ಜೀವನ ಸುಮಾರು ಒಂದು ಸಂವತ್ಸರದ ದೂರ ಹರಿದಿತ್ತು. ಸೋಮ ಗಟ್ಟದ ಕೆಳಗೆ ಹೋಗಿ ಆಳುಗಳನ್ನು ಕರೆತಂದು, ಹೊಸ ಸ್ಥಾನಕ್ಕೂ ಮಾನಕ್ಕೂ ತಕ್ಕ ವೇಷದಿಂದ ಶೋಭಿಸುತ್ತಾ, ದಕ್ಷಸತೆಯಿಂದ ಕಜೆಲಸ ನಡೆಸುತ್ತಾ ’ಕೆಳಕಾನೂರು ಸೇರೆಗಾರ ಸೋಮಯ್ಯಸೆಟ್ಟರು’ ಎಂಬ ಅಭಿಧಾನದಿಂದ ಸರ್ವತ್ರ ಪ್ರಸಿದ್ಧನಾಗಿ ಗೌರವಭಾಜನನಾಗುತ್ತಿದ್ದನು. ಆತನ ನಕ್ಷತ್ರ ಮೂಡಿ ಮೇಲೇರಿದಂತೆಲ್ಲಾ ಕಾನೂರು ಸೇರೆಗಾರ ರಂಗಪ್ಪಸೆಟ್ಟರ ನಕ್ಷತ್ರ ಪಡುವಣೆಡೆಗೆ ಇಳಿಯುತ್ತಿತ್ತು. ಅವರ ಆಳುಗಳಲ್ಲಿ ಕೆಲವರಾಗಲೆ ಹೇಳದೆ ಕೇಳದೆ ಗಟ್ಟದ ಕೆಳಕ್ಕೆ ಹಾರಿದ್ದರು.

ಒಂದು ದಿನ ಪ್ರಾತಃಕಾಲದ ಹೊಂಬಿಸಿಲು ಹೂವಯ್ಯನ ಕೊಟಡಿಯ ಕಿಟಕಿಗಳಲ್ಲಿ ಕೋಲುಕೋಲಾಗಿ ತೂರಿಬಂದು ಮೇಜಿನಮೇಲೆದ್ದ ಕೆಲವು ಚಿನ್ನದೊಡವೆಗಳ ಮೇಲೆ ಬಿದ್ದು ಪ್ರೋಜ್ವಲವಾಗಿತ್ತು. ಹೂವಯ್ಯ ಪುಟ್ಟಣ್ಣನನ್ನು ಕೂಗಿ ಕರೆದು, ಆ ಎಲ್ಲ ಒಡವೆಗಳನ್ನೂ ವಸ್ತ್ರದಲ್ಲಿ ಗಂಟುಕಟ್ಟಿ ಅವನ ಕೈಲಿಟ್ಟು “ಇದನ್ನು ತೆಗೆದುಕೊಂಡುಹೋಗಿ, ನಾಲನು ಕಳಿಸಿಕೊಟ್ಟೆ ಎಂದು ಹೇಲೀ, ಕಾನೂರು ಹೆಗ್ಡಿತಮ್ಮಗೆ ಕೊಟ್ಟುಬಾ” ಎಂದನು.

“ಕೊಟ್ಟವನು ಹಾಂಗೆ ಕಾಡಿನ ಕಡೆಗೆ ಹೋಗಿಬರ್ತೀನಿ. ಹಂದಿ ಹಿಂಡು ಬಂದಾವಂತೆ. ನಿನ್ನೆ ನಮ್ಮ ಸೇರೆಗಾರರ ಕಡೆ ಆಳು ಹೆಡಗೆ ಹೆಣೆಯೋಕೆ ಬೆತ್ತದ ಬಳ್ಳಿ ತರಾಕೆ ಹೋಗಿದ್ದಾಗ ಉತ್ತಾ ಇದ್ದವಂತೆ” ಎಂದು ಪುಟ್ಟಣ್ಣ ಕೆಂಪಾದ ಹಲ್ಲು ತೋರುವಂತೆ ಬಿರಿಮುಗುಳು ನಗೆ ನಗುತ್ತಾ ಕಿಟಕಿಯಾಚೆ ದೂರದಲ್ಲಿ ಕಾಣುತ್ತಿದ್ದ ಅರಣ್ಯಸಾಂದ್ರ ಪರ್ವತಶ್ರೇಣಿಯನ್ನು ಅಭೀಷ್ಟಕವಾಗಿ ನಿಟ್ಟಿಸಿದನು.

“ಏನಾದರೂ ಮಾಡು! ನಿನಗೆ ಮೂರು ಹೊತ್ತೂ ಷಿಕಾರಿ!” ಎಂದು ಹೂವಯ್ಯ ಸೂಕ್ಷ್ಮವಾಗಿ ತನ್ನ ಅಸಮ್ಮತಿಯನ್ನು ಸೂಚಿಸಿದರೂ ಪುಟ್ಟಣ್ಣ ಅದನ್ನು ಸಮ್ಮತಿಯೆಂದು ಧಾರಾಳವಾಗಿ ವ್ಯಾಖ್ಯಾನಮಾಡಿ ಮೆಲ್ಲಗೆ “ತೋಟಾ ಇಲ್ಲ” ಎಂದನು.

“ಹತ್ತು ತೋಟಾ ಕೊಟ್ಟಿದ್ದೆನಲ್ಲೋ ಮೊನ್ನೆ ಮೊನ್ನೆ”

“ಅಂದು ಹಬ್ಬದ ಬೇಟೇಲಿ ಹುಲಿಗೆ ಹೊಡೆದು ಖರ್ಚಾಗಲಿಲ್ಲೇನು? ಒಂದೇ ಒಂದು ಚರೆ ತೋಟಾ ಇದೆ.”

