ರಾಮಯ್ಯ ಹೂವಯ್ಯನನ್ನು ತಡೆದುದರಲ್ಲಿ ವಿವೇಕವಿತ್ತು. ಮದ್ಯಪಾನದಿಂದಲೂ ಕೋಪೋದ್ರೇಕದಿಂದಲೂ ಮೈಮರೆತ ವ್ಯಕ್ತಿ ಸಾತ್ವಿಕ ವಚನಗಳಿಗೆ ಲಕ್ಷಕೊಡುವುದು ದುಷ್ಕರವೆಂಬುದೇನೋ ಸತ್ಯ. ಆದರೂ ಹೂವಯ್ಯ ಕೆಳಗಿಳಿದು ಹೋಗಿದ್ದರೆ ಚಂದ್ರಯ್ಯಗೌಡರು ರಾಮಯ್ಯನ ಊಹೆಯಂತೆ ವರ್ತಿಸುತ್ತಿರಲಿಲ್ಲ. ಕಾರಣವೇನೆಂದರೆ, ವಯಸ್ಸಿನಲ್ಲಿ ಅವರು ಹೂವಯ್ಯನಿಗಿಂತ ಹಿರಿಯರಾಗಿದ್ದರೂ ಮನಸ್ಸಿನಲ್ಲಿ ಬಹಳ ಪಾಲು ಕಿರಿಯರಾಗಿದ್ದರು. ಅಲ್ಲದೆ ಹೂವಯ್ಯನ ಪಕ್ಕದಲ್ಲಿ ಇತರ  ಎಲ್ಲ ಬಲಗಳನ್ನೂ ನುಂಗಿ ನೊಣೆಯುವ ನೀತಿ ಬಲವಿತ್ತು. ಚಂದ್ರಯ್ಯಗೌಡರು ಕೆಲವು ಸಾರಿ ಕ್ರೂರವಾಗಿ ಅನಾಗರಿಕವಾಗಿ ವರ್ತಿಸುತ್ತಿದ್ದರೂ ತಮಗಿಂತಲೂ ಉತ್ತಮವಾದುದನ್ನು ಕಂಡಾಗ ಅಥವಾ ಇದೆ ಎಂದು ಭಾವಿಸಿದಾಗ ಅವರಲ್ಲಿ ಒಂದು ತೆರನಾದ  ಆಧ್ಯಾತ್ಮಿಕ ಭಯವೂ ಗೌರವವೂ ತಲೆದೋರುತ್ತಿದ್ದುವು. ಅವರ ಹೃದಯದಲ್ಲಿ ದುಷ್ಟ ವಾಸನೆಗಳನ್ನೂ ಪ್ರಲೋಭಗಳನ್ನೂ ಜಯಿಸುವ ಶಕ್ತಿಯಿಲ್ಲದಿದ್ದರೂ ಮನಸ್ಸಿನಲ್ಲಿ ಸೌಜನ್ಯ ಪ್ರಿಯತೆಯಿತ್ತು. ಆ ಸೌಜನ್ಯ ಪ್ರಿಯತೆಯ ಪ್ರಭಾವದಿಂದಲೆ ಅವರು ಕೆಲವು ವರ್ಷಗಳ ಹಿಂದೆ ಮದ್ಯಪಾನವನ್ನು ಬಿಟ್ಟುಬಿಡುತ್ತೇನೆಂದು ದೇವರಾಣೆ ಹಾಕಿಕೊಂಡು ಒಡಂಬಡಿಕೆಗೆ ರುಜುಹಾಕಿದ್ದರು. ಅದರ ಸಹಾಯದಿಂದಲೆ ವೆಂಕಪ್ಪಯ್ಯ ಜೋಯಿಸರೂ ಅವರ ಗೌರವಕ್ಕೆ ಪರಮಪಾತ್ರರಾಗಿದ್ದುದು.

ಆ ಕಥೆಯ ಸಂಕ್ಷೇಪ ನಿರೂಪಣೆಯಿಂದ ಚಂದ್ರಯ್ಯಗೌಡರ ವ್ಯಕ್ತಿತ್ವದ ಪರಿಚಯಕ್ಕೆ ಹೆಚ್ಚು ಸಹಾಯವಾಗುವುದರಲ್ಲಿ ಸಂದೇಹವಿಲ್ಲ.

ಆ ನಾಡಿನ ಒಕ್ಕಲಿಗರಲ್ಲಿ ಬಹುಪುರಾತನದಿಂದಲೂ ಹೆಂಡ, ಕಳ್ಳು ಮೊದಲಾದ ಮಾದಕ ಪದಾರ್ಥಗಳನ್ನು ಸೇವಿಸುವುದು ಅತಿ ಸಾಮಾನ್ಯವಾದ ರೂಢಿಯಾಗಿತ್ತು. ಈಗಲೂ ಅದು ಸಂಪೂರ್ಣವಾಗಿ ತೊಲಗಿಲ್ಲ. ಮೊದಲು ಎಲ್ಲೆಲ್ಲಿಯೂ ಬಹಿರಂಗವಾಗಿ ನಡೆಯುತ್ತಿದ್ದುದು ಈಗ ಅಲ್ಲಲ್ಲಿ ಅಂತರಂಗವಾಗಿ ಸಾಗುತ್ತಿದೆ. ಅಂತೂ ಮದ್ಯಪಾನ ಮಾಡುವುದು ನಾಚಿಗೆ ಗೇಡಿನ ಕೆಲಸವೆಂದೇನೊ ಎಲ್ಲರಿಗೂ ಗೊತ್ತಾಗಿದೆ. ಕಾರಣವೇನೆಂದರೆ, ಸುಮಾರು ಮೂವತ್ತು ಮೂವತ್ತೈದು ವರ್ಷಗಳ ಹಿಂದೆ ನಾಡಿನ ಒಕ್ಕಲಿಗ ಮುಖಂಡರಲ್ಲಿ ಒಂದು ಚಳವಳಿಯೆದ್ದಿತು. ಆ ಚಳವಳಿಗೆ ಕ್ರೈಸ್ತಪಾದ್ರಿಗಳ ಉಪದೇಶವೂ, ಮೈಸೂರು ಸರಕಾರದ “ಮಲೆನಾಡು ಅಭಿವೃದ್ಧಿ ಇಲಾಖೆ”ಯ ಬೋಧನೆಯೂ, ಬ್ರಿಟಿಷ್ ಆಳ್ವಿಕೆಯಿಂದುಂಟಾದ ನಾಗರಿಕತೆಯ ಆಗಮನವೂ, ಕಾಫಿ, ವೈನು, ವಿಸ್ಕಿ ಇತ್ಯಾದಿಯಾದ ವಿದೇಶೀಯ ಪಾನೀಯಗಳ ಆಮದೂ, ಸನ್ನಿವೇಶ ಪ್ರಭಾವದಿಂದ ಜನರಲ್ಲಿ ಸ್ವಾಭಾವಿಕವಾಗಿಯೆ ಉತ್ಪನ್ನವಾದ ಜಾಗ್ರತಿಯೂ ಕಾರಣಗಳಾದುವೆಂದು ಊಹಿಸಬಹುದು.

