ಸಂಜೆಯಾಗುತ್ತಿದೆ. ನೆತ್ತರಿನ ಬಣ್ಣದ ಕೆಂಪು ಕಿರಣದ ಸೂರ್ಯಬಿಂಬ ಪಶ್ಚಿಮ ಪರ್ವತದ ಅರಣ್ಯದ ಹಿಂಗಡೆ ಪ್ರಜ್ವಲಿಸುತ್ತ ಮೆಲ್ಲಮೆಲ್ಲನೆ ಮುಳುಗುತ್ತಿದೆ. ನೋಡೆ ನೋಡೆ ಕಾಲುಭಾಗ ಮರೆಯಾಯ್ತು; ಅರ್ಧ ಮರೆಯಾಯ್ತು; ಪೂರ್ಣವೂ ಮರೆಯಾಯ್ತು; ಸಂಧ್ಯಾಕಾಂತಿ ಕಾಡು ಬೆಟ್ಟಗಳ ಮೇಲೆ ಕೆಂಗಾವಿಯೆರಚಿತ್ತು

“ಇದಾವ ಪ್ರದೇಶ? ಇದಾವ ಬೆಟ್ಟ? ಇದಾವ ಕಾಡು? ನಾನೆಲ್ಲಿದ್ದೇನೆ? ಎಲ್ಲಿಗಾಗಿ ಹೊರಟಿದ್ದೇನೆ? ಏಕೆ? ಇದೇನಿದು ನನ್ನ ಸಂಗಡ ಯಾರೂ ಇಲ್ಲವಲ್ಲ!”

ಸೀತೆಗೆ ಯಾವುದೂ ಬಗೆಹರಿಯಲಿಲ್ಲ. ಭಯದೃಷ್ಟಿಯನ್ನು ಬೀರಿ ನೋಡುತ್ತಾಳೆ ಇನ್ನೇನು ಕತ್ತಲೆಯೂ ನುಣ್ಣನುಣ್ಣನೆ ಮುತ್ತಿಬರುತ್ತಿದೆ! ಹೃದಯ ಹೊಡೆದು ಕೊಳ್ಳಲಾರಂಭಿಸಿತು. ಸೀತೆ ತುಸು ದೂರ ಬಿರುಬಿರನೆ ಓಡೆ ನೋಡಿದಳು. ಯಾರೂ ಕಾಣಿಸಲಿಲ್ಲ! ಏನೊಂದೂ ಸದ್ದಿಲ್ಲ. ಭಯಾತಿಶಯದಿಂದ ನಿಡುಸುಯ್ಯತೊಡಗಿದಳು; ಕಣ್ಣೀರೂ ಇಳಿದುವು. ಯಾವ ಊರೋ? ಯಾವ ಹಾದಿಯೋ ಎಲ್ಲಿಗೆ ಹೋಗಬೇಕೋ ಏನೊಂದೂ ಅವಳಿಗೆ ಗೊತ್ತಾಗಲಿಲ್ಲ. ಅಯ್ಯೋ, ನಾನೇಕೆ ಇಲ್ಲಿಗೆ ಬಂದೆ? ನನ್ನನ್ನಿಲ್ಲಿಗೆ ಕರೆದು ತಂದವರಾರು? ಅಪ್ಪಯ್ಯನೆಲ್ಲಿ? ಅವ್ವನೆಲ್ಲಿ? ಅಣ್ಣಯ್ಯನೆಲ್ಲಿ! ಲಕ್ಷ್ಮಿಯೂ ಕಾಣಿಸುವುದಿಲ್ಲವಲ್ಲ! ಇದೇನಿದು? ಇದ್ದಕ್ಕಿದ್ದ ಹಾಗೆ ದಿಕ್ಕಿಲ್ಲದ ಅನಾಥೆಯಂತೆ ಕಾಡುಪಾಲಾಗಿರುವೆನಲ್ಲಾ!

“ಅಣ್ಣಯ್ಯಾ!” ಎಂದು ಕರೆದಳು!

ಯಾರೂ ಓ ಕೊಳ್ಳಲಿಲ್ಲ. ಸೀತೆ ಅಳುತ್ತ ತಂದೆತಾಯಿಗಳನ್ನು ಕರೆದಳು. ಉತ್ತರ ಬರದಿರಲು “ಅಯ್ಯೋ ನನ್ನನ್ನೇಕೆ ಕಾಡುಪಾಲು ಮಾಡಿದಿರಿ? ನಾನೇನು ತಪ್ಪು ಮಾಡಿದೆ? ನನ್ನನ್ನು ಕ್ಷಮಿಸಿ! ನೀವು ಹೇಳಿದ ಹಾಗೆ ಕೇಳುತ್ತೇನೆ! ಇನ್ನು ಮೇಲೆ ತಪ್ಪು ಮಾಡುವುದಿಲ್ಲ” ಎಂದು ರೋದಿಸಿದಳು. ಪ್ರತ್ಯುತ್ತರವಾಗಿ ಕತ್ತಲೆ ಹೆಚ್ಚಿತು! ಸೀತೆ ಕಿವಿಗೊಟ್ಟಳು: ಹಠಾತ್ತಾಗಿ ಭಯಂಕರವಾದ ಗರ್ಜನೆಯೂ ಅದರ ಜೊತೆಗೆ ಆರ್ತನಾದವೂ ಕೇಳಿಬಂದವು! ಆ ಗರ್ಜನೆಗೆ ಭೂಮಿ ಕಂಪಿಸಿದಂತಾಯ್ತು. ಸೀತೆ ಕಂಗಾಲಾಗಿ ದಿಕ್ಕುದಿಕ್ಕಿಗೆ ನೋಡ ತೊಡಗಿದಳು. ಯಾರನ್ನಾದರೂ ಕೂಗುವುದಕ್ಕೂ ಅವಳಿಂದಾಗಲಿಲ್ಲ. ಅಷ್ಟು ಭಯಂಕರವಾಗಿತ್ತು ಆ ಗರ್ಜನೆ! ಎಷ್ಟು ಕರುಣಾಕರವಾಗಿತ್ತು ಆ ಆರ್ತನಾದ.

