ಮರುದಿನ ಬೆಳಗಾಯಿತು. ಇರುಳು ನಡೆದಿದ್ದೆ ಸಂಗತಿಯ ಅರಿವೂ ಸೀತೆಗೆ ಚೆನ್ನಾಗಿ ಆಯಿತು. ತಾಯಿಯೂ ಅಣ್ಣನೂ ಈ ರೀತಿ ತನ್ನನ್ನು ತ್ಯಜಿಸಿ ಹೋಗುತ್ತಾರೆಂದು ಆಕೆ ತಿಳಿದಿರಲಿಲ್ಲ. ಕತ್ತರಿಯಿಂದ ಕತ್ತರಿಸಲ್ಪಟ್ಟು ತನ್ನ ಕೈಯಲ್ಲಿ ಉಳಿದುಕೊಂಡಿದ್ದ ತಾಯಿಯ ಸೀರೆಯ ಸೆರಗನ್ನು ನೋಡಿ ನೋಡಿ, ಮುಖಕ್ಕೂ ಎದೆಗೂ ಒತ್ತಿಯೊತ್ತಿಕೊಂಡು ಬಿಕ್ಕಿ ಬಿಕ್ಕಿ ಎದೆ ಬಿರಿಯುವಂತೆ ಅಳುತ್ತಾ ಮೂಲೆಯಲ್ಲಿ ನೆಲದ  ಮೇಲೆ ಬಿದ್ದುಕೊಂಡಳು.

ಹೊರಗಡೆಯಿಂದ ಹಾಕಿಕೊಂಡಿದ್ದ ಚಿಲಕವನ್ನು ಕಣಿಕಣಿ ಸದ್ದುಮಾಡಿ ಕಳಚಿ ತೆಗೆದು, ಬಾಗಿಲು ತೆರೆದು, ಗಂಗೆ ಕೊಟಡಿಯೊಳಗೆ ಬಂದು ಮುಖ ತೊಳೆದುಕೊಳ್ಳವಂತೆಯೂ ಕಾಫಿ ಕುಡಿಯುವಂತೆಯೂ ಉಪಚಾರಮಾಡಿ ಹೇಳಿದಳು. ಸೀತೆ ಅವಳ ಕಡೆ ಕಣ್ಣು ಕೂಡ ಇಡದೆ ತನ್ನಷ್ಟಕ್ಕೆ ತಾನೆ ಅಳುತ್ತಲೇ ಇದ್ದಳು. ಗಂಗೆ ಹೊರಟುಹೋಗಿ ಮತ್ತೆ ಮತ್ತೆ ಬಂದು ಅನೇಕ ಸಮಾಧಾನದ ಮಾತುಗಳನ್ನು ಹೇಳಿ ಹೇಳಿ ಕರೆಯುತ್ತಿದ್ದಳು. ಹೊರಗಡೆ ಇದ್ದವರ ಸಲಹೆಯಂತೆ ಆಕೆ ವರ್ತಿಸುತ್ತಿದ್ದಳೆಂಬುದು ಸೀತೆಗೆ ಬಹುಬೇಗನೆ ಗೊತ್ತಾಯಿತು.

ಬೆಳಿಗ್ಗೆಯ ಕಾಫಿಗಂತಿರಲಿ, ಮಧ್ಯಾಹ್ನ ಊಟಕ್ಕೂ ಸೀತೆ ಕೂತಲ್ಲಿಂದ ಕದಲಲಿಲ್ಲ.

ಹಗಲು ಎಲ್ಲರ ಊಟವೂ ಪೂರೈಸಿದ ಮೇಲೆ ಗಂಗೆ ಮತ್ತೆ ಕೊಟಡಿಗೆ ಬಂದು ’ನೀವು ಊಟಮಾಡಿ ತಲೆ ಬಾಚಿಕೊಳ್ಳಬೇಕಂತೆ; ಮುತ್ತಳ್ಳಿಗೆ ವಾಪಸು ಕಳಿಸುತ್ತಾರಂತೆ’ ಎಂದಳು.

ಸೀತೆಗೆ ಕಾನೂರಿನಿಂದ ಹೇಗಾದರೂ ಒಮ್ಮೆ ತಪ್ಪಿಸಿಕೊಂಡರೆ ಸಾಕಾಗಿತ್ತು. ಗಂಗೆಯ ಮಾತನ್ನು ನಂಬಿ ಬಚ್ಚಲಿಗೆ ಹೋಗಿ ಕೈಕಾಲು ತೊಳೆದುಕೊಂಡು ಬಂದು, ಊಟಮಾಡಿ, ತಲೆ ಬಾಚಿಕೊಂಡು ತವರುಮನೆಗೆ ಹೊರಡಲು ಸಿದ್ಧಳಾದಳು.

“ನಿನ್ನೆ ರಾತ್ರಿ ನಿಮ್ಮ ಅವ್ವ ಅಣ್ಣಯ್ಯರನ್ನು ಕರೆದುಕೊಂಡುಹೋದ ಗಾಡಿ ಇನ್ನೂ ಬರಲೇ ಇಲ್ಲಂತೆ. ಗಾಡಿ ಬಂದ ಕೂಡಲೆ ನಿಮ್ಮನ್ನು ರವಾನೆ ಹಾಕ್ತಾರಂತೆ!” ಎಂದಳು. ಗಂಗೆ ಸೀತೆಯ ಪ್ರಶ್ನೆಗೆ.

