ ಮತ್ತು ಎತ್ತುಗಳನ್ನು ನೋಡಿ, ಮನೆಯವರನ್ನೇ ಕಂಡಂತಾಗಿ ಸಂತೋಷಗೊಂಡರು. ಅವುಗಳನ್ನು ನೋಡಿದ ಅವರ ಮನಸ್ಸಿನಿಂದ ಮೈಸೂರು, ಚಾಮುಂಡಿ ಬೆಟ್ಟ, ಅರಮನೆ, ಕುಕ್ಕನ ಹಳ್ಳಿಯ ಕೆರೆ, ಅಠಾರಾ ಕಚೇರಿ, ಮನೆ, ಕಾಡು, ಕೊಟ್ಟಿಗೆ, ಗದ್ದೆ, ದನಕರು, ತೋಟ, ಕೂಲಿಯಾಳುಗಳು ಮೊದಲಾದವು ಸುಳಿದುವು. ಅಲ್ಲದೆ ತಮ್ಮನ್ನು ಮನೆಗೊಯ್ಯುವ ಪ್ರಾಣಿಗಳ ವಿಚಾರದಲ್ಲಿ ಅವರಿಗೆ ಪ್ರೀತಿಯಲ್ಲದೆ ಬೇರೆ ಯಾವ ಭಾವಕ್ಕೂ ಸ್ಥಳವಿರಲಿಲ್ಲ.

ಲಚ್ಚನ ತಂಟೆಗೆ ಹೋಗುವುದು ಅಪಾಯಕರವೆಂದು ತಿಳಿದ ರಾಮಯ್ಯನು ಪುನಃ ನಂದಿಯ ಬಳಿಗೆ ಹೋಗಿ ಅದನ್ನು ನಾನಾ ವಿಧವಾಗಿ ಮುದ್ದಿ ಸತೊಡಗಿದನು. ಮೇಲೆ ಮರಗಳಲ್ಲಿ ಚಿಲಿಮಿಲಿಗುಟ್ಟುತ್ತ ಕೊಂಬೆಯಿಂದ ಕೊಂಬೆಗೆ ಕುಪ್ಪಳಿಸುತ್ತಿದ್ದ ಹಕ್ಕಿಗಳ ಕಡೆಗೂ, ಎದುರಿಗೆ ಕಾಣುತ್ತಿದ್ದ ಹೊಳೆಯಾಚೆಯ ಪುರದ ಮನೆಮಂದಿರಗಳ ಕಡೆಗೂ, ಮರಗಳ ವಿತಾನದ ಸಂದಿ ಸಂದಿಗಳಲ್ಲಿ ನೆತ್ತಿಯ ಮೇಲೆ ಕಾಣುತ್ತಿದ್ದ ನೀಲಾಕಾಶದ ಅಂತರ್ಮುಖಿಯಾಗಿ ಕುಳಿತನು. ಆತನು ಮನಸ್ಸಿನಲ್ಲಿ ಅನೇಕ ಆಲೋಚನೆಗಳೂ ಚಿತ್ತಗಳೂ ಸತತವಾಗಿ ಮಿಂಚುತ್ತಿದ್ದವು. ತನ್ನ ವಿದ್ಯೆ, ತನ್ನ ಧ್ಯೇಯ, ತನಗೆ ಬರಲಿರುವ ಅಡಚಣೆಗಳು, ವಿಧವೆಯಾಗಿದ್ದ ತನ್ನ ತಾಯಿ, ತನ್ನ ಮತ್ತು ತನ್ನ ತಾಯಿಯ ಮೇಲೆ ತನ್ನ ಚಿಕ್ಕಪ್ಪನಿಗಿರುವ ಒಂದು ವಿಧವಾದ ಹೊಟ್ಟೆಕಿಚ್ಚು ಇತ್ಯಾದಿ ವಿಷಯಗಳು ಮನೋರಾಜ್ಯದಲ್ಲಿ ಪ್ರವಹಿಸುತ್ತಿರಲು ಮರದಮೇಲೆ ಕೋಗಿಲೆಯೊಂದು ” ಕುಹೂ ಕುಹೂ ” ಎಂದು ಕೂಗಿತು. ಹೂವಯ್ಯ ಒಂದು ಜಗತ್ತಿನಿಂದ ಮತ್ತೊಂದು ಜಗತ್ತಿಗೆ ಬಿದ್ದವನಂತೆ ಎಚ್ಚತ್ತು ನೋಡಿದನು. ಕೋಗಿಲೆ ಕಣ್ಣಿಗೆ ಬಿತ್ತು, ಹಸುರು ಎಲೆಗಳ ಮಧ್ಯೆ ಕರ್ರಗೆ ಕುಳಿತು ಕೂಗುತ್ತಿತ್ತು. ಆ ಕೂಗು ಹೂವಯ್ಯನಿಗೆ” ನನ್ನಂತಾಗು, ನನ್ನಂತಾಗು” ಎನ್ನುವಂತಿತ್ತು. ಅಷ್ಟರಲ್ಲಿ ದೂರದ ಮನೆಯೊಂದರಲ್ಲಿ ಎರಡು ಬೀದಿನಾಯಿಗಳು ಎಂಜಲೆಲೆಗಾಗಿ ಕಚ್ಚಾಡಿ ಗಲಭೇ ಎಬ್ಬಿಸಿದುವು. ಒಂದು ಮತ್ತೊಂದನ್ನು ಚೆನ್ನಾಗಿ ಮುರಿದು ಓಡಿಸಿತು. ಅದು ಊರೆಲ್ಲಾ ಎಚ್ಚರವಾಗುವಂತೆ ಕುಂಯ್ಯೋ ಎಂದು ಕಿರುಚುತ್ತ ಹೋಯಿತು.