ನಿಂತಿದ್ದ ಹಾಗೆಯೇ ಗರ್ಜನೆಯೂ ಆರ್ತನಾದವೂ ಸಮೀಪವಾದುವು. ಸೀತೆಯ ಹೃದಯ ಬಾಯಿಗೆ ಬಂದಂತಾಗಿ ನೋಡುತ್ತಾಳೆ; ಭೀಷಣವಾದ ಭೀಮಾಕಾರವಾದ ಹೆಬ್ಬುಲಿಯೊಂದು ಮನುಷ್ಯನೊಬ್ಬನನ್ನು ಅರೆಯಟ್ಟಿ ಬರುತ್ತಿದೆ. ಹೆಬ್ಬುಲಿ ಆರ್ಭಟಿಸುತ್ತಿದೆ, ಅಟ್ಟುತ್ತಿದೆ. ಮನುಷ್ಯ ನಿಸ್ಸಹಾಯನಾಗಿ ಕೂಗುತ್ತ ಓಡುತ್ತಿದ್ದಾನೆ. ಸೀತೆ ಕಲ್ಲಾಗಿ ನಿಂತು ರೆಪ್ಪೆಹಾಕದೆ ನೋಡುತ್ತಿದ್ದಾಳೆ. ಹಾ! ಓಡುತ್ತಿರುವವನು ಸೀತೆಮನೆ ಸಿಂಗಪ್ಪಗೌಡರ ಮಗ ಕೃಷ್ಣಪ್ಪನಲ್ಲವೆ! ಅಯ್ಯೋ, ಆಗಿಹೋಯಿತು! ಇನ್ನೇನು ಹುಲಿ ಹಿಡಿದು ಬಿಡುತ್ತದೆ! ಇಲ್ಲ! ಕೃಷ್ಣಪ್ಪ ಪಕ್ಕಕ್ಕೆ ಬಳುಕಿ ನೆಗೆದು ತಪ್ಪಿಸಿಕೊಂಡು ಓಡುತ್ತಿದ್ದಾನೆ! ಅಯ್ಯಯ್ಯೋ ಸೀತೆಯ ಕಡೆಗೇ ಬರುತ್ತಿದ್ದಾನೆ! ಮತ್ತೆ ನೋಡಿದಳು ಸೀತೆ; ಅಯ್ಯೋ, ಇದೇನಿದು? ಓಡುತ್ತಿರುವವನು ಕೃಷ್ಣಪ್ಪನಲ್ಲ! ಮತ್ತಾರು? ಕಾನೂರು ಚಂದ್ರಯ್ಯಗೌಡರ ಮಗ ರಾಮಯ್ಯ! ಸೀತೆ ಇದ್ದಕ್ಕಿದ್ದ ಹಾಗೆ “ರಾಮಯ್ಯ ಬಾವ!” ಎಂದು ಕೂಗಿಬಿಟ್ಟಳು.

ಅವಳ ಕೂಗಿಗೋ ಏನೋ ಎನ್ನುವಂತೆ ರಾಮಯ್ಯ ನೆಟ್ಟಗೆ ಅವಳಿದ್ದ ಕಡೆಗೇ ಧಾವಿಸಿದನು: ಹೆಬ್ಬುಲಿಯಂತೂ ಬಣ್ಣಬಣ್ಣದ ಸಿಡಿಲಿನಂತೆ ನುಗ್ಗಿಬರುತ್ತಿದೆ! ಸೀತೆ ಓಡಲೆಳಸಿದಳು. ಆಗಲಿಲ್ಲ! ಮತ್ತೆ ನೋಡಿದಳು: ಹುಲಿ ನೆಗೆದು ರಾಮಯ್ಯನ ಮೇಲೆ ಹಾರಿತು!

ಆದರೆದೇನು? ರಾಮಯ್ಯನೆಲ್ಲಿ ಮಾಯವಾದನು? ಯಾರೂ ಇಲ್ಲ! ಹುಲಿ ಮಾತ್ರ ಸೀತೆಯ ಕಡೆಗೆ ಬಾಯ್ದೆರೆದು ಕೋರೆದಾಡೆಗಳನ್ನು ತೋರಿ ಗರ್ಜಿಸುತ್ತ ಭಯಂಕರವಾಗಿ ಬರುತ್ತಿದೆ! ಸೀತೆ ತನ್ನ ಇಚ್ಛಾಶಕ್ತಿ ಸಾಹಸಗಳನ್ನೆಲ್ಲ ವೆಚ್ಚಮಾಡಿ ಮತ್ತೆ ಓಡಲೆಳಸಿದಳು. ಕಾಲು ಕೀಳಲಾಗಲಿಲ್ಲ! ಹುಲಿ ಬಂದಿತು! ಬಂದಿತು! ಬಂದಿತು! ‘ಅಯ್ಯೋ, ಅವ್ವಾ, ಹುಲಿ! ಹುಲಿ!’ ಎಂದು ಕೂಗಿಕೊಂಡಳು ಸೀತೆ! ಇದೇನಿದು! ಹುಲಿ ಮಾಯವಾಗಿ, ಅದಕ್ಕೆ ಬದಲಾಗಿ ಹೂವಯ್ಯ ನಗುತ್ತ “ಹೆದರಬೇಡ, ಸೀತೆ! ನಾನು! ಯಾಕೆ ಕುಗಿಕೊಳ್ತೀಯಾ?” ಎಂದು ಬರುತ್ತಿದ್ದಾನೆ!

ಸೀತೆ ಥಟ್ಟನೆ ಎಚ್ಚರವಾಗಿ ಕಣ್ಣು ತೆರೆದಳು. ಹಾಸಗೆಯ ಪಕ್ಕದಲ್ಲಿ ಕುಳಿತು ಗೌರಮ್ಮನವರು ಮಗಳನ್ನು ಮುಟ್ಟಿ ಸಂತೈಸುತ್ತಾ “ಸೀತೆ! ಸೀತೆ! ಹೆದರಿದೆಯೇನೆ? ಯಾಕೆ ಕೂಗಿಕೊಂಡೆ?” ಎನ್ನುತ್ತಿದ್ದರು. ಸೀತೆಯ ಕಣ್ಣು ಬೆದರಿತ್ತು; ಮೈ ಬೆವರಿತ್ತು; ಉಸಿರು ವೇಗವಾಗಿತ್ತು; ಮೈ ಬಿಸಿಯನ್ನು ನೊಡಿದರೆ ಜ್ವರವೂ ಬಂದಂತಿತ್ತು!