ವಾಸ್ತವವಾಗಿ ಗಾಡಿಯೇನೊ ಹಿಂತಿರುಗಿ ಬೆಳಗ್ಗೆಯೆ ಬಂದಿತ್ತು. “ಪುಟ್ಟನ್ನ ಕಳಿಸಿದರೆ ಸಾಕು ಜೊತೆಗೆ, ನಾನು ನಡಕೊಂಡೇ ಹೋಗ್ತೀನಿ” ಎಂದಳು ಸೀತೆ.

“ಛೇ, ಛೇ, ಆಮೇಲೆ ನಿಮ್ಮಪ್ಪಯ್ಯ ಏನೆಂದಾರು?”

“ದಮ್ಮಯ್ಯ ಗಂಗೆ, ನಿನ್ನ ಕಾಲಿಗೆ ಬೀಳ್ತೀನಿ. ಹೆಂಗಾದರೂಮಾಡಿ ಅವ್ವನ ಹತ್ತಿರಕ್ಕೆ ಕಳಿಸು ನನ್ನ, ಬೇಕಾದರೆ ನಿನಗೆ ನನ್ನ ಗುಂಡಿನಸರ ಕೊಡ್ತೇನೆ!” ಎಂದು ಸೀತೆ ಕಣ್ಣೀರು ಸುರಿಸುತ್ತ ಗಂಗೆಯ ಕಾಲುಮುಟ್ಟಿ, ತನ್ನ ಕೊರಳಲ್ಲಿದ್ದ ಚಿನ್ನದ ಗುಂಡಿನ ಸರವನ್ನು ಹಿಡಿದು ತೋರಿದಳು.

ಗುಂಡಿನ ಸರದ ತಳತಳನೆ ಹೊಳೆಯುವ ಹಳದಿಯ ಬಣ್ಣ ಎಂಥವರನ್ನೂ ಮರುಳುಗೊಳಿಸುವಂತಿತ್ತು. ಗಂಗೆಯ ಎದೆಗರಗಲು ಗುಂಡಿನಸರ ಮಾತ್ರವೇ ಅಲ್ಲದೆ ಸೀತೆ ಕಾಲುಮುಟ್ಟಿದ್ದೂ ಒಂದು ದೊಡ್ಡ ಕಾರಣವಾಗಿತ್ತು. ಇದ್ದಕ್ಕಿದ್ದಹಾಗೆ ಸೀತೆಯನ್ನು ನೋಡಿ ಆಕೆಗೆ ಮರುಕ ಹುಟ್ಟಿತು. ಸೀತೆಯ ಸ್ಥಿತಿ ಚತುರಳಾಗಿದ್ದ ಗಂಗೆಗೆ ಚೆನ್ನಾಗಿ ಅರ್ಥವಾಯಿತು. ಸ್ಪುರದ್ರೂಪದ ಭದ್ರಭಾವದ ಹೂವಯ್ಯನನ್ನು ನೆನೆದಳು. ದೆವ್ವವೂ ಅಲ್ಲ, ಪಿಶಾಚವೂ ಅಲ್ಲ, ಕೃಷ್ಣಪ್ಪನ ಪ್ರೇತವೂ ಅಲ್ಲ, ಹೂವಯ್ಯ ಸಾಕಿದ ಬಲೀಂದ್ರ ಹೋತದ ಮೇಲಿರುವ ಭೂತದ ಚೇಷ್ಟೆಯೂ ಅಲ್ಲ; ಪ್ರಣಯಭಂಗವೇ ಸೀತೆಯ ಈ ಸ್ಥಿತಿಗೆ ಮುಖ್ಯ ಕಾರಣವೆಂಬುದು ಆದೆಗೆ ಮೊದಲಿನಿಂದಲೆ ಗೊತ್ತಿತ್ತು. ಹೆಂಗಸಿಗೆ ಹೆಂಗಸಿನೆದೆ ಅರ್ಥವಾಗದೆ? ಅದರಲ್ಲೂ ಗಂಗೆಯಂತಹ ಪ್ರಣಯ ಪ್ರವೀಣೆಗೆ?

ಸೀತೆಗೆ ಸಹಾಯಮಾಡಬೇಕೆಂದು ಗಂಗೆಗೆ ಮನಸ್ಸಾದರೂ ಚಂದ್ರಯ್ಯಗೌಡರ ಭಯ ಗುಂಡಿನಸರದ ಮೋಹವನ್ನು ಮೀರಿತ್ತು. ಮತ್ತೇನು ನೆನೆದಳೊ ಏನೊ ಮಾತನಾಡದೆದ ಜಗಲಿಗೆ ಹೋದಳು.