ರಾಮಯ್ಯ ಹಿಂತಿರುಗಿ ನೋಡಿ ಸ್ವಲ್ಪ ಗಟ್ಟಿಯಾದ ಅಧಿಕಾರವಾಣಿಯಿಂದ “ಯಾಕೆ ಇಷ್ಟು ಹೊತ್ತಾಯಿತೋ?” ಎಂದನು.

ಹೂವಯ್ಯನೂ ತಿರುಗಿ ನೋಡಿದನು. ಗಾಡಿಯಾಳು ನಿಂಗ ತನ್ನ ಟ್ರಂಕನ್ನು ತಲೆಯ ಮೇಲೆ ಹೊರಲಾರದೆ ಹೊತ್ತುಕೊಂಡು ಬರುತ್ತಿದ್ದನು. ಅವನ ಮುಖದಲ್ಲಿ ಬೆವರುಹನಿ ಪೋಣಿಸಿತ್ತು. ತಲೆಗೆ ಸುತ್ತಿದ್ದ ಕೆಂಪುವಸ್ತ್ರ ಒಂದು ಕಡೆಗೆ ಸರಿದುಹೋಗಿ ಜೋಲಾಡುತ್ತಿತ್ತು. ಅವನ ಜುಟ್ಟು ಸಿಕ್ಕುಸಿಕ್ಕಾಗಿ ಕೆದರಿ ಹೋಗಿತ್ತು. ಅವನು ಹಾಕಿಕೊಂಡಿದ್ದ. ಯಾರೋ ದಾನಮಾಡಿದ್ದ ಕೋಟು ಗುಂಡಿ ಇಲ್ಲದುದರಿಂದ ಬಾಯ್ದೆರೆದುಕೊಂಡು ಅವನ  ಡೊಳ್ಳು ಹೊಟ್ಟೆಯನ್ನು ಪ್ರದರ್ಶಿಸುತ್ತಿತ್ತು. ಆ ಡೊಳ್ಳು ಬೊಜ್ಜಿನಿಂದಾದುದಾಗಿರಲಿಲ್ಲ. ಹಲಸಿನಕಾಯಿ ದಪ್ಪದ ಜ್ವರಗಡ್ಡೆಯ ಮಹಿಮೆಯಿಂದಾದುದಾಗಿತ್ತು. ಅವನು ಮೊಳಕಾಲಿನವರೆಗೆ ಸುತ್ತಿದ್ದ ಪಂಚೆ ಕೊಳೆಯ ಬೀಡಾಗಿತ್ತು. ಒಂದು ಕಾಲಿಗೆ ಮಾತ್ರ ಬೆಳ್ಳಿಯಿಂದ ಮಾಡಿದ ದೇವರ ಸರಿಗೆಬಳೆ ಹಾಕಿದ್ದನು. ಗಡ್ಡದ ಕೂದಲು ಅರ್ಧ ಅಂಗುಲ ಬೆಳೆದಿತ್ತು. ಹೊಟ್ಟೆಯನ್ನು ಬೆಟ್ಟವೆಂದು ಭಾವಿಸಿದರೆ ಎದೆ ಕಣಿವೆಯಾಗಿತ್ತು. ಅವನನ್ನು ನೋಡಿದರೆ ಎಂತಹ ಕ್ರೂರಿಯೂ ಕೂಡ ಕರಗಿ ಹೋಗುವಂತಿದ್ದನು. ಟ್ರಂಕಿನ ಭಾರದಿಮದ ಅವನ ಕೀಲುಗಳೆಲ್ಲ ಎಲ್ಲಿ ಕಳಚಿ ಬೀಳುವುವೋ ಎಂಬಂತೆ ಏದುತ್ತ ನಡೆದುಬರುತ್ತಿದ್ದನು. ರಾಮಯ್ಯನು ಕೇಳಿದ ಪ್ರಶ್ನೆಗೆ ಉತ್ತರ ಕೊಡಲೂ ಅವನಿಂದ ಸಾಧ್ಯವಾಗಲಿಲ್ಲ. ಹೂವಯ್ಯನ ಸಹಾಯದಿಂದ ಟ್ರಂಕನ್ನು ಗಾಡಿಗಿಟ್ಟ ಮೇಲೆ ಅವನು ನಿಡುಸುಯ್ಯುತ್ತ ತನ್ನ ತಲೆಯ ಕೆಂಪುವಸ್ತ್ರವನ್ನು ಬಿಚ್ಚಿ ಮುಖದ ಬೆವರನ್ನು ಒರಸಿ, ಅದನ್ನು ಗಾಡಿಯ ಕತ್ತರಿಯ ಮೇಲೆ ಎಸೆದನು. ಅವನನ್ನು ಕಂಡರೆ ಹಳ್ಳಿಯ ದುಃಖ ರೋಗ ದಾರಿದ್ರ್ಯಗಳೆಲ್ಲ ಮೈವೆತ್ತಂತೆ ತೋರುತ್ತಿತ್ತು.

