ಧರ್ಮಸ್ಥಳಕ್ಕೆ ಯಾತ್ರೆ ಹೋಗಿದ್ದವರು ಹಿಂತಿರುಗಿ ಬಂದು ಸುಮಾರು ಒಂದು ತಿಂಗಳು ಮುಗಿದಿತ್ತು. ಮಳೆ ಚೆನ್ನಾಗಿ ಹಿಡಿದು ಹೊಡಿಯುತ್ತಿತ್ತು. ನಾಡೆಲ್ಲ ನಿರ್ಮಲವಾಗಿ ನೆಲ ಹಸುರುಗಟ್ಟಿಹೋಗಿತ್ತು. ಬೇಸಾಯವೂ ಬಹು ವೇಗವಾಗಿ ಮುಂದುವರಿದಿತ್ತು. ಆಳುಕಾಳಿದ್ದವರು ಕೆಲವರು ಆಗಲೇ ಸಸಿನಟ್ಟಿ ಪೂರೈಸಿದ್ದರು. ಸೂರ್ಯನ ದರ್ಶನವೂ ಬಹಳ ಅಪೂರ್ವವಾಗಿತ್ತು.

ಈ ನಡುವೆ ವಾಸು ಕಣ್ಣೀರು ಒರಸಿಕೊಳ್ಳುತ್ತ ತೀರ್ಥಹಳ್ಳಿಗೆ ಓದುವುದಕ್ಕೆ ಹೋಗಿ ಸ್ಕೂಲಿಗೆ ಸೇರಿದ್ದನು.

ಅಪ್ಪ ಬರುತ್ತಾನೆಂದು ನಿರೀಕ್ಷಿಸಿ ನಿರೀಕ್ಷಿಸಿ ಮರುಗುತ್ತಿದ್ದ ಪುಟ್ಟ ಯಾರಿಗೂ ತಿಳಿಯದಂತೆ ಮುತ್ತಳ್ಳಿಗೆ ಹೋಗಿ ಸೀತಮ್ಮನನ್ನು ವಿಚಾರಿಸಿದನು. ನಿಂಗನಿಗೆ ಕಾಯಿಲೆಯಾಗಿ ಆಗುಂಬೆಯ ಆಸ್ಪತ್ರೆಗೆ ಸೇರಿಸಿದ್ದುದು ಸುಳ್ಳೆಂದೂ, ಆಗುಂಬೆಗೆ ಬರಬೇಕಾದ್ರೆ ಮೊದಲೇ ಸೋಮೇಶ್ವರದಲ್ಲಿಯೆ ವಾಂತಿಭೇದಿಯಾಗಿ ತೀರಿಕೊಂಡನೆಂದೂ, ಎಲ್ಲರೂ ಗುಟ್ಟಾಗಿಟ್ಟಿದ್ದ ಆ ಸಂಗತಿಯನ್ನು ತಾನು ಹೇಳಿದೆನೆಂದು ಯಾರೊಡನೆಯೂ ಹೇಳಬಾರದೆಂದೂ ಹೇಳಿ, ಸೀತೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅನಾಥ ಬಾಲಕನನ್ನು ಅಕ್ಕನಂತೆ ಉಪಚರಿಸಿ ತಿಂಡಿಕೊಟ್ಟು ಸಮಾಧಾನಮಾಡಲು ಪ್ರಯತ್ನಿಸಿದಳು. ಆದರೆ ಪುಟ್ಟ ಅಳುತ್ತಲೆ ಮಳೆಗಾಲದ ಸಂಜೆಯ ಮಬ್ಬುಗತ್ತಲೆಯಲ್ಲಿ ಕಾನೂರಿಗೆ ಹಿಂತಿರುಗಿದ್ದನು.

ವಿಕಾರಮುಖದ ಒಕ್ಕಣ್ಣಿನ ಓಬಯ್ಯ ನಿಂಗನ ಬದಲು ಸಂಬಳದವನಾಗಿ ಕಾನೂರಿನಲ್ಲಿಯೆ ನಿಂತಿದ್ದನು.

ಗಂಗೆ ಸೇರೆಗಾರರಿಬ್ಬರೂ ಮತ್ತೆ ತಮ್ಮ ಬಿಡಾರಗಳನ್ನು ತ್ಯಜಿಸಿ, ಕಾನೂರು ಮನೆಯನ್ನೆ ಸೇರಿಬಿಟ್ಟಿದ್ದರು.

ಚಂದ್ರಯ್ಯಗೌಡರು ಬರಬರುತ್ತಾ ಹೆಚ್ಚು ಹೆಚ್ಚುಕೃಶರಾಗಿಯೂ ಸಾಧುವಾಗಿಯೂ ಪರಿಣಮಿಸುತ್ತಿದ್ದರು. ಎರಡನೆಯದಕ್ಕೆ ಮೊದಲನೆಯದೇ ಮುಖ್ಯ ಕಾರಣವಾಗಿತ್ತು. ಗಂಗೆಯ ಪ್ರಸಾದದಿಂದ ಅವರಿಗೆ ಯಾವುದೋ ಒಂದು ರಹಸ್ಯ ರೋಗ ಹಿಡಿದಿತ್ತು. ಅದು ಅವರ ಮೊದಲಿನ ಶಕ್ತಿಯನ್ನೆಲ್ಲ ಶೋಷಿಸಿ, ಉದ್ಧಟತನವನ್ನು ಕೊರೆದು ಮುರಿಯುತ್ತಿತ್ತು. ಅದನ್ನು ನೋಡಿದವರೆಲ್ಲರೂ ಧರ್ಮಸ್ಥಳಕ್ಕೆ ಯಾತ್ರೆ ಹೋಗಿ ಬಂದಮೇಲೆ ಗೌಡರು ಬಹಳ ’ಯತ್ವಾಸ’ ಆಗಿಬಿಟ್ಟಿದ್ದಾರೆ. ಧರ್ಮಿಷ್ಠರಾಗಿದ್ದಾರೆ. ಬಹಳ ಒಳ್ಳೆ ಬುದ್ಧಿ ಬಂದಿದೆ, ರುಸಿಗಳಾಗುತ್ತಿದ್ದಾರೆ ಎಂದು ಮೊದಲಾಗಿ ಮಾತಾಡಿಕೊಳ್ಳುತ್ತಿದ್ದರು.

ರಾಮಯ್ಯನೂ ಯಾತ್ರೆಗೆ ಹೋಗಿಬಂದಮೇಲೆ ಹಸನ್ಮುಖಿಯಾಗಿಯೂ ಆರೋಗ್ಯಶಾಲಿಯಾಗಿಯೂ ಕರ್ತೃತ್ವಶಾಲಿಯಾಗಿಯೂ ಆಗಿದ್ದನು. ಅದಕ್ಕೆ ಪ್ರಯಾಣದ ಕಾರಣವೊಂದಲ್ಲದೆ ಇನ್ನೆರಡು ಮುಖ್ಯ ಕಾರಣಗಳಿದ್ದುವು. ಒಂದನೆಯದು, ಸೀತೆ ಯಾತ್ರೆಗೆ ಹೊರಟಂದಿನಿಂದ ಬಹಳ ಮಾರ್ಪಾಡಾಗಿದ್ದಳು; ಹರ್ಷಚಿತ್ತೆಯಾಗಿದ್ದಳು; ಎಲ್ಲರೊಡನೆಯೂ ಮದುವೆಯಾಗುವುದಕ್ಕೆ ಮೊದಲು ತರಳೆಯಾಗಿದ್ದಾಗ ಹೇಗೋ ಹಾಗೆ ವರ್ತಿಸುತ್ತಿದ್ದಳು. ಅಷ್ಟು ಬೇಗನೆ ಆಕೆಯಲ್ಲಿ ಅಂತಹ ಮಾರ್ಪಾಡಾದುದನ್ನು ಕಂಡು ಎಲ್ಲರಿಗೂ ಯಾತ್ರೆಯಲ್ಲಿಯೂ ಧರ್ಮಸ್ಥಳದ ದೇವರಲ್ಲಿಯೂ ನಂಬುಗೆ ಹೆಚ್ಚಿತ್ತು. ರಾಮಯ್ಯನಂತೂ ಹೂವಯ್ಯನ ಸಹವಾಸದಲ್ಲಿದ್ದಾಗ ಯಾತ್ರೆಗಳು ಕ್ಷೇತ್ರಗಳು ಮತ್ತು ದೇವರುಗಳನ್ನು ತಾನು ಹಳಿಯುತ್ತಿದ್ದುದು ಅಥವಾ ಉದಾಸೀನಭಾವದಿಂದ ಕಾಣುತ್ತಿದ್ದುದು ಶುದ್ಧ ಮೂರ್ಖತನವೆಂದೂ ಇನ್ನು ಮುಂದೆ ಎಂದೆಂದಿಗೂ ಹಾಗೆ ಮಾಡುವುದಿಲ್ಲವೆಂದೂ ಗಟ್ಟಿಮನಸ್ಸು ಮಾಡಿಕೊಂಡನು. ಧರ್ಮಸ್ಥಳದಲ್ಲಿ ಒಂದೊಂದು ತಲೆಗೂ ನೂರು ನೂರೈವತ್ತು ರೂಪಾಯಿಗಳವರೆಗೂ ಕಾಣಿಕೆ ತೆಗೆದುಕೊಂಡಿದ್ದರೂ ಕೂಡ ಯಾರೊಬ್ಬರಿಗೂ ದುಃಖವಾಗಲಿಲ್ಲ. ಅಥವಾ ಆದವರು ಬಾಯಿಬಿಟ್ಟು ಹೇಳಿದರೆ ದೇವರಿಗೆ ಮುನಿಸಾಗುತ್ತದೆಂದು ಹೇಳಲಿಲ್ಲ!