ಮನುಷ್ಯನ ಜಾಗ್ರದವಸ್ಥೆಯ ಜೀವನ ಮಹಾದ್ಭುತವಾಗಿದೆ. ಆದರೆ ಸ್ವಪ್ನಜಗತ್ತು ಅದ್ಭುತತರವಾದುದು. ಕೋಟ್ಯಾನುಕೋಟಿ ಮಾನವರು ಪ್ರತಿ ದಿವಾರಾತ್ರಿಗಳಲ್ಲಿಯೂ ನಿದ್ದೆಮಾಡುವಾಗಲೆಲ್ಲ ಗಣನೆಯಿಲ್ಲದಷ್ಟು ಕನಸುಗಳನ್ನು ಕಾಣುತ್ತಾರೆ. ಅವುಗಳನ್ನಾದರೂ ಎಷ್ಟು ಚಿತ್ರವಿಚಿತ್ರವಾಗಿರುತ್ತವೆ? ಕಲ್ಪನೆಗೂ ಅಸಾಧ್ಯವಾಗುವಂತಹ ಸನ್ನಿವೇಶಗಳೂ ಚಿತ್ರಗಳೂ ಘಟನೆಗಳೂ ಸ್ವಪ್ನರಾಜ್ಯದಲ್ಲಿ ನಿರಂಕುಶವಾಗಿ ನಿಯಮಾತೀತವಾಗಿ ಅಥವಾ ನಿಯಮ ವಿರೋಧವಾಗಿ ಸಾಗಿಹೋಗುತ್ತವೆ. ಎಲ್ಲ ದೇಶದ ಕವಿಗಳೂ ತಮ್ಮ ತಮ್ಮ ಕಾವ್ಯ ಪುರಾಣ ಕಟ್ಟುಕಥೆಗಳಲ್ಲಿ ಚಿತ್ರಿಸಿರುವ ಯಕ್ಷ, ರಾಕ್ಷಸ, ದೇವತೆ, ಕಿನ್ನರ, ಪಿಶಾಚಿ, ಭೂತ, ಸ್ವರ್ಗ, ನರಕ ಮೊದಲಾದ ವಿಷಯಗಳಿಗೆ ಸ್ವಪ್ನವೇ ಬಹುಮಟ್ಟಿಗೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ.

ಜಾಗ್ರಜ್ಜೀವನದ ಬಯಕೆಗಳೂ ಭಯಗಳೂ ನಿದ್ದೆಯ ಲೋಕದಲ್ಲಿ ಕನಸುಗಳ ರೀತಿಯಲ್ಲಿ ಜರುಗಿ ಕೈಗೂಡುತ್ತವೆ ಎಂದು ಮನಃಶಾಸ್ತ್ರಜ್ಞರ ಅಭಿಪ್ರಾಯವಾವಿದೆ. ವಿರಹಿ ಪ್ರೇಯಸಿಯನ್ನೂ, ದರಿದ್ರನು ಧನವನ್ನೂ, ಹೊಟ್ಟೆಗಿಲ್ಲದವನು ಭಕ್ಯಬೋಜ್ಯಗಳ ರಾಶಿಯನ್ನೂ ಸ್ವಪ್ನದಲ್ಲಿ ಕಂಡು ಕುಣಿದಾಡಬಹುದು. ತಿರುಕನ ಸ್ವಪ್ನವೂ ಅಂತಹುದೆ ಆಗಿದೆ. ಆದರೂ ಎಲ್ಲ ಕನಸುಗಳನ್ನೂ ಅಭೀಷ್ಟ ಸಾಫಲ್ಯದ ಚಿತ್ರಗಳೆಂದು ಸಾಧಿಸಲಾಗುವುದಿಲ್ಲ. ಕೆಲವು ಹಿಂದಾದುದನ್ನಾಗಲಿ ಮುಂದಾಗುವುದನ್ನಾಗಲಿ ಸೂಚಿಸಬಹುದು. ಕೆಲವು ಕನಸುಗಳಂತೂ ರೂಪಕಗಳಾಗಿರುತ್ತವೆ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುತ್ತೇನೆಯೋ ಇಲ್ಲವೋ ಎಂದು ಭಯಗ್ರಸ್ತನಾದ ವಿದ್ಯಾರ್ಥಿ ಕನಸಿನಲ್ಲಿ ಪರೀಕ್ಷಾ ಮಂದಿರಕ್ಕೆ ಬಹಳ ತಡವಾಗಿ ಹೋದಂತೆ ಕನಸು ಕಾಣಬಹುದು; ಅಥವಾ ಒಂದು ಪ್ರಶ್ನೆಗೆ ಉತ್ತರ ಬರೆಯುವಷ್ಟರಲ್ಲಿಯೆ ಘಂಟೆ ಹೊಡೆದಂತೆ ಕನಸಾಗಬಹುದು; ಅಥವಾ ತಾನೊಂದು ಕಡಿದಾದ ಬೆಟ್ಟವನ್ನು ಬಹಳ ಶ್ರಮದಿಂದ ಏರುತ್ತಿರುವವನಂತೆಯೂ ಅರ್ಧ ಏರುವಷ್ಟರಲ್ಲಿ ಕಾಲು ತಪ್ಪಿ ತಪ್ಪಲ್ಲಿನಲ್ಲಿರುವ ಸರೋವರಕ್ಕೆ ಬೀಳುತ್ತಿರುವಂತೆಯೂ ಕನಸು ಕಾಣಬಹುದು. ಹಾಗೆಯೇ ನಮಗೆ ಒಲ್ಲದವನು ಮಹಾಕಷ್ಟಕ್ಕೀಡಾದಂತಯೊ ಅಥವಾ ನಾಶವಾದಂತೆಯೋ ಕನಸು ಬೀಳಬಹುದು. ಅಷ್ಟೇ ಅಲ್ಲದೆ, ದೈಹಿಕ ವ್ಯಾಪಾರಗಳಿಂದಲೂ ಅದ್ಭುತ ಸ್ವಪ್ನಗಳು ಪ್ರೇರಿತವಾಗುತ್ತವೆ. ಎದೆಯ ಮೇಲೆ ಕೈಯಿಟ್ಟುಕೊಂಡು ಮಲಗಿದವನಿಗೆ ಯಾವುದೋ ಒಂದು ಪಿಶಾಚ ತನ್ನ ಎದೆಯ ಮೇಲೆ ಕೂತು, ಮೂಗು, ಬಾಯಿಗಳನ್ನು ಒತ್ತಿ ಹಿಡಿದಂತೆ ಕನಸಾಗಬಹುದು. ಹೊದೆದುಕೊಂಡ ಶಾಲಿನ ಕರೆ ಕುತ್ತಿಗೆಯ ಮೇಲೆ ಬಿದ್ದವನಿಗೆ ತನ್ನನ್ನು ಯಾರೋ ಗಲ್ಲಿಗೇರಿಸುವಂತೆ ಕನಸಾಗಬಹುದು.

