ಅಂತೂ ಬಹುಕಾಲದಿಂದ ಜಟ್ಟಿಗೆ ನಡೆದುಕೊಂಡುಬಂದಿದ್ದ ಕಾನೂರು ಮನೆಯ ಅವಿಭಕ್ತ ಕುಟುಂಬ ಎರಡು ಪಾಲಾಗಿ ಹೋಯಿತು. ಕೆಲವರಿಗೆ ಅದರಿಂದ ವ್ಯಸನವಾದರೂ ಮತ್ತೆ ಕೆಲವರಿಗೆ ಒಳಗೊಳಗೆ ಹರ್ಷವಾಗದೆ ಇರಲಿಲ್ಲ. ಪ್ರಬಲವಾಗಿದ್ದ ಮನೆತನ ಒಡೆದುಹೋದರೆ ಪ್ರಬಲರಾಗಬೇಕೆಂಬ ಇತರರಿಗೆ ಒಳ್ಳೆಯ ಅವಕಾಶ ಸಿಕ್ಕಿಂತಾಗುವುದಿಲ್ಲವೆ ? ಅದರಲ್ಲಿಯೂ ಚಂದ್ರಯ್ಯ ಗೌಡರಂತಹ ನಿರಂಕುಶ ದರ್ಪಶಾಲಿಗಳ ಮೇಲೆ ಅನೇಕರಿಗೆ ಕಣ್ಣಿರುವುದು ಸಹಜ. ಅಂಥವರೆಲ್ಲ ಕಾನೂರು ಮನೆ ಪಾಲಾಯಿತೆಂಬುದನ್ನು ಕೇಳಿ ಹರ್ಷಿತರಾದರು. ಕೆಲವರಿಗೆ ತಮ್ಮ ಅಭ್ಯುದಯಕ್ಕಿಂತಲೂ ಮತ್ತೊಬ್ಬರ ಅವನತಿಯಲ್ಲಿ ಹೆಚ್ಚು ಸುಖವಿರುತ್ತದೆ.

ಹೆಸರಿಗೆ ಮಾತ್ರ ಮನೆ ಎರಡು ಪಾಲಾಯಿತು. ಆದರೆ ಆಸ್ತಿಯಲ್ಲಿ ಮುಕ್ಕಾಲು ಪಾಲು ಚಂದ್ರಯ್ಯಗೌಡರ ಹಿಸ್ಸೆಗೇ ಸೇರಿಹೋಯಿತು. ‘ಸ್ವಯಾರ್ಜಿತ’ ವೆಂದು ಕೆಲವು ಜಮೀನುಗಳನ್ನೂ, ಮನೆಯ ಸಾಲವನ್ನೆಲ್ಲ ತನ್ನ ಮೇಲೆ ಹಾಕಿಕೊಂಡಿದ್ದರಿಂದ ಎಂದು ಮತ್ತೆ ಕೆಲವು ಜಮೀನುಗಳನ್ನೂ ಚಂದ್ರಯ್ಯಗೌಡರು ತಮ್ಮ ಪಾಲಿಗೇ ಹಾಕಿಕೊಂಡರು. ಆಭರಣ ಮುಂತಾದ ಚರಸ್ವತ್ತುಗಳನ್ನು ಪಾಲುಮಾಡುವಾಗಲೂ ಕೂಡ ಅನೇಕ ಉಪಾಯಗಳಿಂದ ತಮಗೆ ಹೆಚ್ಚು ಪಾಲು ಬರುವಂತೆ ಮಾಡಿಕೊಂಡರು. ಮನೆಯ ಜೀತದಾಳುಗಳನ್ನು ಹಂಚಿಕೊಳ್ಳುವಾಗಲೂ ಹಾಗೆಯೇ ನಡೆಯಿತು. ಬೈರ ಮತ್ತು ಅವನ ಸಂಸಾರ ಹೆಂಡತಿ ಸೇಸಿ, ಮಗ ಗಂಗಹುಡುಗ – ಹೊರತು ಉಳಿದ ಎಲ್ಲ ಬೇಲರೂ ಚಂದ್ರಯ್ಯ ಗೌಡರ ಪಾಲಿಗೆ ಬಂದರು.

