ಹೂವಯ್ಯ ಮುತ್ತಳ್ಳಿಯಿಂದ ಹೊರಟುಹೋದೊಡನೆ ಸೀತೆಗೆ ಅದುವರೆಗೆ ತನ್ನ ಜೀವನವನ್ನು ತುಂಬಿ ತುಳುಕಾಡುತ್ತಿದ್ದ ಆನಂದವೆ ಮಾಯವಾದಂತಾಗಿ, ಆಕೆಯ ಮನಸ್ಸು ನೀರು ಬತ್ತಿಹೋದ ಕೆರೆಯ ಸುತ್ತಣ ವನಪ್ರದೇಶದಂತೆ ಬಿಕೋ ಎನ್ನುತ್ತಿತ್ತು. ತಾನೂ ಕಾನೂರಿಗೆ ಹೋಗುವುದಾಗಿ ನಂಬಿದ್ದ ಅವಳು ಹಿರಿಯರ ಅಪ್ಪಣೆ ದೊರಕದೆ ಇದ್ದುದಕ್ಕಾಗಿ ನಿರ್ವಿಣ್ಣಳಾಗಿದ್ದಳು. ಹೂವಯ್ಯ ಮೊದಲಾದವರು ಕೂತುಕೊಂಡಿದ್ದ ಕಮಾನು ಗಾಡಿಯೂ ತರುವಾಯ ಎತ್ತುಗಳ ಕೊರಳಿನಲ್ಲಿದ್ದ ಗಂಟೆಯ ಸರಗಳ ನಾದವೂ ಕಣ್ಮರೆ ಕಿವಿಮರೆಯಾದ ಮೇಲೆ ಅವಳು ಕೆಂಧೂಳಿಯ ಹಾದಿಯನ್ನೇ ನೋಡುತ್ತ ಸ್ವಲ್ಪಕಾಲ ವಿಷಣ್ಣಳಾಗಿ ನಿಂತಿದ್ದಳು. ಕಣ್ಣು ಹನಿತುಂಬಿ ರಸ್ತೆ ಮಂಜು ಮಂಜಾಗಲು ಸೆರಗಿನಿಂದ ಕಣ್ಣೊರಸಿಕೊಂಡು ಹಿತ್ತಲುಕಡೆಗೆ ಹೋಗಿ ಅಲ್ಲಿ ಯಾರೂ ಇಲ್ಲದಿದ್ದುದನ್ನು ಕಂಡು, ಹೊಸ್ತಿಲಮೇಲೆ ಕುಳಿತು ಹಗಲುಗನಸು ಕಾಣತೊಡಗಿದಳು.

ಅವಳು ಮೊದಲಿನ ಸೀತೆಯಾಗಿರಲಿಲ್ಲ. ಕೆಲವು ದಿನಗಳ ಹಿಂದೆ ಬರಿಯ ಹಳ್ಳಿಯ ಹುಡುಗಿಯಾಗಿದ್ದವಳು ಇಂದು ಸುಸಂಸ್ಕೃತ ತರಳೆಯಾಗಿದ್ದಳು. ಸ್ಪರ್ಶಮಣಿಯಿಂದ ಕಬ್ಬಿಣ ಚಿನ್ನವಾಗುತ್ತದಂತೆ. ಹೂವಯ್ಯನ ಸಾನ್ನಿಧ್ಯ ಪ್ರಭಾವದಿಂದ ಆಕೆಯಲ್ಲಿದ್ದ ಗ್ರಾಮ್ಯಜೀವನಕ್ಕೆ ಸಹಜವಾಗಿದ್ದ ಹಲಕೆಲವು ಸ್ಥೂಲಾಂಶಗಳು ಸೂಕ್ಷ್ಮವೂ ಶುಭ್ರವೂ ಆಗಿದ್ದುವು. ಉತ್ತಮ ಆಲೋಚನೆಗಳು ಆಕೆಯ ಮನೋರಂಗದಲ್ಲಿ ಮೊಳೆತು ನಳನಳಿಸಲು ಪ್ರಾರಂಭವಾಗಿದ್ದುವು. ಆಕೆಯ ಹೃದಯದಲ್ಲಿ ಉತ್ತಮತರ ಭಾವಗಳು, ಹೊಸ ಮಳೆಯ ನೀರು ಬಂದ ಹೊಳೆಯ ತೆರೆಗಳಂತೆ ಜಾಗರಿತವಾಗಿದ್ದುವು, ಹೂವಯ್ಯ ಎಷ್ಟು ಹೊಸ ವಿಷಯಗಳನ್ನು ತಿಳಿಸಿದ್ದನು! ಎಷ್ಟು ಹೊಸ ಭಾವಗಳನ್ನು ನೀಡಿದ್ದನು! ಎಂತೆಂತಹ ಆದರ್ಶನೀಯವಾದ ಪುರಾಣ ಕಥೆಗಳನ್ನು ಹೇಳಿದನು! ಸೀತಾ ರಾಮರ ಕಥೆ, ನಳ ದಮಯಂತಿಯರ ಕಥೆ, ಹರಿಶ್ಚಂದ್ರ ಚಂದ್ರಮತಿಯರ ಕಥೆ, ಸಾವಿತ್ರಿ ಸತ್ಯವಂತರ ಕಥೆ! ಕಥೆಗಳಂತೂ ಇರಲಿ! ಆತನ ಪ್ರೇಮ ಕೋಮಲವಾದ ಸಾನ್ನಿಧ್ಯದ ಪರುಶುದ್ಧ ಪ್ರಭಾವ ಮಾತ್ರದಿಂದಲೆ ಆಕೆಯ ಆತ್ಮದಲ್ಲಿ ಒಂದು ಹೊಸ ವಸಂತೋದಯವಾಗಿತ್ತು. ದೇವರ ವಿಚಾರವಾಗಿಯೂ. ದೆವ್ವ ಭೂತಗಳ ವಿಚಾರವಾಗಿಯೂ, ಭೂಮಿ ಆಕಾಶಗಳ ವಿಚಾರವಾಗಿಯೂ, ಪೂಜೆ ಪ್ರಾರ್ಥನೆಗಳ ವಿಚಾರವಾಗಿಯೂ ಆಕೆಯಲ್ಲಿ ಮೊದಲು ಇದ್ದ ಒರಟು ಭಾವಗಳೆಲ್ಲ ವ್ಯತ್ಯಾಸ ಹೊಂದಿದ್ದುವು. ಪುನರ್ಜನ್ಮಧಾರಣೆ ಮಾಡಿದ್ದುವು ಎಂದರೆ ಹೆಚ್ಚು ನಿಜವಾಗುತ್ತದೆ.

