ಮನೆ ಹಿಸ್ಸೆಯಾಗುವ ದಿನಕ್ಕೆ ಹಿಂದನ ದಿನದ ಪ್ರಾತಃಕಾಲ ಎಂಟು ಗಂಟೆಗೆ ಹೊತ್ತಿನಲ್ಲಿ ಕಾನೂರು ಮನೆಯ ಉಪ್ಪರಿಗೆಯ ಮೇಲೆ ಹೂವಯ್ಯ ಹಿಂದಿನ ಸಾಯಂಕಾಲ ಕೈಸೇರಿದ್ದ ಇಂಗ್ಲಿಷ್ ಪತ್ರಿಕೆಯೊಂದನ್ನು ಬಿಚ್ಚಿ ಹಿಡಿದುಕೊಂಡು ನೋಡುತ್ತಿದ್ದನು. ಅವನಿಗೆ ತುಸು ದೂರದಲ್ಲಿ ಗೋಡೆಗೆ ಒರಗಿದೊಂಡು ಕುಳಿತಿದ್ದ ರಾಮಯ್ಯ ಪುಸ್ತಕ ಒಂದನ್ನು ಓದಿಕೊಳ್ಳುತ್ತಿದ್ದನು. ಪತ್ರಿಕೆ  ಪುಸ್ತಕಗಳನ್ನು ಓದುವಂತೆ ತೋರುತ್ತಿದ್ದರೂ ಅವರಲ್ಲಿ ಯಾರೊಬ್ಬರಾಗಲಿ ಓದುತ್ತಿದ್ದ ವಿಷಯದ ಮೇಲೆ ಸಮಪೂರ್ಣವಾಗಿ ಗಮನವಿಟ್ಟಿರಲಿಲ್ಲ ಇಬ್ಬರ ಮನಸ್ಸೂ ಮರುದಿನ ನಡೆಯಲಿದ್ದ ಹಿಸ್ಸೆಯ ವಿಚಾರವಾಗಿಯೂ ತರುವಾಯ ತಮಗೊದಗಲಿರುವ ಜೀವನದ ವಿಚಾರವಾಗಿಯೂ ಆಶಂಕೆ ಆಲೋಚನಾ ಪರಂಪರೆಗಳಿಂದ ತುಂಬಿಹೋಗಿತ್ತು. ರಾಮಯ್ಯನ ಕಣ್ಣಿನಿಂದ ಆಗಾಗ್ಗೆ ತುಳುಕುತ್ತಿದ್ದ ಕಣ್ಣೀರು ಮನೆ ಪಾಲಾಗುವುದರಲ್ಲಿ ಅವನಿಗಿದ್ದ ಹೃದಯವೇದೆಯನ್ನು ವ್ಯಕ್ತಗೊಳಿಸುತ್ತಿತ್ತು. ಮುಖ ಖಿನ್ನವಾಗಿ ಶೋಕಭಾರದಿಂದ ಕುಗ್ಗಿದಂತಿತ್ತು. ಅದುವರೆಗಿನ ಆತನ ಸರಳ ಜೀವನವೂ ಮಹದಾಶೆಯಿಂದ ನಿರ್ಮಿಸಿಕೊಂಡಿದ್ದ ನಚ್ಚಿನ ಹೊಂಗನಸೂ ಬಿರಿಯತೊಡಗಿತ್ತು. ಅದುವರೆಗೆ ಒಟ್ಟಾಗಿ ನಡೆದುಕೊಂಡು ಬಂದಿದ್ದ ಮನೆತನ ನಾಳೆ ಇಬ್ಭಾಗವಾಗಿತ್ತದೆ! ಮನೆ ಕಟ್ಟಿದಂದಿನಿಂದಲೂ ಒಂದೇ ಅಡುಗೆಮನೆಯಲ್ಲಿ ಉರಿಯುತ್ತಿದ್ದ ಬೆಂಕಿ ಇನ್ನು ಮೇಲೆ ಎರಡು ಅಡುಗೆಮನೆಗಳಲ್ಲಿ ಉರಿಯುತ್ತದೆ. ಹುಟ್ಟಿದಂದಿನಿಂದಲೂ ಹೂವಯ್ಯನೊಡನೆ ಕುಳಿತು, ಆ ಚಿರಪರಿಚಿತವಾದ ಊಟದ ಮನೆಯಲ್ಲಿ, ಕಡೆಗೋಲು ಕಂಬದ ಸಾನಿಧ್ಯದಲ್ಲಿ ಊಟಮಾಡುತ್ತಿದ್ದವನು ಇನ್ನು ಮುಂದೆ ಅಣ್ಣಯ್ಯನನ್ನು ಬಿಟ್ಟು ಊಟಮಾಡಬೇಕಾಗುತ್ತದೆ. ಭೋಜನಕಾಲದಲ್ಲಿ ನಡೆಯುತ್ತಿದ್ದ ರುಚಿಕರವಾದ ಸಂಭಾಷಣೆಗಳೆಲ್ಲ ನಿಂತುಹೋಗುತ್ತದೆ. ಒಬ್ಬರ ಮನೆಗೆ ನಂಟರು ಬಂದರೆ ಇನ್ನೊಬ್ಬರು ಅವರನ್ನು ಪರಕೀಯರಂತೆ ಉದಾಸೀನದಿಂದ ನೋಡಿದರೆ ಎಂತಹ ಅವಲಕ್ಷಣವಾಗುತ್ತದೆ! ಒಬ್ಬರ ಮನೆಯಲ್ಲಿ ಅಡುಗೆಯಾಗುವುದು ತಡವಾದರೆ ಇನ್ನೊಬ್ಬರು ಅವರನ್ನು ಬಿಟ್ಟು ಹೇಗೆ ಊಟಕ್ಕೆ ಹೋಗುವುದು? ಒಂದೇ ಸ್ನಾನದ ಮನೆಯಲ್ಲಿ ಎರಡು ಕಡೆ ಒಲೆಗಳಾಗುವೆ! ಒಂದೇ ಜಗಲಿಯಲ್ಲಿ ಎರಡು ಜಗಲಿಗಳಾಗಿ ಎರಡು ದೀಪಗಳುರಿಯುತ್ತವೆ! ಇವುಗಳನ್ನೆಲ್ಲ ಒಂದೊಂದನ್ನಾಗಿ ಆಲೋಚಿಸಿದಂತೆ ರಾಮಯ್ಯನ ಶೋಕ ಅತೀವವಾಗತೊಡಗಿತು. ಮತ್ತೆ ಕಣ್ಣೀರು ಕರೆದನು! ಏನು ಮಾಡಬೇಕು ಎಂಬುದು ಆತನಿಗೆ ತೋರಲಿಲ್ಲ. ಮೆಲ್ಲಗೆ ಕತ್ತೆತ್ತಿ ಕರೆದನು! ಏನು ಮಾಡಬೇಕು ಎಂಬುದು ಆತನಿಗೆ ತೋರಲಿಲ್ಲ. ಮೆಲ್ಲಗೆ ಕತ್ತೆತ್ತಿ ಹೂವಯ್ಯನ ಕಡೆ ನೋಡಿದನು. ಅವನು ಓದುವುದರಲ್ಲಿ ತನ್ಮಯನಾಗಿದ್ದಂತೆ ತೋರಿತು.