ಒಲ್ಲದ ಹೆಂಡಿರನ್ನು ಒಲಿಸಿಕೊಡುವುದಕ್ಕಿಂತಲೂ ಶ್ರೇಷ್ಠತರವಾದ ಕಾರ್ಯ ಇನ್ನಾವುದಿದೆ ಆ ದೇವರಿಗೆ? ಅವನು ಹಾಗೆ ಮಾಡುತ್ತ ಬರಲಿ; ನಾಸ್ತಿಕರೆಲ್ಲ ಆಸ್ತಿಕರಾಗುತ್ತಾರೆ!

ರಾಮಯ್ಯನ ಮಾರ್ಪಾಟಿಗೆ ಎರಡನೆಯ ಕಾರಣವೆಂದರ, ತಂದೆ ಚಂದ್ರಯ್ಯಗೌಡರ ದುರ್ಬಲಸ್ಥಿತಿ. ಶಕ್ತಿಗುಂದುತ್ತ ಬಂದಹಾಗೆಲ್ಲ, ಚಂದ್ರಯ್ಯಗೌಡರಲ್ಲಿ ಮೊದಲಿದ್ದ ದರ್ಪವೂ ಕ್ರೌರ್ಯವು ಕಠಿನತೆಯೂ ಕಡಮೆಯಾಗುತ್ತ ಬಂದುದರಿಂದ ರಾಮಯ್ಯನೆ ಮುಖ್ಯವ್ಯಕ್ತಿಯಾಗಬೇಕಾಯಿತು. ಕಡೆಕಡೆಗೆ ಚಂದ್ರಯ್ಯಗೌಡರು ಏನು ಮಾಡುತ್ತಿದ್ದರೂ ಮಗನನ್ನು ಕೇಳಿ,  ಅವನು ಹೇಳಿದಂತೆ ಮಾಡತೊಡಗಿದರು. ಈ ಸ್ಥಾನವ್ಯತ್ಯಾಸದಿಂದ, ಹಿಂದೆ ಕುಬ್ಜವಾಗಿದ್ದ, ರಾಮಯ್ಯನ ವ್ಯಕ್ತಿತ್ವ ವಿಕಾಸಹೊಂದಿ ತಲೆಯೆತ್ತಿತು.

ರಾಮಯ್ಯ ತನ್ನ ಹೆಂಡತಿಯನ್ನು ಎಂದಿಗೆ ಮನೆಗೆ ಕರೆದು ತಂದೇನೆಂದು ಕಾತರನಾಗಿದ್ದನು.ಅಲ್ಲದೆ ತನ್ನ ತಂದೆಗೆ ಅನ್ಯರೀತಿಯಿಂದ ಅದನ್ನು ತಿಳಿಸುತ್ತಲೂ ಇದ್ದನು.

ಆದ್ದರಿಂದಲೆ ಧರ್ಮಸ್ಥಳದಿಂದ ಹಿಂತಿರುಗಿ ಬಂದು ಒಂದು ತಿಂಗಳಾದಮೇಲೆ ಒಂದು ದಿನ ಬೆಳಗ್ಗೆ, ಶೃಂಗಾರ ಮಾಡಿಕೊಂಡು, ಕಮಾನುಗಾಡಿ ಕಟ್ಟಿಸಿಕೊಂಡು, ಅದರಲ್ಲಿ ದಿಂಬೊರಗಿ ಕುಳಿತು, ಎತ್ತುಗಳ ಕೊರಳ ಗಂಟೆಯ ಸರಗಳುಲಿ ಗೈಲುಗೈಲೆಂದು ಘೋಷಿಸುತ್ತಿರಲು, ಹೆಂಡತಿಯನ್ನು ಮನೆಗೆ ಕರೆತರಲೋಸುಗ ರಾಮಯ್ಯ ಮುತ್ತಳ್ಳಿಗೆ ಹೋದನು.

ಆದಿನ ಮುತ್ತಳ್ಳಿಯಲ್ಲಿ ರಾಮಯ್ಯನ ಎದೆ ಔದಾರ್ಯದ ಪರಮಾವಧಿ ಮುಟ್ಟಿದಂತಿತ್ತು. ಬಂಧುಗಳೊಡನೆ ಇರಲಿ, ಆಳುಗಳೊಡನೆಯೂ ಕೂಡ ಅತ್ಯಂತಹರ್ಷದಿಂದ, ಸರಸದಿಂದ, ಕೃಪಾದೃಷ್ಟಿಯಿಂದ ಮಾತಾಡಿ, ಅವರನ್ನೆಲ್ಲ ಮರುಳುಗೊಳಿಸಿದನು. ಇಂತಹ ಅಳಿಯಂದಿರು ತಪಸ್ಸುಮಾಡಿದರೂ ಸಿಕ್ಕುತ್ತಾರೆಯೆ ಎಂದುಕೊಂಡರು, ನಂಜ ಕಾಳ ಮೊದಲಾದವರು.

