ಬೆಳಿಗ್ಗೆ ಚಿನ್ನಯ್ಯನು ಕುಂಬಾರ ನಂಜನಿಗೆ ಮೀನು ಬೇಟೆಗೆ ಬರಲು ಹೇಳಿ ಬಂದು ಮನೆಯ ಹೆಬ್ಬಾಗಿಲನ್ನು ಪ್ರವೇಶಿಸುತ್ತಿದ್ದಾಗ ಯಾರೋ ತನ್ನ ಹೆಸರನ್ನು ಕೂಗಿ ಕರೆದಂತಾಗಿ ತಿರುಗಿ ನೋಡಿದನು. ಅವನ ತಾಯಿ ಗೌರಮ್ಮನವರು ದನದಕೊಟ್ಟಿಗೆಯಿಂದ ಹಾಲು ತುಂಬಿದ ಹಿತ್ತಾಳೆಯ ತಂಬಿಗೆಯೊಂದನ್ನು ಕೈಯಲ್ಲಿ ಹಿಡಿದುಕೊಂಡು ಬರುತ್ತಿದ್ದರು. ಅವರ ಅಂಗಾಲು ಮೇಗಾಲು ಬೆರಳ ಸಂದುಗಳಲ್ಲಿ ಹಸಿಹಸಿಯಾದ ಹಸುರುಮಿಶ್ರಿತವಾದ ಕರಿ ಬಣ್ಣದ ಸೆಗಣಿ ಮೆತ್ತಿಕೊಂಡಿತ್ತು. ಸೀರೆಯನ್ನು ಸ್ವಲ್ಪ ಮೇಲೆತ್ತಿ ಕಟ್ಟಿಕೊಂಡಿದ್ದುದರಿಂದ ದಂತದ ಬಣ್ಣದ ಕಾಲುಗಳ ಕೆಳಭಾಗವು ಸೆಗಣಿಯ ಬಣ್ಣಕ್ಕೆ ತಾರತಮ್ಯವಾಗಿತ್ತು. ಹೆಜ್ಜೆ ಇಟ್ಟಂತೆಲ್ಲ ಅವರ ಕೈಗಕ ಕಡಗ ಮತ್ತು ಬಳೆಗಳಿಂದ ಹೊರಹೊಮ್ಮುತ್ತಿದ್ದ ಝಣತ್ಕಾರವು ಚಿನ್ನಯ್ಯನ ಮನಸ್ಸಿಗೆ ತಾಯಿಯ ಪ್ರೀತಿಉ ಮಹಿಮೆಯನ್ನು ಸಾರುವ ಡಿಂಡಿಮದಂತಿತ್ತು. ಗೌರಮ್ಮನವರೇನೋ ನೋಡುವುದಕ್ಕೆ ಲಕ್ಷಣವಾಗಿದ್ದರು. ಆದರೆ ಚಿನ್ನಯ್ಯನ ದೃಷ್ಟಿಗೆ ಬಿದ್ದುದು ತಾಯಿಯ ಪವಿತ್ರತೆ, ಸೌಂದರ್ಯವಲ್ಲ. ಗೌರಮ್ಮನವರಲ್ಲಿ ತರಳೆಯ ವೈಯ್ಯಾರವು ಪರಿಪಕ್ವವಾಗಿ ಗರತಿಯ ಗಾಂಭೀರ್ಯಕ್ಕೆ ತಿರುಗಿದ್ದಿತು.ಅವರ ಅಂಗಭಂಗಿಯಲ್ಲಿ ಚಂಚಲತೆ ಮಾದುಹೋಗಿ ಸ್ಥಿರಭಾವ ಅಭಿವ್ಯಕ್ತವಾಗಿತ್ತು. ತಾರುಣ್ಯದರಾಗವೇಗಗಳೇಲ್ಲ  ಮಾಯವಾಗಿ ತುಂಬುಯೌವನದ ಪಾವನ ಸ್ನೇಹ, ನಿಃಸ್ವಾರ್ಥತೆ, ಸಹಿಷ್ಣುತೆ, ಸಂಯಮಗಳು ಮೈದೋರಿದ್ದುವು. ಅವರನ್ನು ನೋಡಿದರೆ ವಸಂತಪ್ರಭಾತದ ತಂಬೆಲರಿನಲ್ಲಿ ಬಳುಕುವ ಬಳ್ಳಿಯ ನೆನಪಾಗುತ್ತಿರಲಿಲ್ಲ: ಚೆನ್ನಾಗಿ ಚೊಕ್ಕಟವಾಗಿ ಬೆಳೆದು, ಬುಡದಲ್ಲಿ ಸಣ್ಣ ದೊಡ್ಡ ಸಸಿಗಳನ್ನು ಹೆತ್ತು, ಗೊನೆಯಿಂದ ನಸುಬಾಗಿ ನಿಂತ ಕದಳಿಯ ಜ್ಞಾಪಕವಾಗುತ್ತಿತ್ತು. ಆ ಮಾತೃದೇವಿ ಚಿನ್ನಯ್ಯನ ಬಳಿಗೆ ಬಂದು ನಿಲ್ಲಲು ಅವನಿಗೊಂದು ಅನಿರ್ವಚನೀಯವಾದ ಆಹ್ಲಾದವಾಯಿತು. ತಾನು ಮತ್ತೆ ಶಿಶುವಾಗಿ ಆ ಮತೆಯ ತೊಡೆಯ ಮೇಲೆ ಕುಳಿತು, ಆಕೆಯ ದಿವ್ಯವಕ್ಷದ ಮೇಲೆ ನಲಿದಾಡಿ, ತಲೆಯ ಕೂದಲಿನಲ್ಲಿಯೂ ಮುಖದ ಮೇಲೆಯೂ ಕೈಯಾಡಿ, ಆಕೆ ಕೊಡುವ ಮುತ್ತುಗಳಿಂದ ತಣಿಯಬೇಕು, ಎನ್ನಿಸಿತು. ಗೌರಮ್ಮನವರು ಹಿಡಿದಿದ್ದ ಚಿನ್ನದಂತಿದ್ದ ಹಿತ್ತಾಳೆಯ ತಂಬಿಗೆ ಎಳಬಿಸಿಲಿನ ರಶ್ಮಿಯಲ್ಲಿ ತಳತಳಿಸಿ ಚಿನ್ನಯ್ಯನ ಕಣ್ಣು ಕುಕ್ಕುತ್ತಿತ್ತು. ಅವರು ಮುಂಗೈ ಮೇಲೆ ಕುಚ್ಚಿಸಿಕೊಂಡಿದ್ದ ಲತಾಕಾರದ ಹಚ್ಚೆಯ ನಸುಹಸುರು ಬಣ್ಣವಯ ಅವರ ಗೌರವರ್ಣಕ್ಕೊಂದು ಆಭರಣವಾಗಿ ತೋರುತ್ತಿತ್ತು. ಚಿನ್ನಯ್ಯನು ನವೀನನಾದುದರಿಂದ ಹಚ್ಚೆ ಕುಚ್ಚಿಸಿಕೊಳ್ಳುವುದು ಅನಾಗರಿಕ ಪದ್ಧತಿಯೆಂದು ಭಾವಿಸಿ, ತನ್ನ ತಂಗಿ ಮೊದಲಾದವರಿಗೆ ಅದನ್ನು ತಪ್ಪಿಸಿದ್ದರೂ ತನ್ನ ತಾಯಿಯ ಕೈಯಲ್ಲಿದ್ದ ಹಚ್ಚೆ ಆತನಿಗೆ ಸಂತೋಷಪ್ರದವಾಗಿತ್ತು. ಏಕೆಂದರೆ ಆ ಹಚ್ಚೆ ಕುಚ್ಚಿದ ಕೈ ಅವನನ್ನು ಎತ್ತಿ ಆಡಿಸಿ ಸಲಹಿ ದೊಡ್ಡವನನ್ನಾಗಿ ಮಾಡಿತ್ತು. ನಿತ್ಯ ಪರಿಚಯದಿಂದ ಅದು ಎಷ್ಟು ಸ್ವಾಭಾವಿಕವಾಗಿತ್ತೆಂದರೆ ಅದಿಲ್ಲದೆ ತಾಯಿಯ ಕೈ ಆತನಿಗೆ ಪರಕೀಯವಾಗಿ ಕಾಣಿಸುತ್ತಿದ್ದಿತೋ ಏನೋ! ಹಾಲು ತುಂಬಿದ್ದ ಆ ತಂಬಿಗೆಯ ಕಂಠದಲ್ಲಿ ಬೆಳ್ನೊರೆ ಬಿಳಿಯುಣ್ಣೆಯ ಮುಗಿಲ ಮುದ್ದೆಯಂತೆ ಮೃದುವಾಗಿ, ಮನೋಹರವಾಗಿ, ಮಾತೃವಾತ್ಸಲ್ಯದಂತೆ ಆಪ್ಯಾಯಮಾನವಾಗಿತ್ತು. ಆ ನೊರೆಯ ಮುದ್ದೆಯ ಮೇಲು ಭಾಗದಲ್ಲಿದ್ದ ಒಂದೆರಡು ಗುಳ್ಳೆಗಳು ಬೆಚ್ಚಗಿದ್ದ ಬೆಳಗಿನ ಸೂರ್ಯನ ಹೊಂಬೆಳಕಿನಲ್ಲಿ ಕಾಮನ ಬಿಲ್ಲಿನ ಕಿರುತತ್ತಿಗಳಂತೆ ಬಣ್ಣಬಣ್ಣವಾಗಿದ್ದುವು. ತಾಯಿ ಮಕ್ಕಳಿಬ್ಬರ ಛಾಯೆಗಳೂ ನೆಲದ ಮೇಲೆ ನೀಳವಾಗಿ ಬಿದ್ದು, ಬಳಿಯಿದ್ದ ಸುಣ್ಣ ಬಳಿದ ಬಿಳಿಯ ಗೋಡೆಯ ಮೇಲೆ ಎದ್ದು ನಿಂತಿದ್ದುವು. ಚಿನ್ನಯ್ಯನೊಡನೆ ಮನೆಯನ್ನು ಸೇರಿದ್ದ ನಾಯಿಗಳಲ್ಲಿ ಕೆಲವು ಒಳ ಅಂಗಳಕ್ಕೆ ದಾಟಿದ್ದುವು. ಕೆಲವು ಹೊರಗೆ ಬಿಸಿಲಿನಲ್ಲಿ ಹಾಯಾಗಿ ಮಲಗಿ ತಮ್ಮನ್ನು ಪೀಡಿಸುತ್ತಿದ್ದ ನೊಣಗಳನ್ನು ಚಿಮ್ಮಿ ಚಿಮ್ಮಿ ಹಾರಿ ಹಾರಿ ಬಾಯಿ ಹಾಕಿ ಅಟ್ಟಿಕೊಳ್ಳತ್ತಿದ್ದುವು. ರೂಬಿ ಮುಂಗಾಲೂರಿ ಹಿಂಗಾಲ ಮೇಲೆ ಕುಳಿತು ತಾಯಿ ಮಕ್ಕಳ ಮುಖ್ ಕಡೆಗೇ ಕುತೂಹಲನಯನವಾಗಿ ನೋಡುತ್ತ, ಅವರಾಡುತ್ತಿದ್ದ ಮಾತುಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುವಂತಿತ್ತು. ನೆಳಲಿನಲ್ಲಿ ಅದರ ಲಾಂಗೂಲದ ಹರ್ಷಪ್ರದರ್ಶನ ಚಲನೆ ಲಿಖಿತವಾಗಿತ್ತು. ಬಹುಶಃ ಗೌರಮ್ಮನವರು ಕೈಲಿದ್ದ ಹಾಲಿನ ಪಾತ್ರೆಗಾಗಿರಬೇಕು.

