ಚಿನ್ನಯ್ಯನ ಮದುವೆ ಮುಗಿದ ಮೇಲೆ ಮೂರನೆಯ ದಿನ ಸಾಯಂಕಾಲ ಕಾನೂರಿನಿಂದ  ಗಂಡಿನ ದಿಬ್ಬಣ ಮುತ್ತಳ್ಳಿಗೆ ಬಂದಿತು. ಜರಿಯ ಪೇಟ ಸುತ್ತಿ, ಇತ್ತೀಚಿಗೆ ಹೆಚ್ಚು ಹೆಚ್ಚು ಕೃಶವಾಗುತ್ತಿದ್ದ ಮಾಸಿದ ಮುಖದಲ್ಲಿ ಹೆಚ್ಚು ಹೆಚ್ಚು ದಪ್ಪವಾಗಿ ತೋರತೊಡಗಿದ್ದ ಹೆಮ್ಮಿಸೆಗಳನ್ನು ಹೊತ್ತು, ಕಪ್ಪುಗೀರಿನ ಹೊಸ ಕೋಟು, ಜರಿಯಂಚಿನ ಉತ್ತರೀಯ, ಬಣ್ಣದ ಕಂಬಿಯ ಪಂಚೆ ಮತ್ತು ಹೂ ಕೆತ್ತಿದ್ದ ಹುಂಚದಕಟ್ಟೆಯ ಮೆಟ್ಟಿಲುಗಳಿಂದ ಅಲಂಕೃತವಾಗಿ, ಎತ್ತರವಾಗಿ, ಕೆಚ್ಚು ಧೂರ್ತಭಾವಗಳಿಂದ ಕ್ರೂರವಾಗಿ ಕಾಣುತ್ತಿದ್ದ ಚಂದ್ರಯ್ಯಗೌಡರು, ಮುಂದೆ ನಸುಕುಳ್ಳಾಗಿ, ಬೊಜ್ಜು ಡೊಳ್ಳುಗಳಿಂದ ಸ್ಥೂಲವಾಗಿ ಬೆಳೆದ ಕಂಬಳ ಕಾಯಿಯಂತೆ ತುಂಬಿಕೊಂಡ ಮುಖದಲ್ಲಿ ಕಿರುಮಿಸೆವುಳ್ಳವರಾಗಿ, ಪಟ್ಟೆನಾಮಗಳಿಂದ ಶೋಭಿತರಾಗಿ, ಮನೆಯ ಯಜಮಾನರಿಗೆ ತಕ್ಕ ಉಡುಗೆ ತೊಡುಗೆಗಳಿಂದ ಅಲಂಕೃತರಾಗಿ, ಮೂರ್ಖತನದೊಡನೆ ಸ್ನೇಹ ಬೆಳೆಯಿಸುವಂತಿದ್ದ ಸರಳತೆ ಮುಗ್ಧತೆಗಳಿಂದ  ಸ್ವಲ್ಪ ಪೆಚ್ಚಾಗಿದ್ದುದರಿಂದ ಭಗವದ್ಘಕ್ತಿಯಿಂದ ವಿನಮ್ರರಾದವರಂತೆ  ತೋರುತ್ತಿದ್ದ ಶ್ಯಾಮಯ್ಯಗೌಡರು ಕೈಮುಗಿದು ನಿಂತು ಬೀಗರ ಕಡೆಯವರನ್ನು ಆದರೋಪಚಾರಗಳಿಂದ ಸಂತುಷ್ಟಿಪಡಿಸಿ ಮನೆಯೊಳಗೆ ಬರಮಾಡಿಕೊಂಡರು.

ಮದುವೆಗೆ ನೂರಾರು ಜನರು ನೆರೆದಿದ್ದರು. ಗರ್ನಾಲು, ಕದಿನಿ, ಬಾಣಬಿರುಸು, ಕೊಂಬು, ಕಹಳೆ, ವಾಲಗ ಮೊದಲಾದವುಗಳ ಸದ್ದಿಗಿಂತಲೂ ಅತಿಶಯವಾಗಿ ಅವಿಚ್ಛಿನ್ನವಾಗಿ ಮನುಷ್ಯ ಸಮೂಹದ ತುಮುಲವಾದ ಮನೆಯನ್ನೆಲ್ಲ ತುಂಬಿ ತುಳುಕುತ್ತಿದ್ದಿತು. ಮನೆಯ ಅಂಗಣದಲ್ಲಿ ರಚಿಸಿದ್ದ ವಿಸ್ತಾರವಾದ ಚಪ್ಪರದಡಿ, ಧರೆಯ ಮಂಟಪದ ಬಳಿ, ಜಗಲಿಯಲ್ಲಿ, ಮನೆಯ ಮೂಲೆ ಮೂಲೆಗಳಲ್ಲಿ ಲ್ಯಾಂಪು, ತೂಗು ಲ್ಯಾಂಪು, ಲಾಟೀನು, ಲಾಂದ್ರ, ಚಿಮಿನಿ, ಕಕ್ಕಡ, ದೊಂದಿ, ಹಣತೆ ಮೊದಲಾದ ತರ ತರದ ದೀಪಾವಳಿ ರಂಜಿಸುತ್ತಿದ್ದಿತು. ತಳಿರು ತೋರಣಗಳಿಂದಲೂ ಬಣ್ಣ ಬಣ್ಣದ ಬಟ್ಟೆಗಳಿಂದಲೂ ಮೆರೆಯುತ್ತಿದ್ದ ಚಪ್ಪರದಡಿ ಅಂಗಳದಲ್ಲಿ ದಿಬ್ಬಣದ ಜನರೆಲ್ಲರೂ ಅವರವರ ಅಂತಸ್ತಿಗೆ ತಕ್ಕ ತಕ್ಕ ಸ್ಥಾನಗಳಲ್ಲಿ ಕುಳಿತು ಸಲ್ಲಾಪಿಸುತ್ತಿದ್ದರು. ಅಂದಿನ ಮದುವೆಯ ಮದುಮಗಳಿಗೆ ದೆಯ್ಯ ಹಿಡಿದಿದ್ದ ವಿಚಾರವೇ ಆ ಮಾತುಕತೆಗಳಲ್ಲಿ ಮುಖ್ಯಪಾತ್ರ ವಹಿಸಿದ್ದಿತೆಂದು ಹೇಳಬಹುದು.