ಆದರೆ ಸೀತೆಗೆ ಅದೊಂದು ಮಹಾ ದುರ್ದಿನವಾಗಿತ್ತು. ಆಕೆಯಮನಸ್ಸಿನಲ್ಲಿ ವರ್ಣಿಸಲಾರದಷ್ಟು ಯಾತನೆ ಕುದಿಯುತ್ತಿತ್ತು. ಮೆದುಳಿನಲ್ಲಿ ಭಯಂಕರವಾದ ಆಲೋಚನೆಗಳ ವೈಹಾವಳಿಯಾಗುತ್ತಿತ್ತು. ಆದರೂ ಆಕೆಯ ಹೊರಗಣ ವರ್ತನೆಯಲ್ಲಿ ಯಾರೊಬ್ಬರಿಗೂ ಅದರ ಸುಳಿವು ತಿಳಿಯುವಂತಿರಲಿಲ್ಲ. ಮಿಂಚು ಗುಡುಗು ಸಿಡಿಲುಗಳನ್ನು ಒಡಲೊಳಗೆ ಅಡಗಿಸಿಟ್ಟುಕೊಂಡು ಮೌನವಾಗಿ ಆದರೂ ಬದ್ಧಭ್ರುಕುಟಿ ದಾರ್ಢ್ಯದಿಂದ ಸಂಚರಿಸುವ ಮಳೆಮುಗಿಲಿನಂತೆ ಸೀತೆ, ಯಾಂತ್ರಿಕವಾಗಿ, ಮಾಡಬೇಕಾದ ಕೆಲಸಗಳನ್ನೆಲ್ಲ ಒಳ್ಳೆಯ ಹುಡುಗಿಯಂತೆ ಮಾಡುತ್ತಿದ್ದಳು.

ಸಂಜೆ ಐದು ಗಂಟೆಗೆ ಕಾನೂರಿಗೆ ಹಿಂತಿರುಗಿತು, ಆದಿನ ಬೆಳಗ್ಗೆ ಹೋಗಿದ್ದ ಕಮಾನುಗಾಡಿ, ಅದರಲ್ಲಿ ರಾಮಯ್ಯ, ಚಿನ್ನಯ್ಯ, ಸೀತೆ ಗೌರಮ್ಮನವರು, ಲಕ್ವ್ಮಿ-ಇಷ್ಟು ಜನರೂ ಸ್ವಲ್ಪ ಇಕ್ಕಟ್ಟಾಗಿಯೆ ಕುಳಿತಿದ್ದರು. ಸೀತೆ ಗಂಡನ ಮನೆಗೆ ಹೋಗುವುದು ಅದೇ ಮೊದಲನೆಯ ಸಲವಾಗಿದ್ದರಿಂದ ತಾಯಿ ಅಣ್ಣ ತಂಗಿ ಮೂವರು ಅವಳ ಜೊತೆ ಹೊರಟಿದ್ದರು.

ಕಪ್ಪಾಗಿದ್ದರೂ ಇನ್ನೂ ಕಗ್ಗತಯ್ತಲೆಯಾಗಿರಲಿಲ್ಲ. ಆ ದಿನಬೆಳಗ್ಗೆಯಿಂದಲೂ ಹಿಡಿದು ಹೊಡೆಯುತ್ತಿದ್ದ ಜಡಿ ಒಮ್ಮೆ ಸೋನೆಯಾಗಿ ಒಮ್ಮೆ ಮಳೆಯಾಗಿ ಸುರಿಯುತ್ತಲೆ ಇತ್ತು. ಗಾಡಿ ಮನೆಯ ಅಂಗಳದಲ್ಲಿ ನಿಲ್ಲಲು, ಗಂಡನ ಮನೆಯನ್ನು ಮೊತ್ತಮೊದಲು ಪ್ರವೇಶಿಸುವ ಹೆಣ್ಣಿಗೆ ಮಾಡಬೇಕಾದ ವಿಧಿಗಳನ್ನೆಲ್ಲ ಸೀತೆಗೆ ಮಾಡಿ, ಒಳಗೆ ಕರೆದುಕೊಂಡರು. ಕಲ್ಲಿನ ಗೊಂಬೆಯ ಕಣ್ಣುಗಳಿಂದ ನೀರು ಸುರಿಯುವಂತೆ ಆಕೆಯ ಕಣ್ಣುಗಳಿಂದ ನೀರು ಸುರಿಯುತ್ತಿದ್ದುದನ್ನು ಯಾರು ಹೆಚ್ಚು ಗಮನಿಸಲಿಲ್ಲ. ತವರೂರನ್ನು ಬಿಟ್ಟು ಗಂಡನ ಮನೆಗೆ ಸೇರುವ ಹೆಣ್ಣಿಗೆ ಕಣ್ಣೀರು ಹಾಕುವುದೊಂದು ಅಲಂಕಾರದ ಅವಶ್ಯಕವಾದ ಪದ್ಧತಿಯಲ್ಲವೆ? ಮದುವಣಗಿತ್ತಿಯನ್ನು ನೋಡಲೂ ಸ್ವಾಗತಿಸಲೂ ನೆರೆದಿದ್ದವರೆಲ್ಲರಿಗೂ ಸೀತಮ್ಮನವರನ್ನು ನೋಡಿ ಮಹದಾನಂದವಾಯಿತು.

