ಒಂದು ದಿನ ಬೆಳಗ್ಗೆ ಹಾಸುಗೆಯಮೇಲೆ ಎದ್ದು ಕುಳಿತು ದೇವರಿಗೆ ಕೈಮುಗಿಯುತ್ತಿದ್ದಾಗ, ನಾಗಮ್ಮನವರು ತಮ್ಮ ಎಡ ತೋಳಿನಮೇಲೆ ಒಂದು ಬಿಲ್ಲೆಯಗಲದ ಹಸುರುಮಚ್ಚೆ ಮೂಡಿದ್ದುದನ್ನು ಕಂಡು ನಿಟ್ಟುಸಿರುಬಿಟ್ಟರು. ಮಗನಿಗೆ ಅದನ್ನು ತೋರಿಸುತ್ತ, “ದೆಯ್ಯ ಆಯುಸ್ಸೆಷ್ಟಿದೆ ಅಂತಾ ಮೂಸಿನೋಡಿಕೊಂಡು ಹೋಗ್ಯದೆ. ಇನ್ನೇನು ನನ್ನ ಕಾಲ ಹತ್ತಿರ ಬಂತು” ಎಂದು ಮರುಕದಿಂದ ಆಡಿದರು.

ಹೂವಯ್ಯ ನಗೆಯನ್ನು ತಡಿಯಲಾರದೆ ಮುಗುಳು ನಗುತ್ತ, “ನಿನಗೇನು ಹುಚ್ಚೇನವ್ವಾ? ದೆಯ್ಯ ಮೂಸುತ್ತದಂತೆ! ಆಯುಸ್ಸು ನೋಡಿಕೊಂಡು ಹೋಗ್ತದಂತೆ! ಇದೆಲ್ಲಾ ಯಾರು ಹೇಳ್ದೋರು ನಿನಗೆ? ದೇಹದೊಳಗೆ ಏನೋ ವ್ಯತ್ಯಾಸವಾಗುವುದರಂದ ಕಜ್ಜಿ, ಕುರು, ಇಸುಬು, ಹುಳುಕಡ್ಡಿ-ಎಲ್ಲಾ ಏಳುವಹಾಗೆ  ಈ ಹಸುರುಮಚ್ಚೆಯೂ ಕಾಣಿಸಿಕೊಳ್ಳುತ್ತದೆ. ಅದಕ್ಕೆ ನೀನಿಷ್ಟೋಂದು ಹೆದರಿಬಿಟ್ರೆ?” ಎಂದನು.

ನಾಗಮ್ಮನವರು ಮಗನ ಕಣ್ಣುಗಳನ್ನೆ ನೋಡುತ್ತಾ “ಹೆದರಿಕೆ ಯಾಕಪ್ಪಾ ಸಾಯೋಕೆ? ಇದ್ದೇನು ಸೌಭಾಗ್ಯವಾಗಬೇಕಾಗಿದೆ. ದೆಯ್ಯ ಮೂಸಿನೋಡಿಕೊಂಡು ಹೋಗಿದ್ದು ಒಳ್ಳೇದೆ ಆಯ್ತು!” ಎಂದು ಕಣ್ಣೀರು ಹಾಕಿದರು.

ಹೂವಯ್ಯನಿಗೆ ಮಾತೆಯ ಮಾತಿನ ಒಳ ಅಭಿಪ್ರಾಯ ಅರ್ಥವಾಯ್ತು. ದೆವ್ವ ಮೈಮೂಸಿ ಆಯುಸ್ಸು ಅಜಮಾಯಿಸಿ ಮಾಡಿಕೊಂಡು ಹೋದುದಕ್ಕೆ ತೋಳಿನ ಮೇಲಿದ್ದ ಹಸುರು ಮಚ್ಚೆ ಒಂದು ಸೂಚನೆ ಎಂಬುದರಲ್ಲಿ ಅವನಿಗೆ ಒಂದಿನಿತೂ ವಿಶ್ವಾಸವಿರದಿದ್ದರೂ, ತಾಯಿಯ ಮಾತೂ ಕಣ್ಣೀರೂ ಆಕೆಯ ಹೃದಯ ವೇಧೆಯ ಸ್ಥಿತಿಯನ್ನು ಚೆನ್ನಾಗಿ ಸೂಚಿಸುತ್ತಿದ್ದುವು. ಮಗನು ಮದುವೆಗೊಪ್ಪದೆ ಹೆಚ್ಚು ಹೆಚ್ಚು ನಿಸ್ಸಂಗಿಯಾಗುತ್ತಿದ್ದುದನ್ನು ಕಂಡು ನಾಗಮ್ಮನವರು ಒಳಗೊಳಗೆ ಮರುಗಿ ಮರುಗಿ ಇಳಿದು ಹೋಗುತ್ತಿದ್ದರು.