ರಾಮಯ್ಯ “ಅಣ್ಣಯ್ಯಾ, ಪತ್ರಿಕೆಯಲ್ಲಿ ಏನು ವಿಶೇಷ?” ಎಂದು ಕೇಳಿದನು.

ಹೂವಯ್ಯ ಪತ್ರಿಕೆಯ ಕಡೆ ನೋಡುತ್ತಿದ್ದನೆ ಹೊರತು ಅವನ ಮನಸ್ಸು ಅದನ್ನು ಓದುವುದರಲ್ಲಿ ಇರಲಿಲ್ಲ. ಪತ್ರಿಕೆಯನ್ನು ಓದುಲೆಂದು ಕೈಗೆ ತೆಗೆದುಕೊಂಡು ಮೊದಲಿನಲ್ಲಿ ಕೆಲವು ವಿಷಯಗಳನ್ನು ಕುತೂಹಲದಿಮದ ಗ್ರಹಿಸಿದನು. ಮುಖ್ಯವಾಗಿ ಭಾರತೀಯರ ಸ್ವರಾಜ್ಯ ಸಂಪಾದನೆಯ ಪ್ರಯತ್ನ ಸಂಕಟಗಳು, ರಾಷ್ಟ್ರನಾಯಕರ ಆಂದೋಲನಕಾರದ ಉಪನ್ಯಾಸಗಳು, ಬ್ರಿಟಿಷರ ದಬ್ಬಾಳಿಕೆಯ ನಡತೆಗಳು, ದಕ್ಷಿಣ ಆಫ್ರೀಕಾದಲ್ಲಿ ಭಾರತೀಯರ ಮೇಲೆ ನಡೆಯುತ್ತಿದ್ದ ಅತ್ಯಾಚಾರಗಳು, ಮುಖಂಡರ ದಸ್ತಗಿರಿಗಳು-ಇವುಗಳೆಲ್ಲವನ್ನೂ ಓದುತ್ತ ಓದುತ್ತ ಅವನ ಆತ್ಮ ಸಂಕಟಕ್ಕೀಡಾಯುತು. ಆ ಮಲೆನಾಡಿನ ಮೂಲೆಯಲ್ಲಿ, ಗಗನ ಚುಂಬಿಗಳಾದ ಪರ್ವತಾರಣ್ಯ ಶ್ರೇಣಿಗಳಿಂದ ಪರಿವೃತವಾಗಿ, ಪ್ರಪಂಚಕ್ಕೆ ಸೇರದ ಬೇರೊಂದು ಪ್ರಪಂಚದಂತಿದ್ದ ಕಾನೂರಿನಲ್ಲಿ, ಪತ್ರಿಕೆಯು ಒಂದು ಮಾಯಾಗವಾಕ್ಷವಾದಂತಾಗಿ, ಹೂವಯ್ಯನ ಕಲ್ಪನೆಯ ಕಣ್ಣಿಗೆ ಹೊರಗಡೆಯ ವಿಸ್ತಾರವಾದ ಜಗತ್ತಿನ ಭವ್ಯಘಟನೆಗಳನ್ನೂ ಮಹದ್ವ್ಯಾಪಾರಗಳನ್ನೂ ಮಹಾ ವ್ಯಕ್ತಿಗಳನ್ನೂ ಪ್ರದರ್ಶಿಸಿತು! ಹೂವಯ್ಯನಿಗೆ ಲಜ್ಜೆ, ಶೋಕ, ಜುಗುಪ್ಸೆ, ಮುನಿಸು, ಆಸೆ-ಎಲ್ಲವೂ ಉಂಟಾದುವು: ತನ್ನ ಮಹತ್ವಾಕಾಂಕ್ಷೆಯ ಜೀವನಾದರ್ಶಎಂತಹ ಕೆಸರಿನಲ್ಲಿ ಕಾಲಿಟ್ಟು ಹೂತಕೊಂಡಿದೆ! ಹೊರಗಡೆಯ ಜಗತ್ತು ಎಂತಹ ಮಹತ್ಕಾರ್ಯಗಳಲ್ಲಿ ತೊಡಗಿರುತ್ತದೆ! ಕ್ಷುದ್ರಸಂಸಾರದ ಕೋಟಲೆಯಲ್ಲಿ ಸಿಕ್ಕಿ ತನ್ನಾತ್ಮವು ಮಹಾಜಗತ್ತಿನ ಆಮಂತ್ರಣವನ್ನು ತಿರಸ್ಕರಿಸುತ್ತಿದೆ! ಹಿಂದೆ ಮಹಾಪುರುಷರ ಜೀವನ ಚರಿತ್ರೆಗಳನ್ನು ಓದಿದಾಗ ತಾನೂ ಅವರಂತಾಗಬೇಕೆಂದು ಕಟ್ಟಿದ್ದ ಹೊಂಗನಸಿನ ಹಡಗು ಯಾವುದೋ ಅಜ್ಞಾತವಾದ ಮರಳುದಿಣ್ಣೆಗೆ ಢಿಕ್ಕಿ ಹೊಡೆದು ನಡೆಗೆಟ್ಟು ನಾಶವಾಗುವುದರಲ್ಲಿದೆಯಲ್ಲಾ! ಹೇ ಜಗದೀಶ್ವರ, ಇದರಿಂದ ಪಾರಾಗುವ ಹೃದ್ಬಲವನ್ನೂ, ಮಹಾಕಾಂಕ್ಷೆಯನ್ನೂ, ಸಾಧಿಸುವ ದೃಢಮನಸ್ಸನ್ನೂ ದಯಪಾಲಿಸು!