ಆಗ ಮಲೆನಾಡಿನಲ್ಲಿ ನಂಟರ ಮನೆಗೆ ಹೋದರೆ ಮೊದಲು ಕಾಲು ತೊಳೆಯಲು ನೀರು ಕೊಡುತ್ತಿದ್ದರು. ಆಮೇಲೆ ತಾಂಬೂಲ ನಿವೇದನವಾಗುತ್ತಿತ್ತು. ತರುವಾಯ ಹುರಿಮಾಂಸ ಅಥವಾ ಉಪ್ಪುಮಿನು ಅಥವಾ ಉಪ್ಪಿನಕಾಯಿ-ಇತ್ಯಾದಿ ಯಾವುದಾದರೊಂದು ವ್ಯಂಜನದ ಸಮೇತವಾಗಿ, ಬಾಯಿ ಲೊಚಗುಟ್ಟುವಷ್ಟರ ಮಟ್ಟಿಗೆ ಹುಳಿ ಹುಳಿಯಾದ ಹೆಂಡ ಕಳ್ಳುಗಳನ್ನು ಆದರಪೂರ್ವಕವಾಗಿ ವಿನಿಯೋಗಿಸಿ ಅತಿಥಿಸತ್ಕಾರ ಮಾಡುತ್ತಿದ್ದರು. ಈಗಿನವರು ಕಾಫಿ ಕೊಡುವುದನ್ನೂ ಕುಡಿಯುವುದನ್ನೂ ಹೇಗೆ ಸುಧಾರಣೆಯ ಚಿಹ್ನೆಯೆಂದೂ ನಾಗರಿಕತೆಯ ಗೌರವವೆಂದೂ ಭಾವಿಸುತ್ತಿರುವರೊ ಹಾಗೆಯೆ ಆಗಿನವರು ಹೆಂಡ ಕಳ್ಳುಗಳನ್ನು ಸನ್ಮಾನಿಸುತ್ತಿದ್ದರು.

ಆ ಪ್ರಾಂತದಲ್ಲಿ ಮೊಟ್ಟಮೊದಲು ಲೋವರ್ ಸೆಕೆಂಡರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಜನರಿಂದ ವಿದ್ವನ್ಮಣಿಯೆಂದು ಸಂಭಾವಿತರಾದ ಮಹನೀಯರೊಬ್ಬರು ಪಾದ್ರಿಗಳ ಮತ್ತು ಕೆಂಪು ಮುಖದ ರೆವರೆಂಡುಗಳು ಪ್ರಭಾವಕ್ಕೂ ಮೆಚ್ಚಿಗೆಗೂ ಪಾತ್ರರಾಗಿ, ತಮ್ಮ ಮತದ ಆಚಾರ ಅನಾಚಾರಗಳೆರಡನ್ನೂ ಒಂದೇ ಉಸಿರಿನಲ್ಲಿ ನಿಂದಿಸಿ ಭಾಷಣ ಮಾಡತೊಡಗಿದರಂತೆ; ತಾವು ಕ್ರಿಸ್ತಮತಕ್ಕೆ ಸೇರುವುದಾಗಿಯೂ ಸಾರಿದರಂತೆ. ಪಾದ್ರಿಗಳ ಮತ್ತು ರೆವರೆಂಡ್ ದೊರೆಗಳ ಮೆಚ್ಚುಗೆಗಾಗಿ ತಮ್ಮ ಬಂಧುಗಳಲ್ಲಿಯೂ ಕೆಲವರನ್ನು ಕ್ರಿಸ್ತಮತಕ್ಕೆ ಸೇರಿಸಿ, ತಾವು ಮಾತ್ರ “ಸೇರುತ್ತೇನೆ, ಸೇರುತ್ತೇನೆ”. ಎಂದು ಹೇಳುತ್ತಿದ್ದು, ಕಡೆಗೂ ಭಾರತೀಯ ಕ್ರೈಸ್ತ ಜನಸಂಖ್ಯೆಗೆ ಸ್ವಲ್ಪವೂ ಲಾಭವಾಗದ ರೀತಿಯಲ್ಲಿ ಕೈಲಾಸವಾಸಿಯೆ ಆಗಿಬಿಟ್ಟರಂತೆ!

ಅವರಿಂದ ಪ್ರಚೋದಿತವಾಗಿದ್ದ ಸಂಘದ ಒಂದು ಸಭೆಯಲ್ಲಿ ಮದ್ಯಪಾನವನ್ನು ಬಿಡುವ ವಿಚಾರವಾಗಿ ಭಾಷಣಗಳಾದವು. ಕೆಲವರಂತೂ ಚೆನ್ನಾಗಿ ಹೊಟ್ಟೆಗೂ ತಲೆಗೂ ಸೇಂದಿ ತುಂಬಿಕೊಂಡು ಬಂದಿದ್ದುದರಿಂದ ತೊದಲಿ ತೊದಲಿ ತೊನೆದು ತೂಗಿ “ಉಫಣ್ಯಾಸ” ಮಾಡಿದರು! ಅವರಲ್ಲಿ ಮಹಾರಾಜೇಶ್ರೀ ಕಾನೂರು ಚಂದ್ರಯ್ಯಗೌಡರೂ ಒಬ್ಬರಾಗಿದ್ದರು.

