ಕುಡಿದು ನೆತ್ತಿಗೇರಿದ್ದ ತನ್ನ ಗಂಡನ ಕೈಯ ಕತ್ತಿಯಿಂದ ಪಾರಾಗಿ ಕೆಳಕಾನೂರಿನಲ್ಲಿ ರಾತ್ರಿಯನ್ನು ಕಳೆದು, ಬೆಳಿಗ್ಗೆ ಪುಟ್ಟಣ್ಣನೊಡನೆ ತವರೂರಾದ ನೆಲ್ಲುಹಳ್ಳಿಗೆ ಹೋಗಿದ್ದ ಸುಬ್ಬಮ್ಮನ ದುಃಖ ದಾರುಣವಾಗಿತ್ತು. ಎಷ್ಟು ವೈಭವದಿಂದ ಮದುವೆಯಾಗಿ ಕಾನೂರಿಗೆ ಬಂದಿದ್ದಳೋ, ಎಷ್ಟು ವೈಭವದಿಂದ ಮೆರೆದಿದ್ದಳೋ ಎಷ್ಟು ಅಹಂಕಾರದಿಂದ ವರ್ತಿಸಿದ್ದಳೋ ಅಷ್ಟೇ ದಾರಿದ್ಯ್ರದಿಂದಲೂ ಅದಕ್ಕಿಂತಲೂ ಹೆಚ್ಚಾದ ದೈನ್ಯದಿಂದಲೂ ಸುಬ್ಬಮ್ಮ ತವರೂರಿಗೆ ಹಿಂತಿರುಗಬೇಕಾಯಿತು. ತನ್ನ ಎಲ್ಲ ಒಡವೆ ವಸ್ತುಗಳನ್ನೂ ಕಾನೂರಿನಲ್ಲಿಯೆ ಬಿಟ್ಟು, ಉಟ್ಟ ಸೀರೆ ತೊಟ್ಟ ತೊಡುಗೆಯೊಡನೆ, ಪುಟ್ಟಣ್ಣನ ಹಿಂದೆ ಬಿಕ್ಕಿ ಬಿಕ್ಕಿ ಅತ್ತು ಕಣ್ಣೊರಸಿಕೊಳ್ಳುತ್ತಾ, ಮಾರುದ್ದ ದೇಹವನ್ನು ಗೇಣುದ್ದ ಮಾಡಿಕೊಂಡು ತನ್ನ ತಂದೆಯ ಬಡ ಹುಲ್ಲುಮನೆಯನ್ನು ಪ್ರವೇಶಿಸಿದಳು. ಕತ್ತಲೆ ಕೋಣೆಯಿಂದ ಏಳೆಂಟು ದಿನಗಳು ಹೊರಗೆ ಹೊರಡಲಿಲ್ಲ. ಆಕೆಯ ಹೃದಯ ವಿದೀರ್ಣವಾಗಿತ್ತು. ತಾನು ಕಟ್ಟಿಕೊಂಡಿದ್ದ ಕಾಮನಬಿಲ್ಲಿನ ಬಣ್ಣ ಬಣ್ಣದ ಚಿನ್ನದ ಕನಸು ಇಷ್ಟು ಬೇಗನೆ ಒಡೆದು ಮುಗಿಲಿನ ನೀಲಿಯಿಂದ ನೆಲದ ಕೊಳಚೆಗೆ ಬೀಳುತ್ತದೆಂದು ಆಕೆ ಭಾವಿಸಿರಲಿಲ್ಲ.

ಎಂತಹ ಗಾಯವೂ ಕಾಲಾಂತರದಲ್ಲಿ ಗುಣ ಹೊಂದುತ್ತದೆ. ಎಂತಹ ದುಃಖವನ್ನೂ ಕಾಲ ಮಾಸಿಬಿಡುತ್ತದೆ. ಸುಬ್ಬಮ್ಮ ದುಃಖವನ್ನೆಲ್ಲ ಅತ್ತು ಅತ್ತು ಹೊರಹಾಕಿದಳು. ತಾಯ್ತಂದೆಗಳೂ ನೆರೆಹೊರೆಯವರೂ ಬಂದು ಬಂದು ಸಮಾಧಾನ ಹೇಳಿ ಹೇಳಿ ಹೋಗುತ್ತಿದ್ದರು. ಕೆಲವರು ಮುಂದೆ ಎಲ್ಲ ಸರಿಹೋಗುತ್ತದೆ ಎಂಬ ಪ್ರತ್ಯಾಶೆಯನ್ನೂ ಸೂಚಿಸುತ್ತಿದ್ದರು. ತಂದೆ ಪೆದ್ದೇಗೌಡರು ಮಗಳ ಪರವಾಗಿ ಅಳಿಯನೊಡನೆ ಮಾತಾಡಿ ಬರುತ್ತೇನೆಂದು ಕಾನೂರಿಗೆ ಹೋಗಿ ಚಂದ್ರಯ್ಯಗೌಡರಿಂದ ಬಾಯಿಗೆ ಬಂದಹಾಗೆ ಅನ್ನಿಸಿಕೊಂಡು ಅವಮಾನ ಮಾಡಿಸಿಕೊಂಡೂ ಹಿಂತಿರುಗಿದರು. ಅದಾದಮೇಲೆ ಸುಬ್ಬಮ್ಮ ಕಾನೂರಿಗೆ ಹೋಗುವ ಆಶೆಯನ್ನೇ ನೀಗಿಬಿಟ್ಟಳು.

ಬಡತಾಯಿ ಮಗಳಿಗೆ ಉಟ್ಟುಕೊಳ್ಳಲು ತನ್ನ ಜಡ್ಡು ಸೀರೆಗಳಲ್ಲಿಯೆ ಒಂದನ್ನು ಕೊಟ್ಟಳು. ಕಾನೂರಿನಿಂದ ತನ್ನ ಸೀರೆಗಳನ್ನಾದರೂ ತರಿಸಬೇಕೆಂದು ಸುಬ್ಬಮ್ಮ ಆಳೊಬ್ಬನ ಸಹಾಯದಿಂದ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಕೆಲವು ದಿನಗಳ ಮೇಲೆ ಪುಟ್ಟಮ್ಮ ತನ್ನದೇ ಒಂದು ಸೀರೆಯನ್ನು ತಂದೆಗೆ ತಿಳಿಯದಂತೆ ಬೈರನ ಕೈಲಿ ನೆಲ್ಲುಹಳ್ಳಿಗೆ ಕಳುಹಿಸಿದಳು.

ಎಷ್ಟು ದಿನ ತಾನೇ ನೆಂಡತಿಯಾಗಿ ಕುಳಿತು ತಿಂದು ತವರು ಮನೆಯ ಬಡತನಕ್ಕೆ ಭಾರವಾಗಲಾದೀತು ? ಸುಬ್ಬಮ್ಮ ತಾಯಿತಂದೆಗಳ ಜೊತೆಯಲ್ಲಿ ಮದುವೆಯಾಗುವ ಮೊದಲು ದುಡಿಯುತ್ತಿದ್ದಂತೆ ದುಡಿಯತೊಡಗಿದಳು. ಗುಡಿಸುವುದು. ಸಾರಿಸುವುದು. ಅಡುಗೆ ಮಾಡುವುದು, ಬಟ್ಟೆಗಿಟ್ಟೆ ಒಗೆಯುವುದು, ದನದ ಕೊಟ್ಟಿಗೆಯ ಸೆಗಣಿಯನ್ನು ಬಳಿದು ಮಣ್ಣುತಟ್ಟೆಗೆ ತುಂಬಿ ತಲೆಯಮೇಲೆ ಹೊತ್ತು ಹೋಗಿ ಗೊಬ್ಬರದ ಗುಂಡಿಗೆ ಹಾಕುವುದು, ಕಟ್ಟಿಗೆ ತರುವುದು, ಸಮಯ ಬಿದ್ದರೆ ದನಕಾಯುವುದು – ಎಲ್ಲ ಕೆಲಸಗಳಲ್ಲಿಯೂ ಪಾಲು ವಹಿಸಿದ್ದಳು. ದಿನಕಳೆದ ಹಾಗೆಲ್ಲ, ಕಾನೂರಿನಲ್ಲಿ ಹೆಗ್ಗಡಿತಿಯಾಗಿರುವ ಸುಖಕ್ಕಿಂತಲೂ ನೆಲ್ಲುಹಳ್ಳಿಯಲ್ಲಿ ಆಳಾಗಿ ದುಡಿಯುವ ಕಷ್ಟವೇ ಹೆಚ್ಚು ನೆಮ್ಮದಿಯಾಗಿ ತೋರತೊಡಗಿತು.

