ತನ್ನ ಗಂಡ ಯಾತ್ರೆ ಹೋದ ವಿಚಾರವನ್ನು ಕೇಳಿದಂದಿನಿಂದಲೂ ಸುಬ್ಬಮ್ಮಗೆ ಕಾನೂರಿನಲ್ಲಿರುವ ತನ್ನ ಒಡವೆ ವಸ್ತುಗಳನ್ನು ಹೇಗಾದರೂ ಮಾಡಿ ನೆಲ್ಲುಹಳ್ಳಿಗೆ ಸಾಗಿಸಬೇಕೆಂದು ಮನಸ್ಸಾಗಿತ್ತು. ಆ ವಿಚಾರವನ್ನು ತನ್ನ ತಂದೆ ತಾಯಿಗಳಿಗೂ ಹೇಳಿದ್ದಳು. ಪೆದ್ದೇಗೌಡರು ಜುಗುಪ್ಸೆಯಿಂದ ಮಗಳ ಮಾತನ್ನು ತಿರಸ್ಕರಿಸಿ, “ಅವರ ವಡವೆವಸ್ತು ಅವರ ಹೆಣಕ್ಕೆ ಹಾಕಿಕೊಳ್ಳಲಿ! ನಿನಗ್ಯಾಕೆ? ನನ್ನ ಮನೇಲಿ ನಿನಗೆ ಹೊಟ್ಟೆಗೆ ಬಟ್ಟೆಗೆ ಕಡಮೆಯಾಗಿದ್ದೇನು?” ಎಂದುಬಿಟ್ಟಿದ್ದರು. ತಾಯಿ ಮಾತ್ರ ಮಗಳ ಮಾತಿಗೆ ಒಪ್ಪಿಗೆಕೊಟ್ಟು ಸಮಯ ಕಾಯುತ್ತಿದ್ದಳು.

ಕರೆಯದೆಯೆ ತಾವೇ ಕಾನೂರಿಗೆ ಹೋದರೆ ಸಂಶಯಕ್ಕೆ ಕಾರಣವಾಗಿ ಕೆಲಸ ಕೆಟ್ಟುಹೋಗುತ್ತದೆ ಎಂದು ಆಲೋಚಿಸುತ್ತಿದ್ದಾಗಲೆ, ಸೇರೆಗಾರ ರಂಗಪ್ಪಸೆಟ್ಟರು ಯಾತ್ರೆಗೆ ಹೊರಡುವಾಗ ಚಂದ್ರಯ್ಯಗೌಡರು ತಮಗೆ ಅಪ್ಪಣೆಮಾಡಿದ್ದದರೆಂದು ಹೇಳಿ, ಕಾನೂರಿಗೆ ಬರುವಂತೆ ಸುಬ್ಬಮ್ಮಗೆ ಹೇಳಿಕಳುಹಿಸಿದರು. ಸುಬ್ಬಮ್ಮಗೆ ಸೇರೆಗಾರರರು ಕರೆಕಳುಹಿಸಿದ್ದಕ್ಕೆ ಕಾರಣವಾದ ಮನೋಭಾವ ಅರ್ಥವಾಗದಿರಲಿಲ್ಲ. ತನ್ನ ಗಂಡ ಹಾಗೆ ಹೇಳಿದ್ದೂ ಸುಳ್ಳು ಎಂಬುದನ್ನು ಚೆನ್ನಾಗಿ ಅರಿತಿದ್ದಳು. ಆದರೂ ತನ್ನ ಕಾರ್ಯಸಾಧನೆಗೆ ಒದಗಿದ್ದ ಸಮಯವನ್ನು ಬಿಡಬಾರದೆಂದು ತಾಯಿಯೊಡಗೂಡಿ ಕಾನೂರಿಗೆ ಬಂದಳು. ಆಕೆಯ ಅದೃಷ್ಟಕ್ಕೆ ಸರಿಯಾಗಿ ಆ ದಿನವೆ ಕೋಳಿಯಂಕದ ದಿನವಾಗಿದ್ದುದರಿಂದ ಸೇರೆಗಾರರೂ, ಅವರ ಆಳುಗಳೂ, ಹಳೆಪೈಕದ ತಿಮ್ಮನೇ ಮೊದಲಾದ ಇತರ ಗಂಡಸರೂ, ಅಪರಾಹ್ನದಲ್ಲಿ ಕಾನೂರಿನಿಂದ ಹೊರಟುಹೋದರು. ಮನೆಯಲ್ಲಿ ಮುಖ್ಯ ವ್ಯಕ್ತಿಯಾಗಿ ಗಂಗೆಯೊಬ್ಬಳಿದ್ದಳು.