ಅಧ್ಯಕ್ಷರಾದಿಯಾಗಿ ಸಕಲ ಸದಸ್ಯರ ಬಾಯಿ ಮೂಗುಗಳಿಂದಲೂ ಹೆಂಡ ಕಳು ಸಾರಾಯಿಗಳ ಕಂಪು ಹೊಮ್ಮಿ, ಸಭಾಸ್ಥಳದ ವಾಯುಮಂಡಲವನ್ನೆಲ್ಲ ತೀವಿ, ಮದ್ಯಪಾನ ನಿರೋಧದ ಮಸೂದೆಯನ್ನು ಪರಿಹಾಸ್ಯಮಾಡುವಂತಿತ್ತು! ಬಾಳೂರು ಸಿಂಗೇಗೌಡರು “ಉಫಣ್ಯಾಸ” ಮುಗಿಸಿ ಬಾಯಲ್ಲಿ ಜೊಲ್ಲು ಸುರಿಸುತ್ತ, ಬಹಳ ಶ್ರಮದಿಂದ ತಮ್ಮ ಪೀಠವನ್ನು ತಡವಿ ತಡವಿ ಹುಡುಕಿ, ಕುಳಿತುಕೊಂಡು ಮೇಲೆ ಕಾನೂರು ಚಂದ್ರಯ್ಯಗೌಡರು ಮಾತಾಡಲು ಎದ್ದರು. ಸಭೆಯಲ್ಲಿ ಯಾರಾದರೂ ಮಾತನಾಡಲು ಎದ್ದರಾಗಲಿ ಅಥವಾ ಮಾತು ಮುಗಿಸಿ ಕುಳಿತರಾಗಲಿ, ಉತ್ತೇಜಕವಾಗಿಯೂ ಗೌರವಸೂಚಕವಾಗಿಯೂ ಕೈ ಚಪ್ಪಾಳೆ ಹೊಡೆಯುವುದು ಸಭ್ಯತೆಯ ಕುರುಹು ಎಂಬುದನ್ನು ಹೊಸದಾಗಿ ಕಲಿತಿದ್ದ ಆ ಸಂಘದ ಸದಸ್ಯರು, ಚಂದ್ರಯ್ಯಗೌಡರು ಎದ್ದುನಿಂತ ಕೂಡಲೆ, ಕುಡಿದ ಮತ್ತಿನಲ್ಲಿ, ಯದ್ವಾತದ್ವಾ ಕರತಾಡನ ಮಾಡಿದರು. ಅದೂ ಉತ್ತೇಜನ ಸೂಚಕವೊ ಪರಿಹಾಸ್ಯ ಸೂಚಕವೊ ಗೊತ್ತಾಗುವಂತಿರಲಿಲ್ಲ. ಅಂತೂ ಚೆನ್ನಾಗಿ ಕುಡಿದು ಹಣ್ಣುಹಣ್ಣಾಗಿದ್ದ ಚಂದ್ರಯ್ಯಗೌಡರು ಇದ್ದಕ್ಕಿದ್ದ ಹಾಗೆ ಆ ಕೈಚಪ್ಪಾಳೆಯ ಸಿಡಿಲುದನೆಗೆ ಕುಮುಟಿಬಿದ್ದರು. ಬಯಲುಸೀಮೆಗೆ ರುಚಿಸುವಂತೆ ಹೇಳುವುದಾದರೆ, ಹಠಾತ್ತಾಗಿ ಚಕಿತರಾದರು. (ಚಕಿತರಾದುದಕ್ಕಿಂತಲೂ ಸ್ವಲ್ಪ ಹೆಚ್ಚಾಗಿಯೇ ಆದರೆಂದು ಹೇಳಬೇಕು!) ಇನ್ನೇನು ತೂರಾಡಿ ನೆಲಕ್ಕೆ ಬೀಳಬೇಕು! ಅಷ್ಟರಲ್ಲಿ ಪಕ್ಕದಲ್ಲಿ ಕುಳಿತಿದ್ದ ಸೀತೆಮನೆ ಸಿಂಗಪ್ಪಗೌಡರು ಕೈಕೊಟ್ಟು ಹಿಡಿದು ನಿಲ್ಲಿಸಿದರು. ಚಂದ್ರಯ್ಯಗೌಡರು ಏನೇನನ್ನು ಹೇಳಬೇಕೆಂದು ಮನಸ್ಸು ಮಾಡಿದ್ದರೋ ಅದೆಲ್ಲ ಕೈಚಪ್ಪಾಳೆಯ ದೆಸೆಯಿಂದ ಮಿದುಳಿನಲ್ಲಿ ಕದಡಿ ಹೋಗಿತ್ತು. ಅವರ ಕಣ್ಣಿಗೆ ಸಭಾಂಗಣವೆಲ್ಲ ಅಸ್ಥೂಲವಾದಂತಾಗಿ ಸ್ವಪ್ನದಲ್ಲಿಯೊ ಎಂಬಂತೆ ತೇಲಾಡತೊಡಗಿದರು. ಆದರೂ ನೆರೆದವರ ಅಜ್ಞಾನಾಂಧಕಾರವನ್ನು ಪರಿಹರಿಸಿ, ಅವರಿಗೆ ಬೆಳಕು ತೋರುವ ಸಲುವಾಗಿ “ಉಫಣ್ಯಾಸ” ಮಾಡಿಯೇಬಿಟ್ಟರು. ಆದರೆ ಅವರು ಮಾತಾಡಿದುದು ಮದ್ಯಪಾನದ ಪರವಾಗಿಯೋ ವಿರೋಧವಾಗಿಯೋ ಒಬ್ಬರಿಗೂ ಗೊತ್ತಾಗಲಿಲ್ಲ.

“ಎಲ್ಲರಿಗೂ ಕೈಮುಗೀತೀನಿ….. ನಾನು ಎಲ್ಡು ಮಾತಾಡಿ ಕುತ್ಕೋ ಬೇಕು ಅಂತ ಎದ್ದು ನಿಂತೀನಿ…..

“ಗೌಡರಿಗೆ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ. ತಲೆಯಲ್ಲಿ ಹೆಂಡವು ಮದ್ಯಪಾನ ನಿರೋಧಕ್ಕೆ ವಿರೋಧಕ್ಕೆ ವಿರೋಧವಾಗಿ ಚಳವಳಿ ಹೂಡಿತ್ತು.

ಪಕ್ಕದಲ್ಲಿದ್ದ ಸಿಂಗಪ್ಪಗೌಡರು ಪಿಸುಮಾತಿನಲ್ಲಿ “ಹೆಂಡ ಕುಡಿಯುವುದು ಕೆಟ್ಟದ್ದು” ಎಂದು ಉಪನ್ಯಾಸ ಮಾಡಲು ಸೂಚನೆ ಕೊಟ್ಟರು.

ಆ ಕೊಟ್ಟ ಸೂಚನೆ ತಮಗೆ ಮಾಡಿದ ಉಪದೇಶವೆಂದು ಕೆರಳಿ ಚಂದ್ರಯ್ಯಗೌಡರು ಮೆಳ್ಳೆಗಣ್ಣು ಮಾಡಿಕೊಂಡು, ದುರು ದುರು ನೋಡುತ್ತ, ಸಿಂಗಪ್ಪಗೌಡರು ಕಡೆ ತಿರುಗಿ. ಗಟ್ಟಿಯಾಗಿ “ಯಾರೋ….. ಯಾರೋ ಹೇಳ್ದೋರು ನಿನಗೆ?” ಎಂದು ಕೂಗಿದರು.

“ನಿಮಗಿಲ್ಲ ಹೇಳಿದ್ದು. ಅವರಿಗೆ ಹೇಳಿ ಅಂತ ಹೇಳ್ದೆ ಅಷ್ಟೇ!” ಎಂದು ಮೆಲ್ಲಗೆ ನುಡಿದು ಸಿಂಗಪ್ಪಗೌಡರು ಸಮಾಧಾನ ಮಾಡಿದರು.