ಆ ರಾತ್ರಿ ಧಾರೆಯ ಮಹೂರ್ತ ಹತ್ತು ಗಂಟೆಯಮೇಲೆ ಇದ್ದುದರಿಂದ ಧಾರೆಗೆ ಮೊದಲೇ ಊಟ ಮುಗಿದುಬಿಡಲಿ ಎಂದು ಚಂದ್ರಯ್ಯ ಗೌಡರ ಬಿರುಸಾದ ಅಪ್ಪಣೆಯಾಯಿತು. ಶ್ಯಾಮಯ್ಯಗೌಡರು ಮನೆಯ ಯಜಮಾನರಾಗಿದ್ದರೂ ಬಾವನನ್ನು ಕೇಳದೆ ಅವರು ಏನೂ ಮಾಡುತ್ತಿದ್ದಿಲ್ಲ. ಆದ್ದರಿಂದಲೆ ಕಾನೂನು ಬಾವನೇ ಮುತ್ತಳ್ಳಿಯ ಯಜಮಾನ್ಯವನ್ನೂ ವಹಿಸಿಬಿಟ್ಟಿದ್ದರು. ಶ್ಯಾಮಯ್ಯಗೌಡರು, ಗೌರಮ್ಮ ಮತ್ತು ಚಿನ್ನಯ್ಯ ಇವರ ದಾಕ್ಷಿಣ್ಯದ ಅನಿವಾರ್ಯಕ್ಕೆ ಸಿಕ್ಕಿ ಸೀತೆಮನೆ ಸಿಂಗಪ್ಪಗೌಡರು ಮದುವೆಗೆ ಬಂದಿದ್ದರೂ ಅವರು ಯಾವ ಗೋಜಿಗೂ ಪಾರುಪತ್ಯಕ್ಕೂ ಹೋಗದೆ ಸಾಧಾರಣವಾದ ಇತರ ನಂಟರಂತೆ ಒಂದು ಕಡೆ ಅಜ್ಞಾತರಾಗಿ ಕುಳಿತು, ನಂಟರೊಡನೆ ಮಾತುಕತೆಗಳಲ್ಲಿ ತೊಡಗಿದ್ದರು. ಸಿಂಗಪ್ಪಗೌಡರ ಮಾತುಕತೆ ಎಂದರೆ ಚಂದ್ರಯ್ಯಗೌಡರ ‘ಕುರಿ ಚೋರಿ’, ಪತ್ನೀ ಪರಿತ್ಯಾಗ, ಇತ್ಯಾದಿ ವಿಷಯಗಳನ್ನು ಕುರಿತಿದ್ದಿತೆಂದು ಹೊಸದಾಗಿ ಹೇಳಬೇಕಾಗಿಲ್ಲ.

ಹೆಜ್ಜೇನಿನ ಗೂಡಿಗೆ ಹೊಗೆ ಹಾಕಿದರೆ ಜೇನ್ನೋಣಗಳ ಹಿಂಡು ಭೋರೆಂದು ಝೇಂಕರಿಸುತ್ತಾ ಎದ್ದು ಹಾರಾಡುವಂತೆ ಜನಗಳ ಸಮೂಹ, ‘ಎಲ್ಲರೂ ಊಟಕ್ಕೇಳಬೇಕು’ ಎಂಬ ಕೂಗು ಕಿವಿಗೆ ಬಿದ್ದಕೂಡಲೆ, ಉಕ್ಕಿ ಎದ್ದು, ಸಮೀಪದ ಗದ್ದೆಬಯಲಿಗೆ ದಾಳಿನಡೆಯಿತು.

ಆದರೆ ಕಾನೂರು ಚಂದ್ರಯ್ಯಗೌಡರು, ಬಾಲೂರು ಸಿಂಗೇಗೌಡರು, ಬೈದೂರು ಬಸವೇಗೌಡರು, ಎಂಟೂರು ಶೇಷೇಗೌಡರು, ಅತ್ತಿಗದ್ದೆ ಹಿರಿಯಣ್ಣಗೌಡರು, ನುಗ್ಗಿಮನೆ ತಮ್ಮಣ್ಣಗೌಡರು, ಸಂಪಗೆ ಪುಟ್ಟಯ್ಯಗೌಡರು – ಇತ್ಯಾದಿ ದೊಡ್ಡ ದೊಡ್ಡ ಗೌಡರುಗಳಿಗಾಗಿ ಶ್ಯಾಮಯ್ಯಗೌಡರು ಪ್ರತ್ಯೇಕವಾದ ಉಪಚಾರಗಳನ್ನು ಏರ್ಪಡಿಸಿದ್ದರು. ಅದಕ್ಕಾಗಿ ಕೊಡಪಾನಗಟ್ಟಲೆ ಬಗನಿಕಳ್ಳು, ಹಂಡೆಗಟ್ಟಲೆ ಅಕ್ಕಿಹೆಂಡ, ಶೀಸೆಗಟ್ಟಲೆ ಸರಾಯಿ ಸಿದ್ಧವಾಗಿತ್ತು. ಬೇಕಾದಷ್ಟು ಕಂಬಳಿಕುರಿ ಸೊಪ್ಪುಕುರಿಗಳು ಹತವಾಗಿದ್ದುವು.

ಗಳಿಗೆ ಬಟ್ಟಲ ಮುಂದೆ ಕುಳಿತು, ಆಗಾಗ ಅಲ್ಲಿ ಶೂದ್ರ ಸಮುದಾಯಕ್ಕೆ ಒಂದಿಷ್ಟೂ ಅರ್ಥವಾಗಲಾರದ ಸಂಸ್ಕೃತ ಮಂತ್ರಗಳನ್ನು ಅರ್ಥವಾಗಬಾರದ ರೀತಿಯಲ್ಲಿ ರಾಗಪೂರ್ಣವಾಗಿ ಆಘೋಷಿಸುತ್ತಿದ್ದ ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರು, ಧಾರೆಯ ಮುಹೂರ್ತ ಬಳಿಸಾರಿತೆಂದು ತಿಳಿಸಿದರು. ತಾವೇ ಜಾತಕ ಗೀತಕ ನೋಡಿ ನಿರ್ಣಯಿಸಿ ಕೊಟ್ಟಿದ್ದ ವಧೂವರರ ಮಂಗಲ ವಿವಾಹ ಮಹೋತ್ಸವವನ್ನು ಸಾಂಗವಾಗಿ ನೆರವೇರಿಸಲು ಅವರೇ ದೊಡ್ಡ ಮನಸ್ಸು ಮಾಡಿ ಮದುವೆ ಮಾಡಿಸುವ ಜೋಯಿಸರಾಗಿಯೂ ಬಿಜಯ ಮಾಡಿದ್ದರು. ಜೋಯಿಸರ ಅಪ್ಪಣೆಯ ಮೇರೆಗೆ ಗಂಡು ಹೆಣ್ಣುಗಳನ್ನು ಧಾರೆಯ ಮಂಟಪಕ್ಕೆ ಕರೆದುತರುವ ಸಲುವಾಗಿ, ಅದಕ್ಕೆ ಗೊತ್ತಾಗಿದ್ದ ಜನರ ಓಡಾಟ ಸಸಂಭ್ರಮವಾಯಿತು. ಧಾರೆ ಇನ್ನೇನು ಪ್ರಾರಂಭವಾಗುತ್ತದೆ ಎಂದು ಗೊತ್ತಾದಕೂಡಲೆ ನೂರಾರು ಕಣ್ಣುಗಳು ನಿದ್ರೆಯನ್ನು ಕೊಡಹಿ, ಮಂಟಪದ ಕಡೆಗೆ ದೃಷ್ಟಿಯಿಟ್ಟುವು. ಮಲಗಿದ್ದವರನ್ನು, ಪಕ್ಕದಲ್ಲಿ ಎಚ್ಚತ್ತಿದ್ದವರು, ಎಬ್ಬಿಸಿದರು.