ಗಂಗೆಯನ್ನು ನೋಡಿದೊಡನೆಯೆ ಸುಬ್ಬಮ್ಮನ ಎದೆಯಲ್ಲಿ ಮಾತ್ಸರ್ಯ ದ್ವೇಷಗಳ ಉರಿ ಹೊತ್ತಿತ್ತು. ಕನ್ನಡ ಜಿಲ್ಲೆಯ ಆ ಹೆಂಗಸು ಗಟ್ಟದ ಮೇಲಿನವಳಂತೆ ಉಡುಗೆತೊಡುಗೆಗಳನ್ನು ಉಟ್ಟು ತೊಟ್ಟು, ಮನೆಗೆ ತಾನೆ ಹೆಗ್ಗಡಿತಿ ಎಂಬಂತೆ ಆಚರಿಸುತ್ತಿದ್ದುದನ್ನು ಕಂಡಾಗ, ತನ್ನ ಕಷ್ಟ ಸಂಕಟಗಳಿಗೆ ಈ ಹಾದರಗಿತ್ತಿಯೆ ಮೂಲ ಕಾರಣವೆಂದು ನಿರ್ಣಯಿಸಿದಳು. ಅವಳನ್ನು ಅಲ್ಲಿಯೆ ಹಿಡಿದು ಕೆಡಹಿ ಕಚ್ಚಿ ಅಲುಬಬೇಕೆಂದು ಮನಸ್ಸಾಯಿತು. ಆದರೆ ಈಗಿನ ಸುಬ್ಬಮ್ಮನಾಗಿರಲಿಲ್ಲ. ಕಷ್ಟದ ಗರಡಿಯಲ್ಲಿ ಪಳಗಿದ್ದ ಆಕೆ ತನ್ನ ದುಡುಕನ್ನು ಬಿಟ್ಟು  ಇಷ್ಟಸಾಧನೆಗೆ ಅವಶ್ಯಕವಾದ ಮಾರ್ಗವನ್ನು ಸಾವಧಾನವಾಗಿ ಕೈಕೊಳ್ಳಲು ಕಲಿತಿದ್ದಳು.

ಎಷ್ಟರಮಟ್ಟಿಗೆ ಕಲಿತಿದ್ದಳೆಂದರೆ, ಗಂಗೆ ತನ್ನ ವಜ್ರದ ಬೆಂಡೋಲೆ ಹಾಕಿಕೊಂಡಿದ್ದನ್ನು ಕಂಡು, “ಅದು ಯಾರದು? ಹೇಗೆ ಬಂತು? ಎಂಬುದೊಂದನ್ನೂ ವಿಚಾರಿಸದೆ, “ನನ್ನ ಬೆಂಡೋಲೆ ನಿನ್ನ ಕಿವಿಗೆ ಎಷ್ಟು ಚೆನ್ನಾಗಿ ಒಪ್ತದೆ!” ಎಂದು ನಗೆಮೊಗದಿಂದ ಪ್ರಶಂಸಿಸಿದಳು. ಅವಳು ಉಟ್ಟಿದ್ದ ತನ್ನ ಮದುವೆಸೀರೆ ನೋಡಿ, “ನೀರಿಗೆ ಹಾಕಿದಾಗ ಬಣ್ಣ ಬಿಡಲಿಲ್ಲೇನು? ಎಂದು ಕೇಳಿದಳು. ಇದನ್ನೆಲ್ಲಾ ನೋಡಿ ಗಂಗೆ ಸುಬ್ಬಮ್ಮ ಮೊದಲಿನಂತೆ ಪೆಚ್ಚು ಎಂದು ಭಾವಿಸಿ ನಿಃಶಂಕೆಯಿಂದ ವರ್ತಿಸತೊಡಗಿದಳು.

ಸೇರೆಗಾರರಿಗಂತೂ ಸುಬ್ಬಮ್ಮನ ಆಗಮನದಿಂದ ಕಳ್ಳು ನೆತ್ತಿಗೇರಿದಂತಾಯಿತು. ತನ್ನನ್ನು ಪ್ರೀತಿಸಿಯೆ ಗಂಡನಿಲ್ಲದ ವೇಳೆ ಬಂದಿದ್ದಾಳೆಂದು ಅವರ ಅಂತರಂಗದಲ್ಲಿ ಆಸೆಯ ಜಿರಾಫೆ ಇಂದ್ರಲೋಕದ ನಂದನವನದ ಕಲ್ಪವೃಕ್ಷದ ಹಸುರೆಲೆಗಳನ್ನು ಮೇಯಲೋಸುಗ ಆಕಾಶಕ್ಕೆ ಕತ್ತೆತ್ತಿತು. ತಾಯಿಯೂ ಮಗಳೂ ಮನೆಗೆ ಬಂದೊಡನೆ ಕೂತುಕೊಳ್ಳಲು ತಾವೇ ಜಮಖಾನ ಹಾಸಿಕೊಟ್ಟರು. ಕಾಲು ತೊಳೆದುಕೊಳ್ಳಲು ನೀರು ತಂದು, ವೀಳೆಯಕೊಟ್ಟರು. ಹೀಗೆ ನಾನಾ ರೀತಿಗಳಿಂದ ಉಪಚಾರ ಮಾಡಿದ್ದಲ್ಲದೆ, ಅನೇಕ ಸಮಾಧಾನದ ಮಾತುಗಳನ್ನೂ ಹೇಳಿ ಸಹಾನುಭೂತಿ ತೋರಿದರು. ಅವರ ಮನದಲ್ಲಿ ಇಷ್ಟಪ್ರಾಪ್ತಿಯಾಗುತ್ತದೆಂಬ ಆನಂದವೂ, ಏನೋ ಎಂತೋ ಎಂಬ ಆಶಂಕೆಯೂ ಎಣೆಯಾಡುತ್ತಿದ್ದುವು.

ಅಂಕಕ್ಕೆ ಹೋಗುವುದೆ ಬೇಡವೆ ಇಂದು ಸೇರೆಗಾರರು ಹಿಂದು ಮುಂದು ನೋಡುತ್ತಿರಲು, ಸುಬ್ಬಮ್ಮನೆ ಮುಂದೆಬಂದು ಅವರನ್ನು ಹೋಗುವಂತೆ ಹುರಿದುಂಬಿಸಿ “ಹೋಗಿ,ಎರಡು ಕೋಳಿಹುಂಜ ಗೆದ್ದುಕೊಂಡು ಬನ್ನಿ, ನೋಡಾನೆ! ರಾತ್ರಿಗೆ ಘನಾಗಿ ತುಂಡುಕಡುಬು ಅಂವುತ್ಲ (ಔತಣ) ಮಾಡಾನ” ಎಂದು ಮರುಳ್ಮಾಡಿದಳು, ’ರಾತ್ರಿಗಿ’ ’ಘನಾಗಿ’ ಮೊದಲಾದ ಮಾತುಗಳಿಗೆ ಏನೇನೋ ಅರ್ಥಗಳನ್ನೂ ಕಲ್ಪನೆಗಳನ್ನೂ ಕಟ್ಟಿಕೊಂಡು ರೋಮಾಂಚನವನ್ನು ಅನುಭವಿಸುತ್ತ, ಸೇರೆಗಾರರು ಅಂಕಕ್ಕೆ ನಡೆದರು.