ಆದರೆ ಒಮ್ಮೊಮ್ಮೆ ತಾನು ಬಂಜೆ ಎಂಬ ಒಂದು ನಂಬುಗೆ ಮನಸ್ಸಿಗೆ ಬಂದಾಗಲೆಲ್ಲ ಆಕೆಯ ಹೆಂಗರುಳಿಗೆ ಚೇಳು ಕಡಿದಂತಾಗುತ್ತಿತ್ತು. ಚಂದ್ರಯ್ಯಗೌಡರ ಬೈಗುಳದಲ್ಲಿ ಆ ಮಾತನ್ನು ಪದೇ ಪದೇ ಕೇಳಿ ಕೇಳಿ ಆಕೆಯಲ್ಲಿ ತಾನು ಮಕ್ಕಳನ್ನು ಹೆರಲಾರದ ಪಾಪಿ ಎಂಬ ಜುಗುಪ್ಸೆ ಬೇರೂರಿತ್ತು.

ನೆಲ್ಲುಹಳ್ಳಿಯಲ್ಲಿ ಗದ್ದೆಕೊಯಿಲು ಭರದಿಂದ ಸಾಗಿತ್ತು. ಸುಬ್ಬಮ್ಮನೂ ಬೆಳಗಿನಿಂದ ಬೈಗಿನವರೆಗೆ ತಂದೆತಾಯಿಗಳಿಗೆ ನೆರವಾಗಿ ಬೆವರು ಸುರಿಸಿ ಗೆಯ್ಯುತ್ತಿದ್ದಳು. ರಾತ್ರಿ ಬಡವೂಟ ಉಂಡರೂ ಕುಡಿಯುವುದಕ್ಕೆ ಹುಳಿ ಹೆಂಡವೂ ನಂಚಿಕೊಳ್ಳಲು ಉಪ್ಪಿನಕಾಯಿಯ ರಸವೂ ಯಥೇಚ್ಛವಾಗಿ ದೊರೆಯುತ್ತಿದ್ದುದರಿಂದ ಆಕೆಗೆ ಆನಂದವಾಗುತ್ತಿತ್ತು. ಅಲ್ಲದೆ ದಿನವೆಲ್ಲ ಬಿಸಲಿನಲ್ಲಿ ಗೆಯ್ದು ರಾತ್ರಿ ಹೆಂಡ ಕುಡಿದು ಮಲಗಿದರೆ ಪ್ರಜ್ಞೆ ತಪ್ಪಿದಂತೆ ನಿದ್ದೆ ಬರುತ್ತಿದ್ದುದರಿಂದ ತನ್ನ ದುಃಸ್ಥಿತಿಯನ್ನು ನೆನೆದು ಕೂರಗಲು ಅತಿ ಅವಕಾಶ ಇಲ್ಲದಂತಾಗಿ ಬಾಳು ಸುಖವಾಗಿತ್ತು.

ಒಂದು ದಿನ ಸಾಯಂಕಾಲ ಸುಬ್ಬಮ್ಮ ಗದ್ದೆಯಿಂದ ಮನೆಗೆ ಬಂದಾಗ ಜಗಲಿಯಲ್ಲಿ ಸೇರೆಗಾರ ರಂಗಪ್ಪಸೆಟ್ಟರು ಮೇಲುಬಾರಿಗೆ ಹೂಕೂರಿಸಿದ ಹುಂಚದ ಕಟ್ಟೆಯ ಗಿರ್ಕಿಮೆಟ್ಟು, ಕನ್ನಡ ಜಿಲ್ಲೆಯ ಕಚ್ಚೆಪಂಚೆ, ಕಪ್ಪು ಗೀಟಿನ ಕೋಟು, ಹೆಗಲಮೇಲೆ ಕೆಂಪು ಎಲೆವಸ್ತ್ರ, ತಲೆಗೆ ನೀಲಿ ಬಣ್ಣದ ಕೋರೆ ರುಮಾಲು, ಹಣೆಯಲ್ಲಿ ಕುಂಕುಮದ ಬಟ್ಟು, ಕಿವಿಗಳಿಗೆ ಹರಳೊಂಟಿ, ಮೇಲ್ದುಟಿಯನ್ನು ಮೇಲೊತ್ತಿ ಹೊರದೋರುತ್ತಿದ್ದ ಉಬ್ಬುಹಲ್ಲುಗಳಲ್ಲಿ ತಾಂಬೂಲದ ರಂಗು – ಇವುಗಳಿಂದ ಸಾಲಂಕೃತರಾಗಿ ಹಸನ್ಮುಖಿಯಾಗಿ ಕುಳಿತಿದ್ದರು ! ಸುಬ್ಬಮ್ಮನನ್ನು ಕಂಡೊಡನೆ ವಿಸ್ತಾರವಾಗಿ ಹಲ್ಲುಕಿರಿದು ನಗೆಸೂಸಿ “ಏನಮ್ಮಾ ಹ್ಯಾಂಗದ್ದೀರಿ ?” ಎಂದು ಬಹಳ ಆದರಪೂರ್ವಕವಾಗಿ ಪ್ರಶ್ನಿಸಿದರು.

ಸುಬ್ಬಮ್ಮನಿಗೆ ಸೇರೆಗಾರರನ್ನು ಕಂಡೊಡನೆ ಕಾನೂರಿನಲ್ಲಿ ತನಗಾದುದೆಲ್ಲ ನೆನಪಿಗೆ ಬಂದು ಕೋಪದಿಂದಲೂ ದುಃಖದಿಂದಲೂ ತಲೆ ಬಗ್ಗಿಸಿಕೊಂಡು ಕಣ್ಣೆತ್ತಿ ನೋಡದೆ “ಹೀಂಗಿದ್ದೀನಿ. ಇನ್ನೂ ಸಾಯ್ಲಿಲ್ಲಾ !” ಎನ್ನುತ್ತ ಒಳಗೆ ಹೋದಳು.

ಆ ದಿನವೇ ಸುಬ್ಬಮ್ಮನನ್ನು ಕರೆದುಕೊಂಡು ಬರುವಂತೆ ಹೇಳಿ ಚಂದ್ರಯ್ಯಗೌಡರು ತಮ್ಮನ್ನು ಕಳುಹಿಸಿದ್ದಾರೆ ಎಂದು ಸೇರೆಗಾರರು ತಿಳಿಸಲು ಪೆದ್ದೇಗೌಡರ ದಣಿದ ಮುಖ ಗಂಟು ಗಂಟಾಯಿತು. ಹಿಂದೆ ಚಂದ್ರಯ್ಯಗೌಡರಿಂದ ತಮಗಾಗಿದ್ದ ಅವಮಾನವನ್ನು ನನದು ಸಿಟ್ಟಿನಿಂದಲೂ ತಿರಸ್ಕಾರದಿಂದಲೂ ಬಾಯಿಗೆ ಬಂದಹಾಗೆ ಹೇಳಬೇಕೆಂದವರು ನಾಲಗೆಯನ್ನು ಬಿಗಿಹಿಡಿದು ಕೊಂಡರು. ಬಡವನ ಸಿಟ್ಟು ದವಡೆಗೆ ಮೂಲ ಎಂಬ ಗಾದೆ ಅವರಿಗೆ ನಿತ್ಯದ ಅನುಭವವಾಗಿತ್ತು. ಅಲ್ಲದೆ ತಮ್ಮ ಕೋಪ ತಮ್ಮ ಮಗಳ ಕಲ್ಯಾಣಕ್ಕೆ ಅಡ್ಡ ಬಂದೀತೆಂಬ ವಿವೇಕದ ಔದಾರ್ಯವೂ ಅವರನ್ನು ಸಂಯಮಿಯನ್ನಾಗಿ ಮಾಡಿತು.

