ಚಂದ್ರಯ್ಯಗೌಡರು ತೀರಿಹೋಗಿ ಒಂದು ವರ್ಷದ ಮೇಲಾಗಿತ್ತು. ಸುಬ್ಬಮ್ಮ ಹೆಗ್ಗಡಿತಿಯ ಸಾಮರ್ಥ್ಯದ ಖ್ಯಾತಿ ನಾಡನುಡಿಯಾಗಿತ್ತು. ಗಂಡಸರು ಕೂಡ ಒಬ್ಬರನ್ನೊಬ್ಬರು ಮೂದಲಿಸುವಾಗ “ಅಯ್ಯೋ ಕೈಲಾಗದಿದ್ದವನೆ, ಕಾನೂರಿಗೆ ಹೋಗಿ, ಸುಬ್ಬಮ್ಮ ಹೆಗ್ಗಡಿತಿಯ ಕಾರುಬಾರನ್ನಾದರೂ ನೋಡಿ ಕಲಿತುಕೊಂಡು ಬಾ,ನಡಿ” ಎಂದುಕೊಳ್ಳತೊಡಗಿದ್ದರು.

“ಬೇಲರೂ ಗಟ್ಟದವರೂ ಥರಥರ ನಡುಗುತ್ತಾರಂತೆ. ಸುಬ್ಬಮ್ಮನ ಬಾಯಿಕೇಳಿದರೆ….. ಆ ಸೇರೆಗಾರ ರಂಗಪ್ಪಸೆಟ್ಟರಂತೂ ಕಾಲುಸಂದಿಯಲ್ಲಿ ಬಾಲಮುದುರಿಕೊಂಡು ನಾಯಿಮರಿ ಆಗಿಬಿಟ್ಟಿದ್ದಾರಂತೆ!….. ರಾಮಯ್ಯಗೌಡರು ಮನೆ ವೈವಟ್ಟಿನ ಗೋಜಿಗೇ ಹೋಗುವುದಿಲ್ಲವಂತೆ: ಎಲ್ಲ ತಮ್ಮ ಚಿಕ್ಕಮ್ಮನ ಕೈಲಿ ಬಿಟ್ಟುಬಿಟ್ಟಿದ್ದಾರಂತೆ!….. ಏನು ಧೈರ್ಯ ಅಂದರೆ ಅವರಿಗೆ! ಹೆಂಗಸಾದರೂ ಒಬ್ಬ ದಿಂಡೇ ದಾಂಡಿಗ ಬೇಲರಾಳಿಗೆ ಹುಣಿಸೆಬರಲು ತಗೊಂಡು ಮೈಯೆಲ್ಲ ಬರೆ ಬೀಳುವಂತೆ ಹೊಡೆದುಬಿಟ್ಟರಂತೆ!….. ಚಂದ್ರಯ್ಯಗೌಡರ ಹೆಂಡತಿ ಚಂದ್ರಯ್ಯಗೌಡರೇ ಆಗಿಬಿಟ್ಟಿದ್ದಾರಂತೆ!….. ” ಎಂದು ಮೊದಲಾಗಿ ಜನರ ಪಡೆ ಮಾತು ಹಬ್ಬಿದ್ದಿತು.

ಜನರ ಮಾತಿನಲ್ಲಿ ಅತಿಶಯೋಕ್ತಿ ಇದ್ದಿದ್ದರೂ ಸುಳ್ಳಿರಲಿಲ್ಲ. ಸುಬ್ಬಮ್ಮನ ಪ್ರಭಾವ ಮೆಲ್ಲಮೆಲ್ಲನೆ ಬೆಳೆದು ಅಪ್ರತಿಹತವಾಗಿತ್ತು. ಆಕೆಯ ಅಪ್ಪಣೆಯ ಹೊರತು ಯಾರೂ ಹೆಜ್ಜೆಯಿಡುತ್ತಿರಲಿಲ್ಲ. ಗಂಡನ ಗದ್ದುಗೆಗೆ ತಾನು ಏರಿದ್ದೇನೆ ಎಂಬ ಶ್ರದ್ಧೆಯಿಂದ ಆಕೆಯಲ್ಲಿ ಚಂದ್ರಯ್ಯಗೌಡರ ದರ್ಪವೂ ಅದರೊಡನೆ ಕಾಠಿನ್ಯವೂ ಮತ್ತೆ ಒಂದಿನಿತು ಕ್ರೌರ್ಯ ಸಂಮಿಶ್ರವಾದ ಧೂರ್ತತೆಯೂ ಮೊಳೆತು ಬೆಳೆಯುತ್ತದ್ದುವು. ಅಧಿಕಾರಮದದೊಡನೆ ಯೌವನಮದವೂ ಕೂಡಿತ್ತು. ತಾರುಣ್ಯದ ಗಿರಿಶಿಖರವೇರಿರುವ ಹೆಣ್ಣು ಅಧಿಕಾರಿಯಾದರೆ, ಅನೇಕರು ಅನೇಕ ಕಾರಣಗಳಿಂದ ಅವಳಿಗೆ ಆಳಾಗಿ, ಅವಳ ವ್ಯಕ್ತಿತ್ವಕ್ಕೆ ತಲೆಬಾಗುತ್ತಾರೆ. ಕಿವಿಗಳಲ್ಲಿ ಮೂಗಿನಲ್ಲಿ ಕೊಲರಳಿನಲ್ಲಿ ಮುಡಿಯಲ್ಲಿ ಒಡವೆಗಳಿಲ್ಲದಿದ್ದರೇನಂತೆ? ವಿಧವೆಯಾದ ಸುಂದರ ತರುಣಿ ದಟ್ಟವಾಗಿ ಬೆಳೆದ ತಲೆಕೂದಲನ್ನು ಬಾಚಿ ಬೈತಲೆ ತೆಗೆದು ತುರುಬುಕಟ್ಟಿ, ಕಾಗಿನ ಸೀರೆಯನ್ನು ಬಿಗಿದು ಮಲೆನಾಡಿನ ಉಡುಗೆಯುಟ್ಟು, ಕೈಕಡಗದಿಂದಲೂ, ಸುಪುಷ್ಟ ಕಾಯದಿಂದಲೂ ತುಂಬಿದೆದೆಗಳಿಂದಲೂ, ದುಂಡುಮೊಗದಿಂದಲೂ ಹುಕುಂ ಚಲಾಯಿಸುತ್ತ ಎದುರು ನಿಂತರೆ, ಸೇರೆಗಾರ ರಂಗಪ್ಪಸೆಟ್ಟರಂತಹ ಯಾವ ಗಂಡಸು ತಾನೆ ಆಕೆಯಾಜ್ಞೆಯನ್ನು  ಶಿರಸಾವಹಿಸದೆ ಇರುತ್ತಾನೆ? ಆಕೆ ಬೈದರೆ ಮಹಾ ಆಶೀರ್ವಾದವೆಂದೂ, ಹೊಡೆದರೆ ಧನ್ಯನಾದೆನೆಂದೂ ಭಾವಿಸದೆ ಇರುತ್ತಾನೆ? ಸುಬ್ಬಮ್ಮನ ಪ್ರಭಾವಕ್ಕೆ ಕಾರಣ ಅರೆಪಾಲು ಆಕೆಯ ತರುಣವ್ಯಕ್ತಿತ್ವವಾಗಿತ್ತು. ಆದರೆ ಆಕೆಗೆ ಮಾತ್ರ ಆ ಗುಟ್ಟು ತಿಳಿದಿರಲಿಲ್ಲ.