“ನಿನ್ನ ದೆಸೆಯಿಂದ ಮದ್ದು ಗುಂಡಿಗೆ ಉಳಿಗಾಲವಿಲ್ಲ.” ಎಂದು ಹೇಳುತ್ತ ಹೂವಯ್ಯ ಬೀರುವಿನ ಅರೆಯಿಂದ ಹಿತ್ತಾಳೆಯ ಕಟ್ಟಿನ ಕೆಂಬಣ್ಣದ ಮನೋಹರವಾದ ಲೈದು ತೋಟಾಗಳನ್ನು ಕೊಡುತ್ತಾ  “ಹಿಡಿ!… ಇನ್ನು ಮಾತ್ರ ಪದೇ ಪದೇ ಕೇಳೀಯಾ!” ಎಂದನು.

ಪುಟ್ಟಣ್ಣ ಆನಂದದಿಂದ ತೋಟಾಕೋವಿಯನ್ನು ಹೆಗಲಮೇಲಿಟ್ಟು, ಕೈಲಿ ನಗದ ಗಂಟು ಹಿಡಿದು, ನಾಯಿಗಳನ್ನು ಕರೆಯುತ್ತಾ ಕಾನೂರಿನ ಕಡೆಗೆ ಹೋದನು.

ಸುಬ್ಬಮ್ಮ ಪದೇ ಪದೇ ಕಾನೂರು ಸೇರೆಗಾರರ ಕೈಯಲ್ಲಿ ,. ಓಬಯ್ಯನ ಕೈಯಲ್ಲಿ ಪುಟ್ಟನ ಕೈಯಲ್ಲಿ,. ಬೇಲರ ಸಿದ್ದನ ಕೈಯಲ್ಲಿ ಕಡೆಕಡೆಗೆ ಸಿಕ್ಕಿ ಸಿಕ್ಕಿದವರ ಕೈಯಲ್ಲಿ ತನ್ನ ನಗಗಳನ್ನು ಕೊಟ್ಟುಕಳುಹಿಸಬೇಕೆಂದು ಹೇಳಿಕಳುಹಿಸಿದ್ದಳು. ಸೇರೆಗಾರರಿಂದ ಪ್ರಾರಂಭವಾದುದರಿಂದ, ನಿಜವಾಗಿಯೂ ಸುಬ್ಬಮ್ಮ ಹೇಳಿ ಕಳುಹಿಸಿದುದು ಹೌದೋ ಅಲ್ಲವೋ ಎಂಬ ಅಪನಂಬಿಕೆಯಿಂದ ಹೂವಯ್ಯ ಅವರಿವರ ಕೈಯಲ್ಲಿ ಬೆಲೆಯುಳ್ಳ ಆಭರಣಗಳನ್ನು ಕೊಡಲೊಪ್ಪದೆ, ಕಾನೂರು ಹೆಗ್ಗಡಿತಮ್ಮನೆ ಬಂದು ತೆಗೆದುಕೊಂಡು ಹೋಗಲಿ ಎಂದು ಹೇಳಿಕಳುಹಿಸಿದ್ದನು. ಆದರೆ ಹೆಗ್ಗಡಿತಿಯೆ ಬರುವ ಸ್ಥಿತಿಯಲ್ಲಿ ಇರಲಿಲ್ಲವಾದ್ದರಿಂದ ಆಕೆ ಬರಲಿಲ್ಲ. ಅದಕ್ಕೆ ಬದಲಾಗಿ ನಂಬಿ ಕೊಟ್ಟ ತನ್ನ ನಗಗಳನ್ನೆಲ್ಲ ಲಹೂವಯ್ಯ ಅಪಹರಿಸುವುದಕ್ಕೆ ಹವಣಿಸುತ್ತಿದ್ದಾನೆ ಎಂಬರ್ಥದ ದೂರನ್ನು ಹಬ್ಬಿಸಿದ್ದಳು. ಆದ್ದರಿಂದಲೆ ಹೂವಯ್ಯನಿಗೆ ಜುಗುಪ್ಸೆಯಾಗಿ ಆ ದಿನ ಬೆಳಗ್ಗೆ ಪುಟ್ಟಣ್ಣನೊಡನೆ ನಗದ ಗಂಟನ್ನು ಕೊಟ್ಟು ಕಳುಹಿಸಿದ್ದು.

ಸುಬ್ಬಮ್ಮಗೆ ಆಭರಣಗಳು ಬೇಕಾಗಿದ್ದುದು ಅಲಂಕಾರ ಮಾಡಿಕೊಳ್ಳುವುದಕ್ಕಾಗಿರಲಿಲ್ಲ; ಅವಮಾನದಿಂದ ಪಾರಾಗುವುದಕ್ಕೆ. ಸೇರೆಗಾರರ ಸಹವಾಸದಿಂದ ಆಕೆಗೆ ಹೊಟ್ಟೆ ಮುಂದಕ್ಕೆ ಬಂದಿತ್ತು!