ರಾಮಯ್ಯನು “ಅವನೆಲ್ಲಿ ಹೋದನೋ? ಯಾಕೋ ಇಷ್ಟು ಹೊತ್ತಾಯಿತು?” ಎಂದನು.

“ಎಂಥದು ಹೇಳ್ಲಿ ಹೇಳಿ, ಈ ಬಿಸಿಲಾಗೆ ಕಾಲೇ ಬರಾದಿಲ್ಲ. ಅಲ್ರಯ್ಯಾ, ಈ ಟ್ರಂಕಾಗೆ ಏನಿಟ್ಟೀರಿ? ಕಬ್ಬಿಣಾ ನೆಂಗ್ದಂಗೆ ಆಗ್ತದೆ!”

“ಪುಸ್ತಕ ಕಣೋ!”

“ಕಾಗ್ದ ಕೂಡ ಇಷ್ಟು ಭಾರಾನ? ಇದನ್ನೆಲ್ಲಾ ಹ್ಯಾಂಗೋದುತ್ತೀರೋ ಏನೋ? ಒಂದು ಗಳಿಗೆ ಹೊರಾಕಾಗಲ್ಲಾ ನನ್ನಿಂದ.”

ರಾಮಯ್ಯನಿಗೆ ನಗು ಬಂದು ಹೂವಯ್ಯನ ಕಡೆ ನೋಡಿದನು. ಅವನೂ ನಗುತ್ತಿದ್ದನು.

ಅಷ್ಟರಲ್ಲಿ ನಿಂಗ ಹೊಳೆಯಿಂದ ಬರುವ ಕಿರುದಾರಿಯ ಕಡೆಗೆ ನೋಡುತ್ತ ” ಅಕೊಳ್ರಪ್ಪಾ ಬಂದ್ರಲ್ಲಾ!” ಎಂದನು.