“ತಮ್ಮಾ” ಗೌರಮ್ಮನವರು ಮಗನನ್ನು ಕರೆಯುತ್ತಿದ್ದುದು ಹಾಗೆ-” ಒಂದು ಕೆಲ್ಸಮಾಡಿಕೊಡ್ಬೇಕಲ್ಲ.” ತಾಯಿಯ ಮುಖದಲ್ಲಿ ಅಹೇತುಕ ಹರ್ಷದ ಕಿರುನಗೆಯೊಂದು ಸುಳಿದಾಡಿ,ತಾಂಬೂಲದಿಂದ ದಾಡಿಮ ಬೀಜಗಳಂತೆ ಕೆಂಪಾಗಿದ್ದ ಅವರ ದಂತಪಂಕ್ತಿಯ ಸ್ವಲ್ಪ ಭಾಗ ಗೋಚರವಾಯಿತು.

“ಏನು ಹೇಳಬಾರದೆ?”

“ನೀನು ಮಾಡಿಕೊಡ್ತೇನೆ ಅಂದ್ರೆ ಹೇಳ್ತೀನಪ್ಪಾ.”

“ಹೇಳು ಅಂದ್ರೆ!”

ತಾಯಿಮಕ್ಕಳಿಬ್ಬರೂ ಸಂಭಾಷಣೆಯನ್ನು ಸವಿಯುತ್ತಿದ್ದರು. ಆ ಸವಿಗೋಸ್ಕರವೇ ಅದು ಪ್ರಾರಂಭವಾಗಿದ್ದಂತೆಯೂ ತೋರುತ್ತಿತ್ತು. ಗೌರಮ್ಮನವರ ವಿಳಂಬವೇನೋ ಅದಕ್ಕೆ ಪ್ರಬಲವಾದ ಸಾಕ್ಷಿಯಾಗಿತ್ತು.

“ಕಾಳಗೆ ಹೇಳಿ ಹಿತ್ತಲಿಂದ ಸ್ವಲ್ಪ ಹರುವೆಸೊಪ್ಪು ತರಿಸಿ ಕೊಡ್ತೀಯಾ?”

“ನೀನೇ ಹೇಳವ್ವಾ ತರ್ತಾನೆ.”

“ನಾ ಹೇಳಿದರೆ ಎಲ್ಲಿ ಕೇಳ್ತಾನೋ”

“ಕೇಳದೆ ಏನು, ಒಲ್ಲೆ ಅಂತಾನೆ?”

ಚಿನ್ನಯ್ಯನಿಗೆ ಮಾತಿನ ಮರ್ಮ ಗೊತ್ತಾಗಲಿಲ್ಲ. ಮಾತಿಗಾಗಿಯೇ ತಾಯಿಗೆ ಹರುವೆ ಸೊಪ್ಪು ಬೇಕಾಗಿತ್ತೆಂಬುದು ಅವನಿಗೆ ಹೊಳೆಯದೆ ಹೋಯಿತು. ಆ ವಿಷಯವು ಕ್ಷುದ್ರವೆಂದು ಪರಿಗಣಿಸಿ ಬೇರೆ ಮಾತು ಎತ್ತಿದನು.

“ಅದಿರಲಿ, ಮಧ್ಯಾಹ್ನ ಹೂವಯ್ಯ ರಾಮಯ್ಯ ಮೈಸೂರಿಂದ ಬರ್ತಾರೆ.” ಚಿನ್ನಯ್ಯನ ಅರ್ಥವು ಊಟದಲ್ಲಿ ಏನಾದರೂ ವಿಶೇಷವಾಗಲಿ ಎಂಬುದಾಗಿತ್ತು. ತಾಯಿಗೂ ಅದು ಗೊತ್ತಾಯಿತು.

“ಯಾರು ಹೇಳಿದರು ನಿನಗೆ?” ಎಂದು ಗೌರಮ್ಮ ಸ್ವಲ್ಪ ಉತ್ಸಾಹದಿಂದಲೆ ಕೇಳಿದರು.

“ಯಾರೂ ಹೇಳಲಿಲ್ಲ; ಕಾನೂರಿನ ಗಾಡಿ ರಸ್ತೇಲಿ ಹೋಗ್ತಿತ್ತು. ಕೇಳಿ ತಿಳಿದೆ….. ನಾನೀಗ ಬೈಲುಕೆರೆಗೆ ಮೀನು ಹೊಡೆಯಲು ಹೋಗ್ತೀನಿ. ಬೇಗ ಕಾಫಿ ತಿಂಡಿ ಕೊಡು”.

“ಕಾಫಿ ತಿಂಡಿ ಆಗಲೇ ಆಗಿದೆ. ನೀನೇ ಬರಲಿಲ್ಲ.”

ಅಷ್ಟರಲ್ಲಿ ಪಕ್ಕದಲ್ಲಿ ತೋಟದ ಬೇಲಿಯಲ್ಲಿದ್ದ ಗುಲಾಬಿ ಗಿಡಗಳ ಪೊದೆಯಿಂದ ” ಅಣ್ಣಯ್ಯ ಇಲ್ಲಿ ಸ್ವಲ್ಪ ಬಾ” ಎಂಬ ಇಂಪಾದ ಕರೆ ಕೇಳಿಸಿತು. ತಾಯಿ ಮಕ್ಕಳಿಬ್ಬರೂ ತಿರುಗಿ ನೋಡಿದರು. ಸೀತೆ ಗುಲಾಬಿಯ ಪೊದೆಯ ಬಳಿ ಕೈಯಲ್ಲಿ ಒಂದೆರಡು ಹೂವುಗಳನ್ನು ಹಿಡಿದು ನಗುತ್ತ ನಿಂತಿದ್ದಳು. ಪಕ್ಕದಲ್ಲಿ ಅವಳ ಪುಟ್ಟ ತಂಗಿ ಲಕ್ಷ್ಮಿ ಅಕ್ಕನ ಸೀರೆಯ ನಿರಿಗೆಗಳನ್ನು ಭದ್ರವಾಗಿ ಹಿಡಿದು ನಿಂತಿದ್ದಳು.

ಗೌರಮ್ಮನವರು “ಅಯ್ಯೋ, ಇವಳ ದೆಸೆಯಿಂದ ಅಗೋದಿಲ್ಲ. ಅವಳನ್ಯಾಕೇ ಅಲ್ಲಿಗೆ ಕರಕೊಂಡು ಹೋಗಿದ್ದು? ಹಾವು ಗೀವು ಇರ್ತಾವೆ ಅಂದರೆ ಕೇಳೋದಿಲ್ಲ. ನಾನೇನು ಸಾಯಲಿ? ತಮ್ಮಾ, ಅವಳನ್ನು ಎತ್ತಿಕೊಂಡು ಬಾರೊ” ಎಂದು ಮಗನಿಗೆ ಬೆಸಸಿ ಹೆಬ್ಬಾಗಿಲನ್ನು ದಾಟಿ ಒಳಗೆ ಹೋದರು. ಚಿನ್ನಯ್ಯನು ತಂಗಿಯ ಬಳಿಗೆ ಹೋದನು. ಲಕ್ಷ್ಮಿ ಅಣ್ಣಯ್ಯ ಬಂದುದನ್ನು ಕಂಡು ತಾನು ಮನೆಯಿಂದ ಅಷ್ಟು ದೂರ ಹೋಗಿದ್ದು ಸಾಹಸಕ್ಕಾಗಿಯೋ ಎಂಬಂತೆ ನಗುತ್ತ ಅವನಲ್ಲಿಗೆ ಓಡಿ ಬರುವ ಸಂಭ್ರಮದಲ್ಲಿ ಲಂಗಕ್ಕೆ ಕಾಲು ಸಿಕ್ಕಿಸಿಕೊಂಡು ಹಸುರು ಹುಲ್ಲಿನ ಮೇಲೆ ಬಿದ್ದು ಅಳತೊಡಗಿದಳು. ಚಿನ್ನಯ್ಯ ಓಡಿಹೋಗಿ ಅವಳನ್ನು ಎತ್ತಿಕೊಂಡು ಸಮಾಧಾನಪಡಿಸಿದನು. ಅಲ್ಲಿಂದ ಸೀತೆಯ ಬಳಿಗೆ ಹೋಗುತ್ತ” ಯಾಕೇ? ಕರೆದಿದ್ದು?” ಎಂದನು.