ಗೃಹಕೃತ್ಯವನ್ನು ಬಿಗಿಯಾಗಿ ಯಶಸ್ವಿಯಾಗಿ ನಡೆಸುತ್ತೇನೆ ಎಂಬ ಹೆಮ್ಮಯ ಸಲುವಾಗಿ ಆಕೆ ತನ್ನ ಹಿಂದಿನ ಬಡಸ್ಥಿತಿಯನ್ನೂ ತನಗೊದಗಿದ್ದ ಕಷ್ಟಸಂಕಟ ಅನ್ಯಾಯ ನಿಂದೆಗಳ ಪರಂಪರೆಗಳನ್ನೂ ಮರೆತು, ಬರಬರುತ್ತಾ ಹೆಚ್ಚುಹೆಚ್ಚು ಕ್ರೂರವಾಗಿ ವರ್ತಿಸತೊಡಗಿದ್ದಳು. ರಾಮಯ್ಯ ತನ್ನ ಮನೋವ್ಯಥೆಯ ಮೊಟ್ಟೆಯಮೇಲೆ ಕಾವುಕೂತು ಮನೆವಾರ್ತೆಯ ಯಾವ ಗೋಜಿಗೂ ಹೋಗದೆ ತಟಸ್ಥನಾಗಿದ್ದುದರಿಂದ ಸುಬ್ಬಮ್ಮನ ಮೈಗೆ ಬಣ್ಣವೂ, ಕೈಗೆ ನಖಗಳೂ,  ತಲೆಗೆ ಕೋಡೂ ಮೂಡಿದಹಾಗಿತ್ತು. ತನ್ನ ಹೆಗ್ಗಡಿತಿತನದಲ್ಲಿ ಪಾಳುಬಿದ್ದಿದ್ದ ಹಳೆಯ ದೆಯ್ಯ, ಜಕ್ಕಣಿ, ಪಂಜ್ರೊಳ್ಳಿ ಮೊದಲಾದ ಅಂತರ ಬೆಂತರಗಳನ್ನೆಲ್ಲ ವೆಂಕಪ್ಪಯ್ಯವನರ ಕೈಯಿಂದಲೆ ಮರಳಿ ಸ್ಥಾಪಿಸಿ ಜೀರ್ಣೋದ್ಧಾರ ಮಾಡಿದ್ದಳು. ಚಂದ್ರಯ್ಯಗೌಡರ ಕಡೆಗಾಲದಲ್ಲಿ ಇನ್ನೂ ಬದುಕಿದ್ದ ಭೂತ  ರಣಾದಿಗಳಿಗೆ ಹರಕೆಯ ಕಂದಾಯವನ್ನು ಹೆಚ್ಚುಮಾಡಿ, ಒಂದು ಕುರಿ ’ಆಯಾರ’ ಕೊಡುತ್ತಿದ್ದಲ್ಲಿ ಎರಡು ಕುರಿಗಳನ್ನೂ, ಒಂದು ಕೋಳಿ ಕೊಡುತ್ತಿದ್ದಲ್ಲಿ ಎರಡು ಕೋಳಿಗಳನ್ನೂ ಕೊಡತೊಡಗಿದ್ದಳು. ಕಾನೂರಿಗೆ ಬಂದೊದಗಿದ್ದ ಕಷ್ಟಗಳಿಗೆಲ್ಲಾ ಭೂತಾದಿಗಳಿಗೆ ಸರಿಯಾದ ’ಆಯಾರ’ ಕೊಡದಿದ್ದುದೆ ಮುಖ್ಯ ಕಾರಣವೆಂದು ತಿಳಿದಿದ್ದ ಆಕೆಯ ಮೌಢ್ಯಕ್ಕೆ ವೆಂಕಪ್ಪಯ್ಯ ಜೋಯಿಸರು ತಮ್ಮ ಮಹಾಜ್ಞಾನದ ಆಧಾರವನ್ನೂ ದಯಪಾಲಿಸಿದ್ದರು. ಇದನ್ನೆಲ್ಲ ಕಂಡುಂಡು ಸಾಮಾನ್ಯ ಜನರಿಗೆ ಬಹಳ ಸಂತೋಷವಾಗಿತ್ತು. ಅವರಿಗೆ ತುಂಡು ಕಡುಬು ಹೆಂಡ ಕಳ್ಳು ಯಥೇಚ್ಛವಾಗಿ ದೊರೆಯಬಹುದಾದ ಪ್ರತಿಯೊಂದು ಕ್ರಿಯೆಯೂ ಎಂದೆಂದಿಗೂ ನಿಲ್ಲಿಸಬಾರದ ಅತ್ಯಂತ ಪವಿತ್ರವಾದ ’ಸನಾತನ ಧರ್ಮ’ವಾಗಿತ್ತು. ಆ ಕಾರಣದಿಂದಲೂ ಅನೇಕರು ಸುಬ್ಬಮ್ಮ ಹೊಡೆದರೂ ಬೈದರೂ ಕೇಳಿಕೊಂಡು ತುಟಿಪಿಟಕ್ಕೆನ್ನದೆ ಇದ್ದದ್ದು!

ಒಂದು ದಿನ ಬೆಳಗ್ಗೆ ಹೊಂಬಿಸಿಲು ಮರಗಳ ಹಸುರಿನ ಮೇಲಿದ್ದ ಹನಿಗಳಲ್ಲಿ ರಮಣೀಯವಾಗಿ ಮಿರುಗುತ್ತಿರಲು, ಹೊದೆಹೊದೆಗಳಲ್ಲಿ ಹಕ್ಕಿಗಳು ಮನೋಹರವಾಗಿ ಹಾಡುತ್ತಿರಲು, ಸುಬ್ಬಮ್ಮ ಅಡಿಗೆಯವನಿಗೆ ಅವನು ಮಾಡಬೇಕಾದ ಕೆಲಸಗಳನ್ನೆಲ್ಲ ಹೇಳಿ, ತೋಟದಾಚೆ ಹೊಸದಾಗಿ ಅಗೆಯುತ್ತಿದ್ದ ಅಗಳಿನ ಕೆಲಸವನ್ನು ನೋಡಲೋಸ್ಕರ ವಲ್ಲಿ ಕಟ್ಟಿಕೊಂಡು ಹೊರಡುತ್ತಿದ್ದಳು.

ಅಡಿಗೆಯವನು”ಎಂಥ ಮೇಲೋಗರ ಮಾಡಾದಮ್ಮ? ತರಕಾರಿ ಏನು ಇಲ್ಲ” ಎಂದನು.

“ಪುಟ್ಟಗೆ ಹೇಳಿದ್ದೆನಲ್ಲಾ, ತರಲಿಲ್ಲೇನು? ” ಎಂದು ಸುಬ್ಬಮ್ಮ ಸಿಡುಕಿದಳು.