ಇಂತಹ ಆಲೋಚನೆಗಳಲ್ಲಿ ತನ್ಮಯನಾಗಿದ್ದವನಿಗೆ ರಾಮಯ್ಯನ ಪ್ರಶ್ನೆ ಸ್ಫುಟವಾಗಿ ಕೇಳಲಿಲ್ಲ. “ಏನಂದೆ?” ಎಂದು ಕೇಳಿದನು.

ರಾಮಯ್ಯ “ಏನೂ ಇಲ್ಲ. ‘ಪತ್ರಿಕೆಯಲ್ಲಿ ಏನು ವಿಶೇಷ? ಎಂದು ಕೇಳಿದೆನಷ್ಟೆ!’ ಎಂದು ಹೇಳುತ್ತ ಹೂವಯ್ಯನ ಬಳಿಗೆ ನಡೆದುಬಂದು ಎದುರುಗಡೆ ಕುಳಿತನು.

ಇಬ್ಬರೂ ಸೇರಿ ಸ್ವಲ್ಪಹೊತ್ತು ಪತ್ರಿಕೆಯಲ್ಲಿದ್ದ ಸದಸದ್ವಿಚಾರಗಳೆಲ್ಲವನ್ನೂ ಓದಿದರು. ಟೀಕೆ, ವ್ಯಾಖ್ಯಾನ, ಪ್ರಶಂಸೆ, ಖಂಡನೆ ಎಲ್ಲವೂ ಸಾಗಿದುವು.

ಮಾತು ಮಾತಾಡುತ್ತಾ ಹೂವಯ್ಯನು ನಿಟ್ಟುಸಿರುಬಿಟ್ಟು “ಈಜಗತ್ತು ನಾವು ಊಹಿಸಿರುವಷ್ಟು ಆದರ್ಶಪ್ರಾಯವಾಗಿಲ್ಲ, ರಾಮು. ಅದರಲ್ಲಿಯೂ ಹುಡುಗರಾಗಿದ್ದಾಗ ಕಟ್ಟಿಕೊಂಡ ಕನಸುಗಳೆಲ್ಲ ವಾಸ್ತವವಾಗಬೇಕಾದರೆ ಬಹಳ ಕಷ್ಟ, ಅಸಾಧ್ಯ! ಕಡೆ ಕಡೆಗೆ ಸತ್ಯ ಅಸತ್ಯದೊಡನೆ ರಾಜಿ ಮಾಡಿಕೊಂಡೂ ಮಾಡಿಕೊಂಡೂ, ಎರಡಕ್ಕೂ ಇರುವ ಭೇದವೂ ಗೊತ್ತಾಗದಂತೆ ಆಗಿಬಿಡುತ್ತದೆ” ಎಂದು ಶುದ್ಧವಾದ ಇಂಗ್ಲಿಷಿನಲ್ಲಿಯೆ ಪ್ರಾರಂಭಿಸಿದನು. ರಾಮಯ್ಯನೂ ಅವನನ್ನೆ ಅನುಸರಿಸುಲು ಇಬ್ಬರೂ ಇಂಗ್ಲಿಷಿನಲ್ಲಿಯೆ ಬಹಳಕಾಲ ಮಾತಾಡಿದರು. ಅವರ ಸಂಭಾಷಣೆಯ ಮೆರವಣಿಗೆಯಲ್ಲಿ ಪ್ರಸಿದ್ಧವಾದ ಭಾರತೀಯರೂ ಪಾಶ್ಚಾತ್ಯರೂ ಪ್ರಾಚ್ಯಪಾಶ್ಚಾತ್ಯ ಮಹಾಗ್ರಂಥ ಸಮೂಹಗಳೂ ಕ್ರಮವಾಗಿ ಅಕ್ರಮವಾಗಿ ತುಮುಲವಾಗಿ ಸಾಗಿಹೋದುವು.