ಅಲ್ಲಿ ಚಂದ್ರಯ್ಯಗೌಡರೂ ರಾಮಯ್ಯನೂ ಕೋವಿ ಹಿಡಿದಿದ್ದ ಸೇರೆಗಾರರು ಪಿಸುಮಾತಿನಲ್ಲಿ ಹೇಳುತ್ತಿದ್ದ ತಮ್ಮ ಸಾಹಸದ ಕಥೆಯನ್ನು ಕೇಳುತ್ತಿದ್ದರು: ಹಿಂದಿನ ದಿನ ರಾಮಯ್ಯ ಬಲೀಂದ್ರ ಹೋತವನ್ನು ಗುಂಡಿನಿಂದ ಹೊಡಿದು ಕೊಂದುಹಾಕಲು ಅವರಿಗೆ ಕಟ್ಟಾಜ್ಞೆ ಮಾಡಿದ್ದನು. ಸೇರೆಗಾರರು ಎಷ್ಟು ಹೊಂಚಿದರೂ ಆ ದಿನ ಹೋತವನ್ನು ಕೊಲ್ಲಲಾಗಲಿಲ್ಲ. ಮರುದಿನ ಪ್ರಾತಃಕಾಲದಿಂದಲೂ ಸಾಹಸಮಾಡಿ, ಹೊಂಚಿ ಹೊಂಚಿ, ಕೆಳಕಾನೂರಿಗೆ ಸ್ವಲ್ಪ ದೂರದಲ್ಲಿ, ಕಾಡಿನಂಚಿನಲ್ಲಿ ಸೊಪ್ಪು ಮೇಯುತ್ತಿದ್ದ ಅದನ್ನು ಗುಂಡಿನಿಂದ ಹೊಡೆದು ಕೊಂದು, ಯಾರೂ ಕಾಣದಂತೆ ತಪ್ಪಿಸಿಕೊಂಡು ಬಂದಿದ್ದರು! ಅದನ್ನು ಕೇಳಿ, ರಾಮಯ್ಯನಿಗೆ ಇನ್ನು ಮೇಲೆ ತನ್ನ ಹೆಂಡತಿ ತನ್ನನ್ನೊಲಿಯುತ್ತಾಳೆ ಎಂದು ಮಹದಾನಂದವಾಯಿತು. ಹೋತದ ರಕ್ತ ತಂದಿದ್ದರೆ ಸೀತೆಯ ಹಣೆಗೆ ಹಚ್ಚಿ ಶನಿ ಬಿಡಿಸಬಹುದಾಗಿತ್ತಲ್ಲ ಎಂದುಕೊಂಡನು! ಚಂದ್ರಯ್ಯಗೌಡರು ರಾಮಯ್ಯ ಇವರೊಡನೆ ಮಾತನಾಡಿಕೊಂಡು ಹಿಂದಕ್ಕೆ ಬಂದ ಗಂಗೆ “ಇವತ್ತು ಗಾಡಿ ಒಂದು ವೇಳೆ ಹೊತ್ತಾಗೆ ಬಂದ್ರೆ ನಾಳೆ ಬೆಳಗ್ಗೆ ಮುಂಚೆ ಕಳಿಸ್ತಾರಂತೆ” ಎಂದು ಭರವಸೆ ಕೊಟ್ಟಳು.

ಧಾರಾಕಾರವಾಗಿ ಅಳುತ್ತಾ ಸೀತೆ ಮತ್ತೆ ಗಂಗೆಯ ಕಾಲು ಹಿಡಿದಳು.

ರಾತ್ರಿಯಾಯಿತು ಎಲ್ಲರಿಗೂ ಊಟವಾಯಿತು. ಸೀತೆಯೂ ಮರುದಿನ ಬೆಳಗ್ಗೆ ತಾನು ಮುತ್ತಳ್ಳಿಗೆ ಹೋಗುತ್ತೇನೆ ಎಂಬ ಗಂಗೆಯ ಭರವಸೆಯ ಮೇಲೆ ಕುಳಿತು ತಾನೂ ಊಟಮಾಡಿದಂತೆ ಅಭಿನಯಿಸಿದಳು.

ಮನೆಯ ಸುತ್ತಲೂ ಇದ್ದ ಹೆಗ್ಗಾಡುಗಳ ಮೇಲೆ ಮಳೆ ಜಿರ‍್ರೆಂದು ಸುರಿಯುತ್ತಿತ್ತು.

ತಾನೂ ಅಲ್ಲಿಯೆ ಜೊತೆ ಮಲಗಿಕೊಳ್ಳುತ್ತೇನೆ ಎಂದು ಗಂಗೆ ಸೀತೆಯನ್ನು ಪುಸಲಾಯಿಸಿ ಒಂದು ಕೋಣೆಗೆ ಕರೆದೊಯ್ದಳು. ಅದನ್ನು ಪ್ರವೇಶಿಸಿದೊಡನೆ ಸೀತೆ ಕಿಟ್ಟನೆ ಕೂಗಿಕೊಂಡು ಹಿಂದಕ್ಕೋಡತೊಡಗಿದಳು. ( ಅದು ರಾಮಯ್ಯನ ಸಜ್ಜೆವೆನ ಎಂಬುದು ಆಕೆಗೆ ತಟಕ್ಕನೆ ಹೊಳೆದಿತ್ತು!) ಆದರೆ ಗಂಗೆ ಅವಳನ್ನು ಬಲವಾಗೆ ಹಿಡಿದುಕೊಂಡಳು. ಕಿರುಹುಡುಗಿಗೆ ಅಸಾಧ್ಯವಾದ ಒಂದು ಅಮಾನುಷ ಶಕ್ತಿಯಿಂದ ಸೀತೆ ತನಗಿಂತಲೂ ಬಲವಾಗಿದ್ದ ಗಂಗೆಯನ್ನು ಕೆದರಿ ತಳ್ಳಿ, ಕೋಣೆಯಿಂದ ಹೊರಗೆ ಓಡಿದಳು. ಗೋಡೆಗೆ ತಗುಲಿದ ಪೆಟ್ಟಿನ ನೋವಿಗೆ ಗಂಗೆ ಅಯ್ಯೊ ಎಂದು ಕೂಗಿಕೊಂಡಳು. ರಾಮಯ್ಯ, ಸೇರೆಗಾರರು, ಚಂದ್ರಯ್ಯಗೌಡರು, ಪುಟ್ಟ, ಓಬಯ್ಯ ಎಲ್ಲರೂ ಅಲ್ಲಿಗೆ ಓಡಿಬಂದರು.