“ಆಂವ ಎತ್ತಮಕ ಹೋದ್ನಪ್ಪಾ? ಆವಾಗ್ಲೆ ಹೋದಾವ್ಞ ಇನ್ನೂ ಕಣ್ಣಿಗೆ ಕಾಣಾಕೇ ಇಲ್ಲ. ಏನು ಪ್ಯಾರ‍್ಲುಮರಾ ಹತ್ತಿದನೋ? ಪನ್ನೇರ‍್ಲು  ಮರಾ ಹತ್ತಿದನೋ? ” ಎನ್ನುತ್ತಿದ್ದ ಅಡಿಗೆಯವನ ಕೈಯಲ್ಲಿದ್ದ ಒಳ್ಳೆಣ್ಣೆಯ ಕುಡಿಕೆ ಅಕಸ್ಮಾತ್ತಾಗಿ ಕೆಳಗೆ ಬಿದ್ದು ಒಡೆದು ಚೂರಾಯಿತು. ಅವನಂತೂ ಭೀತಿ ಹೊಡೆದಂತೆ ಕಲ್ಲಾಗಿ ನಿಂತುಬಿಟ್ಟನು. ಸುಬ್ಬಮ್ಮ ’ನಿನ್ನ ತಲೆಗೆ ಬೆಂಕಿ ಹಾಕ’ ಎಂದು ಬೈಯುತ್ತಾ ನುಗ್ಗಿಬಂದು, ನೆಲದ ಮೇಲೆ ಹರಿದು ಇಂಗುತ್ತಿದ್ದ ಎಣ್ಣೆಯನ್ನು ಬೊಗಸೆಗೈಯಲ್ಲಿ ಬಳಿದು, ತೆರೆದ ಕಣ್ಣು ಮುಚ್ಚದೆ ಹೆದರಿ ನಿಂತಿದ್ದ ಅಡುಗೆಯವನ ಮುಖಕ್ಕೆ ಪಚಕ್ಕನೆ ಹೊಡೆದು, ಚೂರಾಗಿದ್ದ ಕುಡಿಕೆಯ ಓಡುಗಳನ್ನು ಎತ್ತಿ ’ನಿನ್ನ ಹೆಣಕ್ಕೆ ಹಾಕಿಕೋ’ ಎಂದು ಶಪಿಸಿ ಬೀಸಿ ಬಡಿದು, ಕೈಗೆ ಹಿಡಿದಿದ್ದ ಎಣ್ನೆಯನ್ನು ತನ್ನ ತಲೆಕೂದಲಿಗೆ ಉಜ್ಜಿಕೊಳ್ಳುತ್ತಾ ಹೊರಗೆ ಹೋದಳು.

ತೋಟಕ್ಕೆ ಇಳಿಯುತ್ತಿದ್ದಾಗಲೆ ಪುಟ್ಟ ಸುಬ್ಬಮ್ಮನ ಅಪ್ಪಣೆಯಂತೆ ಬಾಳೆಯ ದಿಂಡನ್ನು ಪಚ್ಚಡಿಗಾಗಿ ಹೊತ್ತು, ತನ್ನ ಸುತ್ತಲೂ ಹಿಂಬಾಲಿಸಿ ಬರುತ್ತಿದ್ದ ನಾಯಿಗಳೊಡನೆ  ಆಟವಾಡುತ್ತಾ ಬರುತ್ತಿದ್ದನು. ಸುಬ್ಬಮ್ಮ ಉರಿಮೋರೆಯಿಂದ “ಇಷ್ಟೊತ್ತು ಏನು ಮಾಡ್ತಿದ್ದ್ಯೋ?” ಎಂದವಳೆ ಮರುಮಾತಿಗವಕಾಶ ಕೊಡದೆ, ಅವನ ಕಿವಿಯನ್ನು ಅಯ್ಯೋ ಎಂದು ಚೀರಿಡುವಂತೆ ಹಿಂಡಿ ಮುಂಬರಿದಳು.

ಪುಟ್ಟ ಕಣ್ಣೀರಿಡುತ್ತಾ ತುಟಿ ನಡುಗಿಸುತ್ತಾ ಸುಬ್ಬಮ್ಮ ಮರೆಯಾಗುವುದನ್ನೇ ತಿರುಗಿ ನೋಡುತ್ತಿದ್ದವನು “ಹಡ್ಬೆಹಾದರಗಿತ್ತಿ!” ಎಂದು ಮೊದಲಾಗಿ ಗುಟ್ಟಾಗಿ ಬೈಯುತ್ತಾ ಮೆಟ್ಟಲೇರಿದನು. ಆಳುಗಳೆಲ್ಲಾ ಅಷ್ಟು ಮುಂಬೊತ್ತಿಗಾಗಲೆ ಬಂದು ಅಗಳು ತೋಡುವ ಕೆಲಸದಲ್ಲಿ ತೊಡಗಿದ್ದರು. ಸೇರೆಗಾರರು ಗಟ್ಟಿಯಾಗಿ ಅಪ್ಪಣೆಗಳನ್ನು ಅತ್ತ ಇತ್ತ ಬೀಸುತ್ತಾ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದರು. ಸುಬ್ಬಮ್ಮ ಬರುತ್ತಿರುವುದನ್ನು ದೂರದಿಂದಲೆ ಕಂಡ ಅವರು ದನಿ ತಗ್ಗಿಸಿ ತಮ್ಮ ಆಳುಗಳಿಗೆ ’ಹೊಯ್, ಹೆಗ್ಗಡಿತಮ್ಮ ಬಂದರು ಗಡೆ!, ಎಂದು ಬೇಹುಗೊಟ್ಟರು. ಆಳುಗಳೆಲ್ಲ ಮೊದಲಿಗಿಂತಲೂ ಹೆಚ್ಚಾದ ಶ್ರದ್ಧೆಯಿಂದ ಕೆಲಸದಲ್ಲಿ ತೊಡಗಿದರು.

ಸುಬ್ಬಮ್ಮ ಬೇಲರಾಳೊಬ್ಬನು ಕೆಲಸಕ್ಕೆ ಬರದಿದ್ದುದನ್ನು ಕಂಡು, ದೂರದಲ್ಲಿ ಮಾತಿಲ್ಲದೆ ದರೆ ಅಗೆಯುತ್ತಿದ್ದ ಓಬಯ್ಯನನ್ನು ಕುರಿತು, ಹಿಂದಿನ ವಾಡಿಕೆಯಂತೆ ’ಓಬಣ್ಣಯ್ಯ!’ ಎಂದು ಸಂಬೋಧಿಸಿ “ಆಬಚ್ಚ ಯಾಕೆ ಕೆಲಸಕ್ಕೆ ಬರಲಿಲ್ಲಾ?” ಎಂದು ಕೇಳಿದಳು.

ಓಬಯ್ಯ ಅಗಿಯುವುದನ್ನು ತುಸು ನಿಲ್ಲಿಸಿ “ಅವನಿಗೆ ಮೈಕೈ ನೋವಂತೆ” ಎಂದುಸುರಿ, ಮತ್ತೆ ದರೆ ಅಗೆಯತೊಡಗಿದನು.