“ಗಾಡಿ ಕಳಿಸಬೇಕು ಅಂತಾ ಇದ್ದರು ! ಆದರೆ ಮೊನ್ನೆ ಮೊನ್ನೆ ಹೊಸ ಎತ್ತು ತೆಗೆದುಕೊಂಡಿದ್ದಾರೆ. ಇನ್ನೂ ಸರಿಯಾಗಿ ತಿದ್ದಿಲ್ಲ ” ಎಂದರು ಮತ್ತೆ ಸೇರೆಗಾರರು ಸಂಶಯ ನಿವಾರಣೆಗಾಗಿ ಎಂಬಂತೆ.

ಸುಬ್ಬಮ್ಮನನ್ನು ಮದುವೆಯಾದ ಹೊಸತರಲ್ಲಿ ಚಂದ್ರಯ್ಯಗೌಡರು ತಮ್ಮ ಹೊಸ ಹೆಂಡತಿಯ ಹೂವಿನ ಅಡಿಗಳು ಸ್ವಲ್ಪ ನಡೆದರೂ ಎಲ್ಲಿ ಸಮೆಯುತ್ತವೆಯೋ ಎಂದು ಬೆದರಿ ಆಕೆಯನ್ನು ಯಾವಾಗಲೂ ಗಾಡಿಯ ಮೇಲೆಯೇ ಹಿಂದಕ್ಕೂ ಮುಂದಕ್ಕೂ ಸಾಗಿಸುತ್ತಿದ್ದರು. ಅದರ ಅತಿರೇಕವು ಜನಜಿಹ್ವೆಯಿಂದಲೂ ಹೊರಬಿದ್ದಿತ್ತು. ಆದ್ದರಿಂದಲೆ ಸೇರೆಗಾರರು ಗೌಡರು ಗಾಡಿ ಕಳುಹಿಸಿದಿದ್ದುದಕ್ಕೆ ಕಾರಣ ಹೇಳಬೇಕಾಗಿ ಬಂದದ್ದು.

ಬೈಗಾಗಿದ್ದುದರಿಂದ ಮಗಳನ್ನು ಮರುದಿನ ಬೆಳಗ್ಗೆ ಕಳುಹಿಸುವುದಾಗಿ ಪೆದ್ದೇಗೌಡರು ಹೇಳಲು ಸೇರೆಗಾರರು ಎಚ್ಚರಿಕೆ ಹೇಳುವವನಂತೆ “ಹಾಂಗೆ ಮಾಡೂಕಾಗ ಕಾಣಿ ! (ಒಂದೊಂದು ಸಾರಿ ಅವರು ಭಾವಪೂರ್ಣವಾಗಿ ಮಾತಾಡುವಾಗ ಗಟ್ಟದ ಮೇಲಿನ ಕನ್ನಡ ಗಟ್ಟದ ಕೆಳಗಿನ ಸೆಟ್ಟರ ಕನ್ನಡವಾಗಿಬಿಡುತ್ತಿತ್ತು ) ಈವತ್ತೇ ಕಳಿಸಬೇಕೆಂಬ್ರೂ ! ಕಳಿಸಿನಿ, ಬಿಡಿನಿ ! ನಾ ಹೋತೆ ! ನಮ್ಮ ಗೌಡರಿಗೆ ತಲೆಕೆಟ್ಟಿತ್ತಂಬ್ರು ! ಈವತ್ತು ಇದ್ದ ಬುದ್ಧಿ ನಾಳೆ ಇರಲಿಕ್ಕಿಲ್ಲ ! ನೀವು ಕಳಿಸಿದರೆ ಕಳಿಸಿನಿ ! ಬಿಟ್ಟರೆ ಬಿಡಿನಿ ! ನಾನು ಹೋಗಿಬತ್ತೆ !” ಎಂದು ಎದ್ದು ನಿಂತು ಗೋಡೆಗೆ ಒರಗಿಸಿಟ್ಟಿದ್ದ ತಮ್ಮ ಬೆಳ್ಳಿಕಟ್ಟಿನ ಬೆತ್ತವನ್ನು ಕೈಗೆ ತೆಗೆದುಕೊಂಡರು.

“ಹಾಂಗಾರೆ ನೀವು ಹೋಗಿ. ನಾನೇ ನಾಳೆ ಬೆಳಗ್ಗೆ ಕರಕೊಂಡು ಬತ್ತೀನಿ.”

ಸೇರೆಗಾರರು ಸ್ವಲ್ಪ ಪೆಚ್ಚಾದರು. ಮತ್ತೆ ಕೂತುಕೊಂಡರು. ಬಹಳ ಹೊತ್ತು ಆಲೋಚಿಸಿದರು.

ಕೋಳಿಗಳ ಕೂಗಾಟ, ನಾಯಿಗಳ ಬೊಗಳುವಿಕೆ, ಕೊಟ್ಟಿಗೆಗೆ ಬರುತ್ತಿದ್ದ ದನಕರುಗಳ ‘ಅಂಬಾ’ ‘ಅಂಬಾ’ ಎಂಬ ಧ್ವನಿ, ದನ ಕಾಯುವ ಹುಡುಗನ ವಿಚಿತ್ರವಾದ ಸ್ವರಸಮೂಹ, ಹೊರಗೆ ಬಯಲಿನಲ್ಲಿ ಹುಡುಗರು ಮಕ್ಕಳುಗಳ ಬೊಬ್ಬೆ, ಕೇಕೆ – ಯಾವುದೂ ಸೇರೆಗಾರರಿಗೆ ಕೇಳಿಸಲಿಲ್ಲ. ಅವರು ತಮ್ಮ ವ್ಯೂಹ ರಚನೆಗೆ ಭಂಗ ಬಂದಿತಲ್ಲಾ ಎಂದು ಮಾತ್ರ ಹಂಬಲಿಸುತ್ತಿದ್ದರು.

ನಿಜವಾಗಿಯೂ ಚಂದ್ರಯ್ಯಗೌಡರು ಸೇರೆಗಾರರರಿಗೆ ‘ಸುಬ್ಬಮ್ಮನನ್ನು ಕರೆದುಕೊಂಡು ಬನ್ನಿ’ ಎಂದು ಹೇಳಿಕಳುಹಿಸಿರಲಿಲ್ಲ. ಅವರು ‘ಕೋಪಕ್ಕೆ ಹೋಗುತ್ತೇನೆ’ ಎಂದು ಚಂದ್ರಯ್ಯಗೌಡರಿಂದ ಅಪ್ಪಣೆ ಪಡೆದು ಬಂದಿದ್ದರು. ಬಹು ದಿನಗಳಿಂದಲೂ ಅವರ ಮನಸ್ಸಿನಲ್ಲಿ ಅಪವಿತ್ರ ಭಾವನೆಗಳು ಮೂಡಿ ಬೇಯಿಸುತ್ತಿದ್ದುವು. ಆ ದುಷ್ಟ ವಾಸನೆಗಳಿಂದಲೆ ಪ್ರೇರಿತವಾಗಿ ಇಂದು ಅವರು ನೆಲ್ಲುಹಳ್ಳಿಗೆ ಬಂದಿದ್ದರು. ಅವರ ವ್ಯೂಹ ಈ ರೀತಿ ಇದ್ದಿತು : ಸುಬ್ಬಮ್ಮನನ್ನು ಸಾಯಂಕಾಲ ಅಲ್ಲಿಂದ ಕರೆದುಕೊಂಡು ಹೊರಟು, ಕಾಡುದಾರಿಗಳಲ್ಲಿ ಸುತ್ತಿಸಿ, ಕತ್ತಲೆಯಾದ ಮೇಲೆ ತಮ್ಮ ಅಭೀಷ್ಟಸಿದ್ದಿಗೆ ಪ್ರಯತ್ನಮಾಡುವುದು !