ವಿಷಯ ತಿಳಿದೊಡನೆ ಚಂದ್ರಯ್ಯಗೌಡರು ಕಿಡಿಕಿಡಿಯಾದರು. ರಾಮಯ್ಯನ ಹೃದಯಲ್ಲಿಯೂ ಭಗ್ನವಾದ ವಿಷಯಲೋಲುಪತೆಯ ಪ್ರತೀಕಾರದ ಕರಾಳ ಪಿಶಾಚ ಹಲ್ಲುಮಸೆದು ನಖವೆತ್ತಿ ನಿಂತಿತು.

ಚಂದ್ರಯ್ಯಗೌಡರು ತುಟ್ಟಿ ಕಚ್ಚಿಕೊಳ್ಳುತ್ತಾ ನುಗ್ಗಿಹೋಗಿ ಸೀತೆಯ ಕೈಯನ್ನು ತುಡುಕಿ ಹಿಡಿದರು. ’ಕಾನೂರುಮಾವ’ ಎಂದರೆ ಹೆದರಿ ನಡುಗುತ್ತಿದ್ದ ಅವಳು ತನ್ನ ಕೈಯನ್ನು ಹಿಡಿದಿದ್ದ ಗೌಡರ ಕೈಯನ್ನು ಬಲವಾಗಿ ಕೊಡಹಿದಳು. ಚಂದ್ರಯ್ಯಗೌಡರು ಒಂದು ಮಾರು ಆಚೆಗೆ ನೆಗೆದು ನಿಲ್ಲಬೇಕಾಯಿತು! ಮತ್ತೆ ಬಂದು ಎರಡು ಕೈಗಳಿಂದಲೂ ಒತ್ತಿ ಬಲವಾಗಿ ಹಿಡಿದರು. ಸೀತೆ ಹಲ್ಲುಮಟ್ಟೆ ಕಚ್ಚಿಕೊಂಡು ಮತ್ತೊಮ್ಮೆ ಅವರನ್ನು ಕೊಡಹಿ ದಬ್ಬಿಬಿಟ್ಟಳು. ಹುಡುಗಿಗೆ ಎಲ್ಲಿಂದ ಬರಬೇಕು ಆ ಶಕ್ತಿ? ತನ್ನ ವೈರಿಯ ಮಗನಾದ ಕೃಷ್ಣಪ್ಪನ ಪ್ರೇತವೆ ಆಕೆಯಮೇಲೆ ಬಂದು ಇಷ್ಟೆಲ್ಲ ಆಟ ಮಾಡುತ್ತಿದೆ ಎಂದು ದೃಢನಿಶ್ಚಯ ಮಾಡಿಕೊಂಡ ಗೌಡರು, “ಏನು ನೋಳಡ್ತೀರೊ ಹಿಡಿದು ಕಟ್ಟಿ…” ಎಂದು ಕೂಗಿದರು.

ಹಿಡಿದು ಕಟ್ಟುವ ಅವಶ್ಯಕತೆ ಬರಲಿಲ್ಲ. ತನ್ನ ಸಮಸ್ತ ಸತ್ವವೂ ವ್ಯಯವಾಗಿ ಹೋದಹಾಗಾಗಿ ಸೀತೆ ’ಅಯ್ಯೋ ಅವ್ವಾ’ ಎಂದು ಕೋಮಲ ಕಂಠದಿಂದ ಹೃದಯ ವಿದ್ರಾವಕವಾಗುವಂತೆ ಕೂಗಿಕೊಂಡು, ಬಾಡಿದ ಹೂವಿನಂತೆ ನೆಲಕ್ಕುರುಳಿಬಿಟ್ಟಳು. ಆ ಕೂಗು ರಾಮಯ್ಯ ಆರೋಪಿಸಿಕೊಂಡಿದ್ದ ಕಾಠಿಣ್ಯದ ಚಿಪ್ಪನ್ನು ಕೊರಿದುಕೊಂಡು ಒಳನುಗ್ಗಿ ಅವನನ್ನು ಒಂದಿನಿತು ಅಳುಕಿಸಿ ಬಿಟ್ಟಿತು. ಚಂದ್ರಯ್ಯಗೌಡರಂತೆ ಅವನು ಕಳ್ಳು ಕುಡಿದೂ ಇರಲಿಲ್ಲ.