ಸುಬ್ಬಮ್ಮ ತಾನು ಊಹಿಸಿದ್ದಕ್ಕಿಂತಲೂ ಆಳವಾದ ಬಾವಿಗೆ ಹಾರಿದ್ದಳು. ಮುಂಡೆಯಾದ ತಾನು ಬಸುರಿಯಾದರೆ ಸಹಿಸಲಸಾಧ್ಯವಾಗಿ ಅವಮಾನವಾಗುತ್ತದೆ; ಜಾತಿಯಿಂದ ಹೊರಗೆ ಹಾಕುತ್ತಾರೆ, ಶಿಶುಹತ್ಯೆ ಮಾಡಿದರೆ ಕಠಿಣ ಸಜಾ ಹಾಕುತ್ತಾರೆ; ಮನೆತನದ ಹೆಸರಿಗೆ ಎಳ್ಳು ನೀರಾಗುತ್ತದೆ; ತನ್ನ ತಾಯಿತಂದೆಗಳೂ ಹತ್ತಿರದ ಬಂಧುಗಳೂ ತಲೆಯೆತ್ತಿ ನಡೆಯದಂತಾಗುತ್ತದೆ; ಸಮಾಜದಿಂದಲೇ ತಿರಸ್ಕೃತಳಾಗಿ ನಾಯಿಯಂತೆ ಬಾಳಿ ಸಾಯಬೇಕಾಗುತ್ತದೆ. ಈ ಆಲೋಚನೆಗಳೆಲ್ಲವೂ ಅಕೆಗೆ ಬಂದಿದ್ದುವು. ಆದರೆ ವಿವೇಕವನ್ನು ಕೊಚ್ಚಿ ನುಗ್ಗಿದ ಕಾಮಲಾಲಸೆಯೂ, ತಾನು ಹುಟ್ಟುಬಂಜೆಯಾಗಿರುವುದರಂದ ಗರ್ಭಿಣಿಯಾಗುವುದಿಲ್ಲ ಎಂಬ ನಂಬುಗೆಯೂ ಆಕೆಗೆ ಧೈರ್ಯ ತಂದುಕೊಟ್ಟಿದ್ದುವು. ತನ್ನ ತೀರಿಹೋದು ಗಂಡ”ಬಂಜೆ ಬಂಜೆ!” ಎಂದು ಹಾಕುತ್ತಿದ್ದ ಶಾಪವೇ ಸುಬ್ಬಮ್ಮಗೆ ವರದಂತೆ ತೋರಿ ಸಂತೋಷವಾಗಿತ್ತು. ಜೊತೆಗೆ ನೀಚ ಜಾರನು ಬೀಸುತ್ತಿದ್ದ ಬಣ್ಣ ಬಣ್ಣದ ಬಲೆಯ ಆಕರ್ಷಣೆಯೂ ಆಕೆಯನ್ನು, ನಾಗರಹಾವಿನ ಹೆಡೆ ಹಕ್ಕಿಯನ್ನು ಮೋಹ ಮುಗ್ಧವಾಗಿ ಮಾಡಿ ಸೆಳೆಯುವಂತೆ, ಸೇದಿ ಸೆಳೆಯಿತು.

ಮೊದಲನೆಯಸಾರಿ ಎದೆ ನಡುಗುತ್ತಾ, ಹೆದರಿಹೆದರಿ ಕಣ್ಣೀರಿಡುತ್ತಾ, ಆದರೂ ಪಾಪದಿಂದ ದೂರವಾಗಲು ಮನಸ್ಸಿಲ್ಲದೆ, ಮುಂದುವರಿದು, ಸುಖದ ಭೀಕರವಾದ ಸುಳಿಗೆ ಸಂತೋಷದಿಂದ ಸಿಕ್ಕಿಬಿದ್ದಿದ್ದಳು. ಒಮ್ಮೆ ಪಾಪಕಾರ್ಯ ನಡೆದುಹೋದಮೇಲೆ ಪಾಶ್ಚಾತ್ತಾಪದಿಂದಲೂ ಭೀತಿಯಿಂದಲೂ ’ಅಯ್ಯೋ ಆದುದನ್ನು ಅಳಿಸಲು ಸಾಧ್ಯವಾಗಿದ್ದರೆ ಇನ್ನುಮುಂದೆ ಎಂದಿಗೂ ಅಂತಹ ಕೆಲಸಕ್ಕೆ ಹೋಗುತ್ತಿರಲಿಲ್ಲ’ ಎಂದು ಎದೆ ಹಿಂಡಿಕೊಂಡಳು.ಸೇರೆಗಾರರನ್ನು ದ್ವೇಷಭಾವದಿಂದ ನೋಡಿ ತನ್ನ ದೃಢನಿಶ್ಚಯವನ್ನು ತಿಳಿಸಿದಳು.

ಆದರೆ ಆ ಹುಟ್ಟುಪಾಣ್ಪ ಮರುದಿನ ಮಧ್ಯರಾತ್ರಿಯೂ ಬಂದು ಹಿತ್ತಿಲ ಕಡೆಯ ಬಾಗಿಲನ್ನು ತಟ್ಟತೊಡಗಿದನು. ಸುಬ್ಬಮ್ಮಗೆ ಬಲು ರೇಗಿತು. ’ಕಳ್ಳರೂ! ಕಳ್ಳರೂ!’ ಎಂದು ಕೂಗಿಕೊಳ್ಳಲೇ ಎಂದು ಯೋಚಿಸಿದಳು. ಆದರೆ ಆ ಹಾಳು ಸೊಣಗನೆಲ್ಲಿಯಾದರೂ ಹಿಂದಿನ ರಾತ್ರಿ ನಡೆದುದನ್ನು ಬಹಿರಂಗಪಡಿಸಿದರೆ! ಎಂದು ಹೆದರಿ, ಕೂಗಿಕೊಳ್ಳದೆ, ಹಿತ್ತಿಲು ಕಡೆಯ ಬಾಗಿಲಿಗೆ ಹೋಗಿ ಸಿಟ್ಟಿನಿಂದ ಹಿಂದಕ್ಕೆ ಹೋಗುವಂತೆ ಹೇಳಿದಳು. ಆದರೆ ಸೇರೆಗಾರರು ಇನ್ನೂ ಹೆಚ್ಚು ಹೆಚ್ಚು ಗಟ್ಟಿಯಾಗಿ ಬಾಗಿಲು ದಬ್ಬತೊಡಗಿದರು. ಗಲಾಟಿ ಎಲ್ಲಿಯಾದರೂ  ಇತರರಿಗೆ ಕೇಳಿಸೀತು ಎಂದಳುಕಿ ಬಾಗಿಲು ತೆರೆದಳು.