ಅಂತೂ ಸೀತೆಯ ಕನಸನ್ನು ಆಕೆಯ ಬಯಕೆ ಬೆದರಿಕೆಗಳನ್ನು ಸೂಚಿಸುವ ಒಂದು ರೂಪಕಾಲಂಕಾರವೆಂದು ಇಟ್ಟುಕೊಂಡರೆ, ಆಕೆಯ ಚಿತ್ತದಲ್ಲಿ ಗುಪ್ತವಾಗಿ ನಡೆಯುತ್ತಿದ್ದ ಮನೋವ್ಯಾಪಾರಗಳನ್ನು ಸ್ವಲ್ಪಮಟ್ಟಿಗಾದರೂ ಊಹಿಸಬಹುದು. ಒಂದು ವಿಷಯವಂತೂ ಚೆನ್ನಾಗಿ ಸ್ಪಷ್ಟವಾಗುತ್ತದೆ. ಆಕೆಗೆ ಕೃಷ್ಣಪ್ಪನ ಪರವಾಗಿದ್ದ ಭಾವನೆ ಮತ್ತು ಹೂವಯ್ಯನಲ್ಲಿದ್ದ ನೆಚ್ಚು!

ಸ್ವಪ್ನಕ್ಕೂ ಉನ್ಮಾದಕ್ಕೂ ಹೆಚ್ಚೇನೂ ವ್ಯತ್ಯಾಸವಿಲ್ಲ. ಅವೆರಡಕ್ಕೂ ಆಧಾರ ಸಾಮಾನ್ಯವಾಗಿದೆ. ಜೀವನದಲ್ಲಿ ಮಹಾ ದರಿದ್ರನಾಗಿರುವವನು ಕನಸಿನಲ್ಲಿ ಶ್ರೀಮಂತನಾಗಿ ಸುಖಪಡುತ್ತಾನೆ. ಅವನು ಎಚ್ಚೆತ್ತಮೇಲೆ ಅದನ್ನು ಕನಸೆಂದು ತಿಳಿದು ಮತ್ತೆ ದರಿದ್ರನಂತೆಯೆ ವರ್ತಿಸುತ್ತಾನೆ. ಆದರೆ ಹಾಗೆ ವರ್ತಿಸುವುದರ ಬದಲು ಎಚ್ಚತ್ತು ಮೇಲೂ ಶ್ರೀಮಂತನಂತೆ ನಡೆದರೆ ಅವನನ್ನು ಹುಚ್ಚರ ಆಸ್ಪತ್ರೆಗೆ ಸಾಗಿಸುತ್ತಾರೆ. ಅಂಥವನು ತಾನು ನಿಜವಾಗಿಯೂ ಶ್ರೀಮಂತನಾಗಿದ್ದೇನೆ, ಆಸ್ಪತ್ರೆ ತನ್ನ ಸ್ವಂತ ಮನೆ, ಡಾಕ್ಟರು ನರ್ಸುಗಳೆಲ್ಲರೂ ತನ್ನ ಪರಿವಾರದವರೆಂದೂ ಅವರು ಮಾಡುವ ಕಾರ್ಯಗಳೆಲ್ಲ ತನ್ನ ಪರಿಚರ್ಯೆ ಎಂದೂ ಭಾವಿಸಬಹುದು. ಅಥವಾ ಎಲ್ಲರೂ ಸೇರಿ ತನ್ನ ಸಂಪತ್ತನ್ನೆಲ್ಲ ಅಪಹರಿಸಿ, ತನ್ನನ್ನು ಮೋಸಮಾಡಲೋಸ್ಕರ ಈ ಹೂಟ ಹೂಡಿದ್ದಾರೆಂದು ವ್ಯಾಖ್ಯಾನ ಮಾಡಿ ಭ್ರಾಂತಿಯಿಂದ ವರ್ತಿಸಬಹುದು. ಅಂತೂ ಶಾಶ್ವತವಾದ ಅಸಾಮಂಜಸ್ಯವೆ ಹುಚ್ಚಿಗೆ ಕಾರಣವಾಗುತ್ತದೆ. ಹುಚ್ಚಿನಲ್ಲಿ ಅನೇಕ ತೆರವಿರುತ್ತದೆ. ಕೈಗೂಡದ ಬಯಕೆ ಬೆದರಿಕೆಗಳೂ ಸಮಾಜಮಾರ್ಯಾದೆಗಾಗಿ ವ್ಯಕ್ತಿ ಮನಸ್ಸಿನೊಳಗೆ ಅದುಮಿದ ಬಯಕೆ ಬೆದರಿಕೆಗಳೂ ಉಲ್ಬಣಾವಸ್ಥೆಯನ್ನು ಮುಟ್ಟಿದರೆ ಹುಚ್ಚಾಗಿ ಪರಿಣಮಿಸುತ್ತವೆ. ಅವುಗಳು ತಾಳುವ ವೇಷಗಳನ್ನು ಲೆಕ್ಕ ಮಾಡುವುದಕ್ಕೂ ಸಾಧ್ಯವಿಲ್ಲ. ಸಾಧಾರಣ ತಲೆನೋವಿನಿಂದ ಹಿಡಿದು ಮೂರ್ಛೆರೋಗ, ಮೈಮೇಲೆ ಬರುವುದು, ದೆವ್ವ ಹಿಡಿಯುವುದು, ನಿರಂತರ ಭ್ರಾಂತಿ ― ಇತ್ಯಾದಿಗಳಾಗಿ, ಆತ್ಮಹತ್ಯದವರೆಗೂ ಹೋಗಬಹುದು.

