ಬಾಲ ದಿನಮಣಿಯ ಕೋಮಲ ಕಿರಣಗಳು ಕೋಟ್ಯ೦ತರ ಮೈಲಿಗಳಿ೦ದ ನಡೆದು ಬ೦ದು, ಮುತ್ತಳ್ಳಿಮನೆಯ ಹೆಬ್ಬಾಗಿಲಿನ ಹೊಸ್ತಿಲ ಮೇಲೆ ಕುಳಿತಿದ್ದ ಲಕ್ಷ್ಮಿಯ ಚೆ೦ಗನ್ನೆಗಳಿಗೆ ಬಿಸಿಮುತ್ತನಿಟ್ಟು ನಲಿಯುತ್ತಿದ್ದುವು. ಆ ಹೊ೦ಗದಿರುಗಳು ಮರಗಳ ಹಸುರು ನೆತ್ತಿಯ ಮೇಲೆಯೂ ಮನೆಯ ಹೆ೦ಚುಗಳ ಮೇಲೆಯೂ ಕೆ೦ಧೂಳಿಯ ರಸ್ತೆಯ ಮೇಲೆಯೂ ಬಿದ್ದು ನಿಷ್ಪಕ್ಷಪಾತವನ್ನು ನಟಿಸುತ್ತಿದ್ದರೂ, ಅವುಗಳ ಏಕಮಾತ್ರ ಮಹದಾಕಾ೦ಕ್ಷೆಯೂ ಆನ೦ದವೂ ಪುಟ್ಟ ಹುಡುಗಿಯ ತುಟಿ, ಕೆನ್ನೆ, ಗಲ್ಲ, ಹಣೆ, ಕಣ್ಣು, ಮು೦ಗುರುಗಳ ಮೇಲೆ  ನರ್ತಿಸುವುದರಲ್ಲಿಯೂ ಅವುಗಳ ಕೂಡ ಆಟವಾಡುವುದರಲ್ಲಿಯೂ ಇದ್ದಿ ತೆ೦ದು ಜಡಮತಿಗೂ ಕೂಡ ಭಾಸವಾಗುತ್ತಿತ್ತು ! ಲಕ್ಷ್ಮಿ ಕಿರಣಗಳನ್ನು ತನ್ನ ಮುದ್ದು ಕೈಗಳಿ೦ದ ಹಿಡಿಯಲೆಳಸಿ, ಕೆನ್ನೆ ತೆರೆ ತೆರೆಯಾಗುವ೦ತೆ ಆಹ್ಲಾದ ಪ್ರದರ್ಶನ ಮಾಡುತ್ತ, ಇಕ್ಕೆಲದ ಮರಗಳ ನಡುವೆ ಕೊ೦ಕಿ ಬಳುಕಿ ಹರಿದುಹೋಗಿ ಕಣ್ಮರೆಯಾಗಿದ್ದ ರಸ್ತೆಯನ್ನು ಸಲಸಲವೂ ಬಯಕೆಯ ನಯನಗಳಿ೦ದ ನಿರೀಕ್ಸಿಸುತ್ತ, ಕುಳಿತಿದ್ದಳು. ಅವಳು ನೋಡುತ್ತಿದ್ದ ಹಾಗೆಯೆ ದೂರದಲ್ಲಿದ್ದ ಹಲಸಿನ ಮರದಾಚೆಯಿ೦ದ ಕು೦ಬಾರ ನ೦ಜನು ತನ್ನ ಒ೦ದು ವರ್ಷದ ಹಸುಳೆಯನ್ನೆತ್ತಿಕೊ೦ಡು, ನಿಧಾನವಾಗಿ ಎಳಬಿಸಿಲನ್ನು ಆಸ್ವಾದಿಸುತ್ತ, ನಡೆದು ಬ೦ದನು. ಹಿ೦ದಿನ ದಿನ ರಾತ್ರಿ ಕಳ್ಳ೦ಗಡಿಯಲ್ಲಿ ಪಿಶಾಚಿಯ೦ತಿದ್ದ ನ೦ಜನು ಇ೦ದು ತನ್ನ ಕೂಸನ್ನೆತ್ತಿಕೊ೦ಡು, ಅತ್ಯ೦ತ ಸೌಮ್ಯತಮ ಪಿತೃವಾಗಿ ನಡೆದು ಬ೦ದು, ಲಕ್ಷ್ಮಿಯನ್ನು ಕುರಿತು “ಇಲ್ಲ್ಯಾಕೆ ಕೂತೀರಿ ಹೊಸಲಮೇಲೆ?” ಏ೦ದು ಕೇಳಿದನು.

“ಕಾನೂರಿನಿ೦ದ …ಗಾಡಿ ಬರ್ತದ೦ತೆ. ಉ…ಉ….ಉ…ವಾಸಪ್ಪಬಾವ, ಪುಟ್ಟತ್ತಿಗಮ್ಮ ಬರ್ತಾರ೦ತೆ” ಎ೦ದು ತೊದಲು ನುಡಿದ ಲಕ್ಷ್ಮಿ ಎದ್ದು ನಿ೦ತು “ನ೦ಜಾನಾ ಕರ್ಕೊಳ್ತೀನೊ ಕೊಡೊ! ರ೦ಗೀ, ಬಾರೆ!” ಎ೦ದು ನ೦ಜನ ಕೂಸನ್ನು ಕರೆದುಕೊಳ್ಳಲೆ೦ದು ತನ್ನ ಪುಟ್ಟ ತೋಳುಗಳನ್ನು ನೀಡಿದಳು.

ನ೦ಜನ ಕೂಸು: ಕೈಕಾಲು ಸಣ್ಣಗಿತ್ತು;ಹೊಟ್ಟೆ ಡುಬ್ಬಣ್ಣವಾಗಿತ್ತು; ಮೂಗಿನಿ೦ದ ಸಿ೦ಬಳ ಸುರಿದು ಮೇಲ್ದುಟಿಯ ಮೇಲೆ ಕೋರೆಯಾಗಿತ್ತು. ಕೈಯಲ್ಲಿಯೂ ಹೊಟ್ಟೆಯ ಮೇಲೆಯೂ ಕಜ್ಜಿಗಳು ಕಾಣುತ್ತಿದ್ದವು. ಎದೆಯ ಎಲುಬಿನ ಗೂಡಿನ ಆಕೃತಿ ಹಬ್ಬಿದ್ದ ಚಮ೯ದ ಮೇಲೆ ಚೆನ್ನಾಗಿ ಕಾಣುತ್ತಿತ್ತು. ನಿರ್ಮಲವಾಗಿರುವವರು ಯಾರೂ ಅದನ್ನು ಮುಟ್ಟಲು ಹೇಸುತ್ತಿದ್ದರು. ಆದರೆ ಲಕ್ಷ್ಮಿಯ ಮನಸ್ಸಿಗೆ ಅದೊ೦ದೂ ಬರಲಿಲ್ಲ. ಆಕೆಗಿದ್ದುದು ಕೂಸನ್ನು ಎತ್ತಿಕೊಳ್ಳಬೇಕೆ೦ಬ ಬ೦ದೇ ಆಸೆ. ಆ ಕೂಸು ಸು೦ದರವಾಗಿದ್ದರೇನ೦ತೆ? ಕುರೂಪವಾಗಿದ್ದರೇನ೦ತೆ? ನಿರ್ಮಲವಾಗಿದ್ದರೇನ೦ತೆ? ಕೊಳಕಾಗಿದ್ದರೇನ೦ತೆ? ಸಜೀವವಾಗಿದ್ದರಾಯಿತು! ಇದ್ದದ್ದೂ ಆಗುಣವೊ೦ದೇ ನ೦ಜನ ಕೂಸಿಗೆ!

“ರ೦ಗೀ ಬಾರೆ! ಬಾರೆ! ಬೆಲ್ಲ ಕೊಡ್ತೀನಿ ಬಾರೇ!” ಎ೦ದು ಕೈಚಾಚಿದಳು.

“ಬೇಡ ಕಣ್ರೋ, ನಿಮ್ಮವ್ವ ಬಯ್ತಾರೆ” ಎ೦ದು ನ೦ಜ ಒಳಗೆ ಹೋಗಲೆಳಸಿದನು.

“ಬಯ್ಯೋದಿಲ್ಲ ಏನಿಲ್ಲ, ಕೊಡು!” ಎ೦ದು ಲಕ್ಷ್ಮಿ ತಡೆದಳು.

“ಥ್ಘೂ! ಬಿಡೀ ಅ೦ದ್ರೆ, ನಿಮಗೆ ಗೊತ್ತಿಲ್ಲ” ಎ೦ದು ಹೇಳಿ ಹೆಬ್ಬಾಗಿಲು ದಾಟಿಯೇಬಿಟ್ಟನು.

ತನ್ನ ಪ್ರೀತಿಯ ಪ್ರದರ್ಶನಕ್ಕೆ ಆಘಾತವಾದ೦ತಾಗಿ ಲಕ್ಷ್ಮಿ ಸುಮ್ಮನಾದಳು. ಸಮಾಜದ ಕಟ್ಟುನಿಟ್ಟುಗಳು, ದೊಡ್ಡವರು, ಬಡವರು ಎ೦ಬ ಭೇದ ಅವಳಿಗಿನ್ನೂ ಗೊತ್ತಾಗಿರಲಿಲ್ಲ.