ಹುಟ್ಟುವುದು, ತಂದೆತಾಯಂದಿದರ ಅಕ್ಕರೆಯ ಸಕ್ಕರೆಯನ್ನು ಸವಿದು ಬೇಳೆಯುವುದು. ಅವರು ಒಲಿದಿತ್ತ ಚೆಲುವೆಯಾದ ನಲ್ಲೆಯನ್ನು ಕೈ ಹಿಡಿಯುವುದು, ಚೆನ್ನಾಗಿ ದುಡಿದು ಸಂಪಾದಿಸಿ ನೆಮ್ಮದಿಯಿಂದ ಬಾಳುವುದು, ಮಕ್ಕಳನ್ನು ಹೆತ್ತು ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡುವುದು ಮತ್ತೆ ಅವರಿಗೆ ಮದುದವೆ ಮಾಡುವುದು- ಇದೇ ತಾನೆ ಬಾಳಿನ ಹೆದ್ದಾರಿ ಮತ್ತು ಗುರಿ. ಸಾಮಾನ್ಯರಿಗೆ ಆ ಗುರಿ ತಪ್ಪಿದಮೇಲೆ ಜೀವನ ಉದ್ದೇಶವಿಲ್ಲದೆ ಅರ್ಥಹೀನವಾಗುತ್ತದೆ. ಶೂನ್ಯವಾಗುತ್ತದೆ. ಜನ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ಹೆಗ್ಗಡಿತಿಯಾಗಿದ್ದು, ನಾಲ್ಕಾರು ಸಮಾನ ಸ್ತ್ರೀಯರಮೇಲೆ ಅಧಿಕಾರ ನಡೆಸಿ ತನ್ನ ಮತ್ತು ಇತರರ ಮಕ್ಕಳನ್ನು ಸಾಕಿ ಸಲಹಿ, ಮುಂದೆ ಸೊಸೆಯನ್ನಾಳಬೇಕೆಂದು ಹಾರೈಸಿದ್ದ ನಾಗಮ್ಮನವರಿಗೆ ಮಗನ ಸಂನ್ಯಾಸಚಿಂತೆ ತಮ್ಮ ಶ್ಮಶಾನ ಚಿತೆಯಾಗಿ ಪರಿಣಮಿಸಿದಂತಿತ್ತು. ಅವರು ಮೊದಲಿನಂತೆದಯೆ ಮನೆಗೆಲಸ ಮತ್ತು ಆಳುಕಾಳುಗಳ ಹೊರಗಿನ ಕೆಲಸಗಳಲ್ಲಿ ಮುತುವರ್ಜಿ ವಹಿಸಿ ಆಸಕ್ತಿಯಿಂದ ಕೆಲಸಮಾಡುತ್ತಿದ್ದಂತೆ ತೋರಿದರೂ ಆ ಕ್ರಿಯೆಯ ಹಿಂದುದಗಡೆ ಉತ್ಸಾಹವಿರಲಿಲ್ಲ. ಉಗಿಯಂತ್ರ ನಿಂತು ಹೋದಮೇಲೆಯೂ ಚಕ್ರಗಳು ಸ್ವಲ್ಪ ದೂರ ಉರುಳಿ ಚಲಿಸುವಂತೆ ಅವರ ಜೀವನ ಸಾಗುತ್ತಿತ್ತು.

ನಾಗಮ್ಮನವರಿಗೆ ಪ್ರಪಂಚದ ಕಲ್ಯಾಣವೆಲ್ಲ ತಮ್ಮ ಮಗನ ಮದುವೆಯ ಮೇಲೆ ನಿಂತಹಾಗಿತ್ತು.  ಎಲ್ಲಿ ಯಾರಿಗೆ ಏನು ಅನಾಹುತವಾದುದನ್ನು ಕೇಳಿದರೂ ಸರಿ, ’ಪ್ರಾಯಕ್ಕೆ ಬಂದವರು ಮದುವೆಯಾಗದಿದ್ದರೆ ಮತ್ತೇನಾಗ್ತದೆ!’ ಎನ್ನುತ್ತಿದ್ದರು. ಒಮ್ಮೆ ಹೂವಯ್ಯ ಜಾರಿಬಿದ್ದು ಪೆಟ್ಟಾದಾಗಲೂ ’ಮದುವೆ ಮಾಡಿಕೊಂಡಿದ್ರೆ ಹೀಂಗೆಲ್ಲಾ ಆಗ್ತಿತ್ತೇನು?’ ಎಂದರಂತೆ. ಇನ್ನೊಮ್ಮೆ ’ನಂದಿ’ ಎತ್ತು ಅಗಳಿಗೆ ಬಿದ್ದು ಕಾಲು ಮುರಿದುಕೊಂಡಾಗ “ನೀನು ಲಗ್ನಾಗಿದ್ದರೆ ಹೀಂಗೆಲ್ಲಾ ಆಗ್ಬೇಕಿತ್ತೇನೋ? ಈಗಲಾದರೂ ಮಾಡಿಕೊಂಡ್ರೆ, ಪಾಪ, ಆ ಗೋವಿನ ಕಾಲಾದ್ರೂ ಸರಿಯಾಗ್ತದೆ” ಎಂದು ಬುದ್ದಿ ಹೇಳಿದರಂತೆ. ಮಳೆಯಾಗದಿದ್ದರೆ, ಮಳೆ ಹೆಚ್ಚಾಗಿ ಬಂದು ಗದ್ದೆಯ ಅಂಚು ಕೋಡಿಬಿದ್ದರೆ, ಅಡಕೆಯ ತೋಟಕ್ಕೆ ಕೊಳೆ ರೋಗ ಬಂದರೆ, ರಾತ್ರಿ ಗೂಬೆ ಕೂಗಿದರೆ, ನಾಯಿ ವಿಕಟವಾಗಿ ಬಳ್ಳಿಕ್ಕಿದರೆ, ಸಂತೆಯಲ್ಲಿ ಪದಾರ್ಥಗಳಿಗೆ ಬೆಲೆ ಹೆಚ್ಚಿದರೆ-ಎಲ್ಲಕ್ಕೂ ಹೂವಯ್ಯ ಮದುವೆಯಾಗದಿರುವುದೇ ಮುಖ್ಯ ಕಾರಣವೆಂದು ಹೇಳುತ್ತಿದ್ದರು. ಅವರಿಗೆ ಇನ್ನು ಎರಡು ಮೂರು ವರ್ಷಗಳಲ್ಲಿ ಯೂರೋಪು ಖಂಡದಲ್ಲಿ ಘೋರಯುದ್ಧ ಪ್ರಾರಂಭವಾಗುತ್ತದೆ ಎಂದು ಗೊತ್ತಿದ್ದಿದ್ದರೆ, ಅದಕ್ಕೂ ತನ್ನ ಮಗ ಮದುವೆಯಾಗದಿರುವುದನ್ನೇ ಏಕಮಾತ್ರ ಕಾರಣವನ್ನಾಗಿ ಒಡ್ಡುತ್ತಿದ್ದರೆಂದು ತೋರುತ್ತದೆ!