ಸುಬ್ಬಮ್ಮ ತಮ್ಮೊಡನೆ ತೋರುತ್ತಿದ್ದ ಸರಳತೆಯನ್ನು ಸರಸತೆಯೆಂದು ಆ ಕಾಮೋನ್ಮತ್ತನು ಭಾವಿಸಿದ್ದುದರಿಂದ ತನ್ನ ಪ್ರಯತ್ನ ಸಫಲವಾಗುತ್ತದೆ ಎಂದೇ ನಿರ್ಧರಿಸಿದ್ದನು. ಒಂದು ವೇಳೆ ಹಾದಿಯಲ್ಲಿ ಕಾರ್ಯಸಿದ್ದಿಯಾಗದಿದ್ದರೆ ಎಂತಿದ್ದರೂ ಚಂದ್ರಯ್ಯಗೌಡರು ಆಕೆಯನ್ನು ಮನೆಗೆ ಸೇರಗೊಡುತ್ತಿದ್ದಿಲ್ಲವಾದ್ದರಿಂದ ಆ ರಾತ್ರಿ ಆಕೆಯನ್ನು ಗಂಗೆಯ ಬಿಡಾರದಲ್ಲಾಗಲಿ ಅಥವಾ ಇನ್ನಾವುದಾದರೂ ಗೋಪ್ಯವಾದ ಸ್ಥಾನದಲ್ಲಿಯಾಗಲಿ, ನಿದ್ದೆ ಮಾಡುವ ಮೊದಲು ಆಕೆಗೆ ಅತಿಪ್ರಿಯವಾಗಿದ್ದ ಕಳ್ಳನ್ನು ಅಮಲು ಬರುವಂತೆ ಕೊಟ್ಟು ಮಲಗಿಸಿ, ಇಷ್ಟಸಿದ್ಧಿ ಮಾಡಿಕೊಳ್ಳಬಹುದೆಂದು ಆ ಪೋಕರಿ ಹವಣಿಸಿದ್ದನು.

ಆದರೆ ಸುಬ್ಬಮ್ಮ ಸುದೈವ ! ಪೆದ್ದೇಗೌಡರ ಮಾತು ಕರಾಳವಾದ ಆ ಹೊಂಗನಸನ್ನು ಚೂರು ಚೂರು ಮಾಡಿದ್ದರಿಂದ ಸೇರೆಗಾರರು ಆಲೋಚಿಸಿ, ಆಲೋಚಿಸಿ, ನಿಟ್ಟುಸಿರು ಬಿಟ್ಟು, “ಅದೂ ಹೌದೇ ! ಇವತ್ತು ಇದ್ದು ನಾಳೆ ಬೆಳಿಗ್ಗೆ ನಾನೇ ಕರಕೊಂಡು ಹೋದರೇನಾಗ್ತದೆ ! ನಿಮಗೆ ಯಾಕೆ ಆ ತೊಂದ್ರೆ ? ಗದ್ದೆಕೊಯಿಲು, ಬಹಳ ಕೆಲಸ ! ಇವತ್ತು ಒಂದು ರಾತ್ರೆ ಇಲ್ಲೇ ಇದ್ದು ಹೋದರಾಯ್ತು ! ಗೌಡರೇನೋ ಬಯ್ಯುತ್ತಾರೆ ಬಾಯಿಗೆ ಬಂದಹಾಗೆ ! ಏನು ಮಾಡುವುದು ; – ಸುಬ್ಬಮ್ಮನವರ ಗೋಳೊಂದು ತಪ್ಪಿದರೆ ಸಾಕು ! – ನಾನಂತೂ ಹರಕೆ ಹೇಳಿಕೊಂಡಿದ್ದೇನೆ !” ಎಂದು ಪೆದೇಗೌಡರ ಮಗಳ ಯೋಗಕ್ಷೇಮಕ್ಕಾಗಿ ಕಾತರತೆ ಕನಿಕರಗಳನ್ನು ಪ್ರದರ್ಶಿಸಿದರು.

ಕಪಟವನ್ನರಿಯದ ಬೆಪ್ಪು ಪೆದ್ದೇಗೌಡರು ’ಏನೋ ನೀವೆಲ್ಲ ಪರ್ಯತ್ನಮಾಡಿ ನನ್ನ ಮಗಳ ಮಂಗಳಸೂತ್ರ….” ಎಂದ ಅವರಿಗೆ ದುಃಖದಿಂದ ಕೊರಳ ಸೆರೆ ಬಿಗಿದು ಮುಂದುವರಿಯಲಾರದೆ ಕಣ್ಣೀರು ಹನಿಯಿತು.

ರಾತ್ರಿ ಪದ್ದೇಗೌಡರು ಸುಬ್ಬಮ್ಮಗೆ ಸೇರೆಗಾರರು ಹೇಳಿದ ವಿಚಾರವನ್ನೆಲ್ಲ ತಿಳಿಸಿದರು. ಆದರೆ ಸುಬ್ಬಮ್ಮ ಗಂಡನ ಮನೆಗೆ ಹೋಗುವುದಿಲ್ಲವೆಂದು ಹಟಹಿಡಿದು ಅಳತೊಡಗಿದಳು. ತಂದೆತಾಯಿಗಳಿಬ್ಬರೂ ಮಗಳಿಗೆ ನಾನಾ ರೀತಿಯಾಗಿ ಬುದ್ಧಿ ಹೇಳಿದರು. ಪೆದ್ದೇಗೌಡರು “ಗದ್ದೆ ಕೊಯಲಿದ್ದರೆ ಇರಲಿ ! ನಿನ್ನ ಜೊತೆ ನಾನೇ ಬಂದು, ನಿನ್ನ ಗಂಡನ ಕಾಲಿಗಾದರೂ ಬಿದ್ದು ಅವರನ್ನು ಒಪ್ಪಿಸಿ ಬರ್ತೀನಿ ! ನಿನ್ನ ದಮ್ಮಯ್ಯ ಅನ್ತೀನಿ ಒಪ್ಪಿಕೋ !” ಎಂದು ಮಗಳ ಮುಂದೆಯೂ ಅತ್ತರು. ಸುಬ್ಬಮ್ಮ ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಿಕೊಳ್ಳ ಬೇಕಾಯಿತು.

ಮರುದಿನ ಬೆಳಿಗ್ಗೆ ಪೆದ್ದೇಗೌಡರೂ ಜೊತೆ ಬರುತ್ತಾರೆಂದು ಕೇಳಿ ಸೇರೆಗಾರರಿಗೆ ಎದೆ ಹೌವ್ವನೆ ಹಾರಿತು. ಅವರು ಬರದಂತೆ ಮಾಡಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.