ಬೈರ ಕೂಡ ತನ್ನ ಸಂಸಾರಸಮೇತವಾಗಿ ಚಂದ್ರಯ್ಯಗೌಡರ ಪಕ್ಷಕ್ಕೇ ಹೋಗುತ್ತಿದ್ದನೋ ಏನೋ ಆದರೆ ಕೆಲದಿನಗಳ ಹಿಂದೆ ಎತ್ತಿನ ಕಾಲು ಗಾಯವಾದುದಕ್ಕೆ ಗೌಡರು ಹೊಡೆದುದರಿಂದಲೂ, ಅವರ ಅಪ್ಪಣೆಗೆ ವಿರೋಧವಾಗಿ ತಾನು ಕೂಲಿ ತೆಗೆದುಕೊಂಡಾಗ ಗೌಡರು ಕಠೋರವಾಗಿ ವರ್ತಿಸಿದುದರಿಂದಲೂ, ಆ ರಾತ್ರಿ ತಾನು ತನ್ನ ಹೆಂಡತಿಯನ್ನು ಹೊಡೆಯುತ್ತಿದ್ದಾಗ ಅಸ್ಪ್ರಶ್ಯನಾದ ತನ್ನ ಕಂಬಳಿಯಲ್ಲಿದ್ದ ಬತ್ತವನ್ನು ತನ್ನ  ಬಿಡಾರಕ್ಕೆ ಹೂವಯ್ಯ ಹೊತ್ತು ತಂದು ನಯವಾಕ್ಯಗಳಿಂದ ತನ್ನನ್ನು ತಿದ್ದಿದುದರಿಂದಲೂ ಅವನಿಗೆ ಹೂವಯ್ಯನ ಪರವಾಗಿ ಆರಾಧನಾಭಾವ ಬಂದುಬಿಟ್ಟಿತ್ತು. ಆದ್ದರಿಂದಲೆ ಅವನು ತಾನು ಚಂದ್ರಯ್ಯಗೌಡರು ಮನಸ್ಸಿನಲ್ಲಿಯೆ ‘ನಿನಗೆ ಮಾಡಿಸುತ್ತೇನೆ’ ಎಂದುಕೊಂಡು ಅವನನ್ನು ಹೂವಯ್ಯನಿಗೆ ಬಿಟ್ಟುಕೊಟ್ಟರು. ಉಳಿದ ಜೀತದಾಳುಗಳೆಲ್ಲರೂ ಚಂದ್ರಯ್ಯಗೌಡರ ಕಣ್ಣು ಹೆದರಿಕೆ ಕೊರಳುಹೆದರಿಕೆಗಳಿಂದ ಒಂದು ಪ್ರತಿ ಮಾತನ್ನೂ ಆಡದೆ ಅವರ ಪಕ್ಷಕ್ಕೇ ಬಂದುಬಿಟ್ಟರು.