ಪುಟ್ಟಣ್ಣನು ಮತ್ತೊಂದು ಟ್ರಂಕನ್ನು ಕೈಯಲ್ಲಿ ಎತ್ತಿಕೊಂಡು ಸಾವಕಾಶವಾಗಿ ಬರುತ್ತಿದ್ದನು. ಎಣ್ಣೆಗಪ್ಪಿನ ಮನುಷ್ಯ. ತಲೆಯಲ್ಲೊಂದು ಕರಿಯ ಹಾಸನದ ಟೋಪಿ. ಅದರೊಳಗೆ ಕ್ರಾಪಾಗಲಿ ಜುಟ್ಟಾಗಲಿ ಯಾವುದೂ ಇದ್ದಂತೆ ತೋರುತ್ತಿರಲಿಲ್ಲ. ಹುಡುಕಿದ್ದರೆ ಬೇಕಾದಷ್ಟು ಎಣ್ಣೆಜಿಡ್ಡು ಸಿಕ್ಕುತ್ತಿತ್ತು! ಗುಂಡಿಗಳಿದ್ದರೂ ಸೆಕೆಗಾಗಿ ತೆರೆದಿದ್ದ ಅಂಗಿ ಒಳಗಿದ್ದ ಕೊಳಕು ಷರ್ಟನ್ನು ಪ್ರದರ್ಶಿಸುತ್ತಿತ್ತು. ಆ ಷರ್ಟು ಹೊಲಿಸುವಾಗ ಜಾತಿಯಲ್ಲಿ ಬಿಳಿಯದಾಗಿದ್ದರೂ ಕ್ರಮೇಣ ಜಾತಿಗಟ್ಟು ಬಿಳಿಯದೂ ಅಲ್ಲ ಕಪ್ಪೂ ಅಲ್ಲವಾಗಿತ್ತು. ಅವನು ಸುತ್ತಿದ್ದ ಅಡ್ಡ ಪಂಚೆಯೇನೋ ಕಾಲಿನ ತುದಿಯವರೆಗೂ ಇತ್ತು. ಆದರೆ ಅದೂ ಬಿಳಿದು ಎನಿಸಿಕೊಳ್ಳಲು ಪ್ರಯತ್ನಪಡುತ್ತಿದ್ದಿತೇ ಹೊರತು ಬಿಳಿಯದಾಗಿರಲಿಲ್ಲ. ಒಟ್ಟಿನಲ್ಲಿ ಅವನನ್ನು ನೋಡಿದರೆ ಉಡುಪಿನಲ್ಲಾಗಲಿ ಮುಖಭಂಗಿ ರೀತಿ ನೀತಿಗಳಲ್ಲಾಗಲಿ ಯಾರೂ ಸೇವಕನೆಂದು ಹೇಳುವಹಾಗಿರಲಿಲ್ಲ. ಮುಖವು ಕಪ್ಪಗೆ ಗಟ್ಟಿಮುಟ್ಟಾಗಿದ್ದು ಆ ದಿನ ತಾನೇ ಕ್ಷೌರಮಾಡಿಕೊಂಡಿತ್ತು. ಎದೆ ಅಗಲವಾಗಿ, ಮೈಕಟ್ಟು ಬಲವಾಗಿ, ಒಂದು ರೀತಿಯಲ್ಲಿ ಪ್ರತಿಭಟನಾ ಮೂರ್ತಿಯಾಗಿ ಕಾಣುತ್ತಿದ್ದನು. ಅವನನ್ನು ನೋಡಿದರೆ ತ್ರಿಕೋಣದ ನೆನಪಾಗುತ್ತಿದ್ದಿತೆ ಹೊರತು ವೃತ್ತದ ನೆನಪಾಗುತ್ತಿರಲಿಲ್ಲ. ಆದರೆ ಸ್ವಾಭಾವದಲ್ಲಿ ಚಕ್ರದಂತೆ ಉರುಳಿಕೊಂಡು ಹೋಗುವವನೇ ಹೊರತು ತ್ರಿಕೋಣದಂತೆ ಅಡಿಗಡಿಗೆ ಬೀಳುವಂತಾಗಿರಲಿಲ್ಲ. ಅವನ ವಯಸ್ಸು ಸುಮಾರು ಮೂವತೈದು ಎಂದು ಊಹಿಸಬಹುದಾಗಿತ್ತು.