ಚಂದ್ರಯ್ಯಗೌಡರು ಮತ್ತೆ ಪ್ರಾರಂಭಿಸಿದರು:

“ಹೆಂಡ ಕುಡಿಯೋದು….. ಬಾ”ಳ ಕೆಟ್ಟದ್ದು…. ಬಾ”ಳ ಕೆಟ್ಟದ್ದು… ಕಾಫಿ ಕುಡಿಯೋದೂ….. ಅದಕ್ಕಿಂತಾ ಕೆಟ್ಟದ್ದು!….. ಹೆಂಡಬಿಟ್ಟರೆ ….  ಮುಂದೇನು ಗತಿ?….. ಕೇಳ್ತೀನಿ ನಾನು!….. ನಮ್ಮ ಅಪ್ಪ ಕುಡ್ದಿದ್ದಾ …… ನಮ್ಮಜ್ಜ ಕುಡ್ದಿದ್ದಾ … ನಾವು ಕುಡೀತೀವಿ … ಮಳೆಗಾಲದಾಗೆ ಕುಡಿದ್ರೆ …… ಒಳ್ಳೆ ಕಾವು ಬತ್ತದೆ!…. ಸಕ್ತಿ….. ಸಕ್ತಿ ಬತ್ತದೆ… ಹೆಂಡ ಕುಡಿಯೋದು ಬಹಳ ಕೆಟ್ಟದ್ದು….”

ಭಾಷಣದ ನಡುವೆ ಚಂದ್ರಯ್ಯಗೌಡರು ಕುಸಿದುಬಿದ್ದರು….

ಮರುದಿನ ಒಂದು “ಮಾನಪತ್ರ”ವಾಯಿತು. ಅದರಲ್ಲಿ ಇನ್ನು ಮುಂದೆ ಮದ್ಯಪಾನ ಮಾಡುವುದಿಲ್ಲ ಎಂದು ತಿರುಪತಿ, ಕಾಶಿ, ರಾಮೇಶ್ವರ, ಧರ್ಮಸ್ಥಳಗಳ ದೇವರುಗಳ ಆಣೆ ಹಾಕಿತ್ತು. ಕೆಲವರೆಲ್ಲ ಒಪ್ಪಿ ರುಜು ಹಾಕಿದರು. ಚಂದ್ರಯ್ಯಗೌಡರೂ ರುಜು ಹಾಕಿದರು.

ಬಾಳೂರು ಸಿಂಗೇಗೌಡರು “ನಾನು ದೇವರಾಣೆ ಹಾಕಿ ರುಜು ಹಾಕಲಾರೆ. ನನಗೆ ಹೆಂಡ ಕಳ್ಳು ಬಿಡ್ತೀನಿ ಅಂತ ನಂಬಿಕೇನೂ ಇಲ್ಲ, ಇಷ್ಟಾನೂ ಇಲ್ಲ” ಎಂದುಬಿಟ್ಟರು!

ಚಂದ್ರಯ್ಯಗೌಡರು “ಹಾಗಾಂದ್ರೆ ನೀವು ಮೀಟಿಂಗಿಗೆ ಬಂದಿದ್ಯಾಕೆ?” ಎಂದರು.

“ನೀವೆಲ್ಲ ಕರೆದ್ರಿ, ನಾನು ಬಂದೆ.ಹೋಗು ಅಂದ್ರೆ ಹೋಗ್ತೀನಿ” ಎಂದು ಬಾಳೂರು ಸಿಂಗೇಗೌಡರು ಹೊರಟೇಹೋದರು.

ಅವರಂತೂ ಸಾಯುವವರೆಗೂ ಕುಡಿಯುವುದನ್ನು ಬಿಡಲಿಲ್ಲ. ಮಾನಪತ್ರಕ್ಕೆ ರುಜು ಹಾಕಿದವರಲ್ಲಿ ಯಾರೋ ಒಂದಿಬ್ಬರು ಮಾತ್ರ ಮದ್ಯಪಾನವನ್ನು ಸಂಪೂರ್ಣವಾಗಿ ವರ್ಜಿಸಿದರಂತೆ; ಉಳಿದವರು ಅದುವರೆಗೆ ಬಹಿ ರಂಗವಾಗಿದ್ದುದನ್ನು ಅಂತರಂಗವನ್ನಾಗಿ ಮಾಡಿಕೊಂಡರು.

ಈ ಶೂದ್ರ ಸಂಘದ ಮಹಾಸಭೆಯಲ್ಲಿ ನಡೆದ ಕಥೆಯ ಪೂರ್ವೋತ್ತರವನ್ನೆಲ್ಲ ಕೇಳಿ, ಅಗ್ರಹಾರದ ಜೋಯಿಸರು ವೆಂಕಪ್ಪಯ್ಯನವರು ಮೊದಲಾಗಿ ವೇದಮೂರ್ತಿಗಳಾದ ಬ್ರಾಹ್ಮಣ ನಾಗರಿಕರೆಲ್ಲ ಹಾರಿ ಹಾರಿ ಬಿದ್ದು ನಕ್ಕು “ಹುಟ್ಟುಗುಣ ಸುಟ್ಟರೂ ಹೋದೀತೆ? ತೆನ್ನಾಲಿ ರಾಮಕೃಷ್ಣ ಕರಿಯ ನಾಯಿಯನ್ನು ತೊಳೆದು ಬಿಳಿಯ ನಾಯಿಯನ್ನಾಗಿ ಮಾಡಿದ ಹಾಗೆ!” ಎಂದರಂತೆ.

ಮಾನಪತ್ರಕ್ಕೆ ರುಜು ಹಾಕಿದ ಮೇಲೆ ಚಂದ್ರಯ್ಯಗೌಡರಿಗೆ ಪ್ರಾಣಕ್ಕೆ ಬಂದಿತು. ಒಂದು ದಿನವನ್ನೇನೋ ಬಹಳ ಕಷ್ಟಪಟ್ಟು ಕಳೆದರು. ಆ ದಿನ್ ಅವರ ಮನಃಸ್ಥಿತಿ ಅವರ್ಣನೀಯವಾಗಿತ್ತು. ಪ್ರಪಂಚವೂ ಜೀವನವೂ ಮನುಷ್ಯರೂ ಎಲ್ಲರೂ ಶತ್ರುಗಳಂತೆ ತೋರಿ ಕಂಡಕಂಡವರೊಡನೆ ಕದನವಾಡಿದರು. ಊಟಕ್ಕೆ ಕುಳಿತಾಗ ಸಾರಿಗೆ ಹುಳಿ ಹೆಚ್ಚು. ಮೊಸರು ನೀರಾಗಿದೆ, ಪಲ್ಯಕ್ಕೆಉಪ್ಪೇ ಇಲ್ಲ, ಎಂದು ಮೊದಲಾಗಿ ಹೆಂಗಸರನ್ನೆಲ್ಲ ಬೈದರು. ಆಳುಗಳೆಲ್ಲರೂ ಒಡೆಯರ ಸ್ಥಿತಿಯನ್ನು ಕಂಡು ನಡುಗಹತ್ತಿದರು.