ಆಕೆಯ ಹಗಲುಗನಸು ಮೆಲ್ಲಗೆ ಕಣಸಾಗತೊಡಗಿತು. ಆ ಕಣಸಿನಲ್ಲಿ ಭೂತ  ಭವಿಷ್ಯದ್ವರ್ತಮಾನಗಳೆಲ್ಲವೂ ಏಕಕಾಲದಲ್ಲಿ ಚಿತ್ರಿತವಾಗಿದ್ದುವು. ಆ ದರ್ಶನದ ಕೇಂದ್ರದಲ್ಲಿ ಒಂದು ಅಲೌಕಿಕ ದೇವಮೂರ್ತಿ ಪ್ರತಿಷ್ಠಿತವಾಗಿತ್ತು. ಇತರ ಚಿತ್ರಗಳೆಲ್ಲ ಆ ಮೂರ್ತಿಯ ಸುತ್ತಲೂ ಹರಡಿದ್ದುವು. ಸೀತೆ ತಾನು ಹೂವಯ್ಯಬಾವನಿಗೆ ದಮಯಂತಿಯಾಗುತ್ತೇನೆ; ಚಂದ್ರಮತಿಯಾಗುತ್ತೇನೆ; ಸಾವಿತ್ರಿಯಾಗುತ್ತೇನೆ; ನಿಜವಾಗಿಯೂ ಸೀತೆಯಾಗುತ್ತೇನೆ; ಎಂದು ಮೊದಲಾಗಿ ಸಂಭ್ರಮದಿಂದ ಮನದಲ್ಲಿಯೆ ಹೇಳಿಕೊಂಡಳು. ಮತ್ತೆ ಕೆಲವು ಪ್ರಣಯ ಚಿತ್ರಗಳ ಒಳಗಣ್ಣಿಗೆ ಸುಳಿದುಬಂದು, ಆಕೆಯ ಚೆಂಗೆನ್ನೆಗಳು ನಾಚಿಕೆಯಿಂದ ಕೆಂಪಾದುವು. ಮಾಧುರ್ಯದಿಂದ ಮೈ ಪುಲಕಿತವಾಯಿತು.

“ಅಕ್ಕಯ್ಯಾ, ಸೀ….. ರೇ….. ಬಿಚ್ಚಿಹೋಯ್ತೆ!”

ದಿವಾಸ್ವಪ್ನಸ್ಥಳಾಗಿದ್ದ ಸೀತೆ ತನಗೆ ಸಮೀಪದಲ್ಲಿಯೆ ಸ್ವಲ್ಪ ಹೊತ್ತಿನಿಂದಲೂ ಗೊಂಬೆಯ ಆಟದಲ್ಲಿ ಮಗ್ನಳಾಗಿದ್ದ ಲಕ್ಷ್ಮಿಯನ್ನು ದೃಷ್ಟಿಸಿರಲಿಲ್ಲ. ಲಕ್ಷ್ಮಿಯ ಆಟದ ಮದುವೆಮಂಟಪದಲ್ಲಿ ಧಾರೆಯಾಗುತ್ತಿದ್ದಗ ಹೆಣ್ಣುಗೊಂಬೆ ಉರುಳಿ ಬಿದ್ದು, ಅದಕ್ಕೆ ಉಡಿಸಿದ್ದ ಸೀರೆ ಕಳಚಿ ಬಿದ್ದುಹೋಗಿತ್ತು. ಅದನ್ನು ಸರಿಮಾಡಲು ಅವಳೇ ಪ್ರಯತ್ನಿಸಿದಳು. ಆದರೆ ಪಲಕಾರಿಯಾಗದಿರಲು ಕೋಪದಿಂದ ಹೆಣ್ಣುಗೊಂಬೆಯ ದುರವಸ್ಥೆಗೆ ಗಂಡು ಗೊಂಬೆಯೇ ಕಾರಣವೆಂದು ಹೇಗೋ ತರ್ಕಮಾಡಿ, ಗಂಡು ಗೊಂಬೆಯನ್ನು ಎಡಗೈಯಲ್ಲಿ ತುಡುಕಿ ಹಿಡಿದು ನೆಲಕ್ಕೆ ಕುಕ್ಕಿದಳು. ಅದೂ ಸೊಂಟ ಮುರುಕಾಗಿ ಕುಸಿದುಬಿದ್ದಿತು. ಲಕ್ಷ್ಮಿ ಹೊಸ ಅಳಿಯನನ್ನು ದುರವಸ್ಥೆಗೆ ಗುರಿಮಾಡಿ, ಬಲಗೈಲಿದ್ದ ತನ್ನ ಮಗಳ ಶುಶ್ರೂಷೆಗೆ ತೊಡಗಿ, ಅಕ್ಕಯ್ಯನನ್ನೂ ಸಹಾಯಕ್ಕೆ ಕೂಗಿದಳು.