ಮೂವರೂ ಹೊರಟು ಕಾನೂರಿನ ಕಡೆಗೆ ಗದ್ದೆ ಬಯಲುಗಳನ್ನೂ ಕಾಡುಗಳನ್ನೂ ಹಾದು ನಡೆದರು. ದಾರಿಯಲ್ಲಿ ಸೇರೆಗಾರರು ಸಿಂಗಪ್ಪಗೌಡರು ಹಬ್ಬಿಸಿದ್ದ ‘ಕುರಿಚೋರಿ’ಯ ಕಥೆ ಸುಳ್ಳು ಎಂಬುದಾಗಿ ವಿಸ್ತಾರವಾಗಿ ವಿವರಿಸಿ, ಸುಳ್ಳಾಗದಿದ್ದರೂ ಸತ್ಯವಾಗಿ ತೋರುವಂತೆ ಮಾಡಿಬಿಟ್ಟು, ಹೂವಯ್ಯ ಭೂತದ ಬಲಿಯನ್ನು ಅಪಹರಿಸಿ ಹೋತವನ್ನು ಮನೆಯಲ್ಲಿಟ್ಟುಕೊಂಡಿರುವುದರಿಂದಲೇ ಕಾನೂರು ಮನೆಯಲ್ಲಿ ನೆಮ್ಮದಿಯಿಲ್ಲವೆಂತಲೂ, ಸುಬ್ಬಮ್ಮಗೆ ಕಷ್ಟ ಪ್ರಾಪ್ತಿಯಾಯಿತೆಂತಲೂ, ಚಂದ್ರಯ್ಯಗೌಡರ ತಲೆ ಕೆಟ್ಟಿತೆಂತಲೂ, ಮೂಢಮತಿಗಳಾಗಿದ್ದ ಶೋತೃಗಳ ನಂಬುಗೆ ನೂರ್ಮಡಿಯಾಗುವಂತೆ ವರ್ಣಿಸಿದರು.

ಕಾನೂರು ಮನೆ ಅರ್ಧ ಮೈಲಿ ದೂರದಲ್ಲಿದೆ ಎನ್ನುವಾಗ ಸೇರೆಗಾರರು “ಪೆದ್ದೇಗೌಡ್ರೇ, ನೀವು ಒಂದು ಕೆಲಸ ಮಾಡಿನಿ. ನಮ್ಮ ಗೌಡರಿಗೆ ನಿನ್ನೆಯ ಬುದ್ಧಿ ಇವತ್ತು ಇರಲಿಕ್ಕಿಲ್ಲ ! ನೀವು ಮೊದಲು ಹೋಗಿ, ಅವರ ಮನಸ್ಸು ಹೇಂಗಿತ್ತು ಅಂಬುದನ್ನು ಕಂಡುಕೊಂಡು ಬನ್ನಿ. ಹೆಗ್ಗಡಿತಮ್ಮ ಅದುವರೆಗೂ ಇಲ್ಲೆ ಇರಲಿ ” ಎಂದು, ಸುಬ್ಬಮ್ಮಗೆ “ನಾನು ಇರುತ್ತೇನೆ ಕಾವಲಿಗೆ ! ನಿಮಗೆ ಭಯ ಬೇಡ” ಎಂದರು.

ಮಗಳಿಗೆ ಒಳ್ಳೆಯದಾದರೆ ಸಾಕು ಎಂಬ ಒಂದೇ ಭಾವದಿಂದ  ಅತೃಪ್ತರಾಗಿದ್ದ ಸುಬ್ಬಮ್ಮನ ತಂದೆ ‘ದೇವರೇ, ಚಂದ್ರಯ್ಯಗೌಡರ ಮನಸ್ಸು ಪ್ರಸನ್ನವಾಗಲಿ’ ಎಂದು ಪ್ರಾರ್ಥಿಸುತ್ತಾ ಕಾನೂರಿನ ಕಡೆಗೆ ನಡೆದು ಕಣ್ಮರೆಯಾದರು. ಸೇರೆಗಾರರು ಬುಡದಲ್ಲಿ ವಿರಳವಾಗಿ ಪೊದೆ ಬೆಳೆದಿದ್ದ ಒಂದು ದೊಡ್ಡ ಬಸರಿ ಮರದ ನೆರಳಿಗೆ ಸುಬ್ಬಮ್ಮನ್ನು ಕರೆದೊಯ್ದು, ಆಕೆ ಕೂತುಕೊಂಡಮೇಲೆ, ಸಮೀಪದಲ್ಲಿ ಎದುರಾಗಿ ತಾವೂ ಕೂತುಕೊಂಡರು.

ಇನ್ನೂ ಮಧ್ಯಾಹ್ನವಾಗಿರಲಿಲ್ಲ. ಬಿಸಿಲು ಜೋರಾಗಿತ್ತು. ಸುತ್ತಲೂ ಅರಣ್ಯಶ್ರೇಣಿಗಳು ಧೀರವಾಗಿ ತಲೆಯೆತ್ತಿ ಹಬ್ಬಿದ್ದುವು. ಬಯಲುಗಳೂ ಕೂಡ ಕುರುಚಲು ಕಾಡುಗಳಂತೆ ಹಸುರಾಗಿದ್ದುವು. ಅವರು ಕುಳಿತಿದ್ದ ಸ್ಥಾನದಿಂದ ಗದ್ದೆಯ ಕೋಗು ಕಣ್ಣಿಗೆ ಕಾಣಿಸದಿದ್ದರೂ ಕೊಯಿಲುಗೆಲಸದಲ್ಲಿ ತೊಡಗಿದ್ದ ಜನರ ಸದ್ದು ಗದ್ದಲ ಸ್ವಲ್ಪ ಸ್ವಲ್ಪ ಕೇಳಿಸುತ್ತಿತ್ತು.

ಹಸಿದ ನಾಯಿ ಮೃಷ್ಟಾನ್ನವನ್ನು ನೋಡುವಂತೆ ಸೇರೆಗಾರರು ಸುಬ್ಬಮ್ಮನನ್ನು ಮಾತಾಡಿಸುವ ನೆವದಿಂದ ನೋಡುತ್ತಿದ್ದರು. ಅವರ ಮಾತುಗಳಲ್ಲಿ ಶ್ರದ್ಧೆ ಸಾಮಂಜಸ್ಯಗಳೊಂದೂ ಇರಲಿಲ್ಲ. ಸುಬ್ಬಮ್ಮನೂ ಮಾತಿನ ಕಡೆಗೆ ಹೆಚ್ಚು ಗಮನ ಕೊಡದೆ ತಂದೆ ಹೋಗಿದ್ದ ಕೆಲಸ ಮುಂದೇನಾಗುತ್ತದೆ ಎಂದು ಚಿತ್ತೋದ್ವಿಗ್ನಳಾಗಿ ಕನ್ನೆಗೈಯಾಗಿ ಬಾಗಿ ಕುಳಿತಿದ್ದಳು. ಇನ್ನೇನು ಕೈಗೆ ನಿಲುಕಲಿರುವ ಸ್ವರ್ಗಸುಂದರ ಸ್ವಪ್ನದಂತೆ ಸುಬ್ಬಮ್ಮ ಸೇರೆಗಾರರ ಕಣ್ಣಿಗೆ ಸುಮನೋಹರವಾಗಿ ನಲಿದೆಸೆದಳು.