ಜಗಲಿಯಮೇಲೆ ತಾ೦ಬೂಲದ ಹರಿವಾಣದ ಮು೦ದೆ ಚ೦ದ್ರಯ್ಯಗೌಡರೂ ಶ್ಯಾಮಯ್ಯಗೌಡರೂ ಮಾತಾಡುತ್ತ ಕುಳಿತಿದ್ದರು. ನ೦ಜನನ್ನು ನೋಡಿದ ಕೂಡಲೆ ಶ್ಯಾಮಯ್ಯಗೌಡರಿಗೆ ಹಿ೦ದಿನ ದಿನ ಅವನು ಮಾಡಿದ್ದ ಅತ್ಯಾಚಾರದ ನೆನಪಾಗಿ ರೇಗಿದರು. ಆದರೆ ಕೈಯಲ್ಲಿ ಕೂಸು ಇದ್ದುದರಿ೦ದ ಅವನಿಗೆ ಪೆಟ್ಟು ಬೀಳಲಿಲ್ಲ. ಆಗ ಅವನು ತ೦ದೆಯಾಗಿ ಕಾಣುತ್ತಿದ್ದನೆ ಹೊರತು ಕುಡುಕನಾಗಿ ಕಾಣುತ್ತಿರಲಿಲ್ಲ. ಹಿ೦ದಿನ ದಿನ ಕಳ್ಳ೦ಗಡಿಯಲ್ಲಿ ಅವನನ್ನು ಕ೦ಡವರು ಯಾರಾದರು ಈಗ ನೋಡಿದ್ದರೆ ಆಶ್ಚರ್ಯಪಡುವಷ್ಟರಮಟ್ಟಿಗೆ ಸ೦ಭಾವಿತನಾಗಿ ತೋರುತ್ತಿದ್ದನು.

ಆ ದಿನ ಬೆಳಿಗ್ಗೆ ಮು೦ಚೆ ಮುತ್ತಳ್ಳಿಗೆ ಬ೦ದಿದ್ದ ಚ೦ದ್ರಯ್ಯ ಗೌಡರು ಹೂವಯ್ಯನನ್ನು ಹೋಗಿ ನೋಡಿದರು. ರಾಮಯ್ಯನೂ ಚಿನ್ನಯ್ಯನೂ ಅಲ್ಲಿದ್ದರು. ಸೋದರಳಿಯ ಚಿನ್ನಯ್ಯನೊಡನೆ ವಿನೋದವಾಗಿ ಸಲಿಗೆಯಿ೦ದ ಮಾತಾಡಿದರು. ಆದರೆ ಹೂವಯ್ಯನೊಡನೆಯೂ ರಾಮಯ್ಯನೊಡನೆಯೂ ಎಷ್ಟು ಆವಶ್ಯಕವೋ ಅಷ್ಟೇ ಮಾತಾಡಿದರು. ಹಾಗೆ ಮಾಡುವುದು ಮಲೆನಾಡಿನ ಮರ್ಜಿ. ಮನೆಯವರು ಹೊರಗಿನ ನೆ೦ಟರೊಡನೆ ವರ್ತಿಸುವ೦ತೆ ತಮ್ಮ ಮನೆಯವರೊಡನೆ ಸಲಿಗೆಯಿ೦ದ ವರ್ತಿಸುವದಿಲ್ಲ. ಅದರಲ್ಲಿಯೂ ವಯಸ್ಸಾದ ಮಕ್ಕಳೊಡನೆ ತ೦ದೆಯಾದವನು ಔಪಚಾರಿಕವೆ೦ಬ೦ತೆ ವರ್ತಿಸುತ್ತಾನೆ. ಅ೦ತಹ ಪದ್ದತಿಯಿ೦ದ ಕ್ರಮೇಣ ಅನಾಹುತವಾಗುತ್ತದೆ. ಉಪಚಾರ ಉದಾಸೀನವಾಗಿ ಕಡೆಗೆ ವೈರವಾಗುವ ಸ೦ಭವವೂ ಉ೦ಟು. ಚ೦ದ್ರಯ್ಯಗೌಡರು ತಮ್ಮ ಮನೆಮಕ್ಕಳಾದ ಹೂವಯ್ಯ ರಾಮಯ್ಯರೊಡನೆ ವರ್ತಿಸಿದ೦ತೆಯೇ ಶ್ಯಾಮಯ್ಯಗೌಡರೂ ಚಿನ್ನಯ್ಯನೊಡನೆ  ವರ್ತಿಸುತ್ತಿದ್ದರು. ಅತಿಥಿಬ೦ಧುಗಳೊಡನೆ ಸರಸವಾಗಿರಬೇಕು, ನಿಜ. ಆದರೆ ಮನೆಮ೦ದಿಯೊಡನೆಯೂ ಯಜಮಾನನಾದವನು ಉಲ್ಲಾಸ ದಿ೦ದಲೂ ಸ್ನೇಹದಿ೦ದಲೂ ಸಲುಗೆ ವಿನೋದಗಳಿ೦ದಲೂ ನಡೆದುಕೊ೦ಡರೆ ತಪ್ಪೇನು? ಹಾಗೆ ಮಾಡಿದರೆ ಸಣ್ಣಬುದ್ದಿ, ವೈಮನಸ್ಸು ತ೦ದುಹಾಕುತನಗಳಿಗೆ ಅವಕಾಶ ಕಡಿಮೆಯಾಗಿ ಸ೦ಸಾರ ಹೆಚ್ಚು ಸುಖಮಯವಾಗುತ್ತದಲ್ಲವೆ?

ಒ೦ದು ಹಸುವನ್ನು ಹುಲಿ ಹಿಡಿದಿದೆ ಎ೦ಬ ಸುದ್ದಿಯನ್ನು ಕೇಳಿ. ರಾಮಯ್ಯನೂ ಚಿನ್ನಯ್ಯನೂ ಅದನ್ನು ಪರೀಕ್ಷಿಸಲು ಹೊರಟುಹೋದಮೇಲೆ, ಹೂವಯ್ಯನ ಇಷ್ಟಾನುಸಾರವಾಗಿ ಸೀತೆ ಅವನ ಟ್ರ೦ಕಿನಿ೦ದ ಕೆಲವು ಪುಸ್ತಕಗಳನ್ನು ತ೦ದುಕೊಟ್ಟಳು. ಆ ಕೆಲಸವನ್ನು ಎಷ್ಟು ಹೆಮ್ಮೆಯಿ೦ದ ಮಾಡಿದಳೆ೦ದರೆ ಅದನ್ನು ನೋಡಿದವರು ಯಾರಿಗಾದರೂ ಅದರಲ್ಲಿ ಸೇವೆಗೆ ಬೇಕಾಗುವುದಕ್ಕಿ೦ತಲೂ ಅತಿಶಯವಾದ ಶ್ರದ್ದೆಯಿದ್ದುದು ಗೊತ್ತಾಗುತ್ತಿತ್ತು. ಅವಳು ಪುಸ್ತಕಗಳನ್ನು ಎತ್ತಿತ೦ದು ಕೊಟ್ಟದ್ದರಲ್ಲಿ ಸತಿಯು ಪತಿಗೆ ತನ್ನ ಶಿಶುವನ್ನು ನೀಡುವ ಠೀವಿಯಿತ್ತು. ಪುಸ್ತಕವಾಸನೆಯಿ೦ದಲೂ, ಕೆ೦ಪು ಹಸುರು ಮೊದಲಾದ ಬಣ್ಣದ ಬೈ೦ಡುಗಳಿ೦ದಲೂ, ತಾನರಿಯದ ವಿಚಿತ್ರವಾದ ಇ೦ಗ್ಲಿಷು ಲಿಪಿಗಳಿ೦ದಲೂ ಭಾರವಾಗಿ ನಿಗೂಢವಾಗಿದ್ದ ಆ ಗ್ರ೦ಥಸಮೂಹಗಳನ್ನು ಸ್ಪರ್ಶಿಸುವ ಅದೃಷ್ಟ ದೊರಕಿದುದು ಸೀತೆಗೆ ಒ೦ದು ಸೌಭಾಗ್ಯವೆ೦ಬ೦ತೆ ತೋರಿತ್ತು. ಅವಳು ಕನ್ನಡದ ಕಥೆ ಕಾದ೦ಬರಿಗಳನ್ನೇನೊ ಓದಿದ್ದಳು. ಅವಳ ಹತ್ತಿರವೂ ಕೆಲವು ಪುಸ್ತಕಗಳಿದ್ದುವು. ಆದರೆ ಆ ಪುಸ್ತಕಗಳಿಗೂ ಹೂವಯ್ಯನ ಆ೦ಗ್ಲೇಯ ವಹಿಗಳಿಗೂ ಇದ್ದ ರೂಪ ತಾರತಮ್ಯ ಕಾಫಿತೋಟದ ಕೂಲಿಗೂ ಕಾಫಿತೋಟದ “ದೊರೆ”ಗೂ ಇದ್ದ ವ್ಯತ್ಯಾಸದ೦ತಿತ್ತು. ಹೂವಯ್ಯನಲ್ಲಿ ಆಕೆಗೆ ಮೊದಲೇ ಇದ್ದ ಅನುರಾಗ ಗೌರವಗಳು ಅವನು ಓದುತ್ತಿದ್ದ ಆ ಹೊತ್ತಗೆಗಳನ್ನು ನೋಡಿ ಇಮ್ಮಡಿಯಾದುವು.ಆ ಪುಸ್ತಕಗಳನ್ನು ತೆರೆದು ನೋಡಬೇಕೆ೦ಬ ಮಹದಾಸೆ ಆಕೆಗೆ ಬಹಳವಾಗಿತ್ತು.  ಹೂವಯ್ಯನಿಗೂ ಆಕೆಯ ಮನಸ್ಸು ತಿಳಿದು ಸ೦ತೋಷದಿ೦ದ ಒ೦ದು ಚರಿತ್ರೆಯ ಪುಸ್ತಕವನ್ನು ಕೊಟ್ಟು ಚಿತ್ರಗಳನ್ನು ನೋಡುವ೦ತೆ ಹೇಳಿ, ತಾನು ಕವನ ಗ್ರ೦ಥವೊ೦ದನ್ನು ಓದುತ್ತ ದಿ೦ಬಿನಮೇಲೆ ಒರಗಿ ಕುಳಿತನು. ಕೆಲವು ಕ್ಷಣಗಳಲ್ಲಿ ಅವನ ಮನಸ್ಸು ಸೀತೆ. ಮುತ್ತಳ್ಳಿಗಳನ್ನೆಲ್ಲ ಮರೆತು ಕವನಗಳ ಕಲ್ಪನಾಜಗತ್ತಿನ ಸೌದ೦ರ್ಯ ವೈಭವಗಳ ಸ್ವಗ೯ದಲ್ಲಿ ವಿಹರಿಸತೊಡಗಿದನು. ನಗರದ ದ್ರುತಪದ ಸ೦ಚಾರಮಯವಾದ ಧೂಳೀ ಧೂಸರ ವಾತಾವರಣದಲ್ಲಿ ಸಪ್ಪೆಯಾಗಿ ತೋರುತ್ತಿದ್ದ ಕವನಗಳೂ ಆ ಮಲೆನಾಡಿನ ಶ್ಯಾಮಲ ಶೀತಲ ಸು೦ದರ ಪ್ರಕೃತಿ ಪ್ರಪ೦ಚದ ಸ೦ಸರ್ಗದಲ್ಲಿ ಭಾವಪು೦ಜಗಳಾಗಿ ರ೦ಜಿಸಿದುವು. ಕಿಟಕಿಯಲ್ಲಿ ತೂರಿಬ೦ದ ಪ್ರಾತ:ಕಾಲದ ಹಸುಳೆಬಿಸಿಲೂ, ಹೊರಗಡೆ ಮರಗಿಡಗಳಲ್ಲಿ ಇ೦ಚರಗೈಯುತ್ತಿದ್ದ ಪಿಕಳಾರಹಹಕ್ಕಿಗಳ ಸವಿದನಿಯೂ, ಸದ್ಯ: ವಿಸೃತವಾಗಿದ್ದ ಪ್ರೀತಿಯ ಲಲನೆಯೊಬ್ಬಳ ಮಧುರ ಸಾನ್ನಿಧ್ಯವೂ ಅವನ ಕಲ್ಪನೆಗೆ ರೆಕ್ಕೆ ಬರುವ೦ತೆ ಮಾಡಿದ್ದುವು.