ಸುಮಾರು ಒಂದುತಿಂಗಳ ಹಿಂದೆ ಇದ್ದಿರಬಹುದು, ಸಸಿನಟ್ಟಿಯ ಕಾಲದಲ್ಲಿ, ಹೂವಯ್ಯನಾದಿಯಾಗಿ ಸರ್ವರೂ ಎಷ್ಟು ಬೇಡವೆಂದರೂ ಕೇಳದೆ ಬೆಳಗಿನಿಂದ ಕಪ್ಪಾಗುವವರೆಗೆ ಗದ್ದೆಯಲ್ಲಿ, ಮೊಳಕಾಲೆತ್ತರ ನೀರಿನಲ್ಲಿ,  ಜಿರ‍್ರೆಂದು ಹೊಯ್ಯುತ್ತಿದ್ದ ಮಳೆಯಲ್ಲಿ, ಬಗ್ಗಿ ಎದ್ದು, ಎದ್ದು ಬಗ್ಗಿ ನಾಗಮ್ಮ ನಾಟಿಕೆಲಸ ಮಾಡಿದರು. ಅಂದಿನಿಂದ ಮೈನೋವು ಎಂದು ಹಾಸಗೆ ಹಿಡಿದರು. ಕಡೆಗೆ ಜ್ವರವೂ ಬಿಟ್ಟು ಬಿಟ್ಟು ಬರತೊಡಗಿತು. ಔಷಧಿಗಳನ್ನು ಕೊಟ್ಟರೆ ಕುಡಿಯಲೊಲ್ಲದೆ ಹೋದರು. ತಮಗೆ ತಿಳಿದಿದ್ದ ದೆವ್ವಭೂತಗಳಿಗೆಲ್ಲ ಹರಕೆ ಹೇಳಿಕೊಳ್ಳುವುದು; ಆ ಭಟ್ಟರಿಂದ, ಈ ಜೋಯಿಸರಿಂದ ಕೂಳೂರಿಂದ, ಸಿದ್ದರಮಠದಿಂದ ಚೀಟಿ ವಿಭೂತಿ ಅಂತ್ರ ತಂತ್ರ ಮಂತ್ರ ತರಿಸುವುದು-ಹೀಗೆಲ್ಲ ಮಾಡುತ್ತ ಬಂದರು. ಪುಟ್ಟಣ್ಣನಿಗಂತೂ ಹಿಂದಕ್ಕೂ ಮುಂದಕ್ಕೂ ತಿರುಗೀ ತಿರುಗೀ ಸಾಕಾಯಿತು. ಮಗ ಹೇಳಿದ ಮಾತನ್ನಂತೂ ಕೇಳುತ್ತಲೇ ಇರಲಿಲ್ಲ. ಅವನ ಮೇಲಿನ ಒಂದು ವಿಧವಾದ ಹಟಕ್ಕಾಗಿಯೆ ಹಾಗೆ ಮಾಡುತ್ತಿದ್ದಾರೆಯೊ ಎಂಬಂತೆಯೂ ತೋರುತ್ತಿತ್ತು. ಒಮ್ಮೊಮ್ಮೆ ಅವರಿವರ ಹತ್ತಿರ ಹೂವಯ್ಯ ಸಾಕಿದ್ದ ಬಲೀಂದ್ರ ಹೋತದಭೂತದ ಚೇಷ್ಟೆಯೇ ತಮ್ಮ ಕಾಯಿಲೆಗೆ ಕಾರಣವೆಂದೂ, ಅದನ್ನು ಬಲಿಕೊಟ್ಟರೆ ಎಲ್ಲ ಸರಿಹೋಗುತ್ತದೆಂದೂ ಗೊಣಗುತ್ತಿದ್ದರು ಅಂತೂ ಇಂತೂ ಅವರ ದೇಹಸ್ಥಿತಿ ಮೆಲ್ಲಗೆ ವಿಷಮವಾಗುತ್ತಿತ್ತು.