ಪ್ರೇಮಭಂಗವು ಅನೇಕಸಾರಿ ತೆರತೆರನಾದ ಉನ್ಮಾದಗಳಲ್ಲಿ ಪರ್ಯವಸಾನವಾಗುತ್ತದೆ. ಅಥವಾ ರೋಗಗಳಲ್ಲಿಯೂ ಕೊನೆಗಾಣಬಹುದು. ತರುಣನೊಬ್ಬನಲ್ಲಿ ನೈಸರ್ಗಿಕವಾಗಿ ಪ್ರೇಮವಿಟ್ಟಿರುವ ಹುಡುಗಿಯನ್ನು ಆಕೆಯ ತಂದೆ ತಾಯಿಗಳು ಹಣಕ್ಕಾಗಿಯೋ ಕುಲಕ್ಕಾಗಿಯೋ ಸಮಾಜ ಮರ್ಯಾದೆಗಾಗಿಯೋ ಅಥವಾ ಮಾತು ಕೊಟ್ಟಿದ್ದಕ್ಕಾಗಿಯೋ ಬೇರೊಬ್ಬನಿಗೆ ವಿವಾಹ ಮಾಡಿದರೆ ಆಕೆಯಲ್ಲಿ ಉತ್ಪನ್ನವಾಗುವ ಜುಗುಪ್ಸೆ ದುಃಖ ನಿರಾಶೆಗಳು ನಾನಾ ವೇಷಗಳನ್ನು ತಾಳಿ ತಮ್ಮ ಇಚ್ಛೆಯನ್ನು ನೆರವೇರಿಸಿಕೊಳ್ಳಬಹುದು. ಆಕೆಯ ನಿಜವಾದ ಪ್ರೇಮ ಪ್ರೀತಿಸಿದವನಲ್ಲಿ ಇರುತ್ತದೆಯೇ ಹೊರತು ಮದುವೆಮಾಡಿ ಕೊಂಡವನಲ್ಲಿ ಇರುವುದಿಲ್ಲ. ಅಂತಹ ಸಮಯಗಳಲ್ಲಿ ಹುಡುಗಿಯ ಸುಪ್ತಚಿತ್ತ ಮದುವೆಯಾದವನ ಸಂಗದಿಂದ ತಪ್ಪಿಸಿಕೊಳ್ಳಲು ವಿವಿಧೋಪಾಯಗಳನ್ನು ಹೂಡಬಹುದು. ಅದು ಅನೈಚ್ಛಿಕವಾಗಿಯೆ ನಡೆಯುತ್ತದೆ. ಹುಡುಗಿಗೆ ಅದು ಗೊತ್ತಿರುವುದಿಲ್ಲ. ಗಂಡನ ಸಾನ್ನಿಧ್ಯದ ಸೂಚನೆಯ ಮಾತ್ರದಿಂದಲೆ ಹುಡುಗಿ ದೆವ್ವಹಿಡಿದವಳಾಗಿ ಭಯಂಕರವಾಗಿ ವರ್ತಿಸಬಹುದ. ಅಥವಾ ಉನ್ಮಾದ ಶಾಶ್ವತವಾದರೂ ಆಗಬಹುದು. ಅಥವಾ ಯಾವುದಾದರೂ ಭಯಂಕರ ವ್ಯಾಧಿ ನಿರ್ಮಾಣವಾಗವುದೂ ಉಂಟು. ಆತ್ಮಹತ್ಯ ಮಾಡಿಕೊಳ್ಳುವುದೂ ಅಪೂರ್ವವಲ್ಲ.

ಹುಡುಗಿ ಸೂಕ್ಷ್ಮಪ್ರಕೃತಿಯ ಬಾಲೆಯಲ್ಲದಿದ್ದರೆ, ಕಾನೂರಿನ ಸುಬ್ಬಮ್ಮನಂತೆ ತನಗಾಗುವ ಪ್ರೇಮಭಂಗವನ್ನೂ ನಿರಾಶೆಯನ್ನೂ ಪದ್ಧತಿ ಮತ್ತು ಅಭ್ಯಾಸಗಳ ಕಗ್ಗಲ್ಲಿನಲ್ಲಿ ತಿಕ್ಕಿ ತಕ್ಕಿ, ಮೊಂಡುಮಾಡಿ, ಮರೆತು, ಕೆಲದಿನಗಳಲ್ಲಿಯೆ ಹೊಸ ಸನ್ನಿವೇಶಕ್ಕೆ ತಕ್ಕ ಹಾಗೆ ವರ್ತಿಸಲು ತೊಡಗಿ, ಜೀವನವನ್ನು ತಕ್ಕಮಟ್ಟಿಗೆ ನೆಮ್ಮದಿಯಾಗಿ ನಡೆಸುತ್ತಾಳೆ. ಆದರೆ ತರಳೆ ಭಾವಜೀವಿಯಾಗಿ ಸೂಕ್ಷ್ಮ ಹೃದಯದವಳಾಗಿದ್ದರೆ ಯಾವ ಪದ್ಧತಿಯಾಗಲಿ, ಯಾವ ಅಭ್ಯಾಸವಾಗಲಿ ಯಾವ ಸಮಾಜದ ಕಟ್ಟುನಿಟ್ಟುಗಳಾಗಲಿ, ಯಾವ ವಿವಾಹದ ಶಾಸ್ತ್ರೋಕ್ತ ಕರ್ಮಗಳಾಗಲಿ ಆಕೆಯ ಪ್ರಥಮ ಪ್ರಣಯದ ವಿದ್ಯುನ್ಮುದ್ರೆಯನ್ನು ಅಳಿಸಲಾರದೆ ಹೋಗುತ್ತವೆ. ಅದಕ್ಕೆ ಬದಲಾಗಿ ಒದಗುವ ವಿಘ್ನದಿಂದ ಪ್ರಥಮ ಪ್ರೇಮದ ಮೊನೆ ಮತ್ತೂ ತೀಕ್ಷ್ಣವಾಗುತ್ತದೆ. ಹೂವಯ್ಯ ಬೆನ್ನುನೋವಾಗಿ ಮುತ್ತಳ್ಳಿಯಲ್ಲಿ ಕೆಲವು ದಿನಗಳು ಉಳಿದು ಸೀತೆಯೊಡನೆ ಅಷ್ಟೊಂದು ಮಾತುಕತೆಯಾಡದಿದ್ದಿದ್ದರೆ, ಅವಳು ಬಹುಶಃ ಸ್ಥೂಲಹೃದಯದ ಬಾಲೆಯಾಗಿಯೆ ಇದ್ದುಕೊಂಡು, ತನ್ನ ತಂದೆತಾಯಿಯರು ತನ್ನನ್ನು ಯಾರಿಗೆ ಕೊಟ್ಟು ಮದುವೆ ಮಾಡುತ್ತಿದ್ದರೊ ಆತನನ್ನೆ ಗಂಡನನ್ನಾಗಿ ತಿಳಿದು, ನೆಮ್ಮದಿಯಾಗಿ ಬಾಳುತ್ತಿದ್ದಳೆಂದು ತೋರುತ್ತದೆ. ಆದರೆ ವಿಧಿ ಹಾಗಾಗಲು ಬಿಡಲಿಲ್ಲ. ಹೂವಯ್ಯನ ದೆಸೆಯಿಂದ ಅವಳು ಸೂಕ್ಷ್ಮಹೃದಯದ ಭಾವಜೀವಿಯಾದ ಕುಮಾರಿಯಾಗಿಬಿಟ್ಟಿದ್ದಳು.