“ಆ ಗುಲಾಬಿ ಹೂವು ಕುಯ್ಕೊಡೋ” ಎಂದು ಕೈ ತೋರಿಸಿದಳು.

ಚಿನ್ನಯ್ಯಲಕ್ಷ್ಮಿಯನ್ನು ಮೆಲ್ಲನೆ ಮತ್ತೆ ಪೃಥ್ವಿಯಲ್ಲಿ ಸಂಸ್ಥಾಪನೆ ಮಾಡಿ ಸೀತೆಗೆ ಹೂ ಕುಯ್ದು ಕೊಟ್ಟು “ಹೂಂ, ಸಾಕು,ಇನ್ನು ಬನ್ನಿ ಹೋಗೋಣ” ಎಂದನು.

ಸೀತೆ “ಇಲ್ಲ ಅಣ್ಣಯ್ಯ ನಾನಿನ್ನೂ ಒಂದು ಸ್ವಲ್ಪ ಹೂ ಕುಯ್ದುಕೊಂಡು ಬರ್ತೀನಿ” ಎಂದಳು.

“ಅವ್ವ ಕರೆದಿದ್ದು ಕೇಳ್ಲಿಲ್ಲೇನು. ಸಿಟ್ಟು ಮಾಡ್ತದೆ!”

“ಲಕ್ಷ್ಮೀನ ಕರಕೊಂಡು ಹೋಗು, ನಾ ಬರ್ತೀನಿ ಆಮೇಲೆ.”

“ಯಾರಿಗೇ ಅಷ್ಟೊಂದು ಹೂವು! ನಿನಗೇನು ಮದುವೆ ಗಿದುವೆಯೋ?”

ಎಂದು ಚಿನ್ನಯ್ಯನು ನಕ್ಕನು.

ಸೀತೆ ಮುನಿಸಿನಿಂದ ಕೆನ್ನೆ ಊದಿಕೊಂಡು ತುಟಿ ಚಾಚಿಕೊಂಡು “ಹುಂ, ನನಗಲ್ಲ. ನನ್ನ ಅತ್ತಿಗೆಗೆ!” ಎಂದಳು.

ಚಿನ್ನಯ್ಯನು ಅವಳ ಕೈಯನ್ನು ಹಿಡಿದು ಬಹು ಮೃದುವಾಗಿ ಹೂವನ್ನು ಗುದ್ದುವಂತೆ ಗುದ್ದಿದನು.

ಸೀತೆ “ಮತ್ಯಾಕೆ ನೀನು ಹಾಂಗೆ ಹೇಳಿದ್ದು?” ಎಂದು ಕೊಂಕುನಗೆ ನಕ್ಕಳು.

“ಯಾಕೆ ಹೇಳಿದ್ದೇ? ಇವತ್ತು ಯಾರು ಬರ್ತಾರೆ ಗೊತ್ತೇನು?”

ಸೀತೆ ಗೌರಮ್ಮ ಚಿನ್ನಯ್ಯರು ಆಡುತ್ತಿದ್ದ ಮಾತುಗಳಿಂದ ಎಲ್ಲವನ್ನೂ ತಿಳಿದಿದ್ದಳು. ಆದರೂ ಏನೂ ತಿಳಿಯದವಳಂತೆ ” ಯಾರು ಬರ್ತಾರೆ!” ಎಂದಳು. ಅವಳ ಮುಖದ ಭಂಗಿಯೇ ಬದಲಾಯಿಸಿತ್ತು.

“ಯಾರು? ನಿನ್ನ ಭಾವಂದಿರು, ಮೈಸೂರಿಂದ”

“ಯಾರು? ರಾಮಯ್ಯ ಭಾವನೇ?”

“ಇದೇನು! ಗೊತ್ತಿಲ್ಲದೆ ಇದ್ದವರ ಹಾಗೆ ಅಡ್ಡೀಯಲ್ಲಾ! ರಾಮಯ್ಯ ಭಾವ ಒಬ್ಬರೇ ಏನು ಮೈಸೂರಿಗೆ ಹೋಗಿದ್ದವರು?”

ಸೀತೆ ತಲೆಬಾಗಿ ಸುಮ್ಮನಾದಳು.

“ಏನಪ್ಪಾ ಮದುವೆ ಆಗಬೇಕಾದ್ರೇನೆ ಹೆಸರು ಹೇಳೋಕೆ ಇಷ್ಟೊಂದು ನಾಚಿಗೇನೆ?”

ಸೀತೆಗೆ “ಅಣ್ಣಯ್ಯ, ನೀನು ಸುಮ್ಮನಿರೋ” ಎಂದು ಮುನಿದಳು.

“ಅಲ್ಲಾ ಮತ್ತೇ; ಮದುವೆಯಾಗೋಕೆ ಮುಂಚೇನೆ ಹೆಸರು ಹೇಳೋಕೆ ನಾಚ್ತೀಯಲ್ಲಾ!”

ಸೀತೆಗೆ ಮಾನಭಂಗವಾದಂತಾಗಿ, ಅದನ್ನು ಧೈರ್ಯ ಪ್ರದರ್ಶನದಿಂದ ಪರಿಹರಿಸಿಕೊಳ್ಳಬೇಕೆಂದು ನಿರ್ಣಯಿಸಿ. ಕತ್ತೆತ್ತಿ ಅಣ್ಣನ ಕಡೆಗೆ ನೋಡಿ, “ಯಾರೋ? ಹೂವಯ್ಯ ಭಾವನೂ ಬರ್ತಾರೆ! ಅಷ್ಟೇನೆ?” ಎಂದಳು. ಅವಳ ಕೆನ್ನೆಗೆ ರಕ್ತವೇರಿ ಮುಖ ಕೆಂಪಾಯಿತು.