ಹೂವಯ್ಯನನ್ನಾಗಲಿ ರಾಮಯ್ಯನನ್ನಾಗಲಿ “ಪುಟ್ಟಣ್ಣ ಯಾರು?” ಎಂದ ಕೇಳಿದ್ದರೆ ಹೇಳಲು ಅವರಿಗೆ ಸ್ವಲ್ಪ ಕಷ್ಟವೇ ಆಗುತ್ತಿತ್ತು. ಒಂದು ವೇಳೆ ಹೇಳಿದ್ದರೆ ಬಹುಶಃ “ನಮ್ಮ ಮನೆಯಲ್ಲಿದ್ದಾನೆ.” ಅಥವಾ “ನಮ್ಮ ಜಾತಿ” ಎಂದು ಹೇಳುತ್ತಿದ್ದರೋ ಏನೋ? ಏಕೆಂದರೆ ಅವನು ಬಂಧುವೂ ಆಗಿರಲಿಲ್ಲ; ಸೇವಕನೂ ಆಗಿರಲಿಲ್ಲ. ಹೊರಗಿನವರು ಯಾರಾದರೂ ಕೇಳಿದ್ದರೆ ಬಹುಶಃ “ಅವನೊಬ್ಬ ಗಟ್ಟಿಗನಾದ ಬೇಟೆಗಾರ” ಎನ್ನಬಹುದಾಗಿತ್ತು. ಅವನಿಗೆ ಕೋವಿ ಕೆಲಸ, ಕಬ್ಬಿಣದ ಕೆಲಸ, ಬಡಗಿ ಕೆಲಸ, ಬೆತ್ತದ ಕೆಲಸ, ಇತ್ಯಾದಿ ಹತ್ತಾರು ಕಸಬುಗಳು ತಿಳಿದಿದ್ದುವು. ಆದರೆ ಯಾವುದನ್ನೂ ಸಂಪಾದನೆಗಾಗಿ ಉಪಯೋಗಿಸಿಕೊಂಡವನೇ ಅಲ್ಲ. ಆತನಿಗೆ ದುಡ್ಡು ಬೇಡವಾಗಿತ್ತು ಎಂದಲ್ಲ; ಅವನೊಂದು ತರಹದ ವಿರಾಮ ಮೂರ್ತಿ. ಕಠಿಣವಾಗಿ ಮಾತಾಡುವವರು ಅವನನ್ನು ಶುದ್ಧ ಸೋಮಾರಿ ಎಂದೂ ಕರೆಯುತ್ತಿದ್ದರು. ಅವನಿಗೆ ಮದುವೆಯಾಗಿರಲಿಲ್ಲ. ಮನೆ ಮಠ ಗದ್ದೆ ಗಿದ್ದೆ ಒಂದೂ ಇರಲಿಲ್ಲ. ಹೂವಯ್ಯನು ಅವನನ್ನು ವಿನೋದಕ್ಕಾಗಿ ” ಕಾಡು ಫಕೀರ” ಎಂದು ಕರೆಯುತ್ತಿದ್ದನು. ಹೂವಯ್ಯ ರಾಮಯ್ಯರಿಗೆ…ಹೆಚ್ಚಾಗಿ ಹೂವಯ್ಯನಿಗೆ ರಜಾ ಕಾಲದಲ್ಲಿ ಮನೆಗೆ ಬಂದಾಗಲೆಲ್ಲ ಪುಟ್ಟಣ್ಣನೆ ಬೇಟೆಯಲ್ಲಿ ಸಹಕಾರಿಯಾಗುತ್ತಿದ್ದನು. ಅವನು ಕಾಣದ ಕಾಡಿರಲಿಲ್ಲ; ಹೊಡೆಯದ ಮೃಗವಿರಲಿಲ್ಲ; ಮಾಡದ ಸಾಹಸವಿರಲಿಲ್ಲ.

ಪುಟ್ಟಣ್ಣನು ಸಮೀಪನಾಗುತ್ತಲೆ ಹೂವಯ್ಯನು ನಗುನಗುತ್ತ ” ಏನು ಮಾಡುತ್ತಾ ಕೂತಿದ್ದೆಯೋ ಹೊಳೆಯ ಮಧ್ಯೆ ಇಷ್ಟು ಹೊತ್ತು? ನಾವಿನ್ನು ಮನೆ ಸೇರುವುದು ಯಾವಾಗ? ಈಗಾಗಲೆ ಹನ್ನೆರಡು ಗಂಟೆ ಹೊಡೆದು ಹೋಯ್ತು. ಹೊಟ್ಟೆಗೆ ಬೇರೆ ಬೆಂಕಿ ಬಿದ್ದಂತಾಗಿದೆ” ಎಂದನು.

ಪುಟ್ಟಣ್ಣ ಹಲ್ಲು ಬಿಡುತ್ತ “ಅದಕ್ಕೇನು? ದಾರಿಮೇಲೆ ನೆಂಟರು ಮನೆಗಳಿಗೆ ಬರಗಾಲವೇನು ನಿಮಗೆ?” ಎಂದನು.