ಆ ಸಂಭ್ರಮದ ಕೋಲಾಹಲ ಕುತೂಹಲಗಳ ಮಧ್ಯೆ ಯಾರ ದೃಷ್ಟಿಯೂ ಸಿಂಗಪ್ಪಗೌಡರಲ್ಲಿಗೆ ಬಂದು ಗುಟ್ಟಾಗಿ ಮಾತಾಡುತ್ತಿದ್ದ ಸೋಮನ ಕಡೆಗೆ ಬೀಳಲಿಲ್ಲ. ಸೋಮ ಆ ದಿನ ಬೆಳಿಗ್ಗೆ ಹೂವಯ್ಯನೊಡನೆ “ಮುತ್ತಳ್ಳಿಗೆ ‘ಧಾರೆ ನೋಡಲು’ ಹೋಗುತ್ತಾನೆ” ಎಂದು ಹೇಳಿ ಕೆಳಕಾನೂರಿನಿಂದ ನೆಟ್ಟಗೆ ಸೀತೆಮನೆಗೆ ಹೋಗಿ, ಅಲ್ಲಿಂದ ಸಿಂಗಪ್ಪಗೌಡರೊಡಗೂಡಿ ಸಾಯಂಕಾಲಕ್ಕೆ ಮುತ್ತಳ್ಳಿಗೆ ಬಂದಿದ್ದನು. ತನ್ನ ನೆಚ್ಚಿನ ಒಡೆಯನಿಗೆ ಪ್ರತಿಕೂಲವಾಗಿ ನಿಶ್ಚಯವಾಗಿದ್ದ ಆ ಮದುವೆಯ ಪೂರ್ವಕಥೆಯನ್ನು ಚೆನ್ನಾಗಿ ಅರಿತಿದ್ದ ಸೋಮ ‘ಧಾರೆ ನೋಡಲು’ ಹೋದನೆಂದರೆ ಆಶ್ಚರ್ಯವಾಗುತ್ತದೆ. ಆದರೆ ಸಿಂಗಪ್ಪ ಗೌಡರು ಅವನನ್ನು ಒಳಗೆ ಹಾಕಿಕೊಂಡು ರಚಿಸಿದ್ದ ವ್ಯೂಹ ಗೊತ್ತಾದರೆ, ಎಲ್ಲವೂ ಅರ್ಥಪೂರ್ವಕವಾಗುವುದರಲ್ಲಿ ಸಂದೇಹವಿಲ್ಲ.

ಹಾಗೆ ಮಾಡುತ್ತೇನೆ ; ಹೀಗೆ ಮಾಡುತ್ತೇನೆ ; ಅವರನ್ನು ಮೆಟ್ಟಿನಿಂದ ಹೊಡೆಯಿಸುತ್ತೇನೆ ; ಇವರನ್ನು ಗುಂಡಿನಿಂದ ಸುಡಿಸುತ್ತೇನೆ ಎಂದು ಮೊದಲಾಗಿ ಬಾಯಿ ಪಟಾಕಿ ಹೊಡೆಯುತ್ತಿದ್ದ ಸಿಂಗಪ್ಪಗೌಡರಲ್ಲಿಗೆ ಹೂವಯ್ಯ ಹೋಗಿ, ಉದಾತ್ತಭಾವಗಳನ್ನು ಉಪದೇಶಿಸಿ, ಅವರನ್ನು ತನ್ನ ಸಹಾಯಕ್ಕೆ ಬರುವಂತೆ ಒಪ್ಪಿಸಿದ್ದ ಸಂಗತಿ ಹಿಂದೆಯೆ ಗೊತ್ತಾಗಿದೆಯಷ್ಟೆ. ಆದರೆ ಸಿಂಗಪ್ಪಗೌಡರ ಹೊಟ್ಟೆಯುರಿ, ಅವರೆಷ್ಟು ಪ್ರಯತ್ನಿಸಿದರೂ, ಸಂಪೂರ್ಣವಾಗಿ ನಂದಿಹೋಗಲಿಲ್ಲ. ಚಂದ್ರಯ್ಯಗೌಡರನ್ನು ಗುಂಡಿನಿಂದ ಸುಡಿಸುವುದೇ ಮೊದಲಾದ ಕ್ರೂರಕರ್ಮಗಳನ್ನೇನೋ ತ್ಯಜಿಸಿದರು ಎಂಬುದು ಸತ್ಯ. ಆದರೆ ಲಗ್ನದ ದಿವಸವಾದರೂ ಅದು ನಡೆಯದಂತೆ ತಡೆಯಲು ಗುಟ್ಟಾಗಿ ಪ್ರಯತ್ನಿಸಬೇಕೆಂದು ನಿಶ್ಚಯಿಸಿದರು. ಆ ಪ್ರಯತ್ನಕ್ಕೆ ಅವರು ಮೊಂಡಕೆಚ್ಚಿನ ಸರಳಬುದ್ಧಿಯ ಸೋಮನ ಸಹಾಯವನ್ನು ಸಂಪೂರ್ಣವಾಗಿ ಪಡೆದರು. ತನ್ನ ಒಡೆಯನಿಗೂ ಆದರಿಂದ ಉಪಕಾರವಾಗಿ, ಆತನ ಇಚ್ಛೆಯೂ ಕೈಗೂಡುತ್ತದೆ ಎಂದು ಸಿಂಗಪ್ಪಗೌಡರು ಉಪದೇಶ ಮಾಡಿದುದೇ ತಡ, ಸೋಮ ಸ್ವಾಮಿಭಕ್ತಿಯಿಂದ ಪ್ರೇರಿತವಾಗಿ ಮನಃಪೂರ್ವಕವಾದ ವೀರಾವೇಶದಿಂದ ಸಿಂಗಪ್ಪಗೌಡರ ಸಾಹಸಕ್ಕೆ, ಅವರ ಕೈಯ ಕೈದುವಾಗಲು ಸಮ್ಮತಿಸಿದನು. ಅವನು ಪದೇಪದೇ ಸೀತೆಮನೆಗೆ ಹೋಗಿ ಬರುತ್ತಿದ್ದುದನ್ನು ನೋಡಿ ಹೂವಯ್ಯ ಪ್ರಶ್ನಿಸಲು “ಸಿಂಗಪ್ಪಗೌಡರು ಮುಂದಿನ ವರ್ಷ ಕನ್ನಡ ಜಿಲ್ಲೆಯಿಂದ ಆಳುಗಳನ್ನು ತರುವ ವಿಚಾರವಾಗಿ ಮಾತಾಡುತ್ತಿದ್ದಾರೆ” ಎಂದು ಸಿಂಗಪ್ಪಗೌಡರೇ ಹೇಳಿಕೊಟ್ಟಿದ್ದ ಸುಳ್ಳನ್ನು ಸಂಕೋಚವಿಲ್ಲದೆ ಹೂವಯ್ಯನಿಗೆ ಒಪ್ಪಿಸಿದನು. ಚಿನ್ನಯ್ಯನ ಮದುವೆಯಲ್ಲಿ ಚಂದ್ರಯ್ಯಗೌಡರು ಮರುದಿಬ್ಬಣವನ್ನು ಒಳದಾರಿಯಲ್ಲಿ ಸಾಗಿಸಿದ ಮೇಲಂತೂ ಸೋಮನು ಸಿಂಗಪ್ಪಗೌಡರ ಸಾಹಸವನ್ನು ಕೈಕೊಳ್ಳುವುದರಲ್ಲಿ ಅವರಿಗಿಂತಲೂ ಹೆಚ್ಚು ಆಸಕ್ತಿಯುಳ್ಳವನಾಗಿದ್ದನು. ಅದನ್ನು ಕುರಿತೇ ಅವನು ಮದುವೆಯ ಚಪ್ಪರಡಿ ಸಿಂಗಪ್ಪಗೌಡರೊಡನೆ ಮಂತ್ರಾಲೋಚನೆ ಮಾಡುತ್ತಿದ್ದುದು.