ಸೀತೆ ತಂಗಿಯ ಕೂಗಿಗೆ ಬೆಚ್ಚಿ, ನಸು ಸಿಟ್ಟಿನಿಂದ “ಏನಾಯ್ತೆ ನಿನಗೆ? ಚೀರ್ತೀಯಲ್ಲ!” ಎಂದು ಗದರಿಸಿದಳು. ನಿಜವಾಗಿಯೂ ಲಕ್ಷ್ಮಿ ಚೀರಿರಲಿಲ್ಲ.

ಲಕ್ಷ್ಮಿ ನೀಳವಾದ ಕೀಚಲು ದನಿಯಿಂದ “ಸೀರೆ ಬಿಚ್ಚಿಹೋಯ್ತೇ” ಎಂದಳು.

ಆ ದಿನ ಕಾನೂರಿಗೆ ಹೊರಡುವ ಮೊದಲು ಪುಟ್ಟಮ್ಮ ಲಕ್ಷ್ಮಿಗೆ ಒಂದು ಸಣ್ಣ ಸೀರೆಯನು ಬಹು ಪ್ರಯಾಸದಿಂದ ಬಿಗಿದು ತೊಡಿಸಿದ್ದಳು. ನೋಡಿದರೆ, ಸೀರೆಯೇ ಲಕ್ಷ್ಮಿಯನ್ನು ಆಕ್ರಮಿಸಿ ಸುತ್ತಿಕೊಂಡಿದ್ದಂತೆ ತೋರುತ್ತಿತ್ತೇ ಹೊರತು ಲಕ್ಷ್ಮಿ ಸೀರೆಯನ್ನು ಉಟ್ಟುಕೊಂಡಿದ್ದಂತೆ ತೋರುತ್ತಿರಲಿಲ್ಲ. ಅಷ್ಟು ಜೋಲು ಜೋಲಾಗಿ ವಿಲಕ್ಷಣವಾಗಿತ್ತು. ಆದರೆ ಲಕ್ಷ್ಮಿಗೆ ಮಾತ್ರ ಅದು ಸೌಂದರ್ಯದ ಪರಮಾವಧಿಯಾಗಿತ್ತು. ಕಂಡಕಂಡವರಿಗೆಲ್ಲ ತನ್ನ ವಿನೂತನ ಅವಸ್ಥೆಯನ್ನು ಹೆಮ್ಮೆಯಿಂದ ತೋರಿ ತೋರಿ ಮೆರೆದಿದ್ದಳು. ಆ ಸೀರೆಯೇ ಬಿಚ್ಚಿಹೋಯಿತೋ ಏನೋ ಎಂದು ಸೀತೆ ನೋಡಿದಳು. ಅದು ಸರಿಯಾಗಿದ್ದುದನ್ನು ಕಂಡು “ಏನಾಗಿದೆಯೇ? ಸರಿಯಾಗಿದೆಯಲ್ಲ!” ಎಂದಳು.

“ಇಲ್ಲ ಬಿಚ್ಚಿಹೋಗ್ಯಾದೆ. ಇಲ್ನೋಡು” ಎಂದು ಲಕ್ಷ್ಮಿ ಗೊಂಬೆಯನ್ನು ತೋರಿದಳು.

ಆಟದ ಮದುವೆಯ ಮಂಟಪವನ್ನು ಕಂಡ ಸೀತೆ “ಈಗಲೆ ಇವಳಿಗೆ ಮದುವೆಯ ಸಂಭ್ರಮ!….. ಇಲ್ಲಿ ತಗೊಂಡು ಬಾ ನಿನ್ನ ಮದುವಳಿಗೀನ” ಎಂದಳು.

ತರುವಾಯ ಸೀತೆ ತನ್ನ ತಂಗಿಯ ಗೊಂಬೆಮಗಳ ಸೀರೆಯನ್ನು ಮಾತ್ರವಲ್ಲದೆ ಅವಳ ಗೊಂಬೆಯಳಿಯನ ಸೊಂಟವನ್ನೂ ಸರಿಮಾಡಿಕೊಡಬೇಕಾಯಿತು.

ಅಷ್ಟರಲ್ಲಿ ಕಾರ್ಗಾಳಿ ಬೀಸಿ, ಕರಿಮೋಡಗಳು ಕಿಕ್ಕಿರಿದು, ಸಿಡಿಲ್ಮಿಂಚುಗಳು ಜೋರಾಗಿ, ಮಳೆಯೂ ಆಲಿಕಲ್ಲುಗಳೊಡನೆ ಬೀಳತೊಡಗಿತು. ಅಕ್ಕತಂಗಿಯರಿಬ್ಬರೂ ಬಿಳಿಯ ಮಲ್ಲಿಗೆ ಮೊಗ್ಗುಗಳಂತೆ ಪಳಪಳನೆ ಬಿದ್ದು ಚಿಮ್ಮಿ ಒಳನುಗ್ಗಿದ “ಆನೆಕಲ್ಲು”ಗಳನ್ನು ಹೆರಕಿ ಹೆರಕಿ ಬಾಯಿಗೆ ಹಾಕಿಕೊಂಡರು. ದೇವತೆಗಳು ಸುರಿದ ಮುತ್ತುಗಳನ್ನು ತಿಂದರೆ ಮುತ್ತೈದೆಯರಿಗೆ ಒಳ್ಳೆಯದಂತೆ!