ಸುಬ್ಬಮ್ಮ ಸಿದ್ದನನ್ನು ಕಳುಹಿಸಿ, ಬಚ್ಚನನ್ನು ಬಲಾತ್ಕಾರದಿಂದ ಕರೆತರಿಸಿ ಅವನನ್ನು ಕೆಲಸಕ್ಕೆ ಹಚ್ಚಿಸದೆ ಬಿಡಲಿಲ್ಲ.

ಆಳುಗಳೆಲ್ಲ ಕೆಲಸ ಮಾಡುವುದನ್ನು ನೋಡುತ್ತಾ ಒಂದು ದಿಣ್ಣೆಯ ಮೇಲೆ ಕುಳಿತಿದ್ದ ಸುಬ್ಬಮ್ಮ ತನ್ನ ಮಡಿಲಿನಿಂದ ಬಾಯಿಗೆ ಹಾಕಿಕೊಳ್ಳುವ ಸಾಮಾನುಗಳನ್ನು ಒಂದೊಂದನ್ನಾಗಿ ತೆಗೆದು ಎಲೆಯಡಕೆ ಹಾಕಿಕೊಳ್ಳತೊಡಗಿದಳು. ಸೇರೆಗಾರರೂ ಬಹಳ ಚಟುವಟಿಕೆಯಿಂದ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹೋಗಿ ಹದಕೆ ಹೇಳುತ್ತಾ ಇದ್ದು, ತುಸುಹೊತ್ತಿನಲ್ಲಿಯೆ ಸುಬ್ಬಮ್ಮ ಬಳಿಗೆ ಬಂದು ಸ್ವಲ್ಪ ದೂರದಲ್ಲಿ ಕುಳಿತು, ಬಹಳ ವಿನಯದಿಂದಲೂ ನಮ್ರತೆಯಿಂದಲೂ”ನನಗೊಂದು ಚೂರು ಬಾಯಿಗೆ ಕೊಡ್ತೀರಾ!” ಎಂದು ಉಬ್ಬು ಹಲ್ಲುಗಳನ್ನು ಚೆನ್ನಾಗಿ ಪ್ರದರ್ಶಿಸಿ ಮುಗುಳು ನಗುತ್ತಾ ಬೇಡಿದರು. ಸುಬ್ಬಮ್ಮ ತನ್ನ ಮಡಿಲಿನಿಂದ ಎಲೆ ಅಡಕೆ ಸುಣ್ಣ ಹೊಗೆಸೊಪ್ಪುಗಳನ್ನು ಒಂದೊಂದನ್ನಾಗಿ ತೆಗೆದಿತ್ತಳು. ಸೇರೆಗಾರರು ಆನಂದದಿಂದ ಬಾಯಿಗೆ ಹಾಕಿಕೊಂಡು ತುಟಿ ನಾಲಗೆ ಹಲ್ಲುಗಳೆಲ್ಲ ಕೆಂಪಾಗುವಂತೆ ಅಗಿಯುತ್ತಾ, ಆಗಾಗ ಪಿಚಕ್ಕನೆ ಕೆಂಪು ಎಂಜಲನ್ನು ಉಗುಳುತ್ತಾ ಮಾತಾಡುತ್ತಾ ಕುಳಿತರು.

ಮೊದಮೊದಲನೆಯ ಮಾತು ಆಳುಗಳು ಅಗೆಯುತ್ತಿದ್ದ ಅಗಳಿನ ವಿಚಾರವಾಗಿತ್ತು. ಅಲ್ಲಿಂದ ತೋಟದ ಬೇಲಿಯ ಕಡೆಗೆ ತಿರುಗಿತು. ಆಮೇಲೆ ತೋಟದ ಬೇಸಾಯದ ವಿಚಾರವಾಗಿ ತುಸುದೂರ ಸಾಗಿತ್ತು. ಅಲ್ಲಿಂದ ಆ ವರ್ಷದ ಅಡಕೆಯ ಫಸಲಿನ ಕಡೆಗೆ ಹರಿಯಿತು. ಆಮೇಲೆ ಅಡಕೆ ಧಾರಣೆ. ಅಲ್ಲಿಂದ ಮುತ್ತಳ್ಳಿಯವರಿಗೆ ಕೊಡಬೇಕಾಗಿದ್ದ ಸಾಲದ ಮಾತು ಬಂದಿತು. ಅಲ್ಲಿಂದ ಸೀತೆ, ರಾಮಯ್ಯ, ಚಿನ್ನಯ್ಯ ಇತ್ಯಾದಿಗಳ ಕಡೆಗೆ ಒಲೆಯಿತು.

“ಹೌದಾ, ರಾಮೇಗೌಡರು ಬೇರೆ ಮದೇಮಾಡಿಕೊಂಡರೆ ಏನಾಗ್ತದೆ? ನಿಮ್ಮ ಯಜಮಾನರಿಗೂ ಅದೇ ಇದ್ದಿತಲ್ಲಾ? ಆ ಹೆಣ್ಣಿಗೆ (ಸೀತೆ ಎಂದು ಅವರ ಭಾವ) ಹುಚ್ಚು ಹಿಡಿದಿತ್ತು! ಅದನ್ನು ಕಟ್ಟಿಕೊಂಡು ಇವರು ಗುಂಡಿಗೆ ಬೀಳುವುದಾ?” ಎಂದರು ಸೇರೆಗಾರರು.

ಸುಬ್ಬಮ್ಮ ಅವರ ಕಡೆಗೆ ನೋಡದೆ ಕೆಲಸ ಮಾಡುತ್ತಿದ್ದ ಆಳುಗಳ ಕಡೆಗೇ ನೋಡುತ್ತಾ “ಆ ಹೆಣ್ಣಿನ ದೆಸೆಯಿಂದಲೇ ನಮ್ಮ ಮನೆಗೆ ಶನಿ ಹಿಡಿದುಹೋಯ್ತು. ಮನೆ ಪಾಲಾಗಿ ಹಾಳಾಯ್ತು! ಅವರೂ ಬಾಳದೆ ಹೋದರು! ಮದುವೆ ಆದವರಿಗೂ ಶನಿ ತಪ್ಪಲಿಲ್ಲ…” ಎಂದು ಹನಿ ತುಂಬುತ್ತಿದ್ದ ಕಣ್ಣುಗಳನ್ನು ವಲ್ಲಿಯ ಸೆರಗಿನಿಂದ ಒರಸಿಕೊಳ್ಳುತ್ತಾ  “ಇನ್ನೂ ಏನೇನು ಆಗಬೇಕು ಅಂತಾ ಇದೆಯೋ ದೇವರ ಮನಸ್ಸಿನಲ್ಲಿ!” ಎಂದು ಸುಮ್ಮನಾದಳು.

ಸೇರೆಗಾರರೂ ಆಮೇಲೆ ಮಾತಾಡಲಿಲ್ಲ. ಆಳುಗಳು ಅಗೆಯುತ್ತಿದ್ದ ಹಾರೆಗುದ್ದಲಿಗಳ ಸದ್ದಿನೊಡನೆ ಸುತ್ತಲೂ ಮರಗಿಡಗಳಲ್ಲಿ ಹಾರಾಡುತ್ತಿದ್ದ ಹಕ್ಕಿಗಳ ಉಲಿಯೂ ಸೇರಿ ಕೇಳಿಬರುತ್ತಿತ್ತು.