ರಾಮಯ್ಯ ’ಬೇಡ, ಅಪ್ಪಯ್ಯಾ, ಬೇಡ’ ಎಂದು ಬೇಡಿದರೂ ಕೇಳದೆ, ವೆಂಕಪ್ಪಯ್ಯಜೋಯಿಸರ ಸೂಚನೆಯಂತೆ, ಚಂದ್ರಯ್ಯಗೌಡರು ಒಂದು ಕಬ್ಬಿಣದ ಬರೆಗುಳವನ್ನು ಕೆಂಪಗೆ ಕಾಯಿಸಿ ತರುವಂತೆ ಸೇರೆಗಾರರಿಗೆ ಅಪ್ಪಣೆ ಮಾಡಿದರು.

ಇದನ್ನೆಲ್ಲ ನೋಡುತ್ತಿದ್ದ ಪುಟ್ಟ ಮುತ್ತಳ್ಳಿಯಲ್ಲಿ ತನ್ನನ್ನು ಕರುಣೆಯಿಂದ ಕಂಡು ‌‌‌‌‌‌‌‌‌‌‌‌‌‌‌‌‌‌‌‌‌ಅಕ್ಕನಂತೆ ಉಪಚರಿಸಿದ್ದ ತನ್ನ ಸೀತಮ್ಮರಿಗೆ ಯಾವ ರೀತಿಯಿಂದ ನೆರವಾಗಬೇಕೆಂಬುದನ್ನು ಅರಯದೆ ಬರಿದೆ ಅಳತೊಡಗಿದ್ದನು. ಸೇರೆ‌ಗರರು ಬರೆಗುಳವನ್ನು ಕಾಯಿಸುತ್ತಿದ್ದಾಗಲಿ ಅವನಿಗೊಂದು ಆಲೋಚನೆ ಮಿಂಚಿನಂತೆ ಹೊಳೆಯಿತು. ಕೆಳಕಾನೂರಿಗೆ ಓಡಿಹೋಗಿ ಹೂವಯ್ಯಗೌಡರಿಗೆ ಸಂಗತಿಯನ್ನು ಹೇಳಿದರೆ!

ಕಿರುಹರೆಯದ ಆ ಹುಡುಗ ಹೆಬ್ಬಾಗಿಲು ದಾಟಿ ಹೊರಗೆ ಬಂದನು. ಕಗ್ಗತ್ತಲೆ, ಜಡಿಮಳೆ, ನಿರ್ಜನತೆ, ಭೂತ ಪಿಶಾಚಿದಗಳ ಭೀತಿ ಇವುಗಳಿಂದ ಬಾಲಕನ ಎದೆ ಹಿಂಜರಿಯಿತು. ಹೊರಗೆ ನಿಲ್ಲಲಾರದೆ ಒಳಗೆ ಓಡಿಬಂದನು. ’ಅಯ್ಯೊ ನಾನು ಓಬಯ್ಯಗೌಡರಂತೆ ದೊಡ್ಡವನಾಗಿದ್ದಿದ್ದರೆ!’ ಎಂದುಕೊಂಡನು.

ಪ್ರಜ್ಞೆತಪ್ಪಿ ಬಿದ್ದಿದ್ದ ಸೀತೆಯ ರವಿಕೆಯನ್ನು ಮೇಲಕ್ಕೆಳೆದು, ಸಂಪಗೆ ಹೂವಿನ ಬಣ್ಣದಂತೆ ನಳನಳಿಸುತ್ತಿದ್ದ ಆಕೆಯ ನಳಿತೋಳಿನ ಮೇಲೆ, ಕೆಂಪಗೆ ಕಾಯಿಸಿದ್ದ ಬರೆಗುಳದಿಂದ ಚಂದ್ರಯ್ಯಗೌಡರು, ಕೃಷ್ಣಪ್ಪನ ಪ್ರೇತದ ಮೇಲೆ ಮುಯ್ಯಿತೀರಿಸಿಕೊಳ್ಳಲೆಂಬಂತೆ, ಒಂದು ಬರೆ ಹಾಕಿದರು.