ಮನೆ ಹಿಸ್ಸೆಯಾದ ಮರುದಿನವೆ ಎರಡು ಅಡುಗೆಮನೆಯ ಒಲೆಗಳಲ್ಲಿ ಬೆಂಕಿ ಹೊಗೆಯಾಡಿತು. ಬಚ್ಚಲು ಮನೆಯಲ್ಲಿಯೂ ಮತ್ತೊಂದು ಒಲೆ ನೇರ್ಪಟ್ಟು ಬೇರೆಬೇರೆಯ ಹಂಡೆಗಳಲ್ಲಿ ನೀರು ಕುದಿಯತೊಡಗಿತು. ಒಂದೇ ಜಗಲಿಯಲ್ಲಿ ಪಶ್ಚಿಮದ ಕೊನೆಯಲ್ಲಿ ಒಂದು, ಪೂರ್ವದ ಕೊನೆಯಲ್ಲಿ ಒಂದು, ಹೀಗೆ ಎರಡು ಲ್ಯಾಂಪು ಉರಿಯತೊಡಗಿದುವು. ಸಾಧ್ಯವಾದ ಕಡೆಗಳಲ್ಲೆಲ್ಲ ಚಂದ್ರಯ್ಯಗೌಡರು ಹೂವಯ್ಯನ ಪಾಲಿಗೂ ತನ್ನ ಪಾಲಿಗೂ ನಡುವೆ ತಟ್ಟಿಗಳನ್ನು ಕಟ್ಟಿಸಿದರು. ಹಾಗೆ ಮಾಡಿದರೆ ಮನೆಯೆಲ್ಲ ವಿಕಾರವಾಗುತ್ತದೆ ; ಮನೆಗೆ ಬಂದ ನಂಟರಿಗೂ ಅದನ್ನೆಲ್ಲ ನೋಡಿದರೆ ಇಸ್ಸಿ ಎನ್ನಿಸುತ್ತದೆ ; ತಟ್ಟಿ ಕಟ್ಟುವುದು ಬೇಡ ಎಂದು ಹೂವಯ್ಯ ಹೇಳಿದರೆ ಚಂದ್ರಯ್ಯಗೌಡರು ದೀರ್ಘಸ್ವರದಿಂದ ” ಯಾಕಪ್ಪಾ ? ನಿನ್ನ ಪಾಲು ನಿನಗೆ ; ನನ್ನ ಪಾಲು ನನಗೆ ! ನಾವು ನಾವು ದೂರ ದೂರ ಇರೋದೆ ವಾಸಿ ” ಎಂದು ಮೊದಲಾಗಿ ಅನೇಕ ಕಟುಹಾಸ್ಯಗರ್ಭಿತವಾದ ಮಾತುಗಳನ್ನು ಆಡಿ, ತಾವು ಕೈಕೊಂಡ ಕಾರ್ಯವನ್ನು ಸಾಂಗವಾಗಿ ನೆರವೇರಿಸಿಬಿಟ್ಟರು.

ಹಾಗೆಯೆ ಅಡಕೆಯ ತೋಟದಲ್ಲಿಯೂ ಕೂಡ ತಮ್ಮ ಪಾಲಿಗೂ ಹೂವಯ್ಯನ ಪಾಳಿಗೂ ನಡುವೆ ಗಡಿಬೇಲಿ ಹಾಕಬೇಕೆಂದು ಸೇರೆಗಾರರಿಗೆ ಅಪ್ಪಣೆ ಮಾಡಿದರು. ತಮ್ಮ ಕೂಲಿಯಾಳುಗಳಿಗೆ ಹೂವಯ್ಯನ ಕೆಲಸವಾವುದನ್ನೂ ಮಾಡಕುಡದೆಂದು ‘ತಾಕೀತು’ ಮಾಡಿದರು. ಅದು ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಜಗಲಿಯನ್ನು ಗುಡಿಸುತ್ತಿದ್ದ ನಿಂಗ ಗೌಡರ ಅಪ್ಪಣೆಯನ್ನು ಮರೆತು ಪದ್ದತಿಯಂತೆ ಹೂವಯ್ಯನ ಪಾಳಿಗೆ ಹೋಗಿದ್ದ ಭಾಗವನ್ನೂ ಗುಡಿಸಿಬಿಡಲು ಗೌಡರಿಗೆ ಆ ವಿಚಾರ ತಿಳಿದು ಅವನನ್ನು ಚೆನ್ನಾಗಿ ‘ಅಂದರು’. ನಿಂಗ ತಾನು ಮಾಡಿದ ಅಪರಾಧವನ್ನು ತಿದ್ದಿಕೊಳ್ಳುತ್ತೇನೆಂದು ಹೇಳಿ, ಹೋಗಿ, ತಾನು ಗುಡಿಸಿದ್ದ ಹೂವಯ್ಯನ ಜಗಲಿಯ ಭಾಗಕ್ಕೆ ಮತ್ತೆ ಕಸಹಾಕಿ ಬಂದನು. ಮತ್ತೊಂದು ಸಾರಿ ನಾಗಮ್ಮನವರ ಕೋಳಿಯೊಂದು ಚಂದ್ರಯ್ಯಗೌಡರ ಚೌಕಿಗೆ ಬಂದು ಅಸಹ್ಯಮಾಡಲು ಅದನ್ನು ಪುಟ್ಟನಿಂದ ಎತ್ತಿಸಿ, ಹೊರಗೆ ಬಿಸಾಡಿಸುವ ಬದಲು ಹೂವಯ್ಯನ ಚೌಕಿಯ ಭಾಗಕ್ಕೆ ಹಾಕಿಸಿದರು.