ಆಮೇಲೆ ಪ್ರತಿರಾತ್ರಿಯೂ ಒಲ್ಲೆ ಒಲ್ಲೆ ಎನ್ನುತ್ತಲೇ ಹೋಗಿ ಬಾಗಿಲು ತೆರೆಯುತ್ತಿದ್ದಳು. ಬರಬರುತ್ತಾ ಪಾಪಕರ್ಮವೇ ನಿತ್ಯದ ಸಾಧಾರಣಾಭ್ಯಾಸವಾಗಿ, ಮೊದಲಿದ್ದ ಸಂಕೋಚ ಭೀತಿ ಪಶ್ಚಾತ್ತಾಪಗಳೆಲ್ಲ ಮಾಯವಾದುವು. ನವಾನುರಾಗದಲ್ಲಿ ನವರುಚಿ ಹೆಚ್ಚಿತು.

ಸ್ವಲ್ಪ ಕಾಲದಲ್ಲಿಯೆ ತಾಲನು ಗರ್ಭಧಾರಣೆ ಮಾಡಿರುವುದಾಗಿ ಸುಬ್ಬಮ್ಮಗೆ ತಿಳಿದಾಗ, ಆಕೆ ಗುಟ್ಟಾಗಿ ಬಿಕ್ಕಿ ಬಿಕ್ಕಿ ಅತ್ತಳು. ದೆವ್ವ ದೇವರಿಗೆಲ್ಲ ಹರಕೆ ಹೊತ್ತುಕೊಂಡಳು. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಸೇರೆಗಾರರಿಗೂ ಹೇಳಿದಳು. ಅವರು ’ಹೆದರಬೇಡಿ,ಗಂಗೆಗೆ ಮದ್ದು ಗೊತ್ತಿದೆ. ಯಾರಿಗೂ ತಿಳಿಯದಂತೆ ಕೆಲಸ ಮಾಡಿದರೆ ಸರಿ’ ಎಂದು ಧೈರ್ಯ ಹೇಳಿದರು. ಆದರೆ ಗಂಗೆಗೂ ಸುಬ್ಬಮ್ಮಗೂ ವೈರವಿದ್ದುದರತಿಂದಲೋ ಏನೋ ಸೇರೆಗಾರರು ಬಾಯಲ್ಲಿ ಆಡುತ್ತಿದ್ದರೇ ಹೊರತು ಮದ್ದನ್ನು ತಂದು ಕೊಡಲಿಲ್ಲ. ಸುಬ್ಬಮ್ಮ ಬೇಗ ಬೇಗನೆ ಮದ್ದು ತಂದುಕೊಟ್ಟು ತನ್ನನ್ನು ಉದ್ಧಾರಮಾಡಬೇಕೆಂದು ಸೇರೆಗಾರರನ್ನು ಅಂಗಲಾಚಿ ಪೀಡಿಸತೊಡಗಿದಳು. ಒಂದೊಂದು ದಿನವೂ ಕಳೆದಹಾಗೆ ಉದ್ವೇಗದ ಶೂಲ ಆಕೆಯ ಹೃದಯದಲ್ಲಿ ಹೆಚ್ಚುಹೆಚ್ಚಾಗಿ ಮುಂದುವರಿಯುತ್ತಿತ್ತು.

ಕಡೆಗೆ ಸೇರೆಗಾರರು ಗುಟ್ಟನ್ನು ಹೊರಗೆಡಹಿದರು: ಗಂಗೆಗೆ ಏನಾದರೂ ದಕ್ಷಿಣೆ ಕೊಟ್ಟ ಹೊರತು ಮದ್ದು ಕೊಡುವುದಿಲ್ಲವಂತೆ ಎಂದು! ಸುಬ್ಬಮ್ಮ ಮರುಮಾತಾಡದೆ ತನ್ನದೊಂದು ಚಿನ್ನದ ಬಳೆಯನ್ನು ಸೇರೆಗಾರರ ಕೈಯಲ್ಲಿ ಕೊಟ್ಟಳು. ಆದರೂ ಮದ್ದು ಬರಲಿಲ್ಲ!

ಕೆಲವು ತಿಂಗಳು ಕಳೆದು, ಹೊಟ್ಟೆ ಮುಂದಕ್ಕೆ ಉಬ್ಬಿ ಬರುತ್ತಿರಲು ಇತರರ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಅಸಾಧ್ಯವೆಂದು ತೋರಿ, ಸುಬ್ಬಮ್ಮ ತನಗೆ ಮೈಸರಿಯಿಲ್ಲ ಎಂದು ಹೇಳಿ, ತನ್ನ ಕತ್ತಲೆ ಕೋಣೆಯೊಳಗೆ ಹಾಸಿಗೆ ಹಿಡಿದುಬಿಟ್ಟಳು. ಹಗಲು ಹೊರಗೆ ಬರುತ್ತಲೇ ಇರಲಿಲ್ಲ; ಬಂದರೂ ಯಾರೂ ಇಲ್ಲದಿದ್ದಾಗ ಅತಿಗೋಪ್ಯವಾಗಿ ಬರುತ್ತಿದ್ದಳು. ಆಕೆಯ ಕಷ್ಟ, ಯಾತನೆ, ಮನೋನರಕಗಳು ಶಿವನಿಗೇ ಸಂವೇದ್ಯ!