ಹೂವಯ್ಯ “ಸರಿ. ಸರಿ; ನಿನಗೇನು? ಕಾಡು ಫಕೀರ! ಎಲ್ಲಂದರಲ್ಲಿ ಕೂಳು ತಿಂದು ಮಲಗಿಬಿಡುತ್ತೀಯ” ಎಂದು, ರಾಮಯ್ಯನ ಕಡೆಗೆ ತಿರುಗೆ “ಹೌದು, ರಾಮು, ದಾರಿಯಲ್ಲಿ ಮುತ್ತಳ್ಳಿ ಸಿಕ್ಕುತ್ತದೆ. ಅಲ್ಲಿ ಊಟ ಕತ್ತರಿಸಿಕೊಂಡೆ ಹೋಗಿಬಿಡೋಣ”

ಎಂದನು.

ರಾಮಯ್ಯ “ಯಾರಾದರೂ ಸಿಕ್ಕಿ ಕರೆದರೆ ಹೋಗೋಣ. ಇಲ್ಲದಿದ್ದರೆ ನೆಟ್ಟಗೆ ಮನೆಗೆ ಹೋಗಿಬಿಡೋಣ” ಎಂದು ತನ್ನ ಕೈಲಿದ್ದ ಗಡಿಯಾರವನ್ನು ನೋಡಿಕೊಂಡು ” ಈಗೇನು ಹನ್ನೆರಡು ಗಂಟೆ ಎರಡು ಗಂಟೆಗೆ ಮನೆಗೆ ಹೋಗುತ್ತೇವೆ…. ನಿಂಗಾ, ಗಾಡಿ ಜೋರಾಗಿ ಬಿಡಬೇಕು” ಎಂದನು.

ಎತ್ತುಗಳನ್ನು ನೊಗಕ್ಕೆ ಕಟ್ಟಿ ಆಗಲೇ ಸಿದ್ಧನಾಗಿ ನಿಂತಿದ್ದ ನಿಂಗನ ” ಆಗಲಿ ನನ್ನೊಡೆಯ, ರೈಲು ಹೋದ್ಹಾಂಗೆ ಹೋದರೆ ಸೈಯಲ್ಲಾ! ನಿಮಗ್ಯಾಕೆ? ಗಾಡಿ ಹತ್ತಿ ನಾಗಾಲೋಟ ಓಡಿಸ್ತೀನಿ. ನೋಡಬೈದಂತೆ ಆಮೇಲೆ” ಎಂದು ಎತ್ತಿನ ಭುಜವನ್ನು ಚಪ್ಪರಿಸಿದನು.

“ಮಾರಾಯ, ನಿನ್ನ ರೈಲೂ ಬೇಡ, ಮೋಟಾರೂ ಬೇಡ! ಸದ್ಯ ಗಾಡಿ ಚರಂಡಿಗೆ ಮಗುಚಿಕೊಳ್ಳದಂತೆ ಹೊಡಕೊಂಡು ಹೋಗು. ಏನು ಒಂದು ಅರ್ಧಗಂಟೆ ಹೊತ್ತಾಗಿ ಹೋದರೂ ಚಿಂತೆಯಿಲ್ಲ” ಎಂದು ಹೇಳುತ್ತ ಪುಟ್ಟಣ್ಣನು ಗಾಡಿಯ ಹಿಂಭಾಗದಿಂದ ಟ್ರಂಕನ್ನು ಒಳಗಿಟ್ಟನು. ಮೊದಲು ರಾಮಯ್ಯ; ಆಮೇಲೆ ಹೂವಯ್ಯ, ಕಡೆಗೆ ಪುಟ್ಟಣ್ಣ ಗಾಡಿ ಹತ್ತಿದರು. ನಿಂಗ ಲೊಚಗುಟ್ಟುತ್ತ ಗಾಡಿಯ ಕತ್ತರಿಯ ಮೇಲೆ ನೆಗೆದನು. ಎತ್ತುಗಳು ಕೊರಳ ಕಿರುಗಂಟೆಗಳ ಟಿಂಟಿಣಿಯ ದನಿಯೊಡನೆ ಭರದಿಂದ ಸಾಗಿದುವು. ಗಾಡಿಯ ನೆಳಲು ಕುರುವಳ್ಳಿಯ ಕಿರುಪೇಟೆಯ ಕೆಂಬೂದಿ ಬಣ್ಣದ ಬೀದಿಯಲ್ಲಿ ಗಾಡಿಯ ಅಡಿಯಲ್ಲಿಯೆ ಮಸಿಯ ಮುದ್ದೆಯಾಗಿ ಎತ್ತಿನ ನೆಳಲೊಡನೆ ಸಾಗಿತು.