ಹಾಗಾದುದು ಇತರರಾರಿಗೂ ತಿಳಿದಿರಲಿಲ್ಲ, ತಿಳಿದಿದ್ದರೆ ಕಥೆ ಬೇರೆಯಾಗುತ್ತಿತ್ತು. ಸೀತೆಯಂತೂ ಅದನ್ನು ಅತ್ಯಂತ ಗೋಪ್ಯವಾಗಿಟ್ಟಿದ್ದಳು. ಶ್ಯಾಮಯ್ಯಗೌಡರಾಗಲಿ ಗೌರಮ್ಮನವರಾಗಲಿ ಈ ಸ್ವಯಂವರ ಸ್ವಾರಸ್ಯವನ್ನು ಇಂಗಿತದಿಂದ ತಿಳಿಯುವಷ್ಟು ನವೀನರಾಗಿರಲಿಲ್ಲ. ಅವರೂ ಅವರಂತಹ ಇತರ ನಾಡಿನ ಹಿರಿಯರೂ ತಮ್ಮ ಹಿರಿಯರಾದ ಸಮಾಜದ ಮುಖ್ಯಸ್ಥರು ನಿರ್ಣಯಿಸಿದಂತೆ ಮದುವೆಯಾಗಿ ಸಂಸಾರ ಮಾಡುತ್ತಿದ್ದವರಾಗಿದ್ದರು. ಅವರೆಲ್ಲರ ಸಿದ್ಧಾಂತವೂ ಅನುಭವವೂ ವಿವಾಹಾನಂತರ ಪ್ರೇಮ ಎಂಬುದಾಗಿದ್ದೀತೇ ಹೊರತು ಪ್ರೇಮಾನಂತರ ವಿವಾಹ ಎಂಬುದಾಗಿರಲಿಲ್ಲ. ಆದ್ದರಿಂದ ಶ್ಯಾಮಯ್ಯಗೌಡರು ಕೃಷ್ಣಪ್ಪನಿಗೆ ಮಗಳನ್ನು ಕೊಡುತ್ತೇನೆ ಎಂದು ಮಾತು ಕೊಟ್ಟುದರಲ್ಲಿ ಅಜ್ಞಾನವಿದ್ದಿತೆ ಹೊರತು ಅನ್ಯಾಯವಿರಲಿಲ್ಲ.

ಯಾವ ಸ್ತ್ರೀಸಹಜ ಲಜ್ಜೆಯಿಂದ ಸೀತೆ ತನಗೆ ಹೂವಯ್ಯನಲ್ಲಿದ್ದ ಅನುರಾಗವನ್ನು ಮುಚ್ಚುಮರೆಮಾಡಿದ್ದಳೋ ಅಂತಹ ಪುರುಷಸಹಜವಾದ ಸಂಕೋಚದಿಂದಲೇ ಹೂವಯ್ಯನೂ ತನಗೆ ಸೀತೆಯಲ್ಲಿದ್ದ ಒಲುಮೆಯನ್ನು ತನ್ನ ಹೃದಯಗಹ್ವರದಲ್ಲಿ ಯಾರಿಗೂ ಅರಿಯದಂತೆ ಸೆರೆಹಾಕಿದ್ದನು. ತನ್ನ ಧೀರತೆಗೂ ಗೌರವಗಾಂಭೀರ್ಯಗಳಿಗೂ ಕುಂದುಬರಬಾರದೆಂದು ಅವನು ತನ್ನ ಅಂತರಂಗದಲ್ಲಿದ್ದ ಕಿಡಿಯನ್ನು ಬಹಿರಂಗಗೊಳಿಸದೆ, ಪ್ರಕೃತಿಯನ್ನು ವಂಚಿಸುವ ಸಾಹಸದಲ್ಲಿ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದನು. ಆದರೆ ಪ್ರಕೃತಿ ತನ್ನನ್ನು ವಂಚಿಸಲೆಳಸುವವರ ಮೇಲೆ ಮುಯ್ಯಿ ತೀರಿಸಿಕೊಳ್ಳದೆ ಬಿಡುವುದಿಲ್ಲ. ಹೀಗೆ ಪ್ರಕೃತಿಯ ಪ್ರತಿಶೋಧಕ್ಕೆ ಸಿಲುಕಿದ ಆತ್ಮವು ಪ್ರಕೃತಿಯನ್ನು ಗೆದ್ದು ಉದ್ಧಾರವಾಗಬೇಕು; ಇಲ್ಲದಿದ್ದರೆ ಆದರ್ಶಚ್ಯುತವಾಗಿ ಪತಿತವಾಗಿ ವಿನಾಶಹೊಂದಬೇಕು; ಇಲ್ಲದಿದ್ದರೆ ಕೋಟಿ ಕೋಟಿ ಮಾನವರು ಹಿಡಿದಿರುವ ಸಾಧಾರಣ ಪಥವನ್ನು ಹಿಡಿಯಬೇಕು.

ನಾಡಿನ ರೂಢಿಯಂತೆ, ಮದುವೆಮಾಡುವವರು ಮದುವೆಯಾಗುವವರ (ಅದರಲ್ಲಿಯೂ ಹೆಣ್ಣಿನ) ಇಚ್ಛೆಯನ್ನು ಕೇಳುವುದಿಲ್ಲ. ಪುತ್ರ ಪುತ್ರಿಯರ ಯೋಗಕ್ಷೇಮಕಾತರರಾದ ತಂದೆ ತಾಯಿಗಳೂ ಬಂಧುಗಳೂ ಅವರ ಕಲ್ಯಾಣಕ್ಕೆ ಭಂಗಬರುವಂತೆ ಲಗ್ನ ನಿಶ್ಚಯಮಾಡುತ್ತಾರೆಯೆ? ಅಲ್ಲದೆ ಮದುವೆ ಮಾಡುವ ಅನುಭವಶಾಲಿಗಳಾದ ಹಿರಿಯರಿಗಿಂತ ಮದುವೆಯಾಗುವ ಕಿರಿಯರಿಗೇನು ಹೆಚ್ಚು ತಿಳಿದಿರುತ್ತದೆಯೇ?