ಇಷ್ಟಾರ್ಥಗಳು ವಿಫಲವಾಗಿ, ಅತ್ಯಂತ ಉತ್ಸಾಹಿಗಳಾದ ತರುಣರೂ ಕೂಡ ಕಟ್ಟಕಡೆಗೆ ನಿರುತ್ಸಾಹಿಗಳಾಗಿ, ಜನಸಾಮಾನ್ಯ ಜೀವನಪಥದಲ್ಲಿ ನಡೆದು ಹೇಗೆ ಅಜ್ಞಾತರಾಗಿ ಬಿಡುತ್ತಾರೆ ಎಂಬ ವಿಚಾರ ಬಂದಾಗ ರಾಮಯ್ಯನು “ವರ್ಡ್ಸ್‌ವರ್ತ್ ಎಷ್ಟು ಚೆನ್ನಾಗಿ ಭವಿಷ್ಯ ಹೇಳಿಬಿಟ್ಟದ್ದಾನೆ ಆ ‘ಇಮ್ಮಾರ್ಟ್ಯಾಲಿಟಿ ಓಡ್’ನಲ್ಲಿ! ಕ್ಲಾಸಿನಲ್ಲಿ ಮೇಷ್ಟರು ತಲೆ ಚಚ್ಚಿಕೊಂಡು ಪಾಠ ಹೇಳಿಕೊಟ್ಟಾಗ ನನ್ಗೆ ಅದರ ಅರ್ಥ ಅನುಭವಕ್ಕೆ ಬಂದೇ ಇರಲಿಲ್ಲ. ಈಗೀಗ ಬರುತ್ತಾ ಇದೆ.

“Heaven lies abot us in our infancy!
Shades of the prison-house begin to close
Upon the growing Boy,
But He beholds the light, and whence it flows,
He sees it in his joy;
The youth, who daily farther from the east
Must travel, still is Nature’s Priest
And by the vision splendid
Is on his way attended;
At length the Man perceives it die away,
And fade into the light of common day.”

“ವಡ್ಸ್ ವರ್ತ್ ಚೆನ್ನಾಗಿ ಹೇಳಿದ್ದಾನೆ. ಆದರೆ ಆ ರುದ್ರಚಿತ್ರ ಮನಸ್ಸಿಗೆ ಇನ್ನೂ ಚೆನ್ನಾಗಿ ನಾಟುವಂತೆ ಹೇಳಿರುವವನು ಮ್ಯಾಥ್ಯೂ ಆರ್ನಾಲ್ಡ್, ಆ ’ರಗ್ಬಿಚಾಪೆಲ್’ನಲ್ಲಿ! ನನಗಂತೂ ಕಣ್ಣಿಗೆ ಕಟ್ಟಿದಹಾಗಿದೆ ಆ ಚಿತ್ರ! ನೆನೆದಾಗಲೆಲ್ಲ ರೋಮಾಂಚವಾಗುತ್ತದೆ! ನಿನಗೆ ಆ ಭಾಗ ಬಾಯಿಗೆ ಬರುತ್ತದೇನು?”

“ಸ್ವಲ್ಪ ಸ್ವಲ್ಪ ಬರುತ್ತಿತ್ತು….”

“ಆ ಮೇಜಿನ ಮೇಲೆ ನನ್ನ ಗೋಲ್ಡನ್ ಟ್ರೆಜರಿ ಇದೆ, ತಗೊಂಡು ಬಾ….”

ರಾಮಯ್ಯ ಕುತೂಹಲದಿಂದ ಅವಸರವಸರವಾಗಿ ಎದ್ದು ಹೋಗಿ, ಹೆಚ್ಚಾಗಿ ಉಪಯೋಗಿಸಿದ್ದರಿಂದ ಮಾಸಿ ಹರಿದಿದ್ದ ಆ ಪುಸ್ತಕವನ್ನು ತಂದುಕೊಟ್ಟನು. ಹೂವಯ್ಯ ತಾನು ಮೆಚ್ಚಿದ ಕವನಗಳನ್ನಾಗಲಿ ನಾಟಕಭಾಗಗಳನ್ನಾಗಲಿ ಗದ್ಯಖಂಡಗಳನ್ನಾಗಲಿ ಜ್ವಾಲಾಮಯವಾಗಿ ಓದುತ್ತಿದ್ದನು. ರಾಮಯ್ಯನಿಗೆ ಕೇಳಿದಷ್ಟೂ ಸಾಕಾಗುತ್ತಿರಲಿಲ್ಲ.