ನಿಂಗನ ಮಗ ಪುಟ್ಟನನ್ನು ಗುಟ್ಟಾಗಿ ಕರೆದು, ತಿಂಡಿಕೊಟ್ಟು ಪುಸಲಾಯಿಸಿ, ತಾನು ಕೊಡುವ ಸಾಮಾನುಗಳನ್ನು ಕಿಟಕಿಯಾಚೆ ಅವಿತು ನಿಂತು, ತೆಗೆದುಕೊಂಡು ಹೋಗಿ ದೂರದ ಒಂದು ಪೊದೆಯಲ್ಲಿ ಯಾರಿಗೂ ಕಾಣದಂತೆ ಬಚ್ಚಿಡಬೇಕೆಂದು ಸಂಚುಮಾಡಿ, ಸುಬ್ಬಮ್ಮ ಅಡುಗೆಮನೆಗೆ ಹೋದಳು. ಅಲ್ಲಿ ಎಲ್ಲರೂ ಸೇರಿ ಸ್ವಾರ್ಲುಮೀನು ನಂಚಿಕೊಡು ಹೆಂಡ ಕುಡಿದರು. ತಾನು ಮಾತ್ರ ಸ್ವಲ್ಪ ಕಡಮೆ ಕುಡಿದು, ಗಂಗೆಗೆ ಉಪಚಾರಮಾಡಿ ಹೆಚ್ಚಾಗಿ ಕುಡಿಸಿದಳು. ತನ್ನ ತಾಯಿಗೂ ಹೆಚ್ಚಾಗಿ ಕುಡಿಯದಂತೆ ಸನ್ನೆಯಿಂದ ಎಚ್ಚರಿಸಿದಳು. ತರುವಾಯ ಸಾಯಂಕಾಲ ಸೇರೆಗಾರರು ಅಂಕದಲ್ಲಿ ಗೆದ್ದು ತರುವ ಕೋಳಿಗಳ ಪಲ್ಯಕ್ಕಾಗಿ ಕಾರ ಕಡೆದಿಡಬೇಕೆಂದೂ, ಕಡುಬು ಮಾಡಬೇಕೆಂದೂ ಸುಬ್ಬಮ್ಮ ’ಹುನಾರು’ ಮಾಡಿ, ಗಂಗೆಗೆ ಕಾರ ಕಡೆಯುವ ಕೆಲಸವನ್ನು ವಹಿಸಿ, ತಾನು ಕಡುಬುಮಾಡುವುದನ್ನು ವಹಿಸಿಕೊಂಡಳು.

ಗಂಗೆ ಹಿತ್ತಲಕಡೆಯ ಒರಳಿನಲ್ಲಿ ಕಾರ ಕಡೆಯತೊಡಗಿದಳು. ಸುಬ್ಬಮ್ಮ ಅಡುಗೆಮನೆಯಲ್ಲಿ ಒಲೆಯ ಹತ್ತಿರ ಕುಳಿತು ಕಡುಬು ಮಾಡತೊಡಗಿದಳು.

ಈ ಮಧ್ಯೆ, ತನ್ನ ತಾಯಿಗೆ ಹಿಟ್ಟು ನುರಿಯುವಂತೆ ಹೇಳಿ, ಗಂಗೆ ಎಲ್ಲಿಯಾದರೂ ಒಂದುವೇಳೆ ಒಳಗೆ ಬಂದು ಕೇಳಿದರೆ, ತಾನು ’ಹೊರಕಡೆ’ಗೆ ಹೋಗಿರುವುದಾಗಿ ಹೇಳುವಂತೆ ತಿಳಿಸಿ, ಸುಬ್ಬಮ್ಮ ತನ್ನ ಮಲಗುವ ಕೋಣೆಗೆ ಹೋಗಿ ಕೆಲಸಕ್ಕಾರಂಭಿಸಿದಳು. ಕಿಟಕಿಯಾಚೆ ಕದ್ದು ನಿಂತಿದ್ದ ಪುಟ್ಟ, ತನ್ನ ಕೈಗೆ ಬರತೊಡಗದ ಚಿನ್ನದ ಬೆಳ್ಳಿಯ ಒಡವೆಗಳನ್ನೂ, ಬೆಲೆಯುಳ್ಳ ಬಟ್ಟೆಗಳನ್ನೂ ಬಾಯಗಲಿಸಿ ಕಣ್ಣರಳಿಸಿ ನೋಡುತ್ತ, ಎದೆಗಪ್ಪಿಕೊಂಡು ಹಿಗ್ಗತೊಡಗಿದನು!