ಧಾರೆಯ ಸನ್ನಾಹ ಭರದಿಂದ ಸಾಗುತ್ತಿದ್ದಾಗಲೆ ಸೋಮ ಸಿಂಗಪ್ಪಗೌಡರೊಡನೆ ಮಾತು ಪೂರೈಸಿ, ಯಾರೂ ಸಮೀಕ್ಷಿಸದ ರೀತಿಯಲ್ಲಿ, ಮನೆಯ ಹೊರಗೆ ಹೊರಟುಹೋದನು. ಸಿಂಗಪ್ಪಗೌಡರು ಏನೂ ತಿಳಿಯದವನಂತೆ ಜನರ ಗುಂಪನ್ನು ಸೇರಿದರು.

ಗಂಡನ್ನು ಕರೆತಂದು ಮಂಟಪದೊಳಗೆ ನಿಲ್ಲಿಸಿದರು. ರಾಮಯ್ಯ ಬಾಸಿಂಗ, ಗುಂಡಿನ ಸರ ಇತ್ಯಾದಿಯಾದ ಭೂಷಣಗಳಿಂದ ಅಲಂಕೃತನಾಗಿ, ಸಂಪೂರ್ಣವಾಗಿ ಮದುಮಗನಾಗಿದ್ದನು. ಆ ಸಮಯದಲ್ಲಿ ಹೂವಯ್ಯನೆಲ್ಲಿಯಾದರೂ ಅವನನ್ನು ನೋಡಿದ್ದರೆ ಗುರುತು ಹಿಡಿಯುವುದೂ ಕಷ್ಟವಾಗುತ್ತಿದ್ದಿತೋ ಏನೋ ?

ರಾಮಯ್ಯ ಬಹಳ ತೆಳ್ಳಗಾಗಿಹೋಗಿದ್ದನು. ಮುಖದಲ್ಲಿ ನಿರ್ವೀರ್ಯತೆ, ಖಿನ್ನತೆ, ಬಳಲಿಕೆಗಳು ಬರೆದಂತಿದ್ದುವು. ಕೆನ್ನೆಗಳೆರಡೂ ಬತ್ತಿಹೋಗಿದ್ದುದರಿಂದ, ಕಣ್ಣಿನ ಕೆಳಗೆ ಎಲುಬು ಹೊರಗೆ ಚಾಚಿಕೊಂಡಿತ್ತು. ಎಲ್ಲಕ್ಕಿಂತಲೂ ಆಶ್ಚರ್ಯಕರವಾದುದೆಂದರೆ ಅವನ ಉಡುಪು ! ಅದರಲ್ಲಿ ನವೀನತೆ ಎನ್ನುವುದು ಲವಲೇಶವೂ ಕಾಣುತ್ತಿರಲಿಲ್ಲ. ಅದರಲ್ಲಿಯೂ ಕೂಡ ತಂದೆಯ ಅಭಿರುಚಿಗೆ ಸಂಪೂರ್ಣವಾಗಿ ಶರಣಾಗಿದ್ದಂತೆ ತೋರುತ್ತಿತ್ತು. ಅವನು ತೊಟ್ಟಿದ್ದ ಜರಿಯ ಪೇಟದ ಒಳಗಡೆ ಕ್ರಾಪಿನ ಹೊಸ ರೋಗಕ್ಕೆ ಜುಟ್ಟಿನ ಹಳೆಯ ರೋಗ ಹಿಡಿದಿತ್ತು ! ಖಾದಿಬಟ್ಟೆ, ಗಾಂಧಿ ಟೋಪಿ, ಸ್ವದೇಶಿಗಳೆಲ್ಲ ಎಲ್ಲಿಯೋ ಗಾಳಿಯಲ್ಲಿ ಹಾರಿ ಹೋಗಿದ್ದುವು. ಅವುಗಳ ಕುರುಹು ಕೂಡ ಗೋಚರಿಸುತ್ತಿರಲಿಲ್ಲ. ಅದನ್ನು ನೋಡಿ, ಹೂವಯ್ಯನ ಸಹವಾಸದಿಂದ ಹೊಸದಾಗಿ ಸ್ವದೇಶೀ ವ್ರತವನ್ನು ಕೈಕೊಂಡು, ಖಾದಿಬಟ್ಟೆಗಳನ್ನು ಧರಿಸಲು ಪ್ರಾರಂಭಿಸಿದ್ದ ಸಿಂಗಪ್ಪಗೌಡರಿಗೂ ‘ಇಸ್ಸಿ’ ಎನ್ನಿಸಿಬಿಟ್ಟಿತು ! ಒಟ್ಟಿನಲ್ಲಿ ಕನಿಕರಕ್ಕೆ ಯೋಗ್ಯವಾಗಿದ್ದನು ರಾಮಯ್ಯ.