ಹೂವಯ್ಯ ಹಾಳೆಗಳನ್ನು ಮಗುಚಿಹಾಕಿ, ರಗ್ಬಿಚಾಪೆಲ್ ಕವನವನ್ನು ತೆಗೆದು ಐವತ್ತೆಂಟನೆಯ ಪಂಕ್ತಿಯಿಂದ ಓದತೊಡಗಿದನು;

“What is the course of the life of mortal men on the earth?-Most men eddy about here and there, eat and drink. Chatter and love and hate, gather and squander, are raised aloft, are hurl’d in the dust, striving blindly, achieving nothing; and then they die, perish!….”

“We, we have chosen our path-path to cler-purposed goal, path of advance!-but it leads a long, steep journey, through sunk gorges, o’er mountains in snow! Cheerful, with friends, we set forth-then, on the height comes the storm!….”

“ ……Alas, havoc is made in our train! Friends who set forth at our side falter, are lost in the storm! We, we only, are left! With frowning foreheads, with lips sternly compress’d, we strain on, on…”

ಹೂವಯ್ಯ ಓದುವುದನ್ನು ನಿಲ್ಲಿಸಿ, ನೀಳವಾಗಿ ನಿಟ್ಟುಸಿರು ಬಿಟ್ಟು, ಎದುರಿಗಿದ್ದ ಅರಣ್ಯಾಕಾಶಗಳ ಕಡೆಗೆ ನೋಡುತ್ತ ಕುಳಿತನು. ಅವನ ಕಣ್ಣು ಹನಿಹನಿಯಾಗಿತ್ತು. ಮುಖ ಕೆಂಪೇರಿತ್ತು. ಆವೇಶ ಬಂದಹಾಗಿತ್ತು.  ಅವನಿಗೆ ಆಗಾಗ ಬರುತ್ತಿದ್ದ ಭಾವೋನ್ಮಾದ ವಿರಬೇಕೆಂದು ತಿಳಿದು ರಾಮಯ್ಯ ಕೆನ್ನೆಗೈಯಾಗಿ ನಿಲವನ್ನು ನೋಡುತ್ತ ಸಮ್ಮನೆ  ಕುಳಿತನು.

ಉಪ್ಪರಿಗೆಯ ಮೇಲಿದ್ದ ಇವರಿಬ್ಬರ ಭಾವುಕತೆಯನ್ನೂ ಆದರ್ಶತೆಯನ್ನೂ ವಾಸ್ತನ ಜಗತ್ತು ಪರಿಹಾಸ್ಯಮಾಡುತ್ತಿದೆಯೋ ಎಂಬಂತೆ ಕೆಳಗಡೆಯಿಂದ ಅನೇಕರು ನಗುವ ಸದ್ದು ಕೇಳಿಬಂದಿತು.

ತುಸು ಹೊತ್ತಾದ ಬಳಿಕ ಹೂವಯ್ಯ ತನ್ನ ಕಡೆಗೆ ತಿರುಗಿನೋಡಲು ರಾಮಯ್ಯ “ಅಣ್ಣಯ್ಯಾ, ಈ ಹಿಸ್ಸೆಯಾಗುವುದನ್ನು ತಪ್ಪಿಸುವುದಕ್ಕಾಗುವುದಿಲ್ಲವೆ?” ಎಂದನು.

ಹೇಗೆ ತಪ್ಪಿಸುವುದಕ್ಕಾಗುತ್ತದೆ? ಚಿಕ್ಕಯ್ಯ ಒಪ್ಪಬೇಕಾಯ್ತಲ್ಲಾ!

“ನಾನು ಕೇಳಿ ನೋಡಲೇನು?”

“ನಿನಗೆಲ್ಲೋ ಹುಚ್ಚು! ಚೆನ್ನಾಗಿ ಬೈಸಿಕೊಳ್ಳುತ್ತೀಯಷ್ಟೆ!”

ಮತ್ತೆ ಇಬ್ಬರೂ ಮಾತಾಡದೆ ಸುಮ್ಮನೆ ಕೂತುಕೊಂಡರು. ತೋಟದಿಂದ ಒಂದು ಮಿಂಚುಳ್ಳಿ ಮ್ಞಿ ಮ್ಞಿ ಎಂದು ಕೂಗಿತು. ಕಾಮಳ್ಳಿಯೊಂದು ಹಾಡುತ್ತ ಹಾರಿಹೋಯಿತು. ಏತಕ್ಕೋ ಗಾರಾದ ಕೋಳಿಗಳು ಮನೆಯ ಹಿಂದುಗಡೆ ಕೂಗಿಕೊಳ್ಳುತ್ತಿದ್ದುವು.