ಸುಬ್ಬಮ್ಮ ಹತ್ತು ನಿಮಿಷಗಳವರೆಗೆ ಸುಮ್ಮನೆ ಕುಳಿತಿದ್ದು, ಹೊರಡಲು ಮೇಲೆದ್ದು ನಿಂತಳು. ಸೇರೆಗಾರರೂ ಎದ್ದು ಅವಳನ್ನು ಕಿಂಕರರಂತೆ ಹಿಂಬಾಲಿಸಿದರು. ಹತ್ತುಮಾರು ಹೋದಮೇಲೆ ಸೇರೆಗಾರರು ’ಹೆಗ್ಗಡಿತಮ್ಮಾ, ಆ ತೋಟದ ಮೇಲಿನ ಕೆರೇ ಕೋಡಿ ಸರಿಮಾಡಲಕ್ಕು, ನೀವು ಸ್ವಲ್ಪ ನೋಡಿ ಹೇಳಿಬಿಟ್ಟಿದ್ರೆ…” ಎಂದು ನಿಲ್ಲಿಸಿದರು.

ಸುಬ್ಬಮ್ಮ ಮೌನವಾಗಿ ಸಮ್ಮತಿಸಿ, ಸೇರೆಗಾರರನ್ನು ಹಿಂಬಾಲಿಸಿದಳು. ಇಬ್ಬರೂ ಕೆರೆಯ ಕೋಡಿಯನ್ನು ಸೇರಿ, ನೋಡಿದರು. ಸೇರೆಗಾರರೇ ’ಅದನ್ನು ಹಾಗೆ ರಿಪೇರಿಮಾಡಬೇಕು, ಹೀಗೆ ರಿಪೇರಿ ಮಾಡಬೇಕು’ ಎಂದು ಸಲಹೆಕೊಟ್ಟರು. ಸುಬ್ಬಮ್ಮ ’ಆಮೇಲೆ ಯೋಚನೆ ಮಾಡಾನ; ಸದ್ಯಕ್ಕೆ ಅಗಳಿನ ಕೆಲಸ ಮುಗಿಯಲಿ’ ಎಂದು, ಬಂದ ದಾರಿಯಲ್ಲಿಯೆ ಹಿಂತಿರುಗಲಿದ್ದುದನ್ನು ಕಂಡು, ಸೇರೆಗಾರರು ಬೇರೊಂದು ಹತ್ತಿರದ ಒಳದಾರಿಯನ್ನು ಸೂಚಿಸಿ, ಅದರಲ್ಲಿ ಹೊರಟರು.

ಆ ದಾರಿಯಲ್ಲಿ ಸ್ವಲ್ಪ ದೂರ ಹೊಗುವುದರೊಳಗೆ ಒಂದು ದೊಡ್ಡ ಅಗಳೂ ಅದಕ್ಕೆ ಹಾಕಿದ್ದ ಬೇಲಿಯ ಒಡ್ಡೂ ಅಡ್ಡಬಂದುವು. ಸೇರೆಗಾರರು ’ಅಲ್ಲೊಂದು ಸಾರ ಹಾಕಿದೆ. ಅದರಮೇಲೆ ದಾಟಬಹುದು’ ಎಂದು ಹೇಳಿ ಸುಬ್ಬಮ್ಮನನ್ನು ಅಗಳಿನ ಪಕ್ಕದಲ್ಲಿಯೇ ಕರೆದುಕೊಂಡು ಹೋದರು.

ಕಡೆಗೆ ಎರಡು ಅಡಕೆಮರಗಳನ್ನು ಜೋಡಿಸಿ ಅಗಳಿಗೆ ಅಡ್ಡವಾಗಿ ಸೇತುವೆಯಂತೆ ಹಾಕಿದ್ದ ಸಾರವೂ ಗೋಚರಿಸಿತು. ಸೇರೆಗಾರರು ಅದರ ಮೇಲೆ ನಡೆದು ಆಚೆಗೆ ದಾಟಿದರು. ಆದರೆ ಸುಬ್ಬಮ್ಮ ಅದರಮೇಲೆ ಹೋಗಲು ಹೆದರಿ ಈಚೆಯ ದಡದಲ್ಲಿಯೆ ನಿಂತುಬಿಟ್ಟಳು. ಅಗಳೂ ಆಳವಾಗಿತ್ತು. ಸಾರವೂ ಸ್ವಲ್ಪ ಬಳುಕುತ್ತಿತ್ತು. ಅಭ್ಯಾಸವಿಲ್ಲದವರಿಗೆ ಕಣ್ಣಹೆದರಿಕೆ ಆಗಿಯೆ ತಲೆ ಸುತ್ತುವಂತಿತ್ತು. ಅದರಲ್ಲಿಯೂ  ಹೆಣ್ಣು ಹೆಂಗಸಿಗೆ ಅದರಮೇಲೆ ನಡಿಯುವ ಸಾಹಸ ಅಸಾಧ್ಯವಾಗಿತ್ತು. ಸೇರೆಗಾರರು ಆಚೆಯ ದಡದಿಂದ ’ಹೆದರಬೇಡಿ ಬನ್ನಿ. ಬಲವಾಗಿದೆ ಸಾರ’ ಎಂದು ಧೈರ್ಯ ಹೇಳಿದರೂ ಸುಬ್ಬಮ್ಮ ಒಂದೆರಡು ಸಾರಿ ಪ್ರಯತ್ನಿಸಿಯೂ ಎದೆಯಾಗದೆ ’ಅಯ್ಯಪ್ಪ!’ ಎನ್ನುತ್ತ ಹಿಂದೆ ಸರಿದಳು.

ಸೇರೆಗಾರರು ಏನೋ ಸಾಧಾರಣ ಎಂಬಂತೆ ದನಿಯಲ್ಲಿ ಮುಗ್ದತೆಯನ್ನು ನಟಿಸುತ್ತಾ “ನನ್ನ ಕೈಹಿಡಿಕೊಂಡು ಮೆಲ್ಲಗೆ ದಾಟಿಬನ್ನಿ!” ಎನ್ನುತ್ತಾ ಮತ್ತೆ ಸಾರವನ್ನು ಹಿಂದಕ್ಕೆ ದಾಟಿ ಸುಬ್ಬಮ್ಮನಿದ್ದೆಡೆಗೆ ಹೋದರು. ಆ ಮಾತನ್ನು ಕೇಳಿದ ತರುಣ ವಿಧವೆಯ ಎದೆನೆತ್ತರು ಮುಖಕ್ಕೆ ಉಕ್ಕಿದಂತಾಗಿತ್ತು.

ಸರಕ್ಕನೆ ದೂರ ಸರಿದು ನಿಂತು “ಬ್ಯಾಡ, ಬಂದ ಹಾದೀಲೆ ಹೋಗಾನ ಬನ್ನಿ. ಸಾರದ ಮೇಲೆ ಹೋಗಾಕೆ ನನ್ನಿಂದಾಗಾದಿಲ್ಲ” ಎಂದಳು.