ಮದುಮಗಳನ್ನು ಮಂಟಪಕ್ಕೆ ಎತ್ತಕೊಂಡು ಬಂದರು – ಹೊತ್ತು ತಂದರು. ಪದ್ಧತಿಯ ದೃಷ್ಟಿಯಿಂದ ಮಾತ್ರವಲ್ಲದೆ ಅದು ಅವಶ್ಯಕವಾಗಿಯೂ ಇತ್ತು. ಸೀತೆಯನ್ನು ಮದುಮಗಳಾಗಿ ಮಾಡಿದ್ದರು. ಆದರೆ ಸೀತೆ ಮದುಮಗಳಾಗಿಯೂ ಇರಲಿಲ್ಲ ; ಮದುಮಗಳು ಸೀತೆಯಾಗಿಯೂ ಇರಲಿಲ್ಲ. ಆಕೆಗೆ ಬಾಹ್ಯಪ್ರಜ್ಞೆ ಇರಲಿಲ್ಲ. ಅಲ್ಲಿದ್ದವರು ಆಕೆಗೆ ಆಗತಾನೆ ಮೈಮೇಲೆ ಬಂದಿದೆ ಎನ್ನುತ್ತಿದ್ದರು. ಸಿಂಗಪ್ಪಗೌಡರ ಅಕ್ಕಪಕ್ಕದಲ್ಲಿದ್ದವರು ಅವರ ಕಡೆಗೆ ನೋಡುತ್ತಿದ್ದರು. ಏಕೆಂದರೆ, ಅವರ ಬಾಳದೆಹೋದ ಮಗನ ದೆಯ್ಯವಷ್ಟೇ ಸೀತೆಗೆ ಹಿಡಿದಿದ್ದುದು !

ಸಾಲಂಕೃತ ಶವವನ್ನು ಹೊತ್ತುಕೊಂಡು ಬಂದು ಆಪುಕೊಟ್ಟು ನಿಲ್ಲಿಸುವಂತೆ ಸೀತೆಯನ್ನು ಹೊತ್ತುತಂದು ರಾಮಯ್ಯನ ಪಕ್ಕದಲ್ಲಿ, ನಿಲ್ಲಿಸಲಿಲ್ಲ, ಹಿಡಿದುಕೊಂಡು ನಿಂತರು. ಸೀತೆಯ ಆ ಸ್ಥಿತಿಯನ್ನು ನೋಡಿದೊಡನೆ ರಾಮಯ್ಯನ ಹೃದಯದಲ್ಲಿ ಹಠಾತ್ತಾಗಿ ಭೀತಿ ಸಂಚರಿಸಿತು. ಆದರೆ ಆ ಭೀತಿ ಆಗ ಆತನಿಗೆ ಹಠಾತ್ತಾಗಿ ತೋರಿದರೂ, ನಿಜವಾಗಿಯೂ ಹಠಾತ್ತಾದುದಾಗಿರಲಿಲ್ಲ. ಬಹುದಿನಗಳಿಂದಲೂ, ಆ ಭೀತಿ ತಲೆಯೆತ್ತಿದಂತೆಲ್ಲ ಅದನ್ನು ಅದುಮಿ ಅದುಮಿ ಒಳಗೆ ತಳ್ಳಿದನು. ಅವಕಾಶ ಸಿಕ್ಕಿದೊಡನೆ ಅದು ಹುತ್ತವೊಡೆದು ಮತ್ತೆ ಹೆಡೆಯೆತ್ತಿತ್ತು. ಅವನ ಮೈ ನಡುಗಿ, ಬೆವರಿತು. ಕಣ್ಣು ಮಂಜುಮಂಜಾಯಿತು. ಮಿದುಳು ಕದಡಿದಂತಾಯಿತು. ನಿಂತಂತೆಯೆ ಕಡಿದುಕೊಂಡು ಬೀಳುತ್ತೇನೆಯೋ ಎಂದು ಬೆದರಿದನು. ಇದ್ದಕಿದ್ದ ಹಾಗೆ ಬಾಯಾರಿಕೆ ಹೆಚ್ಚಾಯಿತು. ಪಕ್ಕದಲ್ಲಿದ್ದವರೊಡನೆ ನೀರು ಕೇಳಿದನು. ಅವರು ಪಾನಕ ತಂದುಕೊಟ್ಟರು. ಆದರೆ ಮಾವನ ಮನೆಯ ಪಾನಕವಾದರೂ ಕೂಡ ದೇಹದ ಬಾಯಾರಿಕೆಯನ್ನು ಆರಿಸಬಲ್ಲುದೇ ಹೊರತು, ಆತ್ಮದ ತೃಷೆಯನ್ನು ನಿವಾರಿಸಬಲ್ಲುದೇ ? ತನ್ನ ಕೈಗೆ ಬಿದ್ದಿದ್ದ, ಸೀತೆ ಹೂವಯ್ಯಗೆ ಬರೆದಿದ್ದ ಕಾಗದದ ನೆನಪಾಯಿತು. ಹೂವಯ್ಯನ ಧ್ಯಾನಪೂರ್ಣವಾದ ಸೌಮ್ಯ ಚಿತ್ರವೂ ಅವನ ಸ್ನೇಹಮಹಿಮೆಗಳೂ ಚಿತ್ತದಲ್ಲಿ ಸುತ್ತಿದುವು. ಮಡಿದಿದ್ದ ಕೃಷ್ಣಪ್ಪನ ನೆನಪೂ ಆಗಿ ಹೆದರಿಕೆಯಾಯಿತು. ಮದುವೆ ಇದ್ದಕಿದ್ದಂತೆ ಅಸಹ್ಯವಾಗಿ ತೋರಿತು. ತಾನಾವುದೋ ಕ್ರೂರಕರ್ಮದಲ್ಲಿ ಭಾಗಿಯಾಗಿರುವಂತೆ ಭಾಸವಾಯಿತು. ಮಂತ್ರ ಹೇಳುತ್ತಿದ್ದ ಜೋಯಿಸರು ಮೊದಲುಗೊಂಡು ಗಟ್ಟಿಯಾಗಿ ಮಾತಾಡುತ್ತೇನೆ ಎಂದು ಬಾಯಿ ಮಾಡುತ್ತಿದ್ದ ತನ್ನ ತಂದೆ, ಧಾರೆಯೆರೆದುಕೊಡಲು ಸಿದ್ಧರಾಗಿ ನಿಂತಿದ್ದ ಅತ್ತೆಮಾವಂದಿರು, ಸುತ್ತಲೂ ಗಾಳಿಯಾಡದಂತೆ ಮುತ್ತಿಕೊಂಡಿದ್ದ ಸ್ತ್ರೀ ಪುರುಷರ ಸಮುದಾಯ, ಆ ಮಂಟಪ, ಆ ಚಪ್ಪರ, ಆ ದೀಪಗಳು, ಆ ಗದ್ದಲ – ಎಲ್ಲರೂ ಎಲ್ಲವೂ ಹೇಯವಾಗಿ ಕಂಡುಬಂದು, ರಾಮಯ್ಯನಲ್ಲಿ ಮಹಾದ್ವೇಷಭಾವವುದಿಸಿತು. ತಾನು ಕಷ್ಟಸಂಕಟಗಳ ಇಕ್ಕಟ್ಟಿನಲ್ಲಿ ಸಿಕ್ಕಿ, ನುಗ್ಗುನುರಿಯಾಗುತ್ತಿದ್ದಂತೆ, ಉಸಿರು ಕಟ್ಟಿ ಸಾಯುತ್ತಿದ್ದಂತೆ ಭಾಸವಾಯಿತು. ಮುಳುಗಿ ಉಸಿರು ಕಟ್ಟಿಹೋಗುತ್ತಿದ್ದ ರಾಮಯ್ಯನಿಗೆ ಹೂವಯ್ಯನ ನೆನಪು ಗಾಳಿಯಂತೆ ಬೀಸಿತು. ಅದುವರೆಗೂ ಹಾಗೆ ಆಲೋಚಿಸದಿದ್ದವನು ಆಗ ಹೂವಯ್ಯ ಬಂದಿರಬಹುದೆಂದು ಸುತ್ತಲೂ ನೋಡಿದನು. ಜನಗಳ ಸಮೂಹ ! ಜನಗಳ ಸಮೂಹ ! ಮತ್ತೂ ಜನಗಳ ಸಮೂಹ ! ಹೂವಯ್ಯನೆಲ್ಲಿರಬೇಕು ಅಲ್ಲಿ ? ಹೂವಯ್ಯನಿಗೆ ಬದಲಾಗಿ ಮನೆಯ ಹೊರಗಡೆ, ಹತ್ತಾರು ಆಳೆತ್ತರದ ಮೇಲೆದ್ದ ಬೆಂಕಿಯ ಮಹಾಜ್ವಾಲೆ ಕಾಣಿಸಿತು !