ಸಂಜೆಯ ಹೊತ್ತಿಗೆ ಎಂದಿನಂತೆ ಹಳೆಪೈಕದ ತಿಮ್ಮ ಕಳ್ಳು ತಂದು ಗೌಡರನ್ನು ಆಹ್ವಾನಿಸಿದನು. ಹೋರಾಡಿ ದಣಿದಿದ್ದ ಗೌಡರ ಮನಸ್ಸು ಸಂತೋಷದಿಂದ ಸೋತುಹೋಯಿತು. ಆದರೆ ತಿರುಪತಿ, ಕಾಶಿ, ರಾಮೇಶ್ವರ ಮೊದಲಾದ ಪುಣ್ಯಸ್ಥಳಗಳ ದೇವರುಗಳ ಮೇಲೆ ಆಣೆ ಹಾಕಿದ್ದು ನೆನಪಿಗೆ ಬರಲು ಭೀತರಾದರು. ಅವರಿಗೆ ದೆವ್ವ ಭೂತ ದೇವತೆಗಳೆಂಬ ಅಪ್ರಾಪಂಚಿಕವಾದ ಪೋಲೀಸಿನಲ್ಲಿ ಅತಿ ಭೀತಿಯಿದ್ದುದರಿಂದ ಬಹು ಪ್ರಯತ್ನದಿಂದ, ಮಹಾ ಭೀಷ್ಮಸಾಹಸದಿಂದ ತಿಮ್ಮನನ್ನು ಕಳುಹಿಸಿಬಿಟ್ಟರು. ಅವನಂತೂ ಗೌಡರ ಸಂಯಮಕ್ಕೆ ಬೆಪ್ಪು ಬೆರಗಾಗಿ ಮೆಲ್ಲನೆ ಹಿಂತಿರುಗಿದನು. ಆದರೂ ಮನಸ್ಸಿನಲ್ಲಿ “ಕಳ್ಳುದೇವರಿಗಿಂತ ಸುಳ್ಳುದೇವರೇ? ಇಂದಲ್ಲ  ನಾಳೆ!” ಎಂದುಕೊಂಡು ಧೈರ್ಯ ತಾಳಿದನು.

ಮರುದಿನ ತಿಮ್ಮನ ಭವಿಷ್ಯತ್ತು ನಿಜವಾಯಿತು. “ಯಾರಿಗೂ ಹೇಳಬೇಡ” ಎಂದು ಅವನೊಡನೆ ಹೇಳಿ, ಗೌಡರು ಯಾವಾಗಲೂ ಕುಡಿಯುತ್ತಿದ್ದುದಕ್ಕಿಂತಲೂ ಸ್ವಲ್ಪ ಹೆಚ್ಚಾಗಿಯೆ ಕುಡಿದುಬಿಟ್ಟು, ಮನೆಗೆ ಬಂದು, ಯಾವ ಯಾವ ದೇವತೆಗಳ ಹೆಸರಿನಲ್ಲಿ ಆಣೆ ಹಾಕಿದ್ದರೋ ಆಯಾ ದೇವತೆಗಳಿಗೆ “ತಪ್ಪುಗಾಣಿಕೆ” ಕಟ್ಟಿ ಸ್ವಸ್ಥಚಿತ್ತರಾದರು!

ಇದಾದ ಮೂರು ನಾಲ್ಕು ದಿನಗಳಲ್ಲಿ ಚಂದ್ರಯ್ಯಗೌಡರು ಮುತ್ತಳ್ಳಿಗೆ  ಹೋಗಬೇಕಾಗಿ ಬಂದಿತು. ಅಲ್ಲಿ ಬೈಗಿನ ಹೊತ್ತು ಶ್ಯಾಮಯ್ಯಗೌಡರು ಮಾನಪತ್ರದ ಪ್ರಸ್ತಾಪವನ್ನೆತ್ತಿ “ನೀವೇ ಸಿಪಾಯಿ ಕಣ್ರೀ! ಅಂತೂ ಕುಡಿಯೋದು ವಜಾ ಮಾಡೇಬಿಟ್ಟಿ?” ಎಂದರು.

“ಮತ್ತೇನು ಮಾಡಾದು ಹೇಳಿ? ನಾಲ್ಕು ಜನ ಮಾಡಿದ ಹಾಗೆ ನಾವು ಮಾಡಬೇಕಪ್ಪಾ! ಅಲ್ಲ ಅಂದ್ರೆ ಆಗ್ತದೇನು?” ಎಂದು ಚಂದ್ರಯ್ಯ ಗೌಡರು ಗೋಡೆಯ ಕಡೆಗೆ ನೋಡಿದರು.

ಸ್ವಲ್ಪ ಹೊತ್ತಾದಮೇಲೆ ಶ್ಯಾಮಯ್ಯಗೌಡರು “ನಾನು ಸ್ವಲ್ಪ ಹೊರಗೆ ಹೋಗಿ ಬರ್ತೀನಿ” ಎಂದು ಬಂಬಿಗೆ ತೆಗೆದುಕೊಂಡು ಹೋದರು.

ಚಂದ್ರಯ್ಯಗೌಡರಿಗೆ ಸಂಶಯವಾಯಿತು. ಅವರೂ ಮೆಲ್ಲಗೆ ಎದ್ದು ಬಾವನ ಹಿಂದೆಯೆ ಹೋದರು. ಚಿರಪರಿಚಿತವಾಗಿದ್ದ ಕಳ್ಳುಗೊತ್ತಿನ ಬಳಿಗೆ ಹೋಗಿ ನೋಡಲು ಯಾರೂ ಕಾಣಿಸಲಿಲ್ಲ. ಕತ್ತಲೆ ಕವಿದಿತ್ತು. ಇನ್ನೇನು ಹತಾಶನಾಗಿ ಹಿಂತಿರುಗಬೇಕು; ಯಾರೋ ದೂರದ ಪೊದೆಗಳ ಮಧ್ಯೆ ಮೆಲ್ಲಗೆ ಕೆಮ್ಮಿದಂತಾಯಿತು! ಚಂದ್ರಯ್ಯಗೌಡರು ಆ ಕಡೆಗೆ ಸಾಗಿದರು. ಕತ್ತಲೆಯಲ್ಲಿ ಕಣ್ಣಿಗೆ ಯಾರೂ ಕಾಣಿಸದಿದ್ದರೂ ಗುಸು ಗುಸು ಮಾತಾಡುತ್ತಿದ್ದುದು ಕೇಳಿಬಂತು. ಚಂದ್ರಯ್ಯಗೌಡರು ಇನ್ನೂ ಹತ್ತಿರ ಹೋಗಿ, ಬಯಲಿನಲ್ಲಿದ್ದ ಹಿತ್ತಾಳೆಯ ಚೊಂಬೊಂದು ಕತ್ತಲೆಯಲ್ಲಿ ಕಿರುನಗೆ ಬೀರುತ್ತಿದ್ದುದನ್ನು ಕಂಡು “ಯಾರದು?” ಎಂದರು.

ಪೊದೆಯ ನಡುವೆ ರಹಸ್ಯ ಧ್ವನಿಯೊಂದು “ಯಾರು ಚಂದ್ರಯ್ಯ ಬಾವನೇನು?” ಎಂದಿತು.