ಸುಬ್ಬಮ್ಮ ಆದಷ್ಟು ಅವಸರವಾಗಿಯೆ ತನ್ನ ಒಡವೆ ವಸ್ತುಗಳನ್ನು ಹುಡುಕಿ ಹುಡುಕಿ ಕಿಟಕಿಯಾಚೆಗೆ ನೀಡುತ್ತಿದ್ದಳು. ಆದರೆ ಕೆಲವು ಪೆಟ್ಟಿಗೆಗಳಿಗೆ ಬೀಗಗಳನ್ನು ಬದಲಾಯಿಸಿದ್ದುದರಿಂದ, ಮುಚ್ಚಳ ತೆಗೆಯಲು ಸಾಧ್ಯವಾಗದೆ ಬೀಗ ಮುರಿಯಲು ಪ್ರಯತ್ನಿಸಿದಳು. ಯಾರೂ ಒಳಗೆ ಬಾರದಂತೆ ಕೋಣೆಯ ಬಾಗಿಲನ್ನು ಭದ್ರವಾಗಿ ಹಾಕಿಕೊಂಡದ್ದಳು. ಆದರೂ ಬೀಗ ಮುರಿಯುವ ಸದ್ದು ಹಿತ್ತಲು ಕಡೆಯಲ್ಲಿ ಕಾರ ಕಡಿಯುತ್ತಿದ್ದವಳ ಕಿವಿಗೂ ಬಿದ್ದಿತು. ಗಂಗೆ ಒಂದು ಸಾರಿ ಏನೋ ಪದಾರ್ಥವನ್ನು ತೆಗೆದುಕೊಂಡು ಹೋಗುವ ನೆವದಿಂದ ಒಳಗೆ ಬಂದು ’ಸುಬ್ಬಮ್ಮ ಎಲ್ಲಿ?’ ಎಂದು ಕೇಳಿದಳು. ಸುಬ್ಬಮ್ಮನ ತಾಕಯಿ “ಹೊರಕಡೆ ಹೋಗ್ತೀನಿ ಅಂಥಾ ಹೋತಪ್ಪಾ!” ಎಂದಳು. ಗಂಗೆ ಮತ್ತೊಮ್ಮೆ ಒಳಗೆ ಬಂದು ನೋಡಿದಾಗಲೂ ಸುಬ್ಬಮ್ಮ ಇರಲಿಲ್ಲ. ನೇರವಾಗಿ ನಡೆದು ಚಂದ್ರಯ್ಯಗೌಡರ ಕೋಣೆಯ ಬಾಗಿಲನ್ನು ತಳ್ಳಿದಳು. ಎಷ್ಟಾದರೂ ಬಹುಕಾಲದಿಂದಲೂ ರಹಸ್ಯವೃತ್ತಿಯಲ್ಲಿ ಪಳಗಿದ ಪ್ರವೀಣೆ!

ಮೊದಮೊದಲು ಸುಬ್ಬಮ್ಮನಿಗೆ ಬೀಗ ಮುರಿಯುವ ಗಲಾಟೆಯಲ್ಲಿ ಬಾಗಿಲು ತಟ್ಟಿದ ಸದ್ದು ಕೇಳಿಸಲಿಲ್ಲ. ಕಡೆಗೆ ಕೇಳಿಸಲು ಸದ್ದು ಮಾಡುವುದನ್ನೆಲ್ಲ ನಿಲ್ಲಿಸಿಬಿಟ್ಟಳು. ಆದರೆ ಬಾಗಿಲು ತೆರೆಯಲಿಲ್ಲ.

ಗಂಗೆ ಮಾತಾಡದೆ ಬಾಗಿಲನ್ನು ತಳ್ಳಿದಳು, ನೂಕಿದಳು, ಗುದ್ದಿದಳು, ಕಡೆಗೆ ಒದೆಯತೊಡಗಿದಳು. ಆದರೂ ಸುಬ್ಬಮ್ಮ ಬಾಗಿಲು ತೆರೆಯಲಲಿಲ್ಲ. ಕಿಟಕಿಯಾಚೆಯಿದ್ದ ಪುಟ್ಟನಿಗೆ ಬೇಗನೆ ಕಣ್ಮರೆಯಾಗುವಂತೆ ಪಿಸುಮಾತಿನಲ್ಲಿ ಹೇಳಿದಳು. ಅವನು ಮೆಲ್ಲನೆ ನುಸುಳಿ ಓಡಿ ಕಣ್ಮರೆಯಾದ ಮೇಲೆ, ಕತ್ತಲೆಯ ಕೋಣೆಯಲ್ಲಿ ತಾನು ಹೊತ್ತಿಸಿಕೊಂಡಿದ್ದ ಚಿಮಿನಿ ದೀಪವನ್ನು ಆರಿಸಿ, ತಾಳವನ್ನು ಎಳೆದಳು. ಬಾಗಿಲು ದಢಾರನೆ ತೆರೆಯಿತು.

ಗಂಗೆಯ ಕಣ್ಣಿಗೆ ಆ ಕತ್ತಲೆಯಲ್ಲಿ ಯಾರೂ ಕಾಣಿಸದಿದ್ದರೂ ಕೋಣೆಯಲ್ಲಿ ತುಂಬಿಕೊಂಡಿದ್ದ ಚಿಮಿನಿದೀಪದ ಹೊಗಿಯವಾಸನೆಯಿಂದ ಸುಬ್ಬಮ್ಮ ಆಗತಾನೆ ದೀಪ ಆರಿಸಿದ್ದಾಳೆಂದು ಗೊತ್ತಾಗಿ, “ಯಾರದು? ಬಾಗಿಲು ಹಾಕಿಕೊಂಡಿದ್ದೋರು” ಎಂದಳು.

ಕತ್ತಲೆಯ ಮೂಲೆಯಿಂದ ಸುಬ್ಬಮ್ಮ “ನಾನು ಕಣೇ ನನ್ನ ಕೋಣೆಯಲ್ಲಿ ನಾನಿದ್ರೆ ನಿಂಗೇನು?” ಎಂದು ಮಲೆತು ಮಾತಾಡಿದಳು.