ಲಕ್ಷ್ಮಿಯಂತೂ ಹೊರಗಡೆ ರಾಸಿರಾಸಿಯಾಗಿ ಬೀಳುತ್ತಿದ್ದ “ಆನೆ ಕಲ್ಲು”ಗಳನ್ನು ನೋಡಿ ಬಾಯಿಕಿಸಿದು ಹಲ್ಲುಗಳನ್ನೆಲ್ಲಾ ಪ್ರದರ್ಶಿಸುತ್ತ “ಅಲ್ನೋಡೇ ಅಕ್ಕಯ್ಯಾ!” ಎಂದು ಕುಣಿದಾಡಿದಳು.

ಗಾಳಿ, ಸಿಡಿಲು, ಮಿಂಚು, ಮಳೆಗಳ ದೆಸೆಯಿಂದ ಯಾರೊಬ್ಬರೂ ಹೊರಗೆ ಹೋಗಿ ಆಲಿಕಲ್ಲುಗಳನ್ನು ಹೆರಕಲು ಸಾಹಸಮಾಡಲಿಲ್ಲ ಜೊತೆಗೆ ಅಮ್ಮನ ಹೆದರಿಕೆ ಬೇರೆಯಿತ್ತು.

“ಬರೀ ಆನೆಕಲ್ಗಳೇ ಬೀಳಬಾರದೆ? ಈ ಗಾಳಿ ಮಳೆ ಸಿಡಿಲು ಮಿಂಚು ಯಾಕೋ ಏನೋ?” ಎನ್ನುತ್ತ ಸೀತೆ ಭೂಮ್ಯಾಕಾಶಗಳನ್ನು ಒಂದುಮಾಡುತ್ತ ಭೋರ್ಗರೆಯುತ್ತಿದ್ದ ಮುಂಗಾರ್ಮಳೆಯನ್ನು ದೃಷ್ಟಿಸಿದಳು. ಬಹುಶಃ ಅದೇ ಸಮಯದಲ್ಲಿದ್ದಿರಬೇಕು ಹೂವಯ್ಯ ಕಳ್ಳಂಗಡಿಯಲ್ಲಿ ಭಾವಸಮಾಧಿಯಲ್ಲಿದ್ದುದು!

“ಅಲ್ಲೇನ್ಮಾಡ್ತೀರೇ? ಸಿಡ್ಲುಮಿಂಚು ಬರ್ತದೆ! ಒಳಗೆ ಬನ್ರೇ!” ಎಂದು ಗೌರಮ್ಮನವರು ಕರೆಯಲು ಇಬ್ಬರೂ ಒಳಗೆ ಹೋದರು.

ಮಳೆ ಹಿಮ್ಮೆಟ್ಟಿ ಹೊಳವಾದ ಮೇಲೆ ಸೀತೆ ಪುನಃ ಹಿತ್ತಿಲು ಕಡೆಯ ಬಾಗಿಲಲ್ಲಿ ಬಂದು ಕುಳಿತಳು. ಕೈಯಲ್ಲಿದ್ದ ತರಕಾರಿಯ ಬುಟ್ಟಿಯನ್ನು ಎದುರಾಗಿ ಇಟ್ಟುಕೊಂಡು, ಹರುವೆಯ ಸೊಪ್ಪನ್ನು “ಸೋಸ”ತೊಡಗಿದಳು. ಬೈಗುಹೊತ್ತಿನ ಗಾಳಿ ಹೊಸ ಮಳೆಯಲ್ಲಿ ಮಿಂದು ತಣ್ಣಗೆ ಬೀಸುತ್ತಿತ್ತು. ಹೆಂಚುಗಳಿಂದ ನೀರಿನ್ನೂ ಹನಿಯುತ್ತಲೆ ಇತ್ತು. ಒಡ್ಡಿಗೆ ಹೋಗುತ್ತಿದ್ದ ಹುಂಜ, ಹೇಂಟೆ, ಮರಿ, ಹೂಮರಿಗಳೆಲ್ಲ ವಿಧವಿಧವಾಗಿ ತುಮುಲವಾಗಿ ರವಗೈಯುತ್ತಿದ್ದುವು. ಮುರುವಿನ ಒಲೆಯಲ್ಲಿ ಹೆಬ್ಬೆಂಕಿ ಚಟಪಟ ಒಟಗುಟ್ಟುತ್ತ, ತನ್ನ ಕೆಂಪು ನಾಲಗೆಗಳಿಂದ ಹಂಡೆಯ ಕರಿಯ ಬೆಂಭಾಗವನ್ನು ಅಪ್ಪಳಿಸುತ್ತಿತ್ತು. ಸೀತೆಯ ಕಣ್ಣುಗಳಲ್ಲಿ ಅವುಗಳೆಲ್ಲದರ ಪ್ರತಿಬಿಂಬವಿದ್ದಿತೇ ಹೊರತು ಪ್ರಜ್ಞೆ ಇರಲಿಲ್ಲ. ಆಕೆಯ ಕೈಗಳೂ ಒಮ್ಮೊಮ್ಮೆ ಕೆಲಸವನ್ನು ನಿಲ್ಲಿಸಿ ಮತ್ತೆ ಪ್ರಾರಂಭಿಸುತ್ತಿದ್ದುವು. ಆಕೆಯ ಮುಖದಲ್ಲಿ ಅವಾಸ್ತವ ಪ್ರಪಂಚದ ಮಾಧುರ್ಯವು ಅರಳಲಿರುವ ಮೊಗ್ಗಿನಲ್ಲಿ ಹೂವು ಕಾಯಿ ಹಣ್ಣುಗಳ ಸವಿಗನಸು ಸುಳಿಯುವಂತೆ ನಲಿಯುತ್ತಿತ್ತು. ಆಕೆ ಮತ್ತೆ ಕಣಸು ಕಾಣತೊಡಗಿದಳು.