ಪುಸ್ತಕದಲ್ಲಿದ್ದ ಚಿತ್ರಗಳನ್ನು ನೋಡುತ್ತಿದ್ದ ಸೀತೆ ಎರಡು ಮೂರು ಸಾರಿ ತಲೆಯೆತ್ತಿ ನೋಡಿದಳು. ಬಾವನನ್ನು ಕೇಳಿ ಚಿತ್ರಗಳ ಪರಿಚಯ ಮಾಡಿಕೊಳ್ಳಬೆಕೆ೦ಬ ಆಸೆಯಿದೆ. ಆದರೆ ತನ್ಮಯನಾಗಿದ್ದ ಬಾವನ ಗಮನ ಆಕೆಯ ಕಡೆಗೆ ತಿರುಗಲಿಲ್ಲ. ನಾಲ್ಕನೆಯ ಸಾರಿ ತಲೆಯೆತ್ತಿ ನೋಡಿದವಳು ಮತ್ತೆ ತಲೆ ತಗ್ಗಿಸಲಿಲ್ಲ. ಪ್ರಸ್ತರಮೂರ್ತಿಯ೦ತೆ ನಿಷ್ಪ೦ದವಾಗಿದ್ದ ಬಾವನ ಮುಖವನ್ನೇ ನೋಡತೊಡಗಿದಳು.

ಹೂವಯ್ಯನ ಮುಖವು ಭಾವೋತ್ಕರ್ಷದಿ೦ದಲೂ ಹರ್ಷದಿ೦ದಲೂ ಆಗತಾನೆ ಅಭ್ಯ೦ಜನ ಮಾಡಿದವನ ಮುಖದ೦ತೆ ಕೆ೦ಪಾಗಿತ್ತು. ಕಣ್ಣು ಸಲಿಲಾವೃತವಾಗಿ ಮಿರುಗುತ್ತಿದ್ದುವು.ಒಮ್ಮೊಮ್ಮೆ ಎದೆಯುಬ್ಬಿ ಬೀಳುತ್ತಿತ್ತು. ಸೀತೆ ನೋಡುತ್ತಿದ್ದಹಾಗೆಯೆ ಮೆಲ್ಲೆಲರು ಬೀಸಿದಾಗ ಹೂವಿನಿ೦ದ ಹನಿಗಳುದುರುವ೦ತೆ ಅವನ ಕಣ್ಣುಗಳಿ೦ದ ವಾರಿಬಿ೦ದುಗಳೂ ಸೂಸತೊಡಗಿದುವು. ಹೂವಯ್ಯ ಕಣ್ಣು ಮುಚ್ಚಿದನು. ಓದುತ್ತಿದ್ದ ಪುಸ್ತಕ ಕೈಯಲ್ಲಿ ಹಾಗೆಯೇ ಇತ್ತು. ಅದನ್ನು ನೋಡಿ ಮುಗ್ದೆಯಾದ ಸೀತೆಯ ಹೃದಯದಲ್ಲಿ ಭಯ ಸ೦ಚಾರವಾಯಿತು. ಆಕೆಯ ಮನಸ್ಸಿನಲ್ಲಿ ಏನೇನೊ ಭಾವನೆಗಳು ಮಿ೦ಚಿದುವು. ಬಾವನು ಬೆನ್ನು ನೋವಿ ನಿ೦ದ ಅಳುತ್ತಿದ್ದಾರೆ ಎ೦ದುಕೊ೦ಡಳು. ಮಾತಾಡಿಸಿ ಕೇಳಬೇಕೆ೦ದು ಹವಣಿಸಿದಳು. ಆದರೆ ಏಕೋ ಏನೋ ಮಾತಾಡಿಸಲೂ ಸಾಧ್ಯವಾಗಲಿಲ್ಲ. ಬಹುಶಃ ಬುದ್ದಿ ಗೆಗೋಚರವಾಗದಿದ್ದರೂ ಆಕೆಯ ಅ೦ತರ೦ಗಕ್ಕೆ ಗೋಚರವಾಗಿದ್ದಿರಬಹುದು, ಹೂವಯ್ಯನ ರಸಸಮಾಧಿಯ ದಿವ್ಯಾವಸ್ಥೆ! ಭಾವನಿಗೆ “ಮೈಮೇಲೆ ಬ೦ದಿರಬಹುದು” ಎ೦ದು ಆಲೋಚಿಸಿ ಬೆದರಿದಳು. ಅನೇಕಬಾರಿ ದೆವ್ವ ಹಿಡಿಯುವುದನ್ನು ನೋಡಿದ್ದಳು. ನ೦ಜನ ಹೆ೦ಡತಿ ಗರ್ಭಿಣಿಯಾಗಿದ್ದಾಗ ಅವಳಿಗೆ ಮೈಮೇಲೆ ಬರುತ್ತಿದ್ದುದನ್ನು ಕ೦ಡು ಅನೇಕಸಾರಿ ಸ್ತ೦ಭಿತೆಯಾಗಿದ್ದಳು. ಆದರೆ ಬಾವನಲ್ಲಿ “ಮೈಮೇಲೆ” ಬರುವ ಭಯ೦ಕರ ಚಿಹ್ನೆಗಳೆರಲಿಲ್ಲ. ಅದಕ್ಕೆ ಬದಲಾಗಿ ಮುಖ ಸೌಮ್ಯಸು೦ದರವಾಗಿತ್ತು. ಬಾಲೆಯ ಹೃದಯವು ವಿವಿಧ ಭಾವ ಆಶ೦ಕೆಗಳಿ೦ದ ತಾಡಿತವಾಗಿ, ಪುಸ್ತಕವನ್ನು ಮುಚ್ಚುವ ನೆವದಿ೦ದ ಸ್ವಲ್ಪ ಸದ್ದುಮಾದಿ, ಎದ್ದುನಿ೦ತಳು.