ಚಿನ್ನಯ್ಯ” ಅಯ್ಯೋ ಗಂಡುಬೀರಿ! ಗಂಡನಾಗುವವನ ಮೇಲೆ ಗೌರವವೇ ಇಲ್ಲವಲ್ಲೇ! ಅವರು ಬರಲಿ ಹೇಳ್ತೀನಿ!” ಎಂದು ನಕ್ಕನು. ಲಕ್ಷ್ಮಿ ಹುಲ್ಲಿನಲ್ಲಿ ತನ್ನ ಪುಟ್ಟ ಕೈಗಳಿಂದ ಏನನ್ನೋ ಹುಡುಕುತ್ತಿದ್ದಳು.

ಸೀತೆಗೆ ಕತ್ತರಿಯ ನಡುವೆ ಸಿಕ್ಕಂತಾಯಿತು. ಕಣ್ಣುಗಳಿಂದ ನೀರು ಹೊಮ್ಮಿಕೆನ್ನೆಗಳ ಮೇಲೆ ಹರಿದುವು. ಚಿನ್ನಯ್ಯನು ತೃಪ್ತನಾದಂತಾಗಿ” ಲಕ್ಷ್ಮೀ ಬಾರೆ ಮನೆಗೆ ಹೋಗೋಣ” ಎಂದು ಹೇಳುತ್ತ ಅವಳನ್ನು ಎತ್ತಿಕೊಳ್ಳಲು ಹೋದನು. ಲಕ್ಷ್ಮಿ” ನಾನೊಲ್ಲೆ!” ಎಂದು ಅಳತೊಡಗಿದಳು. ಆದರೂ ಚಿನ್ನಯ್ಯ ಬಲಾತ್ಕಾರದಿಂದ ಅವಳನ್ನು ಎತ್ತಿಕೊಂಡು ಮನೆಗೆ ಹೋದನು. ಸೀತೆ ತಲೆಬಾಗಿ ಕಂಬನಿಗರೆಯುತ್ತಲೇ ನಿಂತಿದ್ದಳು.

ಸೀತೆಯ ಕಂಬನಿಗಳಿಗೆ ನಿಜವಾದ ಕಾರಣ ದುಃಖವಾಗಿರಲಿಲ್ಲ. ಯಾರಾದರೂ ಆ ಕಂಬನಿಗಳನ್ನೇ ಪ್ರಶ್ನಿಸಿದ್ದರೆ ಅವು ಹೇಳುವ ಕಥೆ ಬೇರೆಯಾಗಿರುತ್ತಿತ್ತು. ಪ್ರಾಯಶಃ ಒಂದು ಕಂಬನಿ” ನಾನು ನಾಚಿಕೆಯಿಂದ ಬಂದೆ” ಎನ್ನುತ್ತಿತ್ತು.ಇನ್ನೊಂದು ” ನಾನು ಅಭಿಮಾನ ಭಂಗವಾದುದರಿಂದ ಬಂದೆ” ಎನ್ನುತ್ತಿತ್ತು. ಮತ್ತೊಂದು ” ನಾನು ಬಿಂಕದ ಪರಿಣಾಮ” ಎನ್ನುತ್ತಿತ್ತು. ಮಗುದೊಂದು ” ನಾನು ಹರ್ಷಾಶ್ರು” ಎನ್ನುತ್ತಿತ್ತು. ಅಂತೂ ಚಿನ್ನಯ್ಯನು ಹೋದ ತುಸು ಹೊತ್ತಿನಲ್ಲಿಯೆ ನಾಚಿಕೆ ಅಭಿಮಾನ ಬಿಂಕಗಳೆಲ್ಲವೂ ವೈಶಾಖ ಮಧ್ಯಾಹ್ನದ ಕಡುನೀಲಿ ಬಾನಿನಲಲ್ಲಿ ತುಂಡು ಮೋಡವು ಮೆಲ್ಲಗೆ ಕರಗಿ ಲೀನವಾಗುವಂತೆ ಮಾಯವಾಗಿ ಹರ್ಷನೀಲವೊಂದೇ  ಸರ್ವವ್ಯಾಪಿಯಾಗಿ ಸ್ಥಿರವಾಯಿತು. ಪೃಥ್ವೀ ಸುಂದರಿಯ ದಿಗಂತಾಧರದಲ್ಲಿ ಉಷಃಕಾಲದ ಮಂದಹಾಸವು ಮೈದೋರುವಂತೆ ಸೀತೆಯ ಗುಲಾಬಿ ಚೆಂದುಟಿ‌ಗಳಲ್ಲಿ ಕಿರುನಗೆ ಮೂಡಿ, ಕೆನೆಗಳ ಮೇಲೆ ತೆರೆತೆರೆಯಾಗಿ ಪ್ರವಹಿಸಿ, ಮುಖಮಂಡಲವನ್ನು ಪ್ರಸನ್ನವಾಗಿ ಮಾಡಿತು. ಮುಖಪ್ರಸನ್ನತೆಗೆ ಮನಃಪ್ರಸನ್ನತೆ ಕಾರಣವಾಗಿತ್ತು. ಆಕೆಯ ಮನದಲ್ಲಿ ಹೂವಯ್ಯನ ಸುಂದರಮೂರ್ತಿ ಅವಿರ್ಭವಿಸಿತ್ತು. ಅವನ ವಿಚಾರವಾಗಿ ಅನೇಕ ಭಾವಗಳೂ ದೃಶ್ಯ ಸಂಕುಲಗಳೂ ಅನುಭವಗಳೂ ಚಿತ್ತ ಭಿತ್ತಿಯಲ್ಲಿ ಚಿತ್ರಿತವಾಗಿ ಬಾಹ್ಯ ಪ್ರಜ್ಞಾಶೂನ್ಯಳಾದ ಆಕೆ ನೆನಪಿನ ನಂದನವನದಲ್ಲಿ ಅಪ್ಸರಿಯಾಗಿ ಸಂಚರಿಸತೊಡಗಿದಳು.