ಇತರ ಜಾನುವಾರುಗಳಂತೆಯೆ ನಾಯಿಗಳನ್ನೂ ಪಾಲುಮಾಡಿಕೊಂಡಿದ್ದರಷ್ಟೆ ? ಆದರೆ ಆ ಮೂಗುಪ್ರಾಣಿಗಳಿಗೆ ಮನುಷ್ಯರ  ಅವಿವೇಕಜನ್ಯವಾದ ಈ ಕೃತಕ ವಿಭಜನೆಯ ರಹಸ್ಯ ತಿಳಿಯುವುದಾರೂ ಹೇಗೆ ? ಅವು ಮೊದಲಿನಂತೆ ಮನೆಯಲ್ಲಿ ಎಲ್ಲಿ ಇಷ್ಟ ಬಂದರ ಅಲ್ಲಿ ತಿರುಗಾಡುತ್ತಿದ್ದುವು ; ಮಲಗುತ್ತಿದ್ದುವು. ಅವುಗಳನ್ನು ಒದ್ದು ಓಡಿಸುವ ಹೀನ ಕೆಲಸಕ್ಕೆ ಆಳುಗಳೂ ಕೂಡ ಕೈಹಾಕುತ್ತಿರಲಿಲ್ಲ. ಆದರೆ ಚಂದ್ರಯ್ಯಗೌಡರು ಮಾತ್ರ ಸಂದರ್ಭ ಸಿಕ್ಕಿದಾಗಲೆಲ್ಲ ಹೂವಯ್ಯನ ಪಾಳಿಗೆ ಬಂದ ನಾಯಿಗಳನ್ನು, ಎಷ್ಟೋ ಸಾರಿ ಅವುಗಳು ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದಾಗಲೂ, ಒದ್ದು ತಮ್ಮ ಚೌಕಿಯಿಂದಾಚೆಗೆ ಕೂಗಿಸಿ ಓಡಿಸುತ್ತಿದ್ದರು.

ಎಂದಿನಂತೆ ನಿಮಗ ಮಧ್ಯಾಹ್ನ ನಾಯಿಗಳಿಗೆ ಅನ್ನ ಹಾಕಲೆಂದು ಹಿತ್ತಾಳೆಯ ದೊಡ್ಡ ಬೋಗುಣಿಯಲ್ಲಿ ಮಜ್ಜಿಗೆಯನ್ನವನ್ನು ಕಲಸಿಕೊಂಡು ಹೋಗಿ ಕ್ರೂ, ಕ್ರೂ, ಕ್ರೂ ಎಂದು ಕರೆದನು. ಹಸಿದ ನಾಯಿಗಳೆಲ್ಲವೂ ಓಡಿಬಂದು ಬಾಲವಲ್ಲಾಡಿಸುತ್ತಾ ಮುಖವೆತ್ತಿ ನಿಂಗನ ಕಡೆಗೂ ಬೋಗುಣಿಯ ಕಡೆಗೂ ನೋಡುತ್ತ ನಿಂತುವು. ನಿಂಗ ಮೊದಲು ಚಂದ್ರಯ್ಯಗೌಡರ ನಾಯಿಗಳಿಗೇ ಅನ್ನ ಹಾಕಲು ಪ್ರಯತ್ನಿಸಿದನು. ಆದರೆ ಸಾಧ್ಯವಾಗಲಿಲ್ಲ. ಕಡೆಗೆ ಅವನೂ ದೊಡ್ಡ ಮನಸ್ಸು ಮಾಡಿ ಎಲ್ಲ ನಾಯಿಗಳಿಗೂ ಅನ್ನ ಹಾಕಿಬಿಟ್ಟನು.