ಬೇಡವೆಂದರೂ ಕೇಳದೆ ಆಕೆಯ ತಾಯಿ ಆ ದಿನ ಬೆಳಿಗ್ಗೆ ತಲೆಮಾಚಿ, ಹೂ ಮುಡಿಸಿ, ಹಣೆಗೆ ಬೊಟ್ಟಿಟ್ಟು, ಕಿವಿ ಮೂಗುಗಳಿಗೆ ತೊಡಿಸಿ ಹಿಂದೆ ಪುಟ್ಟಮ್ಮ ಕಳುಹಿಸಿದ ನೀಲಿಗಪ್ಪಿನ ಸೀರೆಯನ್ನೂ ಉಡಿಸಿ, ಗಂಡನ ಮನೆಗೆ ಹೋಗುವ ಮಗಳನ್ನು ತವರೂರಿನಿಂದ ಹೇಗೆ ಕಳುಹಿಸಬೇಕೊ ಹಾಗೆ ಸಿಂಗರಿಸಿ ಕಳುಹಿಸಿದ್ದಳು. ಸೇರೆಗಾರರು ಕಲಾವಿಮರ್ಶಕನು ವರ್ಣಚಿತ್ರವನ್ನು ವಿವರವಾಗಿ ಸಮೀಕ್ಷಿಸುವಂತೆ ಸುಬ್ಬಮ್ಮನ ಅಂಗೋಪಾಂಗಗಳನ್ನು ಚೆನ್ನಾಗಿ ನೋಡಿ ಸವಿದರು. ದುಂಡು ಮುಖ, ಮೃದುವಾದ ಕೆನ್ನೆಗಳು, ಮನಸ್ಸನ್ನು ಸೂರೆಗೊಳ್ಳುವ ಕಣ್ಣುಗಳು, ಹುಬ್ಬು, ಹೆಣೆ, ಬಾಚಿದ ಬೈತಲೆ, ಕರಿಗುರುಳು, ಮುತ್ತಿಡುವುದಕ್ಕಾಗಿಯೇ ಮಾಡಿದಂತಿದ್ದ ದುಂಡುಗಲ್ಲದ ನುಣ್ಪು, ರವಕೆ ಬಿಗಿದ ತೋಳುಗಳು, ಹೊಂಬಳೆ, ತೋಳುಸರಿಗೆ, ಎಸಳುಗುಡಿ, ಬೆಂಡೋಲೆ, ಗೆಜ್ಜೆಯಡ್ಡಿಕೆ, ಉಬ್ಬಿದದೆ ! ನೋಡುತ್ತಾ ನೋಡುತ್ತಾ ಸೇರೆಗಾರರ ಮನಸ್ಸು ಹುಚ್ಚಾಯಿತು ! ಮನಸ್ಸಿನಲ್ಲಿಯೆ ನೂರಾರುಸಾರಿ ಅಂಗಾಂಗಗಳಿಗೆ ಮುತ್ತಿಟ್ಟರು ! ಮನಸ್ಸು ತೃಪ್ತಿಗೊಳ್ಳಲಿಲ್ಲ. ತಡೆಯದಾಯಿತು ! ಏನಾದರೂ ಆಗಲಿ ! ಸುಬ್ಬಮ್ಮ ಒಪ್ಪಿ ಸುಮ್ಮನಾದರೆ ಸಲೀಸಾಯಿತು ! ಇಲ್ಲದಿದ್ದರೆ ಗಟ್ಟಿದ ಕೆಳಗೆ ಹಾರಿದರಾಯಿತು ! ಹೀಗೆ ಆಲೋಚಿಸಿ, ಸುಬ್ಬಮ್ಮನ ಮನಸ್ಸನ್ನರಿಯಲೋಸ್ಕರ ಸ್ವಲ್ಪ ಮುಂದೆ ಸರಿದು ತಮ್ಮ ಕಾಲು ಆಕೆಯ ಕಾಲಿಗೆ ತಗಲುವಂತೆ ಮಾಡಿದರು. ಸುಬ್ಬಮ್ಮ ಬೆಚ್ಚಿ ಹಿಂದೆ ಸರಿದಳು. ಮುಂದೆ ಏನಾಗುತ್ತಿದ್ದಿತೋ ಏನೋ ? ಅಷ್ಟರಲ್ಲಿ ಡೊಳ್ಳುಹೊಟ್ಟೆಯ ಸೋಮ ಮುರುವಿಗೆ ಹುಲ್ಲಿನ ಹೊರೆಯನ್ನು ಹೊತ್ತುಕೊಂಡು ಬರುತ್ತಾ ಸಮೀಪಸ್ಥನಾದುದನ್ನು ಕಂಡು ಸುಬ್ಬಮ್ಮ ಕೆಮ್ಮಿದಳು.

“ಏನು ಹೆಗ್ಗಡಿತಮ್ಮಾ, ಇಲ್ಲಿ ಕೂತುಬಿಟ್ಟಿರಲ್ಲಾ ?” ಎಂದು ಸೋಮ ಹತ್ತಿರ ಬಂದು ನಿಂತನು.

ಫಕ್ಕನೆ ದೂರ ಸರಿದಿದ್ದ ಸೇರೆಗಾರರಿಗೆ ಮಹಾಆಶಾಭಂಗವಾಗಿ ತುಳುಭಾಷೆಯಲ್ಲಿ ಏನೇನೋ ಹೇಳತೊಡಗಿದರು. ಸೋಮನೂ ಅದೇ ಭಾಷೆಯಲ್ಲಿಯೆ ಪ್ರತ್ಯುತ್ತರ ಹೇಳುತ್ತಿದ್ದನು. ಮಾತೂ ಮುಖಭಂಗಿಯೂ ಬಿಸಿಬಿಸಿಯಾಗಿದ್ದುವು.

ಸುಬ್ಬಮ್ಮ ವಿಷಯವೇನೆಂದು ಕೇಳಲು, ಹುಲ್ಲು ಹೊರೆಯನ್ನು ಕೆಳಗೆಸೆದು ಸೋಮ ಹೇಳತೊಡಗಿದನು.

ಸೇರೆಗಾರರೇ ಮೊದಲಾದವರು ಪಟಾಲಂ ಸೇರಿ ಹೂವಯ್ಯನ ‘ಬಲೀಂದ್ರ’ ಹೋತವನ್ನು ಚೋರಿಮಾಡಲು ಪ್ರಯತ್ನಿಸಿದ್ದ ಕಥೆಯನ್ನೆಲ್ಲ ಹೇಳಿದನು. ಮಾಂಸದಾಶೆ ತೋರಿಸಿ ತನ್ನನ್ನು ಹೇಗೆ ಮರುಳು ಮಾಡಿ ‘ಕುರಿಚೋರಿಗೆ’ಗೆ ಕಳುಹಿಸಿ, ತಾವೆಲ್ಲರೂ ದೂರದಲ್ಲಿಯೆ ಅಡಗಿ ನಿಂತು, ಕಡೆಗೆ ಗುಟ್ಟು ರಟ್ಟಾಗಲು, ತಮ್ಮೊಬ್ಬರ ಜವಾಬ್ದಾರಿಯೂ ಇರಲಿಲ್ಲವೆಂದೂ ತಾನೊಬ್ಬನೇ ಕಳ್ಳನೆಂದು ಸಾರಿಬಿಟ್ಟರೆಂಬುದನ್ನೂ ತಿಳಿಸಿದನು.