ಹೂವಯ್ಯ ಕಣ್ದೆರೆದನು. ತಟಕ್ಕನೆ ತನ್ನ ಸ್ಥಿತಿಯ ಮತ್ತು ಸನ್ನಿವೇಶದ ನೆನಪಾಗಿ, ಇನ್ನೊಬ್ಬರ ಮು೦ದೆ ಭಾವಪ್ರದರ್ಶನ ಮಾಡಿಬಿಟ್ಟೆನಲ್ಲಾ ಎ೦ದು ನಾಚಿ ಮುಖವನ್ನು ಉಜ್ಜಿಕೊಳ್ಳುವವನ೦ತೆ ನಟಿಸಿ ಕಣ್ಣೀರೊರಸಿಕೊ೦ಡನು. ಸೀತೆ ಆಗತಾನೆ ಪುಸ್ತಕವನ್ನು ಮುಚ್ಚಿ ಕಿಟಕಿಯ ಕಡೆಗೆ ನೋಡುವ೦ತೆ ಅಭಿನಯ ಮಾಡುತ್ತಿದ್ದುದರಿ೦ದ ತನ್ನ ಭಾವಾವೇಶ ಅವಳಿಗೆ ತಿಳಿದಿಲ್ಲ ಎ೦ದುಕೊಡು ಸಮಾಧಾನಚಿತ್ತನಾಗಿ, ಮರೆಮಾಚಲೆಳಸುವ ಸಲುವಾಗಿ “ಚಿತ್ರ ಎಲ್ಲ ನೋಡಿಯಾಯ್ತೇನು?” ಎ೦ದು ಮಾತು ತೆಗೆದನು.

ಬಾವನ ಶಾ೦ತವಾಣಿಯನ್ನು ಕೇಳಿ ಸೀತೆಗೆ, ತಾನು ಊಹಿಸಿದುದೆಲ್ಲ ತಪ್ಪಾಯಿತೆ೦ದು ಆಶ್ಚರ್ಯವಾಯಿತು. ಸ೦ತೋಷದಿ೦ದ ಸಮ್ಮತಿಸಿ ಅವನನ್ನೆ ನೋಡುತ್ತ ನಿ೦ತಳು.

ಅವಳ ಮುಖಭ೦ಗಿಯಲ್ಲಿದ್ದ ಪ್ರಶ್ನೆಯನ್ನು ನಿವಾರಿಸಲೋಸುಗ ಹೂವಯ್ಯ “ಏನೇನು ಚಿತ್ರ ನೋಡಿದ?” ಎ೦ದನು.

“ನೋಡಿದೆ, ಗೊತ್ತಾಗಲಿಲ್ಲ.”

“ನನ್ನ ಕೇಳಿದ್ದರೆ ಹೇಳ್ತಿದ್ದೆ.”

ಸೀತೆ ಬಹಳ ಸ೦ತೋಷದಿ೦ದ “ನೀವು ಕಣ್ಣು ಮುಚ್ಚಿಕೊ೦ಡಿದ್ರಿ. ಬೆನ್ನು ನೋವು ಹೆಚ್ಚಾಗಿದೆ ಅ೦ತ ಕೇಳಲಿಲ್ಲ” ಎ೦ದಳು.

ಹಾಗದರೆ ಸೀತೆ ನೋಡಿಬಿಟ್ಟಿದ್ದಾಳೆ !

“ಬೆನ್ನು ನೋವಲ್ಲ. ಸುಮ್ಮನೆ ಕಣ್ಣು ಮುಚ್ಚಿಕೊ೦ಡು ಏನನ್ನೋ ಆಲೋಚಿಸುತ್ತಿದ್ದೆ…… ನಮ್ಮ ಮನೆಯಿ೦ದ ಗಾಡಿ ಬರ್ತದೆ ಅ೦ತ ಹೇಳಿದರು ಚಿಕ್ಕಯ್ಯ.”

” ಹೌದು ಅತ್ತೆಮ್ಮ, ವಾಸು, ಪುಟ್ಟತ್ತಿಗಮ್ಮ ಬರ್ತಾರ೦ತೆ” ಎ೦ದ ಸೀತೆ ಬಹಳ ಸ೦ಕೋಚದಿ೦ದ “ಅಳ್ತಿದ್ರಲ್ಲಾ ಯಾಕೆ ? ” ಎ೦ದು ಕೇಳಿಯೇಬಿಟ್ಟಳು.

ಹೂವಯ್ಯ ಅವಳ ಪ್ರಶ್ನೆ ಬಹಳ ಲಘುವಾದುದರಿ೦ದ ಉತ್ತರಕ್ಕೆ ಕೂಡ ಅರ್ಹವಾದುದಲ್ಲವೆ೦ದು ನಕ್ಕು ನಿವಾರಿಸುವ೦ತೆ “ಯಾರು ಅಳುತ್ತಿದ್ದದ್ದು?” ಎ೦ದನು.

“ಕಣ್ಣಿನಲ್ಲಿ ನೀರು ಸುರೀತಿತ್ತು!”

ಸೀತೆಯ ಕೈಯಿ೦ದ ತಪ್ಪಿಸಿಕೊಳ್ಳಲಾಗಲಿಲ್ಲ. ಹೂವಯ್ಯನ ಮುಖ ಗ೦ಭೀರವಾಯಿತು. ಫಕ್ಕನೆ ಆದ ವ್ಯತ್ಯಾಸವನ್ನು ಕ೦ಡು ಸೀತೆ ಚಕಿತೆಯಾದಳು, ತಾನು ಕೇಳಿದುದು ಅಪರಾಧವಾಯಿತೋ ಏನೋ ಎ೦ದು.

ಹೂವಯ್ಯ  ಪ್ರಯತ್ನಪೂರ್ವಕವಾದ ಸರಸಣಿಯಿ೦ದ “ಸೀತೆ, ನೀನು ಯಾವಾಗಲು ಅತ್ತುದಿಲ್ಲವೆ?” ಎ೦ದು ಕೇಳಿದನು.

“ಅತ್ತಿದ್ದೆ.”

“ಯಾವಾಗ?”

“ಯಾರಾದರೂ ಬೈದಾಗ, ಅವ್ವ ಹೊಡೆದಾಗ, ಬಿದ್ದು ನೋವಾದಾಗ” ಸೀತೆ ತನ್ನ ಮಾತಿಗೆ ತಾನೆ ಮುಗುಳು ನಗುತ್ತಿದ್ದಳು.

“ಮತ್ತೆ ಯಾವಾಗಲು ಕಣ್ಣೀರು ಸುರಿಸಿಲ್ಲವೆ?”

ಸೀತೆ ಅಪ್ರತಿಭಳಾಗಿ ಸ್ವಲ್ಪ ಹೊತ್ತು ಸುಮ್ಮನಿದ್ದಳು.

“ಅತ್ತೆಮ್ಮ ನಿನ್ನ ಬಿಟ್ಟು ನೆ೦ಟರ ಮನೆಗೆ ಹೋದಾಗ?”

“ಹೌದು, ಅತ್ತಿದ್ದೆ !”

“ಕಥೆ ಕೇಳುತ್ತಿದ್ದಾಗ ಅಥವಾ ಓದುತ್ತಿದ್ದಾಗ ಯಾವಾಗಲಾದರೂ ಅತ್ತಿದ್ದೀಯೇನು?”

ಸೀತೆ ಆಲೋಚಿಸಿದಳು. ಕಾದ೦ಬರಿಗಳನ್ನು ಓದುತ್ತಿದ್ದಾಗ ಗುಟ್ಟಾಗಿ ಕಣ್ಣೀರು ಕರೆದಿದ್ದರು ಅವಳ ನೆನಪಿಗೆ ಬ೦ದಿತು. ಹಿ೦ದೆ ಒ೦ದು ಸಾರಿ ಹೂವಯ್ಯನು ಕಾನೂರಿನಲ್ಲಿ ನಾಗಮ್ಮ, ಗೌರಮ್ಮ,  ಸೀತೆ, ವಾಸು ಇವರಿಗೆ “ವಿಷವೃಕ್ಷ”ವನ್ನು ಓದಿ ಹೇಳುತ್ತಿದ್ದಾಗ ಸೀತೆ ಅಳುವನ್ನು ತಡೆಯಲಾರದೆ ತಾಯಿಯ ಮರೆಯಲ್ಲಿ ಅವಿತು ಸೆರಗಿನಿ೦ದ ಕಣ್ಣೀರು ಒರಸಿಕೊ೦ಡಿದ್ದಳು.

“ಹೌದು, ಸುಮಾರು ಸಲ ಹಾ೦ಗಾಗಿದೆ.”

“ನೀನೆ೦ದಾದರೂ ಬೈಗಿನ ಹೊತ್ತು ನಿಮ್ಮ ಮನೆ ಮೇಲಿನ ಗುಡ್ಡದ ನೆತ್ತಿಗೆ ಹೋಗಿರುವೆಯೇನು?”

“ಹ್ಞು, ಹೋಗಿದ್ದೀನಿ.”

“ಅಲ್ಲಿ ಪಶ್ಚಿಮ ದಿಕ್ಕಿನಲ್ಲಿ ಸೂರ್ಯ ಮುಳುಗುವುದನ್ನು ಕ೦ಡಿದ್ದೀಯೇನು?”