ಪ್ರೇಮ ಮೊಟ್ಟಮೊದಲು ಹೃದಯದ ಕೋರವನ್ನು ಪ್ರವೇಶಿಸಿದಾಗ ಅದರ ವಿದ್ಯುತ್ ಸ್ಪರ್ಶದಿಂದ ಜಡಜಗತ್ತು ಚೇತನಪೂರ್ಣವಾಗುತ್ತದೆ. ಆಗ ಹೊಂಗನಸಿನ ಹೆಗ್ಗಡಲಿನಲ್ಲಿ ಮಹಾ ಭಂಯಕರ ಭಾರವಾಗಿರುವ ಸ್ಥೂಲ ವಿಶ್ವವೂ ಬಣ್ಣದ ಗುಳ್ಳೆಯಾಗಿ ತೇಲಾಡುತ್ತದೆ, ಪ್ರಾಣಪಕ್ಷಿ ತನ್ನ ರೆಕ್ಕೆಗಳನ್ನು ಕೆದರಿ, ಅನಂತದಲ್ಲಿ ಅಶರೀರಿಯಾಗಿ ಹಾರಾಡತೊಡಗುತ್ತದೆ. ಆಶೆ ಅಲಕಾವತಿ ಅಮರಾವತಿಗಳನ್ನು ಪ್ರವೇಶಿಸಿ ಅಲ್ಲಿಯ ಐಶ್ವರ್ಯಗಳನ್ನೆಲ್ಲ ಸೂರೆಗೊಳ್ಳುತ್ತದೆ; ಅಲ್ಲಿಯ ನಂದನವನಗಳಲ್ಲಿ ಹರಿಯುವ ದೇವಗಂಗೆಯಲ್ಲಿ ಮೀಯುತ್ತದೆ; ಕಲ್ಪವೃಕ್ಷಗಳ ಅನುರಾಗಪೂರ್ಣವಾದ ಧವಳ ಛಾಯೆಗಳಲ್ಲಿ ಕುಳಿತು ಚಿತ್ರ ವಿಚಿತ್ರವಾದ ಇಚ್ಛೆಗಳನ್ನು ನೆರವೇರಿಸಿಕೊಳ್ಳುತ್ತದೆ; ಕಾಮಧೇನುಗಳ ಕೊಡಗೆಚ್ಚಲುಗಳಿಗೆ ಬಾಯಿ ಹಾಕಿ ಕಡೆಯ ಹನಿಯವರೆಗೂ ಆನಂದಾಮೃತವನ್ನು ಹೀರಲೆಳಸುತ್ತದೆ. ಅಂತಹ ಸ್ವರ್ಗದಲ್ಲಿದ್ದಳು ಸೀತೆ.

ಮುಸುರೆ ತಿಕ್ಕಲೆಂದು ಅಲ್ಲಿಗೆ ಬಂದಿದ್ದ ಕಾಳ, ಸೀತಮ್ಮನವರ ನಿಷ್ಪಂದ ಸ್ಥಿತಿಯನ್ನು ನೋಡಿ “ಎಂಥದು ಯೇಚ್ನೆ ಮಾಡ್ತಾ ಕೂತೀರಮ್ಮಾ?” ಎಂದು ಹಲ್ಲುಬಿಟ್ಟನು.

ಸೀತೆ ಫಕ್ಕನೆ ಸೊಪ್ಪು ಸೋಸುವುದನ್ನು ಪ್ರಾರಂಭಿಸಿ “ಎಂಥದಿಲ್ಲೋ, ನೀರು ಬೀಳ್ತಾ ಇತ್ತಲ್ಲಾ ಅದನ್ನೇ ನೋಡ್ತಾ ಇದ್ದೆ” ಎಂದಳು.

ಕಾಳ ಸಲಿಗೆಯಿಂದ ಒರಟು ಒರಟಾಗಿ “ನೀರು ನೋಡ್ತಾ ಇದ್ರೋ? ಗಂಡನ ಯೇಚ್ನೆ  ಮಾಡ್ತಿದ್ರ್ಯೋ?” ಎಂದು ರಾಗ ಎಳೆದನು.

“ಸಾಕು ಸುಮ್ಮನಿರೋ! ನಿನಗೆ ಯಾವಾಗಲೂ ಅದೇ!” ಕಾಳ ಮುಸುರೆ ತಿಕ್ಕಲು ಪ್ರಾರಂಭಿಸಿ ಸ್ವಲ್ಪ ಹೊತ್ತು ಸುಮ್ಮನಿದ್ದವನು “ಮತ್ತೆ ನೀವಿನ್ನು “ಕೃಷ್ಣಾ” ಅನ್ನೋ ಹಾಂಗಿಲ್ಲ!” ಎಂದನು.

“ಯಾಕೋ?”