ಸೀತೆಗೆ ಹೂವಯ್ಯನು ಚಿಕ್ಕಂದಿನಿಂದಲೂ ಚಿರಪರಿಚಿತ ಸ್ನೇಹಮೂರ್ತಿ. ಗೌರವನವರು ಕಡೆಯ ಪಕ್ಷ ವರ್ಷಕ್ಕೆ ಒಂದು ಸಾರಿಯಾದರೂ ಕಾನೂರಿಗೆ ನಂಟರಾಗಿ ಹೋಗಿ ಒಂದೆರಡು ವಾರಗಳಿಗಿಂತಲೂ ಹೆಚ್ಚಾಗಿಯೆ ಅಲ್ಲಿದ್ದು ಬರುತ್ತಿದ್ದುದು ವಾಡಿಕೆಯಾಗಿತ್ತು. ಹೂವಯ್ಯನು ಸೀತೆಗಿಂತಲೂ ಐದಾರು ವರ್ಷ ಹೆಚ್ಚು ವಯಸ್ಸಿನವನಾಗಿದ್ದರೂ ಸೀತೆಗೆ ತನ್ನ ಓರಗೆಯವರಿಗಿಂತಲೂ ಅವನಲ್ಲಿಯೇ ಹೆಚ್ಚು ಮೈತ್ರಿ, ಪ್ರೀತಿ,ಸಲುಗೆ, ತಾನು ಊಟಕ್ಕೆ ಕೂರುವುದು ಹೂವಯ್ಯನ ಪಕ್ಕದಲ್ಲಿ; ಆಟವಾಡುವುದು ಹೂವಯ್ಯನ ಜೊತೆಯಲ್ಲಿ; ಓದುವಾಗ ಹೂವಯ್ಯನೇ ಪಾಠ ಹೇಳಿಕೊಡಬೇಕು. ” ಹೂವಯ್ಯ ಭಾವ” ಎಂದರೆ ಸೀತೆಗೆ ಪಂಚಪ್ರಾಣ. ಒಂದು ಸಾರಿ ಮಕ್ಕಳೆಲ್ಲರೂ ಸೇರಿ ಸಂಸಾರದ ಆಟ ಆಡುತ್ತಿದ್ದಾಗ ಹೂವಯ್ಯನಿಗೆ ಸೀತೆಯನ್ನು ಕೊಟ್ಟು, ವಿವಾಹವಾಗಬೇಕೆಂದು ನಿಶ್ಚಯವಾಯಿತು. ಧಾರೆ ಎರೆಯುವ ಅನುಕರಣವೂ ನಡೆದುಹೋಗಿ ಹೂವಯ್ಯ ಸೀತೆಗೆ ತಾಳಿ ಕಟ್ಟಿದನು. ದಂಪತಿಗಳಿಗೆ ಒಂದು ಬಟ್ಟೆಗೊಂಬೆಯ ಕೂಸೂ ಹುಟ್ಟಿತು! ಅಲ್ಲಿಂದ ಗಂಡಹೆಂಡಿರು ತೀರ್ಥಹಳ್ಳಿಯ ಎಳ್ಳಮಾಸೆಗೆ ಹೋದುದನ್ನೂ ಅಭಿನಯಿಸಿದರು. ಮೇಳಿಗೆ ತೇರಿಗೆ ಹೋಗಿ ಮಿಠಾಯಿ, ಮಂಡಕ್ಕಿ, ಕಡಲೆ, ಖರ್ಜೂರ, ಬತ್ತಾಸು, ಪೀಪಿ ಮೊದಲಾದ ಪದಾರ್ಥಗಳನ್ನು ವಿಕ್ರಯಮಾಡಿದ್ದನ್ನೂ ನಟಿಸಿದರು. ಒಂದು ಸಾರಿ ಗಂಡಹೆಂಡಿರ ಕಲಹವನ್ನು ಅಭಿನಯಿಸಿ ಹೂವಯ್ಯನು ಸೀತೆಯನ್ನು ಹೊಡೆಯುವಂತೆ ಮಾಡಿದನು. ಆಗ ಆಟದ ಭೂಮಿಕೆಯಲ್ಲಿ ಸೀತೆಯ ಅಣ್ಣನಾಗಿದ್ದ ರಾಮಯ್ಯನು ಅವಳನ್ನು ಬಿಡಿಸಿದನು. ಆ ದಿನವೆಲ್ಲಾ ಸೀತೆ ಹೂವಯ್ಯರು ನಿಜವಾಗಿಯೂ ಮದುವೆಯಾದವರಿಗಿಂತಲೂ ಹೆಚ್ಚಾಗಿ ಮೆರೆದು ನಲಿದರು. ಒಬ್ಬರನ್ನೊಬ್ಬರು ಅಗಲಲೇ ಇಲ್ಲ. ರಾತ್ರಿ ಮಲಗುವಾಗಲೂ ಕೂಡ ಸೀತೆ ಹೂವಯ್ಯನೊಡನೇ ಮಲಗುವೆನೆಂದು ಹಠಮಾಡಿದ್ದಳು. ಆಗ ಗೌರಮ್ಮನವರು ಎರಡು ಗುದ್ದುಗುದ್ದಿ, ಒಳಗೆ ಎಳೆದುಕೊಂಡು ಹೋಗಿದ್ದರು. ಈ ವಿನೋದ ವಿವಾಹದ ಸುದ್ದಿ ಎಲ್ಲರ ಕಿವಿಗೂ ಬಿದ್ದು. ವಿನೋದಕ್ಕಾಗಿ ಎಲ್ಲರೂ ಅವರಿಬ್ಬರನ್ನೂ ದಂಪತಿಗಳೆಂದೇ ಕರೆಯ ತೊಡಗಿದ್ದರು. ಇನ್ನೊಂದು ಸಾರಿ ಭಾಗವತರಾಟದಲ್ಲಿ ನೋಡಿದ್ದ ಸ್ವಯಂವರಾನುಕರಣೆಯ ಲೀಲೆಯಲ್ಲಿ ಸೀತೆ ಹೂವಯ್ಯನಿಗೆ ತಾನೇ ತಯಾರು ಮಾಡಿದ ಹೂವಿನ ಮಾಲೆಯನ್ನು ಹಾಕಿ, ಅವನನ್ನು ಪತಿಯಾನ್ನಾಗಿ ವರಿಸಿದ್ದಳು. ಮತ್ತೊಂದು ಸಾರಿ, ಆಗ ಸೀತೆಗೆ ಆರೇಳು ವಯಸ್ಸಿರಬಹುದು. ಹೂವಯ್ಯನಿಗೆ ಹನ್ನೊಂದು ಹನ್ನೆರಡಿರಬಹದು. ಕಾನೂರಿಗೆ ಔತಣಕ್ಕೆ ಬಂದಿದ್ದ ಸೀತೆಮನೆ ಸಿಂಗಪ್ಪಗೌಡರು ಜೈಮಿನಿ ಭಾರತವನ್ನು ಓದಿ ಅರ್ಥ ಹೇಳುತ್ತಿದ್ದಾಗ ಹುಡುಗರೆ;; ಅವರನ್ನು ಮುತ್ತಿದ್ದರು. ಸೀತೆ ಹೂವಯ್ಯನ ಹೆಗಲ ಮೇಲೆ ಕೈಯಿಟ್ಟು ಅವನನ್ನು ಅಪ್ಪಿಕೊಂಡಂತೆ ಕುಳಿತಿದ್ದಳು. ಕಥೆಯಲ್ಲಿ ದಂಪತಿಗಳ ಅನುರಾಗ ಪ್ರಸಂಗ ಬಂದಾಗ ಸಿಂಗಪ್ಪಗೌಡರು ಕುಳಿತವರಿಗೆಲ್ಲ ಸೀತೆ ಹೂವಯ್ಯರನ್ನು ತೋರಿಸಿ ಏನೇನೋ ಹಾಸ್ಯದ ಮಾತುಗಳನ್ನು ಹೇಳಲು, ಬಾಲಕ ಬಾಲಕಿಯರಿಬ್ಬರೂ  ಅವಮಾನವಾದುದರಿಂದ ಅಳುತ್ತ ಒಬ್ಬರನ್ನೊಬ್ಬರು ಅಗಲಿ ದೂರ ದೂರ ಸರಿದು ಕುಳಿತಿದ್ದರು. ಗುಲಾಬಿ ಪೊದೆಯ ಬಳಿಯಲ್ಲಿ ನಿಂತಿದ್ದ ಸೀತೆಯ ಮನಸ್ಸಿನಲ್ಲಿ ಇಂತಹ ನೂರಾರು ಚಿತ್ರಗಳು ಸುಳಿದು ಅವಳಿಗೆ ಹರ್ಷವಾಯಿತು. ಅವುಗಳಲ್ಲಿ ಮತ್ತೆ ಕೆಲವು ಸನ್ನಿವೇಶಗಳನ್ನು ನೆನೆದು ತನ್ನೊಳಗೆ ತಾನೆ ನಾಚಿಕೊಂಡು ಮುಗುಳುನಗೆ ನಕ್ಕಳು. ಅವಳು ಅಲ್ಲಿದ್ದುದನ್ನು ಅರಿಯದೆ ಹಾರಿಬಂದು ಸಮೀಪದ ಒಂದು ಕೊಂಬೆಯಲ್ಲಿ ಕುಳಿತು ಉಲ್ಲಾಸದಿಂದ ಗಾನಲೋಲವಾಗಿದ್ದ ಒಂದು ಪಿಕಳಾರ ಹಕ್ಕಿಯೂ ಅದರ ದನಿಯೂ ಅವಳ ಕಣ್ಣಿಗಾಗಲಿ ಕಿವಿಗಾಗಲಿ ಬೀಳಗೇ ಇಲ್ಲ.