ಸೀತೆ ನೆತ್ತರು ಹೆಪ್ಪುಗಡುವಂತೆ ಚಿಟಾರನೆ ಚೀರಿಕೊಂಡು, “ಅಯ್ಯೊ ದಮ್ಮಯ, ಮಾವ ದಮ್ಮಯ್ಯ! ನೀವು ಹೇಳಿದಹಾಗೆ ಕೇಳ್ತೀನಿ! ಅಯ್ಯೊ; ಅಯ್ಯೋ; ಅಯ್ಯೋ” ಎಂದು ಬೊಬ್ಬೆ ಹಾಕುತ್ತಿರಲು, ಗೌಡರು ಸ್ವಲ್ಪ ಅಣಕದ ಧ್ವನಿಯಿಂದಲೂ ರೋಷದಿಂದಲೂ “ಕೇಳ್ತೀಯೇನು? ಕೇಳ್ತೀಯೇನು?” ಎನ್ನುತ್ತಾ ಮತ್ತೊಂದು ಬರೆ ಎಳೆದರು. ಸೀತೆ ಮೊದಲಿಗಿಂತಲೂ ಸಾವಿರ ಪಾಲು ಹೆಚ್ಚಾಗಿ, ಆಲಿಸುತ್ತಿದ್ದವರ ಎದೆ ಬಿರಿಯುವಂತೆ ಕೂಗಿಕೊಂಡಳು, ಹಾರಿ ಹಾರಿ ಬಿದ್ದಳು. ಚಂದ್ರಯ್ಯಗೌಡರು ದಿಕನಕ್ಕೊಂದರಂತೆ ವಾರಕ್ಕೆ ಏಳು ಬರೆ ಹಾಕುವುದನ್ನು ಮರೆತು ಒಮ್ಮೆಯೇ ಏಳೂ ಬರೆಗಳನ್ನೂ ಹಾಕಿ ಪೂರೈಸಿಕಬಿಡುತ್ತಾರೆಯೊ ಎಂಬಂತೆ ಮತ್ತೊಂದು ಬರೆ ಹಾಕಲು ಹವಣಿಸುತ್ತಿದ್ದರು.

ಅಲ್ಲಿಯವರೆಗೆ ತಾಳಿಕೊಂಡಿದ್ದ ರಾಮಯ್ಯನ ಸಹನೆ ಸಹಿಸದಾಯಿತು. “ಅಯ್ಯೊ ಅಪ್ಪಯ್ಯಾ, ಕೊಲ್ತೀಯೇನೊ!”ಎಂದವನೆ ಬರೆಗುಳ ಹಿಡಿದಿದ್ದ ಗೌಡರ ಕೈಯನ್ನು ತನ್ನೆರಡು ಕೈಗಳಿಂದಲೂ ಮಂಗಮುಷ್ಟಿಯಿಂದ ಹಿಡಿದು ಮೇಲೆತ್ತಿ ನಿಲ್ಲಿಸಿಬಿಟ್ಟನು. ನಿರ್ವೀರ್ಯರಾಗಿದ್ದ ಗೌಡರಿಗೆ ಕೈಯನ್ನು ಒಂದಿನಿತೂ ಅಲುಗಾಡಿಸಲಾಗಲಿಲ್ಲ. ಚಂದ್ರಯ್ಯಗೌಡರು ಸಿಟ್ಟುಗೊಂಡು ಕೈಲಿದ್ದ ಬರೆಗುಳವನ್ನು ಕೆಳಗೆಸೆದು ತಮ್ಮ ಕೊಣೆಗೆ ಹೋಗಿ ಬಾಗಿಲು ಹಾಕಿಕೊಂಡರು. ರಾಮಯ್ಯನೂ ಅಲ್ಲಿ ನಿಲ್ಲಲಿಲ್ಲ. ಗಂಗೆಗೆ ಏನನ್ನೊ ಅಸ್ಪಷ್ಟವಾಗಿ ಹೇಳಿ ಉಪ್ಪರಿಗೆ ಏರಿದನು. ಸೇರೆಗಾರರು, ನಾಯಿಯ ಹಿಂದೆ ಅದರ ಬಾಲವೂ ಹೋಗುವಂತೆ,ಗೌಡರು ಕಣ್ಮರೆಯಾದೊಡನೆ ಕಣ್ಮರೆಯಾದರು. ಗಂಗೆ ಸೀತೆಯನ್ನು ಅವಳು ಹಿಂದಿನ ರಾತ್ರಿ ತನ್ನ ತಾಯಿಯೊಡನೆ ಮಲಗಿದ್ದ ಕೊಟಡಿಗೆ ಕರೆದುಕೊಂಡು ಹೋಗಿ ರಾಮಯ್ಯ ಹೇಳಿದಂತೆ ಬರೆಯ ಗಾಯಗಳಿಗೆ ಎಣ್ಣೆಹಚ್ಚಿ ಶುಶ್ರೂಷೆ ಮಾಡಲೆಂದು ರೋದಿಸುತ್ತಿದ್ದ ಸೀತೆಯನ್ನು ಎಬ್ಬಿಸಲು ಪ್ರಯತ್ನಿಸಲು ಸೀತೆ ಅವಳ ಮುಖಕ್ಕಿ ಉಗುಳಿ, ಒದೆದು ನೂಕಿಬಿಟ್ಟಳು! “ಏನಾದರೂ ಹಾಳಗಿ ಹೋಗಿ” ಎನ್ನುತ್ತಾ ಅವಳು ಮುನಿದುಕೊಂಡು ಗೌಡರು ಹೋದತ್ತ ಕಡೆ ಸಾಗಿದಳು.

ಒಕ್ಕಣ್ಣಿನ ಮೈಲಿಕಜ್ಜೆಯ ವಿಕಾರಮುಖದ ಓಬಯ್ಯನೂ, ಅರಿಯದ ಹುಡುಗ ಪುಟ್ಟನೂ ಅಲ್ಲಿಯೆ ನಿಂತಿದ್ದರು. ಓಬಯ್ಯ ಕಲ್ಲುನಿಂತಹಾಗೆ ಕಲ್ಲಾಗಿ ನಿಂತಿದ್ದನು. ಪುಟ್ಟ ಬಿಕ್ಕಿಬಿಕ್ಕಿ ಬಸಬಸನೆ ಅಳುತ್ತ ನಿಂತಿದ್ದನು. ದೀಪದ ಕುಡಿ ಅತ್ತಯಿತ್ತ ಬಳುಕುತ್ತ ಉರಿಯುತ್ತಿತ್ತು. ಸುತ್ತಲೂ ಕತ್ತಲೆ ಕವಿದಿತ್ತು. ಮಳೆ ಸುರಿದಿತ್ತು.