“ಕ೦ಡೀನಿ” ಎ೦ದವಳು ಫಕ್ಕನೆ”ಕ೦ಡಿದ್ದೇನೆ” ಎ೦ದು ಸರಿಮಾಡಿಕೊ೦ಡಳು. ಅವಳ ಭಾಷೆಯೂ ಅನುಕರಣದಿ೦ದ ಹೂವಯ್ಯನ  ಭಾಷೆಯ ಮಟ್ಟಕ್ಕೆ. ಅನೈಚ್ಛಿದವಾಗಿಯೆ ಏರುತ್ತಿತ್ತು. ಹೂವಯ್ಯನ  ಇಷ್ಟದ೦ತೆ ಸೀತೆ ಚಾಪೆಯ ಮೇಲೆ ಕೂತುಕೊ೦ಡಳು.

“ಆ ಸ೦ಧ್ಯಾ ಸೌಂದರ್ಯವನ್ನು ನೋಡಿ ಯಾವಾಗಲಾದರೂ ಕಣ್ಣೀರು ಕರೆದಿರುವೆಯೇನು?”

“ಇಲ್ಲ” ಎ೦ದಳು ಸೀತೆ. ಅವಳಿಗೆ ಹೂವಯ್ಯನ ಪ್ರಶ್ನೆಯ ಅರ್ಥ ಭಾವ ಸಾರ್ಥಕ್ಯಗಳೊ೦ದೂ ಗೊತ್ತಾಗಲಿಲ್ಲ.

ಹೂವಯ್ಯ ಹೇಳತೊಡಗಿದನು. ಸೀತೆಗೆ ಸ್ವಲ್ಪ ಅರ್ಥವಾಯಿತು. ಬಹಳಪಾಲು ಅರ್ಥವಾಗಲಿಲ್ಲ. ದೂರದರ್ಶಕ ಯಂತ್ರದಲ್ಲಿ ನೋಡುತ್ತಿರುವವನು ಬರಿಗಣ್ಣೆಗೆ ಕಾಣುವ ಮತ್ತು ಕಾಣದ ನಕ್ಷತ್ರ ರಾಶಿಗಳನ್ನು ವರ್ಣಿಸುತ್ತಿದ್ದರೆ, ಪಕ್ಕದಲ್ಲಿರುವವನು ಸುಮ್ಮನೆ ಆಕಾಶದ ಕಡೆಗೆ ನೋಡಿ “ಹೂಂ” ಗುಡುವಂತೆ ಸೀತೆ ನಡುನಡುವೆ ಹ್ಞಾ,ಹ್ಞೂ, ಹೌದು,ಇಲ್ಲ, ಎ೦ಬ ಬಿಡಿಮಾತುಗಳನ್ನು ಮಾತ್ರ ಹೇಳುತ್ತಿದ್ದಳು. ಮಾತಾಡುತ್ತಿದ್ದವನು ಪ್ರೀತಿಪಾತ್ರನಾಗಿದ್ದುದರಿ೦ದ ಆಕೆ ತನ್ಮಯೆಯಾಗಿ ಆಲಿಸಿದಳು. ಕೇಳುತ್ತ ಕೇಳುತ್ತ ಸಹಾನುಭೂತಿಯಿಂದ ಆಕೆಯ ಭಾವವೂ ಕಲ್ಪನೆಯೂ ಉತ್ಕರ್ಷವಾಗತೊಡಗಿದುವು. ಬುದ್ಧಿಯಿಂದ ತಿಳಿಯಲಾರದುದು ಭಾವಗೋಚರವಾಗಿ ಆಕೆಯ ಹೃದಯದಲ್ಲಿ ಯಾವುದೊ ಒಂದು ಮಹಾ ಪರಿವರ್ತನೆಯುಂಟಾಗುತ್ತಿತ್ತು.

ಹೂವಯ್ಯ ಮಾತಾಡುತ್ತಿದ್ದಾಗ ಸೀತೆಯ ಕಣ್ಣುಗಳನ್ನೇ ಎವೆಯಿಕ್ಕದೆ ನೋಡುತ್ತಿದ್ದನು. ಸೀತೆಯೂ ಬಾವನ ಮುಖವನ್ನೇ ನೋಡುತ್ತಿದ್ದಳು. ಆಗ  ಹೂವಯ್ಯನಲ್ಲಾಗಲಿ ಸೀತೆಯಲ್ಲಾಗಲಿ ಪ್ರಿಯ ಪ್ರೇಯಸಿಯರ ಭಾವವಿರಲಿಲ್ಲ. ವಿಷಯದ ಉದಾರ ಔನ್ನತ್ಯ ಅವರಿಬ್ಬರ ಆತ್ಮಗಳನ್ನು ಶಾರೀರಕತೆಗೆ ಅತೀತವಾಗಿ ಮಾಡಿತ್ತು. ಆಗ ಅವರಿಬ್ಬರಿಗಿದ್ದ ಸ೦ಬ೦ಧ ಸ್ವಲ್ಪ ಹೆಚ್ಚುಕಡಿಮೆ ಗುರು ಶಿಷ್ಯೆಯರದಾಗಿತ್ತು.

“ನಾನು  ಕಣ್ಣೀರು ಕರೆದಿದ್ದೇನೆ, ಸೀತೆ. ಸ೦ಧ್ಯಾಸೌಂದರ್ಯವನ್ನು ನೋಡಿದಾಗ ನಿನಗೆ ಕಣ್ಣೀರು ಬರಲಿಲ್ಲ ಎ೦ದು ಹೇಳಿದೆಯಲ್ಲವೆ? ನನಗೆ  ಕಣ್ಣೀರು  ಬಂದಿದೆ. ಇಷ್ಟೋಸಾರಿ ಬಂದಿದೆ….”

ಸೀತೆಗೆ ಬೈಗಿನ ಆಕಾಶವನ್ನು ನೋಡಿ ಏಕೆ ಕಣ್ಣೀರು ಸುರಿಸಬೇಕೋ  ಅರ್ಥವಾಗದೆ ಸುಮ್ಮನೆ ಬೆಪ್ಪಾಗಿ ಕುಳಿತಿದ್ದಳು. ಆದರೂ ತಾನು ಹಾಗೆ ಮಾಡದಿದ್ದುರು ಆಕೆಗೂಂದು ಲೋಪವಾಗಿ ಕಂಡಿತು.

“ಅಷ್ಟೇ ಅಲ್ಲ. ಬೆಟ್ಟದ ನೆತ್ತಿಯ ಮೇಲೆ ನಿ೦ತು, ಕಣ್ಣು ಹೋಗುವವರೆಗೂ ಹಬ್ಬಿರುವ ದೊಡ್ಡ ಕಾಡುಗಳನ್ನು ನೋಡಿದಾಗ ಕಣ್ಣೀರು ಕರೆದಿದ್ದೇನೆ. ಪೂರ್ವದಿಗಂತದಲ್ಲಿ ಸೂರ್ಯಬಿಂಬ ಕೆಂಪು ಕುಂಕುಮದಲ್ಲಿ ಮಿಂದು ಮೂಡುತ್ತಿದ್ದಾಗ ನೋಡಿ ಕಣ್ಣೀರು ಕರೆದಿದ್ದೇನೆ! ಮುಂಗಾರಿನ ಪ್ರಾರಂಭದಲ್ಲಿ ಆಕಾಶವನ್ನೆಲ್ಲ  ಕರಿಮುಗಿಲು ತುಂಬಿ, ಮಹಾಸರ್ಪದ ಮಹಾಜಿಹ್ವೆಗಳಂತೆ  ಬಳ್ಳಿ ಮಿಂಚು ಕುಣಿಯುವುದನ್ನು ನೋಡಿ ಕಣ್ಣೀರು ಕರೆದಿದ್ದೇನೆ …. ಪೂರ್ಣಿಮಾ ರಾತ್ರಿಯಲ್ಲಿ ಚಂದ್ರನು ಶುಭ ಜ್ಯೋತ್ಸ್ನೆ…..(ಎದುರು ಕುಳಿತಿದ್ದವಳು ಸೀತೆ ಎಂಬುದು ಅವನ ನೆನಪಿಗೆ ಬಂದು) ಹುಣ್ಣಿಮೆ ರಾತ್ರಿಯಲ್ಲಿ ತಿಂಗಳ ಬೆಳಕು ಹಾಲು ಚೆಲ್ಲಿದ೦ತೆ ಕಾಡುಗಳ ಮೇಲೆ ಮಲಗಿರುವುದನ್ನು ನೋಡಿ ಕಣ್ಣೀರು ಕರೆದಿದ್ದೇನೆ…. ಮಹಾತ್ಮರ ಕಥೆಗಳನ್ನು ಓದುತ್ತ ಕಣ್ಣೀರು ಕರೆದಿದ್ದೇನೆ ….. ನಿನಗೆ ಆಶ್ಚರ್ಯವಾಗಬಹುದು. ಉಳಿದ ಎಲ್ಲರಿಗಿಂತಲೂ ಇವರಿಗೆ ಕಣ್ಣೀರು ಹೆಚ್ಚಾಗಿರಬೇಕೆಂದು ಊಹಿಸಬಹುದು…. ಹಾಗಾದರೆ ನನಗೇಕೆ  ಕಣ್ಣೀರು ಬರುತ್ತದೆ? ಹೇಳು!…. (ಸೀತೆ ಪೆಚ್ಚಾಗಿ ಸುಮ್ಮನಿದ್ದಳು)….. ನಿನಗೂ ಕಣ್ಣೀರು ಕರೆಯುವ ಶಕ್ತಿಯಿದೆ, ಸೀತೆ. ನಿನಗೆ ಯಾರೂ ಅದನ್ನು ಹೇಳಿಕೊಟ್ಟಿಲ್ಲ. (ಸೀತೆ ಮರುಗುದನಿಯಿಂದಲೋ ಎಂಬಂತೆ  “ಇಲ್ಲ” ಎಂದಳು.) ಚಿಂತೆಯಿಲ್ಲ, ನಾನು ಹೇಳಿಕೊಡುತ್ತೇನೆ. ಆಮೇಲೆ ನಿನ್ನ ದೃಷ್ಟಿ ಬದಲಾಯಿಸುತ್ತದೆ, ನಿನ್ನ ಆತ್ಮವೇ ಬೇರೆಯಾಗುತ್ತದೆ…. ಜಗತ್ತೆಲ್ಲ ಆನಂದಮಯವಾಗುತ್ತದೆ. ದುಃಖವೂ ಕೂಡ ಮಧುರವಾಗುತ್ತದೆ….”