ಬಾಲ್ಯವು ಕಳೆದು ತಾರುಣ್ಯವು ಪ್ರಾಪ್ತವಾದ ಮೇಲೆ ಸೀತೆ ಹೂವಯ್ಯರ ಸಂಬಂಧವು ಲೋಕದ ದೃಷ್ಟಿಗೆ ದೂರ ದೂರವಾದಂತೆ ಕಾಣುತ್ತಿತ್ತು. ಆದರೆ ಅಂತರಂಗದಲ್ಲಿ ಅವರು ಹೆಚ್ಚು ಹೆಚ್ಚು ಸಮೀಪವಾಗುತ್ತಿದ್ದರು. ಆದರೂ ಅವರ ಸಂಬಂಧವು ಇನ್ನು ಯುವಕ ಯುವತಿಯರ ” ಬೇಟೆ” ವಾಗಿರಲಿಲ್ಲ.;ಬಾಲಕ ಬಾಲಕಿಯರಲ್ಲಿರುವ ಮುಗ್ಧವಾದ ” ಬಾಲ್ಯ ಪ್ರಣಯ” ಮಾತ್ರವಾಗಿತ್ತು. ಈಗ ಅವರು ಒಬ್ಬರನ್ನೊಬ್ಬರು ಅಗಲಿದ್ದುದರಿಂದ ವಿರಹಯಾತನೆಯೂ ಇರಲಿಲ್ಲ; ಒಬ್ಬರನ್ನೊಬ್ಬರು ಅನವರತವೂ ನೆನೆಯುತ್ತಲೂ ಇರಲಿಲ್ಲ; ನಿನ್ನೆ ಸೀತೆಗೆ ಹೂವಯ್ಯನ ಆಲೋಚನೆಯೇ ಇರಲಿಲ್ಲ; ಈವೊತ್ತು ಚಿನ್ನಯ್ಯನಿಂದ ಸುದ್ದಿ ತಿಳಿದಮೇಲೆಯೇ ಆಕೆಯಲ್ಲಿ ಪೂರ್ವಸ್ಮೃತಿ ಎಚ್ಚತ್ತು, ಇಷ್ಟು‌ದಿನವೂ ಸುಪ್ತವಾಗಿದ್ದ ಸ್ನೇಹವು ಮತ್ತೆ ಪ್ರಬುದ್ದವಾಗಿತ್ತು. ಹೂವಯ್ಯನ ಮನದಲ್ಲಿ ಅದೂ ಕೂಡ ಆಗಿರಲಿಲ್ಲ.