ಬೆಂಕಿ ! ಬೆಂಕಿ ! ಬೆಂಕಿ ! ಎಂದು ಕೂಗಿಕೊಂಡು ಜನಗಳೆಲ್ಲ ಗಾಬರಿಯಿಂದ ನುಗ್ಗಿದರು.

ಮಗಳನ್ನು ಧಾರೆಯೆರೆದುಕೊಡಲು ಸಿದ್ಧರಾಗಿ ನಿಂತಿದ್ದ ಶ್ಯಾಮಯ್ಯಗೌಡರು (ಮನೆಯನ್ನು ಉಳಿಸಿಕೊಳ್ಳುವುದು ಅದಕ್ಕಿಂತಲೂ ಹೆಚ್ಚಾದ ಪ್ರಥಮ ಕರ್ತವ್ಯವಲ್ಲವೆ ?) ಬೆಂಕಿ ಬಿದ್ದಿದ್ದ ಕಡೆಗೆ ಓಡಲೆಳಸಿದರು. ಗಡಿಬಿಡಿಯಲ್ಲಿ ತಮ್ಮ ಧೋತ್ರದ ಸೆರಗನ್ನು ತಮ್ಮ ಹೆಂಡತಿ ಗೌರಮ್ಮನವರ ಸೆರಗಿಗೆ ಗಂಟುಹಾಕಿ ಕಟ್ಟಿದ್ದ ವಿಷಯ ಹೇಗೆತಾನೆ ಜ್ಞಾಪಕಕ್ಕೆ ಬರಬೇಕು ? ಪಕ್ಕದಲ್ಲಿ ಜನರಿಲ್ಲದಿದ್ದರೆ ಗೌರಮ್ಮನವರು ನೆಲಕ್ಕುರುಳಿ ಅಪಾಯವಾಗುತ್ತಿತ್ತು. ಯಾರೋ ಸೆರಗು ಬಿಚ್ಚಿದರು. ಶ್ಯಾಮಯ್ಯಗೌಡರು ಆಳುಗಳನ್ನೂ ಜನರನ್ನೂ ಕರೆಯುತ್ತ ಡೊಳ್ಳು ಬೊಜ್ಜುಗಳಿಗೆ ಲಘುತ್ವ ಬಂದಿದ್ದಂತೆ ಧಾವಿಸಿದರು. ಚಂದ್ರಯ್ಯಗೌಡರು ಜೋಯಿಸರಿಗೆ ಧಾರೆಯೆರೆಯುವಂತೆ ಬೆಸಸಿ, ಕ್ಷಣಕ್ಷಣಕ್ಕೂ ಭಯಂಕರವಾಗುತ್ತಿದ್ದ ಬೆಂಕಿಯ ಕಡೆಗೆ, ಅಭ್ಯಾಸ ಬಲದಿಂದ ಸೇರೆಗಾರರ ರಂಗಪ್ಪಸೆಟ್ಟರನ್ನು ಕರೆಯುತ್ತ, ನುಗ್ಗಿದರು, ರಂಗಪ್ಪ ಸೆಟ್ಟರು ಅದಕ್ಕೆ ಮೊದಲೇ ಆ ಸ್ಥಳಕ್ಕೆ ಓಡಿದ್ದರು.