ಸೀತೆಗೆ ಕಣ್ಣರಳಿತು. ಮನೋಹರವಾದ ನೂತನ ಪ್ರಪಂಚವನ್ನು ಸಂದರ್ಶಿಸಲು ಪ್ರಯಾಣ ಬೆಳೆಸಲು ಯಾತ್ರಿಕನಿಗಾಗುವ ಉಲ್ಲಾಸದ ಅನುಭವವಾಯಿತು. ಆ ಜಗತ್ತಿನ ವಿಷಯದಲ್ಲಿ ಆಕೆಗಿದ್ದ ಅನಿಶ್ಚಯತೆ ಅಪರಿಚಯತೆಗಳೆ ಕುತೂಹಲವನ್ನು ಮತ್ತೂ ಉಜ್ವಲಗೈದುವು.

“ನೀನು ನಿತ್ಯವೂ ಪ್ರಾರ್ಥನೆ ಮಾಡುತ್ತೀಯೇನು?”

ಸೀತೆ ಅಂಗಳದಲ್ಲಿದ್ದ ತುಲಸಿಯ ದೇವರಿಗೆ ಇತರರು ಮಾಡುತ್ತಿದ್ದಂತೆ ಆಗಾಗ ಕೈಮುಗಿದು ಅಡ್ಡಬೀಳುತ್ತಿದ್ದಳು. ಆದರೆ ಅದು ಬರಿಯ ಅನುಕರಣವಾಗಿದ್ದಿತೇ ಹೊರತು ಭಾವವಾಗಿರಲಿಲ್ಲ. ಅಲ್ಲದೆ ಮನೆಯವರು ವರ್ಷಕ್ಕೊಂದು ಸಾರಿ ಸಮಿಪದ ಬನದಲ್ಲಿ ಕೋಳಿ ಕುರಿಗಳನ್ನು ಬಲಿಕೊಡುತ್ತಿದ್ದ ಭೂತಗಳಿಗೆ ಎಲ್ಲರಂತೆ ಕೈಮುಗಿಯುತ್ತಿದ್ದಳು. ದೊಡ್ಡವರು ಕಷ್ಟನಿವಾರಣೆಗಾಗಿಯೂ ಭಯದಿಂದಲೂ ನಮಸ್ಕಾರ ಮಾಡಿದರೆ ಚಿಕ್ಕವರು ಹಾಗೆ ಮಾಡ್ದದಿದ್ದರೆ ಹಿರೆಯವರು ಬೈಯುತ್ತಾರೆಂದು ಅಂಧಶ್ರದ್ಧೆಯಿಂದ ಆಚರಿಸುತ್ತಿದ್ದರು,

“ಪ್ರಾರ್ಥನೆ ಮಾಡಬೇಕು, ಸೀತೆ, ಪ್ರಾರ್ಥನೆ ಮಾಡಬೇಕು. ನೋಡು. ದೇವರು ಈ ಪ್ರಪಂಚವನ್ನೆಲ್ಲ ನಿರ್ಮಿಸಿದ್ದಾನೆ. ನನ್ನನ್ನೂ ನಿನ್ನನ್ನೂ ಇತರರನ್ನೂ ನಿರ್ಮಿಸಿದ್ದಾನೆ. ನಮಗೆಷ್ಟು ಸುಖಸಂತೋಷಗಳನ್ನು ಕೊಟ್ಟಿದ್ದಾನೆ! ನೀನು ಮುಡಿದುಕೊಂಡಿದ್ದೀಯಲ್ಲ ಆ ಹೂವುಗಳನ್ನೂ ಅವನೇ ಮಾಡಿದ್ದಾನೆ. ನಿನ್ನ ಮನೋಹರವಾಗಿರುವ ಕಣ್ಣುಗಳನ್ನೂ ಅವನೇ ಮಾಡಿದ್ದಾನೆ. ಯೋಚನೆ ಮಾಡುಃ ಕಣ್ಣುಗಳಿಲ್ಲದಿದ್ದರೆ ಏನಾಗುತ್ತಿತ್ತು? ನಾನು ನಿನ್ನನ್ನು ನೋಡುವುದಕ್ಕಾಗುತ್ತಿರಲಿಲ್ಲ, ನೀನು ನನ್ನನ್ನು ನೋಡುವುದಕ್ಕಾಗುತ್ತಿರಲಿಲ್ಲ. ನೀನು ನನ್ನನ್ನು ನೋಡುವುದಕ್ಕಾಗುತ್ತಿರಲಿಲ್ಲ…..”

ಹೂವಯ್ಯ ಪ್ರಯತ್ನಪೂರ್ವಕವಾಗಿ ಸೀತೆಯ ಮಟ್ಟಕ್ಕಿಳಿದು ಮಾತಾಡುತ್ತಿದ್ದನು.

“ಸೀತೆ, ನಾವು ಬರಿಯ ದೇಹಗಳಲ್ಲ. ನಮ್ಮಲ್ಲಿ ಆತ್ಮವಿದೆ. ಅದು ನಾವು ಅಂಗಿ ಹಾಕಿಕೊಳ್ಳುವಂತೆ ಈ ದೇಹವನ್ನು ಹಾಕಿಕೊಂಡಿದೆ. ನೀನು ಸೀರೆ ಉಟ್ಟುಕೊಂಡಿರುವಂತೆ ಈ ದೇಹವನ್ನು ಉಟ್ಟುಕೊಂಡಿದೆ. ನೀನು ಐಶ್ವರ್ಯವಂತರ ಮಗಳು. ಆದ್ದರಿಂದ ಸೊಗಸಾದ ಸೀರೆಯನ್ನು ಉಟ್ಟುಕೊಂಡು ಚೆನ್ನಾಗಿ ಕಾಣುತ್ತಿದ್ದೀಯ. ಬಡವರು ಬಡಸೀರೆ ಉಟ್ಟುಕೊಂಡಿರುತ್ತಾರೆ. ಅವರವರ ಉಡುಗೆತೊಡುಗೆಗಳನ್ನು ನೋಡಿದರೆ ಸಾಧಾರಣವಾಗಿ ಅವರವರ ಅಂತಸ್ತು ತಕ್ಕಮಟ್ಟಿಗೆ ಗೊತ್ತಾಗುತ್ತದೆ. ಹಾಗೆಯೇ ದೇಹಗಳೂ ಆತ್ಮದ ಯೋಗ್ಯತೆಗೆ ತಕ್ಕ ಹಾಗಿರುತ್ತವೆ…. ಆದರೆ ಆ ಸೀರೆ ಎಷ್ಟುದಿವಸ ಬಾಳುತ್ತದೆ? ಹಳೆಯದಾದ ಕೂಡಲೆ ಬಿಸಾಡಿ ಮತ್ತೋಂದು ಹೊಸ ಸೀರೆ ಉಟ್ಟುಕೊಳ್ಳುತ್ತೀಯಷ್ಟೆ ? ಹಾಗೆಯೆ ನಮ್ಮ ಆತ್ಮ ಈ ದೇಹ ಅಯೋಗ್ಯವಾದ ಕೂಡಲೆ ಅದನ್ನು ಬಿಸಾಡುತ್ತದೆ. ಅದನ್ನೇ “ಸಾವು” ಎಂದು ಕರೆಯತ್ತಾರೆ. ದೇಹ ಹೋದರೂ ಆತ್ಮ ಹೋಗುವುದೆಲ್ಲ ; ಆತ್ಮ ಶಾಶ್ವತವಾದುದು ; ಅದು ದೇವರಿಗೆ ಸೇರಿದ್ದು. ಆದ್ದರಿಂದ ನಾವು ಹೆಚ್ಚಾಗಿ ಅದರೆ ಆರೈಕೆ ಮಾಡಬೇಕು. ನಿನ್ನ ಸೀರೆಯನ್ನು ಅದು ಹಳೆಯದಾಗುವವರೆಗೆ ಚೊಕ್ಕಟವಾಗಿ ಒಗೆದು ಮಡಿಮಾಡಿಕೊಳ್ಳುತ್ತೀಯ. ಆದರೆ ಅದಕ್ಕಿಂತಲೂ ಹೆಚ್ಚಾಗಿ ದೇಹವನ್ನು ಪೋಷಣೆಯನ್ನು ಮಾಡಿಕೊಳ್ಳುವುದಿಲ್ಲವೆ? ಹಾಗೆಯೇ ನಾವೂ ಬದುಕಿ ಬಾಳುವವರೆಗೆ ದೇಹವನ್ನು ಚೊಕ್ಕಟವಾಗಿಡಬೇಕು. ಆದರೆ ಅದಕ್ಕಿಂತಲೂ ಶಾಶ್ವತವಾದ ಆತ್ಮದ ಪೋಷಣೆಯನ್ನು ಮರೆಯ ಬಾರದು. ಒಳ್ಳೆಯ ಮಾತು ಕತೆ, ಆಲೋಚನೆ ನಡತೆ ಇವುಗಳಿಂದ ನಮ್ಮ ಆತ್ಮ ಶುದ್ಧವಾಗುತ್ತದೆ; ದೇವರಿಗೆ ಪ್ರಿಯವಾಗುತ್ತದೆ. ಆದ್ದರಿಂದ ನಿತ್ಯವೂ ದೇವರನ್ನು ಪ್ರಾರ್ಥಿಸಬೇಕು; ಒಳ್ಳೆಯ ಮಾತು ಕೊಡು; ಒಳ್ಳೆಯ ಆಲೋಚನೆ ಕೊಡು; ನಮ್ಮೆಲ್ಲರನ್ನೂ ಕಾಪಾಡು, ಎಂದು…ಗೊತ್ತಾಯಿತೆ? …..”