ಆ ರಾತ್ರಿ ಪ್ರಸಂಗದಲ್ಲಿ ಸೋಮನಿಗೆ ಬಹಳ ಗಾಯವಾಗಿ ಹೂವಯ್ಯನ ಶುಶ್ರೂಷೆಯಲ್ಲಿ ಕೆಲ ದಿನಗಳು ಅಲ್ಲಿಯೆ ಇದ್ದು ಅನಂತರ ಎಲ್ಲ ವಾಸಿಯಾದ ಮೇಲೆ ತನ್ನ ಬಿಡಾರದಲ್ಲಿದ್ದ ಸಾಮಾನುಗಳನ್ನೆಲ್ಲ ಕೆಳಕಾನೂರಿಗೆ ತಂದು, ಇನ್ನು ಮೇಲೆ ಕಾನೂರಿಗೆ ಹೋಗುವುದಿಲ್ಲವೆಂದೂ ಸೇರೆಗಾರರ ಆಳಾಗಿ ಇರುವುದಿಲ್ಲವೆಂದೂ ಹಟ ಹಿಡಿದು ನಿಂತನು. ಸೇರೆಗಾರರು ಚತುರೋಪಾಯಗಳನ್ನು ಉಪಯೋಗಿಸಿ ಅವನನ್ನು ಹಿಂದಕ್ಕೆ ಕರೆತರಲು ಪ್ರಯತ್ನಿಸಿದರು. ಸೋಮನನ್ನು ಕಟ್ಟಿಹೊತ್ತು ಬಲಾತ್ಕಾರದಿಂದ ಕಾನೂರಿಗೆ ಸಾಗಿಸಲೂ ಪ್ರಯತ್ನಿಸಿದರು. ಆದರೆ ಶಕ್ತಿಯಿಲ್ಲದಿದ್ದರೂ ವಿವೇಕವಿಲ್ಲದಿದ್ದ ಅವನ ಕೆಲಸದ ಕತ್ತಿಗೆ ಬೆದರಿ ಸೇರೆಗಾರರ ಕಡೆಯ ಆಳುಗಳು ಹಿಂದಕ್ಕೆ ಹೋಗಬೇಕಾಯಿತು. ’ಹೂವಯ್ಯಗೌಡರಂಥಾ ಒಡೆಯರನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ’ ಎಂದು ಸೋಮ ಕೆಳಕಾನೂರಿನಲ್ಲಿಯೆ ಆಳಾಗಿ ನಿಂತನು. ಕಟ್ಟಕಡೆಗೆ ಸೇರೆಗಾರರು ಸೋಮನಿಂದ  ತಮಗೆ ಬರಬೇಕಾದ ಬಾಕಿಯಿದೆ ಎಂದು ಹುನಾರು ತೆಗೆದರು. ಸೋಮ ‘ಅವರಿಗೆ ಕೊಡಬೇಕಾದ ಬಾಕಿ ಏನೂ ಇಲ್ಲ. ನಾನು ಇಷ್ಟು ದಿವಸ ಕೆಲಸ ಮಾಡಿದ್ದಕ್ಕೆ ಮುಂಗಡ ವಜಾ ಆಗಿದೆ. ಅವರಿಂದಲೆ ನನಗೆ ಬರಬೇಕಾದ ಬಾಕಿ ಇದೆ’ ಎಂದು ರಭಸವಾಗಿ ವಾದಿಸಿದನು.

ಆ ವಿಚಾರವಾಗಿಯೇ ಸೇರೆಗಾರರಿಗೂ ಸೋಮಗಾರರಿಗೂ ಸೋಮನಿಗೂ ತುಳು ಮಾತಿನಲ್ಲಿ ವಾಗ್ಯುದ್ದವಾಗುತ್ತಿದ್ದುದು ಎಂದು ಗೊತ್ತಾದ ಮೇಲೆ ಸುಬ್ಬಮ್ಮನಿಗೆ ಸೋಮನ ಉಡುಪಿನಲ್ಲಾಗಿದ್ದ ಮಾರ್ಪಾಡು ಅರ್ಥವಾಯಿತು.

ಸಾಮಾನ್ಯವಾಗಿ ಅವನು ಒಂದು ಕೌಪೀನ ಕಟ್ಟಿಕೊಂಡು, ಹೊಟ್ಟೆ ಬಿಟ್ಟುಕೊಂಡು, ಹಾಳೆಟೋಪಿ ಹಾಕಿಕೊಂಡು ಇರುತ್ತಿದನು. ಹೆಚ್ಚು ಎಂದರೆ ಒಂದೂವರೆ ಎರಡು ಗೇಣು ಅಗಲದ ಪಾಣಿಪಂಚೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಿದ್ದನು. ಆದರೆ ಈಗ ಒಂದು ಸೊಗಸಾದ ಹಳೆಯ ಕೋಟು ಹಾಕಿದ್ದಾನೆ ; ಮೊಳಕಾಲು ದಾಟಿದ್ದ ಪಂಚೆಯುಟ್ಟಿದ್ದಾನೆ ; ತಲೆಗೆ ಹಾಳೆಟೋಪಿಗೆ ಬದಲಾಗಿ ಒಂದು ಹಳೆಯ ಹಾಸನದ ಟೋಪಿ ಹಾಕಿಕೊಂಡಿದ್ದಾನೆ ! ಹೂವಯ್ಯನ ಸಂಪರ್ಕದಿಂದ ಇದ್ದಕಿದ್ದ ಹಾಗೆ ಸೋಮನಿಗೂ ನಾಗರಿಕತೆ ಬಂದುಬಿಟ್ಟಿತ್ತು ! ಕೆಲವು ತಿಂಗಳ ಹಿಂದೆ ತಮ್ಮೆದುರು ‘ಒಡೆಯಾ ಒಡೆಯಾ’ ಎಂದು ಹಲ್ಲು ಕಿರಿಯುತ್ತಿದ್ದವನು ಈಗ ಹೀಗೆ ತಲೆಯೆತ್ತಿ ನಿಂತು ಮಾತಾಡುತ್ತಿದ್ದುದನ್ನು ಕಂಡು ಸೇರೆಗಾರರ ಮೈ ಕುದಿಯಹತ್ತಿತ್ತು ! ಆದರೆ ಅವನ ಮೈಮೇಲೆ ಬೀಳುವ ಧೈರ್ಯ ಅವರಿಗಿರಲಿಲ್ಲ. ಹರಿತವಾಗಿದ್ದ ಕುಡುಗೋಲು ಅವನ ಕೈಯಲ್ಲಿ ಕೊಂಕಿ ಹೊಳೆಯುತ್ತಿತ್ತು !

ಸುಬ್ಬಮ್ಮನಿಂದ ‘ಬಾಯಿಗೆ ಈಸಿ’ಕೊಂಡು (ಎಲೆಯಡಕೆ, ಸುಣ್ಣ, ಹೊಗೆಸೊಪ್ಪು ಇತ್ಯಾದಿ ವೀಳೆಯದ ಸಾಮಗ್ರಿಗಳನ್ನು ತೆಗೆದುಕೊಂಡು) ಸೋಮ ಹುಲ್ಲಿನ ಹೊರೆಯನ್ನು ಹೊತ್ತು ಮುಂದೆ ಹೋದರೂ ಸೇರೆಗಾರರ ನಾಯಿತನವನ್ನು ಚೆನ್ನಾಗಿ ತಿಳಿದಿದ್ದ ಅವನು ದೂರದ ಮರಪೊದೆಗಳ ಮರೆಯಲ್ಲಿ ಅಡಗಿ ನಿಂತು ನೋಡತೊಡಗಿದನು.

ಸೇರೆಗಾರರ ಎದ್ದುನಿಂತು, ಎಲೆಯಡಿಕೆಯನ್ನು ಉಗುಳುವ ನೆವದಿಂದ ಅತ್ತಯಿತ್ತ ತಿರುಗಾಡಿ, ಸೋಮ ಅಡಗಿ ನಿಂತಿದ್ದನ್ನು ಅರಿತು ಸುಬ್ಬಮ್ಮನನ್ನು ಕುರಿತು “ಯಾಕೆ ಪೆದ್ದೇಗೌಡರು ಇನ್ನೂ ಬರಲೇ ಇಲ್ಲ ? ನಾವು ಗಂಗೆಯ ಬಿಡಾರಕ್ಕೆ ಹೋಗಿ ಇರುವ. ಅಲ್ಲಿ ಯಾರೂ ನಿಮ್ಮನ್ನು ಕಾಣುವುದಿಲ್ಲ” ಎಂದು ಗಂಗೆ ಸುಬ್ಬಮ್ಮರ ವೈರವನ್ನು ನೆನೆದು “ಗಂಗೆ ಈಗ ಬಿಡಾರದಲ್ಲಿಲ್ಲ. ಮನೆ (ಚಂದ್ರಯ್ಯಗೌಡರ ಮನೆ) ಯಲ್ಲಿ ಅವಳ ವಾಸ. ಗೌಡರು ಅವಳು ಮನೆಯಲ್ಲಿಯೇ ಇರಬೇಕೆಂದು ಹಟಮಾಡಿಬಿಟ್ಟರಲ್ದಾ ?” ಎಂದು ಸ್ವಲ್ಪ ನಗುತ್ತ ಸುಬ್ಬಮ್ಮನ ‘ಕಣ್ಣು’ಗಳನ್ನು ದೃಷ್ಟಿಸುತ್ತಾ “ನೀವು ಗಂಡನ ಮೇಲೆ ವಿಶ್ವಾಸ ತೋರಿಸುವುದೇ ಹೊರತೂ ಅವರ ವಿಶ್ವಾಸ ಎಲ್ಲಾ ಗಂಗೆಯ ಮೇಲೆ !” ಎಂದರು.