ಓಬಯ್ಯ ಪುಟ್ಟನ ಕಡೆ ತಿರುಗಿ,”ತೆಂಗಿನೆಣ್ಣೆ ಎಲ್ಲಿಡ್ತಾರೆ ಗೊತ್ತೇನೊ?” ಎಂದು ಕೇಳಿದನು.

ಪುಟ್ಟ ತಲೆಯಲ್ಲಾಡಿಸಿ, ಗೊತ್ತಿದೆ ಎಂಬುದನ್ನು ಸೂಚಿಸಲು, “ಹೋಗಿ ತಗೊಂಡು ಬಾ” ಎಂದನು.

ಅಡುಗೆ ಮನೆಗೆ ಹೋಗಿಬಂದು, “ನನ್ನ ಕೈಗೆ ಸಿಕ್ಕಾದಿಲ್ಲ” ಎಂದೊರೆದ ಪುಟ್ಟನೊಡಗೂಡಿ ಹೋಗಿ ಓಬಯ್ಯ ಎಣ್ಣೆಯ ಕುಡಿಕೆಯನ್ನೂ ಒಂದು ಕೋಳಿ ಪುಕ್ಕವನ್ನೂ ತಂದನು.

ಪುಟ್ಟನೇ ಪುಕ್ಕವನ್ನು ಎಣ್ಣೆಗೆ ಅದ್ದಿ ಸೀತಮ್ಮನ ಎಡತೋಳಿನ ಮೇಲೆ ಕರ್ರಗೆ ಕಾಣುತ್ತಿದ್ದ ಬರೆಗಾಯಗಳಿಗೆ ಮೆಲ್ಲನೆ ಸವರಿದನು. ಉರಿಯನ್ನು ತಾಳಲಾರದೆ ಸೀತೆ ಮುಖ ಸಿಂಡರಿಸಿಕೊಳ್ಳುತ್ತಿರಲು, ಗಾಯಕ್ಕೆ ತಣ್ಣಗಾಗುವಂತೆ ಉಃಫೆಂದು ಗಾಳಿಯೂದಿದನು…

ಸೀತೆ ಪುಟ್ಟನೊಡಗೂಡಿ ತಾನು ಹಿಂದಿನ ರಾತ್ರಿ ಮಲಗಿದ್ದ ಕೊಟಡಿಗೆ ಹೋಗಲು ಓಬಯ್ಯ ತನ್ನ ಜಾಗಕ್ಕೆ ಹೋಗಿ ಮಲಗಿಕೊಂಡನು.

ಕೊಟಡಿಯಲ್ಲಿ ದೀಪವನ್ನಾರಿಸಲಿಲ್ಲ. ಸೀತೆಯೊಂದು ಕಡೆ ಮಲಗಿ ನೋವಿನಿಂದಲೂ ದುಃಖದಿಂದಲೂ ನರಳುತ್ತಿದ್ದಳು. ಪುಟ್ಟನೂ ದೂರದಲ್ಲಿ ಒಂದು ಚಾಪೆಯಮೇಲೆ ಸುತ್ತಿಕೊಂಡು ಮಲಗಿದ್ದನು.

ಸ್ವಲ್ಪ ಹೊತ್ತಿನಮೇಲೆ ಸೀತೆ ಪುಟ್ಟನನ್ನು ಮುಟ್ಟಿ ಎಬ್ಬಿಸಿದಳು. ಪುಟ್ಟ ಕಣ್ಣುಜ್ಜಿಕೊಳ್ಳುತ್ತಾ ಎದ್ದು ಕುಳಿತು, “ಏನ್ರಮ್ಮಾ” ಎಂದನು.

“ಕೆಳಕಾನೂರೆಗೆ ದಾರಿ ಗೊತ್ತೇನೋ ನಿನಗೆ?”

“ಗೊತ್ತಮ್ಮ.”

“ಹೂವಯ್ಯಬಾವ ನಾಗತ್ತೆಮ್ಮ ಇದ್ದಾರೇನಲ್ಲಿ?”

“ಇದ್ದಾರೆ”.

“ನನ್ನ ಅಲ್ಲಿಗೆ  ಕರೆಕೊಂಡು ಹೋಗಿ ಬಿಡ್ತೀಯಾ?”

ಪುಟ್ಟ ಬೆಪ್ಪುಬೆರಗಾಗಿ ಸೀತೆಯ ಕಡೆ ನೋಡತೊಡಗಿದನು.

“ನೀ ಹೆದರಬೇಡ ಹೂವಯ್ಯ ಬಾವನ ಜೊತೆ ಇದ್ದಮೇಲೆ ನಿನಗೇನೂ ಆಗೋದಿಲ್ಲ.”