“ಇದಕ್ಕೇ ಏನು ನೀವು ಬಂದಿದ್ದು ಗೌಡರಿಲ್ಲದ ವೇಳೆ?” ಎಂದವಳೆ ಬೆಂಕಿಕಡ್ಡಿ ಕೆರೆದು ದೀಪ ಹೊತ್ತಿಸಿ ನೋಡಿದಳು. ಕೋಣೆ ಸೂರೆಹೋಗಿದ್ದುದು ಸ್ಪಷ್ಟವಾಗಿತ್ತು.

ಕೋಣೆಯಿಂದಾಚೆಗೆ ಹೋಗಲೆಂದು ಹೊಸ್ತಿಲಿಗೆ ಬಂದಿದ್ದ ಸುಬ್ಬಮ್ಮನ ಮೇಲೆ ರೇಗಿದ ಬೆಕ್ಕಿನಂತೆ ಹಾರಿ, ಗಂಗೆ ಅವಳ ಕೈಯನ್ನು ಬಲವಾಗಿಹಿಡಿದೆಳೆದಳು. ಸುಬ್ಬಮ್ಮ ಗಂಗೆಯ ಕೂದಲನ್ನು ಹಿಡಿದು ಜಗ್ಗಿದಳು, ಬೈದಾಟ, ಕೂಗಾಟ, ಹೊಡೆದಾಟಗಳು ಪ್ರಾರಂಭವಾದುವು. ಸುಬ್ಬಮ್ಮನ ತಾಯಿ ಜಗಳವನ್ನು ಬಿಡಿಸಲೆಂದು ಪ್ರಯತ್ನಿಸಿ ಸೋತುಹೋಗಿ, ಗಂಗೆಯನ್ನು ಶಪಿಸುತ್ತ ದೂರ ನಿಂತಳು.

ಎಷ್ಟಾದರೂ ಚೆನ್ನಾಗಿ ಮೈಬಗ್ಗಿಸಿ ದುಡಿದು, ಗರತಿಯ ಬಾಳನ್ನು ಬಾಳಿದ, ಯೌವನೆ ಸುಬ್ಬಮ್ಮನ ಮುಂದೆ, ಜೀವಶಕ್ತಿಯನ್ನೆಲ್ಲ ಅತಿಕಾಮಲಾಲಸೆಯಿಂದ ನೀಗಿಕೊಡಿದ್ದ ಗಂಗೆ ಹೊಡೆದಾಟದಲ್ಲಿ ನಿಲ್ಲಲು ಸಾಧ್ಯವೆ? ಕೆಲ ನಿಮಿಷಗಳಲ್ಲಿ ಹೊಡೆದು, ಗುದ್ದಿ, ಸೆಳೆದು, ಕೂದಲನ್ನು ಹಿಡಿದೆಳೆದು ಗಂಗೆಯನ್ನು ನೆಲಕ್ಕಪ್ಪಳಿಸಿ, ಸುಬ್ಬಮ್ಮ ಕಾನೂರಿನಿಂದ ಹೊರಟೇಬಿಟ್ಟಳು. ಗಂಗೆ ನೋವಿನಿಂದ ನರಳುತ್ತ, ಬಾಯಿಗೆ ಬಂದಂತೆ ಬೈಯುತ್ತ, ಸೇರೆಗಾರರನ್ನೂ ಚಂದ್ರಯ್ಯಗೌಡರನ್ನೂ ಕೂಗಿ ಕರೆಯುತ್ತ ಬಿದ್ದಿದ್ದಳು. ಗಲಭೆಯನ್ನು ಕೇಳಿ ನಾಯಿಗಳೂ ಬಳ್ಳಿಕ್ಕುತ್ತಿದ್ದುವು.

ಆ ಸಮಯದಲ್ಲಿ ಚಂದ್ರಯ್ಯಗೌಡರು ಬಹುಶಃ ಧರ್ಮಸ್ಥಳದಲ್ಲಿ ತುಲಾಭಾರ ತೂಗಿಸಿಕೊಳ್ಳುತ್ತಿದ್ದರೋ ಏನೋ?

ಸುಬ್ಬಮ್ಮ ನೆಟ್ಟಗೆ ನೆಲ್ಲು ಹಳ್ಳಿಗೆ ಹೋಗಬೇಕೆಂದು ಮನಸ್ಸು ಮಾಡಿದ್ದಳು. ಆದರೆ ಬೈಗಾಗಿದ್ದುದರಿಂದಲೂ, ಸೇರೆಗಾರರೆಲ್ಲಿಯಾದರೂ ಬಂದುಬಿಟ್ಟರೆ ತನಗೆ ರಕ್ಷಣೆ ಸಿಕ್ಕದೆ ಹೋಗಿಬಿಡಬಹುದೆಂಬ ಭೀತಿಯಿಂದಲೂ, ನಾಗಮ್ಮನವರನ್ನು ನೋಡದೆ ಬಹಳ ದಿನಗಳಾಗಿದ್ದುದರಿಂದಲೂ, ಹಾಗೆಯೆ ಹೂವಯ್ಯನನ್ನೂ ನೋಡಿದಂತಾಗುತ್ತದೆ ಎಂಬಾಸೆಯಿಂದಲೂ, ಪೊದೆಗಳ ನಡುವೆ ಅವಿತಿದ್ದ ಪುಟ್ಟನಿಂದ “ವಡವೆವಸ್ತು”ಗಳನ್ನು ತೆಗೆದುಕೊಂಡು ಕೆಳಕಾನೂರಿಗೆ ಹೋದಳು.