ಅದನ್ನು ನೋಡುತ್ತಿದ್ದ ಹಳೆಪೈಕದ ತಿಮ್ಮ ತನ್ನ ಗೌಡರಿಗೆ ವರದಿ ಒಪ್ಪಿಸಿದನು. ಅವರು ನಿಂಗನನ್ನು ಕರೆದು “ನಿನಗೆ ತಿಂದ ಕೂಳು ಕಣ್ಣಿಗೆ ಬಂದದೆ ಅಂತ ಕಾಣ್ತದೆ ! ಯಾರಜ್ಜನ ಮನೆಗಂಟು ಅಂತಾ ಅನ್ನಹಾಕ್ದೆ ಅವರ ಮನೇ ನಾಯಿಗೆ ?” ಎಂದು ಸಿಡುಕಿದರು.

ನಿಂಗ ನಮ್ರತೆಯಿಂದ ” ನಾ ಏನ್ಮಾಡ್ಲಯ್ಯಾ ? ಎಲ್ಲಾ ಬಂದು ಒಂದ್ರನ್ನ ಒಂದು ತಿಂದ್ರೆ ನಾ ಏನ್ಮಾಡ್ಲಯ್ಯಾ ?” ಎಂದು ತಪ್ಪನ್ನೆಲ್ಲ ನಾಯಿಗಳ ಮೇಲೆ ಹೊರಿಸಲು ಪ್ರಯತ್ನಿಸಿದನು.

ಗೌಡರು “ಒಂದರನ್ನ ಒಂದು ತಿನ್ನಾಗ ನೀನೇನು ಕತ್ತೆ ಕಾಯ್ತಿದ್ದೇನು ? ಅಲ್ಲಿ ಸೌದೆ ಬಡಿಕೆ ಇರಲಿಲ್ಲೇನು ?….” ಎಂದು ಹೂವಯ್ಯನ ನಾಯಿಗಳನ್ನು ಓಡಿಸುವ ವಿಧಾನವನ್ನು ಹೇಳಿಕೊಟ್ಟರು.

ಹಾಗೆಯೆ ಹೂವಯ್ಯ ತಮ್ಮ ನಾಯಿಗಳಿಗೆ ಅನ್ನ ಹಾಕಿದ್ದನ್ನು ಕೇಳಿದಾಗಲೂ ಇನ್ನು ಮೇಲೆ ಹಾಗೆ ಹಾಕಬಾರದೆಂದು ಬಹಳ ರಭಸದಿಂದ ರೇಗಿ ಮಾತಾಡಿದರು.

ನಾಯಿ, ಕೋಳಿ, ಕೂಲಿಯಾಳುಗಳ ಮಾತಂತಿರಲಿ. ವಾಸು ಆ ದಿನ ಎರಡು ಜಾಗಗಳಲ್ಲಿ ಅಡುಗೆಯಾಗುತ್ತಿದ್ದುದನ್ನು ನೋಡಿ ನಾಗಮ್ಮನವರ ಹತ್ತಿರ ಬಂದು “ದೊಡ್ಡಮ್ಮಾ, ಇದ್ಯಾಕೆ ಎರಡು ಕಡೆ ಅಡಿಗೆ ಆಗ್ತಾ ಇದ್ಯೆಲ್ಲಾ” ಎಂದು ಕೇಳಿದನು.

ನಾಗಮ್ಮನವರು ಹುಡುಗನ ಸರಳ ಬುದ್ಧಿಗೆ ನಸುನಕ್ಕು ಮುದ್ದಿನಿಂದ “ಅಯ್ಯೋ ಹುಡುಗಾ, ನಿಂಗೆ ಅಷ್ಟೂ ತಿಳಿಯಾದಿಲ್ಲೇನೂ ? ನಿನ್ನೆ ಮನೆ ಹಿಸ್ಸೆ ಆಯ್ತಲ್ಲಾ ಅದಕ್ಕೇ….” ಎಂದರು.