ಹಿಂದೆ, ಹೂವಯ್ಯ ಆ ಮನೆಯಲ್ಲಿ ಇದ್ದಂದು ಕಾನೂರಿಗೆ ಬರುವುದೆಂದರೆ ಸೀತೆಗೊಂದು ಹಬ್ಬವಾಗುತ್ತಿದ್ದಿತು. ಇಂದು ಆ ಮನೆ ಅಪಶಕುನ ಗರ್ಭಿತವಾದ ಗೋರಿಯಂತೆ ತೋರುತ್ತಿತ್ತು. ಆ ಕಂಬಗಳೂ ತೊಲೆಗಳೂ ಮುಂಡಿಗೆಗಳೂ, ಗೋಡೆಯಿಂದೆದ್ದು ನಾಮದ ಪಟ್ಟೆಗಳಿಂದ ಅಲಂಕೃತವಾಗಿ ದೀಪದ ಬೆಳಕಿನಲ್ಲಿ ’ನಾನಿದ್ದೇನೆ’ ಎಂದು ಸಾರಿ ಹೇಳುವಂತಿದ್ದ ಆ ಹುತ್ತವೂ, ಗೋಡೆಗಳ ಮೇಲೆ ಚಲಿಸಾಡುತ್ತಿದ್ದ ಕಂಬಗಳ ಮತ್ತು ಮನುಷ್ಯರ ಹಿರಿ ನೆಳಲುಗಳೂ ಸೀತೆಯ ಮನಸ್ಸಿಗೆ ತನಗೆ ಬಂದೊದಗಲಿರುವ ಕ್ಲೇಶಗಳ ಪ್ರತೀಕಗಳಂತೆಯೂ ದುರಂತತೆಯ ಛಾಯೆಗಳಂತೆಯೂ ತೋರಿ ಭೀಷಣವಾದುವು. ಯಾವುದೊ ಒಂದು ಅನಿರ್ದಿಷ್ಟವಾದ ಭೀಮಾಕೃತಿಯ ಭೀತಿ ಅವಳೆದೆಯನ್ನು ತುಡುಕಿತು. ಬೆವರಿ ಕಿಟ್ಟನೆ ಕಿರಿಚಿಕೊಂಡು ತಾಯಿಯ ತೋಳುಗಳಲ್ಲಿಯೆ ಮೂರ್ಛೆಹೋದಳು. ಬಾಯಲ್ಲಿ ನೊರೆಯೂ ತೋರಿತು. ಗಾಳಿ ಬೀಸಿದರು. ಭೂತರಾಯನಿಗೆ ಹೇಳಿಕೊಂಡರು. ಪಟಿಕಾರ ಸುಟ್ಟು ಮೂಗಿಗೆ ಹಿಡಿದರು. ಏನೇನೊ ಮಾಡಿದರು.

ಕೆಲ ಹೊತ್ತಿನಮೇಲೆ ಆಕೆಗೆ ಎಚ್ಚರವಾದರೂ ಹಿಡಿದಿದ್ದ ಗೌರಮ್ಮನವರ ಸೆರಗನ್ನು ಆಕೆ ಬಿಡಲಿಲ್ಲ. ಆ ರಾತ್ರಿಯೆಲ್ಲ ತಾಯಿಯ ಸೆರಗನ್ನು ಹಿಡಿದುಕೊಂಡೇ ಮಲಗಿದ್ದಳು. ಮರುದಿನವೂ ತಾಯಿಯ ಸೆರಗು ಹಿಡಿದುದನ್ನು ಬಿಡಲಿಲ್ಲ. ಏನೇನು ಹೇಳಿದರೂ, ಎಷ್ಟೆಷ್ಟು ಸಮಾಧಾನ ಮಾಡಿದರೂ, ಗದರಿಸಿದರೂ ಬಿಡಲೊಲ್ಲದೆ ಹೋದಳು. ಚಂದ್ರಯ್ಯಗೌಡರಿಗೆ ಅದನ್ನೆಲ್ಲಾ ಕಂಡು ಬಹಳ ರೇಗಿತು. ಎಲ್ಲವೂ ತಮ್ಮ ವೈರಿಯಾದ ಸಿಂಗಪ್ಪಗೌಡರ ಮಗ ಕೃಷ್ಣಪ್ಪನ ಪ್ರೇತದ ಕುಚೇಷ್ಟೆ ಎಂದುಕೊಂಡು ಹಲ್ಲುಹಲ್ಲು ಕಡಿದರು. ತಾಯಿ ಅಣ್ಣ ಇವರು ಯಾರೂ ಇಲ್ಲದಿದ್ದರೆ ಸೀತೆಯ ಗತಿ ಏನಾಗುತ್ತಿತ್ತೊ?