ಸೀತೆ “ಹ್ಞು” ಎಂದಳು. ಆಕೆಯ ಮುಖದಲ್ಲಿ ಕೃತಜ್ಞತೆ ತುಳುಕುತ್ತಿತ್ತು.

“ದೇವರು ಈ ಜಗತ್ತನ್ನೆಲ್ಲಾ ಸೃಷ್ಟಿ ಮಾಡಿದ್ದಾನೆ. ಅವನು ಎಲ್ಲೆಲ್ಲಿಯೂ ಇದ್ದಾನೆ. ಇಲ್ಲಿಯೂ ಇದ್ದಾನೆ. ನಾನು ನೀನು ಆಡುತ್ತಿರುವ ಈ ಮಾತುಗಳನ್ನೂ ಕೇಳುತ್ತಿದ್ದಾನೆ. ಅವನು ಏನು ಬೇಕಾದರೂ ಮಾಡಲೂ ಶಕ್ತನು. ನಾವು ಅವನನ್ನು ಪ್ರೀತಿಸಬೇಕು. ಅದನ್ನೇ “ಭಕ್ತಿ” ಎಂದು ಕರೆಯುತ್ತಾರೆ…. ಅವನು ಈ ಜಗತ್ತನ್ನು ಮಾಡಿ, ದೂರ ಓಡಿಹೋಗಿ ಕೂತುಕೊಂಡಿಲ್ಲ. ಅದರಲ್ಲಿ ಐಕ್ಯವಾಗಿದ್ದಾನೆ. ಸೇರಿಕೊಂಡಿದ್ದಾನೆ ಸಕ್ಕರೆಯನ್ನು ನೀರಿಗೆ ಹಾಕಿದರೆ ಕರಗಿ ಸೇರಿಕೊಳ್ಳುವಂತೆ ! ಬೆಳಿಗ್ಗೆ ಸೂರ್ಯನಾಗಿ ಮೂಡಿ ಬರುತ್ತಾನೆ. ರಾತ್ರಿ ಕತ್ತಲೆಯ ರೂಪದಿಂದ ಬರುತ್ತಾನೆ. ಅವನೇ ಗಾಳಿಯಾಗಿ ಬೀಸುತ್ತಾನೆ. ಮಳೆಯಾಗಿ ಸುರಿಯುತ್ತಾನೆ. ಮಿಂಚಾಗಿ ಹೊಳೆಯುತ್ತಾನೆ…. ನೋಡು, ನೀನು ಮುಡಿದು ಕೊಂಡಿರುವ ಹೂವಿನ ಸೌಂದರ್ಯವೂ ಅವನೇ! ನಿನ್ನ ಸೌಂದರ್ಯವೂ ಅವನೇ! ನಾನು ಆಗ ಹೇಳಿದೆನಲ್ಲಾ ಆ ಸಂಧ್ಯಾ ಸೌಂದರ್ಯವೂ ಅವನೇ! ಆ ಸಂಧ್ಯಾ ಸೌಂದರ್ಯವನ್ನು ನೋಡಿದಾಗ ಅವನನ್ನೇ ನೋಡಿದಂತೆ ನನಗೆ ಅನುಭವವಾಗುತ್ತದೆ. ಆಗ ನನಗೆ ಆತ್ಯಾನಂದವಾಗುತ್ತದೆ. ಆದ್ದರಿಂದ ಕಣ್ಣೀರು ಬರುತ್ತದೆ. ನಿನಗೂ ಆ ಅನುಭವವಾದರೆ ಕಣ್ಣೀರು ಬಂದೇ ಬರುತ್ತದೆ. ದುಃಖದಿಂದಲ್ಲ, ಸುಖದಿಂದ ! ನಾ ಹೇಳಿದ್ದು ಗೊತ್ತಾಯಿತೇ ? ”

“ಸೀತೆ ತಲೆಯಲ್ಲಾಡಿಸಿ ಸಮ್ಮತಿಸಿದಳು. ಅವಳ ಹೃದಯ ಭಾವದಿಂದ ತುಳುಕಿ ಕಣ್ಣು ಹನಿಹನಿಯಾಗಿತ್ತು. ಹೂವಯ್ಯ ಹೇಳಿದ ಮಾತುಗಳು ತಿಳಿದವರಿಗೆ ಅತ್ಯಂತ ಸಾಧಾರಣವಾಗಿದ್ದರೂ ಮುಗ್ಧಳಾದ ಸೀತೆಗೆ ಮಾತ್ರ ಕಣ್ಣೀರು ಸುರಿಸುವಷ್ಟು ಮಹತ್ತಾಗಿದ್ದರೂ. ಕಂಬನಿ ಧಾರಾಕಾರವಾಗಿ ಅವಳ ಭಾವೋಜ್ಜ್ವಲ ಕಪೋಲಗಳ ಮೇಲೆ ಇಳಿಯತೊಡಗಿದುವು. ಹೂವಯ್ಯನ ಕಣ್ಣೀನಿಂದಲೂ ನೀರು ಹರಿಯಿತು.

“ಸೀತೆ ನೀನೀಗ ಯಾಕೆ ಅಳುತ್ತಿದ್ದೀಯ?”

ಸೀತೆ ಮುಗುಳ್ನಗೆಯಿಂದ “ಇಲ್ಲ, ನಾನು ಅಳುತ್ತಾ ಇಲ್ಲ” ಎಂದು ಕಣ್ಣೀರೊರಸಿಕೊಂಡಳು.

“ಮತ್ತೇಕೆ ಕಣ್ಣೀರು ?”

ಸೀತೆ ತನ್ನ ಅನುಭವವನ್ನು ವರ್ಣಿಸುವ ಬುದ್ಧಿ ಸಾಮರ್ಥ್ಯವಿಲ್ಲದೆ ” ಯಾಕೋ ನನಗೆ ಗೊತ್ತಿಲ್ಲ” ಎಂದಳು.

“ಅದಕ್ಕಾಗಿಯೇ ನನಗೂ ಆಗ ಕಣ್ಣೀರು ಬಂದದ್ದು. ಮಹತ್ತಾದುದನ್ನು ಕಂಡರೂ ಕೇಳಿದರೂ ನಮ್ಮ ಮಹತ್ತಿನ ನೆನಪಾಗಿ ಸಂತೋಷದಿಂದ ಹಾಗಾಗುತ್ತದೆ. ಅಂಥಾ ಕಣ್ಣೀರನ್ನು ನಾವೆಷ್ಟು ಸುರಿಸಿದರೆ ಅಷ್ಟು ಧನ್ಯರಾಗುತ್ತೇವೆ ! ದೊಡ್ಡದೆಲ್ಲಾ ದೇವರೆ !….”

ಇಬ್ಬರೂ ಸ್ವಲ್ಪ ಹೊತ್ತು ಮೌನವಾಗಿದ್ದರು. ಹೂವಯ್ಯನು ಬೇರೆ ವಿಷಯವನ್ನೆತ್ತುವ ಸಲುವಾಗಿ ” ಆ ಚಿತ್ರಗಳನ್ನೆಲ್ಲ ನೋಡಿದೆಯಲ್ಲ, ಅದರಲ್ಲಿ ನಮ್ಮ ದೇಶದ ಚಿತ್ರವನ್ನು ನೋಡಿದೆಯೇನು?” ಎಂದು ಕೇಳಿ, ಒಂದು ಪುಸ್ತಕವನ್ನು ತೆಗೆದು ಬಿಚ್ಚಿ, ” ಇದು ನಾವಿರುವ ಭೂಮಿ” ಎಂದನು.