ಹಿಸ್ಸೆ ಎನ್ನುವುದರ ಅರ್ಥ ಇಷ್ಟು ದೂರಗಾಮಿಯಾಗುತ್ತದೆ ಎಂದು ವಾಸು ಭಾವಿಸಿರಲಿಲ್ಲ. ಅವನಿಗೆ ಹಿರಿಯರ ನಡತೆಗಳೆಲ್ಲ ವಿಚಿತ್ರವಾಗಿ ಕಾಣತೊಡಗಿದುವು ; ಒಂದು ಅಡುಗೆಮನೆ ಸಾಲದೆ ಎರಡು ಮಾಡಿಕೊಂಡಿದ್ದಾರೆ ! ಬಚ್ಚಲಿನಲ್ಲಿ ಒಂದು ಒಲೆಗೆ ಬದಲಾಗಿ ಎರಡಾಗಿವೆ ! ಮನೆಯ ಅನೇಕ ಸ್ಥಳಗಳನ್ನು ತಟ್ಟಿಕಟ್ಟಿ ವಿಂಗಡಿಸಿದ್ದಾರೆ ! ಅವನಿಗೆ ಹೊರಗೆ ಕಾಣುತ್ತಿದ್ದ ವಿಭಜನೆಗಳ ಹಿಂದೆ ಅವಕ್ಕೆ ಕಾರಣವಾಗಿದ್ದ ಮನಸ್ಸಿನ ಒಡಕನ್ನು ತಿಳಿಯುವಷ್ಟು, ಅಳೆಯುವಷ್ಟು ಪರಿಜ್ಞಾನವಿರಲಿಲ್ಲ. ಆದ್ದರಿಂದಲೆ ಊಟದ ಸಮಯದಲ್ಲಿ ತಾನು ದೊಡ್ಡಮ್ಮನ ಅಡುಗೆಮನೆಯಲ್ಲಿ ಹೂವಣ್ಣಯ್ಯನೊಡನೆ ಊಟ ಮಾಡುತ್ತೇನೆ ಎಂದು ಹಟ ಹಿಡಿದುಬಿಟ್ಟನು.

ಪುಟ್ಟಮ್ಮ “ಬ್ಯಾಡ, ಮಾರಾಯ ! ಅಪ್ಪಯ್ಯ ಕೇಳಿದ್ರೆ ಬಯ್ತಾರೆ !” ಎಂದರೂ ಕೇಳಿಲಿಲ್ಲ. ನಾಗಮ್ಮನವರೂ ವಾಸುವಿನ ಮೇಲಣ ಪ್ರೀತಿಯಿಂದಲೂ ಚಂದ್ರಯ್ಯಗೌಡರಿಗೆ ಎದೆ ಚುಚ್ಚುವಂತಾಗಲಿ ಎಂಬ ಪ್ರತಿಹಿಂಸೆಯ ಸಲುವಾಗಿಯೂ ವಾಸುವಿಗೆ ಹೂವಯ್ಯನ ಜೊತೆಯಲ್ಲಿ ತಮ್ಮ ಅಡುಗೆಮನೆಯಲ್ಲಿಯೆ ಬಳ್ಳೆಹಾಕಿದರು.

ವಾಸು ಹೂವಣ್ಣಯ್ಯನೊಡನೆ ವಿನೋದವಾಗಿ ಹರಟೆಹೊಡೆಯುತ್ತ ಖುಷಿಯಿಂದ ಉಣ್ಣುತ್ತಿದ್ದನು.

ಅಷ್ಟರಲ್ಲಿ ರಾಮಯ್ಯನೊಡನೆ ಊಟಕ್ಕೆ ಬಂದ ಚಂದ್ರಯ್ಯಗೌಡರು “ಎಲ್ಲಿ ವಾಸು ?” ಎಂದು ಕೇಳಿದರು.

ಸುಬ್ಬಯ್ಯ ಸತ್ಯ ಹೇಳಿದರೆ ಕಷ್ಟವಾಗುತ್ತದೆ ಎಂದು “ಏನೋ ಗೊತ್ತಿಲ್ಲ. ಅವ ಇನ್ನೂ ಉಣ್ಣಕ್ಕೆ ಬಂದೇ ಇಲ್ಲ” ಎಂದಳು.

“ಪುಟ್ಟಮ್ಮಾ  !” ಎಂದು ಗೌಡರು ಕೂಗಿದರು.

“ಆ ! ಏನಪ್ಪಯ್ಯಾ ?” ಎಂದು ಪುಟ್ಟಮ್ಮ ಬಾಗಿಲು ಸಂದಿಯಿಂದ ಹೆದರಿ ಹೆದರಿ ಬಂದಳು.

“ತಮ್ಮ ಎಲ್ಲಿದ್ದಾನೆ ಕರೀ” ಎಂದರು.