ಸೇರೆಗಾರರ ಮನಸ್ಸಿನಲ್ಲಿ ಬಹಳ ಕಾಲದಿಂದ ಅದುಮಿಕೊಂಡಿದ್ದ ಏನೇನೋ ಕಾಮಭಾವಗಳು ಮತ್ತೆ ತಲೆಯೆತ್ತಿದ್ದುವು. ಸುತ್ತಲೂ ಹೆಗ್ಗಾಡೂ ಅಡಕೆ ತೋಟಗಳೂ ಬೆಳೆದು ಸ್ಥಳ ಏಕಾಂತವಾಗಿತ್ತು; ನಿರ್ಜನವಾಗಿತ್ತು. ಆದರೆ ಸುಬ್ಬಮ್ಮ ಕೂಗಿಕೊಡರೆ ತುಸುದೂರದಲ್ಲಿ ಕೆಲಸಮಾಡುತ್ತಿದ್ದ ಆಳುಗಳು ಬರದೆ ಇರಲಾರರೆಂಬ ಅಳುಕಿನಿಂದ ತಮ್ಮ ಅಳಿಯಾಸೆಯನ್ನು ಪ್ರಯತ್ನಪೂರ್ವಕವಾಗಿ ದಮನಮಾಡಿಕೊಂಡು “ಹೆದರಬೇಡಿ. ಹೆಗ್ಗಡಿತಮ್ಮಾ, ನಾನೊಂದು ಕೋಲು ಹಿಡುಕೊಳ್ತೀನಿ. ನೀವು ಆ ಕೋಲಿನ ತುದಿ ಹಿಡಿದುಕೊಂಡು ಬನ್ನಿ” ಎಂದು ಒಂದು ಗಿಡವನ್ನು ಮುರಿದು ದೊಣ್ಣೆಮಾಡಿ ನೀಡಿದರು.

ಸುಬ್ಬಮ್ಮಗೆ ಆ ಸಲಹೆ ಮುಗ್ದವಾಗಿ ತೋರಿತು. ’ಹ್ಞೂ’ ಎಂದು ಸೇರೆಗಾರರು ಹಿಡಿದುಕೊಂಡಿದ್ದ ದೊಣ್ಣೆಯ ತುದಿಯನ್ನು ಬಲಗೈ ಮುಷ್ಟಿಯಿಂದ ಬಲವಾಗಿ ಹಿಡಿದುಕೊಂಡಳು. ಸೇರೆಗಾರರು ಮೆಲ್ಲಗೆ ಸಾರದಮೇಲೆ ನಡೆಯತೊಡಗಿದರು. ಸುಬ್ಬಮ್ಮನಂತೂ ಬಲಗೈ ಮುಷ್ಟಿಯಲ್ಲಿ ದೊಣ್ಣೆಯ ತುದಿಯನ್ನೂ ಎಡಗೈ ಮುಷ್ಟಿಯಲ್ಲಿ ಜೀವವನ್ನೂ ಭದ್ರವಾಗಿ ಹಿಡಿದುಕೊಂಡು ಒಂದೂವರೆ ಮಾರು ಹಿಂಬಾಲಿಸಿದ್ದಳು. ಅಷ್ಟರಲ್ಲಿ ಅಡಕೆಮರಗಳ ಬಳುಕಾಟವೂ ಹೆಚ್ಚಾಯಿತು. ಅವು ಸ್ವಾಭಾವಿಕವಾಗಿಯೆ ಬಳುಕುತ್ತಿದ್ದುದೇನೋ ನಿಜ. ಆದರೆ ಸೇರೆಗಾರರೂ ಬೇಕೆಂದೇ ತಮ್ಮ ಪದತಾಡನದಿಂದ ಸಾರದ ಬಳುಕಾಟವನ್ನು ಹೆಚ್ಚಿಸುತ್ತಿದ್ದರೆಂಬುದು ಸುಬ್ಬಮ್ಮಗೆ ಗೊತ್ತಾಗಲಿಲ್ಲ.

ಸುಬ್ಬಮ್ಮ ಮುಂಬರಿಯದೆ ನಿಂತು “ಅಯ್ಯಯ್ಯೋ, ಸೇರೆಗಾರರೆ, ಹಿಂದಕ್ಕೆ ಬನ್ನಿ; ಹಿಂದಕ್ಕೆ ಬನ್ನಿ” ಎಂದು ಕೂಗಿದಳು.

ಸೇರೆಗರರು “ಹೆದರಬೇಡಿ, ಬನ್ನಿ; ಇನ್ನೇನು ಸಾರ ಪೂರೈಸಿಹೋಯ್ತು” ಎಂದು ದೊಣ್ಣೆಯನ್ನು ಮುಂದೆ ಮುಂದೆ ಎಳೆದರು.

ಅಗಳಿನ ಆಳವನ್ನು ನೋಡಿ ಸುಬ್ಬಮ್ಮಗೆ ತಲೆತಿರುಗಿದಂತಾಯಿತು. ಹಿಂದಕ್ಕೂ ಮುಂದಕ್ಕೂ ತೂರಾಡತೊಡಗಿದಳು. ತನ್ನ ಗತಿ ಪೂರೈಸಿತೆಂದು ತಿಳಿದು ಕೂಗಲೇಳಸಿದರೂ ದನಿ ಹೊರಡಲೇ ಇಲ್ಲ. ಆಕೆಗೆ ಅಷ್ಟೊಂದು ಭೀತಿಯಾಗಿತ್ತು. ಎಂತಿದ್ದರೂ ಕೆಳಗೆ ಬಿದ್ದು ತಲೆಯೊಡೆದು ಸಾಯುತ್ತೇನೆ ಎಂದುಕೊಂಡ ಅವಳು ದೊಣ್ಣೆಯ ತುದಿಯನ್ನು ಫಕ್ಕನೆ ಕೈಬಿಟ್ಟು, ಎರಡು ಹೆಜ್ಜೆ ಮುಂದೆ ಸರಿದು ಓಡಿ, ಸೇರೆಗಾರರನ್ನೇ ಹಿಡಿದುಕೊಂಡಳು. ಸೇರೆಗಾರರೂ ಅಯ್ಯಯ್ಯೋ ಎಂದು ತತ್ತರಿಸಿದರು. ಅವರು ಅಸ್ಥಿರರಾಗಿದ್ದರೆ, ಇಬ್ಬರೂ , ತಾನೂ ಅಪಾಯದಿಂದ ಪಾರಾದುದನ್ನು ನೆನೆದು ನಕ್ಕರೂ, ಒಡನೆಯೆ ಸನ್ನಿವೇಶ ನಗೆಗೆ ಯೋಗ್ಯವಲ್ಲವೆಂದು ತಿಳಿದು ಸಿಟ್ಟಿನಿಂದ ಹುಬ್ಬುಗಂಟುಹಾಕಿಕೊಂಡು ಮನೆಯ ಕಡೆಗೆ ನಡೆದಳು.