ಮನೆಗೆ ಮುಟ್ಟಿಕೊಂಡಂತೆ ಸಮೀಪವಾಗಿದ್ದ ಕಣದಲ್ಲಿ ಬಿಸಲಿನಲ್ಲಿ ಚೆನ್ನಾಗಿ ಒಣಗಿ ನಿಂತಿದ್ದ ನೆಲ್ಲುಹುಲ್ಲಿನ ಬಣಬೆಗಳಲ್ಲಿ ಒಂದು ಹೊತ್ತಿಕೊಂಡು ಉರಿಯತೊಡಗಿದ್ದಿತು. ಬೆಂಕಿ ರಾಕ್ಷಸವಾಗಿ ಭಯಂಕರವಾಗಿ ಭೀಮಾಕಾರವಾಗಿ ಗರ್ಜಿಸುತ್ತ ಕ್ಷಣ ಕ್ಷಣಕ್ಕೂ ಪ್ರಬಲವಾಗುತ್ತಿತ್ತು. ಕತ್ತಲೆಯಲ್ಲಿ ಅದರ ದೇದೀಪ್ಯ ಮಾನವಾದ ಕೆಂಪು ಜ್ವಾಲೆಗಳು ಆಕಾಶವನ್ನೇ ನೆಕ್ಕಿ ನೊಣೆಯಲು ಪ್ರಯತ್ನಸುವಂತೆ ತೋರುತ್ತಿದ್ದುವು. ಕಾಂತಿ ಬಹುದೂರದ ಮರಗಿಡಗಳನ್ನೂ ಬೆಳಗಿ ನೆರಳಾಡುವಂತೆ ಮಾಡಿದ್ದಿತು. ಬೆಂಕಿ ಹೊತ್ತಿದ ಹುಲ್ಲಿನ ಸಣ್ಣ ಸಣ್ಣ ಸಿಂಬೆಗಳು ಚೂರುಗಳೂ ಬೀಸತೊಡಗಿದ್ದ ಗಾಳಿಯಲ್ಲಿ ಹಾರಾಡುತ್ತಿದ್ದುವು. ಜನರ ಕೂಗಾಟ, ಕರೆದಾಟ, ಓಡಾಟ, ಬೊಬ್ಬೆ, ರೋದನ, ಅವಸರ, ಗಡಿಬಿಡಿಗಳಲ್ಲಿ ಆ ದೃಶ್ಯ ದಿಗ್‌ಭ್ರಾಂತಿಕರವಾಗಿತ್ತು.

ಸಾಹಸಿಗಳು ಮದುವೆಗೆಂದು ಕೊಪ್ಪರಿಗೆಗಳಲ್ಲಿ, ಕಡಾಯಿಗಳಲ್ಲಿ, ಹಂಡೆಗಳಲ್ಲಿ, ದೊಡ್ಡಕೌಳಿಗೆಗಳಲ್ಲಿ, ಕೊಡಪಾನಗಳಲ್ಲಿ ತುಂಬಿಟ್ಟಿದ್ದ ನೀರನ್ನು ಬಿಂದಿಗೆಗಳಲ್ಲಿ ತುಂಬಿತುಂಬಿ ಕೊಂಡೊಯ್ದು ಬೆಂಕಿಯನ್ನಾರಿಸಲು ತೊಡಗಿದರು. ಮತ್ತೆ ಕೆಲವರು ಬಾವಿಯಿಂದ ನೀರೆತ್ತಿ ಎತ್ತಿ ಪಾತ್ರೆಗಳಿಗೆ ತುಂಬತೊಡಗಿದರು. ಇನ್ನೂ ಕೆಲವರು ಹಸುರೆಲೆ ತುಂಬಿದ ಕೊಂಬೆಗಳ ಸಹಾಯದಿಂದ ಬೆಂಕಿ ಇತರ ಬಣಬೆಗಳಿಗೆ ಹಬ್ಬದಂತೆ ನೋಡಿಕೊಳ್ಳಲು ಸಿದ್ಧರಾಗಿ ನಿಂತರು. ಕೆಲವರು ಬಾಳೆಯ ಮರಗಳನ್ನು ಕಡಿದುತಂದು ಬೆಂಕಿಯಮೇಲೆ ಎಸೆದರು. ಆದರೂ ಅಗ್ನಿಭೈರವನ ಪ್ರಳಯ ತಾಂಡವ ಒಂದಿನಿತೂ ಹಿಮ್ಮೆಟ್ಟುವಂತೆ ತೋರಲಿಲ್ಲ. ಉರಿಯುತ್ತಿದ್ದ ಬಣಬೆಯಿಂದ ಬೆಂಕಿ ನೀಳವಾದ ತನ್ನ ಕೇಸುರಿ ನಾಲಗೆಯೊಂದನ್ನು ಚಾಚಿ ಪಕ್ಕದ ಬಣಬೆಯನ್ನೂ ನೆಕ್ಕಿಬಿಟ್ಟಿತು ! ಒಡನೆಯೆ ಅದೂ ರುದ್ರವಾಗಿ ಹೊತ್ತಿಕೊಂಡಿತು. ಜನರು ಹತಾಶರಾದರು. ನೋಡುತ್ತಿದ್ದ ಹಾಗೆಯೆ ಮತ್ತೊಂದು ಬಣಬೆಯೂ ಹೊತ್ತಿಕೊಂಡಿತು !

ಶ್ಯಾಮಯ್ಯಗೌಡರು ಕೈ ಕೈ ಮುಗಿಯುತ್ತಾ ಎದೆ ಬಡಿದುಕೊಳ್ಳುತ್ತಾ “ಅಯ್ಯೋ, ನನ್ನ ಮನೇ ಉಳಿಸಿಕೊಡ್ರಪ್ಪಾ ! ಹೋಯ್ತಲ್ಲೋ ! ದೇವರೇ !” ಎಂದು ಮೊದಲಾಗಿ ಗೋಳಿಡುತ್ತಾ, ಒಂದುಸಾರಿ ನೆರೆದಿದ್ದ ಮನುಷ್ಯರನ್ನೂ ಮತ್ತೊಂದುಸಾರಿ ಅಗ್ನಿದೇವನನ್ನೂ, ಇನ್ನೊಮ್ಮೆ ಭೂತಪಂಜ್ರೊಳ್ಳಿಗಳನ್ನೂ ಪ್ರಾರ್ಥಿಸತೊಡಗಿದರು. ಅವರನ್ನು ನೋಡಿ ಕನಿಕರದಿಂದ ಜನರು ಮತ್ತೆ ಉತ್ಸಾಹಗೊಂಡು, ಬೆಂಕಿ ಬೇರೆಯೆಡೆಗಳಿಗೆ ಹಬ್ಬದಂತೆ ತಡೆಯಲು ಉರಿಸೆಕೆಯಲ್ಲಿ ಬೆವರಿಬೆವರಿ ಬೇಗುದಿಗೊಂಡು ಭಗೀರಥ ಪ್ರಯತ್ನ ಮಾಡತೊಡಗಿದರು.

ಈ ಮಧ್ಯೆ ಕೆಲವರು ದನದ ಕೊಟ್ಟಿಗೆಗೆ ಬೆಂಕಿ ಬಿದ್ದರೆ ಜಾನುವಾರುಗಳಿಗೆ ಅಪಾಯವಾದೀತೆಂದು ಭಾವಿಸಿ, ಅವುಗಳ ಕೊರಳ ಕಣ್ಣಿಗಳನ್ನೆಲ್ಲ ಬೇಗ ಬೇಗನೆ ಕತ್ತಿಯಿಂದ ಕತ್ತರಿಸಿಹಾಕಿದರು. ಜನಗಳ ಮಧ್ಯೆ ದನಕರುಗಳೂ ನುಗ್ಗಿ ಗಲಿಬಿಲಿ ‘ರಾಣಾರಂಪ’ವಾಗಿ ಬಿಟ್ಟಿತು.