ಹಠಾತ್ತಾಗಿ ಸೀತೆ ಕಾಣುತ್ತಿದ್ದ ಹೊಂಗನಸಿನ ಬಣ್ಣದ ಗುಳ್ಳೆ ಬಿರಿದಂತಾಗಿ ಎಚ್ಚತ್ತು ನೋಡುತ್ತಾಳೆ; ಬಳಿಯಲ್ಲಿದ್ದ ಎತ್ತರವಾದ ಒಂದು ಅಡಕೆಯ ಮರದಿಂದ ಹಾಳೆಯೊಂದು ಕೆಳಗೆ ಬೀಳುತ್ತಿತ್ತು. ನೀಳವಾಗಿದ್ದ ಅದರ ಕಂದು ಬಣ್ಣದ ಸೋಗೆಯ ಗರಿಗಳು ಗಾಳಿಯಲ್ಲಿ ಥರಥರ ನಡುಗುತ್ತಿದ್ದುವು. ಅದು ಕ್ಷಣರ್ಧದಲ್ಲಿಯೆ ಕೆಳಗಿದ್ದ ಒಂದು  ಬಾಳೆಯ ಸಸಿಯ ಹೆಡಲಿಗೆ ತಾಗಿ, ಅದರ ಅಖಂಡ ಸ್ನಿಗ್ದ ಕೋಮಲ ಶ್ಯಾಮಲವಾಗಿದ್ದ ಎಲೆಯನ್ನು ಸೀಳಿ, ನೆಲದ ಮೇಲಿದ್ದ ಮೇಲು ಸೊಪ್ಪಿನ ಜಿಗ್ಗಿನ ಮೇಲೆ ದಢಾರ್ ಎಂದು ಶಬ್ದ ಮಾಡಿಕೊಂಡು ಬಿದ್ದಿತು. ಬಾಳೆಯ ಹೆಡಲು ಆಘಾತಕ್ಕೆ ತತ್ತರಿಸಿ ಮೇಲಕ್ಕೂ ಕೆಳಕ್ಕೂ ಉಯ್ಯಾಲೆಯಂತೆ ತೂಗಿತು, ಮಾಸು ಬಣ್ಣದ ಕಠಿನ ದೇಹ, ಮೇಘ ಚುಂಬಿತವಾದ ಉನ್ನತಶಿರ, ಶಿರದಲ್ಲಿ ಪೌರುಷಯುಕ್ತವಾಗಿ ಬೆಳೆದು ನಾಲ್ದೆಸೆಗೂ ಧನುಸ್ಸಿನಂತೆ ಕೆಳಗೆ ಬಾಗಿದ್ದ ಕಪ್ಪು ಹಸುರಿನ ಹೆಡಲುಗಳು, ಆ ಹೆಡಲುಗಳ  ಕೇಂದ್ರದಲ್ಲಿ ಹಸುರು ಈಟಿಯಂತೆ ಚೂಪಾಗಿ ನೆಟ್ಟನೆ ಗಗನಕ್ಕೆದುರಾಗಿ ನಿಂತಿದ್ದ ಅದರ ಸುಳಿ, ಹೆಡಲುಗಳ ಬುಡದಲ್ಲಿದ್ದ ಕಡುಹಸುರು ದಿಂಡಿಗೆದುರಾಗಿ ತಾಯಿಯ ಒಲ್ಮೆ ಹಸುಳೆಯ ಹೃದಯವನ್ನು ಆವರಿಸುವಂತೆ ಒಳಗಿದ್ದ ಮೃದುವಾದ ಹಿಂಗಾರವನ್ನು ಅಪ್ಪಿದ್ದ ಬಿಳಿ ಹಳದಿ ಬಣ್ಣದ ಹೊಂಬಾಳೆ- ಇವುಗಳಿಂದ ಅಲಂಕೃತವಾಗಿ ಧೀರಿವಾಗಿ ನಿಂತು ಹೂವಯ್ಯನನ್ನು ಸ್ಮರಣೆಗೆ ತರುತ್ತಿದ್ದ ಆ ಅಡಕೆಯ ಮರದ ಬುಡದಲ್ಲಿ ಬಾಳೆಯ ಸಸಿ ಸೀತೆಗೆ ತನ್ನನ್ನೆ  ಜ್ಞಾಪಕಕ್ಕೆ ತರುವಂತಿತ್ತು. ಬಾಳೆಯ ಕಂದಿನ ಹೆಡಲು ತೂಗಿ ತೂಗಿ ಕ್ರಮೇಣ ನಿಶ್ಚಲವಾಯಿತು. ಅಣ್ಣನಿಗೆ ಹೇಳಿದ್ದಂತೆ ಸೀತೆ ಹೂ ಕುಯ್ಯಲಿಲ್ಲ. ವಸಂತದ ಮಂದಪವನನು ಉದ್ಯಾನದ ಕುಸುಮ ಕುಂಜಗಳಲ್ಲಿ ಲಲಿತ ಗಮನದಿಂದ ಸಂಚರಿಸುವಂತೆ ಅವಳು ಸ್ವಲ್ಪ ಉತ್ಕಂಠಿತಭಾವದಿಂದ ಬಣ್ಣದ ಸೀರೆಯ ನಿರಿ ಸದ್ದುಮಾಡಿ ಬಳುಕುವಂತೆ ತೇಲಿ ನಡೆದು ಮನೆಯ ಹೆಬ್ಬಾಗಿಲನ್ನು ಪ್ರವೇಶಿಸುತ್ತಿದ್ದಾಗ ಕೊಟ್ಟಿಗೆಯೆಡೆ ತಾಯಿದನ ಮೈ ನೆಕ್ಕುತ್ತಿದ್ದ ಎಳಗರುವೊಂದು ಸೀತೆಯನ್ನೆ ಎವೆಯಿಕ್ಕದೆ ನೋಡುತ್ತಿತ್ತು.

ಸೀತೆ ಕಾಲು ತೊಳೆದುಕೊಂಡು, ಹೂಗಳನ್ನು ತನ್ನ ಕೊಟ್ಟಡಿಯಲ್ಲಿಟ್ಟು ಅಡುಗೆಮನೆಗೆ ಹೋದಾಗ ಗೌರಮ್ಮನವರು ಹೋಳಿಗೆ ಮಾಡುವ ಸನ್ನಾಹದಲ್ಲಿದ್ದರು. ಚಿನ್ನಯ್ಯನು ತಿಂಡಿ ಪೂರೈಸಿ ಕಾಫಿ ಕುಡಿಯುತ್ತಿದ್ದವನು” ಹೂ ಕುಯ್ದಾಯ್ತೆ?” ಎಂದು ತಂಗಿಯ ಕಡೆಗೆ ವ್ಯಂಗ್ಯವಾಗಿ ನೋಡಿ ನಕ್ಕನು. ಸೀತೆ ಹುಬ್ಬು ಗಂಟುಹಾಕಿ ಮಾತಾಡದೆ ತಾಯಿಗೆ ಕೆಲಸದಲ್ಲಿ ನೆರವಾದಳು.