ಮದುವೆಗೆ ಮೊದಲು ಸೀತೆ ಹೂವಯ್ಯನಿಗೆ ಬರೆದಿದ್ದ ಕಾಗದವನ್ನು ನೆನೆದ ರಾಮಯ್ಯನಿಗೂ ಸಿಟ್ಟು ಕೆರಳಿ, ಕ್ರೂರವಾದ ಆಲೋಚನೆಗಳು ಮನಸ್ಸಿನಲ್ಲಿ ಮೂಡಿದುವು. ಸೇರೆಗಾರರನ್ನು ಕರೆದು, ಅವರಿಗೆ ಏನೊ ಕಿವಿಮಾತು ಹೇಳಿ, ಕೈಗೆ ಒಂದು ಕೋವಿ ಕೊಟ್ಟು ಕೆಳಕಾನೂರಿನ ಕಡೆಗೆ ಕಳುಹಿಸಿದನು.

ಮಧ್ಯಾಹ್ನ ಅಗ್ರಹಾರದ ವೆಂಕಪ್ಪಯ್ಯಜೋಯಿಸರು ಬಂದು ತಮ್ಮ ಕೈಯಲ್ಲಾದ ಮಂತ್ರ ತಂತ್ರಗಳ ವೈದ್ಯವನ್ನೆಲ್ಲಾ ಮಾಡಿದರೂ ಏನೂ ಉಪಯೋಗವಾದಂತೆ ತೋರಲಿಲ್ಲ. ಸಾಯಂಕಾಲ ಅಗ್ರಹಾರಕ್ಕೆ ಹಿಂತಿರುಗುವಾಗ ಅವರು ಗೌಡರನ್ನು ಹತ್ತಿರಕ್ಕೆ ಕರೆದು “ನೋಡು, ಚಂದ್ರಯ್ಯ, ನನಗೆ ಯಾಕೋ ಸಂಶಯವಾಗ್ತದೆ. ಇದು ನಿಜವಾಗಿಯೂ ಗ್ರಹದ ಕಾಟ ಅಥವಾ ದೈವದ ಕಾಟವಾಗಿದ್ದ ಪಕ್ಷದಲ್ಲಿ, ನಾನು ಹಾಕಿದ ಮಂತ್ರಗಳ ಮುಂದೆ ನಿಲ್ಲುತ್ತಿರಲಿಲ್ಲ. ಹುಡುಗಿಗೆ ಯಾರೋ ಹೇಳಿಕೊಟ್ಟಿರಬೇಕು; ಅಥವಾ ಅವಳೇ ಹೀಗೆಲ್ಲ ನಟನೆ ಮಾಡುತ್ತಿದ್ದಾಳೊ ಏನೊ? ಆದ್ದರಿಂದ ಒಂದು ಹೇಳ್ತೀನಿ. ಮಾಡಿನೋಡು. (ಕೆಮ್ಮಿ) ನಮ್ಮ ಬ್ರಾಹ್ಮಣರಲ್ಲಿ ಇಂದಥದೆಷ್ಟೋ ಆಗ್ತದೆ. ನನಗೆ ಚೆನ್ನಾಗಿ ಅನುಭವ ಇದೆ. (ಕೆಮ್ಮಿ) ಸ್ವಲ್ಪ ಕ್ರೂರವಾಗಿ ಕಾಣಬಹುದು. ಆದರೂ ರೋಗ ಪರೀಕ್ಷೆಯಾಗಬೇಕಾದರೆ ಮಾಡಲೇಬೇಕು. ಒಂದು ಕೆಲಸ ಮಾಡು. ಅವರ ಮನೆಯವರನ್ನೆಲ್ಲಾ ಹೇಗಾದರೂ ಮಾಡಿ ಒಪ್ಪಿಸಿ, ಹಿಂದಕ್ಕೆ ಕಳಿಸಿಬಿಡು. ಆಮೇಲೆ ದೆಯ್ಯ ಬಿಟ್ಟುಹೋಗುವವರೆಗೂ ಒಂದೊಂದು ಬರೆ ಹಾಕಬೇಕು ಅಂತಾ ಜೋಯಿಸರು ಹೇಳಿದ್ದಾರೆ ಅಂತಾ ಹೇಳಿ, ದಿನಕ್ಕೆ ಒಂದೊಂದು ಬರೆ ಎಳೆದೇಬಿಡು! ಒಂದೆದರಡೇ ದಿನದಲ್ಲಿ ಎಲ್ಲ ಸರಿಹೋಗ್ತದೆ!” ಎಂದು ಗುಟ್ಟಾಗಿ ಹೇಳಿದರು.