ತನ್ನ ಹತ್ತರದವಿದ್ದ ಆಭರಣಗಳನ್ನೆಲ್ಲ ಒಂದಾದಮೇಲೆ ಒಂದನ್ನಾಗಿ ಸೇರೆಗಾರರಿಗೆ ಕೊಟ್ಟಳು. ಆದರೂ ಮದ್ದು ಬರಲಿಲ್ಲ. ಗಂಗೆಗಿನ್ನೂ ತೃಪ್ತಿಯಾಗಲಿಲ್ಲವೆಂದು ತೋರುತ್ತದೆ ಎಂದು ಭಾವಿಸಿ, ಜನದಮೇಲೆ ಜನ ಕಳುಹಿಸಿ, ಹೂವಯ್ಯನಲ್ಲಿ ತಾನಿಟ್ಟಿದ್ದ ನಗಗಳನ್ನೂ ತರಿಸಿ, ಗಂಗೆಗೆ ಸೇರೆಗಾರರ ಕೈಯಿಂದ ಕೊಟ್ಟಳು. ಸೇರೆಗಾರರ ತನ್ನ ಆಭರಣಗಳನ್ನೆಲ್ಲ ಲಬಟಾಯಿಸಿಕೊಳ್ಳಲು ಗಂಗೆಯೊಡನೆ ಮಸಲತ್ತು ಮಾಡುತ್ತಿದ್ದಾರೆ ಎಂಬುದು ಆಕೆಯ ಅದೂರದೃಷ್ಟಿಗೆ ಹೊಳೆಯಲಿಲ್ಲ!

ಒಡವೆಗಳೆಲ್ಲ ಮುಗಿದುದು ಸೇರೆಗಾರರಿಗೆ ಸಂಪೂರ್ಣವಾಗಿ ಗೊತ್ತಾದಮೇಲೆ ಒಂದು ರಾತ್ರಿ ಹಿತ್ತಿಲು ಕಡೆಯ ಬಾಗಿಲಿನಿಂದ ಅವರೂ ಗಂಗೆಯೂ ಸುಬ್ಬಮ್ಮನ ಕೋಣೆಯನ್ನು ಪ್ರವೇಶಿಸಿದರು…

ಮರುದಿನ ರಂಗಪ್ಪಸೆಟ್ಟರು ರಾಮಯ್ಯನ ಬಳಿಗೆ ಹೋಗಿ, ಕಿವಿಗಿಂಪಾಗಿ ಮಾತಾಡಿ, ತಮ್ಮ ಆಳುಗಳಲ್ಲಿ ಕೆಲವರು ಬಿಟ್ಟುಹೋದುದರಿಂದ ಹೊಸ ಆಳುಗಳನ್ನು ತರಬೇಕೆಂದೂ, ಅದಕ್ಕಾಗಿ ಮುನ್ನೂರು ರೂಪಾಯಿ ಮುಂಗಡ ಬೇಕೆಂದೂ, ಹೂವಯ್ಯನು ರಾಮಯ್ಯನ ಮೇಲಿನ ಜಿದ್ದಿನಿಂದಲೇ ಸೋಮನಿಗೆ ಮುಂಗಡಕೊಟ್ಟು, ಆಳುಗಳನ್ನು ತರಿಸಿ, ಅವನನ್ನು ಸೇರೆಗಾರನನ್ನಾಗಿ ಮಾಡಿದ್ದಾನೆಂದೂ, ಆ ಮುಂಡೆಮಗನ ಪಿತೂರಿಯಿಂದಲೇ ತಮ್ಮ ಆಳುಗಳಲ್ಲಿ ಕೆಲವರು ಓಡಿಹೋದರೆಂದೂ, ಹತ್ತು ಹದಿನೈದು ದಿನಗಳೊಳಗೆ ಆಳು ಕರೆದುಕೊಂಡು ಬರುತ್ತೇನೆಂದೂ ಅಲ್ಲಿಯವರೆಗೆ ತಮ್ಮ ಬಗಲಿಯೇ ಕಾನೂರಿನಲ್ಲರುವ ಆಳುಗಳ ಮೇಲ್ವಿಚಾರಣೆ ವಗೈರೆ ನೋಡಿಕೊಳ್ಳುತ್ತಾನೆಂದೂ ಹೇಳಿ ರೂಪಾಯಿ ತೆಗೆದುಕೊಂಡು ಹೋದರು.

ಆ ದಿನವೇ ಮಧ್ಯಾಹ್ನ ಕಾನೂರು ಸೇರೆಗಾರ ರಂಗಪ್ಪಸೆಟ್ಟರು ರಾಮಯ್ಯನಿಂದ ತೆಗೆದುಕೊಂಡ ರೂಪಾಯಿಗಳನ್ನೂ ಸುಬ್ಬಮ್ಮನಿಂದ ಸುಲಿದುಕೊಂಡ ಒಡವೆ ವಸ್ತುಗಳನ್ನೂ ಗಂಟುಕಟ್ಟಿಕೊಂಡು ಗಂಗೆಯೊಡನೆ ಗಟ್ಟದ ಕೆಳಕ್ಕೆ ಕಟ್ಟಕಡೆಯ ಪ್ರಯಾಣ ಬೆಳೆಸಿದರು. ಸುಬ್ಬಮ್ಮಗೆ ಮಾತ್ರ ಸೇರೆಗಾರರ ಪ್ರಯಾಣದ ವಿಚಾರವಾಗಿ ಸಂಪೂರ್ಣ ಅಜ್ಞಾನವಿತ್ತು!