ಇತ್ತ ಒಳ ಅಂಗಳದಲ್ಲಿ ವೆಂಕಪ್ಪಯ್ಯ ಜೋಯಿಸರು ಧಾರೆಯ ಸುಮುಹೂರ್ತಕ್ಕೆ ಚ್ಯುತಿಬಾರದಂತೆ ದಕ್ಷತೆಯಿಂದ ವರ್ತಿಸುತ್ತಿದ್ದರು. ಆದಷ್ಟು ಬೇಗನೆ ಆಪದ್ಧರ್ಮಕ್ಕನುಸಾರವಾಗಿ ಮಂತ್ರಗಳನ್ನೆಲ್ಲ ಚುಟುಕಿ ಚುಟುಕಿ ಮಾಡಿ ಹೇಳಿ ಪೂರೈಸಿ ರಾಮಯ್ಯನ ಕೈಗೆ ಮಾಂಗಲ್ಯಸೂತ್ರವನ್ನು ಕೊಟ್ಟು ಸೀತೆಯ ಕಂಠಕ್ಕೆ ‘ತಾಳಿ ಕಟ್ಟು’ವಂತೆ ಹೇಳಿದರು.

ಆ ಭಯಾನಕ ಸನ್ನಿವೇಶದಲ್ಲಿ ಬಗೆಗೆಟ್ಟಂತಿದ್ದ ರಾಮಯ್ಯನಿಗೆ ಯಾವುದೂ ಬೇಡವಾಗಿತ್ತು. ಮದುವೆಯ ಮಂಟಪ ಸುಡುಗಾಡಿನ ಚಿತೆಯಮೇಲೆ ಸ್ಥಾಪಿತವಾಗಿದ್ದಂತೆ ತೋರಿತು. ಮದುವೆಯ ಮಂಟಪ ಸುಡುಗಾಡಿನ ಚಿತೆಯ ಮೇಲೆ ಸ್ಥಾಪಿತವಾಗಿದ್ದಂತೆ ತೋರಿತು. ಜೋಯಿಸರು ಪಿಶಾಚಿಗಳ ಮುಖ್ಯಸ್ಥನಂತೆ ತೋರಿದರು. ಸುತ್ತ ಗಂಡಸರಾರೂ ಇರಲಿಲ್ಲ. ಎಲ್ಲರೂ ಬೆಂಕಿ ಬಿದ್ದಲ್ಲಿಗೆ ಓಡಿದ್ದರು. ಹೆಂಗಸರಲ್ಲಿ ಕೆಲರು ನಿರ್ವಾಹವಿಲ್ಲದೆ ಅಲ್ಲಿ ನಿಂತಿದ್ದರು. ಸೀತೆಯ ಅಲಂಕೃತ ಶರೀರವೂ ಅದನ್ನು ನೆಟ್ಟಗೆ ಹಿಡಿದು ನಿಲ್ಲಿಸಿಕೊಂಡಿದ್ದ ಕೈಗಳ ಮಧ್ಯೆ ನಿಂತಿತ್ತು.

ಜೋಯಿಸರು “ಹೂಂ, ಬೇಗ ಕಟ್ಟು !” ಎಂದು ಕೂಗಿದರು, ಆ ಗಲಾಟೆಯಲ್ಲಿ ಗಟ್ಟಿಯಾಗಿ ಕೂಗಿದಲ್ಲದೆ ಕೇಳಿಸುವಂತಿರಲಿಲ್ಲ.

ರಾಮಯ್ಯ ಮಂಕುಹಿಡಿದವನಂತೆ, ಬೇರೆ ಏನನ್ನೂ ಆಲೋಚಿಸಲಾರದೆ ಮಂತ್ರವಾದಿ ಹೇಳಿದಂತೆ ಆಚರಿಸುವ ಮಂತ್ರಮುಗ್ಧನಂತೆ, ಜೋಯಿಸರ ಅಪ್ಪಣೆಯ ಮೇರೆಗ ಸೀತೆಯ ಕೊರಳಿಗೆ ತಾಳಿ ಕಟ್ಟಲು ಕೈಯೆತ್ತುತ್ತಿದ್ದನು. ಅಷ್ಟರಲ್ಲಿ ಹೊರಗಡೆ ಏನೋ ಸಿಡಿದಂತೆ ಭಯಂಕರವಾದ ಆಸ್ಫೋಟನದ ಸದ್ದಾಗಿ, ಮನೆ ಝಗ್ಗೆಂದು ನಡುಗಿತು. ಜನಗಳ ಕೂಗು, ಬೊಬ್ಬೆ, ಹಾಹಾಕಾರಗಳು ಮೈನೆತ್ತರು ಹೆಪ್ಪುಗಡುವಂತೆ ಕೇಳಿಬಂದಿತು. ಮಾಂಗಲ್ಯಸೂತ್ರ ರಾಮಯ್ಯನ ಕೈಯಿಂದ ಕಂಪಿಸಿ ಕಂಪಿಸಿ ಜಗುಳಿ ನೆಲಕ್ಕೆ ಬಿದ್ದಿತು. ರಾಮಯ್ಯ ಇದ್ದಕಿದ್ದಹಾಗೆ ಅಢೀರನಾಗಿ ಹಸುಳೆಯಂತೆ ಅಳಲಾರಂಭಿಸಿದನು ! ಜೋಯಿಸರು ಮಂತ್ರ ಹೇಳುತ್ತ ಕೋಪದಿಂದ ಕೆಳಗೆ ಬಿದಿದ್ದ ಮಾಂಗಲ್ಯ ಸೂತ್ರವನ್ನು ತುಡುಕಿ ಎತ್ತಿ ರಾಮಯ್ಯನ ಕೈಗೆ ಮುಟ್ಟಿಸಿ, ಸೀತೆಯ ಕುತ್ತಿಗೆಗೆ ತಾವೇ ಕಟ್ಟಿದರು !

ವೆಂಕಪ್ಪಯ್ಯನವರು ಸೀತೆರಾಮಯ್ಯರ ವಿವಾಹ ಮಹೋತ್ಸವವನ್ನು ಸಾಂಗಗೊಳಿಸಿದ್ದರೋ ಇಲ್ಲವೊ ಅಷ್ಟುಹೊತ್ತಿಗೆ ಕೆಲಮಂದಿ ಮೈಸುಟ್ಟುಹೋಗಿದ್ದ ಶ್ಯಾಮಯ್ಯಗೌಡರನ್ನು ಹೊತ್ತುಕೊಂಡು ಹೆಬ್ಬಾಗಿಲಿನಿಂದ ಒಳಗೆ ಬಂದರು.