ನಾಗಮ್ಮನವರಿಗೆ ತಮ್ಮ ಮಗನಮೇಲೆ ಅಗಾಧವಾದ ಪ್ರೀತಿಯಿದ್ದಿತ್ತೇ ಹೊರತು, ಆತನ ವ್ಯಕ್ತಿತ್ವವನ್ನು ಗ್ರಹಿಸುವ ಬುದ್ಧಿಶಕ್ತಿಯಿರಲಿಲ್ಲ. ಹೂವಯ್ಯನ ಹೃದಯದ ತುಮುಲಗಳೂ ಮನಸ್ಸಿನ ಜಟಿಲಗಳೂ ಅವರ ಸರಳ ದೃಷ್ಟಿಗೆ ಎಟುಕುವಂತೆಯೂ ಇರಲಿಲ್ಲ. ಅವನ ಜೀವನಪಕ್ಷಿ ಕನಸುಮೊಟ್ಟೆಗಳನ್ನು ಒಡೆದುಕೊಂಡು ಇನ್ನೂ ಹೊರಗೆ ಹಾರಿರಲಿಲ್ಲ. ಮೊದಲು ಅವನ ಹೃದಯದಲ್ಲಿದ್ದುದು ತಾನು ವಿದ್ಯಾವಂತನಾಗಬೇಕು, ಪ್ರತಿಭಾಶಾಲಿಯಾಗಬೇಕು, ಕೀರ್ತಿ ಸಂಪಾದಿಸಬೇಕು, ಲೋಕದ ಮಹಾಪುರುಷರಂತಾಗಬೇಕು, ಸ್ವಾರ್ಥತ್ಯಾಗದಿಂದ ಜೀವನವನ್ನು ಪರಮಸಾರ್ಥಕತೆಗೆ ಬಲಿದಾನಕೊಡಬೇಕು-ಎಂಬ ಹೆಗ್ಗನಸು. ಅದು ಬಿರಿದು ಇನ್ನೊಂದು ಸಿಂಗಾರದ ಹೊಂಗನಸಿಗೆ ಎಡೆಗೊಟ್ಟಿತು-ಸೀತೆಯ ಒಲುಮೆ! ಆ ಹೊಂಗನಸೂ ನೋಡೆ ನೋಡೆ ಕಣ್ಣು ಮುಂದೆಯೆ ಸಿಡಿದೊಡೆಯಿತು. ಹೂವಯ್ಯ ಮತ್ತೊಂದು ಕನಸನ್ನು ಕಟ್ಟಿ, ಅದನ್ನು ಸುತ್ತಿಕೊಂಡು, ತನಗೊದಗಿದ ನಿಷ್ಠುರ ನಿರಾಶೆಯನ್ನು ಮರೆಯಲೆಳಸಿದನು. ಪ್ರಕೃತಿ ಪ್ರಪಂಚದ ಸೌಂದರ್ಯದಲ್ಲಿಯೂ ಭಾವ ಸಮಾಧಿಯಲ್ಲಿಯೂ ಅಧ್ಯಯನ ಆಲೋಚನೆಗಳಲ್ಲಿಯೂ ಕೃಷಿಯಲ್ಲಿಯೂ ಹಳ್ಳಿಗರ ಜೀವನ ಸುಧಾರಣೆಯ ಕೆಲಸದಲ್ಲಿಯೂ ಕಲ್ಪನಾ ಸ್ವರ್ಗವೊಂದನ್ನು ನಿರ್ವಿಸಿಕೊಂಡು ಅಲ್ಲಿ ವಾಸಿಸಲೆಳಸಿದನು. ತಾನೆ ವಿಶ್ವಾಮಿತ್ರನೂ ತ್ರಿಶಂಕುವೂ ಇಬ್ಬರೂ ಆಗಲು ಪ್ರಯತ್ನಿಸಿದನು. ಹತಾಶೆಗೇ ಹೂಮಾಲೆಯನ್ನು ಹಾಕಿ ಮಣಿಕಿರೀಟವನ್ನು ತೊಡಿಸಿ ಸಿಂಗಾರಗೆಯ್ದು, ಅದನ್ನೇ ತನ್ನ ಇಷ್ಟದೇವತೆಯನ್ನಾಗಿ ಮಾಡಿ ಪೂಜಿಸುತ್ತೇನೆಂದು ಸಾಧನೆಮಾಡಿದನು. ಆದರೆ ಆ ಹೂಮಾಲೆ ಬಾಡಿ, ಆ ಮಣಿಕಿರೀಟದ  ಕಾಂತಿ ಮಸುಳಿ, ಆ ಸಿಂಗಾರವುಡಿದು, ಇಷ್ಟದೇವತೆಗೆ ಬದಲಾಗಿ ಹತಾಶೆಯ ಹಲ್ಲುಕಿರಿಯುವ ವಿಕಟಾಕೃತಿ ಮತ್ತೆ ಮತ್ತೆ ಸುಳಿದಾಡತೊಡಗಿತು. ಕೆಲದಿನಗಳು ಹಳ್ಳಿಗರನ್ನೆಲ್ಲ ಒಟ್ಟುಗೂಡಿ ಹರಿಕಥೆ ಹೇಳುತ್ತೇನೆಂದು ಅವರ ಮೂಢಾಚಾರಗಳನ್ನು ಖಂಡಿಸಿದನು. ಅದೂ ಬೇಜಾರಾಯಿತು. ಮತ್ತೆ ಹಗಲೂ ಬೈಗೂ ಕೋವಿ ಹಿಡಿದು ಕಾಡು ಬೆಟ್ಟಗಳನ್ನು ಅಲೆದಲೆದು ನೋಡಿದನು. ಆದರಿಂದಲೂ ತೃಪ್ತಿಯಾಗಲಿಲ್ಲ. ಉದ್ದಾಮ ಕಾವ್ಯಗಳನ್ನೂ ಗ್ರಂಥಗಳನ್ನೂ ಅಧ್ಯಯನಮಾಡಲು ಪ್ರಯತ್ನಿಸಿದನು. ಆದರೆ ಮನಸ್ಸು ಸಂಚಲವಾಗತೊಡಗಿತು. ಪ್ರಾರ್ಥನೆ ಧ್ಯಾನಗಳೂ ಕೂಡ ಸಕಾಮವಾಗತೊಡಗಿದುವು. ಸೀತೆಯ ಪ್ರೇಮರಾಹು ಅವನನ್ನು ಎಲ್ಲಿ ಹೋದರೂ ಏನೂ ಮಾಡಿದರೂ ಬಿಡದೆ ಹಿಂಬಾಲಿಸುತ್ತಿತ್ತು. ಮಧ್ಯೆ ಮಧ್ಯೆ ಇತರ ಅನಿಷ್ಟ ಪಿಶಾಚಿಗಳೂ ಆತ್ಮಭಿತ್ತಿಯ ಬಿರುಕುಗಳಲ್ಲಿ ಇಣಿಕಿನೋಡಿ ಕಣ್ಣುಸನ್ನೆ ಮಾಡಲಾರಂಭಿಸಿದುವು. ಸುಬ್ಬಮ್ಮ ಕಾನೂರಿನಿಂದ ಚಿನ್ನದ ಒಡವೆಗಳನ್ನು ತಂದು ತನ್ನ ಕೈಯಲ್ಲಿ ಇಡಲು ಕೊಟ್ಟಂದಿನಿಂದ ಹೂವಯ್ಯನ ಹೃದಯದಲ್ಲಿ ಒಂದು ಅಸಹ್ಯವಾದ ದುರಾಶಾಪಿಶಾಚಿ ತಲೆಹಾಕತೊಡಗಿತ್ತು. ಸಲಸಲವೂ ದೃಢಚಿತ್ತದಿಂದ, ಮುಖಕ್ಕೆ ಉಗುಳಿ ಅದನ್ನು ಓಡಿಸುತ್ತಿದ್ದನು. ಧರ್ಮಸ್ಥಳಕ್ಕೆ ಯಾತ್ರೆಹೋಗಿ ಹಿಂತಿರುಗಿ ಬಂದಮೇಲೆ ಸೀತೆ ಸರಿಯಾಗಿಬಿಟ್ಟಿದ್ದಾಳೆ ಎಂಬುದನ್ನು ಕೇಳಿದೊಡನೆ ಹೂವಯ್ಯನಿಗೆ ಮಹಾ ಯಾತನೆಯಾಯಿತು. ಹಾಗಾದರೆ ಸೀತೆ ಮನಃಪೂರ್ವಕವಾಗಿ ರಾಮಯ್ಯನನ್ನು ಒಲಿದೇಬಿಟ್ಟಳಷ್ಟೆ! ಅಯ್ಯೊ ಅವಳು ಮೊದಲಿನ ಹಾಗೆ ಹುಚ್ಚಿಯಾಗಬಾರದೇಕೆ ಎಂದೂ ಹಂಬಲಿಸಿದನು. ಈ ಎಲ್ಲ ಭಯಂಕರ ಜ್ವಾಲಾಮುಖಿಗಳನ್ನು ಹೊತ್ತುಕೊಂಡು ಹೂವಯ್ಯ ಅಗ್ನಿಪರ್ವತದಂತೆ ಮೇಲೆ ಮೇಲೆ ಶಾಂತಮೂರ್ತಿಯಾಗಿ, ದಿನಚರಿಯ ಕರ್ತವ್ಯ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು.