ಪುಟ್ಟನ ತುಟಿ ನಡುಗಿದುವು. ಮಾತಾಡಲಿಲ್ಲ. ಒಂದು ಕಡೆ ಸೀತಮ್ಮನಿಗೆ ಸಹಾಯ ಮಾಡಬೇಕೆಂದು ಅವನ ಎದೆ ಹಾತೊರೆಯುತ್ತಿತ್ತು. ಆದರೆ ಮತ್ತೊಂದು ಕಡೆ ಚಂದ್ರಯ್ಯಗೌಡರ ಭೀತಿ ಕಣ್ಣು ಕೆರಳಿಸಿ ಹೆದರಿಸುತ್ತಿತ್ತು.

“ಹೋಗಲಿ, ನನ್ನ ಅಲ್ಲಿವರೆಗೆ ಕಳಿಸಿ, ನೀನು ಹಿಂದಕ್ಕೆ ಬಂದು, ಒಬ್ಬರಿಗೂ ಗೊತ್ತಾಗದಹಾಗೆ ಮಲಗಿಬಿಡು. ರಾತ್ರೆ ನಾನೊಬ್ಬಳೇ ಎದ್ದು ಹೋದೆ ಅಂತಾ ತಿಳುಕೊಳ್ತಾರೆ-ಹೆದರಿಕೆ ಆಗ್ತದೇನು ಒಬ್ಬನೆ ಹಿಂದಕ್ಕೆ ಬರಾಕ?”

ಪುಟ್ಟನಿಗೆ ನಿಜವಾಗಿಯೂ ಹೆದರಿಕೆಯಿತ್ತು. ಆದರೂ “ಇಲ್ಲ” ಎಂದನು. ಮಹತ್ಕಾರ್ಯ ಮಾಡುವ ಸಾಹಸದಿಂದ ಅವನಲ್ಲೊಂದು ಕೆಚ್ಚು ಮೂಡುತ್ತಿತ್ತು.

ಇಬ್ಬರೂ ಹಾಸಗೆಯಲ್ಲಿದ್ದ ಒಂದೊಂದು ಕಂಬಳಿಯನ್ನು ಕೊಪ್ಪ ಹಾಕಿಕೊಂಡು ಹಿತ್ತಲ ಕಡೆಯ ಬಾಗಿಲಿನಿಂದ ಹೊರಬಿದ್ದರು. ಮಳೆಯಲ್ಲಿ ಕತ್ತಲೆಯಲ್ಲಿ ಕೆಸರಿನಲ್ಲಿ ಗಾಳಿಯಲ್ಲಿ ಕೆಳಕಾಕನೂರಿನ ಕಡೆಗೆ ತಡವುತ್ತ ಎಡವುತ್ತ ನಡೆದರು. ಸೀತೆಯ ತೋಳಗಾಯಗಳು ಸಹಿಸಲಸಾಧ್ಯವಾಗಿ ಉರಿಯತೊಡಗಿದವು.

ಕಪ್ಪೆ ಕ್ರಿಮಿ ಕೀಟಗಳ ಕರ್ಕಶಧ್ವನಿಸೂತ್ರಗಳಂತೂ ಕಿವಿ ಮುಚ್ಚಿಹೋಗುವಂತೆ ಹಾಸುಹೊಕ್ಕಾಗಿತ್ತು.  ಪುಟ್ಟ ಅಲ್ಲಲ್ಲಿ ನಿಂತು ಪರಿಚಿತವಸ್ತುಗಳನ್ನೂ, ಮರಗಳನ್ನೂ ಗುರುತಿಸುತ್ತಾ ದಾರಿ ತಪ್ಪದಂತೆ ನೋಡಿಕೊಳ್ಳುತ್ತಾ ಮುಂದುವರಿದರು.

ದೂರ ಕತ್ತಲೆಯಲ್ಲಿ ಕೊಟಡಿಯೊಂದರಲ್ಲಿ ಉರಿಯುತ್ತಿದ್ದ ದೀಪದಿಂದ ಕೆಳಕಾನೂರುಮನೆ ಇರುವ ಸ್ಥಳ ಕಾಣಿಸಿತು. ಕೋಣೆಯ ಎರಡು ಕಿಟಕಿಗಳೂ ಎರಡು ಕಣ್ಣುಗಳಂತೆ ದುರುದುರನೆ ಎವೆಯಿಕ್ಕದೆ ನೋಡುತ್ತಿದ್ದುವು.

ಪುಟ್ಟ ಸೀತಮ್ಮಗೆ ದಾರಿ ತೋರಿಸಿ ಹಿಂತರುಗುತ್ತಿದ್ದಾಗ”ನಾಯಿ ಬಗುಳಿದರೆ ಹಚೀ ಅಂತಾ ಹೆದರಿಸಿಬಿಡಿ” ಎಂದು ಎಚ್ಚರಿಕೆ ಹೇಳಿದನು.

ರಾತ್ರಿ ಅಷ್ಟು ಹೊತ್ತಿನಲ್ಲಿ ಹೂವಯ್ಯನ ಕೋಣೆಯಲ್ಲಿ ದೀಪ ಉರಿಯುತ್ತಿದ್ದುದೇಕೆ?