ಸೇರೆಗಾರರು ಹೆಣ್ಣಿನ ಮೈಸೋಂಕಿನಿಂದ ತಮಗೋದಗಿದ ಸುಖವನ್ನು ಮನದಲ್ಲಿಯೆ ನೆನೆದು ಸವಿಯುತ್ತಾ ನಡುನಡುವೆ ಕಿಲಕ್ಕನೆ ನಗುತ್ತಾ ಆಳುಗಳಿದ್ದಲ್ಲಿಗೆ ಹೋದರು.

ಸುಬ್ಬಮ್ಮ ಉದ್ವಿಗ್ನ ಸ್ಥಿತಿಯಲ್ಲಿ ಮನೆ ಸೇರಿದಾಗ ಉಪ್ಪರಿಗೆಯಲ್ಲಿ ಇಬ್ಬರು ಮೂವರು ಮಾತಾಡುತ್ತಿದ್ದುದು ಕೇಳಿಬಂದಿತು. ಪುಟ್ಟನನ್ನು ಕೇಳಿದಾಗ ಮುತ್ತಳ್ಳಿ ಚಿನ್ನಯ್ಯಗೌಡರೂ

ಸೀತೆಮನೆ ಸಿಂಗಪ್ಪಗೌಡರೂ ಅತ್ತಿಗದ್ದೆ ಹಿರಿಯಣ್ಣಗೌಡರೂ ಬಂದಿದ್ದಾರೆ ಎಂದು ಹೇಳಿದನು. ಅವರು ಬಂದುದು ಏಕೆ ಎಂಬುದು ಸುಬ್ಬಮ್ಮಗೆ ತಕ್ಷಣ ಮನಸ್ಸಿಗೆ ಹೊಳೆಯಿತು.

ಸೀತೆ ತನ್ನ ಮಾಂಗಲ್ಯಸೂತ್ರವನ್ನು ಕಿತ್ತೆಸೆದು ಕಾನೂರಿಗೆ ಕಾಲಿಡಿವುದಿಲ್ಲವೆಂದು ಹಟಹಿಡಿದಮೇಲೆ ರಾಮಯ್ಯನಿಗೆ ಮತ್ತೊಂದು ಮದುವೆ ಮಾಡಿಕೊಳ್ಳುವಂತ ಹೇಳಿ, ಹಿತಚಿಂತಕರೆಲ್ಲರೂ ಒತ್ತಾಸೆಮಾಡತೊಡಗಿದ್ದರು. ಅತ್ತಿಗದ್ದೆ ಹಿರಿಯಣ್ಣಗೌಡರೂ ತಮ್ಮ ಮಗಳು ರಂಗಮ್ಮನನ್ನು ರಾಮಯ್ಯನಿಗೆ ಕೊಡಲೊಪ್ಪಿ ಕಾತರರಾಗಿ ಪ್ರಯತ್ನಿಸುತ್ತಿದ್ದರು. ಆ ಕಾರ್ಯದಲ್ಲಿ ಶ್ಯಾಮಯ್ಯಗೌಡರು, ಚಿನ್ನಯ್ಯ, ಸಿಂಗಪ್ಪಗೌಡರು, ಎಲ್ಲರೂ ಯತ್ನಶೀಲರಾಗಿದ್ದರು. ಹೂವಯ್ಯ ಕೂಡ ಸಿಂಗಪ್ಪಗೌಡರೊಡನೆ ಇಷ್ಟಪಡದ ಹುಡುಗಿಯನ್ನು ಬಲಾತ್ಕರಿಸುವುದಕ್ಕಿಂತಲೂ ಮತ್ತೊಂದು ಮದುವೆ ಮಾಡಿಕೊಳ್ಳುವುದೇ ಲೇಸೆಂದು ಸೂಚಿಸಿದ್ದನು. ಆ ಪ್ರಸ್ತಾವವನ್ನೇ ಮಾತಾಡಿ, ರಾಮಯ್ಯನನ್ನು ಮದುವೆಗೆ ಒಪ್ಪಿಸಲು ಇಂದು ಅವರು ಮೂವರೂ ಕಾನೂರಿಗೆ ಬಂದು ರಾಮಯ್ಯನೊಡನೆ ವಾದಿಸುತ್ತಿದ್ದರು.

ಸುಬ್ಬಮ್ಮ ನಿಂತು ಸ್ವಲ್ಪ ಹೊತ್ತು ಆಲಿಸಿ, ರಾಮಯ್ಯನನ್ನು ಹೇಗಾದರೂ ಮದುವೆಗೆ ಒಪ್ಪಿಸಿದ್ದರೆ ಸಾಕಿತ್ತಲ್ಲಾ ಎಂದು ಹಾರೈಸುತ್ತಾ, ಬಂದ ನೆಂಟರಿಗೆ ಏನಾದರೂ ವಿಶೇಷ ಮಾಡಲೋಸ್ಕರ ಅಡುಗೆಮನೆಗೆ ಹೋದಳು.

ಆ ಹಗಲೆಲ್ಲ ನೆಂಟರುಪಚಾರದಲ್ಲಿಯೂ ಮಾತುಕತೆಗಳಲ್ಲಿಯೂ ತುಂಬಿ ಕಳೆಯಿತು. ಅಂತೂ ರಾಮಯ್ಯ ಮತ್ತೊಂದು ಮದುವೆ ಮಾಡಿಕೊಳ್ಳುವುದಕ್ಕೆ ಸಮ್ಮತಿಸಲಿಲ್ಲ. ಹುಚ್ಚು ಹುಚ್ಚಾಗಿ ಅಸಂಬದ್ಧವಾಗಿ ಮಾತಾಡಿ, ಎಲ್ಲರಿಗೂ ಇಸ್ಸಿ ಅನ್ನಿಸುವಂತೆ ಮಾಡಿಬಿಟ್ಟನಂತೆ. ಅದನ್ನು ಕೇಳಿ ಸುಬ್ಬಮ್ಮ ಹೆಣ್ಣು ಹೆಂಗುಸಾಗಿ ತಾನೊಬ್ಬಳೆ ಈ ಮನೆಯಲ್ಲಿ ಕಾಲಹಾಕಬೇಕಲ್ಲಾ ಎಂದು ನಿಡುಸುಯ್ದಳು.

ಸಂಜೆ ನಂಟರೆಲ್ಲ ನಿರಾಶರಾಗಿ ಬೀಳ್ಕೊಂಡರು.

ಅದುವರೆಗೆ ಆ ದಿನ ಬೆಳಿಗ್ಗೆ ತೋಟದಂಚಿನಲ್ಲಿ ನಡೆದಿದ್ದ ಪ್ರಸಂಗ ಆಕೆಯ ಮನಸ್ಸಿನೊಳಗೆ ಮುಳುಗಿಕೊಂಡಿದ್ದುದು, ಆಗ ನೀರೊಳಕ್ಕೆ ತಳ್ಳಿ ಕೈಬಿಟ್ಟ ಬೆಂಡು ಮೇಲಕ್ಕೇಳುವಂತೆ ಮೇಲೆದ್ದಿತು. ಆದರೆ ಅದನ್ನು ಪ್ರಯತ್ನಪೂರ್ವಕವಾಗಿ ಮನಸ್ಸಿನಿಂದಾಚೆಗೆ ತಳ್ಳಿ. ಬಿಡಾರಕ್ಕೆ ಹೋಗುವ ಆಳುಗಳಿಗೆ ಅಕ್ಕಿಪಡಿ, ಉಪ್ಪು ಮೆಣಸಿನಕಾಯಿ , ಅಡಕೆ, ಹೊಗೆಸೊಪ್ಪು ಮೊದಲಾದವುಗಳನ್ನು ಕೊಡುವ ಮತ್ತು ಕೊಡಿಸುವ ಕೆಲಸದಲ್ಲಿ ತೊಡಗಿದಳು.