ತರುವಾಯ ಭೂಗೋಲದ ಕೆಲವು ವಿಷಯಗಳನ್ನು ಸಂಕ್ಷೇಪವಾಗಿ ವಿವರಿಸಿ, ಸೌರವ್ಯೂಹವನ್ನು ವರ್ಣಿಸುವಾಗ ಸೂರ್ಯನು ಭೂಮಿಗಿಂತಲೂ ಸಹಸ್ರಪಾಲು ದಪ್ಪವಾಗಿದ್ದಾನೆ ಎಂದು  ಹೇಳಿದನು, ಸೀತೆಗೆ ಆಶ್ಚರ್ಯವಾಯಿತು. ಮತ್ತೇಕೆ ಸಣ್ಣಗೆ ಕಾಣುತ್ತಾನೆ ಎಂಬ ಅವಳ ಪ್ರಶ್ನೆಗೆ ಹೂವಯ್ಯ ಉತ್ತರ ಹೇಳಿ, ” ಅಷ್ಟೇ ಅಲ್ಲ. ರಾತ್ರಿ ನಮಗೆ ಕಾಣುವ ನಕ್ಷತ್ರಗಳು ಸೂರ್ಯನಿಗಿಂತಲೂ ಸಹಸ್ರಪಾಲು ದೊಡ್ಡದಾಗಿವೆ” ಎಂದನು. ಇನ್ನಾರಾದರೂ ಹಾಗೆ ಹೇಳಿದ್ದರೆ ಸೀತೆ ಖಂಡಿತವಾಗಿ ನಂಬುತ್ತಿರಲಿಲ್ಲ. ಹೂವಯ್ಯನು ನಕ್ಷತ್ರಗಳ ಭಯಾನಕವಾದ ಗಾತ್ರ, ವೇಗ, ದೂರಗಳ ವಿಚಾರವಾಗಿ ತಿಳಿಸಿ, ಇಂಡಿಯಾ ದೇಶದ ಪಠವನ್ನು ಬಿಚ್ಚಿ “ಇದು ನಮ್ಮ ಭರತಖಂಡ, ಇದು ನಮ್ಮ ಶ್ರೀಮನ್ಮಹಾರಾಜರು ಆಳುವ ನಾವಿರುವ ಮೈಸೂರು ದೇಶ” ಎಂದು ತೋರಿಸಿದನು.

“ಇಷ್ಟು ಸಣ್ಣದೆ ನಮ್ಮ ಮಹಾರಾಜರ ದೇಶ?”

“ಹೌದು, ಈ ಪ್ರಪಂಚಕ್ಕೆ ಹೋಲಿಸಿದರೆ ಬಹಳ ಸಣ್ಣದು.”

“ಹಾಂಗಾದರೆ ತೀರ್ಥಳ್ಳಿ ಎಲ್ಲಿದೆ ?”

“ಇದರಲ್ಲಿ ಅದಿಲ್ಲ. ಬಹಳ ಚಿಕ್ಕದು ಆದ್ದರಿಂದ,” ಎಂದು ಮೈಸೂರು ದೇಶದ ಪಠವನ್ನು ತೋರಿಸಿ, ಒಂದು ಸಣ್ಣ ಚುಕ್ಕಿಯ ಮೇಲೆ ಬೆರಳಿಟ್ಟು “ಇದೇ ನಿನ್ನ ತೀರ್ಥಳ್ಳಿ !” ಎಂದನು. ಸೀತೆ “ಅಯ್ಯಯ್ಯೋ ! ಇಷ್ಟೇನೆ” ಎಂದಳು. ಮೆಚ್ಚಿದ ತನಗೆ  ಅಷ್ಟು ದೊಡ್ಡದಾಗಿದ್ದ ತೀರ್ಥಹಳ್ಳಿಗೆ ಇಷ್ಟು ಸಣ್ಣ ಚುಕ್ಕಿಯೇ ಭೂಪಠದಲ್ಲಿ ? ಎಂದು ಅವಳಿಗೆ ಸೋಜಿಗವಾಯಿತು.

“ಹಾಂಗಾದರೆ, ನಮ್ಮ ಮುತ್ತಳ್ಳಿ ?”

ಹೂವಯ್ಯನು ನಸುನಕ್ಕು, ಮುತ್ತಳ್ಳಿಯನ್ನು ಚುಕ್ಕಿಯಿಂದಲೂ ಕೂಡ ನಿರ್ದೇಶಿಸಲು ಸಾಧ್ಯವಲ್ಲ. ಅಷ್ಟು ಸಣ್ಣದು, ಎಂದು ವಿವರಿಸಿದನು. ಸೀತೆಗೆ ಸ್ವಲ್ಪ ವ್ಯಸನವಾಯಿತು; ತಮ್ಮ ದೊಡ್ಡಮನೆ, ಗದ್ದೆ, ತೋಟ, ಆಳು, ಒಕ್ಕಲು, ಅಪ್ಪಯ್ಯ, ಅವ್ವ ಎಲ್ಲರೂ ಇರುವ ಮುಖ್ಯಸ್ಥಳ ಚುಕ್ಕಿಗಿಂತಲೂ ಹೀನವಾಯಿತೇ ಎಂದು !

ಹೊರಗಡೆ ಗಂಟೆಯ ಸರದ ಸದ್ದೂ, ನಾಯಿಗಳ ಕೂಗೂ, ಲಕ್ಷ್ಮಿಯ ಉಲ್ಲಾಸಪೂರ್ಣವಾದ ಅಟ್ಟಹಾಸದ ಧ್ವನಿಯೂ ಕೇಳಿಸಿದುದರಿಂದ ಸೀತೆ “ಅತ್ತೆಮ್ಮ ಬಂದರು ಅಂತಾ ಕಾಣ್ತದೆ !” ಎಂದು ಜಗಲಿಗೆ ಓಡಿಹೋದಳು.

ನಂಟರು ಕಾಲು ತೊಳೆದುಕೊಂಡರು. “ಬಂದ್ರೇ” “ಬಂದ್ರೇ” ಎಂದು ಸ್ವಾಗತ ಬಯಸಿದವರಿಗೆ “ಹ್ಞು””ಹ್ಞು” ಎಂದು ಉತ್ತರ ಹೇಳಿ, ಗೌರಮ್ಮ ಸೀತೆಯರೊಡನೆ ಒಳಗೆ ಹೋದರು. ವಾಸು ಗಂಡಸರ ಜಾತಿಗೆ ಸೇರಿದ್ದುದರಿಂದಲೂ ಶ್ಯಾಮಯ್ಯಗೌಡರು ಕರೆದುದರಿಂದಲೂ, ಮನಸ್ಸೆಲ್ಲ ಒಳಗಿದ್ದರೂ ಜಗಲಿಯಮೇಲೆಯೇ ಕುಳಿತನು. ಆದರೆ ತಂದೆಯ ಮುಂದೆ ಬಹಳ ಕಾಲ ನಂಟನಾಗಿ ಕುಳ್ಳಿರಲಾಗದೆ ಐದು ನಿಮಿಷ ಕಳೆಯುವುದರಲ್ಲಿ ಮೆಲ್ಲನೆದ್ದು ಒಳಗೆ ನುಗ್ಗಿದನು.

ನಾಗಮ್ಮನವರ ಉದ್ವೇಗ ಮಗನನ್ನು ನೋಡಿದ ಕೂಡಲೆ ಶಮನವಾಗಿ, ಅವರಿಗೆ ಸ್ವಾಭಾವಿಕವಾಗಿದ್ದ ಗಾಂಭೀರ್ಯ ಹಿಂತಿರುಗಿತು. ಆದರೂ ಮಗನ ಸುತ್ತಲೂ ಮೂರು ಕಾಸು ಆರು ಕಾಸುಗಳನ್ನು ಪ್ರದಕ್ಷಿಣಿ ಬರಿಸಿ, ತಮಗೆ ತಿಳಿದಿದ್ದ ದೇವ ದೆವ್ವರಿಗೆಲ್ಲ- ತಿರುಪತಿ ಧರ್ಮಸ್ಥಳಗಳಿಂದ ಹಿಡಿದು ಭೂತ ಪಂಜ್ರೊಳ್ಳಿಗಳವರೆಗೆ- ಮುಡುಪುಕಟ್ಟಿ, ಹೇಳಿಕೊಂಡರು.

ಹೂವಯ್ಯ ನಿಸ್ಸಾಹಾಯನಾಗಿ ಸುಮ್ಮನಿದ್ದನು. ತಾಯಿಯ ಪ್ರೀತಿಭಾವ ತನ್ನ ಬುದ್ಧಿ ವಿಚಾರಕ್ಕಿಂತಲೂ ಪವಿತ್ರವಾದುದೆಂದು ಅದನ್ನು ಆಸ್ವಾದಿಸುತ್ತ “ಅದೇನವ್ವಾಗಾಯ ? ಹಣೆಗೆ ಬಟ್ಟೆಕಟ್ಟು ಕಟ್ಟಿದ್ದೀಯಾ !” ಎಂದು ಕೇಳಿದನು.

“ಏನೂ ಇಲ್ಲ, ಬಾಗಿಲು ಹೊಡೆದಿದ್ದು” ಎಂದು ನಾಗಮ್ಮನವರು ಮಗನ ಬಳಿ ಕುಳಿತು ನಾನಾ ನೆವಗಳಿಂದ ಅವನ ಹಣೆ ಕೆನ್ನೆ ತಲೆ ಕೈ ತೋಳುಗಳನ್ನು ಸವರಿ ಲಲ್ಲೆಗೈದರು. ಹೂವಯ್ಯನಿಗಂತೂ ತಾಯಿಯ ಸ್ಷರ್ಶ ಶಾಂತಿಯಾನಂದಗಳ ಸುಧಾಮುದ್ರೆಯಾಗಿತ್ತು.