ಪುಟ್ಟಮ್ಮ ಜಗಲಿಗೆ ಹೋಗಿ ಹುಡುಕಿದಂತೆ ನಟಿಸಿ ಬಂದು “ಅಲ್ಲೆಲ್ಲ ನೋಡ್ದೆ. ಎಲ್ಲೂ ಕಾಣಲಿಲ್ಲ” ಎಂದು ಹೇಳಿ ರಾಮಯ್ಯನ ಮುಖವನ್ನು ಅರ್ಥಗರ್ಭಿತವಾಗಿ ನೋಡಿದಳು.

ಗೌಡರಿಗೆ ಸಂಶಯವಾಗಿ “ತಮ್ಮಾ ! ತಮ್ಮಾ !” ಎಂದು ಗಟ್ಟಿಯಾಗಿ ಕಿರಿಮಗನನ್ನು ಕೂಗತೊಡಗಿದರು.

ಹೂವಯ್ಯನೊಡನೆ ಊಟಮಾಡುತ್ತಿದ್ದ ವಾಸು ‘ಆಚೆಮನೆ’ಯ ಅಡುಗೆಮನೆ ಯಿಂದ “ಆ !” ಎಂದು ಓಕೊಂಡನು.

“ಉಣ್ಣಕ್ಕೆ ಬರೋದಿಲ್ಲೇನೋ ? ಅಲ್ಲೇನ್ಮಾಡ್ತೀಯ ?” ಎಂದು ಗದರಿದರು.

“ಇಲ್ಲೆ ಉಣ್ತಿದ್ದೀನಿ ಹೂವಣ್ಣಯ್ಯನ ಜತೇಲಿ” ಎಂದು ಸರಳ ಮನಸ್ಸಿನಿಂದಲೆ ಗಟ್ಟಿಯಾಗಿ ಕೂಗಿ ಹೇಳಿದನು.

ಗೌಡರು ಕೆಂಪುಗಣ್ಣಾಗಿ ಸುಬ್ಬಯ್ಯ, ರಾಮಯ್ಯ, ಪುಟ್ಟಮ್ಮ ಇವರ ಕಡೆಗೆ ಒಂದು ಕ್ಷಣಮಾತ್ರ ದೃಷ್ಟಿಯೆಸೆದು “ಬರ್ತೀಯೋ ಇಲ್ಲೊ ಒಳ್ಳೆ ಮಾತ್ನಿಂದ !” ಎಂದು ಕೂಗಿದರು.

ಯಾರೊಬ್ಬರೂ ಮಾತಾಡಲಿಲ್ಲ. ವಾಸುವೂ ಕೂಡ ಹೆದರಿ ಹೂವಯ್ಯನನ್ನೂ ನಾಗಮ್ಮನವರನ್ನೂ ಸರದಿಯ ಮೇಲೆ ಬೆಬ್ಬಳಿಸಿ ನೋಡತೊಡಗಿದನು. ಮನೆಯೆಲ್ಲ ಮೌನವಾಗಿತ್ತು.

“ಹೋಗೆ, ಪುಟ್ಟಮ್ಮ, ಎಳಕೊಂಡು ಬಾರೆ ಅವನ್ನ !” ಎಂದು ಗೌಡರು ಗರ್ಜಿಸಿದರು.

ಪುಟ್ಟಮ್ಮ ಮಾತಾಡಲಿಲ್ಲ. ನಿಂತಲ್ಲಿಂದ ಹಂದಲಿಲ್ಲ. “ಹೋಗ್ತೀಯೋ ಇಲ್ಲೋ ?” ಎಂದು ಗೌಡರು ಮತ್ತೆ ಅರ್ಭಟಿಸಿದರು.

ಪುಟ್ಟಮ್ಮ ಅಳುತ್ತ ಜಗಲಿಯ ಕಡೆಗೆ ಹೋದಳು.

ಅದುವರೆಗೆ ಸುಮ್ಮನಿದ್ದ ರಾಮಯ್ಯ “ಊಟಕ್ಕೆ ಕೂತಿದ್ದಾನಂತೆ ! ನೀವು ಎಳಕೊಂಡು ಬಾ ಅಂತ ಹೇಳಿದರೆ ?” ಎಂದನು.