“ಯಾಕೇ ಅಂತಾ ಹೇಳ್ಲಿ, ಹೇಳಿ! ಅಂತೂ ಇನ್ಮೇಲೆ ದೇವರ ಹೆಸರೂ ಹೇಳದ ಹಾಂಗಾಗ್ತದೆ.”

“ಥೂ, ನಿನ್ನ ಸೊಡ್ಡಿಗೆ ಬೆಂಕಿಹಾಕ!…. ನಿನಗೇನು ಹುಚ್ಚುಗಿಚ್ಚು ಹಿಡಿಯಿತೇನೋ?” ಎಂದಳು ಸಲಿಗೆಯಿಂದ ಸೀತೆ.

“ನಾನು ಒಳ್ಳೇದು ಹೇಳಿದ್ರೆ, ನನ್ನ ಸೊಡ್ಡೀಗೆ ಯಾಕಮ್ಮಾ ಬೆಂಕಿ? ಹಾಂಗಾದ್ರೆ, ಗಂಡನ ಹೆಸರು ಹೇಳ್ತಾರೇನು ಹೇಳಿ ಯಾರಾದರೂ?”

“ಇಲ್ಲ”

“ಮತ್ತೆ?”

“ಮತ್ತೆ ಅಂದರೆ?”

“ನಿಮ್ಮನ್ನ ಸೀತೆಮನೆ ಕೃಷ್ಣಪ್ಪಗೌಡ್ರೀಗೆ ಕೊಟ್ರೆ, ನೀವು “ಕೃಷ್ಣ” ಅನ್ನಾಕೆ ಆಗ್ತದೇನು?”

“ನಿನ್ನ ಬಾಯಿಗೆ ಬೆಂಕಿಹಾಕ! ಸುಮ್ಮನಿರು! ಎಂದು ಸೀತೆ ಅಪಶಕುನವಾದ ರೀತಿಯಲ್ಲಿ ಸಿಡುಕಿದಳು.

“ನಾನೇನು ತಮಾಸೆಗೆ ಹೇಳ್ತಿನಂತಾ ಮಾಡಿರೇನು? ಮನ್ನೇನೆ ಸಿಂಗಪ್ಪಗೌಡ್ರು ಮದ್ವೆ ಪರ್ಸ್ತಾಪ ಮಾಡ್ಕೊಂಡು ಹೋಗಿದ್ರಂತೆ. ಇವತ್ತು ಜಾತ್ಕ ತಗೊಂಡು ಬಂದಾರೆ?.. ಪಾಪ! ಮಳೇಲಿ ನೆಂದೂ ನೆಂದೂ ಉಡ್ರು ಹಿಡ್ದುಹೋಗಿತ್ತು ಅವರೀಗೆ. ನಾನೇ ಈಗ ಬಿಸಿಬಿಸಿ ಕಾಪಿ ಕೊಟ್ಟು ಬಂದೀನಿ… ಹ್ಞೂ ಕಣ್ರೋ; ನಿಮ್ಮ ಮಾವ ಬಂದು ಕೂತಾರಾಗ್ಲೆ. ಹೋಗಿ ನೋಡಿ ಜಗಲೀ ಮೇಲೆ!..”

ಕಾಳ ಹಾಲಿಗೆ ಹುಳಿಯನ್ನು ಹಿಂಡಿ, ಬಾಲೆಯ ಹೃದಯದಲ್ಲಿ ಹೆಪ್ಪುಗಡುತ್ತಿದ್ದ ಶೋಕೋದ್ವೇಗಗಳ ಡಾವರವನ್ನು ಒಂದಿನಿತೂ ಅರಿಯದೆ, ಸ್ವಸ್ಥಚಿತ್ತನಾಗಿ ಹುಣಿಸೆಯ ಹಣ್ಣನ್ನು ಬೂದಿಯಲ್ಲಿ ಅದ್ದಿ, ಹಿತ್ತಾಳೆಯ ಪಾತ್ರೆಯೊಂದನ್ನು ಗಸಗಸನೆ ರಭಸದಿಂದ ಉಜ್ಜತೊಡಗಿದನು.

ಸೀತೆ ಪ್ರತಿಮೆಯಂತೆ ಕುಳಿತನು. ಸುದ್ದಿ ಆಕೆಯ ಭಾಗಕ್ಕೆ ಪಿಶಾಚಿಯಂತೆ ಕ್ರೂರ ಕರ್ಕಶವಾಗಿತ್ತು. ಕಾಳ ವಿನೋದಕ್ಕಾಗಿ ಸುಳ್ಳು ಹೇಳಿರಬಹುದು; ತಾನೇ ಎದ್ದುಹೋಗಿ, ಜಗಲಿಯಲ್ಲಿ ನಿಜವಾಗಿಯೂ ಸಿಂಗಪ್ಪಗೌಡರು ಬಂದಿದ್ದಾರೆಯೆ ಎಂದು ನೋಡಿಕೊಂಡು ಬರಲು ಮನಸ್ಸು ಮಾಡಿದಳು. ಆದರೆ ಕಾಳನ ಮಾತು ಎಲ್ಲಿ ಸತ್ಯವಾಗಿಬಿಡುವುದೋ ಎಂದು ಹೆದರಿ ಸುಮ್ಮನೆ ಕುಳಿತಳು. ಕಣ್ಣುಗಳಲ್ಲಿ ತುಂಬಿಬರುತ್ತಿದ್ದ ನೀರಿನಲ್ಲಿ ಹೂವಯ್ಯನ ಮನೋಹರ ವಿಗ್ರಹವು, ಪ್ರಾತಃಕಾಲ ಅರಳಿದ ತಾವರೆಯ ಹೂವಿನ ಎಸಳ ಮೇಲಣ ಹಿಮಮಣಿಯಲ್ಲಿ ಅನಂತದೂರದಿಂದ ಬಂದ ಬಾಲಸೂರ್ಯನ ಸ್ವರ್ಣಕಿರಣವೊಂದು ಮೆಲ್ಲೆಲರಿನಲ್ಲಿ ವಿಕಂಪಿಸುವಂತೆ ಅಸ್ಥಿರವಾಗಿತ್ತು.