ಆ ದಿನ ಸಿಂಗಪ್ಪಗೌಡರ ಗಂಡುಕೂಸನ್ನು ತೊಟ್ಟಿಲಿಗೆ ಹಾಕುವ ದಿನವಾಗಿದ್ದರಿಂದ, ಅವರ ಆಹ್ವಾನವನ್ನು ಮನ್ನಿಸಿ, ತಾಯಿಗೆ ಕಾಹಿಲೆಯಾದ್ದರಿಂದ ರಾತ್ರಿಯೆ ಹಿಂತಿರುಗಿ ಬರಲೋಸ್ಕರವಾಗಿ ಸೋಮನನ್ನು ಜೊತೆಗೆ ಕರೆದುಕೊಂಡು, ಸೀತೆಮನೆಗೆ ಹೋಗಿದ್ದನು. ಅಲ್ಲಿ ಊಟವಾಗುವುದೆ ಹೊತ್ತಾಯಿತು. ಸಿಂಗಪ್ಪಗೌಡರೂ “ಇಷ್ಟು ರಾತ್ರಿಮೇಲೆ ಏನು ಹೋಗುವುದೊ? ಉಳಿದುಕೊಂಡು ನಾಳೆ ಬೆಳಗ್ಗೆ ಕತ್ತಲೆ ಕತ್ತಲೆ ಇದ್ದಹಾಂಗೆ ಹೋದರಾಯ್ತು” ಎಂದು ಉಪಚಾರ ಮಾಡಿದರು. ಆದರೆ ಹೂವಯ್ಯ “ಅವ್ವಗೆ ಕಾಹಿಲೆ ಕಣೋ” ಎಂದು ಅಲ್ಲಿ ನಿಲ್ಲದೆ ಸೋಮನೊಡಗೂಡಿ ಕೆಳಕಾನೂರಿಗೆ ಇರುಳು ಬಹಳ ಹೊತ್ತಾಗಿ ಹಿಂತಿರುಗಿ ಬಂದಿದ್ದನು. ನಾಗಮ್ಮನವರು ಮಲಗಿ ನಿದ್ರಿಸುತ್ತಿದ್ದರು. ಪುಟ್ಟಣ್ಣನನ್ನು ವಿಚಾರಿಸಲು ಅವರು ಔಷಧ ಕುಡಿಯಲಿಲ್ಲವೆಂದೂ ಬೇಡವೆಂದರೂ ಕೇಳದೆ ಬಾಯಾರಿಕೆಯಾಗುತ್ತದೆಂದು ತಣ್ಣೀರು ಕುಡಿದರೆಂದೂ ಹೇಳಿದನು. ಅದನ್ನು ಕೇಳಿ ಹೂವಯ್ಯ ಅಳುಮೊಗವಾಗಿ ನಿಟ್ಟುಸಿರು ಬಿಟ್ಟನು. ಪುಟ್ಟಣ್ಣ ಬಲೀಂದ್ರನ ವಿಚಾರವನ್ನು ಹೇಳಲಿಲ್ಲ. ಏಕೆಂದರೆ, ಅವನಿಗೆ ಅದು ಗೊತ್ತಿರಲಿಲ್ಲ.