ಆದರೆ ನನಸಿನಲ್ಲಿ ಹೊರತಳ್ಳಿದುದು ಕನಸಿನಲ್ಲಿ ಮರಳಿ ಒಳನುಗ್ಗಿತು. ಆ

ರಾತ್ರಿ ಸುಬ್ಬಮ್ಮಗೆ ಒಂದು ಸ್ವಪ್ನವಾಯಿತು:

ತಾನು ಒಂದು ಆಳವಾದ ಕಂದಕದ ಅಂಚಿನಲ್ಲಿ ನಿಂತಿದ್ದಾಳೆ. ಅದನ್ನು ದಾಟಬೇಕೆಂದು ಆಕೆಯ ಪ್ರಯತ್ನ. ಆದರೆ ಆ ಕಂದಕವೂ ಎರಡು ಮೂರು ಅಡಕೆ ಮರಗಳ ಎತ್ತರದ ಪ್ರಮಾಣವಿದೆ. ಅದರ ಪಾತಾಳದಲ್ಲಿ ಹೊಳೆಯೊಂದು ನೊರೆಗರೆದು  ಭೋರೆಂದು ಕೊಚ್ಚಿ ಹರಿಯುತ್ತಿದೆ. ಸುಬ್ಬಮ್ಮನ ಎದೆ ಹೆದರಿ ಹೋಗಿದೆ. ಆಚೆಯ ದಡದಲ್ಲಿ ಚಂದ್ರಯ್ಯಗೌಡರು ನಿಂತು ಸಾರದ ಮೇಲೆ ದಾಟಿಬರುವಂತೆ ಕರೆಯುತ್ತಿದ್ದಾರೆ. ಸುಬ್ಬಮ್ಮ ಅವರನ್ನು ತನ್ನೆಡೆಗೆ ಬಂದು ಕೈಹಿಡಿದು ಕರೆದುಕೊಂಡು ಹೋಗುವಂತೆ  ಬೇಡುತ್ತಿದ್ದಾಳೆ. ಕಡೆಗೆ ಚಂದ್ರಯ್ಯಗೌಡರು ಬಂದು ಸುಬ್ಬಮ್ಮನನ್ನು ಕೈಹಿಡಿದು ಸಾರದಮೇಲೆ ನಡೆಸಿಕೊಂಡು ಹೋಗುತ್ತಿದ್ದಾರೆ. ಇಬ್ಬರೂ ಸಾರದ ಮಧ್ಯಕ್ಕೆ ಬಂದಿದ್ದಾರೆ ಇದ್ದಕ್ಕಿದ್ದ ಹಾಗೆ ಸುಬ್ಬಮ್ಮ ನೋಡುತ್ತಾಳೆ ತನ್ನನ್ನು ಕೈಹಿಡಿದಿದ್ದವರು ಚಂದ್ರಯ್ಯಗೌಡರಲ್ಲ ಸೇರೆಗಾರರು!  ಸುಬ್ಬಮ್ಮ ಬಿಡಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ. ಸೇರೆಗಾರರು ಬಿಗಿಯಾಗಿ ಅಪ್ಪಿ ಹಿಡಿಯುತ್ತಿದ್ದಾರೆ. ಸಾರ ಮೇಲಕ್ಕೂ ಕೆಳಕ್ಕೂ ಬಳುಕಲು ತೊಡಗುತ್ತದೆ. ಸುಬ್ಬಮ್ಮ ಕೆಳಕ್ಕೆ ನೋಡಿ ತಲೆ ತಿರುಗಿ, ಹೇಗಾದರು ತನ್ನನ್ನು ದಡಗಾಣಿಸಿ ಎಂದು ಸೇರೆಗಾರರನ್ನೇ ಬಿಗಿದಪ್ಪಿ ಹಿಡಿಯುತ್ತಾಳೆ. ಆ ಗಲಿಬಿಲಿಯಲ್ಲಿ ಇಬ್ಬರೂ ಒಬ್ಬೊರನ್ನೊಬ್ಬರು ಅಪ್ಪಿಕೊಂಡು  ಆ ಕಂದಕದ ಪಾತಾಳದ ನದಿಗೆ ದುಢುಮ್ಮನೆ ಬೀಳುತ್ತಿದ್ದಾರೆ! ಆ ಪಾತಾಳನದಿಯಲ್ಲಿ ಕೊಚ್ಚಿಹೋಗುತ್ತಿದ್ದಾಗ ಸುಬ್ಬಮ್ಮ ಹೆದರಿ ಸೇರೆಗಾರರನ್ನು ಮತ್ತೂ ಬಿಗಿಯಾಗಿ ಅಪ್ಪಿ ಹಿಡಿಯುತ್ತಾಳೆ. ಆದರೆ ಸೇರೆಗಾರರು ಸುಬ್ಬಮ್ಮನನ್ನು ರಭಸದಿಂದ ತಳ್ಳಿ, ತೆಕ್ಕೆಯಿಂದ ಬಿಡಿಸಿಕೊಂಡು  ಈಜಿ ದಡ ಸೇರುತ್ತಾರೆ. ಸುಬ್ಬಮ್ಮ ಪ್ರವಾಹದಲ್ಲಿ ಬಂಡೆಬಂಡೆಗೆ ಬಡಿದು ಕೊಚ್ಚಿಹೋಗುತ್ತಿದ್ದಾಳೆ. ಮೈಮುರಿದು ಮೂಗು ಬಾಯಿಗಳಲ್ಲಿ ನೀರು ನುಗ್ಗಿ ಉಸಿರುಕಟ್ಟುತ್ತಿದೆ! ಅಯ್ಯೊ ಉಸಿರು ಕಟ್ಟುತ್ತಿದೆ!

ಸುಬ್ಬಮ್ಮ ಹಾಸಗೆಯಮೇಲೆ ಕುಮುಟಿಬಿದ್ದಳು.ಎಚ್ಚರವಾಯಿತು.ನಿಜವಾಗಿಯೂ ಅಳುತ್ತಿದ್ದಾಳೆ! ಎದೆ ಡವಡವ ಹೊಡೆದುಕೊಳ್ಳುತ್ತಿದೆ! ಕಣ್ಣಿಗೇನೂ ಕಾಣಿಸುವುದಿಲ್ಲ; ಕೋಣೆ ಕಗ್ಗತ್ತಲ ಕಗ್ಗವಿಯಾಗಿದೆ. ನಿಃಶಬ್ದತೆ ಸರ್ವತ್ರ ಸಮ್ರಾಜ್ಯವಾಳುತ್ತಿದೆ.