ಅದೇ ದಿನದ ಇರುಳಿನಲ್ಲಿ ಸೇರೆಗಾರರ ಗುಟ್ಟಾದ ಕಟ್ಟಪ್ಪಣೆಯ ಮೇರೆಗೆ ಅವರ ಆಳುಗಳೆಲ್ಲರೂ ಗಂಟುಮೂಟೆಕಟ್ಟಿಕೊಂಡು ಪರಾರಿಯಾದರು. ಮರುದಿನ ಸೇರೆಗಾರರೂ ಅವರಾಳುಗಳೂ ರಾಮಯ್ಯನಿಗೆ ಮೋಸಮಾಡಿ ಹೋದ ವರ್ತಮಾನ ಪಡೆಮಾತಾಗಿ ಹಬ್ಬಿತು. ರಾಮಯ್ಯ ಹುಚ್ಚು ಹುಚ್ಚಾಗಿ ಕೋವಿಯನ್ನು ಹೆಗಲಮೇಲೆ ಹಾಕಿಕೊಂಡು, ಪರಾರಿಯಾಗಿದ್ದವರನ್ನು ಹಿಡಿದು ತರುತ್ತೇನೆಂದು ಕೆಲವು ಬೇಲರಾಳುಗಳೊಡನೆ ತೀರ್ಥಹಳ್ಳಿ ಕೊಪ್ಪಗಳಿಗೆ ಹೋಗುವ ರಸ್ತೆಗಳಲ್ಲಿ ವ್ಯರ್ಥವಾಗಿ ತೊಳಲಿ ತೊಳಲಿ ಬಂದನು. ಯಾವಾಗಲೂ ತೆಪ್ಪಗಿರುತ್ತಿದ್ದ ಅವನ ಆ ದಿನದ ವರ್ತನೆಯನ್ನು ನೋಡಿ ಕೆಲವರು ಚಂದ್ರಯ್ಯಗೌಡರು ಮಗನಮೇಲೆ ಬಂದಿದ್ದಾರೆ ಎಂದು ಕೂಡ ಮಾತಾಡಿಕೊಂಡರು! ಸೇರೆಗಾರರೂ ಗಂಗೆಯೂ ಆಳುಗಳೂ ಓಡಿಹೋದರೆಂಬ ಸಮಾಚಾರ ಗೊತ್ತಾದೊಡನೆ ಸುಬ್ಬಮ್ಮ ಸಿಟ್ಟಿನಾವೇಶದಿಂದ ಕಟ ಕಟನೆ ಹಲ್ಲು ಕಡಿದುಕೊಂಡಳು. ಸೇರೆಗಾರರ ಪೈಶಾಚಿಕತೆ ಆಕೆಯೆದುರಿಗೆ ಕರಾಳವಾಗಿ ದಿಗಂಬರವಾಗಿ ನಿಂತಿತು.

ಗಂಗೆ ಸುಬ್ಬಮ್ಮನ ಕೈಯಲ್ಲಿ ಮದ್ದು ಕೊಟ್ಟು, ಅದನ್ನು ಹುಣ್ಣಿಮೆ ಕಳೆದ ಮೇಲೆ ಉಪಯೋಗಿಸಬೇಕೆಂದೂ ತಾನೆ ಪ್ರಯೋಗಿಸುತ್ತೇನೆಂದೂ ಹೇಳಿದ್ದಳು!

ಅಂತರಾಳದಲ್ಲಿ ಕೈಬಿಟ್ಟಂತಾಗಿ ಸುಬ್ಬಮ್ಮನ ಆಲೋಚನೆಗಳು ಭಯಂಕರವಾದುವು. ಕೆರೆ, ಮರ, ನೇಣುಗಳೆಲ್ಲ ಮನಸ್ಸಿಗೆ ಬಂದುವು. ಆದರೆ ಆಕೆಗೆ ಅವಮಾನದಿಂದ ಪಾರಾಗುವ ಆಸೆಯಲ್ಲದೆ ಸಾಯಲು ಇಚ್ಛೆಯಾಗಲಿಲ್ಲ. ಸತ್ತರಾದರೂ ಸುಖವುಂಟೆ? ಅಲ್ಲಿ ಚಂದ್ರಯ್ಯಗೌಡರಿದ್ದಾರೆ! ಯಮದೂತರು ಕಾಯಿಸಿದ ಕಬ್ಬಿಣದ ಮೂರ್ತಿಯನ್ನು ತಬ್ಬುವ ಶಿಕ್ಷೆ ಕೊಡುತ್ತಾರೆ! ನರಕದ ವರ್ಣನೆಯನ್ನು ಕೇಳಿ ನಂಬಿದ ಎಂಥ ಋಷಿಯೂ ಸಾಯಲು ಹೆದರದಿರುವುದಿಲ್ಲ ಅಂದಮೇಲೆ ಬಡಪಾಯಿಮ ಸುಬ್ಬಮ್ಮನ ಮಾತೇನು?

ಸುಬ್ಬಮ್ಮ ಗಂಗೆ ಕೊಟ್ಟ ಮದ್ದನ್ನು ತಾನೇ ಪ್ರಯೋಗಿಸಿಕೊಳ್ಳಲು ದೃಢ ಮನಸ್ಸು ಮಾಡಿದಳು. ಆದರೆ ಅವಳಿಗೆ ಉಪಯೋಗಿಸುವ ವಿಧಾನವಾಗಲಿ ಪ್ರಮಾಣವಾಗಲಿ ತಿಳಿದಿರಲಿಲ್ಲ. ಆದ್ದರಿಂದ ಮಿತಿಮೀರಿ ಹೋಯಿತು.