ಇತರರೆಲ್ಲರೂ ಮಲಗಿದ್ದರು. ಹೂವಯ್ಯ ತನ್ನ ಕೋಣೆಯಲ್ಲಿ ಹಾಸಗೆ ಹಾಸಿಕೊಂಡು, ದೀಪದ ಮುಂದೆ ಕುರ್ಚಿಯಮೇಲೆ ಕುಳಿತು. ತಾನು ಸೀತೆಮನೆಯಲ್ಲಿ ಕೇಳಿದ ಒಂದು ವಿಚಾರವನ್ನು ಕುರಿತು ದೀರ್ಘಾಲೋಚನೆ ಮಾಡತೊಡಗಿದ್ದನು. ಅದೇ ಸಮಯದಲ್ಲಿ, ಅವನು ಯಾವ ವ್ಯಕ್ತಿಯನ್ನು ಕುರಿತು ಆಲೋಚಿಸುತ್ತಿದ್ದನೊ ಆ ವ್ಯಕ್ತಿ ಕಾನೂರಿನಿಂದ ಪುಟ್ಟನೊಡಗೂಡಿ ಹೊರಬಿದ್ದು ಬರುತ್ತಾ, ಕೋಣೆಯ ಕಣ್ಣುಗಳಂತಿದ್ದ ಕಿಟಕಿಗಳಲ್ಲಿ ದೀಪದ ಬೆಳಕನ್ನು ಕಂಡು, ತೋಳಿನ ಮೇಲೆ ಹಾಕಿದ್ದ ಬರೆಗಳ ಯಾತನೆಯಿದ್ದರೂ ಹರ್ಷೊನ್ಮಾದದಿಂದ ಮುಂದುವರಿಯುತ್ತಿತ್ತು!

ಮಳೆಯಿರುಳಿನಲ್ಲಿ ಬೆಚ್ಚಗೆ ಮುದುದರಿಕೊಂಡು ಮಲಗಿರುವ ನಾಯಿಗಳು ಇತರ ಸಮಯಗಳಲ್ಲಿ ಬೊಗಳುವಂತೆ ಸುಮ್ಮಸುಮ್ಮನೆ ಅಲ್ಪ ಕಾರಣಗಳಿಗೆಲ್ಲ ಕೂಗಾಡುವುದಿಲ್ಲ. ಎಷ್ಟು ಸುಖವಾಗಿರುತ್ತದೆ ಬೆಚ್ಚನೆಯ ಬೂದಿ ಗುಡ್ಡೆ! ನಾಯಿಗಳ ಪ್ರಚಂಡವಾದ ಕೂಗಾಟವನ್ನೂ, ಯಾರೋ ಅವುಗಳನ್ನು ಹೆದರಿಸುತ್ತಿದ್ದುದನ್ನೂ ಕೇಳಿ ವಿಸ್ಮಯಚಕಿತವಾಗಿ, ತಟಕ್ಕನೆ ಚಿಮ್ಮಿ ಎದ್ದು, ಬಾಗಿಲು ತೆರೆದು ಹೊಸ್ತಿಲು ದಾಟಿದ ಹೂವಯ್ಯನಿಗೆ, ಬಾಗಿಲಿನಿಂದ ಹರಿದುಬಂದ ದೀಪದ ಬೆಳಕಿನಲ್ಲಿ ಕಂಬಳಿಕೊಪ್ಪಹಾಕಿಕೊಂಡು ನಿಂತಿದ್ದ ನರಾಕೃತಿಯೊಂದು ತನ್ನ ಕಡೆಗೆ ನುಗ್ಗಿ ಬರುತ್ತಿದ್ದುದನ್ನು ಕಂಡು, ಮೈನೆತ್ತರು ತಣ್ಣಗಾದಂತಾಗಿ ಕೂದಲು ನಿಂತಿತು.  ಆಕೃತಿ ಕ್ಷಣಮಾತ್ರದಲ್ಲಿ ’ಹೂವಯ್ಯ ಬಾವಾ’ ಎಂದು ತೊದಲುತ್ತ ಓಡಿಬಂದು, ಅವನನ್ನು ಬಿಗಿದಪ್ಪಿತು! ಹೂವಯ್ಯನಿಗೆ ಮೈಬೆವರು ಕಿತ್ತುಕೊಂಡಿತು. ನಡ ನಡ ನಡ ನಡುಗಿದನು. ಸುತ್ತ ನಾಯಿಗಳಿಲ್ಲದಿದ್ದರೆ ’ಹೂವಯ್ಯ ಬಾವ’ ಎಂಬ ತೊದಲುಕೂಗಿನಲ್ಲಿ ಪರಿಚಿತಧ್ವನಿ ಕೇಳಿಸದಿದ್ದಿದ್ದರೆ, ಅವನು ಮೂರ್ಛೆಹೋಗುತ್ತಿದ್ದನೊ ಏನೊ!