ಸೇರೆಗಾರರೂ ದಿನವೆಲ್ಲಾ ಹಕ್ಕಿ ಹೊಡಿಯುವ ನೆವದಿಂದ ಅಲ್ಲಲ್ಲಿ ತಿರುಗಾಡುತ್ತ ಎಷ್ಟು ಹೊಂಚಿದರೂ ಪ್ರಯೋಜನವಾಗದೆ, ಸಾಯಂಕಾಲ ಹಿಂತಿರುಗಿ ಬಂದು ರಾಮಯ್ಯನಿಗೆ ನಡೆದದ್ದನ್ನು ವರದಿ ಹೇಳಿದರು. ರಾಮಯ್ಯ, “ಇವತ್ತಲ್ಲದಿದ್ದರೆ ನಾಳೆ! ಅದನ್ನು ಮಾಡಿದ ಹೊರತೂ….! “ಎಂದು ಹುಬ್ಬುಗಂಟುಹಾಕಿದನು.

ಚಂದ್ರರಯ್ಯಗೌಡರು ಚಿನ್ನಯ್ಯನನ್ನು ಕುರಿತು “ನೀವೆಲ್ಲ ಇದ್ದರೆ ಅವಳು ಸರಿಹೋಗುವುದಿಲ್ಲ” ಎಂದು ಮೊದಲಾಗಿ ಅನೇಕವಾಗಿ ವಾದಿಸಿ, ಆ ರಾತ್ರಿಯೆ ಅವರೆಲ್ಲ ಗುಟ್ಟಾಗಿ ಮುತ್ತಳ್ಳಿಗೆ ಹಿಂತಿರುಗುವಂತೆ ಪ್ರೇರಿಸಿದರು. ಚಿನ್ನಯ್ಯನೂ ಯಾವ ಪ್ರಮಾದವನ್ನೂ ಮುಂಗಾಣದೆ ಮಾವನ ಮಾತಿಗೆ ಒಪ್ಪಿದನು.

ರಾತ್ರಿ ಹನ್ನೆರಡರ ಮೇಲೆ ಒಂದು ಗಂಟೆಯಾಗಿತ್ತು. ಮಳೆ ಸುರಿಯುತ್ತಿತ್ತು. ಕಾನೂರಿನ ಕಮಾನುಗಾಡಿ ಮುತ್ತಳ್ಳಿಗೆ ಹೊರಟು ಸಿದ್ದವಾಗಿತ್ತು. ಗಾಢನಿದ್ದೆಯಲ್ಲಿದ್ದ ಲಕ್ಷ್ಮಿಯನ್ನು ಚಿನ್ನಯ್ಯ ಎತ್ತಿತಂದು ಗಾಡಿಯಲ್ಲಿ ಮಲಗಿಸಿದನು. ಗೌರಮ್ಮನವರು ಗುಟ್ಟಾಗಿ ಎದ್ದುಬರಲು ಎರಡು ಸಲ ಯತ್ನಿಸಿದಾಗಲೂ ನಿದ್ದೆಮಾಡುತ್ತಿದ್ದ ಸೀತೆ ಅವರ ಸೆರಗನ್ನು ಭದ್ರವಾಗಿ ಹಿಡಿದಿದ್ದಳು. ಕಡೆಗೆ ಗೌಡರ ಸಲಹೆಯಂತೆ ಸೆರಗನ್ನು ಕತ್ತರಿಯಿಂದ ನಿಃಶಬ್ದವಾಗಿ ಕತ್ತರಿಸಿದರು. ತಾಯಿಯ ಸೀರೆಯ ಸೆರಗಿನ ಚೂರನ್ನು ಹಿಡಿದುಕೊಂಡು ಸೀತೆ ನಿರ್ಭರತೆಯಿಂದ ನಿದ್ರಿಸುತ್ತಿದ್ದಳು.

ಎತ್ತಿನ ಕೊರಳ ಗಂಟೆಯ ಸರಗಳನ್ನು ಬಿಚ್ಚಿಬಿಟ್ಟಿದ್ದದರಿಂದ ಗಾಡಿ ನೀರವವಾಗಿ ಮುತ್ತಳ್ಳಿಗೆ ನಡೆಯಿತು.
ಮುಂಡಿಗೆಯ ಮರೆಯಲ್ಲಿ ಒರಗಿ ನಿಂತುಕೊಂಡು ಯಾರ ಗಮನಕ್ಕೂ ಬೀಳದೆ ಎಲ್ಲವನ್ನೂ ನೋಡುತ್ತಿದ್ದ ಪುಟ್ಟ ಮತ್ತೆ ತನ್ನ ತಾವಿಗೆ ಹೋಗಿ ಮಲಗಿಕೊಂಡನು. ಆದರವನಿಗೆ ನಿದ್ದೆ ಹತ್ತಲಿಲ್ಲ. ಸೀತಮ್ಮನನ್ನು ಏತಕ್ಕೆ ಹೀಗೆ ಗೋಳಾಡಿಸುತ್ತಾರೆ ಎಂಬುದು ಅವನಿಗೆ ಅರ್ಥವಾಗಲಿಲ್ಲ.