ಆದರೆ ಒಲ್ಮೆ ಜಾಣ್ಮೆಯಲ್ಲ. ಒಲ್ಮೆಯ ಭಾವಾವೇಶದ ನೀತಿಯೇ ಬೇರೆ; ಜಾಣ್ಮೆಯ ಲೆಕ್ಕಾಚಾರದ ರೀತಿಯೇ ಬೇರೆ. ಬಹುಶಃ ತುತ್ತತುದಿಯಲ್ಲಿ ಜಾಣ್ಮೆ ಒಲ್ಮೆಗೆ ಅಡಿಯಾಳಾಗಿ ಕಲಿಯಬೇಕಾಗುತ್ತದೆಂದೂ ತೋರುತ್ತದೆ.

ಮದುವೆ ನಿಶ್ಚಯವಾದಂದಿನಿಂದ ಸೀತೆ ಹಾಸಿಗೆ ಹಿಡಿದಳು. ದಿನದಿನವೂ ಜ್ವರ ಬಿಟ್ಟು ಬಿಟ್ಟು ಬಂದು, ಪ್ರಾತಃಕಾಲದ ಗುಲಾಬಿ ಗಿಡದ ಹಸುರಲೆಗಳ ನಡುವೆ ಅರೆಯರಳಿ ನಲಿವ ಬಿರಿಮುಗುಳಿನಂತಿದ್ದ ಲಲನೆ ಮುಡಿದು ಧೂಳಿಯಲ್ಲಿ ಬಿಸಾಡಿದ ಹೂವಿನಂತೆ ಬಾಡಿದಳು. ಕೆಲವುಸಾರಿ ಏನೋನೋ ಭಯಂಕರ ಸ್ವಪ್ನಗಳನ್ನು ಕಂಡು ಕೂಗಿಕೊಳ್ಳುತ್ತಿದ್ದಳು. ಇನ್ನೊಮ್ಮೆ ಎಚ್ಚತ್ತಿರುವಾಗಲೆ ಭ್ರಾಂತಿಯಿಂದ ಭಯಗೊಂಡು ನಡುಗುತ್ತಿದ್ದಳು. ಕಡೆಕಡೆಗೆ ಕೆಲವರ ಗುರುತೂ ಕೂಡ ಆಕೆಗೆ ಸಿಕ್ಕುತ್ತಿರಲಿಲ್ಲ. ಸೀತೆಮನೆ ಸಿಂಗಪ್ಪಗೌಡರಂತೂ ಆಕೆಯ ಸ್ಮೃತಿಯಿಂದ ಕಳಚಿಬಿದ್ದುಹೋಗಿದ್ದರು. ಅವರು ಹತ್ತಿರ ಕುಳಿತು ಮಾತಾಡಿಸಿದರೂ ಗುರುತು ಸಿಕ್ಕುತ್ತಿರಲಿಲ್ಲ. ಸ್ವಲ್ಪ ಆರೋಗ್ಯಾವಸ್ಥೆಯಲ್ಲಿದ್ದಾಗ ಕೇಳಲು ನಾಚುತ್ತಿದ್ದರೂ ಸಂಭ್ರಾಂತ ಸಮಯಗಳಲ್ಲಿ ‘ಹೂವಯ್ಯ ಬಾವ’ನನ್ನು ಕರೆಯುತ್ತಿದ್ದಳು.

ಶ್ಯಾಮಯ್ಯಗೌಡರು ಹಳ್ಳಿಯ ವೈದ್ಯರಿಂದ ಮದ್ದು ಕೊಡಿಸಿದರು. ಅಗ್ರಹಾರದ ವೆಂಕಪ್ಪಯ್ಯ ಜೋಯಿಸರು ನಿಮಿತ್ತ ನೋಡುವುದು, ತಾಯಿತಿ ಕಟ್ಟುವುದು, ದಾನ ತೆಗೆದುಕೊಳ್ಳುವುದು, ಸತ್ಯನಾರಾಯಣವ್ರತ ಮಾಡಿಸುವುದು, ಭೂತಾದಿಗಳಿಗೆ ಬಲಿ ಕೊಡಿಸುವುದು ― ಇತ್ಯಾದಿ ಕರ್ಮ ಕ್ರಿಯೆಗಳಿಂದ ಸೀತೆಯ ಕ್ಷೇಮದ ಸಲುವಾಗಿ ಬಹಳ ಪ್ರಯತ್ನ ಮಾಡಿದರು. ಯಾವುದೂ ಸಫಲವಾಗಲಿಲ್ಲ. ಆದರೂ ಆ ಸಮರ್ಥ ಜೋಯಿಸರು ರೋಗಿಯ ಕೇಡನ್ನೆಲ್ಲಾ ತಾವೇ ಹೊತ್ತುಕೊಳ್ಳುವ ಧರ್ಮಬುದ್ಧಿಯಿಂದ ವಿಧವಿಧವಾದ ದಾನಗಳನ್ನು ಸ್ವೀಕಾರಮಾಡುವ ಸೇವಾಕಾರ್ಯಕ್ಕೆ ಕೈ ಹಾಕಿದರು.

ಒಂದು ದಿನ ರಾಮಯ್ಯ ಸೀತೆಯ ಕಾಯಿಲೆಯನ್ನು ವಿಚಾರಿಸುವ ಸಲುವಾಗಿ ಮುತ್ತಳ್ಳಿಗೆ ಹೋಗಿದ್ದಾಗ ಸೀತೆ ಕಣ್ಣೀರು ಸುರಿಸುತ್ತ ನಿಃಶಕ್ತಕಂಠದಿಂದ ಬಹು ಮೆಲ್ಲಗೆ “ಹೂವಯ್ಯ ಬಾವ ಬರಲಿಲ್ಲೇನು?” ಎಂದು ಕೇಳಿದಳು. ಅವಳ ಕಣ್ಣುಗಳಲ್ಲಿ ಅನಂತ ಅಭೀಷ್ಟವೂ ವಾಣಿಯಲ್ಲಿ ಅಸೀಮ ರೋದನವೂ ತುಳುಕುತ್ತಿದ್ದುವು.

ರಾಮಯ್ಯನು “ಇಲ್ಲ. ಅವನು ಬರಲಿಲ್ಲ. ಏನೋ ಕೆಲಸದ ಮೇಲಿದ್ದಾನೆ” ಎಂದು ಹುಸಿಯಾಡಿ ಸಮಾಧಾನಮಾಡಲೆಳಸಿದನು. ಸೀತೆ ಮಾತಾಡಲಿಲ್ಲ. ಇದ್ದಕ್ಕಿದ್ದ ಹಾಗೆ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಹಾಸಗೆಯ ಮೇಲೆ ಒರಗಿದ್ದ ಆಕೆಯ ಕೃಶ ಮಲಿನ ಶರೀರ ಯಾತನೆಯ ಮಿಂಚು ಮುಟ್ಟಿದಂತೆ ನಡುಗತೊಡಗಿತು.