ಆಕೆಯ ಸ್ಥಿತಿಯನ್ನರಿಯದ ಒರಟೆದೆಯ ಕಾಳ ಮತ್ತೆ ಕತ್ತೆತ್ತಿ “ನೀವಂತೂ ಗಂಡನ ಮನೆಗೆ ಹೋಗ್ತೀರಿ. ಬಡವನ್ನ ಮರೀಬ್ಯಾಡಿ…. ನಿಮ್ಮಲಿಗೆ ಬಂದರೆ ಒಂದೀಟು ಕಾಪೀಗೀಪಿ ಕೊಡ್ತೀರೇನಮ್ಮ?” ಎಂದು ವಿನೋದವಾಡಿದನು.

ಸೀತೆಯ ಕಣ್ಣುಗಳಲ್ಲಿ ತುಂಬಿದ್ದ ನೀರು ಕೆನ್ನೆಗಳ ಮೇಲೆ ಸೂಸಿತು. ನೋವು ಸಿಟ್ಟುಗಳಿಂದ ಮತ್ತೇನನ್ನೂ ಆಡಲರಿಯದೆ “ನಿನ್ನ ನಾಲಿಗೆ ಬಿದ್ದು ಹೋಗಲಿ” ಎಂದು ಬೈದಳು.

ಕಾಳ ಮತ್ತೂ ನಗುತ್ತ “ತಡೀರಿ, ಸೀತೆಮನೀಗೆ ಬಂದಾಗ ನಾನು ಕೃಷ್ಣಪ್ಪಗೌಡ್ರೀಗೇ ಹೀಂಗೆ ಬೈದ್ರು ಅಂತ ಹೇಳಿಕೊಟ್ಟು ಹಾಕಿಸ್ತೀನಿ ನಿಮಗೆ” ಎಂದನು.

“ನಿನ್ನ ಕೃಷ್ಣಪ್ಪಗೌಡ್ರನ್ನ ಹುಲಿ ಹಿಡೀಲೋ! ನನ್ನ ಸುದ್ದಿಗೆ ಮಾತಾಡಬೇಡ.”

“ಏನ್ರಮ್ಮಾ, ಗಂಡಯ್ಯನ್ನೇ ಬೈತೀರಿ?”

“ಏನೋ ಅದೂ, ಕಾಳಾ?” ಎಂದು ಗೌರಮ್ಮನವರು ಅಡುಗೆಯ ಮನೆಯ ಕಿಟಕಿಯಿಂದ ಗದರಿದರು.

ಸೀತೆ “ನೋಡವ್ವಾ ಕೆಟ್ಟ ಕೆಟ್ಟ ಮಾತಾಡ್ತಾನೆ” ಎಂದು ಕಣ್ಣೀರೊರಸಿಕೊಳ್ಳುತ್ತ ತಾಯಿಗೆ ದೂರು ಹೇಳಿದಳು.

ಕಾಳನು ಗಟ್ಟಿಯಾಗಿ “ಏನ್ರಮ್ಮಾ, ಸುಳ್ಳು ಹೇಳ್ತೀರಿ! ಮದುವೆ ಮಾತಾಡಿದ್ರೆ ಕೆಟ್ಟ ಮಾತೇನು?” ಎಂದು ವಿನಯವಾಣಿಯಿಂದ ನುಡಿದನು.

ಗೌರಮ್ಮನವರು “ನೀನು ಸುಮ್ಮನಿರೇ, ಅವನ ಕೈಲೇನು ಮಾತು?” ಎಂದರು.

ಸೀತೆ “ಬಂಡ ಬಂಡ ಮಾತೆಲ್ಲಾ ಆಡ್ತಾನೆ!” ಎಂದಳು.

ಗೌರಮ್ಮನವರು “ನೀನು ಸುಮ್ಮನಿರು! ಹೆಣ್ಣು ಕೇಳಿದ ಮಾತ್ರಕ್ಕೆ ಲಗ್ನ ಆಗಿಹೋಯ್ತೇನು? ಜಾತಕ ಸರಿಹೋಗಬೇಕೋ ಬೇಡವೋ? ಅವನು ಹೇಳಿದರೆ ಹೇಳಿಕೊಳ್ತಾನೆ! ನೀನು ಸುಮ್ಮನಿರು…. ಹುಲಿ ಹಿಡೀಲಿ ಗಿಲಿ ಹಿಡೀಲಿ, ಅಂತಾ ಅಪಶಕುನ ಯಾಕೆ ನುಡೀತೀಯಾ?” ಎಂದು ಹೇಳಿ ಕಿಟಕಿಯಾಚೆ ಕಣ್ಮರೆಯಾದರು.

ಆಮೇಲೆ ಯಾರೊಬ್ಬರೂ ಮಾತಾಡಲಿಲ್ಲ. ಕಾಳ ಅವಸರವಾಗಿ ಮುಸುರೆ ತಿಕ್ಕತೊಡಗಿದನು.