ಕಂಬಳಿಕೊಪ್ಪ ನೆಲಕ್ಕೆ ಜಗುಳಿಬಿತ್ತು. ಸೀತೆಯನ್ನು ಗುರುತಿಸಿ ಹೂವಯ್ಯ ಬೆರಗುಹೊಡೆದುಹೋದನು. ಮಾತಾಡಲು ಹವಣಿಸಿದನು. ನಾಲಗೆ ಬರಲಿಲ್ಲ ಅತಲಜಲದಲ್ಲಿ ಮುಳುಗಿಹೋದ ಸ್ವರ್ಗ ಮತ್ತೆ ಕೈಗೆ ಸಿಕ್ಕಿದಾಗ  ಅದನ್ನು ಎಂದಿಗೂ ಎಂದೆಂದಿಗೂ ಬಿಡೆನೆಂಬ ವಜ್ರಮುಷ್ಟಿಯ ಅಚಲನಿಶ್ಚಯತೆಯಿಂದ ಸೀತೆ ಹೂವಯ್ಯನನ್ನು ಬಿಗಿದಪ್ಪಿದಳು! ಆದರೂ ಅವಳಿಗೆ ಬಾಹ್ಯಪ್ರಜ್ಞೆಯಿರಲಿಲ್ಲ. ಹೂವಯ್ಯನಿಗಂತೂ ಮೆದುಳು ಕದಡಿಹೋದಂತಿತ್ತು. ಆನಂದ, ಆಶ್ಚರ್ಯ, ದುಃಖ, ಅಳು, ನಗು-ಇವುಗಳ ತಾಂಡವದಿಂದ ಅವನ ತಲೆ ತಿರುಗುತ್ತಿತ್ತು. ಏನೊಂದೂ ಅರ್ಥವಾಗುತ್ತಿರಲಿಲ್ಲ. ಎಷ್ಟು ಮಧುರವಾಗಿತ್ತೋ ಅಷ್ಟೇ ಅರ್ಥವಿಲ್ಲವಾಗಿತ್ತು! ಕನಸಿನಲ್ಲಿಯೂ ಕೂಡ ಇಂತಹ ಅಸಮಂಜಸಗಳ ಸಂಯೋಗ ಒದಗುವುದು ಅಸಾಧ್ಯ! ಅವರಿಬ್ಬರಗೂ ಅದೊಂದು ಭಾಷಾತೀತವಾದ ಭಾವಮಯವಾದ ಮಹದಾನಂದದ ದಿವ್ಯಮುಹೂರ್ತವಾಗಿತ್ತು!

ಹೂವಯ್ಯ ಸೀತೆಯನ್ನು ಮೆಲ್ಲನೆ ಎತ್ತಿಕೊಂಡುಹೋಗಿ ತನ್ನ ಹಾಸಗೆಯ ಮೇಲೆಯೇ ಮಲಗಿಸಿ, ಬಹು ಪ್ರಯತ್ನದಿಂದ ತನ್ನನ್ನಪ್ಪಿದ ಕೈಗಳನ್ನು ಬಿಡಿಸಿದನು. ಹತ್ತಿರ ಕುಳಿತು ನೋಡಿದನು.