ಗಾಡಿ ಹೋಗಿ ಅರ್ಧಗಂಟೆಯಾಗಿರಬಹುದು. ಅಷ್ಟು ಹೊತ್ತಿಗೆ ಬಾಗಿಲು ಹಾಕಿ ಚಿಲಕ ಹಾಕಿದ್ದ ಕೊಟಡಿಯೊಳಗೆ ಸೀತೆ ’ಅವ್ವಾ ಅವ್ವಾ’ ಎಂದು ಗಟ್ಟಿಯಾಗಿ ಕರೆಯುತ್ತಿದ್ದುದು ಪುಟ್ಟನ ಕಿವಿಗೆ ಬಿತ್ತು! ಪುಟ್ಟನಿಗೆ ಎದ್ದು ಹೋಗಿ ತಾನು ಕಂಡಿದ್ದನ್ನೆಲ್ಲ ಸೀತಮ್ಮಗೆ ಹೇಳಬೇಕೆಂದು ಇಚ್ಛೆಯಾಯಿತು. ಆದರೆ ಚಂದ್ರಯ್ಯಗೌಡರ ಹೆದರಿಕೆಯಿಂದ ಸುಮ್ಮನೆ ಮಲಗಿದನು. ಸೀತೆ ಕೊಟಡಿಯಲ್ಲಿ ಗಟ್ಟಿಯಾಗಿ ಕೂಗುತ್ತಾ ಆಳುತ್ತಾ ಕರೆಯುತ್ತಾ ಹೊರಗೆ ಬರಲೆಂದು ಬಾಗಿಲು ಹುಡುಕುತ್ತಾ ಕತ್ತಲೆಯಲ್ಲಿ ಕಣ್ಣುಕಾಣದೆ ಗೋಡೆಗೆ ಢಕ್ಕಿ ಹೊಡಿದು ಬಾಯಿ ಬಡಿದುಕೊಂಡು ರೋದಿಸುತ್ತಾ ಇದ್ದುದನ್ನು ಕೇಳುತ್ತ  ಕೇಳುತ್ತ ಪುಟ್ಟನಿಗೆ ಕಣ್ಣೀರು ಬಂತು. ಅವನ ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು. ಏನಾದದರಾಗಲಿ ಎಂದು, ಬೊಗಳುತ್ತಿದ್ದ ನಾಯಿಗಳ ಸದ್ದಿನ ಧೈರ್ಯದಿಂದ ಮೇಲೆದ್ದು ಜಗಲಿಯ ಮೇಲೆ ಮಲಗಿದ್ದ ರಾಮಯ್ಯನ ಬಳಿಗೆ ತಡವುತ್ತ ನಡೆದು, “ಅಯ್ಯಾ! ಅಯ್ಯಾ! ಅಯ್ಯಾ!” ಎಂದು ಗಾಬರಿಯಿಂದ ಕೂಗಿದನು.

ಎಚ್ಚರವಾಗಿಯೆ ಇದ್ದ ರಾಮಯ್ಯ “ಏನಾಗಿದೆಯೋ ನಿನಗೆ!” ಎಂದು ಗದರಿಸಿದನು.

“ಸೀತಮ್ಮ ಅಳ್ತಾರೆ!”

“ಅತ್ತರೆ ಅಳಲಿ! ನೀ ತೆಪ್ಪಗೆ ಹೋಗಿ ಮಲಗಿಕೊ!”

ಪುಟ್ಟನಿಗೆ ಅದೂ ಅರ್ಥವಾಗಲಿಲ್ಲ. ಯಾರಾದರೂ ಆಗಲಿ, ಅತ್ತರೆ ಕೂಗಿಕೊಂಡರೆ, ಸಂತೈಸದೆ ಸುಮ್ಮನಿರುವುದೆ? ಅದರಲ್ಲಿಯೂ ಮುತ್ತಳ್ಳಿ ಸೀತಮ್ಮ! ಹೊಸದಾಗಿ ಮನೆಗೆ ಬಂದ ನಂಟರು!- ಇಲ್ಲ; ಪುಟ್ಟನಿಗೆ ಅರ್ಥವಾಗಲಿಲ್ಲ! ಆಶ್ಚರ್ಯಪಡುತ್ತ ಹೋಗಿ ಮತ್ತೆ ಮಲಗಿಕೊಂಡನು.

ಸೀತೆ ಕೂಗಿ ರೋದಿಸುತ್ತಲೇ ಇದ್ದಳು.