ಸೇರೆಗಾರರ ವ್ಯಂಗ್ಯವಾಕ್ಯಗಳನ್ನು ಆಲಿಸಿದರೂ ಸುಬ್ಬಮ್ಮ ಉತ್ತರಕೊಡಲಿಲ್ಲ. ಆಕೆಯ ದೃಷ್ಟಿ ದೂರ ಮರಗಳ ನಡುವೆ ಕಾಲುದಾರಿಯಲ್ಲಿ ಬರುತ್ತಿದ್ದ ತಂದೆಯ ಮೇಲೆ ನೆಟ್ಟುಬಿಟ್ಟಿತ್ತು. ಹೋದ ಕೆಲಸವೇನಾಯಿತೋ ಎಂಬ ಉದ್ವೇಗದಿಂದ ಆಕೆಯ ಹೃದಯ ಹೊಡೆದುಕೊಳ್ಳುತ್ತಿತ್ತು.

ಪೆದ್ದೇಗೌಡರ ಮುಖದ ಖಿನ್ನತೆಯನ್ನೂ ಕಣ್ಣಿರನ್ನೂ ಕಾಣುತ್ತಲೆ ಸುಬ್ಬಮ್ಮಗೆ ಎಲ್ಲವೂ ಅರ್ಥವಾಯಿತು.

ಅವರು ಸೇರೆಗಾರರೊಡನೆ ಯಾವ ಮಾತನ್ನೂ ಆಡದೆ ದುಃಖಧ್ವನಿಯಿಂದ “ಏಳು, ಮನೆಗೆ ಹೋಗಾನ” ಎಂದು ನೆಲ್ಲುಹಳ್ಳಿಯ ಕಡೆಗೆ ಹೊರಟರು. ಮಟಮಟ ಮಧ್ಯಾಹ್ನವಾಗಿದ್ದುದನ್ನಾಗಲಿ, ತಿರುಗಿ ತೊಳಲಿದ ಆಯಾಸವನ್ನಾಗಲಿ, ಹಸಿವೆಯನ್ನಾಗಲಿ ಅವರು ಸ್ವಲ್ಪವೂ ಗಮನಿಸಲಿಲ್ಲ.

ಸೇರೆಗಾರರು ಏನನ್ನೊ ಹೇಳಲು ಪ್ರಯತ್ನಿಸಿದರು. ಆದರೆ ತಂದೆ ಮಗಳು ಇಬ್ಬರೂ ದೂರ ದೂರ ಹೋಗಿ ಕಣ್ಮರೆಯಾಗಿಬಿಟ್ಟರು.

ಸೇರೆಗಾರರು ಹತಾಶರಾಗಿ ಸೋಮ ಅಡಗಿ ನಿಂತಿದ್ದ ದಿಕ್ಕಿನ ಕಡೆಗೆ ತಿರುಗಿ ತಿರುಗಿ ನೋಡುತ್ತ ಕಾನೂರಿಗೆ ನಡೆದರು.

ಸ್ವಲ್ಪ ದೂರ ಹೋದಮೇಲೆ ಸುಬ್ಬಮ್ಮ ತಂದೆಯ ಆಯಾಸ ಸ್ಥಿತಿಯನ್ನು ಕಂಡು “ಕೆಳಕಾನೂರಿಗೆ ಹೋಗಿ ಊಟ ತೀರಿಸಕೊಂಡು ಹೋಗಾನ” ಎಂದು ಸೂಚನೆ ಕೊಟ್ಟಳು. ಆದರೆ ಪೆದ್ದೇಗೌಡರು ಒಪ್ಪಲಿಲ್ಲ. ಕಾನೂರು ಮನೆ ಪಾಲಾಗುವಾಗಲೂ ಇತರ ಕೆಲವು ಸಮಯಗಳಲ್ಲಿಯೂ ಅವರು ಅಳಿಯನ ಪಕ್ಷ ವಹಿಸಿ ನಾಗಮ್ಮನವರಿಗೂ ಹೂವಯ್ಯನಿಗೂ ವಿರುದ್ದವಾಗಿ ವರ್ತಿಸಿ ಅನ್ಯಾಯ ಮಾಡಿದ್ದುದರಿಂದ ಕೆಳಕಾನೂರಿಗೆ ಊಟಕ್ಕಾಗಿ ಹೋಗಲು ಅವರಿಗೆ ಮುಖವಿರಲಿಲ್ಲ ; ಮನಸ್ಸೂ ಬರಲಿಲ್ಲ. ಅಲ್ಲದೆ ತಮಗಾಗಿದ್ದ ದುಃಖ ಮತ್ತು ಅವಮಾನಗಳನ್ನು ಊರಲ್ಲಿ ಹಬ್ಬಿಸಲು ಅವರಿಗೆ ಇಷ್ಟವೂ ಇರಲಿಲ್ಲ.

ದಾರಿಯಲ್ಲಿ ತಂದೆ ಕಾನೂರು ಮನೆಯಲ್ಲಿ ನಡೆದ ಸಂಗತಿಗಳನ್ನು ಮಗಳಿಗೆ ಹೇಳಿಕೊಂಡು ಅತ್ತರು. ಮಗಳೂ ಬಿಕ್ಕಿ ಬಿಕ್ಕಿ ಅತ್ತಳು.

ಚಂದ್ರಯ್ಯಗೌಡರು ‘ನಾನು ಸೇರೆಗಾರರನ್ನು ಕಳಿಸಲೂ ಇಲ್ಲ ; ನಿಮ್ಮ ಮಗಳು ನನ್ನ ಮನೆಗೆ ಕಾಲಿಡುವೂದು ಬೇಡ’ ಎಂದು ಕತ್ತರಿಸುವಂತೆ ಮಾತಾಡಿ, ಸುಬ್ಬಮ್ಮನನ್ನು ಬಾಯಿಗೆ ಬಂದಂತೆ ವಾಚಾಮಗೋಚರವಾಗಿ ಬೈದರಂತೆ !

ಪೆದ್ದೇಗೌಡರು ಅಳುತ್ತ ‘ನನ್ನ ಮಗಳನ್ನು ಉದ್ದಾರಮಾಡಬೇಕು !’ ಎಂದು ಅವರ ಕಾಲಿಗೆ ಬಿದ್ದಾಗ, ಒದ್ದು ಕುತ್ತಿಗೆಗೆ ಕೈಹಾಕಿ ದಬ್ಬಿಬಿಟ್ಟರಂತೆ. ತಂದೆಯನ್ನು ಸಮಾಧಾನಗೊಳಿಸಲು ಬಂದ ರಾಮಯ್ಯನಿಗೂ ಮುಖದಮೇಲೆ ಉಗುಳಿದರಂತೆ !

ಉರಿ ಬಿಸಲಿನಲ್ಲಿ ನಡೆದು ನಡೆದು, ಹಸಿದು, ಬಾಯಾರಿ, ದಣಿದು, ತಂದೆ ಮಗಳಿಬ್ಬರೂ ಮಧ್ಯಾಹ್ನ ಮೂರು ಗಂಟೆಯ ಹೊತ್ತಿಗೆ ನೆಲ್ಲುಹಳ್ಳಿಗೆ ಉಸ್ಸೆಂದು ಬಂದುಬಿದ್ದರು.