ಸೀತೆ ವಿಚಿತ್ರ ರೋಗದಿಂದ ಹಾಸಗೆ ಹಿಡಿದು ನರಳುತ್ತಿದ್ದ ವರ್ತಮಾನವನ್ನು ಕೇಳಿದರೂ ಹೂವಯ್ಯ ಮುತ್ತಳ್ಳಿಗೆ ಹೋಗಿ ಆಕೆಯನ್ನು ನೋಡಿರಲಿಲ್ಲ. ಚಿನ್ನಯ್ಯನ ಬಾಯಿಂದ ಸೀತೆಯನ್ನು ಕೃಷ್ಣಪ್ಪನಿಗೆ ಕೊಟ್ಟು ಲಗ್ನಮಾಡುವುದು ನಿಶ್ಚಯವಾಗಿದೆ ಎಂದು ತಿಳಿದಮೇಲೆ ಅವನ ಮನಸ್ಸು ಕಟ್ಟುಹೋಗಿತ್ತು. ಅತಿ ಭಾವಜೀವಿಯಾಗಿದ್ದ ಅವನಿಗೆ ಪ್ರಪಂಚದ ವ್ಯವಹಾರದ ಒರಟುತನವಿನ್ನೂ ಅನುಭವಕ್ಕೆ ಬಂದಿರಲಿಲ್ಲ. ಅದರಲ್ಲಿಯೂ ಅವನಿಗೆ ತಿಳಿದಿದ್ದ ಪ್ರಣಯ ಪ್ರಪಂಚವೆಂದರೆ ಕಾವ್ಯದ ಕಿನ್ನರ ಜಗತ್ತು. ಸೀತೆಯ ಪ್ರೇಮ ತನ್ನೊಬ್ಬನಿಗೇ ಮೀಸಲು ಎಂದು ಭಾವಿಸಿದ್ದ ಆತನ ಅಭಿಮಾನಕ್ಕೆ ಲಗ್ನನಿಶ್ಚಯವಾರ್ತೆ ಒಂದು ಆಘಾತವಾಗಿ ಪರಿಣಮಿಸಿತ್ತು. ಆಕೆಯ ಮದುವೆಯನ್ನು ನಿಶ್ಚಯಿಸಿದವರು ಆಕೆಯ ಪಿತೃಗಳಾಗಿದ್ದರೂ ಸೀತೆಯ ಸಮ್ಮತಿಯೇ ಅದಕ್ಕೆ ಕಾರಣವೆಂದು ಹೂವಯ್ಯ ಹೇಗೋ ಕುತರ್ಕ ಮಾಡಿ, ತನ್ನ ಪರವಾಗಿದ್ದ ಆಕೆಯ ಪ್ರೇಮ ಹುಸಿ ಎಂದೂ ಆಕೆ ಇನ್ನುಮೇಲೆ ತನಗೆ ಪರಸ್ತ್ರೀಯಾಗಿಬಿಟ್ಟಳೆಂದೂ ಸಿದ್ಧಾಂತ ಮಾಡಿದ್ದನು.

ಹಾಗೆ ಸಿದ್ಧಾಂತಮಾಡಿದ್ದರಿಂದ ಅವನಿಗೇನೂ ನೆಮ್ಮದಿಯಿರಲಿಲ್ಲ. ಅವನ ಎದೆಯ ಉದ್ಯಾನಕ್ಕೆ ಕಿಡಿ ಕೂತು ಹೊತ್ತಿ ಹೊಗೆಯುತ್ತಿದ್ದಿತು. ಅವನ ಹಿಂದಿನ ತತ್ತ್ವದೃಷ್ಟಿ ಮೆಲ್ಲಮೆಲ್ಲನೆ ಮಾರ್ಪಡಲು ತೊಡಗಿತ್ತು. ಲೋಕವೂ ಜೀವನವೂ ಮಾಯೆ, ನಶ್ವರ, ಮೋಸ, ದಃಖಮಯ ಎಂಬ ಭಾವ ಮೊಳೆದೋರುತ್ತಿತ್ತು. ಒಂದು ಮಾತಿನಲ್ಲಿ ಹೇಳುವುದಾದರೆ ಮೊದಲು ಸಮುಲ್ಲಸಿತ ಆಶಾವಾದಿಯಾಗಿದ್ದವನು ಹತಾಶೆಯಿಂದ ಮೆಲ್ಲಮೆಲ್ಲಗೆ ನಿರಾಶಾವಾದಿಯಾಗುತ್ತಿದ್ದನು. ಬಾಳಿನಲ್ಲಿ ಜುಗುಪ್ಸೆ ಕಾಲಿಡುತ್ತಿತ್ತು. ಮನಸ್ಸಿನ ಮನೆಯಲ್ಲಿ ಹೊಗೆ ತುಂಬುತ್ತಿತ್ತು.

ಸೀತೆ ತನ್ನ ಉದಾರ ಪ್ರೇಮಕ್ಕೆ ವಂಚನೆಮಾಡಿದಳೆಂದು ಭಾವಿಸಿದ್ದ ಹೂವಯ್ಯ ಸ್ವಲ್ಪ ನಿಷ್ಪಕ್ಷಪಾತವಾಗಿ ವಿಚಾರಮಾಡಿದ್ದರೆ ನಿಜವಾಗಿಯೂ ಔದಾರ್ಯದಿಂದ ವರ್ತಿಸಬಹುದಾಗಿತ್ತು. ಅಲ್ಲದೆ ಭವಿಷ್ಯತ್ತಿನ ಗರ್ಭದಲ್ಲಿ ತನ್ನ ಇಂದ್ರಭವನವನ್ನು ನಿರುತಗೊಳಿಸಬಹುದಾಗಿತ್ತು. ಆದರೆ ಅವನ ಹೃದಯದಲ್ಲಿ ಪ್ರೇಮ ಔದಾರ್ಯದ ಹೆಸರಿನಲ್ಲಿ ಮಾತ್ಸರ್ಯವನ್ನು ಮುಚ್ಚುಮರೆಮಾಡಿಕೊಂಡು ಕೃಪಣವಾಗಿತ್ತು.