“ಯಾರು? ಶಾಮಯ್ಯ ಬಾವನೇ? ಇಲ್ಲೇನು ಮಾಡ್ತೀರಿ?” ಎಂದ ಚಂದ್ರಯ್ಯಗೌಡರ ಮೂಗಿಗೆ ಸರ್ವವೂ ವೇದ್ಯವಾಗಿ ಹೋಯಿತು.

“ಏನಿಲ್ಲ!….. ನೀವು “ಬಿಟ್ಟಿದ್ದೀನಿ” ಅಂದ್ರಿ. ಅದಕ್ಕೆ ನಾನೊಬ್ಬನೆ ಬಂದೆ!”

“ಒಳ್ಳೇ ಗಟ್ಟಿಗರು ನೀವು!….. ನೀವೂ ರುಜುಹಾಕಲಿಲ್ಲೇನು ಮಾನಪತ್ರಕ್ಕೆ?”

“ರುಜು ಹಾಕಿದ್ದ ತಪ್ಪಿಗೇ ಮತ್ತೆ, ಮೊನ್ನೆ ಮೂವತ್ತು ನಾಲ್ವತ್ತು ರೂಪಾಯಿ ತಪ್ಪುಗಾಣಿಕೆ ಕಟ್ಟಬೇಕಾಯ್ತು!”

“ನಾನೂ ಅವತ್ತೇ ಕಟ್ಟಿಬಿಟ್ಟೆ!”

“ಹಾಂಗಾದ್ರೆ ಬನ್ನಿ!”

ಇಬ್ಬರೂ ಸೇರಿ ಇದ್ದ ಕಳ್ಳನೆಲ್ಲ ಪೂರೈಸಿ ಹಿಂತಿರುಗಿದರು.

ನಾಡನ್ನೆಲ್ಲ ಕತ್ತಲೆ ಆವರಿಸಿತ್ತು. ಅರಣ್ಯ ಪರ್ವತಗಳೆಲ್ಲ ಕಳ್ಳು ಕುಡಿದು ಪ್ರಜ್ಞೆತಪ್ಪಿ ಬಿದ್ದಂತೆ ತೋರುತ್ತಿದ್ದುವು. ಮೇಲುಗಡೆ ಅನಂತಾಕಾಶದಲ್ಲಿ ಅಗಣಿತ ನಕ್ಷತ್ರಗಳು “ಕುಡೀರಪ್ಪ! ಚಿಂತೆಯಿಲ್ಲ! ಇನ್ನ್ಯಾರು ನೋಡ್ತಾರೆ!” ಎಂದು ಕಣ್ಣು ಮಿಟಿಕಿಸುತ್ತಿದ್ದುವು. ದೇವರಿಗೆ ಸಿಟ್ಟು ಬರುತ್ತದೆಯೇ-ಜಗತ್ತೇ ಸಹಾನೂಭೂತಿ ತೋರಿಸುವಾಗ!

* * *

ಬೈರ ಬಿಡಾರಕ್ಕೆ ಪರಾರಿಯಾದ ಮೇಲೆ ಚಂದ್ರಯ್ಯಗೌಡರು ಒಳಗೆ ಬಂದು ಜಗಲಿಯಲ್ಲಿ ದೀಪಕ್ಕೆ ದೂರವಾಗಿ ಕುಳಿತರು. ಮನೆಯೆಲ್ಲ ಹೆದರಿದಂತೆ ನಿಃಶಬ್ದವಾಗಿತ್ತು.

ಸ್ವಲ್ಪ ಹೊತ್ತಾದ ಬಳಿಕ ಏಣಿಮೆಟ್ಟಲು ಸದ್ದಾಯಿತು. ಗೌಡರು ತಿರುಗಿ ನೋಡಿದರು. ಹೂವಯ್ಯ ಕೆಳಗಿಳಿದು ಬಂದು ಹೆಬ್ಬಾಗಿಲು ದಾಟಿ ಹೊರಗೆ ಹೋದನು. ಶೌಚಕಾರ್ಯಕ್ಕೆ ಹೋಗುತ್ತಿರಬಹುದೆಂದು ಊಹಿಸಿ ಗೌಡರು ಸುಮ್ಮನಾದರು. ಐದು ನಿಮಿಷ ಕಳೆಯಿತು; ಹತ್ತು ನಿಮಿಷವಾಯಿತು, ಹೂವಯ್ಯ ಹಿಂದೆ ಬರಲಿಲ್ಲ. ಕಡೆಗೆ ಹದಿನೈದು ಇಪ್ಪತ್ತು ನಿಮಿಷಗಳೂ ಕಳೆದುವು. ಗೌಡರು ಮೆಲ್ಲಗೆ ಎದ್ದು ಸ್ವಲ್ಪ ಮಟ್ಟಿಗೆ ತತ್ತರಿಸುತ್ತಲೆ ಹೆಬ್ಬಾಗಿಲು ದಾಟಿ ನೋಡಿದರು. ಶುಕ್ಲಪಕ್ಷದ ಅಪೂರ್ಣಚಂದ್ರನ ಸೌಮ್ಯಕಾಂತಿ ತೋಟದ ಹಸುರಿನ ಮೇಲೆ ಮೌನವಾಗಿ ಮಲಗಿತ್ತು. ಬೆಳ್ದಿಂಗಳಲ್ಲಿ ಕಣದ ಮತ್ತು ಹೊರ ಅಂಗಳದ ನೆಲ ಬಿಳಿಬೂದಿ ಚೆಲ್ಲಿದ್ದಂತೆ ಕಾಣುತ್ತಿತ್ತು. ನೋಡುತ್ತಿದ್ದ ಹಾಗೆಯೆ ಗೌಡರ ಕಣ್ಣಿಗೆ ದುರದ ಒಂದು ಬಾಳೆಯ ಪೊದೆಯ ಬುಡದಲ್ಲಿ ಯಾರೋ ನಿಂತಿದ್ದಂತೆ ಕಾಣಿಸಿತು. ಹೂವಯ್ಯನಿರಬೇಕೆಂದು ಆಲೋಚಿಸುತ್ತಿದ್ದ ಹಾಗೆಯೆ ಆಕೃತಿ ಮರೆಯಾಗಿ, ಬಾಳೆಯ ಸರಬಲು (ನೇತಾಡುವ ಒಣಗು ಎಲೆಗಳು) ಮಾತ್ರ ಕಾಣಿಸಿತು. ಕಳ್ಳು ಕುಡಿದಿದ್ದ ಗೌಡರ ಭ್ರಾಂತದೃಷ್ಟಿಗೆ ದಿಗ್ಭ್ರಾಂತಿಯಾದಂತಾಗಿ  ಭಯದಿಂದ ಮತ್ತೆ ನೋಡಿದರು. ಹೌದು; ಅದೇ ಆಕೃತಿ! ಬಾಳೆಯ ಪೊದೆಯ ಬುಡದಲ್ಲಿ ಮತ್ತೆ ನಿಂತಿತ್ತು! ಆದರೆ ಮೊದಲಿಗಿಂತಲೂ ದೊಡ್ಡದಾಗಿ ತೋರಿತು!