“ಅವನು ಊಟಮಾಡಿದ್ದನ್ನೆಲ್ಲಾ ಕಕ್ಕಸ್ತೀನಿ ; ಹೊರಗೆ ಬರ್ಲಿ !” ಎಂದು ಗೌಡರು ಸಿಟ್ಟಿನಿಂದ ಉಣತೊಡಗಿದರು.

ದಿನಗಳೆದಂತೆ ಚಂದ್ರಯ್ಯಗೌಡರ ಮನಸ್ಸು ಕ್ಷುದ್ರವೂ ಅನುದಾರವೂ ಆಗಿ ಅಧೋಮುಖವಾಗಿ ಹೋಗುತ್ತ ಕತ್ತಲೆಗಿಳಿಯುತ್ತಿತ್ತು. ಮನೆ ಹಿಸ್ಸೆಯಾದ ಮೇಲಾದರೂ ಉದಾರತೆಯಿಂದ ವರ್ತಿಸುತ್ತಾರೆ ಎಂದು ಹಾರೈಸಿದ್ದ ಹೂವಯ್ಯನಿಗೂ ಕೂಡ ಅವರ ವಿಚಾರದಲ್ಲಿ ಜುಗುಪ್ಸೆ ಹುಟ್ಟಿತು. ಸಣ್ಣ ಪುಟ್ಟ ವಿಚಾರಗಳಲ್ಲಿಯೂ ಕೂಡ ಅವರು ತೋರುತ್ತಿದ್ದ ದ್ವೇಷ ಮಾತ್ಸರ್ಯಗಳನ್ನು ನೋಡಿ ಅವನೂ ಸ್ವಲ್ಪ ಕುಪಿತನಾದನು. ಹಾಗೆಯೆ ನಾಗಮ್ಮನವರೂ ಮಗನ ತಾಟಸ್ಥ್ಯವನ್ನು ಖಂಡಿಸಿ, ಇನ್ನುಮೇಲೆ ಪ್ರತಿಭಟಿಸದೆ ಸುಮ್ಮನಿದ್ದರೆ ತಾವು ಶಾಂತಿಯಿಂದ ಇರುವಹಾಗಿಲ್ಲ ಎಂದು ಬೋಧಿಸಿದರು.. ಆದ್ದರಿಂದ ಹೂವಯ್ಯ ತನ್ನ ಮನಸ್ಸಿನಲ್ಲಿಯೆ ‘ಕಚ್ಚಬಾರದು, ಬುಸ್ಸೆಂದು ಹೆಡೆಯೆತ್ತಿ ಬೆದರಿಸಬೇಕು’ ಎಂಬ ಗೃಹಸ್ಥ ಧರ್ಮವನ್ನು ಅನುಸರಿಸಿ ನೋಡುತ್ತೇನೆ ಎಂದು ನಿಶ್ಚಯಿಸಿದನು.

ರಾಮಯ್ಯನೆಲ್ಲಿಯಾದರೂ ತನ್ನ ಮನೋರಥವನ್ನು ತಪ್ಪಾಗಿ ತಿಳಿದುಕೊಂಡಾನೆಂದು ಅವನಿಗೂ ತನ್ನ ನಿರ್ಣಯವನ್ನು ತಿಳಿಸಿದನು. ಅವನೂ ಅದಕ್ಕೆ ಸಮ್ಮತಿಸಿದನು.

ಹೂವಯ್ಯ ಮತ್ತು ನಾಗಮ್ಮನವರ ಇಷ್ಟದಂತೆ ಅವರ ಮನೆಯಲ್ಲಿಯೇ ಇರಲು ಒಪ್ಪಿದ ಪುಟ್ಟಣ್ಣನಿಗೂ ಈ ವಿಷಯವನ್ನು ತಿಳಿಸಿದನು.

ಹೀಗೆ ಮನೆಯಲ್ಲಿ ಚಂದ್ರಯ್ಯಗೌಡರನ್ನು ತಿದ್ದುವ ಸಲುವಾಗಿ ಒಂದು ಸಣ್ಣ ಒಳಸಂಚಿನ ಗುಂಪು ಸಿದ್ಧವಾಯಿತು.