ನಾಗಮ್ಮನವರು ಎಲೆಯಡಕೆ ಬುಟ್ಟಿಯನ್ನು ಎದುರಿಗಿಟ್ಟುಕೊಂಡು ವೀಳ್ಯೆ ಹಾಕಿಕೊಳ್ಳುತ್ತ ಹೊನಗೊನೆಸೊಪ್ಪನ್ನು ಸೋಸುತ್ತಿದ್ದ ಬೇಲರ ಸೇಸಿಯೊಡನೆ ಮಾತಾಡುತ್ತ ಕುಳಿತಿದ್ದರು. ನಂಟರಾಗಿ ಬಂದ ತಾಯಿ ಮಗಳಿಬ್ಬರನ್ನೂ ಆದರದಿಂದ ಬರಮಾಡಿಕೊಂಡು, ಕಾಲು ತೊಳೆಯಲು ನೀರು ಕೊಟ್ಟು, ಚಾಪೆ ಹಾಕಿ ಕುಳಿತುಕೊಳ್ಳಲು ಹೇಳಿ, ಹರವಾಣದಲ್ಲಿ ಎಲೆಯಡಕೆಯನ್ನು ತಂದು ಮುಂದಿಟ್ಟರು.

ಅದು ಇದು ಮಾತಾಡುತ್ತ ಸುಬ್ಬಮ್ಮ ಆ ದಿನ ನಡೆದ ಕಥೆಯೆಲ್ಲವನ್ನೂ ಹೇಳತೊಡಗಿದಳು. ನಡುನಡುವೆ ಕಣ್ಣೀರು ಮಿಡಿಯುತ್ತ ಗೋಳಾಡಿಕೊಂಡಳು.

ಚೆನ್ನಾಗಿ ಕತ್ತಲೆಯಾದಮೇಲೆ ಹೂವಯ್ಯ ಪುಟ್ಟಣ್ಣರು, ಮೈಯೆಲ್ಲ ಮಣ್ಣಾಗಿ, ಗದ್ದೆಯಿಂದ ಮನೆಗೆ ಬಂದರು. ಬಿಸಿನೀರಿನಲ್ಲಿ ಸ್ನಾನಮಾಡಿ, ಬಟ್ಟೆಬದಲಾಯಿಸಿಕೊಂಡು, ಜಗಲಿಗೆ ಬಂದಮೇಲೆ ನಾಗಮ್ಮನವರು ಮಗನಿಗೆ ಸುಬ್ಬಮ್ಮ ಮತ್ತು ಅವಳ ತಾಯಿ ಬಂದಿರುವುದನ್ನೂ, ಸುಬ್ಬಮ್ಮನಿಂದ ತಾವು ಕೇಳಿದ್ದ ವಿಷಯಗಳನ್ನೂ ಸಂಕ್ಷೇಪವಾಗಿ ಹೇಳಿದರು. ಹೂವಯ್ಯ ಉತ್ಸಾಹವನ್ನಾಗಲಿ ಉದಾಸೀನವನ್ನಾಗಲಿ ತೋರಿಸದೆ ಸುಮ್ಮನೆ ಆಲಿಸಿದನು. ಇತ್ತೀಚೆಗೆ ಅವನು ಹೆಚ್ಚುಹೆಚ್ಚು ಮೌನಿಯಾಗತೊಡಗಿದ್ದನು.

“ಸೀತೆ ಮನೆಯಿಂದ ಸೋಮ ಬಂದನೇನು?” ಎಂದು ಕನ್ನಡಿಯ ಕಡೆಗೆ ನೋಡುತ್ತ ಕ್ರಾಪು ಬಾಚಿಕೊಳ್ಳುತ್ತ ಕೇಳಿದನು.

“ಇಲ್ಲ. ಇನ್ನೂ ಬರಲಿಲ್ಲ. ಆಗಲೇ ಹೋದವನು ಇಷ್ಟು ಹೊತ್ತಿಗೆ ಬರಬೇಕಾಗಿತ್ತಪ್ಪಾ.”

“ಆಂ! ಏನಂದೆ?”

ತಾಯಿಯ ಉತ್ತರ ಹೂವಯ್ಯನಿಗೆ ಕೇಳೆಸಲಿಲ್ಲ. ’ಸೀತೆಮನೆಯಿಂದ ಸೋಮ ಬಂದನೇನು?’ ಎಂದು ಕೇಳಿದೊಡನೆಯೆ ಅವನ ಮನಸ್ಸು ಮಿಂಚಿನ ವೇಗದಿಂದ ಸೀತೆಯ ವಿಷಯಕವಾದ ಅನೇಕ ಚಿತ್ರಗಳನ್ನೂ ಭಾವಗಳನ್ನೂ ನೆನೆಯತೊಡಗಿದ್ದಿತು.

ತಾಯಿ ಅದನ್ನೆ ಮತ್ತೆ ಹೇಳಿದಳು.

“ಇಷ್ಟು ಹೊತ್ತು ಏನು ಮಾಡ್ತಾನೆ ಅಲ್ಲಿ?” ಎಂದು ಹೂವಯ್ಯ ತನ್ನ ಕೊಟಡಿಗೆ ಹೋಗಿ ಬಾಗಿಲು ಹಾಕಿಕೊಂಡನು.

ನಾಗಮ್ಮನವರು ಪುಟ್ಟಣ್ಣನನ್ನು ಕುರಿತು “ನೀನಾದರೂ ಹೋಗಬಾರದಿತ್ತೇನೊ?” ಎಂದರು.