“ಯಾರದು? ಹೂವಯ್ಯನೇನೋ?” ಎಂದರು.

ಯಾರೂ ಮಾತಾಡಲಿಲ್ಲ. ಪ್ರತ್ಯುತ್ತರವಾಗಿ ಆಕೃತಿ ಇನ್ನೂ ಹಿರಿದಾಯಿತು.

ಗೌಡರು “ಅಯ್ಯೋ ಭೂತರಾಯ!” ಎಂದು ಕೂಗಿಕೊಂಡು ಕುಸಿದು ಬಿದ್ದರು.

ಬಾಳೆಯ ಪೊದೆಯ ಬುಡದಲ್ಲಿದ್ದವನು ಹೂವಯ್ಯನಾಗಿದ್ದ ಪಕ್ಷದಲ್ಲಿ ಗೌಡರ ಪ್ರಶ್ನೆಗೆ “ಓ” ಕೊಳ್ಳುತ್ತಿದ್ದನು. ಆದರೆ ಹೂವಯ್ಯನಲ್ಲಿರಲಿಲ್ಲ.

ಅವನು ಬೈರನು ಬಿಸಾಡಿಹೋಗಿದ್ದ ಬತ್ತದ ಗಂಟನ್ನು ಹೊತ್ತುಕೊಂಡು ಬೇಲರ ಬಿಡಾರಕ್ಕೆ ಹೋಗಿದ್ದನು.

ಮುಟ್ಟದವನು ಬಿಟ್ಟುಹೋಗಿದ್ದ ಕಂಬಳಿಯ ಗಂಟನ್ನು ಹೊತ್ತು ನಡೆದು ಬೇಲರ ಬಿಡಾರವನ್ನು ಸಮೀಪಿಸುತ್ತಿದ್ದಾಗಲೆ, ಸದ್ದಿಲ್ಲದ ಇರುಳಿನಲ್ಲಿ ಗೋಳಾಟ ಹೃದಯವಿದ್ರಾವಕವಾಗಿ ಕೇಳಿಬಂತು ಹೂವಯ್ಯ ಗಾಬರಿಗೊಂಡವನಾಗಿ ಬೇಗ ಬೇಗನೆ ಕಾಲುಹಾಕಿ ಹೋಗಿ ನೋಡುತ್ತಾನೆ: ಬೈರನು ಉನ್ಮತ್ತನಾಗಿ ತನ್ನ ಹೆಂಡತಿ ಸೇಸಿಯ ಜುಟ್ಟನ್ನು ಹಿಡಿದು ಒನಕೆಯಿಂದ  ಬತ್ತ ಕುಟ್ಟುವಂತೆ ಗುದ್ದುತ್ತಿದ್ದಾನೆ! ಅವಳು ಅಳುತ್ತ ಅರಚುತ್ತಿದ್ದಾಳೆ! ಗಂಗ ಹುಡುಗ ದೂರದಲ್ಲಿ ನಡುಗುತ್ತ ನಿಂತು ಗೋಳಿಡುತ್ತಿದ್ದಾನೆ. ಸಿದ್ದನೇ ಮೊದಲಾದ ಕೇರಿಯವರು ಸುತ್ತಲೂ ನಿಂತು ಬೈರನಿಗೆ ಬುದ್ಧಿಯ ಮಾತುಗಳನ್ನು ಹೇಳುತ್ತಿದ್ದಾರೆ!

ಆ ಗಲಭೆಯಲ್ಲಿ ಹೂವಯ್ಯ ಬಂದುದನ್ನೂ ಕೂಡ ಯಾರೂ ಗಮನಿಸಲಿಲ್ಲ. ಅವನು ಬತ್ತದ ಗಂಟನ್ನು ಕೆಳಗೆ ಹಾಕಿ ಓಡಿ ಬಳಿಗೆ ಹೋಗಿ “ಏ ಬೈರಾ! ಬೈರಾ!” ಎಂದು ಗದರಿಸಿದನು. ಅದುವರೆಗೂ ಯಾರನ್ನೂ ಲೆಕ್ಕಿಸದೆ ಕಾರ್ಯೋನ್ಮುಖನಾಗಿದ್ದ ಬೈರ ಶುಭ್ರವಸನಧಾರಿಯಾದ ಸುಸಂಸ್ಕೃತ ಮೂರ್ತಿಯನ್ನು ಕಂಡೊಡನೆ ತಟಕ್ಕನೆ ಹಿಂಜರಿದು ನಿಂತನು ಸೇಸಿ ಓಡಿಬಂದು ಹೂವಯ್ಯನ ಕಾಲಿನ ಬುಡದಲ್ಲಿ ಕೈಮುಗಿದುಕೊಂಡು ಬಿದ್ದು ಗೊಳೋ ಎಂದು ಅಳತೊಡಗಿದಳು. ಅವಳಿಗೆ ತನ್ನ ಭಾಗದ ದೇವರೇ ಅಲ್ಲಿಗೆ ಬಂದಂತಾಗಿತ್ತು.

ಚಂದ್ರಯ್ಯಗೌಡರ ಕೈಯಿಂದ ಪಾರಾಗಿ ತಪ್ಪಿಸಿಕೊಂಡು ಹೋಗಿದ್ದ ಬೈರನ ಮನಸ್ಸು ಕೆಟ್ಟು ಹೋಗಿತ್ತು. ಅದರಲ್ಲಿಯೂ ಕೈಗೆ ಬಂದ ಬತ್ತ ಬಾಯಿಗೆ ಬರಲಿಲ್ಲವಲ್ಲಾ ಎಂದು ಹೊಟ್ಟೆಯುರಿಯುತ್ತಿತ್ತು. ಅಂತೂ ಸಿಟ್ಟಿನಿಂದಲೆ ಬಿಡಾರಕ್ಕೆ ಹೋಗಿ ಚೆನ್ನಾಗಿ ಕಳ್ಳು ಕುಡಿದನು. ಕುಡಿದ ಮತ್ತಿನಲ್ಲಿಯೆ ಊಟಕ್ಕೆ ಬಡಿಸುವಂತೆ ಹೇಳಿದನು. ಸೇಸಿ ಮನೆಯಲ್ಲಿ ಬತ್ತದ ಕಾಳೂ ಇಲ್ಲದಿದ್ದುದರಿಂದ ಅಡಿಗೆ ಮಾಡಲಿಲ್ಲ ಎಂದಳು. ಬೈರ  ನೆರೆಮನೆಯಿಂದ ತರಬಾರದಾಗಿತ್ತೆ ಎಂದನು. ಸೇಸಿ ನೆರೆಮನೆಯವರ ಕಣಜ  ಕಟ್ಟಿಲ್ಲ ಎಂದಳು. ಹೀಗೆ ಮಾತಿಗೆ ಮಾತಾಗಿ ರೇಗಿದ ಬೈರ ಹೆಂಡತಿಯನ್ನು ಹೊಡೆಯಲು ಪ್ರಾರಂಭಿಸಿದನು.