ಸೀತೆಯ ಉಸಿರಿನಲ್ಲಿ ಉದ್ವಿಗ್ನತೆಯಿತ್ತು. ಕಣ್ಣುಮುಚ್ಚಿಕೊಂಡು ನಿದ್ರಿಸುವಂತಿದ್ದಳು. ನೋಡುತ್ತಾ ನೋಡುತ್ತಾ ಹೂವಯ್ಯ ನೀರವವಾಗಿ ರೋದಿಸತೊಡಗಿದನು. ಕಣ್ಣೀರು ಹೊಳೆಯಾಗಿ ಹರಿಯಿತು. ದೀಪದ ಬೆಳಕಿನಲ್ಲಿ ಸೀತೆ ಅಪಾರ್ಥಿವ ದೇವವಿಗ್ರಹವಾಗಿದ್ದಳು. ಸೀರೆ ಅಲ್ಲಲ್ಲಿ ತೊಯ್ದುಹೋಗಿತ್ತು. ಕೆಸರು ಹಾರಿ ಮಣ್ಣೂ ಹಿಡಿದಿತ್ತು. ಕಾಲೆಲ್ಲ ಕೆಸರಾಗಿತ್ತು. ಬಾಚಿ ಜಡೆಹೆಣೆದಿದ್ದರೂ ಕೂದಲು ಕಿತ್ತಲ ಪತ್ತಲವಾಗಿತ್ತು. ತೋಳಿನ ಮೇಲೆ ಕಾಣುತ್ತಿದ್ದ ಕರಿಯ ಬರೆಗಳನ್ನು ನೋಡಿ ಹೂವಯ್ಯನಿಗೆ ಬೆರಗಾಯಿತು. ಎದೆ ಹಿಂಡಿದಂತಾಯಿತು. ಕರುಳು ಕಿತ್ತಂತಾಯಿತು! ಆಕೆ ತೊಟ್ಟುಕೊಂಡಿದ್ದ ಚಿನ್ನದೋಡವೆಗಳ ಹೊಳಪು ಅಸಮಂಜಸವಾಗಿ ಅನರ್ಥಕರವಾಗಿತ್ತು!

ಕಾಲಿನ ಕೆಸರನ್ನು ಕಣ್ಣೀರಿನಲ್ಲಿ ತೊಳೆಯಬೇಕೆನ್ನಿಸಿತು. ತೋಳಿನ ಗಾಯಗಳನ್ನು ತುಟಿಯಿಂದೊತ್ತಿ ಅಳಿಸಬೇಕೆನ್ನಿಸಿತು. ಎಷ್ಟು ಸೇವೆ ಮಾಡಿದರೂ ಸಾಲದು ಎನ್ನಿಸಿತು. ಆದರೆ ಸೀತೆ ಸೇವೆ ಮಾಡಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಹೂವಯ್ಯ ಬಹಳ ಹೊತ್ತು ಕಾದರೂ ಆಕೆ ಕಣ್ದಿರೆಯಲಿಲ್ಲ. ಗಾಢ ನಿದ್ರೆಯಲ್ಲಿದ್ದಳೇನೊ!

ಹೂವಯ್ಯ ಸೀತೆಗೆ ಎಚ್ಚರವಾದೊಡನೆ ಕುಡಿಯಲು ಕೊಡಲೆಂದು ಮೆಲ್ಲಗೆ ಅಡುಗೆಮನೆಗೆ ಹೋಗಿ ಸ್ವಲ್ಪ ಹಾಲನ್ನು ತಂದನು. ಮನೆಯಲ್ಲಿ ಯಾರೊಬ್ಬರಿಗೂ ಇತ್ತಣ ಪ್ರಜ್ಞೆಯಿರಲಿಲ್ಲ. ಎಷ್ಟೆಂದರೂ ಮಳೆಗಾಲದ ನಿದ್ದೆ!

ಹಾಸಗೆಯ ಪಕ್ಕದಲ್ಲಿಕುಳಿತು ಎಷ್ಟು ಕಾದರೂ ಸೀತೆಗೆ ಎಚ್ಚರವಾಗದಿದ್ದುದನ್ನು ನೋಡಿ ಹೂವಯ್ಯ ಕರೆದು ಎಚ್ಚರ ಮಾಡುತ್ತೇನೆಂದು ಬಗೆದನು. ಮೆಲ್ಲಗೆ ಕರೆದನು “ಸೀತೆ, ಸೀತೆ, ಸೀತೆ” ಎಂದು ಎಷ್ಟು ಸಾರಿ ಕರೆದರೂ ಅವನಿಗೆ ತಣಿವಾಗಲಿಲ್ಲ; ಆಕೆಗೆ ಎಚ್ಚರವಾಗಲಿಲ್ಲ. ಆ ಹೆಸರು ಅಷ್ಟೊಂದು ಸವಿಯಾಗಿತ್ತು. ಆ ಪ್ರಯತ್ನವನ್ನು ನಿಲ್ಲಿಸಿ, ತನ್ನ ಶಾಲನ್ನು ಬೆಚ್ಚಗೆ ಆಕೆಗೆ ಹೊದಿಸಿ, ಪಕ್ಕದಲ್ಲಿ ಕುಳಿತು ನೋಡುತ್ತಾ ಕಾದನು. ಅವನಿಗೆ ನಿದ್ದೆ ಬರಲೂ ಇಲ್ಲ; ನಿದ್ದೆ ಮಾಡಲೂ ಇಲ್ಲ. ಯಾವ ಆಲೋಚನೆ ಮಾಡುತ್ತಲೂ ಇರಲಿಲ್ಲ. ಸೀತೆಯ ಮುಖವನ್ನೇ ನಿರಂತರವಾಗಿ ನೋಡುತ್ತಿದ್ದನು.

ಬೆಳಗಾಗುತ್ತಿದ್ದುದನ್ನು ನೋಡಿದಾಗ ಅವನಿಗೆ ಆಶ್ಚರ್ಯವಾಯಿತು. ಇವತ್ತು ಎಷ್ಟು ಬೇಗನೆ ಇರುಳು ಕಳೆಯಿತೆಂದು! ಅನಂತವಾಗಿಯೆ ಇದ್ದಿದ್ದರೆ ಆ ಮಧುರ ರಾತ್ರಿ?