“ಅವನೇ ನಾನು ಮುಂದೆ ತಾನು ಮುಂದೆ ಅಂತಾ ದುಂಬಾಲು ಬಿದ್ದು ಕಾಗದ ಈಸಿಕೊಂಡು ಹೋಗ್ಯಾನೆ?”

ನಾಗಮ್ಮನವರು ಇದ್ದಕ್ಕಿದ್ದಹಾಗೆ ವಿಷಯವನ್ನು ಸಂಪೂರ್ಣವಾಗಿ ಬದಲಾಯಿಸಿ “ಏನು ಪುಟ್ಟಣ್ಣಾ, ನಿನ್ನ ಗೌಡರು ಮದುವೆಯಾಗೋದಿಲ್ಲಂತೇನು?” ಎಂದು ಕೇಳಿದರು.

ಪುಟ್ಟಣ್ಣ ಮುಗುಳುನಗುತ್ತ “ನನ್ನ ಹತ್ತಿರ ಕೇಳಿದರೆ! ಅವರನ್ನೇ ಕೇಳಿ!” ಎಂದನು.

ನಾಗಮ್ಮನವರು ಮರುಮಾತಾಡದೆ ನಿಡುಸುಯ್ಯುತ್ತ ಅಡುಗೆಮನೆಯ ಕಡೆಗೆ ಹೋದರು. ಅವರ ಹೃದಯ “ಮಗ ಮದುವೆಮಾಡಿಕೊಳ್ಳದೆ ಹೀಗಾಗುತ್ತಿದ್ದಾನಲ್ಲಾ” ಎಂದು ಕಾತರವಾಗಿತ್ತು.

ಹೂವಯ್ಯ ಮೇಲೆಮೇಲೆ ಶಾಂತನೂ ಮೌನಿಯೂ ಆಗುತ್ತ ಬಂದಹಾಗೆಲ್ಲ, ಒಳಗೊಳಗೆ ಕುದಿಯೂ ಉರಿಯೂ ಹೆಚ್ಚಾಗುತ್ತಿತ್ತು. ಮೊದಮೊದಲು ಸೀತೆ ಕೈಬಿಟ್ಟುಹೋದ ಹತಾಶೆಯನ್ನು ಲಘುವಾಗಿ, ತಾತ್ವಿಕವಾಗಿ, ಸಂಯಮಿ ತಾನೆಂಬ ಹೆಮ್ಮೆಯಿಂದ ಉದಾಸೀನಗೈಯಲು ಪ್ರಯತ್ನಸಿದ್ದರೂ ಬರುಬರುತ್ತಾ ಅದು ಎದೆಯನ್ನು ಕೊರೆಯಲಾರಂಭಿಸಿದ್ದಿತು. ಆದ್ದರಿಂದಲೆ ಅವನು ಯಾರೊಡನೆಯೂ ಹೆಚ್ಚು ಮಾತಾಡದೆ ಸಮಯ ಸಿಕ್ಕಿದಾಗಲೆಲ್ಲ ಏಕಾಂಗಿಯಾಗಿ ಎಲ್ಲಿಯಾದರಲ್ಲಿ ಕುಳಿತು ತನ್ನನ್ನು ಹೇಗಾದರೂ ಈ ಬೇಗೆಯಿಂದ ಪಾರುಮಾಡಬೇಕೆಂದು ಈಶ್ವರನಿಗೆ ಮೊರೆಯಿಡುತ್ತಿದ್ದನು. ಕೆಲವು ಸಾರಿ ಬನಬೆಟ್ಟಗಳ ರಮಣೀಯ ಪ್ರಕೃತಿ ಸಾನ್ನಿಧ್ಯದಲ್ಲಿ, ಬಣ್ಣ ಬಣ್ಣದ ಹೂವು ಹಕ್ಕಿಗಳ ಸೊಂಪಿನಿಂಪಿನ ಸನ್ನಿವೇಶದಲ್ಲಿ, ರಾತ್ರಿಯ ಗಂಭೀರಧ್ಯಾನಮಯ ಜಗತ್ತಿನಲ್ಲಿ ಅವನ ಮನಸ್ಸು ಇದ್ದಕ್ಕಿದ್ದಂತೆ ಪ್ರಶಾಂತವಾಗಿ, ಅವನಿಗೆ ಯಾವುದೋ ಒಂದು ಅನಿರ್ವಚನೀಯವಾದ ಮಧುರ ಸುಖಾನುಭವಾಗುತ್ತಿತ್ತು. ಆದರೆ ಆ ಸುಖ ಶಾಶ್ವತವಾಗಿರುತ್ತಿರಲಿಲ್ಲ. ಹಾರುವ ಹಕ್ಕಿ ಮೇವು ತನ್ನಲು ನೆಲಕ್ಕಿಳಿದೊಡನೆಯೆ ಇರುವೆಗಳು ಮುತ್ತಿ ಕೋಟಲೆಗೆಯ್ಯುತ್ತಿದ್ದುವು. ಆ ಕೋಟಲೆಯಿಂದ ತಪ್ಪಿಸಿಕೊಳ್ಳಲೆಂದು ಅವನು ಬೇಸಾಯದ ಕೆಲಸದಲ್ಲಿ ಹೆಚ್ಚುಹೆಚ್ಚಾಗೆ ಆಸಕ್ತಿ ತೆಗೆದುಕೊಳ್ಳಹತ್ತಿದನು. ಗದ್ದೆ ತೋಟಗಳಲ್ಲಿ ಮೈ ಬಗ್ಗಿ ದಣಿದು ದುಡಿಯುತ್ತಿದ್ದಾಗ ಮನಸ್ಸು ಚಿಂತೆಯ ಪೀಡೆಯಿಂದ ಪಾರಾಗುತ್ತಿತ್ತು. ಅಲ್ಲದೆ ಚೆನ್ನಾಗಿ ಕೆಲಸ ಮಾಡಿ ಆಯಾಸಗೊಂಡು ಮನೆಗೆ ಬಂದರೆ ಸ್ವಲ್ಪ ನೆಮ್ಮದಿಯಾಗುತ್ತಿತ್ತು. ಹಾಗೆಯೆ ಕಾವ್ಯಗಳನ್ನೂ ತತ್ವಗ್ರಂಥಗಳನ್ನೂ ಜೀನವ ಚರಿತ್ರೆಗಳನ್ನೂ ಓದುತ್ತಿದ್ದಾಗ ಮನಸ್ಸು ಉನ್ನತಾವಸ್ಥೆಗೇರುತಿದ್ದುದರಿಂದಲೂ, ಮಹಾ ಪುರುಷರ ಸಂಗಸಂಪರ್ಕದಿಂದ ಆತ್ಮ ಆಕಾಶಗಾಮಿಯಾಗುತ್ತಿದ್ದುದರಿಂದಲೂ, ಅದರಲ್ಲಿಯೂ ಬಹಳ ಕಾಲ ಕಳೆಯುತ್ತದ್ದನು. ಒಂದೊಂದು ಸಾರಿ ರಾತ್ರಿ ಎರಡು ಅಥವಾ ಮೂರು ಗಂಟೆಯವರೆಗೂ ಅವನ ಕೊಠಡಿಯಲ್ಲಿ ದೀಪವುರಿಯುತ್ತಿತ್ತು.