ಹೂವಯ್ಯ ಬೈರನಿಗೆ ಒಂದೆರಡು ಬುದ್ಧಿಯ ಮಾತು ಹೇಳಿ, ಸೇಸಿಯನ್ನು ಸಮಾಧಾನಪಡಿಸಿ ಅವರೆಲ್ಲರಿಗೂ ಆಶ್ಚರ್ಯವೂ ಆನಂದವೂ ಆಗುವ ರೀತಿಯಲ್ಲಿ ಬತ್ತದ ಗಂಟನ್ನು ಕೊಟ್ಟು. ಚಿಂತಾಮಗ್ನನಾಗಿ ಹಿಂತಿರುಗಿದನು:

ಒಂದು ಸಣ್ಣ ಕಾರಣದಿಂದ ಎಷ್ಟೆಷ್ಟು ವಿಪರೀತ ಕಾರ್ಯಗಳಾಗುತ್ತವೆ? ಅಕಸ್ಮಾತ್ತಾಗಿ ನೇಗಿಲು ಮುರಿದು, ಎತ್ತಿಗೆ ಗಾಯವಾದ ತಪ್ಪಿಗೆ ಈಗಾಗಲೆ ಎಷ್ಟೊಂದು ಗುರುತರ ಘಟನೆಗಳಾಗಿ ಹೋದುವು? ಇದಕ್ಕೆಲ್ಲ ಮನುಷ್ಯನಲ್ಲಿರುವ ಅನುದಾರವಾದ ಸಣ್ಣಬುದ್ಧಿಯೆ ಮೂಲಕಾರಣವಲ್ಲವೆ? ಅದನ್ನು ತಿದ್ದುವುದೆಂತು? ತಮ್ಮನು ತಿಳಿಸಿದಂತೆ ಚಿಕ್ಕಯ್ಯನ ಮನಸ್ಸೂ ಹುಚ್ಚು ಹುಚ್ಚುಗುತ್ತಿದೆ! ಹೊಸ ಹೆಣ್ಣಿನ ದೆಸೆಯೋ ಏನೋ!

ಆಲೋಚಿಸುತ್ತ ಮನೆಯ ಬಳಿಗೆ ಬಂದಾಗ ಮನುಷ್ಯರೋದನ ಕೇಳಿಸಿತು. ಹೂವಯ್ಯ ಹೆಬ್ಬಾಗಿಲಿಂದ ಒಳಗೆ ನುಗ್ಗಿದನು.

ಜಗಲಿಯಲ್ಲಿ ಹಾಸಗೆಯ ಮೇಲೆ ಅರ್ಧ ಪ್ರಜ್ಞಾವಸ್ತೆಯಲ್ಲಿ ಮಲಗಿದ್ದ ಚಂದ್ರಯ್ಯಗೌಡರ ಸುತ್ತಲೂ ಮನೆಯವರೆಲ್ಲ ಕಿಕ್ಕಿರಿದಿದ್ದರು. ಸುಬ್ಬಮ್ಮ ಗಟ್ಟಿಯಾಗಿ ಅಳುತ್ತಿದ್ದಳು. ಸೇರೆಗಾರರು ಭೂತಾದಿ ದೇವತೆಗಳಿಗೆ ಹರಕೆ ಹೇಳಿಕೊಳ್ಳುತ್ತ ಮುಡಿಪು ಕಟ್ಟುತ್ತಿದ್ದರು. ಪುಟ್ಟಣ್ಣ ಗಾಳಿ ಬೀಸುತ್ತಿದ್ದನು. ರಾಮಯ್ಯ ತಂದೆಯ ಬಳಿ ಕುಳಿತು ತಲೆಗೆ ತಣ್ಣೀರು ತಟ್ಟುತ್ತಿದ್ದನು. ಹೂವಯ್ಯ, ಅಂತಹ ಸನ್ನಿವೇಶದಲ್ಲಿ ಎಷ್ಟು ತಿಳಿಯಬಹುದೋ ಅಷ್ಟು ವಿಷಯವನ್ನು ತಿಳಿದುಕೊಂಡು, ಎಲ್ಲರಿಗೂ ಸಮಾಧಾನ ಹೇಳುತ್ತ, ತಾನೂ ಚಿಕ್ಕಯ್ಯನ ಶುಶ್ರೂಷೆಗೆ ತೊಡಗಿದನು.

ಒಂದು ಗಂಟೆಯೊಳಗಾಗಿ ಗೌಡರು ಎದ್ದು ಕುಳಿತು ತಮಗಾದ ಅನುಭವದ ಕಥೆಯನ್ನು ವಿಸ್ತರಿಸಿದರು:”ಭೂತರಾಯನಿಗೆ ಏನೋ “ಮುಟ್ಟು ಚಿಟ್ಟು” ಆಗಿದೆ! ಹರಕೆ ಮಾಡಬೇಕು. ವೆಂಕಪ್ಪಯ್ಯನವರನ್ನು ಕರೆಸಿ ಶುದ್ಧಿ ಮಾಡಿಸಿ ಹಣ್ಣು ಕಾಯಿ ಹಾಕಿಸಬೇಕು” ಎಂಬುದು ಅವರ ಸಿದ್ಧಾಂತವಾಗಿತ್ತು.

ಹೂವಯ್ಯ ರಾಮಯ್ಯ ಇಬ್ಬರಿಗೆ ಹೊರತು ಉಳಿದ ಎಲ್ಲರಿಗೂ ಗೌಡರ ಮಾತು ದಿಟವೆಂದು ತೋರಿತು.

“ಮಟ್ಟಾದವರು ಯಾರಾದರೂ ತೋಟಕ್ಕೆ ಹೋಗಿದ್ದರೋ ಏನೋ” ಎಂದು ಸೇರೆಗಾರರು ಭೂತರಾಯನ ಕೋಪಕ್ಕೆ ಕಾರಣವನ್ನು ಸೂಚಿಸಿದರು.

ಗೌಡರೂ ಅದನ್ನೇ ಸಮರ್ಥಿಸುವಂತೆ “ಈ ಸೂಳೇಮಕ್ಳೀಗೆ ಎಷ್ಟಂತಾ ಹೇಳಾದು? ಬಡ್ಕೊಂಡು ಸಾಕಾಯ್ತು!” ಎಂದು ಸುಬ್ಬಮ್ಮನ ಕಡೆಗೆ ಕಣ್ಣು ಕೆರಳಿಸಿ ನೋಡಲು, ಸ್ತ್ರೀಸಮುದಾಯವು ಮೆಲ್ಲನೆ ಅಡುಗೆ ಮನೆಯ ಕಡೆಗೆ ತಿರುಗಿತು.