ಸೀತೆಗೆ ಮಾತ್ರ ಯಾತನೆ ಇಮ್ಮಡಿಯಾಯಿತು. ತಾಯಿಯ ಮಾತುಗಳಿಂದ್ ಅವಳಿಗೆ ಕಾಳ ಹೇಳಿದುದರಲ್ಲಿದ್ದ ಸಂದೇಹಗಳೆಲ್ಲ ಪರಿಹಾರವಾಗಿ, ಸಿಂಗಪ್ಪಗೌಡರು ತಮ್ಮ ಮಗನಿಗಾಗಿ ತನ್ನನ್ನು ಕೇಳಲು ಬಂದಿದ್ದಾರೆಂಬುದು ನಿಶ್ಚಯವಾಯಿತು. ತರಕಾರಿಯ ಬುಟ್ಟಿಯನ್ನು ಒಂದು ಮೂಲೆಗೆ ನೂಕಿ, ಅಲ್ಲಿಂದೆದ್ದು ತನ್ನ ಕೋಣೆಗೆ ಹೋದಳು.

ಅಲ್ಲಿ ಕವಿಯುತ್ತಿದ್ದ ಕತ್ತಲೆಯಲ್ಲಿ, ನೀರವವಾಗಿ ಬಿಕ್ಕಿ ಬಿಕ್ಕಿ ಅತ್ತಳು. ಅದೇ ಸ್ಥಳದಲ್ಲಿಯೆ ಕೆಲವು ದಿನಗಳ ಹಿಂದಿನಿಂದ ಕೆಲವು ಗಂಟೆಗಳ ಹಿಂದಿನವರೆಗೆ, ಹೂವಯ್ಯನ ಸಮೀಪದಲ್ಲಿ ಕುಳಿತು ಅವನ ಸುಂದರ ವದನದಿಂದ ಹೊರಹೊಮ್ಮುತ್ತಿದ್ದ ಮಧುರ ಭಾಷಣವನ್ನು ಕಿವಿದೆರೆದು ಕಣ್ಣರಳಿ ಕೇಳಿದ್ದಳು. ತನ್ನ ಹೃದಯವನ್ನು ಸುಖಕ್ಕೆಂತೋ ಅಂತೆಯೇ ದುಃಖಾನುಭವಕ್ಕೂ ಸೂಕ್ಷ್ಮತರವಾಗಿ ಮೀಸಲು ಮಾಡಿದ್ದಳು!

ಅಳುತ್ತಾ ಅಳುತ್ತಾ ಹೂವಯ್ಯನ ಮಾತುಗಳ ನೆನಪಿಗೆ ಬಂದು, ಅಳುವನ್ನು ನಿಲ್ಲಿಸಿ, ಆಲೋಚನೆಗೆ ತೊಡಗಿದಳು. ಮನಃಪೂರ್ವಕವಾಗಿ ದೇವರನ್ನು ಪ್ರಾರ್ಥಿಸಿದರೆ ಅದು ಕೈಗೂಡುತ್ತದೆ ಎಂದು ಹೂವಯ್ಯ ಹೇಳಿದ್ದನು. ಭಕ್ತಿಯಿಂದ ಸಾವಿತ್ರಿ ಸತ್ಯವಂತನ ಜೀವವನ್ನು ಯಮನಿಂದ ಹಿಂದಕ್ಕೆ ಪಡೆಯಲಿಲ್ಲವೆ? ಸೀತೆ ರಾವಣನಿಂದ ಪಾರಾಗಿ ಪುನಃ ರಾಮನನ್ನು ಸೇರಲಿಲ್ಲವೆ? ನಮ್ಮ ಸೀತೆಗೆ ದೇವರಲ್ಲಿ ತಾನು ಹಿಂದೆಂದೂ ಅನುಭವಿಸದಷ್ಟು ಭಕ್ತಿ ಮೂಡಿತು. ತನ್ನ ಇಷ್ಟಾರ್ಥವೆಲ್ಲವನ್ನೂ ನೆರವೇರಿಸಿಕೊಡುವಂತೆ ಭಗವಂತನನ್ನು ಎದೆತುಂಬಿ ಪ್ರಾರ್ಥಿಸಿದಳು. ಸೀತಾರಮರ ಚಿತ್ರಪಠಕ್ಕೆ ಸಲಸಲವೂ ಕೈಮುಗಿದು ತಲೆಬಾಗಿದಳು. ಆಕೆ ತಲೆಬಾಗಿತ್ತಿದ್ದಾಗ ಹಲ್ಲಿ ಒಂದು ಸಾರಿ ಲೊಚಗುಟ್ಟಿತು. ಅದನ್ನಾಲಿಸಿದ ಸೀತೆ, ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುವವನು ಹುಲ್ಲುಕಡ್ಡಿಯನ್ನು ಕಂಡು ಹಿಗ್ಗುವಂತೆ ಹಿಗ್ಗಿದಳು. ಹೆಣ್ಣು ಕೇಳಿದರೆ ಏನಾಯ್ತು? ದೇವರ ದಯದಿಂದ ಜಾತಕ ಸರಿಬರದೆ ಹೋಗುತ್ತದೆ ಎಂದು ಶಾಂತಳಾದಳು. ಎಲ್ಲವೂ ಹೆಣ್ಣುಕೇಳುವವರ,  ಕೊಡುವವರ  ಮತ್ತು ಜೋಯಿಸರ ಕೈಯಲ್ಲಿದೆ ಎಂಬುದು ಅವಳಿಗೆ ಇನ್ನೂ ಗೊತ್ತಾಗಿರಲಿಲ್ಲ.