ಚೆನ್ನಾಗಿ ಕತ್ತಲೆಯಾಗಿ ಒಂದು ಗಂಟೆಯ ಮೇಲಾಗಿತ್ತು. ಸೋಮನ ಧ್ವನಿಯನ್ನು ಆಲಿಸಿದ ಹೂವಯ್ಯ, ಓದುತ್ತಿದ್ದ ಹೊತ್ತಗೆಯನ್ನು ಗುರುತು ಕಾಗದ ಹಾಕಿ ಮುಚ್ಚಿಟ್ಟು ಹೊರಗೆ ಜಗಲಿಗೆ ಬಂದನು.

ಕೂದಲು ಕೆದರಿ, ಬಟ್ಟೆ ಹರಿದು, ನೆತ್ತರುಕಲೆಯಾಗಿ, ನಡುಗುತ್ತ ನಿಂತಿದ್ದ ದುಃಸ್ಥಿತಿಯ ಸೋಮನನ್ನು ಕಂಡು ಬೆರಗಾಗಿ “ಏನೋ ಇದು? ಏನಾಯ್ತೊ?” ಎಂದು ಹತ್ತಿರಕ್ಕೋಡಿದನು.

ಸೋಮ ಮಾತಾಡಲಾರದೆ ಅಡ್ಡಬಿದ್ದು ಹೂವಯ್ಯನ ಕಾಲು ಹಿಡಿದುಕೊಂಡು ಬಸ ಬಸ ಬಸನೆ ಅಳತೊಡಗಿದನು. ಅವನನ್ನು ಮಾತನಾಡಿಸಬೇಕಾದರೆ ಬಹಳ ಶ್ರಮವಾಯ್ತು.

ಸೋಮ ಏನನ್ನೂ ಮುಚ್ಚುಮರೆಮಾಡದೆ, ಎಲ್ಲವನ್ನೂ ಅಳುತ್ತಳುತ್ತಲೆ ಹೇಳಿದನು. ತಾನು ಹಿಂತಿರುಗಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಜೇಬಿಗೆ ಕೈಹಾಕಿ ನೋಡಿಕೊಳ್ಳಲು ’ಲೋಟಿನ ಕಟ್ಟು’ ಮಾಯವಾಗಿದ್ದುದು ಗೊತ್ತಾಗಿ, ಮತ್ತೆ  “ಕೋಳಿಯಂಕದ ಪಟ್ಟೆ”ಗೆ ಹೋಗಿ ಕಳ್ಳಂಗಡಿಯವನನ್ನೂ ತಿಮ್ಮನನ್ನೂ ’ಲೋಟಿನ ಕಟ್ಟು’ ಕೊಡುವಂತೆ ಜೋರುಮಾಡಿ ಕೇಳಿದನಂತೆ! ಅವರು ಲೋಟಿನ ಕಟ್ಟಿಗೆ ಬದಲಾಗಿ ಮೈಮುರಿಯುವಂತೆ ಚೆನ್ನಾಗಿ ಕಟ್ಟಿಗೆಯಿಂದ ಪೆಟ್ಟುಕೊಟ್ಟು ಕಳುಹಿಸಿದ್ದರಂತೆ!

ಸೋಮ ಆ ಹಣವನ್ನು ತಾನು ದುಡಿದು ತೀರಿಸುವುದಾಗಿ ಮತ್ತೆ ಮತ್ತೆ ಹೂವಯ್ಯನ ಕಾಲುಮುಟ್ಟಿ ಕೇಳಿಕೊಂಡನು.

ಹೂವಯ್ಯ ಏನನ್ನೂ ನುಡಿಯಲಾರದೆ, ಸೋಮನ ಗಾಯಗಳಿಗೆ ಔಷಧಿ ಹಚ್ಚಿ ಯೋಗಕ್ಷೇಮವನ್ನು ನೋಡಿಕೋ ಎಂಬಂತೆ ಪುಟ್ಟಣ್ಣನ ಕಡೆಗೆ ನೋಡಿ ತನ್ನ ಕೊಟಡಿಗೆ ಹೋದನು.