ರಾತ್ರಿ ಸುಮಾರು ಹನ್ನೆರಡು ಗಂಟೆಯ ಹೊತ್ತಿಗೆ ಉಪ್ಪರಿಗೆಯ ಮೇಲೆ ರಾಮಯ್ಯನಿಗೆ ತುಸು ದೂರದಲ್ಲಿ ಮಲಗಿದ್ದ ಓಬಯ್ಯನಿಗೆ ಕನಸಿನಲ್ಲಿ ಯಾರೋ ನರಳುವಂತಾಗಿ ಎಚ್ಚರವಾಯಿತು. ಇರುಳು ಮೌನದಲ್ಲಿ ನರಳುವ ದನಿ ವಾಸ್ತವವಾಗಿಯೂ ಕಿವಿಗೆ ಬಿದ್ದು, ಬೆಚ್ಚಿ ಭೀತನಾಗಿ ಹಾಸಗೆಯಮೇಲೆ ಎದ್ದು ಕುಳಿತು ಕಿವಿಗೊಟ್ಟನು. ನರಳುದನಿ ಯಾತನಾಕ್ಲಿಷ್ಟವಾಗಿ ಸ್ಫಷ್ಟವಾಗಿ ಕೇಳಿಸಿತು. ಪ್ರೇತ ಪಿಶಾಚಿಗಳಿರಬಹುದೆ? ಅವುಗಳೂ ಹಾಗೆ ಮಾಡುತ್ತವೆಂದು ಕೇಳಿದ್ದನು. ಇರಲಾರದು. ಕೆಳಗೆ ಮನೆಯೊಳಗಣಿಂದ ಕೇಳಿಬರುತ್ತಿದೆ. ಏಕಾಗಬಾರದು? ದೆವ್ವ ಮನೆಯೊಳಗೆ ಬಂದು ನರಳಲಾರದೇನು? ಆಲೋಚಿಸುತ್ತಿದ್ದ ಹಾಗೆ ನರಳುವಿಕೆಯ ಮಧ್ಯೆ ಕರುಳನಿರಿಯುವ ಚೀತ್ಕಾರವೂ ಕೇಳಿಸಿತು. ಇರುಳಿಗೇ ಮೈನವಿರು ನಿಮಿರಿದಂತಾಯಿತು ಓಬಯ್ಯನಿಗೆ ತಾನೊಬ್ಬನೆ ಕೆಳಗಿಳಿದು ಹೋಗುವುದಕ್ಕೆ ಹೆದರಿಕೆಯಾಗಿ, ಲಾಟೀನು ಹೊತ್ತಿಸಿ, ರಾಮಯ್ಯನನ್ನೂ ಎಬ್ಬಿಸಿದನು.

ಕಿವಿಗೊಟ್ಟು ಆಲಿಸಿದ ರಾಮಯ್ಯನ ಭೀತಿಯಾಶಂಕೆಗಳು ಅವನ ಮುಖದ ಮೇಲೆ ಮುದ್ರಿತವಾದುವು. ಇಬ್ಬರೂ ಏಣಿ ಮೆಟ್ಟಲುಗಳನ್ನು ನಿಧಾನವಾಗಿ ಇಳಿದರು. ನರಳುವಿಕೆಯೂ ಚೀತ್ಕಾರಗಳೂ ನಡುನಡುವೆ ’ಅಯ್ಯೋ ! ಸತ್ತೆನಲ್ಲಪ್ಪಾ! ಮುಂಡೇಗಂಡ ಹಾಳಾದನಲ್ಲಪ್ಪಾ! ಹಾಳು ಮುಂಡೇ’ ಇತ್ಯಾದಿ

ಕೂಗುಗಳೂ, ಕಠೋರವಾಗಿ, ಸುಬ್ಬಮ್ಮನ ಕೊಟಡಿಯಿಮದ ಕೇಳಿಬಂದುವು. ಪುಟ್ಟನೂ ಅಡಿಗೆಯವನೂ ಜಗಲಿಯಲ್ಲಿ ಹೆದರಿ ಬೆವರುತ್ತ ಮಲಗಿದ್ದವರು ದಡಬಡನೆ ಎದ್ದುಬಂದರು!

ಸುಬ್ಬಮ್ಮನ ಕೊಟಡಿಯ ಬಾಗಿಲು ಹಾಕಿತ್ತರು. ಎಷ್ಟು ಕೂಗಿದರೂ ತಳ್ಳಿದರೂ ತೆರೆಯಲಿಲ್ಲ. ಬೇರೆ ಕಡೆಯಿಂದ ಹೋಗಿ ನೋಡಿದಾಗ, ಅದಕ್ಕಿದ್ದ ಒಂದೇ ಒಂದು ಚಿಕ್ಕ ಕಿಟಕಿಯೂ ಕೂಡ ಮುಚ್ಚಿತ್ತು. ನರಳಾಟವೂ ಚೀತ್ಕಾರಗಳೂ ಶಾಪಗಳೂ ಭಯಾನಕವಾಗಿ ಒಳಗಣಿಂದ ಕೇಳಿಬರುತ್ತಿದ್ದುವು. ಅನಿರ್ದಿಷ್ಟವಾದ ಅಪಾಯಭಾವನೆ ಇಮ್ಮಡಿ ಭಯಂಕರವಾಗುತ್ತದೆ. ಹೊರಗಿದ್ದವರು ಕತ್ತಿಮೊನೆಗಳಮೇಲೆ ನಿಂತಂತಿದ್ದರು.

ಓಬಯ್ಯ ಓಡಿಹೋಗಿ ಒಂದು ಕೊಡಲಿಯನ್ನು ತಂದು ದಢಾರ‍್ ಧಢಾರ‍್ ದಢಾರನೆ ಬಾಗಿಲನ್ನು ಒಡೆಯತೊಡಗಿದನು. ಐದೇ ನಿಮಿಷಗಳಲ್ಲಿ ಆ ದಪ್ಪನೆಯ ಬಾಗಿಲು ಬಿರುಕು ಬಿಡತೊಡಗಿ, ಕೋಣೆಯೊಳಗಿದ್ದ ದೀಪದ ಬೆಳಕು ಕೆಂಪಗೆ ಕಾದ ಲೋಹದ ರೇಖೆಯಂತೆ ಗೋಚರಿಸಿತು. ಒಂದೇಟು! ಇನ್ನೊಂದು! ಮತ್ತೊಂದು! ಮಗುದೊಂದು! ಬಾಗಿಲು ಬಿರಿಯಿತು. ಕೋಣೆಯ ಬೆಳಕು ಪ್ರವಾಹದಂತೆ ಹೊರನುಗ್ಗಿತು, ಹೊರಗಿದ್ದವರು ಒಳನುಗ್ಗಿದರು.