ಏಣಿ ಮೆಟ್ಟಲುಗಳು ಸದ್ದಾಗುವಂತೆ ಪುಟ್ಟಮ್ಮ ಹತ್ತಿಬಂದು “ಅಣ್ಣಯ್ಯಾ, ಬಳ್ಳೆ ಹಾಕಿದಾರೆ. ಉಣ್ಣಕ್ಕೆ ಬರಬೇಕಂತೆ” ಎಂದಳು.

“ಅರೇ! ಎಷ್ಟು ಬೇಗ ಊಟಕ್ಕೇನೆ! ಗಂಟೆ ಎಷ್ಟೇ?” ಎಂದು ರಾಮಯ್ಯ ಆಶ್ಚರ್ಯದಿಂದ ಕೇಳಿದನು.

ಪುಟ್ಟಮ್ಮ ” ಹನ್ನೊಂದು ಹೊಡೀತು” ಎಂದಳು.

“ಅದು ಯಾಕೆ ನಗುತ್ತ ಇದ್ದರಲ್ಲಾ ಕೆಳಗೆ?”

“ಕಿರಾಪು ತೆಗೆದುಹಾಕಿ ಜುದಟ್ಟು ಬಿಡಬೇಕು ಅಂತ ಹೇಳಿದ್ದರಂತೆ ಅಪ್ಪಯ್ಯ. ಅದಕ್ಕೆ ಚೌರದವನು ಬಂದಿದ್ದು ಕಂಡು ವಾಸು ಓಡಿಹೋಗಿ ಕೋಳಿ ಒಡ್ಡೀಲಿ ಕದ್ದು ಕೂತಿದ್ದ!…..

“ಕೋಳಿ ಒಡ್ಡೀಲಿ!”

“ಹ್ಞೂ ಅಂತೀನಿ! ಕೋಳಿ ಒಡ್ಡೀಲೇ ಅಡಗಿಕೊಂಡು ಕೂತಿದ್ದು! ಸೇರೆಗಾರ್ರು‍, ಪುಟ್ಟಣ್ಣ, ಅಪ್ಪಯ್ಯ, ನಾನು ಎಲ್ಲಾ ಸೇರಿ ಹುಡುಕೀ ಹುಡುಕೀ, ಕಡೇಗೆ ಸಿಕ್ಕ! ಈಗ ಎಳಕೊಂಡು ಹೋಗಿ ಕಿರಾಪು ಕತ್ತರಿಸ್ತಾ ಇದ್ದಾರೆ. ಅವನೇನು ಅಳ್ತಾನೆ, ಆಳ್ತಾನೆ! ಪುರಸತ್ತೇ ಇಲ್ಲ!

“ಸಾಕು ಬಿಡು! ದಂಡು ಕಡಿದಿರಿ ಎಲ್ಲಾ ಸೇರಿ! ಅವನ ಕ್ರಾಪು ನಿಮಗೆಲ್ಲ ಕಣ್ಣುಬೇನೆಯಾಗಿತ್ತೇನೋ?” ಪುಟ್ಟಮ್ಮನಿಗೆ ಸ್ವಲ್ಪ ಚುಚ್ಚಿದಂತಾಗಿ ” ನಾನೇನು ಮಾಡ್ಲೊ, ಅಣ್ಣಯ್ಯಾ? ಅಪ್ಪಯ್ಯ ಹೇಳಿದ್ರೂ…..” ಎಂದು ಮುಗಿಸುವುದರಲ್ಲಿ ರಾಮಯ್ಯ “ಸಾಕು ಬಿಡು!” ಎಂದನು.

ಪುಟ್ಟಮ್ಮ ಸ್ವಲ್ಪ ರಭಸದಿಂದಲೆ ಏಣಿ ಮೆಟ್ಟಿಲುಗಳನ್ನು ಇಳಿದು ಹೋದಳು. ಅವಳಿಗೆ ಸಿಟ್ಟು ಬಂದಿತ್ತು.