ನುಗ್ಗಿ ನೋಡಿದೊಡನೆಯೆ ರಾಮಯ್ಯ ’ಅಯ್ಯೋ ಓಬಯ್ಯ!’ ಎಂದು ಚೀತ್ಕರಿಸಿ ಹಿಂಜರಿದು ಗರಬಡಿದಂತೆ ನಿಂತನು. ಅಷ್ಟು ಬೀಭತ್ಸಕರವಾಗಿತ್ತು ಆ ದೃಶ್ಯ!

ದುರ್ಬಲ ದೇಹಿಯೂ ಮನಸ್ಕನೂ ಆಗಿದ್ದ ರಾಮಯ್ಯನಿಗೆ ಮೆದುಳು ಕದಡಿದಂತಾಯಿತು. ರಕ್ತಸ್ರಾವ, ಕೆಂಬಣ್ಣವಾಗಿದ್ದ ಮೃತಶಿಶುವಿನ ಕಳೇಬರ, ವಾಕರೆಕೆ ಬರುವಂತಹ ದುರ್ವಾಸನೆ, ಹೆಂಗಸಿನ ಅಸ್ತವ್ಯಸ್ತ ಸ್ಥಿತಿ, ರೋದನ, ಚೀತ್ಕಾರ, ನರಳುವಿಕೆ, ಶಪಿಸುವಿಕೆ- ಒಂದೊಂದು ಎಲ್ಲವೂ ತಲೆಯಲ್ಲಿ ತಾಂಡವವಾಡತೊಡಗಿ, ಅವನಿಗೆ ದಿಗ್‌ಭ್ರಾಂತಿ ಹಿಡಿದಂತಾಗಿ, ಅಲ್ಲಿ ನಿಲ್ಲಲಾರದೆ ಜಗಲಿಗೆ ತತ್ತರಿಸುತ್ತ ಹೋದನು. ಕತ್ತಲೆಯಲ್ಲಿ ಅಲ್ಲೊಂದು ಮುಂಡಿಗೆಗೆ ಒರಗಿ ನಿಂತನು. ಸುಬ್ಬಮ್ಮನ ಕೂಗಾಟದ ಮಧ್ಯೆ ಮಧ್ಯೆ ಓಬಯ್ಯನ ಮಾತುಗಳು,. ರಾಮಯ್ಯನ ಮನಸ್ಸಿನ ದೂರದ ದಿಗಂತದಲ್ಲಿ ಎಂಬಂತೆ, ಮಂಜಾಗಿ ಕೇಳಿಬರುತ್ತಿದ್ದುವು.

ಸುಬ್ಬಮ್ಮನ ಶಾಪಗಳನ್ನೂ ಓಬಯ್ಯನ ಮಾತುಗಳನ್ನೂ ಆಲಿಸುತ್ತ ನಿಂತಿದ್ದ ರಾಮಯ್ಯನ ಮನಸ್ಸಿಗೆ, ಸೇರೆಗಾರರು ಆಳುಗಳೊಡನೆ ಓಡಿಹೋದುದಕ್ಕೆ ಕಾರಣ ಗೊತ್ತಾಗಿ, ಎದೆಗೆ ಶೂಲವಿರಿದಂತಾಯಿತು. ಮನೆತನದ ಕೀರ್ತಿಮಣ್ಣಾಯಿತೆಂದು ಕೊಂಡನು. ಬಂದೊದಗುವ ಅವಮಾನದ ಮುಂದೆ ಬದುಕಿದ್ದರೂ ಸತ್ತಂತೆ ಎಂದು ತೋರಿತು. ಬಹುಕಾಲದಿಂದಲೂ ಮನಸ್ಸಿನಲ್ಲಿ ಇಣಿಕಿ ಇಣಿಕಿ ಹೊಂಚಿಹೋಗುತ್ತಿದ್ದ ಆತ್ಮಹತ್ಯೆಯ ಪಿಶಾಚ ಸಾಕಾರವಾಗಿ ಅವನೆದುರು ನಿಂತು ಆಹ್ವಾನಿಸಿತು. ಬಾಳಿನ ಹೊರೆ ತನ್ನ ಬೆನ್ನುಮೂಳೆಯ ಬಲಕ್ಕೆ ಮೀರಿದಂತೆ ತೋರಿತು. ಜೀವನದ ಜಟಿಲ ಸಮಸ್ಯೆ ತನ್ನಿಂದ ಬಿಡಿಸಲಸಾಧ್ಯವಾಗಿ ತೋರಿತು. ಸಾವು ಬಿಡುಗಡೆಯ ಬೀಡಾಗಿ ತೋರಿತು. ಕತ್ತಲೆಯಲ್ಲಿಯೆ ಉಪ್ಪರಿಗೆಗೆ ಹೋಗಿ, ಒಂದು ಶೀಶೆಯನ್ನು ಹುಡುಕಿ ತೆಗೆದು, ಹಿಂದೆ ಅನೇಕಸಾರಿ ಕುಡಿಯಲು ಯತ್ನಿಸಿ ಕುಡಿಯಲಾರದೆ ಹಿಂಜರಿದುಬಿಟ್ಟಿದ್ದುದನ್ನು ಸಂಪೂರ್ಣವಾಗಿ ಗಂಟಲಿಗೆ ಹೊಯ್ದುಕೊಂಡು, ಬಾಗಿಲಿಗೆ ಅಗಣಿ ಹಾಕಿ, ಕಂಬಳಿ ಸುತ್ತಿಕೊಂಡು ನೆಲದಮೇಲೆ ಮೂಲೆಯಲ್ಲಿ ಬಿದ್ದುಕೊಂಡನು.